ತರಂಗಿತ ಸಹ್ಯಾದ್ರ ಶ್ರೇಣಿಗಳಿಂದ ರಚಿತವಾದ ಬಹುದೂರದ ಪ್ರಾಚೀ ದಿಗಂತ ರೇಖೆಯ ದೀರ್ಘ ಸರ್ಪವಿನ್ಯಾಸವು ಸದ್ಯಃಪ್ರಫುಲ್ಲಿತವಾದ ಉಷಃ ಕಾಂತಿಯಿಂದ ತಕ್ಕಮಟ್ಟಿಗೆ ಸ್ಪಷ್ಟವಾಗಿದ್ದರೂ ಬೇಗಬೇಗನೆ ಪ್ರಸ್ಫುಟವಾಗುತ್ತಿದ್ದರೂ. ಕಾನೂರು ಬೆಟ್ಟದ ಕಾನನಾಂತರದಲ್ಲಿ ಮಾತ್ರ ಕತ್ತಲೆ ಇನ್ನೂ ದಟ್ಟವಾಗಿ ಮೆತ್ತಿಕೊಂಡಂತಿತ್ತು. ಗಿರಿಶಿಖರದಲ್ಲಿ ಪರ್ಣಸಮಾಕೀರ್ಣವಾಗಿದ್ದ ಮಹಾ ತರುವೊಂದರಲ್ಲಿ ಎಲೆಗಳ ಮರೆಯ ಕತ್ತಲೆಯ ಗಬ್ಬದಲ್ಲಿ” ಗೊತ್ತು ಕೂತು” ಹುದುಗಿಕೊಂಡಿದ್ದ ಕಾಡುಕೋಳಿಯ ಹುಂಜನೊಂದು ಪೂರ್ವದಿಕ್ಕಿನ ಕಡೆಗೊಮ್ಮೆಯೂ ಕಾಡಿನ ಕತ್ತಲೆಯ ಕಡೆಗೊಮ್ಮೆಯೂ ನೋಡಿ ನೋಡಿ ಇಮ್ಮನಸ್ಸು ಮಾಡಿಕೊಂಡಿತ್ತು. ಮೂಡಲನ್ನು ನೋಡಿದರೆ ಪ್ರಭಾತ ಪರ್ಯಟನಕ್ಕೆ ಹೊರಡು ಎಂದು ಕರೆಯುವಂತೆ ಮನಮೋಹಿಸಿತ್ತು. ಕಾಡಿನ ಕತ್ತಲೆಯಾದರೋ ಸ್ವಲ್ಪ ತಾಳು ಎನ್ನುವಂತಿತ್ತು. ಮರಗಳ ದಟ್ಟೈಸುವಿಕೆಯಿಂದ ತಂಗಾಳಿಯ ತೀಟಕ್ಕೆ ಅಡಚಣೆಯಾಗಿದ್ದರೂ ಅದರ ಕುಳಿರ್ಪು ಎಲ್ಲ ಕಡೆಯೂ ಹಸರಿಸಿತ್ತು. ಹುಂಜನ ಬೆಚ್ಚನೆಯ ತಿಪ್ಪುಳದ ಒಳಗೂ ನುಗ್ಗಿಹೋಗಿತ್ತು. ಅದೂ ಸಾಹಸ ಪ್ರೇರಕವಾಗಿದ್ದತೇ ಹೊರತು ಸಾಹಸ ನಿವಾರಕವಾಗಿರಲಿಲ್ಲ. ಹುಂಜ ಕಿವಿಗೊಟ್ಟು ಆಲಿಸಿತು. ಅನಂತಾರಣ್ಯವು ನಿಃಶಬ್ದವಾಗಿ ಘನೀಭೂತ ಮೌನದಂತಿತ್ತು. ಆದರೆ ತುಸು ಹೊತ್ತಿನಲ್ಲಿಯೆ ಕಾಡಿನ ಕತ್ತಲೆಯ ಸೈನ್ಯದಲ್ಲಿ ಬಿರುಕು ತೋರಿ ಅರುಣೋದಯದ ಕಿರಣವಿಹೀನ ರಕ್ತರಾಗವು ಅಲ್ಲಲ್ಲಿ ದಾಳಿಯಿಟ್ಟು ವನಪ್ರಾಂತವನ್ನು ಆಕ್ರಮಿಸಿಲಾರಂಭಿಸಿತು. ದೂರದ ಕಣಿವೆಯಲ್ಲಿ ಸಿಳ್ಳುಹಾಕಲು ತೊಡಗಿದ್ದ ಮಡಿವಾಳ ಹಕ್ಕಿಯ ಗಾನವು ಹುಂಜನಿಗೆ ಕೇಳಿಸಿ ತಾನು ಕುಳಿತಿದ್ದ ಕೊಂಬೆಯ ದಪ್ಪ ದಿಂಡಿನಮೇಲೆ ನಿಮಿರಿ ನಿಂತು, ನೀಳವಾಗಿ ಮೈಮುರಿದು, ದೀರ್ಘಸ್ವರದಿಂದ ವನಮೌನವು ಎಚ್ಚರುವಂತೆ ಕೂಗಿ, ಪಟಪಟನೆ ರೆಕ್ಕೆಗಳನ್ನು ಬಡಿಯುತ್ತಾ ಕೆಳಗೆ ಹಾರಿತು. ಸುತ್ತಲಿದ್ದ ಮರದ ಎಲೆಗಳು ಬರಬರನೆ ಸದ್ದು ಮಾಡಿದುವು. ಹುಂಜದ ರೆಕ್ಕೆ ಪುಕ್ಕ ತಿಪ್ಪುಳಗಳಲ್ಲಿ ಪ್ರಾತಃ ಶೀತಲ ವಾಯು ಸ್ವಲ್ಪ ವೇಗವಾಗಿಯೇ ಪ್ರವೇಶಿಸಿದ್ದರಿಂದ ಅದು ಮೊದಲಿಗಿಂತಲೂ ಹೆಚ್ಚು ತಂಪಾಗಿರುವಂತೆ ತೋರಿತು. ನೆಲವನ್ನು ಮುಟ್ಟಿದೊಡನೆ ಕತ್ತೆತ್ತಿ, ಎದೆಯುಬ್ಬಿಸಿ, ಕೊರಲನ್ನು ಕೊಂದುಗೈದು, ಪುಕ್ಕದ  ಗರಿಗಳನ್ನು ನಿಮಿರಿಸಿ ” ಕೊಕ್ಕೊಕೋ” ಎಂದು ಗಟ್ಟಿಯಾಗಿ ಕೂಗಿ, ಮತ್ತೆ ರೆಕ್ಕೆ ಬಡಿದು, ತನ್ನ ಕೆಲಸಕ್ಕೆ ಕೊಕ್ಕು ಹಾಕಿತು. ಒಡನೆಯೆ ಕಾಡಿನಲ್ಲಿ ಅಲ್ಲಲ್ಲಿ ಕಾಡುಕೋಳಿಗಳ ಕೂಗೂ ಪಟಪಟನೆ ರೆಕ್ಕೆ ಬಡಿಯುವ ಸದ್ದೂ ಕೇಳಿಸಿತು.

ಹುಂಜವು ತರಗಲೆಯಡಿಯ ಮಣ್ಣನ್ನು ಕೆದರಿ, ಕೆದರಿ, ಹುಳು ಹಪ್ಪಟೆಗಳನ್ನು ಭುಂಜಿಸಿತು. ನಡುನಡುವೆ ಒಂದೊಂದು ಸಾರಿ ಹೆಣ್ಣು ಕೋಳಿಗಳನ್ನು ಕರೆದು ಕೂಗಿತು.ಹೊಟ್ಟೆ ತುಂಬದೆ ಯಾವ ಹೇಂಟೆ ತಾನೆ ಪ್ರಣಯ ಸುಖಕ್ಕೆ ಅಭಿಲಾಷೆ ಪಟ್ಟೀತು! ವನಕುಕ್ಕುಟರಾಜನ ಬಳಿಗೆ ಯಾವ ರಾಣಿಯೂ ಬರಲಿಲ್ಲ. ಹುಂಜವು ಮತ್ತೆ ಒಂದೇ ಸಮನೆ ನೆಲ ಕೆದರುವ ಕೆಲಸಕ್ಕೆ ಕಾಲು ಹಾಕಿತು. ಸುಮಾರು ಒಂದು ಗಂಟೆಯ ಮೇಲೆ, ಹೊಟ್ಟೆ ಪಟ್ಟಾಗಿ ತುಂಬಿದ ಮೇಲೆ ಹುಂಜಕ್ಕೆ ಮತ್ತೆ ಹೇಂಟೆಯ ನೆನಪಾಗಿ ಕೂಗಿತು. ಆ ಕೂಗಿನಲ್ಲಿ “ಇನ್ನು ಮುಂದೆ ಏಕಾಂತವನ್ನು ಸಹಿಸಲಾರೆ” ಎಂಬ ವ್ಯಥೆಯೂ” ಬಾ ಪ್ರಿಯೆ, ಬೇಗ ಬಾ”ಎಂಬ ಪ್ರೇಮಾಹ್ವಾನದ ಮಾಧುರ್ಯವೂ ಕೂಡಿದ್ದುವು. ಹುಂಜವು ಬಿಂಕದಿಂದ ಸಲ ಸಲವೂ ಕೂಗಿ ಕರೆಯಲು ಒಂದು ಹೇಂಟೆಯೂ ಅದರ ದೊಡ್ಡ ಮರಿಗಳೂ ಸದ್ದುಮಾಡಿಕೊಂಡು ಓಡಿಯೋಡಿ ಬಳಿಗೆ ಬಂದುವು. ಹುಂಜವು ಒಡನೆಯೆ ಹೇಂಟೆಯ ಬಳಿಗೆ ಹೋಗಿ ಪ್ರಣಯ ಪ್ರದರ್ಶನ ಮಾಡಿತು. ಆದರೆ ಹೇಂಟೆ ಪಕ್ಕಕ್ಕೆ ಸರಿದು ಭೋಗಾಸಕ್ತಿಗಿಂತಲೂ ಭೋಜನಾಸಕ್ತಿಯನ್ನೆ ಹೆಚ್ಚಾಗಿ ತೋರಿತು. ವಿಷಯವನ್ನು ತಿಳಿದ ಹುಂಜವು ಪುನಃ ನೆಲ  ಕೆದರಿ, ಹೇಂಟೆಯನ್ನು ಲೊಚಗುಟ್ಟಿ ಬಳಿಗೆ ಕರೆದು, ಹುಳುಗಳನ್ನು ತಿನ್ನಿಸತೊಡಗಿತು. ಔತಣಕ್ಕೆ ಅನಾಹೂತರಾಗಿದ್ದರೂ ಮರಿಗಳೂ ತಾಯಿಯ ಉಣಿಸಿನಲ್ಲಿ ಪಾಲುಕೊಂಡುವು.

ಸೂರ್ಯೋದಯವಾಗಿ ಹೊಂಬಿಸಿಲು ದೀರ್ಘತರುಚ್ಛಾಯೆಗಳ ಮಧ್ಯೆ ತೂರಿ ಬಂದು ಕುರುಚಲು ಗಿಡಗಳ ಮೇಲೆಯೂ ಪಿಣಿಲಾಗಿ ಹೆಣೆದುಕೊಂಡಿದ್ದ ಬಳ್ಳಿ ಹೊದರುಗಳ ಮೇಲೆಯೂ ಶುಷ್ಕಪರ್ಣಾವೃತವಾಗಿದ್ದ ನೆಲದ ಮೇಲೆಯೂ ಬಿದ್ದಿತು. ಇತರ ವನ್ಯಪಕ್ಷಿಗಳೂ ತಮ್ಮ ತಮ್ಮ ಧ್ವನಿ ಪ್ರದರ್ಶನದಲ್ಲಿ ತೊಡಗಿದುವು. ಒಂದು ಕಡೆ ಕಾಜಾಣವು ತನ್ನ  ಸ್ವರ್ಗೀಯ ಸುಮಧುರವಾದ ಗಾನಧಾರೆಯಿಂದ ಅರಣ್ಯ ಪರ್ವತಗಳನ್ನು ಸಂಗೀತ ಸ್ರೋತದಲ್ಲಿ ತೇಲಿಸುತ್ತಿತ್ತು. ಒಂದು ಕಡೆ ಗಿಳಿವಿಂಡುಗಳ ಚಕಿತ ವಾಣಿ ಮನೋಹರವಾಗಿತ್ತು. ಒಂದು ಕಡೆ ಕಾಮಳ್ಳಿ ಲಲನಾಕಂಠವು ಬಿಸಿಲು ಬಿದ್ದಿದ್ದ ಮರದ ಬರಲು ನೆತ್ತಿಯಿಂದ ದನಿಜೇನು ಸೂಸುತ್ತಿತ್ತು. ಒಂದೆಡೆ ಮಂಗಟ್ಟೆ ಹಕ್ಕಿಗಳ ವಿಕಟ ನಾದವು ಕಾಡನ್ನು ಭಯಗೊಳಿಸುವಂತಿತ್ತು. ಹೂ ತುಂಬಿದ ಮರಗಳಲ್ಲಿ ಲಕ್ಷಾಂತರ ಜೇನು ಹುಳುಗಳು ಓಂಕಾರದಂತೆ ಝೇಂಕರಿಸುತ್ತಿದ್ದವು. ಸಂತೋಷದ ಸಂಭ್ರಮದಲ್ಲಿ ಹುಂಜವು ಮತ್ತೆ ಕೇಕೆ ಹಾಕಿ ಕೂಗತೊಡಗಿತು. ಈ ಸಲದ ಕೂಗು ಹೆಣ್ಣುಕೋಳಿಯನ್ನು ಕರೆಯಲೊಸುಗವಾಗಿರಲಿಲ್ಲ; ತಾನು ಗಂಡು ಎಂಬುದನ್ನು ಹೆಮ್ಮೆಯಿಂದ ಕಾಡಿಗೆಲ್ಲ ಸಾರುವ ಕೂಗಾಗಿತ್ತು. ಆದರೂ ಸ್ವಲ್ಪ ಹೊತ್ತಿನಲ್ಲಿಯೆ ಹೇಂಟೆಯೊಂದು ದೂರದಲ್ಲಿ ” ತೆಕೋ ತೆಕ್ ತೆಕ್ ತೆಕ್” ತೆಕೋ ತೆಕ್ ತೆಕ್ ತೆಕ್ ” ಎಂದು ಬೇಟದ ಧ್ವನಿ ಮಾಡತೊಡಗಿತು. ಹುಂಜವು ತಲೆಯನ್ನು ಸ್ವಲ್ಪ ಒಲೆದು, ಒಕ್ಕಣ್ಣಿನಿಂದಲೆ ಬಹುದೂರ ನೋಡುವಂತೆ ಒಂಟಿಗಾಲಿನಲ್ಲಿ ನಿಂತು ಕುತೂಹಲಾವಿಷ್ಟವಾಗಿ ನಿಷ್ಪಂದವಾಗಿ ಆಲಿಸಿತು. ಜೊತೆಯಲ್ಲಿ ಹೇಂಟೆಯಿದ್ದರೂ ಕೂಡ ಅದರ ಮನಸ್ಸು ಚಂಚಲವಾಗಿ ಮತ್ತೊಂದು ಹೇಂಟೆಗೆ ಮಾರುಹೋಯಿತು. ಹುಂಜವು ಇದನ್ನು ತ್ಯಜಿಸಲೆಂದಲ್ಲ. ಅದನ್ನೂ ಬಳಿಗೆ ಕರೆಯಲೆಂದು, ಸ್ವಲ್ಪ ದೂರ ಓಡಿಹೋಗಿ ನಿಂತು ಕೇಕೆ ಹಾಕಿತು! ಆ ಕೂಗು ಮರುದನಿಯಾಯಿತು. ಆದರೆ ಆ ಹೇಂಟೆ ಬಳಿಗೆ ಬಾರದೆ ಮೊದಲಿದ್ದ ಜಾಗದಿಂದಲೆ ತೆಕೋ ತೆಕ್ ತೆಕ್ ತೆಕ್” ಎಂದು ಕರೆಯತೊಡಗಿತು. ಹುಂಜದ ಮನಸ್ಸು ಕಾಣದ ಹೆಣ್ಣಿಗೆ ಅಳುಪಿತು. ಮತ್ತೂ ಸ್ವಲ್ಪದೂರ ಓಡಿಹೋಗಿ, ಸಂಶಯದಿಂದ ನಿಂತು, ತಾನು ಹಿಂದೆ ಬಿಟ್ಟು ಬಂದಿದ್ದ ಹೇಂಟೆಮರಿಗಳ ಕಡೆಗೆ ಮುಂದೆ ಹೋಗಲೋ ಬೇಡವೋ ಎಂದು ಪ್ರಶ್ನೆ ಕೇಳುವಂತೆ ನೋಡಿತು. ಹೇಂಟೆ ಮತ್ತು ಮರಿಗಳು ನೆಲವನ್ನು ಕೆದರುವುದರಲ್ಲಿಯೂ ಮೂತಿಯಿಂದ ಕುಟುಕುವುದರಲ್ಲಿಯೂ ತಲ್ಲೀನವಾಗಿದ್ದು ಹುಂಜದ ಕಡೆಗೆ ಗಮನವಿಟ್ಟಂತೆ ತೋರಲಿಲ್ಲ. ಪುನಃ ” ತೆಕೋ ತೆಕ್ ತೆಕ್ ತೆಕ್!” ಹುಂಜವು ಬೆಚ್ಚಿ ಎರಡು ಹೆಜ್ಜೆ ಹಿಂದೆ ಸರಿದು ನಿಂತಿತು. ಅದರ ನಿಲುವಿನ ಭಂಗಿ ನೋಟಕ್ಕಿಂತಲೂ ಹೆಚ್ಚಾಗಿ ಆಲೋಚನೆಯನ್ನೇ ಸೂಚಿಸುವಂತಿತ್ತು. ಏಕೆಂದರೆ ಆ ಹೇಂಟೆಯ ಕರೆಯಲ್ಲಿ ಏನೋ ಅಪಸ್ವರ ಕೇಳಿಸಿದ ಹಾಗಾಯಿತಲ್ಲವೇ? ಪುನಃ ” ತೆಕೋ ತೆಕ್ ತೆಕ್ ತೆಕ್ ತೆಕ್!” ಚಿಃ! ಅಪಸ್ವರವೆಲ್ಲಿ ಬಂತು! ಅದು ಕುಕ್ಕುಟ ಲಲನೆಯ ಇನಿದಾದ ಸುಸ್ವರ ಮೇಳವಲ್ಲದೆ ಮತ್ತೇನು? ಎಂದು ಯೋಚಿಸುತ್ತಿರುವಷ್ಟರಲ್ಲಿ ಮತ್ತೆ! ” ತೆಕೋ ತೆಕ್ ತೆಕ್ ತೆಕ್ ತೆಕ್! ತೆಕೋ ತೆಕ್ ತೆಕ್ ತೆಕ್!” ಹುಂಜವು ಪ್ರಣಯಾವೇಶದಿಂದ ಮುಂದೆ ನುಗ್ಗಿ ಇಳಿಜಾರಿನಿಂದ ಉಬ್ಬಿನ ಕಡೆಗೆ ಧಾವಿಸಿತು. ಸ್ವಲ್ಪ ದೂರ ಹೋಗಿ ನೋಡುತ್ತದೆ; ಪೊದೆಗಳ ನಡುವೆ ಅಡಗಿ ನಿಂತಂತಿದೆ ಒಂದು ಮನುಷ್ಯಾಕಾರ! ಅಲ್ಲಿಂದಲೆ ಕೇಳಿಬರುತ್ತಿದ್ದುದು ಆ ಮಾಯಾ ಹೇಂಟೆಯ ಕರೆ! ಹುಂಜವು ಬೆದರಿ ಹಿಂತಿರುಗುವುದರಲ್ಲಿತ್ತು. ಅಷ್ಟರಲ್ಲಿ ಏನೋ ದೇಹಕ್ಕೆ ತಗುಲಿದಂತಾಗಿ ಮಹಾ ಶಬ್ದವಾಯಿತು. ಹುಂಜವು ಮೂರ್ಛೆ ಹೋಗಿ ನೆಲಕ್ಕುರುಳಿತು! ಆ ಕೋವಿಯೀಡಿನ ಸದ್ದಿಗೆ ಬೆದರಿ, ಹಿಂದೆ ತುಸು ದೂರದಲ್ಲಿ ಮೇವಾರಿಸುತ್ತಿದ್ದ ಹೇಂಟೆ ತನ್ನ ಮರಿಗಳೊಡನೆ ರೆಕ್ಕೆಗೆ ಬುದ್ದಿ ಹೇಳಿತು.

ಇನ್ನೂ ಬಿಸಿಯಾಗಿದ್ದ ನಳಿಗೆಯ ತುದಿಯಿಂದ ಹೊಗೆಯಾಡುತ್ತಿದ್ದ ಕೇಪಿನ ಕೋವಿಯನ್ನು ಕೈಯಲ್ಲಿ ಹಿಡಿದು, ಕಾನೂರು ಸೇರೆಗಾರ ರಂಗಪ್ಪ ಸೆಟ್ಟರು ತಾವು ಅಡಗಿ ನಿಂತಿದ್ದ ಹೊದರಿನಿಂದ ಹೊರಗೆ ನೆಗೆದು, ಹುಂಜವಿದ್ದ ಜಾಗಕ್ಕೆ ಕಾತರದಿಂದ ನುಗ್ಗಿದರು. ಹುಂಜವು ನಿಶ್ಚಲವಾಗಿ ಬಿದ್ದಿತ್ತು. ಅದರ ಮೈಯಿಂದ ಚಿಮ್ಮಿದ ನೆತ್ತರು ನೆಲದ ಮೇಲೆಯೂ ತರಗಲೆ ಕಸಕಡ್ಡಿಗಳ ಮೇಲೆಯೂ ಕೆಂಪಗಿತ್ತು. ತೊಂಡೆಯ ಹಣ್ಣನ್ನು ನಗುವಂತೆ ಕೆಂಪು ದಾಸವಾಳವನ್ನೂ ಮೀರಿ ಆರಕ್ತವಾಗಿದ್ದ ಅದರ ಚೊಟ್ಟಿ ನೆತ್ತಿಯನ್ನು ಕೋಮಲ ರಮಣೀಯವಾಗಿ ಅಲಂಕರಿಸಿತ್ತು. ಅದರ ಕತ್ತಿನ ಮೇಲಿದ್ದ ಪೀತವರ್ಣದ ತುಪ್ಪುಳ್ಗರಿಗಳು ನವಿಲಿನ ಕಂಠಶ್ರೀಯನ್ನು ನೆನಪಿಗೆ ತರುವಂತೆ ಕೋಲ್ಬಿಸಿಲಿನಲ್ಲಿ ನುಣ್ಣಗೆ ಮಿರುಗುತ್ತಿದ್ದವು. ಅದರ ರೆಕ್ಕೆಯ ಮತ್ತು ಪುಕ್ಕದ ಗರಿಗಳು ತರತರದ ಬಣ್ಣಗಳಿಂದ ಶೋಭಿಸಿದ್ದುವು. ಮೂರು ಕವಲಾಗಿದ್ದ ಅದರ ಪಾದಗಳೆರಡೂ ಮಣ್ಣಿಡಿದು ಮಾಸಿದ್ದುವು. ಪಾದಗಳ ಮೇಲೆ ನಸುಗೆಂಪು ಬಣ್ಣವಾಗಿದ್ದ ಅದರ ಮುಂಗಾಲುಗಳ ಹಿಂಭಾಗದಲ್ಲಿ ಕಠಿನ ಕಂಟಕಗಳಂತೆ ನಖಗಳೆರಡು ಅರ್ಧ ಅಂಗುಲದಷ್ಟು ಉದ್ದವಾಗಿ ಆಯುಧಗಳಂತಿದ್ದುವು. ಪುಕ್ಕದಲ್ಲಿದ್ದ ನೀಳವಾದ ಕರ್ರನೆ ಗರಿಗಳೆರಡು ಗರ್ವಿತ ವಿನ್ಯಾಸದಿಂದ ಕೊಂಕಿ ನೆಲದ ಮೇಲೋರಗಿ ಮಿರುಗುತ್ತಿದ್ದುವು. ಮೇಲ್ಮೊಗವಾಗಿದ್ದ ಅದರ ಕಣ್ಣು ರೆಪ್ಪೆ ಮುಚ್ಚಿ ಜೀವನದ ಮೇಲೆ ಮರಣದ ಪರದೆ ಬಿದ್ದಂತಿತ್ತು. ಸೇರೆಗಾರರು ಸೌಂದರ್ಯಪುಂಜದಂತೆ ಭೂಗತವಾಗಿದ್ದ ಆ ಹುಂಜವನ್ನು ತೃಪ್ತಿಯಿಂದಲೂ ಆತ್ಮ ಪ್ರಶಂದೆಯಿಂದಲೂ ನೋಡಿ, ಬಗ್ಗಿ. ಎಡಗೈಯಿಂದ ಅದರ ಕುತ್ತಿಗೆಯನ್ನು ಹಿಡಿದೆತ್ತಿ, ಪುಕ್ಕದ ನೀಳವಾದ ಗರಿಗಳು ನೆಲವನ್ನು ಗುಡಿಸುತ್ತಿರಲು, ತಾವು ಮೊದಲಿದ್ದ ಜಾಗಕ್ಕೆ ಎತ್ತಿಕೊಂಡು ಹೋದರು. ಅಲ್ಲಿ ಅವರ ಕರಿಯ ಕಂಬಳಿ ಬಿದ್ದಿತ್ತು. ಅದರ ಪಕ್ಕದಲ್ಲಿ ಕೋಳಿಯನ್ನು ಎಸೆದು, ಕೋವಿಗೆ ಈಡು ತುಂಬಲು ಅನುವಾದರು.

ಸೇರೆಗಾರ ರಂಗಪ್ಪಸೆಟ್ಟರು ಸುಮಾರು ಮೂವತ್ತೈದು ವಯಸ್ಸಿನ ಸಾಧಾರಣವಾದ ಅಳು. ಪುಷ್ಪವಾಗಿದ್ದ ಅವರ ಆಕಾರದಲ್ಲಿ ಆಕರ್ಷಣೀಯವಾದ ವಿಶೇಷತೆಯೇನೂ ಇರಲಿಲ್ಲ. ಬಣ್ಣ ಎಣ್ಣೆಗೆಂಪು. ಮುಖ, ಚಪ್ಪಟೆ. ಕಣ್ಣು ಹುಬ್ಬು ತುಟಿಗಳೆಲ್ಲ ಕುಟಿಲ. ತುಟಿಗಳು ಯಾವಾಗಲೂ ತೆರೆದುಕೊಂಡಿರುತ್ತಿದ್ದುದರಿಂದ ದಂತಪಂಕ್ತಿ ತೋರಿ ನಗುತ್ತಿರುವಂತೆ ಭಾಸವಾಗುತ್ತಿತ್ತು. ಅವರು ನಕ್ಕಾಗ ಹುಳು ಹಿಡಿದು ಕಪ್ಪಾಗಿದ್ದ ಹಲ್ಲುಗಳೂ ತೋರುತ್ತಿದ್ದುವು. ಕಿವಿಗಳಲ್ಲಿದ್ದ ಹರಳು ಕೆತ್ತಿದ್ದ ಒಂಟಿಗಳು ಅವರ ರಸಿಕತೆಗೆ ಸಾಕ್ಷಿಯಾಗಿದ್ದುವು. ಕೆನ್ನೆಯಲ್ಲಿ ಅಗಲವಾಗಿದ್ದ ಕಪ್ಪು ಮಚ್ಚೆಯೊಂದು ಪ್ರಮುಖವಾಗಿತ್ತು. ಅವರು ನಶ್ಯದ ಬಣ್ಣದ ಬನೀನು ಹಾಕಿ, ಮೊಳಕಾಲಿನವರೆಗೆ ಕಚ್ಚೆಪಂಚೆಯುಟ್ಟಿದ್ದರು. ಬನೀನಿನ ಬಿಳಿಯ ಗುಂಡಿಗಳು ಬಹುದೂರದವರೆಗೂ ಕಾಣುತ್ತಿದ್ದುವು. ಬತ್ತಲಾಗಿದ್ದ ಅವರ ಮೊಳಕಾಲುಗಳ ಕೆಳಭಾಗವು ರೋಮಮಯ. ಎಡಗಾಲಿನಲ್ಲಿ ಒಂದು ದೇವರ ಸರಿಗೆಯ ಬಳೆಯಿತ್ತು. ಅಡಿಗಳಲ್ಲಿ ಒರಟು ಒರಟಾಗಿ ದಪ್ಪವಾಗಿರುವ ಮಲೆನಾಡಿನ ಮೆಟ್ಟುಗಳಿದ್ದುವು.

ರಂಗಪ್ಪ ಸೆಟ್ಟರು ಗಟ್ಟದ ಕೆಳಗಿನವರು. ಕೂಲಿಯಾಳುಗಳನ್ನು ಗಟ್ಟದ ಮೇಲಕ್ಕೆ ತಂದು ಮೇಸ್ತ್ರಿಯಾಗಿ ಕೆಲಸ ಮಾಡಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುವ ಮೇಸ್ತ್ರಿಗಳನ್ನು ಸೇರೆಗಾರರೆಂದು ಕರೆಯುತ್ತಾರೆ.

ಸೆಟ್ಟರು ಕಾನೂರಿನಲ್ಲಿ ಐದು ವರ್ಷಗಳಿಂದಲೂ ಆಳಿಟ್ಟುಕೊಂಡು ಬಹಳ ನಂಬಿಕೆಯಿಂದ ಇದ್ದರು. ಬೇಟೆಯಲ್ಲಿಯೂ ಅವರ ಕೂಲಿಯಾಳೊಬ್ಬಳ ಬೇಟದಲ್ಲಿಯೂ ಅವರಿಗೆ ಆಸಕ್ತಿ. ತಮ್ಮ ನಿಜವಾದ ಸಂಸಾರವು ಊರಿನಲ್ಲಿದ್ದುದರಿಂದ ಗಟ್ಟದ ಮೇಲೊಂದು ತಾತ್ಕಾಲಿಕ ಸಂಸಾರವನ್ನಿಟ್ಟುಕೊಳ್ಳುವುದು. ಅಷ್ಟೇನೂ ಮಹಾ ಪಾಪವೆಂದು ಅವರು ಭಾವಿಸಿರಲಿಲ್ಲ. ತಮ್ಮ ಬೇಟದ ಹೆಣ್ಣಿನ ಸಹಾಯದಿಂದಲೆ ಅವರು ಚಂದ್ರಯ್ಯಗೌಡರನ್ನು ಒಳಗೆ ಹಾಕಿಕೊಂಡಿದ್ದಾರೆಂದು ವದಂತಿಯಿತ್ತು.

ಷಿಕಾರಿಯಾದ ಸಂತೋಷದಲ್ಲಿ ಸೆಟ್ಟರು ಕೋವಿಗೆ ವಿರಾಮವಾಗಿ ಈಡು ತುಂಬುತ್ತ ನಿಂತಿದ್ದರು. ಮಸಿಯನ್ನು ಹಾಕಿ, ಅದರ ಮೇಲೆ ಕತ್ತವನ್ನು ಗಜದಲ್ಲಿ ಇಡಿಯುತ್ತಿದ್ದಾಗ ಅದುವರೆಗೂ ಕಂಬಳಿಯ ಪಕ್ಕದಲ್ಲಿ ನಿಷ್ಪಂದವಾಗಿ ಬಿದ್ದಿದ್ದ ಹುಂಜವು ಲಿಬಿಲಿಬಿ ಒದ್ದಾಡಿಕೊಂಡಿತು. ಸತ್ತಿದೆ ಎಂದು ಭಾವಿಸಿದ್ದ ಸೆಟ್ಟರಿಗೆ ಸ್ವಲ್ಪ ಆಶ್ಚರ್ಯವಾಗಿ ಕೆಳಗೆ ನೋಡಿದರು. ಹುಂಜವು ಮತ್ತೆ ನಿಶ್ಚಲವಾಯಿತು. ಎಲ್ಲಿಯೋ  ತುಸು ಪ್ರಾಣವಿತ್ತು, ಅದೂ ಹೋಯಿತು, ಎಂದು ಜೇಬಿನಿಂದ ಚೆರೆಯನ್ನು ತೆಗೆದು ಅಂಗೈಯಮೇಲೆ ಅದರ ಪ್ರಮಾಣ ನಿರ್ಣಯ ಮಾಡುತ್ತಿದ್ದಾಗ ಕೋಳಿ ಬಡಬಡನೆ ಒದ್ದಾಡಿಕೊಂಡು ಎದ್ದುನಿಂತು ತೂರಾಡುತ್ತ ಓಡತೊಡಗಿತು. ಸೆಟ್ಟರು ಚೆರೆಯನ್ನು ಫಕ್ಕಪಕ್ಕನೆ ನಳಿಗೆಗೆ ಸುರಿದು ಎಡಗೈಯಲ್ಲಿ ಕೋವಿ ಹಿಡಿದು, ಬಲಗೈಯಿಂದ ಆ ಪ್ರಾಣಿಯನ್ನು ಹಿಡಿದುಕೊಳ್ಳಲು ಹೋದರು ಅದು ತಪ್ಪಿಸಿಕೊಂಡು ಹೋಗುತ್ತದೆಂದು ಅವರು ಕನಸಿನಲ್ಲಿಯೂ ಭಾವಿಸಿರಲಿಲ್ಲಿ. ಆದರೆ ಕೋಳಿ ವಕ್ರ ವಕ್ರವಾಗಿ ತೂರಾಡಿಕೊಂಡು ಪೊದೆ ಪೊದೆಗಳಲ್ಲಿ ನುಸುಳತೊಡಗಿತು. ಒಂದು ಮಾರು, ಎರಡು ಮಾರು, ಹತ್ತು ಮಾರಾಯಿತು. ಸೆಟ್ಟರಿಗೆ ದಿಗಿಲಾಗಿ ಕೋವಿಯನ್ನು ಕೆಳಗಿಟ್ಟು, ಕೈಗಳೆರಡನ್ನೂ ಮುಂದಕ್ಕೆ ಚಾಚಿ, ಹುಂಜವನ್ನು ಹಿಡಿಯಲು ಸರ್ವಪ್ರಯತ್ನವನ್ನೂ ಮಾಡಿದರು. ಕೋಳಿ  ಅಲ್ಲಿ ನುಗ್ಗಿ, ಇಲ್ಲಿ ನುಸುಳಿ, ಕಡೆಗೆ ಒಂದು ನುಗ್ಗಲಾಗದಿದ್ದ ಪೊದೆಗಳ ಹಿಂಡಿನಲ್ಲಿ ಕಣ್ಮರೆಯಾಯಿತು. ಸೆಟ್ಟರು ಹತಾಶರಾಗಿ ದುಃಖಿತರಾಗಿ ಕುಪಿತರಾಗಿ ಪ್ರಾಣಿ ಹೋಗುತ್ತಿದ್ದ ಸದ್ದನ್ನೇ ಆಲಿಸುತ್ತ ನಿಸ್ಸಹಾಯರಾಗಿ ನಿಂತುಬಿಟ್ಟರು. ಸದ್ದು ದೂರವಾಗುತ್ತ ಬಂದು ಸ್ವಲ್ಪ ಹೊತ್ತಿನಲ್ಲಿಯೆ ಎಲ್ಲ ನೀರವವಾಯಿತು. ಸೆಟ್ಟರು ಖಿನ್ನಮುಖರಾಗಿ ನಿಟ್ಟುಸಿರು ಬಿಡುತ್ತ ಹಿಂದಕ್ಕೆ ಬರುವಾಗ ದಾರಿಯಲ್ಲಿ ಹಾಕಿದ್ದ  ಕೋವಿಯನ್ನೆತ್ತಿಕೊಂಡು ಕಂಬಳಿಯಿದ್ದ ಜಾಗಕ್ಕೆ ಹೋದರು. ಕಂಬಳಿ ಕರ್ರಗೆ ಹಾಸ್ಯಮಾಡುವಂತೆ ಬಿದ್ದಿತು!

ಭಗ್ನಮನೋರಥರಾದ ಸೆಟ್ಟರು ಏನಾದರೂ ಬೇಟೆ ಮಾಡಲೇ ಬೇಕೆಂದು ದ್ವಿಗುಣಿತ ಸಾಹಸದಿಂದ ಹೊಂಚುಹಾಕುತ್ತ ಕಾಡಿನಲ್ಲಿ ಸಂಚರಿಸತೊಡಗಿದರು. ತಿರುಗುತ್ತಿದ್ದಾಗ ಒಂದೆಡೆ ಬಳ್ಳಿ ಹಬ್ಬಿ ಸ್ವಲ್ಪ ಅಪೂರ್ವವಾಗಿ ಸಮತಟ್ಟಾಗಿದ್ದ ಜಾಗವೊಂದು ಅವರ ಕಣ್ಣಿಗೆ ಬಿತ್ತು. ಸೆಟ್ಟರ ಕುತೂಹಲವು ಕೆರಳಿ ಅಲ್ಲಿಗೆ ಹೋದರು. ಅದರ ಮೇಲೆ ನಿಂತಾಗ ಸ್ಥಳವು ಮಂಚದಷ್ಟು ಸಮತಟ್ಟಾಗಿದ್ದಂತೆ ಅಡಿಗಳಿಗೆ ಅನುಭವವಾಗಲು ಹಬ್ಬಿದ್ದ ಬಳ್ಳಿಗಳನ್ನು ಕಿತ್ತೆಳೆದರು. ನೋಡುತ್ತಾರೆ;ಯಾರೋ ನಾಟಾ ಕೂಡಿಟ್ಟು ಇತರರಿಗೆ ಕಾಣಬಾರದೆಂದು ಬಳ್ಳಿ ಹಬ್ಬಿಸಿದ್ದಾರೆ! ನುಣುಪಾಗಿ ಕೊಯ್ದ ತೊಲೆಗಳು, ಹಲಗೆಗಳು, ರೀಪು ಪಕಾಸಿಗಳು ರಾಶಿರಾಶಿಯಾಗಿ ಸುವ್ಯವಸ್ಥಿತವಾಗಿ ಬಿದ್ದಿವೆ! ಯಾರೋ ಲೈಸೆನ್ಸ ಇಲ್ಲದೆ ನಾಟಾ ಕಡಿಸಿದ್ದಾರೆ ಎಂಬುದೇನೋ ಕೂಡಲೆ ಗೊತ್ತಾಗಿ, ನಿಧಿಯನ್ನು ಕಂಡವರಂತೆ ಹರ್ಷಿತರಾದರು. ಮಾಡಿದವರು ಮನೆಗೆ  ಹೊರುವ ಮುನ್ನ ನೋಡಿದವರೇ ಮನೆಗೆ ಹೊತ್ತರೆ! ಚಂದ್ರಯ್ಯಗೌಡರಿಗೂ ಕೂಡ ಖರ್ಚಿಲ್ಲದೆ ಬಿಟ್ಟಿಯ ನಾಟಾ ಸಿಕ್ಕಂತಾಗುತ್ತದೆ. ತಮಗೂ ಪಾಲು ದೊರೆಯುತ್ತದೆ. ಸೆಟ್ಟರ ಮನಸ್ಸಿನಲ್ಲಿ ಬೇಟೆಯ ವಿಚಾರವಳಿದು ನಾಟಾಗಳನ್ನು ಸಾಗಿಸುವ ಉಪಾಯವೊಂದೇ ಉಳಿಯಿತು.  ಆ ದಿನ ಬೆಳಿಗ್ಗೆ  ಕೋವಿತೆಗೆದುಕೊಂಡು ಹೊರಟಿದ್ದು ಸಾರ್ಥಕವಾಯಿತೆಂದು ಹಿಗ್ಗಿದರು. ಕೋಳಿ ಹೋದರೇನು? ನಾಟಾ ಸಿಕ್ಕಿತಲ್ಲಾ!

ಅಷ್ಟರಲ್ಲಿ ಸಮೀಪದಲ್ಲಿ ಮರ ಕುಯ್ಯುವ ಸದ್ದು ಕೇಳಿಸದಂತಾಗಿ, ಸೆಟ್ಟರು ಕಳ್ಳರನ್ನು ಹಿಡಿಯಲು ಹೋಗುವ ಪೋಲೀಸಿನವರಂತೆ ಮೆಲ್ಲನೆ ಮುಂಬರಿದರು. ನೋಡುತ್ತಾರೆ; ತಮಗೆ ಗುರುತಿದ್ದ ಬಡಗಿಗಳೆ! ಹೆಮ್ಮರದ ದಿಂಡುಗಳನ್ನು ದಡಿಯಕ್ಕೆ ಹಾಕಿ, ಉದ್ದವಾದ ಗರಗಸಗಳಿಂದ ಕೊಯ್ಯುತ್ತಿದ್ದಾರೆ! ಬಣ್ಣಬಣ್ಣದ ಮರದ ಹುಡಿ ರಾಶಿರಾಶಿಯಾಗಿ ಬಿದ್ದಿದ್ದು. ” ಬಹಳ ದಿನಗಳಿಂದಲೂ ಈ ಕೆಲಸ ನಡೆಯುತ್ತಿದೆ” ಎಂದು ಸಾರುವಂತಿತ್ತು. ಬಡಗಿಗಳು ಸೆಟ್ಟರನ್ನು ಕಂಡು ಸ್ವಲ್ಪ ಅಪ್ರತಿಭರಾದರೂ ಅವರನ್ನು ಹತ್ತಿರಕ್ಕೆ ಕರೆದು. ಎಲೆಯಡಿಕೆ ಕೊಟ್ಟು, ಮಾತುಕತೆಮಾಡಿ ಉಪಚರಿಸಿದರು. ಸಂಭಾಷಣೆಯಿಂದ ಸೀತೆಮನೆ ಸಿಂಗಪ್ಪಗೌಡರು ಬಹಳ ದಿನಗಳಿಂದಲೂ ಕಳ್ಳನಾಟಾ ಕೊಯ್ಯಿಸುತ್ತಿದ್ದಾರೆ ಎಂಬ ಸಂಗತಿ ಸೆಟ್ಟರಿಗೆ ಗೊತ್ತಾಯಿತು. ಚಂದ್ರಯ್ಯಗೌಡರಿಗೆ ಮುಯ್ಯಿ ತೀರಿಸಿಕೊಳ್ಳಲು ಒಳ್ಳೆಯ ಅವಕಾಶ ಕಂಡುಹಿಡಿದೆನೆಂದು ಹಿಗ್ಗಿ, ಕಾನೂರಿನ ಕಡೆಗೆ ಹೊರಟರು. ಗರಗಸದ ಸದ್ದು ಬರುಬರುತ್ತ ದೂರವಾಗಿ ಕಿವಿಮರೆಯಾಯಿತು.

ಸೆಟ್ಟರು ತಾವು ಕಂಡ ದೃಶ್ಯದ ವಿಚಾರವಾಗಿ ಆಲೋಚಿಸುತ್ತ, ದಟ್ಟವಾದ ಕಾಡಿನ ಹಳುವಿನಲ್ಲಿ, ಎತ್ತುಬೀಳು ಕಾಲು ಕೀಸುತ್ತಿರಲು. ಬಳ್ಳಿ ತುರುಚಿ ಬತ್ತಲಾಗಿದ್ದ ಕಾಲಿಗೆ ಬಡಿದು ಪೀಡಿಸುತ್ತಿರಲು. ಒಮ್ಮೆ ಬೇಗ ಬೇಗ, ಒಮ್ಮೆ ಮೆಲ್ಲಮೆಲ್ಲನೆ ನಡೆದರು. ಆ ಕಾಡಿನಲ್ಲಿ ಅಂತಹ ದಾರಿಯ ಜಾಡು ಹೇಗಾಯಿತೆಂಬುದು ಅವರಿಗೆ ಗೊತ್ತಾಗಲಿಲ್ಲ. ಆ ಕಾಲುದಾರಿ ನೆಟ್ಟಗೆ ಒಂದು ದೊಡ್ಡ ಬಗನಿಯ ಮರದ ಬುಡಕ್ಕೆ ಹೋಗಿದ್ದುದನ್ನು ಕಂಡಾಗ ಸೇರೆಗಾರರಿಗೆ ಅರ್ಥವಾಯಿತು. ಯಾರೋ ಲೈಸೆನ್ಸ ಇಲ್ಲದೆ ಕಳ್ಳಬಗನಿ ಕಟ್ಟಿದ್ದರು.

ಎತ್ತರವಾಗಿ ಬೆಳೆದಿದ್ದ ಆ ಬಗನಿ ಮರದ ನೆತ್ತಿಯಲ್ಲಿ ಅದರ ಹೂವಿಗೆ ಕಟ್ಟಿದ್ದ ಕಳ್ಳಿನ ಮಡಕೆಯ ಕರಿಯ ಗೋಳವು ನೇತಾಡುತ್ತಿತ್ತು. ಮರಕ್ಕೆ ಆನಿಸಿ ಬಳ್ಳಿಗಳಿಂದ ಬಲವಾಗಿ ಕಟ್ಟಿದ್ದ ಒಂದು ಬಿದಿರಿನ ಏಣಿಯ ಕಾಲುಗಳು ಸಮೆದಿದ್ದರಿಂದಲೂ, ಅವುಗಳಿಗೆ ಹೊಸ ಮಣ್ಣು ಮೆತ್ತಿಕೊಂಡಿದ್ದರಿಂದಲೂ, ಅಲ್ಲಿಯೆ ಪಕ್ಕದಲ್ಲಿ ಉಗುಳಿದ್ದ ತಂಬಾಕಿನ ಕೆಂಪು ಇನ್ನೂ ಹಸಿಯಾಗಿದ್ದುದರಿಂದಲೂ, ಸ್ವಲ್ಪ ಹೊತ್ತಿಗೆ ಮುಂಚೆ ಯಾರೋ ಅಲ್ಲಿಗೆ ಬಂದಿದ್ದರೆಂಬುದು ನಿರ್ವಿವಾದವಾಗಿತ್ತು. ಸೆಟ್ಟರಿಗೆ ಕಳ್ಳಿನ ಮಡಕೆಯನ್ನು ಕಂಡು ಬಾಯಲ್ಲಿ ನೀರೂರಿದರೂ ಏಣಿ ಹತ್ತುವ ಸಾಹಸಕ್ಕೆ ಹೋಗದೆ ತಮ್ಮ ದಾರಿ ಹಿಡಿಯುತ್ತಿದ್ದರು. ಆದರೆ ಪೊದೆಗಳಲ್ಲಿ ಏನೋ ಸದ್ದು ಕೇಳಿಸಿ ನಿಂತು ಪರೀಕ್ಷಿಸಿದರು ದೂರದ ಹಳುವಿನಲ್ಲಿ ಏನೋ ಅಲ್ಲಾಡಿದಂತಾಗಲು ಬಗ್ಗಿ ಚೆನ್ನಾಗಿ ನೋಡಿದರು. ಯಾವುದೋ ಪ್ರಾಣಿ ನಿಂತುದು ಅವರಿಗೆ ಕಾಣಿಸಿತು. ಆ ಹೊದರಿನಲ್ಲಿ ಅದು ಇಂತಹ ಪ್ರಾಣಿಯೇ ಎಂದು ನಿರ್ಧರಿಸಲಾಗಲಿಲ್ಲ. ತಡಮಾಡಿದರೆ ಓಡಿಹೋದೀತೆಂದು ಗುರಿಯಿಟ್ಟು ಈಡು ಹೊಡೆದರು.

“ಯಾರ‍್ರೋ ಅದು ಈಡು ಹೊಡ್ದೋರು?” ಎಂಬ ಮನುಷ್ಯವಾಣಿಯೊಂದು ಪ್ರಾಣಿ ನಿಂತಂತಿದ್ದ ಸ್ಥಳದಿಂದ ಕೇಳಿಸಿತು.

ಸೆಟ್ಟರಿಗೆ ಎದೆ ಹಾರಿ, ಮೈಮೇಲೆ ಕುದಿ ನೀರು ಚೆಲ್ಲಿದಂತಾಗಿ, ನಡುಗಿ, ಬೆವರಿ, ನಿಡುಸುಯ್ದು, ನಿಲ್ಲಲಾರದೆ ನೆಲದ ಮೇಲೆ ಕುಸಿದುಬಿಟ್ಟರು. ಪ್ರಾಣಿಯೆಂದು ಬಗೆದು ಯಾರನ್ನೋ ಕೊಂದುಬಿಟ್ಟೆನೆಂದು!

“ಯಾರ‍್ರೋ ಅದು ಈಡು ಹೊಡ್ದೋರು?” ಎಂದು ಮತ್ತೆ ಕೇಳುತ್ತ ಕಾನೂರು ಚಂದ್ರಯ್ಯಗೌಡರ ಬೇಲರ ಜಾತಿಯ ಜೀತದಾಳಿ ಬೈರನು ಹೊದರಿನಿಂದ ಹೊರಗೆ ಬಂದು ಕಾಣಿಸಿಕೊಂಡನು. ಸೆಟ್ಟರು ಅವನ ಕಣ್ಣಿಗೆ ಬಿದ್ದ ಕೂಡಲೆ” ನೀವೇನಯ್ಯಾ ಈಡು ಹೊಡ್ದಿದ್ದು?” ಎಂದು ಬಳಿಗೆ ಬಂದನು.

ಸೆಟ್ಟರು ಅವನನ್ನು ಮೂಕವಾಗಿ ಭಯಚಕಿತರಾಗಿ ದೃಷ್ಟಿಸಿದರು. ಅವನ ಕೊಳಕಾಗಿದ್ದ ಕರಿಯ ದೇಹದಲ್ಲಿ ಮೊಳಕಾಲಿನವರೆಗಿದ್ದ ಸೊಂಟದ ಪಂಚೆಯೊಂದಲ್ಲದೆ ಬೇರೆ ನೂಲು ಎಂಬ ಪದಾರ್ಥವೆ ಇರಲಿಲ್ಲ. ಮುಂದಲೆಯಲ್ಲಿ ಕೂದಲು ಹುಟ್ಟಿದ್ದರೂ ಲಾಳದಾಕಾರವಾಗಿ ಕೆತ್ತಿದ್ದ ಚೌರದ ಗುರುತು ಕಾಣುತ್ತಿತ್ತು. ಅವನ ಜುಟ್ಟು ಕಟ್ಟಿದ್ದರೂ ಕಾಲಾಂತರದಿಂದ ಎಣ್ಣೆ ಕಾಣದೆ ಒರಟಾಗಿ ಸಿಕ್ಕುಸಿಕ್ಕಾಗಿ ಕೆದರಿಕೊಂಡಿತ್ತು. ಗಡ್ಡ ಮೀಸೆಗಳು ಅಂಗುಲ ಅಂಗುಲ ಬೆಳೆದಿದ್ದವು. ಕಿವಿಯಲ್ಲಿ ಒಂಟಿಗಳೂ. ತೋಳಿನಲ್ಲಿ ಕರಿಯ ದಾರದಿಂದ ಬಿಗಿದು ಕಟ್ಟಿದ್ದ ತಾಮ್ರದ ತಾತಿಯೂ ಇದ್ದುವು. ಮಲೇರಿಯದ ಕಡಮೆಯಾಗಿರಲಿಲ್ಲ. ಅವನ ಮೈಮೇಲಿದ್ದ  ಸುಟ್ಟಗಾಯದ ಕಲೆಗಳು ಹಳ್ಳಿಯ ವೈದ್ಯದ ರಾಕ್ಷಸೀ ಭಾವಕ್ಕೆ ಪ್ರಮಾಣವಾಗಿದ್ದುವು. ಬತ್ತಲೆಯಾಗಿದ್ದ ಅವನ ಮುಖ ಕೈ ಮೈ ಕಾಲುಗಳಲ್ಲಿ ಗಾಯವಾಗಲಿ ರಕ್ತವಾಗಲಿ ತೋರದಿದ್ದುದನ್ನೂ, ಅವನ ವಾಣಿಯ ನಿರುದ್ವಿಗ್ನತೆಯನ್ನೂ ಕಂಡು ಸೆಟ್ಟರಿಗೆ ಜೀವ ಬಂದಂತಾಗಿ ನಿಟ್ಟುಸಿರು ಬಿಡುತ್ತ” ಹೌದು ಮಾರಾಯ! ನಾನೇ ಹೊಡ್ದಿದ್ದು!” ಎಂದರು.

ಸೆಟ್ಟರ ಸ್ಥಿತಿಯನ್ನು ನೋಡಿ ಬೈರನು” ಇದ್ಯಾಕ್ರಯ್ಯಾ ಹಿಂಗೆ ಮಾಡ್ತೀರಿ?” ಎಂದು ಕೇಳಿದನು.

“ನಿನಗೇನೂ ಆಗಲಿಲ್ಲವೇನೋ?”

“ಏನೂ ಆಗ್ಲಿಲ್ಲ!…. ಯಾಕೆ?”

“ಯಾಕೂ ಇಲ್ಲ. ದೇವರೇ ಕಾಪಾಡಿದನಪ್ಪಾ” ಎಂದು ಸೆಟ್ಟರು ಕೋವಿಗೆ ನಮಸ್ಕಾರ ಮಾಡಿದರು.

“ಎಂತದಕ್ಕೆ ಹೊಡ್ದಿದ್ದು?”

“ನಿನಗೇ”

“ನನಗೆ?”

“ಅದ್ಯಾಕೆ ಹಾಗೆ ಅಡಗಿಕೊಂಡು ಕೂತಿದ್ದೆ, ಮಾರಾಯ? ಕೊಂದೇ ಹಾಕಿದ್ದೆನಲ್ಲಾ ನಿನ್ನ!” ಎಂದು ಸೆಟ್ಟರು ನಡೆದುದನ್ನು ವಿವರಿಸಿದರು.

“ನಾನು ಹೆಡಗೆ ಬಳ್ಳಿಗಾಗಿ ಬಂದವನು ಅಲ್ಲಿ ಕೂತಿದ್ದೆ.”

ಸೆಟ್ಟರಿಗೆ ತಾನು ಹೊಡೆದಿದ್ದ ಈಡಿನ ಗುರಿ ಹೇಗೆ ತಪ್ಪಿತೆಂದು ಅರ್ಥವಾಗಲಿಲ್ಲ. ಇಬ್ಬರೂ ಸೇರಿ ಈಡಿನ ಜಾಡು ನೋಡಿದರು. ಯಾವ ಮರಕ್ಕಾಗಲಿ ಗಿಡಕ್ಕಾಗಲಿ ಎಲೆಗಾಗಲಿ ಎಷ್ಟು ಹುಡುಕಿದರೂ ಚರೆ ತಗುಲಿದುದು ಕಾಣಿಸಲಿಲ್ಲ.

“ಬೈರಾ, ನನಗೂ ಗ್ರಹಚಾರ ನೆಟ್ಟಗಿತ್ತು; ನಿನಗೂ ಆಯುಸ್ಸು ಗಟ್ಟಿಯಾಗಿತ್ತು. ಇಲ್ಲದಿದ್ದರೆ ಅಷ್ಟು ಚೆನ್ನಾಗಿ ಗುರಿಯಿಟ್ಟ ಈಡು ತಪ್ಪುವುದೆಂದರೇನು? ಚರೆಬಿದ್ದ ಗುರುತೇ ಕಾಣದೆ ಮಂಗಳಮಾಯವಾಗುವುದೆಂದರೇನು? ಈ ಸಾರಿ ಭೂತರಾಯನಿಗೆ ಒಂದು ಕೋಳಿ ಹೆಚ್ಚಾಗಿ ಕೊಡುತ್ತೇನಪ್ಪಾ!”

ಸೆಟ್ಟರು ಈಡಿನ ಜಾಡು ನೋಡುತ್ತ ನೋಡುತ್ತ ಬೈರನು ಅಡಗಿ ಕೂತಿದ್ದ ಜಾಗಕ್ಕೆ ಸಮೀಪವಾದರು.

ಬೈರನು ಗಾಬರಿಯಾಗಿ” ಹಾಳಾಗಿ ಹೋಗಲಿ, ಹಿಂದಕ್ಕೆ ಬನ್ನಿ, ಮತ್ಯಾಕೆ ಮುಂದೆ ಹೋಗ್ತೀರಿ” ಎಂದು ಅವರನ್ನು ಹಿಂದಕ್ಕೆ ಕರೆದನು.

ಆದರೆ ಸೆಟ್ಟರ ಮೂಗಿಗೆ ಬೈರನ ಗುಟ್ಟು ಆಗಲೇ ಬಿದ್ದುಹೋಗಿತ್ತು. ಬೈರನು ಅಡಗಿದ್ದ ಜಾಗದಲ್ಲಿ ಒಂದು ಕಂಬಳಿ, ಒಂದು ಮಡಕೆ, ಒಂದು ಬಗನಿಯ ಕತ್ತಿ ಇದ್ದವು. ನೋಡುತ್ತಾರೆ; ಮಡಕೆಯ ತುಂಬಾ ಆಗತಾನೆ ಮರದಿಂದ ಇಳಿಸಿದ್ದ ನೊರೆ ನೊರೆ ಕಳ್ಳು! ಘಮ್ಮೆಂದು ವಾಸನೆ ಬರುತ್ತಿದೆ!

“ಏನೋ ಇದು, ಬೈರಾ! ನೀನೆ ಏನೋ ಆ ಬಗನಿ ಕಟ್ಟಿದವನು?”

ಬೈರನ ಮುಖ ಸಣ್ಣಗಾಯಿತು. ಸೆಟ್ಟರು ಹೊಡೆದ ಈಡು ತಗುಲಿದ್ದರೂ ಅವನಿಗಷ್ಟು ನೋವಾಗುತ್ತಿರಲಿಲ್ಲ. ತನ್ನ ಗುಟ್ಟು ರಟ್ಟಾಯಿತೆಂದು ಬೆದರಿದನು. ಸೆಟ್ಟರ ಬಳಿಗೆ ಬಂದು ಕಾಲಿಗೆ ಬಿದ್ದು ” ನಿಮ್ಮ ದಮ್ಮಯ್ಯಾ ಅಂತೀನಿ! ಯಾರಿಗೂ ಹೇಳಬೇಡಿ” ಎಂದನು.

“ಅಲ್ಲವೋ, ನಿನ್ನ ಕಳ್ಳ ಬಗನಿಯ ದೆಸೆಯಿಂದ ನನ್ನ ಕುತ್ತಿಗೆಗೆ ನೇಣಾಗುತ್ತಿತ್ತುಲ್ಲೋ! ನಿನ್ನ ಮನೆ ಹಾಳಾಗಲಿ! ಅಲ್ಲಿ ಯಾಕೆ ಕೂತುಕೊಂಡಿದ್ದೆಯೋ!”

“ಹೋಗಲಿ ಬಿಡು. ಆಗಿದ್ದು ಆಗಿ ಹೋಯ್ತು….. ಕಳ್ಳು ಚೆನ್ನಾಗಿದೆಯೇನೋ?…”

ಬೈರನು ಬೇಲರವನು; ಅಸ್ಪೃಶ್ಯನು. ಆದರೂ ಯಾರೂ ಕಾಣದ ಕಾಡಿನಲ್ಲಿ ಸೆಟ್ಟರು ಬಗನಿಯ ಹಾಳೆಯಲ್ಲಿ ಅವನು ಬೊಗ್ಗಿಸಿಕೊಟ್ಟ ನೊರೆಗಳನ್ನು ಚೆನ್ನಾಗಿ ಹೀರಿದರು. ಆಗಲೇ ಮಧ್ಯಾಹ್ನದ ಸಮಯವಾಗಿತ್ತು. ಇಬ್ಬರೂ ಒಬ್ಬರ ಗುಟ್ಟನ್ನೊಬ್ಬರು ಮನಸ್ಸಿನಲ್ಲಿಟ್ಟುಕೊಂಡು ಕಾನೂರಿನ ಕಡೆಗೆ ಇಳಿದರು.

ಬೈರನಿಗೆ ಗುಂಡು ತಾಗದಿದ್ದುದಕ್ಕೆ ಕಾರಣ ಸೆಟ್ಟರ ಮನಸ್ಸಿಗೆ ದಾರಿಯಲ್ಲಿ ತಟಕ್ಕನೆ ಗೊತ್ತಾಯಿತು. ಅವರು ಕೋವಿಗೆ ತುಂಬಲು ಚರೆಯನ್ನು ಕೈಯಲ್ಲಿ ಹಿಡಿದಿದ್ದಾಗ ಹುಂಜ ಎದ್ದು ಓಡತೊಡಗಿತಷ್ಟೆ? ಅವಸರದಲ್ಲಿ ಚೆರೆಯನ್ನು ನಳಿಗೆಗೆ ಸುರಿದು ಪ್ರಾಣಿಯನ್ನು ಹಿಂಬಾಲಿಸಿದ್ದರು. ಆಮೇಲೆ ನಿರಾಶರಾಗಿ ಹಿಂತಿರುಗಿದವರಿಗೆ, ಚೆರೆ ಕೆಳಗೆ ಉರುಳಿ ಬಿದ್ದುಹೋಗದಂತೆ ನಳಿಗೆಗೆ ಕತ್ತವನ್ನು ಹಾಕಿ ಇಡಿಯಲು ಮರೆತುಹೋಯಿತು. ಕೋವಿಯ ಕಿವಿಗೆ ಕೇಪನ್ನು ಮಾತ್ರ ಹಾಕಿಕೊಂಡು ಮುಂದಿನ ಬೇಟೆಗೆ ಹೊರಟಿದ್ದರು. ದಾರಿಯಲ್ಲಿ ಕೋವಿಯನ್ನು ಕೆಳಗೂ ಮೇಲೂ ಅಲ್ಲಾಡಿಸುತ್ತ ಸಾಗಿದಾಗ ಎಲ್ಲಿಯೋ ಚೆರೆಯೆಲ್ಲ ನೆಲಕ್ಕುರುಳಿ ಹೋಗಿದ್ದುವು. ಆದ್ದರಿಂದಲೇ ಅವರು ಈಡು ಹೊಡೆದಾಗ ಬರಿಯ ಸದ್ದು ಮಾತ್ರವಾಗಿ ಬೈರನು ಬದುಕಿಕೊಂಡದ್ದು!

ಸೆಟ್ಟರು ಹುಂಜನಿಗೆ ಮನಸ್ಸಿನಲ್ಲಿಯೆ ವಂದಿಸಿದರು.