ಹೂವಯ್ಯ ಬರೆದಿದ್ದ ಕಾಗದದ ಪ್ರಕಾರ ಸಿಂಗಪ್ಪಗೌಡರು ಕೊಟ್ಟಿದ್ದ ಐವತ್ತು ರೂಪಾಯಿಗಳನ್ನೂ ಕೈಕಾಗದವನ್ನೂ ತೆಗೆದುಕೊಂಡು ಸೀತೆಮನೆಯಿಂದ ಕೆಳಕಾನೂರಿಗೆ ಹೋಗುತ್ತಿದ್ದ ಸೋಮನಿಗೆ ನಡುದಾರಿಯಲ್ಲಿ ಒಂದು ಪ್ರಲೋಭನ ಭೂತವೆದುರಾಯಿತು.ಶನಿವಾರ ಸಂಧ್ಯಾಕಾಲ ಕೋಳಿ ಅಂಕ ನಡೆಯುವುದೆಂದು ಆತನಿಗೆ ಗೊತ್ತಿತ್ತು. ಕನ್ನಡ ಜಿಲ್ಲೆಯವನಾಗಿದ್ದ ಅವನಿಗೆ ಸ್ವಾಭಾವಿಕವಾಗಿಯೆ ಕೋಳಿಯಂಕದಲ್ಲಿ ಹೆಚ್ಚು ಆಸಕ್ತಿ. ಆದರೆ ಹೂವಯ್ಯನಿಗೆ ಅಂತಹ ವಿಚಾರಗಳಲ್ಲಿ ದ್ವೇಷವಿದ್ದುದರಿಂದ ಸೋಮ ಅತ್ತಕಡೆಗೆಳೆಯುತ್ತಿದ್ದ ತನ್ನ ಮನಸ್ಸನ್ನು ಬಹು ಪ್ರಯತ್ನದಿಂದ ಬಿಗಿಹಿಡಿದಿದ್ದನು. ಆದರೂ ಅವಕಾಶ ಸಿಕ್ಕಿದರೆ ಅಂಕದ ಮೋಹಕ್ಕೆ ಒಳಗಾಗದಿರುವಷ್ಟು ದೃಢವಾಗಿರಲಿಲ್ಲ ಆ ಮನಸ್ಸು.

ಹೂವಯ್ಯ ತನ್ನ ಜಮೀನಿನ ಕಾಮಗಾರಿಗೆ ಬೇಕಾಗಿದ್ದ ಹಣವನ್ನು ಸಿಂಗಪ್ಪಗೌಡರಿಂದ ತರಿಸಿಕೊಳ್ಳಲು ಬರೆದಿದ್ದ ಕಾಗದವನ್ನು ಪುಟ್ಟಣ್ಣನ ಕೈಯಲ್ಲಿ ಕೊಟ್ಟು ಕಳುಹಿಸಬೇಕೆಂದಿದ್ದನು. ಆದರೆ ಸೋಮ ತಾನೇ ಹೋಗಿಬರುವುದಾಗಿ ಹೇಳಿ ಸೀತೆಮನೆಗೆ ಹೋಗಿದ್ದನು. ಹೋಗುವಾಗ ಅವನಿಗೆ ಕೋಳಿಯಂಕಕ್ಕೆ ಹೋಗುವ ಬುದ್ಧಿ ನಿಜವಾಗಿಯೂ ಇರಲಿಲ್ಲ. ಅಥವಾ ಗೊತ್ತಿರಲಿಲ್ಲ.ಆದರೆ ಸೀತೆಮನೆಯಿಂದ ಹಿಂತಿರುಗುತ್ತಿದ್ದಾಗ, ಅಂತರಂಗದಲ್ಲಿ ಅವಿತುಕೊಂಡಿದ್ದ ಆ ’ಹುನಾರು’ ಮೆಲ್ಲಗೆ ಹೊರಗೆ ತಲೆಹಾಕಿತು.

“ಏನು, ಹೋಗಿ ನೋಡಿಕೊಂಡು ಬಂದರಾಯಿತು! ಒಂದು ಎಲೆಯಡಕೆ ಹಾಕುವಷ್ಟು ದೂರವೂ ಇಲ್ಲ. ನಾನು ಹೋಗಿ ಬಂದಿದ್ದು ಯಾರಿಗೆ ಗೊತ್ತಾಗುತ್ತದೆ? ನಾನೇನು ಅಂಕಕ್ಕೆ ಕೋಳಿ ತೆಗೆದುಕೊಂಡು ಹೋಗುವುದಿಲ್ಲ; ಮೇಲುಜೂಜಿನ ಗೋಜಿಗೂ ಹೋಗುವುದಿಲ್ಲ! ಮೇಲುಜೂಜಿಗೆ  ಹೋಗುವುದಕ್ಕೆ ನನ್ನ ಹತ್ತಿರ ದುಡ್ಡಾದರೂ ಎಲ್ಲಿದೆ?” ಎಂದು ಆಲೋಚಿಸುತ್ತಿದ್ದಾಗ, ತನ್ನ ಜೇಬಿನಲ್ಲಿದ್ದ ಐವತ್ತು ರೂಪಾಯಿಗಳ ನೆನಪಾಯಿತು. ಆದರೆ ಅದು ತನ್ನ ಒಡೆಯನಿಗೆ ಸೇರಿದುದು; ಆ ದುಡ್ಡು ತನ್ನಲ್ಲಿದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ಯೋಚಿಸಿ, ಸೋಮ ಕೋಳಿಯಂಕದ ಪಟ್ಟೆಯ ಕಡೆಗೆ ಚುರುಕಾಗಿ ನಡೆದನು. ಮುಂದುವರಿದಂತೆಲ್ಲ ಅಂಕವನ್ನು ನೋಡುವ ಆಸಕ್ತಿಯೂ ಉದ್ವೇಗವೂ ಹೆಚ್ಚು ಹೆಚ್ಚಾಗಿ, ಬೇಗಬೇಗನೆ ಕುಕ್ಕೋಟ ಓಡತೊಡಗಿದನು. ಅಂಕದ ಪಟ್ಟೆ ಸಮೀಪವಾದಾಗ ಮಾತ್ರ ಒಂದು ಸಾರಿ ನಿಂತು, ತನ್ನ ಉಡುಪನ್ನು ಚೆನ್ನಾಗಿ ನೀವಿ ಸರಿಮಾಡಿಕೊಂಡು, ಪ್ರಶಂಸಾದೃಷ್ಟಿಯಿಂದ ಅವಲೋಕಿಸಿ ಮುಂದುವರಿದನು.

ಅವನು ಬರುವಷ್ಟರಲ್ಲಿಯೆ ನಾಲ್ಕಾರು ಕಡೆಗಳಲ್ಲಿ ಅಂಕಗಳು ಶುರುವಾಗಿದ್ದುವು. ಅಂಕವಾಡುವ ಕೋಳಿಗಳನ್ನೆ ನೆಟ್ಟನೋಟದಿಂದ ನೋಡುತ್ತಿದ್ದ ಮಂದಿ, ಸೋಮನನ್ನಾಗಲಿ ಅವನ ಉಡುಪನ್ನಾಗಲಿ ಹೆಚ್ಚೇನೂ ಲೆಕ್ಕಿಸಲಿಲ್ಲ. ಒಳ್ಳೆಯದೆ ಆಯಿತೆಂದುಕೊಂಡು ಸೋಮ ಒಂದುಕಡೆ ನಿಂತು ನೋಡದೆ, ಅಲ್ಲಲ್ಲಿ ನೆರೆದಿದ್ದ ಗುಂಪುನಿಂದ ಗುಂಪಿಗೆ ಚರಿಸತೊಡಗಿದನು. ಅವನಿಗಾಗಲೆ ಬರಿಯ ಪ್ರೇಕ್ಷಕನಾಗಿ ಇರುವುದರಲ್ಲಿ ರುಚಿಯೂ ಆಸಕ್ತಿಯೂ ಅಳಿದುಹೋಗಿ ಮನಸ್ಸು ಅಸ್ಥಿರವಾಗುತ್ತಿತ್ತು.

ಅಂಕಗಳೇನೊ ಒಂದೊಂದೂ ಒಂದೊಂದು ವಿಶೇಷ ರೀತಿಯಿಂದ ಮನೋಹರವಾಗಿದ್ದುವು. ಒಂದೆಡೆ ಕಾಳಗಕ್ಕೆ ಪ್ರಾರಂಭವಾದ ಒಂದೆರಡು ಕ್ಷಣಗಳಲ್ಲಿ ಒಂದು ಹುಂಜ ಹೆದರಿ ಕಾಲಿಗೆ ಬುದ್ಧಿ ಹೇಳಿ ಪೋದೆಗಳಲ್ಲಿ ತಲೆ ಮರೆಸಿಕೊಂಡು, ಮೇಲುಜೂಜಿನಲ್ಲಿ ಗೆದ್ದವರ ನಗೆ ಮತ್ತು ಕೈಚಪ್ಪಾಳೆಗಳಿಗೂ, ಸೋತವರ ವಿಷಾದ ಮತ್ತು ಬೈಗುಳಗಳಿಗೂ, ತನ್ನ ಒಡೆಯನ ಅವಮಾನ ಮತ್ತು ಕ್ರೋಧಗಳಿಗೂ ಕಾರಣವಾಯಿತು. ಮತ್ತೊಂದೆಡೆ ಎರಡು ಹುಂಜಗಳಿಗೂ ಖಾಡಾಖಾಡಿ ಯುದ್ಧವಾಗಿ, ಒಂದರ ಹೊಟ್ಟೆ ಸೀಳಿತು.ಒಡನೆಯೆ ಅದರ ಯಜಮಾನನೂ ಮತ್ತು ಅದರ ಪರವಾಗಿ ಮೇಲುಜೂಜು ಕಟ್ಟಿದ್ದವರೂ ಸೇರಿ, ಗಾಯವನ್ನು ಹೋಲಿದು, ಔಷಧಿ ಹಾಕಿ, ನೀರು ಕುಡಿಸಿ, ಮತ್ತೆ ಅಂಕಕ್ಕೆ ಬಿಡಲು,ಒಂದೆರಡು ನಿಮಿಷಗಳಲ್ಲಿಯೆ ಎದುರಾಳಿಯನ್ನೂ ಕೊಂದು ತಾನೂ ಬದುಕಿಕೊಂಡಿತು. ಇನ್ನೊಂದೆಡೆ ಮೇಲುಜೂಜು ಕಟ್ಟಿದ್ದವರಲ್ಲಿಯೆ ಪರಸ್ಪರ ಮಾತುಕತೆಗಳಾಗಿ, ಜಗಳವಾಗುವುದರಲ್ಲಿತ್ತು. ಮಗುದೊಂದೆಡೆ ಕೋಳಿಗೆ ನೀರು ಕುಡಿಯಿಸುವುದರ ಬದಲು ಹೆಂಡವನ್ನು ಕುಡಿಸಿದುದರ ಫಲವಾಗಿ ಅದು-ನೆರೆದವರೆಲ್ಲರೂ ಹುಂಜಗಳಾಗಿ ಕಂಡರೇನೊ ಅದರ ಕಣ್ಣಿಗೆ- ಎದುರು ಹುಂಜುವನ್ನು ಬಿಟ್ಟು ಜನರಮೇಲೆಯೆ ನುಗ್ಗಿ, ಅದರ ಕಾಲಿನ ಕತ್ತಿಯಿಂದ ಒಬ್ಬಿಬ್ಬರಿಗೆ ಗಾಯಗಳೂ ಆದುವು!

ಹೀಗೆ ಎಲ್ಲ ಅಂಕಸ್ಥಾನಗಳಲ್ಲಿಯೂ ಸಾಕಾದಷ್ಟು ಉದ್ವೇಗೋಲ್ಲಾಸಗಳಿದ್ದರೂ ಸೋಮನ ಮನಸ್ಸಿಗೆ ನೆಮ್ಮದಿಯುಂಟಾಗಲಿಲ್ಲ. ತನ್ನನ್ನು ಎಲ್ಲರೂ ನೋಡುತ್ತಾರೆ ಎಂದು ಭಾವಿಸಿದ್ದುದು ವ್ಯರ್ಥವಾಗಿತ್ತು. ತಾನೊಬ್ಬ ಯಃಕಶ್ವಿತನಾಗಿಬಿಟ್ಟೆನೆಂದು ಮನಸ್ಸಿಗೆ ನೋವಾಯಿತು. ತನ್ನ ಜೇಬಿನಲ್ಲಿ ಐವತ್ತು ರೂಪಾಯಿಗಳು-ಒಂದಲ್ಲ, ಎರಡಲ್ಲ, ಐವತ್ತು ರೂಪಾಯಿಗಳು ಇವೆ ಎಂದು ಗೊತ್ತಾಗಿದ್ದರೆ, ಈ ಜನರು ತನ್ನನ್ನು ಈ ರೀತಿ ನಿರ್ಲಕ್ಷಿಸುತ್ತಿದ್ದರೆ? ನಾನೀಗ ಒಂದೆರಡು ರೂಪಾಯಿಗಳಷ್ಟು ಮೇಲುಜೂಜು ಕಟ್ಟಿದರಾಗಲಿ ಅಥವಾ ಒಂದು ಅಂಕದ ಹುಂಜವನ್ನು ಕೊಂಡುಕೊಂಡು ರಂಗಕ್ಕಿಳಿದರಾಗಲಿ, ಇವರೆಲ್ಲರೂ ಸೇರಿ ಸಂಚು ಹೂಡಿದರೂ ನನ್ನನ್ನು ಕಃಪದಾರ್ಥವನ್ನಾಗಿ ಮಾಡಲು ಸಾಧ್ಯವಾದೀತೆ? ಹೋಗಲಿ, ಇದು ಸಮಯವಲ್ಲ; ಇನ್ನೊಂದು ಸಾರಿ ಅಂಕವಾದಾಗ ನೋಡುತ್ತೇನೆ- ಎಂದು ಮನಸ್ಸಿನಲ್ಲಿಯೆ ಮಂಡಿಗೆ ತಿನ್ನುತ್ತ ಸೋಮ ಕಾನೂರು ರಂಗಪ್ಪ ಸೆಟ್ಟರು ಅಧ್ಯಕ್ಷರಾಗಿದ್ದ ಅಂಕಸ್ಥಾನಕ್ಕೆ ಬಂದನು. ಅವರನ್ನು ಕಂಡಕೂಡಲೆ ಅವನ ಮನಸ್ಸು ಅನಿರೀಕ್ಷಿತವಾಗಿಯೆ ಮಲೆತು ನಿಂತು ಗುಟುರುಹಾಕಿತು. ಮುಂದುವರಿಯದೆ ಹಿಂದುಗಡೆ ನಿಂತುಕೊಂಡು ಸೇರೆಗಾರರ “ಜಬರದಸ್ತ”ನ್ನು ಮಾತ್ಸರ್ಯ ತಿರಸ್ಕಾರಗಳಿಂದ ನೋಡುತ್ತಿದ್ದನು. ಅವನು ಮನಸ್ಸಿನಲ್ಲಿ  ಸೇರೆಗಾರರಲ್ಲಿಯಾದರೂ ಮೇಲುಜೂಜು ಕಟ್ಟಿದರೆ, ಏನಾದರಾಗಲಿ, ಅವರಿಗೆ ಪ್ರತಿಯಾಗಿ ತಾನೂ ಮೇಲುಜೂಜು ಕಟ್ಟದೆ ಬಿಡುವುದಿಲ್ಲ ಎಂದು ಆಲೋಚಿಸಿ, ಹಲ್ಲುಮಟ್ಟೆ ಕಚ್ಚಿದನು. ಅದೃಷ್ಟಕ್ಕೆ ಸರಿಯಾಗಿ ಸೇರೆಗಾರರು ಆ ಜೊತೆಗೆ ಮೇಲುಜೂಜು ಕಟ್ಟಲಿಲ್ಲ.

ಆದರೂ ಸೋಮನ ಮನಸ್ಸಿನಲ್ಲಿಯೆ ಸೇರೆಗಾರರದು ಬಿಳಿಯ ಕೋಳಿಯೆಂದೂ ತನ್ನದು ಕೆಂಪುಕೋಳಿಯೆಂದೂ ಭಾವಿಸಿಕೊಂಡು, ಅಂಕದ ಪರ್ಯವಸಾನವನ್ನೇ ಉತ್ಸುಕತೆಯಿಂದ ಕಾಯುತ್ತಿದ್ದನು. ಬಿಳಿಯ ಕೋಳಿ ಸತ್ತುಬೀಳಲು, ಸೋಮನ ಮನಸ್ಸಿಗೆ ಸೇರೆಗಾರರನ್ನು ತಾನೇ ಕೊಂದುಹಾಕಿದಷ್ಟು ಹರ್ಷವಾಯಿತು! ಆದ್ದರಿಂದಲೆ ಅವನು ಗೆದ್ದವನ(ಅವನ ಹೆಸುರು ’ಕುದುಕ’) ಬಳಿಗೆ ಹೋಗಿ “ಹೌದಾ, ಕುದುಕಾ ಪೆಟ್ಟಾಗಿತ್ತಾ” ಎಂದು ಕುಶಲಪ್ರಶ್ನೆಗೈದು ಸಹಾನುಭೂತಿ ತೋರಿಸಿದುದು. ಮಡಿದು ಬಿದ್ದಿದ್ದ, ಸುಪುಷ್ಟವಾದ ಬಿಳಿಯ ಹುಂಜವನ್ನು ನೋಡುತ್ತಿದ್ದ ಸೋಮನಲ್ಲಿ ಜಯಮದದ ಜೊತೆಗೆ ಕೆಲವು ಕಾಲದ ಹಿಂದೆ ವಿಶೇಷವಾಗಿದ್ದು ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿದ್ದ ಮಾಂಸಲೋಭವೂ ಮೂಡಿತು. ತತ್ಕಾಲದಲ್ಲಿ ಅವನಿಗೆ ತನ್ನ ಪರಿಸ್ಥಿತಿಯೆಲ್ಲ ಮರೆತು ಹೋಯಿತು.

ತಾನೂ ಒಂದು ಅಂಕದ ಕೋಳಿಯನ್ನು ಕೊಂಡುಕೊಂಡು, ರಂಗಕ್ಕಿಳಿದು, ಕಡೆಯಪಕ್ಷ ಒಂದು ಕೋಳಿಯನ್ನಾದರೂ ಗೆಲ್ಲಬೇಕೆಂದು ಮನಸ್ಸು ಪೀಡಿಸತೊಡಗಿತು. ಜೇಬಿನೊಳಗಿದ್ದ ಐವತ್ತು ರೂಪಾಯಿಗಳ ನೋಟಿನ ಕಟ್ಟನ್ನು ಮುಟ್ಟಿ ನೋಡಿಕೊಂಡನು. ಅವನ ಒಳಗಣ್ಣಿಗೆ ಹೂವಯ್ಯನ ಚಿತ್ರ ಕಾಣಿಸಿಕೊಂಡಿತು. ಸ್ವಾಮಿಗೆ, ತನ್ನನ್ನು ಕಾಡುತನದಿಂದ ಈ ನಾಗರಿಕಸ್ಥಿತಿಗೆ ತಂದು ಪೊರೆದ ಸ್ವಾಮಿಗೆ, ಯಾರಿಗೂ ಕೇಡೆಣಿಸದೆ ಎಲ್ಲರನ್ನೂ ಉದ್ಧಾರಮಾಡಬೇಕೆಂದು ಯತ್ನಿಸುತ್ತಿರುವ ಸ್ವಾಮಿಗೆ, ಕೀಳುಜಾತಿಯ ಬಡಬಗ್ಗರ ಮುರುಕಲು ಹರಕಲು ಗುಡಿಸಲುಗಳಿಗೆ ಔಷಧಿ ಪಥ್ಯಗಳನ್ನು ಕೊಂಡೊಯ್ದು ನೀಡಿ, ಕಾಪಾಡಿ, ದೇವರಂತಿರುವ ಸ್ವಾಮಿಗೆ ದ್ರೋಹವೆಸಗಿದಂತಾಗುತ್ತದಲ್ಲವೆ? ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿಯಿತು. ಆದರೆ ಅದಕ್ಕೆ ತಕ್ಕ ಸಮಾಧಾನವೂ ಒಡನೆಯೆ ಸುಳಿಯತೊಡಗಿ, ಜಯಶೀಲವಾಯಿತು.

“ಏನು ಒಂದೆರಡು ರೂಪಾಯಿ ಖರ್ಚಾಗುತ್ತದೆ ಒಂದು ಅಂಕದ ಹುಂಜಕ್ಕೆ! ಅದರ ಜೊತೆಗೆ ಮತ್ತೊಂದು ಹುಂಜವನ್ನೂ ಗೆದ್ದುಕೊಂಡು ಹೋಗಿ ಕೊಟ್ಟರೆ, ಎರಡು ರೂಪಾಯಿಗೆ ನಾಲ್ಕು ರೂಪಾಯಿ ಕೊಟ್ಟಹಾಗಾಗುತ್ತದೆ…… ಸ್ವಲ್ಪ ಗದ್ದಲಮಾಡಿ ಬೈಯ್ತಾರೆ! ಬೈದರೆ ಬೈದರು; ಒಡೆಯರಷ್ಟೆ!…. ನಾನೇನು ಮೇಲುಜೂಜು ಕಟ್ಟುವುದಕ್ಕಾಗಲಿ, ಕಳ್ಳು ಕುಡಿಯುವುದಕ್ಕಾಗಲಿ, ಇಸ್ಪೀಟು ಜುಗಾರಿಗಾಗಲಿ ಹೋಗುವುದಿಲ್ಲ! ಒಂದು ವೇಳೆ ಎರಡು ರೂಪಾಯಿ ಕೊಟ್ಟೇಬಿಡಬೇಕು ಎಂದರೆ, ನನ್ನ ಸಂಬಳದಲ್ಲಿ ಮುರಿಹಾಕಿಕೊಳ್ಳಿ ಎಂದು ಹೇಳಿದರಾಯಿತು.

ಈ ಆಲೋಚನೆಗಳೂ ಭಯಗಳೂ ಸಮಾಧಾನಗಳೂ ಕ್ಷಣ ಮಾತ್ರದಲ್ಲಿ ಸೋಮನ ಮೆದುಳಿನಲ್ಲಿ ಸಂಚರಸಿದ್ದುವು.

ಸೋಮ ನೆಲದ ಮೇಲೆ ಬಿದ್ದಿದ್ದ ಬಿಳಿಯಹುಂಜದ ಮೇಲಿದ್ದ ತನ್ನ ದೃಷ್ಟಿಯನ್ನು ಮೇಲಕ್ಕೆ ತಿರುಗಿಸಿ ಕುದುಕನ ಕೈಯಲ್ಲಿ ಪ್ರಾಣಬಿಟ್ಟಿದ್ದ ಹುಂಜವನ್ನು ನೋಡಿತ್ತ, “ಪೆಟ್ಟು ಎಲ್ಲಿಗೆ ಬಿದ್ದಿತ್ತೊ?” ಎಂದು ಮತ್ತೂ ಸಮೀಪಿಸಿದನು.

ಮೆಳ್ಳೆಗಣ್ಣನು ಸೋಮನನ್ನು ನೋಡದೆ, ತನ್ನ ಕೆಂಪುಹುಂಜವನ್ನು ಬಿಳಿಯ ಹುಂಜದ ಪಕ್ಕದಲ್ಲಿ ಬೀಸಾಡಿ, ಕರಿಯ ಕಂಬಳಿಯಮೇಲೆ ಕುಳಿತು ಎಲೆಯಡಕೆ ಹಾಕಿಕೊಳ್ಳತೊಡಗಿದನು.

ಅಷ್ಟರಲ್ಲಿ ಸ್ವಲ್ಪದೂರದಲ್ಲಿದ್ದ ಒಂದು ಅಂಕಸ್ಥಾನದಿಂದ ಅನೇಕ ಜನರ ಕೂಗಾಟದ ಸದ್ದೂ ಹೊಡಿದಾಟದ ಸದ್ದೂ ಅಲ್ಲಿ ಸಾಮಾನ್ಯವಾಗಿದ್ದ ಸದ್ದು ಗದ್ದಲದ ಪ್ರಸ್ಥಭೂಮಿಯಲ್ಲಿ ಉತ್ತುಂಗ ಶಿಖರವಾಗೆದ್ದಿತು. ಸೋಮ ನೋಡಿತ್ತಿದ್ದ ಹಾಗೆ ಇತರ ಅಂಕಸ್ಥಾನಗಳಿಂದಲೂ ಜನರು ಆ ಎಡೆಗೆ ಓಡುತ್ತಿರಲು, ತಾನೂ ಅಲ್ಲಿಗೆ ಓಡಿದನು.

ಪ್ರೇಕ್ಷಕರಲ್ಲಿ ಮೇಲುಜೂಜು ಕಟ್ಟಿದ್ದ ಇಬ್ಬರಿಗೆ ಬಿಸಿಬಿಸಿ ಮಾತಾಗಿ ಕೈಕೈಯಾಗಲಾರಂಭವಾಗಿತ್ತು. ಕಾರಣವೇನೆಂದರೆ, ಜೂಜಿನಲ್ಲಿ ಸೋತವನ ಬಳಿ ಗೆದ್ದವನಿಗೆ ಕೊಡಲು ದುಡ್ಡಿರಲಿಲ್ಲವಂತೆ. ಗೆದ್ದವನು ಹಣವನ್ನೋಡನೆ ಕೊಡಬೇಕೆಂದೂ, ಸೋತವನು ಮತ್ತೊಂದು ಜೊತೆ ಅಂಕವಾಡುವಾಗ ಜೂಜುಕಟ್ಟಿ, ಗೆದ್ದು, ಸಾಲ ತೀರಿಸುತ್ತೇನೆಂದೂ, ಜಗಳವಾಡಿದರು. ಇಬ್ಬರೂ ಕುಡಿದಿದ್ದರು. ಸೋತವನಿಗೆ ರೇಗಿ (ಗೆದ್ದವನು ಮಲೆತು ಬಳಿ ಬರಲು ಎಂದು ಅವನ ಹೇಳಿಕೆ) ಎದೆಗೆ ಕೈಹಾಕಿ ದಬ್ಬಿದನಂತೆ. ಗೆದ್ದವನಿಗೆ ಸಿಟ್ಟೇರಿ ಸೋತವನ ಮೂಗಿಗೆ ಗುದ್ದಲು, ನೆತ್ತರು ಸುರಿಯತೊಡಗಿತು! ಸುರಿಯುತ್ತಿದ್ದ ನೆತ್ತರನ್ನು ಕೊಳಕು ಬಟ್ಟೆಯೂ ಕೆಂಪೇರುವಂತೆ ಒರಸಿಕೊಳ್ಳುತ್ತಾ  ಸೋತವನು ಜೇಬಿನಿಂದ ಚೂರಿಯೊಂದನ್ನು ಹೊರಗೆಳೆಯಲು, ಹಾಹಾಕರವೆದ್ದು ಜನರು ಸುತ್ತಲೂ ಮುತ್ತಿ, ಅವನ ಕೈಯಿಂದ ಚೂರಿಯನ್ನು ಕಸಿದುಕೊಂಡು, ಜಗಳಗಂಟಿಗಳಿಬ್ಬರನ್ನೂ ಬೇರೆಬೇರೆ ಮಾಡಿದರು.

ಜನರು ಜಗಳದ ವಿಚಾರವಾಗಿ, ಪರವಾಗಿ, ಪ್ರತಿಯಾಗಿ, ನಾನಾಪರಿಯಾಗಿ ಮಾತಾಡಿಕೊಳ್ಳುತ್ತಾ ಬೇರೆ ಬೇರೆ ಅಂಕಸ್ಥಾನಗಳಿಗೆ ಚೆದರುತ್ತಿದ್ದಾಗಲೆ ಸೋಮನೂ ಬೆಲೆಗೆ ದೊರಕುವ ಅಂಕದ ಹುಂಜವನ್ನು ಹುಡುಕತೊಡಗಿದನು. ಎಲ್ಲಿ ಹುಡುಕಿದರೂ ಯಾರನ್ನು ಕೇಳಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಕಳ್ಳಂಗಡಿಯವನಲ್ಲಿಗೆ ಹೋಗಿ ಕೇಳಿದನು.

ಅವನ ಪ್ರಶ್ನೆಗೆ ತಕ್ಕ ಉತ್ತರ ಕೊಡುವ ಬದಲು “ಏನು ಸೋಮಯ್ಯ ಸೆಟ್ಟರೆ, ಈಗೀಗ ನಮ್ಮನ್ನು ಮರೆತೇಬಿಟ್ಟಿರಿ!” ಎಂದು ಪ್ರಾರಂಭಿಸಿದನು.

“ಮಾರಾಯಾ, ಒಂದು ಅಂಕದ ಹುಂಜ ಹುಡುಕೀ ಹುಡುಕೀ ಸಾಕಾಯ್ತು…… ನಿನ್ನ ಹತ್ತಿರ ಇಲ್ಲೇನು? ದುಡ್ಡು ಕೊಡುತ್ತೀನಿ! ನಗದು!” ಎಂದು ಸೋಮನ ಮಾತಿಗೆ ಕಳ್ಳಂಗಡಿಯವನು ಒಂದು ಕರಟದಲ್ಲಿ ಒಳ್ಳೆಯ ನೊರೆಗಳ್ಳನ್ನು ತುಂಬಿ ಪ್ರತ್ಯುತ್ತರವಾಗಿ ನೀಡಿದನು.

ಸೋಮ ಬೇಡವೆಂದು ತಲೆಯಾಡಿಸಿ, ತಾನು ಕಳ್ಳುಕುಡಿಯುವುದನ್ನು ಬಿಟ್ಟಿದ್ದೇನೆಂದು ತಿಳಿಸಿದನು.

ಅಂಗಡಿಯವನು “ಪರ್ವಾ ಇಲ್ಲ. ಇದೊಂದು ಸಾರಿ ಕುಡಿದರೇನಂತೆ? ಅದರಲ್ಲಿಯೂ ಇದೇನು ನಿಶಾ ಬರುವ ಕಳ್ಳಲ್ಲ. ಈಗತಾನೇ ಇಳಿಸಿದ್ದು. ಸೀಯಾಗದೆ!” ಎಂದು ಮೊದಲಾಗಿ ಹೇಳುತ್ತ, ಕಳ್ಳು ತುಂಬಿದ್ದ ಕರಟವನ್ನು ಹಿಡಿದಿದ್ದ ತನ್ನ ಕೈಯ್ಯನ್ನು ಇನ್ನೂ ಮುಂದಕ್ಕೆ ಸೋಮನ ಮುಖಕ್ಕೆ ಸಮೀಪವಾಗಿ ಚಾಚಿದನು. ಮೂಗಿಗೆ ಕಳ್ಳಿನ ಕಂಪು ನುಗ್ಗಿತು. ಸೋಮ ಕಳ್ಳಂಗಡಿಯವನ ಸತ್ಕಾರದ ಬಲಾತ್ಕಾರಕ್ಕೂ ಕಳ್ಳಿನ ವಾಸನೆಯ ಸಮ್ಮೋಹಕ್ಕೂ ಅಲ್ಲಿದ್ದ ಇನ್ನಿಬ್ಬರು ಮೂವರ ಪ್ರೇರಣೆ ಪ್ರೋತ್ಸಾಹಗಳಿಗೂ ಒಳಗಾಗಿ ಹೂವಯ್ಯನ ಸಂಗ ಸಹವಾಸದ ಮಹಿಮೆಯಿಂದ ಬಹುದಿನಗಳಿಂದಲೂ ತ್ಯಜಿಸಿಬಿಟ್ಟಿದ್ದ ಮಾದಕ ಪದಾರ್ಥವನ್ನು ಮತ್ತೆ ಸೇವಿಸಿದನು. ಕಳ್ಳು ಬಹಳ ರುಚಿಯಾಗಿತ್ತು.

ಕಳ್ಳಂಗಡಿಯವನು ಒಬ್ಬ ಆಳನ್ನು ತನ್ನ ಮನೆಗೆ ಕಳುಹಿಸಿ, ಅಂಕದ ಕೋಳಿಯೆಂದು ಒಂದು ಹುಂಜವನ್ನು ತರಿಸಿದನು. ಅದನ್ನು ಕಾಲಿಗೆ ಹಗ್ಗ ಹಾಕಿ ಕಟ್ಟಿ ಸಾಕಿದ್ದದರೆಂಬುದಕ್ಕೆ ಬೇಕಾದಷ್ಟು ಗುರುತುಸಾಕ್ಷಿಯಿತ್ತು. ಅದರ ಕೆಂಪು ಚೊಟ್ಟಿಯನ್ನು ಬುಡಕ್ಕೆ ಸಮವಾಗಿ ಕೊಯ್ದುಹಾಕಿದ್ದರು. ಏಕೆ ಎಂದು ಕೇಳಲು, ’ಅದರಮೇಲೆ ಒಂದು ದೆಯ್ಯ ಬರುತ್ತಿತ್ತು. ಅದನ್ನು ಓಡಿಸಲು ಹಾಗೆ ಮಾಡಿದೆ’ ಎಂದು ಅಂಗಡಿಯವನು ವಿವರಿಸಿದನು. ಹುಂಜದ ಪುಕ್ಕಗಳೆಲ್ಲ ಉದುರಿ ಹೋಗಿದ್ದುವು. ಹುಂಜವೇನೋ ನೋಡುವುದಕ್ಕೆ ದಪ್ಪವಾಗಿತ್ತು. ಆದರೆ ಅದು ಬೊಜ್ಜಲ್ಲದೆ ನಿಜವಾದ ಪುಷ್ಟಿಯಾಗಿರಲಿಲ್ಲ.

ಸೋಮನಿಗೆ ಹುಂಜದ ಗುರುತು ಸಿಕ್ಕಲಿಲ್ಲ. ಸಿಕ್ಕಿದ್ದರೆ ತಾನು ಕೆಲವು ತಿಂಗಳುಗಳ ಹಿಂದೆ ಹಳೆಪೈಕದ ತಿಮ್ಮನ ಒಡ್ಡಿಯಿಂದ ಕದ್ದುಕೊಂಡು ಹೋಗಿ ಕೊಟ್ಟಿದ್ದ ಹುಂಜವೇ ಅದು ಎಂಬುದು ಗೊತ್ತಾಗುತ್ತಿತ್ತು! ಕತ್ತಲೆಯಲ್ಲಿ ಕದ್ದುಕೊಂಡು ಹೋಗಿ ಮುಚ್ಚುಮರೆ ಮಾಡಿ ಗಾಬರಿಯಿಂದ ಕೊಟ್ಟು ಬಂದಿದ್ದುದರಿಂದ ಆಗ ಅವನು ಆ ಹುಂಜವನ್ನು ಚೆನ್ನಾಗಿ ನೋಡಿಯೂ ಇರಲಿಲ್ಲ. ನೋಡಿದ್ದರೂ ಚೊಟ್ಟಿ ಪುಕ್ಕಗಳನ್ನು ಕತ್ತರಿಸಿ, ಯಾರೂ ಕಾಣದಂತೆ ಕತ್ತಲೆಯಲ್ಲಿ ಕಟ್ಟಿ ಸಾಕಿದ್ದರಿಂದ ಅಸಹ್ಯವಾಗಿ ಬೊಜ್ಜು ಬೆಳೆದಿದ್ದ ಅದನ್ನು ಈಗ ಗುರುತಿಸುವುದೂ ಸೋಮನಿಂದ ಸಾಧ್ಯವಾಗುತ್ತಿರಲಿಲ್ಲ.

ಅಂತೂ ಕೊಯ್ದುತಿನ್ನುವುದಕ್ಕೆ ಮಾತ್ರ ಲಾಯಖ್ಖಾಗಿದ್ದ ’ಬೊಜ್ಜಣ್ಣ’ನನ್ನು ’ಕಟ್ಟಿ ಸಾಕಿದ ಅಂಕದ ಹುಂಜ’ವೆಂದು ಸುಳ್ಳುಹೇಳಿ ಅಂಗಡಿಯವನು ಸೋಮನಿಗೆ ಮೂರು ರೂಪಾಯಿಗೆ ಮಾರಿದನು. ಅವನು ಪ್ರಾರಂಭದಲ್ಲಿ ಕೊಟ್ಟಿದ್ದ ಕಳ್ಳೂ ಸೋಮನ ತಲೆಯಲ್ಲಿ ಅಂಗಡಿಯವನ ಪರವಾಗಿ ಕೆಲಸಮಾಡದೆ ಇರಲಿಲ್ಲ.

ಸೋಮ ಒಂದು ಪೊದೆಯ ಹಿಂದೆ ಹೋಗಿ, ಒಂದಕ್ಕೆ ಕೂರುವವನಂತೆ ನಟಿಸಿ, ನೋಟಿನ ಕಟ್ಟನ್ನು ಬಿಚ್ಚಿ, ಐದು ರೂಪಾಯಿನ ಒಂದು ನೋಟನ್ನು ತೆಗೆದುಕೊಂಡುಬಂದು ಕಳ್ಳಂಗಡಿಯವನ ಬಳಿ “ಚಿಲ್ರೆ ಇದೆಯೇನು ಲೋಟಿಗೆ!” ಎಂದು ಕೇಳಿದನು.

ಕಳ್ಳಂಗಡಿಯವನು ಅರ್ಥಪೂರ್ಣವಾದ ಆಶ್ಚರ್ಯದಿಂದ ಸೋಮನ ಮುಖವನ್ನೇ ನೋಡುತ್ತ ’ಲೋಟಿಗೆ’ ಚಿಲ್ಲರೆ ಕೊಟ್ಟು, ಮೂರು ರೂಪಾಯಿಗಳನ್ನು ಬಕ್ಕಣಕ್ಕೆ ಇಳಿಬಿಟ್ಟನು.

ಸೋಮ ಕಳ್ಳಂಗಡಿಯವನು ಕೊಟ್ಟ ಮತ್ತಷ್ಟು ಕಳ್ಳನ್ನೂ ಬಿಟ್ಟಿಯೆಂದು ಭಾವಿಸಿ ಕುಡಿದು, ತನ್ನ ಬೊಜ್ಜಿನ ಹುಂಜವನ್ನು ಬಗಲಲ್ಲಿ ಇರುಕಿಕೊಂಡು ಹೆಮ್ಮೆಯ ಧೋರಣೆಯಿಂದ ರಂಗಕ್ಕಿಳಿದನು. ಕೋಳಿಯಂಕದ ಪಟ್ಟೆ ಮೊದಲಿಗಿಂತಲೂ ಹೆಚ್ಚಿನ ಉತ್ಸಾಹದಿಂದಲೂ ವೀರರಸದಿಂದಲೂ ಕಳಕಳಧ್ವನಿಯಿಂದಲೂ ಕೂಡಿ, ಮೊದಲಿಗಿಂತಲೂ ಹೆಚ್ಚು ಜೀವಪೂರ್ಣವಾಗಿ ಮನೋಹರವಾಗಿ ಕಂಡು ಬಂದಿತು.ಸೋಮ ಆಗಲಿಬಿಲಿಯಲ್ಲಿ ತನ್ನಷ್ಟಕ್ಕೆ ತಾನೇ “ಮನೇ ಸುತ್ತ ಪಾಗಾರುಂಡು! ಅಂಕಕ್ಕೆ ಕೋಳಿ ಉಂಡು! ಬೆಳ್ಳಿಕಟ್ಟಿನ ಬೆತ್ತ ಉಂಡು!” ಎಂದು ಮೊದಲಾಗಿ ಹಾಡುತ್ತಲೂ, ನಡುನಡುವೆ ಸಿಳ್ಳು ಹಾಕುತ್ತಲೂ, ಸಂದಣಿಯಲ್ಲಿ ಮುಂದೆ ನುಗ್ಗಿದನು.

ಕೋಳಿ ಅಂಕದ ಅನುಭವಶಾಲಿಗಳು ಸೋಮನ ಹುಂಜವನ್ನು ನೋಡಿ ನಗತೊಡಗಿದರು. ಕೆಲವರು ” ಇದೆಲ್ಲಿಂದ ತಂದೆಯೋ ಈ ಒಡ್ಡಿ ಹುಂಜನ್ನ?” ಎಂದು ಗೇಲಿಮಾಡಿದರು. ಕೆಲವರು ಆ ಹುಂಜಕ್ಕೆ ’ಕುಂಭಕರ್ಣ’ ಎಂದು ಬಿರುದುಕೊಟ್ಟರು. ಸೋಮ ಮಾತ್ರ ಯಾರ ಹಾಸ್ಯಕ್ಕೂ ಗೇಲಿಗೂ ಜಗ್ಗದೆ, ತನ್ನ ಹುಂಜಕ್ಕೆ ಜೊತೆ ಕಟ್ಟಬೇಕೆಂದು ಮುತ್ತಳ್ಳಿ ಸೇರೆಗಾರರ ’ಬಗಲಿ’ಯನ್ನು ಕೇಳಿದನು. ಆ ’ಬಗಲಿ’ ಬೊಜ್ಜು ಬಂದಿದ್ದ ಸೋಮನ ಅಂಕದ ಹುಂಜವನ್ನು ನೋಡಿ, ಒಳಗೆ ಉಕ್ಕಿಬರುತ್ತಿದ್ದ ನಗುವನ್ನು ಬೇರೆಯ ನೆವಗಳಿಂದ ಹೊರಹೊಮ್ಮಿಸುತ್ತಾ, ಹಳೆಪೈಕದ ತಿಮ್ಮನನ್ನು ಕರೆದು ಅವನ ಕೋಳಿಗೆ ಜೊತೆ ಕಟ್ಟಿದನು. ಹಳೆಪೈಕದ ತಿಮ್ಮನ ಕೋಳಿ ನೋಡುವುದಕ್ಕೆ ಬಹಳ ಸಣ್ಣದಾಗಿತ್ತು. ಸೋಮನ ಕೋಳಿಯ ತೂಕದ ಅರ್ಧಪಾಲೂ ಇರಲಿಲ್ಲ. ಅದನ್ನು ಕಂಡು ಸೋಮನಿಗೆ ಆನಂದವಾಯಿತು. ತನ್ನ ಮಹಾಕಾಯದ ಕುಕ್ಕುಟವೀರ ತಿಮ್ಮನ ಬಡಕಲು ಹುಂಜವನ್ನು ನಿಮಿಷಾರ್ಧದಲ್ಲಿ ನೆಲಕ್ಕುರುಳಿಸಿಬಿಡುತ್ತದೆ ಎಂದು; ತಿಮ್ಮನ ಹುಂಜ ತನಗೆ ದಕ್ಕುತ್ತದೆ ಎಂದು; ರಾತ್ರಿ ಕೋಳಿಯ ಪಲ್ಯ ಮಜವಾಗಿರುತ್ತದೆ ಎಂದು!

ಸರಿ! ಸೋಮ ಒಂದು ಕೋಳಿಕತ್ತಿಯನ್ನು ಕೊಂಡುತಂದು ತನ್ನ ಹುಂಜದ ಕಾಲಿಗೆ ಸಂಭ್ರಮದಿಂದ ಕಟ್ಟಿದನು. ಬಿಗಿದು ಕಟ್ಟಿದ ಮೇಲೆ ಹೆಚ್ಚು ಹೊತ್ತಾದರೆ ಕಾಲು ಮರವಟ್ಟುತ್ತದೆ ಎಂದು ಗಟ್ಟಿಯಾಗಿ ಬಾಯಿಮಾಡುತ್ತ, ತಿಮ್ಮನಿಗೆ ಚುರುಕು ಮಾಡುವಂತೆ ಬೆಸಸಿದನು. ತಿಮ್ಮನ ಹುಂಜ ಸಿದ್ಧವಾಯಿತು.

ಸೋಮ ಕಾಳಗಕ್ಕೆ ಮೊದಲು ತನ್ನ ಕೋಳಿಯನ್ನು ಪರೀಕ್ಷೆಗಾಗಿ ನೆಲದ ಮೇಲೆ ಬಿಟ್ಟೊಡನೆ ನೆರೆದಿದ್ದವರೆಲ್ಲರೂ ಗೊಳ್ಳೆಂದು ನಕ್ಕರು. ಹುಂಜ ಚೊಟ್ಟಿಯಿಲ್ಲದೆ ಪುಕ್ಕವಿಲ್ಲದೆ ಬೊಜ್ಜು ಬೆಳೆದು ನೋಟಕ್ಕೆ ವಿಕಾರವಾಗಿದ್ದುದಲ್ಲದೆ, ಕಾಲಿಗೆ ಎಂದೆಂದೂ ಕತ್ತಿಕಟ್ಟಿಸಿಕೊಂಡು ಅಭ್ಯಾಸವಿಲ್ಲದಿದ್ದ ಆ ಸ್ಥೂಲಪ್ರಾಣಿಗೆ ಸರಿಯಾಗಿ ಅಡಿಯಿಡಲಸಾಧ್ಯವಾಗಿ, ಕುಂಟುತ್ತ, ಅತ್ತಿತ್ತ ಒಲೆಯತೊಡಗಿತು.

ಎರಡು ಹುಂಜಗಳನ್ನೂ ಅಂಕಕ್ಕೆ ಬಿಟ್ಟರು! ಹುಟ್ಟಿದಂದಿನಿಂದ ಅಂಕವೇನೆಂಬುದನ್ನು ಕನಸಿನಲ್ಲಿಯೂ ಅರಿಯದಿದ್ದ ಸೋಮನ ಹುಂಜ (ಅದಕ್ಕೆ “ಕುಂಭಕರ್ಣ” ಎಂಬ ಹೆಸರು ಬಂದಾಗಿತ್ತು!) ಮೇವು ಹೆರಕಲು ತೊಡಗಿತು! ನೆರೆದವರು ಗಟ್ಟಿಯಾಗಿ ನಿಂದನೆಯ ನುಡಿಗಳನ್ನು ಆಡುತ್ತಾ ನಗುತ್ತಿದ್ದುದನ್ನು ಕಂಡು ಸೋಮನಿಗೆ ಬಲುರೇಗಿತು! ತನ್ನ ಹುಂಜದ ಪರವಾಗಿ ಯಾರೂ ಮೇಲುಜೂಜು ಕಟ್ಟದಿದ್ದುದನ್ನು ನೋಡಿ, ಸಿಟ್ಟಿನಿಂದ ತಾನೇ ತನ್ನ ಹುಂಜದ ಪರವಾಗಿ “ಎಂಟಾಣೆ! ಮೇಲುಜೂಜು!” ಎಂದು ಕೂಗಿದನು.

ಸೇರೆಗಾರ ರಂಗಪ್ಪಸೆಟ್ಟರು ತಿಮ್ಮನ ಹುಂಜದ ಪರವಾಗಿ “ಹನ್ನೆರಡಾಣೆ” ಎಂದು ಪ್ರತಿಕೂಗು ಕೂಗಿದರು.

ಸೋಮ”ಒಂದು ರೂಪಾಯಿ!” ಎಂದು ಕೂಗಿದನು.

ಸೇರೆಗಾರೂ “ಸೈ” ಎಂದರು.

ಸೋಮ ಮತ್ತೆ ತನ್ನ ಹುಂಜವನ್ನು ಹುರಿದುಂಬಿಸಿ ಅಂಕಕ್ಕೆ ಬಿಟ್ಟನು. ಆ ಹುಂಜಕ್ಕೆ ಬಹುಕಾಲದಿಂದ ಬಲಾತ್ಕಾರದ ಬ್ರಹ್ಮಚರ್ಯವಾಗಿದ್ದುದರಿಂದಲೊ ಏನೊ, ಎದುರು ಹುಂಜುವನ್ನು ಹೇಂಟೆಯೆಂದು ತಿಳಿದು ಕೊಕ್ ಕೊಕ್ ಕೊಕ್ ಎಂದು ಲೊಟಗುಟ್ಟಿ, ತನ್ನೊಂದು ರೆಕ್ಕೆಯನ್ನು ಸ್ವಲ್ಪ ಎತ್ತಿ, ಪ್ರಣಯಚೇಷ್ಟೆಗೈಯುತ್ತ ಮುಂಬರಿಯಿತು. ನೆರೆದವರು ಪರ್ವತಾರಣ್ಯಗಳೆಲ್ಲ ಪ್ರತಿಧ್ವನಿಗೈಯುವಂತೆ ಕೇಕೆಹಾಕಿ ಚಪ್ಪಾಳೆ ತಟ್ಟಿ, ಕುಣಿಕುಣಿದು ನಗತೊಡಗಿದರು. ಕೆಲವರು ’ಅನಿಷ್ಟಾ! ಅನಿಷ್ಟಾ!’ ಎಂದು ಬೈದರು. ಆ ಅಟ್ಟಹಾಸವನ್ನು ಕೇಳಿ ಇತರ ಅಂಕಸ್ಥಾನಗಳಲ್ಲಿದ್ದ ಜನರೂ ತಂಡ ತಂಡ ತಂಡವಾಗಿ ಓಡಿ ಬಂದು ಕಿಕ್ಕಿರಿದು ನೆರೆದರು!

ಕುಂಭಕರ್ಣ ಪ್ರಣಯಚೇಷ್ಟೆ ಮಾಡುತ್ತ ಮುಂಬರಿಯಿತು. ಸೋಮ ಅದನ್ನೂ ಒಂದು ಸಮರವಿಧಾನವೆಂದು ಭಾವಿಸುತ್ತ ನಾಚದೆ ನಿಂತನು. ತಿಮ್ಮನ ಹುಂಜ ಕುಂಭಕರ್ಣನ ಪ್ರಣಯಭಿಕ್ಷಾಪಾತ್ರೆಗೆ ಬಿಡಿಕಾಸನ್ನೂ ಹಾಕದೆ ಒಂದು ಸಾರಿ ಝಾಢಿಸಿ ಒದೆಯಿತು. ಕುಂಭಕರ್ಣ ಜನರ ನಗೆಯ ಕೋಲಾಹಲದ ಮಧ್ಯೆ ಎರಡು ಉರಳು ಉರುಳಿಬಿದ್ದಿತು. ರೆಕ್ಕೆಯ ಬಳಿ ಅರ್ಧ ಅಂಗುಲ ಗಾಯವಾಗಿ ನೆತ್ತರು ಸೋರಹತ್ತಿತು.

ಸೋಮ ಗಾಯಕ್ಕೆ ಮದ್ದು ಹಚ್ಚಿ ಮತ್ತೆ ಅಂಕಕ್ಕೆ ಬಿಟ್ಟನು. ಈ ಸಾರಿ ಕುಂಭಕರ್ಣ ಕಾಳೆಗಕೊಟ್ಟಿತು.  ಆದರೆ ಮೂರನೆಯ ಸಾರಿ ಸಂಧಿಸುವುದರೊಳಗೆ ತಿಮ್ಮನ ಹುಂಜದ ಕತ್ತಿ ಎದೆಗೆ ಹೊಕ್ಕು ಬಾಯಲ್ಲಿ ಕೆನ್ನೊರೆ ಕಾರುತ್ತ ಪಕ್ಕಕ್ಕೊರಗಿತು!

ಸೋಮನಿಗೆ ಹತಾಶೆಯಿಂದ ರೋಷವೇರಿತು. ನೆಲಕ್ಕುರುಳಿ ಒದ್ದಾಡಿಕೊಳ್ಳುತ್ತಿದ್ದ ಹುಂಜವನ್ನು ಎತ್ತಿ ನೀರುಕುಡಿಸಿ, ಗಾಯಗಳಿಗೆ ಮದ್ದು ಹಚ್ಚಿ, ಹುಮ್ಮಸ್ಸು ಬರಬೇಕೆಂದು ಸ್ವಲ್ಪ ಸಾರಾಯಿಯನ್ನೂ ಕುಡಿಸಿದನು. ಆದರೆ ಅಂಕಕ್ಕೆಂದು ಪುನಃ  ನೆಲಕ್ಕೆ ಬಿಡುತ್ತಿದ್ದ ಹಾಗೆಯೆ ಹುಂಜದ ಗೋಣು ಮುರಿದು ಜೋಲಿತು. ಅಂಕದ ಕಾನೂನಿನಂತೆ ಹಳೆಪೈಕದ ತಿಮ್ಮ ಆ ಹುಂಜವನ್ನು ವಶಪಡಿಸಿಕೊಂಡನು. ಸೇರೆಗಾರರೂ ಮೇಲುಜೂಜಿನ ಒಂದು ರೂಪಾಯಿಯನ್ನು ಇಸುಕೊಂಡರು.
ಸೋಮ ಸಪ್ಪೆಮೋರೆ ಹಾಕಿಕೊಂಡು ಕೆಳಕಾನೂರಿನ ಕಡೆಗೆ ತಿರುಗಲೆಂದು ಹವಣಿಸುತ್ತಿದ್ದನು. ಗುರುತಿನವರಲ್ಲಿ ಕೆಲವರು, “ಇನ್ನೇನು ಕರ್ಣಾರ್ಜುನರ ಕಾಳಗವೂ ಪ್ರಾರಂಭವಾಗುತ್ತದೆ. ನೋಡಿಕೊಂಡು ಹೋದರಾಯಿತು” ಎಂದರು. ಅಂತಹ ಅದ್ಭುತ ದೃಶ್ಯವನ್ನು ನೋಡದಿರಬಾರದು ಎಂದು ಸೋಮ ಅವರೊಡನೆ ಕರ್ಣಾರ್ಜುನರ  ಅಂಕಸ್ಥಾನಕ್ಕೆ ನಡೆದನು.

ಅನೇಕ ಅಂಕಗಳಲ್ಲಿ ಅನೇಕ ಹುಂಜಗಳನ್ನು ಗೆದ್ದು ’ಕರ್ಣ’ ಮತ್ತು ’ಅರ್ಜುನ’ ಎಂಬ ಬಿರುದಾಂಕಿತಗಳನ್ನು ಪಡೆದಿದ್ದ ಆ ಹುಂಜಗಳ ಆ ಅಂಕ ಅತ್ಯದ್ಭುತವಾಗಿ ರುದ್ರ ರಮಣೀಯವಾಗಿತ್ತು! ಮೇಲುಜೂಜೆ ಹತ್ತಿಪ್ಪತ್ತು ರೂಪಾಯಿಗಳವರೆಗೂ ಏರಿತ್ತು. ನೆರೆದ ಜನರೆಲ್ಲರೂ ರೋಮಾಂಚಿತರಾಗಿ ನೋಡುತ್ತಿದ್ದರು. ಒಮ್ಮೆ ಅರ್ಜುನನ ಹೊಟ್ಟೆ ಸೀಳಿ, ಕರುಳು ಕಾಣುವಂತಾಗಲು, ಅದನ್ನು ಹೊಲಿದು, ಮದ್ದು ಹಾಕಿ, ನೀರು ಕುಡಿಸಿ ಹುಷಾರುಮಾಡಿ ಮತ್ತೆ ಅಂಕಕ್ಕೆ ಬಿಟ್ಟಿದ್ದರು.

ಸೋಮ ತನಗೆ ಒದಗಿದ್ದ ಮತ್ತು ಒದಗಲಿರುವ ಕಷ್ಟಗಳನ್ನೂ ಅವಮಾನಗಳನ್ನೂ ಮರೆತು, ತತ್ಪರನಾಗಿ ನೋಡುತ್ತಾ ಜನಸಂದಣಿಯಲ್ಲಿ ನಿಂತಿದ್ದನು. ಯಾರೋ ತನ್ನ ಹೆಗಲಮೇಲೆ ಕೈಕಾಕಿದಂತಾಯಿತು. ತಿರುಗಿ ನೋಡಿದನು. ಯಾರೂ ಇರಲಿಲ್ಲ. ಮತ್ತೊಂದುಸಾರಿ ಅಂಗಿಯನ್ನು ಎಳೆದಂತಾಯಿತು. ಆಗಲೂ ತಿರುಗಿನೋಡಿದಾಗ ಯಾರೂ ಇರಲಿಲ್ಲ. ಪಕ್ಕದಲ್ಲಿದ್ದ ಕಳ್ಳಂಗಡಿಯವನ ಭಾವಮೈದುನನು ಅಂಕವಾಡುತ್ತಿದ್ದ ಹುಂಜಗಳನ್ನೇ ದೃಷ್ಟಿಸಿ ನೋಡುತ್ತಿದ್ದನು. ಸೋಮನೂ ನೋಡತೊಡಗಿದನು.

ಕಾಳೆಗ ಶಿಖರಕ್ಕೇರಿತ್ತು. ಹಿಂದಿನಿಂದ ಬಂದು ಹಳಿಪೈಕದ ತಿಮ್ಮ ಸೋಮನನ್ನು ಕರೆದನು. ತನ್ನ ಕೋಳಿಯನ್ನು ಅಪಹರಿಸಿದುದಲ್ಲದೆ ಹಂಗಿಸುವುದಕ್ಕೆ ಬಂದಿದ್ದಾನೆ ಎಂದು ಊಹಿಸಿ, ಸೋಮ ಕೋಪದಿಂದ, ತಾನು ಬರುವುದಿಲ್ಲವೆಂದು ತಲೆಯಲ್ಲಾಡಿಸಿದನು. ಆಗಲೆ ಕತ್ತಲಾಗತೊಡಗಿದ್ದುದರಿಂದ ಅವನಿಗೆ ಆ ಮಬ್ಬು ಬೆಳಕಿನಲ,ಲಿ ದೂರದಲ್ಲಿ ನಿಂತು ಕರೆಯುತ್ತೆದ್ದ ತಿಮ್ಮನ ಮುಖದಲ್ಲಿದ್ದ ರೋಷದ ಛಾಯೆ ಕಾಣಿಸಲಿಲ್ಲ.

ತಿಮ್ಮ ಸರಸರನೆ ಹತ್ತಿರ ಬಂದು ಸೋಮನನ್ನು ಬಲಾತ್ಕಾರದಿಂದ ದರದರನೆ ಎಳೆದುಕೊಡು ಹೋದನು. ಸೋಮ ಪ್ರತಿಭಟಿಸುತ್ತಾ ಬೈಯುತ್ತಾ ಅವನೊಡನೆ ಹೋಗಬೇಕಾಯಿತು. ಇಬ್ಬರೂ ಮರದ ಕೆಳಗಿದ್ದ ಕಳ್ಳಂಗಡಿಗೆ ಹೋದರು. ಅಲ್ಲಿ ಕೆಂಪಗೆ ಊರಿಯತೊಡಗಿದ್ದ ಚಿಮಿನಿ ದೀಪಗಳ ಬೆಳಕಿನಲ್ಲಿ ಬಿದ್ದಿದ್ದ ’ಕುಂಭಕರ್ಣ’ನ ಶವವನ್ನು ತೋರುತ್ತಾ ತಿಮ್ಮ “ಇದು ಯಾರದ್ದು ಈ ಕೋಳಿ?” ಎಂದು ಭೀಷಣವಾಗಿ ಕೇಳಿದನು.

ಸೋಮ ತಾನು ಕಳ್ಳಂಗಡಿಯವನಿಂದ ಕ್ರಯಕ್ಕೆ ಕೊಂಡುಕೊಂಡಿದ್ದು ಎಂದು ಹೇಳಿದನು.

“ಅವರಿಗೆ ಯಾರು ತಂದುಕೊಟ್ಟಿದ್ದು?” ಎಂದು ತಿಮ್ಮ ಗರ್ಜಿಸಿದನು.

“ನನ್ನ ಹತ್ತಿರ ಏನು ಕೇಳುತ್ತೀಯಾ? ಬೇಕಾದರೆ ಅವನನ್ನೇ ಕೇಳು!” ಎಂದು ಸೋಮ ಕಳ್ಳಂಗಡಿಯವನ ಕಡೆಗೆ ನೋಡಿದನು.

ಕಳ್ಳಂಗಡಿಯವನು ” ನನ್ನ ಸಾಲಕ್ಕೆ ನೀವೇ ತಂದುಕೊಟ್ಟಿದ್ದಿರಿ!” ಎಂದು ಬಿಟ್ಟನು.

ಕ್ಷಣಮಾತ್ರಕಲ್ಲಿ ನಡೆದಿದ್ದ ಅಚಾತುರ್ಯವೆಲ್ಲ ಸೋಮನ ಮನಸ್ಸಿಗೆ ಹೊಳೆಯಿತು; ತಾನು ಕೆಲತಿಂಗಳ ಹಿಂದೆ ಹಳೆಪೈಕದ ತಿಮ್ಮನ ಒಡ್ಡಿಯಿಂದ ಕದ್ದು ತಂದುಕೊಟ್ಟಿದ್ದ ಹುಂಜವನ್ನೆ, ಚೊಟ್ಟಿ ಪುಕ್ಕಗಳನ್ನು ಕತ್ತರಿಸಿ, ಕಟ್ಟಿಹಾಕಿ ಸಾಕಿ, ಈಗ ತನಗೇ ಮಾರಿಬಿಟ್ಟು, ವಿಷಯವನ್ನು ತಿಮ್ಮನಿಗೆ ಹೇಳಿಬಿಟ್ಟಿದ್ದಾನೆ ಈ ಕಪಟಿ ಕಳ್ಳಂಡಿಯವನು! ಅಯ್ಯೋ, ಮೋಸಹೋದೆ! ಇನ್ನು ಮಾಡುವುದೇನು? ಸುಳ್ಳು ಎಂದು ಸಾಧಿಸುವುದೊಂದೇ ಹಾದಿ!

ಸೋಮ ಕಳ್ಳಂಗಡಿಯವನು ಹೇಳುವುದೆಲ್ಲ ಸುಳ್ಳು ಎಂದು ಸಾಧಿಸತೊಡಗಿದನು.

ಕಳ್ಳಂಗಡಿಯವನೊಂದು ಕಡೆ, ತಿಮ್ಮನೊಂದು ಕಡೆ ಇಬ್ಬರೂ ಜೋರು ಜೋರಾಗಿ ಮಾತಾಡುತ್ತಾ ಮಾತಾಡುತ್ತಾ, ಹತ್ತಿರ ಹತ್ತಿರಕ್ಕೆ ಬಂದು ಸೋಮನ ಮೈಮೇಲೆ ಬಿದ್ದು ಹೊಡೆಯತೊಡಗಿದರು. ಸೋಮ ಗಟ್ಟಿಯಾಗಿ ಒರಲಿದನು.

ಸೀತೆಮನೆ ಸೇರೆಗಾರರು ತಮ್ಮ ಕಡೆಯವರ ಸಹಾಯದಿಂದ ಸೋಮನನ್ನು ಬಿಡಿಸಿದರು. ಅವನ ಅಂಗಿ ಪಂಚೆಗಳೆಲ್ಲ ಹರಿದುಹೋಗಿದ್ದುವು. ತಲೆಯುಡುಗೆ ಎಲ್ಲಿಯೋ ಹಾರಿಹೋಗಿತ್ತು! ಸೋಮ ಬಿಕ್ಕಿ ಬಿಕ್ಕಿ ಅಳುತ್ತ ಬಟ್ಟೆಬರೆಗಳನ್ನು ಸರಿಮಾಡಿಕೊಂಡು, ಕತ್ತಲೆಯಲ್ಲಿ, ಒಂಟಿಯಾಗಿ, ಮನೆಯ ಕಡೆಗೆ ಹೊರಟನು.

ದಾರಿಯಲ್ಲಿ ಹೂವಯ್ಯನ ಪಾದಗಳ ಮೇಲೆ ಬಿದ್ದು ಕ್ಷಮಾಪಣೆ ಕೇಳಿಕೊಳ್ಳಬೇಕೆಂದೂ, ಐವತ್ತು ರೂಪಾಯಿಗಳಲ್ಲಿ ತಾನು ಖರ್ಚುಮಾಡಿದ್ದ ನಾಲ್ಕು ರೂಪಾಯಿಗಳನ್ನು (ಕೋಳಿಗೆ ಮೂರು, ಮೇಲುಜೂಜಿಗೆ ಒಂದು!) ತನ್ನ ಲೆಕ್ಕಕ್ಕೆ ಖರ್ಚು ಹಾಕಿಕೊಳ್ಳುವಂತೆ ಪ್ರಾರ್ಥಿಸಬೇಕೆಂದೂ, ಹೇಗಾದರೂ ಮಾಡಿ ಹಳೆಪೈಕದ ತಿಮ್ಮನಿಗೂ ಕಳ್ಳಂಗಡಿಯವನಿಗೂ ಪ್ರತೀಕಾರ ಮಾಡಬೇಕೆಂದೂ ನಾನಾ ಮಾರ್ಗಗಳನ್ನು ಯೋಚಿಸುತ್ತಾ, ನಡುನಡುವೆ ಬಿಕ್ಕಿ ಬಿಕ್ಕಿ ಅಳುತ್ತ, ಕಾಲುಹಾಕಿದನು.

ಬರಬರುತ್ತ ಕತ್ತಲೆ ದಟ್ಟವಾಯಿತು. ಆಕಾಶದಲ್ಲಿ ಅಸಂಖ್ಯ ನಕ್ಷತ್ರಗತಳು ವಜ್ರಸೂಜಿಯ ಮೊನೆಗಳಂತೆ ಮಿಣುಮಿಣುಕಿ ಕಣ್ಣು ತಿವಿಯುತ್ತಿದ್ದುವು. ಒಂದೆಡೆ ತನ್ನ ಜೇಬಿಗೆ ಕೈಹಾಕಿ ನೋಡಿಕೊಂಡ ಸೋಮ ತಟಕ್ಕನೆ ಭೂತಬಡಿದವನ ಹಾಗೆ ನಿಂತುಬಿಟ್ಟನು! ಜೇಬಿನಲ್ಲಿದ್ದ ನೋಟುಗಳ ಕಟ್ಟಿಗೆ ಕಟ್ಟೇ ಮಾಯವಾಗಿತ್ತು!