ಮಲೆನಾಡಿಗೆ ನವಜೀವನ ಕಾಲಿಟ್ಟಿತು. ಅದಕ್ಕೆ ಮುಖ್ಯಕಾರಣ ಕಾಲಮಹಿಮೆಯಾಗಿದ್ದರೂ ಕೂಡ ಕಾನೂರು, ಮುತ್ತಳ್ಳಿ, ಸೀತೆಮನೆ ಮತ್ತು ಸುತ್ತಣ ಹಳ್ಳಿಗಳಲ್ಲಿ ಹೂವಯ್ಯನ ಪ್ರಭಾವವೂ ಗಣ್ಯವಾಗಿತ್ತು. ಮಹಿಳೆಯರಲ್ಲಿ ತಪಸ್ವಿನಿಯ ಸ್ಥಾನಮಾನ ಗೌರವಗಳಿಗೆ ಪಾತ್ರವಾಗಿದ್ದ ಸೀತೆಯ ಪ್ರಭಾವವೂ ಸದ್ದುಗದ್ದಲವಿಲ್ಲದೆ ಕೆಲಸಮಾಡಿತ್ತು!

ಕಾನೂರು ಮುತ್ತಳ್ಳಿಗಳಿಗೆ ಮಧ್ಯೆ, ರಸ್ತೆಗೆ ಸಮೀಪವಾಗಿ, ಕಾಡಿನ ನಡುವೆ ಇದ್ದ ಕಳ್ಳಂಗಡಿ ಕುಸಿದುಬಿದ್ದು, ಒರಲೆ ಹಿಡಿದು. ಪಾಳಾಗಿತ್ತು. ನಾಲ್ಕಾರು ಗ್ರಾಮಗಳಿಗೆ ಅನುಕೂಲವಾಗುವಂತೆ ಒಂದು ಆಸ್ಪತ್ರೆ, ಸ್ಕೂಲು, ಪೋಸ್ಟಾಫೀಸು, ಅಂಗಡಿಗಳು ಮೂಡಿ ವರ್ಧಿಸುತ್ತಿದ್ದುವು. ಹಿಂದೆ ಬೈಸಿಕಲ್ಲಿನ ಪರಿಚಯಕ್ಕೂ ಪರದೇಶಿಯಾಗಿದ್ದ ಆ ರಸ್ತೆ ಮೋಟಾರುಕಾರು, ಬಸ್ಸುಗಳ ಕೋಟಲೆಯಿಂದ ಬೇಸರಗೊಂಡಿತ್ತು; ಸ್ವದೇಶಿ ಖಾದಿಗಳ ಪ್ರಚಾರವೂ ತಕ್ಕಮಟ್ಟಿಗೆ ನಡೆದಿತ್ತು. ಗಾಂಧಿ ಟೋಪಿಗಳೂ ಆಗಾಗ ಬಂದು ಉಪನ್ಯಾಸ ಕೊಡುತ್ತಿದ್ದುವು.  ಅಕ್ಷರ ಬಲ್ಲವರು ಪತ್ರಿಕೆಗಳನ್ನು ಓದುವ ಅಭ್ಯಾಸಮಾಡಿ, ವಿಶಾಲ ಪ್ರಪಂಚದ ವಿಚಾರಗಳನ್ನು ಕುರಿತು ಮಾತಾಡುತ್ತಿದ್ದರು. ಮಾರಿಯ ಹರಕೆ, ದೆವ್ವದ ಪೂಜೆ ಮೊದಲಾದ ಮೂಢಾಚಾರಗಳಿಗೆ ಬದಲಾಗಿ ಉತ್ಕೃಷ್ಟವಾದ ಮತವಿಧಾನಗಳು ಆಚರಣೆಗೆ ಬರುತ್ತಿದ್ದುವು. ಕಾಡಿಗೆ ನಾಗರಿಕತೆ ಕಾಲಿಟ್ಟಿತ್ತು.

ಕಾನೂರಿನಲ್ಲಿ ಹೂವಯ್ಯನ ಪ್ರಯತ್ನದಿಂದ ಬೇಲರೂ ಸೇರೆಗಾರ ಸೋಮಯ್ಯಸೆಟ್ಟರೂ (ಅವರು ಕನ್ನಡ ಜಿಲ್ಲೆಗೆ ಹೋಗಿ ಮದುವೆ ಮಾಡಿಕೊಂಡು ಬಂದು ಮೂರು ವರ್ಷಗಳಾಗಿತ್ತು) ಗಟ್ಟದವರೂ ಕುರಿಮಂದೆಯಂತೆ ಬಿಡಾರಗಳನ್ನು ಕಟ್ಟಿಕೊಂಡು ಹಂದಿಗಳಂತೆ ವಾಸಮಾಡುವುದಕ್ಕೆ ಬದಲಾಗಿ ಸುವ್ಯವಸ್ಥಿತವಾದ ಸಣ್ಣ ಸಣ್ಣ ಮನೆಗಳಲ್ಲಿ ಆದಷ್ಟು ಚೊಕ್ಕಟವಾಗಿ ಬದುಕುತ್ತಿದ್ದರು. ಕಾಯಿಲೆ ಬಂದರೆ ಜೋಯಿಸರಲ್ಲಿಗೆ ಹೋಗುವುದಕ್ಕೆ ಬದಲಾಗಿ ಆಸ್ಪತ್ರೆಗೆ ಹೋಗುವುದನ್ನು ಕಲಿತ್ತಿದ್ದರು. ನಿಂಗನ ಮಗ ಪುಟ್ಟ ಸೀತೆಯ ಪ್ರಯತ್ನದಿಂದ ಅಕ್ಷರಸ್ಥನಾಗಿ, ಮದುವೆಯಾಗಿ ಕೆಳಕಾನೂರಿನಲ್ಲಿ ಒಕ್ಕಲಾಗಿದ್ದನು. ಈಗ ಅವನನ್ನು ಬೇಟೆಗಾರ ಪುಟ್ಟಣ್ಣನಿಂದ ಬೇರ್ಪಡಿಸುವುದಕ್ಕಾಗಿ ’ಸಣ್ಣ ಪುಟ್ಟಣ್ಣ’ ಎಂದು ಕರೆಯುತ್ತಿದ್ದರು. ಕಾನೂರು ಮನೆಯೂ ಕೂಡ ಅಲ್ಲಲ್ಲಿ ಕಿತ್ತು ಹೊಸದಾಗಿ ಕಟ್ಟಲ್ಪಟ್ಟು ನವೀನತೆಗೆ ಯೋಗ್ಯವಾದ ಆಕಾರದಿಂದ ಮೆರೆಯುತ್ತಿತ್ತು. ಆದರೆ ಈಗ ಹೂವಯ್ಯ ಅಲ್ಲಿ ವಾಸಿಸುತ್ತಿರಲಿಲ್ಲ.

ಹಿಂದೆ ಹಳೆಪೈಕದ ತಿಮ್ಮ ಚಂದ್ರಯ್ಯಗೌಡರಿಗೂ ಸೇರೆಗಾರ ರಂಗಪ್ಪಸೆಟ್ಟರಿಗೂ ಕಳ್ಳು ಕಾಯಿಸಿಕೊಡುತ್ತಿದ್ದ ಎತ್ತರವಾದ ಕಾನುಬೈಲಿನಲ್ಲಿ ಒಂಖದು ಸುಂದರ ಮಂದಿದರವನ್ನು ನಿರ್ಮಿಸಿ, ಅಲ್ಲಿ ಕರ್ಮಯೋಗಿಯಾಗಿ ತಪಸ್ವಿಯಾಗಿ ವಾಸಿಸುತ್ತಿದ್ದನು. ಓಬಯ್ಯ ಸಂಸಾರದ ಗೊಡವೆಗೆ ಹೋಗದೆ ಭಕ್ತಿಯಿಂದ ಹೂವಯ್ಯನ ಕಿಂಕರನಾಗಿ ಸೇವೆ ಮಾಡಿಕೊಂಡಿದ್ದನು. ಕೆಲವರು ಅವನಿಗೆ ದೊರೆಯುತ್ತಿದ್ದ ಗೌರವವನ್ನು ಕಂಡು ಕರುಬಿ ’ಮುಖವೆಲ್ಲ ಮೈಲಿಕಜ್ಜಿ! ಒಕ್ಕಣ್ಣು! ಆ ವಿಕಾರಕ್ಕೆ ಯಾರುತಾನೆ ಹೆಣ್ಣು ಕೊಡ್ತಾರೆ? ಹೆಣ್ಣುಸಿಕ್ಕದಿದ್ದುದಕ್ಕೆ ವೇಷ ಹಾಕಿಕೊಂಡು ಬೆಕ್ಕಿನ ಸನ್ಯಾಸ ತೊಗೆದುಕೊಂಡಿದ್ದಾನೆ!’ ಎಂದು ಅಂದುಕೊಳ್ಳುತ್ತಿದ್ದರು. ಪುಟ್ಟಣ್ಣ ಮೊದಲಿನಂತಯೆ ಬೇಟೆಗಾರನಾಗಿ, ವಿದ್ಯಾಭ್ಯಾಸವನ್ನು ಪೂರೈಸಿ ಬಂದು ಸೀತೆಯ ತಂಗಿ ಲಕ್ಷ್ಮಿಯನ್ನು ಮುದುವೆಯಾಗಿ ಮೆರೆಯುತ್ತಿದ್ದ ಕಾನೂರು ವಾಸಪ್ಪಗೌಡಸರಿಗೆ ಬೇಟೆಯಲ್ಲಿ ಮುಖ್ಯವಾಗಿಯೂ ಬೇರೆಕೆಲಸಗಳಲ್ಲಿ ಗೌಣವಾಗಿಯೂ ಕಾರ್ಯದರ್ಶಿಯಾಗಿದ್ದನು! ಅವನೂ ಹೂವಯ್ಯನ ಜೊತೆಯಲ್ಲಿ ಓಬಯ್ಯನಂತೆ ಇರಬೇಕೆಂದು ಪ್ರಯತ್ನಿಸಿದ್ದನು. ಆದರೆ ಬೇಟೆಯ ಹುಚ್ಚಿನಿಂದ ಪಾರಾಗಲಾರದೆ ಗಿರಿನೆತ್ತಿಯ ಮಂದಿರದಿಂದ ಗಿರಿಪಾದದ ಮನೆಗೆ ಮೆಲ್ಲಗೆ ಜಾರಿಬಿಟ್ಟಿದ್ದನು! ಶಿಖ್ರದ ಮಂದಿರತಮ ಚಳಿಗಾಳಿಗಿಂತಲೂ ಕಣಿವೆಯ ಮನೆಯ ಬೆಚ್ಚನೆಯ ಮಡಿಲೆ ಅವನಿಗೆ ಸುಖದಾಯಕವಾಗಿತ್ತು. ಅವನ ಆ ವರ್ಗಾವರ್ಗಿಯನ್ನು ಕುರಿತು ಎಲ್ಲರೂ ಹಾಸ್ಯಮಾಡಿ ನಗುತ್ತಿದ್ದರು. ಸೀತ ಕೆಮ್ಮಿನ ನೆವದಿಂದ ಕೆಳಗಿಳಿದವನು ಮೇಲಕ್ಕೆ ಹೋಗದೆ ಇತರರಿಂದ ಅಲ್ಲಿದ್ದ ಬಟ್ಟೆಬರೆಗಳನ್ನು ತರಿಸಿಕೊಂಡಿದ್ದನಂತೆ ಕಾನೂರಿನ ಹೊಸ ಸೊಸೆ ಲಕ್ಷ್ಮಿದೇವಿಯಂತೂ ಸಮಯ ದೊರೆತಾಗಲೆಲ್ಲ ಪುಟ್ಟಣ್ಣನನ್ನು ಹಾಸ್ಯಮಾಡಿ ಜೀವ ಹಿಂಡುತ್ತಿದ್ದಳು. ಅದಕ್ಕೆ ಬದಲಾಗಿ ಅವನು ರಾಗವಾಗಿ “ಸಾಕು ಸುಮ್ಮನಿರಿ ಅಮ್ಮಾ; ನಾನೆಲ್ಲ ಬಲ್ಲೆ. ’ನಾನೂ ಅಕ್ಕಯ್ಯನ ಹಾಂಗೆ ಇರ್ತೀನಿ, ಇರ್ತೀನಿ’ ಅಂತ ಹೇಳ್ತಿದ್ದು, ಕಡೆಗೆ ಹೇಳದೆ ಕೇಳದೆ ವಾಸಪ್ಪಗೌಡರ ಸಂಗಡ ಹಸೇಮೇಲೆ ಕೂತದ್ದು ಯಾರು? ನೀವೋ? ನಾನೋ?” ಎಂದು ಮೊದಲಾಗಿ ಅಣಕಿಸುತ್ತಿದ್ದನು. ಲಕ್ಷ್ಮಿಗೆ ಅಂತಹ ಮಾತುಗಳನ್ನು ಕೇಳುವುದಕ್ಕೆ ಪ್ರಿಯವಾಗಿಯೇ ಅವನನ್ನು ಹಾಗೆ ಕೆಣಕುತ್ತಿದ್ದಳು!

* * *

ವೈಶಾಖಮಾಸದ ಒಂದು ಪೂರ್ಣಿಮಾ ರಾತ್ರಿಕೊನೆಗೊಂಡು ರಮಣೀಯವಾಗಿ ಪ್ರಾತಃಕಾಲವಾಗುತ್ತಿತ್ತು. ಕಾನೂರು ಮನೆಯಿಂದ ಕಾನುಬೈಲಿನ ಶಿಖರಕ್ಕೇರಿ ಸುತ್ತಿ ಸುತ್ತಿ ಹೋಗುತ್ತಿದ್ದ ಹೊಸದಾಗಿ ಮಾಡಿದ್ದ ರಸ್ತೆಯಲ್ಲಿ ಕೆಂಚಗೆ, ಎತ್ತರವಾಗಿ, ಬಲಿಷ್ಠನಾಗಿ, ಭದ್ರರೂಪಿಯಾಗಿದ್ದ ತುಪ್ಪುಳುಮೀಸೆಯ ತರುಣನೊಬ್ಬನು ಖಾದಿ ಬಿಳಿಯ ಪಾಯಿಜಾಮೆಯನ್ನೂ ಖಾದಿಯ ಪಂಜಾಬಿಯನ್ನೂ ಧರಿಸಿ, ಬಯಲುಸೀಮೆಯ ತೆಳ್ಳನೆಯ ಮೆಟ್ಟುಗಳನ್ನು ಮೆಟ್ಟಿ ನುಣ್ಣಗೆ ಹೊಳೆಯುವಂತೆ ಬಾಚಿ ಬೈತಲೆ ತೆಗೆದಿದ್ದ ಕ್ರಾಪಿನಿಂದ ಶೋಭಿಸುತ್ತ ನಿರಾಯಾಸವಾಗಿ ಹಾರಿಹಾರಿ ನಡೆಯುತ್ತ, ಶಿಖರದಲ್ಲಿದ್ದ ಮಂದಿದರದ ಕಡೆಗೆ ಸಾಗುತ್ತಿದ್ದನು. ಅವನ ಎರಡು ಪಕ್ಕಗಳಲ್ಲಿ ಇಬ್ಬರು ಸಣ್ಣ ಹುಡುಗರು ಅವನಂತೆಯೇ ಉಡುಪನ್ನೂ ಕ್ರಾಪನ್ನೂ ಧರಿಸಿ, ಕೇಕೆ ಹಾಕುತ್ತಾ ಸ್ಪರ್ಧೆಯಿಂದಲೋ ಎಂಬಂತೆ ಹಿಂಬಾಲಿಸುತ್ತಿದ್ದರು. ಒಬ್ಬ ಹುಡುಗ ಮುತ್ತಳ್ಳಿ ಚಿನ್ನಯ್ಯಗೌಡರ ಮಗ ಹನ್ನೊಂದು ವರ್ಷದ ರಮೇಶನಾಗಿದ್ದನು. ಮತ್ತೊಬ್ಬ ಅವನಿಗಿಂತಲೂ ಸ್ವಲ್ಪ ಹಿರಿಯವನಾಗಿದ್ದ ಸೀತೆಮನೆ ಸಿಂಗಪ್ಪಗೌಡರ ಮಗ ಶಂಕರಯ್ಯನಾಗಿದ್ದನು.

ರಮೇಶ ಮುಂದೆ ಹೋಗುತ್ತಿದ್ದ ತರುಣನ ಕೈಯನ್ನು ಓಡಿಹೋಗಿ ಹಿಡಿದುಕೊಂಡು “ಸಣ್ಣ ಮಾವ, ನಾನೇ ಗೆದ್ದೆ! ಶಂಕರ ಹಿಂದೆ ಬಿದ್ದ!” ಎಂದು ಬಿಳಿಯ ಹಲ್ಲುಗಳೆದಲ್ಲ ಮುದ್ದಾಗಿ ಶೋಭಿಸುವಂತೆ ಕೋಮಲವಾದ ಕೆಂದುಟಿಗಳನ್ನು ತೆರೆದು ನಕ್ಕನು.

ಶಂಕರನೂ ಹಿಂದಿನಿಂದ “ನನ್ನ ಕಾಲಿಗೆ ಮುಳ್ಳು ಹೊಕ್ಕಿತು. ನಾನೇನು ಮಾಡಲಿ!” ಎಂದನು.

ಅಷ್ಟರಲ್ಲಿ ಹಿಂದಿನಿಂದ ಚಿನ್ನಯ್ಯನ ಜೊತೆಯಾಗಿ ಮೆಲ್ಲಗೆ ಬರುತ್ತಿದ್ದ ಕೂದಲು ಹಣ್ಣಾಗತೊಡಗಿದ್ದ ಸಿಂಗಪ್ಪಗೌಡರು “ಓ ವಾಸಪ್ಪಾ” ಎಂದು ಓರೆಗಣ್ಣಿನಿಂದ ನೋಡುತ್ತಾ ಕಂಚಿನ ಧ್ವನಿಯಿಂದ ಕರೆದರು.

ಮುಂದೆ ಹೋಗುತ್ತಿದ್ದ ತರುಣನೂ ಹುಡುಗರೂ ತಿರುಗಿ ನಿಂತು ಬೆಟ್ಟದ ಇಳಿಜಾರಿನ ಕಡೆಗೆ ನೋಡಿದರು.

ಸಿಂಗಪ್ಪಗೌಡರು ಮತ್ತೆ ಗಟ್ಟಿಯಾಗಿ ಕಂಚಿನ ಧ್ವನಿಯಿಂದಲೇ “ನಿಲ್ಲು ಮಾರಾಯಾ; ನಾವೂ ಬರ್ತೀವಿ, ಏನು ಹೊಸ ಹೆಣ್ಣು ಮದುವೆಯಾದ ಹುಮ್ಮಸ್ಸಿನಲ್ಲಿ ನಿನಗೆ ಗುಡ್ಡ ಹತ್ತುವುದೆಂದರೆ ಕುಶಾಲಾಗಿದೆ!” ಎಂದು ಮುಂದುವರಿಯತೊಡಗಿದರು.

ಸಿಂಗಪ್ಪಗೌಡರ ಕರೆಯನ್ನು ಕೇಳಿ ಹಿಂತಿರುಗಿ ನಿಂತ ವಾಸಪ್ಪ ಅವರು ತಾನಿದ್ದೆಡೆಗೆ ಮೆಲ್ಲಗೆ ಏರಿಬರುವವರೆಗೂ ಅವರನ್ನು ನಿರೀಕ್ಷಿಸಿ ನೋಡುತ್ತಿದ್ದಂತೆ ನಟಿಸುತ್ತಿದ್ದನೇ ಹೊರತು, ನಿಜವಾಗಿಯೂ ಅವನ ದೃಷ್ಟಿ ಮತ್ತೊಂದು ಕಡೆಯಲ್ಲಿ ನೆಟ್ಟಿತ್ತು; ಹಿಂತಿರುಗಿ ನಿಂತ ಕೂಡಲೆ ಅವನ ಕಣ್ಣು ಪುಟ್ಟಮ್ಮನ ಆರು ವರ್ಷದ ಹೆಣ್ಣು ಹುಡುಗಿ ಲಲಿತೆಯನ್ನು ಕೈಹಿಡಿದು ನಡೆಸಿಕೊಂಡು ಖಾದಿ ಸೀರೆಯನ್ನುಟ್ಟು ಬರುತ್ತಿದ್ದ ಸೀತೆ, ಒಂದು ವರ್ಷದ ಗಂಡು ಕೂಸನ್ನು ಎತ್ತಿಕೊಂಡು ಬರುತ್ತಿದ್ದ ಪುಟ್ಟಮ್ಮ, ಮತ್ತು ಅವರೊಡನೆ ಸಿಂಗಾರಗೆಯ್ದ ವಸಂತಶ್ರೀಯಂತೆ ನೀಲಿಯ ರೇಷ್ಮೆಯ ಸೀರೆಯುಟ್ಟು ಬರುತ್ತಿದ್ದ ತನ್ನ ನೂತನ ರತಿ ಲಕ್ಷ್ಮೀದೇವಿ ಇವರ ಮೇಲೆ ಎರಗಿತ್ತು. ಸಿಂಗಪ್ಪಗೌಡರ ನುರಿತ ಅನುಭವಕ್ಕೆ ಅದು ಗೊತ್ತಾಗದೆ ಇರಲಿಲ್ಲ. ವಾಸಪ್ಪನಿಗೆ ಒಂದುಮಾರು ಸಮೀಪಕ್ಕೆ ಬಂದೊಡನೆಯೆ “ಸಾಕು ಕಣೋ! ಎಷ್ಟು ನೋಡೋದು? ದೃಷ್ಟಿಯಾಗಿಬಿಟ್ಟರೆ! ತಿರುಗು, ಹೋಗೋಣ” ಎಂದು ಹಾಸ್ಯ ಮಾಡಿದರು.

ವಾಸಪ್ಪ ನಾಚಿ ತಿರುಗಿ ಮುಂದುವರಿಯುತ್ತ “ಕಕ್ಕಯ್ಯ, ನೀವು ಸುಮ್ಮನಿರಿ, ನನಗೆಲ್ಲ ಗೊತ್ತದೆ. ನೀವು ಹುಡುಗರಾಗಿದ್ದಾಗ ಎಷ್ಟು ಸಂಯಮಿಗಳಾಗಿದ್ದಿರಿ ಎಂದು! ನಿಮಗೆ ಮರೆತುಹೋಗಿದ್ದರೆ ಹೂವಣ್ಣಯ್ಯನನ್ನು ಕೇಳಿ, ಹೇಳ್ತಾರೆ!” ಎಂದು ಹೊಂಬಿಸಿಲಿನಲ್ಲಿ ಹಾರಾಡುತ್ತಿದ್ದ ಬಣ್ಣದ ಚಿಟ್ಟೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಹುಡುಗರನ್ನು ಕುರಿತು “ಬನ್ನಿ, ಬನ್ನಿ, ಹೊತ್ತಾಯ್ತು” ಎಂದು ಕರೆದನು.

’ಹೊತ್ತಾಯ್ತು’ ಎಂಬುದನ್ನು ಕೇಳಿ, ಹಿಂದೆ ಸ್ವಲ್ಪ ದೂರದಲ್ಲಿ ಬರುತ್ತಿದ್ದ ಪುಟ್ಟಮ್ಮ ’ಲಕ್ಷ್ಮೀ, ಮಾಧೂನ ಸ್ವಲ್ಪ ಕರಕೊಳ್ತೀಯಾ? ನನಗೆ ದಣಿವು!” ಎಂದಳು.

“ನನಗೂ ಸಾಕಾಗಿದೆ” ಎಂದುಸುರಿ, ಮುಂದೆ ಹೋಗುತ್ತಿದ್ದ ಲಕ್ಷ್ಮಿದೇವಮ್ಮನವರ ಸವಾರಿ ಹಿಂತಿರುಗಿಯೂ ನೋಡಲಿಲ್ಲ. ಆರೋಗ್ಯವಾಗಿ ರತಸವತ್ತಾಗಿದ್ದ ಅವಳಿಗೆ ದಣಿವಾಗಿಯೂ ಇರಲಿಲ್ಲ; ಕೂಸನ್ನು ಎತ್ತಿಕೊಂಡು ಹತ್ತಿದರೆ ದಣಿವಾಗುತ್ತಲೂ ಇರಲಿಲ್ಲ; ಆದರೆ ಕೂಸನ್ನು ಎತ್ತಿಕೊಳ್ಳುವುದರಿಂದ ತನ್ನ ಶೃಂಗಾರವೆಲ್ಲಿ ಹಾಳಾಗಿಬಿಡುತ್ತದೆಯೋ, ಎಲ್ಲಿ ಬಟ್ಟೆ ಹಾಳಾಗಿಬಿಡುತ್ತದೆಯೋ ಎಂಬುದು ಅವಳ ಒಳಗುಟ್ಟಾಗಿತ್ತು.

ಸೀತೆಗೆ ತಂಗಿಯ ಒಭಾವ ಗೊತ್ತಾಗಿ, ನಗುತ್ತ “ಸಾಕು ಸಾಕು, ಎತ್ತಿಕೊಳ್ಳೆ! ಈಗಲೇ ಹೀಗೆಂದರೆ ಮುಂದೆ ಹೇಗೆ?” ಎಂದು ಅಕ್ಕರೆಯಿಂದ ಗದರಿಸಿದಳು.

ಪುಟ್ಟಮ್ಮ “ಮುಂದೆ ಹ್ಯಾಂಗೇ? ಅವಳ ಬಾಲೆ ಎತ್ತಿಕೊಳ್ಳಾಕೆ ಒಬ್ಬಳು ಜವಾನಗಿತ್ತಿ ಬೇಕು ಅಂತ ಕಾಣ್ತದೆ! ವಾಸೂಗೆ ಈಗಲೆ ಹೇಳಿದ್ದರೆ ವಾಸಿ” ಎಂದು ಮುಂದೆ ದೂರದಲ್ಲಿ ಗಟ್ಟಿಯಾಗಿ ಮಾತಾಡಿಕೊಂಡು ಹೋಗುತ್ತಿದ್ದ ಗಂಡಸರ ಗುಂಪನ್ನು ನೋಡಿ “ವಾಸೂ! ಏ,ವಾಸು!” ಎಂದು ಕರೆದಳು.

ಆ ಕೂಗು ಅವರು ಯಾರಿಗೂ ಕೇಳಿಸಲಿಲ್ಲ. ಆದರೂ ಲಕ್ಷ್ಮಿ ತಟಕ್ಕನೆ ಹಿಂತಿರುಗಿ ಓಡಿಬಂದು, ಅತ್ತಿಗೆಯ ಬಾಯಿಮುಚ್ಚಿ “ದಮ್ಮಯ್ಯಾ, ಸುಮ್ಮನಿರಿ. ನಿಮ್ಮ ಪುಣ್ಯ!” ಎಂದು ತನ್ನೆರಡೂ ಅಲಂಕೃತವಾಗಿದ್ದ ತೋಳ್ಗಳನ್ನೂ ಕೂಸಿನ ಮುಂದೆ ಚಾಚಿ “ಮಾಧೂ, ಬಾ ಅಪ್ಪಾ” ಎಂದು ಮಾಧುವನ್ನು ಎತ್ತಿಕೊಂಡು ಬಿರುಬಿರನೆ ಮೇಲೇರಿದಳು.

ಸೇರೆಗಾರ ಸೋಮಯ್ಯಸೆಟ್ಟರ ಆಳುಗಳೂ, ಬೇಲರೂ, ಸುತ್ತಮುತ್ತಣ ಹಳ್ಳಿಗಳ ಅನುಕೂಲಸ್ಥರೂ, ವಾಸುವಿನ ಸಹಪಾಠಿಗಳಾಗಿದ್ದ ಅಗ್ರಹಾರದ ವೆಂಕಪ್ಪಯ್ಯನವರ ಇಬ್ಬರು ಮಕ್ಕಳೂ, ಇನ್ನೂ ಅನೇಕರು ಬುದ್ಧ ಜಯಂತಿಯ ಉತ್ಸವಕ್ಕಾಗಿ, ಹಸುರು ಹೂ ತಳಿರು ತೋರಣಗಳಿಂದಲೂ ವಿವಿಧ ಪರಿಮಳಗಳಿಂದಲೂ  ತಪೋವನದಂತೆ ಶೋಭಸುತ್ತಿದ್ದ ಮಂದಿರದಲ್ಲಿ ಕಿಕ್ಕಿರಿದಿದ್ದರು. ವಾಸು ತನ್ನ ಬ್ರಾಹ್ಮಣ ಸ್ನೇಹೆತರೊಡನೆ ತರಳಸುಲಭವಾದ ಅಟ್ಟಹಾಸದಿಂದ ಮಾತಾಡತೊಡಗಿದನು. ಸಿಂಗಪ್ಪಗೌಡರು ಪರಿಚಯದವರನ್ನೆಲ್ಲ ಮಳೆ ಬೆಳೆಗಳ ವಿಚಾರವಾಗಿ ಆರೋಗ್ಯದ ವಿಚಾರವಾಗಿ ಮಾತಾಡಿಸತೊಡಗಿದರು. ಸೀತೆ, ಪುಟ್ಟಮ್ಮ, ಲಕ್ಷ್ಮಿ ಮೂವರೂ ಮಹಿಳೆಯರ ಗುಂಪಿಗೆ ಹೋಗುವ ಮೊದಲು ಹೂವಯ್ಯನ ಕೊಟಡಿಗೆ ಹೋದರು. ಸೀತೆ ತನ್ನ ವಾಡಿಕೆಯಂತೆ ಹೂವಯ್ಯನನ್ನು ಕಾಲು ಮುಟ್ಟಿ ನಮಸ್ಕರಿಸಿದಳು. ಅವನು ತನ್ನೆದುರಿಗೆ ಇದ್ದ ಬುದ್ಧದೇವನ ಪಟಕ್ಕೆ ನಮಸ್ಕರಿಸಿ, ಅದನ್ನು ಗುರುದೇವನಿಗೆ, ಸಮರ್ಪಿಸಿದನು. ಮತ್ತು ಲಕ್ಷ್ಮಿಯ ಕಂಕುಳಿಂದ ಮಾಧುವನ್ನು ಕರೆದೆತ್ತಿ, ತೊಡೆಯಮೇಲೆ ಕೂರಿಸಿಕೊಂಡು, ಮುದ್ದಿಸುತ್ತಾ ಸಂಭಾಷಿಸಿದನು.

ಸ್ವಲ್ಪಹೊತ್ತಿನಲ್ಲಿ ಉತ್ಸವ ಆರಂಭವಾಯಿತು. ವಾಸು, ಆತನ ಇಬ್ಬರು ಬ್ರಾಹ್ಮಣ ಮಿತ್ರರು, ಶಂಕರಯ್ಯ, ರಮೇಶ ಇಷ್ಟು ಜನರು ವೇದಿಕೆಯ ಪಕ್ಕದಲ್ಲಿ ನಿಂತು ನವಜೀವನ ಮಂತ್ರಗಾನವನ್ನು ಹಾಡತೊಡಗಿದರು. ಲಕ್ಷ್ಮಿ ಹಿಂದುಗಡೆಯಿಂದ ಹಾರ‍್ಮೋನಿಯಂ ಬಾರಿಸುತ್ತಾ ಹಿಮ್ಮೇಳವಾಗಿದ್ದಳು. ಸೀತೆ ತಾನು ಕೂತೆಡೆಯಿಂದಲೆ ಮಾನಸಿಕವಾಗಿ ಅದರಲ್ಲಿ ಭಾಗವಹಿಸಿದ್ದಳು. ಆ ರಮಣೀಯಯ ವಸಂತ ಪ್ರಭಾತದಲ್ಲಿ, ಶಿಖರ ಕಂದರಮಯವಾದ ಸಹ್ಯಾದ್ರಿಯ ವನಭೂಮಿಯಲ್ಲಿ, ಹೊಸದಾಗಿ ಮೂಡಿಬಂದ ದಿನಮಣಿಯ ಕಾಂಚನಕಾಂತಿಯಲ್ಲಿ, ಗಿಳಿಕಾಮಳ್ಳಿ ಕಾಜಾಣ ಕೋಗಿಲೆ ಪಿಕಳಾರ ಮೊದಲಾದ ಹಕ್ಕಿಗಳಿಂಚರದೊಡಗೂಡಿ ಆ ಗಾನ ಆಲಿಸಿದವರನ್ನೆಲ್ಲ ಬೇರೊಂದು ನವೀನ ಆಶಾಜಗತ್ತಿಗೆ ತೇಲಿಸಿತು:

ಉದಯಿಸುತಿಹನದೊ ಅಭಿನವ ದಿನಮಣಿ
ಸಹ್ಯಾದ್ರಿಯ ಶೃಂಗಾಳಿಯ ಮೇಲೆ.
ಹರಿದೋಡಿದೆ ನಿಶೆ, ನಗೆ ಬೀರಿದೆ ಉಷೆ,
ತೀಡುತಲಿದೆ ತಂಗಾಳಿಯ ಲೀಲೆ.
ಮಲೆನಾಡನು ಮನಮೋಹಿಸುತಿದೆ ಓ
ದಿನಮುಖದಿನ ಕಾಂಚನಕಾಂತಿ;
ಏಳೇಳಿರಿ! ಕರೆಯುತ್ತಿದೆ ಕೇಳಿರಿ,
ಓ ನವಜೀವನ ಸಂಕ್ರಾಂತಿ!

ಉದಯಿಸುತಿದೆ ನೂತನಯುಗದೇವತೆ!
ಮಿಥ್ಯೆಯ ಮೌಢ್ಯತೆಯನು ಸೀಳಿ;
ಜ್ಞಾನದ ವಿಜ್ಞಾನದ ಮತಿಖಡ್ಗದಿ
ಮೈದೋರುವಳೈ ನವಕಾಳಿ!
ಕೆಚ್ಚಿನ ನೆಚ್ಚಿನ ತನುಮನ ಪಟುತೆಯ
ಸಂಪಾದಿಸಿ ಓ ಮೇಲೇಳಿ;

ಕಣ್ದೆರೆಯಿರಿ ನವಕಾಂತಿಗೆ, ಶಾಂತಿಗೆ,
ಓ ಕ್ರಾಂತಿಯ ಪುತ್ರರೆ, ಬಾಳಿ!