ಅಮಾವಾಸ್ಯೆಯ ಕಗ್ಗತ್ತಲು ಕವಿದು ನಾಡು ಕಾಡುಗಳೆಲ್ಲ ಮಸಿಯ ಮುದ್ದೆಯಾಗಿತ್ತು. ಮೇಘರಿಕ್ತ ಗಗನತಲದಲ್ಲಿ ಅಸಂಖ್ಯ ತಾರೆಗಳ ಉಜ್ವಲ ಪ್ರಭೆಯಿಂದ ಮಿಣುಕುತ್ತಿದ್ದುವು. ಮುತ್ತಳ್ಳಿಯ ಶ್ಯಾಮಯ್ಯಗೌಡರ ಮನೆಯ ಜಗಲಿಯಲ್ಲಿ ಪ್ರಕಾಶಮಾನವಾಗಿ ಉರಿಯುತ್ತಿದ್ದ ಲ್ಯಾಂಪಿನ ಬೆಳಕಿಗೆ ಮೋಹಿತವಾಗಿ ನಾಲ್ಕಾರು ದೀಪದ ಹುಳುಗಳು ಹಾರಾಡುತ್ತಿದ್ದುವು. ಜಗಲಿಯ ಮೇಲೆ ಶ್ಯಾಮಯ್ಯಗೌಡರು, ಸಿಂಗಪ್ಪಗೌಡರು, ರಾಮಯ್ಯ ಮಾತಾಡುತ್ತಾ ಕುಳಿತಿದ್ದರು. ಮಾತಿನ ವಿಸ್ತೀರ್ಣ ಮೈಸೂರಿನಿಂದ ಬೈಲುಕೆರೆಯವರೆಗೂ ಹಬ್ಬಿತ್ತು.

ಲಕ್ಷ್ಮಿ ಒಳಗಿನಿಂದ ಓಡಿಬಂದು ತಂದೆಯ ಬಳಿಗೆ ಹೋಗುತ್ತಿದ್ದಳು. ಮಧ್ಯೆ ಸಿಂಗಪ್ಪಗೌಡರು ಅವಳನ್ನು ಹಿಡಿದುಕೊಂಡು ತೊಡೆಯಮೇಲೆ ಕೂರಿಸಿಕೊಂಡರು. ಅವಳು ಮೊದಲು ಸಂಕೋಚಭಾವವನ್ನು ಪ್ರದರ್ಶಿಸಿದರೂ. ತುಸು ಹೊತ್ತಿನಲ್ಲಿಯೆ ” ಸೀತೆಮನೆ ಸಿಂಗಪ್ಪ ಮಾವ” ನೊಡನೆ ಸಲಿಗೆಯಿಂದ ಮಾತಾಡತೊಡಗಿದಳು. ಮಾತುಗಳೋ ವಿಧವಿಧವಾಗಿ ವಿಚಿತ್ರವಾಗಿದ್ದುವು. ಮಕ್ಕಳೊಡನೆ ವಿನೋದ ಮಾಡುವುದೆಂದರೆ ಸಿಂಗಪ್ಪಗೌಡರಿಗೆ ಬಹಳ ಆಸೆ. ಸಿಂಗಪ್ಪಗೌಡರೂ ಭಾರತ ರಾಮಾಯಣಗಳ ಕಥೆಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದುದರಿಂದ ಮಕ್ಕಳೆಲ್ಲರಿಗೂ ಅವರೆಂದರೆ ಕುತೂಹಲ. ಲಕ್ಷ್ಮಿ ಮತ್ತು ಸಿಂಗಪ್ಪಗೌಡರ ವಿನೋದ ಸಂಭಾಷಣೆಯಲ್ಲಿ ನಡುನಡುವೆ ಭಾಗಿಗಳಾಗಿ ಉಳಿದವರೂ ನಗುತ್ತಿದ್ದರು.

ಸಿಂಗಪ್ಪಗೌಡರು “ಲಕ್ಷ್ಮೀ, ನೀನು ನಿನ್ನವ್ವನ ಮಗಳೋ? ನಿನ್ನಪ್ಪನ ಮಗಳೋ?” ಎಂದು  ಕೇಳಿದರು.

ಲಕ್ಷ್ಮಿ “ನನ್ನವ್ವನ ಮಗಳು” ಎಂದಳು.

“ಯಾರು ಹೇಳಿದವರು ನಿನಗೆ? ನನ್ನ ಕಣ್ಣೆದುರು ನಿನ್ನ ಅಪ್ಪಯ್ಯ ಒಂದು ಮಣ ಅಡಕೆ ಕೊಟ್ಟು ನಿನ್ನ ಕೊಂಡುಕೊಂಡಿದ್ದರೆ, ಕಂದಾರೆಯವರ ಕೈಯಿಂದ! ಅವ್ವನ ಮಗಳಲ್ಲ ನೀನು; ಅಪ್ಪಯ್ಯನ ಮಗಳು.”

ಲಕ್ಷ್ಮಿ ಹುಬ್ಬು ಗಂಟುಹಾಕಿ “ಊ‌ಞ ಹ್ಞೂ ನಾನು ನನ್ನವ್ವನ ಮಗಳು!” ಎಂದಳು.

“ಹೋಗಲಿ ಬಿಡು. ನಿನ್ನಪ್ಪಯ್ಯ ನಿನ್ನವ್ವಗೆ ಏನಾಗಬೇಕು? ಹೇಳು.”

“ಅಪ್ಪಯ್ಯಾಗ ಬೇಕು” ಎಂದಳು ಲಕ್ಷ್ಮಿ. ಅವಳ ಭಾಗಕ್ಕೆ ತಾನು ಕೊಟ್ಟ ಉತ್ತರ ಸಂಪೂರ್ಣವಾಗಿ ಸತ್ಯವಾಗಿತ್ತು. ಆದರೆ, ಎಲ್ಲರೂ ಗೊಳ್ಳೆಂದು ನಗಲು, ಮುಖ ಪೆಚ್ಚಾಯಿತು.

“ಹೋಗಲಿ! ನಿನ್ನವ್ವ ನಿನ್ನಪ್ಪಯ್ಯಗೆ ಏನಾಗಬೇಕು? ಅದನ್ನಾದ್ರೂ ಸರಿಯಾಗಿ ಹೇಳು.”

ಲಕ್ಷ್ಮಿ ಉತ್ತರ ಕೊಡಲು ಹಿಂದೆಗೆಯಲು ಸಿಂಗಪ್ಪಗೌಡರು “ಅವ್ವಾಗ ಬೇಕಲ್ಲವೇನೇ ?” ಎಂದರು.

ಅದನ್ನೇ ಹೇಳಬೇಕೆಂದಿದ್ದ ಲಕ್ಷ್ಮಿ “ಊಞ” ಎಂದಳು.

“ಹಾಗಾದರೆ ನಿನ್ನವ್ವ ನಿನಗೂ ನಿನ್ನಪ್ಪಯ್ಯಗೂ ಇಬ್ಬರಿಗೂ ಅವ್ವ?”

“ಹ್ಞೂ” ಎಂದಳು ಲಕ್ಷ್ಮಿ. ಎಲ್ಲರೂ ನಕ್ಕರು.

ಲಕ್ಷ್ಮಿ ಹೇಗಾದರೂ ಮಾಡಿ ಸಿಂಗಪ್ಪಗೌಡರ ಮನಸ್ಸನ್ನು ಬೇರೆಯ ಕಡೆಗೆ ತಿರುಗಿಸಬೇಕೆಂದು ಮನಸ್ಸುಮಾಡಿ, ಅವರು ಹೊದ್ದುಕೊಂಡಿದ್ದ ಶಾಲನ್ನು ಹಿಡಿದು ” ಇದು ಅಪ್ಪಯ್ಯನ ಶಾಲೂ!” ಎಂದು ರಾಗ ಎಳೆದಳು.

“ಒಳ್ಳೆಹುಡುಗಿ ನೀನು? ನಾನಿವತ್ತು ತೀರ್ಥಹಳ್ಳಿಯಿಂದ ತಂದೀನಿ”

“ಹ್ಞೂ, ನಂಗೊತ್ತು. ಇದಪ್ಪಯ್ಯನ ಶಾಲು!”

“ಅದು ಹ್ಯಾಗೆ ಗೊತ್ತು? ಏನು ಹೆಸರು ಬರೆದಿದೆಯೇನು?”

ಲಕ್ಷ್ಮಿ ಶಾಲನ್ನು ತನ್ನ ಮೂಗಿನ ಹತ್ತಿರಕ್ಕೆ ಹಿಡಿದುಕೊಂಡು” ಅಪ್ಪಯ್ಯನ ವಾಸನೆ ಇದೆ, ನೋಡಿ!” ಎಂದಳು.

ಎಲ್ಲರೂ ಗೊಳ್ಳೆಂದು ನಗತೊಡಗಿದರು. ಲಕ್ಷ್ಮಿ ಮೊದಲು ಅಪ್ರತಿಭಳಾದರೂ ಕಡೆಗೆ ತಾನೂ ಗಹಗಹಿಸಿ ನಕ್ಕಳು.

ಚಿನ್ನಯ್ಯನು ಒಳಗಿನಿಂದ ಬಂದು ರಾಮಯ್ಯನನ್ನು ಕರೆದನು. ಇಬ್ಬರೂ ಹೂವಯ್ಯ ಮಲಗಿದ್ದ ಕೊಟ್ಟಡಿಗೆ ಹೋದರು. ಜಗಲಿಯಲ್ಲಿ ಗದ್ದಲವೆಂದು ಅವನನ್ನು ಸಾಯಂಕಾಲ ಒಳಗೆ, ಸೀತೆಯ ಅಲಂಕಾರದ ಕೊಟ್ಟಡಿಗೆ ಸಾಗಿಸಿದ್ದರು. ಸೀತೆಯೂ ಬಹಳ ಸಂಭ್ರಮದಿಂದ ಶುಶ್ರೂಷೆಗೆ ಸಹಾಯಕಳಾಗಿದ್ದಳು.

ಚಿನ್ನಯ್ಯ ರಾಮಯ್ಯರಿಬ್ಬರೂ ಸೇರಿ ಹೂವಯ್ಯನ ಬೆನ್ನಿಗೆ ಬಿಸಿ ಬೀರಿನ ಶಾಖ ಕೊಟ್ಟರು. ಮದ್ದಿನೆಣ್ಣೆಯನ್ನೂ ಚೆನ್ನಾಗಿ ನೀವಿ ಬಳಿದರು. ಮಧ್ಯೆ ಮಧ್ಯೆ ಹೂವಯ್ಯನು ನೋವಿನಿಂದ ” ಅಯ್ಯೋ” ಎನ್ನುತ್ತಿದ್ದನು. ಸಮೀಪದಲ್ಲಿ ನಿಂತಿದ್ದ ಸೀತೆಗಂತೂ ನೋವು ಅವರಿಗೆ ನೋವು ಮಾಡುತ್ತಾರೆ? ನಾನಾಗಿದ್ದರೆ ನೋವಾಗದಂತೆ ಎಣ್ಣೆ ಉಜ್ಜುತ್ತಿದ್ದೆ” ಎಂದುಕೊಳ್ಳುತ್ತಿದ್ದಳು. ನಡುನಡುವೆ ಪಿಸುಮಾತಿನಲ್ಲಿ ತನ್ನಣ್ಣಗೆ ಏನೇನೊ ಸಲಹೆ ಕೊಡುತ್ತಿದ್ದಳು. ಅವನೂ ಮುಗುಳ್ನಗೆ ನಗುತ್ತ ಅವಳು ಹೇಳಿದಂತೆ ಮಾಡುತ್ತಿದ್ದನು. ಸೀತೆ ಪದೇ ಪದೇ ಸಲಹೆ ಕೊಡಲು ಅವನಿಗೆ ಬೇಜಾರಾಗಿ ಒಂದು ಸಾರಿ ” ಸಾಕು, ಸುಮ್ಮನಿರೇ ನೀನು ಮಹಾವೈದ್ಯಗಿತ್ತಿ!” ಎಂದುಬಿಟ್ಟನು. ಆಕೆಗೆ ಮುಖಭಂಗವಾದಂತಾಗಿ ಖಿನ್ನತೆ ನಿಂತಳು. ರಾಮಯ್ಯನೂ ತಿರುಗಿ, ಅವಳನ್ನು ನೋಡಿದನು. ಅವಳು ನಾಚಿಕೆಯಿಂದ ತಲೆಬಾಗಿದಳು. ಬಹಳ ದಿನಗಳ ಮೇಲೆ ಅವಳ ಚೆಲುವನ್ನು ನೋಡಿದ ರಾಮಯ್ಯನ ಮನದಲ್ಲಿ ಏನೋ ಒಂದು ತೆರನಾದ ಕಳವಳವಾದಂತಾಗಿ, ಮತ್ತೆ ಹೂವಯ್ಯನ ಕಡೆ ತಿರುಗಿ ತನ್ನ ಕಾರ್ಯದಲ್ಲಿ ತೊಡಗಿದನು. ಅವನ ಹೃದಯದಲ್ಲಿ ದೂರದಾಸಯೊಂದು ಅಂಕುರಿಸದಿರಲಿಲ್ಲ.

ಶುಶ್ರೂಷೆಯ ಕಾರ್ಯ ಮುಗಿದಮೇಲೆ ಅವರೆಲ್ಲರೂ ಸೇರಿ ಸ್ವಲ್ಪ ಹೊತ್ತು ಮಾತಾಡುತ್ತಿದ್ದರು. ಚಿನ್ನಯ್ಯನು ಗಾಡಿ ಉರುಳಿದಾಗ ಬೈಲುಕೆರೆಗೆ ತಾನು ಹೇಗೆ ಬಂದನೆಂಬುದನ್ನು ತಿಳಿಸಿದನು. ನಡುನಡುವೆ ವಿನೋದವೂ ಸಾಗುತ್ತತ್ತು. ಗೌರಮ್ಮವನರು ಬಂದು ಹೂವಯ್ಯನನ್ನು ನೋವಿನ ವಿಚಾರವಾಗಿ ಮಾತಾಡಿಸಿ, ತರುವಾಯ ಸೀತೆಯ ಕಿವಿಯಲ್ಲಿ ಏನನ್ನೋ ಉಸುರಿದರು. ತಾಯಿ ಮಗಳಿಬ್ಬರೂ ಹೊರಟುಹೋಗಿ, ತುಸು ಹೊತ್ತಿನಲ್ಲಿಯೆ ಹೂವಯ್ಯನ ಭೋಜನಕ್ಕೆ ಸಲಕರಣೆಗಳನ್ನು ಸಿದ್ದಮಾಡಿಕೊಂಡು ಬಂದರು. ಜೊತೆಯಲ್ಲಿ ಕಾಳನೂ ಕೆಲವು ಪಾತ್ರೆಗಳಲ್ಲಿ ಊಟದ ಪದಾರ್ಥಗಳನ್ನು ಇಟ್ಟಕೊಂಡು ಕಿಂಕರನಾಗಿ ಬಂದಿದ್ದನು. ಅಷ್ಟರಲ್ಲಿ ಸಿಂಗಪ್ಪಗೌಡರು ತಮ್ಮ ನೆಚ್ಚಿನ ಕಾವ್ಯವಾಗಿದ್ದ ಜೈಮಿನಿ ಭಾರತವನ್ನು ಓದಲು ಪ್ರಾರಂಭಿಸಿದ್ದುದು ಕೇಳಿಬಂದು, ಚಿನ್ನಯ್ಯ ರಾಮಯ್ಯರಿಬ್ಬರೂ ಹೂವಯ್ಯನ ಅಪ್ಪಣೆ ಪಡೆದು ಜಗಲಿಗೆ ಹೋದರು. ಗೌರಮ್ಮವನರು ಸೀತೆಯ ಸಹಾಯದಿಂದ ಹೂವಯ್ಯನನ್ನು ದಿಂಬಿಗೆ ಒರಗಿ ಕೂರುವಂತೆ ಮಾಡಿ, ಒಂದು ಕಾಲುಮಣೆಯ ಮೇಲೆ ಹಿತ್ತಾಳೆಯ ತಟ್ಟೆಯಮೇಲಿಟ್ಟ ಬಾಳೆಯ ಎಲೆಯಲ್ಲಿ ಊಟವನ್ನು ಬಡಿಸಿದರು. ಹೂವಯ್ಯ ಅತ್ತೆಯವರೊಡನೆ ಮಾತಾಡುತ್ತ. ಆಗಾಗ ಸೀತೆಯ ನಗುಮುಖವನ್ನು ನಗುಮುಖನಾಗಿ ನೋಡುತ್ತ ಉಣತೊಡಗಿದನು. ಅವರಿಬ್ಬರ ದೃಷ್ಟಿಸಂಗಮದ ಕ್ಷೇತ್ರಕ್ಕೆ ಪ್ರೇಮದೊಡನೆ ಸಂಕೋಚವೂ ಯಾತ್ರೆ ಬಂದಿತ್ತು.

ಇತ್ತ ಜಗಲಿಯ ಮೇಲೆ ಲಕ್ಷ್ಮಿ ತುಸುಹೊತ್ತಿನಲ್ಲಿಯೆ ಭಾರತವನ್ನು ಕೇಳಿ ಸಾಕಾಗಿ ಕಿರುಕುಳ ಕೊಡಲಾರಂಭಿಸಿದಳು. ಶ್ಯಾಮಯ್ಯಗೌಡರು ಕಾಳನನ್ನು ಕೂಗಿ ಕರೆದು, ಅವಳನ್ನು ಒಳಗೊಯ್ಯುವಂತೆ ಹೇಳಿದರು. ಅವಳು ಹೋಗುವುದಿಲ್ಲವೆಂದು ರಂಪಮಾಡಿದಳು. ಆದರೆ ಕಾಳನು ಅಳುತ್ತ ಪ್ರತಿಭಟಿಸುತ್ತಿದ್ದ ಅವಳನ್ನು ಬಲಾತ್ಕಾರದಿಂದಲೆ ಎತ್ತಿಕೊಂಡು ಗೌರಮ್ಮನ ಬಳಿಗೆ ತಂದನು. ಸೀತೆ ತಂಗಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದಳು. ಹೂವಯ್ಯನೂ ಒಂದೆರಡು ಲಲ್ಲೆಯ ಮಾತು ನುಡಿದನು. ಆದರೆ ಲಕ್ಷ್ಮಿ ಅಳುವನ್ನು ನಿಲ್ಲಿಸಲಿಲ್ಲ. ಕಡೆಗೆ ಗೌರಮ್ಮನವರು ನಸುಮುನಿದು ಲಕ್ಷ್ಮಿಯನ್ನೆತ್ತಿಕೊಂಡು ಅಡುಗೆಯ ಮನೆಗೆ ಹೋದರು. ಸೀತೆ ಕಾಳನನ್ನು ಕುರಿತು ಮೆಲ್ಲಗೆ ” ನಾನಿಲ್ಲಿ ನೋಡಿಕೊಳ್ಳೇನೋ, ನೀನು ಹೋಗು; ಬಳ್ಳೇ ಹಾಕೋಕೆ ಹೊತ್ತಾಯ್ತು. ಬೇಕಾದರೆ ಕರೀತೀನಿ” ಎಂದಳು. ಕಾಳನೂ ಕೆಲವು ಪಾತ್ರೆಗಳನ್ನೆತ್ತಿಕೊಂಡು ಅಡುಗೆಯ ಮನೆಗೆ ಹೋದನು.

ಅಡುಗೆಯ ಮನೆಯಲ್ಲಿ ಲಕ್ಷ್ಮಿ ಇನ್ನೂ ಅಳುತ್ತಲೇ ಇದ್ದಳು. ಗೌರಮ್ಮನವರು ಹೋಳಿಗೆ ಕೊಟ್ಟು ಮಗಳನ್ನು ಸಂತೈಸಲು ಪ್ರಯತ್ನಿಸುತ್ತಿದ್ದರು. ಲಕ್ಷ್ಮಿ ಹೋಳಿಗೆಯನ್ನು ದೂರ ನೂಕಿ ಚೆಲ್ಲಾಡಿದಳು. ತಾಯಿಗೆ ಸಿಟ್ಟುಬಂದು ಒಂದು  ಗುದ್ದು ಗುದ್ದಿದರು. ಮಗಳು ಗಟ್ಟಿಯಾಗಿ ರೋದಿಸುತ್ತ ದೂರ ಹೋಗಿ ಒಂದು ಕಂಬದ ಮೂಲೆಯಲ್ಲಿ ಮುದ್ದೆಯಾಗಿ ಕೂತಳು. ತಾಯಿ ಮನಸ್ಸು ಕರಗಿ ಮುದ್ದು ಮಾತಿನಿಂದ ಅವಳನ್ನು  ಎಷ್ಟೆಷ್ಟು ಬಗೆಯಾಗಿ ಕರೆದರೂ ಅವಳು ಬರಲೂ ಇಲ್ಲ. ಅಳುವನ್ನು ಕಡಮೆಮಾಡಲೂ ಇಲ್ಲ. ಗೌರಮ್ಮ ಕಾಳನೊಡನೆ ಗಂಡಸರಿತೆ ಎಲೆ ಹಾಕುವ ಕಾರ್ಯದಲ್ಲಿ ತೊಡಗಿದರು. ಲಕ್ಷ್ಮಿಗೆ ಅತ್ತು ಅತ್ತು ಬೇಸರವಾಗಿ ಸುಮ್ಮನಾದಳು. ಮತ್ತೆ ತಾಯಿ ಕರೆಯಲು ಎಂದು ಹಾರೈಸಿದಳು. ಆದರೆ ತಾಯಿ ಕರೆಯಲಿಲ್ಲ. ಅಭಿಮಾನಭಂಗವಾಇ ಮತ್ತೆ ಅತ್ತಳು. ಆ ರೋದನದಲ್ಲಿ ಧ್ವನಿ ಮಾತ್ರವಿದ್ದೀತೆ ಹೊರತು  ಶೋಕಭಾವವಿನಿತೂ ಇರಲಿಲ್ಲ. ಬಹಳ ಹೊತ್ತಾದರೂ ತಾಯಿ ಕರೆಯದಿರಲು ಅವಳು ಧ್ವನಿಯಿಂದ ಮಾತ್ರವೇ ರೋದಿಸುತ್ತಾ” ಮತ್ತೆ ಕರೆದರೆ ಬರ್ತ್ತೀನಿ! ಮತ್ತೆ ಕರೆದರೆ ಬರ್ತ್ತೀನಿ!” ಎಂದು ಸೂಚನೆ ಕೊಡತೊಡಗಿದಳು. ತಾಯಿ ಕರೆಯದೆ ತಾನು ಹೋಗುವುದು ಅವಮಾನಕರವೆಂದು ಭಾವಿಸಿದಳೇ ಹೊರತು ” ಮತ್ತೆ ಕರೆದರೆ ಬರ್ತ್ತೀನಿ!” ಗೋಗರೆಯುವುದು ಮತ್ತೂ ಹೆಚ್ಚಿನ ನಾಚಿಕೇಡೆಂದು ಅವಳಿಗೆ ಗೊತ್ತಾಗುವಂತಿರಲಿಲ್ಲ. ಗೌರಮ್ಮನವರು ಮನಸ್ಸಿನಲ್ಲಿ ಮುಗುಳುನಗೆ ನಗುತ್ತ ಮಗಳನ್ನು ಎತ್ತಿಕೊಂಡು ಮುದ್ದಿಟ್ಟು, ಹೋಳಿಗೆಯನ್ನು ನೈವೇದ್ಯ ಮಾಡಿದರು. ಕಾಳನಿಗೆ ಮಾತ್ರ ನಗುವನ್ನು ತಡೆಯಲಾಗಲಿಲ್ಲ. ಗೌರಮ್ಮವನರು, ಮತ್ತೆ ಎಲ್ಲಿ ಮಗಳಿಗೆ ಮುಖಭಂಗವಾಗಿ ರಂಪಮಾಡುತ್ತಾಳೆಯೋ ಎಂದು ಶಂಕಿಸಿ ಕಾಳನಿಗೆ ಕಣ್ಣುಸನ್ನೆಮಾಡಿ, ಅವನನ್ನು ಚೆನ್ನಾಗಿ ಬೈಯುವಂತೆ ನಟಿಸಿದರು. ಲಕ್ಷ್ಮಿಗೆ ತೃಪ್ತಿಯಾಗಿ, ಹೋಳಿಗೆಯನ್ನು ತನ್ಮಯತೆಯಿಂದ ತಿನ್ನಲಾರಂಭಿಸಿದಳು.

ಹಿಂದಿದ್ದ ಸಲಿಗೆಯಿಂದ ಹೂವಯ್ಯನೊಡನೆ ಮಾತಾಡಲು ಅನುಕೂಲವಾಗುತ್ತದೆ ಎಂಬ ಅಭಿಸಂಧಿಯಿಂದ ಸೀತೆ ಕಾಳನನ್ನು ಉಪಾಯಮಾಡಿ ಕೊಟ್ಟಡಿಯಿಂದಾಚೆ ಕಳುಹಿಸಿದ್ದಳು. ಆದರೆ. ಕಾಳನು ಹೊರಟುಹೋದ ಮೇಲೆ, ಆಕೆಯ ಹೃದಯದಲ್ಲಿ ಕಳವಳಕ್ಕಾರಂಭವಾಯಿತು. ಮನಸ್ಸಿನಲ್ಲಿ ತಾನು ಹಿಂದೆ ಎಂದೂ ಅನುಭವಿಸಿ ಅರಿಯದ ಲಜ್ಜೆ ಮಾಡಿತು. ಕಾಲಗತಿ ತನ್ನ ಜೀವನದಲ್ಲಿ ಒಂದು ನೂತನತೆಯನ್ನು ತಂದುಬಿಟ್ಟಿದೆ ಎಂದು ಆಕೆಗೆ ಆ ಮೊದಲು ಗೊತ್ತಾಗಿರಲಿಲ್ಲ. ಹೂವಯ್ಯನೊಡನೆ ಹಿಂದೆ ಎಷ್ಟು ನೇರವಾಗಿ ಧೀರವಾಗಿ ವರ್ತಿಸಿದ್ದಳು! ಆದರೆ ಇಂದು ಆಕೆಗೆ ಹಾಗೆ ವರ್ತಿಸುವುದಂತೂ ಇರಲಿ, ಮಾತಾಡಲೂ ಕೂಡ ಸಾಧ್ಯವಾಗದಷ್ಟು ಸಂಕೋಚವಾಯಿತು. ಮಾತಾಡಬೇಕೆಂದು ಎದೆ ಹಾತೊರೆಯುತ್ತಿತ್ತು. ಎರಡು ಮೂರು ಸಾರಿ ಪ್ರಯತ್ನಿಸಿದಳು. ಪ್ರಯತ್ನವು ಉದ್ವೇಗಜನ್ಯವಾದ ಮೌನದಲ್ಲಿ ಕೊನೆಗೊಂಡಿತು. ಆಕೆಯ ಮುಖ ನಸುಗೆಂಪೇರಿ ಬೆವರಿದಂತಾಯಿತು. ಊಟ ಮಾಡುತ್ತಿದ್ದ ಹೂವಯ್ಯನನ್ನು ನೋಡಿದಳು. ಹಿಂದಿದ್ದ ಬಾವನಾಗಿ ಕಾಣಲಿಲ್ಲ. ಸೌಂದರ್ಯ ಪೌರುಷಗಳು ಮೊದಲಿದ್ದುದಕ್ಕಿಂತಲೂ ಅತಿಶಯವಾಗಿ ತೋರಿ, ಆತನು ಅಲೌಕಿಕವಾಗಿದ್ದಂತೆ ತೋರಿತು. ಸೀತೆಗೆ ಆತನಲ್ಲಿ ಅನುರಾಗ ಮೊದಲಿಗಿಂತಲೂ ಹೆಚ್ಚಿತು. ಆದರೆ ಅನುರಾಗದೊಂದಿಗೆ ಭಯಮಿಶ್ರಿತ ಗೌರವವೂ ಸೇರಿ. ಆಕೆ ಹಿಂದಣ ಸಲಿಗೆಯಿಂದ ಮಾತಾಡಿಸಲಾರದೆ ಹೋದಳು. ಹೂವಯ್ಯ ಬೆನ್ನುನೋವಿನಿಂದ ಶುಶ್ರೂಷಾರ್ಹನಾಗಿರದಿದ್ದ ಪಕ್ಷದಲ್ಲಿ ಸೀತೆ ಅಲ್ಲಿ ಅವನೊಡನೆ ಒಬ್ಬಳೇ ಇರಲಾರದೆ ಹೊರಟುಹೋಗುತ್ತಿದ್ದಳೋ ಏನೋ! ಆದರೆ ಈಗ ಊಟಮಾಡುತ್ತಿದ್ದ ರೋಗಿಯನ್ನು ಬಿಟ್ಟುಹೋಗುವುದು ಆಕೆಗೆ ಉಚಿತವಾಗಿ ತೋರದೆ ಸುಮ್ಮನೆ ನಿಂತಳು. ಅದೂ ಅಲ್ಲದೆ ಆ ಉದ್ವೇಗ ಅಥವಾ ಉತ್ಕಂಠತೆಯಲ್ಲಿಯೂ ಕೂಡ ಆಕೆಗೆ ಹರ್ಷವಾಗದಿರಲಿಲ್ಲ. ಒಂದು ಸಾರಿ ಕಾಳನನ್ನು ಕರೆಯಬೇಕೆಂದು ಎಣಿಸಿದವಳು ಮತ್ತೆ ಸುಮ್ಮನಾದಳು. ಸಂಕೋಚ ಸನ್ನಿವೇಶ ಹೇಗೋ ಪರಿಹಾರವಾಗಿ, ತನ್ನಿಷ್ಟ ಕೈಗೂಡುವುದೆಂದು ಆಕೆಗೊಂದು ದೂರದಾಸೆಯೂ ಇತ್ತು. ತಾನೇ ಮೊದಲು ಬಾವನೊಡನೆ ಮಾತನಾಡಲಾಗದಿದ್ದರೂ ಬಾವನವರಾದರೂ ಮಾತು ಪ್ರಾರಂಭಿಸಿದರೆ ಆಗ ವಿಧಿಯಿಲ್ಲದೆ ಮಾತಾಡಬೇಕಾಗುತ್ತದೆ ಎಂದು ಅವಳು ಹಾರೈಸಿದಳು. ಜಗಲಿಯಿಂದ ಭಾರತಪಠನ ಮಾಡುತ್ತಿದ್ದ ಸಿಂಗಪ್ಪಗೌಡರ ರಾಗದ ಧ್ವನಿಯನ್ನು ಆಲೈಸುವಳೋ ಎಂಬಂತೆ ಗೋಡೆಗೆ ಒರಗಿಕೊಂಡು ಸ್ವಲ್ಪ ದೂರವಾಗಿ ನಿಂತಿದ್ದಳು.

ಹೂವಯ್ಯ ಊಟಮಾಡುತ್ತಿದ್ದರೂ ಅವನ ದೃಷ್ಟಿ ಸರ್ವವ್ಯಾಪಿಯಾಗಿತ್ತು. ಸೀತೆ ಕಾಳನನ್ನು ಹೊರಗೆ ಕಳುಹಿಸಿದುದು ಅವನಿಗೂ ಅರ್ಥಗರ್ಭಿತವಾಗಿಯೆ ತೋರಿತು. ಅವನಿಗೂ ಸೀತೆಯೊಡನೆ ಮಾತಾಡಬೇಕೆಂಬ ಆಕಾಂಕ್ಷೆಯಿತ್ತು. ಆದರೆ ಆ ಆಕಾಂಕ್ಷೆ ಉತ್ಕಂಠಿತವಾಗಿರಲಿಲ್ಲ. ಬಾಲ್ಯದಿಂದಲೂ ತನ್ನೊಡನೆ ಒಡನಾಡಿದವಳಲ್ಲಿ ಮಾತಾಡಲು ಸಂಕೋಚವೇನು? ಉತ್ಕಂಠಿತೆಯೇನು? ಹೀಗೆಂದು ಅವನು ಯೋಚಿಸಿದುದು. ಆಮೇಲೆ ಸುಳ್ಳಾಗಿ ತೋರಿತು. ಏಕೆಂದರೆ, ಅವನೂ ಸೀತೆಯಂತೆ ಮಾತಾಡದೆ ಸುಮ್ಮನಾದನು. ಕೊಠಡಿಯಲ್ಲಿ ಇತರರಿದ್ದಾಗ ಅವಳನ್ನು ಋಜುವಾಗಿ ನೋಡುತ್ತಿದ್ದವನಿಗೆ, ಈಗ ಕತ್ತೆತ್ತಿ ನೋಡುವುದಕ್ಕೂ ಸ್ವಲ್ಪ ಸಂಕೋಚವಾಯಿತು. ಕಾಲಗತಿ ಅವನಲ್ಲಿಯೂ ಬದಲಾವಣೆ ಮಾಡಿತ್ತು.

ಒಮ್ಮೆ ಅವಳನ್ನು ಮಾತಾಡಿಸಲು ತಲೆಯೆತ್ತಿದವನು ಗೋಡೆಯ ಕಡೆ ನೋಡತೊಡಗಿದನು. ಹಿತ್ತಾಳೆಯ ದೀಪದ ಕಂಬದ ಮೇಲೆ ಸಾಧಾರಣ ಪ್ರಕಾಶಮಾನವಾಗಿ ಉರಿಯುತ್ತಿದ್ದ ಹಣತೆಯ ಸೊಡರಿನ ಬೆಳಕಿನಲ್ಲ, ಬಿಳಿಯಗೋಡೆಯ ಮೇಲೆ, ಹಲ್ಲಿಯೊಂದು ಸಣ್ಣಪುಟ್ಟ ಹುಳುಗಳನ್ನು ಷಿಕಾರಿಮಾಡಲು ಹೊಂಚುಹಾಕಿ ಕುಳಿತಿತ್ತು. ಅದರ ನುಣ್ಣನೆಯ ಕಂದುಬಣ್ಣದ ಮೈ ನಿಶ್ಚಲವಾಗಿತ್ತು. ಬಾಲ ಮಾತ್ರ ಆಗಾಗ ಅತ್ತಇತ್ತ ಕೊಂಕಿ ಬಳುಕುತ್ತಿತ್ತು. ಅಂತಹ ಸಮಯಗಳಲ್ಲಿ ಬಾಲದ ನೆರಳು ಗೋಡೆಯ ಮೇಲೆ ಕರ್ರಗೆ ಸಣ್ಣಗೆ ಮೊನಚಾಗಿ ಕುಣಿದಾಡುತ್ತಿತ್ತು. ಅದರ ಕಣ್ಣುಗಳೆರಡು ಬಹು ಸಣ್ಣ ಕರಿಮಣಿಗಳಂತೆ ದೀಪದ ಬೆಳಕಿನಲ್ಲಿ ಮುದ್ದಾಗಿ ಮಿರುಗುತ್ತಿದ್ದುವು. ಹೂವಯ್ಯ ನೋಡುತ್ತಿದ್ದ ಹಾಗೆ ಹಲ್ಲಿ ಸರಸರನೆ ಮುಂಬರಿಯಿತು. ಸಣ್ಣ ಹುಳುವೊಂದು ಅದರ ಗುರಿಯಾಗಿತ್ತು. ಹುಳುವಿನ ಬಳಿ ಸೇರಿ ನಿಂತು ಗುರಿ ನೋಡಿ ಎರಗಿತು. ಹುಳು ಅದರ ಬಾಯಲ್ಲಿ ಕಣ್ಮರೆಯಾಯಿತು. ಅದನ್ನೆಲ್ಲ ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದ ಹೂವಯ್ಯನ ಕಣ್ಣಿಗೆ ಇನ್ನೇನೂ ಕಾಣಿಸಿತು. ಹಲ್ಲಿ ಕೂತಿದ್ದ ಜಾಗದಲ್ಲಿಯೆ ಸೀಸಕಡ್ಡಿಯಿಂದ ಏನನ್ನೋ ಸಣ್ಣಗೆ ಬರೆದಂತಿತ್ತು. ಬರವಣಿಗೆಯ ಅರ್ಧ ಭಾಗವನ್ನು ಹಲ್ಲಿಯ ದೇಹ ಮುಚ್ಚಿಬಿಟ್ಟಿತ್ತು. ಅದನ್ನು ಓದುವ ಕುತೂಹಲದಿಂದ ಹೂವಯ್ಯ ಸ್ವಲ್ಪ ತಲೆಬಾಗಿ ಮುಂದುವರಿಯಲು ಹಲ್ಲಿ ಹೆದರಿ ಓಡಿತು. ಅದನ್ನೋದಿದ ಕೂಡಲೆ ಅವನ ಮುಖಕ್ಕೆ ನೆತ್ತರೇರಿದಂತಾಯಿತು. ” ಹೂವಯ್ಯ ಬಾವನನ್ನೇ ಮದುವೆಯಾಗುತ್ತೇನೆ” ಎಂದಿದ್ದ ಆ ಲಿಪಿಗೆ ಸೀತೆಯ ಕರ್ತಳೆಂಬುದೇನೊ ಅಕ್ಷರದಿಂದ ಅವನಿಗೆ ಗೊತ್ತಾಯಿತು. ದೂರದಲ್ಲಿ ನಿಂತು ನೋಡುತ್ತಿದ್ದ ಸೀತೆಗೆ ಮಾತ್ರ ಇದೆಲ್ಲ ತಿಳಿಯಲಿಲ್ಲ ಎಂದೋ ತಾನು ಬರೆದಿದ್ದುದು ಆಕೆಗೆ ಅಂದು ಮರೆತುಹೋಗಿತ್ತು. ಅಲ್ಲದೆ ಬಾವ ಹಲ್ಲಿಯನ್ನೇ ನೋಡುತ್ತಿದ್ದಾರೆಂದು ಭಾವಿಸಿದಳು.

ಹೂವಯ್ಯನಿಗಿದ್ದ ಸಂದೇಹ ಸಂಕೋಚಗಳು ತೊಲಗಿಹೋಗಿ ಅವನ ಆಸೆಗೊಂದು ಊರೆಗೋಲು ಸಿಕ್ಕಂತಾಯಿತು. ಭಾವಗೋಪನಮಾಡಿ, ಮತ್ತೆ ಎರಡು ತುತ್ತು ಉಂಡು, ಸೀತೆಯ ಕಡೆ ನೋಡಿದನು. ಹಣತೆಯ ಮಂದ ಕಾಂತಿಯಲ್ಲಿ ಅವಳು ಸ್ವಪ್ನಸುಂದರಿಯಂತೆ ನಿಂತಿದ್ದಳು. ಆ ಅಸ್ಪಷ್ಟತೆಯೆ ಅವಳ ಸೌಂದರ್ಯವನ್ನು ದ್ವಿಗುಣಿತ ಮೋಹಕವಾಗಿ ಮಾಡಿತ್ತು. ವಸಂತ ಕಾಲದ ಸಂಧ್ಯಾನಿಶೆಯಲ್ಲಿ ಮರುದಿನ ಅರಳಲಿರುವ ಗುಲಾಬಿಯ ಮುದ್ದು ಮೊಗ್ಗಿನಂತೆ! ಅದರಲ್ಲಿಯೂ ಹಲ್ಲಿಯ ಕೃಪೆಯಿಂದ ಗೋಡೆಯ ಮೇಲೆ ಅವನೋದಿದ ಲಿಪಿ, ಹೃದಯದಲ್ಲಿ ಅದುವರೆಗೂ ಗುಪ್ತವಾಗಿ ಅಸ್ಪಷ್ಟವಾಗಿ ಸುಪ್ತಾವಸ್ಥೆಯಲ್ಲಿದ್ದ ಆಸೆಯೊಂದನ್ನು ವ್ಯಕ್ತ ಸ್ಪಷ್ಟವನ್ನಾಗಿ ಮಡಿದ್ದುದರಿಂದ,ಹೂವಯ್ಯನ ಕಣ್ಣಿಗೆ ಸೀತೆ ಕಾಮನಬಿಲ್ಲಿನಂತೆ ಪ್ರೇಮ ಸೌಂದರ್ಯಗಳ ಸುಮಧುರ ಮೂರ್ತಿಯಾಗಿ ಕಾಣಿಸಿಕೊಂಡಳು. ಅವನ ಕಣ್ಣಿಗೊಂದು ಹೊಸ ಬೆಳಕು ಬಂದಿತ್ತು. ಅವನ ಎದೆಯಲ್ಲಿ ಒಂದು ಹೊಸ ಆಸೆ ಪ್ರಬಲವಾಗಿ ಮೂಡಿತ್ತು. ಗೋಡೆಯ ಲಿಪಿಯನ್ನು ಓದುವ ಮೊದಲಿಗಿದ್ದ ಔದಾಸೀನ್ಯಪ್ರಾಯವಾದ ಭಾವ ಮಾದುಹೋಗಿ ಉತ್ಕಂಠಿತೆ ತಲೆದೋರಿತ್ತು. ಹೂವಯ್ಯ ತನ್ನ ಅಂತಃಕರಣದ ನಿಗೂಢಗಹ್ವರದಲ್ಲಿ. ತನಗೆ ತಾನೆ ತಿಳಿಯದಂತೆ ಸೀತೆ ಯಾವುದೋ ಒಂದು ಅಭೇದ್ಯವಾದ ಬಾದ್ಯತೆಯಿಂದ ತನ್ನವಳಾಗಿದ್ದಂತೆ ಭಾವಿಸಿದನು. ಅವನಿಗೆ ಗೋಡೆಯ ಬರವಣಿಗೆ ಸೀತೆಯದು ಎನ್ನುವುದಕ್ಕಿಂತಲೂ ವಿಧಿಯ ಲಲಾಟ ಲಿಖಿತವೆಂಬಂತೆ ಭಾಸವಾಯಿತು. ಅವನ ಭಾಗಕ್ಕೆ ” ಹೂವಯ್ಯ ಬಾವವನ್ನೇ ಮದುವೆಯಾಗುತ್ತೇನೆ” ಎಂಬ ಬರೆಹ ಒಂದು ಮಹಾರಹಸ್ಯವೂ ಶಕ್ತಿಪೂರ್ಣವೂ ಆದ ಪ್ರೇಮಮಂತ್ರವಾಗಿ ಪರಿಣಮಿಸಿತ್ತು.  ಅವನ ಕಣ್ಣು ಮತ್ತೆ ಮತ್ತೆ ಗೋಡೆಯ ಕಡೆಗೆ ಹೋಗುತ್ತಿತ್ತು. ಗೋಡೆಯ ಲಿಪಿಯೂ ಸೀತೆಯಷ್ಟೇ ಸಮ್ಮೋಹಕವಾಗಿತ್ತು. ಸ್ವಲ್ಪಹೊತ್ತಿಗೆ ಮುಂಚೆ ಕೇವಲ ಜಡಮಾತ್ರವಾಗಿದ್ದ ಆ ಗೋಡೆ ಈಗ ಘನಚೈತನ್ಯವಾಗಿತ್ತು. ಮೊದಲು ಪ್ರಾಣಿ ಮಾತ್ರವಾಗಿದ್ದ ಆ ಹಲ್ಲಿ ಈಗ ಒಂದು ಮಹಾ ಶುಭಶಕುನದಂತೆ ಪವಿತ್ರವಾಗಿತ್ತು. ಆಶಾಸೂಚಕವಾಗಿತ್ತು. ಪ್ರೀತಿಪಾತ್ರವಾಗಿತ್ತು. ತತ್ಕಾಲದಲ್ಲಿ ಅವನಿಗೆ ತನ್ನ ಬೆನ್ನಿನ ಯಾತನೆಯೂ ಕೂಡ ಮರೆತುಹೋಗಿತ್ತು.

“ಸೀತೆ ಸ್ವಲ್ಪ ನೀರು ಕೊಡು.”

ಹೂವಯ್ಯ ಪ್ರಯಾಸ ಉದ್ವೇಗ ಸಂಭ್ರಮಗಳಿಂದ ನೀರು ಕೇಳಿ, ತಮ್ಮಿಬ್ಬರ ನಡುವೆ ಇದ್ದ ಮೌನಪಾತಾಳಕ್ಕೊಂದು ಸೇತುವೆ ಬೀಸಿದನು. ಅಥವಾ ಅವರಿಬ್ಬರ ಪ್ರೇಮಪ್ರವಾಹಗಳಿಗೆ ಮಧ್ಯೆ ತಡೆಹಾಕಿ ನಿಂತಿದ್ದ ಅಣೆಕಟ್ಟಿನಲ್ಲಿ ಒಂದು  ಬಿರುಕು ಮಾಡಿದನು. ಒಂದು ನಿಮಿಷದ ಹಿಂದೆ ದುರ್ಭೇದ್ಯ ಭಯಂಕರವಾಗಿ ನಿಂತಿದ್ದ ಕಲ್ಲು ಸ್ವಲ್ಪ ಬಿರುಕು ಬಿಡುವುದೆ ತಡ, ಕೊಚ್ಚಿಕೊಚ್ಚಿ ತೇಲಿ ಹೋಯಿತು. ಅದು ಅಲ್ಲಿತ್ತು ಎಂಬುದಕ್ಕೆ ಕುರುಹು ಕೂಡ ಇಲ್ಲದಂತಾಯಿತು. ಕಟ್ಟೆ ದುರ್ಬಲವಾಗಿತ್ತು. ಎಂದಲ್ಲ ಪ್ರವಾಹಗಖ ಶಕ್ತಿ ವೇಗಗಳು ಅಷ್ಟು ಪ್ರಬಲವಾಗಿದ್ದುವು. ಅದನ್ನು ಕಂಡು ಸೀತೆ ಹೂವಯ್ಯರಿಬ್ಬರಿಗೂ ಆಶ್ಚರ್ಯವಾಯಿತು. ಆಗ ಅವರಿಗೆ ಅಂತರವಲೋಕನಶಕ್ತಿ

ಕಟ್ಟೆ ಬಿರುಕು ಬಿಡುವುದನ್ನೇ ಕಾಯುತ್ತಿದ್ದುವು. ಬಿರುಕು ಬಿಟ್ಟೊಡನೆಯೆ ಕೃತಕ ನಿರ್ಮಿತವಾಗಿದ್ದ ಸಂಕೋಚದ ಕಟ್ಟೆ ಕೊಚ್ಚಿಹೋಗಿ ಲಹರಿಗಳೊಂದಾದುವು. ಸೀತೆಯ ಸ್ಥತಿಯೂ ” ಮತ್ತೆ ಕರೆದರೆ ಬತ್ತೀನಿ”  ಎಂದು ಅಡುಗೆ ಮನೆಯಲ್ಲಿ ಗೋಗರೆಯುತ್ತಿದ್ದ ಲಕ್ಷ್ಮಿಯ ಸ್ಥಿತಿಯೇ ಆಗಿತ್ತು. ಬಾವನು ನೀರು ಕೇಳಿದೊಡನೆಯೆ ಹಿಂದಿದ್ದ ನಾಚಿಕೆ ಸಂಕೋಚಗಳನ್ನೆಲ್ಲ ವಿಸ್ಮೃತಿಯ ಅತಲ ಜಲದಲ್ಲಿ ಅದ್ದಿ ತೇಲಿಕೊಟ್ಟು, ಸಂಭ್ರಮಸಾದರಗಳಿಂದ ಹೂವಯ್ಯನ ಬಳಿಗೆ ಬಂದು, ಅತ್ಯಂತ ವಿನಯಪೂರ್ವಕವಾದ ಅವ್ಯಕ್ತ ಕೋಮಲ ಶೃಂಗಾರಭಾವದಿಂದ ಅವನ ಕಡೆ ನೋಡುತ್ತ ” ಕೈ ತೊಳೆಯೋಕೇನು” ಎಂದಳು.

“ಅಲ್ಲ, ಕುಡಿಯುವುದಕ್ಕೆ” ಎಂದು ಹೂವಯ್ಯ ಮುಗುಳುನಗೆ ಮೊಗನಾಗಿ ಆಕೆಯ ಸ್ನಿಗ್ಧ ಮಧುರ ಸಜಲ ನಯನಗಳನ್ನು ನಿಟ್ಟಿಸಿದನು. ಅವಳ ಕಣ್ಣು, ಕುರುಳು, ಕದಪು, ಕೆನ್ನೆ , ಕಿವಿ, ಕೊರಳು, ಕೈ ಒಂದೊಂದೂ ಅವನಿಗೆ ದೈವಿಕ ಪವಾಡವಾಗಿ ತೋರಿದುವು. ಅಂತೂ ಅವಳು ಹಿಂದಿನ ಸೀತೆ ಆಗಿರಲಿಲ್ಲ. ಹಿಂದೆ ಸಾಧಾರಣವಾಗಿದ್ದುದು ಒಲ್ಮೆಯ ಮೈಮೆಯಿಮದ ಇಂದು ಅಸಾಧಾರಣವಾಗಿತ್ತು.

“ನೀರು ಯಾಕೆ ಕುಡೀತೀರಿ? ಹಾಲಿದೆ!”

ಸೀತೆಯ ವಾಣಿ ಕಾಮಳ್ಳಿಯ ಕಂಠದಂತೆ ಮನಮೋಹಕವಾಗಿತ್ತು. ಅವಳು ಬಾವನ ಮಾರುತ್ತರಕ್ಕೆ ಕಾಯಲೇ ಇಲ್ಲ. ಪಕ್ಕದಲ್ಲಿದ್ದ ಒಂದು ಪಾತ್ರೆಯಿಂದ ಲೋಟಕ್ಕೆ ಬೆಳ್ಳಗಿದ್ದ ಬೆಚ್ಚನೆಯ ಹಾಲನ್ನು ಹೊಯ್ದು ಹೂವಯ್ಯನಿಗೆ ನೀಡಿದಳು. ತನ್ನ ಪ್ರೇಮಾಮೃತವನ್ನು ತನ್ನ ಇನಿಯನಿಗೆ ನೀಡುವಂತೆ, ಹೂವಯ್ಯನೂ ಕೈ ನೀಡಿ ಅದನ್ನು ಕೋಮಲವಾಗಿ ತೆಗೆದುಕೊಂಡು, ಹೊಟ್ಟೆ ತುಂಬಿದ್ದರೂ ಹೂವಿನ ಸೌಂದರ್ಯಕ್ಕಾಗಿಯೇ ಅದರ ಮಕರಂದ ಪಾನಮಾಡುವ  ದುಂಬಿಯಂತೆ ಕುಡಿಯತೊಡಗಿದನು. ಕುಡಿಯುತ್ತಿದ್ದರೂ ಮೊಗವೆತ್ತದೆ ಕಣ್ಣೆತ್ತಿ ಸೀತೆಯ ಕಡೆ ನೋಡಿದನು. ಅವಳೂ ಅವನನ್ನೇ ನೋಡುತ್ತಿದ್ದಳು. ಇಬ್ಬರ ಕಣ್ಣುಗಳೂ ಸಂಧಿಸಿ, ಬರೆಯಲಾದ ಹೇಳಲಾರದ ತಿಳಿಯಲಾರದ ಮಧುರ ಘಟನೆಗಳಾದುವು. ಒಲಿದೆರಡು ದೃಷ್ಟಿಗಳ ಸಂಗಮವು ತುಂಗೆ ಭದ್ರೆಯರ ಗಂಗೆಯಮನೆಯರ ಸಂಗಮಕ್ಕಿಂತಲೂ ಪವಿತ್ರವಾದುದು. ಗೂಢವಾದುದು. ಮಹತ್ತಾದುದು. ರಾತ್ರಿ ಮಲಗುವಾಗ ಹೂವಯ್ಯ, ತನ್ನ ಸಮೀಪದಲ್ಲಿ ಮಲಗಲು ಹವಣಿಸುತ್ತಿದ್ದ ಚಿನ್ನಯ್ಯನಿಗೆ ಕಾಣದಂತೆ, ಗೋಡೆಯ ಮೇಲಿದ್ದ ಸೀತೆಯ ಬರಹವನ್ನು ಕೈ ಬೆರಳಿನಿಂದ ಉಜ್ಜಿ ಅಳಿಸಿದನು. ಅವನ ದೃಷ್ಟಿ ಪದೇ ಪದೇ ಅತ್ತಕಡೆಗೇ ಹೋಗುತ್ತಿತ್ತು. ಇತರರು ಯಾರಾದರೂ ಅದನ್ನು ಕಂಡರೆ ಸೀತೆಗೆ ನಾಚಿಕೆಗೇಡಾಗುತ್ತದೆ ಎಂಬ ಆಶಂಕೆಯಿಂದ ಅವನು ಅದನ್ನು  ಉಜ್ಜಿಬಿಡಲು ಮನಸ್ಸು ಮಾಡಿದ್ದನು. ಆದರೆ ಮನಸ್ಸು ಕೂಡಲೆ ಒಡಂಬಡಲಿಲ್ಲ. ತನಗೆ ಅತ್ಯಂತ ಪ್ರಿಯವೂ ಆಶಾಸೂಚಕವು ಆದುದನ್ನು ಯಾರು ಒಮ್ಮನಸ್ಸಿನಿಂದ ಹಾಳುಮಾಡಿಯಾರು? ಅದನ್ನು ಮತ್ತೆ ಮತ್ತೆ ನೋಡಿ ಓದಬೇಕೆಂದು ಅವನಿಗೆ ಮನಸ್ಸಾಗುತ್ತಿತ್ತು. ಅಂತೂ ಕಡೆಗೆ, ಸೀತೆಗೆ ಅವಮಾನವಾಗಬಾರದು ಎಂದು ದಿಟ್ಟ ಮನಸ್ಸುಮಾಡಿ ಅದನ್ನು ಉಜ್ಜಿ ಅಳಿಸಿಬಿಟ್ಟನು. ಅಳಿಸಿದೊಡನೆಯೆ, ಏಕೋ ಏನೋ, ಅವನ ಅಂತಃಕರಣ ತಳಮಳಗೊಂಡಿತು. ಅವನ ಹೃದಯ ಏನೋ ಅಪಶಕುನ ಕಂಡಂತೆ ಭಯಗೊಂಡಿತು. ಮನಸ್ಸು” ಅಯ್ಯೋ ಅಳಿಸಬಾರದಾಗಿತ್ತು. ಅದನ್ನು ಯಾರು ತಾನೆ ಓದುತ್ತಿದ್ದರು?” ಎಂದುಕೊಂಡಿತು. ಅದನ್ನು ಮತ್ತೆ ಮೊದಲಿದ್ದಂತೆ ಮಾಡಲು ಅವನೆದೆ ಹಾತೊರೆಯಿತು. ಅವನ ಉದ್ವೇಗ ಎಷ್ಟು ಪ್ರಸ್ಫುಟವಾಗಿತ್ತು ಎಂದರೆ ಚಿನ್ನಯ್ಯ” ಏನು, ಹೂವಯ್ಯ, ಬಹಳ ನೋಯುತ್ತದೇನು! ಬಹಳ ಹೊತ್ತು ಕೂತಿದ್ದರಿಂದ ಅಂತಾ ಕಾಣ್ತದೆ. ಮಲಗಿಬಿಡು” ಎಂದನು.

“ಅಷ್ಟೇನೂ ನೋವಿಲ್ಲ” ಎಂದು ಹೂವಯ್ಯ ಚಿನ್ನಯ್ಯನ ಸಹಾಯದಿಂದ ಮಲಗಿಕೊಂಡನು.

ಚಿನ್ನಯ್ಯ ಉಃಫೆಂದು ಊದಿ ದೀಪ ಆರಿಸಿದನು. ಅಮಾವಾಸ್ಯೆಯ ಕಗ್ಗತ್ತಲು ಹೊರಗಿನಿಂದ ತೆಕ್ಕನೆ ನುಗ್ಗಿಬಂದು ಕೊಟ್ಟಡಿಯನ್ನೆಲ್ಲ ದಟ್ಟೈಸಿ ತುಂಬಿತು. ಆ ಕರ್ಗತ್ತಲೆಯಲ್ಲಿ ಹಣತೆಯ  ಬತ್ತಿಯ ತುದಿ ಇನ್ನೂ ಕೆಂಪಗೆ ಕೆಂಡವಾಗಿದ್ದು, ಅದರಿಂದ ಉಗುವ ಎಣ್ಣೆಹೊಗೆಯ ಕನರು ವಾಸನೆ ಅಲ್ಲೆಲ್ಲ ವ್ಯಾಪಿಸಿತ್ತು. ಚಿನ್ನಯ್ಯ ತುಸುಹೊತ್ತು ಮಾತಾಡುತ್ತಿದ್ದು ನಿದ್ದೆಹೋದನು. ಮನೆ ನಿಃಶಬ್ದವಾಗಿತ್ತು. ಹೊರಗೂ ನಿಃಶಬ್ದ. ಆಗಾಗ ಕೊಟ್ಟಿಗೆಯಿಂದ ದನಗಳು ಕಂಬಕ್ಕೆ ಕೋಡು ಬಡಿಯುವ ಸದ್ದೂ, ಹಾಸುಗಲ್ಲುಗಳ ಮೇಲೆ ಗೊರಸಿಟ್ಟ ಸದ್ದೂ, ದೊಂಟೆಗಳ ಸದ್ದೂ ಕೇಳಿಬರುತ್ತಿತ್ತು. ಆದರೆ ಆ ಸದ್ದು ಸಮುದ್ರಕ್ಕೆ ಒಂದು ಹನಿ ಹಾಲು ಹಾಕಿದಂತಾಗುತ್ತಿದ್ದಿತೆ ಹೊರತು ನೀರವತೆಯನ್ನು ಒಂದಿನಿತೂ ಅಳುಕಿಸಲು ಸಮರ್ಥವಾಗಿರಲಿಲ್ಲ. ಎಲ್ಲಿ ನೋಡಿದರೂ, ಎತ್ತ ಆಲಿಸಿದರೂ, ಕತ್ತಲೆ ಮತ್ತು ಮೌನಗಳ ಪಿತೂರಿಯ ಕಾಣುತ್ತಿತ್ತು; ಕೇಳುತ್ತಿತ್ತು. ಜಗತ್ತು ನಿಃಶಬ್ದ ನಿದ್ರಾಮುದ್ರಿತವಾಗಿತ್ತು.

ಆದರೆ ಹೂವಯ್ಯನಿಗೆ ನಿದ್ರೆ ಬರಲಿಲ್ಲ. ಬೆನ್ನುನೋವಿನ ಜೊತೆಗೆ ಮನಸ್ಸು ಕ್ಷುಭಿತವಾಗಿದ್ದುದರಿಂದ ಆತನು ವಿವಿಧ ಆಲೋಚನೆಗೆ ಅರಣ್ಯದಲ್ಲಿ ತೊಳಲ ತೊಡಗಿದನು. ಅವನ ಪ್ರಕೃತಿ ಸ್ವಾಭಾವಿಕವಾಗಿಯೆ ತಾತ್ವಿಕವೂ ಕಲ್ಪನಾ ಪ್ರಧಾನವೂ ಭಾವಮಯವೂ ಆಗಿತ್ತು. ಅಂದು ನಡೆದ ಘಟನೆಗಳಲ್ಲಿ ಒಂದೊಂದೂ ಅವನ ಭಾಗಕ್ಕೆ ಅರ್ಥಗರ್ಭಿತವಾಗಿತ್ತು. ಗಾಡಿ ಬೀಳಬೇಕೇಕೆ? ತನಗೆ ಮಾತ್ರ ನೋವಾಗಬೇಕೇಕೆ? ಗೋಡೆಯ ಮೇಲೆ ಹಲ್ಲಿ ಕಾಣಬೇಕೇಕೆ? ಆ ಹಲ್ಲಿ ಸೀತೆ ಬರೆದುದನ್ನು ತೋರುವಂತೆ ಆಚರಿಸಬೇಕೇಕೆ? ಹೂವಯ್ಯನಿಗೆ ವಿಧಿ ತನಗೂ ಸೀತೆಗೂ ಯಾವುದೊ ಒಂದು ಶಾಶ್ವತವಾದ ಸಂಬಂಧದ ಕಲ್ಪನೆ ಮಾಡಬೇಕೆಂದು ಗುಟ್ಟಾಗಿ ವ್ಯೂಹವನ್ನು ರಚಿಸಿದ್ದಂತೆ ತೋರಿತು. ಬೇರೆಯ ಸಮಯದಲ್ಲಾಗಿದ್ದರೆ ಅವನ ತೀಕ್ಷ್ಣಮತಿ ಅವುಗಳನ್ನೆಲ್ಲ ಸಾಮಾನ್ಯವೆಂದು ಲೆಕ್ಕಿಸದೆ ಇರುತ್ತಿತ್ತು. ಆದರೆ ಪ್ರೇಮವಶವಾದ ಹೃದಯಕ್ಕೆ ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಶಕುನಗಳೆ ತೋರುತ್ತವೆ.

ಸೀತೆಯನ್ನು ಕುರಿತು ಆಲೋಚಿಸುತ್ತಿದ್ದಂತೆ ಅವನ ಮನಸ್ಸು ತನ್ನ ವಿದ್ಯಾಭ್ಯಾಸದ ವಿಚಾರವಾಗಿ ನೆನೆಯತೊಡಗಿತ್ತು. ಮಹಾಪುರುಷರ ಜೀವನ ಚರಿತ್ರೆಗಳನ್ನು ಓದಿದ್ದ ಆತನಲ್ಲಿ ತಾನೂ ಮಹತ್ಕಾರ್ಯಗಳನ್ನು ಸಾಧಿಸಿಮ ಕೀರ್ತಿವಂತನಾಗಬೇಕೆಂಬ ಮಹಾದಾಕಾಂಕ್ಷೆ ಉದ್ಭವಿಸಿತ್ತು. ಎಂತಹ ಮಹತ್ಕಾರ್ಯ, ಅದನ್ನು ಯಾವ ರೀತಿಯಲ್ಲಿ ಸಾಧಿಸಬೇಕು, ಎಂಬುದೊಂದೂ ಆತನಿಗೆ ಹೊಳೆದಿರಲಿಲ್ಲ. ಆದರ ತಂದೆ ತೀರಿದಂದಿನಿಂದ ಚಿಕ್ಕಪ್ಪ ತನ್ನ ವಿದ್ಯಾಭ್ಯಾಸದ ವಿಷಯದಲ್ಲಿ ಉದಾಸೀನನಾಗಿದ್ದನಲ್ಲದೆ ನಿರುತ್ತೇಜಕನಾಗಿಯೂ ವರ್ತಿಸುತ್ತಿದ್ದನು. ಪ್ರತಿ ವರ್ಷವೂ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕು ಎಂದು ಹಠ ಹಿಡಿಯುತ್ತಿದ್ದನು. ಅವರಿವರಿಂದ ಹೇಳಿಸಿ, ತಾನೂ ವಾದಿಸಿ, ಹೂವಯ್ಯ ಮುಂದುವರಿದಿದ್ದನು.  ಅಲ್ಲದೆ ಚಂದ್ರಯ್ಯಗೌಡರು ತಮ್ಮ ಮಗ ರಾಮಯ್ಯನ ವಿದ್ಯಾಭ್ಯಾಸದ ಸಲುವಾಗಿಯೂ ಅಣ್ಣನ ಮಗನ ಎಷ್ಟವನ್ನು ನೆರವೇರಿಸಬೇಕಾಗಿ ಬಂದಿತ್ತು. ಹೂವಯ್ಯ ತನಗೆ ಆಸ್ತಿ ಮನೆಗಳೊಂದೂ ಬೇಡ, ವಿದ್ಯಾರ್ಜನೆಯಾದರೆ ಸಾಕೆಂದು ಮನಸ್ಸಿನಲ್ಲಿ ಗೊತ್ತುಮಾಡಿದ್ದನು. ಆದರೆ ವಿಧವೆಯಾದ ತನ್ನ ತಾಯಿಯ ಸಲುವಾಗಿ ಅದನ್ನು ಬಾಯಿಬಿಟ್ಟು ಯಾರೊಡನೆಯೂ ಹೇಳಿರಲಿಲ್ಲ. ನಾಗಮ್ಮನವರು ಹಿಂದಿನ ವರ್ಷ ಮಗನು ರಜಾಕ್ಕೆ ಬಂದಾಗಲೆ ತಮಗೆ ಚಂದ್ರಯ್ಯಗೌಡರ ಸಂಸಾರದಲ್ಲಿ ಒಟ್ಟಾಗಿರಲು ಮನಸ್ಸಿಲ್ಲವೆಂದೂ, ತಾವಿಬ್ಬರೂ ತಮಗೆ ಬರಬೇಕಾದ ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬೇರೆಯಾಗಿ ಸಂಸಾರ ಹೂಡಬೇಕೆಂದೂ ಮಗನೊಡನೆ ಬಹಳವಾಗಿ ಹೇಳಿದ್ದರು. ಮಗನು ತನ್ನ ವಿದ್ಯಾಭ್ಯಾಸದ ನೆಪವನ್ನು ತಂದೊಡ್ಡಿ ತಾಯಿಯನ್ನು ಸುಮ್ಮನಿರಿಸಿದ್ದನು. ಅದೂ ಅಲ್ಲದೆ ಭಾವಜೀವಿಯಾಗಿದ್ದ ಅವನಿಗೆ ಬೇರೆ ಸಂಸಾರ ಮಾಡುವ ಕೋಟಲೆಯೂ ಭಾರವೂ ಅಸಹ್ಯವಾಗಿತ್ತು. ತನ್ನ ಮಹದಾಶೆ ಕೈಗೂಡಲು ಪ್ರತಿಬಂಧಕವಾದುದು ಯಾವುದನ್ನೂ ಕೈಕೊಳ್ಳಲು ಅವನು ಹಿಂಜರಿಯುತ್ತಿದ್ದನು.

ಆಲೋಚನೆಯ ಮಧ್ಯೆ ಹೂವಯ್ಯನು ಒಂದು ಸಾರಿ ಹಾಸಗೆಯಲ್ಲಿ ಹೊರಳಿ ಬೆನ್ನುನೋವಿನಿಂದ ನರಳಿದನು. ಸ್ವಲ್ಪ ಹೊತ್ತಾದಮೇಲೆ ನೋವು ನಿಂತು, ದೃಷ್ಟಿಸ್ಥಿರವಾಗಿ, ಎದುರಿಗಿದ್ದ ಕಿಟಕಿಯ ಕಡೆ ನೋಡಿದನು. ಕತ್ತಲೆ ತುಂಬಿದ್ದ ದೂರದ ಬಾಂದಳದಲ್ಲಿ ಕೆಲವು ನಕ್ಷತ್ರಗಳು ಪ್ರಕಾಶಮಾನವಾಗಿ ಮಿರುಗುತ್ತಿದ್ದುವು. ಭೂಸಂಚಾರಿಯಾಗಿದ್ದ ಅವನ ಮನಸ್ಸು ಮೆಲ್ಲಗೆ ವಿಶ್ವಯಾತ್ರಿಯಾಯಿತು. ಖಗೋಲಶಾಸ್ತ್ರಜ್ಞರು ಹೊಸ ಹೊಸದಾಗಿ ಕಂಡು ಹಿಡಿದಿದ್ದ ಅದ್ಬುತ ವಿಷಯಗಳನ್ನು ಓದಿ ತಿಳಿದಿದ್ದ ಅವನ ಆತ್ಮ ಬೇರೊಂದು ನೂತನ ಭಾವದಿಂದ ಉಜ್ವಲವಾಯಿತು. ಆ ನಕ್ಷತ್ರಗಳು ಎಷ್ಟು ಕೋಟ್ಯಂತರ ಮೈಲಿಗಳ ದೂರದಲ್ಲಿವೆ? ಅದರಲ್ಲಿ ಒಂದೊಂದು ಭೂಮಿಗಿಂತಲೂ, ಸೂರ್ಯನಿಗಿಂತಲೂ, ಎಷ್ಟು ಕೋಟ್ಯಂತರ ಪಾಲು ಹಿರಿದಾಗಿದೆ! ಎಂತಹ ಭಯಂಕರವಾದ ಅಗ್ನಿಪ್ರವಾಹಗಳು ಅಲ್ಲಿ ಸಮುಜ್ವಲ ಭೀಷಣತೆಯಿಂದ ನುಗ್ಗಿ ಹರಿದು ತಾಂಡವವಾಡುತ್ತಿವೆ? ಈ ಕಾಲ ದೇಶಗಳು ಎಷ್ಟು ಬಗೆನಿಲುಕದಷ್ಟು ಅನಂತವಾಗಿವೆ? ಈ ಛಂದೋಮಯವಾದ ಮಹಾ ಬ್ರಹ್ಮಾಂಡದ ಗಾನವನ್ನು ರಚಿಸಿರುವ ದಿವ್ಯಕವಿಯ ಮಹಿಮೆಯೇನು? ಕ್ಷುದ್ರ ನಕ್ಷತ್ರವಾದ ಸೂರ್ಯನ ಸುತ್ತ ತಿರುಗುವ ಈ ಭೂಮಿ ಈ ವಿಶ್ವದಲ್ಲಿ ಎಂತಹ ಸಣ್ಣ ಹುಡಿ! ನಾಗರಿಕತೆಗಳೂ ಮನುಷ್ಯನೂ ಈ ಬೃಹತ್ತಾದ ವಿಶ್ವದ ವ್ಯಾಪಾರಗಳಲ್ಲಿ ಎಷ್ಟು ಅತಿಸಾಮಾನ್ಯ? ಎಷ್ಟು ಅಜ್ಞಾತ? ಯೋಚಿಸುತ್ತ ಯೋಚಿಸುತ್ತ ಹೂವಯ್ಯನ ದೃಷ್ಟಿ ತಾರೆಗಳಿಗಿಂತಲೂ ಬಹುದೂರವಾಗಿ ಹೋಯಿತು. ತಾನೂ ತನ್ನ ಜೀವನವೂ ಅಂತಿರಲಿ, ಸಮಸ್ತ ಪ್ರಪಂಚವೂ. ಮಹತ್ವವಾದುವು ಎಂದು ಪರಿಗಣಿತವಾದ ಅದರ ಪ್ರಸಿದ್ಧ ವ್ಯಾಪಾರ, ಚೇಷ್ಟೇ, ಸಾಹಸಗಳೂ ಕ್ಷುದ್ರದಲ್ಲಿ ಕ್ಷುದ್ರತಮವಾಗಿ ದರಿದ್ರವಾಗಿ ತೋರಿದುವು. ಆತನ ದೇಹ ಅವ್ಯಕ್ತಭೀಷಣವಾದ ಮಧುರ ರಸಾವೇಶದಿಂದ ಜುಮ್ಮೆಂದು ವಿಕಂಪಿಸಿತು. ರುದ್ರಾನಂದದಿಂದ ಆತನ ಹೃದಯ ಹಿಗ್ಗಿತು.

ಆ ದಿನ ಹಿಂದೊಂದು ಸಾರಿ ಅವನೆದೆ ಹಾಗೆ ಹಿಗ್ಗಿದ್ದಿತು. ಗೋಡೆಯ ಮೇಲೆ ಸೀತೆಯ ಪ್ರೇಮಶಾಸನವನ್ನು ಓದಿದಾಗ, ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಅವನ ಮನಸ್ಸು ಮತ್ತೆ ಭೂಮಿಗಿಳಿದು ಮುತ್ತಳ್ಳಿಗೆ ಬಂದಿತು. ಬಗೆಗಣ್ಣಿನಲ್ಲಿ ಸೀತೆಯ ಮೂರ್ತಿ ಮೂಡಿತು. ಆ ರಮಣಿ ಎನಿತು ಸುಂದರವಾಗಿದ್ದಾಳೆ! ನೋಡಿದನಿತೂ ನೋಡಬೇಕನ್ನಿಸುತ್ತದೆ! ಆಕೆಯ ಕದಪು ಎಷ್ಟಯ ನುಣುಪಾಗಿದೆ! ಪ್ರೇಮ ಮಾಧುರ್ಯ ತುಂಬಿದಂತಿದೆ! ಅಲ್ಲಿ ತುಂಬಿದ ಪ್ರೇಮ ಮಾಧುರ್ಯ ಕೆಂದುಟಿಗಳಲ್ಲಿ ಹೊರಸೂಸುವಂತಿದೆ! ಹೂವಯ್ಯ ಮನಸ್ಸಿನಲ್ಲಿ ಆ ಮೂರ್ತಿಯನ್ನು ಆಲಿಂಗಿಸಿ ಚುಂಬಿಸಿದನು! ಕಿಟಕಿಯಲ್ಲಿ ಕಂಡ ನಕ್ಷತ್ರ ಅವನನ್ನು ದೂರದೂರ ದೂರಕ್ಕೆ ಎಳೆದೊಯ್ದು ಈ ಪ್ರಪಂಚವನ್ನೂ ಅದರ ವ್ಯಾಪಾರಗಳನ್ನೂ ಕ್ಷುದ್ರವಾಗಿ ಕಾಣುವಂತೆ ಮಾಡಿಬಿಟ್ಟಿತು. ಹಾಗೆಯೆ ಸೀತೆಯನ್ನು ನೆನೆದ ಹೂವಯ್ಯನ ಮನಸ್ಸಿಗೆ ವಿಶಾಲ ವಿಶ್ವವೇ ಕ್ಷುದ್ರವಾದಂತೆ ತೋರಿತು. ಲಲನೆಯ ಸೌಂದರ್ಯ ಪ್ರೇಮಗಳ ಪ್ರಲಯ ಜಲದಲ್ಲಿ ಕೋಟ್ಯಂತರ ಗ್ರಹ ನಕ್ಷತ್ರ ನೀಹಾರಿಕಾ ಖಚಿತವಾದ ಅನಂತ ಕಾಲದೇಶಗಳ ಮಹಾಬ್ರಹ್ಮಾಂಡ ಸಣ್ಣದೊಂದು ಗುಳ್ಳೆಯಂತೆ ನಿಸ್ಸಹಾಯವಾಗಿ ತೇಲುತ್ತಿತ್ತು! ನಕ್ಷತ್ರಧ್ಯಾನಕ್ಕಿಂತಲೂ ಸೀತೆಯ ಒಲ್ಮೆಯ ಸಹಸ್ರಪಾಲು ಮಧುರ ಮಹತ್ತರಾಗಿ ತೋರಿತು. ಸೀತೆಯ ಪ್ರೇಮಮಹಿಮೆಯಿಂದ. ಮೊದಲು ಕ್ಷುದ್ರವಾಗಿ ಕಂಡಿದ್ದ ತಾನೂ ತನ್ನ ಜೀವನವೂ ಈಗ ವಿಶ್ವವ್ಯೂಹದಲ್ಲಿ ಮಹೋನ್ನತವಾಗಿ ಪ್ರಮುಖವಾಗಿ ತೋರಿದುವು. ಹೂವಯ್ಯನ ಹೃದಯದಲ್ಲಿ ಆಗಲೆ ಅಂತಃಸಮರಕ್ಕೆ ಅಂಕುರ ಸ್ಥಾಪನೆಯಾಗಿತ್ತು. ಒಮ್ಮೆ ಆಕೆಗಾಗಿ ಸಂಸಾರದ ಭಾರವನ್ನು ಹೊರುವುದು ಅಷ್ಟೇನೂ ಹೀನವಲ್ಲ, ನಷ್ಟಕರವಲ್ಲ ಎಂದು ಆಲೋಚಿಸಿದನು. ಮತ್ತೊಮ್ಮೆ ತನ್ನ ಮಹದಾಕಾಂಕ್ಷೆಯ ಆದರ್ಶ ಅವನನ್ನು ತನ್ನೆಡೆಗೆ ಸೆಳೆಯುತ್ತಿತ್ತು…. ಆಲೋಚನೆಗಳು ಬರಬರತ್ತು ಮಬ್ಬಾದುವು…. ಹೂವಯ್ಯ ಮೈಸೂರಿನ ಕುಕ್ಕನಹಳ್ಳಿಯ ಕೆರೆಯ ಏರಿಯ ಮೇಲೆ ವಾಯುವಿಹಾರಕ್ಕಾಗಿ ನಡೆಯುತ್ತಿದ್ದಾನೆ. ಸಂಧ್ಯಾಕಾಲದ ಪಶ್ಚಿಮ ಗಗನದ ಮೇಘಲೋಕದಲ್ಲಿ ಖೂನಿಯಾದಂತಿದೆ! ರಕ್ತಪಾತವಾದಂತಿದೆ! ಕೆರೆ ನಿಸ್ತರಂಗವಾಗಿದೆ ಗಿಡಮರಗಳು ನಿಶ್ಚಲವಾಗಿವೆ.  ಆ ಸ್ತ್ರೀ ಯಾರು? ದೂರದಲ್ಲಿ ಬರುತ್ತಿದ್ದಾಳೆ! ಹೂವಯ್ಯ ನೋಡುತ್ತಾನೆ; ತನ್ನ ತಾಯಿ ನಾಗಮ್ಮನವರು! ಇದೇನಾಶ್ಚರ್ಯ! ಇಲ್ಲಿಗೆ ಹೇಗೆ ಬಂದಳು ತಾಯಿ! ಹೂವಯ್ಯ ಕರೆಯುತ್ತ ಮುಂದುವರಿದನು. ನಾಗಮ್ಮನವರು ಸಮೀಪಕ್ಕೆ ಬಂದರು. ಅವರ ಹಣೆಯಲ್ಲಿ ಗಾಯವಾಗಿ ರಕ್ತ ಸೋರುತ್ತಿದೆ! ಮೂರ್ಛೆಯಿಂದ ಕೆಳಗೆ ಬೀಳುತ್ತಿದ್ದಾರೆ! ಹೂವಯ್ಯ  ಬಳಿಗೆ ನುಗ್ಗಿದನು. ಆದರೆ ಕಾಲು ಕೀಳಲಾಗಲಿಲ್ಲ! ಅಯ್ಯೋ….. ಹೂವಯ್ಯ ಬೆಚ್ಚಿ ಬಿದ್ದು ಕಣ್ದೆರೆದನು. ಕುಕ್ಕನ ಹಳ್ಳಿಯ ಕೆರೆಯ ಏರಿಯ ಮೇಲೆ ನಡೆಯುತ್ತಿದ್ದಿಲ್ಲ. ಮುತ್ತಳ್ಳಯಲ್ಲಿ ಹಾಸಗೆಯ ಮೇಲೆ ಮಲಗಿದ್ದಾನೆ! ಅವನಿಗೆ ಸ್ವಲ್ಪ ಗಾಬರಿಯಾದರೂ ವಿಚಿತ್ರ ಸ್ವಪ್ನಕ್ಕಾಗಿ ಮನಸ್ಸಿನಲ್ಲಿಯೆ ನಕ್ಕು, ಮತ್ತೆ ಕಣ್ಮುಚ್ಚಿದನು…. ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರ ಬಚ್ಚಲು ಮನೆಯಲ್ಲಿ ಮೀಯುತ್ತಿದ್ದಾನೆ! ಬ್ರಾಹ್ಮಣರ ಸ್ನಾನದ ಮನೆಯಲ್ಲಿ ನೀರು ತುಂಬಿದ ಹಂಡೆಯನ್ನು ಮುಟ್ಟಿಬಿಟ್ಟಿದ್ದಾನೆ! ಅಷ್ಟರಲ್ಲಿ ಜೋಯಿಸರು ಅಲ್ಲಿಗೆ ಓಡಿಬಂದು ಕ್ರೋಧದಿಂದ ದೊಣ್ಣೆಯೆತ್ತಿದ್ದಾರೆ! ಹೂವಯ್ಯ ” ತಡೆಯಿರಿ ತಪ್ಪಾಯ್ತು, ಕ್ಷಮಿಸಿ!” ಎಂದು ಕೂಗಿಕೊಂಡರೂ ಅವರು ಬೆನ್ನಿಗೊಂದು ಪೆಟ್ಟು ಇಳಿಸಿಯೇ ಬಿಟ್ಟರು! ಹೂವಯ್ಯ “ಅಯ್ಯೋ” ಎಂದು ಕುಮುಟಿ ಬಿದ್ದನು. ಎಚ್ಚರವಾಯ್ತು. ನಿದ್ದೆಯಲ್ಲಿ ಹಾಸಗೆಯ ಮೇಲೆ ಹೊರಳಿದ್ದರಿಂದ ಬೆನ್ನು ನೋಯುತ್ತಿತ್ತು. ಅವನು” ಅಯ್ಯೋ” ಎಂದುದನ್ನು ಕೇಳಿ ಚಿನ್ನಯ್ಯನಿಗೆ ಎಚ್ಚರವಾಗಿತ್ತು.

“ಹೂವಯ್ಯ, ಹೂವಯ್ಯ” ಎಂದು ಕರೆದನು ಚಿನ್ನಯ್ಯ.

ಹೂವಯ್ಯ ” ಏನು?” ಎಂದನು.

“ಏನೂ ಇಲ್ಲ, ಬೇಡ.”

“ಕನವರಿಸಿ ಕೂಗಿದೆ ಅಂತ ಕಾಣ್ತದೆ.”

ಮತ್ತೆ ಇಬ್ಬರೂ ಸುಮ್ಮನಾದರು. ಸ್ವಲ್ಪ ಹೊತ್ತಿನಲ್ಲಿ ನಿಶಾ ಮೌನನಿದ್ರೆಗಳ ನಿರಂಕುಶ ಪ್ರಭುತ್ವ ಲೋಕವನ್ನೆಲ್ಲ ಮುಳುಗಿಸಿಬಿಟ್ಟಿತು.