ಮುತ್ತಳ್ಳಿಯಿಂದ ಕಾನೂರಿನ ಗಾಡಿ ಅಪರಾಹ್ಣದಲ್ಲಿ ಹೊರಡಬೇಕೆಂದು ನಿರ್ಣಯವಾಗಿತ್ತು. ಹೂವಯ್ಯನು ಬೆನ್ನು ನೋವು ಗುಣವಾಗುವವರೆಗೂ ಮುತ್ತಳ್ಳಿಯಲ್ಲಿ ಇರಬೇಕೆಂದೂ, ರಾಮಯ್ಯನೂ ಒಂದೆರಡು ದಿನಗಳ ಮಟ್ಟಿಗೆ ಅಣ್ಣನೊಡನೆ ಇರಬೇಕೆಂದೂ, ಸಿಂಗಪ್ಪಗೌಡರು  ದಿನವಾದರೂ ಉಳಿಯ ಬೇಕೆಂದೂ ಇತ್ಯರ್ಥವಾಯಿತು. ಚಿನ್ನಯ್ಯನಿಗೆ ಮಿತ್ರರು ಹೆಚ್ಚುಕಾಲ ತಮ್ಮಮನೆಯಲ್ಲಿ ನಿಲ್ಲಬೇಕಾದ ಸುಯೋಗ ಲಭಿಸಿತೆಂದು ಬಹಳ ಸಂತೋಷವಾಯಿತು. ನಿಂಗನೂ ಪುಟ್ಟಣ್ಣನೂ ಇನ್ನೇನು ಗಾಡಿಕಟ್ಟಿ ಹೊರಡಬೇಕು, ಅಷ್ಟರಲ್ಲಿ ಕಾಳನು ಓಡಿಬಂದು ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರೂ ಬರುತ್ತಾರಂತೆ, ಸ್ವಲ್ಪ ನಿಲ್ಲಬೇಕಂತೆ ಎಂದು ಹೇಳಿದನು.

ಕಾನೂರಿನಿಂದ ಹೊರಟ ಜೋಯಿಸರು ಅಗ್ರಹಾರಕ್ಕೆ ಹೋಗಿ ಊಟ ಪೋರೈಸಿಕೊಂಡು ನೇರವಾಗಿ ಮುತ್ತಳ್ಳಿಗೆ ಹೋಗಿದ್ದರು. ಶ್ಯಾಮಯ್ಯ ಗೌಡರಿಂದಲೂ ಸ್ವಲ್ಪ ದುಡ್ಡು ಬರಮಾಡಿಕೊಳ್ಳುವುದೇ ಆ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ ದೇವರ ಪ್ರಸಾದವನ್ನೂ ತೆಗೆದುಕೊಂಡು ಹೋಗಿದ್ದರು. ಜೋಯಿಸರಿಗೆ ಜಗಲಿಯ ಮೇಲೆ ಮಲಗಿದ್ದ ಹೂವಯ್ಯನನ್ನು ನೋಡಿದ ಕೂಡಲೆ ಒಂದು ವಿಧವಾದ ಜುಗುಪ್ಸೆಯಾಯಿತು. ಏಕೆಂದರೆ, ಅವನು ತಮ್ಮ ವ್ಯಾಪಾರಕ್ಕೆ ಮೂಲಧನದಂತಿದ್ದ ಹಳ್ಳಿಗರ ಮೌಢ್ಯವನ್ನು ನಿವಾರಿಸಲು ಮಾಡುತ್ತಿದ್ದ ಪ್ರಯತ್ನವು ಜೋಯಿಸರ ಭಾಗಕ್ಕೆ ಅಸಹನೀಯವಾಗಿತ್ತು. ಅದೂ ಅಲ್ಲದೆ ಬ್ರಾಹ್ಮಣರಾದ ತಮಗಿಂತಲೂ ಶೂದ್ರನಾದ ಅವನಿಗೇ ಉಪನಿಷತ್ತ ಭಗವದ್ಗೀತೆ ಮೊದಲಾದವುಗಳ ಪರಿಚಯವೂ ಜ್ಞಾನವೂ ಹೆಚ್ಚಾಗಿದೆ ಎಂಬುದು, ಇತರರಿಗೆ ತಿಳಿಯಲು ಸಾಮರ್ಥ್ಯವಿಲ್ಲದಿದ್ದರೂ. ಜೋಯಿಸರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದ ಅವನ ವಿಷಯದಲ್ಲಿ ಒಂದು ತೆರನಾದ ಭಯವು ಇತ್ತು. ಅಂತೂ ಹೆಚ್ಚಿಗೆ ಮಾತಾಡದೆ ತಮ್ಮ ಪ್ರಸಾದ ವಿನಿಯೋಗ ಮಾಡಿದರು. ಹೂವಯ್ಯನೂ ನಮ್ರಭಾವದಿಮದ ಅದನ್ನು ಸ್ವೀಕರಿಸಿದನು. ಹೂವಯ್ಯನ ಸ್ಥಿತಿಯನ್ನರಿತು ಧೈರ್ಯಗೊಂಡ ಜೋಯಿಸರು ಬೆನ್ನುನೋವು ಹೋಗುವಂತೆ ಮಂತ್ರ ಮಾಡುವುದಾಗಿಯೂ ತಾಯಿತಿ ಕಟ್ಟುವುದಾಗಿಯೂ, ಪೂಜೆ ಮಾಡಿಸುವುದಾಗಿಯೂ, ಗ್ರಹಗತಿಯನ್ನು ಸರಿಮಾಡುವುದಾಗಿಯೂ ಶ್ಯಾಮಯ್ಯಗೌಡರೊಡನೆ ಹೇಳಿದರು. ಗೌಡರು ಮರುಮಾತಾಡದೆ ಸಮ್ಮತಿಸಿ ಹೂವಯ್ಯನಿಗೆ ಜೋಯಿಸರ ಅನುಗ್ರಹದ ವಿಚಾರವಾಗಿ ಹೇಳಿದರು. ಹೂವಯ್ಯನು ನಕ್ಕು ಹಾಸ್ಯಮಾಡಿಬಿಟ್ಟನು. ಜೋಯಿಸರಿಗೂ ಅವನಿಗೂ ಬಿಸಿಬಿಸಿಯಾಗಿ ನಾಲ್ಕು ಮಾತಾಯಿತು. ಜೋಯಿಸರಿಗೆ ಮುಖಭಂಗವಾಯಿತು. ಸಿಂಗಪ್ಪಗೌಡರೂ ಶ್ಯಾಮಯ್ಯಗೌಡರೂ ಜೋಯಿಸರ ಪರವಾಗಿಯೂ, ಚಿನ್ನಯ್ಯ ರಾಮಯ್ಯರು ಹೂವಯ್ಯನ ಪರವಾಗಿಯೂ ಮಾತಾಡತೊಡಗಿದರು. ಮೊದಲು ವಿನೋದವಾಗಿ ನಡೆಯುತ್ತಿದ್ದ  ಚರ್ಚೆ ಕಡೆಕಡೆಗೆ ವಿಷಾದವಾಗಲಾರಂಭಿಸಿತು.

ಜೋಯಿಸರು ಸಿಟ್ಟಾಗಿ “ಹೂವಯ್ಯಾ, ನಿನಗೆ ಈ ಬುದ್ಧಿ ಒಳ್ಳೆಯದಲ್ಲ. ಹಿಂದಿನಿಂದ ನಡೆದುಬಂದ ಆಚಾರ, ದೇವರು, ವೇದ, ಶಾಸ್ತ್ರಗಳೆಲ್ಲ ಅಲ್ಲಗಳೆಯುವ ನಿನಗೆ ಕೇಡು ತಪ್ಪಿದಲ್ಲ” ಎಂದರು.

ಹೂವಯ್ಯನೂ “ನೀವು ತಿಳಿದವರೆಂದುಕೊಂಡು ಹಳ್ಳಿಯವರಿಗೆ ಮೌಢ್ಯವನ್ನೇ ಉಪದೇಶಮಾಡಿ, ನಿಮಿತ್ತ ಹೇಳುವುದು. ವಿಭೂತಿ ಕೊಡುವುದು, ಸತ್ಯನಾರಾಯಣ ವ್ರತ ಮಾಡಿಸುವುದು, ದೆವ್ವ ಪಿಶಾಚಿಗಳಿಗೆ ಬಲಿಕೊಡಿಸುವುದು, ಇದರಿಂದ ಹೊಟ್ಟೆಹೊರೆದುಕೊಳ್ಳುತ್ತಿದ್ದೀರಿ. ಟ್ರಂಕು ತಗುಲಿ ಬೆನ್ನು ನೋವಾಗಿದ್ದರೆ ಔಷಧಿ ಮಾಡಿ ಎಂದು ಹೇಳುವ ಬದಲು ಬೂದಿ ಕುಂಕುಮ ಹಚ್ಚಿ, ಮಂತ್ರ ಹಾಕಿಸಿ ಎಂದು ಹೇಳುತ್ತಿದ್ದೀರಲ್ಲಾ! ಇದು ಯಾವ ತತ್ವ ಶಾಸ್ತ್ರದಲ್ಲಿ ಹೇಳಿದೆ? ಹಾಗೆ ಹೇಳಿರುವ ಗ್ರಂಥಗಳಿದ್ದರೆ ಅವು ಮನ್ನಣೆಗೆ ಯೋಗ್ಯವಾದುವೆ? ನಿಮ್ಮ ಬೋಧನೆಯಿಂದ ಎಷ್ಟು ಜನರು ರೋಗಕ್ಕೆ ಸರಿಯಾಗಿ ಮದ್ದುಮಾಡದೆ, ಬರಿಯ ಬೂದಿ ವಿಭೂತಿಗಳನ್ನೇ ಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರ……” ಎಂದು ಮೊದಲಾಗಿ ರಭಸದಿಂದ ಹೇಳಿಬಿಟ್ಟನು.

“ಏನಯ್ಯಾ, ನಿನ್ನ ತಂದೆ ಎಷ್ಟು ಗೌರವದಿಂದ ನಡೆದುಕೊಳ್ಳುತ್ತಿದ್ದನು? ಅವನಿಗೆ ದೇವರಲ್ಲಿ ಎಷ್ಟು ಭಯ , ಭಕ್ತಿ! ನೀನು ಚಿಕ್ಕವನಾಗಿದ್ದಾಗ ನಾನೇ ಎಷ್ಟು ಸಾರಿ ಚೀಟಿ ವಿಭೂತಿ ಕೊಟ್ಟಿದ್ದೇನೆ….!” ಎಂದು ಜೋಯಿಸರು ಹಳೆಯ ಕಥೆಗಳನ್ನೆಲ್ಲ ಹೇಳಿದರು.

ಹೂವಯ್ಯನು ತಂದೆಯ ನೆನಪಾಗಿ ಮೃದುವಾದನು. ನಮ್ರ ವಾಣಿಯಿಂದ ಮತ್ತೆ ಹೇಳಿದನು.

“ಜೋಯಿಸರೇ, ದಯವಿಟ್ಟು, ಕ್ಷಮಿಸಿ, ನಾನು ಮಾತಾಡಿದ್ದು ನಿಮ್ಮ ಮೇಲೆ ಅಗೌರವದಿಂದಲ್ಲ. ನಿಮ್ಮ ತತ್ವಗಳಿಂದ ಜನರಿಗೆ ಎಷ್ಟು ಹಾನಿಯಾಗುತ್ತದೆ ಎಂದು ಹೇಳಿದೆನಷ್ಟೇ! ನಿಮ್ಮ ಮನಸ್ಸಿನಲ್ಲಿ ಕೃತ್ರಿಮತೆ ಇಲ್ಲದ ಮಾತ್ರಕ್ಕೇ ನೀವು ಹೇಳುವುದೆಲ್ಲ ಸತ್ಯವಾಗಲಾರದು…. ನಮ್ಮತಂದೆ ಶ್ಲೇಷ್ಮ ಜ್ವರದಿಂದ ನರಳುತ್ತಿದ್ದಾಗ ನಿಮ್ಮ ಪೂಜೆ, ಮಂತ್ರ, ತಂತ್ರಗಳಿಗೋಸ್ಕರವಾಗಿಯಲ್ಲವೇ ಅವರು ಅಂಗಳಕ್ಕಿಳಿದು ಬಂದು ತುಲಸೀಪೀಠದ ಮುಂದೆ ಕುಳಿತು, ತಣ್ಣೀರು ತಂಗಳಿಗಳ ಸೋಂಕಾಗಿ, ರೋಗ ಮತ್ತೂ ವಿಷಮವಾಗಿ, ಕಡೆಗೆ ತೀರಿಕೊಂಡಿದ್ದು! ಆಸ್ಪತ್ರೆಯಲ್ಲಿ ಅಂತಹ ರೋಗಿಯನ್ನು ಅಲುಗಾಡುವುದಕ್ಕೆ  ಬಿಡುವತ್ತಾರೆಯೇ? ನೀವೇನೋ ಸದುದ್ದೇಶದಿಂದಲೇ ಆ ಕೆಲಸ ಮಾಡಿದಿರಿ… ಆದರೆ, ಸದುದ್ದೇಶ ಅಜ್ಞಾನವನ್ನು ಸುಜ್ಞಾನವನ್ನಾಗಿ ಮಾಡಲಾರದು…. ನಾನೀಗ ಮಾತಾಡಲಾರೆ…… ದಯವಿಟ್ಟು ಕ್ಷಮಿಸಿ,….. ನನಗೆ ನಿಮ್ಮಲ್ಲಿ ಅಗೌರವ ಎಂದು ಮಾತ್ರ ತಿಳಿಯಬೇಡಿ….. ನಮ್ಮ ತಂದೆ ಗೌರವಿಸಿದ ನಿಮ್ಮನ್ನು ನಾನೂ ಗೌರವಿಸುತ್ತೇನೆ….”

ಸೀತೆ ಬಿಸಿನೀರು ತಂದಳು. ಚಿನ್ನಯ್ಯ ರಾಮಯ್ಯರು ಬೆನ್ನಿಗೆ ಸೆಕೆಕೊಡಲು ಪ್ರಾರಂಭಿಸಿದರು. ಸಿಂಗಪ್ಪಗೌಡರೂ ಶ್ಯಾಮಯ್ಯಗೌಡರೂ ಜೋಯಿಸರೂ  ಯಾವುದೇ ಬೇರೆ ವಿಷಯಮಾತಾಡತೊಡಗಿದ್ದರು.

ಅಷ್ಟರಲ್ಲಿ ಹೊರಗಡೆ ಯಾರೋ ಬೊಬ್ಬೆಹಾಕಿ ರೋದಿಸುವುದು ಕೇಳಿಸಿ ಎಲ್ಲರೂ ಗಾಬರಿಯಾಗಿ, ಏನು? ಏನು? ಎನ್ನುವಷ್ಟರಲ್ಲಿ ಕುಂಬಾರ ನಂಜನ ಹೆಂಡತಿ ಗಟ್ಟಿಯಾಗಿ ಅಳುತ್ತ ಅಂಗಳಕ್ಕೆ ಬಂದಳು. ಅವಳ ಕಿವಿ ಹರಿದು ಸೀರೆಯ ಮೇಲೆ ನೆತ್ತರು ಸೋರುತ್ತಿತ್ತು. ಕೆನ್ನೆ, ಕೈ ಎಲ್ಲಾ ರಕ್ತಮಯವಾಗಿತ್ತು. ವಿಚಾರಿಸಲಾಗಿ ಅವಳ ಗಂಡನು ಅವಳನ್ನು ಹೊಡೆದು, ಕಿವಿಯ ಬುಗುಡಿಯನ್ನು ಹರಿದು ಕಿತ್ತುಕೊಂಡು ಕಳ್ಳಂಗಡಿಗೆ ಹೋದನೆಂದು ಗೊತ್ತಾಯಿತು. ಶ್ಯಾಮಯ್ಯಗೌಡರು ಕ್ರುದ್ಧರಾಗಿ ನಂಜನನ್ನು ಎಳೆದು ತರಲು ಕಾಳನನ್ನೂ ಪುಟ್ಟಮ್ಮನನ್ನೂ ಅಟ್ಟಿದರು. ಆದರೆ ನಂಜ ಸಿಕ್ಕಲಿಲ್ಲ. ” ಅವನು ಮನೆಗೆ ಬರಲು, ಮೈ ಮುರಿಯುತ್ತೇನೆ” ಎಂದು ಹೇಳಿ ಅವಳ ಕಿವಿಗೆ ಬಳಿದುಕೊಳ್ಳಲು ಸ್ವಲ್ಪ ತೆಂಗಿನೆಣ್ಣೆಯನ್ನು ಕೊಡಿಸಿ ಸಮಾಧಾನಮಾಡಿ ಕಳಿಸಿದರು.

ಈ ಗಲಭೆಗಳೆಲ್ಲ ಮುಗಿಯುವ ವೇಳೆ‌ಗೆ ಕತ್ತಲಾಯಿತು. ಜೋಯಿಸರು ಗಾಡಿ ಹೊಡೆಯುತ್ತಿದ್ದವನು ಹೊಲೆಯನಲ್ಲವೆಂದು ತಿಳಿದು ಮೇಲೆ ಗಾಡಿ ಹತ್ತಿದರು. ಪುಟ್ಟಣ್ಣ ಗಾಡಿಯ ಹಿಂಭಾಗದಲ್ಲಿ ಜೋಯಿಸರಿಗೆ ದೂರವಾಗಿ ಕುಳಿತನು. ಗಾಡಿ ಕಾನೂರಿಗೆ ಹೊರಟಿತು.

ಗಾಡಿ ಕಳ್ಳಂಗಡಿಯ ಸಮೀಪಕ್ಕೆ ಬರುತ್ತಿದ್ದಾಗ ರಸ್ತೆಯ ಪಕ್ಕದ ಕಾಡುಗತ್ತಲೆಯಲ್ಲಿ ಬೆಳ್ಳಗಿದ್ದ ಒಂದು ಮೈಲಿಕಲ್ಲಿನ ಬಳಿ ವ್ಯಕ್ತಿಯೊಬ್ಬನು ನಿಂತು ಕಂಡಾಬಟ್ಟೆಯಾಗಿ ಬಯ್ಯುತ್ತ, ಉಗುಳುತ್ತ, ಮೈಲಿಕಲ್ಲಿಗೆ ಗುದ್ದಿ ಒದೆಯುತ್ತಿದ್ದನು. ಗಾಡಿ ಹತ್ತಿರಕ್ಕೆ ಬರಲು, ಅದಕ್ಕೆ ಕಟ್ಟಿದ್ದ ಲಾಟೀನಿನ ಬೆಳಕಿನಲ್ಲಿ ಆ ವ್ಯಕ್ತಿ ನಂಜನೆಂದು ಗೊತ್ತಾಯಿತು. ಅವನಿಗೆ ಇತ್ತಳ ಧ್ಯಾಸವಿರಲಿಲ್ಲ. ಕುಡಿದು ಹಣ್ಣುಹಣ್ಣಾಗಿದ್ದನು. ಆ ಮೈಲಿಕಲ್ಲನ್ನು ತನ್ನ ಹೆಂಡತಿಯೆಂದೋ ಅಥವಾ ಇನ್ನಾವ ಶತ್ರುವೆಂದೋ ಭಾವಿಸಿ ಒದ್ದು ಒದ್ದು ಗುದ್ದುತ್ತಿದ್ದನು. ನಿಂಗ ಗಾಡಿ ನಿಲ್ಲಿಸಬೇಕೆಂದಿದ್ದನು. ಆದರೆ  ಜೋಯಿಸರು ಹೆದರಿ, ಒಂದೇ ಉಸಿರಿನಲ್ಲಿ”ಮುಂದಕ್ಕೆ ಹೊಡಿ, ನಿಲ್ಲಿಸಬೇಡ” ಎಂದರು. ಸ್ವಲ್ಪ ದೂರ ಹೋದ ಮೇಲೆ ಅವರು ಗಾಡಿಯಿಂದಿಳಿದು ಪ್ರೇತ ಪಿಶಾಚಿಗಳಿಗೆ ಕೇಳಿಸುವಂತೆ ದೇವರನಾಮವನ್ನು ಗಟ್ಟಿಯಾಗಿ ಜಪಿಸುತ್ತ ಅಗ್ರಹಾರಕ್ಕೆ ಅಗಲುವ ದಾರಿಯಲ್ಲಿ ಹೋದರು. ಹೋಗುವಾಗ ನಾಳೆ ಕಳುಹಿಸುತ್ತೇನೆ ಎಂದು ಗಾಡಿಯ ಲಾಟೀನನ್ನೂ ತೆಗೆದುಕೊಂಡರು. ಕತ್ತಲೆಯಲ್ಲಿ ಕಾಡಿನ ಕಾಲುದಾರಿಯಲ್ಲಿ ಹೋಗಬೇಕಾಗಿದ್ದುದರಿಂದ ಅವರಿಗೆ ಬೆಳಕಿನ ಅವಶ್ಯಕತೆ ನಿಜವಾಗಿತ್ತು.

ಜೋಯಿಸರನ್ನು ಬೀಳ್ಕೊಂಡು ಗಾಡಿ ಮುಂಬರಿಯಿತು. ಕತ್ತಲೆಯಾಗಿದ್ದರೂ ಎತ್ತುಗಳಿಗೆ ರಸ್ತೆಯ ಜಾಡು ಚೆನ್ನಾಗಿ ಕಾಣುತ್ತಿದ್ದುದರಿಂದ ಚುರುಕಾಗಿ ನಡೆಯತೊಡಗಿದುವು. ಅದೂ ಅಲ್ಲದೆ ಅವುಗಳಿಗೆ ಹುರುಳಿಯ ನೆನಪು ಚಾಟಿಯ ಏಟಿಗಿಂತಲೂ ಬಲವಾಗಿತ್ತು. ಮನೆಯಲ್ಲಿ ಬೆಂದು ಬಿಸಿಬಿಸಿಯಾಗಿರುವ ಹುರುಳಿ ತಮಗಾಗಿ ಸಿದ್ಧವಾಗಿರುತ್ತದೆ ಎಂಬುದು ಅವಕ್ಕೆ ಅಭ್ಯಾಸ ಮಹಿಮೆಯಿಂದ ತಿಳಿದುಹೋಗಿತ್ತು.

ಗಾಡಿ ಕಳ್ಳಂಗಡಿಯಿದ್ದ ಜಾಗವನ್ನು ದಾಟಿ ಸ್ವಲ್ಪ ದೂರ ಹೋಗಿತ್ತು. ಕಾಡು ಸ್ವಲ್ಪ ದಟ್ಟವಾಗಿ ಬೆಳೆದಿದ್ದುದರಿಂದ ಮನುಷ್ಯರ ಕಣ್ಣಿಗಂತೂ ರಸ್ತೆ ಕಾಣುತ್ತಲೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ರಾತ್ರಿಯ ಮೌನವನ್ನೆಲ್ಲ ಮಧುರವಾಗಿ ಮಥಿಸುತ್ತಿದ್ದ ಎತ್ತುಗಳ ಕೊರಳ ಗಂಟೆಗಳ ಲೌಹರವಮಾಲೆ ಸ್ತಬ್ದವಾಯಿತು. ಎತ್ತು ನಿಂತು, ಗಾಡಿ ನಿಂತಿದ್ದಿತು! ಎತ್ತು ಉಸಿರಾಡುವುದು ಮಾತ್ರ ಕೇಳಿಸುತ್ತಿತ್ತು. ಅನ್ಯಮನಸ್ಕರನಾಗಿ ಗಾಡಿಯೊಳಗೆ ಕೂತಿದ್ದ ನಿಂಗ ಎಚ್ಚತ್ತು ಎತ್ತುಗಳನ್ನು ಚಪ್ಪರಿಸಿದನು. ಅವು ಕದಲಲಿಲ್ಲ. ಬೆಚ್ಚಿ ಉಸಿರಾಡುತ್ತಿದ್ದುವು. ಬಾರುಕೋಲಿನಿಂದ ಹೊಡೆದನು. ಎತ್ತು ಕುಣಿದಾಡಿ ಗಂಟೆಗಳ ಸದ್ದಾಯಿತೇ ಹೊರತು, ನಿಂತ ಹೆಜ್ಜೆ ಕೀಳಲಿಲ್ಲ. ನಿಂಗ ಪುಟ್ಟಣ್ಣರಿಗೆ ಆಶ್ಚರ್ಯವಾಯಿತು. ಎಲ್ಲಿಯಾದರೂ ದಾರಿಯ ಪಕ್ಕದಲ್ಲಿ ಹುಲಿ ಕೂತಿರಬಹುದೆಂದು ಊಹಿಸಿದರು. ನಿಂಗನಂತೂ ಕೆಳಗಿಳಿಯಲೇ ಇಲ್ಲ. ಪುಟ್ಟಣ್ಣ ಕೆಳಗಿಳಿದು ಗಾಡಿಯ ಮುಂದೆ ಹೋದನು. ರಸ್ತೆಯ ಮಧ್ಯೆ ಅವನ ಕಾಲಿಗೆ ಏನೋ ಬೆಚ್ಚಗೆ ಸೋಂಕಿದಂತಾಯಿತು. ಬಾಗಿ ನೋಡುತ್ತಾನೆ ಮನುಷ್ಯದೇಹ; ರಸ್ತೆಗೆ ಅಡ್ಡಲಾಗಿ ಬಿದ್ದಿದೆ! ಅದಕ್ಕಾಗಿಯೇ ಎತ್ತು ಮುಂದೆ ಹೋಗದೆ ನಿಂತಿದ್ದುದು! ನಿಂಗನಿಂದ ಬೆಂಕಿ ಪೆಟ್ಟಿಗೆ ಈಸಿಕೊಂಡು ಒಂದು ಕಡ್ಡಿ ಗೀಚಿ ನೋಡುತ್ತಾನೆ ಕೆಳಕಾನೂರು ಅಣ್ಣಯ್ಯಗೌಡರ ಮಗ ಓಬಯ್ಯ! ಮಧ್ಯಪಾನದಿಮಂದ ಮೂರ್ಛೆಹೋಗಿ ಬಿದ್ದಿದ್ದಾನೆ! ಇಬ್ಬರೂ ಸೇರಿ ಅವನನ್ನು ಎತ್ತಿ ಗಾಡಿಗೆ ಹಾಕಿಕೊಂಡರು.

ಗಾಡಿ ಕಾನೂರಿಗೆ ಬರುತ್ತಿದ್ದಾಗ ದೂರದಿಂದಲೆ ಗಂಟೆಯ ಸದ್ದನ್ನು ಕೇಳಿ ವಾಸು, ಪುಟ್ಟ ಇಬ್ಬರೂ ಹೆಬ್ಬಾಗಿಲಿಗೆ ಬಂದಿದ್ದರು. ವಾಸುವಿಗೆ ಹೂವಣ್ಣಯ್ಯ ರಾಮಣ್ಣಯ್ಯರನ್ನು ಎದುರುಗೊಳ್ಳಲು ಎದೆ ಹಿಡಿಸದಷ್ಟು ಉತ್ಸಾಹ, ಉಲ್ಲಾಸವಿತ್ತು. ಆದರೆ ಪುಟ್ಟಣ್ಣನಿಂದ ವಿಷಯವೆಲ್ಲ ಗೊತ್ತಾದ ಮೇಲೆ ಅವನ ಮುಖ ಖಿನ್ನವಾಯಿತು. ಹೇರಾಸೆ ಗುಳ್ಳೆಯಂತೆ ಒಡೆದುಹೋಯಿತು. ಒಳಗೆ ಓಡಿಹೋಗಿ ದೊಡ್ಡಮ್ಮ ಅಕ್ಕಯ್ಯರಿಗೆ ಪುಟ್ಟಣ್ಣ ಹೇಳಿದ್ದನ್ನೆಲ್ಲ ಉದ್ವೇಗದಿಂದ ಹೇಳಿಬಿಟ್ಟನು. ಹುಡುಗನಾದುದರಿಂದ ಮಾತಾಡುವುದರಲ್ಲಿ ಎಚ್ಚರಿಕೆ ಸಾಲದೆ” ಗಾಡಿ ಬಿದ್ದು ಹೂವಣ್ಣಯ್ಯನ ಬೆನ್ನು ಮುರಿದಿದೆಯಂತೆ. ರಾಮಣ್ಣಯ್ಯನೂ ಅವನೊಡನೆ ಮುತ್ತಳ್ಳಿಯಲ್ಲಿ ಇದ್ದಾನಂತೆ” ಎಂದು ನಡೆದುದನ್ನಾದರೂ ಸ್ವಲ್ಪ ಅತ್ಯುಕ್ತಿಯಿಂದ ಹೇಳಿದನು. ಒಡನೆಯೆ ನಾಗಮ್ಮನವರು ಗಟ್ಟಿಯಾಗಿ ರೋದಿಸುತ್ತ ಎದೆ ಬಡಿದುಕೊಳ್ಳುತ್ತ ದೇವರನ್ನೂ ಚಂದ್ರಯ್ಯಗೌಡರನ್ನೂ ಸುಬ್ಬಮ್ಮನನ್ನೂ ಬಾಯಿಗೆ ಬಂದಂತೆ ಶಪಿಸುತ್ತ ಅಂಗಳಕ್ಕೆ ನುಗ್ಗಿ ತುಲಸಿಯ ಕಲ್ಲಿಗೆ ತಲೆ ಚಚ್ಚಿಕೊಳ್ಳತೊಡಗಿದರು. ಅಷ್ಟು ಹೊತ್ತಿಗೆ ಸರಿಯಾಗಿ ಕಾನುಬೈಲಿನಲ್ಲಿ ಕಳ್ಳುಕುಡಿದು ಪೂರೈಸಿ ಚಂದ್ರಯ್ಯಗೌಡರೂ ಸೆಟ್ಟರೂ ತಿಮ್ಮನೊಡನೆ ನಾಗಮ್ಮವನರ ಬೈಗುಳವನ್ನೆಲ್ಲ ಆಲಿಸುತ್ತ ಮನೆಯೊಳಗೆ ಪ್ರವೇಶಮಾಡಿದರು.