ಎಂಟು ದಿನಗಳು ಕಳೆದವು. ಅಣ್ಣಯ್ಯಗೌಡರೂ ಓಬಯ್ಯನೂ ವಾಸಿಸುತ್ತಿದ್ದ ಕೆಳಕಾನೂರಿನ ಹುಲ್ಲಿನ ಮನೆ ಹೂವಯ್ಯ, ನಾಗಮ್ಮನವರು, ಪುಟ್ಟಣ್ಣ ಇವರ ನಿವಾಸವಾಗಿ ಹೆಚ್ಚು ಗೌರವಾನ್ವಿತವಾಯಿತು. ಪುಟ್ಟಣ್ಣನ ಅನವರತ ಶ್ರಮದಿಂದಲೂ ಹೂವಯ್ಯನ ಕಲಾಭಿರುಚಿಯಿಂದಲೂ ಅದು ನೋಡುವುದಕ್ಕೆ ಒಂದು ಸಣ್ಣ ಕುಟೀರದಂತೆ ಮನೋಹರವೂ ಆಯಿತು.

ಮನೆಗೆ ಕಾಣದ ಬಣಬೆಯಲ್ಲಿದ್ದ ನೆಲ್ಲುಹುಲ್ಲನ್ನು ಹೊದಿಸಿ, ಮಾಡಿನ ಅಂಚನ್ನು ಸಮನಾಗಿ ಕತ್ತರಿಸಿದ್ದರಿಂದ ಅದಕ್ಕೆ ಏನೋ ಒಂದು ಹೊಸತನ ಬಂದಿತ್ತು. ಮೊದಲು ಸಗಣಿ ಮೆತ್ತಿ ಸಿಡುಬೆದ್ದವನ ಮುಖದಂತೆ ಕಾಣುತ್ತಿದ್ದ ಗೋಡೆಗಳಿಗೆ ಈಗ ಕೆಮ್ಮಣ್ಣು ಬಳಿದು ನುಣುಪುಗೈದು ಬಳಿದುದರಿಂದ ಆಹ್ಲಾದಕರವಾದ ಹೊಸ ಕಾಂತಿ ಮೆರೆದಿತ್ತು. ಅನೇಕ ವರ್ಷಗಳಿಂದಲೂ ಹೊಗೆ ಹತ್ತಿಕೊಂಡು ಕರಿಯಿಲ್ಲಣ ನೇತಾಡುತ್ತಿದ್ದ ತೊಲೆಗಳೂ ಅಟ್ಟದ ಮರಮುಟ್ಟುಗಳೂ ಈಗಲೂ ಕರಗಿದ್ದರೂ ಚೊಕ್ಕಟವಾಗಿದ್ದುವು. ಜೇಡರ ಬಲೆಗಳೂ ಬಂಜೆಹುಳುಗಳ ಗೂಡುಗಳೂ ಮಾಯವಾಗಿ ಮನೆಯ ಒಳಜಾಗ ವಿಸ್ತಾರವಾದಂತೆ ತೋರುತ್ತಿತ್ತು. ಮನೆಯ ಸುತ್ತಲೂ ಸದಾ ಬಿದ್ದಿರುತ್ತಿದ್ದ ಕಸ ಸೊಪ್ಪು ಸದೆಗಳೆಲ್ಲ ತೊಲಗಿ ಶುಚಿಯಾಗಿತ್ತು.

ಎಲ್ಲಕ್ಕಿಂತಲೂ ವಿಶೇಷವಾದುದೆಂದರೆ, ಆ ಮನೆ ಹಿಂದೆ ಸ್ವಪ್ನದಲ್ಲಿಯೂ ಕೂಡ ಕಾಣದಿದ್ದ ಚಿತ್ರಪಟಗಳು ಮತ್ತು ಪುಸ್ತಕಗಳು ! ಹೂವಯ್ಯ ಕಾನೂರನ್ನು ಬಿಟ್ಟ ಎರಡನೆಯ ದಿನವೇ ತೀರ್ಥಹಳ್ಳಿಗೆ ಹೋಗಿದ್ದ ಚಿನ್ನಯ್ಯ ಮೈಸೂರಿನಿಂದ ಅಲ್ಲಿಗೆ ಬಂದಿದ್ದ ಹೂವಯ್ಯನ ಸಾಮಾನುಗಳನ್ನು ತಮ್ಮ ಎತ್ತಿನ ಗಾಡಿಯಲ್ಲಿ ಹೇರಿ ಕಳುಹಿಸಿದ್ದನು. ಆ ಸಾಮಾನುಗಳು ಬಂದುದು ಹೂವಯ್ಯನ ಭಾಗಕ್ಕೆ ಶಾಂತಿ, ಉತ್ಸಾಹ, ಆನಂದ, ಜ್ಞಾನ – ಇತ್ಯಾದಿಗಳ ನಿಧಿಯೇ ಬಂದಂತಾಗಿತ್ತು. ನೂರಾರು ಚಿತ್ರಪಟಗಳು ಗೋಡೆಗಳನ್ನಲಂಕರಿಸಿದುವು. ಜಗಲಿಯ ನಡುವೆ ಮೇಜು ಕುರ್ಚಿಗಳನ್ನಿಟ್ಟು, ಅದಕ್ಕೆ ಸಮೀಪವಾಗಿ ಬೀರುವನ್ನಿಟ್ಟು, ಗ್ರಂಥರಾಶಿಯನ್ನು ಅಂದವಾಗಿ ಜೋಡಿಸಿದನು. ಅಂತೂ ಒಂದು ವಾರ ಕಳೆಯುವುದರಲ್ಲಿ ಕೆಳಕಾನೂರಿನ ಹುಲ್ಲಿನ ಮನೆ ಕಾನೂರಿನ ಹೆಂಚಿನ ಮನೆಯನ್ನು ಗಾತ್ರ ಬಲಗಳಲ್ಲಿ ವಿನಾ ಉಳಿದೆಲ್ಲದರಲ್ಲಿಯೂ ಮೂದಲಿಸುವಂತಾಯಿತು.

ಮೊದಲು ಮೊದಲು ಹೂವಯ್ಯನ ಮನದಲ್ಲಿ ನೂತನ ಗೃಹ ಪ್ರವೇಶದ ಆನಂದಕ್ಕಿಂತಲೂ ಹೆಚ್ಚಾಗಿ ಪುರಾತನವಾದ ಪಿತೃಗೃಹತ್ಯಾಗದ ಶೋಚನೀಯತೆಯಿತ್ತು. ಆದರೆ ತನಗೆ ಜೀವಾತುವಾಗಿದ್ದ ಗ್ರಂಥಸಮೂಹ ಕೈಸೇರಿದ ಮೇಲೆ ತಮ್ಮ ಹೊಸ ಹುಲ್ಲುಮನೆಯೇ ಪರ್ಣಕುಟೀರದಂತೆ ಶಾಂತಿಮಯವಾಗಿ ಕಂಡುಬಂದಿತು. ಅಲ್ಲದೆ ಕಾನೂರಿನಲ್ಲಿರುತ್ತಿದ್ದ ಚಂದ್ರಯ್ಯಗೌಡರ ಕರೆಕರೆಯೂ ತಪ್ಪಿ ಮನಸ್ಸಿನಲ್ಲಿ ನೆಮ್ಮದಿ ನೆಲಸಿತು. ರಾಮಯ್ಯನೂ ಸಾಯಂಸಂಚಾರದ ನೆವದಲ್ಲಿ, ಜಡಿಮಳೆ ಹೊಯ್ಯುತ್ತಿದ್ದರೂ ಲೆಕ್ಕಿಸದೆ, ಪ್ರತಿದಿನವೂ ಕೆಳಕಾನೂರಿಗೆ ಬಂದು ಅಣ್ಣನೊಡನೆ ಒಂದೆರಡು ಗಂಟೆಗಳಿದ್ದು ಹೋಗತೊಡಗಿದ್ದನು. ಯಾವ ಯಾವ ಚಿತ್ರಪಟಗಳನ್ನು ಎಲ್ಲಿ ಎಲ್ಲಿ ತೂಗುಹಾಕಬೇಕು, ಕುರ್ಚಿ ಮೇಜು ಪುಸ್ತಕದ ಬೀರುಗಳನ್ನು ಎಲ್ಲಿ ಇಡಬೇಕು ಎಂಬ ವಿಚಾರಗಳಲ್ಲಿಯೂ ಅವುಗಳನ್ನಿಡುವ ಕಾರ್ಯದಲ್ಲಿಯೂ ರಾಮಯ್ಯ ಮುಖ್ಯ ಭಾಗ ವಹಿಸಿದ್ದನು. ಅಲ್ಲದೆ ತನ್ನ ಕೆಲವು ಉತ್ತಮತರದ ಸಾಮಾನುಗಳನ್ನೂ ಪಟಗಳನ್ನೂ ಪುಸ್ತಕಗಳನ್ನೂ ಹೂವಯ್ಯನಲ್ಲಿಯೇ ಇಡಲು ಏರ್ಪಾಡು ಮಾಡಿದನು. ಅವನಿಗೆ ಕೆಳಕಾನೂರು ಒಂದು ತರಹದ ‘ರೀಡಿಂಗ್‌ರೂಂ’ ‘ಲೈಬ್ರರಿ’ ‘ಆಶ್ರಮ’ ‘ಕ್ಲಬ್ಬು’ ಎಲ್ಲಾ ಆಗಿ ಪರಿಣಮಿಸಿತ್ತು. ಕೆಲವು ಸಾರಿ ಅವನಿಗೆ, ಮನೆ ಹಿಸ್ಸೆಯಾಗಿ ಹೂವಯ್ಯ ಕೆಳಕಾನೂರಿಗೆ ಬಂದದ್ದೂ ಒಂದು ಪ್ರಚ್ಛನ್ನ ಶ್ರೇಯಸ್ಸಿನಂತೆ ತೋರುತ್ತಿತ್ತು. ಕೆಳಕಾನೂರಿಗೆ ನಿತ್ಯವೂ ಬಂದು ಹೋಗುವುದಕ್ಕಾಗಿ ತಂದೆಯಿಂದ ಎಷ್ಟು ಬೈಗುಳವನ್ನಾದರೂ ಸಹಿಸಲು ಸಿದ್ಧನಾಗುತ್ತೇನೆ ಎಂದು ನಿರ್ಧರಿಸಿಬಿಟ್ಟಿದ್ದನು.

ಹೂವಯ್ಯ ಕೆಳಕಾನೂರಿಗೆ ಬಂದ ಎಂಟನೆಯ ದಿನ ಒಂದು ಸಣ್ಣ ಸಂತೋಷ ಕೂಟವನ್ನು ನಿಶ್ಚಯಿಸಿ, ತಾನೇ ಕಾನೂರಿಗೆ ಹೋಗಿ ಚಂದ್ರಯ್ಯಗೌಡರನ್ನೂ ಇತರರನ್ನೂ ಆಹ್ವಾನಿಸಿದರು. ಸೀತೆಮನೆಗೂ ಮುತ್ತಳ್ಳಿಗೂ ಇತರ ಒಂದೆರಡು ಮನೆಗಳಿಗೂ ಪುಟ್ಟಣ್ಣನನ್ನು ‘ಕರೆಯಲು’ ಕಳುಹಿಸಿದನು.

ಆ ದಿನ ಬೆಳಿಗ್ಗೆ ಎಂಟೂವರೆ ಗಂಟೆಯ ಹೊತ್ತಿಗೆ ಕಾನೂರಿನಿಂದ ರಾಮಯ್ಯ, ಪುಟ್ಟಮ್ಮ, ವಾಸು ಮೂವರೂ ಬಂದರು. ವಾಸುವಂತೂ ಪಂಜರದಿಂದ ಬಿಡುಗಡೆ ಹೊಂದಿದ ಜಿಂಕೆಯಂತೆ ಹಾರುತ್ತ ಕುಣಿಯುತ್ತ ಗಳಪುತ್ತಾ ಬಂದು ನಾಗಮ್ಮನವರನ್ನು ಒರಗಿ ಕುಳಿತು, ನೂರಾರು ವಿಷಯಗಳನ್ನು ಕುರಿತು ಹೇಳುತ್ತ, ಪ್ರಶ್ನೆ ಕೇಳುತ್ತ, ದೊಡ್ಡಮ್ಮನ ಕಣ್ಣು ಆನಂದದಿಂದ ಹನಿಯಾಡುವಂತೆ ಮಾಡಿ, ಅಲ್ಲಿಂದೆದ್ದು ಮನೆಯನ್ನೆಲ್ಲಾ ಮೂಲೆ ಮೂಲೆಗೂ ಹೋಗಿ ನೋಡಿ, ಚಿತ್ರಪಟಗಳನ್ನೂ ಪುಸ್ತಕಗಳನ್ನೂ ಈಕ್ಷಿಸಿ, ಹಿಗ್ಗಿ ಬಿಟ್ಟನು.

ಹೂವಯ್ಯ ಸುಬ್ಬಮ್ಮ ಏಕೆ ಬರಲಿಲ್ಲ ಎಂದು ಕೇಳಲು ಪುಟ್ಟಮ್ಮ ನಡೆದ ಕಥೆಯನ್ನು ಹೇಳಿದನು. ಸುಬ್ಬಮ್ಮನಿಗೆ ಬರಬೇಕು ಎಂದು ಬಹಳ ಕುತೂಹಲವಿತ್ತಂತೆ. ಹೊಸ ಸೀರೆಯನ್ನೂ ಉಟ್ಟಾಗಿತ್ತಂತೆ. ಆದರೆ ಚಂದ್ರಯ್ಯ ಗೌಡರು ಬಾಯಿಗೆ ಬಂದಂತೆ ಬೈದು ಗದರಿಸಿ ಆಕೆಯನ್ನು ನಿಲ್ಲಿಸಿಬಿಟ್ಟಿದ್ದರು.

ಒಂಬತ್ತು ಗಂಟೆಯ ಹೊತ್ತಿಗೆ ಸೀತೆಮನೆ ಸಿಂಗಪ್ಪಗೌಡರು ಬಂದರು. ಬಂದೊಡನೆಯೆ ಮನೆಯನ್ನೂ ಬಾಗಿಲುಗಳಿಗೆ ಕಟ್ಟಿದ್ದ ತಳಿರು ತೋರಣಗಳನ್ನೂ ನೋಡಿ ಹೃತ್ಪೂರ್ವಕವಾಗಿ ನಗುತ್ತಾ “ಓ ಹೋ ಹೋ ಏನಿದು ಹೂವಯ್ಯಾ ? ನಿನ್ನ ಮದುವೆಮನೆ ಇದ್ದಹಾಂಗಿದೆಯಲ್ಲ !” ಎಂದು ಎಲ್ಲರನ್ನೂ ನಗಿಸಿಬಿಟ್ಟರು.

ಮಧ್ಯಾಹ್ನ ಹತ್ತು ಗಂಟೆಗೆ ಮುತ್ತಳ್ಳಿಯ ಗಾಡಿ ಅಂಗಳದಲ್ಲಿ ನಿಂತಿತು. ಚಿನ್ನಯ್ಯ, ಸೀತೆ, ಸೀತೆಯ ಕೈಹಿಡಿದ ಲಕ್ಷ್ಮಿ (ಬರಿ ‘ಲಕ್ಷ್ಮಿ’ ಎಂದರೆ ತಪ್ಪಾಗುತ್ತದೆ !) ಮೂವರೂ ಗಾಡಿಯಿಂದಿಳಿದರು. ಅವರನ್ನು ಸ್ವಾಗತಿಸಲು ಮನೆಯಲ್ಲಿದ್ದವರೆಲ್ಲರೂ ಅಲ್ಲಿ ನೆರೆದಿದ್ದರು.

ಸಿಂಗಪ್ಪಗವಡರು ‘ಓ ಹೋ ಹೋ ಹೂವಯ್ಯಾ, ನಾ ಹೇಳಿದ್ದೇ ಸರಿ ! ಹೆಣ್ಣಿನ ಕಡೆಯ ದಿಬ್ಬಣವೂ ಬಂದೆಬಿಡ್ತಲ್ಲಾ !’ ಎಂದರು.

ಅಲ್ಲಿ ನೆರೆದಿದ್ದವರೆಲ್ಲರೂ ಗೊಳ್ಳೆಂದು ನಕ್ಕರು. ಮದುಮಗಳಂತೆ ಸಿಂಗಾರಮಾಡಿಕೊಂಡಿದ್ದ ಸೀತೆಯ ಮುಖ ಓಕುಳಿ ಚೆಲ್ಲಿದಂತೆ ಕೆಂಪೇರಿ, ನಾಚಿಕೆಯಿಂದ ತಲೆಬಾಗಿದಳು. ಹೂವಯ್ಯನೂ ಎಲ್ಲರೊಡನೆ ನಗುತ್ತಿದ್ದನು. ಆದರೆ ಅವನ ಮುಖವೂ ಕೆಂಪಾಗಿತ್ತು. ಅವನು ತಲೆ ಬಾಗಿಸಲಿಲ್ಲ. ಅವರಿವರ ಕಡೆಗೆ ಮುಖ ತಿರುಗಿಸಿ ಮಾತಾಡುವ ನೆವದಿಂದ ವಸಂತ ಸೌಂದರ್ಯದ ಅವತಾರಮೂರ್ತಿಯಂತೆ ಮೆರೆಯುತ್ತಿದ್ದ ಸೀತೆಯ ಕಡೆಗೆ ನೋಡಿ ನೋಡಿ ಆನಂದಿಸುತ್ತಿದ್ದನು.

ರಾಮಯ್ಯನೂ ಸಿಂಗಪ್ಪಗೌಡರು ತನ್ನನ್ನುದ್ದೇಶಿಸಿಯೇ ಹಾಸ್ಯ ಮಾಡಿದರೆಂದು ಭಾವಿಸಿ, ಒಳಗೊಳಗೆ ಹಿಗ್ಗಿ ಸೀತೆಯ ಕಡೆಗೆ ಆಗಾಗ ನೋಡುತ್ತಿದ್ದನು.

ಚಿನ್ನಯ್ಯ ಪುಟ್ಟಮ್ಮರ ಮನೋಭಾವಗಳೂ ರಥಗಳೂ ಅದೇ ಶೃಂಗಾರ ವೀಧಿಯಲ್ಲಿ ಮರವನಿಗೆ ಹೊರಟಿದ್ದುವು.

ನಾಗಮ್ಮನವರು, ಚಿಕ್ಕಮಕ್ಕಳು ನಂಟರ ಮನೆಗೆ ಬಂದಾಗ ಮಾಡುವ ಪದ್ಧತಿಯಂತೆ, ಕೆಂಗೂಳಿಗೆ ಚುಚ್ಚಿದ ಕಕ್ಕಡದುರಿಯನ್ನು ಲಕ್ಷ್ಮಿಗೆ ಆರತಿಯೆತ್ತಿ ಓಕುಳಿಗೆ ಕೆಂಗೆಂಡಗಳನ್ನು ಹಾಕಿ ಚ್ಞುಯ್ ಎಂದು ಸದ್ದು ಮಾಡಿ, ಹಣೆಗೆ ಕಕ್ಕಡದ ಬತ್ತಿಯಿಂದ ತೆಗೆದ ಕರಿಮಸಿಯನ್ನು ಹಚ್ಚಿ, ‘ದಿಸ್ಟಿ ಬೆಳಗಿದ’ ತರುವಾಯ ಎಲ್ಲರೂ ಮನೆಯೊಳಗೆ ಹೋದರು.

ಆ ವಿಚಿತ್ರವಾದ ಶುಭಕ್ರಿಯಾಲೀಲೆಯನ್ನು ನೋಡುತ್ತಾ ಬಾಲವಲ್ಲಾಡಿಸುತ್ತಾ ನಿಂತಿದ್ದ ಡೈಮಂಡು ರೋಜಿ ಕೊತ್ವಾಲಗಳು ಅಂಗಳಕ್ಕೆ ಗಾಡಿ ಬಂದೊಡನೆ ನಿಲ್ಲಿಸಿದ್ದ ಪ್ರಣಯಕ್ರೀಡೆಯನ್ನು ಮತ್ತೆ ಪ್ರಾರಂಭಿಸಿದುವು.

ಲಕ್ಷ್ಮಿ ಬೇಡವೆಂದರೂ ಕೇಳದೆ ಹಠಮಾಡಿ ಅಕ್ಕಯ್ಯನೊಡಗೂಡಿ ಎಷ್ಟು ಉತ್ಸಾಹದಿಂದ ನಂಟರ ಮನೆಗೆ ಬಂದಿದ್ದಳೋ ಅಷ್ಟೇ ರಭಸದಿಂದ ಮುತ್ತಳ್ಳಿಯಲ್ಲಿದ್ದ ತಾಯಿಯ ಬಳಿಗೆ ಮರಳಿ ಹೋಗಬೇಕೆಂದು ಹಠಹಿಡಿದು ಅಳತೊಡಗಿದಳು. ಯಾರು ಯಾರು ಎತ್ತಿಕೊಂಡು ಸಂತೈಸಿದರೂ ಎಷ್ಟು ಎಷ್ಟು ತಿಂಡಿಕೊಟ್ಟು ಉಪಚರಿಸಿದರೂ ಅವಳು ಬೇರೆ “ಆ….ವ್ವಾ. ಆ ಆ ಆ !” ಎಂದು ಕಿಂದರಿಬಾರಿಸುವುದನ್ನು ನಿಲ್ಲಿಸಲಿಲ್ಲ. ಸೀತೆಗೆ ತಂಗಿಯ ಮೇಲಣ ಸಿಟ್ಟಿನಿಂದ ಅಳುಬಂದು ಕಣ್ಣೀರು ತಡೆಯಲಾಗಲಿಲ್ಲ.

ಅಕ್ಕಯ್ಯ ಕೋಪಪ್ರದರ್ಶನಮಾಡಿದಷ್ಟೂ ಹೆಚ್ಚಾಗಿ ಲಕ್ಷ್ಮಿ ಅಳಲಾರಂಭಿಸಿದಳು. ಅಂತೂ ಹಾಗೂ ಹೀಗೂ ಮಧ್ಯಾಹ್ನದ ಊಟ ಮುಗಿಯುವ ತನಕ  ಅವಳನ್ನು ಉಪಚರಿಸುತ್ತಿದ್ದು, ಊಟ ಮುಗಿದೊಡನೆಯೆ ಲಕ್ಷ್ಮಿಯನ್ನು ಕೂರಿಸಿಕೊಂಡು ಹೋಗುವಂತೆ ನಂಜನಿಗೆ ಸೀತೆ ಹೇಳಿದಳು.

ನಂಜ ತಾನೊಬ್ಬನೇ ಗಾಡಿ ಹೊಡೆದುಕೊಂಡು ಹಿಂದಕ್ಕೆ ಹೋಗುತ್ತೇನೆ ; ಆದ್ದರಿಂದ ಕಳ್ಳಂಗಡಿಯಲ್ಲಿ ಚೆನ್ನಾಗಿ ‘ಸದ್ದುಕೊಂಡು ಹೋಗಬೈದು’ ಎಂದು ಹಾರೈಸಿದನು. ಆದರೆ ಈಗ ಲಕ್ಷ್ಮಿಯನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಬಂದುದರಿಂದ ತನ್ನ ‘ಹುನಾರು’ ವ್ಯರ್ಥವಾಗುತ್ತದೆಂಬ ಆಶಾಭಂಗದಿಂದ ‘ಯಾಕ್ರೊ, ಸೀತಮ್ಮ, ಅವರೂ ಇರಲಿ ಒಂದೆರಡು ದಿನ ನಿಮ್ಮ ಜೋತೇಲಿ !’ ಎಂದನು.

ಸೀತೆಗೆ ಸಿಟ್ಟು ಉಕ್ಕಿಬಂದು ‘ಇರೋದು ಬ್ಯಾಡ, ಏನೂ ಬ್ಯಾಡ ! ನೀ ಕರ‍್ಕೊಂಡು ಹೋಗ್ತಿದ್ರೆ ಹೋಗು ! ಮತ್ತೆ ನಾನು ಬಾಯಿಗೆ ಬಂದ್ಹಾಂಗೆ ಹೇಳಿಬಿಟ್ಟೇನು !’ ಎಂದು ಸಿಡುಕಿದುದನ್ನು ಕಂಡು ನಂಜ ಮರುಮಾತು ಹೇಳದೆ ಒಪ್ಪಿದನು.

ಆದರೆ ಮಾರಾಯಗಿತ್ತಿ ಮಹಾರಾಣಿ ಲಕ್ಷ್ಮೀದೇವಿಯವರನ್ನು ಗಾಡಿ ಹತ್ತಿಸುತ್ತಿದ್ದಾಗ ಅಥವಾ ರಥವೇರಿಸುತ್ತಿದ್ದಾಗ, ಅವಳು ಅಕ್ಕಯ್ಯನೂ ತನ್ನ ಜೊತೆಗೆ ಬರಬೇಕೆಂದು ಹಠಹಿಡಿದು ಅಳತೊಡಗಿದಳು. ಸೀತೆಯ ಗಂಟಲಿಗೆ ಗಾಳ ಸಿಕ್ಕಿದಂತಾಯ್ತು. ಪ್ರತಿಭಟಿಸಿದರೆ ನೋವು, ಶರಣಾದರೆ ಸಾವು ಎನ್ನುವ ಮೀನಿನ ಸ್ಥಿತಿ ಅವಳದಾಯಿತು. ಆವಳಿಗೆ ಅಳಬೇಕೋ ನಗಬೇಕೋ ಕೋಪ ಮಾಡಿಕೊಳ್ಳಬೇಕೋ ಗುದ್ದಬೇಕೋ ಒಂದೂ ಬಗೆಹರಿಯಲಿಲ್ಲ. ಆ ದಿನ ಬೆಳಿಗ್ಗೆ ತಾನೆ ಹೂವಯ್ಯಬಾವನ ಬಳಿಗೆ ಬಂದಿದ್ದ ಅವಳು ಅದೇ ದಿನ ಮಧ್ಯಾಹ್ನ ಹಿಂತಿರುಗಬೇಕು ಎಂದರೆ ಹೇಗೆ ಸಾಧ್ಯವಾದೀತು ? ಹಸಿದ ದುಂಬಿ ಹೂವಿನ ಮೇಲೆ ಕೂತೊಡನೆಯೆ ‘ಮಕರಂದ ಪಾನಮಾಡಿದ್ದು ಸಾಕು, ಇನ್ನು ಹಾರಿ ಹೋಗು’ ಎಂದರೆ ಅದು ಹೋಗುತ್ತದೆಯೆ ? ಸೀತೆ ಹಲ್ಲುಹುಲ್ಲು ಕಡಿದು ಕಣ್ಣು ಕೆಂಪಗೆ ಮಾಡಿಕೊಂಡು ತಂಗಿಯ ಕಡೆ ದುರದುರನೆ ನೋಡಿದಳು. ಹೂವಯ್ಯ, ಸಿಂಗಪ್ಪಗೌಡರು, ರಾಮಯ್ಯ ಮೊದಲಾದವರು ಯಾರೂ ಅಲ್ಲಿ ಇರದಿದ್ದರೆ ಲಕ್ಷ್ಮಿಗೆ ಗುದ್ದು ಹೇರಿ ರಾಹುಬಿಡಿಸುತ್ತಿದ್ದಳೆಂದು ತೋರುತ್ತದೆ.

ತಂಗಿಯನ್ನು ಬಾಚಿ ತಬ್ಬಿಕೊಂಡು ದಮ್ಮಯ್ಯಗುಡ್ಡೆಹಾಕುತ್ತ ಇತರರಿಗೆ ಕೇಳಿಸದಷ್ಟು ಮೃದುವಾಗಿ “ನಿನ್ನ ದಮ್ಮಯ್ಯ ಕಾಣೇ ! ನಿನ್ನ ಕಾಲಿಗೆ ಬೀಳ್ತೀನೆ ಪುಣ್ಯಾತಗಿತ್ತಿ ! ಅಷ್ಟು ಉಪಕಾರ ಮಾಡೇ !” ಎಂದು ಅಂಗಲಾಚಿ ಬೇಡಿಕೊಂಡಳು. ಆದರೆ ಶರಣುಹೊಕ್ಕವರನ್ನು ಕಾಪಾಡಬೇಕು ಎಂಬ ಬುದ್ಧಿ ಬರುವಷ್ಟು ದೊಡ್ಡವಳಾಗಿರಲಿಲ್ಲ ಲಕ್ಷ್ಮಿ. ಅವಳು “ನಾ….ನೊ….ಲ್ಲೇ….ನೀ….ಬರಬೇಕು ಊ ಊ !” ಎಂದು ಮುಖ ಹಿಂಡುವುದನ್ನು ಬಿಡಲೇ ಇಲ್ಲ.

ಸೀತೆಯ ಹೃದಯದಲ್ಲಿ ಕೋಪ ಜ್ವಾಲಾಮಯವಾಗಿ, ಇತರರಾರೂ ಕಾಣದಂತೆ, ಲಕ್ಷ್ಮಿಯ ಒಳತೊಡೆಯನ್ನು ಚೆನ್ನಾಗಿ ಚಿವುಟಿದಳು. ಒಡನೆಯೇ ಸನ್ನಿವೇಶ ‘ರಾಣಾರಂಪ’ವಾಯಿತು. ಲಕ್ಷ್ಮಿ ಹಾವು ಕಡಿದವಳಂತೆ ಕಿಟ್ಟನೆ ಕಿರಿಚಿಕೊಂಡು ಗೊಳೋ ಎಂದು ಬಿದ್ದು ಬಿದ್ದು ಅಳತೊಡಗಿದಳು. ಅಷ್ಟರಲ್ಲಿ ನಾಗಮ್ಮನವರು ಪುಟ್ಟಮ್ಮ ಎಲ್ಲರೂ ಬಳಿಗೆ ಬಂದು ಲಕ್ಷ್ಮಿಯನ್ನು ಸಂತೈಸಿ, ಬಹಳ ಹೊತ್ತಿನಮೇಲೆ, ಪುಟ್ಟಣ್ಣನೊಡಗೂಡಿ ಮುತ್ತಳ್ಳಿಗೆ ಹೋಗುವಂತೆ ಒಪ್ಪಿಸಿದರು.

ನಂಜ ಗಾಡಿ ಕಟ್ಟಿದನು. ಲಕ್ಷ್ಮಿಯನ್ನು ಕರೆದುಕೊಂಡು ಪುಟ್ಟಣ್ಣ ಗಾಡಿಯೇರಿದನು. ಗಾಡಿ ಹೊರಟಿತು.

ಹೂವಯ್ಯ ಹಿಂದಿನಿಂದ “ಅವಳನ್ನು ಬಿಟ್ಟು ನೀ ಬೇಗ ಬಂದುಬಿಡು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

ಪುಟ್ಟಣ್ಣನೂ “ಆಯಿತೂ ! ಆಯಿತೂ !” ಎಂದು ಪ್ರತ್ಯುತ್ತರ ಕೂಗಿದನು.

ಗಾಡಿ ಕಣ್ಮರೆಯಾದಮೇಲೆ, ಅದ್ಯಕ್ಕೆ ಪೀಡೆ ತೊಲಗಿತಲ್ಲಾ ಎನ್ನುವಷ್ಟರಮಟ್ಟಿಗೆ ಸೀತೆಯ ಮನಸ್ಸು ನೆಮ್ಮದಿಯಾಯಿತು.

ಸಾಯಂಕಾಲ ಐದು ಗಂಟೆಯಾಗಿರದಿದ್ದರೂ ಮೋಡ ಕವಿದು ಕೊಂಡು ಜಡಿಮಳೆ ಬಿಡದೆ ಹೊಡೆಯುತ್ತಿದ್ದುದರಿಂದ ಆರೂವರೆ ಏಳು ಗಂಟೆಯ ಹೊತ್ತಿನ ಕಪ್ಪು ನೆಲಬಾನುಗಳನ್ನೆಲ್ಲ ತಬ್ಬಿಬಿಟ್ಟಿತು.

ಮೈಸೂರಿನಿಂದ ಬಂದಿದ್ದ ತನ್ನ ಸಾಮಾನುಗಳನ್ನೂ ಪುಸ್ತಕಗಳನ್ನೂ ತೋರಿಸಿಯಾದಮೇಲೆ ಹೂವಯ್ಯ ಗೋಡೆಗಳಿಗೆ ತಗುಲಿಹಾಕಿದ್ದ ಚಿತ್ರ ಪಟಗಳನ್ನು ತೋರಿಸುತ್ತಾ ಚಲಿಸುತ್ತಿದ್ದನು. ನಡುನಡುವೆ ಪಟಗಳನ್ನು ವಿವರಿಸಲೋಸ್ಕರ ಉಚಿತ ವ್ಯಾಖ್ಯಾನುಗಳನ್ನೂ ಮಾಡುತ್ತಿದ್ದನು. ಅವನ ಸುತ್ತುಮುತ್ತ ಸಿಂಗಪ್ಪಗೌಡರು, ಚಿನ್ನಯ್ಯ, ರಾಮಯ್ಯ, ವಾಸು, ಸೀತೆ, ಪುಟ್ಟಮ್ಮ ಇವರುಗಳು ಆಗಾ ಒಂದೊಂದು ಮಾತಾಡುತ್ತಲೂ ಪ್ರಶ್ನೆಹಾಕುತ್ತಲೂ ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಎಂದು ಪ್ರಶಂಸಿಸುತ್ತಲೂ ಚಲಿಸುತ್ತಿದ್ದರು.

“ಇವನೇ ಬುದ್ಧದೇವ. ಶುದ್ಧೋದನ ಎಂಬ ದೊರೆಗೆ ಮಗನಾಗಿದ್ದ. ಅವನು ಹುಟ್ಟಿದಾಗ ಜೋಯಿಸರು, ಇವನು ಸಂಸಾರ ತ್ಯಾಗಮಾಡಿ ಸಂನ್ಯಾಸಿಯಾಗುತ್ತಾನೆ ಎಂದು ಭವಿಷ್ಯ ಹೇಳಿದ್ದರಂತೆ. ಅದಕ್ಕಾಗಿ ರಾಜ ಲೋಕದ ಕಷ್ಟ ಸಂಕಟಗಳು ಮಗನ ಕಣ್ಣಿಗೆ ಬೀಳದಂತೆ ಮಾಡಿದ್ದನಂತೆ. ಆದರೆ ಒಂದು ಸಾರಿ ಅವನು ತನ್ನ ರಾಜಧಾನಿಯಲ್ಲಿ ರಥದಮೇಲೆ ಕೂತು ಹೋಗುತ್ತಿದ್ದಾಗ ಒಬ್ಬ ರೋಗಿಯನ್ನೂ, ಒಬ್ಬ ಅಂಗಹೀನನನ್ನೂ, ಒಬ್ಬ ಮುದುಕನನ್ನೂ, ಒಂದು ಹೆಣವನ್ನು, ಒಬ್ಬ ಸಂನ್ಯಾಸಿಯನ್ನೂ ಕಂಡು, ತನ್ನ ಸಾರಥಿಯಿಂದ ವಿಷಯವನ್ನೆಲ್ಲ ಕೇಳಿ ತಿಳಿದುಕೊಂಡನು. ಆಮೇಲೆ ಅವನ ಮನಸ್ಸು ಅರಮನೆಯ ಭೋಗಗಳ ಕಡೆಗೆ ಹೋಗಲಾರದೆಹೋಯಿತು. ಮನುಷ್ಯನ ಬಾಳು ನಶ್ವರ ದುಃಖಮಯ ಎಂದು, ಆ ದುಃಖದಿಂದ ಪಾರಾಗುವ ವಿಧಾನವನ್ನು ಕಂಡುಹಿಡಿಯಬೇಕೆಂದು ನಿರ್ಧರಿಸಿದನು. ರಾಜನು ಮಗನು ಮನೆಬಿಟ್ಟು ಹೋಗದಿರಲಿ ಎಂದು ಒಂದು ಚೆಲುವಾದ ಹೆಣ್ಣನ್ನು ಮದುವೆಮಾಡಿದ್ದನು. ಬುದ್ದ ಅವಳೊಡನೆ ಕೆಲವು ಕಾಲ ಸುಖವಾಗಿದ್ದನು. ಆದರೆ ಅವನ ಅಂತರಂಗ ಕ್ರಮಕ್ರಮೇಣ ಸಂಸಾರಸುಖದಿಂದ ದೂರವಾಗುತ್ತಿತ್ತು. ಹೀಗಿರುತ್ತ ಒಂದು ರಾತ್ರಿ ರಾಜ್ಯವನ್ನೂ ತಂದೆ ತಾಯಿಗಳನ್ನೂ ಅರಮನೆಯನ್ನೂ ಆ ಎಲ್ಲ ಸುಖಭೋಗಗಳನ್ನು ತೊರೆದುತಪಸ್ಸಿಗೆ ಹೋಗಬೇಕೆಂದು ಮನಸ್ಸು ಮಾಡಿದನು. ಅದೇ ರಾತ್ರಿ ಅವನ ಹೆಂಡತಿ ಒಂದು ಮಗು ಹೆತ್ತಳು….”

“ಗಂಡೋ ಹೆಣ್ಣೋ” ಎಂದು ಕೇಳಿದಳು ಪುಟ್ಟಮ್ಮ.

ಹೂವಯ್ಯ ರಾಮಯ್ಯರು ನಕ್ಕರು. ಉಳಿದ ಯಾರಿಗೂ ಆ ಪ್ರಶ್ನೆ ಹಾಸ್ಯಾಸ್ಪದವಾಗಿರಲಿಲ್ಲ. ಅದಕ್ಕೆ ಬದಲಾಗಿ ಅವರೆಲ್ಲರೂ ಉತ್ತರವನ್ನೇ ನಿರೀಕ್ಷಿಸುತ್ತಿದ್ದಂತೆ ತೋರಿತು.

“ಗಂಡು !” ಎಂದು ಮತ್ತೆ ಪ್ರಾರಂಭಿಸಿ ಹೂವಯ್ಯ ಸ್ವಾರಸ್ಯವಾಗಿ ವಿವರವಾಗಿ ಸಿದ್ದಾರ್ಥನ ರಾಜ್ಯಪರಿತ್ಯಾಗದ ಮಹಾರಾತ್ರಿಯಲ್ಲಿ ನಡೆದ ಘಟನೆಗಳನ್ನು ವರ್ಣಿಸತೊಡಗಿದನು. ಎಲ್ಲರೂ ಉಸಿರುಕಟ್ಟಿ ನಿಂತು ಕೇಳುತ್ತಿದ್ದರು.

ಧ್ಯಾನಮಗ್ನ ಬುದ್ಧದೇವನ ಪ್ರಶಾಂತಮೂರ್ತಿ ಶತಮಾನಗಳ ಮೌನಗಾಂಭೀರ್ಯಗಳಿಂದ ಮುದ್ರಿತವಾಗಿ ಮಲೆನಾಡಿನ ಕಾಡಿನ ಮೂಲೆಯ ಕೆಳಕಾನೂರಿನ ಹುಲ್ಲುಮನೆಯ ಗೋಡೆಯಮೇಲೆ ನಿಷ್ಪಂದವಾಗಿತ್ತು.

“ಮನಸ್ಸಿಲ್ಲದ ಮನಸ್ಸಿನಿಂದ ಆ ರಾತ್ರಿ, ಬಾಣಂತಿಯಾಗಿದ್ದ ತನ್ನ ಹೆಂಡತಿಯನ್ನೂ ಹಾಲುಹಸುಳೆಯಾಗಿದ್ದ ತನ್ನ ಮಗನನ್ನೂ ಎಲ್ಲರೂ ಮಲಗಿದ್ದಾಗ ಹೋಗಿ ನೋಡಿಕೊಂಡು ಬಂದು ನಡುರಾತ್ರಿಯಲ್ಲಿ ಸಾರಥಿಯ ಸಹಾಯದಿಂದ ತನ್ನ ಪ್ರೀತಿಯ ಕುದುರೆಯನ್ನೇರಿ ಬಹುದೂರ ಹೋದನು.” – ಎಂಬುದನ್ನು ಹೂವಯ್ಯ ಕಾವ್ಯವಾಣಿಯಿಂದ ಹೇಳಿದಾಗ ಎಲ್ಲರ ಕಣ್ಣಿನಲ್ಲಿಯೂ ಹನಿಯಾಡುತ್ತಿತ್ತು.

“ಛೇ ! ಹಾಂಗೆ ಮಾಡ್ಬಾರದಾಗಿತ್ತು !” ಎಂದು ವಾಸು ಹೇಳಿಯೆಬಿಟ್ಟನು.

ವಿಮರ್ಶೆಗೆ ಪಾತ್ರನಾಗಿದ್ದ ಬುದ್ಧ ಕೂಡ ವಾಸುವಿನೊಡನೆ ಸಹಾನುಭೂತಿ ತೋರಿಸದೆ ಇರುತ್ತಿರಲಿಲ್ಲ.

ಹೂವಯ್ಯ ಕಥೆಯನ್ನು ಮುಂಬರಿಸಿ, ಸಿದ್ಧಾರ್ಥ ಬುದ್ಧದೇವನಾದುದನ್ನೂ, ಅವನ ಹೆಂಡತಿಯೂ ಬಂಧುಗಳೂ ಶಿಷ್ಯ ವರ್ಗಕ್ಕೆ ಸೇರಿದುದನ್ನೂ, ಲೋಕವೆಲ್ಲ ಅವನ ಅನುಯಾಯಿಯಾದುದನ್ನು ಹೇಳಿ ಮುಗಿಸಿ ಮುಂದೆ ನಡೆದನು.

ತರುವಾಯ ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ಚಿತ್ರವನ್ನೂ, ಯಮ, ಸತ್ಯವಾನ್, ಸಾವಿತ್ರಿ ಇವರಿರುವ ಚಿತ್ರವನ್ನೂ ದೀರ್ಘವಾಗಿ ವಿವರಿಸಿದನು.

ಆಲಿಸುತ್ತ ಆಲಿಸುತ್ತ ಸೀತೆ ಹೂವಯ್ಯನಿಗೆ ಎಷ್ಟು ಸಮೀಪ ಬಂದಿದ್ದಳೆಂದರೆ ತನ್ನ ಮೈ ಅವನ ಮೈಗೆ ಸೋಂಕುತ್ತಿದ್ದುದನ್ನೂ ಕೂಡ ಆಕೆ ಗಮನಿಸಿರಲಿಲ್ಲ. ಇನಿಯನ ಭಾವಮಯ ವಾಕ್ಯಗಳನ್ನು ಕೇಳುತ್ತ ಕೇಳುತ್ತ ಆಕೆಯ ಹೃದಯ ನಂದನೋದ್ಯಾನವಾಗಿತ್ತು ; ಆಕೆಯ ಮನಸ್ಸು ಕಲ್ಪನೆಗಳ ಮಂತ್ರಮಂಜೂಷವಾಗಿತ್ತು. ಬುದ್ಧನಿಗೆ ಆತನ ಪತ್ನಿ ಶಿಷ್ಯೆಯಾದಂತೆ ತಾನೂ ಹೂವಯ್ಯನಿಗೆ ಶಿಷ್ಯೆಯಾಗುತ್ತೇನೆಂದೂ ಸಾವಿತ್ರಿ ಸಾವಿತ್ರಿ ತನ್ನ ಪತಿಯೊಡನೆ ಯಮಲೋಕಕ್ಕೆ ಹೋಗಲು ಸಿದ್ಧಳಾಗಿದ್ದಂತೆ ತಾನೂ ಹೂವಯ್ಯನೊಡನೆ ಹೋಗಲು ಸಿದ್ದಳಾಗುತ್ತೇನೆಂದೂ ಚಿನ್ನದ ಕನಸುಗಳನ್ನು ಕಟ್ಟುತ್ತಿದ್ದಳು

ಸೀತೆ ಹೂವಯ್ಯನಿಗೆ ಅಷ್ಟು ಸಮೀಪವಾಗಿ ಮೈಗೆ ಮೈ ತಾಗಿಸುತ್ತ ಹೋಗುತ್ತಿದ್ದುದನ್ನು. ನೋಡಿದಮೇಲೆ, ರಾಮಯ್ಯನ ಮನಸ್ಸು ಹೂವಯ್ಯ ಮಾಡುತ್ತಿದ್ದ ಚಿತ್ರಪಟದ ವಿವರಣೆಯ ಕಡೆಗೆ ಹೋಗಲಿಲ್ಲ. ಅವನಿಗೆ ಅನೇಕ ದಿನಗಳಿಂದ ದೂರದ ಸಂದೇಹಮಾತ್ರವಾಗಿದ್ದ ಯಾವುದೋ ಒಂದು ಭೀತಿ ಸೀತೆ ಹೂವಯ್ಯರ ಸಾಮೀಪ್ಯವನ್ನು ಕಂಡೊಡನೆ ಸ್ಪಷ್ಟವಾಗತೊಡಗಿತು. ಹೂವಯ್ಯನ ಪರವಾಗಿ ತಾನು ಹಿಂದೆ ಎಂದೂ ಅನುಭವಿಸಿದ್ದ ಒಂದು ಭಾವ ಅವನ ಎದೆಯಲ್ಲಿ ಸುಳಿಯಿತು. ಆಗತಾನೇ ಹುಟ್ಟಿ ಕಣ್ಣು ಬಿಡುವುದರಲ್ಲಿದ್ದ ಆ ಭಾವಕ್ಕೆ ‘ಪ್ರಣಯ ಮಾತ್ಸರ್ಯ’ ಎಂಬ ಹೆಸರು ಬಹಳ ಹೆಚ್ಚಿನದಾದರೂ ಅದರಲ್ಲಿ ಒಂದು ಸ್ವಲ್ಪ ಅಹಿತತ್ವವಿತ್ತು ಎಂದು ಹೇಳಬೇಕಾಗುತ್ತದೆ.

ಮರುದಿನ ಬೆಳಿಗ್ಗೆ ಸಿಂಗಪ್ಪಗೌಡರು ಸೀತೆಮನೆಗೆ ಹೊರಟುಹೋದರು. ತಂದೆ ಹೇಳಿದ್ದಾರೆ ಎಂದು ರಾಮಯ್ಯನೂ ಚಿನ್ನಯ್ಯ, ಸೀತೆ, ಪುಟ್ಟಮ್ಮ ಇವರನ್ನು ಕರೆದುಕೊಂಡು ಕಾನೂರಿಗೆ ಹೋದನು. ಹೊರಡುವಾಗ ಸೀತೆ ತನ್ನ ಹೃದಯವನ್ನು ಮುಚ್ಚಿಕೊಳ್ಳಬೇಕೆಂದು ಎಷ್ಟು ಪ್ರಯತ್ನಪಟ್ಟರೂ ಕಣ್ಣು ಹನಿಹಾಕಿ, ಹೃದಯಕ್ಕೆ ದ್ರೋಹಮಾಡಿತು.

ವಾಸು ಯಾರು ಎಷ್ಟು ಹೇಳಿದರೂ ಕೇಳದೆ ಕಾನೂರಿಗೆ ಹೋಗಲು ಒಪ್ಪಲಿಲ್ಲ. ಹೂವಣ್ಣಯ್ಯನ ಜೊತೆಯಲ್ಲಿ ಇರುತ್ತೇನೆ ಎಂದು ಹಟ ಹಿಡಿದು ನಿಂತುಬಿಟ್ಟನು.

ಹೂವಯ್ಯ ನಂಟರೆಲ್ಲರನ್ನೂ ಸ್ವಲ್ಪದೂರ ಕಳುಹಿಸುತ್ತ  ಗದ್ದೆಯನ್ನು ದಾಟಿ ಹಳ್ಳದವರೆಗೆ ಹೋಗಿ, ಅಲ್ಲಿ ಕಾಲುಗಂಟೆಯ ಕಾಲ ಮಾತಾಡುತ್ತ ನಿಂತು, ಮಳೆ ಸುರಿಯಲು ತೊಡಗಿದ ಮೇಲೇಯೇ ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಂಡು ಹಿಂದಕ್ಕೆ ಬಂದನು. ಬೀಳ್ಕೋಳ್ಳುವಾಗ ಸೀತೆಯಕಡೆಗೆ ನೋಡಿದನು. ಅವಳಂತೂ ಅವನನ್ನೇ ನೋಡುತ್ತ ನಿಂತಿದ್ದಳು. ಆ ಕ್ಷಣದಲ್ಲಿ ಅವರಿಬ್ಬರ ಮನಸ್ಸಿಗೂ ಜಗತ್ತು ವಿರಹದ ನರಕದಂತೆ ತೋರಿರಬೇಕು.

ನಿತ್ಯವೂ ತಪ್ಪದೆ ಕೆಳಕಾನೂರಿಗೆ ಬಂದು ಹೋಗುತ್ತಿದ್ದ ರಾಮಯ್ಯ ಸೀತೆ ಕಾನೂರಿನಲ್ಲಿರುವವರೆಗೆ ಅತ್ತಕಡೆಗೆ ಮುಖಹಾಕಲಿಲ್ಲ ! ವಾಸು ಪಂಜರ ದಿಂದ ಬಿಡುಗಡೆಹೊಂದಿದ ಹಕ್ಕಿಯಂತೆ ಪ್ರಾತಃಸೂರ್ಯನ ಕೋಮಲ ರುಕ್ಮರಶ್ಮಿಯಲ್ಲಿ ಬೆಟ್ಟದ ನೆತ್ತಿಯ ಮರದ ತುತ್ತತುದಿಯಲ್ಲಿ ಕುಳಿತು ಗಾನೋನ್ಮತ್ತನಾಗಿದ್ದನು.