ಸೀತೆಮನೆ ಸಿಂಗಪ್ಪಗೌಡರು ಚಂದ್ರಯ್ಯಗೌಡರ ಮಗನಿಗೆ ಶ್ಯಾಮಯ್ಯಗೌಡರ ಮಗಳನ್ನು ಕೊಟ್ಟು ನಡೆಯಲಿದ್ದ ಮದುವೆಯನ್ನು ತಪ್ಪಿಸಬೇಕೆಂದು ಪ್ರಯತ್ನಿಸಿದ್ದರೂ ಬರುವ ಚೈತ್ರಮಾಸದಲ್ಲಿ ಲಗ್ನವಾಗುವುದು ನಿಶ್ಚಯವಾಯಿತೆಂಬ ಸುದ್ದಿ ಹಬ್ಬಿತು. ಅದುವರೆಗೆ ಸಿಂಗಪ್ಪಗೌಡರು ಕೈಕೊಂಡಿದ್ದ ಉಪಾಯಗಳೆ ಸ್ವಲ್ಪ ಹೆಚ್ಚುಕಡಿಮೆ ನಾಗರಿಕವಾಗಿದ್ದುವು. ಯಾವಾಗ ಮದುವೆ ನಿಶ್ಚಯವಾಯಿತೆಂದು ಗೊತ್ತಾಯಿತೋ ಆಗ ಅವರ ಕೋಪವೃತ್ತಿ ಅನಾಗರಿಕ ಮಾರ್ಗಗಳಲ್ಲಿ ಸಂಚರಿಸತೊಡಗಿತು. ಕಿರಾತಕಾರ್ಯಗಳಿಂದಾದರೂ ಮದುವೆಯನ್ನು ನಿಲ್ಲಿಸಿಯೇ ಬಿಡುತ್ತೇನೆ ಎಂದು ತುಟಿ ಕಚ್ಚಿಕೊಂಡರು : ಜಾತಕ ನೋಡಿ, ದೇವರನ್ನು ಕೇಳಿಸಿ, ಲಗ್ನದ ಮುಹೂರ್ತವನ್ನು ಗೊತ್ತುಮಾಡಿ, ಎಲ್ಲ ವಿಧದಲ್ಲಿಯೂ ತಮಗೆ ವಿರೋಧವಾಗಿ ಚಂದ್ರಯ್ಯಗೌಡರ ಪರವಾಗಿ ವರ್ತಿಸಿದ್ದ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರನ್ನು ಮೆಟ್ಟಿನಿಂದ ಹೊಡೆಯಿಸುತ್ತೇನೆ ; ಚಂದ್ರಯ್ಯಗೌಡರನ್ನು ಗುಂಡಿನಿಂದ ಉಡಾಯಿಸುತ್ತೇನೆ ; ಶ್ಯಾಮಯ್ಯಗೌಡರ ಮೇಲೆ ಮಾಟ ಮಾಡಿಸುತ್ತೇನೆ ; ಮದುವೆಯ ದಿನ ಅದು ನಡೆಯದಂತೆ ದೊಂಬಿ ಎಬ್ಬಿಸುತ್ತೇನೆ ; ಗಂಡಿನ ಮನೆಯ ದಿಬ್ಬಣ ಹೆಣ್ಣಿನ ಮನೆಗೆ ಹೋಗದಂತೆ ದೊಂಬಿ ಎಬ್ಬಿತ್ತೇನೆ ; ಗಂಡಿನ ಮನೆಯ ದಿಬ್ಬಣ ಹೆಣ್ಣಿನ ಮನೆಗೆ ಹೋಗದಂತೆ ತಡೆಯುತ್ತೇನೆ – ಇತ್ಯಾದಿಯಾಗಿ ಮನಸ್ಸಿಗೆ ಬಂದಂತೆ ಆಲೋಚಿಸಿದರೂ ಬಾಯಿಗೆ ಬಂದಂತೆ ಹೇಳಲಿಲ್ಲ. ಅನೇಕ ಸಾರಿ “ಅಯ್ಯೋ, ನನ್ನ ಜಾಕಿ ಹೋಗಿಬಿಟ್ಟ ! ಅವನಿದ್ದಿದ್ದರೆ !” ಎಂದುಕೊಳ್ಳುತ್ತಿದ್ದರು.

ಮಗನು ಅಕಾಲಮರಣಕ್ಕೆ ತುತ್ತಾದ ಮೇಲೆ ಅವರ ಮನಸ್ಸು ಕೆಲವು ವಿಷಯಗಳಲ್ಲಂತೂ ತುಂಬಾ ಕೆಟ್ಟುಹೋಗಿತ್ತು. ಚಂದ್ರಯ್ಯಗೌಡರ ಕೀಟಲೆ ಅದಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು.

ಸಿಂಗಪ್ಪನ ಕಕ್ಕಯ್ಯನ ಪ್ರತಾಪದ ಕಥೆಯನ್ನು ಗುಟ್ಟಾಗಿ ಕೇಳಿ ತಿಳಿದ ಹೂವಯ್ಯ ಒಂದು ದಿನ ಸೀತೆ ಮನೆಗೆ ಬಂದು ಕಕ್ಕಯ್ಯನಿಗೆ ಬುದ್ಧಿವಾದ ಹೇಳಿದನು. ಹೂವಯ್ಯನಲ್ಲಿ ಅವರಿಗೆ ಗೌರವವಿದ್ದುದರಿಂದ ಸಿಂಗಪ್ಪಗೌಡರು ಕಷ್ಟದಿಂದ ಎಲ್ಲವನ್ನೂ ಸಾವಧಾನವಾಗಿ ಕೇಳಿದರು.

“ಕಕ್ಕಯ್ಯ, ನೀನು ನನಗಾಗಿ ಈ ದುರ್ವರ್ತನೆಗಳಲ್ಲಿ ತೊಡಗುವುದು ಬೇಡ. ಹೆಣ್ಣಿನ ತಂದೆತಾಯಿಗಳೂ ಗಂಡಿನ ತಂದೆಯಾಯಿಗಳೂ ಒಪ್ಪಿ ಮದುವೆ ನಡೆಯಿಸುವಾಗ ಹೊರಗಿನವರಿಗೆ ಅದನ್ನು ತಡೆಯಲು ಹಕ್ಕಿಲ್ಲ. ತಡೆಯುವುದು ನ್ಯಾಯವೂ ಅಲ್ಲ ಅಲ್ಲದೆ ಜನಗಳು ಈಗಾಗಲೆ ನಮ್ಮನ್ನು ಆಡಿಕೊಳ್ಳುತ್ತಿದ್ದಾರೆ. ನೀನೇನಾದರೂ ಕ್ರೂರಕರ್ಮ ಮಾಡಿದರೆ ಅಥವಾ ಮಾಡಿಸಿಬಿಟ್ಟರೆ ಅದಕ್ಕೆ ನಾವೇ ಹೊಣೆಯಾಗಿ ಕಷ್ಟಪರಂಪರೆಗಳನ್ನು ಸಹಿಸಬೇಕಾಗುತ್ತದೆ. ವಿಧಿ ಬರೆದಿದ್ದುದನ್ನು ತಿದ್ದಲು ಯಾರಿಗೂ ಸಾಧ್ಯವಿಲ್ಲ. ಕೃಷ್ಣಪ್ಪನಿಗೆ ಮದುವೆ ನಿಶ್ಚಯವಾಗಿರಲಿಲ್ಲವೆ ? ಕಡೆಗೇನಾಯ್ತು ? ನೀನೆ ಯೋಚಿಸಿಕೊ ! ಅವರವರ ಹಣೆಯಲ್ಲಿ ಬರೆದಂತೆ ಆಗುತ್ತದೆ. ಆ ಬಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಡುವುದೂ ಆ ಬಲೆಗೆ ಬೀಳುವ ಮಾರ್ಗಗಳಲ್ಲಿ ಒಂದು. ನಾನೇನೊ ಒಪ್ಪಿಕೊಳ್ಳುತ್ತೇನೆ : ಸೀತೆಯನ್ನು ಮದುವೆಯಾಗಬೇಕೆಂದು ನನಗೆ ಇಷ್ಟವಿತ್ತು. ನಾನು ಓದು ನಿಲ್ಲಿಸಿ ಇಲ್ಲಿಯೇ ನಿಂತುದಕ್ಕೆ ಅದೂ ಒಂದು ಕಾರಣವೆಂದೇ ಹೇಳುತ್ತೇನೆ…… ಏನೇನೊ ಕಿನ್ನರ ಕನಸುಗಳನ್ನು ಕಟ್ಟಿಕೊಂಡಿದ್ದೆ. ಆ ಕನಸುಗಳಲ್ಲಿ ಸಿಕ್ಕಿ ನನ್ನ ಮೊದಲಿನ ಉನ್ನತಾದರ್ಶಗಳನ್ನೂ ತಿರಸ್ಕರಿಸಿದ್ದೆ….. ಈಗ ಮತ್ತೆ ಆ ಕನಸುಗಳು ಗುಳ್ಳೆಗಳಂತೆ ಒಡೆದುಹೋಗಿ ನನಗೆ ನಿದ್ದೆಯಿಂದ ಎಚ್ಚರವಾದ ಹಾಗಾಗಿದೆ….. ಹಿಂದೆ ನಿನ್ನೊಡನೆ ನಾನೆಷ್ಟೋ ಸಾರಿ ಮಾತಾಡಿದ್ದೆ – ಮದುವೆಗಿದುವೆಯ ಬಲೆಗೆ ಸಿಕ್ಕಿಕೊಳ್ಳದೆ, ಜ್ಞಾನ ಸಂಪಾದನೆಮಾಡಿ, ನಮ್ಮ ನಾಡಿನ ಜನಗಳ ಮೂಢಭಾವಗಳನ್ನೆಲ್ಲ ಪರಿಹರಿಸಿ ಜನರ ಸೇವೆಯಿಂದ ಜೀವನ ಸಾರ್ಥಕಮಾಡಿಕೊಂಡು ಈಶ್ವರ ಸಾಧನೆ ಮಾಡುತ್ತೇನೆ ಎಂದು.”

ಹೂವಯ್ಯ ಮಾತು ನಿಲ್ಲಿಸಿ ಆಕಾಶದೃಷ್ಟಿಯಾಗಿ ಸುಮ್ಮನೆ ಕುಳಿತನು. ರಸಾವೇಶದಿಂದ ಅವನ ಮುಖ ಕೆಂಪಾಗುತ್ತಿತ್ತು. ಕಣ್ಣುಗಳಲ್ಲಿ ನೀರು ಹನಿಯಾಡುತ್ತಿತ್ತು. ಸಿಂಗಪ್ಪಗೌಡರಲ್ಲಿಯೂ ಹೂವಯ್ಯನ ಭಾವವೆ ಸಂಚಾರವಾಗತೊಡಗಿತ್ತು. ಅವರೂ ಮಾತಾಡಲಿಲ್ಲ. ಯಾವುದೊ ಮಂತ್ರಶಕ್ತಿಯಿಂದ ಹೂವಯ್ಯ ತಮ್ಮನ್ನೂ ಒಂದು ಉನ್ನತ ಗಿರಿಶೃಂಗದ ದಿವ್ಯ ಪರಿಮಳಪೂರ್ಣವಾದ ವಾಯುಮಂಡಲಕ್ಕೆ ಕೊಂಡೊಯ್ದಹಾಗೆ ತೋರಿತು. ಆ ಎತ್ತರಕ್ಕೆ ಕಾನೂರು, ಸೀತೆಮನೆ, ಕೆಳಕಾನೂರು – ಎಲ್ಲವೂ ಕ್ಷುದ್ರವಾಗಿ ಸಮತಟ್ಟವಾಗಿ ತೋರತೊಡಗಿದುವು. ಸಿಂಗಪ್ಪಗೌಡರು ತಮ್ಮ ಮಹಿಮೆಗೆ ತಾವೇ ಆಶ್ಚರ್ಯಪಟ್ಟರು.

ಹೂವಯ್ಯ ಮತ್ತೆ ಹೇಳತೊಡಗಿದನು :

“ಈ ವಿಚಾರಗಳನ್ನೆಲ್ಲ ಕುರಿತು ನಾನು ಅನೇಕ ದಿನ ಹಗಲುರಾತ್ರಿ ಆಲೋಚನೆ ಮಾಡಿದ್ದೇನೆ. ನನಗೇ ತಿಳಿಯದಂತೆ ಮೆಲ್ಲಮೆಲ್ಲನೆ ನಾನೂ ಸಾಮಾನ್ಯ ಜನರ ಹವ್ಯಾಸಗಳಲ್ಲಿ ತಲೆಹಾಕತೊಡಗಿದ್ದೆ. ಇಲ್ಲಿಯ ಜಗಳ, ಮನಸ್ತಾಪ, ಮಾತ್ಸರ್ಯ, ಕರುಬು – ಇವುಗಳೆಲ್ಲ ನನ್ನ ಹೃದಯದಲ್ಲಿಯೂ ರೂಪಾಂತರ ವೇಷಾಂತರಗಳನ್ನು ಧರಿಸಿ ಮನೆಮಾಡಲಾರಂಭಿಸಿದ್ದುವು….. ನಿನ್ನೆ ಸೂರ್ಯೋದಯದಲ್ಲಿ ನನ್ನೆದೆಯ ಕತ್ತಲೆ ಬಹುಮಟ್ಟಿಗೆ ಪರಿಹಾರವಾಯಿತು….”

ಹೂವಯ್ಯ ಹಿಂದಿನ ದಿನ ಪ್ರಾತಃಕಾಲದಲ್ಲಿ ತಾನು ‘ಕಾನುಬೈಲಿ’ನ ನೆತ್ತಿಗೆ ಹೋಗಿ ಉದಯಸಮಯದ ರಮಣೀಯ ದೃಶ್ಯಪರಂಪರೆಗಳನ್ನು ಅವಲೋಕಿಸುತ್ತಿದ್ದಾಗ ತನಗಾಗಿದ್ದ ಅನುಭವವನ್ನು ವರ್ಣಿಸಿದನು.

‘…..ಕಕ್ಕಯ್ಯ ನನಗೆ ಮಾತುಕೊಡು. ನನ್ನ ಹೊಸ ಬಾಳಿನಲ್ಲಿ ನೀನು ನನಗೆ ಸಹಾಯವಾಗಬೇಕು. ನೀನು ರಾಮಾಯಣ ಮಹಾಭಾರತಗಳನ್ನು ಚೆನ್ನಾಗಿ ಓದಿದ್ದೀಯ ! ಭಗವದ್ಗೀತೆಯನ್ನೂ ಸ್ವಲ್ಪ ತಿಳಿದುಕೊಂಡಿದ್ಧೀಯ ! ನೀನು ಮನಸ್ಸುಮಾಡಿದರೆ ನಿನ್ನ ಹೃದಯದಲ್ಲಿ ಮಾತ್ರವಲ್ಲದೆ ನಮ್ಮ ನಾಡಿನಲ್ಲೆಲ್ಲ ಸ್ವರ್ಗಸ್ಥಾಪನೆ ಮಾಡಬಹುದು.’

ಹೂವಯ್ಯನ ವಾಣಿಯಲ್ಲಿ ಉತ್ಸಾಹವಿತ್ತು ; ಅವನ ಕಣ್ಣಿನ ಕಾಂತಿಯಲ್ಲಿ ಶ್ರದ್ಧೆಯಿತ್ತು. ಸಿಂಗಪ್ಪಗೌಡರು ‘ಆಗಲಪ್ಪಾ ! ನನ್ನ ಕೈಲಾದುದನ್ನು ನಾನು ವಂಚನೆಯಿಲ್ಲದೆ ಮಾಡುತ್ತೇನೆ !’ ಎಂದರು. ಅವರಾತ್ಮಕ್ಕೆ ತೀರ್ಥಯಾತ್ರೆಗೋ ಗಂಗಾಸ್ನಾನಕ್ಕೋ ಹೊರಟ ಅನುಭವವಾಗುತ್ತಿತ್ತು.

* * *

ಹೂವಿನ ರಸಕ್ಕಾಗಿ ಬಣ್ಣದ ಚಿಟ್ಟೆ ಹಾರಾಡುತ್ತಿದೆ. ಚೈತ್ರಮಾಸದ ಪ್ರಾತಃಸಮಯದಲ್ಲಿ ಗಿಡವೆಲ್ಲ ವಸಂತ ಸಂಭ್ರಮದಿಂದ ತುಂಬಿಹೋಗಿದೆ. ಹೂವು ರಾಶಿರಾಶಿಯಾಗಿ ಕಿಕ್ಕಿರಿದಿದೆ. ಒಂದೊಂದು ಹೂವಿನ ಹೃದಯದ ಬಟ್ಟಲೂ ಜೇನಿನಿಂದ ತುಂಬಿದೆ. ಒಂದೊಂದು ಹೂವೂ ಚೆಲುವಾದ ಚಿಟ್ಟೆಯನ್ನು ತನ್ನ ಹೃದಯದ ಮಕರಂದ ಪಾನಕ್ಕೆ ಆಹ್ವಾನಿಸುತ್ತಿದೆ. ಚಿಟ್ಟೆಯ ಮನಸ್ಸು ಅತ್ತಯಿತ್ತ ಪಾದರಸದಂತೆ ಚಲಿಸುತ್ತಿದೆ. ಹಾಗೆಯೇ ಗಿಡಗಳಲ್ಲಿ ಕೊಂಬೆಯಿಂದ ಕೊಂಬೆಗೆ ಹಬ್ಬಿ ಹೆಣೆದಿದ್ದ ಜೇಡನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಇಬ್ಬನಿಗಳೂ ಬಾಲಸೂರ್ಯ ಕಾಂತಿಯಲ್ಲಿ ಬೆಳ್ಳಿಯ ಹನಿಗಳಂತೆ ಹೊಳೆಯುತ್ತಾ ಪಾದರಸದಂತೆ ವಿಕಂಪಿಸುತ್ತಿವೆ. ಕೆಲವು ಹನಿಗಳಲ್ಲಿ ಕಾಮನ ಬಿಲ್ಲಿನ ಬಣ್ಣಗಳೂ ಮಿರುಗುತ್ತಿವೆ. ಅಯ್ಯೋ, ಇದ್ದಕಿದ್ದಹಾಗೆ ಹಾರುತ್ತಿದ್ದ ಚಿಟ್ಟೆ ಜೇಡನ ಬಲೆಗೆ ಸಿಕ್ಕಿತಪ್ಪಿಸಿಕೊಳ್ಳಲು ಒದ್ದಾಡುತ್ತಿದೆ ! ಬಲೆಯಲ್ಲಿ ಹೊಳೆಯುತ್ತಿದ್ದ ಹನಿಗಳಲ್ಲಿ ಉದುರುತ್ತಿವೆ ! ಅಡಗಿ ಕುಳಿತಿದ್ದ ವಿಕಾರಾಕೃತಿಯ ಕರಾಳ ಜೇಡನೂ ಚಿಟ್ಟೆಯ ಕಡೆಗೆ ಧಾವಿಸುತ್ತಿದೆ. ಅದನ್ನು ಕುಳಿತಿದ್ದ ವಿಕಾರಾಕೃತಿಯ ಕರಾಳ ಜೇಡವೂ ಚಿಟ್ಟೆಯ ಕಡೆಗೆ ಧಾವಿಸುತ್ತಿದೆ. ಅದನ್ನು ಕಂಡು ತಿಳಿದ ಚಿಟ್ಟೆ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ತಪ್ಪಿಸಿಕೊಳ್ಳಲು ಒದ್ದಾಡುತ್ತಿದೆ ! ಆ ಚಿಟ್ಟೆಯಂತಿದ್ದಳು ಸೀತೆ !

ಪುಟ್ಟಮ್ಮನನ್ನು ತನ್ನಣ್ಣನಿಗೆ ತಂದುಕೊಂಡು, ತನ್ನನ್ನು ರಾಮಯ್ಯನಿಗೆ ಕೊಡುತ್ತಾರೆ ಎಂಬ ಸುದ್ದಿ ಕಿವಿಗೆ ಕೂಡಲೆ ಬೆಬ್ಬಿಳಿಸಿದಳು ಸೀತೆ. ಅದುವರೆಗೂ ಆಕೆಯ ಪ್ರೀತಿಗೆ ಇತರ ಬಂಧುಗಳಿಂತೆ ಮಾತ್ರ ಭಾಜನನಾಗಿದ್ದ ರಾಮಯ್ಯ ಈಗ ಮಹಾ ವೈರಿಯಾಗಿ ತೋರಿದನು. ಚಿಟ್ಟೆಗೆ ಜೇಡನು ತೋರಿ ಬಂದಂತೆ ! ಎತ್ತ ತಿರುಗಿದರೂ ಆಕೆಗೆ ಸಹಾಯ ತೋರಲಿಲ್ಲ. ಸಹಜವಾಗಿದ್ದ ನಾಚಿಕೆಯನ್ನೂ ಮೂಲೆಗೊತ್ತಿ ತನ್ನ ತಾಯಿಯನ್ನೂ ಅಣ್ಣನನ್ನೂ ಬೇಡಿದಳು. ಇಬ್ಬರೂ ಕಣ್ಣೀರು ಸುರಿಸುತ್ತಾ ಶ್ಯಾಮಯ್ಯಗೌಡರ ಕಡೆಗೆ ಬೆರಳು ತೋರಿದರು. ಸಾಹಸ ಮಾಡಿ ತಂದೆಯನ್ನೂ ಬೇಡಿದಳೂ. ಶ್ಯಾಮಯ್ಯಗೌಡರು ಮಗಳಿಗೆ ಅನೇಕ ಬುದ್ಧಿವಾದಗಳನ್ನು ಉಪನ್ಯಾಸಮಾಡಿ, ಹೆಣ್ಣುಮಕ್ಕಳು ಗಂಡುಬೀರಿಗಳಂತೆ ವರ್ತಿಸಬಾರದೆಂದು ಹೇಳಿದರು.

“ಜಾತಕ ಬಂದಿದೆ. ವೆಂಕಪ್ಪಯ್ಯ ಜೋಯಿಸರಂಥಾ ಜೋಯಿಸರು ಎಲ್ಲಾ ಸರಿಯಾಗಿದೆ ಅಂತಾ ಹೇಳಿದ್ದಾರೆ. ದೇವರ ಪ್ರಸಾದ ಬಂದಿದೆ. ಗಂಡೂ ಲಕ್ಷಣವಾಗಿದ್ದಾನೆ. ಆಸ್ತಿ, ಮನೆ, ಐಶ್ವರ್ಯ – ಎಲ್ಲಾ ಇದೆ….. ಚಂದ್ರಯ್ಯಗೌಡರ ಮಾತು ಎಂದರೆ ನಾಡೆಲ್ಲ ನಡುಗುತ್ತದೆ….. ಮಾತು ಕೊಟ್ಟ ಮೇಲೆ ತಪ್ಪಬಾರದು. ಗೋವಿನ ಕಥೆಯಲ್ಲಿ ಆ ಗೋವು ಹುಲಿಗೆ ಮಾತು ಕೊಟ್ಟಮೇಲೆ ಪ್ರಾಣಹೋಗುತ್ತದೆ ಎಂದು ಗೊತ್ತಿದ್ದರೂ ಕೂಡ ಅದರಂತೆ ನಡೆಯಲಿಲ್ಲವೆ ?….. ನಿನ್ನ ಮಾತು ಕೇಳಿದರೆ ನನ್ನ ಮರ್ಯಾದೆ ಹೋಗುತ್ತದೆ ! ಮನೆತನಕ್ಕೆ ನಿನ್ನಿಂದ ಅವಮಾನವಾಗಬಾರದು…. ಗಂಡ ಎಂದ ಮೇಲೆ ದೇವರು ಅಂತಾ ತಿಳಿದುಕೊಳ್ಳಬೇಕು…..”

ಶ್ಯಾಮಯ್ಯಗೌಡರು ಉಪನ್ಯಾಸವನ್ನು ಇನ್ನೂ ಮುಗಿಸಿರಲಿಲ್ಲ. ಅಷ್ಟರಲ್ಲಿ ಸೀತೆ ತಡೆಯಲಾರದೆ ಬಿಕ್ಕಿಬಿಕ್ಕಿ ಅಳುತ್ತಾ ತನ್ನ ಕೋಣೆಗೆ ಹೋದಲು. ಅತ್ತೂ ಅತ್ತೂ ಕಡೆಗೆ ಹೂವಯ್ಯಬಾವನಿಗೆ ಗುಟ್ಟಾಗಿ ಕಾಗದ ಬರೆದು ಸಹಾಯ ಪಡೆಯುತ್ತೇನೆ ; ಅವರೂ ದುರ್ಲಕ್ಷಿಸಿಬಿಟ್ಟರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ನಿರ್ಧರಿಸಿ, ಒಳಗಣಿಂದ ಬಾಗಿಲು ತಾಳ ಹಾಕಿಕೊಂಡು ಕಾಗದ ಬರೆದಳು :

“ಹೂವಯ್ಯಬಾವನಿಗೆ. ದಮ್ಮಯ್ಯ. ನಿಮ್ಮ. ಕಾಲಿಗೆ. ಬೀಳುತ್ತೇನೆ. ನನ್ನ ಕೈ ಬಿಡಬೇಡಿ. ಇನ್ನೊಂದು ವಾರದಲ್ಲಿ ನನ್ನನ್ನು ಮದುವೆ ಮಾಡಿಕೊಡ್ತಾರಂತೆ. ಮೂರು ದಿನ ಕಾಯುತ್ತೇನೆ. ನಾನೇನು ಮಾಡಬೇಕು ? ಕಾಗದ ಬರೆಯಿರಿ. ಇಲ್ಲದಿದ್ದರೆ ನೀವೇ ಬಂದು ಹೇಳಿ. ಎರಡನ್ನೂ ಮಾಡದಿದ್ದರೆ ಕೆರೆ ಹಾರಿ ಸಾಯ್ತೇನೆ. ಸೀತೆ ”

ಅದು ಸೀತೆಯ ಜೀವಮಾನದಲ್ಲಿ ಆಕೆ ಬರೆದ ಮೊದಲನೆ ಕಾಗದವಾಗಿತ್ತು. ತಾರೀಕು, ಊರು, ಹೆಸರು ಇತ್ಯಾದಿಗಳ ವಿಚಾರದಲ್ಲಿ ಪತ್ರಲೇಖನ ಸಂಪ್ರದಾಯಕ್ಕೆ ಕ್ರಾಂತಿ ಕುಠಾರವಾಗಿತ್ತು. ಸೀಸದಕಡ್ಡಿ ನಿಂತಲ್ಲೆಲ್ಲ ಪೂರ್ಣ ವಿರಾಮವಾಗಿತ್ತು. ಮತ್ತೆ ಕೆಲವೆಡೆ ಕಣ್ಣೀರು ಬಿದ್ದು ಕಲೆಯಾಗಿತ್ತು. ಅಕ್ಷರದ ತಪ್ಪುಗಳಿಗೂ ಬರಗಾಲವಿರಲಿಲ್ಲ.

ಕಾಳನ ಕೈಯಲ್ಲಿ ಕಾಗದವನ್ನು ಕಳುಹಿಸಲು ಪ್ರಯತ್ನಿಸಿದಳು. ಆದರೆ ಅವನಿಗೆ ಪುರಸತ್ತಿರಲಿಲ್ಲ. ಲಗ್ನ ಸಮೀಪಿಸಿದ್ದರಿಂದ ಎಲ್ಲರೂ ಕೆಲಸದ ಮೇಲಿದ್ದರು. ಕಡೆಗೆ ನಂಜನನ್ನು ಗುಟ್ಟಾಗಿ ಕರೆದು, ಕೆಳಕಾನೂರಿಗೆ ಹೋಗಿ ಹೂವಯ್ಯಬಾವನಿಗೆ ಕೊಡಬೇಕೆಂದು ಹೇಳಿ, ಕಾಗದವನ್ನು ಕೊಟ್ಟಳು. ಮತ್ತಾರ ಕೈಗೂ ಕೊಡಬಾರದೆಂದೂ ಎಚ್ಚರ ಹೇಳಿದಳು. ಇನಾಮಾಗಿ ಎಂಟಾಣೆಯನ್ನೂ ಕೊಟ್ಟಳು.

ನಂಜ ಕೆಳಕಾನೂರಿಗೆ ಹೋಗುತ್ತ ದಾರಿಯಲ್ಲಿ ಕಳ್ಳಂಗಡಿಯಲ್ಲಿ ಆ ಎಂಟಾನೆಯ ಬೆಲೆಗೆ ಡೊಳ್ಳೇರಿ ಹಿಗ್ಗಿ ಹಿಗ್ಗಿ ಹರಿಯುವವರೆಗೂ ಕುಡಿದು ಬಿಟ್ಟನು. ಮುಂದೆ ಹೋಗಲು ಅವನಿಗೆ ಇಚ್ಛೆಯಾಗಲಿ ಶಕ್ತಿಯಾಗಲಿ ಇರಲಿಲ್ಲ. “ಇಗೊಳ್ಳೊ ನಮ್ಮ ಅಮ್ಮ ಕೊಟ್ಟಾರೆ ! ನಿಮ್ಮ ಸಣ್ಣಯ್ಯಗೆ ಕೊಡು !” ಎಂದು ಹೇಳುತ್ತ ಕುಡಿದ ಮತ್ತಿನಲ್ಲಿ ಸೀತೆ ಹೂವಯ್ಯನಿಗಾಗಿ ಕೊಟ್ಟಿದ್ದ ಕಾಗದ್ವನ್ನು ಕಳ್ಳಂಗಡಿಗೆ ಬಂದಿದ್ದ ಚಂದ್ರಯ್ಯಗೌಡರ ಜೀತದಾಳು ಬೇಲರ ಸಿದ್ದನ ಕೈಗೆ ಕೊಟ್ಟನು.

ಸಿದ್ದ ಅದನ್ನು ಎರಡು ದಿನಗಳಾದ ಮೇಲೆ ಚಂದ್ರಯ್ಯಗೌಡರ ಗಾಡಿಯಾಳು ನಿಂಗನ ಮಗ ಪುಟ್ಟನ ಕೈಗೆ ಕೊಟ್ಟನು. ಪುಟ್ಟ ‘ಸಣ್ಣಗೌಡ್ರಿಗೆ ಕೊಡಬೇಕಂತೆ’ ಎಂದು ಹೇಳಿ ತನ್ನ ತಂದೆಗೆ ಕೊಟ್ಟನು. ಅವನು ಅದನ್ನು ರಾಮಯ್ಯಗೆ ತಲುಪಿಸಿದನು. ಹಾ, ವಿಧಿ !

ಮೂರು ದಿನ ಕಳೆಯಿತು. ಆ ಮೂರು ದಿನದ ಕಾಲವೂ ಸೀತೆಯ ಭಾಗಕ್ಕೆ ನಿರೀಕ್ಷಣೆ ಮತ್ತು ನಿರಾಶೆಯ ಒಂದು ದೀರ್ಘಯಾತನೆಗಾಗಿ ಪರಿಣಮಿಸಿತ್ತು. ಹೂವಯ್ಯನಾಗಲಿ ಆತನ ರಹಸ್ಯಪತ್ರವಾಗಲಿ ಬಂದು ತಾನು ಮಹಾ ಸಂಕಟದಿಂದ ಪಾರಾಗುತ್ತೇನೆ ಎಂದು ಹಾರೈಸಿದ್ದಳು. ಅನೇಕ ಸಾರಿ ಜಗಲಿಗೆ ಬಂದು ಇಣಿಕಿ ಇಣಿಕಿ ನೋಡಿ ಹೋಗುತ್ತಿದ್ದಳು. ಇತರರಿಗೆ ಹೇಳಿದರೆ ಅನರ್ಥವಾಗುವುದೆಂದು ಹೆದರಿ, ತನ್ನ ಅರಿಯದ ತಂಗಿ ಲಕ್ಷ್ಮಿಗೆ ಜಗಲಿಗೆ ಯಾರು ಬಂದರೊ ತನಗೆ ತಿಳಿಸಬೇಕೆಂದು ಮುದ್ದಪ್ಪಣೆ ಮಾಡಿದ್ದಳು. ಲಕ್ಷ್ಮಿ ಸಲ ಸಲವೂ ಅಕ್ಕನ ಬಳಿಗೆ ಬಂದು ಅವರಿವರೆನ್ನದೆ, ಮನೆಯೊಳಗಿದ್ದವರೇ ಹೊರಗೆ ಹೋಗಿ ಜಗಲಿಗೆ ಬಂದರೆನ್ನದೆ, ಆಳುಗಳೆನ್ನದೆ, ನಂಟರೆನ್ನದೆ, ಅನೇಕ ಜನರ ಆಗಮನವನ್ನು ಕುರಿತು ಬಂದು ಬಂದು ವರದಿ ಹೇಳುತ್ತಿದ್ದಳು. ಮೊದಲು ಮೊದಲು ಸೀತೆಗೆ ಅದು ಹಾಸ್ಯಾಸ್ಪದವಾಗಿ ತೋರಿದರೂ ತುದಿಯಲ್ಲಿ ತಂಗಿಯ ಒಂದೊಂದು ವರದಿಯೂ ಮೂದಲಿಕೆಯಂತೆ ಇರಿಯತೊಡಗಿದುದರಿಂದ ಕರ್ತವ್ಯವನ್ನು ಅಲ್ಲಿಗೆ ಸಾಕು ಮಾಡುವಂತೆ ಹೇಳಿದಳು. ಆದರೂ ಲಕ್ಷ್ಮಿ ಅಭ್ಯಾಸಬಲದಿಂದಲೋ ಎಂಬಂತ ಆಗಾಗ ಬಂದು ಜಗಲಿಗೆ ಬಂದವರ ಬೇಡದ ಹೆಸರುಗಳನ್ನು ತಪ್ಪು ತಪ್ಪಾಗಿ ಹೇಳುತ್ತಿದ್ದಳು.

ಮೂರನೆಯ ದಿನ ಸಾಯಂಕಾಲದಲ್ಲಿ ಮದುವೆಗೆ ಬೇಕಾಗಿದ್ದ ಚಪ್ಪರ ಮಂಟಪದ ಶೃಂಗಾರಗಳನ್ನು ಮಹೋತ್ಸಾಹದಿಂದ ನೆರವೇರಿಸುತ್ತಿದ್ದ ಜನಸಂದಣಿಯಲ್ಲಿ ತೂರಿಕೊಂಡು ಬಂದಿದ್ದ ಲಕ್ಷ್ಮಿ ತನ್ನ ಅಕ್ಕಯ್ಯನನ್ನು ಕುರಿತು “ಕಾನೂರಿನಿಂದ ಗಾಡಿ ನಿಂಗಣ್ಣ ಬಂದಾನೆ ಕಣೆ ! ರಾಮಯ್ಯಬಾವನಿಂದ ಅಣ್ಣಯ್ಯಗೆ ಕಾಗದ ತಂದಾನಂತೆ !” ಎಂದಳು.

ಸೀತೆಯ ಮುಖದಲ್ಲಿ ದುಃಖ ನಿರಾಸೆಗಳ ಛಾಯೆ ಎಷ್ಟು ಭಯಾನಕವಾಗಿ ತೋರಿತೆಂದರೆ ಲಕ್ಷ್ಮಿಯ ಮುಗ್ಧಹೃದಯವೂ ತಲ್ಲಣಗೊಂಡಿತು. ಅಕ್ಕಯ್ಯನ ಕೊರಳನ್ನು ಬಿಗಿಯಪ್ಪಿ, ಏತಕ್ಕೊ ಏನೋ ತನಗೇ ತಿಳಿಯದಂತೆ “ಅಕ್ಕಯ್ಯ ನಿನ್ನ ಮದುವೆ ದಿನ ಸೀರೆ ಉಟ್ಟುಕೊಳ್ತೇನೆ ? ಆಯ್ತಾ ?” ಎಂದು ಲಲ್ಲೆಗೈಯತೊಡಗಿದಳು. ಅವಳಿಗರಿಯದು ಅಕ್ಕನ ಎದೆ ಜ್ವಾಲಾಮುಖಿಯಾಗಿದೆ ಎಂದು !

ಸೀತೆ ಮಾತಾಡಲಿಲ್ಲ. ತಂಗಿಯನ್ನು ಮುದ್ದಿಸುತ್ತ ಬಿಕ್ಕಿಬಿಕ್ಕಿ ಅಳತೊಡಗಿದಳು. ಲಕ್ಷ್ಮಿಯೂ ಅಳತೊಡಗಿದಳು. ಅರಿಯದ ಅವಳಿಗೆ ಮದುವೆ ಎಂದರೆ ಏನೋ ಒಂದು ಭಯಂಕರ ವ್ಯಾಪಾರವಾಗಿರಬೇಕು ; ಇಲ್ಲದಿದ್ದರೆ ಅಕ್ಕ ಹೀಗೆ ಅಳುತ್ತಿದ್ದಳೇ ಎನ್ನಿಸಿತು.

ಸೀತೆಯ ಮನಸ್ಸು ಆ ಸಮಯದಲ್ಲಿ ಅತ್ಯಂತ ಭಯಂಕರ ವ್ಯಾಪಾರಕ್ಕೆ ಹವಣಿಸುತ್ತಿದ್ದುದೂ ನಿಶ್ಚಯ !

ಲಕ್ಷ್ಮಿ ಸೀತೆಗೆ ತಿಳಿಸಿದಂತೆ ಕಾನೂರು ಚಂದ್ರಯ್ಯಗೌಡರ ಗಾಡಿಯಾಳು ನಿಂಗ ಸಾಯಂಕಾಲ ರಾಮಯ್ಯನಿಂದ ಒಂದು ಗುಟ್ಟಿನ ಕಾಗದವನ್ನು ತಂದು ಚಿನ್ನಯ್ಯನ ಕೈಯಲ್ಲಿ ಕೊಟ್ಟನು. ಅದನ್ನೋದಿದ ಚಿನ್ನಯ್ಯನ ದೇಹ ನಡುಗತೊಡಗಿತು ; ಉಸಿರು ಜೋರಾಗಿ ಆಡಲಾರಂಭಿಸಿತು ; ಮಾತಾಡಲು ಪ್ರಯತ್ನಿಸಿದಾಗ ಗಂಟಲು ಹಿಡಿದುಕೊಂಡಂತಾಗಿ, ನಾಲಗೆಯ ಶಕ್ತಿ ಉಡುಗಿ ದಂತಾಯಿತು. ತನ್ನ ಅಧೀರಸ್ಥಿತಿಯನ್ನೂ ಉದ್ವೇಗವನ್ನೂ ನಿಂಗನಿಗೆ ತೋರಗೊಡಬಾರದೆಂದು ಅಲ್ಲಿ ನಿಲ್ಲದೆ ಉಪ್ಪರಿಗೆಗೆ ಹೊರಟುಹೋದನು.

ಅ ರಾತ್ರಿ ತಮ್ಮ ಒಡೆಯರ ಮನೆಯಲ್ಲಿ ಕೆಲದಿಗಳಲ್ಲಿ ಜರುಗಲಿದ್ದ ಮದುವೆಗಾಗಿ ಕೆಲಸ ಮಾಡಿಕೊಡಲು ಬಂದಿದ್ದ ನೆರೆಯವರಿಗೂ ಒಕ್ಕಲುಗಳಿಗೂ ಅಳುಗಳಿಗೂ ಎಲ್ಲರಿಗೂ ಓಟವಾಗಿ, ಗಡಿಬಿಡಿಯಡಗಿ, ನಿದ್ರಾ ಮೌನ ಮನೆದುಂಬುವಷ್ಟರಲ್ಲಿ ಹನ್ನೆರಡು ಗಂಟೆ ಹೊಡೆದಿತ್ತು. ದಣಿದು ನಿಶ್ಚಿಂತರಾಗಿದ್ದ ಸರ್ವರಿಗೂ ಬೇಗನೆ ಗಾಢನಿದ್ರೆ ಹತ್ತಿತು.

ಇಬ್ಬರಿಗೆ ಮಾತ್ರ ನಿದ್ದೆ ಹತ್ತಿರಲಿಲ್ಲ ; ತಂಗಿ ಸೀತೆಗೆ, ಅಣ್ಣ ಚಿನ್ನಯ್ಯಗೆ.