ಮಳೆ ಹಿಡಿಯಿತು. ಮುಂಗಾರಿನ ಪ್ರಾರಂಭದಲ್ಲಿ ಹಠಾತ್ತಾಗಿ ಕಾಣಿಸಿಕೊಂಡು, ಆಕಾಶವನ್ನೆಲ್ಲ ಆಚ್ಛಾದಿಸಿ, ಮಿಂಚು ಗುಡುಗು ಸಿಡಿಲು ಬಿರುಗಾಳಿಗಳ ರುದ್ರ ಪರಿವಾರದೊಡನೆ ಬಂದು, ಬಿರುಮಳೆಗರೆದು, ತುಸು ಹೊತ್ತಿನಲ್ಲಿ ಕಣ್ಮರೆಯಾಗಿ ನೀಲಾಕಾಶವನ್ನೂ ಸೂರ್ಯನ ಸ್ವಚ್ಛತರ ಕಿರಣ  ಸಂಕುಲವನ್ನೂ ಮರಳಿ ತೋರಿಸುತ್ತಿದ್ದ ಮೇಗರಾಶಿ ನೀರವವಾಗಿ, ಅನವರತವೂ ಆಕಾಶವನ್ನೆಲ್ಲ ಕವಿದು ಮುಚ್ಚಿ, ದಿನದಿನಗಳವರೆಗೆ ಸೂರ್ಯನಿದ್ದಾನೆ ಎಂಬ ಕುರುಹನ್ನೂ ತೋರಗೊಡದೆ, ಹಗಲಿರುಳೂ ಒಂದೇ ಸಮನಾಗಿ ಜಡಿಮಳೆಯನ್ನು ಹುಯ್ಯತೊಡಗಿತ್ತು. ನಾಡು ಕಾಡು ಬೆಟ್ಟ ಬಯಲುಗಳೆಲ್ಲವೂ ವರ್ಷಧಾರೆಗಳಿಂದ ನೆಯ್ದ ತೆಳುವಾದ ನಸುಬಿಳಿಯ ಪರದೆಯೊಳಗೆ ಜೋಂಪಿಸುವಂತಿದ್ದುವು. ಹಾದಿಗಳೆಲ್ಲ ಕೆಸರಾಗಿ ಯಾವಾಗಲೂ ನೀರು ಮಿಜಿಗುಟ್ಟುತ್ತಿತ್ತು. ನೆಲವೆಲ್ಲ ಸರ್ವದಾ ಜಲಮಯವಾಗಿತ್ತು. ತೋಟದ ಕಪ್ಪುಗಳಲ್ಲಿಯೂ ಗೆದ್ದೆಯ ಒಡಗುಗಳಲ್ಲಿಯೂ ನೀರು ಹಸುಳೆಯಂತೆ ಯಾವಾಗಲೂ ಗಳಹುತ್ತ ತೊದಲುತ್ತ ಪರಿದಾಡುತ್ತಿತ್ತು. ಎರಡು ತಿಂಗಳ ಹಿಂದೆ ಬೋಳು ಬೆತ್ತಲೆಯಾಗಿ ಒಣಗಿದ್ದ ಗದ್ದೆಯ ಕೋಗುಗಳು ಇಂದು ಬತ್ತದ ಸೊಸಿಗಳಿಂದಲೂ ಕಟ್ಟಿ ನಿಲ್ಲಿಸಿದ ನೀರಿನಿಂದಲೂ ಕಳಕಳಿಸಿ ನಗುತ್ತಿದ್ದುವು. ಸುತ್ತಲೂ ಬೆಟ್ಟಗಾಡುಗಳಿದ್ದು, ನಡುವೆ ಕಣಿವೆಗಳಲ್ಲಿ ಅಗಲವಾಗಿ ಹಬ್ಬಿ ಬೆಳೆದಿದ್ದ ಎಳಸಸಿಯ ಗದ್ದೆಯ ಕೋಗಿನ ಕೋಮಲವಾದ ಹಸುರು, ಕಣ್ಣಿಗೆ ನಲ್ಮೆಯನ್ನೂ ಮನಸ್ಸಿಗೆ ಆಹ್ಲಾದವನ್ನು ಆತ್ಮಕ್ಕೆ ಶಾಂತಿಯನ್ನೂ ಮೆತ್ತುವಂತಿತ್ತು.

ಜನರೆಲ್ಲರೂ ಬೇಸಗೆಯ ಸೋಮಾರಿತನವನ್ನು ಕೊಡಹಿ ಎಚ್ಚತ್ತು ಕಾರ್ಯಶೀಲರಾಗಿದ್ದರು. ಕೆಲವರಿಗೆ ಜಗಳಕ್ಕೂ ಚಾಡಿಗೂ ಮನಸ್ಸಿದ್ದರೂ ಪುರಸತ್ತಿರಲಿಲ್ಲ. ಬೆಳಿಗ್ಗೆ ಗಂಜಿಯುಂಡು, ಮಧ್ಯಾಹ್ನ ಹನ್ನೆರಡು ಅಥವಾ ಒಂದು ಗಂಟೆಯವರೆಗೆ ಚೆನ್ನಾಗಿ ದುಡಿದು, ನಡುವೆ ಹಲಸಿನಕಾಯಿ ಅಥವಾ  ಹಣ್ಣುಗಳನ್ನು ತಿಂದು, ಮಧ್ಯಾಹ್ನದ ಊಟ ಪೂರೈಸಿದೊಡನೆ ಮತ್ತೆ ಗದ್ದೆಗೆ ಇಳಿದು, ಸಾಯಂಕಾಲದವರೆಗೂ, ಜಡಿಮಳೆಯಲ್ಲಿ ಕಂಬಳಿಕೊಪ್ಪೆಯ ಗಂಡಸರೂ ಗೊರಬು ಸೂಡಿದ ಹೆಂಗಸರೂ ಗೆಯ್ದು ದಣಿದು, ಮನೆಗೆ ಬರುವುದೇ ತಡ ಉಂಡು ಹಾಸಗೆ ಹಿಡಿಯುತ್ತಿದ್ದರು. ಹೀಗೆ ವಿರಾಮವಿಲ್ಲದಿದ್ದುದರಿಂದಲೂ ದುಡಿದು ದಣಿಯುತ್ತಿದ್ದುದರಿಂದಲೂ ಕಷ್ಟ ಮಾಡುವವರ ಮನಸ್ಸು ಕತ್ತಲೆಯ ಮೋಹಕ್ಕೆ ಒಳಗಾಗದಿರುವುದು ಸ್ವಾಭಾವಿಕವಾದ್ದರಿಂದಲೂ, ಬೇಸಗೆಗೆ ಹೋಲಿಸಿ ನೋಡಿದರೆ, ಮಳೆಗಾಲದಲ್ಲಿ ನಾಡಿನ ಜೀವನ ನೆಮ್ಮದಿಯಾಗಿದೆ ಎಂದು ಹೇಳಬಹುದಾಗಿತ್ತು.

ಸ್ವಲ್ಪ ವಿರಾಮವಿದ್ದವರಿಗೂ ಕೂಡ ಕೂಣಿಹಾಕುವುದು, ಹಳ್ಳದ ಕಟ್ಟಿಗೆ ಹೆಗ್ಗೂಣಿ ಕಟ್ಟುವುದು, ಮಳೆ ಜೋರಾದ ರಾತ್ರಿಗಳಲ್ಲಿ ದೊಂದಿ ಲಾಟೀನು ಮೊದಲಾದ ದೀಪ ಸೌಕರ್ಯಗಳನ್ನು ಹಿಡಿದುಕೊಂಡು ಹೋಗಿ ಬಯಲು ಜಡ್ಡುಗಳಿಗೆ  ಹತ್ತಿಬರುತ್ತಿದ್ದ ‘ಹತ್ತುಮೀನು’ಗಳನ್ನು ಕಡಿಯುವುದು ಮುಂತಾದ ಸಾಹಸದ ಉದ್ಯೋಗಗಳಿದ್ದುದರಿಂದ ಅವರೂ ಬೇರೆಯ ರೀತಿಯಲ್ಲಿ ಇತರರಂತೆಯೆ ದುಡಿದು ದಣಿಯುತ್ತಿದ್ದರು.

ಸೇರೆಗಾರ ರಂಗಪ್ಪಸೆಟ್ಟರೂ ಅವರ ಆಳುಗಳೂ ವರ್ಷ ವರ್ಷದ ಪದ್ಧತಿಯಂತೆ ಗಟ್ಟದ ಕೆಳಗಿದ್ದ ತಮ್ಮ ‘ದೆಯ್ಯ ದ್ಯಾವರು’ಗಳಿಗೆ ಹರಕೆಯನ್ನೊಪ್ಪಿಸಲೆಂದೂ ಊರಿಗೆ ಹೊಗಿ ಬಂಧುಗಳನ್ನೂ ಅಲ್ಲಿಯ ಕೆಲಸಕಾರ್ಯಗಳನ್ನೂ ನೊಡಿಕೊಂಡು ಬರಲೆಂದೂ ಗಟ್ಟದ ಕೆಳಗೆ ಹೋಗಿದ್ದವರು ಇನ್ನೂ ಬಂದಿರಲಿಲ್ಲ. ಚಂದ್ರಯ್ಯಗೌಡರು ದಿನದಿನವೂ ಅವರನ್ನು ನಿರೀಕ್ಷಿಸುತ್ತಾ ಬೇಲರ ಕೈಯಲ್ಲಿಯೆ ಆದಷ್ಟು ಕೆಲಸ ಮಾಡಿಸುತ್ತಿದ್ದರು. ಅವರ ಅ ಉತ್ಕಂಠಿತ ನಿರೀಕ್ಷೆಗೆ ಮನೆಯ ಕೆಲಸಕಾರ್ಯಗಳ ನಿರ್ವಾಹ ಮಾತ್ರವಲ್ಲದೆ ಗಂಗೆಯ ವಿಯೋಗವೂ ಪ್ರಬಲಕಾರಣವಾಗಿತ್ತು.

ಹೂವಯ್ಯ, ನಾಗಮ್ಮನವರು ಪುಟ್ಟಣ್ಣ ಬೈರ ಸೇಸಿ ಇವರ ಸಹಾಯದಿಂದಲೂ, ಸೀತೆಮನೆ ಸಿಂಗಪ್ಪಗೌಡರು ಆಗಾಗ್ಗೆ ಕಳುಹಿಸುತ್ತಿದ್ದ ಒಬ್ಬಿಬ್ಬರು ಕೂಲಿಯಾಳುಗಳ ನೆರವಿನಿಂದಲೂ, ತನ್ನ ಪಾಲಿಗೆ ಬಂದಿದ್ದ ಗದ್ದೆ ತೋಟಗಳಲ್ಲಿ ಮಾಡಬೇಕಾಗಿದ್ದ ಕಾಮಗಾರಿಗಳನ್ನೆಲ್ಲ ಮನಸ್ಸಿಟ್ಟು ಮಾಡಿಸುತ್ತಿದ್ದನು. ಕರ್ಮರಂಗದಲ್ಲಿ ತಾನಷ್ಟು ಜಯಶೀಲನಾಗುತ್ತಿದ್ದುದು ಅವನಿಗೇ ಆಶ್ಚರ್ಯಕರವಾಗಿ ತೋರುತ್ತಿತ್ತು.

ನಾಗಮ್ಮನವರಿಗೆ ವಯಸ್ಸಾಗಿದ್ದರೂ ಕೂಡ, ಮನೆಯಲ್ಲಿ ಅಡುಗೆಯ ಕಾರ್ಯವನ್ನು ಸಾಂಗವಾಗಿ ಮಾಡಿಟ್ಟು, ಮಗನ ಮೇಲಣ ಪ್ರೀತಿ ನೀಡಿದ ಉತ್ಸಾಹ ಶಕ್ತಿಗಳಿಂದ ಪ್ರೇರಿತವಾಗಿ, ಗದ್ದೆಗೂ ಹೋಗಿ, ಸಸಿ ಕೀಲುವುದು, ನೆಡುವುದು ಮುಂತಾದ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಹೂವಯ್ಯ ‘ಗದ್ದೆಗೆ ಬಂದು ಮಳೆಯಲ್ಲಿಯೂ ಚಳಿಯಲ್ಲಿಯೂ ಕೆಲಸ ಮಾಡುವುದು ಬೇಡ’ ಎಂದು ಎಷ್ಟು ಹೇಳಿದರೂ ಅವರು ಬೇರೆ ಕೇಳುತ್ತಿರಲಿಲ್ಲ. ತಾಯಿ ಗೊರಬು ಸೂಡಿಕೊಂಡು ಸೇಸಿಯ ಜೊತೆಯಲ್ಲಿ ಸಸಿ ನೆಡುತ್ತಿದ್ದುದನ್ನು ಕಂಡು ಎಷ್ಟೋ ಸಾರಿ ಅವನಿಗೆ ಕಣ್ಣೀರು ಬರುತ್ತಿತ್ತು. ಆ ಕಣ್ಣೀರಿನಲ್ಲಿ ತಾಯಿ ಕಷ್ಟಪಡುತ್ತಿದ್ದಾಳಲ್ಲಾ ಎಂಬ ದುಃಖವೂ ತನಗೆ ಇಂತಹ ತಾಯಿ ಇದ್ದಾಳಲ್ಲಾ ಎಂಬ ಹೆಮ್ಮೆಯಿಂದ ಮೂಡುವ ದುಃಖವೂ ತನಗೆ ಇಂತಹ ತಾಯಿ ಇದ್ದಾಳಲ್ಲಾ ಎಂಬ ಹೆಮ್ಮೆಯಿಮದ ಮೂಡುವ ಸುಖವೂ ಎರಡೂ ಸೇರಿರುತ್ತಿತ್ತು.

ಸುಬ್ಬಮ್ಮ ಪುಟ್ಟಮ್ಮ ಇವರು ಮನೆಯಲ್ಲಿ ಬೆಚ್ಚಗಿರುವುದನ್ನು ನೆನೆದು ನಾಗಮ್ಮನವರಿಗೆ ಆಗಾಗ ಮನಸ್ಸು ನೋಯುತ್ತಿದ್ದರೂ ಮಗನನ್ನು ನೋಡುವ ಸಂಭ್ರಮದಲ್ಲಿ ಅದೆಲ್ಲ ಮರೆತುಹೋಗುತ್ತಿತ್ತು.

ಉಳುವುದು ಬಿತ್ತುವುದು ಇಂತಹ ಪ್ರಯೋಜನದ ಕಾರ್ಯಗಳಲ್ಲಿ ಬಹುಸೋಮಾರಿಯೆಂದು ಹೆಸರುಗೊಂಡಿದ್ದ ಪುಟ್ಟಣ್ಣನಂತೂ ಕಂಡವರೆಲ್ಲ ಬೆರಗಾಗುವಂತೆ ಹೂವಯ್ಯನೊಡನೆ ಕೆಲಸ ಮಾಡುತ್ತಿದ್ದನು. ಹೂವಯ್ಯ ಕಥೆ ಹೇಳುವುದು, ಪದ್ಯ ಹಾಡುವುದು, ವಿನೋದವಾಡುವುದು ಮೊದಲಾದುವುಗಳಿಂದ ತನ್ನೊಡನೆ ಕೆಲಸ ಮಾಡುವವರೆಲ್ಲರನ್ನೂ ಉತ್ಸಾಹಗೊಳಿಸುತ್ತಿದ್ದನು. ಎಷ್ಟೋ ಸಾರಿ ದೂರದ ಗದ್ದೆಗಳಲ್ಲಿ ಚಂದ್ರಯ್ಯಗೌಡರ ಮೇಲ್ವಿಚಾರಣೆಯಲ್ಲಿ ಇತರ ಆಳುಗಳೊಡನೆ ‘ಬಿಂ’ ಎಂದು ಕೆಲಸ ಮಾಡುತ್ತಿದ್ದ ರಾಮಯ್ಯ ಮಳೆಯ ಸದ್ದನ್ನೂ ಮೀರಿ ತಮ್ಮಲ್ಲಿಗೆ ತೆರೆಯಾಗಿ ಬರುತ್ತಿದ್ದ ಹೂವಯ್ಯನ ಮತ್ತು ಆತನೊಡನೆ ಕೆಲಸ ಮಾಡುತ್ತಿದ್ದವರ ನಗೆಯನ್ನು ಆಲೈಸಿ ಕರುಬುತ್ತಿದ್ದನು. ಅಂತಹ ಸಮಯಗಳಲ್ಲಿ ತಪ್ಪದೆ ಚಂದ್ರಯ್ಯಗೌಡರು ಹೂವಯ್ಯ ಅಥವಾ ನಾಗಮ್ಮನವರ ವಿಚಾರವಾಗಿ ಅನುದಾರವಾದ ಟೀಕೆಗಳನ್ನು ಮಾಡದೆ ಬಿಡುತ್ತಿರಲಿಲ್ಲ.

ಆದಷ್ಟು ಅವಕಾಶಗಳನ್ನು ಕಲ್ಪಿಸಿಕೊಂಡು ದಾಯಾದಿಗಳಿಗೆ ತೊಂದರೆ ಕೊಡಬೇಕು ಎಂಬ ಗೀಳು ಹಿಡಿದಿತ್ತು ಚಂದ್ರಯ್ಯಗೌಡರಿಗೆ.

ಅಂತೂ ಅವರ ಹಟಸಾಧನೆ ಬಹುಮಟ್ಟಿಗೆ ಕೈಗೂಡಿತು. ಹೂವಯ್ಯ ಹೆಚ್ಚು ಕಾಲ ಕಾನೂರಿನಲ್ಲಿ ವಾಸಿಸಲಾಗಲಿಲ್ಲ.

ಮನೆ ಹಿಸ್ಸೆಯಾದ ದಿನ ಮೊದಲ್ಗೊಂಡು ಚಂದ್ರಯ್ಯಗೌಡರ ಕಿರುಕುಳ ತಪ್ಪಲಿಲ್ಲ. ಕೂತರೆ ನಿಂತರೆ ತಪ್ಪು ಕಂಡು ಹಿಡಿದು ಮೈಮೇಲೆ ಬರುತ್ತಿದ್ದರು. ಹೂವಯ್ಯನ ದನವೊಂದು ತಮ್ಮ ತೋಟಕ್ಕೆ ನುಗ್ಗಿತೆಂದು, ಹೂವಯ್ಯನ ನಾಯಿ ಮತ್ತು ನಾಯಿಯನ್ನು ಮುರಿಯಿತೆಂದು, ಹೂವಯ್ಯನ ಕೋಳಿ ತಮ್ಮ ಜಗಲಿಯ ಮೇಲೆ ಅಸಹ್ಯಮಾಡಿತೆಂದು, ತಮ್ಮ ಕಟ್ಟಿಗೆ ರಾಶಿಯಿಂದ ಹೂವಯ್ಯನ ಕಡೆಯವರಾರೋ ಕಟ್ಟಿಗೆ ಕದ್ದಿದ್ದಾರೆ ಎಂದು, ತಮ್ಮ ವೀಳೆಯದೆಲೆಯ ಹಂಬಿನಿಂದ ಹೂವಯ್ಯನಾಳು ಬೈರ ಎಲೆ ಕದ್ದಿದ್ದಾನೆ ಎಂದು, ತಾವು ಊಟಕ್ಕೆ ಹೋದಾಗಲೆಲ್ಲ ನಾಗಮ್ಮನವರು ಬೇಕೆಂತಲೆ ಅವರ ಅಡುಗೆಮನೆಯಲ್ಲಿ ಹೊಗೆ ಹಾಕಿ ತಮ್ಮ ಊಟದ ಮನೆಗೆ ಅದನ್ನು ಎಬ್ಬುತ್ತಾರೆ ಎಂದು, ತಮ್ಮ ಹಿತ್ತಲಿನಿಂದ ನಾಗಮ್ಮನವರು ತರಕಾರಿ ಕದಿಯುತ್ತಾರೆ ಎಂದು, – ಹೀಗೆ ನೂರಾರು ನೆವಗಳನ್ನು ನಿರ್ಮಿಸಿಕೊಂಡು ಬೈದಾಡುತ್ತಿದ್ದರು. ಹೂವಯ್ಯ ಒಮ್ಮೊಮ್ಮೆ ಪ್ರತೀಕಾರ ಮಾಡಿ ನೋಡಿದನು. ಆದರೆ ಅದರಿಂದ ಚಂದ್ರಯ್ಯಗೌಡರ ಸಣ್ಣ ಬುದ್ಧಿಯೂ ಜಿದ್ದೂ ಬೆಳೆಯುತ್ತಲೆ ಹೋಗುತ್ತಿದ್ದುದನ್ನು ಕಂಡು ನಿರಾಶನಾದನು.

ಹೂವಯ್ಯನಿಗೂ ಅವನ ಮನೆಯವರಿಗೂ ತೊಂದರೆ ಕೊಡುವ ಮಾತು ಹಾಗಿರಲಿ. ತಾವು ವರ್ತಿಸುತ್ತಿದ್ದಂತೆ ತಮ್ಮ ಮನೆಯವರು ಅವರನ್ನು ದ್ವೇಷಿಸುತ್ತಿಲ್ಲವಲ್ಲಾ ಎಂದು ಅವರೆಲ್ಲರನ್ನೂ ಕಾಡಿಸುತ್ತಿದ್ದರು.

ವಾಸುವೆಲ್ಲಿಯಾದರೂ ‘ಆಚೆಮನೆ’ಗೆ ಹೋಗಿದ್ದುದನ್ನು ಕಂಡರೆ ಚೆನ್ನಾಗಿ ಬೈದು ಕಿವಿ ಹಿಂಡುತ್ತಿದ್ದರು. ಒಂದು ಸಾರಿ ನಾಗಮ್ಮನವರು ಕೊಟ್ಟ ತಿಂಡಿಯನ್ನು ಅವನು ಬಾಗಿಲ ಸಂದಿಯಲ್ಲಿ ಕದ್ದು ನಿಂತುಕೊಂಡು ತಿನ್ನುತ್ತಿದ್ದುದು ಚಂದ್ರಯ್ಯಗೌಡರ ಕಣ್ಣಿಗೆ ಬಿದ್ದಾಗ ಅವರು ಅವನ ಕೈಲಿದ್ದ ತಿಂಡಿಯನ್ನು ಮಾತ್ರವಲ್ಲದೆ ಬಾಯಲ್ಲಿದ್ದುದನ್ನೂ ಬೆರಲು ಹಾಕಿ ತೆಗೆದು ಬಿಸಾಡಿ, ಬೆನ್ನಿನ ಮೇಲೆ ನಾಲ್ಕು ಗುದ್ದು, ಹಾಕಿ, ಇನ್ನೆಂದೆದಿಂಗೂ ಹಾಗೆ ಮಾಡದಿರಲಿ ಎಂದು ‘ಸಿದ್ದೆಗುಮ್ಮ’ ಮಾಡಿದರು.

ಸಿದ್ದೆಗುಮ್ಮ ಎಂದರೆ, ಒಂದು ಬಿದಿರಿನ ಸಿದ್ಧೆಯಲ್ಲಿ ಎಂದರೆ ಅಳತೆಯ ಪಾತ್ರೆಯಲ್ಲಿ ಒಣಮೆಣಸಿನಕಾಯಿಗೆ ಉರಿಯುವ ಕೆಂಡವನ್ನು ಹಾಕಿ, ಅದನ್ನು ಮೂಗಿಗೆ ಒತ್ತಿ ಹಿಡಿದು, ಬಾಯಲ್ಲಿ ಉಸಿರೆಳೆದುಕೊಳ್ಳದಂತೆ ಅದನ್ನೂ ಕೈಯಿಂದ ಒತ್ತಿ ಹಿಡಿಯುತ್ತಾರೆ. ಮೆಣಸಿನಕಾಯಿನ ಹೊಗೆ ಮೂಗಿಗೂ ಶ್ವಾಸಕೋಶಕ್ಕೂ ಹೋಗಿ ಪ್ರಾಣ ಹೋಗುವಂತಾಗುತ್ತದೆ !

ಇನ್ನೊಂದು ಸಾರಿ ಪುಟ್ಟಮ್ಮ ‘ಆಚೆಮನೆ’ಗೆ ಹೋಗಿ ದೊಡ್ಡಮ್ಮನೊಡನೆ ಸಲ್ಲಾಪ ಮಾಡುತ್ತಿರಲು ಚಂದ್ರಯ್ಯಗೌಡರು ಆಕೆಯನ್ನು ಕರೆದು ಬಾಯಿಗೆ ಬಂದಂತೆ ‘ಮಿಂಡನ್ನ ಹುಡುಕಿಕೊಂಡು ಹೋಗೋ ಜಾತಿ’ ಎಂದು ಮೊದಲಾಗಿ ಅಶ್ಲೀಲವಾಗಿ ಅಂದರು. ಹಾಗೆಯೇ ಮತ್ತೊಮ್ಮೆ ನಾಗಮ್ಮನವರು ಕೊಟ್ಟಿದ್ದ ಕೊಚ್ಚಲಿಮೀನಿನ ಪಲ್ಯವನ್ನು ಸುಬ್ಬಮ್ಮ ತಮಗೆ ಬಡಿಸಿರಲು ಊಟ ಮಾಡುತ್ತಿದ್ದ ಚಂದ್ರಯ್ಯಗೌಡರಿಗೆ ಸಂಶಯ ತೋರಿ ‘ಕೊಚ್ಚಲಿ ಮೀನು ಎಲ್ಲಿತ್ತು ?’ ಎಂದು ಪ್ರಶ್ನಿಸಿದರು. ಆ ದಿನ ಬೆಳಿಗ್ಗೆ ನಿಂಗ ತಮ್ಮ ಗದ್ದೆಯ ಕೂಣಿಗಳಿಂದ ಮೀನು ತರುತ್ತಿದ್ದಾಗ ಬುಟ್ಟಿಯನ್ನು ಪರೀಕ್ಷಿಸಿ ನೋಡಿದ್ದ ಚಂದ್ರಯ್ಯಗೌಡರಿಗೆ ‘ಬೆಳಿಗ್ಗೆ ನಿಂಗ ತಂದಿದ್ದು’ ಎಂದು ಹೇಳಿದ ಸುಬ್ಬಮ್ಮನ ಮಾತು ಸುಳ್ಳು ಎಂಬುದು ಗೊತ್ತಾಗಿ ‘ಎಲ್ಲಿತ್ತು ? ಹೇಳ್ತೀಯೋ ಇಲ್ಲೋ ?’ ಎಂದು ಕಣ್ಣು ಕೆಂಪಗೆ ಮಾಡಿಕೊಂಡು ಗರ್ಜಿಸಿದರು. ಚಂದ್ರಯ್ಯಗೌಡರು ಕಣ್ಣುಕೆಂಪಗೆ ಮಾಡಿದರೆ ಎಂಥವರಿಗೂ ಭೀತಿಯಾಗುತ್ತಿತ್ತು. ಸುಬ್ಬಮ್ಮ ಭಯದಿಂದ ನಡುಗುತ್ತಾ ಸತ್ಯವನ್ನೇ ಹೇಳಿಬಿಟ್ಟಳು. ಗೌಡರು ಊಟದ ಎಲೆಯನ್ನು ಎಸೆದು ಬಿಸಾಡಿ, ಹೆಂಡತಿಯನ್ನು ಕೈಸೋಲುವವರೆಗೂ ಹೊಡೆದು ಕುತ್ತಿಗೆ ಹಿಡಿದು ಅಂಗಳಕ್ಕೆ ನೂಕಿ ‘ಹೋಗು ನಿನ್ನಪ್ಪನ ಮನೆಗೆ ! ನನ್ನ ಮನೇಲಿರಬೇಡ’ ಎಂದು ಭಯಂಕರವಾಗಿ ವರ್ತಿಸಿದರು. ಸುಬ್ಬಮ್ಮ ಊಟವಿಲ್ಲದೆ ಮನೆಯ ಹೊರಗಡೆ ಕುಳಿತು ಹಗಲೆಲ್ಲಾ ಅತ್ತು ಅತ್ತು, ರಾತ್ರಿ ನಾಗಮ್ಮನವರ ಬಲಾತ್ಕಾರದಿಂದ ಅವರ ಮನೆಗೆ ಹೋಗಿ ಕಣ್ಣೀರಿನಲ್ಲಿಯೆ ಅನ್ನ ಕಲಸಿಕೊಂಡು ಊಟಮಾಡಿ ಅಲ್ಲಿಯೇ ಮಲಗಿಕೊಂಡಳು. ಆ ವಿಷಯ ಗೌಡರಿಗೆ ತಿಳಿದೊಡನೆಯೆ ಅವರು ರಣಪಿಶಾಚಿಯಂತಾದರು.

ಹುಡುಗಿಯನ್ನು ಮದುವೆಯಾಗಿದ್ದ ಆ ಮುದುಕನಿಗೆ ಮೊದಲೇ ಸಂಶಯ ಪಿಶಾಚಿ ಅಮರಿತ್ತು. ಅದರಲ್ಲಯೂ ಹೂವಯ್ಯನ ಪರವಾಗಿ ಸುಬ್ಬಮ್ಮ ತೋರಿಸುತ್ತಿದ್ದ ಆದರವನ್ನು ಚಂದ್ರಯ್ಯಗೌಡರು ವಿಪರೀತವಾಗಿ ಅರ್ಥಮಾಡಿಕೊಂಡಿದ್ದರು. ಮನೆ ಹಿಸ್ಸೆಯಾಗುವುದಕ್ಕೆ ಅದೂ ಒಂದು ಪ್ರಬಲವಾದ ಕಾರಣವಾಗಿತ್ತು. ಮನೆ ಹಿಸ್ಸೆಯಾದ ಮೇಲಂತೂ ಸಂಶಯಪಿಶಾಚ ಸಾವಿರಾರು ರೂಪಗಳನ್ನು ತಾಳಿತ್ತು. ಒಮ್ಮೊಮ್ಮೆ ತಮ್ಮ ಸ್ವಂತ ಮಗ ರಾಮಯ್ಯನನ್ನೂ ಸಂಶಯದೃಷ್ಟಿಯಿಂದ ನೋಡತೊಡಗಿದ್ದರು. ಸುಬ್ಬಮ್ಮನನ್ನಂತೂ ಕಣ್ಣಿನ ಮೇಲೆ ಕಣ್ಣಿಟ್ಟು ಪರೀಕ್ಷಿಸುತ್ತಿದ್ದರು.

ಯಾವಾಗ ಸುಬ್ಬಮ್ಮ ‘ಆಚೆಮನೆ’ಯಲ್ಲಿ ರಾತ್ರಿಯನ್ನು ಕಳೆದಳೆಂದು ಗೊತ್ತಾಯಿತೋ ಚಂದ್ರಯ್ಯಗೌಡರ ಕಲ್ಪನೆ ಅವರಲ್ಲಿ ಅದುವರೆಗೆ ಭಯಗಳಂತಿದ್ದವುಗಳನ್ನೆಲ್ಲ ವಾಸ್ತವವಾಗಿ ಚಿತ್ರಿಸಿತು. ಹೆಂಡತಿಯನ್ನು ಮನೆಯಲ್ಲಿ ಸೇರಿಸಿಕೊಳ್ಳುವುದೇ ಇಲ್ಲವೆಂದು ಸಾರಿಬಿಟ್ಟರು. ನೆಲ್ಲುಹಳ್ಳಿಯ ಪೆದ್ದೇಗೌಡರು ಮುತ್ತಳ್ಳಿ ಶ್ಯಾಮಗೌಡರು ಮೊದಲಾದ ಗೌಡರುಗಳು ಬಂದು ಸಮಾಧಾನ ಹೇಳಿ, ಸುಬ್ಬಮ್ಮ ಪರಿಶುದ್ದಳೆಂದು ಸಾಧಿಸಿದ್ದರೆ ಅವಳ ಗತಿ ಕಾಡುಪಾಲಾಗುತ್ತಿತ್ತು !

ಎಲ್ಲ ಕೋಟಲೆಗಳನ್ನು ಸಹಿಸಲು ಸಿದ್ಧನಾಗಿದ್ದ ಹೂವಯ್ಯನಿಗೆ ಈ ಅಪವಾದವನ್ನು ಸಹಿಸಲು ಸಾಧ್ಯವಾಗಲಿಲ್ಲ. ತಾನು ಆ  ಮನೆಯಲ್ಲಿದ್ದರೆ ಒಂದಲ್ಲ ಒಂದು ದಿನ ಅನಾಹುತಕ್ಕೀಡಾಗಬೇಕಾಗುತ್ತದೆ ಎಂದು ಮುಂಗಂಡು ಪಿತೃಗಳ ಕಾನೂರು ಮನೆಯನ್ನು ಬಿಡಬೇಕೆಂದು ನಿಶ್ಚಯಿಸಿದನು. ಇದನ್ನೆಲ್ಲಾ ತಾಯಿಗೂ ವಿಶದವಾಗಿ ಹೇಳಿದನು. ಅವರೂ ಬಹಳ ಕಷ್ಟದಿಂದ ಒಪ್ಪಿದರು. ಮಳೆಗಾಲ ಕಳೆದ ಮೇಲೆ ಮನೆ ಬಿಡುವುದೆಂದು ನಿಶ್ಚಯವಾಯಿತು. ಅದನ್ನು ಕೇಳಿದ ಚಂದ್ರಯ್ಯಗೌಡರಿಗೆ ಅತ್ಯಾನಂದವಾಗಿ ಅವರನ್ನು ಆದಷ್ಟು ಬೇಗನೆ ಮನೆ ಬಿಡಿಸಲೆಂದು ಕಿರುಕಳವನ್ನು ಮತ್ತಷ್ಟು ಹೆಚ್ಚಿಸಿದರು.

ಅವರ ಅದೃಷ್ಟಕ್ಕೆ ತಕ್ಕಹಾಗೆ ಒಂದು ಸಂಗತಿ ಜರುಗಿತ್ತು. ಒಂದು ದಿನ ಸಾಯಂಕಾಲ ನಾಗಮ್ಮನವರು ತಮ್ಮ ತಮ್ಮ ಗದ್ದೆಗಳ ಅಂಚಿನಲ್ಲಿ ಹೊನಗೊನೆ ಸೊಪ್ಪನ್ನು ಕುಯ್ದುಕೊಂಡು ಬರಲು ಹೋಗಿದ್ದರು. ತುಂತುರು ಮಳೆ ಸುರಿಯುತ್ತಿತ್ತು. ಮೋಡದ ಕತ್ತಲೆ ಕವಿದಿತ್ತು.

ಗದ್ದೆಯ ಮೇಲುಭಾಗದಲ್ಲಿದ್ದ ಬಯಲಿನಲ್ಲಿ ದನಗಳ ಹಿಂಡಿನಲ್ಲಿ ಚಂದ್ರಯ್ಯಗೌಡರ ಗಾಡಿ ಎತ್ತುಗಳು ಮೇಯುತ್ತಿದ್ದವು. ಅವುಗಳಲ್ಲಿ ‘ಲಚ್ಚ’ ಗೊರಬು ಸೂಡಿಕೊಂಡು ಬಾಗಿ ಬಾಗಿ ಏಳುತ್ತಿದ್ದ ನಾಗಮ್ಮನವರನ್ನು ಕಂಡು, ಏನೆಂದು ಊಹಿಸಿತೋ ಏನೋ, ಬಾಲವೆತ್ತಿ ಕಾಲು ಕುಟ್ಟಿ, ಕೋಡುಮಟ್ಟೆಹಾಕಿದ್ದ ನೀಳವಾದ ಕೋಡುಗಳನ್ನು ಮುಂಚಾಚಿ ಭಯಂಕರವಾಗಿ ಕೂಗುತ್ತಾ ಗುಟುರು ಹಾಕಿ ಅವರ ಕಡೆಗೆ ನುಗ್ಗಿತು.

ದನ ಕಾಯುತ್ತಿದ್ದ ಬೇಲರ ಸಿದ್ದ ಅದನ್ನು ಕಂಡೊಡನೆಯೆ ‘ಅಯ್ಯೊ ಅಮ್ಮಾ ! ಅಯ್ಯೊ ಅಮ್ಮಾ !’ ಎಂದು ಕರೆಯುತ್ತಾ ಓಡಿದನು.

ನಾಗಮ್ಮನವರು ತಲೆಯೆತ್ತಿ ನೋಡುತ್ತಾರೆ : ಬತ್ತದ ಸಸಿ ಬೆಳೆದು ನಿಂತ ಗದ್ದೆಗಳಲ್ಲಿ ಅಂಚಿನಿಂದ ಅಂಚಿಗೆ ನೆಗೆಯುತ್ತಾ ಲಚ್ಚೆತ್ತು ತಮ್ಮ ಕಡೆಗೆ ಭೀಷಣವಾಗಿ ನುಗ್ಗಿಬರುತ್ತಿದೆ ! ಕಿಟ್ಟನೆ ಕಿರಿಚಿಕೊಂಡು ಸೂಡಿಕೊಂಡಿದ್ದ  ಗೊರಬಿನೊಡನೆ ಓಡಿದರು. ಎರಡು ಮಾರು ಓಡುವುದರಲ್ಲಿ ನಡುಗದ್ದೆಯಲ್ಲಿ ಉರುಳಿಬಿದ್ದರು. ಗೊರಬು ಅವರ ಮೇಲೆ ಬುಟ್ಟಿ ಮುಚ್ಚಿದಂತೆ ಬಿದ್ದಿತು. ಲಚ್ಚ ಓಡಿಹೋಗಿ ಮನುಷ್ಯರ ಬದಲಾಗಿ ಗೊರಬಿದ್ದುದನ್ನು ನೋಡಿ ಅದನ್ನೇ ತಿವಿಯಿತು. ತರಗೆಲೆಯ ಗೊರಬು ತೂತಾಗಿ ಎತ್ತಿನ ಕೋಡಿಗೆ ಚುಚ್ಚಿ ಸಿಕ್ಕಿಕೊಂಡು ಗಾಳಿಯಲ್ಲಿ ಹಾರಾಡಿತು. ಲಚ್ಚ ಎರಡನೆಯ ಸಾರಿ ತಿವಿಯಲು ಪ್ರಯತ್ನಿಸಿತು. ಅಷ್ಟರಲ್ಲಿ ಬಳಿಯಲ್ಲಿಯೆ ಗದ್ದೆಯ ಬೇಲಿಯ ಮರಗಳಲ್ಲಿ ಹೊರಸಲು ಹಕ್ಕಿ ಬೇಟೆಯಾಡುತ್ತಿದ್ದ ಹೂವಯ್ಯ ತನ್ನ ಸಮಸ್ತ ಶಕ್ತಿಯನ್ನೂ ಸಂಮಂತ್ರಿಸಿ, ಲಚ್ಚನ ಬಲಿಗೆ ನುಗ್ಗಿಬಂದನು. ಎತ್ತು ಆತ್ಮಕಡೆಗೆ ತಿರುಗಿ ಅವನನ್ನೇ ಅಟ್ಟತೊಡಗಿತು.

ಸ್ವಲ್ಪ ದೂರ ಓಡಿದ ಮೇಲೆ ಹೂವಯ್ಯ ಕೈಲಿದ್ದ ಬಂದೂಕಿನಿಂದ ಎತ್ತನ್ನು ಸುಡುತ್ತೇನೆ ಎಂದು ಭಾವಿಸಿದನು. ಆದರೆ ಚಂದ್ರಯ್ಯಗೌಡರ ಎತ್ತು ! ಗೋಹತ್ಯೆ ! ಏನೇನೋ ಆಲೋಚನೆಗಳು ಅವನ ಮೆದುಳನ್ನೆಲ್ಲ ಕದಡಿ ಬಿಟ್ಟುವು. ನೋಡುತ್ತಾನೆ : ಎತ್ತು ನಾಲ್ಕೈದು ಮಾರು ದೂರದಲ್ಲಿ ದೃಢನಿಶ್ಚಯದಿಂದ ನುಗ್ಗುತ್ತಿದೆ ! ತಳುವಿದರೆ ಸಾವು ನಿಶ್ಚಯ ! ಮೇಲೆ ಹತ್ತಲು ಯಾವ ಮರವೂ ಹತ್ತಿರವಿಲ್ಲ ! ಹೂವಯ್ಯ ಸರಕ್ಕನೆ ಹಿಂತಿರುಗಿ ನಿಂತು, ಗುಂಡು ಹಾರಿಸಿದನು. ಎತ್ತು ಹೆಚ್ಚು ಕಡಿಮೆ ಅವನ ಮೈಮೇಲೆಯೆ ಉರುಳಿದಂತೆ ದೊಪ್ಪನೆ ಬಿದ್ದಿತು ! ಈಡು ತಗುಲಿದ ಅದರ ಹಣೆಯ ಗಾಯದಿಂದ ನೆತ್ತರು ಕೋಡಿ ಹರಿಯ ತೊಡಗಿತು !

ಹೂವಯ್ಯ ಧಾತು ಹಾರಿದ್ದ ತನ್ನ ತಾಯಿಗೆ ಶೈತ್ಯೋಪಚಾರ ಮಾಡಿ ಎಚ್ಚರಗೊಳಿಸಿ, ಗಲಭೆಯನ್ನು ಕೇಳಿ ಅಲ್ಲಿಗೆ ಓಡಿಬಂದಿದ್ದ ಪುಟ್ಟಣ್ಣ, ರಾಮಯ್ಯ, ವಾಸು ಇವರ ಸಹಾಯದಿಂದ ಅವರನ್ನು ಮನೆಗೆ ಸಾಗಿಸಿದನು. ನರಗಳೆಲ್ಲ ಆ ಘಟನೆಯ ಆಘಾತದಿಂದ ತತ್ತರಿಸಿದ್ದುವಾದ ಕಾರಣ ಅವನೂ ಹಾಸಗೆಯಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಂಡನು.

ಚಂದ್ರಯ್ಯಗೌಡರಿಗೆ ನಡೆದ ವಿಚಾರವನ್ನೆಲ್ಲ ಸರಿಯಾಗಿ ತಿಳಿದ ಮೇಲೆಯೂ ಕೂಡ ಹೂವಯ್ಯ ತಮ್ಮ ಗಾಡಿಯೆತ್ತನ್ನು ಹೊಟ್ಟೆಕಿಚ್ಚಿನಿಂದಲೆ ಹೊಡೆದು ಕೊಂದನೆಂದು ಹೇಳುತ್ತಾ ‘ಕೇಸು ಮಾಡುತ್ತೇನೆ’; ‘ಹುಯಿಲು ಕೊಡುತ್ತೇನೆ’; (ಮಾಟಮಾಡಿ ದೆವ್ವದ ಸಹಾಯದಿಂದ ವೈರಿಗಳನ್ನು ಕೊಲ್ಲಿಸುವುದು ಎಂದರ್ಥ) ‘ಅವನ ಜಾನುವಾರಗಳನ್ನೂ ಗುಂಡಿನಿಂದ ಹೊಡೆಯುತ್ತೇನೆ’ ಎಂದು ಮೊದಲಾಗಿ ಮನೆಯ ಮಹಡಿ ಹಾರುವಂತೆ ಗಲಭೆ ಮಾಡಿದರು.

ಆದರೆ, ಕಡೆಗೆ ಅವರು ಹೇಳಿದಂತೆ ಯಾವುದನ್ನೂ ಮಾಡಲಿಲ್ಲ. ಲಚ್ಚನ ಜೊತೆಯ ಎತ್ತಾಗಿದ್ದ ‘ನಂದಿ’ಯನ್ನೂ ಹೂವಯ್ಯನಿಗೇ ಕೊಟ್ಟು ತಾವು ಆ ಜೊತೆಯ ಗಾಡಿಯೆತ್ತುಗಳಿಗೆ ಕೊಟ್ಟಿದ್ದ ಮೊಬಲಗನ್ನು ಒಟ್ಟಿಗೆ ವಸೂಲು ಮಾಡಿಕೊಂಡರು.

ನಾಗಮ್ಮನವರನ್ನು ಮಾತಾಡಿಸಿಕೊಂಡು ಹೋಗಲು ಮುತ್ತಳ್ಳಿ ಚಿನ್ನಯ್ಯನೂ ಸೀತೆಮನ ಸಿಂಗಪ್ಪಗೌಡರೂ ಬಂದರು. ಮನೆ ಪಾಲಾದ ಮೇಲೆ ಚಿನ್ನಯ್ಯ ಕಾನೂರಿಗೆ ಬಂದಿರಲಿಲ್ಲ. ಒಬ್ಬರ ಮನೆಗೆ ಊಟಕ್ಕೆ ಹೋದರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ : ಒಬ್ಬರ ಜಗಲಿಯಲ್ಲಿ ಕುಳಿತರೆ ಮತ್ತೊಬ್ಬರಿಗೆ ಮುನಿಸಾಗುತ್ತದೆ ಎಂಬುದೇ ಅವನು ಬರದಿದ್ದುದಕ್ಕೆ ಕಾರಣವಾಗಿತ್ತು.

ಚಂದ್ರಯ್ಯಗೌಡರು ಚಿನ್ನಯ್ಯನನ್ನೇನೊ ಎಂದಿನಂತೆ ಸ್ವಾಗತಿಸಿದರು. ಆದರೆ ಸಿಂಗಪ್ಪಗೌಡರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಚಿನ್ನಯ್ಯ ಚಂದ್ರಯ್ಯಗೌಡರ ಜಗಲಿಯಮೇಲೆಯೂ ಸಿಂಗಪ್ಪಗೌಡರು ಹೂವಯ್ಯನ ಜಗಲಿಯ ಮೇಲೆಯೂ ಕುಳಿತರು.

ಆದರೆ ಸ್ವಲ್ಪ ಹೊತ್ತಿನೊಳಗಾಗಿ ಚಿನ್ನಯ್ಯನು ಸಿಂಗಪ್ಪಗೌಡರೊಡನೆ ಮಾತಾಡುವ ನೆವದಿಂದ ಹೂವಯ್ಯನ ಜಗಲಿಗೆ ಬಂದು ಕುಳಿತನು. ಸರಿ ; ರಾಮಯ್ಯ, ವಾಸು, ಪುಟ್ಟಣ್ಣ ಎಲ್ಲರೂ ಅಲ್ಲಿಯೇ ನೆರೆದರು. ಮಾತಕತೆಗಾರಂಭವಾಯಿತು. ಚಂದ್ರಯ್ಯಗೌಡರೊಬ್ಬರೇ ತಮ್ಮ ಬಿರುವಿನ ಬುಡದಲ್ಲಿ ಕುಳಿತು ಕಪೇಸಬೇಕಾಯಿತು. ತನ್ನನ್ನು ಕಂಡರೆ ಎಲ್ಲರಿಗೂ ‘ಸಂಸಾರ’ ಎಂದು ಅವರಿಗೆ ಮುನಿಸೇರಿತು.

ಪುಟ್ಟಮ್ಮ ಮುತ್ತಳ್ಳಿ ಚಿನ್ನಯ್ಯಬಾವ ಬಂದಿದ್ದಾರೆ ಎಂದು ಸುಬ್ಬಮ್ಮನೊಡಗೂಡಿ ಔತಣ ಸಿದ್ಧಪಡಿಸುವುದರಲ್ಲಿ  ರಾತ್ರಿಯೂಟಕ್ಕೆ ಸ್ವಲ್ಪ ವಿಲಂಬವಾಯಿತು.

ಹೂವಯ್ಯನ ಮನೆಯಲ್ಲಿ ನಾಗಮ್ಮನವರಿಗೆ ಸ್ವಸ್ಥವಿಲ್ಲದಿದ್ದುದರಿಂದ ಅಷ್ಟೇನೂ ವಿಶೇಷವಿರಲಿಲ್ಲ. ಅದರಿಂದ ರಾತ್ರಿ ಎಂಟು ಗಂಟೆಯ ಒಳಗೆ ಊಟ ಸಿದ್ಧವಾಯಿತು.

ಪುಟ್ಟಣ್ಣ ಬಂದು ‘ಊಟಕ್ಕೇಳಿ’ ಎಂದನು.

ಕುಳಿತವರೆಲ್ಲ ಒಬ್ಬರ ಮುಖವನ್ನು ಒಬ್ಬರು ನೋಡಿದರು.

ಸಿಂಗಪ್ಪಗೌಡರು ‘ಏಳು, ಚಿನ್ನಯ್ಯ, ಶಾಸ್ತ್ರ ಪೂರೈಸಿಬಿಡೋಣ’ ಎಂದು ಆಡುತ್ತಿದ್ದ ಇಸ್ಪೀಟುಗಳನ್ನು ಜಮಖಾನದ ಮೇಲೆ ಹಾಕಿ, ಮೇಲೆದ್ದರು. ಚಿನ್ನಯ್ಯನೂ ಎದ್ದನು.

ಅಷ್ಟರಲ್ಲಿ ರಾಮಯ್ಯ ಹೂವಯ್ಯನ ಕಿವಿಯಲ್ಲಿ ‘ನಮ್ಮ ಮನೆಯಲ್ಲಿ ವಿಶೇಷ ಮಾಡಿದ್ದಾರೆ’ ಎಂದನು.

ಹೂವಯ್ಯನೂ ಪಿಸುಮಾತಿನಲ್ಲಿಯೆ “ಹೌದು, ಏನು ಮಾಡುವುದು ಹೇಳು ? ಒಳ್ಳೆ ಪೀಕಲಾಟಕ್ಕೆ ಬಂತಲ್ಲಾ ! ಸಿಂಗಪ್ಪಕಕ್ಕಯ್ಯ ನಿಮ್ಮ ಮನೆಗೆ ಊಟಕ್ಕೆ ಬರೋದಿಲ್ಲ. ಚಿನ್ನಯ್ಯನೂ ಊಟಕ್ಕೆ ಎದ್ದಾಗಿಹೋಯ್ತು. ಮತ್ತೆ ಕೂತುಕೋ ಅಂತ ಹೇಳಿ ಅವನನ್ನು ಬಿಟ್ಟುಹೋಗೋದು ಹೇಗೆ ?” ಎಂದನು.

ಅಂತೂ ಅನಿವಾರ್ಯದಿಮದ ಚಿನ್ನಯ್ಯನೂ ಸಿಂಗಪ್ಪಗೌಡರೊಡನೆ ಹೂವಯ್ಯನ ಮನೆಗೇ ಊಟಕ್ಕೆ ಹೋದನು.

ಅದನ್ನು ಕೇಳಿ ಪುಟ್ಟಮ್ಮ ಕಣ್ಣೀರು ಹಾಕಿ, ತಾನು ಆಗಲೇ ತಯಾರು ಮಾಡಿದ್ದ ಕೆಲವು ಪದಾರ್ಥಗಳನ್ನೂ ಪಲ್ಯಗಳನ್ನೂ ‘ಆಚೆಮನೆಗೆ’ ಕಳುಹಿಸಿಕೊಟ್ಟಳು.

ಈ ಸಣ್ಣ ಘಟನೆ ಚಂದ್ರಯ್ಯಗೌಡರ ಮನಸ್ಸಿಗೆ ಮಹಾ ಪಿತೂರಿಯಾಗಿ ಕಂಡಿತು.

ಮರುದಿನ ನಂಟರು ಮನೆಬಿಟ್ಟು ಹೊರಟೊಡನೆಯೆ ರಾಮಯ್ಯನನ್ನು ತರಾಟೆಗೆ ತೆಗೆದುಕೊಂಡರು. ಚಿನ್ನಯ್ಯನನ್ನು ‘ಆಚೆಮನೆ’ಗೆ ಊಟಕ್ಕೆ ಕಳುಹಿಸಿದುದಕ್ಕೆ ಅವನನ್ನು ಕಂಡಾಬಟ್ಟೆ ಉಗುಳಿ ಬೈದರು.

ಇಂತಹ ಇಕ್ಕುಳದ ಸನ್ನಿವೇಶಗಳು ಹೆಜ್ಜೆಹೆಜ್ಜೆಗೂ ಒದಗತೊಡಗಿ ಕಾನೂರು ಮನೆಯಲ್ಲಿ ಆ ಮಳೆಗಾಲವನ್ನಾದರೂ ಕಳೆಯಬೇಕೆಂದಿದ್ದ ಹೂವಯ್ಯ ಪಾಲಾದ ಎರಡು ತಿಂಗಳಲ್ಲಿಯೆ ಅದನ್ನು ಬಿಡಲು ನಿಶ್ಚಯಿಸಿಬೇಕಾಯಿತು.

ಕಳಕಾನೂರು ಅಣ್ಣಯ್ಯಗೌಡರಿದ್ದ ಹುಲ್ಲಿನ ಮನೆಯೂ ಅದರ ಸಮೀಪದ ಜಮೀನುಗಳೂ ಹೂವಯ್ಯನ ಪಾಲಿಗೆ ಬಂದಿದ್ದುವು. ಆ ಮನೆ ನೋಡಿಕೊಳ್ಳುವವರಿಲ್ಲದೆ ನೀರು ಸೋರಿ, ಕಸ ಬಿದ್ದು, ದನಕರುಗಳೂ ಮಲಗಿ ಎದ್ದು ಹಂದಿಯ ಹಟ್ಟಿಯಾಗಿತ್ತು.

ಆ ಮನೆಯನ್ನೆ ಚೊಕ್ಕಟ ಮಾಡಿಸಿ, ಹುಲ್ಲು ಹೊದಿಸಿ, ಅದರ ಬಳಿಯಿದ್ದ ಗದ್ದೆಯ ಬಾವಿಯನ್ನೂ ಶುಚಿಮಾಡಿಸಿ, ಹಟ್ಟಿ ಕೊಟ್ಟಿಗೆಗಳನ್ನೂ ಸರಿಮಾಡಿಸಿ ಹೂವಯ್ಯ ಕೆಳಕಾನೂರಿಗೆ ಒಕ್ಕಲು ಹೋಗಲು ನಿಶ್ಚಯಿಸಿ ಒಂದು ದಿನ ಗೊತ್ತುಮಾಡಿದನು. ಆ ದಿನ ಮಳೆ ಜೋರಾಗಿ ಸುರಿಯುತ್ತಿದ್ದರೂ, ಸಿಂಗಪ್ಪಗೌಡರು ಕಳುಹಿಸಿದ್ದ ಗಾಡಿಯಮೇಲೆ ಸಾಮಾನುಗಳನ್ನೂ ಪಾತ್ರೆ ಗೀತ್ರೆಗಳನ್ನೂ ಹೇರಿಸಾಗಿಸಿ, ಚಂದ್ರಯ್ಯಗೌಡರೊಬ್ಬರ ಹೊರತು ಉಳಿದವರೆಲ್ಲ ಕಣ್ಣೀರು ಮಿಡಿಯುತ್ತಿರಲಾಗಿ ಹೂವಯ್ಯ ನಾಗಮ್ಮನವರೊಡನೆ ಪಿತೃಗೃಹವನ್ನು ತ್ಯಜಿಸಿದನು.

ಪುಟ್ಟಣ್ಣ ಹೂವಯ್ಯನ ಪಾಲಿಗೆ ಬಂದಿದ್ದ ಡೈಮಂಡು, ರೋಜಿ, ಕೊತ್ವಾಲ ಈ ಮೂರು ನಾಯಿಗಳನ್ನೂ, ಒಂದು ಹೆಸರಿಡದಿದ್ದ ಅಥವಾ ಅನೇಕರು ಅನೇಕ ವಿಧವಾಗಿ ಹೆಸರಿಟ್ಟು ಕರೆಯುತ್ತಿದ್ದ ನಾಯಿಮರಿಯನ್ನೂ ಕರೆದುಕೊಂಡು, ಸದ್ಯಕ್ಕೆ ಚಂದ್ರಯ್ಯಗೌಡರ ಕಾಟದಿಂದ ದೂರವಾದೆವಲ್ಲಾ ಎಂಬ ಹರ್ಷದಿಂದ ಕೆಳಕಾನೂರಿನ ಕಡೆಗೆ ಬಂದೂಕು ಹಿಡಿದು ನಡೆದನು.