ಮಲಗಿದ್ದವರೆಲ್ಲರೂ ದಡಬಡನೆ ಎದ್ದು ನಾಲ್ಕು ದಿಕ್ಕುಗಳಿಂದಲೂ ಓಡಿ ಬಂದರು. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಅನಾಹುತದ ಊಹೆಯಿತ್ತು. ಆದರೆ ಯಾವುದೊಂದೂ ವಾಸ್ತವವಾಗಿರಲಿಲ್ಲ.

ತಲೆಗೂ ಮುಖಕ್ಕೂ ತಣ್ಣೀರು ಹಾಕಿ, ಗಾಳಿ ಬೀಸಿ ಉಪಚರಿಸಿದ ಸ್ವಲ್ಪ ಹೊತ್ತಿನಮೇಲೆ ಸೀತೆ ಕಣ್ಣು ತೆರೆದಳು. ಆದರೆ ಪ್ರಪಂಚ ಆಕೆಗೆ ಹಿಂದಿನದಾಗಿರಲಿಲ್ಲ. ಮೊದಮೊದಲು ಅಲ್ಲಿ ಸುತ್ತಲಿದ್ದ ತಂದೆ, ತಾಯಿ, ಅಣ್ಣ ಮೊದಲಾದ ಪರಿಚಿತರ ಗುರುತು ಕೂಡ ಆಕೆಗೆ ಸಿಕ್ಕಿದಹಾಗೆ ತೋರಲಿಲ್ಲ. ಕೇಳಿದ ಯಾವ ಪ್ರಶ್ನೆಗೂ  ಉತ್ತರಕೊಡಲಿಲ್ಲ. ಸುಮ್ಮನೆ ದುರುದುರುನೆ ನೋಡತೊಗಿದಳು. ಬಿಕ್ಕಿಬಿಕ್ಕಿ ಅಳುತ್ತಿದ್ದಳು.

ಗೌರಮ್ಮನವರು ನಿಡುಸುಯ್ಯುತ್ತ ಕಂಬನಿಗರೆಯುತ್ತ ಮಗಳನ್ನು ನಾನಾಪರಿಯಿಂದ ನುಡಿಸುತ್ತ ತಮಗೆ ತಿಳಿದಿದ್ದ ದೆಯ್ಯ ದೇವರುಗಳಿಗೆಲ್ಲ ಹೇಳಿಕೊಂಡು ಮುಡಿಪುಕಟ್ಟಿದ್ದರು. ಶ್ಯಾಮಯ್ಯಗೌಡರೂ ಹೆಂಡತಿಯ ಉದ್ಯಮಗಳಲ್ಲಿ ಸಂಪೂರ್ಣ ಭಾಗಿಗಳಾದರು. ಮರುದಿನವೆ ಅಗ್ರಹಾರದ ವೆಂಕಪ್ಪಯ್ಯ ಜೋಯಿಸರನ್ನು ಕರೆಯಿರಿ, ನಿಮಿತ್ತ ನೋಡಿಸುವುದಾಗಿಯೂ, ಕೂಳೂರಿಗೂ ಸಿದ್ದರಮಠಕ್ಕೂ ಅಳು ಕಳುಹಿಸಿ ಪ್ರಸಾದ ತರಿಸುವುದಾಗಿಯೂ, ಮನೆಯ ದೆಯ್ಯ ದ್ಯಾವರುಗಳಿಗೆ ಹಣ್ಣು ಹಾಕಿಸಿ ರಕ್ತಬಲಿ ಕೊಡುವುದಾಗಿಯೂ, ಧರ್ಮಸ್ಥಳ, ತಿರುಪತಿ, ಸಿಬ್ಬಲುಗುಡ್ಡೆ ಮುಂತಾದ ದೂರದ ಮತ್ತು ಸಮೀಪದ ದೇವಸ್ಥಾನಗಳಿಗೆ ಕಾಣಿಕೆ ಅರ್ಪಿಸುವುದಾಗಿಯೂ, ಗಟ್ಟಿಯಾಗಿ, ನೆರೆದಿದ್ದ ಎಲ್ಲರಿಗೂ ಕೇಳಿಸುವಂತೆ ಹೇಳಿಕೊಂಡರು. ಸೀತೆಯ ಮೈಮೇಲೆ ಬಂದಿದ್ದ ಪಿಶಾಚಿಗೆ ಭಯ ಹುಟ್ಟಿಸಬೇಕೆಂದು ಅವರ ಅಂತರಂಗದ ಮುಖ್ಯೋದೇಶವಾಗಿತ್ತು

ಬೆಳಗಿನ ಜಾವದಲ್ಲಿ ಸೀತೆ ಮಾತಾಡತೊಡಗಿದಳು. ಒಂದು ಸಾರಿ ‘ಸೀತೆ’ ಮಾತಾಡುವಂತೆಯೂ ಮತ್ತೊಂದು ಸಾರಿ ‘ಇನ್ನಾರೋ’ ಮಾತಾಡುವಂತೆಯೂ ತೋರುತ್ತಿದ್ದುದರಿಂದ, ಮೊದಲೆ ಮೂಢಭಾವನೆಗಳಿಂದ ತುಂಬಿ ಹೋಗಿದ್ದ ಮಂದಿಯ ಮನಸ್ಸು ಭಯಕ್ರಾಂತವಾಯಿತು. ಮನಸ್ಸಿಗೆ ಬಂದಹಾಗೆ ಸಿದ್ಧಾಂತಗಳನ್ನು ಕಟ್ಟತೊಡಗಿದರು.

ಆ ಊಹೆಯ ಸಿದ್ಧಾಂತಗಳಲ್ಲಿ ಒಂದು ಎಲ್ಲರ ಹೃದಯಕ್ಕೂ ಚೆನ್ನಾಗಿ ಹಿಡಿಯಿತು : ಸೀತೆಮನೆ ಸಿಂಗಪ್ಪಗೌಡರ ಬಾಳದೆಹೋದ ಮಗ ಕೃಷ್ಣಪ್ಪನೇ ದೆಯ್ಯವಾಗಿ ಸೀತೆಯ ಮೇಲೆ ಬಂದಿದ್ದಾನೆ ಎಂಬುದು ! ಸೀತೆಯ ಬಾಯಿಂದ ಹೊರಡುತ್ತಿದ್ದ ಕೆಲವು ಮಾತುಗಳೂ ಅವರ ಊಹೆಯನ್ನೇ ಸಮರ್ಥಿಸುವಂತೆ  ಅರ್ಥ ಕೊಡುತ್ತಿದ್ದುವು !

ರಾಜ್ಯದಲ್ಲಿ ದಂಗೆಯಾದರೆ ಅದನ್ನಡಗಿಸಲು ಆ ಪ್ರದೇಶಕ್ಕೆ ರಾಜನ ಸೈನ್ಯ ಹೋಗುವ ಠೀವಿಯಿಂದ ವೆಂಕಪ್ಪಯ್ಯ ಜೋಯಿಸರು ಮರುದಿನ ಮುತ್ತಳ್ಳಿಗೆ ಬಂದರು. ನೋಡುತ್ತಿದ್ದ ಜನರ ಮನಸ್ಸು ಬೆರಗಾಗುವ ರೀತಿಯಲ್ಲಿ ನಿಮಿತ್ತ ನೋಡಿ, ತಲೆಯಲ್ಲಾಡಿಸಿ ಶ್ಯಾಮಯ್ಯಗೌಡರನ್ನು ಒಂದು ಏಕಾಂತದೆಡೆಗೆ ಕರೆದುಕೊಂಡು ಹೋಗಿ ಕಿವಿಯಲ್ಲುಸುರಿ, ಮಂತ್ರಿಸಿದ ವಿಭೂತಿ ಕುಂಕುಮ ತೆಂಗಿನಕಾಯಿಗಳನ್ನು ಕೊಟ್ಟು, ತಮಗೆ ಬರಬೇಕಾಗಿದ್ದ ದಾನ ದಕ್ಷಿಣೆಗಳನ್ನು ಹೊತ್ತು ಅಗ್ರಹಾರಕ್ಕೆ ಹಿಂತಿರುಗಿದರು. ಏನೋ ಒಂದು ಮಹತ್ತಾದ ಕಾರ್ಯವನ್ನು ಸಾಧಿಸಿದಂತಾಗಿ ಮನೆಯವರೆಲ್ಲರ ಮನಸ್ಸೂ ನೆಮ್ಮದಿಯಾಯಿತು.

ಜೋಯಿಸರು ಉಪದೇಶಿಸಿದಂತೆ ಸೀತೆಗೆ ವಿಭೂತಿ ಕುಂಕುಮಗಳನ್ನು ಹಚ್ಚಿ, ಆಕೆ ಮಲಗುತ್ತಿದ್ದ ಸ್ಥಳದ ಮೇಲುಭಾಗದಲ್ಲಿದ್ದ ಬಿದಿರು ಗಳುವಿಗೆ ಮಂತ್ರಿಸಿದ ತೆಂಗಿನಕಾಯಿಯನ್ನು ಕಟ್ಟಿದರು.

ಶ್ಯಾಮಯ್ಯಗೌಡರು ಜೋಯಿಸರು ತಮಗೆ ಹೇಳಿದ್ದ ಗುಟ್ಟಿನ ಮಾತುಗಳನ್ನು, ಗುಟ್ಟಾಗಿ, ಗುಟ್ಟಾಗಿಡಬೇಕೆಂದು ಹೇಳುತ್ತಾ ಒಬ್ಬೊಬ್ಬರಿಗೆ ಎಂದು ಅನೇಕ ಜನರಿಗೆ ಹೇಳಿದರು.

ಹಾಗೆ ಹೇಳಲು ಅವರಿಗೆ ಒಂದು ನೆವವೂ ಇತ್ತು. ಜೋಯಿಸರು ನಿಮಿತ್ತ ಹೇಳಿದ್ದ ವಿಷಯವನ್ನು ಇತರರು ಮೊದಲೇ ನಿರ್ಣಯಯಿಸಿದ್ದರು. ಎಲ್ಲರಿಗೂ ಗೊತ್ತಿರುವುದನ್ನೂ ಗುಟ್ಟಾಗಿಡುವುರಲ್ಲಿ ಅರ್ಥವಾದರೂ ಏನಿದೆ ? ಆದ್ದರಿಂದ ತಮ್ಮ ಮಗಳ ಮೇಲೆ ಬಂದಿರುವವನು ಸೀತೆಮನೆ ಸಿಂಗಪ್ಪಗೌಡರ ಮಗ ಕೃಷ್ಣಪ್ಪನೇ ಎಂದು ಜೋಯಿಸರೂ ನಿಮಿತ್ತ ನೋಡಿ ಹೇಳಿದರೆಂದು ತಿಳಿಸತೊಡಗಿದರು. ಇಂತಹ ವಿಷಯಗಳೆಂದರೆ ಹಳ್ಳಿಗರ ಕಿವಿಗಳಿಗೆ ಹಬ್ಬ. ಸುದ್ದಿ ಬಾಯಿಂದ  ಬಾಯಿಗೆ ಕಿವಿಯಿಂದ ಕಿವಿಗೆ ಹಬ್ಬಿತು.

ಸ್ವಂತ ಮಗನಿಗೆ ಹೆಂಡತಿಯಾಗಿ ಮನೆಗೆ ಬರಲಿರುವ ತಮ್ಮ ಸೊಸೆಯನ್ನು ತಮ್ಮ ಬದ್ಧವೈರಿಯಾಗಿರುವ ಸೀತೆಮನೆ ಸಿಂಗಪ್ಪಗೌಡರ ಬಾಳದೆ ಹೋದ ಮಗನ ದೆಯ್ಯ ಹಿಡಿದುಕೊಂಡಿರುವ ವಿಚಾರವನ್ನು ನಿಂಗನ ಬಾಯಿಂದ ಕೇಳಿದೊಡನೆಯೆ ಚಂದ್ರಯ್ಯಗೌಡರು ಬೆಂಕಿಬೆಂಕಿಯಾದರು. ತಮ್ಮನ್ನು ಪೀಡಿಸಲು ಬದುಕಿರುವ ತಂದೆ ಸಾಲದೆ ಸತ್ತ ಮಗನೂ ಬರಬೇಕೆ ? ಕೃಷ್ಣಪ್ಪನ ಪಿಶಾಚಕ್ಕೆ ನರಕಯಾತನೆ ಕೊಟ್ಟುರಚ್ಚು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಮದುವೆಯಾಗಿ ಸೀತೆ ಕಾನೂರಿಗೆ ಬಂದ ಮೇಲೆಯೂ ಕೃಷ್ಣಪ್ಪನ ಪಿಶಾಚ ತಮ್ಮ ಸೊಸೆ ಮೇಲ ಬರುವ ಧೈರ್ಯ ಮಾಡಿದರೆ ಆಗ ಮಾಡಿಸುತ್ತೇನೆ ಅದಕ್ಕೆ ! ಕೊಡಬಾರದ ಕಷ್ಟಗಳನ್ನು ಕೊಟ್ಟು ತಂದೆಯ ಮೇಲಣ ಸಿಟ್ಟನ್ನು ಮಗನ ಪ್ರೇತದ ಮೇಲೆ ತೀರಿಸಿಕೊಳ್ಳುತ್ತೇನೆ !

ಆಲೋಚಿಸುತ್ತಿದ್ದಂತೆ ಶಿಕ್ಷಾವಿಧಾನಗಳು ಒಂದೊಂದಾಗಿ ಅವರ ಮನಸ್ಸಿಗೆ ಹೊಳೆದುವು :- ಸೆಗಣಿ ತಿನ್ನಿಸುವುದು ; ಬರೆ ಹಾಕುವುದು ; ಉಪವಾಸ ಕೆಡವಿ ಜೀರಿಗೆ ಮೆಣಸಿನಕಾಯಿಯ ಕಾರದ ಮುದ್ದೆಯನ್ನು ತಿನ್ನಿಸುವುದು ; ತಿನ್ನದಿದ್ದರೆ ಕಣ್ಣಿಗೆ ಕಾರ ಸಿಡಿಯುವುದು ; ಪಟಿಕಾರ, ಕೂದಲು, ಇಂಗು, ಒಣಮೆಣಸಿನಕಾಯಿ ಮೊದಲಾದ ಪದಾರ್ಥಗಳನ್ನು ಉರಿಹಾಕಿ ಮೂಗಿಗೆ ಹೊಗೆ ಹಿಡಿಯುವುದು ; ವೆಂಕಪ್ಪಯ್ಯ ಜೋಯಿಸರಿಂದ ಮಂತ್ರ ಹಾಕಿಸಿ, ದಿಗ್ಬಂದನ ಮಾಡಿಸಿ ಅವರಿಗೆ ತಿಳಿದಿರುವ ಮಂತ್ರದ ಯಾತನೆಗಳನ್ನೆಲ್ಲ ಪ್ರಯೋಗಿಸುವುದು…. ಇತ್ಯಾದಿ.

ಸಿಂಗಪ್ಪಗೌಡರೇ ಕೈಗೆ ಸಿಕ್ಕಿ, ತಾವೇ ಅವರನ್ನು ಮೇಲೆ ಹೇಳಿದ ರೀತಿ ಪೀಡಿಸುತ್ತಿದ್ದರೆ ಎಷ್ಟು ಸಂತೋಷವಾಗುತ್ತಿತ್ತೋ ಅಷ್ಟು ಸಂತೋಷವಾಯಿತು ಚಂದ್ರಯ್ಯಗೌಡರಿಗೆ ಸೀತೆಯ ಮೈಮೇಲೆ ಬರುವ ಕೃಷ್ಣಪ್ಪನ ಆತ್ಮಕ್ಕಾಗುವ ಹಿಂಸೆಯನ್ನು ನೆನೆದು.

ಸಿಂಗಪ್ಪಗೌಡರ ಪ್ರಯತ್ನವೇ ವ್ಯರ್ಥವಾಗಿದೆ ! ಇನ್ನು ಅವರ ಮಗನ ಪ್ರೇತದ ಪ್ರಯತ್ನಕ್ಕೆ ಸೊಪ್ಪು ಹಾಕುತ್ತಾರೆಯೆ ? ಕೃಷ್ಣಪ್ಪನಿರಲಿ ! ಅವನ ಮುತ್ತಜ್ಜನ ದೆಯ್ಯವೇ ಬಂದು ಹಿಡಿದರೂ ಮದುವೆ ಮಾತ್ರ ನಿಲ್ಲದಂತೆ ನೋಡಿಕೊಳ್ಳುತ್ತೇನೆ ಎಂದು ಶಪಥಮಾಡಿ ಚಂದ್ರಯ್ಯಗೌಡರು ಶ್ಯಾಮಯ್ಯಗೌಡರಿಗೆ “ಏನಾದರಾಗಲಿ ! ಎಷ್ಟು ಮಾತ್ರಕ್ಕೂ ನಿಶ್ಚಯವಾದ ಮದುವೆಯನ್ನು ನಿಲ್ಲಿಸಿಲಾಗುವುದಿಲ್ಲ !” ಎಂಬುದಾಗಿ ಮುನ್ನೆಚ್ಚರಿಕೆ ಹೇಳಿ ಕಳುಹಿಸಿದರು.

ಸೀತೆಗೆ ದೆವ್ವ ಹಿಡಿದ ಸಮಾಚಾರ ಹೂವಯ್ಯನ ಕಿವಿಗೂ ಮುಟ್ಟಿ, ಅವನು ಗಾಬರಿಗೊಂಡನು. ಮನಃಶಾಸ್ತ್ರದಲ್ಲಿಯೂ ಅಲ್ಪಸ್ವಲ್ಪ ಪರಿಶ್ರಮವಿಲ್ಲದ ಆತನ ಮನಸ್ಸಿಗೆ ಸೀತೆಗೆ ವಿಕಾರದ ಗುಟ್ಟು ಹೊಳೆಯಿತು. ಹಿಂದೆ ಕೃಷ್ಣಪ್ಪನಿಗೆ ಆಕೆಯನ್ನು ಕೊಟ್ಟು ಮದುವೆಯಾಗಬೇಕೆಂದು ನಿರ್ಣಯವಾಗಿದ್ದಾಗ ಸೀತೆಗೆ ಬಂದೊದಗಿದ್ದ ಅಸ್ವಸ್ಥತೆ ಜ್ಞಾಪಕಕ್ಕೆ ಬಂದಿತು. ಈ ಸಾರಿ ತನಗೆ ತಾನೆ ತಿಳಿಯದಂತೆ ಸೀತೆಯ ಒಳ ಮನಸ್ಸು ತನ್ನ ಜುಗುಪ್ಸೆ ಮತ್ತು ನೋವುಗಳಿಗೆ ಕೃಷ್ಣಪ್ಪನ ದೆಯ್ಯದ ವೇಷವನ್ನು ಹಾಕಿರಬಹುದೆಂದು ತಟಕ್ಕನೆ ಊಹಿಸಿ, ಮುಂದೆ ಅನಾಹುತ ಅಪಾಯಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಮುತ್ತಳ್ಳಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹೋದನು.

ಆದರೆ ಮುತ್ತಳ್ಳಿಯಲ್ಲಿ ಹೂವಯ್ಯನಿಗೆ ದೊರೆತ ಸ್ವಾಗತ ಪರಮ ಉದಾಸೀನವಾಗಿತ್ತು. ಅಷ್ಟೇ ಅಲ್ಲ ; ಮಾತುಕತೆಗಳಲ್ಲಿಯೂ ಹೂವಯ್ಯನ ಪರವಾಗಿ ಏನೋ ಒಂದು ಜುಗುಪ್ಸೆಯೂ ತೋರುತ್ತಿತ್ತು. ಜನರ ದೃಷ್ಟಿ ಮತ್ತು ಇಂಗಿತಗಳಲ್ಲಿ ತನ್ನ ಪ್ರತಿಯಾಗಿ ಏನೋ ಒಂದು ಭೀತಿ, ಒಡೆದು ಕಾಣಿಸುತ್ತಿತ್ತು. ಹೂವಯ್ಯನಿಗೆ ತಾನಲ್ಲಿಗೆ ಹೋಗಬಾರದಾಗಿತ್ತು ಎನ್ನಿಸುವಷ್ಟರಮಟ್ಟಿಗೆ ಸನ್ನಿವೇಶವಿತ್ತು.

ಅದಕ್ಕೆ ಕಾರಣ ಚಿನ್ನಯ್ಯನಿಂದ ಆಮೇಲೆ ತಿಳಿಯಿತು. ಚಂದ್ರಯ್ಯಗೌಡರ ಸೂಚನೆಯ ಮೇರೆಗೆ ವೆಂಕಪ್ಪಯ್ಯ ಜೋಯಿಸರು ‘ಕೃಷ್ಣಪ್ಪ ಸೀತೆಯ ಮೇಲೆ ಬರುವುದಕ್ಕೆ ಹೂವಯ್ಯನೇ ಕಾರಣವಾಗಿದ್ದಾನೆ. ಹೂವಯ್ಯನಿಗೆ ಗೊತ್ತಿರುವ ಮಂತ್ರವಿದ್ಯೆಯ ದೆಸೆಯಿಂದಲೇ ಕಾನೂರು ಮನೆಯ ಭೂತ ‘ಬಲೀಂದ್ರ’ ಹೋತದಲ್ಲಿ ಸೇರಿಕೊಂಡು, ಅವನ ವಶವಾಗಿ ಕೆಲಸಮಾಡುತ್ತಿದೆ’ ಎಂಬ ಮಿಥ್ಯಾವಾರ್ತೆಯನ್ನು ಹಬ್ಬಿಸಿದ್ದರಂತೆ !

ಹೂವಯ್ಯ ಜನರ ಉದಾಸೀನ ಭಾವವನ್ನಾಗಲಿ ಜುಗುಪ್ಸೆಯನ್ನಾಗಲಿ ಮನಸ್ಸಿಗೆ ಹಚ್ಚಿಕೊಳ್ಳದೆ, ಸೀತೆಯನ್ನು ನೋಡಿಯೇ ಹೋಗುತ್ತೇನೆಂದು ನಿರ್ಧರಿಸಿದರು. ಮದುವೆಯ ಸನ್ನಾಹಕಾರ್ಯಗಳ ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಶ್ಯಾಮಯ್ಯಗೌಡರು ಹೂವಯ್ಯನ ಕಡೆಗೆ ತಿರುಗಿನೋಡದೆ ‘ಅವಳಿಗೆ ಬುದ್ಧಿಭ್ರಮೆಯಾಗಿರುವುದರಿಂದ ಈಗ ನೀನು ನೋಡುವುದು ಬೇಡ’ ಎಂದುಬಿಟ್ಟರು. ಆದರೆ ಹೂವಯ್ಯ ಮರ್ಯಾದೆಯನ್ನು ಗಮನಿಸದೆ ಮೊಂಡತನ ಮಾಡಿ ಶ್ಯಾಮಯ್ಯಗೌಡರನ್ನು ಒಪ್ಪಿಸಿದನು. ಅವರಂತೂ ಹೂವಯ್ಯ ಮಂತ್ರವಿದ್ಯೆಯಿಂದ ಮತ್ತೇನು ಮಾಡಿಬಿಡುತ್ತಾನೆಯೊ ಎಂಬ ಹೆದರಿಕೆಯಿಂದ ಮನಸ್ಸಿನಲ್ಲಿಯೆ ರಾಮಧ್ಯಾನ ಮಾಡುತ್ತ ಅವನನ್ನು ಒಡಗೊಂಡು ಸೀತೆಯಿದ್ದ ಕೊಟಡಿಗೆ ಬಂದರು. ಸೀತೆಯ ಹಾಸಗೆಯ ಪಕ್ಕದಲ್ಲಿ ಲಕ್ಷ್ಮಿಯೊಡನೆ ಕುಳಿತಿದ್ದ ಗೌರಮ್ಮನವರು ಕಣ್ಣೀರೊರಸಿಕೊಳ್ಳುತ್ತ ಸ್ವಲ್ಪ ದೂರ ಸರಿದರು.

ಆ ಕೊಟಡಿಯ ವಾತಾವರಣ ಸರಿಯಾಗಿದ್ದವರಿಗೂ ದೆವ್ವ ಹಿಡಿಸುವಷ್ಟರ ಮಟ್ಟಿಗಿತ್ತು. ಕಿಟಕಿಗಳನ್ನೆಲ್ಲ ಮುಚ್ಚಿ ಹೊರಗಿನ ದೆವ್ವಗಳು ಒಳಗೆ ಬರದಂತೆ ಮಾಡಿದ್ದರು. ದೆವ್ವಗಳೊಡನೆ ಬೆಳಕು ಗಾಳಿಗಳಿಗೂ ಬಹಿಷ್ಕಾರವಾಗಿತ್ತು. ಒಳಗಿರುವ ದೆವ್ವಗಳನ್ನು ಓಡಿಸುವ ಸಲುವಾಗಿ ಬೆಳ್ಳುಳ್ಳಿ ಮೊದಲ್ಗೊಂಡು ಏನೇನೋ ಕಟುವಾಸನೆಯ ಪದಾರ್ಥಗಳನ್ನು ಉರಿಸಿ ಹೊಗೆಹಾಕಿದ್ದರಿಂದ, ಹೊರಗಿನಿಂದ ಬಂದವರಿಗೆ ಒಳಗಿನ ಗಾಳಿ ಉಸಿರು ಕಟ್ಟುವಂತಿತ್ತು. ಕಿಟಕಿಗಳೂ ಬಾಗಿಲುಗಳೂ ಮೆಟ್ಟು, ಪೊರಕೆ, ಮಂತ್ರಿಸಿದ ತೆಂಗಿನಕಾಯಿ ಮುಂತಾದ ವಸ್ತುಗಳನ್ನು ತೋರಣ ಕಟ್ಟಿದ್ದರು. ಅದನ್ನೆಲ್ಲಾ ಕಂಡ ಹೂವಯ್ಯನಿಗೆ ಎದೆ ದಿಗಿಲ್ಲೆಂದಿತು. ದುಃಖ ಉಕ್ಕಿಬಂದಿತು. ಸೀತೆಗೆ ಈಗ ಬಂದೊದಗಿರುವ ಶಿಕ್ಷೆಗಿಂತಲೂ ಅನೇಕ ಪಾಲು ಹೆಚ್ಚಾಗಿ  ಒದಗಲಿರುವ ಶಿಕ್ಷೆಯನ್ನು ಭಾವಿಸಿ ನಿಟ್ಟುಸಿರು ಬಿಟ್ಟು, ಹನಿಗಣ್ಣಾದನು. ಏನು ಮಾಡಿದರೆ ಸೀತೆಯನ್ನು ರಕ್ಷಸಬಹುದೆಂದೂ, ಸೀತೆಯನ್ನು ರಕ್ಷಿಸಲು ಏನನ್ನು ಬೇಕಾದರೂ ಮಾಡಬಹುದೆಂದೂ ಕಾತರವಾಗಿ ಆಲೋಚಿಸಿದನು.

ಸೀತೆಗೆ ಹೂವಯ್ಯನ ಗುರುತು ಸಿಕ್ಕುವುದು ಸ್ವಲ್ಪ ತಡವಾದಂತೆ ತೋರಿತು. ನೋಡುತ್ತಾ ನೋಡುತ್ತಾ ಇದ್ದಕಿದ್ದಹಾಗೆ ಗುರುತು ಸಿಕ್ಕಿದಂತಾಗಿ, ಸೀತೆ ಹಾಸಗೆಯ ಮೇಲೆ ತಟಕ್ಕನೆ ಎದ್ದು ಕುಳಿತಳು. ಮುಖದಲ್ಲಿದ್ದ ದುಃಖದ ಕರ್ಮುಗಿಲಿನಲ್ಲಿ ಸುಖದ ಮಿಂಚು ಹೊಳೆದು ಆಕೆ ಹೂವಯ್ಯನ ಕಡೆಗೆ ಸರಿಯತೊಡಗುವಷ್ಟರಲ್ಲಿ ಗೌರಮ್ಮನವರು ಮಗಳನ್ನು ಹಿಡಿದು ಬಲಾತ್ಕಾರದಿಂದ ಮಲಗಿಸಲು ಪ್ರಯತ್ನಿಸಿದರು. ಹೂವಯ್ಯ ಆಕೆಯನ್ನು  ಹಾಸಗೆಯ ಮೇಲೆ ಕೂತುಕೊಳ್ಳಲು ಬಿಡುವಂತೆ ಹೇಳಿದನು.

ಶ್ಯಾಮಯ್ಯಗೌಡರು “ಇಲ್ಲ, ಸುಮ್ಮನೆ ಕೂತುಕೊಳ್ಳುವುದಿಲ್ಲ. ಈಗ ನೋಡಲಿಲ್ಲೇನು ? ನಿನ್ನ ಮೇಲೆ ಬೀಳೋಕೆ ಮಾಡಿದ್ದಳು” ಎಂದರು.

ತಂದೆಯ ಮಾತನ್ನು ಕೇಳಿ ಸೀತೆ ಕಿಲಕ್ಕನೆ ನಕ್ಕಳು. ಅಷ್ಟು ಹಾಸ್ಯಾಸ್ಪದವಾಗಿ ತೋರಿತ್ತು ಆ ವ್ಯಾಖ್ಯಾನ. ಆದರೆ ಗೌಡರಿಗೂ ಗೌರಮ್ಮನವರಿಗೂ ಮಗಳ ನಗು ಅವಳ ಒಳಗಿದ್ದ ಕೃಷ್ಣಪ್ಪನ ನಗುವಾಗಿದ್ದುದರಿಂದ ವಿಕಾರವಾಗಿತ್ತು.

ತನ್ನನ್ನು ಮಲಗಿಸಬೇಕೆಂದು ಪ್ರಯತ್ನಿಸುತ್ತಿದ್ದ ತಾಯಿಯನ್ನು ಕುರಿತು ಸೀತೆ “ಇಲ್ಲ, ಅವ್ವಾ ; ನಾ ಸುಮ್ಮನೆ ಕೂತುಕೊಳ್ತೀನಿ. ಮಲಗಿಸಬೇಡ” ಎಂದಳು.

ಆಗಿನ ಆಕೆಯ ಧ್ವನಿಯಲ್ಲಿಯೂ ಮುಖಚರ್ಯೆಯಲ್ಲಿಯೂ ಇದ್ದ ಸರಳತೆ ತಂದೆತಾಯಿಯರಿಬ್ಬರನ್ನೂ ಆಶ್ಚರ್ಯಗೊಳಿಸಿತು. ಅದು ತಮ್ಮ ನಿಜವಾದ ಸೀತೆಯ ಮಾತಿನಂತಿತ್ತು. ಇದೇನು ? ಸೀತೆ ಬಹುಕಾಲದ ಸ್ವಪ್ನದಿಂದ ಎಚ್ಚತ್ತಳೋ ? ಗೌರಮ್ಮನವರು ಹೂವಯ್ಯನ ಆಗಮನದಿಂದಲೇ ಹಾಗಾಯಿತೆಂದು ಊಹಿಸಿ, ಅತ್ಯಂತ ಹರ್ಷದಿಂದ ಮಗಳ ರೋಗದ ವಿಚಾರವನ್ನು ಮೊದಲಿನಿಂದಲೂ ಸವಿಸ್ತಾರವಾಗಿ ಹೇಳತೊಡಗಿದರು. ಅದನ್ನಾಗಲಿ ಅನೇಕರಿಂದ ಕೇಳಿದ್ದ ಹೂವನ್ನು ಅದಕ್ಕೆ ಹೆಚ್ಚು ಗಮನ ಕೊಡದೆ ಸೀತೆಯನ್ನೇ ನೋಡುತ್ತಿದ್ದನು. ಆಕೆ ಕೃಶವಾಗಿ ಬಿಳಿಪೇರಿ ಹೋಗಿದ್ದಳು.. ಸ್ವಲ್ಪಮಟ್ಟಿಗೆ ರೂಪವಿಕಾರವೂ ಉಂಟಾಗಿತ್ತು. ಹಗಲಾಗಿದ್ದರೂ ಉರಿಯುತ್ತಿದ್ದ ಹರಳೆಣ್ಣೆಯ ದೀಪದ ಕೆಂಬೆಳಗಿನಲ್ಲಿ ಆಕೆ, ಮೂಢಭಾವ ಮತ್ತು ಮೂಢಾಚಾರಗಳ ಮಧ್ಯೆ ಸೆರೆಸಿಕ್ಕಿದ್ದ ಮುಗ್ಧತೆಯಂತೆ ಕರುಣಾಕರವಾಗಿ ಕಾಣುತ್ತಿದ್ದಳು. ಆಕೆಯ ಕಣ್ಣುಗಳು “ನನ್ನನ್ನು ಹೇಗಾದರೂ ಸಂರಕ್ಷಿಸು” ಎಂಬ ಆತ್ಮದ ಆರ್ತನಾದವನ್ನು ಪ್ರತಿಬಿಂಬಿಸುವಂತೆ ಇದ್ದುವು.

ಸೀತೆ ಹೂವಯ್ಯನೊಡನೆ ಮಾತಾಡತೊಡಗಿದಳು. ಎಷ್ಟು ಚೆನ್ನಾಗಿ ಮಾತಾಡಿದಳೆಂದರೆ, ಶ್ಯಾಮಯ್ಯಗೌಡರಿಗೆ ಹೂವಯ್ಯನ ಮಂತ್ರವಿದ್ಯೆಯಲ್ಲಿ ಇದ್ದ ನಂಬುಗೆ ಮತ್ತೂ ಹೆಚ್ಚಾಯಿತು ! ನಾಗಮ್ಮನವರ ಯೋಗಕ್ಷೇಮವನ್ನು ವಿಚಾರಿಸಿದಳು. ಪುಟ್ಟಣ್ಣ ಈಚೆಗೆ ಏನು ಷಿಕಾರಿ ಮಾಡಿದನೆಂದು ಕೇಳಿದಳು. ನಾಯಿಗಳ ಹೆಸರನ್ನು ಒಂದೊಂದಾಗಿ ಹೇಳಿ ವಿಚಾರಿಸಿದಳು. ಅತ್ತೆಮ್ಮನವರನ್ನೂ ಏಕೆ ಕರೆತರಲಿಲ್ಲ ಎಂದು ಕೇಳಿ, ‘ನಾ ಕೇಳ್ದೆ ಅಂತಾ ಹೇಳಿ’ ಎಂದಳು. ಕಡೆಗೆ ತಾನೂ ಕೆಳಕಾನೂರಿಗೆ ಬರುತ್ತೇನೆ ; ಕರಕೊಂಡು ಹೋಗಿ ಎಂದೂ ನುಡಿದುಬಿಟ್ಟಳು.

ಹೂವಯ್ಯ ಒಂದೊಂದು ಪ್ರಶ್ನೆಗೂ ಸಮಾಧಾನಕರವಾದ ಉತ್ತರವನ್ನು ಕೊಡುತ್ತಾ ಕಡೆಯ ಪ್ರಶ್ನೆಗೆ ಯಾವ ಉತ್ತರ ಹೇಳಬೇಕೆಂದು ಗೊತ್ತಾಗದೆ ತಡವುತ್ತಿರಲು ಗೌರಮ್ಮನವರೆ “ಹೋಗಬಹುದಂತೆ ! ಕಾಯಿಲೆ ಗುಣಾಗಲಿ !” ಎಂದರು. ಸೀತೆ ತಾಯಿಯ ಕಡೆ ತಿರುಗಿ “ನನಗೇನು ಕಾಯಿಲೆ ಈಗ ? ಸರಿಯಾಗಿದ್ದೀನಲ್ಲಾ !” ಎಂದಳು.

ಆಗ ತತ್ಕಾಲದಲ್ಲಿ ಗೌರಮ್ಮನವರಿಗೆ ಮಗಳ ಮಾತು ವಾಸ್ತವವಾಗಿ ಕಂಡಿತು.

ಸೀತೆಯ ಯಾವ ಒಂದು ಮಾತೂ ಯಾವ ಒಂದು ಆಚರಣೆಯೂ ಆಕೆಗೆ ನಿಶ್ಚಯವಾಗಿದ್ದ ವಿವಾಹದ ದೂರದ ನೆನಪು ಕೂಡ ಆಕೆಯಲ್ಲಿದೆ ಎಂಬುದನ್ನು ತೋರುತ್ತಿರಲಿಲ್ಲ. ಆ ವಿಷಯವಲಯ ಆಕೆಯ ಮನೋ ಪ್ರಪಂಚದಿಂದ ಸಂಪೂರ್ಣವಾಗಿ ಅಳಿಸಿಹೋದಂತಿತ್ತು.

ಮಾತಾಡುತ್ತ ಆಡುತ್ತ ಒಂದು ಸಾರಿ ಕೋಣೆಯಲ್ಲಿದ್ದು ಕತ್ತಲೆ, ಕಟುವಾಸನೆ, ಸೆರೆ ಇವುಗಳನ್ನು ಮೊದಲನೆಯ ಸಲ ಅನುಭವಿಸಿದವಳಂತೆ ತಾಯಿಯನ್ನು ಕುರಿತು “ಯಾಕವ್ವಾ ಕಿಟಕಿಗಿಟಗಿಯೆಲ್ಲಾ ಮುಚ್ಚಿಬಿಟ್ಟಿದ್ದೀರಿ ! ಏನು ದುರ್ವಾಸನೆ ?” ಎಂದು ತಾನೆ ಎದ್ದುಹೋಗಿ ಒಂದು ಕಿಟಕಿಯನ್ನು ಅಗಲವಾಗಿ ತೆರೆದು ಬಂದಳು. ಇದ್ದಕಿದ್ದ ಹಾಗೆ ಕೊಟಡಿಯೊಳಗೆ ಗಾಳಿ ಬೆಳಕುಗಳು ನುಗ್ಗಿ ಬಂದು ಹಣತೆಯ ದೀಪ ಆರಿ, ಅದರ ಬತ್ತಿಯ ತುದಿಯಿಂದ ಬೂದಿಬಣ್ಣದ ಹೊಗೆಯ ಗೆರೆ ಡೊಂಕುಡೊಂಕಾಗಿ ಗಾಳಿಯಲ್ಲಿ ಮೇಲೆದ್ದು ತೇಲಿ ಹರಿಯಿತು. ಸುಟ್ಟ ಬತ್ತಿಯ ಕನರುವಾಸನೆ ಕೋಣೆಯನ್ನೆಲ್ಲ ಆವರಿಸಿತು.

ಮಗಳಲ್ಲಿ ಈ ಪರಿಯ ಪರಿವರ್ತನೆಯನ್ನು ಕಂಡ ತಾಯಿತಂದೆಗಳ ಕರುಳು ಆನಂದದಿಂದ ಹಿಗ್ಗಿತು. ಹೂವಯ್ಯನ ಆಗಮನ ಒಂದು ಅದ್ಭುತದಂತಿತ್ತು. ಅವನ ಮಂತ್ರಶಕ್ತಿಯಲ್ಲಿ ನಂಬುಗೆ ಗೌಡರಿಗೆ ಮಾತ್ರ ಸ್ವಲ್ಪ ಭಯವೂ ಉಂಟಾಯಿತು.

ಬೆಳಕು ಕೊಟಡಿಯೊಳಗೆ ಬಂದುದನ್ನು ಕಂಡು, ಹೆದರಿ ಹೊರಗೆ ಓಡಿಹೋಗಿದ ಮನೆ ನೊಣಗಳೂ ಒಂದೊಂದಾಗಿ ಒಳಗೆ ಬರತೊಡಗಿದುವು. ಅವುಗಳಲ್ಲಿ ಒಂದು ನೊಣ ಸೀತೆ ಸ್ವಲ್ಪ ಕುಡಿದಿದ್ದ ಗೋಧಿ ಗಂಜಿಯ ಲೋಟದ ಮೇಲೆ ಗುಂಯ್ ಗುಂಯ್ ಎಂದು ಹಾರಾಡಿ ಗಂಜಿ ಯೊಳಗೆ ಬಿದ್ದು ಒದ್ದಾಡತೊಡಗಿತು. ಹೂವಯ್ಯ ಅದನ್ನು ನೋಡುತ್ತಿದುದನ್ನು ಅರಿತು ಸೀತೆ ಒದ್ದೆಮುದ್ದೆಯಾಗಿದ್ದ ಆ ನೊಣವನ್ನು ಕೈಬೆರಳಿನಿಂದ ನೆಲಕ್ಕೆ ಹಾಕಿದಳು. ರೆಕ್ಕೆಯೆಲ್ಲ ತೊಯ್ದು ಮೈಗಂಟಿಕೊಂಡಿದ್ದ ಆ ನೊಣ ನೆಲಕ್ಕೆ ಬಿದ್ದೊಡನೆಯೆ ಮುಂದೆ ಹರಿಯತೊಡಗಿತು. ಅದು ಹರಿದಹಾಗೆ ಅದರ ಹಿಂದೆ ನೆಲದ ಮೇಲೆ ಒದ್ದೆಗೆರೆಯೊಂದು ಹಿಂಬಾಲಿಸುತ್ತಿತ್ತು. ಒಂದು ನಿಮಿಷದಲ್ಲಿ ಆ ನೊಣ ತನ್ನ ಮುಂಗಾಲುಗಳಿಂದ ಮಂಡೆಯನ್ನು ಸವರಿಕೊಂಡು, ರೆಕ್ಕೆಗಳನ್ನು ಒಂದೆರಡು ಸಾರಿ ಕೊಡವಿಕೊಂಡು ಹಾರಿಹೋಯಿತು. ಹೇಳಿದರೆ ಸೋಜಿಗವಾಗಬಹುದು : ಶ್ಯಾಮಯ್ಯಗೌಡರಾದಿಯಾಗಿ ಎಲ್ಲರೂ ಆ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು ! ಬಹುಶಃ ಪ್ರತಿಯೊಬ್ಬರೂ ಸೀತೆಯ ಕಾರ್ಯಗಳಿಂದ ಆಕೆಯ ಮನಃಪರಿಸ್ಥಿತಿಯನ್ನು ಭಾವಿಸುತ್ತಿದ್ದರೆಂದು ತೋರುತ್ತದೆ.

ಹೂವಯ್ಯನು ಶ್ಯಾಮಯ್ಯಗೌಡರಿಂದ ‘ಸಪರಿವಾರನಾಗಿ’ ಕೊಟಡಿಯಿಂದ ಹೊರಗೆ ಹೋದೊಡನೆಯೆ ಸೀತೆ ಕಿಲಕಿಲನೆ ನಕ್ಕಳು. ಇವರ ಕಣ್ಣಿಗೆ ನಾನು ಮಣ್ಣುಹಾಕಲಾರೆನೆ ಎಂಬಂತಿರಬಹುದೆ ? ಏನಾದರಾಗಲಿ ! ಗೌರಮ್ಮನವರಿಗೆ ಅದು ಎಷ್ಟು ವಿಕಟವಿಕಾರವಾಗಿ ತೋರಿತೆಂದರೆ, ಅವರು ಬೇಗಬೇಗನೆ ಎದ್ದು ಹೋಗಿ ಸೀತೆ ತೆರೆದಿದ್ದ ಕಿಟಕಿಯ ಬಾಗಿಲುಗಳನ್ನು ಸಶಬ್ದವಾಗಿ ಮುಚ್ಚಿದರು. ಸೀತೆ ಏನೂ ಮಾತಾಡಲಿಲ್ಲ. ಹೂವಯ್ಯ ಹೋದ ಮೇಲೆ ಆಕೆಯ ಆತ್ಮಕ್ಕೆ ಕತ್ತಲೆಯ ಹೆಚ್ಚು ಆಪ್ಯಾಯಮಾನವಾದಂತೆ ತೋರಿತು.

ಮುತ್ತಳ್ಳಿಯಿಂದ ಹೊರಡುವಾಗ ಹೂವಯ್ಯ ಚಿನ್ನಯ್ಯನನ್ನು ಎಕ್ಕಟಿ ಕರೆದು ಸೀತೆಯನ್ನು ಹೇಗೆ ನೋಡಿಕೊಳ್ಳಬೇಕೆಂಬುವ ವಿಚಾರವಾಗಿ ಎರಡು ಮಾತುಗಳನ್ನು ಹೇಳಿದುದೂ ಫಲಕಾರಿಯಾಗಲಿಲ್ಲ. ಏಕೆಂದರೆ, ಅವನು ಹೋದಮೇಲೆ ಸೀತೆ ಎಂದಿನಂತೆ ವಿಕಾರವಸ್ಥೆಯಲ್ಲಿದ್ದುದನ್ನು ಕಂಡು ಶ್ಯಾಮಯ್ಯಗೌಡರು “ನೋಡಿದಿರಾ ? ಅವನ ಮಾಯಮಂತ್ರ ಅಲ್ಲದೆ ಮತ್ತೇನೂ ಅಲ್ಲ. ಅವನ ಮುಂದೆ ಹ್ಯಾಂಗೆ ಮಾತಾಡಿದಳು ಅವಳು ! ಅವನು ಹೋದ, ಸುರುವಾಯ್ತು ! ಜೋಯಿಸರು ಹೇಳಿದ್ದೇನು ಸುಳ್ಳೇನು ?” ಎಂದರು.

ಅಲ್ಲಿದ್ದವರಲ್ಲೊಬ್ಬರು ಮಂಟಪಕ್ಕೆ ಬಣ್ಣದ ಬಟ್ಟೆಯನ್ನು ಸುತ್ತುತ್ತಾ “ನಮ್ಮದೋಯಿಸರ ಮಾತು ಎಂದಿಗೂ ಸುಳ್ಳಾಗದಿಲ್ಲ ! ಅವರು ಮಣೇ ಮುಂದೆ ಕೂತು ಅಕ್ಕಿಕಾಳು ಹಿಡಿದು ಹೇಳಿದರೆ ಸೈ ! ಬ್ರಹ್ಮನಿಗೂ ತಪ್ಪಿಸಾಕ್ಕಾಗಾಲ್ಲ !” ಎಂದು ಶ್ಯಾಮಯ್ಯಗೌಡರ ಮಾತನ್ನೆ ಸಮರ್ಥಿಸಿದರು.