ಮನೆಗೆ ಬಂದು ಎರಡು ದಿನಗಳಾದ ಮೇಲೆ ರಾಮಯ್ಯನಿಗೆ ಹೂವಯ್ಯನನ್ನು ನೋಡಿಕೊಂಡು ಬರಲು ಮನಸ್ಸಾಗಿ, ತನ್ನ ಇಷ್ಟವನ್ನು ತಂದೆಗೆ ತಿಳಿಸಿದನು. ತಮ್ಮ ಮಗನು ಹೂವಯ್ಯನ ಪರವಾಗಿ ತೋರಿಸುತ್ತಿದ್ದ ಮಮತೆ ಚಂದ್ರಯ್ಯಗೌಡರಿಗೆ ಸರಿಬೀಳದೆ, ಅವರು ಒಪ್ಪಲಿಲ್ಲ.

“ನೀನ್ಯಾಕೆ ಹೋಗೋದೋ? ಇವತ್ತೋ ನಾಳೆಯೋ ಎಲ್ಲಾ ಬರ್ತಾರೆ” ಎಂದರು. ರಾಮಯ್ಯನ ಮನಸ್ಸು ಅನೇಕ ಭಾವನೆಗಳಿಂದ ಕ್ಷುಬ್ಧವಾಗಿತ್ತು. ಅಣ್ಣನಿಗೆ ಎಲ್ಲವನ್ನೂ ತಿಳಿಸಿ ತನ್ನ ಹೃದಯದ್ ಭಾರವನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬೇಕೆಂಬ ಆಶೆ ತೀಕ್ಷ್ಣವಾಗಿತ್ತು. ಆದ್ದರಿಂದಲೆ ಸಹಜ ಭಯವನ್ನೂ ದಮನಗೈದು, ತಂದೆಯ ಇಷ್ಟಕ್ಕೆ ವಿರೋಧವಾಗಿ, ಆ ದಿನವೇ ಹಿಂತಿರುಗುತ್ತೇನೆ ಎಂದು ಹೇಳಿ, ಕಾಲುನಡಿಗೆಯಲ್ಲಿಯೆ ಮುತ್ತಳ್ಳಿಗೆ ಹೋದನು.

ಹೂವಯ್ಯನಿಗೆ ಬೆನ್ನು ನೋವು ಬಹಳ ಮಟ್ಟಿಗೆ ಗುಣವಾಗಿದ್ದುದರಿಂದ ಮರುದಿನವೆ ಎಲ್ಲರೂ-ನಾಗಮ್ಮ, ಪುಟ್ಟಮ್ಮ, ವಾಸು ಇವರನ್ನೂ ಕರೆದುಕೊಂಡು-ಕಾನೂರಿಗೆ ಹೊರಡುವುದೆಂದು ನಿಶ್ಚಯವಾಯಿತು. ಪುಟ್ಟಮ್ಮ ಸೀತೆಯೂ ತಮ್ಮೊಡನೆ ಬರಲಿ ಎಂದು ಗೌರಮ್ಮನವರೊಡನೆಯೂ ಶ್ಯಾಮಯ್ಯ ಗೌಡರೊಡನೆಯೂ ಬಹಳವಾಗಿ ಹೇಳಿಕೊಂಡಳು. ಆದರೆ ಅವರು “ಈಗ ಬೇಡ” ಎಂದುಬಿಟ್ಟರು.

ಮರುದಿನ ಮಧ್ಯಾಹ್ನ ಮುತ್ತಳ್ಳಿಯ ಕಮಾನುಗಾಡಿ ಕಾನೂರಿಗೆ ಹೊರಟಿತು. ಬಿಸಿಲು ಬಹಳ ಪ್ರಖರವಾಗಿತ್ತು. ಗಾಡಿ ಹೊಡೆಯುತ್ತಿದ್ದ ಕುಂಬಾರ ನಂಜ “ಈ ಬೇಗೆ ನೋಡಿದ್ರೆ ಮಳೆ ಬರ್ಹಾಂಗೆ ಕಾಣ್ತದೆ” ಎಂದನು.

ಸ್ವಲ್ಪ ಹೊತ್ತಿನಲ್ಲಿಯೆ ನಿಶ್ಚಲವಾಗಿದ್ದ ವಾಯುಮಂಡಲ ಚಲಿಸತೊಡಗಿತು. ಗಾಳಿ ಬರಬರುತ್ತ ಬಿರುಸಾಗಿ ಬೀಸತೊಡಗಿತು. ಕುಂಕುಮದಂತೆ ನುಣ್ಣಗಿದ್ದು, ಬೇಸಗೆಯ ಸುಡುಬಿಸಿಲಿಗೆ ಬೆಂದು ಹಗುರವಾಗಿದ್ದ ರಸ್ತೆಯ ಕೆಮ್ಮಣ್ಣು ಧೂಳಿ ಮುಗಿಲು ಮುಗಿಲಾಗಿ ಮೇಲೆದ್ದು, ಸುಳಿಸುಳಿಯಾಗಿ ಚಿತ್ರ ವಿಚಿತ್ರ ವಿನ್ಯಾಸ ಭಂಗಿಗಳಿಂದ ಇಕ್ಕೆಲದ ದಟ್ಟ ಕಾಡುಗಳ ಹಸುರಿನಲ್ಲಿ ನುಗ್ಗತೊಡಗಿತು. ಗಗನಚುಂಬಿಗಳಾದ ವೃಕ್ಷಶಿಖರಗಳು-ಬಳ್ಳಿಗಳಂತೆ ಬಳುಕಿ ಭಯಂಕರವಾಗಿ ತಲೆದೂಗಿದುವು. ನಾಡಿನ ನೀರವತೆ ಭೋರೆಂಬ ಭೀಷಣನಾದಕ್ಕೆ ಸೂರೆಹೋಯಿತು. ಬೂರುಗದರಳೆ, ತರಗೆಲೆ, ಕಸಕಡ್ಡಿ, ಒಂದೆಡೆಯಿಂದ ಮತ್ತೊಂದೆಡೆಗೆ ಹುಚ್ಚು ಹಿಡಿದವರಂತೆ ಹಾರಾಡತೊಡಗಿದುವು. ಬಿದಿರ ಮೆಳೆಗಳು ತಲೆಗೆದರಿ ಆನೆಗಳಂತೆ ಘೀಳಿಟ್ಟುವು. ಒಂದನ್ನೊಂದು ಉಜ್ಜಿದ ಬೊಂಬುಗಳಿಂದ ಒಗೆದ ಆ ಘೀಂಕೃತಿ ಅರಣ್ಯಪಿಶಾಚಿಗಳ ಆರ್ತನಾದರಂತೆ ಭಯಾನಕವಾಯಿತು. ಗಾಡಿಯಲ್ಲಿದ್ದವರಿಗೂ ಒಂದೊಂದು ಸಾರಿ ಪವನಹತಿಯಿಂದ ಉಸಿರುಕಟ್ಟಿದಂತಾಗುತ್ತಿತ್ತು.

ನೋಡುತ್ತಿದ್ದ ಹಾಗೆಯೆ ನೀಲ ನಿರ್ಮಲವಾಗಿ, ಎಲ್ಲಿಯೋ ದೂರ ದೂರದಲ್ಲಿ ಒಂದೊಂದೆಡೆ ಮಾತ್ರ ಸಣ್ಣ ಸಣ್ಣ ಬೆಳ್ಮುಗಿಲುಗಳಿಂದ ಖರ್ಚಿತವಾಗಿದ್ದ ಆಕಾಶದೇಶವು ಸಜೀವವಾಯಿತು. ಆ ಕಿರಿಯ ಬಿಳಿಮುಗಿಲು ತೋಳಗಳ ಹಿಂಡಿನ ಬರುವಿಕೆಯನ್ನು ಅರಿತು ಭಯಭ್ರಾಂತವಾಗಿ ಮೇವು ಬಿಟ್ಟು ಓಡುವ ಬಿಳಿಯ ಕಂಬಳಿಕುರಿಗಳ ಮಂದೆಯಂತೆ, ದಿಕ್ಕುದಿಕ್ಕಿಗೆ ಚೆದರಿ ಧಾವಿಸಿದುವು. ಅವುಗಳಿಗೆ ಬದಲಾಗಿ ಧೂಮವರ್ಣದ, ಧೂಮರೂಪದ, ಮಹಾ ಶಿಲಾಖಂಡಗಳಂತೆ ಮೃದುಕಠಿಣವಾಗಿದ್ದ ಮುಂಗಾರ್ಗಾಲದ ಕರಿಮುಗಿಲು ಸೇನೆ ಧೀರವಾಗಿ, ಗಭೀರವಾಗಿ, ಭೀಷಣವಾಗಿ, ವೇಗವಾಗಿ, ನಭಸ್ಥಲವನ್ನೆಲ್ಲ ಆಕ್ರಮಿಸಿತು. ಮೂದಮೂದಲು ದೂರದೂರವಾಗಿದ್ದ ಗುಡುಗು ಮಿಂಚು ತುಸು ಹೊತ್ತಿನಲ್ಲಿಯೆ ಭಯಂಕರವಾಗಿ ಬಳಿಸಾರಿದುವು. ಗಾಡಿಯ ಹಿಂಭಾಗದಲ್ಲಿ ಕೂತ್ತಿದ್ದ ಹೂವಯ್ಯ ಆ ಸೌಂದರ್ಯ ರೌದ್ರಗಳ ಭೀಷಣ ಭವ್ಯತೆಯನ್ನು ನೋಡಿ ಉನ್ಮನಸ್ಕನಾದನು. ಅವನಲ್ಲಿ ಭಯವೂ ರೋಮಾಂಚನವೂ ಒಂದರೊಡನೊಂದು ಸ್ಪರ್ಧೆ ಹೂಡಿದಂತಿತ್ತು. ಪ್ರಕೃತಿಯ ಆ ಪ್ರಚಂಡ ಶಕ್ತಿಗಳ ತಾಂಡವ ಲೀಲೆಯಲ್ಲಿ ಮಾನವನ ಮಹದ್ವ್ಯಾಪಾರಗಳೂ ಕೂಡ ಕ್ಷುದ್ರ ಕ್ಷುದ್ರವಾಗಿ ತೋರತೊಡಗಿದುವು. ಆ ಝಂಝಾವಾತ ವಿದ್ಯುತ್ ವಜ್ರಗಳಿಗೆ ಮುತ್ತಳ್ಳಿಯ ಗಾಡಿಯೂ ಗಾಡಿಯಲ್ಲಿದ್ದ ಅಸಂಸ್ಕೃತ ಅರ್ಧಸಂಸ್ಕೃತ ಸುಸಂಸ್ಕೃತರೂ ಅಲ್ಲಿ ಚಿಮ್ಮಿ ಚಿಗಿಯುತ್ತಿದ್ದ ತರಗೆಲೆಗಳಿಗಿಂತಲೂ ಹೆಚ್ಚೇನೂ ಗಣ್ಯವಾಗಿದ್ದಂತೆ ತೋರುತ್ತಿರಲಿಲ್ಲ.

ಮಳೆ ಬರುವುದರೊಳಗಾಗಿ ದಾರಿಯಲ್ಲಿದ್ದ ಕಳ್ಳಂಗಡಿಯನ್ನಾದರೂ ಸೇರಿಕೊಂಡರೆ ಎಲ್ಲರಿಗೂ ಕ್ಷೇಮ, ತನಗೆ ಪ್ರಯೋಜನ ಎಂಬ ಅಭಿಸಂಧಿಯಿಂದ ನಂಜ ಬಾರುಕೋಲಿನಿಂದ ಎತ್ತುಗಳಿಗೆ ಎಡೆಬಿಡದೆ ಬಾರಿಸತೊಡಗಿದನು. ಗಾಡಿ ಕೆಂಧೂಳಿಯ ಅವಿಚ್ಛಿನ್ನ ಪ್ರವಾಹವನ್ನೆಬ್ಬಿಸುತ್ತ ಉಬ್ಬುತಗ್ಗುಗಳನ್ನು ಹತ್ತಿ ಹಾರಿ ಸಶಬ್ದವಾಗಿ ಓಡತೊಡಗಿತು.

ಒಂದೆಡೆ ನೇರವಾಗಿದ್ದ ರಸ್ತೆಯ ದೂರದ ತಿರುಗುಣೆಯಲ್ಲಿ ಪೇಟ, ಕೋಟು, ಪಂಚೆಗಳನ್ನುಟ್ಟಿದ್ದ ದೊಡ್ಡ ಮನುಷ್ಯರೊಬ್ಬರು ಕೈಯಲ್ಲಿ ಮಡಿಸಿದ್ದ ಕೊಡೆಯನ್ನು ಹಿಡಿದು, ಹಾದಿಯ ಪಕ್ಕದ ಕಿರುಪೊದೆಗಳಲ್ಲಿ ಏನನ್ನೋ ಹುಡುಕುತ್ತಿದ್ದುದನ್ನು ಕಂಡ ನಂಜ “ಯಾರ್ರೋ ಅದು, ಈ ಮಳೆ ಗಾಳೀಲಿ?” ಎಂದು ತನಗೆ ತಾನೆ ಗಟ್ಟಿಯಾಗಿ ಹೇಳಿಕೊಂಡನು.

ಗಾಡಿಯಲ್ಲಿ ಕೂತಿದ್ದವತೆಲ್ಲರೂ ಕತ್ತೆತ್ತಿ ಆ ಕಡೆ ನೋಡಿ, ಯಾರಿರಬಹುದು ಎಂದು ಊಹಿಸುತ್ತಿದ್ದ ಹಾಗೆಯೆ, ಗಾಡಿ ಆ ವ್ಯಕ್ತಿಗೆ ಸಮಿಪಸ್ಥವಾಗಿ, ಸೀತೆಮನೆ ಸಿಂಗಪ್ಪಗೌಡರನ್ನು ಕಂಡು, ನಿಂತಿತು. ರಾಮಯ್ಯ ಕೆಳಗಿಳಿದನು. ಅವನ ಪ್ರಶ್ನೆಗೆ ಸಿಂಗಪ್ಪಗೌಡರನ್ನು ತಾನು ಮುತ್ತಳ್ಳಿಗೆ ಹೋಗುತ್ತಿದ್ದೇನೆಂದೂ ಜೇಬಿನಿಂದ ಮೂಗುವಸ್ತ್ರವನ್ನು ತೆಗೆದಾಗ, ಅವರ ಮಗ ಕೃಷ್ಣಪ್ಪನ ಜಾತಕವಿದ್ದ ಕಾಗದ ಕೆಳಗೆ ಬಿದ್ದು, ಗಾಳಿಯಲ್ಲಿ ಹಾರಿ ಹೋಗಿ ಅಲ್ಲಿಯೆ ಎಲ್ಲಿಯೋ ಪೊದೆಗಳಲ್ಲಿ ಅಡಗಿತೆಂದೂ, ಅದನ್ನೇ ಹುಡುಕುತ್ತಿದ್ದುದೆಂದೂ ಉತ್ತರ ಹೇಳಿದರು. ನಂಜನೂ ಗಾಡಿಯ ಕತ್ತರಿಯಿಂದ ಕೆಳಗಿಳಿದು ರಾಮಯ್ಯನೊಡನೆ ಜಾತಕಾನ್ವೇಷಣೆಗೆ ತೊಡಗಿದನು. ಸಿಂಗಪ್ಪಗೌಡರು ಗಾಡಿಯ ಹಿಂಭಾಗಕ್ಕೆ ಬಂದು ಅಲ್ಲಿದ್ದವರೆಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಷ್ಟರಲ್ಲಿ ರಾಮಯ್ಯ ತನಗೆ ಸಿಕ್ಕಿದ್ದ ಜಾರಕದ ಕಾಗದವನ್ನು ತಂದುಕೊಟ್ಟನು. ಮೊದಲೇ ಜೀರ್ಣಾವಸ್ಥೆಯಲ್ಲಿದ್ದ ಅದು ಗಾಳಿಯ ಹೊಡೆತಕ್ಕೆ ಹರಿದು ಹರಿದುಹೋಗಿದ್ದಿತು.

ಹೂವಯ್ಯ “ಅದೇನದು, ಕಕ್ಕಯ್ಯಾ?” ಎಂದನು. “ನಮ್ಮ ಕೃಷ್ಣಪ್ಪನ ಜಾತಕ ಕಣೋ! ವೆಂಕಪ್ಪಯ್ಯ ಜೋಯಿಸರಿಗೆ ತೋರಿಸಬೇಕಾಗಿತ್ತು. ಇವತ್ತು ಮುತ್ತಳ್ಳಿಗೆ ಬರ್ತೀನಿ ಅಂತಾ ಹೇಳಿದ್ದರು. ಅದಕ್ಕೇ ಹೋಗ್ತಾ ಇದ್ದೀನಿ.” ಎಂದು ಸಿಂಗಪ್ಪಗೌಡರು ಜಾತಕವನ್ನು ಒಳಜೇಬಿಗೆ ಹಾಕಿಕೊಂಡರು.

ಇವರು ಮಾತಾಡುತ್ತಿದ್ದ ಹಾಗೆಯೆ ದಪ್ಪದಪ್ಪವಾದ ಮಳೆಹನಿಗಳು ಗಾಡಿಯ ಕಮಾನಿನ ತಾಳೆಯ ಚಾಪೆಯ ಮೇಲೆ ಪಟ್ ಪಟ್ ಪಟ್ ಎಂದು ಸದ್ದುಮಾಡಿದುವು.

ಸಿಂಗಪ್ಪಗೌಡರು ಅವಸರವಾಗಿ “ಹಾಂಗಾದರೆ ನೀವು ಹೊರಡಿ, ಮಳೆಬರ್ತದೆ” ಎಂದು ಕೈಲಿದ್ದ ಕೊಡೆಯನ್ನು ಬಿಚ್ಚಿದರು. ಗಾಳಿಯ ರಭಸಕ್ಕೆ ಅದು ಹೊಟ್ಟೆ ಬೆನ್ನಾಗಿ ಲಾಗಹಾಕಿ, ಅಲ್ಲಿದ್ದವರೆಲ್ಲ ನಗುವಂತಾಯಿತು. ಪುನಃ ಗಾಳಿಯ ಕಡೆಗೆ ಕೊಡೆಯನ್ನು ಬೆನ್ನುಮಾಡಿ ಹಿಡಿದು ಸರಿಮಾಡಿಕೊಂಡು ಸಿಂಗಪ್ಪಗೌಡರು ಬೇಗನೆ ಮುಂಬರಿದರು. ರಾಮಯ್ಯನೂ ಗಾಡಿಗೇರಲು ಅದು ಮೊದಲಿನಂತೆ ವೇಗವಾಗಿ ಹೊರಟಿತು. ಗಾಳಿಯೊಡನೆ ಹೋರಾಡುತ್ತಿದ್ದ ಕೊಡೆಯನ್ನು ಭದ್ರವಾಗಿ ಹಿಡಿದು ಹೋಗುತ್ತಿದ್ದ ಸಿಂಗಪ್ಪಗೌಡರ ಬೆಂಭಾಗ ಕ್ರಮಕ್ರಮೇಣ ಕಿರಿದಾಗ ಹಾದಿಯ ತಿರುವಿನಲ್ಲಿ ಕಣ್ಮರೆಯಾಯಿತು.

ಗಾಡಿ ಕಳ್ಳಂಗಡಿಯ ಬಳಿಗೆ ಬರುವಷ್ಟರಲ್ಲಿ ಮೊದಮೊದಲು ವಿರಳವಾಗಿ ಬೀಳುತ್ತಿದ್ದ ತೋರ ಹನಿಮಳೆ ಅವಿರಳ ಧಾರಕಾರವಾಗಿ ಸುರಿಯತೊಡಗಿತು. ಗುಡುಗು ಮಿಂಚು ಸಿಡಿಲು ಗಾಳಿಗಳ ಆರ್ಭಟವೂ ದ್ವಿಗುಣಿತವಾಯಿತು, ಜೊತೆಗೆ ಆಲಿಕಲ್ಲುಗಳೂ ಮುಗುಲು ನೆಲಕ್ಕೆ ಕಲ್ಲೆಸೆದಂತೆ ಬೀಳತೊಡಗಿದುವು. ಗಾಳಿಯ ದೆಸೆಯಿಂದ ಮಳೆ ಗಾಡಿಯ ಒಳಕ್ಕೂ ನುಗ್ಗತೊಡಗಿತು; ಕೂತುಕೊಳ್ಳುವುದೂ ಅಸಾಧ್ಯವಾಯಿತು. ನಂಜನ ಬಯಕೆ ಕೈಗೂಡಿತು. ಕಳ್ಳಂಗಡಿಯ ಅಂಗಳದಲ್ಲಿ ಗಾಡಿಯನ್ನು ಬಿಟ್ಟು ಎಲ್ಲರೂ ಒಳಗೆ ಹೋದರು. ಅಂಗಡಿಯವನು ಬಹಳ ಮರ್ಯಾದೆಯಿಂದ ಜಗಲಿಯ ಮೇಲೆ ಒಂದು ಗೀಕಿನ ಚಾಪೆ ಹಾಕಿ, ಕೂತುಕೊಳ್ಳುವಂತೆ ಕೇಳಿಕೊಂಡನು. ಗೀಕಿನ ಚಾಪೆ ಅಂಚುಗಳಲ್ಲಿ ಶಿಥಿಲವಾಗಿ ಮೂಲೆ ಮೂಲೆಗಳಲ್ಲಿ ಹರಿದು, ಕೊಳೆ ಕೂತು ಮಾಸಲು ಬಣ್ಣದ್ದಾಗಿತ್ತು. ಒಳ್ಳೆಯ ಬಟ್ಟೆಗಳನ್ನು ಉಟ್ಟುಕೊಂಡಿದ್ದ ಅತಿಥಿಗಳಿಗೆ ಅದರ ಮೇಲೆ ಕೂತುಕೊಳ್ಳುವುದು ಸಪ್ರಯತ್ನವಾಯಿತು.

ನಾಗಮ್ಮನವರು ಅಂಗಡಿಯವನು ಅತಿಥಿಗಳಿಗಾಗಿ ತಂದಿಟ್ಟ ಎಲೆಯಡಕೆಯನ್ನು ಹಾಕಿಕೊಳ್ಳುತ್ತಿರಲು, ಪುಟ್ಟಮ್ಮ ವಾಸು ಇಬ್ಬರೂ ತಮ್ಮತಮ್ಮೊಳಗೆ ಏನೇನೊ ಮಾತಾಡಿಕೊಂಡು ನಗುತ್ತಿದ್ದರು. ಗೋಡೆಗೆ ಒರಗಿಕೊಂಡು ಕುಳಿತ ಹೂವಯ್ಯ ರಾಮಯ್ಯರೂ ಆ ಗುಡಿಸಲನ್ನೂ ಅಲ್ಲಿಯ ಸಾಮಾನುಗಳನ್ನೂ ಮತ್ತು ಅಲ್ಲಿ ತೋರುತ್ತಿದ್ದ ಗ್ರಾಮ್ಯ ಕಲಾಭಿರುಚಿಯ ದ್ಯಶ್ಯಗಳನ್ನೂ ಅವಲೋಕಿಸುತ್ತ, ನಡುನಡುವೆ ಒಬ್ಬರ ಮುಖ ವನ್ನೊಬ್ಬರ ನೋಡಿ ಮುಗುಳುನಗೆಯಿಂದ ಮಾತಾಡಿಕೊಳ್ಳುತ್ತಿದ್ದರು. ನಂಜನು ತನ್ನ ಕಂಬಳಿಯ ಮೇಲೆ ಕೂತುಕೊಂಡು, ನವ ಅತಿಥಿಗಳನ್ನು ನೋಡುವ ಕುತೂಹಲದಿಂದ ಹೊರಗೆ ಬಂದು ಹೊಸ್ತಿಲ ಬಳಿ ನಿಂತಿದ್ದ ಅಂಗಡಿಯವನ ಹೆಂಡತಿ ಮಕ್ಕಳೂಡನೆ ಮಾತುಕತೆಯಾಡುತ್ತಿದ್ದನು. ಮುಂಗಾರು ಮಳೆ ಭೀಷಣ ರಭಸದಿಂದ ಸುರಿಯತೊಡಗಿತ್ತು.

ಹೂವಯ್ಯನು, ತಾನು ಕೂತುಕೊಳ್ಳಬೇಕಾಗಿದ್ದ ಚಾಪೆಯ ಕೊಳಕು, ಅಲ್ಲಿಯೆ ಮೇಲುಗಡೆ ನೇತುಹಾಕಿದ್ದ ಹಳೆ ಕೊಳಕು ಬಟ್ಟೆಯ ರಾಶಿ, ಮನೆಯನ್ನೆಲ್ಲಾ ತುಂಬಿದ್ದ ಹೆಂಡ ಕಳ್ಳು ಸಾರಾಯಿ ಉಪ್ಪುಮಿನು ಇವುಗಳ ಸಹಿಸಲಸಾಧ್ಯವಾದ ದುರ್ಗಂಧ,  ಇವುಗಳಿಗಾಗಿ ಮೊದಮೊದಲು ಅಸಹ್ಯಪಟ್ಟರೂ ಸ್ವಲ್ಪ ಹೊತ್ತಿನಲ್ಲಿ ಅವನ ಮನಸ್ಸು ಹೊರಗಡೆ ಜರುಗುತ್ತಿದ್ದ ಭವ್ಯ ಪ್ರಕೃತಿ ವ್ಯಾಪಾರಗಳಲ್ಲಿ ತನ್ಮಯವಾಗತೊಡಗಿತು. ಗಗನದಲ್ಲಿ ಕಿಕ್ಕಿರಿದು ಉನ್ಮತ್ತರಭಸದಿಂದ ಚರಿಸುತ್ತಿದ್ದ ಕರ್ಮುಗಿಲು, ಕ್ಷಣಕ್ಷಣಕ್ಕೂ ರೇಖಾರೂಪದ ಅಗ್ನಿಪ್ರವಾಹದಂತೆ ಕಾಳಮೇಘಗಳ ಮಧ್ಯೆಮಧ್ಯೆ ಶಾಖೋಪಶಾಖೆಗಳ ಲತಾವಿನ್ಯಾಸದಿಂದ ತಟ್ಟಕ್ಕನೆ ಹೊಮ್ಮಿ ಹರಿದು ಕಣ್ಣು ಕೋರೈಸಿ ಮಾಯವಾಗುತ್ತಿದ್ದ ಮಿಂಚು, ಒಡನೆಯೆ ಕಿವಿ ಬಿರಿಯುವಂತೆ ಕೇಳಿ ಬಿರಿಯುವಂತೆ ಕೇಳಿ ಬರುತ್ತಿದ್ದ ಗುಡುಗು ಸಿಡಿಲುಗಳ ಭಯಂಕರ ಧ್ವಾನ, ಉನ್ಮಾದಗ್ರಸ್ತನಾಗಿ ರುದ್ರ ಪ್ರಲಯ ಕರ್ಮಮುಖನಾದ ನಿರಾಕಾರ ರಾಕ್ಷಸನಂತೆ ಭೋರೆಂಬ ಘೋರನಾದದಿಂದ ಸುತ್ತಮುತ್ತಣ ತುಂಗವೃಕ್ಷ ಸಮೂಹದ ಅರಣ್ಯ ಶ್ರೇಣಿಗಳನ್ನು ನಿರ್ದಯೆಯಿಂದ ಮುರಿದು ಮಥಿಸುತ್ತಿದ್ದ ಕಾರ್ಗಾಲದ ಬಿರುಸು ಬಿರುಗಾಳಿ, ಬಾನು ಭೂಮಿಗಳಿಗಿದ್ದ ಪ್ರತ್ಯೇಕತೆಯನ್ನು ಅಳಿಸುವಂತೆ ಅವಿಚ್ಛಿನ್ನ ಧಾರಾ ಪ್ರವಾಹದಿಂದ ನಾಡನ್ನೆಲ್ಲ ಯವನಿಕಾವೃತವಾದಂತೆ ಮಸಗುಮಾಡಿದ್ದ ಭೀಷಣವರ್ಷ ಸೌಂದರ್ಯ, ಪಳಪಳನೆ ಸುರಿದು ನೆಲವನ್ನೆಲ್ಲ ತುಂಬುತ್ತಿದ್ದ ಬಿಳಿಯ ಹೇರಾಲಿ ಕಲ್ಲುಗಳ ರಮಣೀಯತೆ-ಇವುಗಳಿಂದ ಮನಸ್ಸು ಭಾವಭೂಮಿಕೆಗೇರಿದ್ದ ಹೂವಯ್ಯನಿಗೆ ತಾನಿದ್ದ  ಸ್ಥಳದ ಕ್ಷುದ್ರತೆಯಾಗಲಿ ದುರ್ವಾಸನೆಯಾಗಲಿ ತಿಳಿಯುವಂತಿರಲಿಲ್ಲ. ನಾಲ್ಕಾರು ಮೇಕೆಗಳೂ ಮರಿಗಳೂ ಮಳೆಗೆ ಬೆದರಿ ಓಡಿಬಂದು, ಜಗಲಿಯ ತುದಿಯಲ್ಲಿ ನಿಂತುವು. ತೊಯ್ದು ಅವುಗಳ ಬೆಚ್ಚನೆ ದೇಹದಿಂದ ಆವಿಹೊಗೆ ಹೊರಡುತ್ತಿತ್ತು. ಕರಿಯ ಬಿಳಿಯ ಬಣ್ಣದ ನುಣ್ಣನೆ ಮೈಕೂದಲಿನಿಂದ ನೀರು ಸೋರಿ ಜಗಲಿಯ ಮೇಲೆ ಬೀಳುತ್ತಿತ್ತು. ಕರಿಯ ಕಂತ್ರಿ ನಾಯಿಯೊಂದು ಅವುಗಳಂತೆಯೆ ಆಚರಿಸಿತು. ಹಸುವೊಂದು ತನ್ನ ಕರುವಿನೊಡನೆ ಆಶ್ರಯಕ್ಕಾಗಿ ಬಂದು ತಲೆ ಹಾಕಿತು. ಆದರೆ ಜಾಗವಿಲ್ಲದುದರಿಂದಲೂ ಅಂಗಡಿಯವನು ಅಟ್ಟಿದುದರಿಂದಲೂ ಕರುವನ್ನಲ್ಲಿಯೆ ಬಿಟ್ಟು, ಹಿಂಭಾಗದಲ್ಲಿದ್ದ ಕೊಟ್ಟಿಗೆಯ ಕಡೆಗೆ ನಡೆಯಿತು. ಆಡುಗಳು, ನಾಯಿಯ ಮತ್ತು ಕರುವಿನ ಮೈಗಳಿಂದ ಹೊರಟ ಸಿನುಗುಗಂಪು ಅಂಗಡಿಯ ನಾತದೊಡನೆ ಕೂಡಿತು. ಹುಲ್ಲುಗುಡಿಸಲು ಅಲ್ಲಲ್ಲಿ ಸೋರತೊಡಗಿ, ಮನುಷ್ಯರಲ್ಲಿ ಕೆಲವರು ಸ್ಥಳ ಬದಲಾಯಿಸಬೇಕಾಯಿತು.

ಮುತ್ತಳ್ಳಿಯ ಗಾಡಿ ಅಂಗಳಕ್ಕೆ ಬಂದು ನಿಂತಾಗ, ಕಳ್ಳಂಗಡಿಯ ಒಳಭಾಗದಲ್ಲಿ ಗಟ್ಟಿಯಾಗಿ ಆವೇಶದಿಂದ ಮಾರನಾಡುತ್ತ ಉಪ್ಪುಮಿನನ್ನು ನಂಚಿಕೊಂಡು ಸಾರಾಯಿ ಕುಡಿಯುತ್ತ ಮಜಾಮಾಡುತ್ತಿದ್ದ ಜಾಕಿ, ಓಬಯ್ಯ ಮತ್ತು ಕೃಷ್ಣಪ್ಪ ಇವರು ಮಾತು ನಿಲ್ಲಿಸಿದ್ದರು. ಸದ್ಗೃಹಸ್ತರ ಮನೆಯ ಮಗನಾದ ಕೃಷ್ಣಪ್ಪ ಗಾಡಿಯಲ್ಲಿ ಬಂದವರಾರೆಂಬುದನ್ನು ತಿಳಿದೊಡನೆ, ಜಾಕಿ ಓಬಯ್ಯರ ಸಹವಾಸಕ್ಕೆ ಸಿಕ್ಕಿ ತಾನು ಮಾಡುತ್ತಿದ್ದ ಕೆಲಸಕ್ಕೆ ನಾಚಿಕೊಂಡು, ತಾನು ಅಲ್ಲಿರುವುದು ಬಂದವರಿಗೆ ತಿಳಿಯಬಾರದೆಂದು ಸೂಚಿಸಿದನು. ಅದರಲ್ಲಿಯೂ ತನ್ನ ತಂದೆ, ಅದೇ ತಾನೆ ತನಗೆ ಹೆಣ್ಣು ಕೇಳಲೆಂದು ಮುತ್ತಳ್ಳಿಗೆ ಹೊರಟಿದ್ದರು! ತಾನು ಕಳ್ಳಂಗಡಿಯಲ್ಲಿ ಓಬಯ್ಯ ಜಾಕಿಯರಂತಹ ಭ್ರಷ್ಟಜೀವಿಗಳ ಸಂಗದಲ್ಲಿ ಮದ್ಯಪಾನದಲ್ಲಿ ತೊಡಗಿದ್ದುದು ಮಾವನ ಮನೆಯವರಿಗೆ ಎಲ್ಲಿಯಾದರೂ ತಿಳಿದುಬಿಟ್ಟರೆ ಏನು ಗತಿ? ಎಂತಹ ನಾಚಿಕೆಗೇಡು? ಅಂತೂ ತುಟಿಪಿಟಕ್ಕೆನ್ನದೆ ಮೂವರೂ ಪಾನಕಾರ್ಯವನ್ನು ಪೂರೈಸಿದರು. ಎಲ್ಲರೂ ಮುಗಿದ ತರುವಾಯ ಜಾಕಿ ಓಬಯ್ಯ ಇಬ್ಬರೂ ಬಾಯಿ ಒರಸಿಕೊಳ್ಳುತ್ತ ಜಗಲಿಗೆ ದಾಟಿದರು. ದಾಟಿದೊಡನೆ ವಿನಯದಿಂದ ಹೂವಯ್ಯ ರಾಮಯ್ಯರಿಗೆ ನಮಸ್ಕಾರ ಮಾಡಿದರು. ಹೂವಯ್ಯ ಭಾವದಲ್ಲಿದ್ದುದರಿಂದ ಅದನ್ನು ಗಮನಿಸಲಿಲ್ಲ. ರಾಮಯ್ಯನಿಗೆ ಬಂದವರಿಬ್ಬರನ್ನೂ ಕಂಡು ಜುಗುಪ್ಸೆ ಹುಟ್ಟಿತು. ಪುಟ್ಟಮ್ಮ ವಾಸು ಇಬ್ಬರೂ ಜಾಕಿಯ ವಿಕಾರ ಮುಖವನ್ನೇ ಹೆದರಿಕೆಯಿಂದ ನೋಡುತ್ತಿದ್ದರು.

ವಾಸು “ಓಬಣ್ಣಯ್ಯ, ಇದೇನು ಇಲ್ಲಿದ್ದೀಯಾ?” ಎಂದನು.

“ಅಗ್ರಹಾರದ ಕಡೆ ಹೋಗಿದ್ದೆ. ಮಳೇ ಕಂಡು ಹೆದರಿ ಇಲ್ಲಿಗೆ ಬಂದಿದ್ದೆ” ಎಂದು ಓಬಯ್ಯ ಸುಳ್ಳು ಹೇಳಿ ನಾಗಮ್ಮನವರೊಡನೆ ಮಾತಾಡಲು ತಿರುಗಿದನು.

ಆದರೆ ವಾಸು ಸುಮ್ಮನಿರದೆ “ನೀನು ಅವತ್ತು ಕಂಡ ಭೂತ ಮತ್ತೆ ಕಂಡಿತ್ತೇನು?” ಎಂದು ಮುಗ್ಧವಾಗಿ ಪ್ರಶ್ನೆಮಾಡಿದನು.

“ಹ್ಞೂನೋ, ದಿನಾ ಕಾಣಿಸಿಕೊಳ್ಳೋಕೆ ಅದೇನು ನಮ್ಮ ಆಳೇನು?” ಎಂದು ನಾಗಮ್ಮನವರೊಡನೆ ಮಾತಾಡತೊಡಗಿದನು.

ಅಷ್ಟುಹೊತ್ತೂ ತನ್ನ ಉದ್ದೇಶವನ್ನು ಹೇಗೆ ಕೈಗೂಡಿಸುವುದೆಂದು ಚಿಂತಿಸುತ್ತಿದ್ದ ನಂಜ ಮೆಲ್ಲನೆ ಎದ್ದು, ಕಂಬಳಿಯನ್ನು ಹೆಗಲಮೇಲೆ ಹಾಕಿಕೊಂಡು, ಒಳಗೆ ದಾಟಿದನು. ಅಲ್ಲಿ, ಹೊರಗಡೆ ನಡೆಯುತ್ತಿದ್ದ ಸಂಭಾಷಣೆಯನ್ನು ಆಲಿಸಲು ಪ್ರಯತ್ನಿಸುತ್ತ ಕದ್ದು ಕುಳಿತಿದ್ದ ಕೃಷ್ಣಪ್ಪನನ್ನು ಕಂಡು “ಓಹೋ ಏನು ಕೃಷ್ಣಪ್ಪಗೌಡ್ರೇ, ಇಲ್ಲಿ?…..”ಎನ್ನುತ್ತಿದ್ದ ನಂಜ ಕೃಷ್ಣಪ್ಪನ ಕೈಸನ್ನೆ ಯಿಂದ ಸುಮ್ಮನಾದನು. ತಾನು ಅಲ್ಲಿದ್ದುದನ್ನು ಯಾರೊಡನೆಯೂ ಹೇಳಕೂಡದೆಂದು ತಿಳಿಸಿ, ಕೃಷ್ಣಪ್ಪ ನಂಜನಿಗೆ ಲಂಚಕೊಡುವಂತೆ ಹೆಂಡದೌತಣ ಮಾಡಿಸಿದನು.

ಮಳೆ ನಿಂತಮೇಲೆ ನಂಜ ಅಂಗಡಿಯ ಹಿಂದಣ ಕೊಟ್ಟಿಗೆಯಲ್ಲಿ ಕಟ್ಟಿದ್ದ ಗಾಡಿ ಎತ್ತುಗಳನ್ನು ಬಿಚ್ಚಿಕೊಂಡು ಬಂದು ಗಾಡಿ ಕಟ್ಟಲು ಸಿದ್ಧನಾದನು. ಜಗಲಿಯಲ್ಲಿ ಕುಳಿತಿದ್ದ ಎಲ್ಲರೂ ಮೇಲೆದ್ದರು; ಆದರೆ ಹೂವಯ್ಯನು ಏಳಲಿಲ್ಲ, ಅವನಿನ್ನೂ ಪರವಶತೆಯಿಂದ ನಿಷ್ಪಂದನಾಗಿ ಕುಳಿತಿದ್ದನು. ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಮುಖವು ಕೆಂಪೇರಿತ್ತು. ಅದನ್ನು ಕಂಡು ಎಲ್ಲರಿಗೂ ಗಾವರಿಯಾಯಿತು. ರಾಮಯ್ಯ. “ಸುಮ್ಮನಿರಿ ಅದೇನೂ ಅಲ್ಲ. ಅವನಿಗೊಂದೊಂದು ಸಾರಿ ಹಾಗಾಗುತ್ತದೆ” ಎಂದು ಹೇಳಿ, ಸಮಾಧಾನ ಪಡಿಸಿದನು. ಪ್ರಕೃತಿ ಸೌಂದರ್ಯದರ್ಶನದಿಂದ ಭಾವಪರವಶನಾಗಿದ್ದಾನೆ ಎಂಬುದು ಉಳಿದವರಾರಿಗೂ ಗೊತ್ತಾಗುವಂತಿರಲಿಲ್ಲ. ಆದ್ದರಿಂದಲೆ ಅವನು ವಿವರಿಸಿ ಹೇಳಲೂ ಇಲ್ಲ.

ಎಲ್ಲರೂ ಗಾಡಿಯಲ್ಲಿ ಕುಳಿತುಕೊಂಡು ಹೋದಮೇಲೆ ಕೃಷ್ಣಪ್ಪ ಹೊರಗೆ ಜಗಲಿಗೆ ಬಂದನು. ಓಬಯ್ಯ ಅವನೊಡನೆ ನಡೆದ ಸಂಗತಿಯನ್ನು ವಿವರಿಸುತ್ತ “ಹೂವಯ್ಯ ಗೌಡರಿಗೆ ಮೈಮೇಲೆ ಬಂದಿತ್ತು!” ಎಂದನು.

ಜಾಕಿ “ಮೈಮೇಲೆ ಬಂದಿದ್ದರೆ ಹಾಂಗೆ ಸುಮ್ಮನೆ ಕೂತುಕೊಳ್ತಿದ್ರೇನು? ಮೂರ್ಛೆರೋಗ ಇರಬೇಕು! ತೀರ್ಥಹಳ್ಳೀಲಿ ಒಬ್ಬರಿಗೆ ಮೂರ್ಛೆರೋಗ ಬರ್ತಿತ್ತು. ಅವರೂ ಹೀಂಗೇ ಮಾಡುತ್ತಿದ್ರು” ಎಂದನು.

ಅಂಗಡಿಯವನು “ಹೌದು, ನಾನೂ ಒಬ್ಬರನ್ನ ನೋಡಿದ್ದೆ” ಎಂದನು.

ಕೃಷ್ಣಪ್ಪನೂ “ನಾನೂ ಕೇಳಿದ್ದೆ” ಎಂದನು. ಅಂದಿನಿಂದ ಹೂವಯ್ಯನ ಭಾವಸಮಾಧಿ”ಮೈಮೇಲೆ ಬರುವುದು” “ದೆವ್ವ ಹಿಡಿಯುವುದು”, “ಮೂರ್ಛೆರೋಗ” ಎಂಬ ನಾನಾ ವಿಕಾರರೂಪಗಳನ್ನು ತಾಳಿ ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ ಬಿದ್ದು ಹಬ್ಬತೊಡಗಿತು.