ಜೋಯಿಸರ ಪೂಜೆಯಾದ ಮೇಲೆ ರಕ್ತಬಲಿಗೆ ಪ್ರಾರಂಭವಾಯಿತು. ಗೌಡರ ಅಪ್ಪಣೆಯಂತೆ ಜನರು ಆಯಾ ದೊಡ್ಡ ಸಣ್ಣ ದೆಯ್ಯಗಳಿಗೆ ಬಲಿ ಕೊಡಬೇಕಾಗಿರುವ ಯಜ್ಞಪಶುಗಳನ್ನು ಕೊಂಡೊಯ್ದರು. ಮೇಕೆಗಳ ಅರಚುವಿಕೆಯೂ ಕಾಲು ಕಟ್ಟಿದ ಕೋಳಿಗಳ ನಾನಾ ತೆರನಾದ ಕೂಗುವಿಕೆಯೂ ವಾಯುಮಂಡಲವನ್ನೆಲ್ಲ ತುಂಬಿತ್ತು. ಹರಕೆ ಹೊತ್ತುಕೊಂಡಿದ್ದವರೆಲ್ಲರೂ ತಮ್ಮ ತಮ್ಮ ಬಲಿಪ್ರಾಣೆಗಳನ್ನು ಎಳೆದುಕೊಂಡೋ ಹೊತ್ತುಕೊಂಡೋ ಆಯಾ ದೆಯ್ಯದ ‘ಬನ’ಗಳಿಗೆ ಹೋದರು. ಆ ಹರಕೆಗೊಲೆಯ ದೃಶ್ಯಗಳನ್ನು ನೋಡಲೆಂದು ಮಕ್ಕಳೂ ದೊಡ್ಡವರೂ ಸಣ್ಣ ಸಣ್ಣ ಗುಂಪುಗಳಾಗಿ ನಡೆದರು. ಅದರಲ್ಲಿಯೂ ಚೌಡಿ ಎಂಬ ದೆಯ್ಯದ ‘ಬನ’ಕ್ಕೆ ಹೋಗುತ್ತಿದ್ದವರೇ ಹೆಚ್ಚು. ಏಕೆಂದರೆ ಚೌಡಿಗೆ ಬಲಿ ಕೊಡಬೇಕಾಗಿದ್ದ ಮೇಕೆಯನ್ನು ಕತ್ತಿಯಿಂದ ಕತ್ತರಿಸಿ ಕೊಲ್ಲುತ್ತಿರಲಿಲ್ಲ! ಪ್ರಾಣಿಯ ಕಾಲುಗಳನ್ನು ಭದ್ರವಾಗಿ ಕಟ್ಟಿ, ಅದನ್ನು ಹೊಟ್ಟೆಮೇಲಾಗಿ ಅದುಮಿ ಹಿಡಿದುಕೊಂಡಮೇಲೆ, ಒಬ್ಬನು ಒನಕೆಯಿಂದ ಪ್ರಾಣಿಯ ವಕ್ಷಸ್ಥಳಕ್ಕೆ ಬೀಸಿ ಬೀಸಿ ಹೊಡೆದು ಹೊಡೆದು ಕೊಲ್ಲುತ್ತಿದ್ದನು. ಹಾಗೆ ಕೊಂದರೇನೇ ಆ ಚೌಡಿಗೆ ಸಂತೃಪ್ತಿಯಂತೆ!

ಭೂತದ ‘ಬನ’ದ ಕಡೆಗೂ ಅನೇಕರ ಪಕ್ಷಪಾತವಿತ್ತು. ಏಕೆಂದರೆ ಭೂತದ ಬಲಿಗಾರನಾಗಿದ್ದ ಹಳೆಪೈಕದ ತಿಮ್ಮ ಎಂತಹ ದೊಡ್ಡ ಹೋತನನ್ನಾದರೂ ಒಂದೇ ಕೊಚ್ಚಿಗೆ ಒಳ್ಳೆಯ ರಸಿಕತೆಯಿಂದ ಕತ್ತರಿಸುತಿದ್ದ ನೈಪುಣ್ಯವೂ ಶಕ್ತಿಯೂ ಅನೇಕ ಅಬಲರಿಗೆ ಆಕರ್ಷಣೀಯವಾದ ಸಾಹಸವಾಗಿತ್ತು.

ಕುಂಕುಮ, ಕೆಂಪುದಾಸವಾಳದ ಹೂ ಮೊದಲಾದವುಗಳ ರುದ್ರವಿನಿಯೋಗದೊಡನೆ ಬಲಿಗೆ ಪ್ರಾರಂಭವಾಯಿತು. ಕರಿಯ ಹೋತನಂತೂ ತನ್ನ ಕೊರಳಿಗೆ ಹಾಕಿದ್ದ ದಾಸವಾಳದ ಹೂವುಗಳನ್ನೇ, ಕುತ್ತಿಗೆ ಬಗ್ಗಿಸಿ, ಬಹು ಶ್ರಮದಿಂದ ತಿನ್ನುತ್ತಿತ್ತು. ಆದರೆ ಕೋಳಿಗಳ ಬಲಿಗೆ ಆರಂಭವಾದೊಡನೆ ಆ ದೃಢಕಾಯವಾಗಿದ್ದ ಹೋತ ಹಠಾತ್ತಾಗಿ ಗಂಭೀರವಾಯಿತು. ಬಹುಶಃ ತನಗೊದಗಲಿರುವ ದುರ್ಗತಿಯ ಅರಿವಾಯಿತೋ ಏನೋ ಅದಕ್ಕೆ!

ಬಳಿಯಿದ್ದವರು ‘ನೋಡಿದೆಯೋ ಭೂತದ ಮಹಿಮೆ! ಅದಕ್ಕೂ ಗೊತ್ತಾಗಿ ಹೋಯಿತು! ಎಷ್ಟು ಭಕ್ತಿಯಿಂದ ನಿಂತುಕೊಂಡಿದೆ?’ ಎಂದು ವ್ಯಾಖ್ಯಾನ ಮಾಡಿದರು.

ತಿಮ್ಮ ಕೋಳಿಗಳ ಮಂದೆಗಳನ್ನು ಒಂದೊಂದನ್ನಾಗಿ ಕೊಯ್ದ ಬೇರೆಮಾಡಿ, ಮರದ ಬುಡದಲ್ಲಿದ್ದ ಭೂತದ ಕಲ್ಲಿಗೆ ರಕ್ತ ಹಚ್ಚತೊಡಗಿದನು. ತಲೆ ಹೋದ ಕೋಳಿಗಳು ರೆಕ್ಕೆಗಳನ್ನು ರಪ್ಪರಪ್ಪನೆ ಬಡಿದುಕೊಂಡು ದಿಕ್ಕುದಿಕ್ಕಿಗೆ ಹಾರಿ ಹಾರಿ ಬೀಳತೊಡಗಿದುವು. ಮರಗಳ ನಡುವೆ ತೂರಿ ಬರುತ್ತಿದ್ದ ಬಿಸಿಲಿನ ಬೆಳಕಿನಲ್ಲಿ ಚೆಲ್ಲಿದ್ದ ನೆತ್ತರು ರುದ್ರಾರುಣವಾಗಿತ್ತು. ರುಂಡವಿಲ್ಲದ ಕೋಳಿಯೊಂದು, ಅಸ್ಪೃಶ್ಯನಾಗಿದ್ದುದರಿಂದ ದೂರ ನಿಂತಿದ್ದ ಬೈರನ ಬಳಿಗೆ, ಒದ್ದಾಡಿಕೊಂಡು ಬರುತ್ತಿರಲು, ಅವನ ಸೊಂಟಕ್ಕೆ ಸುತ್ತಿದ್ದ ಕೊಳಕುಪಂಚೆಗೆ ಅದರ ರಕ್ತ ಹಾರಿತು. “ಹಾಳು ಮುಂಡೇದು! ತಲೆಹೋದರೂ ಸೊಕ್ಕು ಬಿಡದು!” ಎಂದವನೇ ಒಂದು ದೊಣ್ಣೆಯಿಂದ ಬಡಿದು ಅದರ ಹಾರಾಟವನ್ನು ನಿಲ್ಲಿಸಿದನು. ಅವನು ಹೊಡೆಯುತ್ತಿದ್ದಾಗ ‘ಹ ಹ ಹ ಹ ! ಹಿ ಹಿ ಹಿ ಹಿ! ಹೊ ಹೊ ಹೊ ಹೊ!’ ಎಂದು ಎಲ್ಲರೂ ನಗುತ್ತಿದ್ದರು. ಕರಿಯ ಹೋತ ಬೆಚ್ಚಿಬಿದ್ದಿತು. “ಕನಿಕರದ ಮಾನವರೇ, ಕರುಣಿಸಿ, ಕಾಪಾಡಿ!” ಎಂಬಂತೆ ಕಿರಿಚಿಕೊಂಡು, ಕೊರಳ ಹಗ್ಗವನ್ನು ತುಯ್ದು ತಪ್ಪಿಸಿಕೊಳ್ಳಲೆಳಸಿತು. ಅದನ್ನು ಹಿಡಿದಿದ್ದ ನಿಂಗ ರೇಗಿಬಿದ್ದು “ಈ ಪುಣ್ಯ ನಿನಗಿನ್ನೆಲ್ಲಿ ಸಿಕ್ಕೀತು? ಸುಮ್ಮನೆ ನಿಂತುಕೋ!” ಎಂದು ಒಂದು ಗುದ್ದು ಗುದ್ದಿದನು.

ಕೋಳಿಗಳೆಲ್ಲ ಮುಗಿದ ಮೇಲೆ ತಿಮ್ಮ “ಹ್ಞೂ! ಕುರೀ! ಬರ್ಲೀ!” ಎಂದು  ಕೂಗಿದನು. ತನಗೆ ಆರೋಗ್ಯ ಭಾಗ್ಯವಿಲ್ಲದಿದ್ದರೂ ತಾನು ಹಿಡಿದಿದ್ದ ಹೋತದ ಆರೋಗ್ಯಕ್ಕಾಗಿ ಹೆಮ್ಮೆಪಡುತ್ತಿದ್ದ ನಿಂಗ ಉತ್ಸಾಹದಿಂದ ಮುಂದುವರಿದನು. ಹೋತ ಕದಲಲೊಲ್ಲದೆ ಹೋಯಿತು. ವಾಸ್ತವವಾಗಿಯೂ ಶಕ್ತಿಯಲ್ಲಾಗಲಿ ತೂಕದಲ್ಲಾಗಲಿ ನಿಂಗನಿಗೇನೂ ಅದು ಕಡಿಮೆಯಾಗಿರಲಿಲ್ಲ ! ನಿಂಗ ಜಗ್ಗಿಸಿ ಎಳೆದನು. ಹೋತವೂ ಎಳೆಯಿತು. ನಿಂಗ ಒಂದು ಹೆಜ್ಜೆ ಅದರ ಕಡೆಗೇ ಸರಿಯಬೇಕಾಯಿತು! ‘ಹ ಹ ಹ ಹ ! ಹಿ ಹಿ ಹಿ ಹಿ! ಹೊ ಹೊ ಹೊ ಹೊ!’ ಎಂದು ನೋಡುತ್ತಿದ್ದವರೆಲ್ಲ ಮತ್ತೆ ನಕ್ಕರು. ಅಷ್ಟರಲ್ಲಿ ಮತ್ತೊಬ್ಬನು ತಾನು ಹಿಡಿದಿದ್ದ ಮೆಕೆಯನ್ನು ತಿಮ್ಮನಿದ್ದ ಬಲಿಪೀಠದ ಬಳಿಗೆ ಕೊಂಡೊಯ್ದುದರಿಂದ ನಿಂಗ ಸುಮ್ಮನಾದನು. ಆ ಮೇಕೆಯೂ ಗಡಗಡನೆ ನಡುಗುತ್ತಿತ್ತು. ಆರಚಿಕೊಳ್ಳುತ್ತಿತ್ತು!ಅದನ್ನು ಹಿಡಿದಿದ್ದವನು ಒಂದು ಸೊಪ್ಪಿನ ತುಂಡೆಯನ್ನು ಅದರ ಮುಖದ ಬಳಿಗೆ ಚಾಚಿದನು. ಪಾಪ! ಆ ಪ್ರಾಣಿ ಹಿಂದೆ ಎಷ್ಟೋ ಸಾರಿ ತನ್ನನ್ನು ಸಾಕಿಸಲಹಿದವರಿಂದ ಹಾಗೆಯೇ ಸೊಪ್ಪನ್ನು ತಿಂದಿತ್ತು! ಆದ್ದರಿಂದ ಇಂದೂ ಆ ಸೊಪ್ಪನ್ನು ಸಾಕುವವನ ಕರುಣೆ, ಮಾತೃಭಾವದ ಚಿಹ್ನೆ ಎಂದು ಭಾವಿಸಿಯೋ ಅಥವಾ ಅದನ್ನು ತಿಂದರೆ ತನ್ನನ್ನು ಕ್ಷಮಿಸಿ ಬಿಟ್ಟುಬಿಡುತ್ತಾರೆಂದೋ ಅದಕ್ಕೆ ಬಾಯಿ ಹಾಕಿತು. ಒಡನೆಯೆ ತಿಮ್ಮನ ಕತ್ತಿ ಕತ್ತಿನಮೇಲೆ ಬಿದ್ದು, ಚಕ್ಕನೆ ಮಂಡೆ ನೆಲಕ್ಕುರುಳಿತು. ದೇಹವೂ ಬಿದ್ದು ಒದ್ದಾಡಿಕೊಂಡಿತು. ರಕ್ತ ಬುಗ್ಗೆಯಂತೆ ಚಿಮ್ಮಿ ತಿಮ್ಮನ ದೇಹಭಾಗಗಳು ಕೆಂಪಾದುವು. “ಬೇಗ ತಗೊಂಡು ಬಾರೋ!” ಎಂದು ಕೂಗಲು ಒಬ್ಬನು ಬೋಗುಣಿಯನ್ನು ತಂದು, ನೆತ್ತರು ನೆಲಕ್ಕೆ ಬಿದ್ದು ಹಾಳಾಗದಂತೆ ಹಿಡಿದನು.

ಇದನ್ನೆಲ್ಲ ಪ್ರತ್ಯಕ್ಷವಾಗಿ ನೋಡುತ್ತಿದ್ದ ನಿಂಗನ ಕೈಲಿದ್ದ ಕರಿಯ ಹೋತ ಅರಚಲೂ ಆರದೆ ಥರಥರನೆ ಕಂಪಿಸತೊಡಗಿತು. “ಅಲ್ನೋಡ್ರೋ! ಹ್ಯಾಂಗೆ ನಡುಗ್ತದೆ ಅದು?” ಎಂದೊಬ್ಬನು ಪ್ರಶಂಸಿಸಿದನು. “ಅದಕ್ಕೂ ಭಯವಲ್ಲವೇ?” ಎಂದನು ಮತ್ತೊಬ್ಬ.

“ನಿಂಗಯ್ಯ, ಎಳಕೊಂಡು ಬನ್ರೋ!” ಎಂದು ಒಕ್ಕಲಿಗನಿಗೆ ಹಳೆಪೈಕದ ತಿಮ್ಮ ಕೂಗಿ ಹೇಳಿದನು.

ನಿಂಗ ಎಳೆದನು ನಡುಗುತ್ತ ನಿಂತಿದ್ದ ಹೋತ ಜೀವರಕ್ಷಣೆ ಮಾಡಿಕೊಳ್ಳಲು ಕಟ್ಟಕಡೆಗೊದಗುವ ಧೈರ್ಯ ಸಾಹಸ ಶಕ್ತಿಗಳಿಂದ ಹಗ್ಗವನ್ನು ಬಲವಾಗಿ ಝಗ್ಗಿ ಸೆಳೆಯಲು, ನಿಂಗ ಮುಗ್ಗುರಿಸಿ ಬಿದ್ದನು.

“ಹಿಡಿರ್ರೋ! ಹಿಡಿರ್ರೋ! ಹಿಡಿರ್ರೋ!” ಎಂದು ಎಲ್ಲರೂ ಕೂಗಿನುಗ್ಗುವುದರಲ್ಲಿಯೆ ಕೊರಳ ಹಗ್ಗದೊಡನೆ ಹೋತ ಕಾಡಿನ ಕಡೆಗೆ ಓಡತೊಡಗಿತು.

ಶಕ್ತರು ಬೆನ್ನಟ್ಟಿದರು, ಅಶಕ್ತರು ಕೂಗಿಕೊಂಡರು ಕೆಲವರು ‘ಕ್ರೂ ಕ್ರೂ ಕ್ರೂ!’ ಎಂದು ನಾಯಿಗಳನ್ನು ಕರೆದು ಛೂ ಬಿಟ್ಟರು. ಅಂತೂ ಮನುಷ್ಯರೆಂಬುವರೂ ನಾಯಿಗಳೂ ಒಟ್ಟು ಸೇರಿ, ಕಾಡೆಲ್ಲ ಬೊಬ್ಬೆಗೊಡುವಂತೆ ಅಬ್ಬರಿಸಿ ಹೋತನನ್ನು ಬೇಟೆಯಾಡಿದರು. ಹೋತ ಒಂದೇ ಸಮನೆ ಮರಗಳ ನಡುವೆ, ಹಳುವಿನಲ್ಲಿ ಉಬ್ಬನೇರಿ, ತಗ್ಗನಿಳಿದು, ಹಾರಿ ನೆಗೆದು, ಮನುಷ್ಯರಿಂದಲೂ ನಾಯಿಗಳಿಂದಲೂ ನುಣುಚಿಕೊಂಡು ಮೃತ್ಯುವೇಗದಿಂದ ಧಾವಿಸಿತು ಗಲಭೆ ಎಲ್ಲೆಲ್ಲೆಯೂ ಹಬ್ಬಿ, ಅನೇಕರು ರಣರಂಗಕ್ಕೆ ನುಗ್ಗಿದರು.

ನಿಜವಾದ ವಾರ್ತೆ ತಿಳಿಯದವರು ತಮಗೆ ಇಷ್ಟಬಂದ ಸುದ್ದಿಗಳನ್ನೆಲ್ಲ ಹಬ್ಬಿಸಿದರು, ಅಡುಗೆಮನೆಯೊಂದರಲ್ಲಿಯೇ ವಿವಿಧವಾರ್ತೆಗಳು ಪ್ರಚುರವಾಗಿ ಭೀತಿ ಹಬ್ಬಿತು. ಪುಟ್ಟಮ್ಮ ಓಡಿಬಂದು ನಾಗಮ್ಮನವರ ಹತ್ತಿರ “ದೊಡ್ಡಮ್ಮಾ! ಹುಲಿ ಬಂದು ಹಳೇಪೈಕದ ತಿಮ್ಮನ್ನ ಹಿಡ್ಕೊಂಡ್ಹೋಯ್ತಂತೆ!” ಎಂದು ನಡುಗತೊಡಗಿದಳು. ಅಲ್ಲಿಗೆ ಅಳುತ್ತ ಓಡಿಬಂದ ನಿಂಗನ ಮಗ ಪುಟ್ಟ “ಅಲ್ಲಂತೆ! ನಮ್ಮಪ್ಪನ್ನಂತೆ ಹಿಡ್ಕೊಂಡ್ಹೋಗಿದ್ದು!” ಎಂದು ರೋದಿಸಲಾರಂಭಿಸಿದನು. ಅವರೆಲ್ಲ ಜಗಲಿಗೆ ನುಗ್ಗಿ ಬರುತ್ತಿದ್ದಾಗ ವಾಸು ಎದುರಿಗೆ ಓಡಿಬಂದು ಸುಬ್ಬಮ್ಮಗೆ ಢಿಕ್ಕಿ ಹೊಡೆದು “ತಿಮ್ಮನಿಗೆ ದೆಯ್ಯ ಬಡಿದು ಹುಚ್ಚು ಹಿಡೀತಂತೆ! ಕುರಿ ಕಡಿಯಾ ಬದ್ಲು ಕುರಿ ಹಿಡ್ಕೊಂಡವನನ್ನೇ ಕಡಿದುಬಿಟ್ನಂತೆ!” ಎಂದು ಅಲ್ಲಿ ನಿಲ್ಲದೆ ಉಪ್ಪರಿಗೆಗೋಡಿದನು. ದೊಣ್ಣೆ ಹಿಡಿದುಕೊಂಡು ಓಡುತ್ತಿದ್ದ ಸೇರೆಗಾರರು “ಭೂತರಾಯನೇ ರಾಕ್ಷಸನಾಗಿ ಬಂದು ಕುರಿ ಕಚ್ಚಿಕೊಂಡು ಹಾರಿಹೋಗಿದ್ದಾನಂತೆ! ನೋಡೋರೆಲ್ಲಾ ಬನ್ನಿ” ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ವಾಸುವಿನಿಂದ ಭಯಂಕರ ವಾರ್ತೆಯನ್ನು ಕೇಳಿದ ಹೂವಯ್ಯ ರಾಮಯ್ಯ ಚಿನ್ನಯ್ಯರು ಉಪ್ಪರಿಗೆಯಿಂದಿಳಿದು ಬೊಬ್ಬೆ ಕೇಳಿಬಂದ ದಿಕ್ಕಿಗೆ ನಡೆದೋಡಿದರು. ಹತ್ತಾರು ಜನರಿಂದ ಹತ್ತಾರು ತೆರನಾದ ಸುದ್ದಿ ಕೇಳಿದ ಚಂದ್ರಯ್ಯಗೌಡರು ಕಂಗೆಟ್ಟು ‘ಹೂವಯ್ಯಾ! ರಾಮೂ! ಬನ್ರೋ!’ ಎಂದು ಕರೆಯುತ್ತ, ಭೂತದ ಬನದ ಕಡೆಗೆ ಕೈಲಾದಷ್ಟು ಮಟ್ಟಿಗೆ ವೇಗವಾಗಿ ನಡೆದರು. ಆ ದಿನದ ಹಬ್ಬಕ್ಕಾಗಿ ಬಂದು ನೆರೆದಿದ್ದ ಕಾಗೆಗಳಂತೂ “ಕಾ! ಕಾ! ಕಾ! ಕಾ!” ಎಂದು ಗದ್ದಲಕ್ಕೆ ಗದ್ದಲ ಪೇರಿಸುತ್ತಿದ್ದವು.

ಅಂತೂ “ನಿಂಗನನ್ನು ಎಳೆದು ಕೆಡವಿ ಕುರಿ ಓಡಿಹೋಯಿತ್ತಂತೆ!” ಎಂಬ ಅವಸರದ ಮಾತು “ನಿಂಗನನ್ನು ಎಳೆದುಕೊಂಡು ಹುಲಿ ಓಡಿಹೋಯಿತಂತೆ!” ಎಂದಾಗಿ, ಕಡೆಗೆ ಚಿತ್ರ ವಿಚಿತ್ರ ವಿಕಾರ ರೂಪಗಳನ್ನು ತಳೆದು ಅಷ್ಟೊಂದು ಗಲಭೆಗೆ ಕಾರಣವಾಯಿತು.

ನಾಯಿಗಳಿಂದಲೂ ಮನುಷ್ಯರಿಂದಲೂ ಕಿರಾತಿಯವಾಗಿ ಅಟ್ಟಲ್ಪಟ್ಟ ಆ ಹೋತ ಬೆದರಿ ದಣಿದು ಕಟ್ಟಕಡಗೆ ಹೂವಯ್ಯ ಮೊದಲಾದವರು ಅಲ್ಲಿಗೆ ಹೋಗುವ ವೇಳೆಗೆ, ಮನೆಗೆ ತುಸು ದೂರದಲ್ಲಿದ್ದ ಕೆರೆಗೆ ಹಾರಿತ್ತು. ಜನರೆಲ್ಲರೂ ತಂಡತಂಡವಾಗಿ ಕೆರೆಯ ಸುತ್ತಲೂ ಕಾಕು ಕೇಕೆ ಹಾಕುತ್ತ, ಕಲ್ಲು, ಬಡಿಗೆಗಳನ್ನೆಸೆಯುತ್ತ ಆಸನ್ನ ವಿಜಯಿಗಳಾಗಿ ನಿಂತಿದ್ದರು; ಅಥವಾ ಕುಣಿದಾಡುತ್ತಿದ್ದರು. ಹೋತದ ತಲೆ ಮಾತ್ರ ಕೆರೆಯ ನಡುವೆ ಈಜುತ್ತಿತ್ತು. ನಿಂತಿದ್ದವರ ಉತ್ತೇಜಕವಾಣಿಯಿಂದ ಪ್ರೇರಿತವಾಗಿ ಒಂದೆರಡು ನಾಯಿಗಳು ಈಜುಬಿದ್ದವು. ಹೋತ ಬೆದರಿ ಮತ್ತೆ ದಡವೇರಲೆಳಸಿತು. ಆದರೆ ದಡದಲ್ಲಿ ನಿಂತವರನ್ನು ನೋಡಿ ನೀರಿಗೆ ಮರಳಿತು. ಅಷ್ಟರಲ್ಲಿ ನಾಯಿಗಳೂ ಬಳಿಗೆ ಹೊಗಿ ಅದನ್ನು ತುಡುಕಿದುವು. ಹೋತವೂ ನಾಯಿಗಳು ಎರಡು ಮೂರುಸಾರಿ ಮುಳುಮುಳುಗೆದ್ದುವು. ದಡದಲ್ಲಿದ್ದವರು ಕೈಚಪ್ಪಾಳೆ ಹೊಡೆಯುತ್ತ ಜಯದ್ವನಿಗೈಯುತ್ತಿದ್ದರು.

ಹೂವಯ್ಯ “ಏ ಪುಟ್ಟಣ್ಣಾ ಈಜಿಹೋಗಿ ಅದನ್ನು ಹಿಡಿದುಕೊಂಡು ಬಾ” ಎಂದು ಕಠಿನವಾಗಿ ಕೂಗಿ ಹೇಳಿದನು.

ಸಾಹಸಪ್ರೇಮಿಯಾಗಿದ್ದ ಪುಟ್ಟಣ್ಣ ಅಷ್ಟು ಜನರು ನೊಡುತ್ತಿರುವಾಗಲೆ ಲಭಿಸಿದ್ದ ಸಂದರ್ಭವನ್ನು ಕಳೆದುಕೊಳ್ಳುತ್ತಾನೆಯೆ? ಅಂಗಿ ಬಿಚ್ಚಿ, ಪಂಚೆ ಸುತ್ತಿಕಟ್ಟಿ, ಕೆರೆಯೆಲ್ಲ ಅಲ್ಲೋಲಕಲ್ಲೋಲವಾಗುವಂತೆ ನೀರಿಗೆ ದುಢುಮ್ಮನೆ ಧುಮುಕಿದನು. ನೋಡುತ್ತಿದ್ದ ಹಾಗೆಯೆ, ಹೋರಾಡುತ್ತಿದ್ದ ಹೋತನನ್ನು ನಾಯಿಗಳಿಂದ ಬಿಡಿಸಿ, ಅದರ ಕೊರಳ ಹಗ್ಗವನ್ನು ಬಾಯಲ್ಲಿ ಕಚ್ಚಿಕೊಂಡು ನೀರಿನ ಹೊರಗೆ ಕೈಕಾಲು ಬಡಿದು ಹೋತಕ್ಕೆ ಗಾಬರಿ ಮಾಡದಂತೆ ಈಜಿ ದಡ ಸೇರಿದನು. ಚೆನ್ನಾಗಿ ದಣಿದಿದ್ದ ಆ ಬಡ ಜಂತು ಒಂದಿನಿತೂ ಪ್ರತಿಭಟಿಸದೆ ಪುಟ್ಟಣ್ಣನ ಸಂಗಡವೆ ದಡವೇರಿತು. ಒಡನೆಯೆ ಜನರೆಲ್ಲ ಅಲ್ಲಿಗೆ ನುಗ್ಗಿದರು. ತಿಮ್ಮ, ಓಬಯ್ಯ, ನಿಂಗ ಮೂವರೂ ಒಬ್ಬರಮೇಲೊಬ್ಬರು ನುಗ್ಗಿಬಂದು ಕೊರಳ ಹಗ್ಗಕ್ಕೆ ಕೈಹಾಕಿದರು.

“ನಡೀರೋ ದೂರ!” ಎಂಬ ಹೂವಯ್ಯನ ಅಧಿಕಾರವಾಣಿ ಯನ್ನು ಕೇಳಿ ಮತ್ತೆ ಎಲ್ಲರೂ ಹಿಂಜರಿದರು. ಹೂವಯ್ಯ ಹೋತನ ಕೊರಳ ಹಗ್ಗವನ್ನು ಕೈಯಲ್ಲಿ ಹಿಡಿದು, ಮನೆಯ ಕಡೆಗೆ ಹೊರಟನು. ಹೋತವು ಕುರಿಮರಿಯಂತೆ ಅವನನ್ನು ಹಿಂಬಾಲಿಸಿತು.

“ಅಯ್ಯಾ, ಕೊಡಿ, ಹೊತ್ತಾಯ್ತು! ಭೂತಕ್ಕೆ ಆಯಾರಕೊಡ್ಬೇಕು” ಎಂದು ತಿಮ್ಮ ಹೇಳಲು, ಹೂವಯ್ಯ ನಿಂತು, ಹಿತಿರುಗಿ, ತನ್ನ ಹಿಂದೆ ಬರುತ್ತಿದ್ದ ಗುಂಪನ್ನು ಕಠೋರವಾಗಿ ನೋಡಿದನು. ಆ ದೃಷ್ಟಿಯಲ್ಲಿ ಭೀಷಣತೆ ಇದ್ದುದರಿಂದ ಯಾರೂ ಮಾತಾಡಲಿಲ್ಲ.

ಅಂತೂ ಆ ದಿನ ಆ ಹೋತ ಉಳಿದುಕೊಂಡಿತು. ಭೂತಕ್ಕೆ ಮೀಸಲಾದುದನ್ನು ಇಟ್ಟುಕೊಳ್ಳಬಾರದು ಎಂದು ಚಂದ್ರಯ್ಯಗೌಡರು ವಾದಿಸದರು. ಅನೇಕರು ಅನೇಕ ವಿಧವಾಗಿ ಹೇಳಿದರು. ಅನಿಷ್ಟವಾಗುತ್ತದೆ ಎಂದರು. ಹೂವಯ್ಯ “ಕರುಣೆ ಮೂಕಪ್ರಾಣಿಯ ಬಲಿದಾನಕ್ಕಿಂತಲೂ ಹೆಚ್ಚಿನ ಪೂಜೆ” ಎಂದು ಹೇಳಿ, ಯಾರ ‘ಬುದ್ಧಿವಾದ’ವನ್ನೂ ಲಕ್ಷಿಸಲಿಲ್ಲ.

* * *

ಸಾಯಂಕಾಲ ಸುಬ್ಬಮ್ಮ ಸೇರೆಗಾರರೊಡನೆ, ತಾನು ಕೊಟ್ಟಿದ್ದ ಹಣವನ್ನು ವಾಪಸು ಕೊಡುವಂತೆ ಓಬಯ್ಯನಿಗೆ ತಿಳಿಸಬೇಕೆಂದು ಗುಟ್ಟಾಗಿ ಹೇಳುತ್ತಿದ್ದಾಗ ಚಂದ್ರಯ್ಯಗೌಡರು ನೋಡಿದರು. ಅವರು ಸೇರೆಗಾರರನ್ನು ಕರೆದು ಅದೇನೆಂದು ಕೇಳಿದರು. ಸೇರೆಗಾರರು ಏನೂ ಇಲ್ಲ. ಬಾಳೆಯೆಲೆ ಬೇಕಂತೆ! ಎಂದು ಹೇಳಿ, ಕೆರೆಯ ಬಳಿ ಕುರಿಕೋಳಿಗಳ ಹಸುಗೆಯ ಕಾರ್ಯದಲ್ಲಿದ್ದ ಓಬಯ್ಯನೆಡೆಗೆ ಹೋದರು. ಗೌಡರು ಅದನ್ನು ನಂಬಲಾರದೆ ಸೇರೆಗಾರರನ್ನು ಮೆಲ್ಲನೆ ಹಿಂಬಾಲಿಸಿದರು.

ಅಲ್ಲಿ ಕಳ್ಳಂಗಡಿಯವನಿಗೂ ಓಬಯ್ಯನಿಗೂ ಮಾತಿನ ಜಗಳವಾಗುತ್ತಿತ್ತು.

“ನಿಮ್ಮ ಲೋಟು ನೀವು ತಗೊಳ್ಳಿ. ಅದು. ನಡೆಯೂದಿಲ್ಲಂತೆ!” ಎಂದು ಹೇಳುತ್ತಿದ್ದ ಕಳ್ಳಂಗಡಿಯವನು ಎರಡು ಕಾಗದದ ತುಂಡುಗಳನ್ನು ಓಬಯ್ಯನ ಕಡೆಗೆ ಚಾಚಿದನು.

ಓಬಯ್ಯ “ಅದೊಂದೂ ನನಗೆ ಗೊತ್ತಿಲ್ಲ. ನಾನು ಕೊಟ್ಟಾಗ ಸರಿಯಾಗಿತ್ತು ಅಂಥಾ ಖೋಟಾ ಲೋಟಾಗಿದ್ದರೆ ಅವಾಗ್ಲೆ ವಾಪಾಸ್‌ ಮಾಡ್ಬೇಕಾಗಿತ್ತು. ಇಷ್ಟು ದಿನ ಇಟ್ಟುಕೊಂಡು ಈಗ ಕೊಟ್ರೆ ಯಾರು ತಗೊಳ್ತಾರೆ?” ಎಂದು ಕೆಂಪು ಮಾಂಸದ ಕುರಿಯ ಕಾಲೊಂದನ್ನು ಬೆಂಕಿಯಲ್ಲಿ ಬಾಡಿಸುತ್ತಿದ್ದನು.

“ನಾನೇನು ನಿಮ್ಮ ಲೋಟು ಬದ್ಲಾಯಿಸ್ಲಿಲ್ಲ!”

“ಬದ್ಲಾಯಿಸೀಯೋ ಬಿಟ್ಟಿಯೋ ಯಾರೀಗೆ ಗೊತ್ತು?”

“ಹಾಂಗಾರೆ ನೀವು ಖಂಡಿತ ತಗೋಳ್ಳೋದಿಲ್ಲೇನು?”

“ನನಗೇನು ಬುದ್ಧಿ ಹೆಚ್ಚಾಗಿ ತಗೋಳ್ಲೇನು?”

“ಹಾಂಗಾದ್ರೆ ಗೌಡ್ರ ಹತ್ರಕ್ಕೆ ಹೋಗ್ತೀನಿ. ಅವರೇ ಇಚಾರಣೆ ಮಾಡ್ಲಿ!”

“ಹೋಗು! ನಾನೇನು ಬ್ಯಾಡ ಅಂತೀನೇನು?”

ಕಳ್ಳಂಗಡಿಯವನು ಇದ್ದಕ್ಕಿದ್ದ ಹಾಗೆ ರೇಗಿ “ಒಬ್ಬ ತಂದೆಗೆ ಹುಟ್ಟಿದವರಾಗಿದ್ರೆ ಸುಳ್ಳು ಹೇಳ್ತಿರ್ಲಿಲ್ಲ” ಎಂದನು.

“ಏನೆಂದೆ, ಬೋಳಿಮಗ್ನೆ” ಎಂದ ಓಬಯ್ಯ ಕೈಯಲ್ಲಿದ್ದ ಹಸಿಮಾಂಸದ ಕುರಿಯ ತೊಡೆಯಿಂದಲೆ ಕಳ್ಳಂಗಡಿಯವನ ಮುಖಕ್ಕೆ ರಪ್ಪನೆ ಹೊಡೆದನು.

ಅಲ್ಲಿದ್ದವರೆಲ್ಲರೂ ಸೇರಿ ಇಬ್ಬರಿಗೂ ನಡುವೆ ಬಂದು ಕೈ ಕೈ ಮಿಲಾಯಿಸುವುದನ್ನು ನಿಲ್ಲಿಸುತ್ತಿದ್ದರು. ಅಷ್ಟರಲ್ಲಿ ಸೇರೆಗಾರರೂ ಅವರ ಹಿಂದೆ ಚಂದ್ರಯ್ಯಗೌಡರೂ ಅಲ್ಲಿಗೆ ಬಂದರು. ವಿಚಾರಣೆಯಾಯಿತು. ಓಬಯ್ಯ ತನಗೆ ಕೊಡಬೇಕಾಗಿದ್ದ ಐವತ್ತುಮೂರು ರೂಪಾಯಿ ಎಂಟಾಣೆ ಮೂರು ಕಾಸಿಗೆ ಒಂದು ನೂರು ರೂಪಾಯಿನ ನೋಟು ಕೊಟ್ಟಿದ್ದಾನೆಂದೂ, ಆ ನೋಟನ್ನು ತಾನು ಕೊಪ್ಪಕ್ಕೆ ಮುರಿಸಲು ತೆಗೆದುಕೊಂಡು ಹೋಗಿದ್ದಾಗ ‘ಚಾಪಿ'(ಷಾಪ್‌)ನವರು “ನಡೆಯೂದಿಲ್ಲ” ಎಂದು ಹೇಳಿದರೆಂದೂ, ಈಗ ವಾಪಾಸು ಕೊಟ್ಟರೆ ತೆಗೆದುಕೊಳ್ಳುವುದಿಲ್ಲವೆಂದೂ ಕಳ್ಳಂಗಡಿಯವನು ನಡೆದ ಸಂಗತಿಯೆಲ್ಲವನ್ನೂ ಹೇಳಿ ತಾನು ಹಿಡಿದಿದ್ದ ನೋಟಿನ ತುಂಡುಗಳನ್ನು ಗೌಡರ ವಶಕ್ಕೆ ಕೊಟ್ಟನು.

ಅವುಗಳನ್ನು ನೋಡಿದೊಡನೆಯೆ ಗೌಡರು “ಎಲ್ಲಿ ಸಿಕ್ಕಿತೋ ಈ ನೋಟು ನಿನಗೆ?” ಎಂದು ಓಬಯ್ಯನ ಕಡೆ ನೊಡಿದರು.

ತಾನು ಒಂದು ರಾತ್ರಿ ರಸ್ತೆಯಲ್ಲಿ ಬರುತ್ತಿದ್ದಾಗ ಭೂತರಾಯ ಕಾಣಿಸಿಕೊಂಡನೆಂದೂ, ತಾನು ಮೂರ್ಛೆಹೋದೆನೆಂದೂ, ಎಚ್ಚೆತ್ತು ಜೇಬಿಗೆ ಕೈಹಾಕಿಕೊಂಡಾಗ ಅದರಲ್ಲಿ ನೋಟಿನ ತುಂಡುಗಳಿದ್ದುವೆಂದೂ ಸ್ವಲ್ಪವೂ ಅಪ್ರತಿಭನಾಗದೆ ಓಬಯ್ಯ ಹೇಳಿಬಿಟ್ಟನು.

ಚಂದ್ರಯ್ಯಗೌಡರು ನೇರವಾಗಿ ತಮ್ಮ ಕೋಣೆಗೆ ಹೋಗಿ ಒಂದು ಕೋಟಿನ ಜೇಬಿಗೆ ಕೈಹಾಕಿದರು. ಅಲ್ಲಿ ನೋಟಿನ ತುಂಡುಗಳಿರಲಿಲ್ಲ. ಒಂದು ಕೈಬುಕ್ಕನ್ನು ಬಿಚ್ಚಿ ನೋಡುತ್ತಾರೆ: ತಮ್ಮ ಕೈಲಿದ್ದ ನೋಟಿನ ತುಂಡುಗಳ ನಂಬರುಗಳನ್ನೇ ಅಲ್ಲಿಯೂ ಬರೆದಿದ್ದಾರೆ!

ಹೆಂಡತಿಯನ್ನು ಕರೆದು ವಿಚಾರಿಸಿದರು. ಸುಬ್ಬಮ್ಮ ಅಳುತ್ತಾ ತನಗೇನೊಂದೂ ಗೊತ್ತಿಲ್ಲ ಎಂದಳು. ಮಗಳು ಪುಟ್ಟಮ್ಮನನ್ನು ಕೇಳಿದರು; ವಾಸುವನ್ನೂ ಕೇಳಿದರು. ಎಲ್ಲರೂ ತಮಗೆ ಗೊತ್ತಿಲ್ಲ, ತಮಗೆ ಗೊತ್ತಿಲ್ಲ, ಎಂದುಬಿಟ್ಟರು. ಹಾಗಾದರೆ, ತಾವು ಮಲಗುವ ಕೋಣೆಗೆ ಹೊರಗಿನವರಾರು ಬರಬೇಕು? ಕೋಟಿನಲ್ಲಿ ನೋಟಿದ್ದುದು ಓಬಯ್ಯನಿಗೆ ತಿಳಿಯುವುದಾದರೂ ಹೇಗೆ? ತಿಳಿದರೂ ಅವನು ಕದಿಯುವುದಾದರೂ ಹೇಗೆ? ಗೌಡರ ಗುಮಾನಿ ನಾಗಮ್ಮನವರ ಕಡೆ ತಿರುಗಿತು. ಆದರೆ ಅವರನ್ನು ಕೇಳುವುದೆಂತು? ಹೂವಯ್ಯ ಬೇರೆ ಮನೆಯಲ್ಲಿದ್ದಾನೆ!

ದೆಯ್ಯದ ಹರಕೆಯ ದಿನ ನೆರೆದಿದ್ದ ನಂಟರಿಷ್ಟರ ಮುಂದೆ ಗಲಾಟೆ ಮಾಡಬಾರದೆಂದು ಸುಮ್ಮನಾದರು. ಕಳ್ಳಂಗಡಿಯವನಿಗೆ ಇನ್ನೊಂದು ದಿನ ವಿಚಾರಣೆ ಮಾಡುತ್ತೇನೆಂದು ಸಮಾಧಾನ ಹೇಳಿದರು.