ಕಾಫಿ ಬೆಳೆಗಾರರು ಕನಲಿ ಹೋಗಿದ್ದಾರೆ. ಎಸ್ಟೇಟುಗಳಲ್ಲಿ ನಗೆ ಅಡಗಿದೆ. ಮನೆಗಳಲ್ಲಿ ಹೋಟೆಲುಗಳಲ್ಲಿ ಕುಳಿತು ಬಿಸಿಬಿಸಿಯಾದ ಕಾಫಿ ಹೀರುವ ಜನಕ್ಕೆ ಗೊತ್ತಿಲ್ಲದ ಸತ್ಯವೊಂದಿದೆ: ಕಾಫಿ ನಿಜಕ್ಕೂ ಈಗ ಬಿಸಿ ಮುಟ್ಟಿಸುತ್ತಿರುವುದು ಕಾಫಿ ಬೆಳೆಗಾರರಿಗೆ. ಐಷಾರಾಮಿಯ ಕಾಲ ಮುಗಿದು ಹೋಗಿ ಕಾಫಿ ಪ್ಲಾಂಟರುಗಳು ಕನಸಿನ ಕಪ್ಪು-ಬಸಿಗಳನ್ನು ಎತ್ತಿಡುವ ಕಾಲ ಬಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಾನಾ ಸಮಸ್ಯೆಗಳಿಂದ ಮದ್ಯಮವರ್ಗದ ಕಾಫಿ ಬೆಳೆಗಾರರು ತೂಗುಯ್ಯಲೆಯಲ್ಲಿದ್ದಾರೆ.

ಬ್ರೆಜಿಲ್ ಕಾಫಿ ಜಗತ್ತಿನ ಸರ್ವಶ್ರೇಷ್ಠ ಕಾಫಿ ಎನಿಸಿಕೊಂಡಿತ್ತು. ಇದ್ದಕ್ಕಿದ್ದಂತೆ ಅದರ ಗುಣಮಟ್ಟ ಹಾಳಾಗಿ ಕಾಫಿ ಕಹಿಯೆನಿಸತೊಡಗಿದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚರಿಯ ಹೊಗೆಯೆಬ್ಬಿಸಿದ್ದು ಭಾರತದ ಕಾಫಿ. ತುಂಬಾ ಒಳ್ಳೆಯ ಬೆಲೆಯೂ ಸಿಗತೊಡಗಿತ್ತು. ಅದೇ ಹೊತ್ತಿನಲ್ಲಿ ಏಲಕ್ಕಿಯೂ ರಾಜಬೆಳೆಯೆನಿಸಿತ್ತು. ಇಷ್ಟಕ್ಕೂ ಕಾಫಿ ಬೆಳೆಯಲು ಇದ್ದ ಶ್ರಮವಾದರೂ ಏನು? ಅಂದು ಕಾರ್ಮಿಕರ ಸಮಸ್ಯೆ ಇರಲಿಲ್ಲ. ಆಸೆಯಿಂದ ಆಕಾಶ ನೋಡಿದಾಗಲೆಲ್ಲ ಮಳೆಯಾಗುತ್ತಿತ್ತು. ನಿರೀಕ್ಷಿಸಿದ ಉತ್ಪಾದನೆಯಿತ್ತು. ಹೀಗಾಗಿ ಕಾಫಿ ಪ್ಲಾಂಟರುಗಳ ಬದುಕು ಮೂರಕ್ಕೆ ಆರಾಗಿ, ಆರು ಹನ್ನೆರಡಾಗಿ ಮೆರೆಯುತ್ತಿತ್ತು. ಆದರೆ ಈಗ ಕಾಫಿ ಕಪ್ಪು ಬೋರಲಾಗಿದೆ.

ಉದ್ದಿಮೆ ನಿಜ! ಆದರೆ?

ಕಾಫಿ ಬೆಳೆ ಮೂಲತಃ ಕೃಷಿ ಕಾಯಕವಾದರೂ ಸರ್ಕಾರ ಅದನ್ನು ಉದ್ದಿಮೆಯೆಂದು ಪರಿಗಣಿಸಿದೆ. ಹಾಗಂತ ಕೈಗಾರಿಕೆಗಳಿಗೆ ದೊರಕುವ ಯಾವ ಸವಲತ್ತನ್ನೂ ಕಾಫಿ ಉದ್ದಿಮೆಗೆ ದೊರಕಿಸಿಲ್ಲ. ವಿದೇಶಿ ವಿನಿಮಯ ಗಳಿಸುವ ಎಲ್ಲ ಉದ್ದಿಮೆಗಳಿಗೆ ಸರಕಾರ ಅನೇಕ ರಿಯಾಯಿತಿ ಮತ್ತು ಪ್ರೋತ್ಸಾಹಗಳನ್ನು ಒದಗಿಸುತ್ತದೆಯಾದರೂ ಪ್ರತಿವರ್ಷ ಮುನ್ನೂರು ಕೋಟಿ ರೂ. ವಿದೇಶಿ ವಿನಿಮಯ ಗಳಿಸುವ ಕಾಫಿ ಉದ್ಯಮಕ್ಕೆ ಸರಕಾರದಿಂದ ಯಾವುದೇ ತರಹದ ಪ್ರೋತ್ಸಾಹವಿಲ್ಲ. ರಿಯಾಯಿತಿಯ ಮಾತು ದೂರ. ಬೇಡ ಬಿಡಿ ಕಡೆಯಪಕ್ಷ ಉತ್ಪಾದನೆಯ ವೆಚ್ಚಕ್ಕೆ ತಕ್ಕ ಧಾರಣೆಯಾದರೂ ಬೇಡವೇ? ಇದು ಕಾಫಿ ಬೆಳೆಗಾರರು ಕೇಳುವ ಹತಾಶ ಪ್ರಶ್ನೆ. ಕಾಫಿ ಮಂಡಳಿಯ ಮೂಲಕ ಬೇಳೆಯ ಮಾರಾಟ ವ್ಯವಸ್ಥೆ ಮಾಡಿಕೊಂಡಿರುವ ಬೆಳೆಗಾರರು ತಮ್ಮ ಬೆಳೆ ಮಾರಾಟವಾಗಿ, ಅದರ ಹಣ ಕೈಗೆ ಸಿಗಲು ಎರಡರಿಂದ ಮೂರು ವರ್ಷ ಕಾಯಬೇಕಾಗಿತ್ತು. ತಮ್ಮ ಉತ್ಪಾದನೆಯನ್ನು ಸಂಸ್ಕರಣಾ ಕೇಂದ್ರಗಳಿಗೆ ಕೊಡುವ ಬೆಳೆಗಾರರಿಗೆ ಒಟ್ಟು ಉತ್ಪನ್ನದ ಅಂದಾಜು ಬೆಳೆಯ ಶೇಕಡಾ ೨೦ರಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲಾಗುತಿತ್ತು. ಉಳಿದ ಶೇಕಡಾ ನಲವತ್ತರಷ್ಟು ಹಣವನ್ನು ಕಾಫಿ ಮಂಡಳಿಯು ರಪ್ತು ಮಾಡಿದ ಉತ್ಪನ್ನದ ಲೆಕ್ಕಾಚಾರ ಮಾಡಿ ಬೆಳೆಗಾರರಿಗೆ ಮೂರು ನಾಲ್ಕು ಕಂತುಗಳಲ್ಲಿ, ಬೋನಸ್ ರೂಪದಲ್ಲಿ ಕೊಡುವ ಪರಿಪಾಠವಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂ ಕಾಫಿಗೆ ಎಪ್ಪತ್ತರಿಂದ ಎಂಬತ್ತು ರೂಪಾಯಿ ದೊರಕಿದರೂ, ಬೆಳೆಗಾರನ ಕೈಗೆ ಬರುತ್ತಿದ್ದುದು ಹದಿನೆಂಟೋ ಇಪ್ಪತ್ತೋ ರೂಪಾಯಿಗಳು ಮಾತ್ರ.

ಕೈಗೆ ಸಿಗೋದು ಕಡಿಮೆ !

ರಪ್ತು ಸುಂಕ, ಮಾರಾಟ ತೆರಿಗೆ, ಖರೀದಿ ತೆರಿಗೆ, ಸಂಸ್ಕರಣಾ ವೆಚ್ಚ ಕಾಫಿ ಮಂಡಳಿಯ ಸಿಬ್ಬಂದಿ ವೆಚ್ಚ, ಪ್ರಚಾರ ಹಾಗೂ ಮಾರಾಟದ ವೆಚ್ಚಗಳು ಎಲ್ಲವೂ ಸೇರಿ-ಸೋರಿ ಕಾಫಿ ಬೆಳೆಗಾರನ ಕೈಗೆ ಬರುತ್ತಿದ್ದುದು ಶೇಕಡಾ      ವಾರು ಕಡಿಮೆ. ಅದಾದರೂ ಬರುತ್ತಿದ್ದುದು ಮೂರುವರ್ಷಗಳ ನಂತರ ಯಾವ ಸಂಪತ್ತಿಗೆ ಆತ ಬೀಗ ಬೇಕಿತ್ತು?

ಒಂದರ್ಥದಲ್ಲಿ ಕಾಫಿ ಬೆಳೆ ಜೂಜಿನಂತಹದು. ಕಾಫಿ ಮೊಗ್ಗು ಹೂವಾಗಿ ಅರಳುವ ದಿನಗಳಲ್ಲಿ ಬೆಳೆಗಾರರು ಮಳೆಗಾಗಿ ಆಕಾಶದತ್ತ ಕಣ್ಣು ನೆಟ್ಟು ಕೂತಿರುತ್ತಾರೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರ ಅಥವಾ ಮಾಚ್  ತಿಂಗಳ ಮೊದಲವಾರದಲ್ಲಿ ಆಕಾಶಗಂಗೆ ಧರೆಗಿಳಿಯಬೇಕು. ಆಗ ಮಾತ್ರ ವರ್ಷದ ಫಸಲು ಉತ್ತಮವಾಗಿರುತ್ತದೆಂಬ ವಿಶ್ವಾಸ ಮಾಡಲು ಸಾಧ್ಯ. ಆಕಸ್ಮಾತ್ ಮಳೆರಾಯ ಮುನಿದರೆ ಇಡೀ ವರ್ಷದ ಫಸಲು ದುಷ್ಪರಿಣಾಮ ಅನುಭವಿಸುತ್ತದೆ. ಇತ್ತೀಚೆಗೆ  ಮಳೆರಾಯನ ರಿವಾಜೇ ಬದಲಾಗಿದೆ. ಸಕಾಲದಲ್ಲಿ ಮಳೆಯಾಗುವುದಿಲ್ಲ. ಉತ್ಪಾದನೆ ಕಡಿಮೆಯಾಗುತ್ತ ನಡೆದಿದೆ. ಅಷ್ಟೋ ಇಷ್ಟೋ ದುಡ್ಡಿದ್ದವರು, ದೊಡ್ಡ ಭೆಳೆಗಾರರು ತುಂತುರು ನೀರಾವರಿ ವ್ಯವಸ್ಥೆ ಮಾಡಿ ಕೊಂಡು ಉತ್ಪಾದನೆ ಕಡಿಮೆಯಾಗದಂತೆ ನೋಡಿ ಕೊಳ್ಳುತ್ತಿದ್ದಾರೆ. ಈ ಸೌಭಾಗ್ಯ ಸಣ್ಣಪುಟ್ಟ ಬೆಳೆಗಾರರಿಗೆಲ್ಲಿಯದು? ಮಳೆರಾಯನನ್ನು ನಂಬಿ ಕೂತು ಕೈಸುಟ್ಟುಕೊಳ್ಳುವುದೇ ಬದುಕಾಗಿದೆ. ಇದು ಪ್ರತಿ ವರ್ಷದ ಗೋಳು!

ಕೈ ತುಂಬ ನಷ್ಟ !

ಕಾಫಿ ಬೆಳೆ ಇತರ ವಾಣಿಜ್ಯ ಬೆಳೆಗಳಂತೆಯೇ ಕ್ರಿಮಿನಾಶಕ. ರಸಗೊಬ್ಬರ ಮತ್ತು ಮೈಲುತುತ್ತ ಮುಂತಾದವುಗಳ ಮೇಲೆ ಅವಲಭಿತವಾದದ್ದು. ರಸಗೊಬ್ಬರಗಳ ಕಥೆಯಂತೂ ದೇಶಕ್ಕೇ ಗೊತ್ತಿದೆ. ಜೊತೆಗೆ ಕ್ರಮಿನಾಶಕಗಳ ಧಾರಣೆ ಗಗನಕ್ಕೇರಿದೆ. ಅಷ್ಟೋಂದು ಹಣ ಸುರಿದುಕೊಳ್ಳಲಾಗದೆ ಅವುಗಳ ಬಳಕ್ಕೆಯನ್ನೇ ಕಡಿಮೆ ಮಾಡಲಾಗಿದೆ. ಸಹಜವಾಗಿಯೇ ಗೊಬ್ಬರ, ಕ್ರಿಮಿನಾಶಕಗಳ ಕೊರತೆಯಿಂದಾಗಿ ಕಾಫಿ ತೋಟಗಳನ್ನು ಸೊರಗತೊಡಗಿವೆ. ಹೀಗಾಗಿ ವರ್ಷಾಂತ್ಯದಲ್ಲಿ ಕಾಫಿ ಬೆಳೆಗಾರ ಅನುಭವಿಸುವುದು ಕೈತುಂಬ ನಷ್ಟ: ಅಷ್ಟೇ ಇದಲ್ಲದೆ ಕಾರ್ಮಿಕರ ವೇತನ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗದೆ ಚಿಕ್ಕಪುಟ್ಟ ಬೆಳೆಗಾರರು ಕಂಗಾಲಾಗಿದ್ದಾರೆ. ಖರ್ಚು ಬೆಳೆದಂತೆಲ್ಲ ಕಾಫಿ ತೋಟಗಳ ನಿರ್ವಹಣೆ ದುಸ್ಸಾಧ್ಯವಾಗತೊಡಗಿದೆ.

ಈ ದು:ಸ್ಥಿತಿಗೆ ಸ್ವಯಂಕೃತಾಪರಾಧವೂ ಕಾರಣವೇ  ಎಂಬುದನ್ನು ಹೇಳಲೇ ಬೇಕು. ಕೆಲವು ಸಂದರ್ಭಗಳಲ್ಲಿ ಕಾಫಿ ಬೆಳೆಗಾರರು ತೋರಿದ ಉದಾಸೀನ ಭಾವ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.ಹಿಂದೆ ಕಾನೂನು ಪ್ರಕಾರ ತಾವು ಬೆಳೆದ ಕಾಫಿ ಬೆಳೆಯನ್ನು ಕುಯ್ದು, ತಾವೇ ಸಂಸ್ಕರಿಸಿ ಕಾಫಿ ಮಂಡಳಿಯ ಅಧಿಕೃತ ಕೇಂದ್ರಗಳಿಗೆ ಕೊಡಬೇಕಾದದ್ದು ಬೆಳೆಗಾರರ ಕರ್ತವ್ಯವಾಗಿತ್ತು. ಅಂತೆಯೇ ತಾವು ಬೆಳೆದ ಬೆಳೆಯ ಗುಣಮಟ್ಟ, ಆಂತರಿಕ ಮತ್ತು  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಕ್ಕೆ ಸಿಗಬಹುದಾದ ಧಾರಣೆ ಏನೆಂಬುದನ್ನು ತಿಳಿದುಕೊಳ್ಳುವುದೂ ಬೆಳೆಗಾರರ ಜವಾಬ್ದಾರಿಯಾಗಿತ್ತು. ಇಂತಹ ಕುತೂಹಲ,ಶ್ರದ್ಧೆ ಬೆಳೆಗರರಿಗೆ ಇರಲಿಲ್ಲ. ಇಂಥವರಿಗೆ ತಿಳಿಹೇಳುವ ಜವಾಬ್ದಾರಿಯನ್ನು ಕಾಫಿ ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಅವತ್ತು ತನಗಾಗುತ್ತಿರುವ ಅನ್ಯಾಯ, ಬೆಲೆ ಏರಿಕೆ, ಕಾಫಿ ಮಂಡಳಿಯ ಅದಕ್ಷತೆ, ಕಾರ್ಮಿಕರ ವೇತನ ಹೆಚ್ಚಳ, ಸಿಗದ ಧಾರಣೆ ಮುಂತಾದ ಸಮಸ್ಯೆಗಳ ವಿರುದ್ದ ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯ ಸ್ಥಿತಿ ಕಾಫಿ ಬೆಳೆಗಾರರಿಗೆ ಬಂದೊದಗಿತ್ತು. ಒಂದು ವರ್ಗದ ಬೆಳೆಗಾರರಂತೂ ಕಷ್ಟಕ್ಕೆ ಆಗದ, ಸುಖವನ್ನು ಕಸಿದುಕೊಳ್ಳುವ ಕಾಫಿ ಮಂಡಳಿಯೇ ನಮಗೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ನಂತರದ ದಿನಗಳಲ್ಲಿ ಕಾಫಿ ಮಂಡಳಿ ರದ್ದಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬಂತು.

ಚಳವಳಿಗಳು

ಭಾರತದ ಕಾಫಿಯ ಕೀರ್ತಿ ಹೆಚ್ಚಿಸಿದ ಹೆಗ್ಗಳಿಕೆ ಕರ್ನಾಟಕದ್ದು. ನಮ್ಮ ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಒಂದು ಕಾಲಕ್ಕೆ ಸಮೃದ್ಧ ಕಾಫಿ ಕಣಜಗಳು. ಅನಿರೀಕ್ಷಿತ ಸಮಸ್ಯೆಗಳು ಹುಟ್ಟಿಕೊಂಡಾಗ ಅವುಗಳ ವಿರುದ್ಧ ಮೊದಲಬಾರಿಗೆ ದನಿಯೆತ್ತಿದವರು ಹಾಸನ ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರು. ಆದರಲ್ಲೂ ಕಾಫಿ ಮಂಡಳಿಯ ಬೇಜವಾಬ್ದಾರಿಯುತ ನಡವಳಿಕೆಯನ್ನು ಅವರು ಉಗ್ರವಾಗಿ ಪ್ರತಿಭಟಿಸಿದರು. ಇವರ ಹೋರಾಟಕ್ಕೊಂದುನಿರ್ದಿಷ್ಟರೂಪ ಬಂದದ್ದು ದಶಕದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಸ್ಥಾಪನೆಯಾದಾಗ, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಎಚ್ಚೆತ್ತ ನಂತರವಂತೂ ಹೋರಾಟಕ್ಕೆ ತೀವ್ರ ಸ್ವರೂಪ ಸಿಕ್ಕಿತು. ಕೊಡಗು ಕಾಫಿ ಬೆಳೆಗಾರರ ಹೋರಾಟ ಸಮಿತಿ ೧೯೯೧ ರಲ್ಲಿ ಕರೆಯೊಂದನ್ನು ನೀಡಿ ಹದಿನೈದು ದಿನಗಳ ಕಾಲ ಕಾಫಿ ಸಾಗಣೆಯನ್ನು ಸಂಪೂರ್ಣವಾಗಿ ತಡಹಿಡಿದಿತ್ತು. ಹೋರಾಟ ವಿಕೋಪಕ್ಕೆ ಹೋಗಲಿದೆಯೆನ್ನಿಸಿದಾಗ ಬೆಳೆಗಾರರ ಕಣ್ಣೊರೆಸುವ ರೀತಿಯಲ್ಲಿ ಕೆಲವು ಚಿಕ್ಕಪುಟ್ಟ ಬೇಡಿಕೆಗಳನ್ನು ಈಡೇರಿಸಲಾಯಿತು. ಉತ್ವಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಪ್ರತೀವರ್ಷ ನಿರ್ಧಾರ ಮಾಡಿ, ಅದಕ್ಕೆ ತಕ್ಕ ಬೆಲೆಯನ್ನು ಒಂದೇ ಕಂತಿನಲ್ಲಿ ಪಾವತಿ ಮಾಡ ಬೇಕು ಎಂಬುದು ಅತ್ಯಂತ ದೊಡ್ಡ ಹಾಗೂ ಮಹತ್ವದ ಬೇಡಿಕೆ ಬೆಳೆಗಾರರದ್ದಾಗಿತ್ತು.ನಂತರದ ವರ್ಷಗಳಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬಂತು.

ಮುಕ್ತ ಆರ್ಥಿಕ ನೀತಿ ಜಾರಿಯಿಂದ ಕಾಫಿಗೆ ಮತ್ತೆ ಉತ್ತಮ ದರ ದೊರೆಯುತ್ತಿದೆ. ಮುಂಜಾನೆಗೆ ಮುದ ನೀಡುವ ಕಾಫಿ ಉತ್ಪಾದಿಸುವ ಬೆಳೆಗಾರ ಈಗ ಬದಲಾಗಿದ್ದಾನೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಕಾಫಿ ಬೆಳೆಗಾರ ಕಾಫಿ ಮಂಡಳಿಯಿಂದ ಮುಕ್ತನಾಗಿ ಬೆಳೆಗಾರನ ಮುಂದೆ ಹೊಸ ವಿಶ್ವವೇ ತೆರೆದುಕೊಂಡಿದೆ. ಆದರೆ ಜೊತೆಜೊತೆಗೆ ಕಾಪಿಯ ಉತ್ಪಾದನೆಯು ಕುಂಠಿತಗೊಂಡಿರುವುದು ಮಧ್ಯಮ ಬೆಳೆಗಾರರಿಗೆ ಸಂಕಷ್ಟದ ದಿನಗಳನ್ನು ತಂದಿದೆ. ಹವಾಮಾನದಲ್ಲಿ ಏರುಪೇರು. ತೋಟದ ಕಾರ್ಮಿಕರಿಗಾಗಿ ಪರದಾಡಬೇಕಾದ ಪರಿಸ್ಥಿತಿ. ಏರುತ್ತಿರುವ ಉತ್ಪಾದನಾ ವೆಚ್ಚ. ಮುಂತಾದ ಕಾರಣಗಳಿಂದಾಗಿ ಕಾಫಿಯ ಬೆಲೆ ಏರಿದರೂ ಬೆಳೆಗಾರರಲ್ಲಿ ನಗು ಕಾಣಿಸುತ್ತಿಲ್ಲ. ಕಾಫಿಯ ದರ ತೃಪ್ತಿದಾಯಕವಾಗಿದ್ದರೂ ಏರುತ್ತಿರುವ ನಿರ್ವಹಣಾ ವೆಚ್ಚ ನಿರ್ವಹಣೆಗಿರುವ ಪರಿಪಾಟಲು ಕಾಫಿ ಉದ್ಯಮದ ಸಮಸ್ಯೆಗಳ ಸರಮಾಲೆಯಾಗಿದೆ. ಪ್ರಮುಖ ಕಾಫಿ ಬೆಳೆಗಾರ ದೇಶಗಳ ಕಾಫಿ ಬೆಳೆಗಾರರು ರೋಬಸ್ಟಾ ಮತ್ತು ಅರೆಬಿಕಾ ತಳಿಗಳಿಗೆ ಹೆಚ್ಚು ಒತ್ತು ನೀಡುತ್ತವೆ. ಭಾರತದಲ್ಲಿ ಈ ಎರಡು ತಳಿಗಳನ್ನು ಉತ್ಪಾದಿಸಲಾಗುತ್ತಿದೆ. ವಿಶ್ವದ ಅತ್ಯಧಿಕ ಕಾಫಿ ಉತ್ಪಾದಿಸುವ ಬ್ರೆಜಿಲ್ ಮತ್ತು ಕೊಲಂಬಿಯ ಅರೆಬಿಕಾ ಕಾಫಿಯನ್ನು ಉತ್ಪಾದಿಸಿದರೆ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ರೊಬಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತೋಟದ ನಿರ್ವಹಣೆಗಾಗಿ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ತೋಟದ ಕೆಲಸಗಳನ್ನು ಪೂರೈಸಿಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಕಾಫಿ ತೋಟಗಳಲ್ಲಿ ಈ ಮೊದಲಿದ್ದಂತೆ ಅಚ್ಚುಕಟ್ಟಾದ ನಿರ್ವಹಣೆ ಕಂಡುಬರುತ್ತಿಲ್ಲ. ಹವಾಮಾನದ ಏರಿಳಿತದೊಂದಿಗೆ ನಿರ್ವಹಣೆಯ ಏರಿಳಿತವೂ ತಳಕು ಹಾಕಿಕೊಂಡು ಕಾಫಿ ಉದ್ಯಮ ಬೆಳೆಗಾರರಿಗೆ ತನ್ನದೇ ಆದ ಬಿಸಿಯನ್ನು ಮುಟ್ಟಿಸುತ್ತಿದೆ.