‘ಕಾಮಗೇತಿ’ ಎಂಬುದು ಶಿಷ್ಯರೂಪ ಪಡೆದ ಮ್ಯಾಸನಾಯಕರ ಒಂದು ಬೆಡಗು. ಇದರ ಎರಡು ಪಂಗಡಗಳಾದ ಮಲ್ಲನಾಯಕ ಮತ್ತು ಮಂದಲಾರುಗುಂಪಿನಲ್ಲಿ ಕಾಮಗೇತಲಾರು ಮಂದಲಾರಿಗೆ ಸೇರಿದ ಇದನ್ನು ಬೇಡ – ನಾಯಕರ ಬೆಡಗು. ಇದನ್ನು ವಂಶ, ಗೋತ್ರ, ಜನ, ಪಂಗಡ, ವರ್ಗ, ಬುಡಕಟ್ಟು, ಕುಲ ಎಂದೆಲ್ಲ ಇದಕ್ಕೆ ಕರೆಯಲಾಗಿದೆ. ಇವರನ್ನಿಲ್ಲಿ ಮುಖ್ಯವಾಗಿ ಎರಡು ನೆಲೆಗಳಲ್ಲಿ ಅಧ್ಯಯನ ಮಾಡಲಾಗಿದೆ. ಒಂದು, ಬುಡಕಟ್ಟಿನ ಹಿನ್ನೆಲೆಯಲ್ಲಿ ನಾಯಕರ ಸಾಂಸ್ಕೃತಿಕ ಚರಿತ್ರೆಯನ್ನು ಹಾಗೂ ಮೌಖಿಕ ನೆಲೆಯಲ್ಲಿ ಕಾಮಗೇತಿಯರ ಪರಂಪರೆ ಕುರಿತದ್ದಾಗಿದೆ. ಎರಡು, ಕಾಮಗೇತಿ ವಂಶದವರ ರಾಜಕೀಯ ಚರಿತ್ರೆಯನ್ನು ಸೂಕ್ಷ್ಮ ಚಾರಿತ್ರಿಕವಾಗಿ ವಿಶ್ಲೇಷಿಸಲಾಗಿದೆ.

ಇಂದಿನ ನಾಯಕ ಸಮುದಾಯವನ್ನು ಅಧ್ಯಯನ ಮಾಡುವಾಗ ಅದನ್ನು ಸಮುದಾಯ, ಬುಡಕಟ್ಟು, ಜಾತಿ ಎಂದೆಲ್ಲ ಕರೆದರೂ, ಇಲ್ಲಿ ಮುಖ್ಯವಾಗಿ ಆದಿವಾಸಿ, ಗಿರಿಜನ, ಅಲೆಮಾರಿಗಳು, ಬುಡಕಟ್ಟು ಜನರಾದ ಬೇಡರು, ನಾಯಕ, ವಾಲ್ಮೀಕಿ, ತಳವಾರ ಎಂದೆಲ್ಲ ಗುರುತಿಸಿಕೊಂಡವರನ್ನು ಅವಲೋಕಿಸಿರುವುದು ಸ್ಪಷ್ಟ ಹಾಗೂ ಸೂಕ್ತ.

ಈಗಿನ ಬೇಡರಲ್ಲಿ ನೂರಾರು ಬೆಡಗುಗಳಿದ್ದು, ಕಾಡು ಮತ್ತು ನಾಡಿನ ಜೀವನ ನಡಸುವವರು ಸಾಂಸ್ಕೃತಿಕವಾಗಿ ಇಲ್ಲಿ ಪ್ರಸ್ತುತವಾಗುತ್ತಾರೆ. ಇಂದಿಗೂ ಅಡವಿಯಲ್ಲಿ ಬೇಡೆ, ಪಶುಪಾಲನೆ ಮತ್ತು ಕೃಷಿ ಮೂಲಕ ಜೀವಿಸುವುದು ಮ್ಯಾಸಬೇಡರಲ್ಲಿ ಕಾಣಲಾಗುವುದು. ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಇವರು ಆದಿಯಲ್ಲಿ ಒಂದೇ ಆಗಿದ್ದರೂ ಕ್ರಮೇಣ ಛಿದ್ರಗೊಂಡು ಬೇರೆ ಬೇರೆ ಆಗಿರುವುದು ಕಂಡುಬರುತ್ತದೆ. ಊರು ಮತ್ತು ಕಾಡಿನ ನಡುವೆ ವೈರುಧ್ಯಗಳಿವೆ. ಇಂದಿನ ನಾಯಕರು ಇತರ ಎಲ್ಲ ನಾಗರಿಕರಂತ ಜೀವಿಸಿದರೆ, ಮ್ಯಾಸಬೇಡರು ಇನ್ನು ಗಿರಿಜನ, ಆದಿವಾಸಿರಾಗಿಯೇ ಉಳಿದಿದ್ದಾರೆ. ಶಿಕ್ಷಣ, ಸಾಮಾಜಿಕ – ರಾಜಕೀಯ ಸ್ಥಾನಮಾನಗಳಿಂದ ಇವರು ತಮಗೆ ತಾವೇ ಬಹುದೂರ ಉಳಿದಿದ್ದಾರೆ. ನಾಗರಿಕತೆ, ಹೊಸತನ ಎನ್ನುವುದು ಇವರ ದೃಷ್ಟಿಯಲ್ಲಿ ಅನಿಷ್ಟ ಮತ್ತು ಮರೀಚಿಕೆ. ಪ್ರಾಚೀನ ಸಂಸ್ಕೃತಿ – ಜನಜೀವನ, ರೂಢಿ, ಸಂಪ್ರದಾಯಗಳನ್ನು ಪ್ರೀತಿಸುತ್ತಾರೆ. ಆದರೂ ಇವರಲ್ಲಿ ಕೆಲವರು ಧೈರ್ಯ – ಪರಾಕ್ರಮಗಳಿಂದ ಸೈನಿಕ, ತಳವಾರ, ದಳವಾಯಿ, ಪಾಳೆಯಗಾರ, ದೊರೆ, ನಾಯಕ, ಇತರ ಬಿರುದು, ಪಟ್ಟ, ಹುದ್ದೆ – ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿರುವುದು ಗಮನಾರ್ಹ.

ಈ ರೀತಿಯಲ್ಲಿ ಬುಡಕಟ್ಟಿನ ನೆಲೆಯಿಂದ ನಾಗರೀಕತೆಯ ಮೆಟ್ಟಿಲೇರಲು ಇವರು ಕ್ರಮಿಸಿದ ಹಾದಿ ಕುತೂಹಲಕಾರಿ. ಇವರಲ್ಲಿ ಕೆಲವರು (ಕಾಮಗೆತಲಾರು) ತಮ್ಮ ಬುಡಕಟ್ಟು ಸಂಸ್ಕೃತಿಯನ್ನು ಮೊದಲು ಗಟ್ಟಿಗೊಳಿಸಿಕೊಳ್ಳಲು ಕಟ್ಟೆಮನೆ, ಗುಡಿಕಟ್ಟುಗಳನ್ನು ಸ್ಥಾಪಿಸುತ್ತಾರೆ. ಜಾತಿಯ ಮೂಲಕ ಎತ್ತರಕ್ಕೆ ಬೆಳೆದ ಹಲವು ಜನ ತಮ್ಮ ಅಸಮಾನ್ಯ ಸಾಧನೆಯಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಸ್ಮರಣೀಯ. ಅಂಥ ಸಾಧನೆಗಳನ್ನು ಚಿತ್ರದುರ್ಗ – ದಾವಣಗೆರೆ ಮತ್ತು ಬಳ್ಳಾರಿ ಇನ್ನು ಕೆಲವು ಜಿಲ್ಲೆಗಳಲ್ಲಿನ ನಾಯಕರು ಮಾಡಿರುವುದು ಈ ನಾಗರಿಕ ಜಗತ್ತಿಗೆ ತಿಳಿದಿಲ್ಲ. ಈ ಪರಿಸರದಲ್ಲಿ ನೆಲಸಿರುವ ನಾಯಕರು ತಮ್ಮ ರೂಢಿ – ಸಂಪ್ರದಾಯಕ್ಕೆ ಕೊಟ್ಟ ಮಹತ್ವವನ್ನು ರಾಜ್ಯಾಳ್ವಿಕೆಗೂ ಕೊಟ್ಟಿದ್ದು ಕಡಿಮೆ. ಹೀಗಾಗಿ ಒಂದು ಕಡೆ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಭುತ್ವ ಪಡೆದರೆ ಮತ್ತೊಂದೆಡೆ ಸ್ಥೈರ್ಯ, ಚಾಣಾಕ್ಷತೆಯಿಂದ ರಾಜ್ಯಾಳ್ವಿಕೆ ಮಾಡಿರುವುದು ಗಮನಾರ್ಹ. ಹೀಗೆ ಇವರ ಸಾಹಸಗಾಥೆಯನ್ನು ಐತಿಹಾಸಿಕ ದೃಷ್ಟಿಕೋನದಿಂದ ತಿಳಿಸಲಾಗಿದೆ.

ಕಾಮಗೇತಿ ಬೆಡಗಿನ ವ್ಯಕ್ತಿಗೆ ‘ಕಸ್ತೂರಿ ಕಾಮಗೇತಿ’ ಎಂದು ಸಂಬೋಧಿಸಲಾಗಿದೆ. ಇಲ್ಲಿ ಕಸ್ತೂರಿ ಎಂದರೆ ನಿಖರವಾದ ಅರ್ಥಗೊತ್ತಿಲ್ಲ. ಆದರೂ ಕಸ್ತೂರಿ ಮೃಗ ಬೆವರನ್ನು ಮರಕ್ಕೆ ಉಜ್ಜುವುದನ್ನು ಸಂಗ್ರಹಿಸುವ ಪರಿಮಳಕ್ಕೆ, ಸುವಾಸನೆಗೆ ಕಸ್ತೂರಿ ಮೃಗದ ನಾಬಿಯಲ್ಲಿ ಕಸ್ತೂರಿ ಇರುತ್ತದೆ ಎನ್ನಲಾಗುವುದು.

ಇಲ್ಲಿ ಕಾಮಗೇತಿ ವಂಶದವರು ಇತರ ಬೆಡಗಿನವರಿಗಿಂತ ಭಿನ್ನವೇನು ಅಲ್ಲ. ಆದರೂ ಇವರ ಕೊಡುಗೆ – ಕಾಣಿಕೆ ಎಲ್ಲಾ ಕಡೆ ಇರುವುದು ಶ್ಲಾಘನೀಯ. ಆನೆಗೊಂದಿ ನರಕದ ಕೋಟೆಯಿಂದ ೧೨ ಪೆಟ್ಟಿಗೆ ದೇವರುಗಳನ್ನು ತಂದು ಮ್ಯಾಸ ಮಂಡಲಿಗೆ ಕೊಟ್ಟ ಕೀರ್ತಿ ಕೊಡಗಲು ಬೊಮ್ಮನಿಗೆ ಸಲ್ಲುಸುವುದು. ಕುಲ – ಗೋತ್ರಗಳ ನಿರ್ಮಾಣ, ದೇವರುಗಳ ಪೂಜಾರಿಕೆ; ಮದುವೆ ಸಂಪ್ರದಾಯ ಹೀಗೆ ಅಧಿಕಾರ – ಹಕ್ಕುಗಳಿಗಾಗಿ ತಮ್ಮ ತಮ್ಮಲ್ಲಿ ಸಂಘರ್ಷ ಬೇಡವೆಂದು ಜಾತಿ ಸಂವಿಧಾನವನ್ನು ಕಟ್ಟೆಮನೆಹಾಗಿಸಿಕೊಂಡಿದ್ದಾರೆ. ಹೀಗೆ ಕಟ್ಟೆಮನೆಯ ಮೂಲಕ ಇಡೀ ಬುಡಕಟ್ಟನ್ನು ನಿಯಂತ್ರಿಸುವ ಶಕ್ತಿ ಅದರ ನಾಯಕನಿಗಿತ್ತು. ಕಟ್ಟೆಮನೆ ಸ್ಥಾಪಿಸಿದ್ದು, ಪೂಜಾರಿಕೆ ಹಕ್ಕು ಪಡೆದಿದ್ದು ಮತ್ತು ಮದುವೆಯಲ್ಲಿ ವೀಳ್ಯೆ ಹಿಡಿಯುವ ಅಧಿಕಾರ ಇದ್ದದ್ದು ಈ ಕಾಮಗೇತಿಯವರಿಗೆ. ಇವರು ರಾಜಾ ದೊಡ್ಡ ಮದಕರಿ ನಾಯಕನ ಕಾಲಕ್ಕೆ ಚಳ್ಳಕೆರೆ ಹತ್ತಿರ ದೊಡ್ಡೇರಿಯಲ್ಲಿ ಕಾಟಪ್ಪ ದೇವರನ್ನು ಪ್ರತಿಷ್ಠಾಪಿಸಿಕೊಂಡು ನೆಲೆಸುತ್ತಾರೆ. ನಂತರ ರುದ್ರಮ್ಮನಹಳ್ಳಿ ನಲುಜೆರುವಯ್ಯನನ್ನು ದೇವರಾಗಿ ಮಾಡಿಕೊಂಡಿದ್ದಾರೆ. ಮೊದಲು ಓರುಗಲ್ಲು ಪಟ್ಟಣದಲ್ಲಿ ಇವರು (ಚಳ್ಳಕೆರೆ), ನಂತರ ಕಾಮಗೇತನಹಳ್ಳಿ ಕಟ್ಟೆಮನೆ ನಿರ್ಮಿಸಿ, ಮ್ಯಾಸಮಂಡಳಿಗೆ ಪೂಜಾರಿಯಾಗುವ ಹಕ್ಕನ್ನು ಕಾಮಗೇತ್ಲಾರು ಪಡೆದಿರುತ್ತಾರೆ. ಅದೇ ರೀತಿ ಚಿತ್ರದುರ್ಗ, ನಾಯಕನಹಟ್ಟಿ, ಮೊಳಕಾಲ್ಮೂರು ಮೊದಲಾದ ಕಡೆ ಪಾಳೆಯಗಾರರಾಗಿ ಕಾಮಗೇತಿಯರು ರಾಜ್ಯಾಳ್ವಿಕೆ ಮಾಡಿದ್ದು ಗಮನಾರ್ಹ. ಇವರಲ್ಲಿ ಪುರಾಣ ಪುರುಷರು, ಚಾರಿತ್ರಿಕ ಪುರುಷರು ಇರುವಂತೆ ಪವಾಡ ಪುರುಷರು, ಸಾಧನೀಯ ವ್ಯಕ್ತಿಗಳು ಕಂಡುಬರುತ್ತಾರೆ. ಆ ಬಗ್ಗೆ ಸ್ಥಳ, ವ್ಯಕ್ತಿ, ಘಟನೆ, ಕಾಲ ಹೀಗೆ ಎಲ್ಲವನ್ನೂ ಈ ಹೊತ್ತಿಗೆಯಲ್ಲಿ ಪರಿಚಯಿಸಲಾಗಿದೆ.

ಕಾಮಗೇತ್ಲಾರು ಹಾಗೂ ಕಾಮಗೇತಿ ವಂಶಜರ ಬಗೆಗೆ ಇದೊಂದು ಚಿಕ್ಕ ಪ್ರಯತ್ನದ ಕೈಪಿಡಿ ಅಷ್ಟೇ. ಆಸಕ್ತರು ಇನ್ನೂ ಈ ಬಗ್ಗೆ ಅಧ್ಯಯನ ಮಾಡಬಹುದು. ಅಲ್ಪ ಕಾಲದಲ್ಲಿ ಇಂಥ ವಿಷಯ ಕುರಿತು ಸಂಶೋಧನೆ ಮತ್ತು ಅಧ್ಯಯನ ಮಾಡುವಾಗ ಚರಿತ್ರೆ ವಿದ್ಯಾರ್ಥಿಯಾದ ನನಗೆ ಸಹಜವಾಗಿ ಇದನ್ನು ಚರಿತ್ರೆ ಅಧ್ಯಯನ ವಿಧಾನದಿಂದಲೇ ನಿರೂಪಿಸಲು ಪ್ರಯತ್ನಿಸಲಾಗಿದೆ. ಇದಕ್ಕೆ ಆಕರಗಳಾಗಿ ಪ್ರಕಟಗೊಂಡ ಕೃತಿ, ಲೇಖನಗಳನ್ನು ಬಳಸಿಕೊಳ್ಳಲಾಗಿದೆ. ಬಹುಪಾಲು ಮಾಹಿತಿ ಕ್ಷೇತ್ರಕಾರ್ಯದಿಂದ ಕೂಡಿದೆ. ವಿಷಯದ ವ್ಯಾಪ್ತಿ ಬಹುಪಾಲು ಮಧ್ಯಕಾಲೀನ ಮತ್ತು ಆಧುನಿಕ ಕಾಲಘಟ್ಟಕ್ಕೆ ಸೀಮಿತವಾಗಿದ್ದರೂ, ಪ್ರಾಸಂಗಿಕವಾಗಿ ಎಲ್ಲ ಅವಧಿಯ ವಿವರಗಳನ್ನು ಅವಲೋಕಿಸಲಾಗಿದೆ. ಅನುಕೂಲಕ್ಕೆ ತಕ್ಕಂತೆ ಉಲ್ಲೇಖ, ಅಡಿಟಿಪ್ಪಣಿ, ಕೊನೆಟಿಪ್ಪಣಿ, ಗ್ರಂಥ ಋಣವನ್ನು ಕೊಡಲಾಗಿದೆ.