ಭಾರತವು ವಿವಿಧ ಭಾಷೆ, ಧರ್ಮ, ಸಂಸ್ಕೃತಿ, ಜನಾಂಗ, ಆಚಾರ – ವಿಚಾರ, ಸಂಪ್ರದಾಯಗಳನ್ನೊಳಗೊಂಡ ವೈವಿಧ್ಯಮಯ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥಾ ದೇಶದಲ್ಲಿಂದು ಸಹಸ್ರಾರು ಬುಡಕಟ್ಟುಗಳಿರುವುದು ಗಮನಾರ್ಹ. ಅವುಗಳಲ್ಲಿ ಮುಂಡಾ, ಭಿಲ್, ರಾಮೋಶಿ, ವೇದನ್, ಬೋಯಾ, ಬೇಡ, ವಾಲ್ಮೀಕಿ, ಪುಲಿಂದ, ನಿಷಾದ, ಶಿಕಾರಿ, ಶಬರ, ಕಿರಾತ, ವ್ಯಾಧರು, ನಾಯಕ ಮೊದಲಾದವರನ್ನು ಹೆಸರಿಸಬಹುದು. ಎಂ.ಎಸ್.ಪುಟ್ಟಣ್ಣನವರು ಈ ನಾಯಕ ಜಾತಿಯವರಲ್ಲಿ ಊರಬೇಡರು – ಮ್ಯಾಸಬೇಡರು (ನಾಯಕ) ಎಂದು ಎರಡು ಪಂಗಡ ಉಂಟು. ಇವರಲ್ಲಿ ಮೇಸಬೇಡರು ಪರಿಶುದ್ಧರಂತೆ. ಇವರು ಪಾನ ಮಾಡುವುದಿಲ್ಲ. ಈಚಲ ಮರವನ್ನು ಮುಟ್ಟುವುದಿಲ್ಲ, ಈಚಲು ಚಾಪೆಯನ್ನೂ ಕೂಡ ಹಾಸಿಕೊಂಡು ಅದರ ಮೇಲೆ ಕುಳಿತುಕೊಳ್ಳುವುದಿಲ್ಲ. ಊರಬೇಡರಲ್ಲಿ ಇಂಥಾ ನಿಯಮಗಳು ವಿಶೇಷವಾಗಿಲ್ಲವಂತೆ. ಈ ಎರಡು ಪಂಗಡದವರು ಪರಸ್ಪರ ಕೊಟ್ಟು ತಂದು ಮಾಡುವುದಿಲ್ಲ ಎಂದು ನಾಯಕರನ್ನು ಪರಿಚಯಿಸುವಾಗ ತಿಳಿಸಿದ್ದಾರೆ.[1] ಮ್ಯಾಸಬೇಡರಲ್ಲಿ ನೂರಾರು ಬೆಡಗುಗಳಿವೆ. ಕಟ್ಟೆಮನೆ, ಗುಡಿಕಟ್ಟೆ, ಅರಮನೆ, ಗುರುಮನೆಗಳಲ್ಲದೆ, ಎರಡು ಪ್ರಮುಖ ಪಂಗಡಗಳಿವೆ: ಒಂದು, ಮಲ್ಲಿನಾಯಕನವರು (ಸಂತತಿ) ಮತ್ತೊಂದು ಮಂದವಾರು (ಸಂತತಿ). ಇವೆರೆಡು ಇಂದು ಅಭಿವೃದ್ಧಿ ಹೊಂದುತ್ತಾ ಬಂದಿದ್ದು ತಮ್ಮ ಸಂಸ್ಕೃತಿಯನ್ನು ಬುಡಕಟ್ಟಿನ ಹಿನ್ನೆಲೆಯಲ್ಲಿ ಉಳಿಸಿಕೊಂಡಿವೆ. ಇವರುಗಳಲ್ಲಿ ನಾಯಕ ಬುಡಕಟ್ಟು ತನ್ನ ಪಾರಂಪರಿಕ ಹಿನ್ನೆಲೆ, ಶಿಸ್ತುಬದ್ಧ ಕಟ್ಟುಪಾಡು, ವ್ಯಕ್ತಿಗತ ಪೌರುಷಗಳಿಂದ ವಿಭಿನ್ನವಾಗಿದೆ. ಈ ನಾಯಕರ ಬೆಡಗುಗಳಲ್ಲಿ ಒಂದಾದ ‘ಕಾಮಗೇತಿ’ ಎಂಬುದರ ಬಗ್ಗೆ ಬುಡಕಟ್ಟಿನ ಪ್ರಾಮುಖ್ಯತೆ, ಚಾರಿತ್ರಿಕ ಮಹತ್ವ, ಸಾಂಸ್ಕೃತಿಕತೆಯನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

.೧. ಬೇಡ – ನಾಯಕರ ಚಾರಿತ್ರಿಕ ಹಿನ್ನೆಲೆ

ಭಾರತದ ಅತೀ ಪ್ರಾಚೀನ ಬುಡಕಟ್ಟುಗಳಲ್ಲಿ ಬೇಡ – ನಾಯಕರದು ಒಂದು ಬುಡಕಟ್ಟು. ಇವರಲ್ಲಿ ಹದಿನೆಂಟಕ್ಕೂ ಹೆಚ್ಚು ಪರ್ಯಾಯ ಪಂಗಡಗಳಿವೆ. ಅವುಗಳೆಂದರೆ: ಬೇಡ, ಕಿರಾತ, ಶಬರ, ನಿಷಾದ, ವ್ಯಾಧ, ಪುಲಿಂದ, ಭಿಲ್, ಕೋಳಿ, ವಾಲ್ಮೀಕಿ, ನಾಯಕ, ತಳವಾರ, ಪರಿವಾರ, ನಾಯಕಮಕ್ಕಳು, ಬೇರಾದ್, ಭೋಯಾ, ರಾಮೋಶಿ, ಗುರಿಕಾರ, ಕಣ್ಣಪ್ಪನ ಮಕ್ಕಳು ಮೊದಲಾದವುಗಳು. ವಿವಿಧ ರಾಜ್ಯಗಳಲ್ಲಿ ಇವರಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಕರ್ನಾಟಕದಲ್ಲಿ ಬೇಡ, ನಾಯಕ, ವಾಲ್ಮೀಕಿ ಹೆಸರುಗಳು ಬಳಕೆಯಲ್ಲಿದ್ದರೂ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಹದಿನೆಂಟು ಪರ್ಯಾಯ ಪಂಗಡಗಳು ಚಾಲ್ತಿಯಲ್ಲಿರುತ್ತವೆ. ಇವರ ಬೆಡಗು, ಬಳಿಗಳು ತೀರಾ ಭಿನ್ನವೆಂದೇ ಹೇಳಬಹುದು.

ವೇದಗಳ ಕಾಲದಲ್ಲಿ ಬೇಡ ಅಥವಾ ಕಿರಾತರ ಹೆಣ್ಣು, ವನಸ್ಪತಿ, ಆಯುರ್ವೇದಗಳಲ್ಲಿ ಪರಿಣಿತ ಪಡೆದ ಬಗ್ಗೆ ಆಧಾರಗಳಿವೆ. ಹಾಗೆಯೇ ಕಾಮರೂಪದಲ್ಲಿ (ಪಶ್ಚಿಮ ಭಾರತ) ‘ಪ್ರಗ್ಜೊತಿಶ’ ಎಂಬ ಅರಸ ಕುರುಕ್ಷೇತ್ರ ಕಾಳಗದಲ್ಲಿ ಬೇಡರ ಪ್ರಬಲ ಸೈನ್ಯ ಹೋರಾಡಿದ ನಿದರ್ಶನವಿದೆ. ಪ್ರತಿಯೊಬ್ಬ ಪಾಂಡವರಿಗೂ ಒಂದೊಂದು ಪ್ರತ್ಯೇಕ ಬೇಡಪಡೆ ಇದ್ದಿತು ಎಂಬುದು ಪ್ರತೀತಿ. ರಾಹುಲ ಸಾಂಕೃತ್ಯಾಯನ ದೀವೋದಾಸ ಕೃತಿಯಲ್ಲಿ ಕಿರಾತರ ಬಗ್ಗೆ ವಿವರಿಸಿದ್ದಾರೆ. ಕ್ರಿ.ಶ. ೭ನೇ ಕೃತಿಯ ಶತಮಾನದಲ್ಲಿ ಹಿಮಾಲಯದಿಂದ ವಿಸ್ತರಣೆಗೊಂಡು ಪಂಜಾಬ್, ವಿಂಧ್ಯಾಪರ್ವತಗಳಲ್ಲಿ ನೆಲಸಿದ್ದ ಕಿರಾತರು ಹೆಚ್ಚಾಗಿ ಕಿರಾತ ದೇಶದಲ್ಲಿದ್ದರು. ದುದ್ಯೋಶಿ ಮತ್ತು ಕರ್ಕಿನದಿ (ನೇಪಾಳ) ದಂಡೆ ಮೇಲೆ ಈ ಕಿರಾತ ದೇಶವಿತ್ತು. ಆರ್ಯರ ದಾಳಿ ಮತ್ತು ಇತರ ರಾಜ್ಯ – ಸಂಸ್ಥಾನಗಳ ಚಾರಿತ್ರಿಕ ಕಾಲಘಟ್ಟದಲ್ಲಿ ಉತ್ತರ ಭಾರತದಿಂದ ಒರಿಸ್ಸಾ, ಆಂಧ್ರಪ್ರದೇಶದ ಮೂಲಕ ದಕ್ಷಿಣಭಾರತದ ಕರ್ನಾಟಕಕ್ಕೆ ಬಂದು ನೆಲಸಿದರು. ಕರ್ನಾಟಕದಲ್ಲಿ ಬೇಡರ ಚಾರಿತ್ರಿಕ ಪರಂಪರೆ ಶ್ರೀಮಂತವಾಗಿದ್ದು ಭಾರತ ಚರಿತ್ರೆಯಲ್ಲಿಯೇ ಅಪೂರ್ವ ಬುಡಕಟ್ಟುಗಳಲ್ಲೊಂದಾಗಿದೆ.

ಕರ್ನಾಟಕದ ಮೂಲಬುಡಕಟ್ಟುಗಳಲ್ಲಿ ಒಂದಾದ ಬೇಡ – ನಾಯಕರು ಬೇಟೆ, ಪಶುಪಾಲನೆ ಮತ್ತು ಕೃಷಿ ವೃತ್ತಿ ಮೂಲಕ ಅನಾದಿ ಕಾಲದಿಂದಲೂ ಜೀವನ ನಡೆಸುತ್ತಿದ್ದರು. ಮೌರ್ಯರು, ಶಾತವಾಹನ ಮತ್ತು ಇಕ್ಷ್ವಾಕು ಅರಸರ ಕಾಲದಲ್ಲಿ ಇವರು ಬೇಟೆಗಾರರಾಗಿದ್ದರಲ್ಲದೆ, ಗ್ರಾಮಗಳಲ್ಲಿ ತಳವಾರರಾಗಿದ್ದುದು ವಿಶೇಷ. ಕ್ರಿ.ಶ. ೭ನೇ ಶತಮಾನದಲ್ಲಿ ಗದ್ದೆಮನೆ ಶಾಸನದಲ್ಲಿ ‘ಬೇಡರಾಯರ’ ಉಲ್ಲೇಖವಿದೆ. ಬೇಡರನ್ನು ಮಲೆಪರು ಎಂದು ಕರೆದಿದ್ದಾರೆ. ಅವರಲ್ಲಿ ಕೆಲವರು ಆಳರಸರ ಸೇವೆಯಲ್ಲಿದ್ದು, ಒಬ್ಬ ಕಾಳಗದಲ್ಲಿ ವಿರೋಧಿ ಅರಸರೊಡನೆ ಹೋರಾಡಿ ಸ್ವರ್ಗಸ್ಥನಾಗಿರುವ ನಿದರ್ಶನಗಳಿವೆ. ಗಂಗರ ೧ನೇ ಶಿವಮಾರನ (ಕ್ರಿ.ಶ. ೭೧೩ರಲ್ಲಿ) ಆಸ್ಥಾನದಲ್ಲಿ ಕಿರಾತರ ಹೆಣ್ಣು ಆಸ್ಥಾನದಲ್ಲಿ ನರ್ತಕಿಯಾಗಿದ್ದಳು. ತಲಕಾಡಿನ ಗಂಗರು ಸೈನ್ಯದಲ್ಲಿ ಹೆಚ್ಚಾಗಿ ಬೇಡ – ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಗಂಗಕೊಂಗಣಿವರ್ಮ, ಧರ್ಮರಾಜ, ಶಿವಮಾರನು ಕ್ರಿ.ಶ. ೯೭೩ರಲ್ಲಿ ಕಿರಾತರನ್ನು ಹತ್ತಿಕ್ಕಿದ್ದು ತಿಳಿಯುವುದು. ಸೈನ್ಯದಲ್ಲಿ ಅಪಾರ ಸಂಖ್ಯೆಯಲ್ಲಿದ್ದು, ಅನುಭವಗಳಿಸಿದ ಇವರು ರಾಷ್ಟ್ರಕೂಟರ ಕಾಲಕ್ಕೆ ಸೈನ್ಯದ ಮುಖ್ಯಸ್ಥರೆಂದು, ನಾಯಕರೆಂದು ನಿಯೋಜಿತಗೊಂಡಿದ್ದರು. ಕರೆಸಿಕೊಂಡವರು. ಬಹುಶಃ ಅಂದಿನಿಂದಲೇ ‘ನಾಯಕ’ ಎಂಬ ಹುದ್ದೆ ಮೂಲಕ ಉಪಜಾತಿ ಹುಟ್ಟಿಕೊಂಡಿರಬೇಕು. ಕ್ರಿ.ಶ. ೯೫೪ರ ಶಾಸನದಲ್ಲಿ (೩ನೇ ಕನ್ನದೇವನು) ಬನವಾಸಿ ೧೨,೦೦೦ ಜಿಲ್ಲೆಯಲ್ಲಿ ಬೇಡರು ಕಳ್ಳರಾಗಿ, ದಾರಿಗಳ್ಳರಾಗಿ ದನ, ಬ್ರಾಹ್ಮಣರಿಗೆ ಉಪಟಳ ಕೊಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಅಂದಿಗೆ ಬೇಡರು ನಾಡಗಾವುಂಡರಾಗಿದ್ದರು. ಆನಂತರ ಕ್ರಿ.ಶ. ೯೭೭ರಲ್ಲಿ ಪಶ್ಚಿಮ ಚಾಲುಕ್ಯರ ಕಾಲದಲ್ಲಿ ರಟ್ಟರನ್ನು ಹುಟ್ಟಡಗಿಸಿದವರು ಬೇಡ ಸೈನಿಕರು. ಹಾಗೆಯೇ ಕ್ರಿ.ಶ. ೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನ ಬಿಟ್ಟದೇವ ಕಿರಾತ ಮುಖ್ಯಸ್ಥರನ್ನು, ಶಕ್ತಿಶಾಲಿ ವೀರರನ್ನು ಸೈನ್ಯಕ್ಕೆ ನೇಮಿಸಿ ಬೇಡರಪಡೆಯನ್ನು ಸದೃಡಗೊಳಿಸಿದ್ದನು. ಸೇವುಣರ ಆಳ್ವಿಕೆಯಲ್ಲಿ ಬೇಡರನ್ನು ರಕ್ಷಣೆಗಾಗಿ ಮೀಸಲಿಟ್ಟಿದ್ದರು. ಕರ್ನಾಟಕದಲ್ಲಿ ಮೊಟ್ಟಮೊದಲು ರಾಜ್ಯಾಳ್ವಿಕೆ ಮಾಡಿದವರು ಕುಮ್ಮಟದುರ್ಗದ ನಾಯಕರು. ಬೇಡ – ನಾಯಕರ ಇತಿಹಾಸದಲ್ಲಿ ಇದೊಂದು ಸಾಧನೆ ಹಾಗೂ ಮೈಲಿಗಲ್ಲು ಎನ್ನಲಾಗುವುದು. ಮುಮ್ಮಡಿ ಸಿಂಗೆಯನಾಯಕ, ಕಂಪಿಲರಾಯ ಮತ್ತು ಕುಮಾರರಾಮ ಈ ವಂಶದ ಪ್ರಸಿದ್ಧ ಅರಸರು, ಮುಮ್ಮಡಿ ಸಿಂಗೆನಾಯಕನಿಗೆ ಮಹಾನಾಯಕಚಾರ್ಯ ಎಂಬ ಬಿರುದಿತ್ತು. ಕುಮಾರರಾಮನ ಸಹೋದರಿ ಮಾರಾಂಬಿಕೆಯನ್ನು ಸಂಗಮ ಮದುವೆಯಾಗಿದ್ದನು. ಈತನಿಗೆ ಐದು ಜನ ಮಕ್ಕಳು: ಮಾರಣ್ಣ, ಮಾದಪ್ಪ, ಕಂಪಣ, ಹರಿಹರ ಮತ್ತು ಬುಕ್ಕರಾಯ. ವಿಜಯನಗರಕ್ಕೆ ಅಡಿಗಲ್ಲು ಕುಮ್ಮಟದುರ್ಗವೆ. ತುಳುವ ಸಂತತಿ ತಳವಾರ ಸಂತತಿಯಿಂದ ವಿಕಾಸವಾದುದು. ತಳವಾರ ಈಶ್ವರನಾಯಕ, ನರಸನಾಯಕ ಮತ್ತು ಶ್ರೀಕೃಷ್ಣದೇವರಾಯ ಈ ವಂಶದ ಪ್ರಸಿದ್ಧ ಅರಸರು.

ವಿಜಯನಗರ ಸಾಮ್ರಾಜ್ಯದಲ್ಲಿ ಬೇಡರು ಬೇಟೆ ಮತ್ತು ಪಶುಪಾಲನೆಯಲ್ಲಿ ತೊಡಗಿದ್ದರಲ್ಲದೆ, ತಳವಾರಿಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಹಂಪಿ ಬಳಿ ಇರುವ ಬೇಟೆಕಾರರ ಹೆಬ್ಬಾಗಿಲು, ತಳವಾರಘಟ್ಟವು ಮೇಲಿನ ಸಂಗತಿಗಳಿಗೆ ಉದಾಹರಣೆಯಾಗಿದೆ. ಬೇಡರಪಡೆ, ಖಾಸಾಬೇಡರಪಡೆ ಮತ್ತು ಮೀಸಲು ಪಡೆಗಳು ಸ್ಥಳೀಯ ಬೇಡ – ನಾಯಕರ ಪಡೆಗಳಾಗಿದ್ದವು. ವಿಜಯನಗರದ ಸೈನಿಕರು ೧೫೬೫ ಜನವರಿ ೨೩(೨೬)ರಲ್ಲಿ ಸು.೪೦ ಸಾವಿರ ಬೇಡ ಪಡೆ ರಕ್ಕಸತಂಗಡಿ ಯುದ್ದದಲ್ಲಿ ಹತರಾದರೆಂದು ತಿಳಿಯುತ್ತದೆ (ಪಿರಿಸ್ತಾ). ೧೫೬೮ರಲ್ಲಿ ಸದಾಶಿವರಾಯ ಬೇಡರಿಗೆ ಸ್ವಾಯತ್ತತೆಯನ್ನು ದಯಪಾಲಿಸಿದ್ದು ಸ್ಪಷ್ಟ. ಕಾಮಗೇತಿ ಮದಕರಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಭಾಗವನ್ನು ಬಿಟ್ಟುಕೊಟ್ಟು ಪಾಳೆಯಗಾರರಾಗಲು ತಿಳಿಸಿದ್ದರು. ಜರಿಮಲೆ, ಗುಡೇಕೋಟೆ, ಚಿತ್ರದುರ್ಗ, ತರೀಕೆರೆ, ರಾಯದುರ್ಗ, ಹರಪನಹಳ್ಳಿಗಳು ವಿಜಯನಗರದ ಪೋಷಣೆಯಿಂದಲೇ ಜನ್ಮ ತಾಳಿದವು. ವಿಜಯನಗರ ತರುವಾಯ ಎಪ್ಪತ್ತೇಳು ಪಾಳೆಯಪಟ್ಟುಗಳು ಹುಟ್ಟಿಕೊಂಡವು. ಹೀಗೆ ಆಡಳಿತ ನಡೆಸುವ ಅವಧಿಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಧಾಳಿಗೆ ತುತ್ತಾಗಿ ಚೇತರಿಸಿಕೊಳ್ಳುವಾಗಲೆ ಬ್ರಿಟಿಷರ ಬರ್ಭರ ಆಳ್ವಿಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ತರೀಕೆರೆ ಪಾಳೆಯಗಾರರ ಸರ್ಜಾ ಹನುಮಪ್ಪನಾಯಕ (೧೮೩೪), ಹಲಗಲಿ ಬೇಡರು (೧೮೫೭), ಸುರಪುರದ ವೆಂಕಟಪ್ಪನಾಯಕ (೧೮೫೮) ಮತ್ತು ಸಿಂಧೂರ ಲಕ್ಷ್ಮಣ (೧೯೨೪) ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದು ಸ್ಮರಣೀಯ.

ಬೇಡರ ಸಾಂಸ್ಕೃತಿಕ ಚರಿತ್ರೆ ಬಹುಶ್ರೀಮಂತವಾದುದು. ವೀರಗಲ್ಲು, ಮಹಾಸತಿಕಲ್ಲುಗಳಲ್ಲದೆ, ಬೇಡರಪಡೆ, ಮೀಸಲುಪಡೆ ಬಗ್ಗೆ ಆಧಾರಗಳಿವೆ. ಬಿಲ್ಲು, ಬಾಣ, ಬಿಲ್ಲಗಾವುಂಡ, ಬೇಟೆಯ ತಿಪ್ಪೆನಾಯಕನ ಬಗ್ಗೆ ಹಳೆಬೀಡಿನ ಶಾಸನ ತಿಳಿಸುವುದು. ಬೇಟೆಗೌಡ ಎಂದು ಹೊಯ್ಸಳರ ಶಾಸನಗಳಲ್ಲಿ ತಿಳಿಸಲಾಗಿದೆ. ಬೇಡಗಂಪಣದ ಬಗ್ಗೆಯೂ ವಿವರವಿದೆ. ಮೆಕೆಂಜಿ ಮೊದಲಾದವರು ತಳವಾರಿಕೆ, ಕಾವಲುಗಾರಿಕೆ ಬಗ್ಗೆಯೂ ತಿಳಿಸಿದ್ದಾರೆ. ಬುಚ್ಚಪ್ಪನಾಯಕನ ಬಗ್ಗೆ ಶಾಸನದ ಉಲ್ಲೇಖವಿದೆ. ಬೇಡರಿಗೂ, ಕುರುಬರಿಗೂ ಇದ್ದ ವೈರುಧ್ಯವನ್ನು ಈ ಶಾಸನಗಳಲ್ಲಿ ತಿಳಿಸಲಾಗಿದೆ. ಬೇಡ ಸಂಸ್ಕೃತಿ, ಹನುಮಪ್ಪನಾಯಕ, ಬ್ಯಾಡರ ನಾಯಕರು, ನಾಯಿ, ಬಡಿಕೋಲು, ಬೇಟೆಗಾರರು ಮೊದಲಾದ ಕಡೆ ಗುಡೇಕೋಟೆ, ಜರಿಮಲೆ, ಬಾಣವಾರ ಮೊದಲಾದವರೊಂದಿಗೆ ಸಂಬಂಧ ಬಳಸಿದ್ದರು. ತಲಕಾಡು ಸೃಷ್ಟಿಯಾದದ್ದು ಸಹಾ ತಲ ಮತ್ತು ಕಾಡ ಎಂಬ ಬೇಡ ಸಹೋದರರಿಂದ ಎಂಬುದು ಪ್ರತೀತಿ. ಬೇಡರು ನಿಜಕ್ಕೂ ಬೇಟೆಗಾರರೇ ಆಗಿದ್ದರು. ಬ್ಯಾಡರಹಳ್ಳಿ, ಬೇಟೆಯಸುಂಕ, ಬೇಟೆಗಾರ, ತುಲುವಯೋಧ, ಜನಾಂಗ, ಕ್ಷತ್ರಿಯರು, ಸೈನಿಕರು, ಗುರಿಕಾರ, ದಾರಿಹೋಕರ ಲೂಟಿ, ಪ್ರಾಣಿ ಹತ್ಯೆಗಳಲ್ಲಿ ಮತ್ತು ಹೀನ ಕೃತ್ಯಗಳಲ್ಲಿ ತೊಡಗಿದ್ದ ಬೇಡರ ಬಗ್ಗೆ ವಿವರಗಳಿವೆ.

ಕರ್ನಾಟಕದಲ್ಲಿರುವ ಬೇಡರು ಆಯಾ ಪ್ರಾದೇಶಿಕತೆಗೆ ತಕ್ಕಂತೆ ಜೀವನ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ಶ್ರೀಶೈಲ ಭಾಗದಿಂದ ಬಂದ ಬೇಡರ ಸಂಸ್ಕೃತಿ ಏಕಪ್ರಕಾರವಿಲ್ಲ. ಕಾರಣ ಹರಿದು ಹಂಚಿಹೋದ ಕರ್ನಾಟಕದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಪ್ರಾಂತ್ಯಗಳು ವಿಭಾಗವಾಗಿದ್ದವು. ಮದ್ರಾಸ್ ಕರ್ನಾಟಕ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಸಂಸ್ಥಾನಗಳು ಪ್ರತ್ಯೇಕವಾಗಿದ್ದವು. ಹಾಗಾಗಿ ಈ ಭಾಗಗಳಲ್ಲಿದ್ದ ಬೇಡರನ್ನು ವಿಶಿಷ್ಟವಾಗಿ ಚಿತ್ರಿಸಿದ್ದಾರೆ.

ಕರ್ನಾಟಕದ ಮ್ಯಾಸನಾಯಕರ ಚರಿತ್ರೆ ಮತ್ತು ಸಂಸ್ಕೃತಿಯನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಇವರ ಮೂಲ, ಪ್ರಾಚ್ಯಾವಶೇಷಗಳು, ವಾಸಿಸುವ ಸ್ಥಳ, ಗುಣ – ಲಕ್ಷಣ ವಿಸ್ತರಣೆಯನ್ನು ಗುರುತಿಸಬಹುದಾಗಿದೆ. ಇತಿಹಾಸ ಪೂರ್ವಕಾಲದಿಂದ ಇವರ ಜೀವನ ಮತ್ತು ಸಂಸ್ಕೃತಿ ಬಹುವಿಶಾಲ ಹಾಗೂ ವಿಭಿನವಾದುದು. ವೇದ, ಮಹಾಕಾವ್ಯಗಳ ಕಾಲದಲ್ಲಿಯು ಮ್ಯಾಸನಾಯಕರ ಪರಂಪರೆಯನ್ನು ಕಾಣಬಹುದಾಗಿದೆ. ಇವರು ಕನ್ನಡ ನಾಡು – ನುಡಿಗೆ, ತಮ್ಮದೇ ಚಾರಿತ್ರಿಕ ಕೊಡುಗೆಯನ್ನು ಕೊಟ್ಟಿದ್ದಾರೆ.

ಕರ್ನಾಟಕದಲ್ಲಿರುವ ಐವತ್ತು ಬುಡಕಟ್ಟುಗಳಲ್ಲಿ ಬೇಟೆ, ಪಶುಪಾಲನೆ ಮತ್ತು ಕೃಷಿಯನ್ನು ಇಂದಿಗೂ ಉಳಿಸಿಕೊಂಡು ಬಂದವರು ಮ್ಯಾಸನಾಯಕರು. ಇವರು ಕರ್ನಾಟಕ ರಾಜ್ಯದ ಮಧ್ಯಭಾಗದ ಪೂರ್ವದಲ್ಲಿ ವ್ಯಾಪಕವಾಗಿ ನೆಲಸಿರುತ್ತಾರೆ. ಮ್ಯಾಸನಾಯಕರು ಮೂಲತಃ ತೆಲುಗು ಭಾಷಿಕರು. ಬಹುತೇಕ ತಮ್ಮ ಮೂಲ ನೆಲೆಗಳನ್ನು ಆಂಧ್ರದೊಡನೆ ಗುರುತಿಸಿಕೊಳ್ಳುತ್ತಾರೆ. ವಲಸೆಮೂಲಿ ಪರ್ಯಟನೆಗೊಂಡು ಬೆಟ್ಟ – ಗುಡ್ಡ, ಅಡವಿ, ಹಳ್ಳ – ಕೊಳ್ಳಗಳಲ್ಲಿ ನೆಲಸಿ ಇಂದು ಪ್ರತ್ಯೇಕ ಹಟ್ಟಿ, ತೋಟಗಳಲ್ಲಿ ವಾಸಿಸುತ್ತಿದ್ದಾರೆ. ಆಯಾ ಪ್ರಾಂತ್ಯಗಳ ಸಂಸ್ಕೃತಿಗೆ ಬೇಡರು ಬೆಸೆದುಕೊಂಡಿದ್ದರಿಂದ ಈ ಸಾಂಸ್ಕೃತಿಕ ಭಿನ್ನತೆ ಅನಿವಾರ್ಯ.

ಎಲ್ಲ ಬುಡಕಟ್ಟಿನ ಮೂಲದಂತೆ ಇವರ ಮೂಲವು ಪುರಾಣ, ಐತಿಹ್ಯಗಳಿಂದ ಹೊರತಾಗಿಲ್ಲ. ಸಸ್ಯ, ಪ್ರಾಣಿ, ನೆಲ, ಜಲ, ಪಕ್ಷಿ ಇತರ ಸಜೀವ, ನಿರ್ಜೀವ ವಸ್ತುಗಳನ್ನು ತಮ್ಮ ಇತಿಹಾಸಕ್ಕೆ ಮೌಖಿಕ ಪರಂಪರೆಯನ್ನಾಗಿ ನಂಬಿದ್ದಾರೆ. ಪಂಪಾದ್ರಿಬಸವ ಎಂಬ ಒಂಟಿಕೋಡು ಬೆಳ್ಳಿ ಹಸುವಿನ ಪಾದದ ಚಿಟ್ಟಿಗೊರಸಿನಿಂದ ಇವರು ಹುಟ್ಟಿ ಬರುತ್ತಾರೆ ಎಂಬುದು ದಂತೆಕಥೆಯಾಗಿದೆ. ಈ ವಂಶದ ಮೂಲ ಪುರುಷನೊಬ್ಬ ಪಶುಗಳ ಮಂದೆಯಲ್ಲಿ ಹುಟ್ಟಿದ. ಅವನ ಹೆಸರು ಮಂದಭೂಪಾಲ. ದಾನಸಾಲಮ್ಮನ ಸಂತತಿ ಆಗಿನಿಂದಲೇ ಹುಟ್ಟಿತು. ಮದುವೆಯಾಗುವ ಪೂರ್ವದಲ್ಲಿಯೇ ಇವಳು ಸೂರ್ಯನನ್ನು ಮೋಹಿಸಿ ೭ ಜನ ಗಂಡುಮಕ್ಕಳನ್ನು ಪಡೆಯುತ್ತಾಳೆ. ಅವರಲ್ಲಿ ಭಾನುಕೋಟಿರಾಜು, ಯರಬೊಮ್ಮತಿರಾಜು, ಸೆಟ್ಟ ಪಟ್ಟಪ್ಪರಾಜ, ಸೂರಪ್ಪರಾಜ, ಸೊಟ್ಟಪ್ಪರಾಜು, ತಿಪ್ಪಂಡರಾಜು, ಪಾಪನ್ನರಾಜು ಪ್ರಮುಖರಾಗಿದ್ದಾರೆ.

ಆದಿವಾಸಿ ಮತ್ತು ಗಿರಿಜನರಾದ ಮ್ಯಾಸನಾಯಕರು ಸಸ್ಯ, ಪ್ರಾಣಿ, ಭೌಗೋಳಿಕ ಸಂಕೇತಗಳನ್ನು ತಮ್ಮ ಮನೆತನಕ್ಕೆ, ಮಕ್ಕಳಿಗೆ, ಕುಲಕ್ಕೆ, ಬೆಡಗಿಗೆ ಹೆಸರು ಇಟ್ಟಿರುವುದಕ್ಕೆ ಒಂದು ಅರ್ಥವಿದೆ. ಇವರ ಭಾಷೆ, ಜೀವನಕ್ರಮ, ವೈವಾಹಿಕ ಪದ್ಧತಿ, ಸಂಪ್ರದಾಯ, ನಡೆ – ನುಡಿ, ಧಾರ್ಮಿಕ ಆಚರಣೆ, ಧರ್ಮದ ಆಚರಣೆ, ಧರ್ಮದ ನಂಬಿಕೆ, ಮಡಿಮೈಲಿಗೆ ಇತರ ಸಂಗತಿಗಳು ಇವರ ಅಭಿವೃದ್ಧಿ ಮೇಲೆ ಪ್ರಭಾವಿಸಿವೆ. ಕೋಳಿ ತಿನ್ನಬಾರದೆನ್ನುವ ನಂಬಿಕೆ ಮ್ಯಾಸನಾಯಕರಲ್ಲಿದೆ. ಹಂದಿ (ವರಹ) ಹುಲುಸಾದ ಪ್ರಾಣಿ, ಇದನ್ನು ಬೇಟೆಯಾಡಿ ತಂದು ಊರಲ್ಲಿ ಮೆರವಣಿಗೆ ಮಾಡಿ ಅದರ ಮುಂಭಾಗದ ಚರ್ಮ, ಉಗುರು, ಬಾಲ, ಕಿವಿ ಹೀಗೆ ಕೆಲವು ಅಂಗಗಳ ಸ್ವಲ್ಪ ಚರ್ಮವನ್ನು ಕೊಯ್ದು ಹುಲುಸು ಎಂದು ಭಾವಿಸಿ ಊರಿನ ಬುಡ್ಡೆಕಲ್ಲಿನ ಬಳಿ ಹೂಳುತ್ತಾರೆ. ಇದರಿಂದ ಊರಿಗೆ ಒಳ್ಳೆಯದಾಗುವುದು, ಶ್ರೀ ಸಂಪತ್ತು ಲಭಿಸುವುದೆಂಬ ನಂಬಿಕೆಯಿದೆ. ಇವರು ಮಧ್ಯಪಾನ ಮಾಡುತ್ತಿರಲಿಲ್ಲ. ಕೋಳಿ – ಹಂದಿಯನ್ನು ತಿನ್ನುತ್ತಿರಲಿಲ್ಲ. ಇಡೀ ಹಟ್ಟಿಗೆ ಈ ಪ್ರಾಣಿಗಳು ನಿಷೇದವಾಗಿವೆ. ಧರ್ಮ – ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಗಾಢವಾಗಿ ರೂಪಿಸಿಕೊಂಡಿದ್ದಾರೆ. ಕೆಲವು ವಸ್ತುಗಳನ್ನು ಮುಟ್ಟಬಾರದೆನ್ನುವ ಮಡಿ – ಮೈಲಿಗೆ ಇದೆ. ಇವರು ವಾಸಮಾಡುವ ಹಟ್ಟಿಗೆ ತಮ್ಮ ಯಜಮಾನನ ಹೆಸರನ್ನು ಇಟ್ಟಿರುತ್ತಾರೆ. ಇವರದು ಮುಖ್ಯ ಉದ್ಯೋಗ ಪಶುಪಾಲನೆ – ಪಶುಸಂಗೋಪನೆ. ಬೇರೆ ಬೇರೆ ಬುಡಕಟ್ಟುಗಳಿಗಿಂತ ಇವರ ನಂಬಿಕೆ, ಆಚಾರ – ವಿಚಾರಗಳು ಭಿನ್ನ. ಇವರು ವರ್ಣಾಶ್ರಮ ನೀತಿಯನ್ನು ಎಂದೂ ಒಪ್ಪಿಕೊಂಡಿಲ್ಲ. ದೇವರ ಬಗ್ಗೆ ಇವರ ಸಂಪ್ರದಾಯಗಳು ವಿಶಿಷ್ಟವಾಗಿವೆ.

ಮ್ಯಾಸನಾಯಕರು ಯಾವುದೇ ಸರ್ಕಾರಿ ಕಚೇರಿ, ಪೊಲೀಸ್‌ಠಾಣೆ, ನ್ಯಾಯಾಲಯಕ್ಕೆ ಹೋಗದೆ ವ್ಯಾಜ್ಯಗಳನ್ನು ತಮ್ಮ ತಮ್ಮಲ್ಲಿಯೇ ಬಗೆಹರಿಸಿಕೊಳ್ಳುತ್ತಿದ್ದರು. ಅವುಗಳಿಗೆ ಕಟ್ಟೆಮನೆಗಳೆಂದು ಹೆಸರು. ನನ್ನಿವಾಳ, ನಾಯಕನಹಟ್ಟಿ, ಗೋನೂರು ಅಂದಿನ ಮೂರು ಕಟ್ಟೆಮನೆಗಳು. ಇಲ್ಲಿ ೩ ಜನ ನಾಯಕರು. ಬೋಸೆನಾಯಕ, ಮೀಸಲು ನಾಯಕ ಮತ್ತು ಗಟ್ಟಿಮುತ್ತನಾಯಕ. ಕಾಮಗೇತನಹಳ್ಳಿ, ಕಾಟಪ್ಪನಹಟ್ಟಿಗಳು ಸಹಾ ಆಚಾರ – ವಿಚಾರದ ಕಟ್ಟೆಮನೆಗಳಾಗಿದ್ದವು. ಒಟ್ಟಾರೆ ಇದಕ್ಕೆ ಮ್ಯಾಸಮಂಡಳಿ ಅಥವಾ ಬುಡಕಟ್ಟು ಸಂವಿಧಾನ ಎನ್ನುತ್ತಾರೆ. ಇವರಲ್ಲಿ ೭ ಜನ ದೊರೆಗಳು, ೯ ಜನ ಹಿರಿಯರು ಇರುತ್ತಿದ್ದರು. ಕಾಮಗೇತಿ, ನಲಗೇತಿ, (ಯರಗೋತಿ) ಬೋಡೆಬಲ್ಲುಡ್ಲು ಎಂಬ ಮೂರು ಜನ ಪೂಜಾರಿಗಳಿದ್ದರು. ೩ ಜನ ದಾಸರೆಂದರೆ ಬೋಡದಾಸರಿ, ಮುಂಡಾಸುದಾಸರಿ (ಪೇಟ) ಮತ್ತು ಕೊಡಗು ದಾಸರಿ (ಛತ್ರಿ). ಇವರೆಲ್ಲ ತಮ್ಮ ಬುಡಕಟ್ಟಿನ ಕಟ್ಟೆಮನೆ (ನ್ಯಾಯಸ್ಥಾನ) ವ್ಯಾಜ್ಯ, ವಿವಾದಗಳನ್ನು ಬಗೆಹರಿಸುವ ನ್ಯಾಯಪೀಠ, ಮದುವೆ, ದೇವರು ಇತರ ಬೇಡ ಸಂಸ್ಕೃತಿಗೆ ಸಂಬಂಧಿಸಿದಂತೆ ಗುಡಿಕಟ್ಟು ಮುಖ್ಯಸ್ಥಾನ ಹೊಂದಿರುತ್ತದೆ. ಇವರು ಅಮವಾಸೆ ದೇವರು ಮತ್ತು ಹುಣ್ಣಿಮೆ ದೇವರನ್ನು ಪೂಜಿಸುವರು.

ಇವರಲ್ಲಿ ನೀತಿನಿರ್ಬಂಧಗಳು ಕಠಿಣವಾಗಿದ್ದವು. ಮಂದಲೋರಲ್ಲಿ ಅದೇ ಬೆಡಗಿನವರು (ಒಂದೇ ಬೆಡಗಿನವರು) ಮದುವೆ ಆಗುವುದಿಲ್ಲ. ಅದು ಆಚಾರದ ವಿರುದ್ಧವಾದ ಕ್ರಮವೆಂದು ಪರಿಗಣಿಸಲಾಗುವುದು. ಯಾವುದೋ ಕಾಲಕ್ಕೆ ಅಣ್ಣತಮ್ಮಂದಿರ ನಡುವೆ, ನೆಂಟರ ನಡುವೆ ಹೆಣ್ಣನ್ನು ಕೊಟ್ಟು – ತೆಗೆದುಕೊಳ್ಳುವಾಗ ಸಮಸ್ಯೆಯಾಗಿ ಮಂದೆಯಲ್ಲಿ ಮಂದ (ಮತ್ತೊಂದು) ಎಂದು ಮುರಿದು ತಿರುಗ ಮಂದೆ ಕಟ್ಟಿಕೊಂಡರು. ಮದುವೆಯಲ್ಲಿ ಇವರು ಕೃಷಿ ಉಪಕರಣಗಳನ್ನು ಬಳಸುತ್ತಾರೆ. ಧಾರೆ ಎರೆಯುವಾಗ ಕತ್ತಿ ರಾತ್ರಿ ಮನೆಯ ಮುಂದೆ ಅಕ್ಕಡಿಕೊಳ್ಳ, ಹಗ್ಗ, ಸಾಮಾನುಗಳನ್ನು ಹೆಗಲ ಮೇಲೆ ಇಟ್ಟುಕೊಂಡಿರುತ್ತಾರೆ. ಇವೆಲ್ಲವನ್ನು ನೋಡಿದರೆ ಇಂದು ಶೈವ – ವೈಷ್ಣವ ಧರ್ಮಗಳಿಗೆ ಸೇರಿದ ಇವರು ಬೇಟೆ, ಪಶುಪಾಲನೆ ಮತ್ತು ಕೃಷಿ ಮೂಲದ ಬುಡಕಟ್ಟು ಆಚಾರ – ವಿಚಾರಗಳಿಗೆ ಭಂಗ ತಂದುಕೊಂಡಿದ್ದಾರೆ.

ಗೋಪಾಲಕರಾದ ಮ್ಯಾಸನಾಯಕರು ಇಂದಿಗೂ ದೇವರೆತ್ತುಗಳನ್ನು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಶ್ರೀಶೈಲಮಲ್ಲಿಕಾರ್ಜುನನ ಎತ್ತುಗಳೆಂದು ಇವುಗಳಿಗೆ ಕರೆಯುತ್ತಾರೆ. ಮೊದಲು ಸೂರ್ಯ, ಚಂದ್ರರನ್ನು ಪೂಜಿಸಿದ ನಂತರ, ದೇವರತ್ತುಗಳನ್ನು ಆರಾಧಿಸುವರು. ರೊಪ್ಪಕಟ್ಟಿ (ಮಂದೆ ಆಥವಾ ತುರುಮಂದೆ), ಲಕ್ಕಿಸೊಪ್ಪು, ತಂಗಡಿಸೊಪ್ಪು, ಅಗ್ನಿಕುಂಡ, ಉದಿ – ಪದಿ ಹಾಕುತ್ತಾರೆ. ದೇವರೆತ್ತುಗಳಿಗೆ ಪ್ರತಿದಿನ ಈ ರೀತಿ ಹಾಕುವುದು ಪೂಜೆಯಷ್ಟೇ ಪವಿತ್ರವಾದ ಕಾರ್ಯವೆನ್ನುತ್ತಾರೆ. ಇದರ ಬೂದಿಯನ್ನು ಮುತ್ತಿಗಾರಬೊಟ್ಟು, ವಿಭೂತಿ ಎಂದು ಹಣೆಗೆ ಇಟ್ಟುಕೊಳ್ಳುತ್ತಾರೆ.

ಭೂತಕಾಲದ ಜೀವನಕ್ರಮ ಗುಡ್ಡಗಾಡುಗಳಲ್ಲಿ, ವರ್ತಮಾನಕಾಲದ ಜೀವನಹಟ್ಟಿಗಳಲ್ಲಿ ಮತ್ತು ಭವಿಷತ್ತಿನಲ್ಲಿ ಆಧುನಿಕ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರಭಾವದಿಂದ ಮ್ಯಾಸನಾಯಕರು ಮಹಾಪರಿವರ್ತನೆ ಘಟ್ಟ ತಲುಪಿದ್ದಾರೆ. ಈ ಎಲ್ಲ ಸಂಕ್ರಮಣ ಸ್ಥಿತಿಯಲ್ಲಿ ಆಚಾರ, ವಿಚಾರ, ಕೃಷಿ, ಪಶುಪಾಲನೆ, ಕುರಿಸಾಕಾಣಿಕೆ, ದೇವರೆತ್ತುಗಳ ಪಾಲನೆ ಇವೆಲ್ಲವು ಬದಲಾಗುವ ಲಕ್ಷಣಗಳಿವೆ.

ಬುಡಕಟ್ಟು ಜನರಾದ ಮ್ಯಾಸನಾಯಕರಲ್ಲಿ ಹುಟ್ಟು, ಋತುಮತಿ, ಮದುವೆ, ಶವಸಂಸ್ಕಾರ ಪದ್ಧತಿಗಳಿವೆ. ಆರ್ಯರ ಪ್ರಭಾವ, ದ್ರಾವಿಡ ಸಂಸ್ಕೃತಿಯ ಪ್ರಭಾವವನ್ನು ಈ ಆಚರಣೆಗಳಲ್ಲಿ ಕಾಣಬಹುದು. ಇವರು ತೆಲುಗುಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವರು. ಆಂಧ್ರಮೂಲದಿಂದ ಬಂದು ದೇವರೆತ್ತುಗಳನ್ನು ಮೇಯಿಸಿಕೊಂಡು ಗೋವುಗಳ ಗುಂಪುಗಳೊಂದಿಗೆ, ಬಿದಿರು ಪುಟ್ಟಿಗಳಲ್ಲಿ ಸಾಲಿಗ್ರಾಮಗಳನ್ನು ತರುತ್ತಾರೆ. ವಲಸೆ ಜೀವನ ಇವರದು ಹಾಗಾಗಿ ಪೆಟ್ಟಿಗೆ ದೇವರನ್ನು ಹೆಚ್ಚಾಗಿ ಹೊಂದಿದ್ದರು.

ಇವರಲ್ಲಿ ಸಂಕೀರ್ಣಜಾತಿ, ವರ್ಣಸಂಕರ, ಜಾತಿಬಾಹಿರರಾದ ಉದಾಹರಣೆಗಳಿವೆ. ಬ್ರಾಹ್ಮಣರ ಒಂದು ಹೆಣ್ಣು ಅನಾಥಳಾಗಿ ಬೇಡನನ್ನು ಮದುವೆಯಾಗಿ (ಆರ್ಯರು) ನಲ್ಲಬಾಪಲು ಎಂದು ಒಂದು ಬೆಡಗಿನವರಾದರು. ಹಿಂದೂ ಧರ್ಮದ ಬೇಡರ ರಾಜ ನನ್ನಮ್ಮನ ಮದುವೆಯಾಗುವುದರ ಮೂಲಕ ಮುಂಜಿ ಮ್ಯಾಸರಾದರು (ಮುಸ್ಲಿಂ – ಹಿಂದೂ). ಒಂದು ಕಾಲಕ್ಕೆ ಲಂಬಾಣಿಗರು – ಗೊಲ್ಲರು ಬೇಡರಲ್ಲಿ ಬಂದು ಸೇರಿಕೊಳ್ಳುವುದುಂಟು. ಯಾವುದೇ ಜಾತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದ ಜಾತಿಬಾಹಿರರಾದವರನ್ನು, ದೀನದಲಿತರು, ಶೋಷಿತರನ್ನು ಯರಮಂಚಿನಾಯಕ ಎಂಬ ಬೇಡರದೊರೆ ಜಾತಿ – ಮತ ಇಲ್ಲದವರಿಗೆ ಒಂದು ನೆಲೆಯನ್ನು ಕಲ್ಪಿಸಿದನು. ಆಗಿನಿಂದ ಮ್ಯಾಸನಾಯಕರ ನೆರೆಹೊರೆಯರ ಯಾವುದೇ ಜಾತಿಯರಾಗಿರಲಿ ಸೌಹಾರ್ದಯುತವಾಗಿ ಜೀವನ ನಡೆಸುತ್ತಾರೆ. ದೀಪಾವಳಿ, ಗುಗ್ಗರಿಹಬ್ಬ, ಶಿವರಾತ್ರಿ, ಯುಗಾದಿ ಇತರ ಹಬ್ಬಗಳಲ್ಲಿ ಇವರ ವೈಶಿಷ್ಟ್ಯತೆ ಕಂಡುಬರುತ್ತದೆ. ಶೈವಧರ್ಮದವರು ಶ್ರೀಶೈಲ ಮಲ್ಲಿಕಾರ್ಜುನನ ಎತ್ತುಗಳನ್ನು ಪ್ರತ್ಯೇಕಿಸಿದರೆ, ವೈಷ್ಣವರು ಕಂಪಳರಂಗ ಸ್ವಾಮಿಯನ್ನು ಪೂಜಿಸುವರು. ಇವರಲ್ಲಿರುವ ೧೨ ಪೆಟ್ಟಿಗೆ ದೇವರುಗಳಿಗೆ ದೊರೆ ಯರಮಂಚಿನಾಯಕ ಕುದಾಪುರದ ಬೋರೇದೇವರ ಹತ್ತಿರ ತನ್ನ ಮಗನನ್ನೆ (ವಾಸಿ) ಬಲಿಕೊಟ್ಟನಂತರ ಮ್ಯಾಸನಾಯಕರಲ್ಲಿ ಎರಡು ಪಂಗಡಗಳಾದವು.

ಇಂದಿಗೂ ಮ್ಯಾಸನಾಯಕರಲ್ಲಿ ಎರಡು ವಂಶಗಳಿವೆ. ಚಂದ್ರವಂಶ ಮತ್ತು ಸೂರ್ಯವಂಶ. ಮಂದಲಾರು ಪಂಗಡಕ್ಕೆ ಸೇರಿದವರಿದ್ದಾರೆ. ಕಾಮಗೇತಿ, ಗಾದ್ರಪಾಲೋರು, ಬುಲ್ಲುಡ್ಲು, ಮಾಸಲೋರು, ಸಾಕೆಲಾರು ಮತ್ತಿತರರು. ಇದೇ ರೀತಿ ಸೂರ್ಯವಂಶದಲ್ಲಿ ಮಲ್ಲಿನಾಯಕನ ಪಂಗಡದವರಿದ್ದಾರೆ. ಚಂದ್ರವಂಶದಲ್ಲಿ ಬರುವ ಕಾಮಗೇತಿ ಬೆಡಗಿನವರು ಬುಡಕಟ್ಟು ಧರ್ಮದಲ್ಲಿ ಮತ್ತು ರಾಜ್ಯಾಡಳಿತದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಪಾಳೆಯಗಾರರಾಗಿ ಕಾಮಗೇತಿ ನಾಯಕ ಅರಸರು. ಇನ್ನೂರ ಹನ್ನೊಂದು ವರ್ಷಗಳ ಕಾಲ ಆಳಿದ್ದು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅದೇ ರೀತಿ ಮೊಳಕಾಲ್ಮೂರು, ನಾಯಕನಹಟ್ಟಿ, ಗುಡೆಕೋಟೆ, ಜರಿಮಲೆ, ಬಸವಾಪಟ್ಟಣ ಮೊದಲಾದ ಪಾಳೆಯಗಾರರಿಗೂ ಇವರಿಗೂ ಸಂಬಂಧವಿತ್ತು.

ಕಾಮಗೇತಿ ಬೆಡಗಿನವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಇಂದು ಉತ್ತಮ ಸಾಧನೆಯಲ್ಲಿ ತೊಡಗಿರುವರು. ಮ್ಯಾಸನಾಯಕರಲ್ಲಿ ಮಂದಲಾರು, ಮಲ್ಲಿನಾಯಕನಾರು, ಎರಡು ವಂಶಗಳ ಸದಸ್ಯರು ತಮ್ಮ ಪಂಗಡ, ಕಟ್ಟೆಮನೆ, ಗುಡಿಕಟ್ಟಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದರು. ಇನ್ನೂ ಕೆಲವರು ಪಾಳೆಯಗಾರರಾದರು. ಪೂಜಾರಿಕೆ, ತಳವಾರಿಕೆ, ಪಾಳೆಯಗಾರಿಕೆ ಹಾಗೂ ನಾಯಕತನಗಳು ಮ್ಯಾಸನಾಯಕರಿಗೆ ತೀರ ಹತ್ತಿರವಾಗಿದ್ದವು.

.೨ ಕಾಮಗೇತಿ : ಅರ್ಥ, ವ್ಯಾಪ್ತಿ ಮತ್ತು ವಿಕಾಸ

ಭಾರತೀಯ ಚರಿತ್ರೆಯಲ್ಲಿ ಬೇಡ ಬುಡಕಟ್ಟಿಗೆ ಪ್ರಾಚೀನ ಪರಂಪರೆ ಹಾಗೂ ಸಾಂಸ್ಕೃತಿಕ ಮಹತ್ವ ಇರುವುದನ್ನು ಈಗಾಗಲೇ ಗುರುತಿಸಲಾಗಿದೆ. ಕೆಲವರು ಬೇಡರ ಮೂಲವನ್ನು ಭಾರತ ಪರ್ಯಾಯ ದ್ವೀಪದಲ್ಲಿ ಉತ್ತರ ಭಾರತ – ದಕ್ಷಿಣ ಭಾರತ ಹಾಗೂ ಮಧ್ಯಭಾರತವೆಂದು ಕರೆದಿರುತ್ತಾರೆ. ಬುಡಕಟ್ಟು ಹಿನ್ನೆಲೆಯಲ್ಲಿ ಇವರು ಒಂದು ಕಾಲಕ್ಕೆ ಬೇಟೆ, ಪಶುಪಾಲನೆ ಮಾಡುತ್ತಾ ಅಲೆಮಾರಿ ಜೀವನ ನಡೆಸಿದ್ದಾರೆ. ಹಾಗೆಯೇ ಇನ್ನು ಕೆಲವರು ಪಾಳೆಯಗಾರಿಕೆಯೊಂದಿಗೆ ರಾಜ್ಯಭಾರ ನಡೆಸಿ ನಾಗರೀಕತೆ ಮೆರೆಸಿದ್ದಾರೆ. ಮತ್ತೇ ಕೆಲವರು ಕಾಡಿನಲ್ಲಿ ಬೆಟ್ಟಗುಡ್ಡಗಳಲ್ಲಿ ಇಂದಿಗೂ ಆಧುನಿಕ ಪ್ರಪಂಚಕ್ಕೆ ಪರಿಚಯವಾಗದೇ ಉಳಿದಿದ್ದಾರೆ. ಕೆ.ಎಸ್. ಸಿಂಗ್ ದಿ ಷೆಡ್ಯೂಲ್ ಟ್ರೆಬ್ಸ್ ಕೃತಿಯಲ್ಲಿ ಅನೇಕ ಬುಡಕಟ್ಟುಗಳ ಹೆಸರುಗಳನ್ನು ಕೊಟ್ಟಿದ್ದಾರೆ. ಬಿಲ್ ರಾಮೇಶಿ, ಮುಂಡಾ, ಗೊಂಡ ಇತರರ ಬಗ್ಗೆ ವಿವರಗಳಿವೆ. ಅವರು ತಿಳಿಸಿರುವಂತೆ ಬೇಡರು ಜಮ್ಮು ಮತ್ತು ಕಾಶ್ಮೀರದ ಲಡಾಕ್‌ನಿಂದ ವಲಸೆ ಬಂದ ಜನಾಂಗ. ಇವರು ಸಟಲೇಜ್ ದೇವಿ (ನದಿ), ಅಂಬಿಕಾರನ್ನು ಆರಾಧಿಸುತ್ತಾರೆ. ಉತ್ತರ ಭಾರತದಲ್ಲಿ ಇವರು ಬೌದ್ಧಧರ್ಮಿಗಳಾಗಿರುತ್ತಾರೆ. ಹಾಗೆಯೇ ಇತರ ಧರ್ಮಗಳ ಅವಲಂಬಿಗಳಾಗಿರುತ್ತಾರೆ. ಈ ಬೇಡರು ಬಹುತೇಕ ಭೂರಹಿತರು. ಕಟ್ಟಿಗೆ ಮಾರಿ ಜೀವಿಸುವವರು. ಇಂದಿಗೂ ಸ್ವಂತ ಭೂಮಿಯನ್ನು ಹೊಂದಿಲ್ಲ. ದಬ್ಬಾಳಿಕೆ ನಡೆಸುವ ಸಮುದಾಯಗಳ ಮಧ್ಯೆ ಇವರು ಕಠಿಣ ಜೀವನ ನಡೆಸುತ್ತಾರೆ. ಸಂಗೀತ, ವಾದ್ಯಗಳ ಇತರ ಮೂಲಗಳಿಂದ ಭಿಕ್ಷೆ ಬೇಡುತ್ತಾರೆ. ಕಾಮಗೇತಿಗಳು ಉತ್ತರ ಭಾರತದಿಂದ ಬಂದವರು ಎಂಬ ವಾದಕ್ಕೆ ಮೇಲಿನ ಅಂಶಗಳು ಬೆಳಕು ಚೆಲ್ಲುತ್ತವೆ. ಅಲ್ಲದೆ ಸಿಕ್ಕಿಂ ರಾಜ್ಯದಲ್ಲಿ ‘ಕಗತಿ’ ಎಂಬ ಬುಡಕಟ್ಟು ಇದೆ. ಮಧ್ಯಪ್ರದೇಶದಲ್ಲಿ ಕಮರ್ ಎಂಬ ಬುಡಕಟ್ಟು ಇದೆ (ಪು. ೧೦೨ – ೪೫೩). ಈ ಹಿನ್ನೆಲೆಯಲ್ಲಿ ನಾಯಕರು ತಮ್ಮ ಬೆಡಗು – ಬಳಿ ಉಪಪಂಗಡಗಳನ್ನು ತಮ್ಮ ಧರ್ಮ, ಸಂಸ್ಕೃತಿ ಹಾಗೂ ಕುಟುಂಬಕ್ಕೆ ತಕ್ಕಂತೆ ವರ್ಗೀಕರಿಸಿಕೊಂಡಿದ್ದಾರೆ. ಕಾಮಗೇತಿ ಪದದ ವಿಕಾಸ ಹೀಗಿದೆ: ಕಾಮಕೇತನ>ಕಾಮಗೇತನ>ಕಾಮಗೇತಿ ಎಂದು ರೂಪ ಪಡೆದಿದೆ. ತೆಲುಗಿನಲ್ಲಿ ಈ ಪದವನ್ನು ಕಾಮಗೇತಲಾರು ಎನ್ನುತ್ತಾರೆ.

ಪಿ. ಅಬ್ದುಲ್ ಸತ್ತಾರ್ ರಚಿಸಿರುವ ‘ತರೀಕೆರೆಯ ಪಾಳೆಯಗಾರರು’ ಎಂಬ ಕೃತಿಯಲ್ಲಿ (೧೯೯೭) ಇವರು ದೊಡ್ಡ ಮದಕರಿನಾಯಕ ರಚಿಸಿರುವ ‘ವಾಲ್ಮೀಕಿ ವಂಶರತ್ನಾಕರ’ ಕೃತಿಯನ್ನು ಅವಲೋಕಿಸಿದ್ದು, ಹಲವು ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ. ೧೮೨೨ರಲ್ಲಿ ಸರ್ಜಾರಂಗಪ್ಪನಾಯಕರು ರಚಿಸಿದ ‘ವಾಲ್ಮೀಕಿ ವರ್ಣಾಶ್ರಮ ಭಾಸ್ಕರ’ ಗ್ರಂಥದಲ್ಲಿ ಗೋತ್ರ, ವಂಶ, ಕುಲಗಳ ವಿಚಾರವಿದೆ. ಬೇಟೆಗಾರರು, ಕಾನನವಾಸಿ, ಗುಡ್ಡಗಾಡು ಜನರಾದ ಬೇಡರು, ಕಿರಾತರು, ಪುಳಿಂದರು, ಶಬರರು ಆದಿಕವಿ ವಾಲ್ಮೀಕಿ ಋಷಿಯ ವಂಶಸ್ಥರೆಂದು ತಿಳಿಸಿದ್ದಾರೆ.

‘ಈ ವಾಲ್ಮೀಕಿ ವಂಶದಲ್ಲಿ ೧. ಕಾಮಗೇತಿ ೨. ಮಂದ ೩. ಮಳ್ಳ ೪. ಮುಚ್ಚ ೫. ಮೀನಿಗ ೬. ಮೊಲ್ಲ ೭. ಮಲ್ಯ ಎಂಬ ಏಳು ಜನ ಪುತ್ರರು ಜನಿಸಿದರು. ಇವರಲ್ಲಿ ಜ್ಯೇಷ್ಠನಾದ ಕಾಮಗೇತಿಗೆ ಕನ್ನಪ್ಪಯ್ಯನೆಂಬ ಪುತ್ರನು ಜನಿಸಿದನು. ಇವನೇ ಅತಿಪುರಾತನರಲ್ಲಿ ಶಿವನಿಗೆ ತನ್ನ ಕಣ್ಣುಗಳನ್ನು ಕಿತ್ತುಕೊಟ್ಟ ಶಿವಭಕ್ತ ಕನ್ನಪ್ಪನು ಬೇಡನಾಗಿದ್ದ. ಇಲ್ಲಿ ೬೩ ಪುರಾತನರಲ್ಲಿ ಒಬ್ಬನೆಂದು ಪರಿಗಣಿತನಾದ ಕಣ್ಣಪ್ಪ (ಕನ್ನಪ್ಪ)ನ ವಿಚಾರವಿದೆ. ಈತ ವಾಲ್ಮೀಕಿ ಋಷಿಯ ಮೊಮ್ಮಗ, ಈ ಕಣ್ಣಪ್ಪ – ಕನ್ನಪ್ಪ ಎಂಬ ಹೆಸರು ‘ಕೃಷ್ಣ’ ಎಂಬ ಹೆಸರಿನ ರೂಢ ನಾಮವನ್ನು ಹೋಲುತ್ತದೆ. ಇದೇ ಕೃತಿಯಲ್ಲಿ ‘ಮಹರ್ಷಿ ವಾಲ್ಮೀಕಿಗೆ ಸುವಾಸನೆ ಎಂಬ ಪತ್ನಿ ಇದ್ದಳೆಂದೂ, ಆಕೆಯ ತಂದೆ ಜಗದೇಕನೆಂದೂ ಹೇಳಲಾಗಿದೆ. ಇವರ (ವಾಲ್ಮೀಕಿ + ಸುವಾಸನೆ) ಮಕ್ಕಳೇ ಕಾಮಗೇತಿಯೇ ಮೊದಲಾದ ಏಳು ಜನ. ಈ ಕಾಮಗೇತಿಯ ಮನಗೇ ಶಿವಭಕ್ತ ಕಣ್ಣಪ್ಪ. ಈತ ೬೩ ಪುರಾತನರಲ್ಲಿ ಒಬ್ಬ. ವಾಲ್ಮೀಕಿಗೂ ಈತನಿಗೂ ಹೇಳಲಾಗಿರುವ ಸಂಬಂಧದ ರೀತ್ಯ ಈತ (ಕಣ್ಣಪ್ಪ) ಲವ, ಕುಶರಿಗೆ ಸಮಕಾಲೀನನಾಗುತ್ತಾನೆ. ರಾಮಾಯಣದ ರೀತ್ಯಾ ವಾಲ್ಮೀಕಿಯ ಆಶ್ರಮದಲ್ಲಿ ಈತನ ಸಂಸಾರ ಇದ್ದ ಸಂಗತಿ ಇಲ್ಲ. ಆತ ಇಲ್ಲಿ ಗುರುಕುಲ ಸ್ಥಾಪನೆ ಮಾಡಿಕೊಂಡು ತನ್ನ ಶಿಷ್ಯರೊಂದಿಗೆ ಇದ್ದಂತೆ ಹೇಳಲಾಗಿದೆ (ಪು. ೬ – ೭). ತನ್ನೆರಡು ಕಣ್ಣುಗಳನ್ನು ಅರ್ಪಿಸಿದ ಕಣ್ಣಪ್ಪ ಕಾಮಗೇತಿ ಮಗ ಮತ್ತು ಆ ವಂಶದವನಾಗಿದ್ದಾನೆ. ಕಾಮಗೇತಿಯ ಏಳು ಜನ ಸಹೋದರರಲ್ಲಿ ಕಣ್ಣಪ್ಪ ಮಾತ್ರ ವಂಶೋದ್ಧಾರಕನಾದರೆ, ಇನ್ನಾರು ತಮ್ಮಂದಿರ ವಂಶ ಬೆಳೆದಂತಿಲ್ಲ. ಹಾಗಾಗಿ ಕಾಮಗೇತಿ ವಂಶಕ್ಕೆ ಆಸ್ತಿಭಾರ ಹಾಕಿದವರಲ್ಲಿ ಕಣ್ಣಪ್ಪನೂ ಒಬ್ಬ. ಆ ಮೂಲಕ ಕಾಮಗೇತಿ ವಂಶಸ್ಥರು ಪ್ರಚಲಿತಕ್ಕೆ ಬಂದಂತೆ ಇತರರು ಬರಲಿಲ್ಲ. ಕಾಮಗೇತಿ ಬೆಡಗು (ಕನ್ನಪ್ಪ) ಅಥವಾ ವಂಶ ಬೆಳೆದು ೨೮ ಬೆಡಗುಗಳಾಗುತ್ತವೆ. ಅವೇ ೨೮ ಶಾಖೆಗಳು. ಇಲ್ಲಿ ಬೆಡಗಿಗೆ ಶಾಖೆ ಎಂದರ್ಥ.[2]

‘ಕಾಮಕೇತನ’ ಎಂಬುದು ಬೇಡರ ಪ್ರಾಚೀನ ಬೆಡಗುಗಳಲ್ಲೊಂದು. ದ್ವಾಪರಯುಗದಲ್ಲಿ ಹಿರಣ್ಯಧನು, ಏಕಲವ್ಯ ಕಿರಾತ, ನಿಷಾದ, ಶಬರ ಮೊದಲಾದ ರಾಜರು ಈ ಕಾಮಗೇತಿ ಗೋತ್ರದಲ್ಲಿಯೇ ಜನಿಸಿದವರು.[3] ಆದಿಯಲ್ಲಿ ಏಕಲವ್ಯನ ವಂಶಸ್ಥರು ಈ ಬೆಡಗಿಗೆ ಸೇರಿದವರೆಂದು ಚರಿತ್ರೆಯಿಂದ ಈ ಬುಡಕಟ್ಟು ತಿಳಿಯುತ್ತದೆ. ಉತ್ತರ ಭಾರತದ ಬೇಡರು ಮಂಗೋಲಾಯಿಡ್ ಜನಾಂಗಕ್ಕೆ ಸೇರಿದ್ದರೆ, ದಕ್ಷಿಣಭಾರತದ ಬೇಡರು ಪ್ರೊಟೋ ಅಸ್ಟ್ರಾಲಾಯಿಡ್‌ಗೆ ಸೇರಿದ್ದಾರೆ. ಈ ಬುಡಕಟ್ಟಿನವರು ಈಗಿನ ನವದೆಹಲಿ (ಹಸ್ತಿನಾಪುರ – ಇಂಧ್ರಪ್ರಸ್ಥ), ಪಂಜಾಬ್, ಅಯೋಧ್ಯಾ, ಕಾಮರೂಪ, ಗಂಗಾ, ಬ್ರಹ್ಮಪುತ್ರಾ, ನರ್ಮದಾ ನದಿತಪ್ಪಲು ಹಾಗೂ ವಿಂದ್ಯಾಪರ್ವತಗಳಿಂದ ಒರಿಸ್ಸಾ ಮೂಲಕ ದಕ್ಷಿಣ ಭಾರತದ ಕಡೆ ವಲಸೆ ಬಂದು ಆಂದ್ರಪ್ರದೇಶ ನಂತರ ಕರ್ನಾಟಕದಲ್ಲಿ ನೆಲಸಿದರು. ಈ ಹಿನ್ನೆಲೆಯಲ್ಲಿ ಕಾಮಗೇತಿಗಳ ಮೂಲ ಚರಿತ್ರೆ ಉತ್ತರಭಾರತದಿಂದ ಆರಂಭವಾಗಿರುವುದು ತಿಳಿಯುತ್ತದೆ. ದಿಲ್ಲಿಯ ನಾಡತಳವಾರರಾದ ವಾಲ್ಮೀಕಿಗೋತ್ರದವರೆಂದು ಹೇಳಲ್ಪಡುವ ಕಾಮಗೇತಿ ವಂಶದ ಸಬ್ಬಗಡಿ ಓಬನಾಯಕ, ಜಡವಿನಾಯಕ, ಬುಳ್ಳನಾಯಕ ಹೆಸರಿನ ಈ ಮೂರು ಜನ ಅಣ್ಣತಮ್ಮಂದಿರು ಅಹೋಬಲ ನರಸಿಂಹಸ್ವಾಮಿ ಮನೆದೇವರ ಪೆಟ್ಟಿಗೆಯೊಂದಿಗೆ ಆಕಳು, ಕುರಿ ಹಾಗೂ ಕಾಪು – ಕಂಪಳವನ್ನು ತೆಗೆದುಕೊಂಡು ದಕ್ಷಿಣಕ್ಕೆ ಬಂದರು. ದಾರಿಯಲ್ಲಿ ಬರುವಾಗ ವಿಜಯನಗರದಲ್ಲಿ ಹಂಪೆ ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಂಡು ಬರುವಾಗ, ಆನೆಗೊಂದಿ ಸ್ಥಳದವರಾದ ವಿರೂಪಾಕ್ಷೇಶ್ವರ ಗುಡಿಯಲ್ಲಿ ಮಂತ್ರಪುಷ್ಪದ ಕೆಲಸವನ್ನು ಮಾಡುತ್ತಿದ್ದ ಕರಿಜೋಯಿಸ, ವಿರೂಪಾಕ್ಷ ಜೋಯಿಸ ಎಂದು ಹುಡುಗರು ಈ ನಾಡತಳವಾರರ ಬೆನ್ನಹತ್ತಿ ಬಂದರು. ಮೇಲಿನ ಮೂರು ಜನ ಪೂರ್ವಜರು (ನಾಯಕರು) ಬಿಳಿಚೋಡುನಲ್ಲಿ ೩ ತಿಂಗಳಿದ್ದು ನಂತರ ನೀರ್ಥಡಿ ಗ್ರಾಮದಲ್ಲಿ ರೊಪ್ಪಹಾಕಿ ತಳವೂರಿದರು. ಇವರಿಗೆ ಸ್ವಪ್ನದಲ್ಲಿ ಮನೆದೇವರು ಇಲ್ಲೇ ನೆಲೆಸಲು ಸೂಚಿಸಿದ್ದರಿಂದ ಈ ಸ್ಥಳದಲ್ಲಿ ನೆಲಸಿದನಂತೆ. ನೀರ್ಥಡಿಯಲ್ಲಿ ಆನಂತರ ದೇವರಿಗೆ ಗುಡಿಕಟ್ಟಿಸಿ ಮುಂದಿನ ರಾಜ್ಯಕ್ಕೆ ನಡೆಯುತ್ತಾರೆ. ಇದಕ್ಕೆ ಪೂರಕವಾಗಿ ಪ್ರಾಚೀನ ಕನ್ನಡ ಶಾಸನಗಳಲ್ಲಿ ಕಾಮಪ್ಪನಾಯಕ, ಕಾಮಸಮುದ್ರ (ಕಾಮನಾಯಕ), ನಿಡಗಲ್ಲು ಕಾಮರಾಜ ಇತರರ ಹೆಸರುಗಳ ಪ್ರಸ್ತಾಪವನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಕ್ಷಾತ್ರಾಂಶ ಪ್ರಬೋಧದಲ್ಲಿ ಹೆಚ್.ವಿ. ವೀರನಾಯಕ ಅವರು ಕಾಮಗೇತಿ ವಂಶ ಕುರಿತು ಚರ್ಚಿಸಿದ್ದಾರೆ. ಶ್ರೀ ಗುರು ಪಂಪಾವಿರೂಪಾಕ್ಷನೇ ನಮಃ ಶಾಲಿವಾಹನಶಖ ವರ್ಷಂಗಳು ೧೫೩ಕ್ಕೆ ಸರಿಯಾದ ವಿರೋಧಿನಾಮ ಸಂವತ್ಸರದ ಚೈತ್ರ ಶುದ್ಧ ೫ ಭಾನುವಾರ ಚಂದನಾವತಿಯೆಂಬ ಆನೆಗುಂದಿ ನರಪತಿ ದೊರೆಗಳ ಜಯರೇಖೆ ನಕಲು ಎಂದಿದೆ. ಹಂಪೆ – ಆನೆಗೊಂದಿ ಬಗ್ಗೆ ಇನ್ನು ಹೆಚ್ಚಿನ ವಿವರಗಳಿವೆ.

.೩. ಕಾಮಗೇತಿಗಳ ಪ್ರಾಚೀನ ಪರಂಪರೆ

. ಮಂದಭೂಪಾಲ

ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯ ವರಪ್ರಸಾದದಿಂದ ಮಂದಭೂಪಾಲ ಹುಟ್ಟಿದನು. ಪಶುಗಳ ಮಂದೆಯಲ್ಲಿ ಹುಟ್ಟಿದ ಇವನಿಗೆ ಮಂದಭೂಪಾಲನೆಂದು ಕರೆದರು. ಹೆಣ್ಣು ಕರುವಿಗೆ ಒಂಟಿಕೋಡು ಬೆಳ್ಳಿಹಸು ಎಂದು – ಗಂಡು ಕರುವಿಗೆ ಪಂಪಾದ್ರಿ ಬಸವನೆಂದು ಕರೆದರು. ಮಂದಭೂಪಾಲನು ಚಂದ್ರಗಿರಿ ಪರ್ವತ ಪ್ರಾಂತ್ಯದಲ್ಲಿ ಪ್ರಮೀಳಾ ಎಂಬ ಸುಲಕ್ಷಣವಾದ ಕನ್ಯೆಯನ್ನು ನೋಡಿದನು. ಕೊನೆಗೆ ಮದುವೆ ಆಗಿ, ಮಕ್ಕಳ ಭಾಗ್ಯಕ್ಕಾಗಿ ಸೂರ್ಯದೇವನನ್ನು ಪೂಜಿಸುತ್ತಿದ್ದರು. ಪ್ರಮೀಳಾ ಗೋತ್ರವೇ ಬುಟ್ಟಗಲೋರು. ಮಂದಭೂಪಾಲನಿಗೆ ಇವರು ನೆಂಟರಾದರು. ಮಂದಭೂಪಾಲನಿಗೆ ಗೋತ್ರ ಇರಲಿಲ್ಲ. ಮುಂದೆ ಹುಟ್ಟಿದವರು ತನ್ನ ಗೋತ್ರ ಗೊತ್ತಿರಲಿಲ್ಲ. ಗುಪ್ತ ಬೊಮ್ಮತಿರಾಜ ನೇತೃತ್ವದಲ್ಲಿ ಮಂದಭೂಪಾಲನ ಗೋತ್ರವನ್ನು ‘ಮಂದಗೋತ್ರ’ ಎಂದು ‘ಮಂದಲೋರು’ ಎಂದು ಕರೆದರು. ಬುಟ್ಟಗಲೋರು ಬೆಡಗಿಗೆ ಇವರು ನೆಂಟರಾದರು. ಮಂದಭೂಪಾಲ ಗುಪ್ತಗಿರಿಯ ಯಜಮಾನನಾಗಿದ್ದ (ನರ್ಮದಾನದಿ ದಂಡೆಮೇಲೆ). ಮಂದಭೂಪಾಲ ಮತ್ತು ಪ್ರಮೀಳೆಯರು. ಪ್ರತಿ ದಿನ ಸೂರ್ಯೋದಯ, ಸೂರ್ಯವಂದನೆ, ಸಂಧ್ಯಾಕಾಲದಲ್ಲಿ ಸೂರ್ಯನನ್ನು ಪ್ರಾರ್ಥಿಸುತ್ತಿದ್ದರು. ಎಲ್ಲ ಪಾಳೆಯಪಟ್ಟಗಳ ಸದಸ್ಯರು, ಬೇಡರ ಹಿರಿಯರೆಲ್ಲ ಸೇರಿ, ಹುಟ್ಟಿದ ಆ ಬಾಲಕನಿಗೆ ಅಂಭೋಜರಾಜ ಎಂದು ಹೆಸರಿಟ್ಟರು. ತಂದೆ – ತಾಯಿಗಳು ನರ್ಮದಾನದಿಯಲ್ಲಿ ಪ್ರತಿ ದಿನ ಸೂರ್ಯನನ್ನು ಪ್ರಾರ್ಥಿಸುತ್ತಿದ್ದರಿಂದ (ಅಂಬು – ನೀರು ರಾಜ – ಒಡೆಯ) ಆ ಹೆಸರಿಟ್ಟರು. ನಂತರ ೩ ಜನ ಗಂಡುಮಕ್ಕಳು ಜನಿಸಿದರು. ೧.ತುಂಬೇರಾಜ ೨. ಕಾಂಭೋಜರಾಜ ೩. ಕಲ್ಲಿಮರಾಜ ಎಂದು ಅವರ ಹೆಸರುಗಳು

. ಅಂಭೋಜರಾಜನ ಆಳ್ವಿಕೆ

ಗುಪ್ತಗಿರಿ ಪಾಳೆಯಗಳ ಒಡೆಯನಾಗಿ ಈತ ತಂದೆ – ತಾಯಿ ಸಮೇತ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಬೇಡರ ಪಡೆಗಳು, ಕಹಳೆ ಊದುವವರು ಇತರ ಪರಿವಾರದವರು ನಾಯಕನಿಗೆ ನೆರವಾಗಿದ್ದರು. ಪ್ರಕೃತಿ ಸಂಪತ್ತನ್ನು ಸಂರಕ್ಷಿಸಿದ್ದ ಇವರು ಬೇಟೆ, ಪಶುಪಾಲನೆಯಲ್ಲಿ ನಿರತರಾಗಿದ್ದದು ಐತಿಹಾಸಿಕ ಸತ್ಯ.

ಅಂಭೋಜ ರಾಜನ ೩ನೇ ಸಹೋದರ ಕಾಂಭೋಜ ರಾಜನಿಗೆ ಬಹಳ ದಿನಗಳವರೆಗೂ ಸಂತಾನವಾಗಿರಲಿಲ್ಲ. ಇವರು ವಿಂಧ್ಯಾಪರ್ವತ, ನರ್ಮದಾನದಿ ತೀರದಲ್ಲಿದ್ದಾಗ ತಮ್ಮ ಮಂದಯಲ್ಲಿಯ ಕಾಮಧೇನುವಿಂತಿದ್ದ ಒಂಟಿಕೋಡು ಬೆಳ್ಳಿ ಹಸುವನ್ನು ಪೂಜಿಸುತ್ತ ಪ್ರದಕ್ಷಿಣೆ ನಮಸ್ಕಾರಗಳಿಂದ ಸಂತಾನಕ್ಕಾಗಿ ಪ್ರಾರ್ಥಿಸಿದರು. ಕಾಮಧೇನುನಂಥ ಬೆಳ್ಳಿ ಹಸುವಿನ ಪ್ರಭಾವದಿಂದ ಜನಿಸಿದ ಈ ಬಾಲಕನಿಗೆ ‘ಕಾಮಗೇತಿ ಭೂಪಾಲ’ ನೆಂದು ಹೆಸರಿಟ್ಟರು.

೩ ಕಾಮಗೇತಿ ಭೂಪಾಲನ ಆಡಳಿತ ಹಾಗೂ ಮಂದಗಿರಿಪುರ ನಿರ್ಮಾಣ

ಕಾಮಗೇತಿ ಭೂಪಾಲ ಚಂದ್ರಗಿರಿ ಪ್ರಾಂತ್ಯದ (ತಿರುಪತಿ ಹತ್ತಿರ) ದೊರೆ. ಮ್ಯಾಸಮಂಡಲಿ ದಕ್ಷಿಣಭಾರತದ ಆಂಧ್ರ – ಕರ್ನಾಟಕದಲ್ಲಿ ವಲಸೆ ಬಂದಾಗ ಮೇಲಿನ ಸಂಗತಿಗಳು ತಿಳಿದುಬರುತ್ತವೆ. ಅಂಭೋಜರಾಜನು ಕ್ರೌಂಚ ಅಡವಿಗೆ ಹೋದಾಗ ಕಾಮಗೇತಿ ಭೂಪಾಲನು, ಗುಪ್ತಗಿರಿಯ ಆಡಳಿತಕ್ಕೆ ಬೇಡರ ಬುಟ್ಟಗಲೋರ ವಂಶಸ್ಥರಿಗೆ ಅಧಿಕಾರ ಕೊಡುತ್ತಾನೆ. ಮಂದಲೋರ ಪಂಗಡದವರು ಕಾಪು – ಕಂಪಳದೊಂದಿಗೆ ಮಂದಗಿರಿ ಪರ್ವತ ಪ್ರದೇಶದಲ್ಲಿ (ಹಂಪೆ ಅಥವಾ ಶ್ರೀಶೈಲ) ‘ಮಂದಗಿರಿಪುರ’ ಎಂಬ ಪಟ್ಟಣ ಕಟ್ಟಿ, ಪಾಳೆಯಪಟ್ಟು ಸ್ಥಾಪಿಸಿ ಪಶುಗಳ ಮಂದೆಗಳನ್ನು ನಿರ್ಮಾಣ ಮಾಡಿ ಜೀವನ ನಡೆಸಿದರು.

ಹೀಗೆ ಇರುವಾಗ ಶುಕ್ಲಮಲಿನಾಯಕ ಹಾಗೂ ದಾನಸಾಲಮ್ಮನವರಿಗೆ ಆದಿಲಕ್ಮಿ ಸ್ವರೂಪದ ಚುಂದುಲಕ್ಷ್ಮಿಯ ಜನನ ಆಗುವುದು. ಶುಕ್ಲಮಲ್ಲಿನಾಯಕ (ಸಂಚಿಶಿಖಿನಾಯಕ) ತನ್ನ ಸತಿ ದಾನಸಾಲದೇವಿ ಜೊತೆ ಚಂದ್ರಗಿರಿ ಪರ್ವತದ ಒಂದು ಕಾಡಿನಲ್ಲಿ ಗುಡಿಸಲನ್ನು ಕಟ್ಟಿಕೊಂಡು ನೆಲಸಿದ್ದ. ಇವರಿಗೆ ಬಹುದಿನಗಳ ಕಾಲ ಮಕ್ಕಳ ಸಂತಾನದ ಕೊರಗಿತ್ತು. ದಾನಸಾಲದೇವಿಯ ವಂಶಕ್ಕೆ ಸೇರಿದ ತಂದೆ ಅಂಭೋಜರಾಜ ತಾತ ಮಂದಭೂಪಾಲ ತಮ್ಮ ಪೂರ್ವಜರಂತೆ ಸೂರ್ಯನನ್ನೇ ಪೂಜಿಸುತ್ತಿದ್ದರು.

ಮಂದಭೂಪಾಲನು ಚಂದ್ರಗಿರಿ ಅಡವಿಯ ನಟ್ಟನಡುವೆ ಬಂಗಾರ ಬೂದಿಕೋಟೆಯ ಒಳಗೆ ನೆಲಮಾಳಿಗೆಯಲ್ಲಿ ನೆಲಸಿದ್ದಾಗ ಒಂದು ಕಡೆ ಸೂರ್ಯನ ಬೆಳಕು ಬೀಳುತ್ತಿತ್ತು. ಅದನ್ನೇ ನೋಡಿಕೊಂಡು ಸೂರ್ಯದೇವನ ಪೂಜೆ ಮಾಡುತ್ತಿದ್ದನು. ತಮ್ಮ ಹಕ್ಕುಗಳಿಗಾಗಿ, ಅಧಿಕಾರಕ್ಕಾಗಿ ಸೂರ್ಯದೇವನನ್ನು ಬೇಡಿಕೊಳ್ಳುತ್ತಿದ್ದರು. ದಾನಸಾಲಮ್ಮನು ಅಷ್ಟೆ ಸೂರ್ಯದೇವನ ಆರಾಧಕಳು. ಮಲ್ಲಿನಾಯಕನೊಂದಿಗೆ ವಿವಾಹವಾಗಿದ್ದರೂ, ಸೂರ್ಯದೇವನ ಮೇಲಿನ ಪ್ರೀತಿ, ಮೋಹ ಕಡಿಮೆಯಾಗಿರಲಿಲ್ಲ. ಪ್ರತಿನಿತ್ಯ ನದಿಯಲ್ಲಿ ಸ್ನಾನಮಾಡಿ ಸೂರ್ಯದೇವನನ್ನು ಪೂಜಿಸುತ್ತಿದ್ದರು.

. ಕಾಮಗೇತಿ ಭೂಪಾಲನಿಗೆ ಪಾಳೆಯ ಪಟ್ಟ ಕಟ್ಟಿದ್ದು

ಅಂಬೋಜರಾಜ ಶಾಪಗ್ರಸ್ಥನಾಗಿದ್ದನು. ಬೇಡರ ಕಾಂಪು – ಕಂಪಳವನ್ನು ಕ್ರೌಂಚ ಅಡವಿಯಲ್ಲಿಟ್ಟಿದ್ದರು. ಅವನಿಗಿದ್ದ ಜವಾಬ್ದಾರಿಯನ್ನು, ಪಶು ಪಕ್ಷಿಗಳು, ಬೆಳ್ಳಿ ಬಸವರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹಿರಿಯ ಕುಮಾರ (ಸಹೋದರನ ಮಗ) ಕಾಮಗೇತಿ ಭೂಪಾಲನಿಗೆ ಕೊಟ್ಟಿದ್ದನು. ಧೈರ್ಯಶಾಲಿ, ಪರಾಕ್ರಮಿ ಆಗಿದ್ದ ಈ ವೀರ ಬೇಡರ ಪಾಳೆಯಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡನು. ಇತ್ತ ಅಂಭೋಜರಾಜನು, ಕಾಂಭೋಜರಾಜನ ಮಗನಾದ ಕಾಮಗೇತಿ ಭೂಪಾಲನನ್ನು ಕರೆಸಿ ನಾಯಕಿ ಪಟ್ಟವನ್ನು ಕೊಟ್ಟು ಬೇಡರನ್ನು ಉದ್ದಾರಮಾಡಲು ಹಾರೈಸಿದರು. ಅವನಿಗೆ ಬಿಲ್ಲು – ಬಾಣ, ಗಂಡಗೊಡಲಿಗಳನ್ನು ಅವರು ಒಪ್ಪಿಸಿದರು. ಗೋಸಂಪತ್ತನ್ನು ಕಾಪಾಡಬೇಕು, ಒಂಟಿಕೋಡು ಬೆಳ್ಳಿ ಹಸು – ಪಂಪಾದ್ರಿ ಬಸವರು ನಮ್ಮ ವಂಶದ ದೇವತೆಗಳೆಂದು ಸಾರಿದರು. ಬೇಡಪಡೆ, ಬೇಡಜನಾಂಗಕ್ಕೆ ತೊಂದರೆ ಆಗದಂತೆ ಕೆಲಸಮಾಡಲು ಹೇಳಿ ಪಾಳೆಯಗಳ ಎಲ್ಲ ಸ್ತ್ರೀಪುರುಷರು ಸುಖವಾಗಿರಲೆಂದು ಹಾರೈಸಿ ಕ್ರೌಂಚ ಅಡವಿಗೆ ವಾಸಿಸಲು ಹೋದನು.

ಕಾಮಗೇತಿಯವರು ಮಂದಪರಾಜನ ವಂಶದಿಂದ ಬಂದವರು, ಶಿವ, ಪಾರ್ವತಿ ಒಲಿದು ಕಾಮಗೇತಿಗೆ ಬಂಗಾರದ ಕೊಡಲಿ, ಸಿರಿವು, ಸಿದ್ದಕಿ, ಕೋಲು ಕೊಟ್ಟರಂತೆ. ಅಂದಿನಿಂದ ಇವರು ಕಾಪು – ಕಂಪಳದೊಂದಿಗೆ ಕೋಟಿಗೊಂದು ಮಂದ, ನೂರಾಒಂದು ಮಲ್ಲಿನಾಯಕನ ಪಂಗಡಗಳನ್ನು ವೃದ್ದಿಗೊಳಿಸಿದರು. ಒಮ್ಮೆ ಕಾಳಿ ಎಂಬ ಮಳೆ ಬಂದು ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಅಡವಿ ತುಂಬಿ ಹರಿದು ಎಂಟು ದಿನಗಳವರೆಗಿತ್ತು. ಆಗ ವಿಷ್ಣು, ಬ್ರಹ್ಮ, ಮಹೇಶ್ವರ ಇದನ್ನು ನೋಡಲು ಬಂದರು. ದುಷ್ಟರನ್ನು ನರಲೋಕಕ್ಕೆ ಕಳುಹಿಸಿ, ಶಿಷ್ಟರನ್ನು ರಕ್ಷಿಸುತ್ತಾರೆ.೨೨ ಹೀಗೆ ಕಾಮಗೇತಿಗಳು ಬುಡಕಟ್ಟು ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಪುರಾಣ, ಐತಿಹ್ಯ, ಜನಪದ, ಕಥೆ, ನಂಬಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಕಾಮಗೇತಿಗಳಲ್ಲಿ ಜಾತ್ರೆ ಹಬ್ಬ, ಉತ್ಸವಗಳು ಅನೇಕ. ಇವರಲ್ಲಿ ಬತ್ತಲ ಬಸವಂತಲು ಆಚರಣೆ ಇದೆ. ‘ಏಳಜ್ಜನವರು ಎಂಬ ಬೆಡಗಿನ ಹಾಗೂ ಕಾಮಗೇತಿ ಜನಗಳು ಈ ಆಚರಣೆಯಲ್ಲಿ ವಿಶೇಷವಾಗಿ ಭಾಗವಹಿಸಿ ಆಚರಿಸುತ್ತಾರೆ. ಇದು ಬಹುಮಟ್ಟಿಗೆ ಓಕುಳಿ ಆಟದ ರೀತಿಯಲ್ಲಿ ನಡೆಯುತ್ತದೆ. ಈ ಆಚರಣೆಯಲ್ಲಿ ಭಂಡಾರ (ಬುಕ್ಕಿಟ್ಟು) ಹಾಗೂ ಕುಂಕುಮದ ಪುಡಿಯನ್ನು ಬಳಸುತ್ತಾರೆ. ಏಳಜ್ಜನವರ ಗೋತ್ರದ ಗುಂಪು ಪುಡಿಗಾಸಿ ಹಾಕಿಕೊಂಡು, ಹೂವಿನ ಹಾರಧರಿಸಿ, ಕಾಮಗೇತಿ ಗುಂಪಿಗೆ ಬುಕ್ಕಿಟ್ಟಿನ ಪುಡಿಯಿಂದ ಹೊಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಕಾಮಗೇತಿ ಗೋತ್ರದವರು ಕುಂಕುಮದ ಪುಡಿಯಿಂದ ಏಳಜ್ಜನವರ ಗುಂಪಿಗೆ ಹೊಡೆಯುತ್ತಾರೆ. ಹೀಗೆ ಸ್ಪರ್ಧೆಯ ರೀತಿಯಲ್ಲಿ ಈ ಆಚರಣೆ ನಡೆಯುತ್ತದೆ.

ಚಾರಿತ್ರಿಕ ದಾಖಲೆಗಳ ಪ್ರಕಾರ ಶ್ರೀಮಾನ್, ರಾಜಾಧಿರಾಜ, ರಾಜಾತೇಜೋನಿಧಿ ಅಖಿಲಾಂಡಕೋಟಿ ಬ್ರಹ್ಮಂಡನಾಯಕ, ಕಸ್ತೂರಿತಿಲಕ ಕಾಮಕೇತನ, ಚಂಡಪ್ರಚಂಡ ಕುಲಭೇರುಂಡ, ನರಪತಿ ಮಂಡಲಾಧರ ಶ್ರೀಮಾನ್ ‘ನಾಯಂಕ ವಂಶ’. ನಿತ್ಯಾಚಾರ ಸತ್ಯಾಚಾರ ಲಿಂಗಾಚಾರ ಪ್ರವರ್ತನ ಸದ್ಧರ್ಮವುಳ್ಳ ಚಂದ್ರವಂಶ ಮಹೀಮತಿಗೋತ್ರ ಮನುಮುನಿಸೂತ್ರ ಸಂಜಿನಿತರಾದ ಮಂಜಪ್ಪನಾಯ್ಕ ಭೂಮೀಪತಿಯ ಶ್ರೀಲಕ್ಷ್ಮೀದೇವಿ ಹಿರೇರಾಜರ ಪೆಟ್ಟಿಗೆಯನ್ನು ಪೂಜಿಸುತ್ತಾ ಪಂಪಾಕ್ಷೇತ್ರ ನಿವಾಸಿಗಳಾದ ಹರಿಹರಸ್ವಾಮಿಗಳವರ ವರವಂಪಡೆದು ಸುಖದಿಂದ ರಾಜ್ಯಪಾಲನೆ ಮಾಡುತ್ತಿದ್ದರು ಎಂಬ ಇತ್ಯಾದಿ ವಿವರಗಳಿವೆ. ಈ ಬಗ್ಗೆ ಇದೊಂದು ಉದಾಹರಣೆ ಅಷ್ಟೇ. ಇನ್ನು ಅನೇಕ ದಾಖಲೆಗಳು ಈ ಬಗ್ಗೆ ಲಭ್ಯ ಇವೆ.

ಈ ಜಯರೇಖೆಯ ನಕಲಿನಲ್ಲಿ ಕಾಣಬರುವ ೧. ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಎಂಬುದು ಕ್ಷಾತ್ರಧರ್ಮವಲಂಬಿಗಳಾದವರು ಪರಶುರಾಮನ ಭಯದಿಂದ, ಕ್ಷತ್ರಿಯ ನಾಮವನ್ನು ಆ ದೇವನ ಹೆಸರಿನಲ್ಲಿ ಮಾರ್ಪಾಡು ಮಾಡಿ ನಾಯಕರಾದರೆಂಬುದಕ್ಕೂ ೨. ಕಾಮಕೇತನ, ವಾಲ್ಮೀಖಿಯ ಮಗನಾದ ಕಾಮಕೇತನ ಎಂಬುವನ ಅನ್ವಯಾಂತರಿಗಳಾಗಿರುವುದಕ್ಕು ೩. ಬದಲಾಯಿಸಿರುವ ವಂಶದ ಹೆಸರಿಗೂ ೪ – ೫ ಈ ವಂಶದವರು ಮನುವಿನ ಪರಂಪರೆಯಿಂದ ಬಂದ ಚಂದ್ರವಂಶದವರೆಂಬುದಕ್ಕೂ, ೬. ಆನೆಗೊಂದಿಯೇ ಮುಂತಾದ ಕಡೆಗಳಲ್ಲಿ ಪಾಳೆಯಗಾರರಾಗಿ ಪ್ರಭುತ್ವ ಮಾಡಿದವರು ನಾಯಕ ವಂಶಕ್ಕೆ ಸೇರಿದವರೇ ವಿನಃ ಬೇರೆ ಯಾವ ವಂಶಕ್ಕೂ ಸೇರಿದವರಲ್ಲವೆಂಬ ಸಂಗತಿ ದೃಢಪಟ್ಟಿದೆ. ಈ ನಾಯಕ ವಂಶದವರು ಕರ್ನಾಟಕ ಸಿಂಹಾಸನ ಸ್ಥಾಪನೆಯಾಗುವ ಮೊದಲೇ ಇಲ್ಲಿ ನೆಲೆಸಿದ್ದರು.[4] ಸರ್ವವನ್ನು ತ್ಯಾಗಮಾಡಿದ ಇವರು ‘ದೇಶಸೇವೆಯೇ ಈಶ ಸೇವೆ’ ಎಂಬ ವಾದಕ್ಕೆ ಬದ್ಧರಾಗಿದ್ದರು. ಹೀಗೆ ಕಾಮಗೇತಿ ನಾಯಕರು ಕುಮ್ಮಟ ನಾಯಕ ಅರಸರು, ವಿಜಯನಗರದ ನಂತರ ಪಾಳೆಯಗಾರರಾಗಿ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿರುವುದು ಸ್ಮರಣೀಯ.

ಚಿತ್ರದುರ್ಗ ಪ್ರದೇಶವನ್ನು ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದವರು ನಾಯಕ ಬುಡಕಟ್ಟಿನ ವಾಲ್ಮೀಖಿ ಗೋತ್ರದ ಕಾಮಗೇತಿ ವಂಶದ ಬೆಡಗಿನವರು. ಇವರಿಗೆ ಮಹಾ ನಾಯಕಾಚಾರ್ಯ, ಗಾದ್ರಿಮಲೆಹೆಬ್ಬುಲಿ, ರಾಜಾವೀರ, ಕಸ್ತೂರಿ ಕುಲತಿಲಕ ಎಂಬ ಬಿರುದುಗಳಿದ್ದವು. ತಿಮ್ಮಣ್ಣ ನಾಯಕ ಮೊದಲ ಅರಸನಾಗಿದ್ದ ಹಾಗೂ ರಾಜ್ಯವಾಳಿದ. ಇವನು ವಿಜಯನಗರದ ಅಧೀನದಲ್ಲಿದ್ದ. ಇವನ ನಂತರ ಓಬಣ್ಣನಾಯಕ ಸ್ವತಂತ್ರ ಆಳ್ವಿಕೆ ನಡೆಸುತ್ತಾನೆ. ತರುವಾಯ ಕಸ್ತೂರಿ ರಂಗಪ್ಪನಾಯಕನು ಮಾಯಕೊಂಡ, ಸಂತೆಬೆನ್ನೂರು, ಹೊಳಲ್ಕೆರೆ, ಅಣಜಿ ಮೊದಲಾದ ಸ್ಥಳಗಳನ್ನು ಜಯಿಸಿ ರಾಜ್ಯ ವಿಸ್ತರಿಸಿದನು. ಈ ಪಾಳೆಯ ಪಟ್ಟನ್ನು ವಿಸ್ತರಿಸಿ ನಾಲ್ಕು ಪ್ರಾಂತ್ಯಗಳಲ್ಲಿ ವಿಂಗಡಿಸಿ ಅಧಿಕಾರಿಗಳನ್ನು ನೇಮಿಸಿದ ಕೀರ್ತಿ ಎರಡನೆಯ ಮದಕರಿನಾಯಕನಿಗೆ ಸಲ್ಲುವುದು. ಇವನಾದ ಮೇಲೆ ಭರಮಪ್ಪನಾಯಕ ಬೆಟ್ಟದ ಮೇಲೆ ಮಠವನ್ನು ಕಟ್ಟಿಸಿ, ರಾಜ್ಯದಲ್ಲಿ ೩೦ ದೇವಾಲಯಗಳನ್ನೂ, ೪ ಅರಮನೆಗಳನ್ನೂ, ೫ ಬಲಿಷ್ಟವಾದ ಕೋಟೆಗಳನ್ನು ಅನೇಕ ಕೆರೆಗಳನ್ನು ಕಟ್ಟಿಸಿದ್ದು ಕೀರ್ತಿಗೆ ಪಾತ್ರನಾಗಿದ್ದಾನೆ. ಹಿರೇಮದಕರಿನಾಯಕ ಮೊಳಕಾಲ್ಮೂರುವಿನವರೆಗೆ ರಾಜ್ಯ ವಿಸ್ತರಿಸಿದ್ದ. ಚಿತ್ರದುರ್ಗ ಸಂಸ್ಥಾನ ಸರ್ವತೋಮುಖ ಅಭಿವೃದ್ಧಿ ಕಂಡದ್ದು ಕಿರಿಯ ಮದಕರಿನಾಯಕನ ಕಾಲದಲ್ಲಿ. ಹೈದರಾಲಿಯಿಂದ ಚಿತ್ರದುರ್ಗ ಅವನತಿಯಾಗಿದ್ದು ಚರಿತ್ರೆ. ಪ್ರಾಚೀನ ಕಾಲದ ಕಾಮಕೇತನ (ನಲ್ಲಕೇತನ ಎಂಬುದು ನಲಗೇತಿ ಆದಂತೆ) ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಸ್ವರೂಪ ಪಡೆಯಿತು. ಮಧ್ಯಕಾಲದಲ್ಲಿ ಸಂತತಿ, ಬೆಡಗು, ಸಂಘಟನೆ, ರಾಜವಂಶ, ವಿಶಿಷ್ಟ ಜನಶಕ್ತಿಯಾಗಿ ಬೆಳೆದಿತ್ತು.

ಕಾಮಗೇತಿಯರನ್ನು ಎರಡು ಬಗೆಯಲ್ಲಿ ಅಧ್ಯಯನ ಮಾಡಬಹುದು. ಒಂದು ಬುಡಕಟ್ಟು ನೆಲೆಯಲ್ಲಿಯಾದರೆ, ಮತ್ತೊಂದು ಚಾರಿತ್ರಿಕ ನೆಲೆಯ ಹಿನ್ನೆಲೆಯಲ್ಲಿ ಈ ವಂಶವನ್ನು ಅಧ್ಯಯನ ಮಾಡುವ ಅಗತ್ಯವಿದೆ.

.೪. ಕಾಮಗೇತಿ, ನಲಗೇತಿ ಬೆಡಗುಗಳ ಪರಿಚಯ

ಬುಡಕಟ್ಟು ನೆಲೆಯಲ್ಲಿ ಚೆಲ್ಲಾಪಿಲ್ಲಿಯಾಗಿರುವ ಬೆಡಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿದೆ. ಈ ಬಗ್ಗೆ ಅಧ್ಯಯನಗಳಾಗಿರುವುದು ವಿರಳ. ಈಗಾಗಲೇ ಪಂಡಿತ ರೇವಣ್ಣಶಾಸ್ತ್ರಿಗಳು ಬೇಡರ ಬೆಡಗುಗಳನ್ನು ಹೀಗೆ ಗುರುತಿಸುತ್ತಾರೆ: ಬಂಟ್ರು, ಹಳ್ಳಿ, ಹಾಲು, ಹನುಮರು, ಮ್ಯಾಸನಾಗಿ – ಮ್ಯಾಸಬೇಡರು, ಸಾಧುಬೇಡರು, ಸಲೆಯನ್, ತೆಲುಗು, ಊರಬೇಡರು,ಯಮಳೋರು – ಯನುಮಲ ಮುಂತಾಗಿ ಆಧುನಿಕ ಪ್ರಭೇದಗಳಿವೆ ಎಂದು ತಿಳಿಸುತ್ತಾರೆ.[5] ಬೇಡ – ನಾಯಕರಲ್ಲಿ ರಾಜ್ಯಾಳ್ವಿಕೆ ಮಾಡಿದ ಕೀರ್ತಿ ಕಾಮಗೇತಿಯವರಿಗೆ ಸಲ್ಲುವುದು.

‘ಕಾಮಗೇತಿ’ ಇದೊಂದು ಬೇಡರ ಬೆಡಗು. ಕ್ರಮೇಣ ವ್ಯಕ್ತಿ, ಸ್ಥಳ, ಜಾತಿಯಾಗಿ ಹಾಗೂ ವಿವಿಧ ಬಗೆಯಲ್ಲಿ ಮಾರ್ಪಾಡಾಗುತ್ತಾ ಬಂದಿದೆ. ನಾಮಪದವಾಗಿ ಬಳಸುವಾಗ ಕಾಮಗೇತ್ಲಾರು, ಕಾಮಗೇತಿಮನೆ, ಕಾಮಗೇತ್ಲುದೇವರು, ಕಾಮಗೇತ್ಲುಹಳ್ಳಿ, ಕಾಮಗೇತ್ಲು ವೀಳ್ಯೆ, ಕಾಮಗೇತ್ಲುಕೇರಿ, ಹೀಗೆ ತಮ್ಮನ್ನು ಅನನ್ಯವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ನಲಗೇತಿಗಳು ನಲಗೇತನಹಳ್ಳಿಯಲ್ಲಿದ್ದಾರೆ. ಚನ್ನಕೇಶವ ಇವರ ದೇವರು.

ಕಾಮಗೇತಿಲೋರು ಮತ್ತು ಕುಕ್ಕನೋರು (ಚಿತ್ರಲಿಂಗದೇವರು), ಕಾಮನೋಡು (ಕಂಪಳದೇವರು), ಕಾಮಗೆತ್ತಲರು, ಕಾಮಕೇತಲವರು, ಕಾಮಲವರು, ಕಾಂಗೆತ್ತಲರು, ಸೂರ್ಯಕಾಮ (ಮಾದೇಲಿಂಗದೇವರು), ಕಾಮಗೇತಿ ಬುಲ್ಲುಡ್ಲು (ಚಂದ್ರವಂಶ – ಮಂದವಾರು) ಇತ್ಯಾದಿಯಾಗಿ ಕರೆದುಕೊಂಡಿದ್ದಾರೆ. ನಲ್ಲೆತೀರ, ಕಿರಾತಕರು, ಕಸ್ತೂರಿ, ಕಲ್ಯಾನದವರು, ನಲ್ಲಬೋತುಲವಾರು, ನಲಕೇತಲವರು, ಸಹಕೇತರು, ಯರಗೋತಿ ಮೊದಲಾದ ಬೆಡಗುಗಳಲ್ಲಿ ಗುರುತಿಸಿಕೊಂಡಿರುತ್ತಾರೆ. ಇವೆಲ್ಲ ‘ಕಾಮಗೇತಿ’ ಬೆಡಗಿನಂತೆ ಸಮನಾದ ಮತ್ತು ಪರ್ಯಾಯವಾದ ಇತರ ಬೆಡಗುಗಳು.

ಕಾಮಗೇತಿಗಳು ಪ್ರಾಚೀನಕಾಲದಲ್ಲಿ ಹರಿಣಮುನಿಯ ಮೂಲಕ ತೇರಸಾಮಂತಗೋತ್ರದಿಂದ ಉದಯಿಸಿದರು. ತೇರಸಾಮಂತ, ಔರಸಗೋತ್ರಗಳಲ್ಲಿ ಕಾಮ್ಗೇತಿ, ಮಾತುಲಗೋತ್ರವು ಪ್ರಸಿದ್ಧವಾಗಿರುವುದು. ಇದರ ಉಪಗೋತ್ರಗಳು – ಚನ್ನರು, ನಲ್ಲಗೇತ್ಲರು, ಬಿಬ್ಲರು, ಗೊಡಗುದಾಸರು, ನಗರದವರು, ಕ್ಯಾಸಯ್ಯರು, ಚಿತ್ರಯ್ಯರು, ಮಾಡ್ಲರು, ಬುಡ್ಡು ಬೋರ್ನರು, ಕೊತ್ತುಬ್ಬುರು, ಕುರುಲವರು ದೌಹಿತ್ರಿಜಂಪ್ಲರು ಇವೇ ಕಾಮ್ಗೇತಿ ಉಪಗೋತ್ರಗಳು.[6] ಮೇಲಿನ ಗೋತ್ರಗಳಿಗೆ ಚಿತ್ರದೇವರು, ನರಸಿಂಹದೇವರು ಕುಲದೇವರುಗಳಿವೆ. ಕಾಟಯ್ಯ (ಕಾಟಪ್ಪನಹಟ್ಟಿ) ಉಪದೇವರು.

ಇವರಿಗೆ ಕಾಮ್ಗೇತಲಹಳ್ಳಿ, ಚಳ್ಳಕೆರೆ, ಚಿತ್ರದುರ್ಗ ಮೊದಲಾದ ಸ್ಥಳಗಳಲ್ಲಿ ಗುಡಿಕಟ್ಟೆಗಳಿರುವವು. ಸೋಮವಾರ ಮನೆದೇವರವಾರ. ಮಂಗಳವಾರ ಹೆಣ್ಣುದೇವರ ವಾರ. ಬೇಡರು ಇಂದಿಗೂ ಆಚರಣೆ, ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿರುವರು.

 

[1] ಎಂ.ಎಸ್. ಪುಟ್ಟಣ್ಣ : ಚಿತ್ರದುರ್ಗದ ಪಾಳೆಯಗಾರರು, ಪು.೧

[2] ನೋಡಿ. ಪಿ. ಅಬ್ದುಲ್ ಸತ್ತಾರ್, ‘ತರೀಕೆರೆಯ ಪಾಳೆಯಗಾರರು’, ಪು. ೬-೭

[3] ಪಂಡಿತ ಶ್ರೀ ರೇವಣ್ಣಶಾಸ್ತ್ರಿಗಳು : ವಾಲ್ಮೀಕ ಪುರಾಣವು, ೧೯೫೯, ಪು. ೨೬

[4] ಹರತಿ ವೀರನಾಯಕ: ಕ್ಷಾತ್ರಾಂಶ ಪ್ರಭೋದ, ೧೯೮೭, ಪು.೯-೧೦

[5] ವಾಲ್ಮೀಕರ ಪುರಾಣವು, ಪು.೪೩

[6] ಅದೇ ಪು.೨೩