ಮಾನವ ಬೇಟೆ, ಪಶುಪಾಲನೆ ಮತ್ತು ಕೃಷಿಯಿಂದ ಸ್ಥಿತ್ಯಂತರಗೊಂಡಾಗ ಜೀವನಕ್ರಮದಲ್ಲಿ ಹಲವು ಮಾರ್ಪಾಟುಗಳಾದವು. ಅವುಗಳಲ್ಲಿ ಪ್ರಮುಖವಾದುದು ಆಹಾರ ಹುಡುಕುವ (ಸಂಗ್ರಹಣೆಯ) ಬದುಕು. ಕ್ರಮೇಣ ಜನಜೀವನದಲ್ಲಿ ಸಂಭವಿಸುವ ಘಟನೆಗಳಿಗೆ ನ್ಯಾಯ, ತೀರ್ಮಾನ, ಪಂಚಾಯ್ತಿಗಳನ್ನು ತಾವೇ ರೂಪಿಸಿಕೊಂಡಿದ್ದು ಗಮನಾರ್ಹ. ಹೀಗೆ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಬುಡಕಟ್ಟು ಸಮುದಾಯವು ತನ್ನದೇ ಅಧ ನ್ಯಾಯ ತೀರ್ಮಾನದ ವ್ಯವಸ್ಥೆಯನ್ನು ಹೊಂದಿರುತ್ತದೆ. ಇಂಥಾ ನ್ಯಾಯಪಂಚಾಯ್ತಿ ಕಾರ್ಯವಿಧಾನ ಇತರೆ ಸಮುದಾಯಗಳಲ್ಲಿದ್ದರೂ ಬುಡಕಟ್ಟುಗಳಲ್ಲಿ ಮಾತ್ರ ವಿಶಿಷ್ಟ ಸ್ಥಾನ ಪಡೆದಿದ್ದು ಆ ವ್ಯವಸ್ಥೆಗೆ ಹೊಂದಿಕೊಂಡಿರುತ್ತದೆ. ಕರ್ನಾಟಕದಲ್ಲಿರುವ ಬುಡಕಟ್ಟುಗಳ ಪೈಕಿ (೫೦) ಬೇಡರ ಬುಡಕಟ್ಟು ಜನಸಂಖ್ಯೆಯಲ್ಲಿ ಮೊದಲನೆಯದಾಗಿದ್ದೂ, ಚರಿತ್ರೆ ಮತ್ತು ಸಂಸ್ಕೃತಿಯಿಂದ ಅತೀ ಮಹತ್ವ ಹೊಂದಿದೆ. ಇವರು ಕರ್ನಾಟಕದ ಉದ್ದಗಲಕ್ಕೂ ನೆಲಸಿದ್ದರೂ ಮಧ್ಯಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ (ಹೆಚ್ಚಿನ ಪ್ರಮಾಣದಲ್ಲಿ) ಕಂಡುಬರುತ್ತಾರೆ. ಈ ಬಗ್ಗೆ ಲಭ್ಯ ಇರುವ ಮಾಹಿತಿಯನ್ನು ಚಾರಿತ್ರಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಇಲ್ಲಿ ರಾಜಪ್ರಭುತ್ವದ ನ್ಯಾಯಾಂಗತ ಪದ್ಧತಿಯನ್ನು ಹೊರತುಪಡಿಸಿ, ಜನಸಾಮಾನ್ಯರ ದೃಷ್ಟಿಕೋನದಿಂದ ಅಧ್ಯಯನಮಾಡಲಾಗಿದೆ. ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿನ ಈ ಸಮುದಾಯದ ಸಾಮಾಜಿಕ, ನ್ಯಾಯಾಂಗದ ಕಟ್ಟುಪಾಡುಗಳನ್ನು ವಿಶ್ಲೇಷಿಸುವ ಉದ್ದೇಶ ಇಲ್ಲಿದೆ.

ಬೇಡರು ಆದಿಯಿಂದಲೂ ಸಂಸ್ಕೃತಿ ಮತ್ತು ಆಚರಣೆಗಳ ಹೆಸರಿನಲ್ಲಿ ಶೀಲ, ಶಿಸ್ತು, ನಡವಳಿಕೆಗಳನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಆದರೆ ಇತ್ತೀಚಿನ ಸಂದರ್ಭಗಳಲ್ಲಂತೂ ಇವರ ಜೀವನ ವಿಧಾನದಲ್ಲಿ ಏಕ ಪ್ರಕಾರತೆ ಉಳಿದಿಲ್ಲ. ಚದುರಿ ಹೋಗಿರುವ ಇವರು ಕರ್ನಾಟಕದ ಮೂಲೆ – ಮೂಲೆಗಳಲ್ಲಿ ಅಂದರೆ ತಮಗಿಷ್ಟವಾದ ನೆಲೆಗಳಲ್ಲಿ ವೈವಿಧ್ಯಮಯವಾದ ಬದುಕನ್ನು ನಡೆಸುತ್ತಿದ್ದಾರೆ. ರಾಜಪ್ರಭುತ್ವಗಳು ಕೈತಪ್ಪಿದಾಗ ಗ್ರಾಮ, ಜನಸಂಖ್ಯೆಗೆ ಅನುಗುಣವಾಗಿ ವಿಶೇಷ ಜವಾಬ್ಧಾರಿಗಳನ್ನು ಇವರು ಹಂಚಿಕೊಂಡಿರುತ್ತಾರೆ. ಕರ್ನಾಟಕದಲ್ಲಿನ ಬೇರೆ ಬೇರೆ ಸಮುದಾಯಗಳಲ್ಲಿರುವಂತೆ ಬೇಡರಲ್ಲಿಯೂ ಕಟ್ಟೆಮನೆಗಳಿದ್ದವು. ನಾಯಕರ ಕಟ್ಟೆಮನೆಗಳ ಹೆಸರುಗಳು ಆ ಜನಾಂಗದ ಹಿರಿಯ ವ್ಯಕ್ತಿಗಳು ಹೆಸರಿನ ಜೊತೆ ಸೇರಿರುವ ಉಲ್ಲೇಖಗಳಿವೆ. ಉದಾಹರಣೆಗೆ ತೇಜಸ್ವಿ ಕಟ್ಟೀಮನೆ, ಆರ್.ವಿ. ಕಟ್ಟೀಮನೆ, ಪರಮೇಶ್ವರಪ್ಪ ಕಟ್ಟಿಮನೆ, ಕಟ್ಟೆಬಸಣ್ಣ, ದೊರೆ, ನಾಯಕ, ಗುರಿಕಾರ, ಕಟ್ಟೆನಾಯಕ, ತಳವಾರ ಇತ್ಯಾದಿ. ರಾಜಪ್ರಭುತ್ವದಲ್ಲಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಲು ಇಂಥಾ ಕಟ್ಟೆಮನೆಗಳು ಸಹಾಯಕವಾಗಿದ್ದವು. ಇಂದಿನ ವ್ಯವಸ್ಥೆಯಲ್ಲಿ ತಾಲ್ಲೂಕು, ಜಿಲ್ಲಾ ನ್ಯಾಯಾಲಯಗಳು ಇದ್ದಂತೆಯೇ ಈ ಕಟ್ಟೆಮನೆಗಳು. ಇಂದಿನ ನ್ಯಾಯಪಂಚಾಯ್ತಿ ವ್ಯವಸ್ಥೆಯ ಊರುಚಾವಡಿ, ಪೊಲೀಸ್ ಠಾಣೆ, ಕೋರ್ಟುಗಳಲ್ಲಿ ಭಾರತದ ಸಂವಿಧಾನದನ್ವಯವಿರುವುದು ಎಲ್ಲರಿಗೂ ತಿಳಿದ ವಿಚಾರ.

‘ಕಟ್ಟೆಮನೆ’ ಎಂದರೆ ಜಾತಿಯ ಶ್ರೇಣಿ – ಸಂಘ, ಸಂಸ್ಥೆ ಎಂದು ತಿಳಿಸಲಾಗಿದೆ. ಇಂದು ಕಟ್ಟೆಮನೆಯನ್ನು ‘ಪಂಚಾಯತಿ ಕಟ್ಟೆ’ ಎಂದು ಕರೆಯುವುದೇ ಹೆಚ್ಚು. ಹೀಗೆಂದರೆ: ಚಾವಡಿ; ಅಪರಾಧಿಯನ್ನು ನೀನು ಕಟ್ಟೆಮನೆ, ಗುರುಮನೆ – ಅರಮನೆಗಳಿಗೆ ವಿಧೇಯನೋ – ಅವಿಧೇಯನೋ ಎಂದು ಕೇಳುವವರು ನಾನು ಹಿಂದೆಂದೂ ಅಪರಾಧ ಮಾಡಿರಲಿಲ್ಲವೆಂದೂ, ಹಳ್ಳಿಯ ಕಟ್ಟೆಮನೆ ಮುಚ್ಚಳಿಕೆ ನೀಡಿತೆಂಬ ವಿವರಕೊಡುತ್ತಾರೆ. ಇನ್ನೊಂದು ಅರ್ಥದಲ್ಲಿ ಕಟ್ಟೆಮನೆ ಗ್ರಾಮಾಧಿಕಾರಿಯ ಮನೆ; ಊರ ಮುಖಂಡರ ಮನೆ ಎಂದಾಗುತ್ತದೆ. ಬುಡಕಟ್ಟು ಸಮುದಾಯಗಳಲ್ಲಿ ಕಟ್ಟೆಮನೆ ಯಜಮಾನನು ಊರಿನ – ಜಾತಿಯ ಮುಖಂಡನೂ ಆಗಿರುತ್ತಿದ್ದ.

ಕರ್ನಾಟಕದಲ್ಲಿ ನೆಲಸಿರುವ ಬೇಡರು ತಮಗೆ ಇಷ್ಟವಾದ ಸ್ಥಳದಲ್ಲಿ ಸಾಮೂಹಿಕ ಭೋಜನ, ವಿವಾಹ, ಹಬ್ಬ – ಹರಿದಿನಗಳನ್ನು ಮಾಡುತ್ತಿದ್ದರು. ಜನಸಂಖ್ಯೆ ಹೆಚ್ಚಿದಂತೆ ಜಾತಿಯಲ್ಲಿ ಕಲಹ, ಸಂಘರ್ಷಗಳು ಹುಟ್ಟಿಕೊಂಡವು. ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಜನಾಂಗದ ಹಿರಿಯರ ನೇತೃತ್ವದಲ್ಲಿ ನ್ಯಾಯಾಂಗವನ್ನು ಭದ್ರಪಡಿಸಲು ಮುಂದಾದರು. ಅದಕ್ಕೆ ತನು ಮನಧನಗಳನ್ನು ಅರ್ಪಿಸುವ ಸಂಕಲ್ಪ ಕೈಗೊಳ್ಳಲಾಯಿತು. ಇದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಯೇ ಆಗಿತ್ತು.

ಬೇಡ ಜನಾಂಗ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುವ ಹಂತದಲ್ಲಿರುವಾಗಲೇ ದೊರೆ ಯರಮಂಚಿನಾಯಕ, ದಳವಾಯಿ ಮೊದಲಾದವರು ಸೇರಿ ಬೇಡ ಜನಾಂಗದ ಕಟ್ಟುಪಾಡು, ನೀತಿ – ನಿರ್ಬಂಧಗಳ ಬಗ್ಗೆ ಚಿಂತಿಸುತ್ತಾರೆ. ಜಾತಿ ಕಲಹ (Caste Conflict), ಕೋಮು ಗಲಭೆ (Communal Conflict), ಗೋತ್ರಗಳ ಕಲಹ, ಗುರು – ಪೂಜಾರಿಗಳ, ಆಯಾ ದೇವರುಗಳ ಐಕ್ಯತೆಗಾಗಿ ಮತ್ತು ಎಲ್ಲ ವಿಧವಾದ ವಿವಾದಗಳನ್ನು ಪರಿಹರಿಸಿಕೊಳ್ಳಲು ಕಟ್ಟೆಮನೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಹೀಗೆ ಸ್ಥಾಪಿಸಲ್ಪಡುವ ಗುಡಿಕಟ್ಟೆ, ಕಟ್ಟೆಮನೆಗಳಿಗೆ ಯಜಮಾನರುಗಳನ್ನು ನೇಮಕ ಮಾಡುತ್ತಿದ್ದರು. ಅವರಿಗೆ ಗೋತ್ರದ ವಿವಾದಗಳನ್ನು ಬಗೆಹರಿಸುವಂತೆ ಕಾರ್ಯಸೂಚಿ ಸಿದ್ಧಪಡಿಸಿದ್ದರು. ಇದರ ನೇತೃತ್ವವನ್ನು ವಹಿಸಿದ್ದ ಯರಮಂಚಿನಾಯಕ, ಗಾದರಿ ಪಾಲನಾಯಕ, ರಪ್ಪಲಸೂರಿ ಇತರರು ವಹಿಸಿದ್ದರು. ಗೋದಾವರಿ ನದಿ ಪ್ರದೇಶದಲ್ಲಿರುವಾಗ ಕಟ್ಟೆಮನೆಗಳನ್ನು ಸ್ಥಾಪಿಸುವ ವಿಚಾರ ಮಾಡಿದ್ದರು. ಮೂಲತಃ ಆಂದ್ರದಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ಆರಾಧಿಸುವ ಬೇಡರು ವಿಜಯನಗರದ ತರುವಾಯ ನಮಗೆ ದಿಕ್ಕು ತಪ್ಪಿದಂತಾಗಿ ಆನೆಗೊಂದಿ ‘ನರಪತಿ ಸಂಸ್ಥಾನ’ದ ಆಶ್ರಯ ಪಡೆಯಬೇಕಾಯಿತು. ನರಪತಿಗಳು ಅರಮನೆ ಮತ್ತು ಗುರುಮನೆಗಳಿಗೆ ಒಡೆಯರಾಗಿದ್ದರು. ಹೀಗಿರುವಾಗ ಬೇಡರ ೧೨ ಪೆಟ್ಟಿಗೆ ದೇವರುಗಳನ್ನು ಆನೆಗೊಂದಿ ಕೋಟೆಯಲ್ಲಿ ಬಂಧಿಸಿಡುತ್ತಾರೆ. ಯರಮಂಚಿನಾಯಕ ಹಾಗೂ ಇತರ ಬೇಡರ ಹಿರಿಯರ ಆದೇಶದಂತೆ ವೀಳ್ಯೆ ಹಿಡಿದು ಕೊಡಗಲುಬೊಮ್ಮ ಎಂಬ ವೀರ ಈ ೧೨ ಪೆಟ್ಟಿಗೆ ದೇವರುಗಳನ್ನು ಕೋಟೆಯನ್ನು ಬೇಧಿಸಿ ತರುತ್ತಾನೆ. ಆಗ ಅವನು ಬೇಡರ ಕಟ್ಟೆಮನೆ ಧಾರ್ಮಿಕ ಹಾಗೂ ಇತರೆ ಕಾರ್ಯಗಳಿಗೆ ಕಾರಣನಾದ. ಇವರು ಕಿರುಪಾಳೆಯಗಾರನಾದರೂ ಬಹಳಷ್ಟು ದಿನ ಇರಲಿಲ್ಲ. ಪಾಳೆಯ ಪಟ್ಟುಗಳ ರಾಜಕೀಯದಿಂದ ಕಟ್ಟೆಮನೆಗಳು ಭಿನ್ನವಾಗಿರುವಂತವು. ಆರಂಭದಲ್ಲಿ ಎಲ್ಲ ಕಡೆ ಕಟ್ಟೆಮನೆಗಳಿದ್ದರೂ ಅವುಗಳ ಅಸ್ತಿತ್ವ ಕಾಪಾಡಿಕೊಂಡಿದ್ದು ಕೆಲವೇ ಮಾತ್ರ. ನಾಯಕನಹಟ್ಟಿ, ಜರಿಮಲೆ, ಗುಡಿಕೋಟೆಗಳು ಪಾಳೆಯಪಟ್ಟುಗಳಾದರೂ ನನ್ನಿವಾಳ, ಗೋನೂರು, ನಾಯಕನಹಟ್ಟಿ ಕಟ್ಟೆಮನೆಗಳಾಗಿದ್ದವು. ನಾಯಕರಲ್ಲಿ ಅತ್ಯಾಚಾರ ನಡೆದಾಗ, ಕುಲ ಕೆಟ್ಟವರನ್ನು, ಹಾದರತನ, ಕಳ್ಳತನ, ಕೆಟ್ಟ ಕೆಲಸ ಮಾಡುವವರನ್ನು ಕುಲದಿಂದ ಹೊರಹಾಕುತ್ತಿದ್ದರು. ಊರಿನ ಪವಿತ್ರ ಸ್ಥಳದಲ್ಲಿ ದೇವಾಲಯ ಕಟ್ಟಿ ಪಂಚಾಯ್ತಿ ಚಾವಡಿಗಳಲ್ಲಿ ಬೇಡ ಸಮುದಾಯದವರು ಸೇರಿ ನಡೆಸುವ ನ್ಯಾಯ ಪಂಚಾಯ್ತಿ ಸ್ಥಳಕ್ಕೆ ‘ಕಟ್ಟೆಮನೆ’ ಎಂದು ಹೆಸರಾಯಿತು. ಕಟ್ಟೆಮನೆಗಳು ಬೇಡರ ಸರ್ವತೋಮುಖ ಅಭಿವೃದ್ಧಿಯನ್ನು ಧ್ಯೇಯವಾಗಿಟ್ಟುಕೊಂಡಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.

ಚಿತ್ರದುರ್ಗ ಜಿಲ್ಲೆ ಮತ್ತು ಅದರ ಆಸುಪಾಸಿನಲ್ಲಿ (ಚಿನ್ನಹಗರಿ ನದಿ ಪರಿಸರ ಮತ್ತು ಬೇಡರನಾಡು) ಬೇಡನಾಯಕರ ಕಟ್ಟೆಮನೆಗಳಿದ್ದವು. ೧೨ ಪೆಟ್ಟಿಗೆ ದೇವರುಗಳ ಸ್ಥಳಗಳನ್ನೇ ಹೋಲುವ ಕಟ್ಟೆಮನೆಗಳಿದ್ದವೆಂದು ಹೇಳಲಾಗಿದೆ. ಆದರೆ ಬೇಡರಲ್ಲಿ ಕ್ರಮೇಣ ೩ ಕಟ್ಟೆಮನೆಗಳು ಮಾತ್ರ ಉಳಿದಿವೆ (ಗೋನೂರು, ನನ್ನಿವಾಳ ಮತ್ತು ನಾಯ್ಕನಹಟ್ಟಿ). ಉತ್ಪ್ರೇಕ್ಷೆಗೆ ೧೨ ಕಟ್ಟೆಮನೆಗಳನ್ನು ಹೇಳಿಕೊಳ್ಳುತ್ತಾರೆ.

ಆ ೧೨ ಕಟ್ಟೆಮನೆಗಳೆಂದರೆ :

೧. ರಾಯಲುಕಟ್ಟೆ : ಪದಿಮುತ್ತಿಗಾರು ಕಟ್ಟೆಮನೆ, ಪದಿನಾರು ದೇವರುಹಟ್ಟಿ, ಮೊಳಕಾಲ್ಮೂರು ತಾಲೂಕು.

೨. ರಾಗಿಮಾನುಕಟ್ಟೆ : ಕಂಪಳದೇವರ ಕಟ್ಟೆಮನೆ, ಕಂಪಳ ದೇವರಹಟ್ಟಿ, ಮೊಳಕಾಲ್ಮೂರು ತಾಲೂಕು.

೩. ರಚ್ಚಕಟ್ಟೆ : ಕಲ್ಲೇದೇವರಪುರ ಕಟ್ಟೆಮನೆ, ಕಲ್ಲೇದೇವರಪುರ, ಜಗಳೂರು ತಾಲೂಕು

೪. ಮೊಲಕಾಲಕಟ್ಟೆ : ಚಿಂತಗುಂಟ್ಲು ಕಟ್ಟೆಮನೆ, ಕುದಾಪುರ, ಚಳ್ಳಕೆರೆ ತಾಲೂಕು.

೫. ನಾಯಕನಹಟ್ಟಿ (ನೂಕಲಕಟ್ಟೆ) : ಹಟ್ಟಿ ಮಲ್ಲಪ್ಪನಾಯಕ ಕಟ್ಟೆಮನೆ, ನಾಯಕನಹಟ್ಟಿ, ಚಳ್ಳಕೆರೆ ತಾಲೂಕು.

೬. ಗೋನೂರು (ಏಕಲುಕಟ್ಟೆ) : ಸೂರಪ್ಪನಾಯಕ ಕಟ್ಟೆಮನೆ, ಹೂಡೇಂ (ಗೋನೂರು / ಚಿತ್ರದುರ್ಗ) ಕೂಡ್ಲಿಗಿ ತಾಲೂಕು

೭. ಪೋಕಲಕಟ್ಟೆ : ಚಿನ್ನಪಾಲನಾಯಕ ಕಟ್ಟೆಮನೆ, ನನ್ನಿವಾಳ, ಚಳ್ಳಕೆರೆ ತಾಲೂಕು.

೮. ಆಚಾರಕಟ್ಟೆ : ಕಾಮಗೇತನಹಳ್ಳಿ ಕಟ್ಟೆಮನೆ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ.

೯. ಗಿರಿಕಲಕಟ್ಟೆ : ಜಂಬುದ್ವೀಪಗಳಗುಡ್ಡೆ ಕಟ್ಟೆ ಮನೆ, ಥಳಕು (ಬಂಜಗೆರೆ) ಚಳ್ಳಕೆರೆ ತಾಲೂಕು ಈ ಬಗ್ಗೆ ಇನ್ನೂ ೩ ಕಟ್ಟೆಮನೆಗಳ ಹೆಸರು ಮಾತ್ರ ಪುನರಾವರ್ತನೆಯಾಗುತ್ತವೆ. ಯಾವುದೋ ಒಂದು ಹಂತಕ್ಕೆ ಬೇಡ ಜನಾಂಗ ಇಬ್ಭಾಗವಾದಾಗ ದೊರೆ ಯರಮಂಚಿ ನಾಯಕ ಐವೋದಿ (ಗೌರಸಮುದ್ರ) ಮಠವನ್ನು ಕೇಂದ್ರಸ್ಥಾನವಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದ. ಆ ಕಟ್ಟೆಮನೆಗಳ ವಿವರ ಇಂತಿದೆ :

೧. ನಲ್ಲಚೆರುವು ಓಬಳದೇವರು ಕಟ್ಟೆಮನೆ (ರುದ್ರಮ್ಮನಹಳ್ಳಿ)

೨. ಪೆದ್ದತಿರುಮಲ ದೇವರ ಕಟ್ಟೆಮನೆ (ಪದಿಮುತ್ತಿಗಾರ) (ಬೇಡರೆಡ್ಡಿಹಳ್ಳಿ)

೩. ಸೂರಲಿಂಗನ ಕಾಮಗೇತನಹಳ್ಳಿ ಕಟ್ಟೆಮನೆ (ಆಚಾರ) (ಕಾಟಪ್ಪನಹಟ್ಟಿ – ವಿಚಾರದ ಕಟ್ಟೆಮನೆ)

೪. ಕಂಪಳದೇವರ ಕಟ್ಟೆಮನೆ (ಕಂಪಳದೇವರಹಟ್ಟಿ)

೫. ಕಲ್ಲೇದೇವರಪುರದ ರಚ್ಚೆ ಕಟ್ಟೆಮನೆ (ಕಲ್ಲೇದೇವರಪುರ)

೬. ಜಂಬುದ್ವೀಪದ ಗಿಲುಕಲು ಕಟ್ಟೆಮನೆ (ಕುದಾಪುರ – ತಳಕು – ಬಂಜಗೆರೆ) ಇತ್ಯಾದಿ.

ಕ್ರಮೇಣ ೩ ಕಟ್ಟೆಮನೆಗಳಾದ ಬಗ್ಗೆ ಉಲ್ಲೇಖವಿದೆ (ಆಂಧ್ರದಿಂದ ವಲಸೆ ಬಂದಾಗ)

೧. ಪೆನ್ನೊಬಳ ದೇವರ ಕಟ್ಟೆಮನೆ – ಸುರಪತಿ

೨. ಅಹೋಬಲ ದೇವರ ಕಟ್ಟೆಮನೆ – ನರಪತಿ

೩. ಬುಗ್ಗೋಬಳ ದೇವರ ಕಟ್ಟೆಮನೆ – ಗಜಪತಿ (ಹೊಸಹಟ್ಟಿ ಕೂಡ್ಲಿಗಿ) ಮುಖಂಡರಾಗಿದ್ದರು. ಓರಿಸ್ಸಾದ (ಕಳಿಂಗ) ಗಜಪತಿ, ವಾರಂಗಲ್ಲಿನ ಕಾಕತೀಯ, ಆನೆಗೊಂದಿ ನರಪತಿ ಮತ್ತು ರಾಯಲ ಸೀಮೆ, ಬಯಲು ಸೀಮೆಗಳನ್ನು ಈ ಕಟ್ಟೆಮನೆಗಳು ಹೊಂದಿವೆ.

ಈ ಸಂದರ್ಭದಲ್ಲಿ ೩ ಕಟ್ಟೆಮನೆಗಳು, ೩ ಜನ ಪೂಜಾರಿ, ೩ ಮಂದಿ ನಾಯಕ, ೩ ಮಂದಿ ದಾಸರು, ೭ ಜನ ಹಿರಿಯರು, ೭೭ ಮಂದಿ ಮನ್ನೆಗಾರರನ್ನು ಮತ್ತು ಕಿಲಾರಿಗಳನ್ನು ದೊರೆಗಳು ನೇಮಿಸಿದ್ದರು.

ಕರ್ನಾಟಕದ ಬೇಡರ ೩ ಕಟ್ಟೆಮನೆಗಳು (ಆನೆಗೊಂದಿ ರಾಜರ ಅಪ್ಪಣೆಯಂತೆ ಸ್ಥಾಪನೆ)

೧. ನನ್ನಿವಾಳ – ನಲ್ಲಗೇತಿ – ಗಟ್ಟಿಮುತ್ತಿನಾಯಕ – ದೊರೆಬಯ್ಯಣ್ಣ

೨. ನಾಯಕನಹಟ್ಟಿ – ಕಾಮಗೇತಿ – ಮೀಸಲುನಾಯಕ – ದೊರೆತಿಪ್ಪೇಸ್ವಾಮಿ

೩. ಗೋನೂರು – ಬುಲ್ಲುಡುಲೋರು – ಬೋಸೆನಾಯಕ – ಪಾಪನಾಯಕ

ನಾಯಕರು ಪಾಳೆಯಗಾರರಾಗಿ ಮುಂದುವರೆದಾಗ ನಿಡಗಲ್ಲು, ರತ್ನಗಿರಿ ಮತ್ತು ಹರತಿ ಕೋಟೆಗಳನ್ನು ಕಟ್ಟೆಮನೆಗಳಾಗಿ ಹೊಂದಿದ್ದರೆಂದು ತಿಳಿದುಬರುತ್ತದೆ. ಕೆಲವು ಸಂಸ್ಥಾನಗಳಲ್ಲಿ ಇಂದಿಗೂ ಕಟ್ಟೆಮನೆಯ ಪರಿಸ್ಥಿತಿ ಬಗ್ಗೆ ರಾಜಪರಂಪರೆಯವರು ವಿಶ್ಲೇಷಿಸುತ್ತಾರೆ.

. ಜನ ಪೂಜಾರಿಗಳು (ಆನೆಗೊಂದಿರಾಜರ ಅಪ್ಪಣೆಯಂತೆ ನೇಮಕ)

೧. ಕಾಮಗೇತಿ

೨. ನಲ್ಲಗೇತಿ

೩. ಬುಲ್ಲುಡುಲು (ಎರಿಪೋತಿ)

೩ ಜನ ದಾಸಯ್ಯನವರು (ಆನೆಗೊಂದಿ ರಾಜರ ಅಪ್ಪಣೆಯಂತೆ ನೇಮಕ)

೧. ಮುಂಡಾಸು ದಾಸರಿ

೨. ಗೊಡಗು ದಾಸರಿ

೩. ಬೋಡಿ ದಾಸರಿ

೭ ಜನ (ಪೆದ್ದಲು) ಹಿರಿಯರು (ಆನೆಗೊಂದಿ ರಾಜರ ಅಪ್ಪಣೆಯಂತೆ ನೇಮಕ) ಬೇಡರ ವ್ಯಾಜ್ಯಗಳು ಈ ೭ ಜನ ಹಿರಿಯರ ಸಮ್ಮುಖದಲ್ಲಿ ತೀರ್ಮಾನವಾಗುತ್ತಿದ್ದವು.

೧. ಕಾಟಬ್ಬನವರು

೨. ಯರಗೊಡ್ಲವನು

೩. ನಳಬಾಳಸಿವಾಡು

೪. ಗಡಗಿಲೋಡು

೫. ವರಗನೋಡು

೬. ಚಿನ್ನಮುತ್ತಿವಾಡು

೭. ಜೂಗನೋಡು

ಈ ಏಳು ಜನ ಹಿರಿಯರಿಗೆ ತೆಲುಗಿನಲ್ಲಿ ‘ಪೆದ್ದಲು’ ಎಂದು ಕರೆಯುತ್ತಾರೆ. ಬೋಡಿಕಾಟ ನಾಡು, ಗಾದಿಪ್ಪಲಾರು, ಪಡ್ಲೋಡು, ಪರಮೇಶ್ವರನಾರು, ಕುರುಬಲೋರು, ಗೂನೋಡು ಮತ್ತು ಕಾಮನಾಡು ಎಂಬ ಈ ಏಳುಜನ ಹಿರಿಯರು ನಾಯಕ ಸಮುದಾಯದ ಸಾಂಸ್ಕೃತಿಕ ನಾಯಕರಾಗಿಯೂ ಪ್ರಮುಖ ಪಾತ್ರ ವಹಿಸುತ್ತಾರೆ.

೯ ಜನ ಮುತ್ತಿಗಾರರು (ಶ್ರೀಶೈಲ ಮಲ್ಲಿಕಾರ್ಜುನನ ವರಪ್ರಸಾದದಿಂದ ದೇವರೆತ್ತುಗಳನ್ನು ಮೇಯಿಸಿಕೊಂಡು ಬಂದವರು)

೧. ಕಗ್ಗಲಾರು – ಮಲ್ಲೂರರು

೨. ಗಜಗನಾರು – ಬೆದನೂರು (ಮಂದಲ)

೩. ಗವಿನಹಟ್ಟಿನೂರು

೪. ಬೋಡಿ ಬೋರವನವರು, ಯರಬೊಮ್ಮನವರು

೫. ಮಾಸಿನವರು – ಪರಮೇಶಿನವರು

೬. ಮಲ್ಲಮುತ್ತೆ

೭. ಪೆಯಿಲುಮುತ್ತೆ, ನಲ್ಲಟಬ್ಬನೂರು

೧೨ ಪೆಟ್ಟಿಗೆ ದೇವರುಗಳು

ಬೇಡರ ಬದುಕೇ ವಲಸೆಯಿಂದ ಕೂಡಿದ್ದಿತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಪುಟ್ಟಿಯಲ್ಲಿ ದೇವರನ್ನು ಇಟ್ಟು ಹೊತ್ತೊಯ್ಯುತ್ತಿದ್ದರು. ಹೀಗೆ ಹಂಪೆ – ಆನೆಗೊಂದಿ ನರಪತಿ ಸಂಸ್ಥಾನದಲ್ಲಿ ೧೨ ಪೆಟ್ಟಿಗೆ ದೇವರುಗಳು ಹುಟ್ಟಿವೆ.

೧. ಪಚ್ಚಪದಿ ದೊಡ್ಡ ತಿರುಮಲದೇವರು – ಬೇಡರೆಡ್ಡಿಹಳ್ಳಿ – ಚಳ್ಳಕೆರೆ – ತಾ ||

೨. ಕಾಪು ಕಂಪಳ ರಂಗಸ್ವಾಮಿ – ಕಂಪಳದೇವರಹಟ್ಟಿ – ಮೊಳಕಾಲ್ಮರು – ತಾ ||

೩. ದಡ್ಲು ಮಾರಮ್ಮ – ದೇವರಹಳ್ಳಿ – ಚಳ್ಳಕೆರೆ – ತಾ ||

೪. ಚಿಂತಗುಂಟ್ಲ ಬೋರದೇವರು – ಕುದಾಪುರ – ಚಳ್ಳಕೆರೆ – ತಾ ||

೫. ಮಂದಬೊಮ್ಮದೇವರು – ದೊಣಮಂಡಲಹಟ್ಟಿ – ಚಳ್ಳಕೆರೆ – ತಾ ||

೬. ಪೆದ್ದಕ್ಕ ರಾಯಮ್ಮ – (ಮಾರಮ್ಮ) ಗೌರಸಮುದ್ರ – ಚಳ್ಳಕೆರೆ – ತಾ ||

೭. ಮಂಗಪೋಟಿ ಓಬಳದೇವರು – ತಾಳಿಕೆರೆ – ರಾಯದುರ್ಗ – ಅನಂತಪುರ ಜಿಲ್ಲೆ ||

೮. ನಲ್ಲಚೆ(ಜೆ)ರವು ಓಬಳದೇವರು – ವರವು – ಚಳ್ಳಕೆರೆ – ತಾ ||

೯. ಮಲ್ಲಿನಾಯಕ ಬೊಮ್ಮದೇವರು – ವರವು – ಚಳ್ಳಕೆರೆ – ತಾ ||

೧೦. ಬಂಗಾರಿ ದೇವರು – ಬಂಗಾರ ದೇವರಹಟ್ಟಿ – ನನ್ನಿವಾಳ – ಚಳ್ಳಕೆರೆ – ತಾ ||

೧೧. ಬೋಸೇದೇವರು – ಬೋಸೇದೇವರಹಟ್ಟಿ – ಚಳ್ಳಕೆರೆ – ತಾ ||

೧೨. ಮಾಕನಡಕು ಓಬಳದೇವರು – ಮಾಕನಡಕು – ಕೂಡ್ಲಿಗಿ – ತಾ ||

ಈ ಕೆಳಗಿನ ನಾಲ್ಕು ಪೆಟ್ಟಿಗೆ ದೇವರುಗಳು ಕಾಮಗೇತಿಗೆ ಸೇರಿವೆ: ಚಿತ್ರದೇವರು – ಉಡೇಗೋಲ ರಾಯದುರ್ಗ – ತಾಲೂಕು, ಕಾಟಮಲಿಂಗೇಶ್ವರ – ಕಾಟಪ್ಪನಹಟ್ಟಿ, ಪದಿನಾನ ದೇವರು – ರಾಯಪುರ, ಗೆದ್ದಲಗಟ್ಟೆ – ಓಬಳದೇವರು ದಾಸರಮುತ್ತೇನಹಳ್ಳಿ ಇವುಗಳನ್ನು ಪೆಟ್ಟಿಗೆ ದೇವರುಗಳ ಸಾಲಿಗೆ ಸೇರಿಸುತ್ತಾರೆ.

ಈ ಮೇಲಿನಂತೆ ೩ ಕಟ್ಟೆಮನೆ, ೩ ಜನ ಪೂಜಾರಿ, ೩ ಜನ ದಾಸರು, ೩ ಜನ ನಾಯಕರು, ೭ ಜನ ಹಿರಿಯರು, ೯ ಜನ ಮುತ್ತಿಗಾರರು, ೧೨ ಪೆಟ್ಟಿಗೆ ದೇವರುಗಳು ಬೇಡರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿವೆ. ಇವುಗಳಿಂದ ಜನಾಂಗದ ಪರಿವರ್ತನೆ, ಅಭಿವೃದ್ಧಿ ಆದದ್ದು ನಿಜ. ಪ್ರಾದೇಶಿಕ, ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಿಂದ ಹಾಗೂ ನಂಬಿಕೆ, ಆಚರಣೆ, ಆದರ್ಶ ಮೌಲ್ಯಗಳಿಂದ ಮೇಲಿನಂತೆ ಎಲ್ಲ ಹಂತಗಳ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತಾರೆ. ಈ ವ್ಯವಸ್ಥೆ ಇಂದಿನ ಪೊಲೀಸ್ ಠಾಣೆ, ಕೋರ್ಟ್, ಕಚೇರಿಗಳಿದ್ದಂತೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ನಾಯಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕಟ್ಟೆಮನೆ ಸ್ಥಾಪಿಸಿದ್ದು ನಿಜ. ಅವು ಚಾರಿತ್ರಿಕ – ಸಾಂಸ್ಕೃತಿಕವಾಗಿ ಮಹತ್ವ ಪಡೆದಿದ್ದು ಇತ್ತೀಚೆಗೆ ಪ್ರತಿಯೊಂದು ವಿಚಾರಕ್ಕೂ ಕಟ್ಟೆಮನೆಯ ಯಜಮಾನ ನಿರ್ಣಾಯಕ ವ್ಯಕ್ತಿಯಾಗಿರುತ್ತಾನೆ. ೭ ಜನ ಹಿರಿಯರಿಂದ ಕುಲಸಾವಿರ ಅಥವಾ ಕೋಮುದಾರರು ಕಟ್ಟೆಮನೆಗಳಿಗೆ ಸೂಕ್ತ ಸಲಹೆ – ನಿರ್ದೇಶನ ನೀಡುತ್ತಾರೆ.

.೧. ನನ್ನಿವಾಳ ಕಟ್ಟೆಮನೆ

‘ನನ್ನಿವಾಳ’ ಚಳ್ಳಕೆರೆ ತಾಲೂಕಿನ ಒಂದು ಗ್ರಾಮ. ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ರಾಮಜೋಗಿಹಳ್ಳಿ – ಹಾಯ್ಕಲ್ ಮಾರ್ಗವಾಗಿ ಹೋದರೆ ಈ ನನ್ನಿವಾಳ ಸಿಗುತ್ತದೆ. ಇಲ್ಲಿ ಗಾದರಿಪಾಲನಾಯಕ, ಬಂಗಾರುದೇವರು ಮತ್ತು ಜಗಳೂರು ಪಾಪಜ್ಜನಿಗೆ ಸಂಬಂಧಿಸಿದ ಧಾರ್ಮಿಕ ನೆಲೆಗಳಿವೆ. ಇಂಥಾ ಗ್ರಾಮದಲ್ಲಿ ಕಟ್ಟೆಮನೆ ಸ್ಥಾಪನೆಯಾದದ್ದು ಅಷ್ಟೇ ಮಹತ್ವವಾದ ಘಟನೆಯಾಗಿದೆ.

ಯರಮಂಚಿನಾಯಕ ಒಮ್ಮೆ ಗೆದ್ವಾಲ್ ಸೀಮೆಯ ಮುಸಲ್ಮಾನ ಅರಸನನ್ನು (ಆದಿಲ್‌ಷಾಹಿ ಅಥವಾ ನಿಜಾಮ?) ಅಂತ್ಯಗೊಳಿಸಿ ಮಳೆಲು ರಾಜನನ್ನು ಬಿಡುಗಡೆ ಮಾಡಿಕೊಂಡು ಬರುವಾಗ ಆ ರಾಜನ ಮಗಳು ನನ್ನಮ್ಮನನ್ನು ಕರೆತರುತ್ತಾನೆ. ಬೇಡ ಕಂಪಳದ ನನ್ನುಲ ಚಿನ್ನಪಾಲನಾಯಕನಿಗೂ – ನನ್ನಮ್ಮನಿಗೂ ಪ್ರೀತಿ ಬೆಳೆದು ಯರಮಂಚಿನಾಯಕನ ನೇತೃತ್ವದಲ್ಲಿ ಅವರಿಬ್ಬರು ಒಂದಾಗುತ್ತಾರೆ. ಒಮ್ಮೆ ನನ್ನಮ್ಮ ಚಿನ್ನಪಾಲನಾಯಕನಿಗೆ ನಿನ್ನ ಕುಲದಲ್ಲಿ ಸೇರಿ ನಿನ್ನವಳಾಗಿ ಬಾಳಿಬದುಕಿದೆ. ಆದರೆ ನಿನ್ನಿಂದ ನನ್ನ ಕುಲಕ್ಕೆ ಏನಾದರೂ ಕೊಡುಗೆ ಸಲ್ಲಿಸೆಂದು ಬೇಡುತ್ತಾಳೆ. ನಾಯಕ ನನ್ನಮ್ಮನಿಗೆ ಏನು ಬೇಕು ಕೇಳೆಂದು ಹೇಳುತ್ತಾನೆ. ಅದರಂತೆ ಅವಳು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಮುಂಜಿ ಮಾಡಿಸಬೇಕು. ನೀನು ದರ್ಭಾರಿನಲ್ಲಿರುವಾಗ ನಮ್ಮ ತಂದೆಯವರಂತೆ ಒಂದು ಕೈಯಿಂದ ಸಲಾಂ ತೆಗೆದುಕೊಳ್ಳಬೇಕು. ನನ್ನ ವಂಶದ ಹೆಸರು ನಾನಿರುವ ಕಡೆ ಉಳಿಯಬೇಕು ಎಂದಳು. ನಾಯಕನು ಅವಳ ವ್ಯಾಮೋಹಕ್ಕೆ ಒಳಗಾಗಿ ಕೇಳಿದ ಬೇಡಿಕೆಗಳೆಲ್ಲವನ್ನು ಈಡೇರಿಸಲು ಒಪ್ಪಿಕೊಂಡ. ಆ ಗ್ರಾಮಕ್ಕೆ ನನ್ನಿವಾಳವೆಂದು ಹೆಸರಿಟ್ಟು, ಮಕ್ಕಳಿಗೆ ಕಟ್ಟೆಮನೆ ಅಧಿಕಾರ, ಮುಂಜಿ ಮಾಡುವ ಪದ್ಧತಿ ಇತ್ಯಾದಿ ಬೇಡಿಕೆಗಳ ಜೊತೆಗೆ ನನ್ನಮ್ಮನನ್ನೂ ನನ್ನಿವಾಳದ ದೊರೆಸಾನಿಯೆಂದು ಕರೆದನು. ಈ ನನ್ನಿವಾಳದ ಕಟ್ಟೆಮನೆ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳು ಬರುತ್ತಿವೆ. ಬಂಗಾರು ದೇವರಹಟ್ಟಿ ತೊಡಲಾರಹಟ್ಟಿ, ಪೆತ್ತಮ್ಮಾರಹಟ್ಟಿ, ಬೋರಪ್ಪನಹಟ್ಟಿ, ಕರೆಕಲ್ಲಾಟ್ಟಿ, ದೊರೆಗಳಟ್ಟಿ, ಚಿತ್ರೈಯ್ಯನಹಟ್ಟಿ ಮೊದಲಾದವು. ಈ ಕಟ್ಟೆಮನೆಗೆ ಅನೇಕ ಮಂದಿ ನಾಯಕರು ಆಗಿ ಹೋಗಿದ್ದು, ಈಗ ಈ ಕಟ್ಟೆಮನೆಗೆ ನಾಯಕನಾಗಿ ದೊರೆ ಬಯ್ಯಣ್ಣನನ್ನು ಮತ್ತು ಪೂಜಾರಿ ಸೂರಯ್ಯನನ್ನು ಮುಖಂಡರು ನೇಮಿಸಿದ್ದಾರೆ (ಮಧ್ಯಕಾಲೀನ ಕರ್ನಾಟಕದಲ್ಲಿ ಇದಕ್ಕೆ ಪೂರಕವೆಂಬಂತೆ ಅಂತರ್ಜಾತೀಯ ವಿವಾಹ, ವರ್ಣಸಂಕರ, ಸಂಕೀರ್ಣ ಜಾತಿಗಳಾಗಿದ್ದು ಕಂಡುಬರುವುದು ಬೇಡರಲ್ಲಿ ವಿಶೇಷವಾಗಿದೆ). ಮ್ಯಾಸಬೇಡರು ಜಾತ್ಯಾತೀತ ಲಕ್ಷಣಗಳನ್ನು ಹೊಂದಿರುವುದು ವಿಶೇಷ. ಅವರ ದೂರದೃಷ್ಟಿ, ಮನೋವೈಶಾಲ್ಯತೆ ತೋರುತ್ತದೆ.

.೨. ಗೋನೂರು ಕಟ್ಟೆಮನೆ

ಚಿತ್ರದುರ್ಗ ನಗರಕ್ಕೆ ಸಮೀಪದಲ್ಲಿರುವ ಗ್ರಾಮ ಗೋನೂರು. ದುರ್ಗದಿಂದ ಹಾಯ್ಕಲ್‌ಗೆ ಬರುವ ಮಾರ್ಗದಲ್ಲಿ ಈ ಗ್ರಾಮ ಸಿಗುತ್ತದೆ. ಚಾರಿತ್ರಿಕ ಮಹತ್ವ ಪಡೆದ ಗ್ರಾಮ ಗೋನೂರಿಗೆ ಒಂದು ತಿರುವು ಸಿಕ್ಕಿದ್ದು ಕಟ್ಟೆಮನೆ ಆದ ಮೇಲೆಯೇ. ಈ ಕಟ್ಟೆಮನೆಯ ಯಜಮಾನ ಸೂರಪ್ಪನಾಯಕ. ನಂತರ ಆತನ ವಂಶಸ್ಥರಿಂದ ಈ ಸಂಸ್ಕೃತಿ ಮುಂದುವರೆದಿದೆ. ಹೂಡೇಂ ಗ್ರಾಮದ (ಕೂಡ್ಲಿಗಿ – ತಾ|| ಬಳ್ಳಾರಿ – ಜಿಲ್ಲೆ) ಬೋಸೆಮಲ್ಲನಾಯಕ ಇದರ ನಾಯಕನಾಗಿದ್ದ. ಅವರು ದಿವಂಗತರಾದ ಮೇಲೆ ಹಿರಿಯ ಮಗನಾದ ಪಾಪನಾಯಕನು ಕಟ್ಟೆಮನೆ ದೊರೆಯಾಗಿ (ನಾಯಕ)ರುವನು. ಹಿಂದೆ ಗೋನೂರಿನಲ್ಲಿ ಪಿಂಜಾರ ಬುಡ್ಡಯ್ಯನ ಮಗಳ ಸಂಬಂಧ ಬೆಳೆಸಿದ್ದರಿಂದ ಆ ಹೆಸರನ್ನೇ ಕಟ್ಟೆಮನೆಗೆ ಇಟ್ಟಿದ್ದ. ಬೇಡರ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ (ಏಕಲಕಟ್ಟೆ) ೧೨ ಪೆಟ್ಟಿಗೆಗಳ ಪಟ್ಟಿಯಿಂದ ಇದನ್ನು ತೆಗೆದು ಹಾಕಿದರಂತೆ. ಗೋನೂರು ದೊರೆ ಸೂರಪ್ಪನಾಯಕನಿಗೆ ಅವಮಾನ ಸಹಿಸಿಕೊಳ್ಳಲಾಗಲಿಲ್ಲ. ಇತ್ತ ಹಟ್ಟಿ ಮಲ್ಲಪ್ಪನಾಯಕ, ನನ್ನಿವಾಳದ ಚಿನ್ನಪಾಲನಾಯಕ ಚರ್ಚಿಸಿ ಯರಮಂಚಿ ನಾಯಕರನ್ನು ಅವಮಾನಗೊಳಿಸಿ ಮ್ಯಾಸ ಮಂಡಲದಿಂದ ದೂರಮಾಡುವ ಸಂಚು ರೂಪಿಸಿದರು. ಇದರ ವ್ಯಾಪ್ತಿಗೆ ೩೩ ಹಳ್ಳಿ, ೭೭ ಹಟ್ಟಿ ದೊರೆಗಳು ಸೇರಿದ್ದವು.

ಸಾಸಲಹಟ್ಟಿ, ಮುತ್ತೈನಹಟ್ಟಿ, ಮಲ್ಲಾಪುರ, ಹೊಸಮಾಳಿಗೆ, ಕೂನಬೇವು, ಚಿಂತಲಕಟ್ಟೆ, ಬೆಳಗಟ್ಟೆ, ಹಾಯ್ಕಲ್ ಇತರ ಸ್ಥಳಗಳು ಗೋನೂರು ಕಟ್ಟೆಮನೆ ವ್ಯಾಪ್ತಿಗೆ ಸೇರಿದ್ದವು. ಅನೇಕ ಘಟನೆ, ಸಂಘರ್ಷಗಳನ್ನು ಪಂಚಾಯ್ತಿ ಮೂಲಕ ತೀರ್ಮಾನಗೊಳಿಸಿದ ಕೀರ್ತಿ ಈ ಕಟ್ಟೆಗೆ ಸಲ್ಲುತ್ತದೆ.

.೩. ನಾಯಕನಹಟ್ಟಿ ಕಟ್ಟೆಮನೆ

ನಾಯಕ ಜನಾಂಗದ ೩ ಕಟ್ಟೆಮನೆಗಳಲ್ಲಿ ನಾಯಕನಹಟ್ಟಿಯು ಒಂದು. ಇದು ಚಳ್ಳಕೆರೆ ತಾಲೂಕಿನ ಐತಿಹಾಸಿಕ ಸ್ಥಳ ಹಾಗೂ ಹೋಬಳಿ ಕೇಂದ್ರ. ನಾಯಕನಹಟ್ಟಿಯನ್ನು ಆಳೀದ ಪಾಳೆಯಗಾರರ ವಂಶಸ್ಥರೇ ಈ ಕಟ್ಟೆಮನೆಯ ಯಜಮಾನ. ಅಥವಾ ನಾಯಕರಾಗಿರುವುದು ವಿಶೇಷ. ಅನೇಕ ಬಗೆಯ ವ್ಯಾಜ್ಯಗಳನ್ನು ಈ ಕಟ್ಟೆಮನೆಯಿಂದ ತೀಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಂಶಸ್ಥರು ನಾಯಕನಹಟ್ಟಿ, ಪರುಶುರಾಂಪುರ, ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿದ್ದಾರೆ. ಇದರ ವ್ಯಾಪ್ತಿಗೆ ಬೋಸೇದೇವರಹಟ್ಟಿ, ನಲಗೇತಲಹಟ್ಟಿ, ದೊಣಮಂಡ್ಲಹಟ್ಟಿ, ಜಾಗನೋರಹಟ್ಟಿ, ಇತರ ಸ್ಥಳಗಳು ಸೇರಿದ್ದವು. ನಾಯಕನಹಟ್ಟಿ ಕಟ್ಟೆಮನೆ ವ್ಯಾಪ್ತಿಯಲ್ಲಿ ಕಾಮಗೇತಿಗೆ ಪೂಜಾರಿ ಹಕ್ಕು ಕೊಟ್ಟಿರುತ್ತಾರೆ.

ಮುತ್ತಿಗಾರಹಳ್ಳಿ ಸಂಸ್ಥಾನ ಇದರಮತೆ ಶೈವ ಪಂಥದ ನಾಯಕರಿಗೆ ಕೇವಲ ಕಟ್ಟೆಮನೆಗಳೇ ಅಲ್ಲದೆ ಇಡೀ ಸಮಾಜಕ್ಕೆ ಧಾರ್ಮಿಕ ನೆಲೆ ಮತ್ತು ಗುರುಸ್ಥಾನವಾದ ಕಂಪಳದೇವರಹಟ್ಟಿಯು (ಚಿಕ್ಕುಂತಿ) ನ್ಯಾಯಪಂಚಾಯಿತಿಯ ಸರ್ವೋನ್ನತ ಸ್ಥಾನ ಪಡೆದಿತ್ತು. ಬುಡಟ್ಟು ಜನರಿಗೆ ಧಾರ್ಮಿಕ ನೆಲೆಯಾಗಿರುವುದು ಸ್ಪಷ್ಟ. ಮ್ಯಾಸ ಮಂಡಳಿಯ ಮುಖಂಡರು ಇಲ್ಲಿನ ಕಾರ್ಯವೈಖರಿಗಳನ್ನು ಮಾಡುತ್ತಾರೆ. ಮೊಗಲಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ, ಕೊಮ್ಮನಪಟ್ಟೆ, ಹಾನಗಲ್ಲು, ರಾಯಾಪುರ, ಯರವ್ವನಹಳ್ಳಿ, ಪದಿನಾರುದೇವರಹಟ್ಟಿ, ಮಾರನಹಳ್ಳಿ, ಕರಿನಾರಹಟ್ಟಿ, ಕಪ್ಪಡಬಂಡಹಟ್ಟಿ, ಕುಂಟೋಬಯ್ಯನಹಟ್ಟಿ, ಹಾನಗಲ್ಲು, ಸೂರವ್ವನಹಳ್ಳಿ, ಉಡೆಗೂಳ, ಪೂಜಾರಹಳ್ಳಿ, ಹೂಡೇಂ ಮೊದಲಾದ ಸ್ಥಳಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.

ಮೇಲೆ ಹೇಳಿದ ಕಟ್ಟೆಮನೆಗಳಲ್ಲದೆ, ರತ್ನಗಿರಿ, ನಿಡಗಲ್ಲು ಮತ್ತು ಹರ್ತಿಕೋಟೆಗಳು ಒಂದು ಕಾಲಕ್ಕೆ ನಾಯಕರ ಕಟ್ಟೆಮನೆಗಳೆಂದು ಖ್ಯಾತಿ ಪಡೆದಿದ್ದವು. ಹೀಗೆ ಉತ್ತರ ಕರ್ನಾಟಕದಲ್ಲಿ ಸುರಪುರ, ಅರಕೇರಾ, ಗುರಗುಂಟಾ, ಹುಲಿಹೈದರ, ಕನಕಗಿರಿ ಮೊದಲಾದ ಸಂಸ್ಥಾನಗಳ ದೊರೆಗಳು ನ್ಯಾಯಪಂಚಾಯ್ತಿಯನ್ನು ಮುಂದುವರೆಸಿಕೊಂಡು ಬಂದಿರುವುದು ಗಮನಾರ್ಹ.

ಕಟ್ಟೆಮನೆ ನ್ಯಾಯಪಂಚಾಯ್ತಿಯ ಪ್ರಮುಖ ಸಂಗತಿಗಳು

ಕಟ್ಟೆಮನೆಯ ಕಾರ್ಯಸ್ವರೂಪ ಜನಾಂಗದ ಆಚಾರ – ವಿಚಾರ ರೂಢಿ ಮತ್ತು ಸಂಪ್ರದಾಯಗಳನ್ನು ಕೇಂದ್ರೀಕರಿಸಿಕೊಂಡಿರುತ್ತದೆ. ಹಟ್ಟಿ ಅಥವಾ ಬೇಡಕಂಪಳದಲ್ಲಿ ಉದ್ಭವಿಸುವ ಜಗಳ, ಹೊಡೆದಾಟ, ಸಂಘರ್ಷ, ವ್ಯಾಜ್ಯ, ನ್ಯಾಯಗಳನ್ನೂ ತೀರ್ಮಾನಿಸಿಕೊಳ್ಳಲು ಕಟ್ಟೆಮನೆಯ ಒಗ್ಗಟ್ಟು ಅಗತ್ಯ. ಕಾಡಿನಲ್ಲಿ ಜೀವನ ನಡೆಸಿದ ಬೇಡರಿಗೆ ಬೆಂಕಿ, ನೀರು, ಗಾಳಿ, ಬೇಟೆ, ಹೆಣ್ಣು, ಇಂಥಾ ಸಂಗತಿಗಳಿಗೂ ಭಯ – ಭೀತಿ, ವೈಮನಸ್ಸು ಬಂದಾಗ ಯಜಮಾನರ ಸಲಹೆ ಅಗತ್ಯವಿತ್ತು. ಪಂಚಾಯ್ತಿಯಲ್ಲಿ ಕಟ್ಟೆಮನೆ, ಹಿರಿಯರು ದೈವದ ತೀರ್ಮಾನದಂತೆ ಎಲ್ಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತಿದದರು. ಹೆಂಡ ಅಥವಾ ಸಾರಾಯಿ, ಕೋಳಿ – ಮೊಟ್ಟೆ – ಮಾಂಸ ಸೇವಿಸಿದರೆ; ಈಚಲು ಹಣ್ಣು – ಚಾಪೆ ಬಳಸಿದರೆ ಅಂಥವರಿಗೆ ಕಟ್ಟೆಮನೆಯವರು ದಂಡ ಹಾಕುತ್ತಿದ್ದರು. ಬೇಡರಲ್ಲಿ ಕುಲಕೆಡಿಸುವ ವಾಮಮಾರ್ಗವೆಂದರೆ ಮೆಟ್ಟಿನಿಂದ ಹೊಡೆಯುವುದು. ಪಾದರಕ್ಷೆಯಿಂದ ಹೊಡೆದರೆ ಹೊಡೆಸಿಕೊಂಡವನು – ಹೊಡೆದವನು ಇಬ್ಬರು ಕುಲದಿಂದ ಹೊರಗೆ ಇದ್ದು, ದಂಡ ಕೊಡುತ್ತಾರೆ. ಹೀಗೆ ಮೆಟ್ಟಿನಿಂದ ಹೊಡೆಸಿಕೊಂಡು ಕುಲಗೆಟ್ಟವನು ಕುಲಕ್ಕೆ ಬರಬೇಕಾದರೆ ತನ್ನ ಹಟ್ಟಿ ಯಜಮಾನರಿಗೆ ಬೇಟೆ – ಭತ್ಯೆಗಳನ್ನು ಕೊಡಬೇಕು. ಇಂತಹವರನ್ನು ಅವರು ಊರಿನ ಹೊರಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡಿಕೊಂಡು ದೇವರೆತ್ತುಗಳ ದೇವರಮನೆ – ಪೂಜಾರಿ – ಕಿಲಾರಿಯಿಂದ ತೀರ್ಥ ಹಾಕಿಸಿಕೊಂಡು ಅವರನ್ನು ಕುಲಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಾಲಿಗೆ ಸುಡಿಸಿ ಎಲ್ಲರೂ ಊಟ ಮಾಡುತ್ತಾರೆ. ಮೆಟ್ಟಿನ ಏಟು ತಿಂದಂತ ಎಲ್ಲರ ಪಜೀತಿಯು ಇದೇ ಬಗೆಯದು. ಹಾಗಾಗಿ ಯಾರೂ ಇಂಥ ಕಠಿಣ ಕಟ್ಟುಪಾಡುಗಳನ್ನು ಎದುರಿಸಲು ಸಿದ್ಧರಿಲ್ಲದ ಕಾರಣ ಮೆಟ್ಟಿಗೆ ಗೌರವವಿದೆ. ಜನರಿಗೆ ಅದರ ಬಗ್ಗೆ ಹೆದರಿಕೆ ಇದೆ ಎಂಬುದು ಸತ್ಯ. ಮೆಟ್ಟಿನಿಂದ ಹೊಡೆಯುವುದು ಬೇಡರಲ್ಲಿ ಘೋರ ಅಪರಾಧವೇ ಸರಿ. ಇವರಲ್ಲಿ ಹೆಣ್ಣು ಉನ್ನತ ಜಾತಿಯವನನ್ನು ಮದುವೆ ಆದರೆ ದಂಡವಿಲ್ಲ, ಆದರೆ ಬೇಡರಿಗಿಂತ ಕೆಳದರ್ಜೆಯವರೊಂದಿಗೆ ಕೂಡಿದರೆ, ಜೊತೆಯಲ್ಲಿ ಊಟಮಾಡಿದರೆ ಬುಡಕಟ್ಟಿನಿಂದಲೇ ಬಹಿಷ್ಕರಿಸುತ್ತಿದ್ದರು. ಹಿಂದೆ ಪ್ರತಿಯೊಂದು ಸಂಗತಿಗೂ ಕಟ್ಟೆಮನೆಗಳಿಗೆ ಹೋಗುವ ಪರಿಪಾಟವಿತ್ತು. ಇವರಲ್ಲಿಯೂ ವಂಶಪರಂಪರೆ ಆಡಳಿತ, ದಾಯಾದಿಗಳ ಕಲಹಗಳಿಂದ ಕಟ್ಟೆಮನೆಗಳು ತಮ್ಮ ಮೂಲ ಆಶಯಗಳಿಗೆ ಧಕ್ಕೆಯನ್ನು ತಂದುಕೊಂಡಿವೆ. ಬೇಡರು ಇಂದು ಪೊಲೀಸ್ ಠಾಣೆ ಮತ್ತು ಕೋರ್ಟುಗಳಿಗೆ ಹೋಗುವುದರಿಂದ ಆಧುನಿಕತೆ ಎಲ್ಲ ರಂಗಗಳಲ್ಲೂ ಪ್ರವೇಶಿಸಿ ಪರಿವರ್ತನೆಗೆ ನಾಂದಿ ಹಾಡಿದೆ. ಆಚಾರದ ಕಟ್ಟೆಮನೆ ಎಂದು ಹೆಸರಾದ ಕಾಮಗೇತನಹಳ್ಳಿ ಸೂರಲಿಂಗೇಶ್ವರ ದೇವರ ವಾರಸುದಾರರು ಮ್ಯಾಸಬೇಡರಿಗೆ ದೀಕ್ಷೆ ನೀಡಿ ತಮ್ಮ ಕುಲಕ್ಕೆ ಹೀನ ಕುಲದವರನ್ನು ಸೇರಿಸಿಕೊಂಡು ಸಮಾನತೆಯನ್ನು ಮೆರೆದಿದ್ದಾರೆ.

ಬೇಡರಲ್ಲಿ ಅತ್ಯಾಚಾರ ನಡೆದಾಗ ಕುಲಕೆಟ್ಟವರನ್ನು, ಕೆಟ್ಟ ಕೆಲಸ ಮಾಡಿದವರನ್ನು ತಮ್ಮ ಕುಲದಿಂದ ಹೊರಹಾಕುತ್ತಿದ್ದರು. ತಮ್ಮ ದೇವರುಗಳನ್ನು ಬೇರೆ ಕಡೆ ಕೊಂಡೊಯ್ಯುತ್ತಿದ್ದರು. ಗೋನೂರು ಕಟ್ಟೆಮನೆದೇವರು, ಸಾಲಿಗ್ರಾಮ, ಶಂಖು, ಆಯುಧಗಳನ್ನು ದೇವರ ಗಂಜಿಗಟ್ಟೆ ಗಾದರಿಪಾಲನಾಯಕ ಮಹಾ ಸಂಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪುನೀತಗೊಳಿಸುತ್ತಾರೆ. ಇವರಲ್ಲಿ ಎಡ ಮತ್ತು ಬಲಮುರಿ ಶಂಖು, ನಾಗಮುರಿಬೆತ್ತ, ಎತ್ತಿನ ತುರಾಯಿ, ಸೂರ್ಯನಂದನ ಅಲಗು, ಧರ್ಮಗಿರಿ ಗದ್ದಿಗೆ, ಭೂಚಕ್ರದ ಗೊಡಗು, ಕೋರಿನಿಶಾನಿ, ಕಂಡುಗನಗಂಟೆ ಮೂಲೆ ಮೂಲೆಯಿಂದ ಬಂದು ಸೇರುತ್ತದೆ. ನಂತರ ಎಲ್ಲ ಮ್ಯಾಸ ಮಂಡಳಿಯ ಕಂಪಳಗಳು ಸೇರಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಆ ನಿರ್ಣಯಕ್ಕೆ ಎಲ್ಲರೂ ಬದ್ಧರಾಗುತ್ತಾರೆಂದು ತಿಳಿಸಲಾಗಿದೆ.

ಕಟ್ಟೆಮನೆಯಲ್ಲಿ ತೀರ್ಮಾನಕ್ಕೆ ಬಂದ ಫಿರ್ಯಾದುಗಳು (ಅರ್ಜಿ, ಸಮಸ್ಯೆ, ಇತರ ವಿಷಯಗಳು)

ಬೇಡರ ಕಟ್ಟೆಮನೆಗಳಿಗೆ ಬಂದ ಸಮಸ್ಯೆ ಅಥವಾ ಫಿರ್ಯಾದುಗಳು ಇಂದಿಗೆ ಕ್ಷುಲ್ಲಕ ಎಂದು ಕಂಡುಬಂದರೂ ಅವರಲ್ಲಿ ಅವು ಮಹತ್ವ ಪಡೆದಿರುತ್ತವೆ. ಊಟ ಮತ್ತು ವೈವಾಹಿಕ ಸಂಬಂಧದಲ್ಲಿ ವ್ಯತ್ಯಯವಾದರೆ ಅಪವಿತ್ರರಾಗುವರೆಂಬ ನಂಬಿಕೆಯಿದೆ. ಕಟ್ಟೆಮನೆ ನಾಯಕನಿಗೆ ವಿಶೇಷವಾದ ಗೌರವದ ಸಂಬೋಧನೆಯಿತ್ತು. ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ, ನಾಯ್ಕಚಾರ್ಯ – ನನ್ನಿವಾಳದ ದೊರೆ ಪಾಲನಾಯ್ಕರು, ದಡ್ಡಿನಾಯ್ಕ ಜನ್ನಳ್ಳಿ ಪಾಲನಾಯಕ, ಕುರೇಲ ಸಣ್ಣಪಾಪಯ್ಯ, ಯರಗಾಡ್ಲ ಪಾಪಯ್ಯ, ಕಟ್ಟೆಮನಿ ಬುಲ್ಲುಡ್ಲು, ಸಣ್ಣ ಕಾಟಯ್ಯ ಬುಲ್ಲುಡ್ಕು ದೊಡ್ಡಕಾಟಯ್ಯ, ಯತ್ತಿನಗೌಡ ಚಿನ್ನಯ್ಯ, ಮುತ್ತೈಯ್ಯನ ಎತ್ತುಗಳ ಕಿಲಾರಿ ಪಾಪಯ್ಯ, ರಾಯ್ಬೊರ ಹಿರಿಯ ಪಾಪಯ್ಯ ಮುಂತಾದ ಕುಲ ಸಾವಿರದವರು ಚಳ್ಳಕೆರೆ ಕಾರೇರ ತಾತಯ್ಯನು ಬರೆದುಕೊಂಡ ಮನವಿ……….. ಎಂಬಾತನು…… ಬೈಲು ಮಗಳನ್ನು ರಖಾವು ಮಾಡಿಕೊಂಡು ಅಲ್ಲಿಯೋ ಬಳಕೆ ಭೋಜನ ಮಾಡಿಕೊಂಡು ಇರುತ್ತಾನೆ. ಝಂಡಾ ಗೋವಿಂದಯ್ಯನು ಕರ್ಕುದ್ರಯ್ಯನು ತನ್ನ ಮಗಳ ಲಗ್ನದಲ್ಲಿ ಸಮ್ಮಿಶ್ರ ಮಾಡಿಕೊಂಡು ಇರುತ್ತಾರೆ. ಹೀಗೆ ಇನ್ನು ವಿವರವಿದೆ. ಇಂಥಾ ಅನಾಚಾರಗಳನ್ನು ತಡೆಗಟ್ಟಿ ತಮ್ಮ ಮತದ ಶ್ರೇಷ್ಠತೆ ಕಾಪಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಬೇಡರ ಕಟ್ಟೆಮನೆಗಳಲ್ಲಿ ಪಂಚಾಯ್ತಿ ಮಾಡುವ ವಿಚಾರಗಳೆಲ್ಲವೂ ಆಯಾ ಹಟ್ಟಿಗಳ ಕೊಟ್ಟುಕೊಳ್ಳುವ ಸಂಬಂಧವನ್ನೇ ಸಂಕೇತಿಸುತ್ತವೆ.

೧. ದಿನಾಂಕ ೮.೮.೧೯೪೧ರಲ್ಲಿ ನನ್ನಿವಾಳ ಕಟ್ಟೆಮನೆಗೆ ಪತ್ರ ಬರೆದು ಲಗ್ನಕ್ಕೆ ಸಂಬಂಧಿಸಿದಂತೆ ಪಿರ್ಯಾದು ಸಲ್ಲಿಸಿದ್ದಾರೆ.

೨. ೧೬.೫.೧೯೪೨ ನಾಯ್ಕರ್ ೩ಕಟ್ಟೆಮನೆಗಳ ಅಧಿಕಾರಿ, ಯಜಮಾನರಿಗೆ ಮತ್ತು ಕುಲಸಾವಿರದ (೨೬ ಜನರ ಹೆಸರು) ವರಿಗೆ – ಹೊಳಲ್ಕೆರ ತಾಲೂಕು ಕಾಮಸಮುದ್ರದ ಹಾವಳಿಕಟ್ಟಿ ಊರುನಾಯ್ಕರ ಮತದ…. ಮನೆಯಲ್ಲಿ ಬಳಕೆ ಭೋಜನೆ ಮಾಡಿದ ಬಗ್ಗೆ ಫಿರ್ಯಾದು – ನೋಟಿಸು, ಗುರು ಹಿರಿಯರಿಂದ ತಿರಸ್ಕಾರ, ಅಪರಾಧಿಗಳು ಶುಭಕಾರ್ಯಗಳಿಗೆ ಬಹಿಷ್ಕಾರ ಇತರ ವಿವರಗಳಿವೆ.

೩. ೧೦ – ೯ – ೧೯೫೮ ಮ್ಯಾಸ ಮಂಡಳ ಗುರುಮೂರ್ತಿ ಶ್ರೀ ಶ್ರಿ ದೊರೆಪಾಲನಾಯ್ಕ ಮಹಾಸ್ವಾಮಿಯವರ…. ಉರಿಮೆ ಬಡಪ್ಪ ಮಾಡುವ ನಮಸ್ಕಾರ, ಊಟಕ್ಕಾಗಿ ಆಯಾಗಾರರ ಹತ್ತಿರ ಹೋದರೆ ಏನೂ ಕೊಡಲಿಲ್ಲ.

೪. ದೇವರೆತ್ತುಗಳನ್ನು ಕಾಯುವ ಬಗ್ಗೆ ಕಟ್ಟೆಮನೆಗೆ ದೂರು (ನೀರಿಲ್ಲ – ಮೇವು ಇಲ್ಲ)

ಕಟ್ಟೆಮನೆಗಳಿಗೆ ಸಲ್ಲಿಸಿದ ಫಿರ್ಯಾದಿಗಳಿಗೆ ನೋಟಿಸು ಕೊಟ್ಟು ಪಂಚಾಯ್ತಿ ವಿಚಾರಣೆ ನಡೆಯುವುದು ಸಹಜ. ಹೀಗೆ ಪಂಚಾಯ್ತಿಯಲ್ಲಿ ಕೆಲವೊಮ್ಮೆ ಸೋಲು – ಗೆಲುವುಗಳಾಗಿರುತ್ತವೆ. ಇಲ್ಲಿ ಕೆಲಸ ಕಾರ್ಯಗಳಲ್ಲಿ ಒಂದೇ ರೂಪವನ್ನು ಹೋಲುತ್ತಿದ್ದರೂ ಕಟ್ಟೆಮನೆ ಮತ್ತು ಗುರುಸ್ಥಾನಗಳು ಬೇರೆಬೇರೆ. ಬೇಡರಹಟ್ಟಿಯ ಜಗಳ, ಗಲಾಟೆ, ಸಂಘರ್ಷ, ಸಂಭವಿಸಿದರೂ ಒಮ್ಮೆ ಕಟ್ಟೆಮನೆ – ಗುರುಮನೆಗೆ ಬರುವಂತಿಲ್ಲ. ಕಟ್ಟೆಮನೆಗೆ ಬರುವ ಸಮಸ್ಯೆಗಳು ಬಹುತೇಕ ವೈಯಕ್ತಿಕವಾದವುಗಳು. ಮತ್ತೊಮ್ಮೆ ಸಂಸ್ಕೃತಿಯ ಗಟ್ಟಿತನವನ್ನು ಬೆಳೆಸಲು ದೇವರ, ಕುಲಗೋತ್ರಗಳ ವ್ಯಾಜ್ಯಗಳನ್ನು ಹೆಚ್ಚಾಗಿ ಗುರು ಸಂಸ್ಥಾನಗಳಲ್ಲಿ ಪರಿಗಣಿಸುತ್ತಾರೆ. ಕಟ್ಟೆಮನೆಯಲ್ಲಿ ನ್ಯಾಯ ಸಿಗದಿದ್ದರೆ ಗುರುಸ್ಥಾನದಲ್ಲಿ ಕೇಳುವುದು ವಾಡಿಕೆ. ಉದಾ: ಹೊಳಲ್ಕೆರೆ ತಾಲೂಕಿನ ಮಾಳೆನಹಳ್ಳಿಯ ಊರು ನಾಯಕರಿಗೆ ಕುಂಚಿಗನಹಾಳು ಮ್ಯಾಸಬೇಡರಿಗೆ ಕಟ್ಟೆಮನೆಯವರು ಎಲ್ಲವನ್ನು ಪರಿಶೀಲಿಸಿ ಬಹಿಷ್ಕಾರ ಹಾಕಿದ್ದರು. ತರುವಾಯ ಅವರು (ಕುಂಚಿಗನಹಾಳು) ಗುರುಸ್ಥಾನದಲ್ಲಿ ನ್ಯಾಯ ಕೇಳಿದರು (ಇದರ ಕೇಂದ್ರಸ್ಥಳ ಕಂಪಳದೇವರಹಟ್ಟಿ. ಬೇಡರ ತಪ್ಪುಗಳನ್ನು ತಿದ್ದಲು ಕರಿಸಿ ಬುದ್ಧಿವಾದ ಹೇಳಲು ಕಟ್ಟೆಮನೆ, ಗುರುಮನೆಗಳು ಆಧಾರಸ್ತಂಭಗಳಾಗಿರುತ್ತವೆ). ಇವರಿಬ್ಬರು ಮ್ಯಾಸಬೇಡರೆಂದು ಆಧಾರ ಕಂಡುಬಂದ ಹಿನ್ನಲೆಯಲ್ಲಿ ಗುರುಸ್ಥಾನದ ಪಂಚಾಯ್ತಿಯವರು ಇಬ್ಬರಿಗೂ ಗೆಲುವಾಗಲು ನೆರವಾದರು.

ಬೇಡರ ಹೆಣ್ಣು ಮಕ್ಕಳ ಬಗ್ಗೆ ನ್ಯಾಯ, ನೀತಿ, ಕಾನೂನುಗಳಿವೆ. ಇವಳು ಉನ್ನತ ವ್ಯಕ್ತಿಯೊಡಣೆ ಅನೈತಿಕ ಸಂಬಂಧ ಬೆಳೆಸಿದ್ದರೂ ಜೊತೆಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವಂತಿಲ್ಲ. ಆದರೆ ಆ ವ್ಯಕ್ತಿಯ ಜೊತೆ ಇದ್ದರು ಅಂಥ ಕಠಿಣ ಕ್ರಮಗಳೇನು ಇಲ್ಲ. ಊಟದ ವಿಚಾರದಲ್ಲಿ ವಿರುದ್ಧವಾಗಿ ನಡೆದುಕೊಂಡರೆ ಅವಳನ್ನು ಕುಲದಿಂದ ಬಹಿಷ್ಕರಿಸುತ್ತಿದ್ದರು. ಸುಳ್ಳು ಪತ್ರ ಬರೆದು ಬೆಳಗಟ್ಟದ ಮಹಿಳೆ ಬಗ್ಗೆ ವಿಚಾರಣೆ ನಡೆಸಿದ ಕಟ್ಟೆಮನೆಯವರು ಅಪರಾಧಿಯಲ್ಲದ ಹೆಣ್ಣಿನ ಬಗ್ಗೆ ಕರುಣೆ ಬಂದು ಹೊಸ ಸೀರೆ – ಕುಪ್ಪಸ ಕೊಡಿಸಿ, ಯರಗಾಟನಾಯಕ ದೇವರಿಗೆ ಎಣ್ಣೆಹಾಕಿಸಲು ತಪ್ಪು ಕಾಣಿಕೆ ೫೦ ರೂಪಾಯಿ ಕೊಟ್ಟ ಪ್ರಸಂಗವಿದೆ.

ಇತ್ತೀಚಿನವರೆಗೆ ಯಾವುದೇ ಗಂಡು ಮದುವೆಯಾಗಬೇಕಾದರೆ ಮುತ್ತಿಗಾರಹಳ್ಳಿ ಗುರುಸ್ಥಾನಕ್ಕೆ ಬಂದು ತೀರ್ಥ (ಹರಿನೀರು) ಹಾಕಿಸಿಕೊಳ್ಳಬೇಕಿತ್ತು. ಹೋಗಲಿಲ್ಲ ಎಂದರೆ ಅವರನ್ನು ಬಹಿಷ್ಕರಿಸಲಾಗುತ್ತಿತ್ತು. ಇಂದು ಆಯಾ ಮನೆದೇವರಿಗೆ ಮಾತ್ರ ಹೋಗಿ ತೀರ್ಥ ಹಾಕಿಸಿಕೊಳ್ಳುತ್ತಾರೆ.

ಶ್ರೀ ಚಿಂತಗುಟ್ಲು ಬೋರೇದೇವರ ಮತ್ತು ಕಂಪಳದೇವರಿಗೆ ಸಂಬಂಧಿಸಿದಂತೆ ೨೪.೩.೧೯೩೨ರಂದು ಕಟ್ಟೆಮನೆಗಳಿಗೆ ಬರೆದ ಪತ್ರ. ಇದೇ ರೀತಿ ಶ್ರೀಮುತ್ತಯ್ಯಗಳ ದೇವರು ಮತ್ತು ಕಟ್ಟೆಮನೆಗೆ ಸೇರಿದ ಪತ್ರ. ಶ್ರೀ ಮಹಾನಾಯಕಚಾರ್ಯ, ನಾಯ್ಕಶಿರೋಮಣಿ, ಕಸ್ತೂರಿ ಕೋಲಾಹಲ ಸದಿಬಾಧ್ಯರಾದ ನಾಯಕನಹಟ್ಟಿ ಸಂಸ್ಥಾನಕ್ಕೆ ಕಾರಣಕರ್ತರಾದ ಶ್ರೀಮಾನ್ ಬಸಪ್ಪನಾಯ್ಕರವರ ಸನ್ನಿಧಾನದಿಂದ ಬರೆದ ಪತ್ರ. ರಾಮಜೋಗಿಹಳ್ಳಿ ತಳವಾರ ಹನುಮಯ್ಯನ ಮಗ ಮಲ್ಲಯ್ಯನಿಗೆ ನೋಟಿಸು. ಕಾಸೋರಹಟ್ಟಿ ಕಂಪಳಯ್ಯ, ರಾಮಜೋಗಿಹಳ್ಳಿ ದೊಡ್ಡ ಓಬಯ್ಯ ೧೩.೧.೧೯೩೦ರಂದು ಕಟ್ಟೆಮನೆ ಕುಲಸಾವಿರದವರ ಸಭೆ (ವ್ಯಾಜ್ಯ) ವಿವರ ಈ ನಿಟ್ಟಿನಲ್ಲಿ ಹಲವು ಮಾಹಿತಿಯನ್ನು ನೀಡುತ್ತವೆ.

ಇವಲ್ಲದ ೧೯೪೨ ಜನವರಿ ೨೩ರಂದು ಚಳ್ಳಕೆರೆ ತಾಲೂಕಿನ ಚಂದ್ರಗಿರಿ ಬೂದಾಳು ಪಟ್ಟಣಕ್ಕೆ ಸೇರಿದ ಗೌಡಗೆರೆ ಗ್ರಾಮದ ಹಿರಿಯರು – ಕುಲಸಾವಿರದವರಿಂದ ಕಟ್ಟೆ ಮನೆಗೆ ಬರೆದ ಪತ್ರ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಮ್ಯಾಸಮಂಡಳಿಗೆ ಸೇರಿದ ಗಾರಹಟ್ಟಿಯ ಕೊಡಗಳ್ಳಿ ರಂಗಪ್ಪನ ಮಗ ರಂಗಣ್ಣನಿಗೆ ಗೌಡಗೆರೆಯ ಶ್ರೀ ತಿರುಮಲದೇವರ ಗುಡಿಕಟ್ಟಿಗೆ ಸೇರಿದವನೆಂದು (ಅನುಮಾನ ಬಂದ ಕಾರಣ) ತಿಳಿಸುವ ಜ್ಞಾಪನಾ ಪತ್ರ.

ಚಿಂತಗುಟ್ಲು ಬೋರೇದೇವರಹಟ್ಟಿ ಗ್ರಾಮದವರು ಕಟ್ಟೆಮನೆ ಅಧಿಕಾರಿಗಳಿಗೆ ನನ್ನಿವಾಳದ ಮಜುರೆ ಮುಚ್ಚುಗಂಟೆ ಗ್ರಾಮದಲ್ಲಿನ ತಮ್ಮನ ಮುತ್ತೆಪೂಜಾರಿ ಪಾಪಯ್ಯ ಮಗ ಮಲ್ಲಯ್ಯನಿಗೆ ಕೊಟ್ಟ ಬಹಿಷ್ಕಾರ ಪತ್ರಕ್ರಯದಲ್ಲಿ ಮ್ಯಾಸ (ನಾಯಕರ) ಮಂಡಲಿಯ ಮತಕ್ಕೆ ವಿರೋಧವಾಗಿ ನಡೆದುಕೊಂಡಿದ್ದರಿಂದ ಹೊಳಲ್ಕೆರೆ ತಾಲ್ಲೂಕು ಊರುನಾಯ್ಕರ ರಂಗಯ್ಯನ ಮನೆಯಲ್ಲಿ ಬಳಕೆ ಬೋಜನಾಧಿಗಳಲ್ಲದೆ ಇತರೆ ಕೆಲಸ ವಿಷಯಗಳಿಗೆ ಸಂಬಂಧಿಸಿದಂತೆ ೧೯೨೨ ಆಗಸ್ಟ್ ೩೦ರಂದು ಅಪರಾಧಿಯಾದ ಮಲ್ಲಯ್ಯನಿಗೆ (ಹಿಯರಿಂಗ್) ವಿಚಾರಣೆ ಸಂಬಂಧಿಸಿದಂತೆ ಪತ್ರ ಬರೆದಿರುವುದನ್ನೂ ಗುರುತಿಸಬಹುದು (ಇಂಥ ಅನೇಕ ಪತ್ರಗಳ ವಿವರವಿದೆ).

ಹಿರೇಹಳ್ಳಿ ಕಟ್ಟೆಮನೆಗೆ ಸಂಬಂಧಿಸಿದಂತೆ ಮಾರಮ್ಮನ ಹಳ್ಳಿ ನಲಬಾಪಲ (ಬೇಡರಾದ ಬ್ರಾಹ್ಮಣರು) ಬೈಯಣ್ಣನ ಮಗ ಪಾಪಯ್ಯನು ನಾಯಕರಿಗೆ ಫಿರ್ಯಾದು ಸಲ್ಲಿಸಿದ್ದನ್ನು ತಿಳಿಯಬಹುದು. ಈ ರೀತಿಯಾಗಿ ಕರ್ನಾಟಕದ ಬೇರೆ ಬೇರೆ ಕಡೆ ನಾಯಕರು ನೆಲಸಿದ್ದರೂ ಇಂಥ ಬಿಗಿಕ್ರಮ ಇಲ್ಲ. ಚಿತ್ರದುರ್ಗ ಪರಿಸರದಲ್ಲಿ ಮಾತ್ರ ನ್ಯಾಯಪಂಚಾಯ್ತಿ ಜೀವಂತಿಕೆ ಪಡೆದುಕೊಂಡಿದೆ.

ಈ ಮೊದಲೇ ಚರ್ಚಿಸಿದಂತೆ ಕಟ್ಟೆಮನೆಗಳು ವಿಜಯನಗರೋತ್ತರ ಕಾಲದಲ್ಲಿ ಸ್ಥಾಪನೆಯಾದಂತಿವೆ. ಆನೆಗೊಂದಿ ಅರಸರ ಪ್ರೇರಣೆ ಮತ್ತು ಪ್ರೋತ್ಸಾಹಗಳಿಂದ ಇವು ಕಾರ್ಯನಿರ್ವಹಿಸಿದವು. ಬ್ರಿಟಿಷರ ಆಳ್ವಿಕೆಯಲ್ಲಿ ಅವರ ಕಾಯ್ದೆ ಕಾನೂನುಗಳೇನೇ ಇದ್ದರೂ ತಮ್ಮ ಬುಡಕಟ್ಟಿನ ನ್ಯಾಯಪಂಚಾಯ್ತಿಗಳ ಮೂಲಕ ಸುಲಭವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಜಟಿಲವಾದವು ಹಾಗೆಯೇ ಜ್ವಲಂತವಾಗಿರುತ್ತಿದ್ದವು. ಏನೇ ಆದರೂ ಪರಸ್ಪರ ನಂಬಿಕೆ, ವಿಶ್ವಾಸಗಳಿಂದ ಬದುಕು ಸುಂದರವಾಗಿರಲು ಕಟ್ಟೆಮನೆಗಳ ಶ್ರಮ ಸಾರ್ಥಕ ಎನಿಸಿತ್ತು.

ಕಟ್ಟೆಮನೆಗಳು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಇರುವುದು ವಿಶೇಷ. ಇವು ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೆಲೆಗಳಾಗಿವೆ. ನಾಯಕನಹಟ್ಟಿ, ಗೊನೂರು ಮತ್ತು ನನ್ನಿವಾಳಗಳು ಪ್ರಮುಖ ಕಟ್ಟೆಮನೆಗಳು. ಪ್ರತಿಯೊಂದಕ್ಕೂ ನಾಯಕರಿದ್ದು ಹಿರಿಯರ ಆಜ್ಞೆಯಂತೆ ನ್ಯಾಯ ಪಂಚಾಯ್ತಿಗಳನ್ನು ಮಾಡುತ್ತಾರೆ. ಕಟ್ಟೆಮನೆಯಲ್ಲಿ ಇತ್ಯರ್ಥವಾಗದಿದ್ದರೆ ಅಥವಾ ಸೋಲಾದರೆ ಗುರುಸ್ಥಾನವಾದ ಕಂಪಳದೇವರಹಟ್ಟಿ ನ್ಯಾಯ ಪಂಚಾಯ್ತಿಗೆ ಹೋಗುತ್ತಾರೆ. ಹೀಗೆ ಇಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನ ತೀರ್ಪುಗಳಂತೆ ಬೇಡ ಬುಡಕಟ್ಟಿನ ಯಜಮಾನರ ತೀರ್ಪು ಅಂತಿಮ. ಕರೆಕಂಬಳಿ ಗದ್ದಿಗೆ ಹಾಕಿ ಅದರ ಮೇಲೆ ಎಲೆ – ಅಡಿಕೆ ಇಟ್ಟು ಕುಲ ಸಾವಿರದವರಿಗೆ ಒಂದು ಎಲೆ – ಅಡಿಕೆ ಕೊಟ್ಟರೆ ಸಾಕು ಪಂಚಾಯ್ತಿಗೆ ಬದ್ಧರಾಗುವರೆಂಬ ನಂಬಿಕೆಯಿದೆ. ಎಲೆ – ಅಡಿಕೆ ಪ್ರಾಮಾಣಿಕತೆಯನ್ನು ಇಂದಿಗೂ (ಬೇಡಪರಂಪರೆಯಲ್ಲಿ) ಉಳಿಸಿಕೊಂಡು ಬಂದಿದ್ದಾರೆ.

ಕಟ್ಟೆಮನೆಗಳಿಗೆ ಬರುವ ಸಮಸ್ಯೆಗಳು ಪ್ರಮುಖವಾಗಿ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿರುತ್ತವೆ. ಇಲ್ಲಿ ಪರಸ್ಪರ ಅರಿವು ತಿಳುವಳಿಕೆಗಳಿದ್ದರೆ ಬಹುಶಃ ಅನೈಕ್ಯತೆ, ಅನೈತಿಕ, ಕಲಹ, ನಿಯಮಬಾಹಿರ ಕೃತ್ಯಗಳನ್ನು ತಡೆಯಬಹುದು. ಇವರಲ್ಲಿ ಕೆಲವರಿಗೆ ಬೇಡರ ಜಾತಿ ಮಾತ್ರ ಶ್ರೇಷ್ಠ. ಉಳಿದವು ಕನಿಷ್ಠ ಎಂಬ ಕಲ್ಪನೆ ಇದ್ದರೂ ಉನ್ನತ ಜಾತಿಗಳೊಂದಿಗೆ ಗುರುತಿಸಿಕೊಳ್ಳುವುದು ನಿಂತಿಲ್ಲ. ಅಂತರ ಭೋಜನೆ, ಅಂತರ್ಜಾತಿ ವಿವಾಹಗಳು ಸುಲಭವಾಗಿ ನಡೆಯುವದಿಲ್ಲ. ಬೇರೆ ಬೇರೆ ಜಾತಿಯವರು ಸೇರಿ ಸಹಭೋಜನ (ಒಂದೇ ತಟ್ಟೆಯಲ್ಲಿ) ಮಾಡುವಂತಿಲ್ಲ. ಹಾಗೇನಾದರೂ ಆದರೆ ಬೇಡರು ಜಾತಿ ಬಾಹಿರರಾಗುತ್ತಾರೆ.

ಬೇಡರ ಹೆಣ್ಣಿಗೆ ಸಮಾಜದಲ್ಲಿ ಉನ್ನತ ಸ್ಥಾನ – ಮಾನವಿದ್ದಂತೆ ಕನಿಷ್ಠ ಸ್ಥಾನ – ಮಾನವು ಇದೆ. ಉನ್ನತ ಜಾತಿಯ ಪುರುಷನು ಇವಳನ್ನು ಪ್ರೀತಿಸಿದರೆ, ಮದುವೆಯಾದರೆ ಇರುತ್ತದೆ. ಆದರ ಅವನೊಂದಿಗೆ ಒಂದೇ ತಟ್ಟೆಯಲ್ಲಿ ಭೋಜನ ಮಾಡುವಂತಿಲ್ಲ. ಮತ್ತು ತನ್ನ ಜಾತಿಗಿಂತ ಕೀಳಾದ ಜಾತಿಯವನೊಂದಿಗೆ ಪ್ರೇಮ ವಿವಾಹ ಬೆಳೆಸುವಂತಿಲ್ಲ. ಒಂದೊಮ್ಮೆ ಆದರೆ ಜಾತಿಬಾಹಿರರಾಗುತ್ತಿದ್ದರು. ಅನಾಥ ಮಹಿಳೆ, ವಿಧವೆ, ನಿರ್ಗತಿಕರು, ವೃದ್ಧರು ಈ ಸಮುದಾಯದಲ್ಲಿ ನಿಕೃಷ್ಟ ಜೀವನ ನಡೆಸುತ್ತಾರೆ. ಕೆಲವೊಮ್ಮೆ ಜಾತಿಯ ಕಟ್ಟುಪಾಡುಗಳನ್ನು ಮೀರಿ ಬದುಕು ಸಾಧ್ಯತೆ ಇದ್ದರೂ ಅವರ ಪಾಡು ಹೇಳತೀರದು.

ಬೇಡರ ನ್ಯಾಯಪಂಚಾಯ್ತಿಗಳು ಭೂಮಿಯ ಮೇಲೆ ಹಕ್ಕು ಸ್ಥಾಪನೆಯಾದಾಗಲೇ ಅಸ್ತಿತ್ವಕ್ಕೆ ಬಂದಂತಿವೆ. ದೇವರು, ಕಟ್ಟೆಮನೆ, ಗುಡಿಕಟ್ಟು ಮೊದಲಾದವುಗಳ ಜವಾಬ್ದಾರಿ ಸ್ಥಾನಗಳಿಗಾಗಿ ಪೈಪೋಟಿ – ಜಗಳಗಳಾಗುತ್ತವೆ. ಆದರೆ ಪರಸ್ಪರ ಒಪ್ಪಂದದ ಮೂಲಕ ಕೆಲವೊಮ್ಮೆ ಇವುಗಳನ್ನು ಬಗೆಹರಿಸಿಕೊಂಡರು ದ್ವೇಷ ಅಸೂಯೆಗಳನ್ನು ಸಾಧಿಸುವುದೇ ಹೆಚ್ಚು.

ಭಾರತ ದೇಶಕ್ಕೆ ಒಂದು ಸಂವಿಧಾನವಿರುವಂತೆ ಆಯಾ ಪ್ರಾದೇಶಿಕತೆಗೆ ತಕ್ಕಂತೆ ನ್ಯಾಯಾಲಯಗಳಿವೆ. ಇಲ್ಲಿ ಜಾತಿಗೊಂದು (ಬೇಡ) ಸಂವಿಧಾನ, ಗುರುಮನೆ, ಅರಮನೆಗಳಿರುವುದು ಗಮನಾರ್ಹ ಸಂಗತಿ. ಬೇಡರ ಕಟ್ಟೆಮನೆ – ಗುಡಿಕಟ್ಟೆಗಳು ಇಂದಿಗೂ ಜೀವಂತವಾಗಿವೆ. ಕರ್ನಾಟಕದ ಚರಿತ್ರೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಾಚೀನ ಮಧ್ಯಕಾಲ ಮತ್ತು ಆಧುನಿಕ ಕರ್ನಾಟಕದಲ್ಲಿದ್ದರೂ ಇಂಥಾ ಪಂಚಾಯ್ತಿ ತೀರ್ಮಾನಗಳಿಗಾಗಿ ಅನೇಕ ಹೋರಾಟಗಳನ್ನು ಮಾಡಲು ಮುಂದಾಗಿರುತ್ತಾರೆ.

ಬೇಡರ ಕಟ್ಟೆಮನೆಗಳು ನ್ಯಾಯ ಪಂಚಾಯ್ತಿಯಲ್ಲಿ ಹಿರಿಯರ ಮಾತು ಎಲೆ, ಅಡಿಕೆ ದಂಡಹಾಕುವ ಪ್ರಕ್ರಿಯೆ ಪ್ರಮುಖವಾಗಿರುತ್ತದೆ. ಇಂಥ ನಿಯಮಗಳಿಗೆ ಹೆಣ್ಣು – ಗಂಡು ಇಬ್ಬರು ಒಳಪಡುತ್ತಾರೆ. ಹೆಚ್ಚಾಗಿ ದೇವರು – ಹಬ್ಬ – ಜಾತ್ರೆಗಳಲ್ಲಿ ಹಕ್ಕು ಚಲಾಯಿಸುವಾಗ ಇವರ ಅಧಿಕಾರದ ಬಗ್ಗೆ ಸಮಸ್ಯೆಗಳು ಉಲ್ಬಣವಾಗುತ್ತವೆ. ಇಡೀ ನಾಯಕ ಅಥವಾ ಬೇಡ ಜನಾಂಗಕ್ಕೆ ನಾನೇ ನಾಯಕ, ಪೂಜಾರಿ, ದೊರೆ ಎಂಬ ಪರಿಕಲ್ಪನೆ ವಿವಿಧ ಸಾಮಾಜಿಕ ಆಯಾಮವನ್ನು ಸೃಷ್ಟಿಸಿದೆ. ಮೊದಲೇ ತಿಳಿಸಿರುವಂತೆ ಛಿದ್ರ, ಛಿದ್ರವಾಗಿ ನೆಲಸಿರುವ ಬೇಡರು ತಮ್ಮ ಅನುಕೂಲತೆಗೆ ತಕ್ಕಂತೆ ದೇವರು, ಕಟ್ಟೆಮನೆ, ಗುಡಿಕಟ್ಟೆಗಳನ್ನು ಹೊಂದಿರುವುದು ಸಹಜ. ಪಾರಂಪರಿಕವಾಗಿ ಇಂಥ ನ್ಯಾಯಾಂಗ ವ್ಯವಸ್ಥೆ ಇದ್ದರೂ ಇತ್ತೀಚಿಗೆ ಇದರ ಸದ್ಬಳಕೆ ಆಗುತ್ತಿಲ್ಲ. ಹಳೆತಲೆಮಾರಿನವರಲ್ಲಿ ಮಾತ್ರ ಸಣ್ಣಪುಟ್ಟ ಪಂಚಾಯ್ತಿಗಳಾಗುವುದನ್ನು ಹೊರತುಪಡಿಸಿದರೆ ಅಂಥಾ ಗಮನಾರ್ಹ ಬಳಕೆ – ಬದಲಾವಣೆಗಳು ಕಂಡುಬರುತ್ತಿಲ್ಲ ದಿ. ಹೋ.ಚಿ ಬೋರಯ್ಯ, ದಿ.ಟಿ. ಮಾರಪ್ಪ, ದಿ.ಎ. ಭೀಮಪ್ಪನಾಯಕರ ಕಾಲಕ್ಕೆ ಜನಾಂಗದ ಸಾಮಾಜಿಕ ಸುಧಾರಣೆ ಪರ್ವ ಆರಂಭವಾಯಿತು. ವಿವಿಧ ರೀತಿಯಲ್ಲಿ ಚಾಲ್ತಿಯಲ್ಲಿರುವ ನಾಯಕರ ಕಟ್ಟೆಮನೆ ಪಂಚಾಯ್ತಿಗಳು ಎಲ್ಲೋ ಒಂದು ಕಡೆ ನಿಸ್ವಾರ್ಥ ಸೇವೆಯಿಂದ ಈ ದೇಶದ ಸಂಸ್ಕೃತಿ ಮತ್ತು ನಾಗರಿಕತೆಗೆ ಮಾದರಿಯಾಗುವಂಥ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನಿರತವಾಗಿದ್ದವೆಂದರೆ ತಪ್ಪಾಗದು.

ಈ ಕಟ್ಟೆಮನೆಗಳಲ್ಲೆ, ಆಚಾರದ ಕಟ್ಟೆಮನೆಯಾಗಿ ಕಾಮಗೇತನಹಳ್ಳಿ, ವಿಚಾರದ ಕಟ್ಟೆಮನೆಯಾಗಿ ಕಾಟಪ್ಪನಹಟ್ಟಿಗಳು ನಿರ್ಮಾಣವಾದವು. ಇವುಗಳಲ್ಲದೆ ರತ್ನಗಿರಿ, ನಿಡಗಲ್ಲು, ಹರ್ತಿಕೋಟೆಗಳು ಕಟ್ಟೆಮನೆಗಳಾಗಿದ್ದವೆಂದು ತಿಳಿಸಲಾಗಿದೆ. ಕರ್ನಾಟಕದಲ್ಲಿ ಕಾಮಗೇತಿಯರಿಗೆ ಪ್ರತ್ಯೇಕ ದೇವಾಲಯ, ಕಟ್ಟೆಮನೆಗೆ ಸ್ಥಾನ ಇರುವುದು ವಿಶೇಷ. ಕಾಮಗೇತನಹಳ್ಳಿ ಕಟ್ಟೆಮನೆ ಮೂಲಕ ಕಾಮಗೇತಿ ವಂಶದವರ ವಿಕಾಸವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.