ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ಚಿಕ್ಕ ಗ್ರಮ ಕಾಮಗೇತನಹಳ್ಳಿ. ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ದೊಣ್ಣೆಹಳ್ಳಿಯಿಂದ ಜಗಳೂರಿಗೆ ಹೋಗುವ ದಾರಿ ಮಧ್ಯದ ಬಲಭಾಗಕ್ಕೆ (ಉತ್ತರಕ್ಕೆ) ಈ ಗ್ರಾಮವಿದೆ. ಜಗಳೂರಿಗೆ ೧೦ ಕಿ.ಮೀ ಅಂತರದಲ್ಲಿದ್ದು, ಬಸ್‌ಸ್ಟಾಂಡ್ (ಗೇಟ್)ನಿಂದ ೧ ಕಿ.ಮೀ. ನಡೆದುಹೋಗಬೇಕು. ಗ್ರಾಮದಲ್ಲಿ ಊರಿಗೆ. ಮ್ಯಾಸಬೇಡರೆ (ಕಾಮಗೇತಲಾರು) ಹೆಚ್ಚಾಗಿ ವಾಸಿಸುವ ಕಾರಣ ಕಾಮಗೆತನಹಳ್ಳಿ ಎಂದು ಹೆಸರಾಗಿದೆ. ಇಲ್ಲಿ ಸೂರ್ಯಲಿಂಗೇಶ್ವರ ದೇವಾಲಯವಿದೆ. ಸಹಸ್ರಾರು ಭಕ್ತರನ್ನು ಅನುಯಾಯಿಗಳನ್ನು ಹೊಂದಿರುವ ಈ ನೆಲೆ ಮ್ಯಾಸಬೇಡರ ಆಚಾರದ ಕಟ್ಟೆಮನೆ ಆಗಿದೆ.

ಮ್ಯಾಸಬೇಡರ ಕಾಪು – ಕಂಪಗಳ ಹೆಚ್ಚಾದಂತೆ ತಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ – ಸಾಮರಸ್ಯ ಮೂಡಿಸಲು ಸಲುವಾಗಿ ಕಟ್ಟೆಮನೆಗಳನ್ನು ಹಿರಿಯರು ಸ್ಥಾಪಿಸಲು ಮುಂದಾಗುತ್ತಾರೆ. ಎಲ್ಲರ ಒಪ್ಪಿಗೆಯಂತೆ ಮ್ಯಾಸಬೇಡರ (ನಾಯಕ)ದೊರೆ ಯರಮಂಚಿ ನಾಯಕ, ಗಗ್ಗರಿದಾಸ ಹಾಗೂ ಒಂಬತ್ತು ಜನ ಹಿರಿಯರ (ಅಜ್ಜಂದಿರು – ಮುತ್ತಿಗಾರು) ಸಮ್ಮುಖದಲ್ಲಿ ಆಚಾರದ ಕಟ್ಟೆಮನೆಯನ್ನು ಸ್ಥಾಪಿಸಿರುತ್ತಾರೆ. ಶ್ರೀಮಾನ್ ಮಹಾನಾಯಕಚಾರ್ಯ ನಾಯಕ ಶಿರೋಮಣಿಗಳಾದ ಕಾಮಗೇತಿ ಮಠದ ಆಚಾರದ ಕಟ್ಟೆಮನೆಯನ್ನು ಕಾಮಗೇತನಹಳ್ಳಿಯಲ್ಲಿ ಏಕಚಕ್ರಾಧಿಪತಿ, ಮ್ಯಾಸನಾಯಕರ ಮೂಲ ಪುರುಷ, ಸೂರ್ಯವಂಶದ ಮಲ್ಲನಾಯಕ ಸಂತತಿಯ ದೊರೆ ಯರಮಂಚಿನಾಯಕ ತನ್ನ ಸಾರ್ಥಕ ಸೇವೆಯನ್ನು ಇದಕ್ಕೆ ಸಲ್ಲಿಸಿ ಸ್ಥಾಪಿಸಿದ್ದ. ಇವನ ಕಾಲದ ಇತರ ಕಟ್ಟೆಮನೆಗಳೆಂದರೆ : ನನ್ನಿವಾಲ, ಗೋನೂರು ಮತ್ತು ನಾಯಕನಹಟ್ಟಿ. ಇವು ಸಮಸ್ತ ಮ್ಯಾಸನಾಯಕರಿಗೆ ಸಂಬಂಧಪಟ್ಟಂತವು. ಆದರೆ ಕಾಮಗೇತನಹಳ್ಳಿ ಮತ್ತು ಕಾಟಪ್ಪನಹಟ್ಟಿಗಳನ್ನು ಆಚಾರದ ಮತ್ತು ವಿಚಾರದ ಕಟ್ಟೆಮನೆಗಳಾಗಿ ಕ್ರಮೇಣ ಮಾಡಿಕೊಳ್ಳಲಾಗಿದೆ.

ಇಲ್ಲಿರುವ ಸೂರಪ್ಪನಾಯಕದೇವರು ಮೂಲತಃ ಬುಡಕಟ್ಟುವೀರ. ವೀರಮರಣ ಹೊಂದಿದ ನಂತರ ಆತನನ್ನು ದೈವತ್ವಕ್ಕೇರಿಸಿದ್ದಾರೆ. ಸೂರಪ್ಪ, ಸೂರ್ಯಲಿಂಗೇಶ್ವರ ಎಂದು ಆಕಾಶದಲ್ಲಿರುವ ಸೂರ್ಯನನ್ನು ತಮ್ಮ ವಂಶಕ್ಕೆ ಹಾಗೂ ದೇವರಿಗೆ ಹೆಸರಿಟ್ಟಿರುವ ಮ್ಯಾಸನಾಯಕರ ಸಂಸ್ಕೃತಿ ಅಮೋಘವು ಅಷ್ಟೇ ದೈವಾರಾಧನೆಗೆ ಪ್ರತೀಕವೂ ಆಗಿದೆ. ಈ ಸೂರಪ್ಪನನ್ನು ಗಾದರಿಪಾಲನಾಯಕ ಹಾಗೂ ಜಗಳೂರು ಪಾಪನಾಯಕನ ತಂದೆಯೆಂದು ಸಹಾ ಕರೆಯುತ್ತಾರೆ. ಒಟ್ಟಾರೆ ನಾಯಕ ಶಿರೋಮಣಿ, ಮ್ಯಾಸಮಂಡಳಿ ಸಂಸ್ಥಾಪಕನಾದ ಯರಮಂಚಿನಾಯಕನಿಗೆ ಸೂರಪ್ಪ ಚಿಕ್ಕಪ್ಪನಾಗುತ್ತಾನೆ.

ಒಂದು ಕಾಲದಲ್ಲಿ ವೈಭವದಿಂದ ಮೆರೆದ ಕೋಟೆ, ಬುರುಜು, ದ್ವಾರಗಳು ಶಿಥಿಲಗೊಂಡು ಕೇವಲ ಅವಶೇಷಗಳಷ್ಟೆ ಮೂಕಸಾಕ್ಷಿಯಾಗಿವೆ. ಇಲ್ಲಿರುವ ದೇವಾಲಯವು ಸಹಸ್ರಾರು ಭಕ್ತರಿಗೆ ಧಾರ್ಮಿಕ ಕ್ಷೇತ್ರವಾಗಿ ಲೋಕಕಲ್ಯಾಣ ಸೇವೆಯಲ್ಲಿ ತೊಡಗಿದೆ. ಈ ದೇವರಿಗೆ ಪೂಜಾರಿ ಮತ್ತು ಪಟ್ಟಾಧ್ಯಕ್ಷರು ಇದ್ದು ಆತನ ಹೆಸರು ನಿಜಲಿಂಗಪ್ಪನವರು. ಇವರು ಸಹಾ ಹೆಸರಿಗೆ ತಕ್ಕಂತೆ ನಿಷ್ಠೆ, ಪ್ರಾಮಾಣಿಕತೆಯಿಂದ ದೇವರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮ್ಯಾಸನಾಯಕ ಬುಡಕಟ್ಟಿನಲ್ಲಿ ಕುಲಕೆಟ್ಟರೆ (ಮೆಟ್ಟಿನಿಂದ ಹೊಡೆದರೆ – ನಾಯಿಕಚ್ಚಿದರೆ – ನಿಷೇದಿತ ಜಾತಿಗಳಲ್ಲಿ ರಕ್ತ ಸಂಬಂಧ ಬೆಳೆಸಿದರೆ) ಅಥವಾ ಯಾವ ಬಗೆಯಲ್ಲಾದರೂ ತೊಂದರೆಗಳಾದರೆ ಅವರಿಗೆ ಸಾಂತ್ವಾನ ಹೇಳಿ ದೇವರ ನೀರುಹಾಕಿಸಿ ಕಳುಹಿಸುತ್ತಿದ್ದರು. ಕೆಲವರು ತಮ್ಮ ಕುಲ – ಗೋತ್ರಗಳನ್ನು ಇವರಿಂದ ತಿಳಿದುಕೊಳ್ಳಲು ಆಸ್ಪದವಾಗಿದೆ. ಇವರು ಜ್ವಲಂತ ಸಮಸ್ಯೆ, ವಾದ – ವಿವಾದಗಳನ್ನು ನ್ಯಾಯತೀರ್ಮಾನಗಳ ಮೂಲಕ ಬಗೆಹರಿಸಿಕೊಂಡಿದ್ದಾರೆ. ಹುಣ್ಣಿಮೆ, ಅಮವಾಸೆಗಳಂದು ದೇವಾಲಯದಲ್ಲಿ ಭಕ್ತರಿಗೆ ವಿಶೇಷ ಸೌಲಭ್ಯವನ್ನು ಒದಗಿಸಲಾಗುತ್ತದೆ. ಕುಲಕೆಟ್ಟ ವ್ಯಕ್ತಿಯನ್ನು ಸಿದ್ಧಿಗೊಳಿಸಿ (ಪವಿತ್ರ) ಜನಾಂಗದ ಅಭಿವೃದ್ಧಿಗೆ ಶ್ರಮಿಸುವಂತೆ ಪ್ರೇರೇಪಿಸುವ ಮಹಾಧಾರ್ಮಿಕ ಕ್ಷೇತ್ರವಾಗಿದೆ ಕಾಮಗೇತನಹಳ್ಳಿ.

.೧. ಮ್ಯಾಸನಾಯಕರ ಮೌಖಿಕ ಪರಂಪರೆಯಲ್ಲಿ ಕಾಮಗೇತನಹಳ್ಳಿ ನಿರ್ಮಾಣ

ಮ್ಯಾಸನಾಯಕರ ಗುರು – ಹಿರಿಯರೆಲ್ಲ ತಮ್ಮ ಬುಡಕಟ್ಟಿನ ವಲಸೆಯಿಂದ ಬೇಸತ್ತು ಒಂದೆಡೆ ನೆಲಸಬೇಕೆಂಬ ತೀರ್ಮಾನಕ್ಕೆ ನಾಂದಿಹಾಡಿದರು. ನೆಲಸುವ ತಾಣಕ್ಕಾಗಿ ಹುಡುಕಾಟದಲ್ಲಿದ್ದಾಗ ಒಂಟಿಕೋಡು ಬೆಳ್ಳಿಹಸು ಪಂಪಾದ್ರಿ ಬಸವರೊಂದಿಗೆ ದನ – ಕರುಗಳಿಗೆ ರೊಪ್ಪ ಹಾಕಿ, ಮೇಯಿಸುತ್ತಿದ್ದರಂತೆ. ನೋಡಲು ಹೊರಟಾಗ ನೆಗ್ಗಿಲಮುಳ್ಳು (ನೆಲದಲ್ಲಿ ಚಿಕ್ಕಗಾತ್ರದ ಲೆಗ್ಗಿಲಮುಳ್ಳು) ದಾರಿಯಲ್ಲಿ ಬಿದ್ದಿದ್ದು ಕೆಲವರು ಸ್ವಚ್ಛ ಮಾಡಿದಾಗ ಅವರನ್ನು ಹಿಂಬಾಲಿಸಿದರಂತೆ. ಅಲ್ಲಿಗೆ ಹೋದ ಹಿರಿಯರೆಲ್ಲ ಸೇರಿ ಪಚ್ಚಪದಿಕೋಟೆಯನ್ನು ಮತ್ತು ಅದಕ್ಕೆ ಏಳುಬಾಗಿಲುಗಳನ್ನು ನಿರ್ಮಾಣಮಾಡಿದರೆಂದು ತಿಳಿಯುತ್ತದೆ. ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಒಂಬತ್ತು ಚಿಲುಮೆಗಳನ್ನು ತೋಡಿ ಬಂದ ಜಲದಲ್ಲಿ ತಮ್ಮಲ್ಲಿದ್ದ ನಾರಾಯಣನ ಸಾಲಿಗ್ರಾಮವನ್ನು ಗಂಗಾಸ್ಥಾನ ಮಾಡಿಸಿ ಪ್ರಮುಖ ಪೂಜೆಗಳಾದ ಮೇಲೆ ಅದಕ್ಕೆ ಸೂರಪ್ಪನೆಂದು (ಲಿಂಗ – ಒಡೆಯ) ಹೆಸರಿಟ್ಟರು. ಕಾಮಗೇತಿ ವಂಶದ ಸಹೋದರ ಸಂಬಂಧಿಗಳು ಸೇರಿ ಪೂಜನೀಯ ಸ್ಥಳವನ್ನು ನಿರ್ಮಾಣ ಮಾಡಿದ ಜಾಗದಲ್ಲಿ ನೆಲಸಿದ ತಳಕ್ಕೆ ‘ಕಾಮಗೇತನಹಳ್ಳಿ’ ಎಂದು ಹೆಸರಿಟ್ಟರು.

ಈ ಗ್ರಾದಲ್ಲಿ ಬಹುತೇಕ ನೆಲಸಿದವರೆಲ್ಲ ಮ್ಯಾಸನಾಯಕರೇ. ತಮ್ಮ ಸೂರಪ್ಪದೇವರು ನೆಲಸಿದ್ದ ಕಾರಣ ಈ ಸ್ಥಳಕ್ಕೆ ಎಲ್ಲಿಲ್ಲದ ಮೆರುಗು ಬಂದಿದೆ. ಸೂರಪ್ಪ ದೇವರಿಗೆ ‘ನಳ್ಳಟಬ್ಬ’ ಬೆಡಗಿನವನನ್ನು ಪೂಜಾರಿಯಾಗಿ ಪೂಜಾರಿಕೆ ಮಾಡುತ್ತಾರೆ. ಮ್ಯಾಸಮಂಡಳಿಯಲ್ಲಿ ಮೂರು ಜನ ನಾಯಕರು, ೩ ಜನ ಪೂಜಾರಿಗಳು, ೭ ಜನ ಹಿರಿಯರು ಇರುತ್ತಾರೆ. ಇವರಲ್ಲಿ ನಲಗೇತಿ, ಕಾಮಗೇತಿ ಮತ್ತು ಬುಲ್ಲುಡ್ಲು (ಯರಪೋತಿ) ಪೂಜಾರಿಗಳಾಗಿರುತ್ತಾರೆ. ಕಾಮಗೇತಿ ವಂಶದ ದೇವರಿಗೆ ಅದೇ ವಂಶದವನನ್ನು ಪೂಜಾರಿಯಾಗಿ ಮಾಡದೆ ಬೇರೆ ಬೆಡಗಿನವರನ್ನು ಆಸ್ಥಾನಕ್ಕೆ ನೇಮಿಸಿರುವುದು ವಿಶೇಷವಾಗಿದೆ.

ಕಾಮಗೇತಿಯರು ಕರ್ನಾಟಕದಲ್ಲಿ ಯಾವ ಭಾಗದಲ್ಲೇ ನೆಲಸಿರಲಿ ತಮ್ಮ ಮೂಲಸ್ಥಳ, ಮನೆದೇವರನ್ನು ಸಂದರ್ಶಿಸದೇ ಇರುವುದಿಲ್ಲ. ವರ್ಷಕ್ಕೊಮ್ಮೆ, ಒಂದೆರಡುಬಾರಿ ದೇವರ ದರ್ಶನ ಪಡೆಯುತ್ತಾರೆ. ಈ ಭಾಗದಲ್ಲಿ ಸೂರಪ್ಪ ಅಥವಾ ಸೂರಲಿಂಗೇಶ್ವರನನ್ನು ಹಲವು ಸಮಾಂತರ ಹೆಸರುಗಳಿಂದ ಕರೆದು ಸಮಾನವಾಗಿ ಕರೆಯುವುದು ವಾಡಿಕೆ. ಸೂರಲಿಂಗೇಶ್ವರ, ಕಾಟೇಲಿಂಗೇಶ್ವರ, ಚಿತ್ರಲಿಂಗೇಶ್ವರ (ಚನ್ನಕೇಶವ), ನಲ್ಲಚೆರುವು ಓಬಳ ದೇವರು ಕಮತ್ತು ರಾಯಾಪುರ ಮ್ಯಾಸರಹಟ್ಟಿಯ ಪದಿನಾನ ದೇವರನ್ನು ಸಹಾ ಇವರು ಪೂಜಿಸುತ್ತಾರೆ. ಇವರು ಸೂರ್ಯ ಮತ್ತು ಚಂದ್ರವಂಶದ ದೇವರುಗಳನ್ನು ಆರಾಧಿಸುವುದುಂಟು. ಬಹುತೇಕ ಸೂರ್ಯದೇವರನ್ನೇ ಕಾಮಗೇತಲಾರು ಪೂಜಿಸುವುದು ಪ್ರಚಲಿತವಿದೆ.

ಕಾಮಗೇತಿ ಸಹೋದರ ಸಂಬಂಧಿಗಳು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿದ್ದರು. ಶೈವ ಧರ್ಮಕ್ಕೆ ಸೇರಿದ ಮೇಲಿನ ಐದು ದೇವರುಗಳನ್ನು ಇವರು ಪೂಜಿಸುತ್ತಾರೆ. ಮತ್ತು ಈ ಎಲ್ಲಾ ದೇವರುಗಳು ಒಂದೇ ಆಗಿರುವುದರಿಂದ ದೇವರ ಭಕ್ತರು, ಭಾದ್ಯಸ್ಥರು (ಪದ್ನಿದೇವರಹಟ್ಟಿ) ಎಲ್ಲ ದೇವಾಲಯಗಳಿಗೂ ಸಮನಾಗಿ ನಡೆದುಕೊಳ್ಳುತ್ತಾರೆ.

ದೊರೆ ಯರಮಂಚಿನಾಯಕ, ದಳವಾಯಿ ಗಗ್ಗರಿದಾಸರಿ ಜತೆ ೩ ಜನ ನಾಯಕರು, ೩ ಜನ ಪೂಜಾರಿಗಳು, ೩ ಜನ ದಾಸಯ್ಯಗಳು ಮತ್ತು ೭೭ ಮಂದಿ ಮನ್ನೆಗಾರರ ಪ್ರಯತ್ನದ ಫಲ ಎಲ್ಲರೂ ಸೇರಿ ನಿರ್ಣಯದ ಸೂರಪ್ಪ ದೇವರ ಕ್ಷೇತ್ರವಾದ ಕಾಮಗೇತನಹಳ್ಳಿ ಸಮಸ್ತನಾಯಕ ಬುಡಕಟ್ಟಿನವರಿಗೆ ಆಚಾರದ ಕಟ್ಟೆಮನೆಯಾಗಿ ಪ್ರವರ್ಧಮಾನಕ್ಕೆ ಬಂದು ನಿಂತಿದೆ.

.೨. ಕಾಮಗೇತಿಯವರ ಹಕ್ಕು – ಬಾಧ್ಯತೆಗಳು

ಮ್ಯಾಸನಾಯಕರಲ್ಲಿ ಹಬ್ಬ – ಹರಿದಿನಕ್ಕಿಂತ ಮದುವೆಯ ಆಚರಣೆಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಮದುವೆಯ ವಿವಿಧ ಕಾರ್ಯಕ್ರಮಗಳಲ್ಲಿ ಕಂಬಳಿ ಹಾಸುವ ಮತ್ತು ವೀಳ್ಯೆ ಹಿಡಿಯುವ ಮೊದಲ ಹಕ್ಕು ಕಾಮಗೇತಿಗೆ ಸೇರುತ್ತದೆ. ಇವರಿಗೆ ಅರಮನೆ ವೀಳ್ಯೆ ಎಂದಾಗ ಕಾಮಗೇತಿ ವ್ಯಕ್ತಿ ಅದನ್ನು ನಡೆಯುತ್ತಾನೆ. ಒಂದು ವೇಳೆ ಕಾಮಗೇತಿಯವರು ಆ ಮದುವೆಯಲ್ಲಿ ಭಾಗವಹಿಸಿರಲಿಲ್ಲ ಎಂದಾಗ ಜಿಂಪಲರಿಗೂ ಈ ವೀಳ್ಯೆ ಕೊಡುತ್ತಾರೆ. ಕಾಮಗೇತಿ ಇದ್ದರೆ ಮದುವೆ ಕಾರ್ಯಕ್ಕೆ ಪುರೋಹಿತನ ಅಗತ್ಯವಿಲ್ಲ. ಮದುವೆ ಕಾರ್ಯಕ್ರಮಗಳನ್ನು ಇವರೇ ನೆರವೇರಿಸಿಕೊಡುತ್ತಾರೆ. ಇದಕ್ಕೆ ಕಾರಣ ಮ್ಯಾಸ ಮಂಡಳಿಯ ಧಾರ್ಮಿಕ ಪರಂಪರೆಯಲ್ಲಿ ಕಾಮಗೇತಿಯವರಿಗೆ ಪೂಜಾರಿಯ ಹಕ್ಕನ್ನು ಕೊಟ್ಟಿರುತ್ತಾರೆ. ಕೆಲವು ಪೂಜಾರಿಗಳು ಮೈಗೆ ಮುದ್ರೆ ಹೊತ್ತಿಸಿಕೊಂಡು ಪಟ್ಟಾಭಿಷೇಕ ಮಾಡಿಸಿಕೊಳ್ಳುವ ಸಂಪ್ರದಾಯವಿದೆ.

‘ಮಳೆಲರ ಗೋತ್ರಕ್ಕೆ ಕಾಮ್ಗೇತಿ ಪಾಳೆಯಗಾರರು ಕೋಲುಕಾರರೆಂತಲೂ ಹಾಗೂ ತಳವಾರರೆಂತಲೂ, ಕರೆದು ತಮ್ಮ ಸಂಸ್ಥಾನದ; ಪ್ರತಿ ಊರಿನ ಸ್ಥಳ ವಿಚಾರವನ್ನು ಇವರ ಕಡೆಯಿಂದ ತಿಳಿದುಕೊಳ್ಳುತ್ತಿದ್ದರು.

[1] ನಾಯಕರಹಟ್ಟಿ ಕಟ್ಟೆಮನೆ ವ್ಯಾಪ್ತಿಗೆ ಬರುವ ಎಲ್ಲ ಹಳ್ಳಿಗಳ ದೇವಾಲಯಗಳಿಗೆ ಕಾಮಗೇತಿಯನ್ನೂ ಪೂಜಾರಿಯಾಗಿ ನೇಮಿಸಿದ್ದರು. ಮದುವೆ, ದೇವರ ಕಾರ್ಯಗಳಲ್ಲಿ ಇವರು ಮುಖ್ಯಸ್ಥರಾಗಿರುತ್ತಾರೆ. ಮಳೆಲಾರು ಗದ್ದಿಗೆ ಹಾಕುವ ಅಧಿಕಾರ ಹೊಂದಿದ್ದರು. ಇವರು ಗದ್ದಿಗೆ ಏರುವ ಅಧಿಕಾರ ಹೊಂದಿದ್ದರು.

.೩ ಗಾವು ಜಿಗಿಯುವುದು

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಆಕನೂರು ಗ್ರಾಮದಲ್ಲಿ ಕಾಮಗೇತಲಾರು ನೆಲಸಿದ್ದಾರೆ. ಇವರಲ್ಲಿ ಕೆಲವರು ಹಿಂದಿನಿಂದಲೂ ಗಾವು ಜಿಗಿಯುವು ಹಕ್ಕು – ಭಾದ್ಯತೆಗಳ ಕ್ರಿಯಾ ವಿಧಾನಗಳನ್ನು ಹೊಂದಿರುವುದರಿಂದ ‘ಪೋತುರಾಜ’ರೆಂದು ಕರೆಯುತ್ತಾರೆ. ಅಂದರೆ ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ಮ್ಯಾಸನಾಯಕರ ಹಟ್ಟಿ ಅಥವಾ ಇತರೆ ಗ್ರಾಮಗಳಲ್ಲಿ ಆಚರಿಸುವ ಶಕ್ತಿದೇವತೆಯ ಹಬ್ಬದಲ್ಲಿ ಕರೆ ಹೋತನ್ನು ಜೀವಂತವಾಗಿ ತನ್ನ ಬಾಯಿಂದ ಕಡಿದು ಒಂದೊಂದೇ ಅಂಗವನ್ನು ಬೇರ್ಪಡಿಸುವುದನ್ನು ಗಾವು ಜಿಗಿಯುವ ಕಾರ್ಯ ಎಂದು ತಿಳಿಯಬಹುದಾಗಿದೆ. ಬಲಿಷ್ಟನಾದ ಪೋತುರಾಜನು ಗುರುವಾರವೇ ಉಪವಾಸವಿದ್ದು (ಒಂದೊತ್ತು) ಅಂದು ಸಂಜೆ ೪ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸ್ನಾನ – ಗಂಗೆ ಪೂಜೆ ಇತರ ಕಾರ್ಯಕ್ರಮಗಳನ್ನು ಪೂರೈಸುತ್ತಾನೆ. ಬೇಡ ಬುಡಕಟ್ಟಿನಲ್ಲಿ ಇಂಥ ವಿಶಿಷ್ಟ ಆಚರಣೆ ವೈದಿಕಶಾಹಿಯ ಪ್ರಭಾವದಿಂದ ಆಗಿರುವಂತಿದೆ.

.೪. ಕಾಮಗೇತಿಯವರ ಭೌಗೋಳಿಕ ವಿಸ್ತರಣೆ

ಕರ್ನಾಟಕದಲ್ಲಿ ಕಾಮಗೇತಿಯವರು ತಮಗಿಷ್ಟವಾದ ನೆಲೆಗಳಲ್ಲಿದ್ದು, ದಕ್ಷಿಣ ಭಾರತದ ಇತರ ಬುಡಕಟ್ಟುಗಳಂತೆ ಗಿರಿಗಳಲ್ಲಿ, ಕಾಡುಗಳಲ್ಲಿ ನಾಗರಿಕತೆ ಸಂಪರ್ಕದಿಂದ ದೂರ ವಾಸಿಸುತ್ತಾರೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿರುವ ಕಾಮಗೇತಿಯವರು ಹಳ್ಳಿ, ಹಟ್ಟಿ, ಹೋಬಳಿ, ತಾಲೂಕು, ಪಟ್ಟಣ ನಗರಗಳಲ್ಲಿ ಇತ್ತೀಚೆಗೆ ವಾಸಿಸುತ್ತಿದ್ದಾರೆ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಗಡಿಯಾಗಿ ಹರಿಯುವ ಚಿನ್ನಹಗರಿ ನದಿ ಪರಿಸರದಲ್ಲಿ ಇವರು ವ್ಯಾಪಕವಾಗಿ ನೆಲಸಿದ್ದಾರೆ. ಚಿತ್ರದುರ್ಗ ನಗರ, ಚಳ್ಳಕೆರೆ ಪಟ್ಟಣ, ಮೊಳಕಾಲ್ಮೂರು, ನಾಯಕನಹಟ್ಟಿ ಪರಿಸರಗಳಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಂಪಳದೇವರಹಟ್ಟಿ ಸುತ್ತಮುತ್ತ ಇವರು ದೇವರ ಪೂಜಾರಿಗಳಾಗಿದ್ದಾರೆ. ಮೊಳಕಾಲ್ಮೂರು ತಾಲೂಕು ತುಮಕೂರ್ಲಹಳ್ಳಿ ಗ್ರಾಮದಲ್ಲಿ ಕಾಮಗೇತಲಾರು ಬೆಡಗಿನ ಸು.೪೦ ಮನೆಗಳಿವೆ. ಸಣ್ಣೋಬಯ್ಯ ತಂದೆ ದಾಸರೋಬಯ್ಯ (೬೫), ನಾಯಕರು, ಕಾಮಗೇತಲಾರು ಬೆಡಗಿನವರು. ಇವರಿಗೆ ಮಾಸಿಲುವಾಡು, ಮಂಗಪೋಟಿ ಮಾಸಿಲು ಎನ್ನುವರು. ಈತ ಶ್ರೀಕಂಪಳರಂಗಸ್ವಾಮಿಗೆ ದಾಸಯ್ಯನಾಗಿರುವನು. ೩೨ ವರ್ಷಗಳಿಂದ ದಾಸಯ್ಯನಾಗಿದ್ದು, ಕಂಪಳ ದೇವರಿಗೆ ಇವರು ರತ್ನಗಂಬಳಿ ಹಾಸುವುದು, ಒಡಿಕೆ, ಪೂಜೆ ಆಗಬೇಕಾದರೆ ಮೊದಲು ಕಾಸು ಇಡುತ್ತಾರೆ. ಕಾಮಗೇತನಹಳ್ಳಿ ಸೂರಪ್ಪ ಇವರ ಮನೆದೇವರು. ಗುಡೇಕೋಟೆ ಪರಿಸರದಲ್ಲಿ ಕೃಷಿಯನ್ನು ಅವಲಂಭಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕಿನಲ್ಲಿಯೂ ಕಾಮಗೇತಿಗಳು ಹೆಚ್ಚಾಗಿದ್ದಾರೆ. ಕಾಮಗೇತಲಾರು ನೀರು – ರಸ್ತೆ – ವಿದ್ಯುತ್ ದೀಪಗಳಿಂದ ಈವರೆಗೆ ದೂರ ಇದ್ದರು. ಇಂದು ನಾಗರಿಕತೆಗೆ ಒಗ್ಗಿ ಹೋದ ಇವರು ಬದುಕಿನಲ್ಲಿ ಸಾಕಷ್ಟು ಪರಿವರ್ತನೆಗಳನ್ನು ಕಂಡಿದ್ದಾರೆ. ಇನ್ನು ಕೆಲವರು ರಸ್ತೆ, ನೀರು, ಫೋನು, ವಿದ್ಯುತ್ ಇಲ್ಲದ ಏಕಾಂತ ಸ್ಥಳ, ಕಾಡು, ಬಂಜರು ಭೂಮಿಯಲ್ಲಿ ನೆಲಸಿದ್ದಾರೆ. ಎಲ್ಲಿ ನೆಲಸಿರಲಿ ತಮ್ಮ ಮನೆದೇವರಾದ ಕಾಮಗೇತನಹಳ್ಳಿ ಸೂರಪ್ಪನಿಗೆ ವರ್ಷಕ್ಕೆ ಒಂದೆರಡು ಬಾರಿ ಬಂದು ದರ್ಶನ ಪಡೆಯುತ್ತಾರೆ.

ಸೂರ್ಯಲಿಂಗೇಶ್ವರ ದೇವರು ಮತ್ತು ಆಚಾರದ ಕಟ್ಟೆಮನೆಗೆ ನಡದುಕೊಳ್ಳತಕ್ಕ ಕಾಮಗೇತಿ ಭಕ್ತರು ಇರುವ ಹಳ್ಳಿಗಳು ಇಂತಿವೆ : ಗಲಗಲ್ಲು, ಮಾರಮ್ಮನಹಳ್ಳಿ, ರಾಯಾಪುರ, ತುಮಕೂರ್ಲಹಳ್ಳಿ, ಹಿರೇಹಳ್ಳಿ, ಬಿ.ಜಿ.ಕೆರೆ, ರುದ್ರಮ್ಮನಹಳ್ಳಿ, ಮಲ್ಲೂರಹಳ್ಳಿ, ಗುಂತಕೊಲೇಮನಹಳ್ಳಿ, ತೊರೆಕೋಲೆಮನಹಳ್ಳಿ, ಚಿಕ್ಕಮಲ್ಲನಹೊಳೆ, ಕಾತ್ರಿಕೆಹಟ್ಟಿ, ಪೂಜಾರಹಳ್ಳಿ, ಸಿಡೆಗಲ್ಲು, ಗುಡೇಕೋಟೆ, ಯರಗುಂಡ್ಲಹಟ್ಟಿ, ಕೆ.ದಿಬ್ಬಹಳ್ಳಿ, ಹಾಲಸಾಗದರಟ್ಟಿ, ಕಾಮಲಾಪುರ, ಉಬ್ಬಲಗಂಡಿ, ರಾಜಾಪುರ, ಹನುಮಾಪುರ, ಬಾಂಡ್ರಾವಿ, ತುಳಸಿಕೆರೆ, ಸಂತೆಗುಡ್ಡ, ಮಲೆತುಂಬರ ಗುದ್ದಿ, ಯರ್ರೋ‍ನಹಳ್ಳಿ, ಗೌರೀಪುರ, ನರಸಾಪುರ, ಸೊಂಡೂರು, ಸಿದ್ದಾಪುರ, ಹಾರಕಬಾವಿ, ಜುಟ್ಟುಲಿಂಗನಹಟ್ಟಿ, ಜೋಗಿಹಳ್ಳಿ, ಮಾಕನಡಕು, ನರಸಿಂಹಗಿರಿ, ನುಂಕನಹಳ್ಳಿ, ಸೂಲದಹಳ್ಳಿ, ಕೋನಸಾಗರ, ಉಡೆಗೋಳ, ವಲಸೆ ಕರ್ನಾರಹಟ್ಟಿ, ವಲಸೆ, ಚಿನ್ನೋಬನಹಳ್ಳಿ, ನಿಂಗನಾಯಕನಹಳ್ಳಿ, ಮಾಡನಾಯಕನಹಳ್ಳಿ, ತಿಮ್ಮಾಲಾಪುರ, ಮಾದಮುತ್ತೇನಹಳ್ಳಿ, ಕಾನಕಟ್ಟೆ, ಜಾಗನೋರಹಟ್ಟಿ, ಎತ್ತಿನಹಟ್ಟಿ, ಪೆಯಿಲಾರಹಟ್ಟಿ, ಕಾಟವ್ವನಹಳ್ಳಿ, ಮುಚ್ಚುಗುಂಟೆ, ಚಿತ್ರದುರ್ಗ, ಚಳ್ಳಕೆರೆ, ಜಾನುಕೊಂಡ, ಬಂಜಗೆನಹಳ್ಳಿ, ಅವಳೆಹಟ್ಟಿ, ರಾಮಗಿರಿ, ಅರೆಹಳ್ಳಿಹಟ್ಟಿ, ಕೊಡಗಳಟ್ಟಿ, ಗುಡ್ಡದ ಮಲ್ಲಿಗೆನಹಳ್ಳಿ, ನಲ್ಲೂರು ಹಿರೆಕಂದ್ವಾಡಿ, ಹಳಿಯೂರು, ಬಿ.ದುರ್ಗ, ಸಾದರಹಳ್ಳಿ, ಬಳ್ಳೆಕಟ್ಟೆ, ವಿಜಾಪುರ, ಚಿಕ್ಕಹಾಲಘಟ್ಟ, ಅಳಗವಾಡಿ, ಪಳಕಿಹಳ್ಳಿ, ಬಾವಿಹಾಳು, ಕೈದಾಳು, ಕಾಶೀಪುರ,ಲೋಕಿಕೆರೆ, ಮಳಲಕೆರೆ, ಶಾಗಲಿ, ಕಬ್ಬೂರು, ವಿಟ್ಲಾಪುರ, ಹೂವಿನಮಡು, ಎರರ್ವ್ವನಾಗ್ತಿಹಳ್ಳಿ, ದಾವಣಗೆರೆ, ಮಲ್ಲಾಪುರ, ಮ್ಯಾಸರಹಳ್ಳಿ, ಬಾದ್ದೂರುಘಟ್ಟ, ನಂದಿಹಳ್ಳಿ, ಗೋಡೆಬಿಳಿಚೋಡು, ಪಾಲನಾಯಕನಕೋಟೆ, ಸೂರಗೊಂಡೇನಹಳ್ಳಿ, ಹೊಸದುರ್ಗ, ಬುಲ್ಲನಹಳ್ಳಿ, ಕಸ್ತೂರಿಪುರ, ಗೋಪಗುಂಡನಹಳ್ಳಿ, ಕೆಳಗೋಟೆ, ಬಸವಾಪುರ, ಐನಳ್ಳಿ, ಲಕ್ಕಂಪುರ, ಜಗಲೂರು ಗೊಲ್ಲರಹಟ್ಟಿ, ಜಗಳೂರು ಮೊದಲಾದವು. ಕಾಮಗೇತಲಾರು ಮಂದ ಸಂತತಿಗೆ ಸೇರಿದವರು. ಇವರು ಹೆಣ್ಣು ತರುವುದು ಮಲ್ಲಿನಾಯಕ ಸಂತತಿಯಿಂದ. ಕೊಟ್ಟು – ಕೊಳ್ಳುವ ಸಂಬಂಧ ಇವೆರಡರಲ್ಲಿದೆ. ಉದಾ: ಮಂದಕ್ಕೆ ಸೇರಿದವರೆಂದರೆ: ಮಳೆಲಾರು, ಪಾಮುಡ್ಲಾರು, ಬುಟ್ಟುಗಲಾರು, ಪಟ್ಟಪುವಲಾರು. ಇವರನ್ನು ಏಳುಮನೆ ಬೀಗರೆಂದು ಕರೆಯುವರು.

.೫ ಕಾಮಗೇತಿಗಳ ದೈವರಾಧನೆ ಮತ್ತು ಸೂರ್ಯಲಿಂಗೇಶ್ವರ

ದೊಣೆಹಳ್ಳಿ ಹತ್ತಿರ ಚಿಕ್ಕಹಳ್ಳಿಯಲ್ಲಿ ಕೆಲವು ಕಾಲ ಸೂರ್ಯಲಿಂಗ ದೇವರು ವಾಸಿಸಿ ನಂತರ ತಿಮ್ಮಲಾಪುರ ನಂತರ ಕಾಮಗೇತನಹಳ್ಳಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ.

ಸೂರ್ಯಲಿಂಗದೇವರ ಐದು ಲಿಂಗಗಳೆಂದರೆ : ಸೂರ್ಯಲಿಂಗ, ಕಾಟಮಲಿಂಗ, ಚಿತ್ರಲಿಂಗ, ಪೋತಲಿಂಗ ಮತ್ತು ಮಾದೇಯಲಿಂಗ. ಸ್ಥಳಗಳೆಂದರೆ : ಕಾಮಗೇತನಹಳ್ಳಿ, ಕಾಟಪ್ಪನಹಟ್ಟಿ, ಊಡೇಗೋಳ, ಆಕನೂರು ಮತ್ತು ಹಿರೇಮಲ್ಲನಹೊಳೆ.

ಮತ್ತೊಂದು ಮಾಹಿತಿಯ ಪ್ರಕಾರ ೬ ದೇವರುಗಳ ವಿವರ ದೊರೆಯುತ್ತದೆ.

೧. ಕಾಟಮಲಿಂಗೇಶ್ವರ – ಕಾಟಪ್ಪನಹಟ್ಟಿ, ಚಳ್ಳಕೆರೆ – ತಾ ||

೨. ಚಿತ್ರದೇವರು – ಉಡೇಗೋಳ, ರಾಯದುರ್ಗ, ಆಂಧ್ರಪ್ರದೇಶ

೩. ಸೂರಲಿಂಗೇಶ್ವರ – ಕಾಮಗೇತನಹಳ್ಳಿ, ಜಗಳೂರು – ತಾ ||

೪. ಚನ್ನಕೇಶವ – ನಲಗೇತನಹಟ್ಟಿ, ಚಳ್ಳಕೆರೆ – ತಾ ||

೫. ಪದ್ನಿನದೇವರು – ರಾಯಪುರ ಮ್ಯಾಸರಹಟ್ಟಿ, ಮೊಳಕಾಲ್ಮೂರು – ತಾ ||

೬. ನಲುಚೆರವು ಓಬಳದೇವರು – ರುದ್ರಮ್ಮನಹಳ್ಳಿ, ಚಳ್ಳಕೆರೆ – ತಾ ||

ಈ ಮೇಲಿನ ೬ ಸ್ಥಳಗಳಿಗೆ ಕಾಮಗೇತಿ ನಾಯಕರು ನಡೆದುಕೊಳ್ಳುತ್ತಾರೆ.

. ಕಾಮಗೇತನಹಳ್ಳಿ ಸೂರಪ್ಪದೇವರ ಪೂಜಾರಿ ಪರಂಪರೆ

ಅನೇಕ ತಲೆಮಾರುಗಳಿಂದ ಪೂಜಾರಿಕೆಯ ಪರಂಪರೆ ವಿಕಾಸಗೊಂಡಿದೆ. ಕಳೆದ ಶತಮಾನದಲ್ಲಿ ಕುಂಟ ಬಯ್ಯಣ್ಣ ಪಟ್ಟದ ಪೂಜಾರಿಯಾಗಿದ್ದನು. ಇವರ ತರುವಾಯ ಪಾಲುಪೂಜಾರಿ (ಪಟ್ಟದ)ಗೆ ಪಟ್ಟಾಭಿಷೇಕ ಆಗುತ್ತದೆ. ಇವರು ಅದ ಮೇಲೆ ಪೂಜಾರಿ ಪಾಲಯ್ಯನಿಗೆ ಪೂಜಾರಿಕೆ ಹೋಗುತ್ತದೆ. ಆದರೆ ಇವರಿಗೆ ಪಟ್ಟಾಭಿಷೇಕ ಆಗಿರುವುದಿಲ್ಲ. ಈ ಪೂಜಾರಿ ಪಾಲಯ್ಯನ ೪ನೇ ಮಗನೇ ಈಗಿರುವ ನಿಜಲಿಂಗಪ್ಪ. ಇವರಲ್ಲಿ ಪೂಜಾರಿಕೆ ಸಂಸ್ಕಾರ ಆದ ಮೇಲೆ ವಿವಾಹವಾಗುವ ಸಂಪ್ರದಾಯವಿದೆ.

. ಪೂಜಾರಿಗೆ ಪಟ್ಟಾಭಿಷೇಕ ಮಾಡುವ ವಿಧಿ – ವಿಧಾನಗಳು

ನಾಲ್ಕು ಕಾಮಗೇತಿ ಮಠದವರಿಂದ, ಗುರುಹಿರಿಯರಿಂದ, ಒಪ್ಪಿಗೆ ಪಡೆದು ದೊರೆಗಳ ಒಪ್ಪಿಗೆ ಪಡೆದು, ಸಾವಿರದವರ ಒಪ್ಪಿಗೆ ಪಡೆದು ೯ಅಜ್ಜನವರ ಒಪ್ಪಿಗೆ ಪ್ರಕಾರ ಉಜ್ಜಿನಿ ಗುರುಪೀಠ ಹಿರೇಮಠದ ಗುರುಗಳಾದ ಪರಮೇಶ್ವರಪ್ಪ ತಿಪ್ಪೇಸ್ವಾಮಿ ಇವರ ಸಮ್ಮುಖದಲ್ಲಿ ಪಟ್ಟ ಆಗುವ ಮಗುವಿನ ತಂದೆ – ತಾಯಿಯ ಒಪ್ಪಿಗೆ ಪಡೆದು ಆ ಮಗುವನ್ನು ತಂದೆ – ತಾಯಿಯ ಎದುರಿನಲ್ಲಿ ಉಡುದಾರವನ್ನು ಹರಿದು ಸಾವಿರದವರ ಮುಖಾಂತರ ಆ ಮಗುವಿನ ದೀಕ್ಷೆ, ಸಂಸ್ಕಾರವನ್ನು ಕೊಟ್ಟ ನಂತರ ಶ್ರೀ ಸ್ವಾಮಿಯನ್ನು ಹಿರೇಮಠದ ಗುರುಗಳ ಹಸ್ತದಿಂದ (ದೇವರು) ಈ ಸ್ವಾಮಿಯನ್ನು ತಲೆಯ ಮೇಲಿಡಲಾಗುತ್ತದೆ. ತಲೆಯ ಮೇಲೆ ಇಡುವವರು ನಾಯಕನಹಟ್ಟಿ ಹಿರೇಮಠದವರು ಮತ್ತು ಇಳಿಸುವವರು ಅದೇ ಗುರುಗಳೇ, ಸ್ವಾಮಿ ಹೊರಗಡೆ ಹೋದಾಗ ಈ ಸ್ವಾಮಿಗಳೇ ಮುಂದೆ ಇರಬೇಕು. ಸ್ವಾಮಿಯ ಬೆಟ್ಟಕ್ಕೆ ಹೋದಾಗ ಬೆಟ್ಟದ ದೊಣಿಯಲ್ಲಿ ಅಕ್ಕರಾಯಮ್ಮ ಎಂಬ ದೇವತೆಯ ಗಂಗಾಪೂಜೆ ಸ್ವಾಮಿಗೂ ಪೂಜೆ, ೧೦೧ ಎಡೆ ಹೊಂಡದ ಸುತ್ತ ಹಾಕಲಾಗುತ್ತದೆ. ಆನಂತರ ಸ್ವಾಮಿ ಪೂಜೆ ಮುಗಿಸುತ್ತಾರೆ. ಇವರ ನೇತೃತ್ವದಲ್ಲಿ ಸ್ವಾಮಿ ಮರಳಿ ಬಂದು ಗುಡಿ ಸೇರುತ್ತದೆ.

ಪೆಯಿಲು ಮುತ್ತೆಯವರ ನಿಯಮ ಈ ಸ್ವಾಮಿಯ (ಸೂರಲಿಂಗೇಶ್ವರ) ಹಸುಗಳ ಕರುಗಳನ್ನು ಪಶುಪಾಲನೆ ಮಾಡಿ ಆ ಸ್ವಾಮಿಗೆ ಪ್ರಸಾದ ಅಂದರೆ ಕಡಬನ್ನು ಸ್ವಂತಾಗಿ ಸ್ವಾಮಿಗೆ ಅರ್ಪಿಸುತ್ತಾರೆ. ಇದಕ್ಕೆ ಇವರಿಗೆ ಪೆಯಿಲು ಮುತ್ತೆವರೆಂದು ಕಾಮಗೇತರಲ್ಲಿ ಕರೆದುಕೊಂಡಿದ್ದಾರೆ. ಈ ಮಠದಲ್ಲಿ ಸೂರ್ಯಲಿಂಗೇಶ್ವರ ಸ್ವಾಮಿಗೆ ಹೊರಗಡೆ ಬಂದ ನಂತರ ಈ ಸ್ವಾಮಿಯ ಗಂಟೆ – ಧೂಪಾರತಿಯನ್ನು ಮಲಮುತ್ತೆಯರ ಕೈಯಲ್ಲೇ ಇರುವುದು. ಇವರು ಸ್ವಾಮಿಯ ಪ್ರಸಾದವನ್ನು ಅಂದರೆ ಕಡುಬನ್ನು ಗುಗ್ಗರಿಯನ್ನು ಬಾಯಿಕಟ್ಟಿಕೊಂಡು ಪ್ರಸಾದವನ್ನು ಮಾಡತಕ್ಕವರು ಇವರೇ. ದೇವರ ಬಾಗಿಲಲ್ಲಿ (ದ್ವಾರ) ಕಾದು ಕುಳಿತಿರುತ್ತಾರೆ. ಪೂಜಾರಪ್ಪನವರು ಇವರೇ. ದೇವರ ಬಾಗಿಲಲ್ಲಿ (ದ್ವಾರ) ಕಾದು ಕುಳಿತಿರುತ್ತಾರೆ. ಪೂಜಾರಪ್ಪನವರು ಹೊರಗೆ ಹೋಗುವಾಗ ಬೀಗವನ್ನು ಇವರ ಕೈಯಲ್ಲಿ ಕೊಟ್ಟು ಹೋಗುತ್ತಾರೆ. ಇವರು ಸಹ ಕಾಮಗೇತಲಾರು. ಇವರನ್ನು ಮಲ್ಲಮುತ್ತೆ ಪೂಜಾರಿ ಎಂದು ಕರೆಯುತ್ತಾರೆ.

. ಪೂಜಾರಿ ನಿಜಲಿಂಗಪ್ಪನ ಪಟ್ಟಾಭಿಷೇಕ

ಈಗಿನ ಪೂಜಾರಿ ನಿಜಲಿಂಗಪ್ಪನವರು ೧೯೩೬ರಲ್ಲಿ ಹುಟ್ಟಿದರು. ೧೯೪೭ರಲ್ಲಿ ಇವರಿಗೆ ಪಟ್ಟಾಭಿಷೇಕವಾದಾಗ ಮುಸ್ಟೂರಿನ ಶ್ರೀ ಓಂಕಾರ ಹುಚ್ಚನಾಗಲಿಂಗ ಸ್ವಾಮಿಗಳಿಂದ ದೀಕ್ಷೆ – ಸಂಸ್ಕಾರ ಪಡೆದಿರುತ್ತಾರೆ. ಒಂಬತ್ತು ಅಜ್ಜನವರು, ದೊರೆಗಳು ಒಪ್ಪಿಗೆ ಮೇರೆಗೆ ಮೇಲಿನ ಸಂಸ್ಕಾರ ಪಡೆದವರು. ನಾಯಕನಹಟ್ಟಿ ಹಿರೇಮಠದ ಪರಮೇಶ್ವರಪ್ಪ ಉಜ್ಜೀನಿಮಠಕ್ಕೆ ಸೇರಿದವರು. ಇವರು ಒಪ್ಪಿಗೆ ಕೊಟ್ಟಿದ್ದರಿಂದ ಪೂಜ್ಯನಾದ ನಿಜಲಿಂಗಪ್ಪನವರಿಗೆ ಪಟ್ಟಾಭಿಷೇಕವಾಗಿತ್ತು (೧೯೪೭). ಆಗಿನಿಂದಲೂ ದೇವರ ಕಟ್ಟೆಮನೆ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ದಿ : ೨೩ – ೧೧ – ೧೯೮೬ರಲ್ಲಿ ಕಲ್ಲಿನ ದೇವಾಲಯವನ್ನು ಪೂಜಾರಿ ನಿಜಲಿಂಗಪ್ಪನವರ ನೇತೃತ್ವದಲ್ಲಿ ನಿರ್ಮಾಣವಾಯಿತು. ದೊರೆ, ಭಕ್ತಾಧಿಗಳು, ಹೆಣ್ಣು ಮಕ್ಕಳು ಕೊಟ್ಟ ಕಾಣಿಕೆಯಿಂದ ದೇವಾಲಯ ನಿರ್ಮಾಣವಾಗಿರುತ್ತದೆ. ಕಾಮಗೇತಿ ಪೂಜಾರಿಗೆ ಮಧ್ಯ – ಮಾಂಸ ನಿಷಿದ್ಧ. ಸರ್ವಸಂಗ ಪರಿತ್ಯಾಗ ಮಾಡಿದ ವ್ಯಕ್ತಿಗೆ ಪಟ್ಟಾಭಿಷೇಕ ಆಗುತ್ತಿತ್ತು.

.೬. ಪೂಜಾರಹಳ್ಳಿ ಬಸವಣ್ಣನ ಪೂಜಾರಿಗಳು

ಆಯಾ ನೆಲೆಗಳಲ್ಲಿ ಶಾಶ್ವತವಾಗಿ ತಳವೂರಿರುವ ಕಾಮಗೇತಿಗಳು ಇಂದು ಸಾಮಾಜಿಕ ಒತ್ತಡಗಳಿಗೆ ಮಣಿದು ಹೋಗಿದ್ದಾರೆ. ಉದಾಹರಣೆಗೆ ಕೂಡ್ಲಿಗಿ ತಾಲೂಕಿನಲ್ಲಿರುವ ಹಟ್ಟಿಗಳಲ್ಲಿ ಕಾಮಗೇತಿಗಳು ಭಿನ್ನಬಗೆಯ ಬದುಕನ್ನು ಸವೆಸುತ್ತಿದ್ದಾರೆ. ಆ ಪೈಕಿ ಪೂಜಾರಹಳ್ಳಿ ಬಸವಣ್ಣನ ಪೂಜಾರಿಗಳು ಕಾಮಗೇತಿಗಳೇ. ಇವರು ಮೂಲತಃ ಚಿತ್ರದುರ್ಗ, ಚಳ್ಳಕೆರೆ ಓರುಗಲ್ಲು ಪಟ್ಟಣ (ಕಾಟಪ್ಪನಹಟ್ಟಿ), ಏಳುಮಂಡಲ ರಾಯಾಪುರದ ಕೆರೆ ಅಂಗಳ, ಗುಡೇಕೋಟೆ ಹತ್ತಿರ ಚಕ್ಕೆಬಂಡೆ (ಸನ್ಯಾಸಪ್ಪನಮಠ) ಗವಿಗಳಲ್ಲಿ ನೆಲಸಿದ ನಂತರ ಗುಡಿಕೋಟೆ, ಮಾಡ್ಲನಾಯಕನಹಳ್ಳಿ ಸಮೀಪ ಪ್ಯಾಟೇಹಳ್ಳಿ – ಗೆದ್ದಲಗಟ್ಟೆಗಳಲ್ಲಿ ನೆಲಸಿ ಅಲ್ಲಿ ಬಸವಣ್ಣನ ಗುಡಿ ನಿರ್ಮಿಸಿದ್ದರು (ಗೆದ್ದಲಗಟ್ಟೆ ಹತ್ತಿರ). ಮಾಡನಾಯಕನಹಳ್ಳಿ ಸಮೀಪದ ಅಡವಿಯಲ್ಲಿ ನೆಲಸಿರುವುದಕ್ಕೆ ಇಂದಿಗೂ ಕುರುಹುಗಳಿವೆ. ಅಲ್ಲಿ ಮನೆಗಳನ್ನು ಕಟ್ಟಿಕೊಂಡು, ಬಸವಣ್ಣ ದೇವಾಲಯ ನಿರ್ಮಿಸಿಕೊಂಡು, ೧೦೧ ಪತ್ರೆಮರ, ತೋಪು ಬೆಳೆದರು. ಕಾಲಕ್ರಮೇಣ ಪ್ಯಾಟೆಬಿಟ್ಟು ದಕ್ಷಿಣಾಭಿಮುಖವಾಗಿ ಕಡೆಕೊಳ ನಂತರ ಕರೆಪೂಜಾರ ಹಳ್ಳಿಗೆ ಬಂದು ನೆಲೆಸುತ್ತಾರೆ. ಈ ಕೆರೆ ಪೂಜಾರಹಳ್ಳಿ ಗ್ರಾಮವನ್ನು ಮ್ಯಾಸನಾಯಕರದೊರೆ ಯರಮಂಚಿನಾಯಕ ಕೋಟೆಕಟ್ಟಿ, ಬುಡ್ಡೆಕಲ್ಲು ಹಾಕಿ ಸ್ಥಾಪಿಸಿದ್ದನು. ಇಂಥ ಊರಲ್ಲಿ ಇಂದಿಗೂ ಕಾಮಗೇತಿಗಳು ನೆಲಸಿದ್ದಾರೆ. ಇವರು ಬರುವಾಗ ಕಾಪು – ಕಂಪಳ ಒಂದು ಕಡೆ ದನ – ಕರು, ಕುರಿ – ಮೇಕೆ – ನಾಯಿ – ಬೆಕ್ಕು ಎಲ್ಲ ಕೂಡಿ ವಾಸಿಸುವ)ದೊಂದಿಗೆ ಪೆಟ್ಟಿಗೆ ದೇವರಾದ ಅಹೋಬಲ ನರಸಿಂಹನನ್ನು ತಮ್ಮೊಡನೆ ಇಟ್ಟುಕೊಂಡು ಬಂದಿದ್ದರು. ಜೊತೆಗೆ ಬಸವಣ್ಣನ ಲಿಂಗ ವಿಗ್ರಹವು ಇತ್ತು. ಇದು ಈ ಸಂತತಿಯ ಅಕ್ಕರಾಯಮ್ಮನಿಗೆ ನದಿಯಲ್ಲಿ ಸ್ನಾನ ಮಾಡುವಾಗ ಒಡಲಿಗೆ ಬಂದು ಸಿಕ್ಕಿದೆ ಎನ್ನುತ್ತಾರೆ.

ಪೂಜಾರಹಳ್ಳಿ ಬಸವಣ್ಣ ಪ್ರಸಿದ್ಧಿ ಪಡೆದಿರುವುದು ತಮ್ಮ ಧಾರ್ಮಿಕ ಕ್ಷೇತ್ರದಿಂದ ಭಕ್ತರು ಕೇಳಿಸಿಕೊಂಡ ಕೆಲಸ ಅದ ಮೇಲೆ ಪರುವು ಮಾಡುವುದು, ದೇವರಿಗೆ ಕಾಣಿಕೆ ಅರ್ಪಿಸುವುದು ಸಾಮಾನ್ಯ. ಕಾಮಗೇತಿಯವರು ಇಲ್ಲಿ ಬಸವಣ್ಣನನ್ನು ಅಂದರೆ ಗೂಳಿಯನ್ನು ಆರಾಧಿಸುತ್ತಾರೆ. ಗೂಳಿಗೆ ಅಲಂಕರಿಸಿ ಸುತ್ತೆಲ್ಲ ಗ್ರಾಮಗಳಲ್ಲಿ ಭಿಕ್ಷೆ ಬೇಡುತ್ತಾರೆ. ಭಕ್ತರು ತಮ್ಮ ಕಷ್ಟ – ಸುಖಗಳನ್ನು ಈ ಗೂಳಿಯಿಂದ ಕೇಳಿಸಿ ತಿಳಿಯುತ್ತಾರೆ. ಈ ಕಾಮಗೇತಿಯರ ಸಂತತಿ ದೊಡ್ಡದು.

ಕಾಟಯ್ಯ
(ಇಬ್ಬರು ಹೆಂಡತಿಯರು)
ಪೆನ್ನಯ್ಯ
(ಅಣ್ಣ – ತಮ್ಮಂದಿರು)
(ಮಕ್ಕಳಿಲ್ಲ)
ಸೂರಯ್ಯ
ಬಸಣ್ಣ ಓಬಯ್ಯ ಬಸಣ್ಣ ಕಾಟಯ್ಯ ಜರಿಮಲಿ ತಿಪ್ಪೇಸ್ವಾಮಿ ಇತರರು

ಇದ್ದಾರೆ. ಈ ನಾಲ್ಕು ಕುಟುಂಬಗಳು ಪೂಜಾರಹಳ್ಳಿಯಲ್ಲಿ ಬಸವಣ್ಣನ ಪೂಜಾರಿಕೆ ವೃತ್ತಿಯಿಂದ ನೆಲೆಸಿವೆ.

ಕಾಮಗೇತಿಗಳಲ್ಲಿ ಇಂದಿಗೂ ಸುರೇಶ, ಸೂರಯ್ಯ, ಸೂರ್ಯನಾರಾಯಣ, ಕಾಟಪ್ಪ, ಸೂರಮ್ಮ ಎಂದೆಲ್ಲ ಹೆಸರು ಇಟ್ಟುಕೊಳ್ಳುತ್ತಾರೆ. ಇವರ ಮನೆ ದೇವರು ಕಾಮಗೇತನಹಳ್ಳಿ ಸೂರಪ್ಪ, ಪೂಜಾರಹಳ್ಳಿ ಬಸವಣ್ಣದೇವರಿಗೆ ಮಾತ್ರ ಇವರ ಪೂಜಾರಿಗಳು. ಮಿಕ್ಕಂತೆ ಎಲ್ಲರಂತೆ ಜೀವನ ನಡೆಸುತ್ತಾರೆ.[2]

.೭ ಸೂರಪ್ಪದೇವರ ಆಚರಣೆ

ಕಾಮಗೇತನಹಳ್ಳಿ ಸೂರಪ್ಪನಾಯಕನಿಗೆ ಕಾಮಗೇತಿ ವಂಶಜರಷ್ಟೇ ಅಲ್ಲದೆ, ಇತರ ನಾಯಕ ಬುಡಕಟ್ಟಿನ ಜನರು ಮತ್ತು ಬೇರೆ ಬೇರೆ ಜಾತಿ ಸಮುದಾಯದವರು ಪೂಜಿಸುವುದು, ಭಕ್ತರಾಗಿ ನಡೆದುಕೊಂಡಿರುವುದು ವಿಶೇಷ. ಈ ಕಾಮಗೇತನಹಳ್ಳಿ ಕಟ್ಟೆಮನೆಗೆ ಸುಮಾರು ೩೩ ಹಳ್ಳಿಗಳ ಭಕ್ತರು ಶಿವರಾತ್ರಿ ಅಮವಾಸೆ ಆದ ನಂತರ ಸೋಮವಾರ ಕಡಬಿನ ಹಬ್ಬ ದೊಡ್ಡದಾಗಿ ಮಾಡುತ್ತಾರೆ. ಈ ದೇವರು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಈ ದೇವರ ಪೂಜಾರಿ ನಿಜಲಿಂಗಪ್ಪನವರು. ಇವರು ಇಡೀ ಮ್ಯಾಸಮಂಡಳಿ ಸಂಸ್ಕೃತಿಯನ್ನು ವ್ಯಾಪಕವಾಗಿ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದ್ದಾರೆ. ನಿಜಲಿಂಗಪ್ಪನವರು ನಾಯಕರ ಸುಮಾರು ಎರಡುವರೆ ಸಾವಿರ ಜನರಿಗೆ ಮದುವೆ ಕಾರ್ಯ ಮಾಡಿದ್ದಾರೆ. ಲಗ್ನ ಕಟ್ಟುವುದು, ವೀಳ್ಯೆತಿದ್ದಿ, ಮುಹೂರ್ತ ಮಾಡುವ ಕಾರ್ಯವನ್ನು ಇವರು ನೆರವೇರಿಸುತ್ತಾರೆ. ಕೂಡ್ಲಿಗಿ ತಾಲೂಕಿನ ಕಾತ್ರಿಕಟ್ಟೆ ಗ್ರಾಮದ ಗೌಡ್ರ ಪಾಲಯ್ಯ ತಂದೆ ಕಾಟಯ್ಯ ಕಾಮಗೇತಿ ಬೆಡಗಿಗೆ ಸೇರಿದ್ದಾರೆ. ಇವರ ಮನೆದೇವರು ಕಾಮಗೇತನಹಳ್ಳಿ ಸೂರಪ್ಪನಾಯಕ. ಕಟ್ಟೆಮನೆ – ಗುಡಿಕಟ್ಟೆ ಎರಡು ಅದೇ ಆಗಿದೆ ಇವರಿಗೆ. ಸೂರಪ್ಪನಲ್ಲದೇ ಇವರು ಚಳ್ಳಕೆರೆಯ ಕಾಟಪ್ಪನಾಯಕ, ರುದ್ರಮ್ಮನಹಳ್ಳಿ ನಲುಜೆರುವಯ್ಯ (ಓಬಳದೇವರು), ಉಡೇಗೋಳಂನ ಚಿತ್ರಲಿಂಗೇಶ್ವರ ದೇವರನ್ನು ಪೂಜಿಸುವುದರಿಂದ ಇವು ಸೂರಪ್ಪನ ಸಮಾನವಾದ ಮತ್ತು ಕಾಮಗೇತಿಗಳಿಗೆ ಸಂಬಂಧಪಟ್ಟ ದೇವರುಗಳಾಗಿವೆ. ಮೂಲದಲ್ಲಿ ಇವರೆಲ್ಲ ಒಂದೇ. ನಂತರದಲ್ಲಿ ಇವರು ಬೇರೆ ಬೇರೆ ಕಡೆ ಆಗಲಿದ್ದು, ವಿವಿಧ ರೀತಿಯ ಜೀವನ ನಡೆಸುತ್ತಿದ್ದಾರೆ.

ಸೂರಪ್ಪ ದೇವರಿಗೆ ವರ್ಷಕ್ಕೆ ಮೂರು ಬಾರಿ ಹಬ್ಬಗಳಾಗುತ್ತವೆ. ಒಂದು ಶಿವರಾತ್ರಿ ಆದನಂತರ ಕಡಬಿನಹಬ್ಬ, ದೀಪಾವಳಿ ಮತ್ತು ಗುಗ್ಗರಿಹಬ್ಬ ಅಥವಾ ಕಾಳವ್ವಹಬ್ಬ, ಕಾಸು, ಮೀಸಲು, ನೋಮು, ಅಗ್ನಿ ಹೋಮ ಮತ್ತು ೧೦೧ ಪಾಡ್ಯ ಇತರ ಅಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಕಾಮಗೇತನಹಳ್ಳಿ ಧಾರ್ಮಿಕ ನೆಲೆಗೆ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ದೇವರೆತ್ತುಗಳಿದ್ದು, ಬಸಪ್ಪನಹಟ್ಟಿಯ ಮಚೂರನಾಯಕ ಇವುಗಳ ಕಿಲಾರಿ ಆಗಿರುತ್ತಾನೆ. ಮುದಕದಹಳ್ಳಿ (ಭರಮಸಮುದ್ರ) ಚಲುವಾದಿಗಳು ಉರಿಮೆ ಬಡಿಯುತ್ತಾರೆ.

.೮.ಕಾಮಗೇತಿ, ನಲಗೇತಿ ಇತರ ಬೆಡಗುಗಳು

ಬುಡಕಟ್ಟು ಜನರಾದ ಬೇಡರು ಯೋಧ ಹಾಗೂ ಸೈನಿಕ ವೃತ್ತಿಯಲ್ಲಿ ಪಳಗಿದವರು. ಮತ್ತ ಆ ಲಕ್ಷಣಗಳು ಜನ್ಮತಃ ಇವರಲ್ಲಿ ಬಳುವಳಿಯಾಗಿ ಬಂದಿವೆ. ಕರ್ನಾಟಕದಲ್ಲಿ ಕಾಮಗೇತಿ ವಂಶಜರು ಕೇವಲ ಬುಡಕಟ್ಟು ಧರ್ಮ, ಧಾರ್ಮಿಕ ಆರಾಧನೆಯಲ್ಲದೆ, ರಾಜ್ಯಾಳ್ವಿಕೆ ಮಾಡಿರುವುದು ಗಮನಾರ್ಹ. ಅನೇಕ ಪಾಳೆಯಗಾರರು, ಕಿರು ಸಂಸ್ಥಾನಿಕರು, ಮಂತ್ರಿ, ಸೇನಾನಿಗಳು, ತಳವಾರರು ಕಾಮಗೇತಿ ಗೋತ್ರದಲ್ಲಿದ್ದರು.

. ಸೂರ್ಯವಂಶ (ಸಂತತಿ) ಮಲ್ಲಿನಾಯಕ   ಚಂದ್ರವಂಶ (ಮಂದಲಾರು)
(ಶೈವಧರ್ಮ)   (ವೈಷ್ಣವಧರ್ಮ)
ಕೋರಿಯರಮಂಚಿನಾಯಕ   (೧೦೧ ಬೆಡಗು, ೩ ಕಟ್ಟೆಮನೆ, ೭೭
ಮೀಸಲು ನಾಯಕ   ಹಟ್ಟಿಗಳು, ೩೦ ಸಾವಿರ ಕುಲ.)
ಬೋಸೆನಾಯಕ ಚಿಂತಗುಟ್ಲುನಲ್ಲಿ ಮಂದಭೂಪಾಲ
ಗಟ್ಟಿಮುತ್ತಿನಾಯಕ ಹುಟ್ಟಿದವರು ಅಂಭೋಜರಾಜ
ಗಾದರಿಪಾಲ ನಾಯಕ   ಕಾಂಭೋಜರಾಜ
ದಡ್ಡಿ ಸೂರನಾಯಕ   ತುಂಭೋಜ ರಾಜ
ದಡ್ಡಿ ಕಾಮನಾಯಕ   ದಾನ ಸಾಲಮ್ಮ
ಜಗಲೂರು ಪಾಪನಾಯಕ   ಶುಕ್ಲ ಮಲ್ಲಿನಾಯಕ
ಯರಗಾಟನಾಯಕ (ಗಟ್ಟ)   ಕಂಪಳದೇವರು
ಪೆದ್ದಳ್ಳಿ ನಾಯಕ   ರಾಜಲು ದೇವರು
ಓಬನಾಯಕ   ಓಬಳ ದೇವರು

. ಕಾಮಗೇತಿ ಸೂರ್ಯಲಿಂಗೇಶ್ವರ ಸ್ವಾಮಿಯ ದೇವಾಲಯದಲ್ಲಿ ೧೧ ಅಜ್ಜನವರ ಪಾತ್ರ

ಕಗ್ಗಲ್ಲಾರು

ಮಲ್ಲೂರರು

ಯರಬೊಮ್ಮನವರು

ಬುಡ್ಡಬೋರನವರು

ಮಾಸೇಲು – ಗಾವನಬ್ಬವರು

ಗಜಿಗಿಡ್ಲು – ಬಿದ್ದನವರು

ಮಲ್ಲಮುತ್ತೆ (ಗೌಡ್ರಪಾಲಯ್ಯ ಕಾತ್ರಿಕಟ್ಟೆ)

ಪೆಯಿಲುಮುತ್ತೆ (ಕೆ. ಲಕ್ಷ್ಮಣಸ್ವಾಮಿ ತಿಮ್ಮಲಾಪುರ)

ನಲಟಬ್ಬನೊರು (ಪೂಜಾರಿ ನಿಜಲಿಂಗಪ್ಪ, ಕಾಮಗೇತನಹಳ್ಳಿ, ಸೂರಲಿಂಗಪ್ಪ ಪಟೇಲ್ – ಕಾಮಗೇತನಹಳ್ಳಿ).

. ಕಾಮಗೇತಲಾರು ಬೆಡಗಿನ ಅಣ್ಣ – ತಮ್ಮಂದಿರು ಮತ್ತು ನೆಂಟರು

ಮಂದಲಾರು ಪಂಗಡದ ಚಂದ್ರವಂಶದ ಎಲ್ಲ ಬೆಡಗಿನವರು ಕಾಮಗೇತಿಗಳಿಗೆ ಅಣ್ಣ – ತಮ್ಮಂದಿರಾಗಬೇಕು. ಇವರಿಗೆ ಮಲ್ಲನಾಯಕ ಗೋತ್ರದವರು (ಸೂರ್ಯವಂಶ) ನೆಂಟರಾಗಬೇಕು. ಇವರಲ್ಲಿ ಹೆಣ್ಣು ಕೊಡುವ ಮತ್ತು ತರುವ ಪ್ರಕ್ರಿಯೆ ನಡೆಯುತ್ತದೆ. ಇಂದಿಗೂ ಈ ಸಾಮಾಜಿಕ ಕುಟುಂಬ ಹಾಗೂ ವೈವಾಹಿಕ ವ್ಯವಸ್ಥೆ ಮುಂದುವರೆದಿದೆ.

.೯. ಮಂದಲಾರು ಇಬ್ಭಾಗ : ತಿರುಗು ಮಂದೆ

‘ಮಂದಲಾರು’ ಪಂಗಡದಲ್ಲಿ ಜನಸಂಖ್ಯೆ ಅತೀ ಹೆಚ್ಚಾಯಿತು. ಜನಸಂಖ್ಯೆಗೆ ತಕ್ಕಂತೆ ಬೆಡಗುಗಳು (ಹೆಚ್ಚಾದವು) ಹುಟ್ಟಿಕೊಂಡವು. ಮಂದ ಸಂತತಿ ತೀವ್ರವಾಗಿ ಹೆಚ್ಚಾದಂತೆ ನೆಂಟರ ಸಮಸ್ಯೆ ಉಂಟಾಯಿತು. ಮ್ಯಾಸನಾಯಕರ ಕಟ್ಟು – ಪಾಡುಗಳನ್ನು ಚಾಚುತಪ್ಪದೇ ಪಾಲಿಸಿಕೊಂಡು ಬಂದಿರುವ ಮಂದಲಾರು ತಮಗೆ ನೆಂಟರಾಗಿದ್ದ ಮಲ್ಲಿನಾಯಕರಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆಯಾಗಿ ಇವರೇ ಪ್ರತ್ಯೇಕ ಮಂದೆಯನ್ನು ಮಾಡಿಕೊಂಡರು ಅದಕ್ಕೆ ‘ತಿರುಗು ಮಂದೆ’ ಎಂದು ಹೆಸರು. ಅವರಿಗೆ ತಿರುಗುಮಂದೆಯರೆಂದು ಕರೆಯುತ್ತಾರೆ. ಮಳೆಲಾರು, ಪಾಮುಡ್ಲಾರು, ಬುಟ್ಟಗಲು, ಪುವುಲಾರು ಬೆಡಗುಗಳಿಗೆ ಏಳುಮನೆ ಬೀಗರೆಂದು ನೆಂಟಸ್ತನ ಬೆಳೆಯುತ್ತದೆ. ಅಂದಿನಿಂದ ಹೆಣ್ಣನ್ನು ತರುವ ಮತ್ತು ಕೊಡುವ ಸಂಬಂಧ ವೃದ್ಧಿಯಾಯಿತು. ಕಾಮಗೇತಲಾರು ಬೆಡಗಿನಲ್ಲಿ ಮೈನೆರತ ಹೆಣ್ಣು ಮಗಳನ್ನು ೧೨ ದಿನಗಳ ನಂತರ ಮನೆಯ ಒಳಗೆ ಕರೆದುಕೊಳ್ಳುವ ರೂಢಿಯಿದೆ.

.೧೦. ಕಾಮಗೇತಿಯವರ ರಾಜಕೀಯ ಪ್ರವೇಶ

‘ಕಾಮಗೇತಿ’ ಎಂದ ಕೂಡಲೇ ತಟ್ಟನೆ ಹೊಳೆಯುವುದು ಚಿತ್ರದುರ್ಗದ ಪಾಳೆಯಗಾರರು ; ಚಿತ್ರದುರ್ಗದ ಕೋಟೆ, ಮದಕರಿನಾಯಕ – ಒನಕೆ ಓಬವ್ವ ಇತ್ಯಾದಿ. ಚಿತ್ರದುರ್ಗ ಪಾಳೆಯಪಟ್ಟನ್ನು ಕಾಮಗೇತಿ ಅರಸರ (ಮೂಲ) ಓಬಳ್ಳನಾಯಕರಿಂದ ರಾಜಾವೀರ ಚಿಕ್ಕಮದಕರಿನಾಯಕರವರೆಗೆ ಸುಮಾರು ೧೫ಜನ ಅರಸರು, ೨೬೫ ವರ್ಷಗಳ ಕಾಲ ರಾಜ್ಯಾಭಾರ ಮಾಡಿರುವುದು ಹೆಮ್ಮೆಯ ಸಂಗತಿ. ಚಿತ್ರದುರ್ಗ ನಾಯಕ ಅರಸರು ಕಾಮಗೇತಿ ಗೋತ್ರದವರು. ‘ಶ್ರೀಮನ್ಮಹಾನಾಯಕಾಚಾರ್ಯ, ನಾಯಕಶಿರೋಮಣಿ, ಕಸ್ತೂರಿ ಕುಲತಿಲಕ, ಕಾಮಗೇತಿ, ಹಗಲು ಕಗ್ಗೋಲಿಯಮಾನ್ಯ, ಗಾಧರಿಮಲೆಯ ಹೆಬ್ಬುಲಿ, ಹಿಡಿಯುವ ಮಾನ್ಯರಗಂಡ, ಆಡಿತಪ್ಪುಲೋಭಿನಾಯಕರ ಮಿಂಡ, ಚಂದ್ರಗಾವಿಯ ಛಲದಂಕ, ಧೂಳ್‌ಕೋಟೆವಜೀರ, ಗಂಡುಗೊಡಲಿಯ ಸರ್ಜರಾದ, ರಾಜಾಧಿರಾಜ ರಾಜಾವೀರ ಚಿಕ್ಕಮದಕರಿ ನಾಯಕರು ಎಂಬ ಬಿರುದಾವಳಿಗಳಿಂದ ಇವರನ್ನು ಗೌರವಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ.[3]

ನಾಯಕ ಬುಡಕಟ್ಟಿನಲ್ಲಿ ಪರಾಕ್ರಮ ಶಾಲಿಗಳಾದ ಕಾಮಗೇತಿಯರು ರಾಜ್ಯವಾಳಿದ್ದು ತಿಳಿದ ವಿಷಯವೇ ಸರಿ. ಇವರು ಆಂಧ್ರ ಮತ್ತು ಕರ್ನಾಟಕದಲ್ಲಿ ಇಂದಿಗೂ ತಮ್ಮ ರಾಜಕೀಯ, ಸಾಂಸ್ಕೃತಿಕ ನೆಲೆಗಳನ್ನು ಹೊಂದಿರುತ್ತಾರೆ. ಕಾಮಗೇತಿ ಅರಸರಲ್ಲಿ ‘ಮದಕರಿ’ ಹೆಸರು ಬರುತ್ತದೆ. ಇದು ವ್ಯಕ್ತಿ, ಸ್ಥಳ, ಬಿರುದು ಎಂಬುದರ ಬಗ್ಗೆ ಖಚಿತತೆ ಇಲ್ಲ. ಶಾಸನಗಳಲ್ಲಿ ಮೆಧೆಕೇರಿ (ದಾವಣಗೇರಿ ಜಿಲ್ಲೆ) ಎಂದು ಇದೆ. ಅನಂತಪುರ ಜಿಲ್ಲೆಯ ಕಲೆಕ್ಟರ್ ಆಗಿದ್ದ ರಾಬರ್ಟ್ ಸಿವೆಲ್‌ರವರ ವಾರ್ಸ್ ಆಫ್ ರಾಜಾಸ್ ಎಂಬ ಕೃತಿಯಲ್ಲಿ ಕರ್ನೂಲು ಜಿಲ್ಲೆ, ಪತ್ತಿಕೊಂಡ ತಾಲ್ಲೂಕು ‘ಮದ್ದಿಕೆರ’ ಊರು ನೆಲಸಿದುದರ ಬಗ್ಗೆ ಉಲ್ಲೇಖವಿದೆ, ಪತ್ತಿಕೊಂಡ ತಾಲೂಕನ್ನು ಹಿಂದೆ ಪಂಚಪಾಳೆಮು ಆಡಳಿತಕ್ಕೆ ಒಳಪಟ್ಟಿದ್ದಿತು; ಚನ್ನಪಲ್ಲೆ, ವ್ಯಾಪಲಿ, ಕಪ್ಪತ್ರಳ್ಳ (ಕಪಟ್ರಾಳ), ಮದ್ದಿಕಿ(ಕೆ)ರ ಮತ್ತು ದೇವಕೋಂಡ ಇವುಗಳು ಕ್ರಮವಾಗಿ ಈ ಪಾಳೆಯ ಪಟ್ಟುಗಳ ರಾಜಧಾನಿಗಳಾಗಿದ್ದವು.[4] ಹಾಗಾಗಿ ಮಡ್ಡಿಕೆರ ಒಂದು ಸ್ಥಳವಾಗಿತ್ತಲ್ಲದೆ, ಕಾಮಗೇತಿಗಳ ಮೂಲ ನೆಲೆಯಾಗಿತ್ತು.

 

[1] ಅದೇ ಪು.೨೬

[2] ಚನ್ನೇಶಪ್ಪನ ಗವಿಗಳ ಹತ್ತಿರ ಕ್ಷೇತ್ರಕಾರ್ಯಮಾಡಲು ಹೋದಾಗ ಸಹಕರಿಸಿದವರು.

*ಕೆಂಗಪಾಪಯ್ಯ, ೩೪, ಎನುಮುಲಾರು, ಹೊಸಹಟ್ಟಿ, ಮೊಳಕಾಲ್ಮೂರು ತಾ.

*ಮ್ಯಾಕಲು ಪಾಪಯ್ಯ, ೪೦ ಹೊಸಹಟ್ಟಿ, ಮೊಳಕಾಲ್ಮೂರು ತಾ.

*ಮೇಗಳಮನೆ ಬಸಣ್ಣ, ೪೦, ಕಾಮಗೇತಲಾರು, ಕೆ.ಬಿ.ಹಟ್ಟಿ, ಪೂಜಾರಹಳ್ಳಿ, ಕೂಡ್ಲಿಗಿ-ತಾ||

*ಪೂಜಾರಿ (ಗಿಡ್ಡ) ಬಸಣ್ಣ, ೪೫ ಕಾಮಗೇತಲಾರು, ಕೆ.ಬಿ.ಹಟ್ಟಿ, ಪೂಜಾರಹಳ್ಳಿ, ಕೂಡ್ಲಿಗಿ-ತಾ||

[3] ಬಿ.ಎಸ್.ಶ್ರೀನಿವಾಸನಾಯಕ, ಕಾಮಗೇತಿ ಅರಸರು ಪು.೧೨

[4] ಲಕ್ಷ್ಮಣ್ ತೆಲಗಾವಿ, ಕಾಮಗೇತಿ ಅರಸರು ಕೆಲವು ವಿಚಾರಗಳು, ಪು.೧೨, ಚಿತ್ರದುರ್ಗ