‘ಕಾಮಗೇತಿ’ ಬೆಡಗಿನ ಕೆಲವು ಜನರು ರಾಜಕೀಯ ರಂಗದಲ್ಲಿ ಸಾಧನೆ ಮಾಡಿರುವುದು ಗಮನಾರ್ಹ. ಒಬ್ಬ ವ್ಯಕ್ತಿ ತನ್ನ ಶಕ್ತ್ಯಾನುಸಾರ ವಿವಿಧ ಬಗೆಯಲ್ಲಿ ಇನ್ನೊಬ್ಬರನ್ನು ಅಡಿಯಾಳು ಮಾಡಿಕೊಂಡು, ಗುಲಾಮನನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುವುದು ಮತ್ತು ಸೈನ್ಯ ಕಟ್ಟಿಕೊಂಡು ಭೂಮಿ, ಸಂಪತ್ತು, ದನ, ಇತರ ಕಾರಣಗಳಿಗಾಗಿ ಯುದ್ಧ, ಹೋರಾಟ ಮಾಡುವುದು. ಕೊನೆಗೆ ಒಪ್ಪಂದ ಮಾಡಿಕೊಳ್ಳುವುದು ಸಾಮಾನ್ಯ. ರಾಜ, ಮಂತ್ರಿ, ದಂಡನಾಯಕ, ಸೈನಿಕ, ತಳವಾರ ಇತರ ಹುದ್ದೆಗಳಲ್ಲಿದ್ದ ಕಾಮಗೇತಿಗಳ ಚರಿತ್ರೆ ಅತೀ ಮಹತ್ವದ್ದಾಗಿದೆ.

ಕರ್ನಾಟಕದಲ್ಲಿ ಕಾಮಗೇತಿ ನಾಯಕರ ರಾಜಕೀಯ ಜೀವನ ಆರಂಭವಾಗುವುದೇ ಹತ್ತನೇ ಶತಮಾನದ ನಂತರ. ಕುಮ್ಮಟದುರ್ಗದ ಮುಮ್ಮಡಿ ಸಿಂಗೆನಾಯಕ, ಕಂಪಿಲರಾಯ ಮತ್ತು ಕುಮಾರರಾಮನ ಆಳ್ವಿಕೆಯ ಸಂದರ್ಭದಲ್ಲಿ ಕಾಮಗೇತಿಗಳ ಜವಾಬ್ದಾರಿಗಳು ಪ್ರಾರಂಭಗೊಳ್ಳುತ್ತವೆ. ಹೀಗೆ ವಿಜಯನಗರ ಪೂರ್ವದಲ್ಲಿದ್ದ ಇಂಥ ಸಣ್ಣ – ಪುಟ್ಟ ನಾಯಕ ಮನೆತನಗಳ ಚರಿತ್ರೆ ಸಾಧನೆ ಪರಿಗಣನಾರ್ಹ. ಚದುರಿಹೋದ ನಾಯಕ ಪಾಳೆಯಪಟ್ಟುಗಳಿಗೆ ವೇದಿಕೆ ಸಿದ್ಧಪಡಿಸುವ ಕಾರ್ಯನಡೆಯಿತು. ವಾರಂಗಲ್ಲಿನ ಕಾಕತೀಯ ಗಣಪತಿದೇವ ನಾಯುಕರ ಒಕ್ಕೂಟವನ್ನು ಮಾರ್ಪಡಿಸಿದನು. ಪದ್ಮನಾಯಕ ಸೇರಿದಂತೆ ೭೨ ಗೋತ್ರ, ೧೨ ಮನೆಗಳಿಗೆ ಪ್ರೋತ್ಸಾಹಕೊಟ್ಟನು. ಅದೇ ರೀತಿ ಪ್ರತಾಪರುದ್ರ ೭೭ ನಾಯಕರನ್ನು ಕರೆಯಿಸಿ ತನ್ನ ಸಾಮ್ರಾಜ್ಯವನ್ನು ಅವರಿಗೆ ವಿಭಾಗಿಸಿಕೊಟ್ಟು ಆಡಳಿತ ಸುಧಾರಣೆಗೆ ಶ್ರಮಿಸಿದನು.

[1] ಪ್ರತಾಪರುದ್ರ ಆಳ್ವಿಕೆ ನಡೆಸಿದ್ದು ಈ ೭೭ ಜನನಾಯಕರ ಹೆಸರಿನ ಮೂಲಕ. ಕಾಕತೀಯ ಅರಸರು ಸ್ಥಾಪಿಸಿದ ಈ ನಾಯಂಕಾರ ವ್ಯವಸ್ಥೆಯನ್ನು ವಿಜಯನಗರದವರು ಅಳವಡಿಸಿಕೊಂಡಿದ್ದರು.[2]

ಸಮಗ್ರ ಕರ್ನಾಟಕ ಚರಿತ್ರೆ ಸಂಪುಟದಲ್ಲಿ ಚಿತ್ರದುರ್ಗದ ಪಾಳೆಯಗಾರರ ಬಗ್ಗೆ ಹೀಗೆ ತಿಳಿಸಿರುತ್ತಾರೆ: ಚಿತ್ರದುರ್ಗದ ನಾಯಕರು ವಿಜಯನಗರದ ಸಾಮಂತ ಒಕ್ಕೂಟ ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಒಂದು ಭಾಗವಾಗಿದ್ದರು. ಇವರು ಸ್ವತಂತ್ರವಾದ ವಿದೇಶಾಂಗ ನೀತಿಯಾಗಲಿ, ತಮ್ಮ ಹೆಸರಿನಲ್ಲಿ ನಾಣ್ಯಗಳನ್ನು ಚಲಾವಣೆಗೆ ತರಲಿಲ್ಲ. ತಿಮ್ಮಣ್ಣನಾಯಕ, ಓಬಣ್ಣನಾಯಕ ಮತ್ತು ಕಸ್ತೂರಿ ರಂಗಪ್ಪನಾಯಕ ಈ ಮೂರು ಜನ ನಾಯಕರು ೧೫೬೫ಕ್ಕೆ ಮೊದಲು ವಿಜಯನಗರದ ಸಾಮಂತರಾಗಿದ್ದರು. ಅಮರನಾಯಕನಾದ (ಮತ್ತಿ) ತಿಮ್ಮಣ್ಣ ನಾಯಕ ಚಿತ್ರದುರ್ಗ ನಾಯಕ ಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದನು. ಕೃಷ್ಣದೇವರಾಯನಿಂದ ಹೊಳಲ್ಕೆರೆಯನ್ನು ಉಂಬಳಿಯಾಗಿ ಪಡೆದ ನಂತರ ಹಿರಿಯೂರು ಮತ್ತು ಚಿತ್ರದುರ್ಗ ಪ್ರದೇಶಗಳನ್ನು ಅರಸರ ಆದೇಶದಂತೆ ತನ್ನ ವ್ಯಾಪ್ತಿಗೆ ಸೇರಿಸಿಕೊಂಡನು. ಚಿತ್ರದುರ್ಗದಲ್ಲಿ ಕೋಟೆಯನ್ನು ಇವನು ನಿರ್ಮಿಸಿದನು. ವಿಜಯನಗರದವರೊಂದಿಗೆ ಇವರು ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗೆ ಕ್ರಮೇಣ ತಿಮ್ಮಣ್ಣನಾಯಕ ವಿಜಯನಗರದ ಅರಸರಿಗೆ ಅವಿಧೇಯನಾಗಿ ನಡೆದುಕೊಂಡ ಕಾರಣ ಚಕ್ರವರ್ತಿ ಬಂಧಿಸಿದನು. ಬಹುಶಃ ರಾಜ್ಯವಿಸ್ತಾರ ಯೋಜನೆಯಿಂದ ಈ ಸ್ಥಿತಿ ಬಂದಿರಬೇಕು.

ಆನೆಗೊಂದಿ ಚಿನ್ಮೋಲಾಲಪರ್ವತದ ನಂತರ ಹೊಳಲ್ಕೆರೆ ನಾಯಕತನ ಕೊಟ್ಟಿದ್ದರು. ೧೧೫೬೮ರಲ್ಲಿ ಮತ್ತಿತಿಮ್ಮಣ್ಣ ನಾಯಕ ವಿಜಯನಗರದ ಪರ ಆಳ್ವಿಕೆ ನಡೆಸುತ್ತಿದ್ದನು. ಚಿತ್ರದುರ್ಗದ ನಾಯಕರು ಆರಂಭದಲ್ಲಿ ಚಿಕ್ಕಪುಟ್ಟ ರಾಜಕೀಯ ಸ್ಥಾನಮಾನಗಳನ್ನು ಹೊಂದಿದ್ದರು. ಈ ಬಗ್ಗೆ ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು, ಹಿರಿಯೂರು, ದಾವಣಗೆರೆ, ಚಿತ್ರದುರ್ಗ, ಹೊಳಲ್ಕೆರೆ ಶಾಸನಗಳು ಬೆಳಕು ಚೆಲ್ಲುತ್ತವೆ.

.೧. ಚಿತ್ರದುರ್ಗದ ಕಾಮಗೇತಿ ಅರಸರ ವಿಚಾರಗಳು

ಈವರೆಗೆ ಚಿತ್ರದುರ್ಗದ ಅರಸರ ಮೂಲಪುರುಷ ಚಿತ್ರನಾಯಕ ಎಂದು ತಿಳಿಯಲಾಗಿತ್ತು. ಇವರ ಮನೆ ದೇವರು ಚಿತ್ರದೇವರೆಂದು, ಆದುದರಿಂದ ಈಗಿರಿ ದುರ್ಗಕ್ಕೆ ಚಿತ್ರಕಲ್ಲುದುರ್ಗ (ಚಿತ್ರದುರ್ಗ) ಎಂಬ ಹೆಸರು ಬಂದಿತೆಂತಲೂ ಹೇಳುವುದು ಕೇವಲ ಕಾಲ್ಪನಿಕವಾದ ಕಟ್ಟುಕಥೆ ಎಂದು ಲಕ್ಷ್ಮಣ್ ತೆಲಗಾವಿ ಅವರು ಅಭಿಪ್ರಾಯಸಿದ್ದಾರೆ.

ಚಿತ್ರದುರ್ಗದ ಪಾಳೆಯಗಾರರಲ್ಲಿ ಕಾಮಗೇತಿ ತಿಮ್ಮಣ್ಣನಾಯಕನೇ ಮೊದಲ ಅರಸ. ಹನುಮನಾಯಕ ಮತ್ತು ವೋಬಣ್ಣನಾಯಕ ಅಣ್ಣ – ತಮ್ಮಂದಿರು ಮೂಲ ಪುರುಷರು. ತಿಮ್ಮಣ್ಣನಾಯಕ ಸತ್ತಮೇಲೆ ಮದಕರಿನಾಯಕ ಆಳುತ್ತಾನೆ. ‘ಮದಕೆರಿ’ ಆತನ ಹುಟ್ಟೂರಿನ ಹೆಸರು. ಈಗಿನ ಚಳ್ಳಕೆರೆ ತಾಲೂಕಿನ ಗೋಸಿಕೆರೆಯ ಆಸುಪಾಸಿನಲ್ಲಿ ಈ ಗ್ರಾಮ ಹಿಂದೆ ಇದ್ದಿರಬೇಕೆಂಬ ಶಂಕೆಯನ್ನು ಮೇಲಿನ ಲೇಖಕರು ವ್ಯಕ್ತಪಡಿಸಿದ್ದಾರೆ. ಶಾಸನಗಳಲ್ಲಿ ಮದಕರಿನಾಯಕ ಎಂದಿದೆ. ಮದಕರಿ ಎಂದು ಹೆಸರಿಟ್ಟುಕೊಳ್ಳುವ ರೂಢಿ ಇಂದಿಗೂ ಇದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಪತ್ತಿಕೊಂಡ ತಾಲೂಕಿನ ದಕ್ಷಿಣದಲ್ಲಿ ‘ಮದ್ದಿಕೆರ’ ಎಂಬ ಗ್ರಾಮವಿದೆ. ಗುಂತಕಲ್ಲಿನಿಂದ ವಿಜಯವಾಡಕ್ಕೆ ಹೋಗುವ ರೈಲುಮಾರ್ಗದ ನಿಲ್ದಾಣವಿದೆ. ಗುಂತಕಲ್ಲಿನಿಂದ ೮ ಕಿ.ಮೀ. ದೂರದಲ್ಲಿದೆ.

ಕಾಮಗೇತಿಗಳ ಲಾಂಛನವಾದ ಹನುಮದ್ಗರುಡದ ಮುದ್ರೆಗಳನ್ನು ಹಾಕುತ್ತಿದ್ದರು. ಚಿತ್ರದುರ್ಗ ಪರಿಸರಕ್ಕೆ ಚಿಂಚನಕಲ್ಲು, ಬೆಮ್ಮತ್ತಕಲ್ಲು ಎಂಬ ಹೆಸರುಗಳಿದ್ದವು. ಈ ವಂಶದ ಅರಸರು ಕೆರೆ – ಕಟ್ಟೆ, ದೇವಾಲಯ, ಕೋಟೆ ಕೊತ್ತಲುಗಳನ್ನು ನಿರ್ಮಿಸಿದ್ದು ಗಮನಾರ್ಹ. ಕಾಮಗೇತಿ ಅರಸರಿಗೆ ಕಾಮಗೇತಲ, ಕಾಮಗೇತಿ ಶ್ರೀ ಮನ್ಮಹಾನಾಯಕಚಾರ್ಯ, ಕಾಮಗೇತಿ ಕಸ್ತೂರಿ ಎಂದು (ಮದಕರಿ ಅರಸರ) ಕರೆಯಲಾಗಿದೆ.

ಯರಗುಂಟೆ ಎಂಬ ಪಾಳೆಯಪಟ್ಟು ಅನಂತಪುರ ಜಿಲ್ಲೆ, ಕಣೇಕಲ್ ತಾಲೂಕಿನಲ್ಲಿದೆ. ಇಂದು ಈ ವಂಶದಲ್ಲಿ ಕೆಲವರು ಮಾತ್ರ ಸಿಗುತ್ತಾರೆ. ಈ ವಂಶದ ವೈ.ಎನ್. ತಿಮ್ಮರಾಜು ತಂದೆ ನಾರಾಯಣಸ್ವಾಮಿ ಎಂಬುವರು ವಲಸೆ ಬಂದು ನಾಯಕನಹಟ್ಟಿಯಲ್ಲಿ ನೆಲೆಸಿದ್ದಾರೆ. ಸಿಟಿಜನ್ ಹೆಸರಿನ ಟೈಲರ್ ವೃತ್ತಿಯಿಂದ ಜೀವನ ನಡೆಸುತ್ತಾರೆ.[3] ೪೨ ವರ್ಷ ವಯಸ್ಸಿನ ಇವರು ಪಾಳೆಯಗಾರ ವಂಶಸ್ಥರಾದರೂ ಗಿರಿಜನರಾದ ಮ್ಯಾಸಬೇಡರಲ್ಲಿ ಮದುವೆಯಾಗಿ ಅಗಲಿ ಹೋದ ಹಳೆ ಕಾಲದ ಸಂಬಂಧವನ್ನು ಪುನರ್‌ಸಂಬಂಧ ವೃದ್ಧಿಗೊಳಿಸಿಕೊಂಡಿರುವುದು ವಿಶೇಷ. ಯರಗುಂಟೆ ಪಾಳೆಯಗಾರರು ಕಾಮಗೇತಿ ವಂಶದವರು. ಇವರದು ಜಮ್ಮಿಗೋತ್ರ. ಇವರ ವಂಶಪರಂಪರೆ ರಕ್ತ ಸಂಬಂಧದಲ್ಲಿ ಅಧಿಕಾರ ಹಂಚಿಕೆಯಾಗಿತ್ತು. ವೈ. ತಿಮ್ಮರಾಜರಾಣಿ ಜಾನಕಮ್ಮನವರಿಗೆ ೪ ಜನ ಮಕ್ಕಳು. ಕೋಮಸ್ವಾಮಿನಾಯಕ, ಪೆದ್ದಪ್ಪನಾಯಕ, ರಾಮಸ್ವಾಮಿ ನಾಯಕ ಮತ್ತು ತಿಮ್ಮರಾಜ ನಾಯಕ. ಇವರಲ್ಲಿ ಮೊದಲ ೩ ಜನರು ದಿವಂಗತರಾಗಿದ್ದಾರೆ. ತಿಮ್ಮರಾಜನ ಹೆಂಡತಿ ಪಿ. ಚಾಮುಂಡೇಶ್ವರಿ ಮ್ಯಾಸಬೇಡರ ಹೆಣ್ಣುಮಗಳು. ಈ ಪಾಳೆಯಗಾರರು ನ್ಯೂತಿಮಂಡಲ, ನಂದ್ಯಾಲ ಮೊದಲಾದ ಕಡೆ ಸಂಬಂಧ ಬೆಳೆಸಿದ್ದು ಮತ್ತು ಪಾಳೆಯಗಾರರಲ್ಲಿ ಮಾತ್ರ ಮದುವೇ ಆಗುತ್ತಿದ್ದರು. ಇವರ ಮನೆ ದೇವರು ಪೆದ್ದಮ್ಮ ಆಗಿದ್ದು, ನಾಯಕನಹಟ್ಟಿ ದೊರೆಗಳ ಹಟ್ಟಿಯಲ್ಲಿ ನೆಲಸಿದ್ದಾರೆ. ಮ್ಯಾಸಬೇಡರ ಕಾಮಗೇತಿಗಳಂತೆ ಇವರು ಕಾಮಗೇತನಹಳ್ಳಿ ಸೂರಪ್ಪದೇವರಿಗೆ ಅಥವಾ ಇನ್ನಾವ ದೇವರಿಗೂ ನಡೆದುಕೊಳ್ಳುವುದಿಲ್ಲ. ಈ ಪಾಳೆಯಗಾರರೇ ಹೇಳುವಂತೆ ಊರುನಾಯಕರೇ ಬೇರೆ, ಮ್ಯಾಸನಾಯಕರೇ ಬೇರೆ ಮತ್ತು ಪಾಳೆಯಗಾರರೇ ಬೇರೆ. ಈತನ ಪ್ರಕಾರ ನಾಯಕನಹಟ್ಟಿ, ಕಟ್ಟೆಮನೆಗೆ ೫ ಪೆಟ್ಟಿಗೆ ದೇವರುಗಳಿದ್ದು, ಗೊನೂರು, ನಾಯಕನಹಟ್ಟಿ, ಹಿರೇಹಳ್ಳಿ, ಕುಂದಿರ್ಪಿ, ನನ್ನಿವಾಳ ಎಂದು ತಿಳಿಸುತ್ತಾರೆ. ಇವರು ಚಿತ್ರದುರ್ಗದ ಮುರುಘಾ ಸ್ವಾಮಿಗೆ ಮಾತ್ರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ತಮ್ಮ ಕುಲದೇವರೇ ಆದ ವಾಲ್ಮೀಕಿ ಗುರುಪೀಠದ ಪುಣ್ಯಾನಂದಪುರಿ ಸ್ವಾಮಿಗಳು ಬಂದರೂ ಕಾಲಿಗೆ ನಮಸ್ಕರಿಸುವುದಿಲ್ಲ. ಏಕೆಂದರೆ ಇವರು ಪಾಳೆಯಗಾರರಾದ್ದರಿಂದ ಜನಸಾಮಾನ್ಯರಂತೆ ಬೆರೆಯುವುದಿಲ. ಇವರಿಗೆ ರಾಜಗುರುಗಳು ಬಿಟ್ಟರೆ (ಮುರುಘಸ್ವಾಮಿ) ಇನ್ನೊಬ್ಬರನ್ನು ಒಪ್ಪಿಕೊಳ್ಳುವುದು ದುಸ್ಸಾಧ್ಯ.

ಕಾಮಗೇತಿಗಳ ರಾಜಕೀಯ ಹಿನ್ನೆಲೆ ಪ್ರಾಚೀನವಾದುದು. ಇತಿಹಾಸಕಾರ ವೀರನಾಯಕರು ಅಭಿಪ್ರಾಯಪಡುವಂತೆ ‘ನಾಯಕ, ಕಿರಾತ, ಬೇಡ, ವಾಲ್ಮೀಕಿವಂಶದ ಹಿನ್ನೆಲೆ – ವಾಲ್ಮೀಕಿಯು ಕಿರಾತರ ಯಜಮಾನನಾಗಿದ್ದನು. ಇವನು ಹಾನಿ ವೃದ್ಧಿಗಳಿಗೆಲ್ಲ ಕಾರಣವಾಗಿ, ಕಾಮಕೇತು, ಲಕ್ಷ, ಮೀನಮಲ್ಲರೇ ಮೊದಲಾದ ಏಳುಜನ ಮಕ್ಕಳ ನಾಯಕತ್ವದಲ್ಲಿ ಏಳು ಪಡೆಗಳನ್ನು ರಚಿಸಿ ದರೋಡೆ ನಡೆಸುತ್ತಿದ್ದನು.[4] ಇಲ್ಲಿ ಕಾಮಕೇತು ವಾಲ್ಮೀಕಿಯ ಮಕ್ಕಳಲ್ಲಿ ಒಬ್ಬನೆಂದು ತಿಳಿಯುವುದು. ‘ಕಾಮಕೇತು’ ಕ್ರಮೇಣ ಕಾಮಗೇತಿ ಆಗಿದೆ.

ಚಿತ್ರದುರ್ಗದ ಕಾಮಗೇತಿ ದೊರೆಗಳ ಚರಿತ್ರೆಯನ್ನು ಜನಪದೀಯವಾಗಿ ವಿಶ್ಲೇಷಿಸಲಾಗಿದೆ. ಪಂಡಿತ ರೇವಣ್ಣಶಾಸ್ತ್ರಿಗಳು ತಮ್ಮ ‘ವಾಲ್ಮೀಕರ ಪುರಾಣ’ವು ಕೃತಿಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಹಾಗೆಯೆ ಎಂ.ಎಸ್. ಪುಟ್ಟಣ್ಣನವರು ಚಿತ್ರದುರ್ಗದ ಪಾಳೆಯಗಾರರು ಕೃತಿಯಲ್ಲಿ ಈ ಪ್ರಸ್ತಾಪವಿದೆ. ಇವರು ಕಾಮಗೇತಿಗಳ ಹಿನ್ನೆಲೆ ಕುರಿತು ದಿಲ್ಲಿಯಿಂದ ನಾಡತಳವಾರರು ಬಂದದ್ದು (ಶಕ ೧೪೭೮ ನಳಸಂ) ಎಂದು ತಿಳಿಸಿದ್ದಾರೆ. ಉತ್ತರ ದೇಶದಲ್ಲಿ ಜಡಕಲ್ಲು ದುರ್ಗದಿಂದ ದಿಳ್ಳೀನಾಡ ತಳವಾರರಾದ ವಾಲ್ಮೀಕಿ ಗೋತ್ರದವರೆಂದು ಹೇಳಲ್ಪಡುವ ಕಾಮಗೇತಿ ವಂಶದ ಸಬ್ಬಗಡಿ ಓಬನಾಯಕ, ಜಡವಿನಾಯಕ, ಬುಳ್ಳನಾಯಕ ಈ ಮೂರು ಜನ ಅಣ್ಣತಮ್ಮಂದಿರು ಉತ್ತರ ದೇಶದ ಅವಾಂತರದಿಂದ ತಮ್ಮ ಮನೆದೇವರು ಅಹೋಬಲನರಸಿಂಹಮೂರ್ತಿಯ ಪೆಟ್ಟಿಗೆ ತುರು, ಕುರಿ, ಕೊಲ್ಲಾರಿ, ಮುಂತಾದ ಕಂಪಳವನ್ನು ತೆಗೆದುಕೊಂಡು ದಕ್ಷಿಣ ದೇಶಕ್ಕೆ ಬಂದರು. ದಾರಿಯಲ್ಲಿ ವಿಜಯನಗರದಲ್ಲಿ, ಇಳಿದು ಹಂಪೆ ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಂಡು ಬರುವಾಗ, ಆನೆಗೊಂದಿ ಸ್ಥಳದವರಾದ ವಿರೂಪಾಕ್ಷೇಶ್ವರನ ಗುಡಿಯಲ್ಲಿ ಮಂತ್ರಪುಷ್ಪದ ಕೆಲಸವನ್ನು ಮಾಡುತ್ತಿದ್ದ ಕರಿಜೋಯಿಸ, ವಿರೂಪಾಕ್ಷ ಜೋಯಿಸ ಇಬ್ಬರು ಹುಡುಗರು ಈ ನಾಡತಳವಾರರ ಬೆನ್ನುಹತ್ತಿ ಬಂದರು. ಮೇಲೆ ಕಂಡ ಮೂರು ಜನ ನಾಯಕರೂ ಬಿಳಿಚೋಡು ಸ್ಥಳದ ಪಂಚಾಂಗದ ಜೋಯಿಸರು ನಷ್ಟಸಂತಾನರಾಗಿದ್ದರಿಂದ ಗ್ರಾಮದಲ್ಲಿದ್ದ ಗೌಡ, ಸೇನಭೋಗ, ನಾಯಕವಾಡಿ ಮುಂತಾದವರಿಗೆ ಹೇಳಿ ಈ ಕರಿಜೋಯಿಸಿ ವಿರೂಪಾಕ್ಷ ಜೋಯಿಸರಿಗೆ ಭೋಗಪಟ್ಟೆ ಬರಸಿಕೊಟ್ಟು ಅವರನ್ನು ಸ್ಥಳಕ್ಕೆ ಜೋಯಿಸರನ್ನಾಗಿ ನೇಮಿಸಿದರು. ತರುವಾಯ ಮೇಲೆ ಕಂಡ ನಾಯಕರು ‘ನೀರುತಡಿ’ ಎಂಬ ಗ್ರಾಮದ ಬಳಿಯಲ್ಲಿ ರೊಪ್ಪಹಾಕಿಕೊಂಡಿದ್ದರು. ಇವರ ಮನೆದೇವರು ಸ್ವಪ್ನದಲ್ಲಿ ಉಪಚಾರಿಸಿ – ನನ್ನ ಹೊತ್ತುಕೊಂಡು ಕಂಡ ಕಂಡೆಗೆ ಹೋಗಬೇಡ, ನಾನು ಈ ಗ್ರಾಮದಲ್ಲಿ ನೆಲೆಸುತ್ತೇನೆ. ಎಂದು ಅಪ್ಪಣೆ ಕೊಡಿಸಿತಂತೆ. ಆಗ ಈ ಗ್ರಾಮದಲ್ಲಿ ಗುಡಿಕಟ್ಟಿಸಿ ದೇವರನ್ನಿಟ್ಟು ತಾವು ಎಡಬಲದ ಗ್ರಾಮಗಳಲ್ಲಿ ಕಾದುಕೊಂಡಿದ್ದರು. ಜಡಕಲ್ಲು ನಾಯಕನ ಮಗ ಹಿರೀ ಹನುಮನಾಯಕನು ಸಾಗಲೆ ಗ್ರಾಮದಲ್ಲಿ ನಿಂತನು. ಸಬ್ಬಗಡಿ ಓಬನಾಯಕನ ಮಗ ತಿಮ್ಮನಾಯಕನು ಮತ್ತಿಗ್ರಾಮದಲ್ಲಿ ನಿಂತನು. ಬುಳ್ಳನಾಯಕನ ಮಕ್ಕಳು ಚಿಕ್ಕ ಹನುಮಪ್ಪನಾಯಕ, ಓಬಂಣನಾಯಕ ಬಿಳಿಚೋಡಿನಲ್ಲಿಯೇ ನಿಂತರು.[5]

ಚಿತ್ರದುರ್ಗದ ಕಾಮಗೇತಿ ದೊರೆಗಳ ಹಿನ್ನೆಲೆ ಈ ರೀತಿ ಇದೆ. ಮಹಮ್ಮದ್ ತೊಘಲಕ್‌ನ ಸಂತತಿಯವರು ದೆಹಲಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಪಟ್ಟದಾನೆಯು ಮದವೇರಿ ಗಜಶಾಲೆಯಿಂದ ತಪ್ಪಿಸಿಕೊಂಡು ಘಿಂಕರಿಸುತ್ತ ಓಡುತ್ತಿತ್ತು. ಮಿಂಚಿನ ವೇಗದಲ್ಲಿ ಹಾರಿ ಗಜವನ್ನು ಹಿಡಿದು ಅದರ ಮದವನ್ನು ಮುರಿದು ಹಿಡಿತಕ್ಕೆ ತಂದ ಧೀರನು ಚಿತ್ರದುರ್ಗದ ಕಾಮ್ಗೇತಿ ಪಾಳೆಯಗಾರರ ಪೂರ್ವಜನು. ದೆಹಲಿಯ ಬಾದಷಹನು ಆತನ ಶೌರ್ಯಕ್ಕೆ ಮೆಚ್ಚಿ ಮದಕರಿನಾಯಕ ಎಂಬ ಬಿರುದನ್ನು ಖಿಲ್ಲತ್ತುಗಳನ್ನು ಇತ್ತು ಸನ್ಮಾನಿಸಿದನು. ಆನಂತರ ಚಿತ್ರದುರ್ಗವನ್ನಾಳಿದ ಅನೇಕ ಪಾಳೆಯಗಾರರು ಆ ಬಿರುದನ್ನೇ ತಮ್ಮ ಹೆಸರನ್ನಾಗಿ ಇಟ್ಟುಕೊಂಡಿದ್ದರು. ಕ್ರಿ.ಶ. ೧೫೬೮ರಲ್ಲಿ ಕಾಮ್ಗೇತಿ ವಂಶದ ಹಿರಿಯನಾದ ಬುಳ್ಳನಾಯಕ ಇಂದು ದುರ್ಗದ ಪಾಳೆಯಗಾರರಾಗಿರುವವರ ವಂಶದ ಹಿರಿತಲೆಯಾದ ಸಬ್ಬಗಡಿ ಓಬನಾಯಕ ಇಬ್ಬರೂ ತಮ್ಮ ಹಿರಿಯಣ್ಣನಾದ ಜಡೆಕಲ್ಲನಾಯಕನೊಂದಿಗೆ ತುರುಕುರಿ ಕೊಲ್ಲಾರಿ, ಕಂಪಳದೇವರಲ್ಲೊಂದಾದ ಚಿತ್ರದೇವರು, ಮತ್ತು ನರಸಿಂಹದೇವರ ಪೆಟ್ಟಿಗೆಯೊಂದಿಗೆ ತಮ್ಮ ಮೂಲ ಸ್ಥಳವಾದ ಜಡೆಕಲ್ಲನ್ನು ಬಿಟ್ಟು ನಾಡತಳವಾರರು ದೇಸಿಗರಂತೆ ಊರೂರು ಅಲೆಯುತ್ತಾ ಆಗಿನ ಕರ್ನಾಟಕ ಸಾಮ್ರಾಜ್ಯವೆನಿಸಿದ ವಿಜಯನಗರ (ಹಂಪೆ)ಕ್ಕೆ ಬಂದು ಅಲ್ಲಿನ ದೊರೆಗಳ ಆಶ್ರಯದಲ್ಲಿ ಕೆಲವು ಕಾಲ ತಂಗಿದ್ದು ತದನಂತರ ಅವರ ಅಪ್ಪಣೆಯಂ ಪಡೆದು ದಕ್ಷಿಣ ಪ್ರದೇಶವನ್ನು ಕುರಿತು ಬಂದು ಕಡೆಗೆ ನೀರುತಡಿ ಗ್ರಾಮವನ್ನು ಸೇರಿ ಅಲ್ಲಿ ತಮ್ಮ ದೇವರ ಅಪ್ಪಣೆಯಂತೆ ಅಹೋಬಲ ನರಸಿಂಹಸ್ವಾಮಿಗೂ ಮತ್ತು ಚಿತ್ರದೇವರಿಗೂ ಗುಡಿಯನ್ನು ಕಟ್ಟಿ ಮೂರು ಜನ ಅಣ್ಣ – ತಮ್ಮಂದಿರು ಕೆಲವು ಕಾಲ ಅಲ್ಲಿಯೇ ನೆಲಸಿದ್ದು ತದನಂತರ ಬುಳ್ಳನಾಯಕನ ಮಕ್ಕಳು ನೀರುತಡಿಯನ್ನು ಬಿಟ್ಟುಬಿಳಿಚೋಡಿಗೆ ಬಂದು ವಾಸವಾದರು.[6] ಹೀಗೆ ಶಾಸ್ತ್ರಿಗಳು ಚಿತ್ರದುರ್ಗದ ಕಾಮಗೇತಿ ಪಾಳೆಯಗಾರರಗೂ ಅವಿನಭಾವ ಸಂಬಂಧವಿದ್ದ ಬಗ್ಗೆ ವಿವರಗಳಿವೆ. ಡಾ.ಬಿ. ರಾಜಶೇಖರಪ್ಪ ಅವರು ‘ಸಾಳುವ ವಂಶದವರು ಮರು ಪ್ರಯತ್ನ’ ಎಂಬ ಲೇಖನದಲ್ಲಿ ಸಾಳುವ ಮತ್ತು ಕಾಮಗೇತಿ ಮನೆತನದವರ ನಡುವೆ ಶೀತಲ – ಸಂಘರ್ಷ ಇದ್ದುದು ಮತ್ತು ಅದರಲ್ಲಿ ಕಡೆಗೆ ಕಾಮಗೇತಿ ವಂಶದವರ ಕೈಮೇಲಾದ ಬಗ್ಗೆ ತಿಳಿಸಲಾಗಿದೆ.

ಸಾಳುವ ನರಸಿಂಗರಾಯ ವಿಜಯನಗರ ಸಾಮ್ರಾಜ್ಯದ ಪ್ರಾಯಶಃ ಸಾಕಷ್ಟು ದೊಡ್ಡದಾದ ಒಂದು ಪ್ರದೇಶಕ್ಕೆ ಅಧಿಪತಿಯಾಗಿದ್ದ. ಅದೇ ಕಾಲದಲ್ಲಿ ವಾಲ್ಮೀಕಿ ಕುಲದ ಕಾಮಗೇತಿ ಎಂಬ ಬೆಡಗಿಗೆ ಸೇರಿದ ತಿಮ್ಮಣ್ಣನಾಯಕನು ಚಿತ್ರದುರ್ಗ ಪ್ರಾಂತ್ಯವನ್ನು ಆಳುತ್ತಿದ್ದನು[7] ಎಂದು ಇದೇ ಲೇಖನದಲ್ಲಿ ಡಾ.ಬಿ.ರಾಜಶೇಖರಪ್ಪ ಇದಕ್ಕೆ ವ್ಯತಿರಿಕ್ತವಾಗಿ ತಿಳಿಸುತ್ತಾ ‘ಕಾಮಗೇತಿ ಕಾಮರಾಜನು ವಿಜಯನಗರದಲ್ಲಿಲ್ಲ. ಓಬಣ್ಣನಾಯಕನಿಗೆ ದುರ್ಗದ ನಾಯಕತನವನ್ನು ನೀಡಲಾಯಿತು. ಈ ಕಾಮಗೇತಿ ರಾಮರಾಯನು ಸ್ವರ್ಗಸ್ಥನಾದ ಮೇಲೆ ಓಬಣ್ಣನಾಯಕನಿಗೆ ಪಟ್ಟವಾಯಿತು.[8] ಅರವೀಡು ವಂಶದ ಅಳಿಯ ರಾಮರಾಯನಿಗೆ ಕಾಮಗೇತಿ ರಾಮಯ್ಯ ಎನ್ನುತ್ತಿದ್ದರೆಂದು ತಿಳಿಸುತ್ತಾರೆ. ಮತ್ತಿತಿಮ್ಮಣ್ಣನಾಯಕ ಕಲಬುರ್ಗಿಯನ್ನು ವಶಪಡಿಸಿಕೊಂಡನಲ್ಲದೆ, ವಿಜಯನಗರದ ಚಕ್ರವರ್ತಿಯ ಪ್ರೀತಿಗೂ ಪಾತ್ರನಾದನು.[9]

.೨ ಚಿತ್ರದುರ್ಗದ ನಿರ್ಮಾಣ

ಈಗಿರುವ ಚಿತ್ರದುರ್ಗದ ಹಿಂದೆ ಚಿಮ್ಮತ್ತಕಲ್ಲು, ಬೆಮ್ಮತ್ತನಕಲ್ಲು, ಬೆನ್ಮೂಲಾದ್ರಿಗಿರಿ, ಸಿದ್ದರಬೆಟ್ಟ, ಚಿತ್ತರುಮಲೆದುರ್ಗ, ಪೆರುಮಳೆಪುರ, ಚಂದ್ರವಳ್ಳಿ ಎಂದೆಲ್ಲ ಕರೆಯಲಾಗಿದೆ. ನಾಯಕ ಸಂಸ್ಕೃತಿಯ ಬುಡಕಟ್ಟಿನ ದೈವ ಹಿನ್ನೆಲೆಯು ಈ ಹೆಸರಿಗೆ ನಾಂದಿ ಹಾಡಿದೆ. ‘ಚಿತ್ರದೇವರು ಕಾಮಗೇತಿ ಅರಸರ ಮೂಲ ದೇವರು ಮತ್ತು ಚಿತ್ರನಾಯಕ ಮೂಲಪುರುಷ. ಚಿತ್ರದುರ್ಗದ ಹೆಸರು ಈ ಹಿನ್ನೆಲೆಯಿಂದ ಬಂದಿದೆ ಎಂದು ತಿಳಿಸಲಾಗಿದೆ.[10] (ಸಿ) ಚಿತ್ತರು ಮಲೆದುರ್ಗಕ್ಕೆ ಕತ್ತಲುಗವುದಾವೆ… ಎನ್ನುವ ಜನಪದ ಹಾಡು ಚಿತ್ರದುರ್ಗದ ಬಗ್ಗೆ ವಿವರಣೆ ನೀಡುತ್ತದೆ.

.೩. ಪಾಳೆಯಗಾರರು

ಚಿತ್ರದುರ್ಗದ ಪಾಳೆಯಗಾರರಲ್ಲಿ ಕಾಮಗೇತಿ ತಿಮ್ಮಣ್ಣನಾಯಕ ಈ ವಂಶದ ಮೊದಲ ಅರಸ; ಹನುಮಿನಾಯಕ ಈತನ ಮತ್ತು ಓಬಣನಾಯಕನ ತಂದೆ; ತನ್ನನ್ನು ಸಗಲೆಯ ಹನುಮಿನಾಯಕ ಎಂದು ಕರೆದುಕೊಂಡ ಹನುಮಿನಾಯಕನು ಕಾಮಗೇತಿ ಅರಸರ ಮೂಲಪುರುಷ. ನಂತರ ಮದಕೇರಿನಾಯಕ ಈ ಪ್ರಾಂತ್ಯವನ್ನು ಆಳಿದ್ದು ಚರಿತ್ರೆ. ‘ಮದಕೇರಿ’ ಆತನ ಹುಟ್ಟೂರಿನ ಹೆಸರಿರಬೇಕು.[11] ಹೀಗೆ ಹಲವು ಅರಸರು ಈ ಹೆಸರನ್ನು ಇಟ್ಟುಕೊಂಡಿದ್ದರು. ಇವರದು ಲಾಂಛನ ಹನುಮದ್ಗರುಡಧ್ವಜ. ಕಾಮಗೇತಿ ಅರಸರಿಗೆ ಮೆದಕೆರಿನಾಯಕ ಎಂಬ ಅಭಿದಾನ ಹೇಗೆ ಬಂತೊ ಹಾಗೆಯೇ ಅವರ ಬಿರುದುಗಳು ಕೂಡ ಬಂದಿದ್ದು ಕಾಮಗೇತಿ ಮತ್ತಿತಿಮ್ಮಣ್ಣನ ವಂಶದ ನಾಲ್ಕನೆಯ ಇಮ್ಮಡಿ ಮದಕರಿನಾಯಕನು ತನ್ನ ಕುಲ ಜನಾಂಗದ ಪರವಾಗಿ ಶ್ರೀ.ಶಾ.ಶ. ವರ್ಷ ೧೫೯೬ನೇ ಆನಂದನಾಮ ಸಂವತ್ಸರದ ಪುಷ್ಯಶುದ್ಧ ಉಚ್ಚಂಗಮ್ಮನ ಉತ್ಸವದಲ್ಲಿ ಶ್ರೀಮನ್ಮಹಾನಾಯಕಾಚಾರ್ಯ, ನಾಯಕ ಶಿರೋಮಣಿ, ಕಾಮ್ಗೇತಿ ಕಸ್ತೂರಿ ವೀರ ಮತ್ತಿ ಕುಲತಿಲಕ, ಹಗಲುಕಗ್ಗೊಲೆಮಾನ್ಯ, ಗಾದ್ರಿಮಲೆಹೆಬ್ಬುಲಿ, ಗಂಡುಗೊಡಲಿ ಸರ್ವ ಸಂಸ್ಥಾನ, ಚಿತ್ರದುರ್ಗ ರಣವೀರ ಇಮ್ಮಡಿ ‘ಮದಕರಿ ನಾಯಕನು’ ಸಿಡಿಲೇಟಿಗೂ ಕೋಟೆ ಪಟುಭಟರ ಬಲಕ್ಕೂ ಬಗ್ಗದ ದೊರೆಯೆಂದು ಕಿತಾಪ್ ಹೊರಡಿಸಿದನು.[12] ಇಮ್ಮಡಿ ಮದಕರಿನಾಯಕ ತನ್ನ ಮಗಳ ಆಸೆಯಂತೆ ಉಚ್ಚಂಗಿ ದುರ್ಗದ ಉಚ್ಚಂಗಮ್ಮನ ಮೂರ್ತಿಯನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಬಂದು ಪ್ರತಿಷ್ಠಾಪಿಸಿದನು. ಇವನಾನಂತರ ಕಸ್ತೂರಿರಂಗಪ್ಪನಾಯಕ ಪಟ್ಟಕ್ಕೆ ಬರುತ್ತಾನೆ. ದಳವಾಯಿ ಮುದ್ದಣ್ಣನ ಕೆಟ್ಟಬುದ್ಧಿಯಿಂದ ಪ್ರಜೆಗಳ ಅಸಮ್ಮತಿ, ಪ್ರಧಾನಿ ಪರಶುರಾಮಪ್ಪನಾಯಕರು ಹರಪನಹಳ್ಳಿ ಬಸವಂತನಾಯಕರ ವೈರತ್ವವನ್ನು ಅರಿತು ಒಳಸಂಚಿನಿಂದ ಕಸ್ತೂರಿ ರಂಗಪ್ಪ ನಾಯಕರನ್ನು ದಳವಾಯಿ ಬರಮಣ್ಣ ಸೆರೆಯಲ್ಲಿಟ್ಟನು. ಅಧಿಕಾರಿವರ್ಗದವರೆ ರಾಜನಾಗಬೇಕೆಂದು ಹವಣಿಸಿ ಬಿಳಿಚೋಡಿನಲ್ಲಿ ಕಾಮಗೇತಿ ಬುಳ್ಳನಾಯಕನ ವಂಶದ ಬರಮಣ್ಣನು ಕುರಿಕಾಯುತ್ತಿರುವಾಗ ಮಲಗಿದ್ದ ವೇಳೆಯಲ್ಲಿ ಏಳಡೆ ಸರ್ಪ ಆತನ ಮುಖದ ಮೇಲೆ ಎಡೆಬಿಚ್ಚಿದಾಗ ಚಿತ್ರದುರ್ಗದ ಮುರುಘ ರಾಜೇಂದ್ರಸ್ವಾಮಿಗಳವರು ಕಂಡು ಆತನಿಗೆ ದುರ್ಗದ ದೊರೆಯಾಗುವಿ, ನನ್ನ ಮಠ ಕಟ್ಟಿಸಿ ಕೊಡಬೇಕೆಂದು ಆಶೀರ್ವಾದವನ್ನಿತ್ತರು.[13]

ಭರಮಣ್ಣ ನಾಯಕ

ಹೀಗೆ ಸ್ವಾಮಿಗಳಿಂದ ಆಶೀರ್ವಾದ ಪಡೆದ ಚಿತ್ರದುರ್ಗದ ಆರನೇ ದೊರೆಯೇ ಬಿಳಿಚೋಡು ಬುಳ್ಳನಾಯಕನ ವಂಶದ ಬರಮಣ್ಣನಾಯಕ. ದುರ್ಗವನ್ನಾಳಿದ ದೊರೆನಾಯಕರಲ್ಲಿ ಈತ ಪ್ರಸಿದ್ಧ ವ್ಯಕ್ತಿ. ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಕಟ್ಟಿಸುವವನು ಇವನೇ. ‘ದುರ್ಗದ ಪಟ್ಟಣವನ್ನು ಅಭಿವೃದ್ಧಿಗೊಳಿಸಿ ಗ್ರಾಮೀಣ ಭಾಗಗಳಲ್ಲಿ ಬಾವಿ, ಕೆರೆ, ಕಟ್ಟೆ, ಕುಂಟೆ, ಗುಡಿ – ಗೋಪುರಗಳನ್ನು ನಿರ್ಮಿಸಿದನು. ಗ್ರಾಮೀಣ ಜನರ ಜೀವನ ಬಗ್ಗೆ ಗಮನಹರಿಸಿದನು. ಇಡೀ ನಾಯಕ ಜನಾಂಗಕ್ಕೆ ನಾಯಕನೆಂದು ಸಾರಿದನು. ಜಾತಿ – ಭೇದಗಳ ಬಗ್ಗೆ ಕುಲಾಚಾರಗಳ ಬಗ್ಗೆ ಹೇಳುತ್ತಾ ಗುಡಿಕಟ್ಟೆ – ಕಟ್ಟೆಮನೆಗಳನ್ನು ಅಭಿವೃದ್ಧಿಪಡಿಸಿದ. ಕ್ರಿ.ಶ. ೧೬೮೯ರಲ್ಲಿ ಮುರಿಗಿಸ್ವಾಮಿಗಳಿಗೆ ಹೊಸಮಠವನ್ನು ಬರಮಣ್ಣನಾಯಕ ಕಟ್ಟಿಸಿದನು.

ಕಾಮಗೇತಿಗಳ ಉಚ್ಛ್ರಾ ಸ್ಥಿತಿ

ಚಿತ್ರದುರ್ಗದ ಅರಸರು ವೈಷ್ಣವ ಧರ್ಮದ ಅನುಯಾಯಿಗಳು. ರಂಗನಾಥ, ಅಹೋಬಲ ನರಸಿಂಹ ಅಲ್ಲದೆ, ಶಕ್ತಿದೇವತೆಗಳಾದ ರಾಜಾ ಉತ್ಸವಾಂಬೆ, ಬನಶಂಕರಿ ಮೊದಲಾದ ದೇವತೆಗಳನ್ನು ಪೂಜಿಸುತ್ತಿದ್ದರು.

ಕಾಮಗೇತಿ ಅರಸರು ಕ್ರಿ.ಶ. ೧೫೬೮ ರಿಂದ ೧೭೭೯ರ ವರೆಗೆ ಸುಮಾರು ೨೧೧ ವರ್ಷಗಳ ಕಾಲ ಆಳ್ವಿಕೆ ನಡೆಸಿರುವುದು ಗಮನಾರ್ಹ. ಈ ವಂಶದ ೧೧ ಜನ ಪಾಳೆಯಗಾರರು ಈ ಅವಧಿಯಲ್ಲಿ ಜನಮೆಚ್ಚುವಂತೆ ನಾಡಿಗಾಗಿ ಹೋರಾಡಿ ಆಳ್ವಿಕೆ ನಡೆಸಿದ್ದೂ ಶ್ಲಾಘನೀಯ. ಈ ಪಾಳೆಯಗಾರರ ಕಾಲಕ್ಕೆ ದಕ್ಷಿಣ ಭಾರತದಲ್ಲಿ ಚಿತ್ರದುರ್ಗ ಪ್ರಬಲವಾದ ಮತ್ತು ಅಭೇದ್ಯ ದುರ್ಗವಾಗಿದ್ದು ಸ್ಪಷ್ಟ.

ಅನೇಕ ಅರಸರನ್ನು ಸೋಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರನ್ನು ಹೈದರಾಲಿ ೧೭೭೯ರಲ್ಲಿ ಸೋಲಿಸಿದಾಗ ಚಿತ್ರದುರ್ಗವು ಕೊನೆಯ ಮದಕರಿನಾಯಕನ ಕಾಲದಲ್ಲಿ ಅವಸಾನಗೊಂಡಿತು.[14] ನಾಯಕನು ಹೈದರಾಲಿ ಹಾಗೂ ತನ್ನ ಆತ್ಮೀಯರಿಂದ ಮೋಸ ಹೋದನು.

ಇದೇ ಕಾಲಕ್ಕೆ ಸೇರಿದ ಮೈಸೂರು ಪ್ರದೇಶದ ಕಾರುಗನಹಳ್ಳಿ ಪಾಳೆಯಗಾರ ಮಾರನಾಯಕನು ಕಾಮಗೇತ್ರಿ ಗೋತ್ರದವನು. ಇವನು ಮೈಸೂರು ಒಡೆಯರ ಕಾಲದಲ್ಲಿ ಪರಾಕ್ರಮಿಶಾಲಿ ಅರಸನಾಗಿದ್ದನು. ಕ್ಷುಲ್ಲಕ ಕಾರಣದಿಂದ ದುರಂತಸಾವಿಗೆ ಶರಣಾಗುತ್ತಾನೆ. ಇವನ ಬಗ್ಗೆ ವಿಫುಲವಾದ ಜನಪದ ಸಾಹಿತ್ಯ ಲಭ್ಯವಿದೆ. ಚಿತ್ರದುರ್ಗದ ಕಾಮ್ಗೇತಿ ದೊರೆಗಳು ಮಳೆಲಾರು (ಬೆಡಗು) ಗೋತ್ರಕ್ಕೆ ಸೇರಿದ ಗುಡೇಕೋಟೆ – ಜರಿಮಲೆ ಪಾಳೆಯಗಾರರ ಹೆಣ್ಣುಮಕ್ಕಳನ್ನು ಮದುವೆಮಾಡಿಕೊಳ್ಳುತ್ತಾರೆ.

ಇಂದಿಗೂ ಮ್ಯಾಸಬೇಡರ ಹಟ್ಟಿ, ಗ್ರಾಮಗಳಲ್ಲಿ ಕಾಮಗೇತಿ ಗೋತ್ರದ ಪಾಳೆಯಗಾರರು ಕೋಲುಕಾರರೆಂತಲೂ ಹಾಗೂ ತಳವಾರರೆಂತಲೂ, ಕರೆದು ತಮ್ಮ ಸಂಸ್ಥಾನದ ಪ್ರತಿ ಊರುಗಳ ಸ್ಥಳ ವಿಚಾರವನ್ನೂ ಕಾಮಗೇತಿ ಅವರಿಂದ ತಿಳಿದುಕೊಳ್ಳುತ್ತಿದ್ದರು.[15]

ಮಧ್ಯ ಕರ್ನಾಟಕದಲ್ಲಿ ನೆಲಸಿರುವ ನಾಯಕರಂತೆ ಕಾಮಗೇತಿಗಳು ತಮ್ಮ ಜೀವನ ವಿಧಾನದಲ್ಲಿ ಸುಧಾರಣೆ ಕಂಡುಕೊಂಡಿದ್ದಾರೆ. ಪ್ರಾಚೀನ ಪರಂಪರೆಯನ್ನು ಕೈಬಿಡದೆ ಆಧುನಿಕತೆಗೂ ಬಲಿಯಾಗದೆ ಸಂದರ್ಭಕ್ಕೆ ತಕ್ಕಂತೆ ಜೀವನ ನಿರ್ವಹಣೆ ಮಾಡುವುದು ವಿಶೇಷ. ಕಾಮಗೇತಿಗಳು ಅಹೋಬಲ ನರಸಿಂಹದೇವರು ಮತ್ತು ಕಂಪಳ ದೇವರಲ್ಲಿ ಒಂದಾದ ಚಿತ್ರದೇವರನ್ನು ಪೂಜಿಸುತ್ತಾರೆ. ಮಹಿಪರಿಗೋತ್ರ – ಮನುಮುನಿಸೂತ್ರ ಶಾಖೆಗಳೆಂದು ತೋರಿಸಲಾದ ಚಂದ್ರವಂಶಕ್ಕೆ ಸೇರಿದವರಲ್ಲಿ ಸೂರೇದೇವರು, ದೊಡ್ಡಕಂಪಳದೇವರು ಮತ್ತು ಚಿತ್ರದೇವರುಗಳಿಗೆ ಸಂಬಂಧಿಸಿದವರು ಹಸ್ತಿನಾವತಿ, ಆನೆಗೊಂದಿ ಮತ್ತು ಚಿತ್ರದುರ್ಗದ ರಾಜವಂಶಸ್ಥರೆಂದು ಪ್ರಸ್ತಾಪಿಸಲಾಗಿದೆ.[16] ಇವರ ಚಿತ್ರದೇವರನ್ನು ದಿಳ್ಳಿ (ದಿಲ್ಲಿ)ಯಿಂದ ಬಂದಿದ್ದೂ ಎನ್ನುತ್ತಾರೆ.

ಮೇಲೆ ಹೇಳಿರುವ ಸಂಗತಿಗಳಲ್ಲಿ ಕಾಮಗೇತಿಗಳ ಮೂಲ ಸ್ಥಳೀಯರೇ ಅಥವಾ ಹೊರಗಿನವರೇ ಎಂಬುದಕ್ಕೆ ಪುಷ್ಟಿ ದೊರೆಯುವ ಆಕರಗಳು ವಿರಳ. ಆದರೂ ಒಂದು ಕಾಲಕ್ಕೆ ನೆಲೆನಿಂತು ತಮ್ಮ ಅನನ್ಯತೆಯನ್ನು ಗುರುತಿಸಿಕೊಂಡಿರುವುದು ಇವರ ಚಾರಿತ್ರಿಕ ಪ್ರಜ್ಞೆಗೆ ಸಾಕ್ಷಿ. ಕಾಮಗೇತಿಲೋರ ಚಿಕ್ಕನಾಯಕ ನಿಂತ ಸ್ಥಳ ಚಿಂಚನಕಲ್ಲು ಎಂದು ಹೇಳಲಾಗಿದೆ. ಆದ್ದರಿಂದ ಚಿತ್ರನಾಯಕನಿಂದ ಚಿತ್ರಹಳ್ಳಿ ಎಂದು ಹೆಸರು ಬಂದಿರಬಹುದೆಂಬ ಸಂಗತಿಯನ್ನು ಒಪ್ಪಲಾಗುವುದು.

ಮೌಖಿಕ ಚರಿತ್ರೆಯಲ್ಲಿ ಓಬನಾಯಕ, ಜಡವಿನಾಯಕ ಮತ್ತು ಬುಳ್ಳನಾಯಕ ಎಂಬ ೩ ಜನ ಜಡಕಲ್ಲುದುರ್ಗದಿಂದ ಬಂದು ದಾವಣಗೆರೆ ಹತ್ತಿರ ನೀರ್ಥಡಿಯಲ್ಲಿ ನೆಲೆನಿಂತು ಹಟ್ಟಿನಿರ್ಮಿಸಿದ ನಂತರ ಸ್ಯಾಗಲೆ ಗ್ರಾಮದಲ್ಲೂ ನೆಲಸಿದ್ದು ಗಮನಾರ್ಹ.

.೪. ಚಿತ್ರದುರ್ಗ ನಾಯಕರ ವಂಶಾವಳಿ (ರೈಸ್ ಆಧಾರಿತ)

(ಕೃಪೆ : ಕರ್ನಾಟಕ ಚರಿತ್ರೆ ಸಂಪುಟ – ೩ ಪು ೪೪೩)

ಕಾಮಗೇತಿ ಕಸ್ತೂರಿ ರಂಗನಾಯಕ
ತಿಮ್ಮಣ್ಣನಾಯಕ (೧೫೫೬ – ೧೫೮೩)
ಮದಕೇರಿನಾಯಕ (೧೫೬೮ – ೧೫೮೧)
ರಂಗಪ್ಪನಾಯಕ (೧೫೭೬ – ೧೬೩೩)
ಓಬಣ್ಣನಾಯಕ
ಚಿಕ್ಕಪ್ಪನಾಯಕ (೧೬೦೬)
ಮದಕರಿನಾಯಕ
(೧೬೦೯ – ೧೬೫೩)
ಭರಮಪ್ಪ ನಾಯಕ
ಭರಮಪ್ಪನಾಯಕ
(೧೬೪೦ – ೧೬೬೩)
ಚಿಕ್ಕಣ್ಣನಾಯಕ
(೧೬೭೮ – ೧೬೮೧)
ಮದಕೇರಿನಾಯಕ
(೧೭೧೨ – ೧೭೩೦)
ಚಿಕ್ಕಣನಾಯಕ
(೧೭೨೧)
ಮದಕೇರಿನಾಯಕ
(೧೬೬೦ – ೧೬೮೭)
ರಂಗಪ್ಪನಾಯಕ ರಂಗಪ್ಪನಾಯಕ
(೧೬೯೦ – ೧೭೫೫)
 
ಮದಕರಿನಾಯಕ (೧೭೫೬ – ೧೭೭೯) ಮದಕೇರಿ ನಾಯಕ  

ಇವರಂತೆ ಮೊಳಕಾಲ್ಮೂರು ಪಾಳೆಯಗಾರರು ಕಾಮಗೇತಲಾರು. ಸುಮಾರು ೨೫ಕ್ಕೂ ಹೆಚ್ಚು ಜನ ಪಾಳೆಯಗಾರರು, ನಾಯಕರು ಇಲ್ಲಿ ಕಂಡುಬರುತ್ತಾರೆ.

ಕಾಮಗೇತಿಗಳ ಮತ, ಗೋತ್ರಗಳ ತರ್ಕ

ಕಾಮಗೇತಿ ವಂಶಜರಲ್ಲಿ ಗೋತ್ರ, ಬೆಡಗು, ಬಳಿಗಳೆಲ್ಲ ಒಂದೇ. ಆದರೆ ಇವರನ್ನು ಒಟ್ಟಾರೆ ವಾಲ್ಮೀಕಿ ಅಥವಾ ನಾಯಕ ಎಂದು ಕರೆದುಕೊಂಡಿರುವುದು ಸ್ಪಷ್ಟ. ಇಲ್ಲಿ ರಾಜ್ಯಾಳ್ವಿಕೆ ನಡೆಸಿದ ಕಾಮಗೇತಿ ಅರಸರು ತಮಗೆ ಇಷ್ಟಬಂದಂತೆ ವೈಷ್ಣವ, ಶೈವಧರ್ಮಗಳಿಗೆ ಪ್ರೋತ್ಸಾಹ ಕೊಟ್ಟಿರುವುದು, ಸ್ವತಃ ಅರಸರೇ ಮತಾಂತರಗೊಂಡಿರುವುದರ ಬಗ್ಗೆ ಉದಾಹರಣೆಗಳಿವೆ. ಮದ್ಯ, ಮಾಂಸಹಾರವನ್ನು ತ್ಯಜಿಸಿದ್ದರು. ಚಿತ್ರದುರ್ಗದ ನಾಯಕ ಅರಸರು ಜನಿವಾರತೊ‌ಟ್ಟು ವಿಷ್ಣುವಿನ ಪರಮ ಭಕ್ತರಂತೆ ನಡೆದುಕೊಂಡಿದ್ದರು. ಅದೇ ರೀತಿ ಬೇರೆ ಅರಸರು ಮಾಡಲಿಕ್ಕೆ ಶಕ್ಯತೆ ಇದೆ. ಈ ರಾಜಪ್ರಭುತ್ವ ಹೊರತುಪಡಿಸಿದರೆ ಬುಡಕಟ್ಟು ಜನರಾದ ಮ್ಯಾಸಬೇಡರಲ್ಲಿ ಕಾಮಗೇತಿ ಅರಸರು ತಮ್ಮದೇ ಆದ ಪ್ರತ್ಯೇಕತೆ ಉಳಿಸಿಕೊಂಡಿದ್ದಾರೆ.

ಇಲ್ಲಿ ಉದಾಹರಣೆಗೆ ದಿ: ೯ – ೧೦ – ೦೫ರಂದು ಚಳ್ಳಕೆರೆ ತಾಲೂಕಿನ ನಾನಕನಹಟ್ಟಿ ಸಿಟಿಜನ್ ಟೈಲರ್ ವೈ.ಎನ್.ತಿಮ್ಮರಾಜನಾಯಕನನ್ನು ಭೇಟಿಯಾದಾಗ ಪಾಳೆಯಗಾರನೆಂದು ದರ್ಪ, ಅಹಂಕಾರ ಪಡುತ್ತಿದ್ದನು. ಆದರೂ ಅವರಿಗೆ ನಾನು ಸ್ಪಂದಿಸಿದೆನು.[17] ಈತ ಪಾಳೆಯಗಾರರ ವಂಶಕ್ಕೆ ಸೇರಿದರೂ ಆರ್ಥಿಕ ಹಿನ್ನೆಡೆ, ಸಮಾಜದ ಸ್ಥಿತಿ – ಗತಿಯಿಂದಲೋ ಏನೋ ಮ್ಯಾಸನಾಯಕರಲ್ಲಿ ವಿವಾಹವಾಗಿದ್ದಾನೆ.

ದಿನಾಂಕ ೧೫ – ೫ – ೨೦೦೫ರಂದು ಮಧ್ಯಾಹ್ನ ೧೨.೪೫ ರಿಂದ ೪.೩೦ ರವರೆಗೆ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕಾಮಗೇತನಹಳ್ಳಿ ಸೂರಲಿಂಗೇವರ ದೇವಾಲಯದ ಪೂಜಾರಿ ನಿಜಲಿಂಗಪ್ಪ (೭೦) ತಂದೆ ದಿವಂಗತ ಪೂಜಾರಿಪಾಲಯ್ಯನವರನ್ನು ಮೂರನೇ ಸಲ ಭೇಟಿ ಮಾಡಿದ ವಿವರ ಈ ಕೆಳಗಿನಂತಿದೆ : ನಿಜಲಿಂಗಪ್ಪನವರ ಪ್ರಕಾರ ಕಾಮಗೇತನಹಳ್ಳಿ ದೇವಸ್ಥಾನ ಪಕ್ಕದಲ್ಲಿ ಇವರ ಮನೆಯಿದೆ. ನಾಯಕ ಬುಡಕಟ್ಟಿನ ನಲಟಬ್ಬಲಾರು ಇವರ ಬೆಡಗು. ಈ ಬೆಡಗಿನಲ್ಲಿ ೫ ಪಂಗಡಗಳಿವೆ.

೧. ಕಗ್ಗಲರು – ಮಲ್ಲುರರು

೨. ಯರಬೊಮ್ಮನವರು, ಬುಡ್ಡಿಬೋರನವರು

೩. ಮಾಸಿಲಾರು, ಗಾಮಬ್ಬಾರು

೪. ಗಜಿಗಿಡ್ಲು, ಬಿದ್ದಿಡ್ಲು

೫. ಮಲ್ಲಮುತ್ತೆ, ಪೆಯಿಲುಮುತ್ತೆ, ನಲ್ಟಬ್ಬನವರು

ಇವರು ಕಾಮಗೇತಿ ಬೆಡಗಿನ ಸಹೋದರ ಸಂಬಂಧಿ ಬೆಡಗಿನವರೇ ಆಗಿದ್ದಾರೆ. ಕಾಮಗೇತನಹಳ್ಳಿ ಸೂರಲಿಂಗೇಶ್ವರ ದೇವರನ್ನು ಇವರು ಪೂಜಿಸುತ್ತಾರೆ. ಇದನ್ನು ಮಲ್ಲನಾಯಕದೇವರ ಒಡೆಯ, ಪೆಟ್ಟಿಗೆ ದೇವರೆಂದು ಮಾಡಿಕೊಂಡಿದ್ದಾರೆ. ಈ ಹಿಂದೆ ತಿಳಿಸಿದಂತೆ, ಇದು ಆಚಾರದ ಕಟ್ಟೆಮನೆ. ಹಿಂದೆ ಸಾವಿರ ಕುಲದವರು ಶ್ರೀಶೈಲದಿಂದ ಬರುವಾಗ ಇವರು ಬಂದರೆಂದು ಪ್ರತೀತಿ. ಇಲ್ಲಿರುವ ದೇವಾಲಯ ಪ್ರಾಚೀನವಾದುದು. ಹಿಂದೆ ಕಾಮ್ಸಿ ಹುಲ್ಲಿನ ಗುಡಿಸಲಿತ್ತು. ಈಗ ಸುಂದರವಾದ ಗುಡಿಯನ್ನು ನಿರ್ಮಿಸಿದ್ದಾರೆ. ಸದ್ಯದಲ್ಲೇ ಹೊಸ ದೇವಾಲಯವನ್ನು ವಿಶಾಲವಾದ ಸ್ಥಳದಲ್ಲಿ ನಿರ್ಮಿಸುವ ಯೋಜನೆ ಇದೆ. ಇವರು ವಾಸಿಸುವ ಮನೆ ಆಧುನಿಕವಾಗಿದ್ದ ಮಾಳಿಗೆ ಮನೆಯಾಗಿದೆ. ಈ ದೇವರಿಗೆ ನಿಜಲಿಂಗಪ್ಪನವರೇ ಪಟ್ಟಾಧ್ಯಕ್ಷರು ಹಾಗೂ ಪೂಜಾರಿಗಳು. ಈತನನ್ನು ಉಜ್ಜಿನಿಗುರುಗಳು ನೇಮಕ ಮಾಡಿರುತ್ತಾರೆ. ಈ ಪದ್ಧತಿ ಹಿಂದಿನಿಂದ ಬಂದಿದೆ. ನಾಯಕನಹಟ್ಟಿಯಲ್ಲಿ ಹಿರೇಮಠದ ಉಜ್ಜಿನಿ ಸೂತ್ರದವರು ಪಟ್ಟಾಭಿಷೇಕ ಮಾಡಿರುತ್ತಾರೆ. ಇವರಿಗೆ ಅರಮನೆ – ಗುರುಮನೆ ಉಜ್ಜಿನಿ (ಕೂಡ್ಲಿಗಿ – ತಾ ಬಳ್ಳಾರಿ ಜಿಲ್ಲೆ) ಆಗಿದೆ. ಇವರ ದೇವರೆತ್ತುಗಳು ಕಲ್ಲೇದೇವರಪುರದ ಸಮೀಪ ಬಸಪ್ಪನಹಟ್ಟಿಯಲ್ಲಿವೆ. ಹಿಂದೆ ಬಹಳಷ್ಟು ಇದ್ದವು. ಈಗ ೫೨ ಮಾತ್ರ ಉಳಿದಿವೆ. ಹುಲ್ಲು – ನೀರಿನ ಸಮಸ್ಯೆಯಿಂದ ಹಲವು ಸತ್ತು ಹೋಗಿವೆ. ದೇವರೆತ್ತುಗಳನ್ನು ಕಾಯುವವನಿಗೆ ಕಿಲಾರಿ ಎನ್ನುತ್ತಾರೆ. ಇಲ್ಲಿನ ಕಿಲಾರಿ ಬಡಜ್ಜ, ಇವರ ತಂದೆ ಮಾಸೆಲು ಸೂರಪ್ಪ. ನಂತರ ಹಾಲಿ ಕಿಲಾರಿಯಾಗಿರುವನು ತಿಪ್ಪೇಸ್ವಾಮಿ. ತುಮಕೂರ್ಲಹಳ್ಳಿ (ಮೊಳಕಾಲ್ಮೂರು – ತಾ) ಓಬಯ್ಯ ಈ ದೇವರಿಗೆ ದಾಸಲಾರು (ಯ್ಯ) ಆಗಿರುತ್ತಾರೆ ಮತ್ತು ಬುಡ್ಡುಬೋರನದಾಸರು ಬರುತ್ತಾರೆ. ಇಂದು ಹೊಸ ಕಿಲಾರಿಯನ್ನಾಗಿ ತಿಪ್ಪೇಸ್ವಾಮಿಯ ಮೊಮ್ಮಗನನ್ನೆ ಮಾಡಿದ್ದಾರೆ.

ಕಾಮಗೇತನಹಳ್ಳಿ ವಿಶಾಲ ಬಯಲಿನಲ್ಲಿರುವ ಒಂದು ಗ್ರಾಮ. ಯಾವುದೇ ಹಳ್ಳ – ಕೊಳ್ಳ, ಬೆಟ್ಟ, ಗುಡ್ಡಗಳು ಸಮೀಪದಲಿಲ್ಲವಾದ್ದರಿಂದ ಕೃಷಿ ಭೂಮಿ ಜಾಸ್ತಿಯಿದೆ. ಆಯಗಾರರಾಗಿ ದೇವರ ಕಾರ್ಯಗಳಾದ ಮಡಿಹಾಸಲು, ಪಂಜು ಹಿಡಿಯಲು ದೊಣೆಹಳ್ಳಿಯ ಮಡಿವಾಳಿ (ಅಗಸರು)ಗಳು ಬರುತ್ತಾರೆ. ಸೂರ್ಯಲಿಂಗೇಶ್ವರ ಶೈವನಾದ್ದರಿಂದ ಬೇಟೆ ಕಡಿಯುವುದಿಲ್ಲ. ಇದಕ್ಕೆ ಪ್ರಾಣಿಬಲಿ ನಿಷಿದ್ಧ. ಈ ಯಾವುದೇ ಗ್ರಾಮದ ಪರಿಸರದಲ್ಲಿ ಬಂಗಾರಕ್ಕನಗುಡ್ಡದ ಮೇಲೆ ದೋಣೆ ಇದೆ. ಇಲ್ಲಿಗೆ ದೇವರನ್ನು ಗಂಗಿಪೂಜೆಗೆ ಕರೆದೊಯ್ಯುತ್ತಾರೆ. ಈ ಸ್ಥಳಕ್ಕೆ ಚಿತ್ರದುರ್ಗ ಅರಸಲು ಜರಿಮಲೆನಾಯಕರಿಗೆ ಹೆಣ್ಣನ್ನು ಕೊಟ್ಟಿದ್ದಾರಂತೆ. ನಡೆದುಕೊಂಡು ಹೋಗುವಾಗ ಇಲ್ಲಿಗೆ ಬರುವಾಗ ರಾತ್ರಿಯಾಗುತ್ತಿದ್ದರಿಂದ ಬಂಗಾರಕ್ಕನಗುಡ್ಡಕ್ಕೆ ದೇವರನ್ನು ಕರೆದೊಯ್ಯುವುದು ಇದು ೩ನೇ ತಲೆಮಾರು ಆಗಿದೆ. ಬೆಟ್ಟದ ಮೇಲೆ ಸಮಾಧಿಗಳಿವೆ. ಬೆಟ್ಟಕ್ಕೆ ಹೋಗಿ ದೋಣಿಯಲ್ಲಿ ಗಂಗೆಪೂಜೆ ಮುಗಿಸಿ ಸಾಯಾಂಕಾಲ ಸೋಮವಾರ ಬೆಳಿಗ್ಗೆ ಗುಡಿಗೆ ಬರುತ್ತದೆ. ಸಿಡಿ – ಓಕುಳಿಗೆ ಬದಲಿಗೆ ಸೂರ್ಯಪಾಡ್ಯರಾಧನೆ ಆಗುತ್ತದೆ. ಪೂರ್ತಿ ಒಣಗಿ ಹೋದ ತಂಗಡಿಗಿಡತಂದು (ಊದಿ ಪದಿ) ದೇವರೆತ್ತುಗಳಿಗೆ ಹೊಗೆ ಹಾಕುತ್ತಾರೆ. ಈ ದೇವರಿಗೆ ಮೊದಲು ಕುಲದ ಹೆಣ್ಣು ಮಗಳು ಕಾಸು ಇಡುತ್ತಾಳೆ. ನಂತರ ಮುತ್ತೈದೆಯರು, ಇತರರು ಸೇರಿ ಕಾಸನ್ನು ಗದ್ದುಗೆಯಲ್ಲಿ ಹಾಕುತ್ತಾರೆ. ಈ ಎಲ್ಲ ಕಾರ್ಯಕ್ರಮಗಳು ದೊರೆ, ೯ಜನ ಅಜ್ಜನವರ ಸಮ್ಮುಖದಲ್ಲಿ ಆಗುತ್ತದೆ. ಇವರು ೧೦೧ ಪೂಜೆ ಮಾಡುತ್ತಾರೆ. ಈ ಮನೆತನದವರೇ ಪೂಜಾರಿಕೆಯಲ್ಲೇ ಬಂದಿದ್ದು. ಕೃಷಿ ಚಟುವಟಿಕೆಯಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದ್ದಾರೆ ಮತ್ತು ಇವರು ಕನ್ನಡ, ತೆಲುಗು ಮಾತನಾಡಬಲ್ಲವರಾಗಿದ್ದಾರೆ.

ಕಾಮಗೇತನಹಳ್ಳಿ ಸೂರಪ್ಪದೇವರಿಗೆ ನಾಯಕರ ೭೭ ಹಟ್ಟಿಗಳು ೩ ಕಟ್ಟೆಮನೆಗಳು ಹಾಗೂ ದಡ್ಲುಮಾರಮ್ಮ ದೇವರು ಧಾರ್ಮಿಕವಾಗಿ ವ್ಯಾಪ್ತಿಗೊಳಪಡುತ್ತವೆ.

ದಿನಾಂಕ ೧೨ – ೧೦ – ೨೦೦೫ರಂದು ಚಳ್ಳಕೆರೆ ಟಾನಿನ ತಿಪ್ಪೇಸ್ವಾಮಿ ಶಿಕ್ಷಕರನ್ನು ಭೇಟಿ ಮಾಡಿದಾಗ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. (ಜಗಳೂರು ಪಾಪನಾಯಕ, ಗಾದರಿಪಾಲನಾಯಕ ನಾಟಕಗಳ ಕತೃ). ಕಾಮಗೇತಲಾರು ಮೊದಲು ಕಾಟಪ್ಪನ ಹಟ್ಟಿಯಲ್ಲಿದ್ದರು. ದೊಡ್ಡಮದಕರಿನಾಯಕನ ತಂದೆ ಕಾಟಪ್ಪನಾಯಕ ಇಲ್ಲಿದ್ದಾಗ ಹೈದರ್ – ಟಿಪ್ಪು ದಾಳಿ ಮಾಡುತ್ತಾರೆ. ದೊಡ್ಡೇರಿ ಸರಹದ್ದಿನಲ್ಲಿದ್ದ ಇವರು ದೊಡ್ಡ ಮದಕರಿಯನ್ನು ತಮ್ಮ ಪರವಾಗಿ ವಾಲಿಸಿಕೊಂಡರು. ಕೇರಳದ ಕೊಚ್ಚಿನ್‌ನಲ್ಲಿ ಕಿರೀಟರಾಜನನ್ನು ಸೋಲಿಸಿ ಅವನ ಮಗಳನ್ನು ಮದುವೆಯಾದನು. ಇವನ ನಂತರ ಚಿತ್ರದುರ್ಗವನ್ನು ಆಳಲು ಗಂಡು ಸಂತಾನ ಇರುವುದಿಲ್ಲ. ಹಾಗಾಗಿ ಜಾನುಕಲ್ಲಿನಲ್ಲಿದ್ದ ರಾಜಾವೀರಮದಕರಿನಾಯಕನನ್ನು ಓಬವ್ವ ನಾಗತಿ ದತ್ತು ಪಡೆದು ಅಧಿಕಾರಕ್ಕೆ ತಂದಳು. ಹೈದರ್ ಜೊತೆಯಲ್ಲಿದ್ದ ದೊಡ್ಡಮದಕರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾನೆ. ಆಗ ಉಳಿದವರು ಬಂದು ಚಳ್ಳಕೆರೆ ಹಳೆ ಊರಿನಲ್ಲಿ, ಓರುಗಲ್ಲು ಎಂಬ ಪ್ರಾಚೀನ ಪಟ್ಟಣದಲ್ಲಿ ಕಾಟಪ್ಪದೇವರನ್ನು ಪ್ರತಿಷ್ಠಾಪಿಸಿದವರು ಕಾಮಗೇತಿಯರು. ಚಳ್ಳಕೆರೆಯ ಪ್ರಾಚೀನ ಗ್ರಾಮವಾದ ಕಾಟಪ್ಪನಹಟ್ಟಿಗೆ ಪ್ರಾಚೀನ ಹೆಸರು ಓರುಗಲ್ಲ ಪಟ್ಟಣ. ಕಾಮಗೇತಿಯರಲ್ಲಿ ೯ ಜನ ಹಿರಿಯರು, ಅಜ್ಜನಾರು (ಮುತ್ತಿಗಾರರು) ಇದ್ದಾರೆ. ನಲ್ಟಬ್ಬರು (ಪೂಜಾರಿಕೆ), ಮಲ್ಲೂರರು ಮತ್ತು ಕಗ್ಗಲ್ಲರು (೧ ಪೆಟ್ಟಿಗೆ), ಪರಮೇಶಿನರು, ಮಾಸೆಲಾರು, ಗೆಜ್ಜುಗಿಡ್ಲು, ಗುಡ್ಡಿಬೋರನಾಡು, ಯರಬೊಮ್ಮಡು, ಬಿದ್ದಿಡ್ಲು ಎಂದು ತಿಳಿಸಿದ್ದಾನೆ. ಇವರಲ್ಲಿ ಅನೇಕರು ದೊಡ್ಡೇರಿಯಿಂದ ಕಾಟಪ್ಪನಹಟ್ಟಿಗೆ ಬಂದು ನೆಲೆಸುತ್ತಾರೆ. ಇಂದಿಗೂ ಕಾಟಪ್ಪನನ್ನು ಗಂಗೆ ಪೂಜೆಗೆ ನಿಡಗಲ್ಲಿಗೆ ಕರೆದೊಯ್ಯುತ್ತಾರೆ. ಇದು ವಿಚಾರದ ಕಟ್ಟೆಮನೆ. ದೊಡ್ಡಮದಕರಿನಾಯಕನ ಕಾಲದಲ್ಲಿ ಕಾಟಪ್ಪನ ತಾಣ ಪವಿತ್ರಗೊಳ್ಳುತ್ತದೆ. ಇಂದು ಕಾಮಗೇತಲಾರು ಚಿತ್ರದೇವರು ಮತ್ತು ಕಾಟೇದೇವರನ್ನು ಅಣ್ಣ – ತಮ್ಮಂದಿರು ಒಂದೇ ದೇವರೆಂಬಂತೆ ಪೂಜಿಸುತ್ತಾರೆ. ಇದರ ತರುವಾಯ ನಲುಜೆರುವು ಓಬಳದೇವರನ್ನು ರುದ್ರಮ್ಮನಹಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದರು. ಇದು ಗುರುಸ್ಥಾನ ಮತ್ತು ೧೩ ಪೆಟ್ಟಿಗೆ ದೇವರುಗಳಲ್ಲಿ ಒಂದು. ಈ ಎರಡು ಗ್ರಾಮಗಳ ನಂತರ ಕಾಮಗೇತಿಗಳಲ್ಲಿ ಕೆಲವರು ಕಾಮಗೇತನಹಳ್ಳಿಗೆ ಹೋಗಿ ನೆಲೆಸಿದ್ದರು. ಆಚಾರದ ಕಟ್ಟೆಮನೆಯಾದ ಕಾಮಗೇತನಹಳ್ಳಿಗೆ ಹೋಗಿ ನೆಲೆಸಿದ್ದರು. ಆಚಾರದ ಕಟ್ಟೆಮನೆಯಾದ ಕಾಮಗೇತನಹಳ್ಳಿಯಲ್ಲಿ ಬೇಡರಲ್ಲದೆ, ಇತರರು ದಲಿತ, ಶೂದ್ರರಿಗೆ ಜಾತಿ ಕೊಡುವ ಬಗ್ಗೆ ಕೂಗು ಕೇಳಿಬರುತ್ತದೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದ ಮಾಸಿಲು ಪಾಲಯ್ಯನು ಕಾಮಗೇತಿ ಗೋತ್ರದವನು. ಕಾಮಗೇತನಹಳ್ಳಿ ಸೂರಪ್ಪನಿಗೆ ಇವರು ನಡೆದುಕೊಳ್ಳುತ್ತಾರೆ.

ಮ್ಯಾಸನಾಯಕರ ಧಾರ್ಮಿಕ ವ್ಯವಸ್ಥೆಯಲ್ಲಿ ಉದಿ – ಪದಿಗೆ ಅಗ್ರಸ್ಥಾನವಿದೆ. ‘ಉದಿ’ ಎಂದರೆ ಸಾಲಿಗ್ರಾಮ, ಲಿಂಗಗಳಿಂದ ಕೂಡಿದ ದೇವರು. ಅದು ಪೆಟ್ಟಿಗೆ ಅಥವಾ ಬಿಲ್ಲು ದೇವರರಾಗಿರುತ್ತದೆ. ‘ಪದಿ’ ಎಂದರೆ ಗೋವುಗಳು ದೇವರ ಎತ್ತುಗಳು. ಇವುಗಳನ್ನು ದೇವರಿಗೆ ಸಮಾನವಾದವು ಎಂದು ಭಾವಿಸಿ ‘ಪದಿ’ ಎನ್ನುತ್ತಾರೆ. ಬೋಡಿಪಾರ್ಲಾರು ಸಹಾ ಮಂದಲಾರು ಪಂಗಡದಲ್ಲಿ ಬರುವರು. ಒಟ್ಟಾರೆ, ಕಾಮಗೇತಲಾರು ಬೆಡಗಿಗೆ ಗುರುಸ್ಥಾನ ಕಂಪಳದೇವರ ಹಟ್ಟಿ, ಸಂಸ್ಥಾನ ಮುತ್ತಿಗಾರಹಳ್ಳಿ ಎತ್ತುಗಳು (ಶ್ರೀ ಶೈಲ ಸಿಂಹಾಸನ) ಇರುತ್ತವೆ. ಗುರುಧರ್ಮವಾಗಿ ಉಜ್ಜಿನಿ ಸಿಂಹಾಸನಕ್ಕೆ ನಡೆದುಕೊಳ್ಳುತ್ತಾರೆ.

ಇಂದು ಕಾಮಗೇತಲಾರು ಬೆಡಗಿನಲ್ಲಿ ಅನೇಕರು ನೌಕರಿಯಲ್ಲಿದ್ದಾರೆ. ಉನ್ನತ ಶಿಕ್ಷಣ ಪಡೆದಿದ್ದಾರೆ. ಹಾಗೆಯೇ ಬಡತನ, ನಿರುದ್ಯೋಗ, ಸಾಂಸ್ಕೃತಿಕ ಸಂಘರ್ಷಗಳು ಚಾಲ್ತಿಯಲ್ಲಿವೆ.

 

[1] ಇತಿಹಾಸ ದರ್ಶನ. ಸಂ.೩., ೧೯೮೮

[2] ಲಕ್ಷ್ಮಣ್ ತೆಲಗಾವಿ : ಎಪ್ಪತ್ತೇಳು ಪಾಳೆಯಗಾರರು. ಪು. ೨೨೭

[3] ೯-೧೦-೨೦೦೫ರಂದು ಸಂದರ್ಶನ : ಎಚ್.ಎ.ವಿಶ್ವನಾಥ, ಎಲ್.ಐ.ಸಿ. ನಾರಾಯಣಸ್ವಾಮಿ ಸಹಕರಿಸಿದ್ದಾರೆ ಅವರಿಗೆ ಕೃತಜ್ಞತೆಗಳು

[4] ಹರತಿಸಿರಿ, ಪು. ೧೨೯೦

[5] ಚಿತ್ರದುರ್ಗದ ಪಾಳಯಗಾರರು, ಪು. ೧೪-೧೫

[6] ವಾಲ್ಮೀಕರ ಪುರಾಣವು, ಪು. ೨೪

[7] ಕಾಮಗೇತಿ-ಅರಸರು-ಕೆಲವು ವಿಚಾರಗಳು: ಪ್ರತಿಕ್ರಿಯೆ, ಪು.೫೧

[8] ವಿಜಯನಗರ ಅಧ್ಯಯನ, ಸಂ.೭, ಪು.೪೬

[9] ಅದೇ, ಪು.೪೯

[10] ಅದೇ, ಪು.೫೦

[11] ಅದೇ, ಪು.೫೨

[12] ವಾಲ್ಮೀಕರ ಪುರಾಣವು ೨೬

[13] ಅದೇ ಪು.೨೫

[14] ರಾಜಾವೀರ ಮದಕರಿನಾಯಕನ ಮುಕ್ತಿಧಾಮ (ಸಮಾಧಿ) ಎಲ್ಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು ಸಂಶೋಧನೆ ಮೂಲಕ ಈ ಸಂಗತಿ ಬೆಳಕಿಗೆ ಬರಬೇಕು. ಶ್ರೀರಂಗಪಟ್ಟಣ ಮತ್ತು ಮದ್ದೂರು ಪಟ್ಟಣಗಳ ನಡುವೆ ಈ ಸ್ಥಳ ಇರಬೇಕೆಂದು ಊಹಿಸಲಾಗುತ್ತದೆ.

[15] ವಾಲ್ಮೀಕರ ಪುರಾಣವು ೨೪-೨೫

[16] ಕಾಮಗೇತಿ ಅರಸರು ಕೆಲವು ವಿಚಾರಗಳು : ಪ್ರತಿಕ್ರಿಯೆ ೫೧

[17] ೯-೧೦-೨೦೦೫ರಂದು ಸಂದರ್ಶನ, ನಾಯಕನಹಟ್ಟಿ