‘ಕಾಮಗೇತಿ’ ಬೆಡಗಿನ ಚರಿತ್ರೆ ಮತ್ತು ಸಂಸ್ಕೃತಿ ಅತೀ ಪ್ರಾಚೀನವಾದುದು. ಭಾರತದ ಮಟ್ಟಿಗೆ ಅವಲೋಕಿಸುವುದಾದರೆ, ಶಿಲಾಯುಗದಿಂದಲೂ ಇವರು ಬೇಟೆ, ಪಶುಪಾಲನೆಯಲ್ಲಿ ತೊಡಗಿದ್ದು ಜೀವನ ನಿರ್ವಹಣೆ ಮಾಡಿದ ಕುರುಹುಗಳಿವೆ. ನಾಗರಿಕತೆ ಮತ್ತು ಸಂಸ್ಕೃತಿ ವಿಕಾಸಗೊಂಡಂತೆ ಇವರು ಆಯಾ ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಪರಿವರ್ತನೆಗೊಂಡರು. ಇಂಥ ಪರಿವರ್ತನೆಗೊಂಡ ಕಾಲಕ್ಕೆ ಇವರು ಕ್ಷಾತ್ರತೇಜಸ್ಸಿನಿಂದ ರಾಜ್ಯಾಳ್ವಿಕೆ ನಡೆಸಿದ್ದು ಸ್ಪಷ್ಟ. ‘ಕಾಮಕೇತನ’ ಸಂಸ್ಕೃತದ ಮೂಲ ಧಾತುವಿನಿಂದ ಬಂದಿದೆ. ಹಾಗೆಂದು ಕಾಮಕೇತನವನ್ನು ಕನ್ನಡದಲ್ಲಿ ಹೀಗೆ ವಿಂಗಡಿಸಿ ಪದದ ಅರ್ಥವನ್ನು ನೋಡಬಹುದಾಗಿದೆ. ಕಾಮ ಎಂದರೆ ಬಯಕೆ, ವಿಷಯಾಭಿಲಾಷೆ, ನಾಲ್ಕು ಪುರುಷಾರ್ಥಗಳಲ್ಲಿ ಒಂದು. ಕೇತನ ಎಂದರೆ ಮನೆ, ಬಾವುಟ ಎಂಬರ್ಥಗಳಿವೆ. ಕಾಮಕೇಸರಿ ಕೇದಿಗೆಯ ಪ್ರಭೇದ. ಸಸ್ಯವು ಹೌದು, ಹಾಗಯೇ ಕಾಮಕಸ್ತೂರಿ ತುಳಸಿ ಜಾತಿಗೆ ಸೇರಿದ ಸೂವಾಸೆನೆಯ ಸಸ್ಯ. ಬುಡಕಟ್ಟು ಜನರು ತಮ್ಮ ಬೆಡಗಿಗೆ ಸಸ್ಯ, ಪ್ರಾಣಿಗಳ ಹೆಸರುಗಳನ್ನು ಇಟ್ಟುಕೊಂಡಿರುವುದು ಗಮನಾರ್ಹ. ಈಗಿನ ದೆಹಲಿ ಸುತ್ತಮುತ್ತ ಹಿಂದೆ ಇಂದ್ರಪ್ರಸ್ತ, ಹಸ್ತಿನಾವತಿ ಆಸುಪಾಸಿನಲ್ಲಿ ಈ ಕಾಮಕೇತನ ಪಂಗಡದವರು ನೆಲಸಿದ್ದರು. ಈ ಬೆಡಗಿನ ಹಿರಣ್ಯಧನು ನಿಷಾಧ ದೇಶದ ದೊರೆಯಾಗಿದ್ದನು. ಇವನ ಮಗನೇ ಲೋಕೈಕ ವೀರ ಏಕಲವ್ಯ. ಹೀಗೆ ಉಜ್ವಲ ಪರಂಪರೆಯಿರುವ ಕಾಮಗೇತಿಗಳಿಗೆ ದಕ್ಷಿಣ ಭಾರತಕ್ಕೆ ಬಂದು ರಾಜ್ಯಾಳ್ವಿಕೆ ನಡೆಸಿದ ಔಚಿತ್ಯವೇನು ಎಂಬ ಬಗ್ಗೆ ನಿಗೂಢಗಳಿವೆ. ಹೋಳಿ ಹಬ್ಬ, ಕಾಮದಹನದ ಸಂದರ್ಭದಲ್ಲಿ ಕಾಮನು ಬೇಡರವನು ಎಂಬ ನಂಬಿಕೆಯಿದೆ. ಆಂಧ್ರಪ್ರದೇಶದಲ್ಲಿ ಅಡವಿಚೆಂಚರು, ಬೋಯಾ ಇತರರಲ್ಲಿ ಕಾಮಗೇತಿ ಬೆಡಗಿನವರು ಕುರುಮಾಮ, ಕೊಂಡಮಾಮರೆಂದು ಕರೆಸಿಕೊಂಡಿದ್ದಾರೆ. ಕರ್ನಾಟಕದ ಕಾಮಗೇತಿಗಳನ್ನು ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯ ಚೌಕಟ್ಟಿನಲ್ಲಿ ನೋಡಬೇಕು. ರಾಮಾಯಣ, ಮಹಾಭಾರತದಲ್ಲಿ ಇವರ ಬಗ್ಗೆ ಉಲ್ಲೇಖಗಳಿವೆ. ‘ಕಾಮ’ ಎಂಬುವವನಿಗೆ ಧೈರ್ಯಶಾಲಿ, ಪರಾಕ್ರಮಿ ದಷ್ಟಪುಷ್ಟ ವ್ಯಕ್ತಿಗೆ ಕಾಮನೆಂದು ತೆಲುಗಿನಲ್ಲಿ ಕರೆಯುತ್ತಾರೆ. ಇವರಲ್ಲಿ ಕಾಮಣ್ಣ ಕಾಮಯ್ಯ, ಕಾಮರಾಜ, ಕಾಮನಾಯಕ ಎಂಬ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಎತ್ತರವಾದ ದೇಹ, ದಷ್ಟಪುಷ್ಟ ಮೈಕಟ್ಟು, ದಪ್ಪ ಕೈಕಾಲುಗಳು ಒಟ್ಟಾರೆ ಇತರರಿಗಿಂತ ದೃಢಕಾಯ ವ್ಯಕ್ತಿಗೆ ಕಾಮನಾಡು ಎಂದು ಕರೆಯುವರು. ಈ ಬೆಡಗಿಗೆ ಪುರಾಣ, ಮೌಖಿಕತೆಗಳು ಏನಿವೆಯೋ ತಿಳಿಯದು. ಆದರೆ ಕಾಮನ ಧ್ವಜವನ್ನು ಅಥವಾ ಸ್ಪರ್ಧೆಯಲ್ಲಿ (ಕಾರ್ಮುಕನ) ಬಿಲ್ಲನ್ನು ಗೆದ್ದುದರಿಂದ ಕಾರ್ಮುಕ ಎಂದು ಇವರಿಗೆ ಕರೆದಂತಿದೆ. ಆದರೂ ಕಾಮಕೇತನವು ಒಂದು ಸ್ಥಳದ, ಪ್ರಾಣಿಯ ಮತ್ತು ಸಸ್ಯದ ಹೆಸರಾಗಿರುವ ಸಾಧ್ಯತೆಯೂ ಇದೆ. ಜನರು ಉಚ್ಚಾರಿಸುವಾಗ ಕಾಮಗೇತನ ಹೋಗಿ ಕಾಮಗೇತನವಾಗಿದೆ. ಬೇಡ ನಾಯಕರಲ್ಲಿ ಕಾಮಗೇತಲಾರು, ಕಾಮಗೇತವಾಡು, ಕಾಮಗೇತ್ಲಾರು, ಕಾಮಗೇತಿ ಎಂದೆಲ್ಲ ಕರೆಯಲಾಗುವುದು. ಬೇಡರು ಪಶುಪಾಲನೆಯಲ್ಲು ಬೀಜದ ಹೋರಿಗಳನ್ನು ಸಾಕಿ ಪಶುಗಳ ಸಂತಾನಭಿವೃದ್ಧಿಗೊಳಿಸುತ್ತಿದ್ದವರಿಗೆ ತೆಲುಗಿನಲ್ಲಿ ಕಾಮಗೇತಲಾರು ಎಂದು ಕರೆದಿರುತ್ತಾರೆಂಬ ವಾದವಿದೆ. ಈ ಎಲ್ಲಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಕಾಮಗೇತಲಾರು ನಗರ, ಪಟ್ಟಣಗಳಲ್ಲಿ ನೆಲೆಸಿದ್ದು ಬುಡಕಟ್ಟು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ.

ಮ್ಯಾಸನಾಯಕರ ಮೂರು ಕಟ್ಟೆಮನೆಗಳೆಂದರೆ : ನನ್ನಿವಾಳ, ಗೋನೂರು ಮತ್ತು ನಾಯಕನಹಟ್ಟಿ. ಈ ಮೂರಕ್ಕೆ ೩ ಜನ ನಾಯಕರನ್ನೂ ನೇಮಿಸಿರುತ್ತಾರೆ. ನಾಯಕನಹಟ್ಟಿ ಕಟ್ಟೆಮನೆಯಲ್ಲಿ ಪೂಜಾರಿಕೆಯನ್ನು ಕಾಮಗೇತಿಯವರಿಗೆ ಕೊಟ್ಟಿರುವುದು ಮೊದಲ ಪ್ರಾಶಸ್ತ್ಯವೇ ಸರಿ. ಕಾಮಗೇತಲಾರು, ಮಂದಲಾರು ಪಂಗಡಕ್ಕೆ ಹಾಗೂ ಚಂದ್ರವಂಶಕ್ಕೆ ಕೆಲವೊಮ್ಮೆ ಕಾಮಗೇತಿ ವಂಶ ಎಂದು ಹೇಳಲಾಗಿದೆ. ಇವರಲ್ಲಿ ಅಣ್ಣ ತಮ್ಮಂದಿರು ಕುಟುಂಬಗಳು ಬೆಳೆದಂತೆ ನೆಂಟಸ್ತನ ಬೆಳೆಸುವುದು ಕಷ್ಟವಾಯಿತು. ಹಾಗಾಗಿ ಮಂದೆಯಲ್ಲಿ ಮರುಮಂದೆಯನ್ನು ಹಾಕಿ ಅಣ್ಣ – ತಮ್ಮಂದಿರಲ್ಲಿ ಕೆಲವರನ್ನು ನೆಂಟರನ್ನಾಗಿ ಮಾಡಿಕೊಂಡು ಹೆಣ್ಣು ತರುವ, ಕೊಡುವ ಹೊಸ ಸಂಪ್ರದಾಯ ಬೆಳೆಯಿತು. ಈ ಒಂದು ಸಂಪ್ರದಾಯಕ್ಕೆ ಎರಡು ಕಟ್ಟೆಮನೆಗಳನ್ನು ಕಾಮಗೇತಲಾರು ಮ್ಯಾಸನಾಯಕರಿಂದ ಪ್ರತ್ಯೇಕತೆ ಎಂದು ಗುರುತಿಸಿಕೊಂಡರೂ ಎಲ್ಲಾ ವಿಧದಿಂದಲೂ ಅವು ಹೋಲುತ್ತವೆ. ಆಚಾರದ ಕಟ್ಟೆಮನೆಯಾಗಿ ಕಾಮಗೇತನಹಳ್ಳಿ, ವಿಚಾರದ ಕಟ್ಟೆಮನೆಯಾಗಿ ಕಾಟಪ್ಪನಹಟ್ಟಿಗಳನ್ನು ನಿರ್ಮಾಣ ಮಾಡಿದರು. ನಲಗೇತಲಾರು ಚನ್ನಕೇಶವನನ್ನು ಆರಾಧಿಸುತ್ತಾರೆ. ಹಾಗೆಯೇ ರುದ್ರಮ್ಮನಹಳ್ಳಿ ನಲುಜೆರುವಯ್ಯ, ಉಡೇಗೋಳದ ತಾಳಿಕೆರೆಭಾಗದ ಚಿತ್ರದೇವರು, ರಾಯಪುರದ ಮ್ಯಾಸರಹಟ್ಟಿಯ ಪದಿನಾರು ದೇವರುಗಳನ್ನು ಕಾಮಗೇತಲಾರು ಬೆಡಗಿನವರು ಆರಾಧಿಸುವವರು.[1]

ಕಾಮಗೇತಲಾರು ಚರಿತ್ರೆ ಕೇವಲ ಬುಡಕಟ್ಟು ಸಂಸ್ಕೃತಿಗಷ್ಟೇ ಮೀಸಲಾಗಿಲ್ಲ, ರಾಜಕೀಯ ಕ್ಷೇತ್ರದಲ್ಲಿಯೂ ಇವರನ್ನು ಗುರುತಿಸಬಹುದಾಗಿದೆ. ದಕ್ಷಿಣಭಾರತದ ಅತೀಖ್ಯಾತ ಪಡೆದ ಪಾಳೆಯಗಾರರ ಪೈಕಿ ಚಿತ್ರದುರ್ಗದ ಕಾಮಗೇತನಾಯಕರು ಎರಡುವರೆ ಶತಮಾನಗಳ ಕಾಲ ರಾಜ್ಯಾಳ್ವಿಕೆ ನಡೆಸಿರುವುದು ಅವಿಸ್ಮರಣೀಯ. ಸುಮಾರು ೧೨ ರಿಂದ ೧೫ ಜನ ಅರಸರು ಆಳ್ವಿಕೆ ಮಾಡಿದ್ದಾರೆ. ಅಭೇದ್ಯವಾದ ಕೋಟೆ, ಕೊತ್ತಲು, ಬುರುಜು ಬತೇರಿಗಳಲ್ಲದೆ, ಅರಮನೆ, ದೇವಾಲಯ, ಮಹಾದ್ವಾರಗಳು, ಕೆರೆ – ಕಟ್ಟೆಗಳನ್ನು ಕಟ್ಟಿಸಿ ಇಂದಿಗೂ ತಮ್ಮ ಸಾಧನೆಯ ಕುರುಹುಗಳನ್ನು ಬಿಟ್ಟುಹೋಗಿರುವರು. ಇವರಂತೆ ಮೊಳಕಾಲ್ಮೂರು ಪಾಳೆಯಗಾರರು ಸಹಾ ಕಾಮಗೇತಿ ವಂಶಕ್ಕೆ ಸೇರಿದವರು, ಮೂರು ಶತಮಾನಗಳಿಗೂ ಹೆಚ್ಚು ಕಾಲ ಸುಮಾರು ಇಪ್ಪತ್ತುಕ್ಕೂ ಹೆಚ್ಚು ನಾಯಕ ಅರಸರು ವೈಭವದಿಂದ ಆಳ್ವಿಕೆ ನಡೆಸಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಕಾಮಗೇತಿಗಳು ಜೀವನ ಮೌಲ್ಯಗಳನ್ನು ಸುಧಾರಿಸಿಕೊಂಡಿದ್ದಾರೆ. ದಿವಂಗತ ಹೋ.ಚಿ. ಬೋರಯ್ಯ, ೧೪ ಜನವರಿ ೨೦೦೪ರಲ್ಲಿ ನಿಧನರಾದ ಟಿ.ಎನ್. ಗಂಡುಗಲಿ, ಕರಿಯಪ್ಪ ಮೇಷ್ಟ್ರು; ಚಳ್ಳಕೆರೆಯ ವೀರಭದ್ರನಾಯಕ, ಪರಶುರಾಮನಾಯಕ, ಮೊಳಕಾಲ್ಮೂರಿನ ಕೇಶವಮೂರ್ತಿ, ಬೊಮ್ಮಲಿಂಗನಹಳ್ಳಿಯ ನಂಜಪ್ಪನಾಯಕ, ಭರ್ಮಸ್ವಾಮಿ ಮೊದಲಾದವರು ತಮ್ಮ ಗತಕಾಲದ ರಾಜಕೀಯ ಸಂಗತಿಗಳನ್ನು ಮೆಲುಕುಹಾಕುತ್ತಾ ವಿಷಾದ ವ್ಯಕ್ತಪಡಿಸುತ್ತಾರೆ. ಇಂದಿಗೂ ಮೊಳಕಾಲ್ಮೂರು ತಾಲೂಕಿನ ಯರ್ಜೇನಹಳ್ಳಿಯಲ್ಲಿ ೫೦ಕ್ಕೂ ಹೆಚ್ಚು ಕಾಮಗೇತಿ ವಂಶಸ್ಥರ ಮನೆಗಳಿವೆ. ಜಗಳೂರು ತಾಲೂಕಿನ ಕಣಕುಪ್ಪೆ, ಆಸಗೋಡುಕ, ಬಿಳಿಚೋಡು, ತಿಮ್ಮಲಾಪುರ ಮೊದಲಾದ ಸ್ಥಳಗಳಲ್ಲಿ ಈ ಕಾಮಗೇತಿ ಬೆಡಗಿನವರ ಕುಟುಂಬಗಳು ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಸುಧಾರಣೆಗೊಂಡ ಉದಾಹರಣೆಗಳಿವೆ. ಹಾಗೆಯೇ ಬಡತನದಿಂದ ಕೂಲಿ, ಕಾರ್ಮಿಕರಾಗಿ ವಲಸೆ ಹೋಗಿ ಬೇರೆ ಬೇರೆ ನಗರ, ಪಟ್ಟಣಗಳಲ್ಲಿ ದುಡಿಯುವವರು ಇದ್ದಾರೆ. ಕಾಮಗೇತಿ ವಂಶದ ಮಹಿಳೆಯರು ಸಹಾ ಅಷ್ಟೇ ಧೈರ್ಯಶಾಲಿಗಳು. ಸಾಂಸ್ಕೃತಿಕವಾಗಿ ಸಮಾಜ ಮತ್ತು ಕುಟುಂಬದ ಮೇಲೆ ಸಾಕಷ್ಟು ಪ್ರಭಾವ ಬೀರಿದ ನಾಗತಿಯರು ಕಾಮಗೇತಿ ಬೆಡಗಿನಲ್ಲಿ ಕಾಣಬಹುದಾಗಿದೆ. ವೀರವ್ವನಾಗತಿ, ಓಬವ್ವನಾಗತಿ, ಕೆಂಪವ್ವನಾಗತಿ ಮೊದಲಾದವರನ್ನು ಇಲ್ಲಿ ಸ್ಮರಿಸಬಹುದು. ಕಾಮಗೇತಿ ಬೆಡಗಿನಲ್ಲಿ ರಾಜ್ಯಾಳ್ವಿಕೆ ಮಾಡಿದವರಿಗೆ ಕ್ಷತ್ರಿಯಸ್ಥಾನಮಾನವಿದ್ದು ಇತರರಿಗಿಂತ ಇವರು ಉನ್ನತ ಸ್ಥಾನದಲ್ಲಿದ್ದಾರೆ. ಸಾಮಾನ್ಯ ಜನರು, ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದ ವಿದ್ಯಾವಂತರು, ಅವಿದ್ಯಾವಂತರೂ ನೌಕರರು ತಮ್ಮ ವಂಶದ ಕುಲದ, ಆಚಾರ – ವಿಚಾರಗಳನ್ನು ಪುನರುಜ್ಜೀನವಗೊಳಿಸುತ್ತಿದ್ದಾರೆ. ಹಾಗೆಯೇ ಇವರ ದೇವಾಲಯ ಗುಡಿ, ಗೋಪುರಗಳನ್ನು ಜೀರ್ಣೋದ್ಧಾರ ಮಾಡಿಸಲಾಗುತ್ತಿದೆ. ಸಮೂಹ ಮಾಧ್ಯಮವು ಇದನ್ನು ಪ್ರಚಾರಕ್ಕೆ ತರದೆ ಚರಿತ್ರೆಗೆ ನಾಂದಿಯಾಯಿತು.

ಕರ್ನಾಟಕದಲ್ಲಿ ನೆಲೆಸಿರುವ ನಾಯಕ, ಬೇಡ, ವಾಲ್ಮೀಕಿ, ತಳವಾರರು ಆಯಾ ಪ್ರಾದೇಶಿಕತೆಗೆ ತಕ್ಕಂತೆ ಹೆಸರಿಟ್ಟುಕೊಂಡು ವಿವಿಧ ವೃತ್ತಿಗಳಲ್ಲಿ ಜೀವಿಸುತ್ತಾರೆ. ರಾಜ್ಯದ ಎಲ್ಲ ಪ್ರಾಂತ್ಯಗಳಲ್ಲೂ ಏಕಪ್ರಕಾರವಾಗಿಲ್ಲ. ಮತ್ತು ಇವರ ವ್ಯಾಪ್ತಿ ಮಧ್ಯಕರ್ನಾಟಕಕ್ಕೆ ಹೆಚ್ಚು ಸೀಮಿತವಾಗಿದೆ. ಇಂದು ಕೃಷಿ, ಕೂಲಿಯಿಂದ ಕೆಲವರು ಜೀವಿಸಿದರೆ, ಇನ್ನು ಕೆಲವರು ವ್ಯಾಪಾರ, ಉದ್ಯೋಗದಲ್ಲಿ ತೊಡಗಿದ್ದಾರೆ. ಇವರಲ್ಲಿ ಲೋಕಜ್ಞಾನ ಹೊಂದಿರುವವರೇ ಹೆಚ್ಚು. ಸಾಕ್ಷರತೆಯಲ್ಲಿ ಇವರು ಶೇ. ೫೦ ರಷ್ಟು ಸಾಧಿಸಿರುವರೆಂದು ಅಂದಾಜಿಸಲಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿನ ಕಾಮಗೇತಲಾರು ದೇಶದ ವಿವಿಧೆಡೆ ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ ಇತರ ನಾನಾ ವೃತ್ತಿ ಮತ್ತು ಕಸುಬುಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಸಂಗೀತ, ನಾಟಕ, ಜನಪದ ಕ್ರೀಡೆ, ಯಕ್ಷಗಾನ, ಬಯಲಾಟ, ಕೋಲಾಟ, ಕಬ್ಬಡ್ಡಿ, ಚಿನ್ನಿದಂಡ ಇತರ ಹವ್ಯಾಸಗಳಿವೆ. ಈ ಮಹಿಳೆಯರಲ್ಲಿ ಕೆಲವರು ಇತ್ತೀಚೆಗೆ ಶಿಕ್ಷಣದಲ್ಲಿ ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಕೆಲವು ಮಕ್ಕಳು ಶಾಲೆಗೆ ಹೋಗದೆ ಕುರಿ ಮತ್ತು ದನ ಮೇಯಿಸಲು ಹೋಗುವುದು ವಿಪರ್ಯಾಸ. ಇವರಲ್ಲಿ ಪೂರ್ವಜರ ಮಾತು ಮುಖ್ಯ ಮತ್ತು ಅಂತಿಮ ತೀರ್ಮಾನ. ಅವಿಭಕ್ತ ಕುಟುಂಬಗಳೇ ಹೆಚ್ಚು. ಮದುವೆ, ಮರಣ, ನಾಮಕರಣ ಶಾಸ್ತ್ರಗಳಲ್ಲಿ ಮಾಡುವ ಸಾಂಪ್ರದಾಯಿಕ ಆಚರಣೆಗಳಿಗೆ, ಹಬ್ಬ ಹರಿದಿನಗಳಲ್ಲಿ ದೇವರಿಗೆ ಮಾಡುವ ಆಚರಣೆಗಳಿಗೂ ವ್ಯತ್ಯಾಸವಿದೆ. ಎಂಥ ಬಡವರಾದರು ಊರೊಟ್ಟಿನ ಹಬ್ಬದಲ್ಲಿ ಬೇಟೆ ಕಡಿಯುವುದು, ಸಿಹಿಮಾಡುವುದು ಸಾಮಾನ್ಯ. ಇವರಲ್ಲಿ ಒಗ್ಗಟ್ಟು ಇದೆ ಎಂದು ಒತ್ತಿ ಹೇಳುವಂತಿಲ್ಲ. ಅವಕಾಶ ಬಂದಂತೆ ಒಂದಾಗುತ್ತಾರೆ. ಕಾಮಗೇತಿಗಳಲ್ಲಿ ಹೆಚ್ಚಿನ ಜನ ಕುಡಿತಕ್ಕೆ ದಾಸ್ಯರಾಗಿಲ್ಲ. ಹೆಣ್ಣು – ಗಂಡು ಮಕ್ಕಳು ಸಮನಾಗಿ ಎಲೆ – ಅಡಿಕೆ ಹಾಕಿಕೊಳ್ಳುತ್ತಾರೆ. ಎಷ್ಟೋ ಬಾರಿ ಎಲೆ – ಅಡಿಕೆ ನೆಪದಲ್ಲಿ ಹೆಣ್ಣು – ಗಂಡುಗಳು ಒಂದಾಗುತ್ತಾರೆ. ನಗರಗಳಲ್ಲಿರುವವರು ತಮ್ಮ ಬುಡಕಟ್ಟು, ಧರ್ಮ, ಸಂಸ್ಕೃತಿಗೆ ತಿಲಾಂಜಲಿ ಇಟ್ಟಿದ್ದಾರೆ. ಉನ್ನತಾಧಿಕಾರಿಗಳಾಗಿರುವವರಲ್ಲಿ ಹೆಚ್ಚಿನವರು ಗ್ರಾಮೀನ ಪ್ರದೇಶದವರೇ. ಕಾಮಗೇತಿಯವರು ಇತರರೊಂದಿಗೂ ಸಹಬಾಳ್ವೆಯಿಂದ ಇರುತ್ತಾರೆ. ಗದ್ದಲ, ಗಲಾಟೆ ನಡೆದಾಗ ನಾವು ಮದಕರಿನಾಯಕ ವಂಶದವರು, ಪಾಳೆಯಗಾರರೆಂದು ಬಿಂಕದ ಮಾತಾಡುತ್ತಾರೆ. ಹಳ್ಳಿಗಳಲ್ಲಿ ಇವರ ಚಟುವಟಿಕೆ ಕಂಡ ಜನ ‘ಕಾಮಗೇತಿ ಭೂಪ ಜಾಕೊಂದು ರೂಪ’ ಎಂದು ಹಾಸ್ಯ ಮಾಡುವರು. ಬಹುತೇಕ ಗ್ರಾಮಗಳಲ್ಲಿ ಕಾಮಗೇತಿಗಳಿಗೆ ಮಳೆಲಾರು, ಬುಟ್ಟುಗಲಾರು ನೆಂಟರಾಗಬೇಕು. ಗುಂಡೇತಲಾರು ಬೆಡಗಿನವರು ಕಾಮಗೇತಲಾರಿಗೆ ಅಣ್ಣ – ತಮ್ಮಂದಿರಾಗಬೇಕು.[2]

ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿರುವ ಕಾಮಗೇತಿಯರು ವಿಭಿನ್ನವಾದ ಜೀವನ ಶೈಲಿಯನ್ನು ರೂಢಿಸಿಕೊಂಡಿರುವರು. ಸೂರಲಿಂಗಪ್ಪ ತಂದೆ ಮೂಕಸೂರಯ್ಯ (೨೬) ಕಾಮಗೇತಲಾರು, ತುಮಕೂರ್ಲಹಳ್ಳಿ ಗ್ರಾಮದವರು. ಇವರ ತಾಯಿ ಸಿದ್ದಮ್ಮನವರು ಪಟ್ಟಪೊಲ್ಲಾರು ಬೆಡಗಿನವರು. ಈತ ಮದುವೆ ಆಗಿರುವುದು ಮೊಳಕಾಲ್ಮೂರು ತಾಲೂಕಿನ ಕೊಮ್ಮನಪಟ್ಟಿ ಗ್ರಾಮದ ಬುಟಗಲಾರು (ಬೆಡಗು) ಮನೆತನದಲ್ಲಿ, ಇವರು ಕೃಷಿ, ಕೂಲಿ ಮಾಡುತ್ತಾರೆ. ಮನೆದೇವರು ಸೂರಲಿಂಗೇಶ್ವರ ಕಾಮಗೇತನಹಳ್ಳಿ, ಶಿವನೆಂದು ಈ ದೇವರನ್ನು ಭಾವಿಸಿರುವರು. ಮೊದಲು ಕಂಪಳದೇವರಹಟ್ಟಿಯ ಕಂಪಳದೇವರಿಗೆ ನಡೆದುಕೊಳ್ಳುತ್ತಿದ್ದರು. ಈಗ ಕಾಮಗೇತನಹಳ್ಳಿಗೆ ಬಂದು ನಡೆದುಕೊಳ್ಳುತ್ತಾರೆ. ಕಾಮಗೇತನಹಳ್ಳಿಯಲ್ಲಿ ಹಬ್ಬವನ್ನು ಶಿವರಾತ್ರಿ ದಿನ ಆಚರಿಸುತ್ತಾರೆ. ನಂತರ ಹೋಳಿಗೆ ಹುಣ್ಣಿಮೆ, ಗುಗ್ಗರಿಹಬ್ಬಗಳನ್ನು ಮಾಡವರು. ಇಂದಿಗೂ ಇವರ ಮನೆಯಲ್ಲಿ ಸುರೇಶ, ಸೂರಪ್ಪ, ಸೂರಿ, ಸೂರಯ್ಯ, ಸೂರಣ್ಣ, ಸೂರಮ್ಮ, ಸೂರಕ್ಕ ಇತರ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಮ್ಯಾಸಮಂಡಲದಲ್ಲಿನ ಸಾಂಸ್ಕೃತಿಕ ಪದ್ಧತಿ, ಆಚರಣೆಗಳನ್ನು ಇವರು ಇಂದಿಗೂ ಉಳಿಸಿಕೊಂಡು ಬಂದಿರುತ್ತಾರೆ. ಊರು ಮಾರಮ್ಮ ಹಬ್ಬವನ್ನು ಮಾಡುವಾಗ, ದೇವರನ್ನು ಗಂಗೆಗೆ ತೆಗೆದುಕೊಂಡು ಹೋಗುವಾಗ ದೇವರಿಗೆ (ಬಲಿಕೊಡುವ) ನಿವಾಳಿ ಕೊಯ್ಯುವುದು ಕಾಮಗೇತಲಾರು ಗಾದರಿಪಾಲನಾಯಕ ದೇವರು ಬಂದಾಗ ಮಣೆವು ಹಿಡಿಯುವ ಜವಾಬ್ಧಾರಿ ಇವರದು. ತುಮಕೂರ್ಲ ಹಳ್ಳಿ ಗ್ರಾಮವೊಂದರಲ್ಲಿಯೇ ಕಾಮಗೇತಲಾರವು ಸುಮಾರು ೫೦ ಮನೆಗಳಿವೆ (೩೦.೧೦.೨೦೦೫). ಹೀಗೆ ಕರ್ನಾಟಕದ ನಾಯಕ ಬುಡಕಟ್ಟಿನ ಒಂದು ಬೆಡಗು ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ತನ್ನ ಹೆಗ್ಗುರುತುಗಳನ್ನು ಬಿಟ್ಟಿರುವುದು ಗಮನಾರ್ಹ. ತನ್ನ ಅನನ್ಯತೆಯನ್ನು ಸರ್ವಕಾಲಕ್ಕೂ ಸಂದೇಶ ನೀಡುವುದರ ಮೂಲಕ ಸ್ಮರಣೀಯವಾಗಿ ಈ ಕಾಮಗೇತಲಾರು ಬೆಡಗು.

 

[1] ಪೂಜಾರಿ ಚಿನ್ನಪ್ಪ ತಂದೆ ಬೋರಯ್ಯ, ೮೦, ಗುವನಾಡು, ಪಾಪೆದೇವರ ಪೂಜಾರಿ, ಕಲ್ಲೆದೇವರಪುರ, ಜಗಳೂರು-ತಾ|| ದಾವಣಗೆರೆ-ಜಿಲ್ಲೆ (೯-೧೦-೨೦೦೫ ಕುದಾಪುರ)

[2] ಕಾಮಗೇತನಹಳ್ಳಿ ಸೂರಪ್ಪನಾಯಕನ ಮಗ ಎಸ್. ಕಾಮಗೇತಿ, ತಿಮಲಾಪುರದ ಹೇಮಣ್ಣ, ಪೂಜಾರಿ ಪಾಲಯ್ಯ ಚನ್ನಬಸಯ್ಯನಹಟ್ಟಿ ಮೊದಲಾದವರು ಸಹಕರಿಸಿದ್ದಾರೆ.