ವಿಶ್ವ ಮಯೂರಂ
ಗರಿಗಳ ಬಿರ್ಚಿ
ಮಾಯಾಲಾಸ್ಯವನಾಡುತಿರೆ ;
ಗರಿಗಳ ಜೋಡಿ
ಮುಗಿಲಲಿ ಮೂಡಿ
ಬಣ್ಣದ ಬಿಲ್ಲನು ರಚಿಸಿಹುದೋ ?

ಆ ದಿಕ್ತಟದಿಂ
ಈ ದಿಕ್ತಟಕೆ
ಸುರಸಂಕ್ರಮಣಕೆ ನಿರ್ಮಿಸಿದ
ಬಣ್ಣಗಳೇಳರ
ಸೇತುವೆಯಂತೆ
ನೀಲಾಕಾಶದಿ ನಿಂದಿಹುದು.

ಆಗಸವೆಣ್ಣಿನ
ಕೊರಳಿನ ಹಾರಂ,
ನಯನ ಮನೋಹರಮಾಗಿಹುದು.
ಲೋಕಮನೋಭವ
ಕಾಮನು ಹಿಡಿದಾ
ಕಾಮನ ಬಿಲ್ಲೇ ಮೂಡಿಹುದೋ.

ಬಾನಂಗಳದಲಿ
ಸುರಸೌಂದರ್ಯದ
ಲಾಸ್ಯ ವಿಲಾಸದ ಪರಿಯಂತೆ ;
ಕಾಮನ ಬಿಲ್ಲಿದು
ರಂಜಿಸುತಿದೆ ಕಾಣ್
ಬಾಳಿನ ಲೀಲೆಯಿದೆಂಬಂತೆ !