ಶ್ರೀ ಗುರು ವರವಿರೂಪಾಕ್ಷನ ಪಾದವ

ನೀಗಲೆ ಕರದಿಂದ ಪಿಡಿವುತಲಿ | ಶಿರ
ಬಾಗಿ ಹರುಷದಿಂದ ನಮಿಸುತಲಿ | ಒಳ್ಳೆ
ಯೋಗಿಹೃದಯವಾಸನೆಂಬುತಲಿ | ಬಿಡ
ದೀಗಲೆ ಸ್ತುತಿಸುವೆ ಬೇಗನೆ ಬಂದೆನ್ನ ಜಿ
ವ್ಹಾಗ್ರದೊಳ್ ನಿಂತು ಸಾಗಿಸೀ ಕೃತಿಯ       ೧

ಮುಂದಾಗಿ ಶ್ರೀಗಣಪತಿಪಾದ ಬಲಗೊಂಡು
ಚೆಂದದಿ ಪೇಳುವೆ ಜಗದೊಳಗೆ | ಇದ
ರ‍್ಹೊಂದಿಕಿ ತಿಳಿವುದು ಮನದೊಳಗೆ | ಬಾಳ
ಸಂದೇಹ ಬಾರದಂತೆ ಜನದೊಳಗೆ | ಮುದ
ದಿಂದಲಿ ಚಂದ್ರನ ಸುತೆಯಂತಪೂರ್ವಳ
ಅಂದವ ಪೇಳ್ವೆ ಮತಿಗೆ ತಿಳಿದಂತೆ            ೨

ಭೂಮಿಯೊಳಗೆ ಸ್ಮರರಾಣಿಯಂತಿರುವ
ಕಾಮಿನೀ ಶೃಂಗಾರ ಏನು ಪೇಳಲಿ | ಬಾಳ
ಪ್ರೇಮದಿ ಪೇಳುವೆ ನಯದಿಂದಲಿ | ನೀವು
ತಾಮಸಗುಣಗಳ ಅಳಿವುತಲಿ | ಪರಿ
ಣಾಮದಿ ಕೇಳ್ವುದು ಭಾಮಿನಿ ಮುಖಪದ್ಮ
ಸೋಮನಂದದಿ ಕಣ್ಗೆಸೆದು ರಾಜಿಪುದು        ೩

ಎಷ್ಟಂತ ಹೇಳಲಿ ಪಟ್ಟಪಟ್ಟಾವಳಿ
ಉಟ್ಟಾಳು ಚಂದ್ರಕಾಳಿ ಸೀರಿಯ | ಆಗ
ತೊಟ್ಟಾಳು ಕುಪ್ಪಸ ಜರತಾರಿಯ | ಫಣಿ
ಗಿಟ್ಟಾಳು ಕುಂಕುಮದ ರೇಖೆಯ | ಮತ್ತೆ
ಕಟ್ಟಾಣಿ ಕರಿಮಣಿ ಮುತ್ತಿನ ಸರಗಿಯ
ಒಟ್ಟಾಗಿ ಕೊರಳೊಳಗಿಟ್ಟಾಳ ಭರತಿ          ೪

ವಾರಿಜಮುಖಿಯಳು ಇಟ್ಟಂಥ ವಸ್ತ
ತೋರ ಕಂಕಣ ಕೈ ಕಟ್ಟುಗಳು | ನಾರಿ
ಗೀರ ಬಂಗಾರ ಬಳಿ ಇಟ್ಟಿಹಳು | ಮತ್ತೆ
ಮೀರಿ ಮೇಲೆಸೆವಂಥ ಕಡಗಗಳು | ಇಂಥ
ನಾರಿಯ ವರ್ಣಿಸಲಾರದೆ ಕವಿ ತಾನು
ನೀರಜೋದ್ಭವಶಿರಕರ ಪಾಲಿಸೆಂದ           ೫

ಬುಗುಡಿ ಬಾವಲಿ ಗಿಳಿಗಳ ಹಚ್ಚಿದಲ್ಲಿ
ಮಿಗಿಲಾಗಿ ಇಟ್ಟಿಹ ಜಮಿಕಿಗಳು | ಮತ್ತೆ
ಬಿಗಿಸೀದ ಸುತ್ತಲಿನ ಮುತ್ತುಗಳು | ಕಡು
ಅಗಲದಂತಿಟ್ಟಿಹ ವಸ್ತಗಳು | ಬಾಳ
ಬಗಿಬಗಿಯಿಂದಲಿ ಸುಗುಣಿ ತಾ ಬರುವಂಥ
ಸೊಗಸನು ಎನ್ನಿಂದ ಹೊಗಳಲಿಕ್ಕಳವೆ       ೬

ಗೊತ್ತಿನಿಂದ್ಹೇಳುವೆ ಮತ್ತೆ ಕೇಳಿರಿ ನೀವು
ನೆತ್ತಿಯೊಳಗಿಟ್ಟಂಥ ವಸ್ತವನು | ಬಿಡ
ದೆತ್ತಿ ಹೇಳುವೆ ಸೂರ್ಯಪಾನವನು | ಅದ
ರೊತ್ತಿಲಿಟ್ಟ ಹೂವ ತಿರುಪವನು | ಕಂಡು
ಮತ್ತೆ ಸಂತೋಷದಿ ಕ್ಯಾದಿಗಿಗಳನಿಟ್ಟು
ಚಿತ್ತಜ ಪಿಡಿದಿಹ ಕತ್ತಿಯಂತಿಹಳು    ೭

ಕಾಲ ಕಡಗ ರುಳಿ ಗೆಜ್ಜೆ ಪೈಜಣ ಲುಲ್ಲು
ಮೇಲಾದ ಪಾಡಗವಿಟ್ಟಿಹಳು | ನಾರಿ
ಕಾಲುಂಗ್ರ ಒಲಿದಿಟ್ಟ ಪಿಲ್ಲಿಗಳು | ಮೇಲೆ
ಪೂಲ ಮೆಂಟಿಕಿ ಮಿಂಚು ಮೀನಗಳು | ಬಾಲೆ
ಎಲ್ಲ ವಸ್ತವ ತಾ ಮೆಲ್ಲಡಿಯೊಳಗಿಟ್ಟು
ನಿಲ್ಲದೆ ಬರುತಿರೆ ನಲ್ಲೆ ತಾ ಮುದದಿ           ೮

ಸತ್ಯಭಾಮೆಯಂತೆ ಮತ್ತೆ ಮೂಗಿನೊಳಿಹ
ಮುತ್ತಿನ ಮುಕುರದ ಭರ್ತಿಯಲಿ | ಕೊಳ್ಗೆ
ಮತ್ತೆ ಕಟ್ಟಿಹ ಗುಳದಾಲಿಯಲಿ | ಅದ
ರೊತ್ತಿಲಿರುವ ಗೆಜ್ಜಿ ಟಿಕ್ಕಿಯಲಿ | ಬಿಡ
ದೆತ್ತಲಿ ಗೊತ್ತಲಿ ಸುತ್ತಲಿ ಗೆಳತೇರ
ಮೊತ್ತದಿ ಜೆತ್ತಿಲಿ ಬಂದಾಳ್ಬಜಾರಕೆ  ೯

ಮಡದಿಯು ತಾ ಬಲು ಬಡಿವಾರದಲಿ ಒಳ್ಳೆ
ನಡುವಿಗೆ ಡಾಬವನಿಟ್ಟಿಹಳು | ಮತ್ತೆ
ಬಿಡದೆ ಹೇಳುವೆ ಕೇಳು ಬೆರಳಿನೊಳು | ಹರ
ಳ್ಜಡಿತವಾಗಿರುವಂಥ ಉಂಗ್ರಗಳು | ಇಂಥ
ಸೆಡಗರದಿಂ ಪ್ಯಾಟಿ ನಡುಮಧ್ಯದೊಳು ನಾರಿ
ಒಡನೆ ತಾ ಬರುವಂಥ ಖಡಕೇಟು ಪೇಳ್ವೆ     ೧೦

ಸೊಕ್ಕಿದಾನೆಯ ಪರಿಯಂದದಿ ಸುದತಿಯು
ಗಕ್ಕನೆ ಓಣಿಯೋಳ್ಬರುತಿರಲು | ಜನ
ಕಕ್ಕುಲತೆಯಲಿ ಬೆನ್ಹತ್ತಿರಲು | ತಮ್ಮ
ರೊಕ್ಕದ ಪರವೆಯ ಮರೆತಿರಲು | ನಾರಿ
ಕಕ್ಕಸ ಕುಚವನು ಚಕ್ರವಕ್ಕಿಯು ಕಂಡು
ಧಿಕ್ಕಾರವಾಗುತ ಹೊಕ್ಕವಾ ಕೊಳೆವ                   ೧೧

ನುಡಿಗೇಳಿ ಗಿಳಿಗಳು ಗಿಡಗಳ ಸೇರ್ಯಾವು
ಕುಡಿಹುಬ್ಬ ಕಾಣುತ ಮನ್ಮಥನು | ಕೈಯೊ
ಳ್ಪಿಡಿದದನು ಬೆನ್ನೋಳಿರಿಸಿದನು | ಆಕಿ
ಅಡಿಗಾವಿ ನಾಚಿ ಹಾರಿತು ಮಡನ | ಬಲು
ಬಡನಡುವನು ಕಂಡು ನಾಚುತ ಸಿಂಹವು
ಬಿಡದಿರಲಾರದೆ ಅಡವಿಯ ಸೇರಿತು           ೧೨

ಉಡುರಾಜಮುಖಿಯಳ ಧ್ವನಿಗೇಳಿ ಕೋಗಿಲೆ
ಬಿಡದೆ ಹಾರಿದುದು ವನಾಂತರಕೆ | ಸಖಿ
ಮುಡಿ ಕಂಡು ನವಿಲು ಕಾನಾಂತರಕೆ | ಬಾಲೆ
ಜಡಿಗೆ ನಾಚುತಲಿ ಸರ್ಪನು ಹುತ್ತಕೆ | ಇಂಥ
ಕಡು ಚೆಲ್ವಮಡದಿಯ ತೊಡಿತೋಳ ಕಾಣುತ
ಬಿಡದೆ ಬಾಡುತ ಬಾಳಿವನ ಶಿರಬಾಗೆ         ೧೩

ದಂತವ ಕಂಡು ದಾಳಿಂಬರ ನಾಚುತ
ಚಿಂತೆಯಿಂದಲಿ ಬಾಯ ಬಿಟ್ಟಿಹುದು | ಮುಖ
ಕಾಂತಿಗೆ ಚಂದ್ರ ಕಪ್ಪಾಗಿಹುದು | ಭೃಂಗ
ಕುಂತಳ ಕಂಡು ಕಮಲದೊಳಿಹುದು | ಇಂಥ
ಪಂಥದ ನಾರಿಯ ಪ್ರಾಂತದೊಳಗೆ ಕಾಣೆ
ನೆಂತೆನುತಲಿ ಕುಕ್ಕುಟನು ಬೇಗ ಕೂಗೆ        ೧೪

ವಲ್ಲಭೆ ನೋಟಕ್ಕೆ ಹುಲ್ಲೆಯು ನಾಚುತ
ನಿಲ್ಲದೆ ಸೇರೀತಡವಿಯೊಳು | ಜಾಜಿ
ಮಲ್ಲಿಗಿ ಮುಡಿಯೊಳಗಿಟ್ಟಿಹಳು | ಕೊಳ್ಗೆ
ನಿಲ್ಲದೆ ಶಂಖ ಸಮುದ್ರದೊಳು | ಬಿದ್ದು
ನಲ್ಲೆಯ ಗಲ್ಲಕ್ಕೆ ನಾಚುತ ಕನ್ನಡಿ
ನಿಲ್ಲದೆ ಹೋಗಿ ತಾ ಮರದೊಳು ಸೇರೆ       ೧೫

ರಾಜವದನೆ ಬಲು ಮೋಜಿನಿಂದಲಿ ಪ್ಯಾಟಿ
ಬಾಜಾರದೊಳು ತಾನು ಬರುತಿರಲು | ಒಳ್ಳೆ
ಮೋಜುಗಾರರು ಬೆರಗಾಗಿರಲು | ಮಣಿ
ಸೂಚಿ ಮಾರುವರು ಕನ್ನಡಿ ತೋರಲು | ಇಂಥ
ಸೋಜಿಗವಾದಂಥ ಸುಗುಣಿಯ ಕಾಣುತ
ಈ ಜಗದೊಳಗೆಲ್ಲ ವಿಪರೀತವೆನುತ          ೧೬

ಜಡಜಲೋಚನೆ ಬಲು ಸಡಗರದಿ ಪ್ಯಾಟಿ
ನಡುಮಧ್ಯದಲಿ ಬರುತಿರಲು ಕಂಡು | ಬೇಗ
ಕಡುಜಾಣರುಗಳ ಬಾಯಿ ತವಡುಗೊಂಡು | ಈಕಿ
ಬೆಡಗ ಕಾಣುತ ಬಾಯ ತೆರೆದುಕೊಂಡು | ಇಂಥ
ಕಡುಜವ್ವನಿಯಳ ಕಾಣುತ ಕಂಚಗಾರ
ತಡೆಯದೆ ಭಾಂಡೇದ ಗೊಡವಿಲ್ದೆ ಪೋದ     ೧೭

ಪತ್ತಾರ ತಂದು ಮುತ್ತಿನ ವಸ್ತಗಳ
ಒತ್ತಿಯನಿಟ್ಟನು ಧನಿಕರಲಿ | ಅಯ್ಯ
ತತ್ತರಿಸುತ ತನ್ನ ಮನಸಿನಲಿ | ಬೆನ್ನ
ಹತ್ತಿಹ ಗೌಡ ತಾ ಪ್ರೀತಿಯಲಿ | ಅಯ್ಯೋ
ಮತ್ತೆಲ್ಲಿ ಕಾಣೆನೆನುತಲಿ ಬಣಜೀಗ
ಎತ್ತ ಹೇರುವ ಬಿಟ್ಟು ಮತ್ತೋಡಿ ಬಂದ        ೧೮

ಅಷ್ಟರೊಳಗೆ ಮತ್ತೆ ಹೊಟ್ಟೆಯ ಚೀಲವ
ಕಟ್ಟದೆ ಬಂದನು ಚಿನಿವಾರನು | ಕೈಯ
ಬಿಟ್ಟು ಬಂದನು ಆಗ ಬಳಿಗಾರನು | ಬೇಗ
ತಟ್ಟನೆದ್ಹೋಡಿದ ಎಲಿಗಾರನು | ನಾಯಿ
ನ್ನೆಷ್ಟಂತ ಹೇಳಲಿ ಸೆಟ್ಟಿಸಾವ್ಕಾರರು
ಇಟ್ಟ ಲೆಕ್ಕದ ವೋಹಿ ಬಿಟ್ಟೋಡಿ ಬರಲು       ೧೯

ಬಾಜಾರವಿಡಿದು ಆ ರಾಜವದನೆ ಬಲು
ಮೋಜಿನಿಂದಲಿ ಆಕಿ ಬರುವದನು | ಕಂಡು
ಮೋಜುಗಾರನು ಒಬ್ಬ ತರುಬಿದನು | ನಿಲ್ಲೆ
ಏ ಜಾಣಿ ಎಲ್ಲಿ ಹೋಗುತಿ ಎಂದನು | ನಿನ್ನ
ಮೋಜಿಗೆ ಸುಮನಿನ್ನು ಈ ಜಗದೊಳು ಕಾಣೆ
ಸೋಜಿಗವಾದೀತು ಸುಗುಣಿ ಕೇಳೆಂದ        ೨೦

ನಿನ್ನ ನಡಿಗಿ ಮದದಾನೆಯ ಮರಿಯಂತೆ
ನಿನ್ನ ತೋಳು ತಾವರೆಯ ನಾಳದಂತೆ | ನಾರಿ
ನಿನ್ನಧರವು ತೊಂಡಿ ಹಣ್ಣಿನಂತೆ | ಸಖಿ
ನಿನ್ನ ನಾಭಿ ಬಾಳಿಸುಳಿಗಳಂತೆ | ಕೇಳು
ನಿನ್ನ ನಾಸಿಕವು ಸಂಪಿಗಿಯ ಪೋಲ್ವುದು ಆಹ
ಕನ್ನೆ ಶಿರೋಮಣಿ ಎನ್ನುತ ನುಡಿದಾ           ೨೧

ಹುಡುಗತನದ ಬುದ್ಧಿ ಬಿಡು ಪರಮಡದೇರ
ನಡು ಪ್ಯಾಟಿಯೊಳು ಬಂದು ತರುಬುವರೆ | ಇಂಥ
ಬೆಡಗಿನ ಬುದ್ಧಿಯ ಕಲಿಯುವರೆ | ಎನ್ನ
ಒಡಹುಟ್ಟಿದಣ್ಣಗಳ್ ಕೇಳಿದರೆ | ನಿನ್ನ
ಕಡಿದು ಹಾಕುವರೆನ್ನ ಗೊಡವೆಯ ಬಿಡು ನಿನ್ನ
ಮಡದಿಯೊಳಗೆ ಸುಖಬಡು ಹೋಗೊ ಮೂಢಾ        ೨೨

ಒಡಹುಟ್ಟಿದಣ್ಣನ ಗೊಡವಿಯ ಬಿಡು ನಿನ್ನ
ಬೆಡಗಿಗೆ ನಾ ಮರುಳಾದೆನಲ್ಲೆ | ನನ್ನ
ಮಡದಿಯ ಸಾಕ್ಷಿಯ ಹೇಳೊದಲ್ಲೆ | ಮತ್ತೆ
ಕೊಡುವೆನು ನೀನು ಬೇಡಿದ್ದ ನಲ್ಲೆ | ಇಂಥ
ಸೆಡವಿನ ಮಾತನು ಆಡಿದಾಕ್ಷಣ ನಿನ್ನ
ಕಡಗಿನ್ನು ಬಿಟ್ಟರೆ ಹುಡುಗ ನಾನಲ್ಲಾ          ೨೩

ದುಷ್ಟತನದಿ ಬಂದು ಎಟ್ಟಿ ಮಾತುಗಳ ನೀ
ಇಷ್ಟು ಪರಿಯಲಿಂದ ಆಡುವರೆ | ನಿನ್ನ
ಗೆಷ್ಟು ಹೇಳಲಿ ಎನ್ನ ಪತಿ ಕಂಡರೆ | ನಿನ್ನ
ರಟ್ಟಿಯೆರಡ ಮರಕೇರ್ಗಟ್ಟರೆ | ಮತ್ತೆ
ಪಟ್ಟುಗುಡುದು ನಿನ್ನ ಹೊಟ್ಟಿ ಹೊರೆವುದ
ಬಿಟ್ಟು ಬರುವರೇನೊ ಭ್ರಷ್ಟ ಮನುಜನೆ        ೨೪

ಪುರುಷನಂಜಿಕಿಯ ಯಾರಿಗ್ಹೇಳುತಿ ನಿನ್ನ
ಸ್ಥಿರ ಮನಸಿನ ಬಿಂಕ ಬಿಡಬಾರದೆ | ಬೇಗ
ಹರುಷದಿಂದ್ಹೆಗಲೊಳ್ಕೈಯ ಇಡಬಾರದೆ | ಈಗ
ಸರಸದಿ ಚುಂಬನ ಕೊಡಬಾರದೆ | ಎಂದು
ಪರಿಪರಿಯಿಂದಲಿ ಸುಗುಣ ತಾ ಪೇಳಲು
ಪರಮ ಸಂತೋಷದಿ ಹೇಳಿದಳು ಕಥೆಯ              ೨೫

ಸರಸದಿಂ ರಾಮನ ಚಿರಂಜೀವಿ ಲಕ್ಷ್ಮಣ
ವರ ಸೀತೆ ಸಹಿತದಿಂದ ವನದೊಳಗೆ | ಇರು
ತಿರಲು ರಾವಣ ಬಂದು ರಥದೊಳಗೆ | ಸೀತೆ
ಪುರಕೆ ಕೊಂಡೊಯಿದಾನು ಹಿತದೊಳಗೆ | ಅತಿ
ಭರದಿಂದೆ ರಾಮನು ರಾವಣನ ಕೊಂದ
ಪರಿಯನು ಅರಿಯೇನೊ ಮರುಳ ಮಾನವನೆ          ೨೬

ಈ ಕ್ಷಿತಿಯೊಳು ಇಂಥ ವಿಪರೀತ ಕಥೆಯ
ಸಾಕ್ಷಿಯ ನೀನು ಯಾರಿಗೆ ಹೇಳುವೆ | ಧರೆ
ರಕ್ಷಿಪ ಕೃಷ್ಣನು ಸುಖದೊಳಿಲ್ಲವೆ | ಇಂಥ
ಮೋಕ್ಷದೆ ಹಾದಿಯ ಬಿಡು ನಿನ್ನ ಹವಣೆಯ
ನೀಕ್ಷಿಸುವೆನು ಕಮಲಾಕ್ಷಿ ಕೇಳೆಂದನು                  ೨೭

ಕನ್ನೆಯಳಾದಂಥ ಚನ್ನೆ ದ್ರೌಪದಿಯನು
ಮುನ್ನ ಕೀಚಕ ಹಿಡಿದೆಳೆಯಲಾಗಿ | ಆಕೆ
ಸೊನ್ನಿಯಿಂ ಭೀಮನೊಳ್ ಪೇಳಲಾಗಿ | ಅವ
ಉನ್ನತ್ತ ಕೋಪವ ತಾಳಲಾಗಿ | ಬೇಗ
ಅನ್ಯೋನ್ಯದಿಂ ಪೋಗಿ ಕೀಚಕನನು ಕೊಂದ
ಇನ್ನಾರು ಅರಿಯರೊ ಕುನ್ನಿ ಮನುಜನೆ       ೨೮

ಯಾರ್ಗೊಡವೆ ಯಾತಕೆ ಮಾರ್ಗೊಡುವೆನು ಮನ
ಸೂರ್ಗೊಡು ಬೇಗ ನೀ ಪ್ರೀತಿಯಲಿ | ದ್ರವ್ಯ
ತೋರ್ಗೊಡುವೆನು ನಿನಗೆ ಹರುಷದಲಿ | ನಿನ್ನ
ಜಾರ್ಗುಣವನು ಕಂಡು ಮರುಳಿನಲಿ | ಬಂದು
ಕೂರ್ಗೊಡೆ ಎನ್ನಂಥ ವಾರ್ಗಿಯ ಪುರುಷನ
ದೋರ್ಗಣ್ಣಿಲಿ ನೋಡ್ವರೆ ನಿರ್ಗುಣಮಣಿಯೆ    ೨೯

ಮೂಳ್ಮನುಜನೆ ಕೇಳು ಜಾಳ್ಮಾತಿನವರನು
ಬಾಳ್ಮಂದಿ ಬಲ್ಲೆ ನಿನ್ನಂಥವರ | ಬಾಳ
ಸುಳ್ಮಾತ ಹೇಳುವಂಥವರ | ದ್ರವ್ಯ
ಹಾಳ್ಮಾಡಿ ಸನ್ಯಾಸ್ಯಾಗುವಂಥವರ | ಇಂಥ
ಪೊಳ್ಮಾತು ನಮ್ಮಲ್ಲಿ ಎಳ್ಮಾತ್ರ ತರವಲ್ಲ
ಸುಳ್ಮಾತ ಬಿಡು ಎಂದು ಗೀಳ್ಮಾಡಿ ನುಡಿಯೆ  ೩೦

ಇಂತು ಪರಿಯಲಿಂದೆ ಕಾಂತೆ ನುಡಿವರೇನೆ
ಭ್ರಾಂತಿ ಎನಗೆ ಹತ್ತಿ ನಿಂತಿಹೆನೆ | ನಿನ್ನ
ತಂತ್ರಕ್ಕೆ ನಾ ಮರುಳಾಗಿಹೆನೆ | ಅತಿ
ಚಿಂತೆ ಮಾಡ್ವದು ಕರುಣಿಲ್ಲವೇನೆ | ಗುಣ
ವಂತೆ ಬಾರೆಲೆ ರತ್ನದ್ಹಾರ ಕೊಡುವೆಯೆಂದು
ಕಾಂತೆಗೆ ಸ್ಮರರೂಪನುಸುರಲಾಕ್ಷಣಕೆ        ೩೧

ನಲ್ಲನಾಡಿದ ನುಡಿ ಕೇಳುತ್ತ ಸಖಿಯಳು
ನಿಲ್ಲದೆ ತಾ ಮುಗುಳ್ನಗೆಯಿಂದಲಿ | ಆಗ
ಚೆಲ್ವಗಾಲಿಂಗನ ಮಾಡುತಲಿ | ಬಾಳ
ಉಲ್ಹಾಸದಿಂದೆ ಕೈ ಹಿಡಿವುತಲಿ | ಮತ್ತೆ
ಸೊಲ್ಲಿನಿಂದಲಿ ತಾನು ಪುರುಷನ ಕರಕೊಂಡು
ವಲ್ಲಭೆ ಬಂದಾಳು ಮಲ್ಲಿಗಿಗಂಧೀ    ೩೨

ಮನಸಿಜ ರೂಪನ ಮನಸಿಗೆ ಕರೆದು ತಂದು
ವಿನಯದಿ ಗಂಧೆಣ್ಣೆ ಪೂಸಿದಳು | ಮತ್ತೆ
ಮನದಣಿದಂತೆ ನೀರ್ಹಣಿಸಿದಳು | ಅಲ್ಲಿಂ
ದನುನಯದಿಂದಲಿ ಇಳಿಸಿದಳು | ಅತಿ
ಉನ್ನತವಾದಂಥ ರನ್ನದ ಮಣಿಯೊಳು
ಚೆನ್ನಿಗ ಪುರುಷನು ಚೆನ್ನಾಗಿ ಕುಳಿತ           ೩೩

ಕೆನೆವಾಲು ಸಕ್ಕರೆ ಘೃತಗಳು ಇನಿತೆಲ್ಲ
ಘನ ಹರಿವಾಣದೊಳಿರಿಸಿದಳು | ಮೇಲೆ
ಗೊನೆಯ ಬಾಳಿಯ ಹಣ್ಣ ತಿನಿಸಿದಳು | ಬಾಳ
ಮನ ಹರುಷದಲಿ ಉಪಚರಿಸಿದಳು | ಬೇಗ
ಇನಿಯಗೆ ಕರ್ಪುರ ವೀಳ್ಯೇವ ಕೊಟ್ಟಂತೆ
ಮನುಮಥನಾಟಕ್ಕೆ ಅನುವಿನಿಂ ನಡೆಯೆ      ೩೪

ಕೋಲ್ಮಿಂಚಿನಂತೆ ಕಣ್ತೆರುವುವ ಸುದತೆಯು
ಬಲ್ಮುಗುಳ್ನಗೆಗಳ ನಗುವುತಲಿ | ಮತ್ತೆ
ಮೇಲ್ಮದಿರಕೆ ತಾ ನಡೆವುತೆಲಿ | ಸುವಿ
ಶಾಲ್ಮಂಚದಲಿ ಕುಳ್ಳಿರಿಸುತಲಿ | ಬೇಗ
ಸೋಲ್ಮುಡಿ ಸಖಿ ಬಾಳ ಜಾಲ್ಮಾತುಗಳನಾಡಿ
ಲೋಲ್ಮಾರನಾಟ ಕುಶಾಲ್ಮಾಡುವದಕೆ        ೩೫

ಸ್ಮರರೂಪ ಪುರುಷಗೆ ಇರದೆ ಮನ್ಮಥನಾಗ
ಗುರಿಮಾಡಿ ಬಾಣದಿಂದ್ಹೊಡಿಯಲಾಗ | ಚಮ
ತ್ಕರದಿ ಕುಚಗಳನ್ನು ಪಿಡಿಯಲಾಗ | ಬಾಳ
ಭರದಿ ಚೆಂದುಟಿಯನ್ನು ಕಡಿಯಲಾಗ | ಮತ್ತೆ
ಪರಿಪರಿ ಬಂಧದಿಂ ಉಪರತಿ ಸಮರತಿ
ಸುರಿಕವೆಂಬುವ ಶರಧಿಯೊಳ್ಮುಳುಗಿರಲು    ೩೬

ಹರುಷದಿ ಕೇಳಿರಿ ಸ್ಮರಶರವದನೆಯು
ಪುರುಷನ ಮನೆಗತ್ತ ಕಳುಹಿದಳು | ಮೇಲೆ
ಗುರುಪಯೋಧರಿಯು ಮಾಡಿದ ಕಥೆಗಳ | ಒಳ್ಳೆ
ಧರೆಯೊಳಗಧಿಕ ಉಜ್ಜಯನಿ ಪುರದೊಳು | ಅಲ್ಲಿ
ಮೆರೆವ ಮರುಳಸಿದ್ದೇಶನ ವರದಿ ಪೇಳ್ದೆನು
ಹರುಷದಿ ಪುರುಷರು ಹರಸಿ ಮಾಡುವದು     ೩೭