ಸಾಹಿತ್ಯ ಸೃಷ್ಟಿ, ರಾಷ್ಟ್ರಭಕ್ತಿ, ಗ್ರಾಮೋದ್ಧಾರ, ಪತ್ರಿಕೋದ್ಯಮ, ಫೋಟೊಗ್ರಫಿ, ಶಿಕ್ಷಣ ಪ್ರಯೋಗಗಳು, ನಾಟಕ, ನೃತ್ಯ, ಚಿತ್ರಕಲೆ, ವಾಸ್ತು, ಸಂಗೀತ, ಸಿನಿಮಾ, ವ್ಯಾಪಾರ, ಉದ್ಯೋಗ, ಅಧ್ಯಾತ್ಮ ಸಾಧನೆ, ಸಮಾಜ ಸುಧಾರಣೆ…ಹೀಗೆ ಹತ್ತು ಹದಿನಾರು ಕ್ಷೇತ್ರಗಳಲ್ಲಿ ಒಬ್ಬ ಮನುಷ್ಯ ತನ್ನ ಒಂದೇ ಜೀವಿತಾವಧಿಯಲ್ಲಿ ಸಾಧನೆಗೈಯಲು ಸಾಧ್ಯವೆ? ಸಾಧ್ಯ ಎಂದು ತೋರಿಸಿಕೊಟ್ಟವರು ಕನ್ನಡದ ಜ್ಞಾನಪೀಠ ಪುರಸ್ಕೃತ (೧೯೭೮) ಮೇರು ಲೇಖಕ, ಮೇಧಾವಿ ಡಾ. ಕೋಟಾ ಶಿವರಾಮ ಕಾರಂತ. “ವಿಷ್ಣುವಿಗೆ ೧೦ ಅವತಾರಗಳಾದರೆ ನನ್ನ ಧ್ಯೇಯಗಳು ಹದಿನಾರು ಅವತಾರಗಳನ್ನು ತಳೆಯುವಂತಾಯಿತು ’ ಎಂದು ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಂಡಿರುವ ಕಾರಂತರು ಬಹುಮುಖತೆಯತ್ತ ಹೊಂದಿದ್ದ ಈ ಒಲವು, ಅದಕ್ಕೆ ಪೂರಕವಾಗಿ ಕೂಡಿಬಂದ ಪ್ರತಿಭೆ, “ಆಧುನಿಕ ಭಾರತದ ರವೀಂದ್ರನಾಥ ಠಾಕೂರ್’ ಎಂಬ ಬಿರುದನ್ನು ಅವರಿಗೆ ತಂದಿತ್ತಿದೆ. ಅಷ್ಟೇ ಏಕೆ, ಸ್ವಾತಂತ್ರ್ಯೋತ್ತರ ಭಾರತ ನಿರ್ಮಾಣದಲ್ಲಿ ಗುರುತರ ಪಾತ್ರ ವಹಿಸಿದವರೆಂದು ಹೆಸರಿಸಲಾಗುವ ಹತ್ತು ಮಹನೀಯರ ಪಟ್ಟಿಯಲ್ಲಿ ಅವರ ಹೆಸರೂ ಸೇರಿದೆ. ಇವೆಲ್ಲ  ಇಂದಿನ ಮನುಷ್ಯರು, ಮಾಧ್ಯಮಗಳು ಅವರಂತಹ ದೈತ್ಯ ಪ್ರತಿಭೆಯನ್ನು ಅರ್ಥೈಸಿಕೊಳ್ಳಲು ಮಾಡಿಕೊಂಡ ಮಾಪನಗಳೇ ಹೌದಾದರೂ ಒಂದು ಅಸಾಧಾರಣ ವ್ಯಕ್ತಿತ್ವವನ್ನು, ಸಾರ್ಧಕ ತುಂಬುಜೀವನವನ್ನು ತೆರೆದಿಡುತ್ತಿವೆ.

ಉಡುಪಿಯ ಸಾಲಿಗ್ರಾಮದಲ್ಲಿ, ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳ ಐದನೇ ಮಗುವಾಗಿ, ೧೦ ಅಕ್ಟೋಬರ್, ೧೯೦೨ ರಲ್ಲಿ ಕಾರಂತರು ಜನಿಸಿದರು. ಕುಂದಾಪುರ, ಮಂಗಳೂರುಗಳಲ್ಲಿ  ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಅವರು  ಕಾಲೇಜು ಸೇರುವಾಗಾಗಲೇ ದೇಶದ ಸ್ವಾತಂತ್ರ್ಯ ಚಳವಳಿ ಕಾವೇರಿತ್ತು. ತಮ್ಮ ಪದವಿ ಶಿಕ್ಷಣ ಮೊಟಕುಗೊಳಿಸಿ ಅವರು ಆಂದೋಲನಕ್ಕೆ ಧುಮುಕಿದರು. ಆದರೆ ಕಾಲೇಜು ಬಿಟ್ಟರೂ ಅಧ್ಯಯನವನ್ನೇನೂ ಬಿಡಲಿಲ್ಲ. ಆಟಗಳಲ್ಲೂ ಮುಂದಿದ್ದರು. ಅವರ ಇಂಗ್ಲಿಷ್ ವ್ಯಾಮೋಹಿ ಮೇಷ್ಟ್ರೊಬ್ಬರನ್ನು ಕಿಚಾಯಿಸಲು “You silly ass, why are you laughing in Kannada? Laugh in English’ ಎಂದು ಗುರುಗಳಿಗೆ ಕೇಳುವಂತೆ ಸಹಪಾಠಿಯೊಬ್ಬನಿಗೆ ಸುಳ್ಳೇ ಗದರಿದ್ದರು ಎನ್ನುವುದು ಜನಜನಿತ. “೧೯೨೨-೪೭ ಅವಧಿಯ ಭಾರತೀಯ ಸಾಮಾಜಿಕ, ರಾಜಕೀಯ ಜೀವನದ ಅನುಭವಗಳು ಕಾರಂತರ ಸಂವೇದನೆಯನ್ನು ಪೂರ್ಣವಾಗಿ ರೂಪಿಸಿವೆ ಮತ್ತು ನಿಯಂತ್ರಿಸಿವೆ’ ಎಂಬ ನಿರೀಕ್ಷಣೆಯನ್ನು ಹೆಸರಾಂತ ವಿಮರ್ಶಕ, ಚಿಂತಕ ಡಿ.ಆರ್. ನಾಗರಾಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಅವರ ವಿಪುಲ ಸಾಹಿತ್ಯ ಸೃಷ್ಟಿಯೂ ಆರಂಭವಾಯಿತು. ವರ್ಷಕ್ಕೆ ಒಂದಾದರೂ ಬರೆಯಬೇಕು ಎಂದು ಹಟ ತೊಟ್ಟವರಂತೆ ಸುಮಾರು ೪೭ ಕಾದಂಬರಿಗಳನ್ನು ಅವರು ಪ್ರಕಟಿಸಿದರು. ಕನ್ಯಾಬಲಿ, ಜಗದೋದ್ಧಾರನಾ, ಹೆತ್ತಳಾ ತಾಯಿ, ಮುಗಿದ ಯುದ್ಧ, ನಂಬಿದವರ ನಾಕ ನರಕ, ಧರ್ಮರಾಯನ ಸಂಸಾರ, ಕೇವಲ ಮನುಷ್ಯರು, ಬತ್ತದ ತೊರೆ, ಸಮೀಕ್ಷೆ, ಸನ್ಯಾಸಿಯ ಬದುಕು, ಕಣ್ಣಿದ್ದೂ ಕಾಣರು, ಆಳ ನಿರಾಳ, ಕನ್ನಡಿಯಲ್ಲಿ ಕಂಡಾತ, ಕುಡಿಯರ ಕೂಸು, ಚೋಮನ ದುಡಿ, ಅಳಿದ ಮೇಲೆ, ಬೆಟ್ಟದ ಜೀವ, ಮರಳಿ ಮಣ್ಣಿಗೆ, ಒಡಹುಟ್ಟಿದವರು, ಮೊಗ ಪಡೆದ ಮನ, ಶನೀಶ್ವರನ ನೆರಳಿನಲ್ಲಿ, ಗೆದ್ದ ದೊಡ್ಡಸ್ತಿಕೆ, ಸ್ವಪ್ನದ ಹೊಳೆ, ಚಿಗುರಿದ ಕನಸು, ಗೊಂಡಾರಣ್ಯ, ಹಳ್ಳಿಯ ಹತ್ತು ಸಮಸ್ತರು, ಔದಾರ್ಯದ ಉರುಳಲ್ಲಿ, ಉಕ್ಕಿದ ನೊರೆ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲ್ಲಿ, ಮೂಕಜ್ಜಿಯ ಕನಸುಗಳು, ಒಂಟಿದನಿ, ಇನ್ನೊಂದೇ ದಾರಿ, ಇದ್ದರೂ ಚಿಂತೆ, ಅದೇ ಊರು ಅದೇ ಮರ, ನಾವು ಕಟ್ಟಿದ ಸ್ವರ್ಗ, ಮೂಜನ್ಮ, ಗೊಂಡಾರಣ್ಯ ಮುಂತಾದವು ಅವರ ಪ್ರಾತಿನಿಧಿಕ ಕಾದಂಬರಿಗಳು.

ಆತ್ಮಚರಿತ್ರಾತ್ಮಕವಾದ ಬರವಣಿಯನ್ನೂ ಆವರು ಮಾಡಿದ್ದಾರೆ; “ಹುಚ್ಚು ಮನಸ್ಸಿನ ಹತ್ತು ಮುಖಗಳು’ “ಬಾಳ್ವೆಯೇ ಬೆಳಕು’, ಹಾಗೂ “ಸ್ಮೃತಿಪಟಲದಿಂದ’ ಹೆಸರಿನ ಮೂರು ವಿಶಿಷ್ಟ ಕೃತಿಗಳಲ್ಲಿ. ಕನ್ನಡದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿ ಕಳೆದ ಆರು ದಶಕಗಳಲ್ಲಿ ವಿಕಸಿತಗೊಂಡ “ಕಾರಂತ ಚಟುವಟಿಕೆ’ಗಳ ಅಥೆಂಟಿಕ್ ವಿವರಗಳು ಇಲ್ಲಿವೆ ಎಂಬುದು ಕನ್ನಡಿಗರ ಸುದೈವ. ಮಿತ್ರರೊಬ್ಬರು ತಮ್ಮ ಜೀವನಚರಿತ್ರೆ ಬರೆಯುವ ಉತ್ಸಾಹ ತೋರಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ; ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದು ಪರಿಹಾಸದಿಂದ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಈ ನಿಷ್ಠುರ ನುಡಿ, ನಿಲುವಿನ ವ್ಯಕ್ತಿ ಮೇಲಿನ ಪುಸ್ತಕಗಳಲ್ಲಿ ವಸ್ತುನಿಷ್ಠವಾಗಿ ಅಂತಹ ಪ್ರಯತ್ನ ಮಾಡಿದ್ದಾರೆ. ಆರಂಭಿಕ “ಬಾಳ್ವೆಯೇ ಬೆಳಕು’ ಕೃತಿಯಲ್ಲಿ ತಮ್ಮ ಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದರೆ, ೧೯೫೦ರವರೆಗಿನ ಚಟುವಟಿಕೆ-ಅನುಭವಗಳನ್ನು “ಹುಚ್ಚು ಮನಸ್ಸಿನ..’ದ ಮೊದಲ ಆವೃತ್ತಿಯಲ್ಲಿ, ನಂತರದ ದಶಕದ ಅನುಭವಗಳನ್ನು  ಎರಡನೇ ಆವೃತ್ತಿಯಲ್ಲಿ ಬರೆದು ಪ್ರಕಟಿಸಿರುವುದು ಕಾರಂತ ಅಧ್ಯಯನಕ್ಕೆ ಒಂದು ಬಹು ಮುಖ್ಯ ಆಕರ ಒದಗಿಸಿದೆ. ಮುಂದೆ, “ಸ್ಮೃತಿಪಟಲದಿಂದ’ ಎಂಬ ಮತ್ತೂ ಒಂದು ಕೃತಿಯಲ್ಲಿ, ಪ್ರತ್ಯೇಕ ಮೂರು ಸಂಪುಟಗಳಲ್ಲಿ “ನಾನು ಮತ್ತು ಸಾಹಿತ್ಯ’, “ನಾನು ಮತ್ತು ರಂಗಭೂಮಿ’, “ನಾನು ಮತ್ತು ಪತ್ರಿಕೋದ್ಯಮ’ಗಳಂತಹ ಅಧ್ಯಾಯಗಳಲ್ಲಿ ತಮಗೆ ಈ ನಂಟುಗಳು ಬೆಳೆದು ಬಂದಿದ್ದನ್ನು ವಿವರವಾಗಿ ಅವರು ದಾಖಲಿಸಿರುವುದು ಇನ್ನೊಂದು ವಿಶೇಷ. ಈ ಮೂರೂ ಪುಸ್ತಕಗಳು ಲೇಖಕನನ್ನೂ – ಆತನ ಓದುಗರನ್ನೂ ಬಹು ಹತ್ತಿರಕ್ಕೆ ತಂದಿವೆ. ಅವರ ಕಾದಂಬರಿಗಳಷ್ಟೇ ಅಥವಾ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಜನಪ್ರಿಯತೆಯನ್ನು ಅವರು ಗಳಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಕಾರಂತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ( ಪಂಪ ಪ್ರಶಸ್ತಿ, ತುಲಸಿ ಸಮ್ಮಾನ್ ಅವರಿಗೆ ದೊರೆತ ಇನ್ನಿತರ ಪ್ರಮುಖ ಸಾಹಿತ್ಯಕ ಮನ್ನಣೆಗಳು ) ಗಳಿಸಿಕೊಟ್ಟ ೧೯೫೭ರಲ್ಲಿ ಪ್ರಕಟವಾದ “ಯಕ್ಷಗಾನ ಮತ್ತು ಬಯಲಾಟ’ ಸಹ ಒಂದು ಉಪಯುಕ್ತ ಮೇರು ಕೃತಿ. ಮತ್ತೆ ೧೯೭೫ರಲ್ಲಿ “ಯಕ್ಷಗಾನ’ ಶೀರ್ಷಿಕೆಯ ಪುಸ್ತಕ, ವಿಶ್ವ ಚಿತ್ರಕಲೆ ಇತಿಹಾಸ ಕುರಿತಂತೆ ಕನ್ನಡದಲ್ಲಿ ಒಂದು ಪುಸ್ತಕ, ಮಕ್ಕಳಿಗಾಗಿ “ಬಾಲಪ್ರಪಂಚ’ದ ಸಂಪುಟಗಳು, ದೊಡ್ಡವರಿಗಾಗಿ ಜ್ಞಾನಕೋಶ ಮಾದರಿಯ ವಿಜ್ಞಾನ ಬರವಣಿಗೆಯೂ ಅವರಿಂದ ಬಂತು. ೯೫ರ ಹರೆಯದಲ್ಲಿ ಮನೋಹರ ಗ್ರಂಥಮಾಲೆಗಾಗಿ, ತಾವೇ ಚಿತ್ರಗಳನ್ನೂ ರಚಿಸಿ, “ಪಕ್ಷಿ ಪ್ರಪಂಚ’ ಎಂಬ ಪುಸ್ತಕ ಹೊರತಂದರು. “ಬಾಹ್ಯ ಜಗತ್ತಿನಲ್ಲಿ ಏನೆಲ್ಲ ಆಗುತ್ತಿದೆ ಎಂಬುದನ್ನು ತಿಳಿಯದೆ ನಾವು ಹಿಂದುಳಿದಿದ್ದೇವೆ’ ಎಂಬ ಒಂದೇ ಕಾರಣದಿಂದ ಹೀಗೆ ವಿಜ್ಞಾನ, ಕಲೆ ಮುಂತಾಗಿ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾಗಿ ವೃತ್ತಿಪರ ವಿಜ್ಞಾನ ಲೇಖಕರಾಗಲೀ, ಕಲೆಯ ಲೇಖಕರಾಗಲೀ ಅಲ್ಲದ ಆ ವಯೋವೃದ್ಧರು ತಮ್ಮ ಕಿರಿಯ ಸಾಹಿತಿಮಿತ್ರ, ಹಾಗೂ (ವೃತ್ತಿಪರರಲ್ಲದ) ವಿಜ್ಞಾನ ಲೇಖಕ ಪೂರ್ಣಚಂದ್ರ ತೇಜಸ್ವಿಯವರಲ್ಲಿ ತಮ್ಮ ಕಕ್ಕುಲಾತಿ ತೋಡಿಕೊಂಡಿದ್ದರು. ಈ ಮುಖ್ಯ ಕೃತಿಗಳೇ ಅಲ್ಲದೆ ಮಕ್ಕಳಿಗಾಗಿ ಅನೇಕ ಪುಸ್ತಕ, ಪ್ರವಾಸ ಕಥನ, ನಾಟಕಗಳನ್ನೂ ಅವರು ರಚಿಸಿದ್ದಾರೆ. ಮಕ್ಕಳೊಂದಿಗೆ ಒಡನಾಡಲು “ಬಾಲವನ’ ಉದ್ಯಾನವನ ನಿರ್ಮಿಸಿದ್ದು, ಅಲ್ಲಿ ಅವರ ಮನ ಮುದಗೊಳಿಸಿ, ಕುತೂಹಲ ತಣಿಸಲು, ಮೊದಲು ವನ್ಯ ಮೃಗಗಳನ್ನು, ಮಂಗ, ಮುಂಗುಸಿ, ಕೆಂಚಳಿಲು, ಪಕ್ಷಿಗಳು, ಸರ್ಪ, ಹೆಬ್ಬಾವು, ಚಿತ್ತಾರದ ಜಿಂಕೆ, ಕಡವೆಗಳನ್ನು ಸಾಕಿದ್ದು ಅವರ ಅಮೋಘ ಜೀವನೋತ್ಸಾಹಕ್ಕೆ ಸಾಕ್ಷಿ. ಇಲ್ಲಿಯೇ ಪ್ರಥಮವಾಗಿ ಅವರು ಮಕ್ಕಳ “ಜಾಲಿ ರೈಡ್’ಗಾಗಿ ಮಿನಿ ಟ್ರೇನ್ ನಿರ್ಮಿಸಿದರು.

ಕಾರಂತರ ಸೃಷ್ಟ್ಯಾತ್ಮಕ ಬರವಣಿಗೆಯನ್ನು “ಸಾಮಾಜಿಕ’ ಎಂಬ ಹೆಸರಿಟ್ಟು ಅರ್ಥೈಸಲಾಗುತ್ತದೆ. ವ್ಯಕ್ತಿ-ಸಮಾಜ ಸಂಬಂಧಗಳ ಕುರಿತಾದಂತೆ ಅವರಿಗಿದ್ದ ಗಹನವಾದ ಅರಿವು ಇದರ ಹಿನ್ನೆಲೆಗಿದೆ. “ಒಂದು ಅರ್ಥದಲ್ಲಿ ಮಾತ್ರವೇ ನನ್ನ ಬಾಳು ನನ್ನದೆಂದೆ. ಆದರೆ ವಿಶಾಲವಾದ ಅರ್ಥದಲ್ಲೂ, ಸತ್ಯವನ್ನು ನೋಡಹೋದರೂ ಈ ಬಾಳು ಅನ್ಯರೊಡನೆಯೂ ಬೆರೆತಿದೆ. ನಾನು ಸಮಾಜ ಜೀವನದ ಅಂಶವಲ್ಲವೇ? ಅದರ ಸುಖ ದುಃಖ ನನ್ನದಲ್ಲವೇ?’ ಎಂದು ಕೇಳಿಕೊಳ್ಳುವ ಕಾರಂತರು ಆಧುನಿಕ ಭಾರತದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ, ಒಂದು ಶ್ರೇಷ್ಠ ದರ್ಜೆಯದೆನ್ನಬಹುದಾದ ಪ್ರಜ್ಞೆ’ಯಿಂದ “ಪರಿಸರ’ವನ್ನು, ಅದರ ಪ್ರಭಾವವನ್ನು ಅರಿತುಕೊಳ್ಳಲೆತ್ನಿಸಿದವರು ಎನ್ನಲಡ್ಡಿಯಿಲ್ಲ. ಈ ಅಂಶದಿಂದಾಗಿ ಅವರದನ್ನು “ವಾಸ್ತವವಾದಿ’ ಬರವಣಿಗೆ ಎಂದೂ ವರ್ಗೀಕರಿಸಲಾಗುತ್ತದೆ. ಈ “ರಿಯಲಿಸ್ಟ್’ ಪ್ರಭೇದ ಆ ಯುಗದ ತಲ್ಲಣ, ರೋಮಾಂಚನಗಳನ್ನು ಸಶಕ್ತ ರೂಪಕಗಳೊಂದಿಗೆ ದಟ್ಟವಾಗಿ, ಸಂಕೀರ್ಣವಾಗಿ ಕಾರಂತರ ಕಾದಂಬರಿಗಳ ಮೂಲಕ ಬಿಂಬಿಸುತ್ತಿದೆ ಎನ್ನುವುದು ವಿಮರ್ಶಕರ ಅಭಿಪ್ರಾಯ. ಪರಂಪರಾಗತ ಭಾರತೀಯ ಸಮಾಜ ಇಂಗ್ಲಿಷರ ಆಕ್ರಮಣದಿಂದ ಘಟಿಸಿದ ವಸಾಹತುಶಾಹಿ ಪ್ರಭಾವದಲ್ಲಿ ಸಿಲುಕಿಕೊಳ್ಳುವುದು, ಇದರೊಂದಿಗೇ ಆಧುನಿಕ ಶಿಕ್ಷಣದಿಂದ ಹುಟ್ಟಿದ ಹೊಸ ಮೌಲ್ಯಪ್ರಜ್ಞೆ, ಸ್ವಾತಂತ್ರ್ಯ ಗಳಿಸಿಕೊಳ್ಳುವ ಹಂಬಲದಿಂದ ಹುಟ್ಟಿದ ಹೊಸ ರಾಷ್ಟ್ರೀಯ ಪ್ರಜ್ಞೆ, ಗಂಡು- ಹೆಣ್ಣಿನ ಸಮಾನ ಸಂಬಂಧ, ದಾಂಪತ್ಯ ಕುರಿತಾದ ತಿಳಿವು, ಆರೋಗ್ಯಪೂರ್ಣ ಲೈಂಗಿಕತೆಯಿಂದ ಈ ಸಂಬಂಧ ವಿಕಸಿತಗೊಳ್ಳುತ್ತದೆ ಎಂಬ ಪ್ರತಿಪಾದನೆ…ಈ ಎಲ್ಲವೂ ಅವುಗಳಲ್ಲಿ “ಪ್ರಧಾನ ಆಶಯ’ಗಳು. ಇದಕ್ಕೆ ಅನುಗುಣವಾಗಿ, ೧. ನಿಸ್ಸೀಮ ನಿರ್ಲಕ್ಷ್ಯದವರು ೨. ಮಣ್ಣಿಗೆ ಅಂಟಿಕೊಂಡವರು ೩. ಮಣ್ಣು ತೊರೆದವರು ೪. ಮರಳಿ ಮಣ್ಣಿಗೆ ಬಂದವರು…ಎಂಬ ವರ್ಗವಿನ್ಯಾಸವೊಂದು ಅವರ ಪಾತ್ರಗಳಲ್ಲಿ ಮೂಡಿದೆ ಎಂದೂ ವಿಮರ್ಶಕರು ಗುರುತಿಸುತ್ತಾರೆ. ನಾಲ್ಕನೆಯ ಮರಳಿ ಮಣ್ಣಿಗೆ ಬರುವ ವರ್ಗವನ್ನು ಲೇಖಕರು ಹೆಚ್ಚು ಪುರಸ್ಕರಿಸುತ್ತಾರೆ ಎನ್ನುವುದು ಒಂದು ಕಲ್ಟ್ ಕಾದಂಬರಿಯ ಸ್ಥಾನಕ್ಕೆ ಏರಿರುವ “ಮರಳಿ ಮಣ್ಣಿಗೆ’ ಕೃತಿಯಿಂದ ಸುಸ್ಪಷ್ಟ. ತಮ್ಮ ಸಮಾಜ-ಸಂಸ್ಕೃತಿಗ ಬಗೆಗೆ ಒಂದು ಬಗೆಯ ಪ್ರೀತಿ-ದ್ವೇಷದ ಸಂಬಂಧ ಇಟ್ಟುಕೊಂಡಿರುವ ಕಾರಂತರ ಹೆಚ್ಚಿನ ಕಾದಂಬರಿಗಳಲ್ಲಿ “ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ, ಮನಸ್ಸಿಗೆ ಅಂಟಿದ ಸಂಸ್ಕೃತಿಯ ಹೊಟ್ಟನ್ನು ಕಳೆದು, ಎಚ್ಚರದಿಂದ ಬದುಕಿ, ಬುದ್ಧಿ-ಭಾವಗಳ ಸಮನ್ವಯ ಸಾಧಿಸಿಕೊಳ್ಳುವ, “ಗಾಂಧಿ ಹಾಗೂ ಸ್ವದೇಶಿ ಚಳವಳಿಯಲ್ಲಿ ಸಕ್ರಿಯರಾದ, ನಾಗರಿಕ ಮನಸ್ಸುಳ್ಳ, ನಗರವಾಸಿ ಅಥವಾ ನಗರದಿಂದ ಹಳ್ಳಿಗೆ ಹಿಂತಿರುಗಿದ ನಾಯಕರಿದ್ದಾರೆ ಎನ್ನುವುದು ಇವುಗಳ ಅಧ್ಯಯನದಿಂದ ಗೊತ್ತಾಗುವ ಅಂಶ.

ಒಂದು ನಿರ್ದಿಷ್ಟ ಉದಾಹರಣೆಯನ್ನು ನೋಡುವುದಾದರೆ, ಚಲನಚಿತ್ರವಾಗಿಯೂ ಪ್ರಸಿದ್ಧಿ ಗಳಿಸಿಕೊಂಡ “ಚೋಮನ ದುಡಿ’ (೧೯೩೨) ಕಾದಂಬರಿಯಲ್ಲಿ ಧಣಿಯರಾದ ಸಂಕಪ್ಪಯ್ಯ, ನಿಷ್ಠೆಯಿಂದ ನಡೆದುಕೊಂಡು ಬಂದ, ಅವರ ಹೊಲ ಗದ್ದೆಗಳಲ್ಲಿ ಮೈ ಮುರಿಯ ದುಡಿಯುವ ಚೋಮನ ಸ್ವಂತ ಸಾಗುವಳಿ ಮಾಡಬೇಕೆನ್ನುವ ಒಂಧು ಸಣ್ಣ ಆಸೆಯನ್ನೂ ಪೂರೈಸಲಾರರು. ಗೇಣಿ ಸರಿಯಾಗಿ ಕೊಡದ, ಮೈಗಳ್ಳತನದ ತಮ್ಮ ಬಾಕಿ ಒಕ್ಕಲಿಗಿಂತಲೂ ಚೋಮನೇ ಎಷ್ಟೋ ನಂಬಿಕಸ್ಥ, ದುಡಿಮೆಗಾರ ಎಂದವರು ಕಂಡುಕೊಂಡಿರುವುದು ಸಹ ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಆತ ಹೊಲೆಯ ಎನ್ನುವ ಒಂದೇ ಕಾರಣದಿಂದಾಗಿ ಪರಂಪರಾಗತ ಹಿಂದೂ ಸಮಾಜ ಚೋಮನಿಗೆ ಈ ಹಕ್ಕನ್ನು ವಂಚಿಸಿದೆ. ಆ ಸಂಪ್ರದಾಯದ ಕಪಿಮುಷ್ಠಿಯಲ್ಲಿ ಒಡೆಯ ಸಿಕ್ಕಿಕೊಂಡಿದ್ದಾನೆ. ಈ ಹಂತದಲ್ಲಿ ಪ್ರವೇಶವಾಗುವ ಆಧುನಿಕತೆ ಹಿಂದೂ ಸಮಾಜ ತನ್ನ ಜಿಗುಟುತನ ತೊಡೆದುಕೊಳ್ಳಬೇಕಾದ ಅನಿವಾರ್ಯವನ್ನು ಹೇಳುತ್ತಿದೆ. ಸಂವೇದನಾಶೀಲತೆಯಿಂದ ಅದು ತನ್ನ ಎಲ್ಲ ವರ್ಗ, ಶ್ರೇಣಿಯ ಜನರೊಂದಿಗೆ ಸ್ಪಂದಿಸದಿದ್ದರೆ ಅಲ್ಲೊಂದು ಸ್ಫೋಟಕ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂಬ ಮುನ್ನೆಚ್ಚರಿಕೆಯೂ ಅಲ್ಲಿದೆ.

ಇನ್ನು ಗಂಡು – ಹೆಣ್ಣಿನ ಸಂಬಂಧ, ಈ ನೈಸರ್ಗಿಕ ಆಕರ್ಷಣೆಯನ್ನು ಸಾಮಾಜಿಕಗೊಳಿಸಿ ಒಂದು ಸಮಾನ, ಅರ್ಥಪೂರ್ಣ ದಾಂಪತ್ಯವನ್ನು ಬೆಳೆಸಿ, ಸುಭದ್ರಗೊಳಿಸುವುದು ಹೇಗೆ ಎನ್ನುವ ಕುರಿತಂತೆಯೂ ಅವರು ತಮ್ಮ ಅನೇಕ ಕಾದಂಬರಿಗಳಲ್ಲಿ ಚಿಂತಿಸಿದ್ದಾರೆ. ಆ ಕಾಲಕ್ಕೆ ಇವೆಲ್ಲ ಕ್ರಾಂತಿಕಾರಿ ವಿಚಾರಗಳಾಗಿದ್ದವು ಎನ್ನುವುದೂ ಗಮನಾರ್ಹ. ಇದು ಅವರಿಗೆ ಸಾಧ್ಯವಾದದ್ದು, ವೈಜ್ಞಾನಿಕವಾದ, ಸಾಮಾಜಿಕ ವಿಮರ್ಶೆಯಿಂದ ಹರಿತಗೊಂಡ ಧೋರಣೆಯನ್ನು ಅವರು ತಮ್ಮದಾಗಿಸಿಕೊಂಡಿದ್ದರಿಂಧ. ವೇಶ್ಯಾವೃತ್ತಿ ಕೈಗೊಂಡಿದ್ದ ಕುಟುಂಬಗಳ ಅನೇಕ ಹೆಣ್ಣುಮಕ್ಕಳನ್ನು “ಗೌರವಾನ್ವಿತ’ ಮದುವೆಯ ಚೌಕಟ್ಟಿಗೆ ತರಲು ಅವರು ನಿಜಜೀವನದಲ್ಲಿಯೂ ಶ್ರಮಿಸಿದರು. ಅದು ಅಷ್ಟೊಂದು ಫಲಪ್ರದವಾಗದೇ ಹೋದಾಗ ಅವರು ಗಾಂಧೀಜಿಗೆ ಪತ್ರ ಬರೆದದ್ದು, ಅದಕ್ಕೆ ಉತ್ತರವಾಗಿ “ಅಂತಹ ಯುವತಿಯರು ಆಜೀವ ಬ್ರಹ್ಮಚಾರಿಣಿಯಾಗಿರಲಿ’ ಎಂದು ಬಾಪೂ ಬರೆದದ್ದು, ಇದನ್ನು ಓದಿ ಬೇಸರಗೊಂಡು, ಕಣ್ಣು ತುಂಬಿಕೊಂಡು, “ಮನುಷ್ಯ ಸ್ವಭಾವದ ಪರಿಚಯವೇ ಗಾಂಧೀಜಿಗಿಲ್ಲ; ತಾವು ಮಾಡಿದ್ದು ಎಲ್ಲರಿಂದಲೂ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆ’ ಎಂದು ನೊಂದುಕೊಂಡದ್ದು ಜನಜನಿತ. ಈ ರೀತಿಯಲ್ಲಿ ದುಕಿನ ಸಹಜ ಸ್ಪರ್ಶವಿಲ್ಲದ ಕೇವಲ ವಿಚಾರಗಳನ್ನು – ಅವು ಗಾಂಧೀಜಿಯದೇ ಆಗಿರಲಿ, ರಾಮಕೃಷ್ಣ ಪರಮಹಂಸ ಮತ್ಯಾರದೇ ಆಗಿರಲಿ, ಅದನ್ನು ಬದಿಗೆ ತರಿಸುವ ಧೀಮಂತಿಕೆ ಕಾರಂತರಲ್ಲಿದೆ. ಸಿದ್ಧ, ಶಾಸ್ತ್ರೀಯ ಸತ್ಯ, ತತ್ತ್ವಗಳಿಂದ ಬದುಕನ್ನು ಪರಿಶೀಲಿಸದೆ ನಿತ್ಯ  ಬದುಕಿನ ಎಲ್ಲ ಕ್ಷುದ್ರ ಚಟುವಟಿಕೆಗಳಿಗೆ, ಆಗುಹೋಗುಗಳಿಗೆ ಮುಖಾಮುಖಿಯಾಗಿ ಆ ಘರ್ಷಣೆಯಿಂದ ಬರುವ ಅರಿವನ್ನು ಮಾತ್ರ ಸ್ವೀಕರಿಸುತ್ತಾರೆನ್ನುವುದು ವಿಮರ್ಶಕರು  ವಿಶ್ಲೇಷಿಸಿ, ಬೆಳಗಿಸಿರುವ “ಕಾರಂತತನ’. ಪ್ರಾಸಂಗಿಕವಾಗಿ ಹೇಳಬೇಕೆಂದರೆ ಅಂದಿನ ಯುಗಕ್ಕೆ ಸ್ವಲ್ಪ ಅಪರೂಪವೇ ಎನ್ನಿಸುವ ರೀತಿಯಲ್ಲಿ, ಲೀಲಾರೊಡನೆ ವಿವಾಹ ಜರುಗಿದಾಗ ಅವರಿಗೆ ಮೂವತ್ತು ಮೀರಿತ್ತು. ಕಾಮ ಒಂದು ನಿಸರ್ಗ ಸಹಜ ಮೌಲ್ಯ, ಬ್ರಹ್ಮಚರ್ಯ, ಸನ್ಯಾಸ ಇತ್ಯಾದಿ ಕವಲುಗಳು ಜೀವವಿರೋಧಿ ಎಂಬ ವಿಚಾರಗಳನ್ನು ಒಂದು ದಟ್ಟ ಕತೆಯ ಹಂದರದಲ್ಲಿ ಭಟ್ಟಿ ಇಳಿಸುತ್ತಲೇ ಅದರ ಹಿಂದಿನ ಪ್ರೇರಣೆಯನ್ನು ಒಂದು ದೀರ್ಘ ಪ್ರಸ್ತಾವನೆಯಲ್ಲಿ “ವಿವರಿಸುವುದೂ’ ಕಾದಂಬರಿಕಾರರ ಒಂದು ಅಭ್ಯಾಸ. ಇದರಿಂದ ಆಗಿರುವ ಪ್ರಯೋಜನವೆಂದರೆ, ” …ನಮ್ಮ ಮೌಲ್ಯಜ್ಞಾನವನ್ನು ಬದುಕಿನ ವಿವರಗಳ ಮೂಲಕ ಪರೀಕ್ಷಿಸಿ ಸೂಕ್ಷ್ಮವಾಗಿಸಿರುವ ಕಾರಂತರು ಕನ್ನಡ ಸಾಹಿತ್ಯಾಸಕ್ತರಿಗೆ ಓದುಗರಿಗೆ ಎಷ್ಟೊಂದು ಪರಿಚಿತರಾಗಿಬಿಟ್ಟಿದ್ದಾರೆಂದರೆ, ಅವರು ಜೀವನದಿಂದ ಏನನ್ನು ಅಪೇಕ್ಷಿಸುತ್ತಾರೆ, ಯಾವುದನ್ನು ಮೆಚ್ಚುತ್ತಾರೆ, ಯಾವ ಗುಣಗಳಿಂದ ಬದುಕು ಸಫಲವಾಗುತ್ತದೆ ಎಂದು ತಿಳಿಯುತ್ತಾರೆ ಎಂಬುದು ಓದುಗರ ಸಂವೇದನೆಯ ಒಂದಂಶವಾಗಿ ಪರಿಣಮಿಸಿದೆ’. ಹೀಗೆಂದವರು,  ಡಾ. ಅನಂತಮೂರ್ತಿ.

ತಮ್ಮ ಇಳಿವಯಸ್ಸಿನಲ್ಲಿ ಕೈಗಾ ಅಣುಸ್ಥಾವರ ನಿರ್ಮಾಣ ವಿರೋಧಿಸಿ ಚಳವಳಿ ಮಾಡಿದ ಕಾರಂತರು ವಸಾಹತು ಚಟುವಟಿಕೆಗಳ ಮೂಲಕ ಕಾಡಿನ ಮಕ್ಕಳ ಜೀವನ ಪ್ರವೇಶಿಸುವ ಆಧುನೀಕರಣ ಪ್ರಕ್ರಿಯೆ ತಂದೊಡ್ಡುವ ಆತಂಕಗಳನ್ನು – ಈ ಕುರಿತು ಪ್ರಸ್ತುತ ತೀವ್ರ ಚರ್ಚೆಗಳು, ವಿವಿಧ ಹಿನ್ನೆಲೆಗಳಲ್ಲಿ ನಡೆಯುತ್ತಿರುತ್ತವೆ- ಎಷ್ಟೊಂದು ಮೊದಲೇ ಯೋಚಿಸಿದ್ದರೆನ್ನುವುದು ಒಂದು ಕೌತುಕ. ಅವರ “ಮುಂಗಾಣ್ಕೆ’ಗೆ ಒಂದು ನಿದರ್ಶನ. ಈ ವಿಚಾರಧಾರೆ ಅವರ “ಕುಡಿಯರ ಕೂಸು’ ಕಾದಂಬರಿಯಲ್ಲಿ ಹರಿದಿದೆ. ಕಾಡಿನ ಮಕ್ಕಳಾದ ಕುಡಿಯರು ಪ್ರಕೃತಿಯ ಒಂದು ಭಾಗವೆಂಬಂತೆ ಬದುಕುತ್ತಿರುವಾಗ, ತಮ್ಮದೇ ಆದ ರಾಜಕೀಯ ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ಆಚರಣೆ ಕಟ್ಟುಪಾಡುಗಳಡಿ ಒಂದು ಲಯ, ವಿನ್ಯಾಸ ಹಾಗೂ ವಿರೋಧಾಭಾಸದಲ್ಲಿಯೂ ಜೀವನ ಸಾಗಿಸುತ್ತಿರುವಾಗ ಸುತ್ತಲಿನ ಆಧುನಿಕ ಮನುಷ್ಯ, ರಾಜ್ಯ, ಸರಕಾರಗಳು ಹೇಗೆ ಇದನ್ನು ಸಂಭಾಳಿಸಬೇಕು ಎನ್ನುವುದನ್ನು ಈ ಕಾದಂಬರಿ ನಿರ್ವಹಿಸುತ್ತದೆ. “ಮಲೆಯ ಮಕ್ಕಳು’ ಹೆಸರಿನಲ್ಲಿ ಇದು  ಚಲನಚಿತ್ರವಾಗಿಯೂ ತೆರೆ ಕಂಡಿತು. ಒಟ್ಟಾರೆ ವಿಶ್ವ, ಅದರಲ್ಲಿನ ನಾನಾ ಸೃಷ್ಟಿ, ಈ ಹಿರಿಮೆಯನ್ನು ಅರಿತುಕೊಂಡು ಮನುಷ್ಯ ತನ್ನ ಜೀವನ ಸಾಗಿಸಬೇಕಾದ ಪರಿ…ಈ ಕುರಿತು ತುಂಬ ಔದಾರ್ಯಯುತ, ವೈಜ್ಞಾನಿಕ, ಹಿರಿದಾದ ಹಾಗೂ ಎತ್ತರದ ಯೋಚನೆಗಳನ್ನು ಕಾರಂತರು ಹೊಂದಿದ್ದುದುಕ್ಕೆ ಪುರಾವೆಗಳು  ಇಂಥಲ್ಲಿ ದೊರೆಯುತ್ತವೆ. ವನ್ಯಜೀವಿಗಳಾದ ಹುಲಿಗಳ ಅಧ್ಯಯನ ನಡೆಸಿರುವ ಅವರ ಮಗ, ಹಿರಿಯ ವಿಜ್ಞಾನಿ ಕೆ. ಉಲ್ಲಾಸ ಕಾರಂತರಿಗೆ ಮೇಲ್ಪಂಕ್ತಿ ತಂದೆಯಿಂದಲೇ ಸಿಕ್ಕಿರಬೇಕು. ತಾಯನ್ನಗಲಿದ ಹುಲಿ ಮರಿಗಳನ್ನು ಕೆಲ ಕಾಲ (ತಂದೆ) ಕಾರಂತರು ಸಂರಕ್ಷಿಸಿದ್ದರೆನ್ನುವ ವಿವರವೂ ಅವರ ಕುರಿತ “ಐತಿಹ್ಯ’ಗಳಲ್ಲಿ ಒಂದು. ಸುತ್ತಲಿನ ನಿಸರ್ಗ ಮನುಷ್ಯನ ಬದುಕಿನೊಂದಿಗೆ ಹೆಣೆದುಕೊಂಡಿದೆ. ವಿಶ್ವದ “ನಾಳೆ’ಯಷ್ಟೇ ಮನುಷ್ಯನ “ನಾಳೆ’ಯೂ ನಿಗೂಢ. ಹೀಗಿರುವಾಗ ಮನಸ್ಸನ್ನು ಹರಿತವಾಗಿಟ್ಟುಕೊಂಡು ಸುತ್ತಲಿನ ಆಗುಹೋಗುಗಳಿಗೆ ಚುರಕಾಗಿ ಸ್ಪಂದಿಸುತ್ತಿರಬೇಕು. ಹಾವಿನ ನಾಲಗೆಯಂತೆ ಸತತ ಮುಂದಿನ ದಾರಿ ಹುಡುಕುತ್ತಲೇ ಇರಬೇಕು ಎಂದು ಅಭಿಪ್ರಾಯಪಡುವ ಕಾರಂತರು ” ಈ ವಿಶ್ವವೇ ಪರಿಪೂರ್ಣತೆಗಾಗಿ ಹೆಣಗುತ್ತಿದೆಯೆಂದು ತಿಳಿದ ನಾನು ಸರ್ವಜ್ಞಪಟ್ಟವನ್ನು ವಹಿಸಿಕೊಳ್ಳಲಾರೆ’ ಎಂದು ನಮ್ರರಾಗುತ್ತಾರೆ.

ಈ ಜೀವನದೃಷ್ಟಿಯ ಒಂದು ತಾರ್ಕಿಕ ಅಂತ್ಯವೆಂಬಂತೆ “ದೇವರು’ ಅಥವಾ “ಸರ್ವಶಕ್ತ’ನೊಬ್ಬನ ಇರವಿಗೆ ಸಂಬಂದಿಸಿದಂತೆಯೂ ಅವರು ಮನಸ್ಸನ್ನು ತೆರೆದಿಟ್ಟುಕೊಂಡೇ ಇದ್ದಾರೆ. ಅವರು ಪುತಿನ/ಡಿವಿಜಿ ಮುಂತಾದವರಂತೆ ಕಟ್ಟಾ ಆಸ್ತಿಕರೂ  ಅಲ್ಲ; ಮೂರ್ತಿರಾಯರಂತೆ ಕಠೋರ ನಾಸ್ತಿಕರೂ ಅಲ್ಲ. ಬದಲಾಗಿ ಕಾಣದ್ದರ ಬಗ್ಗೆ ಇನ್ನೂ ಕುತೂಹಲ ಇಟ್ಟುಕೊಂಡಿರುವ “ಅನಾಸ್ತಿಕರು’. ಅನೇಕ ಬಾರಿ ಅವರು “ದೇವರನ್ನು ನಂಬಿದವರ ಮೇಲೆ ನಂಬಿಕೆಯಿಟ್ಟು’ ಎಂಬ ಮಾರ್ಮಿಕ ಪದಪುಂಜ ಬಳಸಿರುವುದನ್ನು ನೋಡಬಹುದು. ಅದೇ ಉಸಿರಿನಲ್ಲಿ ” ನಾನು ಬದುಕಿನ ನಾಳೆಯ, ಅಂದರೆ “ಪರ’ದ ಚಿಂತೆಯನ್ನು ಹೊತ್ತವನಲ್ಲ. ಆತ್ಮ, ಪ್ರಾರಬ್ಧ ಕರ್ಮ, ಪರಲೋಕಗಳ ನಂಬಿಕೆಗಳನ್ನು ಬೆಳೆಸಿಕೊಂಡು ಇಂದನ್ನು ತಾತ್ಸಾರದಿಂದ ಕಂಡವನೂ ಅಲ್ಲ. “ಇಹ’ವೇ ನನ್ನೆಲ್ಲ ಸಾಧನೆಗಳ ರಂಗಸೃಳ’ ಎಂದು ನಿಸ್ಸಂದಿಗ್ಧವಾಗಿ ಬಯಲುಮಾಡುತ್ತಾರೆ. “ಬದುಕಿನಲ್ಲಿ ಕೊಟ್ಟುದಕಿಂತ ಕೊಂಡುದು ಜಾಸ್ತಿಯಾಗಬಾರದು’ ಎಂದು ಎಚ್ಚರ ವಹಿಸುವ ಅವರ ಕೆಲ ಪಾತ್ರಗಳ ಹಿಂದೆ, “ಪರರಿಗೆ ಸಹಾಯವನ್ನು ಮಾಡದ ವ್ಯಕ್ತಿ ಪರರಿಗೆ ಪೀಡೆಯಾಗಬಾರದಷ್ಟೆ’  ( ಲಿವ್ ಅಂಡ್ ಲೆಟ್ ಲಿವ್ ಎಂಬುದಕ್ಕೆ ಬಲು ಹತ್ತಿರ ಇದು) ಎಂಬ ತಿಳಿವಿನ ಹಿಂದೆ ಈ ಎಲ್ಲ ಜೀವನದರ್ಶನ ಇದೆ. ಸಮಾಜ ಸುಧಾರಣೆಯೊಂದಿಗೆ ರಾಜಕೀಯದಲ್ಲೂ ಸಕ್ರಿಯರಾಗಲು ಒಮ್ಮೆ ಅವರು ಯತ್ನಿಸಿದ್ದರು. ೧೯೫೨ರಲ್ಲಿ ಕಾಂಗ್ರೆಸ್‌ಗೆ  ಎದುರಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. (ಅವರ ಹಿರಿಯ ಸಹೋದರ ಕೆ.ಆರ್. ಕಾರಂತ ೧೯೪೦ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಚಿವರಾಗಿದ್ದರಂತೆ). ಸಾರ್ವಜನಿಕ ಜೀವನವನ್ನು ಹೆಚ್ಚು ನೇರ, ಜವಾಬ್ದಾರಿಯುತ, ಮಾನವೀಯ ಮಾಡಲು ಇಂತಹದೊಂದು ಅಧಿಕಾರ ಬೇಕು ಎಂದು ಅವರಿಗೆ ಅನ್ನಿಸಿದ್ದು ತೀರಾ ಸ್ವಾಭಾವಿಕ. ಹೀಗೆ  ತೀವ್ರವಾಗಿ “ಪೊಲಿಟಿಕಲಿ ಅವೇರ್’ ಆಗಿದ್ದ ಕಾರಣದಿಂದಲೇ ತುರ್ತುಪರಿಸ್ಥಿತಿ ಹೇರಿಕೆ ವಿರುದ್ಧ ತಮ್ಮ  ಪ್ರತಿಕ್ರಿಯೆ ದಾಖಲಿಸಲು ಸರಕಾರ ನೀಡಿದ್ದ  “ಪದ್ಮ ಭೂಷಣ’ವನ್ನು ನಿರ್ಮೋಹದಿಂದ ಹಿಂತಿರುಗಿಸಿದ್ದರು.

ಪ್ರಯೋಗಶೀಲತೆ ಕಾರಂತರ ವ್ಯಕ್ತಿತ್ವದಲ್ಲಿ ತಾನೇ ತಾನಾಗಿ ಪ್ರಕಟವಾಗುವ ಗುಣ. “ವಸಂತ’ ಪತ್ರಿಕೆ ಹುಟ್ಟುಹಾಕಿದಾಗ ಅದರ ಪುಟ ತುಂಬಿಸಲು ಅನೇಕ ವಿಷಯಗಳನ್ನು ಅಭ್ಯಸಿಸಿ ಬರೆಯುತ್ತಾರೆ. ವಿಪುಲವಾಗಿ ಅನುವಾದ ಮಾಡುತ್ತಾರೆ. ತಮ್ಮ ಲೇಖನಗಳಿಗೆ ತಾವೇ ಚಿತ್ರ ಬರೆದು ಇಲ್ಲಸ್ಟ್ರೇಟ್ ಮಾಡುತ್ತಾರೆ. ಅವರೇ ರಚಿಸಿದ ರಕ್ಷಾಪುಟಗಳಿರುವ ಕೆಲ ಆರಂಭಿಕ ಕಾದಂಬರಿಗಳಂತೂ ದಿವ್ಯವಾಗಿವೆ. ಪಾರಂಪರಿಕ ಯಕ್ಷಗಾನದೊಂದಿಗೆ “ಬ್ಯಾಲೆ’ ನೃತ್ಯಪ್ರಕಾರವನ್ನು ಸಂಯೋಜಿಸಿ ಅನೇಕ ಪ್ರಯೋಗಗಳನ್ನು ಕೈಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸ್ವೀಡಿಷ್ ಅಕಾಡೆಮಿಯ ಗೌರವವೂ ದೊರೆಯುತ್ತದೆ. ಪ್ರಾಯಕ್ಕೆ ಬಂದಿದ್ದ ಹಿರಿಯ ಮಗ ಹರ್ಷನ ಅಕಾಲ ಮರಣ, ಚಲನಚಿತ್ರವೊಂದರ ನೆಗೆಟಿವ್ ಸಂಪೂರ್ಣವಾಗಿ ಸುಟ್ಟುಹೋದದ್ದು, ತಾವು ನಂಬಿದ್ದ ವ್ಯಕ್ತಿಗಳಿಂದಲೇ ಅನುಭವಿಸಿದ ವಂಚನೆ…ಯಾವುದೂ  ಅವರನ್ನು ಕುಗ್ಗಿಸುವುದಿಲ್ಲ. ನಿರಂತರ ಓಡಾಟ, ಬದುಕಿನ, ಮನುಷ್ಯ ಸ್ವಭಾವದ ಸೂಕ್ಷ್ಮ ಅವಲೋಕನದಿಂದ ದೊರೆತ ದಟ್ಟ ಜೀವನಾನುsವವನ್ನು ಅವರು ಒಂದಾದ ನಂತರ ಒಂದು ಕಾದಂಬರಿಯಲ್ಲಿ ಬರೆದೇ ಬರೆಯುತ್ತಾರೆ. ಈ ಅಸ್ಖಲಿತ ಬರವಣಿಗೆಯ ಯಶಸ್ಸಿನ ಹಿಂದೆ ಒಂದು ಅಸಾಮಾನ್ಯ ವೇಗವೂ ಇದೆ: ಚೋಮನ ದುಡಿಯನ್ನು ಐದು ದಿನಗಳಲ್ಲಿ, ಬೆಟ್ಟದ ಜೀವವನ್ನು ಆರು ದಿನಗಳಲ್ಲಿ, ಮರಳಿ ಮಣ್ಣಿಗೆಯನ್ನು ಮೂವತ್ತು ದಿನಗಳಲ್ಲಿ ಹಾಗೂ ಬಾಲ ಪ್ರಪಂಚವನ್ನು ಕೇವಲ ನೂರಿಪ್ಪತ್ತು ದಿನಗಳಲ್ಲಿ ಬರೆದು ಮುಗಿಸಿದರೆನ್ನುವುದು ಈ ಕಂಪ್ಯೂಟರ್ ಯುಗದಲ್ಲೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾದ ವಿವರ! ಅವರ ಸಮಯ ಪ್ರಜ್ಞೆ, ಅದರ ಪರಿಪಾಲನೆ, ಹಣಕಾಸಿನ ಕರಾರುವಾಕ್ಕಾದ ಲೆಕ್ಕಾಚಾರ, ಶಿಸ್ತು, ಮಾನವೀಯತೆ, ನಿಷ್ಠುರ ನಿಲುವು, ಪ್ರೀತಿಯ ಸಹಾಯ…ಇತ್ಯಾದಿ ಗುಣ ವಿಶೇಷಗಳ ಕುರಿತಂತೂ ಹಲವು ತಲೆಮಾರುಗಳ ಓದುಗರು ಚಪ್ಪರಿಸುವ ದಂತಕತೆಗಳು ಸಾಕಷ್ಟಿವೆ.

“ಬಾಳ್ವೆಯ ಪ್ರಶ್ನೆಯು ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವಂಥ ಪ್ರಶ್ನೆ ಎಂದೂ ಆಗಿರಲಾರದು…ಅವರವರು ಬಾಳಿ, ಬದುಕಿ, ಅನುಭವಿಸಿ, ಹೋರಾಡಿ…ಅವನವನ  ಜೀವನಕ್ಕೆ ಅವನೇ ದುಡಿದು ಉತ್ತರ ಗಳಿಸಬೇಕು. ಅದರಿಂದ ಮಾತ್ರ ಜೀವನ ಸಾರ್ಥಕ’ ಎಂದು ದೃಢವಾಗಿ ನಂಬಿ, ಅದರಂತೆ ನಡೆದು, ಬೆಳೆಸಿಕೊಂಡಿದ್ದ ಹಂಬಲದಂತೆ “ಪ್ರಪಂಚದಿಂದ ಕೊಂಡುದುದಕಿಂತ ಅತಿ ಹೆಚ್ಚು ಅದಕ್ಕೆ ಕೊಟ್ಟೇ’ ಕಾರಂತರು ತಮ್ಮ ೯೫ನೇ ವಯಸ್ಸಿನಲ್ಲಿ ಉಡುಪಿಯ ಮಣಿಪಾಲದಲ್ಲಿ ೧೯೯೭ರಲ್ಲಿ ಕೊನೆಯುಸಿರೆಳೆದರು.