ಕಾರಕಾದಿ ದೋಷಗಳು
ಉತ್ಪಲಮಾಲೆ || ಕಾರಕ-ದೋಷಮುಂ ವಚನ-ದೋಷಮುಮಾ ಗುರುದೋಷಮುಂ ಲಘೂ- |
ಚ್ಚಾರಿತ-ಶಬ್ದ-ದೋಷಮುಮದಂತೆ ಸಮುಚ್ಚಯ-ಜಾತದೋಷಮುಂ |
ಭೂರಿ-ವಿಕಲ್ಪ-ದೋಷಮುಮದಿನ್ನವಧಾರಣ-ದೋಷಮುಂವಿಶಂಕಾ
ರಚಿತೋರು-ದೋಷಮುಮನೀ ತೆಱದಿಂ ತಱೆಸಲ್ಗೆ ಪಂಡಿತರ್ ||೧೧೩||
ಕಾರಕಗಳು
ಉತ್ಪಲಮಾಲೆ || ಕಾರಕಮಾಱು ಕರ್ಮ-ಕರಣಾದಿಕದಿಂ ಪ್ರಥಮಾದಿ-ಭೇದ-ನಿ-
ರ್ಧಾರಣದಿಂದದಂ ಪಿಡಿದು ನಿಲ್ವ ವಿಭಕ್ತಿಗಳೇೞೆನಿಕ್ಕುಮಾ |
ಚಾರು[1]-ಗುಣೋದಯಂ ವಚನಮೇಕ-ಬಹು-ಕ್ರಮ ದಿಂ[2]ದೆರೞ್ತೆ ಱ-
ಕ್ಕಾರಯೆ ಪೇೞ್ವೆನಿಂತಿವಱ ಜಾತಿ-ವಿಭಾಗ-ಗುಣಾಗುಣಂಗಳಂ ||೧೧೪||
೧೧೩. ‘ಕಾರಕದೋಷ’ (-ನಾಮವಿಭಕ್ತಿಗಳ ಪ್ರಯೋಗದಲ್ಲಿ ತಪ್ಪು ಮಾಡುವುದು), ‘ವಚನದೋಷ’ (ಏಕ-ಬಹುವಚನಗಳ ಅಪಪ್ರಯೋಗದ ದೋಷ), ‘ಗುರು-ದೋಷ’ (=ಛಂದಶ್ಯಾಸ್ತ್ರನಿಯಮಕ್ಕೆ ವಿರುದ್ಧವಾಗಿ ಗುರ್ವಕ್ಷರದ ಪ್ರಯೋಗ), ‘ಲಘೂಚ್ಚಾರಿತ-ಶಬ್ದದೋಷ’ (=ಅದೇ ನಿಯಮವಿರುದ್ಧವಾಗಿ ಲಘುಗಳ ಉಚ್ಚಾರಣೆಯ ಛಂದೋದೋಷ), ‘ಸಮುಚ್ಚಯ-ದೋಷ’ (=‘ಊ’ ಇತ್ಯಾದಿ ಸಮುಚ್ಚಯಗಳ ಅಪಪ್ರಯೋಗ), ‘ವಿಕಲ್ಪದೋಷ’ (=ಅನೇಕವಾಗಿ ಅದೋ ಇದೋ ಎಂದು ವಿಕಲ್ಪಗಳನ್ನು ಹೇಳುವಾಗಿನ ದೋಷ). ‘ಅವಧಾರಣದೋಷ’ (=ನಿಯತಾರ್ಥದಲ್ಲಿ ‘ಎ’ ಮುಂತಾದ ಅವಧಾರಣೆಗಳನ್ನು ಬಳಸುವಲ್ಲಿ ದೋಷ), ‘ವಿಶಂಕಾದೋಷ’ (=ಸಂಶಯವನ್ನು ತೋರಿಸಲು ಅವನೋ ಇವನೋ ಎಂದು ಮುಂತಾಗಿ ಹೇಳುವಲ್ಲಿ ದೋಷ)-ಇವನ್ನು ಕೂಡ ದೋಷಗಳ ಪರಿಗಳೆಂದು ಪಂಡಿತರು ನಿಶ್ಚಯಿಸಿಕೊಳ್ಳಬೇಕು.
೧೧೪. (ಕ್ರಿಯೆಯೊಡನೆ ಅನ್ವಯಿಸುವ) ಕಾರಕಗಳು ಆರು ಬಗೆ-ಕರ್ಮ, ಕರಣ ಮುಂತಾದವು (ಮುಂತಾದವು ಎಂದರೆ ಕರ್ತೃ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣ; ಸಂಬಂಧವನ್ನು ಪಾಣಿನಿವ್ಯಾಕರಣದಲ್ಲಿ ಕಾರಕವೆನ್ನುವುದಿಲ್ಲ. ಕನ್ನಡದಲ್ಲಿ ಷಷ್ಠಿಗೂ ಕಾರತ್ವವುಂಟೆನ್ನುವುದಾದರೆ ಕರ್ತೃವಿಗೆ ಕಾರಕತ್ವವಿಲ್ಲವೆಂದು ಭಾವಿಸಬೇಕು.) ಪ್ರಥಮಾ ಮೊದಲಾ ಬಗೆಗಳನ್ನೊಳಗೊಂಡ ವಿಭಕ್ತಿಗಳು ಏಳು; ‘ವಚನ’ವು ಏಕವಚನ ಮತ್ತು ಬಹುವಚನವೆಂದು ಎರಡು ಬಗೆ. ಇನ್ನು ಇವುಗಳನ್ನೆಲ್ಲ ವಿಂಗಡಿಸಿಕೊಂಡು, ಹೇಗಿದ್ದರೆ ಗುಣ, ಹೇಗಿದ್ದರೆ ದೋಷವೆಂಬುದನ್ನು ವಿವರಿಸುವೆನು-
ಚಂಪಕಮಾಲೆ || ನರಪತಿ ಬಂದನಾ ನೃಪನನೞ ಯೆ ಕಾಣ್ಬುದು ತನ್ನರೇಂದ್ರನಿಂ
ಧರಣಿ ಸನಾಥೆ ಭೂಪತಿಗೆ ಕಪ್ಪವನೀ[3]ಯವನೀಶನತ್ತಣಿಂ |
ಪರಿಭವಮಂ ಕೞಲ್ಚುವುದಧೀಶ್ವರನಾ ದಯೆ ಸಾಲ್ಗುಮಾ ಮಹೀ-
ಶ್ವರನೊಳಿದಪ್ಪುದೆಂಬುದಿದು ಕಾರಕ-ಯುಕ್ತ-ವಿಭಕ್ತ್ಯನುಕ್ರಮಂ ||೧೧೫||
ಕಾರಕದೋಷ
ಚಂಪಕಮಾಲೆ || ವರ[4]ಮೆಮಗೀಗೆ ದೇವತೆಗಳಾದರದಿಂ ಕರುಣಿಪ್ಪುದಕ್ಕೆ ಬಂ-
ಧುರ-ಗುಣ-ಬಂಧು-ಸಂತತಿಯನೆಂಬುದು ಕಾರಕ-ದೋಷಮಾಗಳುಂ |
ವರ*ಮನಮೋಘಮೀಗೆಮಗೆ ದೇವತೆಗಳ್ಕರುಣಿಪ್ಪುದಕ್ಕೆ ಬಂ-
ಧುರ-ಗುಣ-ಬಂಧು-ಸಂತತಿಗೆ ನಿಕ್ಕುವಮೆಂಬುದದುಷ್ಟಕಾ[5]ರಕಂ ||೧೧೬||
೧೧೫. ‘ನರಪತಿ ಬಂದನು’ (ಪ್ರಥಮಾವಿಭಕ್ತಿ), ‘ಆ ನರಪತಿಯನ್ನು ಪ್ರೀತಿಯಿಂದ ಕಾಣಬೇಕು’ (ದ್ವಿತೀಯ), ‘ಆ ನರೇಂದ್ರನಿಂದ ಭೂಮಿ ಸನಾಥೆ’ (ತೃತೀಯಾ), ‘ಭೂಪತಿಗೆ ಕಪ್ಪವನ್ನು ಕೊಡಲಿ’ (ಚತುರ್ಥೀ), ‘ಆವನೀಶನತ್ತಣಿಂದ ಪರಿಭವವನ್ನು ಹೋಗಲಾಡಿಸಬೇಕು’ (ಪಂಚಮೀ), ‘ಅಧೀಶ್ವರನ ದಯೆ ಸಾಕು’ (ಷಷ್ಠೀ) ‘ಆ ಮಹೀಶ್ವರನಲ್ಲಿ ಇದು ಆಗುವುದು’ (ಸಪ್ತಮೀ)-ಎಂಬವು ಅನುಕ್ರಮವಾಗಿ ನಾಮವಿಭಕ್ತಿಗಳಿಗೆ ಉದಾಹರಣೆಗಳು.
೧೧೬. ‘ದೇವತೆಗಳು ನಮಗೆ ವರವು ಕೊಡಲಿ ‘ತಪ್ಪದೆ ಬಂಧುರಗುಣ ಬಂಧುಸಂತತಿಯನ್ನು ದಯೆದೋರಲಿ’-ಎಂಬ ಪ್ರಯೋಗಗಳು ಕಾರಕದೋಷಕ್ಕೆ ಉದಾಹರಣೆಗಳು. ಅವನ್ನೇ ‘ದೇವತೆಗಳು ನಮಗೆ ಅಮೋಘವಾಗಿ ವರವನ್ನು ಕೊಡಲಿ’, ‘ಬಂಧುರಗುಣಬಂಧುಸಂತತಿಗೆ ತಪ್ಪದೆ ದಯೆದೋರಲಿ’ ಎಂದು ತಿದ್ದಿ ಕೊಂಡರೆ ಕಾರಕದೋಷ ತಪ್ಪುವುದು.
ಉತ್ಪಲಮಾಲೆ || ನಿಕ್ಕುವಮಿಂತುಮಲ್ಲದ[6]ದಱ ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ-
ಯ್ತಕ್ಕುಮನುಕ್ರ*ಮಾನುಗತದಿಂ ಬರ[7]ಮೀಗೆಮಗೆಂಬ ಕಾರಕಂ |
ಸಕ್ಕದವೇನೊ ಕಾ[8]ರ ವಿಭಕ್ತಿಯೊಳೊಂದೆ ಸಮಾಸ-ಯುಕ್ತಿ ಲೇ
ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ ||೧೧೭||
Leave A Comment