ಕಾರಿರುಳಲ್ಲಿ ಅವಳ ಕೈ ಹಿಡಿದು ಓಡಿದೆ ನಾನು
ದೀಪವಿಲ್ಲದ ಕುರುಡು ಗಲ್ಲಿಗಳಲಿ.
ಗುಡುಗು-ಮಿಂಚನು ಬಿಟ್ಟು ಪತ್ತೆಮಾಡಿದೆ ನೀನು
ನೆಲಕು ಮುಗಿಲಿಗು ಕಣ್ಣ ಲಾಳಿಯಾಡಿ.

ದೇವಸ್ಥಾನ, ಮರದ ಬುಡ, ಚಾವಡಿ, ಛತ್ರ
ಯಾವುದೂ ಮರೆಮಾಡಲಿಲ್ಲ ನನ್ನ ನಿನ್ನಿಂದ.
ನಡುದಾರಿಯಲ್ಲಿ ಕಪಾಳಕ್ಕೆರಡು ಬಿಗಿದು, ಕೈಬಿಡಿಸಿ
ಉಗಿದು ಗುಡುಗಿದೆ ನೀನು ; ಬಾ ಮನೆಗೆ ಇಲ್ಲಿಂದ.

ನಾ ಬಂದೆ. ಹೆಡೆ ಮುದುರಿ ಮಲಗಿದೆ ; ಸುತ್ತ
ತಾಳ ತಂಬೂರಿ ಧೂಪ ದೀಪ.
ಈಗಲೂ ಹಂಬಲಿಕೆ : ನನ್ನ ಪಾಡಿಗೆ ನನ್ನ
ಬಿಟ್ಟು ಬಿಡಬಾರದೆ, ಯಾಕಪ್ಪ ನಿನಗಿಷ್ಟು ಕೋಪ?