ಮಿಚಿಗನ್ ರಾಜ್ಯದ ಡೆಟ್ರಾಯಿಟ್ ಎಂಬ ಈ ನಗರ ಜಗದ್ ವಿಖ್ಯಾತವಾಗಿರುವುದು, ಮೋಟಾರು ಕಾರುಗಳ ಕೈಗಾರಿಕೆಯ ಪಿತಾಮಹ ಹೆನ್ರಿಫೋರ್ಡ್‌ನಿಂದ. ಒಂದು ಕಾಲಕ್ಕೆ ಫೋರ್ಡ್ ಕಾರುಗಳು ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಗಿ ವ್ಯಾಪಿಸಿಕೊಂಡಿದ್ದವು. ಈಗ ಆ ಸ್ಥಾನವನ್ನು ಜನರಲ್ ಮೋಟಾರ‍್ಸ್ ಕಂಪನಿ ಆಕ್ರಮಿಸಿಕೊಂಡಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಮೋಟಾರು ವಾಹನಗಳು ಇಲ್ಲಿ ತಯಾರಾಗುವುದರಿಂದ ಈ ಊರಿಗೆ ‘ಮೋಟೌನ್’  ಎಂದೂ ಕರೆಯಲಾಗಿದೆ. ಹಾಗೆಯೇ ಈ ನಗರ ಹಿಂಸಾಚಾರಗಳಿಗೂ ಹೆಸರಾಗಿರುವುದರಿಂದ, ‘ಕ್ರೈಮ್‌ಟೌನ್’ (ಅಪರಾಧಗಳ ನಗರ) ಎಂದೂ ಹೇಳಲಾಗಿದೆ. ಈ ವರ್ಷ ಈ ಊರಿನಲ್ಲಿ ಈಗಾಗಲೇ ಇನ್ನೂರ ಐವತ್ತು ಕೊಲೆಗಳಾಗಿವೆಯಂತೆ. ಹದಿಹರೆಯದ ತಲೆಕೆಟ್ಟ ಹುಡುಗರು ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಉಂಟಾದ ಕೊಲೆಗಳೇ ಅಧಿಕ ಸಂಖ್ಯೆಯವಾಗಿವೆ ಎಂದು ತಿಳಿದುಬಂದಿದೆ. ಇದರಲ್ಲಿ ಕಪ್ಪುಜನರ ಪಾಲೂ ಧಾರಾಳವಾಗಿ ಸೇರಿಕೊಂಡಿದೆಯಂತೆ. ಅನೆಕ ಬಗೆಯ ಮಾನಸಿಕ  ಅಸ್ವಾಸ್ಥ್ಯಗಳಿಂದ ನರಳುವ ಅಮೆರಿಕಾದ ತರುಣ ಜನಾಂಗದಿಂದಾಗಿ, ಈ ಬಗೆಯ ಅಪರಾಧಗಳು ಇಲ್ಲಿ ಮಾತ್ರವಲ್ಲ, ದೇಶಾದ್ಯಂತ ಈಚೆಗೆ ಹೆಚ್ಚತೊಡಗಿವೆಯಂತೆ.

ಇಲ್ಲಿ ದಿನ ಬೆಳಗಾದರೆ ಪ್ರತಿಯೊಂದು ಮನೆಯಲ್ಲೂ ಒಂದು ದೊಡ್ಡ ಕಂತೆ ವೃತ್ತಪತ್ರಿಕೆಗಳನ್ನು ತರಿಸುತ್ತಾರೆ. ಬಿಡುವಿಲ್ಲದ ದುಡಿಮೆಗೆ ತಮ್ಮನ್ನು ಬಿಗಿದುಕೊಂಡ ಜನ ಇಷ್ಟೊಂದು ವೃತ್ತಪತ್ರಿಕೆಗಳನ್ನು ಓದಲು ಸಮಯವೆಲ್ಲಿದೆ ಎಂದು ನಾನು ಆಶ್ಚರ್ಯಪಟ್ಟಿದ್ದೇನೆ. ಸುಮ್ಮನೆ ಮುಖ್ಯ ಶೀರ್ಷಿಕೆಗಳ ಮೇಲೆ ಕಣ್ಣಾಡಿಸುತ್ತಾರೋ ಏನೋ. ಅಲ್ಲದೆ ಈ ಪತ್ರಿಕೆಗಳೂ ಸಹ ಒಂದೇ ಕ್ಷೇತ್ರಕ್ಕೆ ಸಂಬಂಧಪಟ್ಟವುಗಳಲ್ಲ. ಹೀಗಾಗಿ ವ್ಯಾಪಾರಕ್ಕೆ, ಉದ್ಯೋಗಕ್ಕೆ, ಕಲೆಗೆ, ಹೆಂಗಸರಿಗೆ, ಮಕ್ಕಳಿಗೆ, ಕ್ರೀಡೆಗಳಿಗೆ – ಹೀಗೆ ವಿವಿಧ ವಲಯಗಳ ಸುದ್ದಿ ಹಾಗು ಜಾಹೀರಾತುಗಳಿಗೆ ಮೀಸಲಾಗಿವೆ ಇವು. ಶ್ರೀನಿವಾಸ ಭಟ್ ಅವರ ಮನೆಯಲ್ಲಿ ಬೆಳಿಗ್ಗೆ ಕಾಫಿ ಕುಡಿಯುತ್ತಾ ಬಂದು ಬಿದ್ದ,  ಒಂದು ರಾಶಿ ವೃತ್ತಪತ್ರಿಕೆಗಳಲ್ಲಿ, ಅಂದಿನ ಸುದ್ದಿ ಪತ್ರಿಕೆಯೊಂದನ್ನು ಎತ್ತಿಕೊಂಡು ಕಣ್ಣಾಡಿಸಿದೆ. ಆವತ್ತಿನ ಪ್ರಮುಖವಾದ ಸುದ್ದಿ ಏಯ್ಡ್ಸ್ ರೋಗಿಗಳನ್ನು ಕುರಿತದ್ದು. ಈ ರೋಗ ಮುಖ್ಯವಾಗಿ ಸಲಿಂಗ ಕಾಮಿಗಳಲ್ಲಿ ಹೆಚ್ಚೆಂದು ಹೇಳಲಾಗಿದೆ. ಹಿಂದೆ ಕುಷ್ಟರೋಗಿಗಳನ್ನು ನಡೆಯಿಸಿಕೊಂಡ ರೀತಿಯಲ್ಲಿ, ಇವತ್ತಿನ ಅಮೆರಿಕಾದ ಸಮಾಜ ಈ ಏಯ್ಡ್ಸ್ ರೋಗಿಗಳನ್ನು ಕಾಣುತ್ತಿದೆಯಂತೆ. ಈಚೀಚೆಗಂತೂ ಈ ರೋಗಿಗಳ ಸಂಖ್ಯೆ  ಅಧಿಕವಾಗುತ್ತಿದೆ ಎಂದು ಹೇಳಲಾಗಿದೆ. ಏಯ್ಸ್ಡ್ ರೋಗಿಗಳು, ಇದೀಗ ಅಮೆರಿಕಾಗೆ ಭೇಟಿ ನೀಡಿರುವ ಕ್ರೈಸ್ತ ಜಗದ್ಗುರು ಜಾನ್ ಪಾಲ್ ಪೋಪ್ ಅವರ ಸಭೆಗಳ ಎದುರು ಪ್ರದರ್ಶನ ನಡೆಯಿಸಿ, ತಮಗೂ ಚರ್ಚಿನೊಳಕ್ಕೆ ಪ್ರವೇಶ ದೊರಕಿಸಿಕೊಡಬೇಕೆಂದು ಒತ್ತಾಯ ಮಾಡಿದರೆಂಬುದು ಇಂದಿನ ಪ್ರಮುಖ ಸುದ್ದಿಯಾಗಿದೆ.

ಶ್ರೀ ಶ್ರೀನಿವಾಸ ಭಟ್ ಅವರು ಎಂಜಿನಿಯರ್, ಕನ್ನಡ ನಾಡಿನಿಂದ ಹಲವು ವರ್ಷಗಳ ಹಿಂದೆ ಈ ದೇಶಕ್ಕೆ ಬಂದ ಭಟ್ಟರು, ಈ ದೇಶದಲ್ಲಿ ಕೆಲಸವೊಂದನ್ನು ಸಂಪಾದಿಸಿ ನೆಲೆ ನಿಲ್ಲಲು ತಾವು ಪಟ್ಟ ಬವಣೆಗಳನ್ನು ನನಗೆ ವರ್ಣಿಸಿದರು. ಈಗೇನೋ ಒಳ್ಳೆಯ ಹೆಸರನ್ನು ಗಳಿಸಿ, ಒಳ್ಳೆಯ ಸ್ಥಾನವನ್ನು ಪಡೆದು, ತುಂಬ ಅನುಕೂಲ ಪರಿಸ್ಥಿತಿಯಲ್ಲಿದ್ದಾರೆ. ಈಗ ಈ ದೇಶದಲ್ಲಿರುವ ಕರ್ನಾಟಕದ ಅನೇಕ ಎಂಜಿನಿಯರುಗಳ ಹಾಗೂ ಡಾಕ್ಟರುಗಳ ಅನುಭವ ಶ್ರೀನಿವಾಸಭಟ್ಟರದ್ದಕ್ಕಿಂತ ಅಷ್ಟೇನೂ ಬೇರೆಯಾಗಿಲ್ಲ. ಕನ್ನಡ ನಾಡಿನಿಂದ ಇಲ್ಲಿಗೆ ಬಂದ ವೈದ್ಯರು, ಎಂಜಿನಿಯರ್, ಮತ್ತಿತರರು ಈ ದೇಶದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿ, ಗೌರವ ಪ್ರತಿಷ್ಠೆಗಳನ್ನು ಪಡೆದುಕೊಂಡಿದ್ದಾರೆಂಬುದು ತುಂಬ ಸಂತೋಷದ ಸಂಗತಿಯಾಗಿದೆ.

ನಾನು ಡೆಟ್ರಾಯಿಟ್‌ನಲ್ಲಿದ್ದುದು ಕೇವಲ ಎರಡೂವರೆ ದಿನ. ಮೊದಲ ದಿನ ಶ್ರೀ ಭಟ್ ಅವರು, ಡೆಟ್ರಾಯಿಟ್ ನಗರವನ್ನು ತೋರಿಸಲು ನನ್ನನ್ನು ಕರೆದುಕೊಂಡು ಹೋದರು. ನಾನು ಮುಖ್ಯವಾಗಿ ನೋಡಿದ್ದು ಕಲಾಶಾಲೆಯನ್ನು ಮತ್ತು ಈರಿ ಎಂಬ ಹೆಸರಿನ ಸರೋವರವನ್ನು. ಕಲಾಶಾಲೆಗೆ ಹೋಗುವಾಗ ‘ಡೌನ್‌ಟೌನ್’ ಎಂದು ಕರೆಯಲಾದ ಪೇಟೆ ಬೀದಿಗಳ ಮೂಲಕ ಹೋಗಬೇಕು. ಈ ಭಾಗದಲ್ಲಿ ಕಪ್ಪು ಜನರೇ ಹೆಚ್ಚು (ಕಪ್ಪು ಜನ ಎಂದು ಕರೆಯದೆ ನೀಗ್ರೋ ಎಂದೇನಾದರೂ ಕರೆದರೆ ಮೂಳೆ ಮುರಿದುಬಿಡುತ್ತಾರೆ). ವ್ಯಾಪಾರ ವ್ಯವಹಾರಗಳಲ್ಲಿ ಅವರ ಕೈಯೇ ಮುಂದು. ಬಹುಮಟ್ಟಿಗೆ ನಿರ್ಜನವಾದ (ಭಾನುವಾರವಾದದ್ದರಿಂದ) ಪೇಟೆಬೀದಿಯ ಅಕ್ಕಪಕ್ಕಗಳಲ್ಲಿ ಕೆಲವರು ಕುಡಿದು ಕೆಂಗಣ್ಣು ಬಿಟ್ಟುಕೊಂಡು ತೂರಾಡುತ್ತಾ ನಡೆಯುತ್ತಿದ್ದರು. ಅಲ್ಲಲ್ಲಿ ಕಪ್ಪುಜನರ ಕಾಲೋನಿಗಳು ಕಾಣಿಸಿದವು. ಆದರೆ ಮನೆಯ ಹೊರಗಾಗಲೀ ಒಳಗಾಗಲೀ ಅವು ಅಷ್ಟೇನೂ ಸ್ವಚ್ಛವಾಗಿದ್ದಂತೆ ಕಾಣಲಿಲ್ಲ. ಸಮಾಜದ ಮಧ್ಯಮ ವರ್ಗದ ಈ ಜನ, ನಾನಾ ಬಗೆಯ ಆರ್ಥಿಕ ಸಂಕಷ್ಟಗಳಿಂದಾಗಿ, ದರೋಡೆ, ಕಳ್ಳತನ, ಅತ್ಯಾಚಾರಾದಿ ಅಪರಾಧಗಳಲ್ಲಿ ತೊಡಗಿದ್ದಾರಂತೆ, ಸರ್ಕಾರದವರು ಈ ಕಪ್ಪುಜನದ ಅರಕ್ಷಿತ ಅನಾಥ ಮಕ್ಕಳಿಗೆ ಸಹಾಯಧನವನ್ನು ನೀಡುವುದರಿಂದ, ಈ ಕಪ್ಪು ಜನ ಬಹುಸಂಖ್ಯೆಯ ಮಕ್ಕಳನ್ನು ಹುಟ್ಟಿಸುತ್ತಾರಂತೆ. ಹೀಗಾಗಿ ಈ ಕಪ್ಪು ಜನರ ಅರಕ್ಷಿತ, ಅನಧಿಕೃತ ಮಕ್ಕಳ ಸಂಖ್ಯೆ ಸರ್ಕಾರಕ್ಕೆ ಒಂದು ತಲೆನೋವಾಗಿದೆಯಂತೆ.

ಇವರ ಸ್ಥಿತಿ ಹೀಗಾದರೆ, ಇನ್ನು ಈ ದೇಶದ ಬಿಳಿಯರಿಗಂತೂ ಮಕ್ಕಳು ಮರಿಗಳ ಬಗ್ಗೆ ಆಸಕ್ತಿಯೇ ಇಲ್ಲವೆಂದು ಹೇಳಲಾಗಿದೆ. ಗಂಡ – ಹೆಂಡತಿ ಇಬ್ಬರೂ ಬೆಳಗಿಂದ ಸಂಜೆಯ ತನಕ ಉದ್ಯೋಗಕ್ಕೆ ಹೋಗುವುದರಿಂದ, ಅವರಿಗೆ ಮಕ್ಕಳನ್ನು ಪಡೆಯುವ ಬಗ್ಗೆ ಅಂತಹ ಕಾತರತೆಯೇ ಇಲ್ಲವಂತೆ. ಹಾಗೆ ನೋಡಿದರೆ ಅವರ ಪಾಲಿಗೆ ಮಗು ಅನ್ನುವುದು ಆರ್ಥಿಕವಾದ ಒಂದು ಭಾರವೇ. ಮಗುವಾದರೆ, ಅದರ ಹೆರಿಗೆಗೆ, ಅನಂತರ ಅದರ ಯೋಗಕ್ಷೇಮಕ್ಕೆ ತಗುಲುವ ವೆಚ್ಚ ಕೂಡಾ ಕಡಿಮೆಯೇನಲ್ಲ. ಹೀಗಾಗಿ ಬಹು ಮಂದಿ ತಮಗೆ ಮಕ್ಕಳೇ ಬೇಡ ಅನ್ನುತ್ತಾರೆ. ಒಂದು ವೇಳೆ ಮಕ್ಕಳಾದರೆ, ಅವುಗಳನ್ನು ಬೆಳೆಯಿಸುವ ಕ್ರಮವೂ ಈ ದೇಶದಲ್ಲಿ ವಿಶಿಷ್ಟವಾದದ್ದು. ಮಗು ಹುಟ್ಟಿದಾಗಿನಿಂದ ಅದಕ್ಕೆ ತಂದೆ ತಾಯಿಗಳೊಂದಿಗೆ ನಿಕಟ ಸಂಪರ್ಕವೇರ್ಪಡದಂತೆ, ಒಂದೇ ಮನೆಯೊಳಗೆ ಪ್ರತ್ಯೇಕವಾಗಿಯೇ ಬೆಳೆಯುವಂತೆ ನೋಡಿಕೊಳ್ಳಲಾಗುತ್ತದೆ. ತಂದೆತಾಯಂದಿರಿಬ್ಬರೂ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅದನ್ನು ನೋಡಿಕೊಳ್ಳಲು ಬೇರೆಯವರನ್ನು ಗೊತ್ತುಮಾಡಬೇಕಾಗುತ್ತದೆ. ಅದು ಬೆಳೆದಂತೆ ಅದಕ್ಕೆ ತನ್ನದೇ ಆದ ಪ್ರತ್ಯೇಕವಾದ ಕೊಠಡಿ; ಊಟದ ವೇಳೆ ಮಾತ್ರ ತಂದೆ ತಾಯಂದಿರ ಜತೆಗೆ. ಊಟದ ನಂತರ ‘ಗುಡ್‌ನೈಟ್’ ಹೇಳಿ ಅದರ ಕೋಣೆಗೆ ಅಪ್ಪ ಅಮ್ಮಂದಿರು ದೂಡಿ, ತಮ್ಮ ಕೋಣೆಗೆ ತಾವು ಹೋಗುತ್ತಾರೆ. (ಹೀಗೆಂದರೆ ಅಮೆರಿಕಾದ ತಂದೆ – ತಾಯಂದಿರಿಗೆ ಮಕ್ಕಳನ್ನು ಕುರಿತು ಪ್ರೀತಿಯೇ ಇಲ್ಲವೆಂದೂ, ಅವರು ನಿರ್ದಯರೆಂದೂ ಅರ್ಥವಲ್ಲ. ಇಲ್ಲಿನ ಸಾಂಸಾರಿಕ ಜೀವನ ಕ್ರಮ ಹೀಗಿದೆ ಎಂದು ಮಾತ್ರ ಅರ್ಥ). ಇದರಿಂದಾಗಿ ಮಗು, ತನ್ನ ಪಾಡಿಗೆ ತಾನು ಬದುಕುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಮುಂದೆ ಅದು ಬೆಳೆದು ಹದಿಹರೆಯವನ್ನು ತಲುಪಿದಾಗಲಂತೂ, ತನ್ನ ಹಿಂದಿನ ಅನುಭವದಿಂದಾಗಿ ಅಪ್ಪ- ಅಮ್ಮಂದಿರ ಹಂಗಿಗೆ ಒಳಗಾಗದೆ ತನ್ನ ಕಾಲಮೇಲೆ ತಾನು ನಿಲ್ಲಲು, ತನಗೆ  ದೊರೆಯುವ ಯಾವುದೇ ಉದ್ಯೋಗವನ್ನಾದರೂ ಅವಲಂಬಿಸುತ್ತದೆ. ಕಾರು ತೊಳೆಯುವುದು, ರೆಸ್ಟೋರಾಂಟುಗಳಲ್ಲಿ ಕೆಲಸ ಮಾಡುವುದು, ಮಾಲ್ ಅಥವಾ ಮಾರಾಟದ ಮಳಿಗೆಗಳಲ್ಲಿ ದುಡಿಯುವುದು, ಎಂಥ ಕೆಲಸವಾದರೂ ಸರಿ, ಯಾವುದೇ ಕೀಳರಿಮೆಯಿಲ್ಲದೆ ಈ ಮಕ್ಕಳು ದುಡಿತಕ್ಕೆ ತೊಡಗುತ್ತಾರೆ. ಅಮೆರಿಕನ್ ಸಮಾಜ ಈ ಬಗೆಯ ವೃತ್ತಿಗೌರವವನ್ನು ಎತ್ತಿ ಹಿಡಿಯುತ್ತದೆ. ಈ ರೀತಿಯ ಸ್ವಸಂಪಾದನೆಯಿಂದ ಸ್ವತಂತ್ರ ವ್ಯಕ್ತಿತ್ವವನ್ನು ಧೈರ್ಯವನ್ನು ಬೆಳೆಯಿಸಿಕೊಂಡ ಈ ತರುಣ ತರುಣಿಯರು ತಮ್ಮ ಬದುಕಿನ ಸಂಗಾತಿಗಳನ್ನು ತಾವೇ ಆರಿಸಿಕೊಳ್ಳುತ್ತಾರೆ.

ಇನ್ನು ವಯಸ್ಸಾದಂತೆ, ತಂದೆ – ತಾಯಂದಿರ ಸ್ಥಿತಿ ಕೂಡಾ ಅಂಥ ಸಂತೋಷದಾಯಕವಾದದ್ದಲ್ಲ. ಮಕ್ಕಳು ತಮ್ಮ ಕಾಲಮೇಲೆ ತಾವು ನಿಲ್ಲುವಂತಾಗಿ, ಮನೆ ಬಿಟ್ಟು ಹೋದ ನಂತರ, ವಯಸ್ಸಾದ ತಂದೆ – ತಾಯಂದಿರು ಒಬ್ಬಂಟಿಗರಂತೆ ಕಾಲ ತಳ್ಳಬೇಕಾಗುತ್ತದೆ. ಸಾಕಷ್ಟು ಆಸ್ತಿಪಾಸ್ತಿಗಳಿದ್ದವರು ಆಳುಕಾಳು ಗಳನ್ನಿರಿಸಿಕೊಂಡು ಬದುಕಿದರೆ, ಮತ್ತೆ ಕೆಲವರು ವೃದ್ಧಾಶ್ರಮಗಳನ್ನು ಸೇರುತ್ತಾರೆ. ಈ ವಯೋವೃದ್ಧರನ್ನು ಅಮೆರಿಕದ ಸರ್ಕಾರ ‘ಸೀನಿಯರ್ ಸಿಟಿಜನ್ಸ್’ ಎಂದು ಗೌರವಿಸಿ, ಅವರಿಗಾಗಿ ಹಲವು ರಿಯಾಯಿತಿಗಳನ್ನು ತೋರಿಸಿದರೂ, ಅವರ ಸ್ಥಿತಿಮಾತ್ರ ಕರುಣಾಜನಕವಾದದ್ದೆ. ಮಕ್ಕಳು ಸೊಸೆ-ಮೊಮ್ಮಕ್ಕಳು, ನಮ್ಮವರು- ತಮ್ಮವರು ಎನ್ನುವವರು ಯಾವಾಗಲೋ ಬಂದು ಮಾತನಾಡಿಸಿಕೊಂಡು ಹೋಗುವ ಅಪರಿಚಿತರಿಗಿಂತ ಹೆಚ್ಚೇನಲ್ಲ ಎನ್ನುವ ಭಾವನೆಗಳು ಈ ದೇಶದ ವಯೋವೃದ್ಧರಿಗೆ ಖಚಿತವಾಗುತ್ತದೆ. ಹೀಗಾಗಿ ಬಹುಮಂದಿ ತಮ್ಮ ಆಸ್ತಿ ಪಾಸ್ತಿಗಳು, ತಮ್ಮ  ಮಕ್ಕಳಿಗೆ ಹೋದರೇನು, ಹೋಗದಿದ್ದರೂ ಏನು ಎಂಬ ತಾಟಸ್ಥ್ಯದಿಂದ ನಡೆದುಕೊಳ್ಳುವುದೂ ಉಂಟು. ಒಂದು ವಿಶೇಷ ಅಂದರೆ, ಈ ದೇಶದಲ್ಲಿ ಪ್ರತಿಯೊಬ್ಬರೂ, ತಮ್ಮ ಮರಣಾನಂತರ ತಮ್ಮ ಆಸ್ತಿ ಯಾರಿಗೆ ಸಲ್ಲಬೇಕು ಎನ್ನುವ ಬಗ್ಗೆ  ಖಚಿತವಾಗಿ ‘ವಿಲ್’ ಬರೆದಿಡಬೇಕು. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಸೇರಬೇಕೆಂದು ಬರೆದಿದ್ದರೆ ಅವರಿಗೆ ಸೇರುತ್ತದೆ; ಇಲ್ಲದಿದ್ದರೆ ಇಲ್ಲ. ಅವರು ಮಕ್ಕಳಿಗೆ ಬರೆಯದೆ, ವಿವಿಧ ಸಂಘಸಂಸ್ಥೆಗಳಿಗೆ ಅದು ಸಲ್ಲಬೇಕೆಂದು ಬರೆದಿದ್ದರೆ, ಅವರ ಇಚ್ಛೆಯಂತೆ ಆಯಾ ಸಂಘ – ಸಂಸ್ಥೆಗಳಿಗೆ ಸಲ್ಲುತ್ತದೆ. ಒಂದು ವೇಳೆ ವಿಲ್ ಬರೆಯದೆ ಹೋದರೆ, ಅದು ಯಾರಿಗೂ ಸಲ್ಲುವುದಿಲ್ಲ. ಅಂಥ ಸಂದರ್ಭದಲ್ಲಿ ಅದು ಸರ್ಕಾರಕ್ಕೆ ಸೇರುತ್ತದೆ.

ಡೆಟ್ರಾಯಿಟ್ ನಗರ, ಕೆನಡಾದ ಗಡಿಯಲ್ಲಿರುವ ಊರು. ಈರಿ ಎಂಬ ಸರೋವರದ ಆ ಕಡೆ ಕೆನಡಾ, ಈ ಕಡೆ ಡೆಟ್ರಾಯಿಟ್, ಸರೋವರದ ಆಚೆಯ ದಡದ ಕೆನಡಾದೇಶದ ಮನೆಗಳೂ, ಈ ಕಡೆಯಿಂದ ಕಾಣುತ್ತವೆ. ಜಗತ್ ಪ್ರಸಿದ್ಧವಾದ ಜಲಪಾತವಾಗಿ ಧುಮುಕುವ ನಯಾಗರಾ ನದಿ ಹುಟ್ಟುವುದು ಇದೇ ಸರೋವರದಿಂದ. ಈ ಸರೋವರ ತೀರದ ಡೆಟ್ರಾಯಿಟ್ ನಗರ ತಲೆಯೆತ್ತಿದ ದಿಗ್‌ಭ್ರಮೆಗೊಳಿಸುವ ಗಗನಚುಂಬಿ ಕಟ್ಟಡಗಳಿಂದ ಕೂಡಿದೆ. ಸಿಮೆಂಟಿನ ದೈತ್ಯಶಿಲ್ಪದ ನಗರಾರಣ್ಯದ ಆಚೆ, ದೂರ ದೂರದಲ್ಲಿರುವ ಉಪನಗರದ ಮನೆಗಳು ಮಾತ್ರ, ತುಂಬ ಅಚ್ಚುಕಟ್ಟಾಗಿ, ವಿಸ್ತಾರವಾದ ಹುಲ್ಲು ಬಯಲು ಹಾಗೂ ಸಸ್ಯ ಸಮೃದ್ಧಿಯ ನಡುವೆ ಪ್ರಶಾಂತವಾಗಿವೆ. ಈರಿ ಸರೋವರದ ದಡದ ಇಂಥ ಒಂದು ಉಪನಗರವೊಂದರಲ್ಲಿ, ಕನ್ನಡ ಕೂಟದ ಸಭೆಗೆ, ಶ್ರೀನಿವಾಸ ಭಟ್ ಅವರು ನನ್ನನ್ನು ಕರೆದುಕೊಂಡು ಹೋದರು. ಡಾ. ಕಿನ್ಹಾಲ್ ದಂಪತಿಗಳ ಮನೆಯೊಳಗೆ ವಿಸ್ತಾರವಾದ ಕೊಠಡಿಯಲ್ಲಿ, ಸಂಜೆ ಐದೂವರೆಗೆ ‘ಪಂಪ ಕನ್ನಡಕೂಟ’ದ ಸದಸ್ಯರೆಲ್ಲ ಸೇರಿದರು. ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಮಾರು ಮೂವತ್ತೈದು – ನಲವತ್ತು ಜನದ ಸಭೆ ಅದು. ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಈ ಕನ್ನಡ ಜನ, ಇಂಥ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ವರ್ಷಾದ್ಯಂತ ನಡೆಯಿಸುವ, ಉತ್ಸವ, ಹಾಡು, ಕುಣಿತ, ನಾಟಕ ಇತ್ಯಾದಿಗಳನ್ನು ಕುರಿತು, ಹಿಂದೆ ಇದೇ ಬಗೆಯ ಕಾರ್ಯಕ್ರಮಕ್ಕೆ ಬಂದ ‘ಗಂಭೀರಸಾಹಿತಿ’ಗಳೊಬ್ಬರು, ‘ನೀವು ನಡೆಸುವ ಈ ಕಾಯಕ್ರಮಗಳೆಲ್ಲ ಮನರಂಜನೆ. ಕನ್ನಡಿಗರಾದ ನೀವು ಇನ್ನೂ ಗಂಭೀರವಾದ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಬೇಕು’ ಎಂದು ಕಾಮೆಂಟ್ ಮಾಡಿದ್ದರಿಂದಲೋ ಏನೋ, ನಾನು ಕಂಡ ಅನೇಕ ಕನ್ನಡ ಸಂಘಗಳವರು, ‘ನಾವು, ಏನೋ ಹೊತ್ತು ಹೋಗಿದಕ್ಕೆ ಮತ್ತು ಕನ್ನಡದ ಮೇಲಿನ ಅಭಿಮಾನಕ್ಕೆ, ಒಂದಷ್ಟು ಹಾಡು, ಕುಣಿತ, ನಾಟಕ, ಉತ್ಸವ ಇತ್ಯಾದಿಗಳನ್ನು ಮಾಡುತ್ತೇವೆಯೆ ಹೊರತು, ಇದಕ್ಕಿಂತ ಹೆಚ್ಚಿನದೇನನ್ನೂ ನಾವು ಮಾಡಲು ಸಾಧ್ಯವಾಗುತ್ತಿಲ್ಲ’ ಎಂಬ ಅಳುಕಿನ ಧ್ವನಿಯಿಂದ ತಮ್ಮ ಪ್ರಾಸ್ತಾವಿಕವನ್ನು ಪ್ರಾರಂಭಿಸುತ್ತಿದ್ದರು. ಆದರೆ ನನಗೆ ಈ ದೂರದೇಶದಲ್ಲಿರುವ ಕನ್ನಡಿಗರು, ಕನ್ನಡದ ಮೇಲಿನ ಪ್ರೀತಿಯಿಂದ ಏನಾದರೂ ಮಾಡಿಕೊಳ್ಳಲಿ, ಕನ್ನಡದ ಹೆಸರಿನಲ್ಲಿ ಇಷ್ಟು ಜನ ಒಂದು ಕಡೆ ಸೇರುವುದೇ ನಿಜವಾಗಿಯೂ ದೊಡ್ಡದು ಎಂದು ಅನ್ನಿಸಿದ ಕಾರಣ, ನಾನು ಹೋದಹೋದಲ್ಲಿ ಹೇಳಿದೆ : ‘ಕನ್ನಡ ಎಂದರೆ ಕೇವಲ ಕನ್ನಡ ಸಾಹಿತ್ಯವಷ್ಟೇ ಎಂದು ನಾನು ತಿಳಿದಿಲ್ಲ. ನಿಜ, ಸಾಹಿತ್ಯ ಅನ್ನುವುದು  ಕನ್ನಡ ಸಂಸ್ಕೃತಿಯ ಒಂದು ಭಾಗ, ಮುಖ್ಯವಾದ ಭಾಗವೇ ಇರಬಹುದು. ಆದರೆ ಈ ದೂರದಲ್ಲಿ ಕನ್ನಡದ ನೆನಪನ್ನು ತರುವ ಯಾವುದೇ ಒಂದು ಕಾರ್ಯಕ್ರಮ – ಅದು ಭಾವಗೀತೆಯಾಗಿರಬಹುದು, ಸಮೂಹ ಗಾನವಾಗಿರಬಹುದು, ಜಾನಪದ ಹಾಡಾಗಿರಬಹುದು, ನಾಟಕಾಭಿನಯವೋ ನರ್ತನವೋ ಆಗಿರಬಹುದು, ಕನ್ನಡದ ಪುರಂದರ, ಕನಕದಾಸ, ಬಸವಣ್ಣ ಇಂಥವರನ್ನು ಕುರಿತ ಜಯಂತಿಗಳ ಆಚರಣೆಯಾಗಿರಬಹುದು, ಕಡೆಗೆ ಗಣೇಶನ ಹಬ್ಬದ ಸಂದರ್ಭವೇ ಆಗಿರಬಹುದು – ನನ್ನ ಮಟ್ಟಿಗೆ ಅವೂ ಕನ್ನಡದ ಕಾರ್ಯಕ್ರಮಗಳೇ; ಅವೂ ಕನ್ನಡದ ಬಹುಮುಖ ಸಂಸ್ಕೃತಿಯ ಅಂಗಗಳೇ. ನಾನು ಅಂಥ ಕಾರ್ಯಕ್ರಮಗಳನ್ನು ಕೀಳ್ಗಳೆದು ನೋಡುವುದಿಲ್ಲ. ಆದಕಾರಣ ನೀವು ಮಾಡುವ ಎಲ್ಲ ಕಾರ್ಯಕ್ರಮಗಳೂ ನಿಮ್ಮೊಳಗಿನ ಕನ್ನಡತನವನ್ನು ಸದಾ ಎಚ್ಚರದಲ್ಲಿರಿಸಿಕೊಳ್ಳುವ ಉದ್ದೇಶದವುಗಳಾಗಿದ್ದರಿಂದ, ನಾನು ಈ ಕಾರ್ಯಕ್ರಮಗಳನ್ನು ಗೌರವದಿಂದಲೇ ಕಾಣುತ್ತೇನೆ’.

ನನ್ನ ಈ ನಿಲುವು ಅಮೆರಿಕಾದ ಕನ್ನಡ ಸಂಘದವರಿಗೆ ತುಂಬ ಇಷ್ಟವಾಯಿತು. ಡೆಟ್ರಾಯಿಟ್ ಕನ್ನಡ ಸಂಘದಲ್ಲಿ, ಮೊದಲು ಈ ಮಾತನ್ನು ನಾನು ಹೇಳಿದೆ. ಒಂದರ್ಧ ಗಂಟೆ ಕನ್ನಡನಾಡಿನಲ್ಲಿ ನಡೆಯುವ ಕನ್ನಡದ ಚಟುವಟಿಕೆಗಳನ್ನು ಹಾಗೂ ಅದರ ಸಾಹಿತ್ಯಕ – ಸಾಂಸ್ಕೃತಿಕ ಬೆಳವಣಿಗೆಗಳನ್ನು ಕುರಿತು ಮಾತನಾಡಿದೆ. ಇನ್ನರ್ಧ ಗಂಟೆ ನನ್ನ ಮಾತನ್ನು ಕುರಿತು ಚರ್ಚೆ ಹಾಗೂ ಸಂವಾದ ನಡೆಯಿತು. ಇನ್ನರ್ಧ ಗಂಟೆ ನಾನು ನನ್ನ ಕವಿತೆಗಳನ್ನು ಓದಿದೆ. ಸಭೆಯ ನಂತರ ಸೊಗಸಾದ ಉಪಹಾರ ಏರ್ಪಾಡಾಗಿತ್ತು.

‘ಪಂಪ ಕನ್ನಡ ಕೂಟ’ದ ಕಾರ್ಯಕ್ರಮದ ಮರುದಿನ ಶ್ರೀನಿವಾಸ ಭಟ್ಟರು ಕೆಲಸಕ್ಕೆ ಹೋಗಬೇಕಾದ ಕಾರಣ, ಆ ಊರಿನ ಪ್ರಸಿದ್ಧವಾದ ಹೆನ್ರಿ ಫೋರ್ಡ್ ಮ್ಯೂಸಿಯಂ ಅನ್ನು ನನಗೆ ತೋರಿಸುವ ಜವಾಬ್ದಾರಿಯನ್ನು, ತಮ್ಮ ಮಿತ್ರರಾದ ಕೃಷ್ಣಪ್ರಸಾದ್ ಅವರಿಗೆ ವಹಿಸಿದರು. ಅದರಂತೆ ಕೃಷ್ಣಪ್ರಸಾದರು ಬೆಳಿಗ್ಗೆ ಒಂಬತ್ತು ಗಂಟೆಗೆ ನನ್ನನ್ನು ಕರೆದುಕೊಂಡು ಹೋಗಿ ಫೋರ್ಡ್ ಮ್ಯೂಸಿಯಂ ಬಳಿ ಇಳಿಸಿ, ತಾವು ಮತ್ತೆ ಮಧ್ಯಾಹ್ನ ಒಂದು ಗಂಟೆಗೆ ಬಂದು ಹಿಂದಕ್ಕೆ ಕರೆದೊಯ್ಯುವುದಾಗಿ ತಿಳಿಸಿ ಹೊರಟು ಹೋದರು.

ಕಾರು ತಯಾರಿಕೆಯ ಪಿತಾಮಹನಾದ ಹೆನ್ರಿ ಫೋರ್ಡನ ನೆನಪನ್ನು ಈ ನಗರ, ಅವನ ಹೆಸರಿನ ಒಂದು ಬೃಹತ್ತಾದ ವಸ್ತು ಪ್ರದರ್ಶನಾಲಯದ ಮೂಲಕ ಹಾಗೂ ಅವನು ಹುಟ್ಟಿ ಬೆಳೆದ ಗ್ರೀನ್‌ಫೀಲ್ಡ್ ವಿಲೇಜ್ – ಎಂಬ ಹಳ್ಳಿಯನ್ನು, ಅವತ್ತು ಅದು ಹೇಗಿತ್ತೋ ಹಾಗೆಯೇ ಉಳಿಸಿಕೊಳ್ಳುವುದರ ಮೂಲಕ, ಗೌರವಿಸಿದೆ.  ಇನ್ನೂರ ಐವತ್ತು ನಾಲ್ಕು ಎಕರೆಗಳಷ್ಟಗಲದ ವಿಸ್ತಾರದಲ್ಲಿ ಹೆನ್ರಿಫೋರ್ಡ್ ಹೆಸರಿನ ಮ್ಯೂಸಿಯಂ ಮತ್ತು ಆತನ ಜನ್ಮಸ್ಥಳವಾದ ಗ್ರೀನ್‌ಫೀಲ್ಡ್ ಎರಡೂ ಇವೆ. ಒಂದು  ಕಾಲಕ್ಕೆ ಕೃಷಿ ಪ್ರಧಾನವಾದ ಗ್ರಾಮೀಣ ಬದುಕಿನ ಅಮೆರಿಕಾ ದೇಶ, ಹೇಗೆ ಅತ್ಯುನ್ನತವಾದ ತಂತ್ರಜ್ಞಾನ ಹಾಗೂ ಕೈಗಾರಿಕೆಗಳಿಗೆ ಹೆಸರಾದ ಪ್ರಬಲ ರಾಷ್ಟ್ರವಾಯಿತೆಂಬುದನ್ನು, ಈ ಎರಡೂ ಮ್ಯೂಸಿಯಂಗಳು ದಾಖಲಿಸಿರುವ ಕ್ರಮ ವಿಶೇಷ ರೀತಿಯದಾಗಿದೆ. ಹೆನ್ರಿಫೆರ್ಡ್ ಮ್ಯೂಸಿಯಂ ಒಂದು ಬೃಹದಾಕಾರವಾದ ವಿಸ್ತಾರದ ಕಟ್ಟಡ. ಅದರಲ್ಲಿ ‘ಆದಿಕಾಲ’ದಿಂದಲೂ, ಅಂದರೆ ೧೯೦೪ನೇ ಇಸವಿಯಿಂದ ಇದುವರೆಗೆ ತಯಾರಾದ ಕಾರುಗಳ ಉದ್ಯಮದ ಮಾಹಿತಿಯ ಜತೆಗೆ ವಿವಿಧ ಕಾಲಮಾನದಲ್ಲಿ ತಯಾರಾಗುತ್ತ ಬಂದ ಹಾಗೂ ವಿವಿಧ ಆಕಾರಗಳಲ್ಲಿ ಬದಲಾಗುತ್ತ ಬಂದ ಅನೇಕ ಕಾರುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಈ ವಿಲಕ್ಷಣವಾದ ಕಾರುಗಳನ್ನು ನೋಡುವುದೇ ಒಂದು ವಿನೋದದ ಸಂಗತಿ. ಇದೇ ಪರಿಸರದಲ್ಲಿ ಗ್ರಾಮೀಣಕೃಷಿಯ ಬೆಳವಣಿಗೆ, ಅದಕ್ಕಾಗಿ ಅಂದು ತಯಾರಿಸಲಾದ ಉಪಕರಣಗಳು, ಇವುಗಳ ದೊಡ್ಡ ವಿಭಾಗವೊಂದಿದೆ. ಇನ್ನೊಂದೆಡೆ ಇಲ್ಲಿ ಮೊದಲು ತಯಾರಾದ ರೈಲು ಎಂಜಿನ್‌ಗಳಿವೆ; ಜಗತ್ತಿನಲ್ಲಿಯೆ ದೊಡ್ಡದಾದ ರೈಲ್ವೆ ಎಂಜಿನ್ ಇಲ್ಲಿದೆ. ಅಮೆರಿಕಾದ ಪ್ರೆಸಿಡೆಂಟ್ ರೂಸ್‌ವೆಲ್ಟರು ಪ್ರಯಾಣ ಮಾಡುತ್ತಿದ್ದ ಕೋಚ್‌ಗಾಡಿ ಇಲ್ಲಿದೆ. ಅಬ್ರಹಾಮ್ ಲಿಂಕನ್ ಕೊಲೆಯಾದಾಗ ಆತ ಕೂತ ಕುರ್ಚಿ ಇಲ್ಲಿದೆ. ೧೮೬೫ ನೇ ಏಪ್ರಿಲ್ ಹದಿನಾಲ್ಕರಂದು ಹಂತಕನೊಬ್ಬ ಅಧ್ಯಕ್ಷ ಲಿಂಕನ್ ಕಡೆಗೆ ಗುಂಡು ಹಾರಿಸಿದಾಗ, ಆತ ಫೋರ್ಡ್ ಥಿಯೇಟರಿನಲ್ಲಿ ಇದೇ ಕುರ್ಚಿಯ ಮೇಲೆ ಕೂತಿದ್ದನಂತೆ. ಈ ಮ್ಯೂಸಿಯಂನಲ್ಲಿ ಅಮೆರಿಕಾದ ಹಲವು ಶತಮಾನಗಳ ನಾಗರಿಕತೆಯ ಇತಿಹಾಸವನ್ನೆ ಕಾಣಬಹುದು. ವಿವಿಧ ಕಾಲಮಾನದ ಒಡವೆಗಳು, ಗಡಿಯಾರಗಳು, ಗಾಜಿನ ವಸ್ತುಗಳು, ವಿವಿಧ ಲೋಹದ ಪಾತ್ರೆಗಳು – ಈ ಎಲ್ಲವನ್ನು ತೀರಾ ಅವಸರದಿಂದ ನೋಡಿಕೊಂಡು ಹನ್ನೊಂದೂವರೆಯ ವೇಳೆಗೆ ಈ ಮ್ಯೂಸಿಯಂಗೆ ಒತ್ತಿಕೊಂಡ, ಹೆನ್ರಿಫೋರ್ಡನ ಹುಟ್ಟೂರಾದ ಗ್ರೀನ್‌ಫೀಲ್ಡ್ ವಿಲೇಜನ್ನು ಪ್ರವೇಶಿಸಿದೆ. ವಾಸ್ತವವಾಗಿ ಇದೊಂದು ಬಯಲು ಮ್ಯೂಸಿಯಂ. ಹೆನ್ರಿಫೋರ್ಡ್ ಬದುಕಿದ ಗ್ರಾಮ ಹಾಗೂ ಗ್ರಾಮೀಣ ಪರಿಸರವನ್ನು, ಅವನಿದ್ದಾಗ ಹೇಗಿತ್ತೋ ಅದರಂತೆಯೆ ಇಂದಿಗೂ ಉಳಿಸಲಾಗಿದೆ. ಆಗಿದ್ದ ಮನೆಗಳು, ಚರ್ಚು, ಹಳ್ಳಿಗಾಡಿನ ಉದ್ಯೋಗಗಳು – ಗಾಡಿ, ರಿಪೇರಿಮನೆ, ಕಮ್ಮಾರ ಸಾಲೆ, ಮುದ್ರಣಾಲಯ, ಕೆಲಸಗಾರರ ಉಪಹಾರ ಗೃಹ, ಗಾಜಿನ ಸಾಮಾನು ತಯಾರಿಸುವ ಮನೆ, ಎಲ್ಲವೂ ಹೆನ್ರಿಫೋರ್ಡ್ ವಾಸಮಾಡುತ್ತಿದ್ದ ಮನೆಯ ಸಮೇತ, ಇಂದಿಗೂ ಸಂರಕ್ಷಿತವಾಗಿವೆ. ಆಗಿನ ಕಾಲದ ಕುದುರೆ ಗಾಡಿಯೊಂದು, ಪ್ರವಾಸಕ್ಕೆ ಬಂದ ಮಕ್ಕಳು ಮುದುಕರನ್ನು ಕೂಡಿಸಿಕೊಂಡು ಈ ಹಳ್ಳಿಯ ಬೀದಿಯಲ್ಲಿ ಸಂಚಾರ ಮಾಡುತ್ತ, ಹಿಂದಿನ ಆ ಗ್ರಾಮೀಣ ಪರಿಸರವನ್ನು ನೋಟಕರ ಮನಸ್ಸಿನಲ್ಲಿ ಮುದ್ರಿಸುತ್ತದೆ.

ಎರಡು ದಿನಗಳಾದರೂ ನೋಡಿ ಮುಗಿಸಲು ಸಾಧ್ಯವಾಗದ ಈ ಮ್ಯೂಸಿಯಂಗಳನ್ನು ಕೇವಲ ಮೂರೂವರೆ ಗಂಟೆಗಳ ಅವಧಿಯಲ್ಲಿ ಅವಸರದಿಂದ ನೋಡಿ ಮುಗಿಸಿ, ಒಂದು ಗಂಟೆಯ ವೇಳೆಗೆ ನನಗಾಗಿ ಕಾದಿದ್ದ ಕೃಷ್ಣಪ್ರಸಾದ್ ಅವರ ಜತೆಗೆ ಅವರ ಸೋದರಮಾವ ಡಾ. ಶ್ರೀನಿವಾಸಮೂರ್ತಿಯವರ ಮನೆಗೆ- ಹಿಂದಿನ ದಿನದ ಅವರ ಆಹ್ವಾನದ ಮೇರೆಗೆ, ಹೊರಟೆ. ವೈದ್ಯಕೀಯ ಕೆಲಸಗಳ ಮೇಲೆ ಹೊರಗೆ ಹೋಗಿದ್ದ ಡಾ. ಮೂರ್ತಿಯವರು, ತಾವು ನನ್ನ ಜತೆ ಮಧ್ಯಾಹ್ನದ ಊಟಕ್ಕೆ ಸೇರಲು ಸಾಧ್ಯವಾಗದ ಸಂಗತಿಯನ್ನು ನನಗೆ ದೂರವಾಣಿಯ ಮೂಲಕ ಮುಟ್ಟಿಸಿದ ಕಾರಣ, ಅವರ ಶ್ರೀಮತಿಯವರಾದ ರಾಜೀವಿಯವರೇ ನನ್ನ ಆತಿಥ್ಯವನ್ನು ನೋಡಿಕೊಳ್ಳಬೇಕಾಯಿತು. ಸೊಗಸಾದ ಊಟವನ್ನು ಬಡಿಸಿ, ನಾನೂ ಕೃಷ್ಣಪ್ರಸಾದ್ ಅವರೂ ಊಟಮಾಡುತ್ತಿರುವಂತೆಯೇ ರಾಜೀವಿಯವರು ತಾವು ಕನ್ನಡದಲ್ಲಿ ಬರೆದ ವಿನೋದ ಲಹರಿಗಳನ್ನು ಓದಿ ಹೇಳತೊಡಗಿದರು. ಇಂಥ ಬರೆಹಗಳಲ್ಲಿ ಕೆಲವನ್ನು ಅವರು ಆಗಲೇ ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರಂತೆ, ಕೆಲವನ್ನು ಹರೀಹರೇಶ್ವರ ಅವರು ತರುತ್ತಿರುವ ‘ಅಮೆರಿಕನ್ನಡ’ ಪತ್ರಿಕೆಯಲ್ಲಿ ಪ್ರಕಟಿಸಿದ್ದರಂತೆ.

ಊಟದ ನಂತರ ಶ್ರೀಮತಿ ರಾಜೀವಿಯವರು ನನಗೆ ಅವರ ಮನೆಯನ್ನು ತೋರಿಸಿದರು. ಮನೆ ತುಂಬ ದೊಡ್ಡದು. ಮನೆ ಸುತ್ತ ಹಚ್ಚಹಸುರಿನ ಹಾಸು. ಅದರ ನಡುವೆ ಹೂವಿನ ಗಿಡಗಳು. ಮನೆಯ ಮುಂದಿನ ಬೀದಿಯಿಂದ, ಗ್ಯಾರೇಜಿಗೆ ಹಸುರ ನಡುವೆ ದಾರಿ. ಕಾರೊಳಗೆ ಕೂತೇ ಒಂದು ಬಟನ್ ಒತ್ತಿದರೆ ತಾನಾಗಿಯೇ ತೆರೆದುಕೊಳ್ಳುವ ಹಾಗೂ ಮುಚ್ಚಿಕೊಳ್ಳುವ ಗ್ಯಾರೇಜಿನ ಬಾಗಿಲು. ಮನೆಯ ಹಿಂದೆ ಮತ್ತಷ್ಟು ಹಸಿರು. ಎತ್ತರವಾದ ಮರಗಳು. ಸುತ್ತ ಮುತ್ತ ಅಂಥವೇ ಮನೆಗಳು. ಒಳಗೆ ಬಂದರೆ ನೆಲಕ್ಕೆಲ್ಲಾ ಮೆತ್ತನೆಯ ಜಮಖಾನಗಳು – ಮೇಲೆ ಮತ್ತೆ ಕೆಳಗೆ. ಚೆನ್ನಾಗಿ ಪಾಲಿಷ್ ಮಾಡಿದ ಮರವನ್ನು ಅಳವಡಿಸಿದ ಗೋಡೆಗಳು. ಮೂರೋ ನಾಲ್ಕೋ ಬೆಡ್ ರೂಂಗಳು; ಮೇಲೊಂದು ಕೆಳಗೊಂದು ಡ್ರಾಯಿಂಗ್ ರೂಮುಗಳು; ಸ್ಟಡಿ ಅಥವಾ ಲೈಬ್ರರಿ. ಅದರ ಕಪಾಟುಗಳಲ್ಲಿ ವಿವಿಧ ವಿಷಯಗಳನ್ನು ಕುರಿತ ಪುಸ್ತಕಗಳು; ಸ್ವಚ್ಛವಾದ ಬಾತ್‌ರೂಂಗಳು; ಅದರ ಬದಿಗೆ ಅಮೃತಶಿಲೆಯ ಸ್ನಾನದ ತೊಟ್ಟಿ; ಅದಕ್ಕೆ ಅನುಕೂಲವಾದ ತಣ್ಣೀರು ಬಿಸಿ ನೀರು ಸದಾ ಬರುವ ನಲ್ಲಿಗಳು; ಡ್ರಾಯಿಂಗ್ ರೂಂಗಳಲ್ಲಿ ಒಂದೊಂದು ಟಿ.ವಿ.; ಬೆಡ್ ರೂಮುಗಳಲ್ಲಿ ಕೈಗೆಟುಕುವ ದೂರದಲ್ಲಿ ಟೆಲಿಫೋನ್; ಮೊದಲ ಹಂತದಿಂದ ಒಳಗಿನ ಮೆಟ್ಟಿಲಿಳಿದರೆ ವಿಸ್ತಾರವಾದ ತಳಮನೆ ಅಥವಾ ಸೆಲ್ಲರ್. ಅಲ್ಲಿ ಮೂಲೆಯಲ್ಲಿ ಸುಖಾಸನಗಳು; ಟೇಬಲ್ ಟೆನ್ನಿಸ್ ಆಡುವ ವ್ಯವಸ್ಥೆ; ಒಂದೊಂದು ಸಲ ದೊಡ್ಡ ಪಾರ್ಟಿಗಳಿಗೂ ಇದು ಅನುಕೂಲ; ನಡುಮನೆಯ ಬದಿಗೆ ಸಮಸ್ತ ದೇವಾನುದೇವತೆಗಳಿಗಾಗಿ ದೇವರ ಕೋಣೆ ಕೂಡಾ!

ನಾನು ಕಂಡ ಮನೆಗಳೆಲ್ಲ ಹೆಚ್ಚು ಕಡಿಮೆ ಇದೇ ಮಾದರಿಯವು. ಆದರೆ ಕೋಣೆಗಳ ಸಂಖ್ಯೆಯಲ್ಲಿ ಹೆಚ್ಚು ಕಡಮೆ ಇರಬಹುದು. ಅಷ್ಟೆ. ಶ್ರೀಮತಿ ರಾಜೀವಿಯವರ ಮನೆ ನಾನು ಕಂಡ ಮನೆಗಳಲ್ಲೆ ಸ್ವಲ್ಪ ದೊಡ್ಡದು. ಮನೆಯೊಳಗಿನವರು ನೆಮ್ಮದಿಯಿಂದ ತಮ್ಮ ಪಾಡಿಗೆ ತಾವು ಬದುಕಲಗತ್ಯವಾದ ಎಲ್ಲ ಸೌಲಭ್ಯಗಳೂ ಇಲ್ಲಿವೆ.

ಆದರೆ ಮುಖ್ಯವಾದ ಸಮಸ್ಯೆ ಈ ಮನೆಗಳನ್ನು ಚೊಕ್ಕಟವಾಗಿರಿಸಿಕೊಳ್ಳುವುದು. ನಮ್ಮಲ್ಲಿಯಂತೆ ಧೂಳು – ಕಸ ಬಿದ್ದು ದಿನವೂ ಗುಡಿಸಿ ಇರಿಸುವಂಥ ಪ್ರಮೇಯ ಇಲ್ಲಿಲ್ಲವಾದರೂ, ಇಷ್ಟು ದೊಡ್ಡ ಮನೆಯ ಒಳಗಿನ – ಹೊರಗಿನ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು ನಿಜವಾಗಿಯೂ ಕಷ್ಟವೇ. ಒಂದು ವಿಶೇಷವೆಂದರೆ ಈ ದೇಶದಲ್ಲಿ ಮನೆಯೊಳಗಿನ ಪ್ರತಿಯೊಬ್ಬರೂ, ಮಕ್ಕಳೂ ಸಹ, ತಮ್ಮ ತಮ್ಮ ಕೊಠಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೋಗುವಂಥ ಸಂದರ್ಭಗಳಲ್ಲಿ, ಅವರು ವಾರಕ್ಕೆ ಒಂದು ಸಲ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯಗಳಲ್ಲಿ ತೊಡಗುತ್ತಾರೆ. ನಮ್ಮ ಹಾಗೆ ಪೊರಕೆ ಹಿಡಿದು ಗುಡಿಸಬೇಕಾಗಿಲ್ಲ; ಅದಕ್ಕಾಗಿ ಯಂತ್ರವಿದೆ. ಒಂದು ಬಟನ್ ಒತ್ತಿ ಕೈಯ್ಯಲ್ಲಿ  ಹಿಡಿದು ನಡೆದರೆ ಸಾಕು, ಮನೆ ಸ್ವಚ್ಛವಾಗುತ್ತದೆ. (ದಿನಾ ಪಾತ್ರೆ ತೊಳೆಯಲೂ, ಬಟ್ಟೆ ಶುಚಿ ಮಾಡಲೂ ಯಂತ್ರಗಳಿವೆ). ಮನೆಯ ಸುತ್ತ ಇರುವ ಹಸುರನ್ನು ಒಂದೇ ಮಟ್ಟ ದಲ್ಲಿರಿಸುವ ಸಲುವಾಗಿ ಆಗಾಗ ಹತ್ತರಿ ಹೊಡೆಯಬೇಕಾಗುತ್ತದೆ. ಆಗಾಗ ನೀರು ಹಾಕಿ, ಗಿಡಗಳನ್ನು ಕತ್ತರಿಸಿ, ಹಸಿರು ಹುಲ್ಲನ್ನು ಒಂದೇ ಥರ ಇರುವಂತೆ ನೋಡಿಕೊಳ್ಳುವ ಈ ಕೆಲಸವೂ ಸಾಕಷ್ಟು ಶ್ರದ್ಧೆ ಹಾಗೂ ಶ್ರಮವನ್ನು ನಿರೀಕ್ಷಿಸುತ್ತದೆ. ಆಯಾ ಮನೆಯವರು ತಮ್ಮ ಮನೆಗಳ ಒಳಗನ್ನೂ ಹೊರಗನ್ನೂ ಸಾಕಷ್ಟು ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿ ಇರಿಸಿಕೊಳ್ಳದೆ ಹೋದರೆ, ಪಕ್ಕದ ಮನೆಯವರು, ಇದರಿಂದ ತಮ್ಮ ಮನೆಯ ಸೊಗಸಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣವನ್ನು ಮುಂದೊಡ್ಡಿ ಪೊಲೀಸ್‌ಗೆ ಕಂಪ್ಲೇಂಟ್ ಕೊಡುವುದೂ ಉಂಟಂತೆ! ಮತ್ತು ತಮ್ಮ ಮನೆಯನ್ನು ಅವ್ಯವಸ್ಥಿತವಾಗಿ ಇರಿಸಿಕೊಂಡ ಕಾರಣದಿಂದ, ನ್ಯಾಯಾಲಯದಲ್ಲಿ ದಂಡ ತೆರುವ ಸಂಭವಗಳೂ ಇವೆಯಂತೆ! ಇಂಥ ಸಂದರ್ಭಗಳು ಸಂಭವಿಸಿವೆಯೋ ಇಲ್ಲವೋ. ಸಾಮಾನ್ಯವಾಗಿ ಎಲ್ಲ ಮನೆಯವರೂ ತಮ್ಮ ತಮ್ಮ ಮನೆಯನ್ನು, ಅದರ ಸುತ್ತು ಮುತ್ತಲನ್ನೂ ಚೊಕ್ಕಟವಾಗಿಟ್ಟುಕೊಳ್ಳುವುದರಲ್ಲಿ ಹೆಮ್ಮೆ ಪಟ್ಟುಕೊಳ್ಳುವುದಂತೂ ನಿಜ.

ಈ ಎಲ್ಲಾ ಕೆಲಸಗಳನ್ನು, ಆಯಾ ಮನೆಯವರೇ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕೆಂದರೆ ನಮ್ಮಲ್ಲಿಯಂತೆ ಮನೆಗೆಸಲದವರನ್ನು  ಗೊತ್ತು ಮಾಡಿಕೊಳ್ಳುವುದು ಇಲ್ಲಿ ಕಷ್ಟ. ಒಂದು ವೇಳೆ ಗೊತ್ತು ಮಾಡಿಕೊಂಡರೂ ಅದು ತುಂಬ ದುಬಾರಿ. ಕೆಲಸದವರು ಬೇಕೆಂದರೆ ಅದಕ್ಕಾಗಿ ಮೀಸಲಾದ ಕಛೇರಿಯೊಂದಿಗೆ ಸಂಪರ್ಕಿಸಿದರೆ ಕೆಲಸದವಳನ್ನು ಕಳುಹಿಸಿಕೊಡಲಾಗುತ್ತದೆ. ಆ ಕೆಲಸದವಳೂ ಒಂದು ಒಪ್ಪಂದದ ಮೇಲೆ ಬಂದು ಕೆಲಸ ಮಾಡುತ್ತಾಳೆ. ಮನೆಯವರಿರಲಿ ಬಿಡಲಿ, ಆಕೆ ಬಂದು ಬಾಗಿಲು ತೆರೆದು ನಿಗದಿತವಾದ ಕೆಲಸ ಮಾಡಿ ತನ್ನ ಕಾರಿನಲ್ಲಿ ತಾನು ಹೋಗುತ್ತಾಳೆ. ಈ ಕೆಲಸಕ್ಕೆ, ಒಂದು ಗಂಟೆಯ ಅವಧಿಗೆ ಆರರಿಂದ ಹತ್ತು ಡಾಲರ್ ತೆರಬೇಕಾಗುತ್ತದೆ. ಹೀಗಾಗಿ ಈ ದುಬಾರಿ ಕೆಲಸದವರನ್ನು ಅವಲಂಬಿಸಲು ಹಿಂಜರಿದು, ಬಹುಮಂದಿ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಮನೆಗೆ ಬಣ್ಣ ಬಳಿಯುವುದರಿಂದ ಹಿಡಿದು, ಸಣ್ಣ ಪುಟ್ಟ ರಿಪೇರಿಗಳನ್ನೂ ಸಹ, ಅದಕ್ಕೆ ಬೇಕಾದ ಉಪಕರಣಗಳನ್ನು ಅಂಗಡಿಯಿಂದ ತಂದು –  ತಾವೇ ಮಾಡುತ್ತಾರೆ.

ನಾನು ಶ್ರೀಮತಿ ರಾಜೀವಿಯವರ ಮನೆಯಲ್ಲಿ ಮಾಡಿದ ಮಧ್ಯಾಹ್ನದ ಊಟ ಕೂಡಾ ಅಮೆರಿಕಾದ ಜೀವನ ಕ್ರಮಕ್ಕೆ ಹೊಂದಿಕೊಳ್ಳುವಂಥದಲ್ಲ. ಅದು ಅತಿಥಿಯಾದ ನನಗಾಗಿ ಮಾಡಿದ ವಿಶೇಷ ವ್ಯವಸ್ಥೆ. ಅಷ್ಟೆ. ಯಾಕೆಂದರೆ ಇಲ್ಲಿ ಯಾರೂ ನಮ್ಮಲ್ಲಿಯಂತೆ ಮೂರು ಹೊತ್ತು ಊಟ ಮಾಡುವ ಜನವಲ್ಲ; ಅದಕ್ಕೆ ಅವರಿಗೆ ಪುರುಸೊತ್ತೂ ಇಲ್ಲ. ಬೆಳಿಗ್ಗೆ ಎದ್ದ ಕೂಡಲೇ ‘ಸೀರಿಯಲ್’ (ಪ್ಯಾಕೆಟ್‌ಗಳಲ್ಲಿ ದೊರೆಯುವ ಪೌಷ್ಟಿಕ ಲಘು ಉಪಹಾರದ ವಸ್ತು) ತಿಂದು, ಹಣ್ಣಿನ ರಸ (ಇದೂ ಕೂಡಾ ಸೊಗಸಾದ ಪ್ಯಾಕೆಟ್‌ಗಳಲ್ಲಿ ದೊರೆಯುತ್ತದೆ) ಕುಡಿದು, ಏಳು-ಏಳೂವರೆಗೆ ಕೆಲಸಕ್ಕೆ ಹೊರಟರೆಂದರೆ, ಮುಗಿಯಿತು. ಮಧ್ಯಾಹ್ನದ ಬಿಡುವಿನಲ್ಲಿ ಒಂದಷ್ಟು ಸ್ಯಾಂಡ್‌ವಿಚ್ಚನ್ನೊ, ಒಂದಿಷ್ಟು ಬ್ರೆಡ್ಡಿನ ಚೂರುಗಳನ್ನೋ ತಿಂದು ಕಾಫಿ ಕುಡಿದು ‘ಲಂಚ್’ ಮುಗಿಸಿದರೆಂದರೆ, ಇಡೀ ದಿನದ ಕೆಲಸ ತೀರಿಸಿಕೊಂಡು ಸಂಜೆ ಆರು- ಆರೂವರೆಗೆ ಮನೆ ತಲುಪಿದಾಗಲೇ ನಿಜವಾದ ಊಟ – ಡಿನ್ನರ್. ಅದು ಇದೂ ಮಾತಾಡುತ್ತ, ಟಿ.ವಿ. ನೋಡುತ್ತ, ಅಥವಾ ಓದುತ್ತ, ರಾತ್ರಿ ಹತ್ತು – ಹನ್ನೊಂದರ ನಂತರವೇ ಮಲಗುವುದು. ಸರಿ, ಮತ್ತೆ ಬೆಳಗಿನ ಝಾವ ಐದು – ಐದೂವರೆಗೆ ಎದ್ದು’ ‘ಬ್ರೆಕ್‌ಫಾಸ್ಟ್’ ಮುಗಿಸಿ, ಏಳು-ಏಳೂವರೆಯ ವೇಳೆಗೆ ಚಕ್ರಗಳ ಮೇಲೆ ಕುಳಿತು ದುಡಿತಕ್ಕೆ ಹೊರಟರೆಂದರೆ, ಬಿಡುವಿಲ್ಲದ ಈ ಕರ್ಮಚಕ್ರ ವಾರದ ಐದೂ ದಿನ ತಿರುಗುತ್ತಲೇ ಇರುತ್ತದೆ. ಶನಿವಾರ- ಭಾನುವಾರ ಮಾತ್ರ ಈ ಚಕ್ರಕ್ಕೆ ವಿರಾಮ.