ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ತುಂಬೆಲ್ಲ ಏರೋ ಇಂಡಿಯಾ ಪ್ರದರ್ಶನದ ಸಂಭ್ರಮವೋ ಸಂಭ್ರಮ. ದೇಶವಿದೇಶಗಳ ವಿಮಾನಗಳು, ಅವುಗಳ ವೈಶಿಷ್ಟ್ಯ, ಹಕ್ಕಿಗಳಷ್ಟೇ ಸರಾಗವಾಗಿ ಹಾರಾಡುತ್ತಿದ್ದ ಸೂರ್ಯಕಿರಣ ಹಾಗೂ ಫ್ಲೈಯಿಂಗ್ ಬುಲ್ಸ್ ವಿಮಾನಗಳ ಕಸರತ್ತುಗಳು – ಎಲ್ಲೆಲ್ಲಿ ನೋಡಿದರೂ ಇದೇ ಸುದ್ದಿ.

ಇವೆಲ್ಲವುದರ ಜೊತೆಗೆ ೨೦೧೧ರ ಪ್ರದರ್ಶನದಲ್ಲಿ ಸುದ್ದಿ ಮಾಡಿದ್ದು ಒಂದು ಮಾರುತಿ ಕಾರು.

ಅರೆ, ವಿಮಾನ ಪ್ರದರ್ಶನದಲ್ಲಿ ಕಾರಿಗೇನು ಕೆಲಸ ಎಂದು ಆಶ್ಚರ್ಯಪಟ್ಟವರು ಇದು ಹಾರುವ ಕಾರು ಎಂದು ತಿಳಿದು ಇನ್ನೂ ಒಂದಷ್ಟು ಆಶ್ಚರ್ಯಪಟ್ಟರು.

ಅಲ್ಲ, ಕಾರುಗಳೆಲ್ಲಾದರೂ ಹಾರಾಡುವುದು ಸಾಧ್ಯವೆ?

* * *

ಕಾರುಗಳನ್ನು ಹಾರಿಸುವ ಪ್ರಯತ್ನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಸುದೀರ್ಘ ಅವಧಿಯಲ್ಲಿ ಮನುಷ್ಯ ಏನೇನನ್ನೆಲ್ಲ ಕಂಡುಹಿಡಿದಿದ್ದಾನೆ, ಎಷ್ಟೆಲ್ಲ ಅಸಾಧ್ಯಗಳನ್ನು ಸಾಧ್ಯವಾಗಿಸಿದ್ದಾನೆ. ಆದರೆ ವೈಯಕ್ತಿಕ ಉಪಯೋಗಕ್ಕೆ ಸುಲಭವಾಗಿ ಬಳಸಬಹುದಾದಂತಹ ಹಾರಾಡುವ ವಾಹನದ ಸೃಷ್ಟಿ ಮಾತ್ರ ಅವನಿಂದ ಈವರೆಗೂ ಸಾಧ್ಯವಾಗಿಲ್ಲ. ರಸ್ತೆಯ ಮೇಲಿನ ಸಂಚಾರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಕಾರಿನ ನಿರ್ಮಾಣದಂತಹುದೇ ಆವಿಷ್ಕಾರ ಆಕಾಶಸಂಚಾರದಲ್ಲೂ ಆಗಬಹುದೇನೋ ಎಂದು ಎಲ್ಲರೂ ಕಾಯುತ್ತಲೇ ಇದ್ದಾರೆ ಅಷ್ಟೆ.

ಹಾಗೆಂದ ಮಾತ್ರಕ್ಕೆ ಹಾರುವ ಕಾರುಗಳನ್ನು ಯಾರೂ ರೂಪಿಸಿಯೇ ಇಲ್ಲ ಎಂದೇನೂ ಅರ್ಥವಲ್ಲ. ಗಮನಾರ್ಹ ಎನ್ನಬಹುದಾದ ಮೊದಲ ಹಾರುವ ಕಾರಿನ ಸೃಷ್ಟಿ ೧೯೧೭ರಷ್ಟು ಹಿಂದೆಯೇ ಆಗಿತ್ತು. ‘ಆಟೋಪ್ಲೇನ್’ ಎಂಬ ಹೆಸರಿನ ಈ ವಾಹನವನ್ನು ರೂಪಿಸಿದ ಗ್ಲೆನ್ ಕರ್ಟಿಸ್‌ನನ್ನು ಹಾರುವ ಕಾರಿನ ಪಿತಾಮಹ ಎಂದು ಕರೆಯಲಾಗುತ್ತದೆ.

ಆದರೆ ಈ ಹಾರುವ ಕಾರಿನ ಹಾರಾಟ ಮಾತ್ರ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ನೆಲದಿಂದ ಮೇಲೆದ್ದು ಕುಪ್ಪಳಿಸುವಂತೆ ಚಲಿಸಿದ ಈ ಆಟೋಪ್ಲೇನ್ ಸಮರ್ಪಕ ಹಾರಾಟ ನಡೆಸುವಲ್ಲಿ ಸಾಫಲ್ಯ ಕಾಣಲೇ ಇಲ್ಲ.

ಇದರ ಮುಂದಿನ ವರ್ಷ, ೧೯೧೮ರಲ್ಲಿ ಫೆಲಿಕ್ಸ್ ಲಾಂಗೋಬಾರ್ಡಿ ಎಂಬ ವ್ಯಕ್ತಿ ಹಾರುವ ಕಾರಿನ ವಿನ್ಯಾಸಕ್ಕಾಗಿ ಮೊತ್ತಮೊದಲ ಹಕ್ಕುಸ್ವಾಮ್ಯವನ್ನು (ಪೇಟೆಂಟ್) ಪಡೆದುಕೊಂಡ. ಮುಂದೆ, ೧೯೩೭ರಲ್ಲಿ, ಗ್ಲೆನ್ ಕರ್ಟಿಸ್‌ನ ಸಹವರ್ತಿಯಾಗಿದ್ದ ವಾಲ್ಡೋ ವಾಟರ್‌ಮನ್ ಎಂಬಾತ ‘ಆರೋಬೈಲ್’ ಎಂಬ ಹಾರುವ ಕಾರನ್ನು ರೂಪಿಸಿದ. ಈ ವಾಹನ ಒಂದೆರಡು ಪ್ರದರ್ಶನ ಹಾರಾಟಗಳಲ್ಲೂ ಪಾಲ್ಗೊಂಡಿತ್ತು.

ಗಮನಾರ್ಹ ಯಶಸ್ಸು ಗಳಿಸಿದ ಮೊದಲ ಹಾರುವ ವಾಹನ ಎಂದರೆ ೧೯೪೦ರ ಸುಮಾರಿಗೆ ತಯಾರಾದ ‘ಏರ್‌ಫೀಬಿಯನ್’. ಅಮೆರಿಕಾದ ರಾಬರ್ಟ್ ಫುಲ್ಟನ್ ಎಂಬಾತ ರೂಪಿಸಿದ ಈ ಹಾರುವ ಕಾರಿಗೆ ಅಮೆರಿಕಾದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮಾನ್ಯತೆಯೂ ದೊರಕಿತ್ತು.

ಆದರೂ ಏರ್‌ಫೀಬಿಯನ್ ಮಾತ್ರ ಅಷ್ಟೇನೂ ಜನಪ್ರಿಯವಾಗಲಿಲ್ಲ.

ಇದಕ್ಕಿಂತ ಕೊಂಚವೇ ಭಿನ್ನವಾದ ಕತೆ ‘ಕನ್ವ್‌ಏರ್‌ಕಾರ್’ ಎಂಬ ಇನ್ನೊಂದು ಹಾರುವ ಕಾರಿನದು. ಕ್ಯಾಲಿಫೋರ್ನಿಯಾದ ಕನ್ಸಾಲಿಡೇಟೆಡ್ ವಲ್ಟೀ ಏರ್‌ಕ್ರಾಫ್ಟ್ ಕಂಪನಿ ಎಂಬ ಸಂಸ್ಥೆ ನಿರ್ಮಿಸಿದ್ದ ಸುಮಾರು ೧೫೦೦ ಡಾಲರ್ ಬೆಲೆಯ ಈ ವಾಹನ ವ್ಯಾವಹಾರಿಕವಾಗಿ ಇನ್ನೇನು ಯಶಸ್ವಿಯಾಗಿಯೇಬಿಡುತ್ತದೆ ಎಂಬ ನಿರೀಕ್ಷೆ ಹುಟ್ಟಿಸಿತ್ತು. ರಸ್ತೆಯ ಮೇಲೆ ಸಾಮಾನ್ಯ ಕಾರಿನಂತೆಯೇ ಓಡಾಡುತ್ತಿದ್ದ ಈ ವಾಹನಕ್ಕೆ ಪ್ರತ್ಯೇಕ ರೆಕ್ಕೆಗಳನ್ನು ಅಳವಡಿಸಿದ ತಕ್ಷಣ ಹಾರುವ ಕಾರಾಗಿ ಪರಿವರ್ತನೆಗೊಳ್ಳುತ್ತಿತ್ತು.

೧೯೪೭ರ ನವೆಂಬರ್ ೧೭ರಂದು ಈ ಕನ್ವ್‌ಏರ್‌ಕಾರ್ ಸ್ಯಾನ್‌ಡಿಯಾಗೋ ನಗರದ ಸುತ್ತ ಸುಮಾರು ಒಂದೂಕಾಲು ಗಂಟೆಗಳ ಅವಧಿಯ ಹಾರಾಟ ನಡೆಸಿತು ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. “ಸಾರ್ವಜನಿಕ ಬಳಕೆಗಾಗಿ ಸುಲಭವಾಗಿ ಲಭ್ಯವಾಗಲಿರುವ ಹಾರುವ ಕಾರು ಇದೇ” ಎಂಬ ನಂಬಿಕೆ ಬಲವಾಗಿ ಬೆಳೆಯುತ್ತಿದ್ದಂತೆಯೇ ಈ ಹಾರುವ ಕಾರಿನ ಏಕೈಕ ಮಾದರಿ ಅಪಘಾತಕ್ಕೀಡಾಗಿ ನಾಶವಾಗಿಹೋಯಿತು; ಹಾರುವ ಕಾರಿನ ಕನಸು ಮತ್ತೆ ಕನಸಾಗಿಯೇ ಉಳಿದುಬಿಟ್ಟಿತು.

ಈ ನಡುವೆ ಸೈನಿಕರ ಬಳಕೆಗಾಗಿ ‘ಆವ್ರೋಕಾರ್’ ಎಂಬ ಹಾರಾಡುವ ವಾಹನವನ್ನು ನಿರ್ಮಿಸಲು ಕೆನಡಾ ಹಾಗೂ ಬ್ರಿಟನ್ನಿನ ಸೇನಾಪಡೆಗಳ ಜಂಟಿ ಪ್ರಯತ್ನವೂ ನಡೆದಿತ್ತು. ಯುದ್ಧಗಳ ಸಂದರ್ಭದಲ್ಲಿ ಸೈನಿಕರನ್ನು ಸುಲಭವಾಗಿ ಯುದ್ಧಭೂಮಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಡನೆ ಪ್ರಾರಂಭಿಸಲಾದ ಈ ಯೋಜನೆ ಕೂಡ ಯಶಸ್ಸುಗಳಿಸುವಲ್ಲಿ ವಿಫಲವಾಯಿತು.

೧೯೪೯ರಲ್ಲಿ ಅಮೆರಿಕಾದ ಮೌಲ್ಟನ್ ಟೇಲರ್ ಎಂಬಾತ ‘ಏರೋಕಾರ್’ ಎಂಬ ಹಾರುವ ಕಾರನ್ನು ನಿರ್ಮಿಸುವಲ್ಲಿ ಯಶಸ್ವಿಯಾದ. ರಸ್ತೆಯ ಮೇಲೆ ಸಾಮಾನ್ಯ ಕಾರುಗಳಂತೆಯೇ ಚಲಿಸುತ್ತಿದ್ದ ಈ ವಾಹನಕ್ಕೆ ಕೇವಲ ಐದೇ ನಿಮಿಷಗಳಲ್ಲಿ ಪ್ರೊಪೆಲರ್ ಹಾಗೂ ರೆಕ್ಕೆಗಳನ್ನು ಜೋಡಿಸಿ ಹಾರಾಟಕ್ಕೆ ಸಿದ್ಧಗೊಳಿಸುವುದು ಸಾಧ್ಯವಿತ್ತು. ೧೯೫೬ರ ವೇಳೆಗೆ ಈ ಹಾರುವ ಕಾರಿಗೆ ಸಿವಿಲ್ ಏರೊನಾಟಿಕ್ಸ್ ಅಡ್ಮಿನಿಸ್ಟ್ರೇಷನ್ ಮಾನ್ಯತೆಯ ಮನ್ನಣೆಯೂ ದೊರಕಿತು.

ಇದರ ಜೊತೆಜೊತೆಗೇ ಏರೋಕಾರ್ ಅನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಯೋಜನೆಗಳೂ ಸಿದ್ಧಗೊಳ್ಳುತ್ತಿದ್ದವು. ಆದರೆ ಈ ವಾಹನ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾದಾಗ ಏರೋಕಾರ್ ಉತ್ಪಾದನೆಯ ಕನಸುಗಳೂ ಕೊನೆಗೊಂಡವು.

ಹಾರುವ ಕಾರಿನ ಇತಿಹಾಸದಲ್ಲಿ ನಡೆದ ಮತ್ತೊಂದು ಗಮನಾರ್ಹ ಪ್ರಯತ್ನವೆಂದರೆ ‘ಮಿಜ಼ಾರ್’ನ ಸೃಷ್ಟಿ. ಹೆನ್ರಿ ಸ್ಮೋಲಿನ್ಸ್‌ಕಿ ಎಂಬ ವ್ಯಕ್ತಿ ಫೋರ್ಡ್ ಪಿಂಟೋ ಕಾರಿಗೆ ಸೆಸ್ನಾ ಸ್ಕೈಮಾಸ್ಟರ್ ವಿಮಾನದ ಭಾಗಗಳನ್ನು ಜೋಡಿಸಿ ಈ ವಾಹನವನ್ನು ನಿರ್ಮಿಸಿದ್ದ. ಆದರೆ ಪರೀಕ್ಷಾರ್ಥ ಹಾರಾಟದ ಸಂದರ್ಭದಲ್ಲಿ ಈ ವಾಹನ ಅಪಘಾತಕ್ಕೀಡಾಗಿ ಹೆನ್ರಿ ಮೃತಪಟ್ಟ.

೧೯೫೦ರ ಸುಮಾರಿಗೆ ಫೋರ್ಡ್ ಸಂಸ್ಥೆ ಕೂಡ ಹಾರುವ ಕಾರುಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ರೂಪಿಸಿತ್ತಂತೆ. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ದೊಡ್ಡ ಪ್ರಮಾಣದಲ್ಲಿ ಹಾರುವ ಕಾರುಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನ ಇದೊಂದೇ ಇರಬೇಕು.

ಹಾಗೆ ನೋಡಿದರೆ ಪರಿಪೂರ್ಣ ಹಾರುವ ಕಾರುಗಳ ನಿರ್ಮಾಣದ ನಿಟ್ಟಿನಲ್ಲಿ ಇಂದಿಗೂ ಪ್ರಯತ್ನಗಳು ನಡೆಯುತ್ತಿವೆ. ‘ಸ್ಕೈಕಾರ್’ ಎಂಬ ವಾಹನವಂತೂ ಕಳೆದ ನಲವತ್ತು ವರ್ಷಗಳಿಂದ ಅಭಿವೃದ್ಧಿಯ ಹಂತದಲ್ಲಿದೆ. ಆದರೂ ಸದ್ಯದಲ್ಲಿ ಹಾರಾಡುವ ಕಾರೇನಾದರೂ ತಯಾರಾಗಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದರೆ ಅದು ಸ್ಕೈಕಾರ್ ಮಾತ್ರ ಎಂದು ಉದ್ಯಮದ ಮಂದಿ ದೃಢವಾಗಿ ನಂಬಿದ್ದಾರೆ. ದೊಡ್ಡ ಕಾರುಗಳಷ್ಟೇ ಇಂಧನ ಕ್ಷಮತೆ ಹೊಂದಿರುವ ಸ್ಕೈಕಾರ್‌ನ ಬೆಲೆ ಕೂಡ ದೊಡ್ಡ ಕಾರುಗಳ ಬೆಲೆಯ ಮಟ್ಟಕ್ಕೇ ಇಳಿಯಲಿದೆ ಎಂಬ ವಿಶ್ವಾಸ ಅದರ ನಿರ್ಮಾತೃಗಳದು.

ಸ್ಕೈಕಾರ್ ಜೊತೆಜೊತೆಗೇ ‘ಸ್ಕೈರೈಡರ್ ಎಕ್ಸ್೨ಆರ್’ ಎಂಬ ವಾಹನವೂ ತಯಾರಾಗುತ್ತಿದೆ. ಇದೀಗ ನಿರ್ಮಾಣ ಹಂತದಲ್ಲಿರುವ ‘ಫ್ಲೈಯಿಂಗ್ ಸ್ಪೋರ್ಟ್ಸ್ ಕಾರ್ – ೧’ ಎಂಬ ವಾಹನವಂತೂ ಒಂದು ಗುಂಡಿ ಒತ್ತಿದೊಡನೆ ವಿಮಾನವಾಗಿ ಬದಲಾಗುತ್ತದಂತೆ. ಇವಿಷ್ಟೇ ಅಲ್ಲ, ಪ್ಯಾರಾಜೆಟ್ ಸ್ಕೈಕಾರ್, ಮ್ಯಾಜಿಕ್ ಡ್ರಾಗನ್ ಏರ್‌ಕಾರ್, ಸ್ಕೈಬ್ಲೇಜರ್, ಮಿಲ್ನರ್ ಏರ್‌ಕಾರ್ – ಹೀಗೆ ಅನೇಕ ಹಾರುವ ಕಾರುಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ಟೆರ್ರಾಫ್ಯೂಜಿಯಾ ಎಂಬ ಸಂಸ್ಥೆ ನಿರ್ಮಿಸುತ್ತಿರುವ ಟ್ರಾನ್ಸಿಷನ್ ಎಂಬ ವೈಯಕ್ತಿಕ ಆಕಾಶ ವಾಹನವಂತೂ ಭಾರೀ ಕುತೂಹಲ ಮೂಡಿಸಿದೆ. ಇದನ್ನು ಸಾಮಾನ್ಯ ಕಾರಿನಂತೆಯೇ ವಿಮಾನ ನಿಲ್ದಾಣದವರೆಗೂ ಚಲಾಯಿಸಿಕೊಂಡು ಹೋಗಿ ಅಲ್ಲಿ ವಿಮಾನವಾಗಿ ಪರಿವರ್ತಿಸಿಕೊಂಡು ಹಾರಿಹೋಗಬಹುದಂತೆ; ಗಮ್ಯಸ್ಥಾನ ತಲುಪಿದ ಮೇಲೆ ಮೂವತ್ತು ಸೆಕೆಂಡುಗಳಲ್ಲೇ ರೆಕ್ಕೆಗಳನ್ನೆಲ್ಲ ಮಡಿಸಿ ಮತ್ತೆ ಕಾರಿನಂತೆ ಬಳಸುವುದೂ ಸಾಧ್ಯವಂತೆ! ಸುಮಾರು ಎರಡು ಲಕ್ಷ ಅಮೆರಿಕನ್ ಡಾಲರ್ ಬೆಲೆಯ ಈ ವಾಹನ ಸದ್ಯದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಇಷ್ಟೆಲ್ಲ ಪ್ರಯತ್ನಗಳು ನಡೆದಿದ್ದರೂ ಜನಸಾಮಾನ್ಯರ ಬಳಕೆಗೆ ಸುಲಭವಾಗಿ ಲಭ್ಯವಾಗುವಂತಹ ಹಾರುವ ಕಾರು ಮಾತ್ರ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹಾರುವ ಕಾರು ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಕಾಯುತ್ತ ಕುಳಿತವರು ಕುಳಿತೇ ಇದ್ದಾರೆ. ಅವರ ನಿರೀಕ್ಷೆಗೆ ಕೊನೆ ಎಂದೋ, ನಾವೂ ಕಾದು ನೋಡೋಣ; ಆ ನಿರೀಕ್ಷೆ ಬೇಗ ಕೊನೆಯಾಗಲಿ ಎಂದೂ ಹಾರೈಸೋಣ!

(ವಿಜ್ಞಾನ ಲೋಕ, ಜುಲೈ ೨೦೧೧)