ಭಾಮಿನಿ
ಸುರಭಿಯನು ಕೊಡದಿರ್ದ ರೋಷದಿ |
ಧರಣಿಪನ ತಾ ಕೊಂದೆನಿದಕೇನ್ |
ಹರಚಿತವು ತನಗೆಂದು ಬೆಸಸಿದಡನು ಮಾಳ್ಪೆನೆನೆ |
ವರುಷವೊಂದರ ತನಕ ಧರಣಿಯೊ |
ಳಿರುವ ತೀರ್ಥಗಳಲ್ಲಿ ಮಿಂದರೆ |
ಹರಿವುದೀ ಪಾಪವೆನೆ ಪದಕೆರಗುತ್ತ ಬೀಳ್ಗೊಂಡ || ೧ ||
ವಾರ್ಧಿಕ
ಪರಶುರಾಮನು ತೆರಳಲಿತ್ತ ಜಮದಗ್ನಿಮುನಿ |
ಹರುಷದಿಂದಾಶ್ರಮದೊಳಿರಲತ್ತ ಭಯಗೊಂಡು |
ಧುರದೊಳೋಡಿದ ಕಾರ್ತವೀರ್ಯಾರ್ಜುನನ ಸುತರು ಬಹುದೇಶ ತೊಳಲಿ ಬಳಲಿ |
ಕರಗಿ ಚಿತ್ತದಿ ತಮ್ಮ ತಂದೆಮರಣಕ್ಕೆ ಪೆರ |
ತರುಹ ಕಾಣದೆ ಬಳಲಿ ಪುರಕೆ ನಡೆತರಲಂಜಿ |
ಭರಿತ ಶೋಕದೊಳಯ್ವರೊಂದು ಠಾಣದಿ ನಿಂತು ಪೇಳ್ದ ಹೈಹಯನನುಜಗೆ || ೧ ||
ರಾಗ ನೀಲಾಂಬರಿ ರೂಪಕತಾಳ
ಏನೆಂಬೆನು ನಮಗಾಗಿಹ | ಹಾನಿಯ ಪರಿಭವವಕಟ ||
ಮೀನಾಂಕಾಂತಕನಲ್ಲದೆ | ಕಾಣೆನು ರಕ್ಷಕರ ||ಪ||
ಕಂದರ ಮರಣವ ಕಾಣುತ | ಲಂದತಿ ಭಯಗೊಳುತ |
ಹಿಂದೆಗೆದೋಡುತ ಜೀವಿಸಿ | ಸಂದೆವು ದೇಶಾಂತರಗಳ ||
ನಿಂದಿಗು ಕ್ಷೇಮವಿದಿಲ್ಲೆನ | ಲೆಂದನು ಸೋದರನು || ೧ ||
ವಿನಯದೊಳಣ್ಣನೆ ಲಾಲಿಸು | ಜನಕನ ರಣದೊಳು ತರಿದಿಹ |
ಮುನಿಸುತನದರಿಂದಾತನ | ಜನಕನ ಶಿರ ಕಡಿದು |
ಘನ ಬೇಗದಿ ಧರೆಗಿಳುಹುವ | ದನುನಯವೆಮಗಿರೆ ನೀನಿದ |
ನನುಚಿತವೆನದಿರು ಕೇಳೆಂ | ದೆನೆ ಹೈಹಯ ನುಡಿದ || ೨ ||
ಪೂತುರೆ ತಮ್ಮನೆ ಮೆಚ್ಚಿದೆ | ನೀತಿಯ ಮಾತಿದು ನಮ್ಮಯ |
ತಾತನ ಕೊಂದಾತನ ನಿಜ | ತಾತನ ಕೊಲ್ಲುವುದು |
ಭೂತಳದೊಳಗಿದರಿಂದಪ | ಖ್ಯಾತಿಯು ನಮಗಾಗದು ಬಿಡು |
ಸೋತವರಾವಯ್ಸಲೆ ಎನು | ತಾತನು ಹೊರವಂಟ || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಈ ತೆರದಿ ಹೈಹಯರು ಧೈರ್ಯಮ | ಹಾತಿಶಯದಿಂದೊಂದು ಬುದ್ಧಿಯೊ ||
ಳಾ ತಪಸ್ವಿಯ ವನವನರಸುತ | ಲಯ್ತೆರಲ್ಕೆ || ೧ ||
ಇತ್ತ ರಾಮಾನುಜರು ಸಹ ಮುನಿ | ಪೋತ್ತಮನ ನೇಮದಿ ಪಲಾಶದ ||
ಪತ್ರಗಳ ತರಲಯ್ದಿದರು ವನ | ದತ್ತಲಾಗಿ || ೨ ||
ಬಂದು ಹೈಹಯರಾ ಯತೀಂದ್ರನ | ಮಂದಿರವ ಸಾರುತಿರಲತಿಭಯ ||
ದಿಂದಲೆಡಬಲ ತಿರುಗಿ ಕಂಡರು | ಮುಂದೆ ಋಷಿಯ || ೩ ||
ಭಾಮಿನಿ
ಎಸೆವ ಕೆಂಜೆಡೆ ಮಿನುಗಿ ಫಣೆಯೊಳು |
ಭಸಿತ ರೇಖೆಯ ಮುಚ್ಚು ಕಂಗಳ |
ಬಿಸರುಹಾಸನದೊಳಗೆ ಕುಳ್ಳಿರ್ದೆಸೆವ ಮಾರುತನ |
ಮುಸುಕದಿಂದ್ರಿಯ ವಿಷಯಗಳನಂ |
ಜಿಸುತ ಪರಶಿವಧ್ಯಾನದೊಳು ಶೋ |
ಭಿಸುವ ಕೃಶಗಾತ್ರನನು ಕಾಣುತಲೆಂದರವರಂದು || ೧ ||
ರಾಗ ಮಾರವಿ ಏಕತಾಳ
ಈತನೆ ನಮ್ಮಯ | ತಾತನ ಧುರದಿ ಕೊಂ | ದಾತನ ಪಿತ ನೋಡ ||
ಭೀತಿಯಗೊಳ್ಳದೆ | ಘಾತಿಸಿರೆನಲತಿ | ಕೌತುಕಗೊಳುತಾಗ || ೧ ||
ರೇಣುಕೆ ಕಂಡು ಭ | ಯಾತುರಳಾಗುತ | ತಾನಡಹಾಯುತಲಿ ||
ಹೀನಮತಿಗಳಿಂ | ದೇನನು ನೆನೆದಿರಿ | ಮೌನಿಯ ಕೊಲ್ಲುವಿರೆ || ೨ ||
ಗಂಡನ ಕೊಲದಿರಿ | ಭಂಡ ನೃಫಾಲರೆ | ಪುಂಡರ ತೆರದೊಳೆನೆ ||
ದಿಂಡೆಯೆ ಕೆಳಸಾ | ರೆಂದುರೆ ಗರ್ಜಿಸಿ | ಚಂಡಪರಾಕ್ರಮರು || ೩ ||
ಖಡುಗವ ಕೊಂಡಾ | ಧಡಿಗರು ಮುನಿಪನ | ಕಡಿದರು ತವಕದಲಿ ||
ಫಡ ಸಾರೆಂದಾ | ಮಡದಿಯ ಝೇಂಕಿಸಿ | ನಡೆದರು ಹೈಹರು || ೪ ||
ಭಾಮಿನಿ
ಆ ಮಹಾಮುನಿಶಿರವ ಕೊಂಡಾ |
ಭೂಮಿಪಾತ್ಮಜರೊಯ್ಯಲಾ ಕ್ಷಣ |
ತಾಮರಸಲತೆ ಕಾಡುಗಿಚ್ಚಿಲಿ ಬಾಡಿ ಬೀಳ್ವಂತೆ |
ಕೋಮಲಾಂಗಿಯು ಬಿದ್ದು ಧರೆಯೊಳು |
ರಾಮ ಹಾ ಭೃಗುವಂಶವಾರಿಧಿ |
ಸೋಮ ಬಾರೆಂದಳಲಿದಳು ಬಾಯ್ಬಿಡುತ ಕಮಲಾಕ್ಷಿ || ೧ ||
ರಾಗ ನೀಲಾಂಬರಿ ಏಕತಾಳ
ಶಿವನೆ ನಾನ್ಯಾರಿಗೆಂಬೆನು | ತನಗೆ ಬಂದ | ಬವಣೆಯ ದುಃಖವನು |
ಅವನಿಯ ಸತಿಯರಲ್ಲಿ | ತನ್ನಂಥ ಪಾಪಿ | ಯುವತಿಯರಿರ್ಪರೆಲ್ಲಿ || ೧ ||
ಕಾಂತನ ಮರಣವನು | ಕಣ್ಣಾರೆನೋಡಿ | ದಂತಾಯಿತಿಂದು ನಾನು ||
ಚಿಂತಿಸಿ ಫಲಗಳಿಲ್ಲ | ಮರೆತನೆ ಲಕ್ಷ್ಮೀ | ಕಾಂತನು ನಮ್ಮೆನೆಲ್ಲ || ೨ ||
ತರಳರಿಲ್ಲದ ವೇಳ್ಯದಿ | ದುಷ್ಟರು ಪತಿಯ | ಕೊರಳ ಕೊಯ್ದರು ಜವದಿ ||
ಪರಿ ಯಾರೊಳಿದನೆಂಬೆನು | ಹಾ ಪತಿಯೆ ರಾಮ | ಬರಲಿಲ್ಲವೇನ್ ಗೆಯ್ವೆನು || ೩ ||
ಭಾಮಿನಿ
ತರುಣಿ ಮರಗುವ ಧ್ವನಿಯ ಕೇಳುತ |
ನೆರೆದ ಋಷಿಗಳು ಪರಿಕಿಸುತಲಾ |
ತರಳೆಯನು ಪಿಡಿದೆತ್ತಿ ಹಾ ಹಾ ರಾಮ ಹಾಯೆನುತ |
ಮೊರೆಯಿಡಲ್ಕಾ ರವವ ಕೇಳುತ |
ಪರಶುಧರ ಬಂದವ್ವೆಯಳ ಪದ |
ಕರೆಗುತಲಿ ಬೆಸಗೊಂಡ ತವಕದೊಳೇನಿದೇನೆಂದು || ೧ ||
ರಾಗ ಕಾಂಭೋಜ ಝಂಪೆತಾಳ
ಧಾರಿಣಿಯ ಮೇಲೆ ಕ | ಣ್ಣೀರ ಸುರಿಸುತಳಲ್ವ | ಕಾರಣವಿದೇನ್ ಪೇಳಿರಮ್ಮ ||
ಯಾರು ಮಾಡಿದರಿಂಥ | ಘೋರಕೃತ್ಯವ ದುಃಖ | ಸೈರಿಸುತಲದ ಪೇಳಿರಮ್ಮ || ೧ ||
ರಾಗ ಆನಂದಭೈರವಿ ಏಕತಾಳ
ಮಗನೆ ಕೇಳಾರೆಂಬುದರಿಯೆ | ವಿಗಡರಯ್ವರಿಲ್ಲಿ ಬಂದು |
ನಿಂತರು | ಬುದ್ಧಿ | ಭ್ರಾಂತರು || ೧ ||
ರಾಗ ಕಾಂಭೋಜ ಏಕತಾಳ
ಕಾಣಲವದಿರ ಕುರುಹು | ಮಾನವಾಸುರ ದಿವಿಜ | ರಾ ನಾಗರೋ ಪೇಳಿರಮ್ಮ ||
ಏನ ಮಾತಾಡಿದರು | ಮೌನಿಯನು ಕಡದಿಹ ನಿ | ಧಾನ ವೇನೆನಗರುಹಿರಮ್ಮ || ೧ ||
ರಾಗ ಆನಂದಭೈರವಿ ಏಕತಾಳ
ಆತಗಳ್ ಬಂದೆಮ್ಮ ಪಿತನ | ಘಾತಿಸಿದನ ಜನಕನೆಂದು |
ನುಡಿದರು | ಕೊರಳ | ಕಡಿದರು || ೧ ||
ರಾಗ ಕಾಂಭೋಜ ಝಂಪೆತಾಳ
ಓಹೋ ತಿಳಿದೆನು ಕಾರ್ತ | ವೀರ್ಯನ ಕುಮಾರಕರು ||
ಹೈಯಯಾದ್ಯರು ನಿಜವಿದಮ್ಮ | ಸಾಹಸವ ತೋರ್ದವರ |
ರೂಹುಗೆಡಿಸುವೆ ನೀಗ | ನೀ ಹದುಳದೊಳಗಿರ್ಪುದಮ್ಮ || ೧ ||
ಭಾಮಿನಿ
ಹಿಂದೆ ಸಮರದಿ ಜುಣುಗುತೋಡಲು |
ಹಂದೆಗಳ ಸುಡಲೆನುತ ಬಿಟ್ಟಿಹೆ |
ನಿಂದು ಕೆಣಕಿದರೆಮ್ಮೊಳಿಲ್ಲಪರಾಧ ಮರುಗದಿರಿ |
ತಂದೆತನುವನು ಕಾದಿಹುದು ನೀ |
ವಿಂದು ಶಿರ ತಹೆನೆನುತ ರಭಸದಿ |
ಬಂದು ಮಾಹಿಷ್ಮತಿಗೆ ಕರೆದನು ನೃಪಕುಮಾರಕರ || ೧ ||
ರಾಗ ಪಂಚಾಗತಿ ಮಟ್ಟೆತಾಳ
ಯಾರೊ ಹೈಹಯಾಖ್ಯ ನೃಪಕು | ಮಾರ ರಾಜಕುಲದಿ ಕುನ್ನಿ |
ತೋರೊ ನಿನ್ನ ಮುಖವನಿದಿರು | ಬಾರೊ ಶೀಘ್ರದಿ |
ಮಾರಿಯನ್ನು ಕೆಣಕಿ ತಾ | ನೂರು ಹೊಕ್ಕರುಳಿವುದುಂಟೆ |
ಚೋರರಿಲ್ಲಿ ಬಹುದೆನುತ್ತ | ಭೋರು ಗುಡಿಸಿದ || ೧ ||
ಫಡ ಫಡೆಲೆ ಮದಾಂಧರುಗಳೆ | ಧಡಿಗತನದೊಳೆನ್ನ ಪಿತನ |
ಕಡಿದುದಕ್ಕೆ ನಿಮ್ಮ ತಲೆಯ | ಹೊಡೆವೆನೆಂದೆನೆ |
ನುಡಿಯ ಕೇಳ್ದು ಬಂದು ಭೋರು | ಗುಡಿಸಿ ಪೇಳ್ದರೆಮ್ಮ ಪಿತನ |
ಕಡಿದ ಮಯ್ಯಿಗಾಗಿ ಶಿರವ | ಕಡಿದೆ ಕೇಳೆಲ || ೨ ||
ದುರುಳ ನೃಪರೆ ನಿಮ್ಮ ಪಿತನು | ಸುರಭಿಯನ್ನು ಕದ್ದು ತಂದ |
ದುರಿತ ತಟ್ಟಿ ಮಡಿದವನು | ಧುರದ ಮಧ್ಯದಿ |
ಕುರುಬತನದೊಳೆನ್ನ ಪಿತನ | ಶಿರವನಿಂದು ತರಿದರಿಂದ |
ಬರಿದೆ ತಾತನಿರುವ ಯಮನ | ಪುರಕೆ ಪೋಪಿರಿ || ೩ ||
ಕುನ್ನಿ ದ್ವಿಜನೆ ಕೇಳು ಭರದೊ | ಳೆನ್ನ ಪಿತನ ಕೊಂದ ದುರಿತ |
ನಿನ್ನ ಬಿಡುವುದೇನೊ ನಿರುಕಿ | ಸಿನ್ನು ನಿಮಿಷದಿ |
ಸ್ವರ್ಣಪುಂಖದಸ್ತ್ರತತಿಗ | ಳನ್ನು ಬಿಟ್ಟು ಶಿರವ ತರಿವೆ |
ನೆನ್ನುತೆಸೆಯೆ ಕಡಿದು ಪೇಳ್ದ | ನನ್ನಿಮಾತನು || ೪ ||
ಪಿತನ ತಲೆಯ ಕೊಡುತಲೆನ್ನ | ನತರು ಎನಿಸಿ ಬಾಳುತಿನ್ನು |
ಕ್ಷಿತಿಯನಾಳಿ ವ್ಯರ್ಥ ನಿಮ್ಮ | ಹತಿಸೆ ಕೇಳಿರಿ |
ಅತುಳ ಕ್ಷಾತ್ರತಾಮಸವನು | ಜತನದಿಂದ ಬಿಡಿರೆನ್ನುತ್ತ |
ಹಿತದಿ ಭೃಗುಜ ಪೇಳೆ ಕೋಪಿ | ಸುತಲೆ ನುಡಿದರು || ೫ ||
ಭಾಮಿನಿ
ಎಲವೊ ಹಾರುವ ಗರುವದೊಳು ನೀ |
ಗಳಹಿದರೆ ನಾವ್ ನಿನ್ನ ತಂದೆಯ |
ತಲೆಯ ಕೊಡುವವರಲ್ಲೆನುತ ಶರಗಳನು ಸುರಿಯಲ್ಕೆ |
ಪ್ರಳಯಭೈರವನಂತೆ ಗರ್ಜಿಸಿ |
ಪೊಳೆವ ಕೊಡಲಿಯ ತೆಗೆದಿಡಲು ನೃಪ |
ಕುಲಜರನು ತರಿವುತ್ತ ಸೈನ್ಯವ ಸವರಿ ನಿಮಿಷದಲಿ || ೧ ||
ವಾರ್ಧಿಕ
ಅಪ್ರತಿಮಪರಾಕ್ರಮನು ತೆಗೆದಿಟ್ಟ ಪರಶು ವೈ |
ರಿಪ್ರಕರಮಂ ಗೆಲಿದು ನಿಜಹಸ್ತಕಯ್ದಲತಿ |
ಕ್ಷಿಪ್ರದಿಂ ತಂದೆತಲೆಯಂ ಕೊಂಡು ತನ್ನಾಶ್ರಮಕೆ ಬಂದು ಪಿತೃದೇಹಕೆ |
ವಿಪ್ರವರ್ಯನು ಜೋಡಿಸುತಲೆತ್ತುತವನ ಚರ |
ಣಪ್ರದೇಶಕೆ ಮಣಿಯೆ ಪರಸಿದಂ ಕಂಡು ಸುರ |
ರಪ್ರಮೇಯನ ಕೃತ್ಯಕತಿ ಸಂತಸಂ ಬಡುತ ಕರೆದರೈ ಪೂಮಳೆಯನು || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂದುಕುಲಜನೆ ಕೇಳು ತನ್ನಯ | ತಂದೆಯನು ಮಡುಹಿದುದಕಿಪ್ಪ ||
ತ್ತೊಂದು ಬಾರಿಯು ಕ್ಷತ್ರಿಕುಲಜರ | ಕೊಂದು ರಾಮ || ೧ ||
ಧರೆಯ ನಿಕ್ಷತ್ರವನು ಗೆಯ್ಯಲು | ಮರುಗಿ ಋಷಿ ಜಮದಗ್ನಿ ಕಾಣುತ ||
ತರಳ ಭಾರ್ಗವಗೆಂದ ತಾನತಿ | ಕರುಣದಿಂದ || ೨ ||
ಒಬ್ಬನೆನ್ನಯ ಶಿರವ ಕಡಿದದ | ಕೂರ್ಬಿಯೊಳಗಿಹ ಪಾರ್ಥಿವರ ಕುಲ ||
ಸರ್ಬವನು ನೀ ಕೊಂದು ಕೀರ್ತಿಯ | ಪರ್ಬಿಸಿದೆಯೈ || ೩ ||
ಈ ಪರಿಯ ಕೊಲೆಯಿಂದ ಬಂದಿಹ | ಪಾಪವನು ನೀ ಕಳೆಯಲೋಸುಗ ||
ಶ್ರೀಪತಿಯ ಭಜಿಸೆಂಬ ಪಿತನ ನಿ | ರೂಪಣಿಯನು || ೪ ||
ನೋಡಿ ಹರುಷದಿ ಋತ್ವಿಜರುಗಳ | ಕೂಡಿಸುತ ಪಿತನಾಜ್ಞೆಯಲಿ ಕ್ರತು ||
ಮಾಡಿದನು ಪಾತಕವ ಕಳೆಯಲು | ರೂಢಿಯೊಳಗೆ || ೫ ||
ವಾರ್ಧಿಕ
ಲೋಕಹಿತವಿಗ್ರಹಂ ಭೃಗುಜನೆಂದೆನಿಸಿ ನರ |
ಲೋಕದರಸರ ಸದೆದು ಭೂಭಾರ ಕಳೆದಮರ |
ಲೋಕಜರ ದಣಿಸಿದಂ ಕ್ರತುಮುಖದಿ ನರರಂತೆ ಲೋಕಸಂಗ್ರಹಕೋಸುಗ |
ಪಾಕಶಾಸನದೆಸೆಯ ಹೋತ್ರುವಿಗೆ ದಕ್ಷಿಣವ |
ಸ್ವೀಕರಿಸಿ ಬ್ರಹ್ಮಗೆ ಪ್ರಚೇತಸಾಧ್ವರ್ಯುವಿಂ |
ಗಾ ಕುಬೇರಾಸೆಯುದ್ಗಾತ್ರುವಿಗೆ ಮಧ್ಯದೆಸೆಯಂ ಕಾಶ್ಯಪರಿಗೆ ಕೊಟ್ಟು || ೧ ||
ಭಾಮಿನಿ
ಉಳಿದ ಧರಣಿಯ ಮಿಕ್ಕ ವಿಪ್ರರ |
ಕುಲಕೆ ಕೊಟ್ಟು ಸರಸ್ವತೀನದಿ |
ಜಲದೊಳವಭೃಥ ಮಂಗಳ ಸ್ನಾನವನು ವಿರಚಿಸುತ |
ಕಳೆದು ಪಾಪವ ವರಮಹೇಂದ್ರಾ |
ಚಲದಿ ತಪವೆನ್ನಸಗುತಿರ್ದನು |
ಜಲಜಲೋಚನನೆಂದು ಶೌನಕಮುನಿಗೆ ಗುಹ ನುಡಿದ || ೧ ||
ವಾರ್ಧಿಕ
ಶ್ರೀರಮಣ ಪರಶುರಾಮಾಹ್ವಯದಿ ಭೂಭುಜರ |
ವಾರಮಂ ತರಿದ ಚಾರಿತ್ರವಿದರ ಪುರಾಣ |
ಸೂರಿಗಳು ಬರೆದಿರ್ಪರೊಂದೊಂದು ವಿಧದಿಂದಲದರ ಪದ್ಯಗಳನಾಯ್ದು |
ಬೇರೆ ಕೆಲಮಂ ಕೂಡಿಸುತ್ತಲೀ ಕೃತಿಯಂ ತ |
ಯಾರಿಸಿದ ಪಾವಂಜೆ ಗುರುರಾಯರಾಜ್ಞೆಯಂ |
ತೀ ರಸೆಯ ಜನರಿಂಗೆ ನವ್ಯವೆಂಬಂದದಿ ಕಡಂದಲೆಯ ರಾಮಾಖ್ಯನು || ೧ ||
ಮಂಗಲಂ
ರಾಗ ರೇಗುಪ್ತಿ ಅಷ್ಟತಾಳ
ಪರಮಪುರುಷ ರಂಗಧಾಮನಿಗೆ | ಗರುಡಗಮನ ಶ್ರೀನಿವಾಸನಿಗೆ ||
ಕರುಣಾಸಮುದ್ರಗೆ ವರದವೆಂಕಟನಿಗೆ | ಪರಶುರಾಮಗೆ ರೇಣುಕಾತ್ಮಜಗೆ || ಮಂಗಲಂ || ೧ ||
ತಮನೆಂಬ ದೈತ್ಯನ ಸೀಳಿದಗೆ | ಅಮರಿಗಮೃತವನೆರೆದವಗೆ ||
ಸುಮನಸರಸು ಕರೆದಭಯವನಿತ್ತಗೆ | ಜಮದಗ್ನಿತರಳಗೆ ಶುಭಕರಗೆ || ಮಂಗಲಂ || ೨ ||
ಧಾತ್ರಿಯನೊಯ್ದನ ಸೀಳಿದಗೆ | ನೇತ್ರಭಯಂಕರ ನರಸಿಂಹಗೆ ||
ಗೋತ್ರವನಳಿದ ಶ್ರೀವಾಮನಮೂರ್ತಿಗೆ | ಕ್ಷತ್ರಿಕುಲಾಂತಕ ಭಾರ್ಗವಗೆ || ಮಂಗಲಂ || ೩ ||
ಕಾರ್ತವೀರ್ಯಾರ್ಜುನ ಕಾಳಗ ಸಂಪೂರ್ಣ
|| ಶ್ರೀಕೃಷ್ಣಾರ್ಪಣಮಸ್ತು ||
ಕಂದ
ಶ್ರೀಕೃಷ್ಣಾಚ್ಚುನಿಶಾಂದದೊ |
ಳೀ ಕೃತಿ ಮುದ್ರಾಪಿಸುತ್ತೆ ಪ್ರಕಟಿಸಿ ದಿದನುಂ ||
ಪ್ರಾಕೃತ ಭಾಷಾಭಿಜ್ಞರ್ |
ಸ್ವೀಕೃತವನು ಗೆಯ್ದು ಮುದದಿ ವಾಚಿಸಲನಿಶಂ || ೧ ||
Leave A Comment