ರಾಗ ಸೌರಾಷ್ಟ್ರ ತ್ರಿವುಡೆತಾಳ
ಮುನಿಪ ಕೇಳೀ ತೆರದಿ ಸುರಭಿಯ | ನನುಚರರು ಪಿಡಿದಾಗ ನೃಪ ನರ ||
ಮನೆಗೆ ತೆರಳುತ್ತಿರುವ ಸಮಯದೊ | ಳನುವನರಿತು || ೧ ||
ನಡೆದು ಬಂದಾ ಕೋಪ ಮುನಿಪಗೆ | ನುಡಿದುದೆನ್ನನು ಸ್ವೀಕರಿಸಿ ನೀ ||
ಕೊಡುಭರದಿ ಶಾಪವನು ನೃಪಬಲ | ಸುಡುವೆ ನೋಡು || ೨ ||
ಹಿಡಿದೆಯಾದರೆ ಛಲವನೆನ್ನಲಿ | ಕೆಡುವುದಿದಕೋ ಕಾರ್ಯ ಗ್ರಹಿಸೆನೆ ||
ನುಡಿದನಾ ಮುನಿನಾಥ ಕ್ರೋಧಗೆ | ಕಡುಹಿನಿಂದ || ೩ ||
ತುರುವನೊಯ್ಯಲಿ ಭೂಪ ಮೇಣಾ | ತರಣಿ ಪಶ್ಚಿಮದಲ್ಲಿ ಮೂಡಲಿ ||
ಶರಧಿ ಸಪ್ತವು ಬೆರತುಹೋಗಲಿ | ತೆರಳು ನಿನ್ನ || ೪ ||
ಸರುವಥಾ ನಾ ವರಿಸೆನೆನೆ ಖತಿ | ಸರಿದನತ್ತಲು ಕಾಮಧೇನುವ ||
ಚರರು ತಾ ಕೊಂಡೊಯ್ದರಿತ್ತಲು | ಪುರಕೆ ಜವದಿ || ೫ ||
ಭಾಮಿನಿ
ದೂತರೊಯ್ದಾ ಸುರಭಿಯನು ತರೆ |
ಪ್ರೀತಿಯಲಿ ಮನ್ನಿಸುತಲಾ ಭೂ |
ನಾಥ ಮೃತ್ಯುವ ಕರೆದ ವೋಲ್ ಬಂಧಿಸಲು ಬಳಿಕಿತ್ತ |
ಭೀತ ಹರುಷದಿ ಚಿಂತಿಸುವ ನಿಜ |
ತಾತನೆಡೆಗಾಕ್ಷಣದಿ ಬಂದು ವಿ |
ಧೂತಕಿಲ್ಬಿಷ ರಾಮಪದಕೆರಗುತ್ತಲಿಂತೆಂದ || ೧ ||
ರಾಗ ಮಾರವಿ ಏಕತಾಳ
ತಾತನೆ ಸುಮ್ಮನೆ | ಯೇತಕೆ ಚಿಂತಿಪೆ | ಪೇತುಗರಂದದಲಿ ||
ನೀ ತಿಳುಹಿಸು ತನ | ಗೀ ತೆರ ದುಃಖದ | ರೀತಿಯ ತವಕದಲಿ || ೧ ||
ರಾಗ ಬಿಲಹರಿ ರೂಪಕತಾಳ
ಮಗನೆ ಲಾಲಿಸು | ಕಾರ್ತವೀರ್ಯನು | ವಿಗಡ ಸೇನೆಯ | ಕೂಡಿ ವನದೊಳು ||
ಮೃಗವಿಹಾರಕೆ | ಬಂದು ಬಿಸಿಲೊಳು | ಡಗೆಯ ಕೊಳ್ಳುತ | ಬಂದನಿಲ್ಲಿಗೆ || ೧ ||
ರಾಗ ಮಾರವಿ ಏಕತಾಳ
ಮಾನವರರಸನು | ತಾನಯ್ತರಲವ | ನೇನಸಗಿದ ಜೀಯ ||
ಮಾನಸ ದುಃಖವಿ | ಧಾನವನೆನಗನು | ಮಾನಿಸದುಸಿರಯ್ಯ || ೧ ||
ರಾಗ ಬಿಲಹರಿ ರೂಪಕತಾಳ
ಭೂಮಿಪತಿಯುಪ | ಚರಣೆಗೋಸುಗ | ಕಾಮಧೇನುವ | ತರಿಸಿಮುದದೊಳು ||
ಪ್ರೇಮದಿಂದುಪ | ಚರಿಸೆ ಸುರಭಿಯ | ಕಾಮಿಸುತ್ತಲಿ | ಕೊಂಡು ಪೋದನು || ೧ ||
ರಾಗ ಮಾರವಿ ಏಕತಾಳ
ಪುಂಡುನೃಪಾಲನು | ಚಂಡತನದಿ ಕಸು | ಕೊಂಡನೆ ಸುರಭಿಯನು ||
ಲಂಡನ ತಲೆಯನು | ಖಂಡಿಸುತಲಿ ಭೂ | ಮಂಡಲಕಿಳುಹುವೆನು || ೧ ||
ರಾಗ ಬಿಲಹರಿ ರೂಪಕತಾಳ
ತರಳ ಲಾಲಿಸು | ನೀನು ಮೊದಲಿಗೆ | ಧರಣಿಪತಿಯೊಳು | ಕೇಳು ಸಾಮದಿ ||
ತುರುವ ಕೊಡಿದಿರೆ | ನೆಗಳಿ ರಣವನು | ಭರದಿ ಸುರಭಿಯ | ಬಿಡಿಸಿ ತಾರಯ್ಯ || ೧ ||
ರಾಗ ಮಾರವಿ ಏಕತಾಳ
ಮರುಗದೆ ಮನದೊಳ | ಗಿರಿ ನೀವೆನುತಲೆ | ಶರ ಧನು ಪರಶುವನು ||
ಧರಿಸುತ ನಮಿಸಲು | ಪರಸುತ ಕಳುಹಿದ | ತರಳನ ಋಷಿವರನು || ೧ ||
ಭಾಮಿನಿ
ಶಿರದ ಕೆಂಜೆಡೆ ಫಣೆಯ ಭಸಿತದ |
ಮೆರೆವ ರುದ್ರಾಕ್ಷಿಗಳ ಮಾಲೆಯ |
ಮಿರುಪ ತೇಜದ ಬೊಮ್ಮಮೂರುತಿ ಪೊರಟು ವಹಿಲದಲಿ |
ಉರಿನಯನವಿಲ್ಲದ ಮಹೇಶನೊ |
ಧರೆಯ ನುಂಗುವ ಭೈರವನೊ ಎಂ |
ಬುರುತರದ ಕೋಪದಿ ನಡೆದ ಮಾಹಿಷ್ಮತೀಪುರಕೆ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದು ಪುರಬಾಹ್ಯದೊಳು ತಾ ನಿಲು | ತೆಂದನೆಲವೋ ದೂತರಿರ ನೀ |
ವಿಂದಿನಲಿ ನಿಮ್ಮರಸನಿಗೆ ನಾ | ಬಂದ ಹದನ || ೧ ||
ಒರೆಯ ಬೇಹುದು ಸೇನೆಸಹ ನಡೆ | ತರಲಿ ಸಂಗರಕಲ್ಲದಿರ್ದಡೆ ||
ಸುರಭಿಯನು ತನಗಿತ್ತು ಬದುಕಲಿ | ಮರೆಯ ಪೊಕ್ಕು || ೨ ||
ಭೂಮಿಪತಿ ತಾನಾಗಿ ನಮ್ಮಯ | ಕಾಮಧೇನುವ ಕದ್ದು ತಂದಿಹ ||
ಸಾಮದಲಿ ಕೊಡದಿರಲು ತಾ ನಿ | ರ್ನಾಮನಹನು || ೩ ||
ಈ ತೆರದಿ ಪೇಳೆಂದು ಗರ್ಜಿಸೆ | ದೂತನೊರ್ವನು ಭಯದೊಳೋಡುತ ||
ಭೂತಳಾಧಿಪಗೆರಗಿ ಪೇಳ್ದನು | ಭೀತಿಯಿಂದ || ೪ ||
ರಾಗ ಮುಖಾರಿ ಏಕತಾಳ
ಲಾಲಿಸು ಕಾರ್ತವೀರ್ಯ ಧೊರೆಯೆ |
ಸೌಭಾಗ್ಯದ ಸಿರಿಯೆ | ಲಾಲಿಸು ಕಾರ್ತವೀರ್ಯ ಧೊರೆಯೆ ||ಪ||
ಪುರದ ಹೊರವಳೆಯದೊಳೆರ್ವ |
ಯಾರೆಂದರಿಯೆ | ಭರದಿಂದ ಬಂದಿರ್ಪ ಪಾರ್ವ ||
ಶರ ಧನು ಪರಶುವ ಧರಿಸಿಕೊಂಡಿರುವ |
ಪುರಹರನಂದದಿ ಮೆರೆದುಕೊಂಡಿರುವ || ಲಾಲಿಸು || ೧ ||
ಸುರಭಿಯ ಬಿಟ್ಟುಕೊಡಬೇಕಂತೆ | ಅಲ್ಲದಡೀಗ |
ಧುರಕೆ ಬೇಗಯ್ದಬೇಕು ಮುಂತೆ ||
ಭರದೊಳು ಸಮರಕೆ ನಿಂತರೆ ತಲೆಯ |
ತರಿದಿಳುಹುವೆ ತಾನೆಂದನು ಜೀಯ || ಲಾಲಿಸು || ೨ ||
ಕಣ್ಣಿನೊಳ್ ಕಿಡಿಯನುದುರಿಸುವ | ನೋಡಲ್ಕೆ ಬಹು |
ಸಣ್ಣವನಾಗಿ ರಂಜಿಸುವ || ಉನ್ನತದ ಭೀಕರ ತೋರಿಸುವ |
ಸನ್ನುತರಂದದಿ ತಾ ಶೋಭಿಸುವ || ಲಾಲಿಸು || ೩ ||
ಭಾಮಿನಿ
ಹೇಡಿ ವಿಪ್ರನ ಗರಹೊಡೆದುದೀ |
ನಾಡನಾಯನು ತನ್ನಿದಿರಿನಿಂ |
ದೂಡಿರೆಂಬ್ಬರಿಸಿ ಸಚಿವರ ನೋಡಲಾ ಕ್ಷಣದಿ |
ಗಾಢದಿಂದೆದ್ದಾಗ ಮಂತ್ರಿಯು |
ಜೋಡಿಸುತ ಭಯದಿಂದ ಜೀಯೆನು |
ತಾಡಿದನು ಹಿತ ವಚನಗಳನಾ ರೂಢಿಪತಿಗಾಗ || ೧ ||
ರಾಗ ಸೌರಾಷ್ಟ್ರ ಅಷ್ಟತಾಳ
ಬಿನ್ನಪವನು ಕಿವಿಗೊಟ್ಟು ಲಾಲಿಪುದೀಗ | ರಾಯ ಕೇಳು | ಬಾಯ |
ಬನ್ನಣೆ ಮಾತುಗಳೆಂಬವ ನಾನಲ್ಲ | ರಾಯ ಕೇಳು ||
ಅನ್ಯಾಯವಿದು ನಾವು ಸುರಭಿಯ ತಂದುದು | ರಾಯ ಕೇಳು | ನೀ |
ನಿನ್ನಾದರದರನ್ನು ಬಿಡುವುದೊಳ್ಳಿತು ಬೇಗ | ರಾಯ ಕೇಳು || || ೧ ||
ದ್ವಿಜರಗ್ನಿಹೋತ್ರಕಂಟಕರಾದ ದುಷ್ಟರ | ರಾಯ ಕೇಳು | ಭೂ |
ಭುಜರು ಸಂಹರಿಸುತ್ತ ಸಲಹುವರವರನ್ನು | ರಾಯ ಕೇಳು ||
ಕುಜನರ ನಡತೆಯಿದಾಯಿತು ನಿನ್ನದು | ರಾಯ ಕೇಳು | ರಾಜ |
ವ್ರಜದೊಳು ನಿನಗಪಹಾಸ್ಯವಿದಲ್ಲವೆ | ರಾಯ ಕೇಳು || ೨ ||
ವಿಪ್ರಕುವರನೀಗ ಸಮರಕಯ್ತಂದಿಹ | ರಾಯ ಕೇಳು | ನೀ |
ಕ್ಷಿಪ್ರದೊಳಾತನ ಕೊಲಲಪಕೀರ್ತಿಯು | ರಾಯ ಕೇಳು ||
ಸುಪ್ರತಾಪದಿ ಕಾದಿ ಸೋಲ್ವುದು ನಾಚಿಕೆ | ರಾಯ ಕೇಳು | ನಿ |
ನ್ನಪ್ರಬುದ್ಧಿಯ ಕಾರ್ಯವೆಲ್ಲವ ಬಿಡು ಬಿಡು | ರಾಯ ಕೇಳು || ೩ ||
ರಾಗ ಮಾರವಿ ಏಕತಾಳ
ಈ ತೆರನೆಂದುದ ಕೇಳ್ದತಿ ರೋಷದಿ | ಭೂತಳನಾಯಕನು ||
ಮಾತಿನ ಜಾಣನೆನುತ್ತತಿ ಗರ್ಜಿಸು | ತಾತನಿಗುಸಿರಿದನು || ೧ ||
ದ್ವಿಜನಾಗಲಿ ಭೂಭುಜನಾಗಲಿ ತಾ | ನಿಜಶಸ್ತ್ರವ ಪಿಡಿದು ||
ಭುಜಸತ್ತ್ವದಿ ನಿಲೆ ವಿಜಯಿಸಲಾತನ | ವೃಜಿನವದೆಲ್ಲಿಹುದು || ೨ ||
ವರಸಿಂಗಕೆ ನರಿ ಕರಿಗಾ ಶ್ವಾನವು | ಇರುವೆಯು ಹೆಬ್ಬುಲಿಗೆ ||
ಸರಿಯಾಗಿರುವುದೆ ಧುರದೊಳು ವಿಪ್ರನ | ತರಳನಿದಿರೆ ತನಗೆ || ೩ ||
ಧನಮದವೋ ಯೌವನಮದವೋ ಪೇಳ್ | ಘನ ಸಲುಗೆಯೊ ಸಚಿವ ||
ತನಗುತ್ತರ ಕೊಡದನುವರಿಕೀ ಕ್ಷಣ | ಕನುಗೊಳಿಸೈ ದಳವ || ೪ ||
ಕರಿತುರಗವಪ ದಚರ ರಥ ರಥಿಕರು | ಪೊರಡಲಿ ಸನ್ನಹದಿ ||
ಭರದೊಳು ಧುರ ಡಂಗುರವನು ಹೊಯ್ಸೆಂದರುಹಿದನಾಗ್ರಹದಿ || ೫ ||
ವಾರ್ಧಿಕ
ಹರಿಶರಣ ಕೇಳು ರುಂಹರಿಪನೀ ತೆರದಿ ನರ |
ಹರಿಯಂತೆ ಗರ್ಜಿಸಲ್ ಹರಿಜನ್ಮದಾ ದ್ವಿಜನ |
ಹರಿಬಕೆನುತಾ ಸಚಿವ ಹರಿ ಕರಿ ಪದಾತಿ ವರಹರಿಗಳಂ ಪೊರಡಿಸಲ್ಕೆ ||
ಹರಿಯಂತೆ ವಟುಭಟರು ಹರಿನಾದಮಂ ಮಾಡಿ |
ಹರಿಯೆ ಪದಹತಿಧೂಳಿ ಹರಿಪದವ ತುಂಬಿರೆ |
ಹರಿದು ಬಂದಾ ಸಚಿವ ಹರಿಸಿ ನಿಜಮೋಹರವ ಹರಿವಂದ್ಯಗಿದಿರಾದನು || ೧ ||
ರಾಗ ನಾದನಾಕ್ರಿಯೆ ಅಷ್ಟತಾಳ
ಎಲೆ ದ್ವಿಜಕುವರನೆ ಲಾಲಿಸು | ನೀನು | ಕಲಹಕೆ ಬಂದಿಹೆ ಶಾಭಾಸು ||
ಕುಲದೊಳಧಿಕನಹೆ ನಿಜವೈಸೆ | ಯುದ್ಧ | ಕೆಲಸವು ನಿನ್ನಂಥವಗೆ ಲೇಸೆ || ೧ ||
ಎನಲೆಂದ ನಸುನಗುತಲೆ ರಾಮ | ನಿನ್ನ | ಜನನ ನಾಮನ ಪೇಳು ನಿಸ್ಸೀಮ ||
ಅನುವರದಾಪೇಕ್ಷೆಯಿಲ್ಲಯ್ಯ| ನಿನ್ನ | ಜನಪ ತಂದಿಹ ಧೇನು ಕೊಡಿಸಯ್ಯ || ೨ ||
ಕಾಲಜ್ಞನೆಂದು ಕರೆವರೆನ್ನ | ಭೂಮಿ | ಪಾಲನ ಸಚಿವ ತಾನಹೆ ನಿನ್ನ ||
ಕಾಳಗಕಂಜುತಸುರಭಿಯ | ಸುರ | ಪಾಲ ಬಂದರು ನೃಪ ಬಿಡನಯ್ಯ || ೩ ||
ಮಾನವರೊಡಯನೆನಿಸಿ ತಾನು | ಕಾಮ | ಧೇನುವ ಜಲುಮೆಯೊಳೊಯ್ದನು ||
ತಾನದ ಬಿಡದಿರೆ ಭೂಪನು | ಬೇಗ ಕೀನಾಶಲ್ಲಿಗೆ ಪೋಪನು || ೪ ||
ದ್ವಿಜರ ಕೊಂದರೆ ಪಾಪ ಬಹುದೆಂದು | ದೋಷ | ವ್ರಜಕಂಜಿ ಬಿಟ್ಟಹೆತಾನಿಂದು ||
ಕುಜನರಂದದಿ ಮಾತನಾಡುವೆ | ಬೇಗ | ನಿಜವಾಗಿ ನೀ ಮೃತಿಹೊಂದುವೆ || ೫ ||
ಚಿತ್ತದಿ ರಾಮನು ಖತಿಗೊಂಡು | ಬಿಲ್ಲಿ | ಗೊತ್ತಿ ಸರಳ್ಗಳ ಮುಂಕೊಂಡು ||
ಧೂರ್ತ ಸಚಿವ ತಡಕೊಳ್ಳೆಂದು | ಬಿಡೆ | ಮುತ್ತಿತು ಸೇನಾಜಾಲಕೆ ಬಂದು || ೬ ||
ವಾರ್ಧಿಕ
ಪರಶುಧರನೆಚ್ಚ ಮಾರ್ಗಣನಿಕರದೊಳಗೊಂದು |
ಬರುತ ಮಂತ್ರಿಗೆ ಚುಚ್ಚಲಾ ಕ್ಷಣದಿ ಮೂರ್ಛೆಗ |
ಯ್ದಿರಲುಳಿದ ಬಾಣಗಳು ಕರಿ ತುರಗ ರಥ ಪದಾತಿಗಳನ್ನು ಕೊಚ್ಚಿ ಕೆಡಹೆ |
ಧುರಕೆ ಬಂದತಿರಥ ಮಹಾರಥರು ತಮ್ಮ ತ |
ಮ್ಮರಸಿಯರ ಬಿಟ್ಟು ಸುರಸತಿಯರಂ ಕೂಡಲ್ಕೆ |
ಭರದೊಳಯ್ತಂದೊರ್ವ ಚರನು ಬಿನ್ನವಿಸಿದಂ ಕಾರ್ತವೀರ್ಯನ ಸಭೆಯೊಳು || ೧ ||
ರಾಗ ಸಾರಂಗ ಅಷ್ಟತಾಳ
ಸ್ವಾಮಿ ಪರಾಕು ಜೀಯ | ತನ್ನಯ ಮಾತ | ಪ್ರೇಮದಿ ಲಾಲಿಸಯ್ಯ ||
ಆ ಮಹಾದಳ ಯುದ್ಧ | ಕಾಮುಕತ್ವದಿ ಪೋಗಿ | ಭೂಮಿಪರೆಲ್ಲ ಸಂ |
ಗ್ರಾಮವ ಗೆಯ್ದರು || ಸ್ವಾಮಿ || ೧ ||
ಒದಗಿ ಯುದ್ಧಕೆ ನಿಲ್ಲಲು | ಮಂತ್ರೀಶನ | ಸದೆದನೊಂದಸ್ತ್ರದೊಳು ||
ಬೆದರದೆ ಶರಗಳ | ನುದುರಿಸಿ ವಿಪ್ರನು ||
ಸದೆದು ಸೇನೆಯನೆಲ್ಲ | ಮೆದೆಗೆಡಿಸಿದನಯ್ಯ || ಸ್ವಾಮಿ || ೨ ||
ದಿಂಡುದರಿದ ಸೇನೆಯ | ಕಾಣುತ ಭಯ | ಗೊಂಡಿತ್ತ ಬಂದೆನಯ್ಯ ||
ಪುಂಡು ವಿಪ್ರನನಿಂದು | ದಂಡಿಸುವರ ಕಾಣೆ ||
ಭಂಡಾಟವಾಯಿತು | ದಂಡಿಗೆ ತೆರಳಯ್ಯ || ಸ್ವಾಮಿ || ೩ ||
ಭಾಮಿನಿ
ಚರನೆ ಸುಮ್ಮನೆ ಬಗುಳುತಿಗಹೆ ಏ |
ಕಿರುವೆ ಕಣ್ಣಿಗೆ ಸಾಸಿವೆಯು ಬಲು |
ಗಿರಿಯವೋಲ್ ಕಾಣುವುದು ಖರೆ ದ್ವಿಜ ನಿಮಗೆ ಬಲ್ಲಿದನು |
ಕರುಳನುರ್ಚುವೆ ತೊಲಗೆನುತ ಬೊ |
ಬ್ಬಿರಿದು ನೃಪತಿ ಸಹಸ್ರ ಕರದೊಳು |
ಧರಿಸಿ ಶಸ್ತ್ರವ ಸಕಲ ಸನ್ನಹದೊಳಗೆ ಹೊರವಂಟ || ೧ ||
ಕಂದ
ಗಣನೆಗೆ ಹದಿನಾರಕ್ಷೋ |
ಹಿಣಿ ಸೇನೆಯ ಕೂಡುತಯ್ದಿ ವಾದ್ಯದ ರವದಿಂ ||
ತ್ರಿಣಯನ ತೆರದೊಳು ರೌದ್ರದಿ |
ಮುನಿಸುತಗಿದಿರಾಗುತೆಂದ ದೀರ್ಘಸ್ವರದಿಂ || ೧ ||
ರಾಗ ಶಂಕರಾಭರಣ ಏಕತಾಳ
ಅರರೆ ಮುನಿಕುಮಾರನಾಗಿ | ಧುರಕೆ ಬಂದು ನಮ್ಮ ಕೆಣಕಿ |
ಬರಿದೆ ಸೆಣಸಿ ಸಾವುದೀಗ | ಸರಿಯೇನೊ ವಿಪ್ರ ||
ಧಿರುರೆ ಬಾಲನೆಸುವ ಕ್ರೂರ | ಶರಕೆ ಹುಡುಗತನಗಳಿಲ್ಲ |
ತರಳತನವ ತೋರ್ಪೆನೀಗ | ಪರಿಕಿಸು ಭೂಪ || ೧ ||
ಎಲವೊ ಘನಮದಾಂಧತೆಯೊಳು | ಕಲಹವನ್ನು ಬಯಸಿ ತನ್ನ |
ಗೆಲುವ ಸತ್ತ್ವವಿಹುದೊ ನಿನಗೆ | ತಿಳುಹಿಸು ವಿಪ್ರ ||
ಕೊಳುಗುಳದಲಿ ಸೆಣಸಿ ನಿನ್ನ | ಗೆಲುವ ಸತ್ತ್ವವೆನ್ನೊಳಿಲ್ಲ |
ನಲವಿನಿಂದ ಸುರಭಿ ಕೊಡಿಸು | ತಳುವದೆ ಭೂಪ || ೨ ||
ಕರದಿ ಶಸ್ತ್ರಗಳನು ಧರಿಸಿ | ಧುರಕೆ ಬಂದು ನಿಂತು ನೀನು |
ತುರುವ ನೀಡೆಂದೆನುವೆ ಲಜ್ಜೆ | ತೊರೆದೀಗ ವಿಪ್ರ ||
ಅರಸನಾಗಿ ಲಜ್ಜೆ ಬಿಟ್ಟು | ಸುರಭಿಯನ್ನು ತಂದುದಕ್ಕೆ |
ಕರೆದು ಸಾಮದಿಂದ ಕೇಳ್ವ | ಪರಿಯಿದು ಭೂಪ || ೩ ||
ವಿಪಿನದೊಳಗೆ ಸ್ನಾನಗೆಯ್ದು | ಜಪತಪಾದಿಗಳನು ಮಾಳ್ಪ |
ಗುಪಿತವಾಸವಲ್ಲ ಹವದಿ | ಕೃಪೆಯಿಲ್ಲ ವಿಪ್ರ ||
ಜಪವ ಗೆಯ್ವುದೆಮ್ಮ ಧರ್ಮ | ಗುಪಿತವಿಹರೆ ಕಳ್ಳರಲ್ಲ |
ಕಪಟದಿಂದ ಕದ್ದುತಹುದು | ಶಪಥವೇ ಭೂಪ || ೪ ||
ಧರೆಯ ಶ್ರೇಷ್ಠವಸ್ತು ನೋಡ | ಲರಸಗಲ್ಲದನ್ಯರಿಂಗೆ |
ದೊರಕದೆಂಬ ರಾಜನೀತಿ | ಯರಿಯೆಯ ವಿಪ್ರ ||
ಧರಣಿಸುರರ ಒಡವೆಯನಪ | ಹರಿಸುವಂಥ ರಾಜನೀತಿ |
ಇರುವುದೆಲ್ಲಿ ತೋರು ಶೌರ್ಯ | ದಿರವನು ಭೂಪ || ೫ ||
ರಾಗ ಭೈರವಿ ಅಷ್ಟತಾಳ
ಮತಿಹೀನ ವಿಪ್ರ ನೀನು | ಸಂಗ್ರಾಮದೊ | ಳತಿರಥರೆಲ್ಲರನು ||
ಹತ ಗೆಯ್ವಂದದೊಳೆನ | ಗತಿಕೃಪೆಯಿಂದತ್ರಿ | ಸುತ ವರವಿತ್ತಹನು || ೧ ||
ಧರೆಯಮರರ ಗೆಲ್ಲಲು | ದತ್ತಾತ್ರೇಯ | ವರವಿತ್ತುದುಂಟೆ ಹೇಳು ||
ಪರಿಹಾಸ್ಯಗಳನಾಡ | ದಿರು ಸಾಮರ್ಥ್ಯವ ನೋಳ್ಪೆ | ನರೆಘಳಿಗೆಯೊಳು ತಾಳು || ೨ ||
ಕರಟವನಿರಿಯಲಿಕೆ | ಮಹತ್ತಾದ | ಸುರಪನ ವಜ್ರ ಬೇಕೆ ||
ತರಳ ನಿನ್ನುವನು ಸಂ | ಹರಿಸಲಿಕಾ ಮುನಿ | ವರನನುಗ್ರಹವೇತಕೆ || ೩ ||
ಬಲ್ಬುಳ್ಳ ಮನುಜನಿಗೆ | ದೊರೆವುದಳಿ | ಯಲ್ಪಿನಿಂದಲಿ ಕಡೆಗೆ ||
ಜಲ್ಪಿಸದಿರು ಫಡ | ಸ್ವಲ್ಪ ಕಾಲದಿ ನಿನ್ನ | ತಲ್ಪಿಸುವೆನು ಯಮಗೆ || ೪ ||
ಹುಡುಗ ನೀನಾಗಿರುವೆ | ಚಾತುರ್ಯದ | ನುಡಿಗಳನೇಕೊರೆವೆ ||
ಕಡು ವೀರನಾದರೆ | ತುಡುಕು ಧನುವ ವೃಥಾ | ಬಡಿವಾರವಿದು ತರವೆ || ೫ ||
ಮಾನವೇಂದ್ರನೆ ಭರದಿ | ನಮ್ಮಯ ಕಾಮ | ಧೇನುವನತಿ ಸಾಮದಿ ||
ನೀನಿತ್ತರಯ್ದುವೆ | ತಾನೆಂದೆಸೆದನಸ್ತ್ರ | ಸೋನೆಯನುರುತರದಿ || ೬ ||
ವಾರ್ಧಿಕ
ಪರಶುಧರನೆಸೆದಾ ಮಹಾಸ್ತ್ರಗಳ್ ಶಸ್ತ್ರಗಳ್ |
ಧರಣಿಪನ ಮುಂದಯ್ದಿ ಮಸಗಿದವು ಮುಸುಕಿದವು ||
ಭರದಿ ಮುಂದ್ವರಿದು ಮದದಾನೆಯಂ ಸೇನೆಯಂ ರಥ ತುರಗ ಕಾಲಾಳ್ಗಳಂ ||
ಕೊರೆಕೊರೆದು ರಿಪು ಬಲವ ಕೆಡಹಿದವು | ಮಡುಹಿದವು
ಸರಳಿರಿತದಲಿ ರಕ್ತ ಕಾರಿದವು ಬೀರಿದವು |
ಧರಣಿಗಮರುತ ಬಿದ್ದ ರುಂಡದಿಂ ಮುಂಡದಿಂ ರಣ ಭಯಂಕರಮಾದುದು ||
ರಾಗ ಶಂಕರಾಭರಣ ಮಟ್ಟೆತಾಳ
ಹರಿಯ ಬಾಣಹತಿಗೆ ನೊಂದು ಕಾರ್ತವೀರ್ಯನು |
ಉರಿವ ಕೋಪದಿಂದ ಪರಶುಧರನೊಳೆಂದನು ||
ಧರಣಿಯಮರತರಳನೆನುತ ತಡೆದರೆಮ್ಮೊಳು |
ಭರಿತ ಕಡುಹ ತೋರ್ದೆ ಭಲರೆ ನಿನ್ನ ಕ್ಷಣದೊಳು || ೧ ||
ತರಿವೆನೆನುತಲದ್ರಿಶರವನೆಸೆಯಲದರನು |
ಧರಣಿಧರನು ತರಿವುತಗ್ನಿಶರದೊಳೆಚ್ಚನು ||
ಅರಸನದನು ವರುಣಬಾಣದಿಂದ ಛೇದಿಸಿ ||
ಹರಿಯನುರಗ ಶರದೊಳೆಚ್ಚ ಜರೆದು ಗರ್ಜಿಸಿ || ೨ ||
ಗರುಡಬಾಣದಿಂದ ರಾಮನದರ ಕಡಿಯಲು |
ಧರಣಿಪಾಲ ಕನಲುತೆಚ್ಚ ವಿವಿಧ ಶರದೊಳು ||
ಪರಮಪುರುಷನದನು ಕಡಿಯೆ ಮುಳಿದು ಭೂಪನು |
ಸರಸಿಜೋದ್ಭವಾಸ್ತ್ರದಿಂದಲೆಸೆದ ಹರಿಯನು || ೩ ||
ಪ್ರತಿಪಿತಾಮಹಾಸ್ತ್ರದಿಂದ ಶ್ರೀಶ ತರಿಯಲು |
ಯತಿ ಕುಲೇಂದ್ರನಿತ್ತ ರೌದ್ರಶರವ ಖತಿಯೊಳು ||
ಶತಮಖಾದಿ ಸುರರು ಬೆದರುವಂತೆ ತೀವ್ರದಿ |
ಕ್ಷಿತಿಪನೆಸೆಯಲಾಗ ಭಾರ್ಗವೇಶ ಸತ್ತ್ವದಿ || ೪ ||
ತರಿದು ದಿವ್ಯಬಾಣದಿಂದ ನೃಪನ ಕರವನು |
ಧರಣಿಗುರುಗಳಲೆಚ್ಚನೇನನೆಂಬೆನಧಟನು ||
ಮರಳಿ ನಿಮಿಷಮಾತ್ರದಲಿ ಕರಗಳುದಿಸಲು |
ಪರಶುರಾಮ ಮಗುಳೆ ಕಡಿದನೊಡನೆ ಭರದೊಳು || ೫ ||
ಭಾಮಿನಿ
ತರಿವುತಿರ್ದನು ಪರಶುಧರನಾ |
ಧರಣಿಪಾಲನ ಕರವ ಸುರರ |
ಚ್ಚರಿಪಡಲು ಚಿಗುರುತ್ತಲಿರ್ದುದದೇನನುಸಿರುವೆನು |
ಪರಿಕಿಸುತ ಹರಿ ದಿವ್ಯದೃಷ್ಟಿಯೊ |
ಳರಿದಿನುರದಿ ಸುಧಾಕಲಶ ಹುದು |
ಗಿರುವುದೆನ್ನುತ ಬಳಿಕ ನುಡಿದನು ನೃಪಗೆ ರೋಷದಲಿ || ೧ ||
ರಾಗ ಕೇದಾರಗೌಳ ಅಷ್ಟತಾಳ
ಅರರೆ ಭೂಪಾಧಮ ಕರ ಚಿಗುರುವುದೆಂದು | ಸ್ಥಿರಗರ್ವ ತಾಳ ಬೇಡ ||
ಅರೆನಿಮಿಷದಿ ತೋರ್ಪೆ ನೋಡೀಗ ವೈಷ್ಣವ | ಶರದ ಬಲ್ಮೆಯನು ಗಾಢ || ೧ ||
ಎನಲೆಂದನೆಲವೊ ಭಾರ್ಗವ ಕೇಳು ಶೌರ್ಯದಿ | ಮನಕೆ ಬಂದಂತೆ ನೀನು ||
ತೊನದರೆ ಫಲವೇನು ನೋಡೆನುತಸ್ತ್ರೌಘ | ವನು ಭೂಪ ತೆಗೆದೆಚ್ಚನು || ೨ ||
ತರಿವುತ್ತಲಾ ಬಾಣನಿಕರವ ವೈಕುಂಠ | ಶರದಿಂದ ನೃಪನುರದಿ ||
ಇರುವ ಸುಧಾಕಲಶವ ತೆಗೆಯುತ ಕೊಂಡು | ಪರಶುವನತಿ ಕೋಪದಿ || ೩ ||
ತಿರುಹುತ್ತ ಬಿಡೆ ಭರದಿಂದ ಭೂಮೀಶನ | ಕರ ಸಾವಿರಂಗಳನು ||
ತರಿವುತ ರಾಮನಾಜ್ಞೆಯೊಳು ಕತ್ತರಿಸಿದು | ದರಸನ ಮೂರ್ಧವನು || ೪ ||
ವಾರ್ಧಿಕ
ಪರಶುಹತಿಯಿಂದವನಿಪಾಲಕನ ಶಿರ ಗಗನ |
ಕಿರದೆ ಚಿಗಿದಿಳಿಗೆ ಬೀಳುತಿರಲಾತ್ಮಜ್ಯೋತಿ |
ಪರಮತೇಜದೊಳಯ್ದಿ ಪರಶುಧರನಂ ಸೇರೆ ಸುರರರಳ ಮಳೆಗರೆದರು |
ಧುರದೊಳೊಡೆಯನ ಮರಣಮಂ ಕಂಡು ನೃಪಸೇನೆ |
ತರಹರಿಸಿ ಭಯದಿಂದಲೋಡಿದರು ದೆಸೆದೆಸೆಗೆ |
ಮರುಗಿ ಭೀತಿಯೊಳಸುರರೆಲ್ಲ ವನಮಂ ಪೊಕ್ಕಾರಾ ಪುರದ ಜನ ನಡುಗಿತು || ೧ ||
ಭಾಮಿನಿ
ಭೀತರಿಂಗಭಯವನು ಕೊಡುತಾ |
ಭೂತನಾಥ ಪ್ರಿಯನು ಪಶು ಸಹ |
ತಾತನಲ್ಲಿಗೆ ಬಂದು ಚರಣದೊಳೆರಗೆ ಕೈಮುಗಿದು |
ಪ್ರೀತಿಯಿಂದೆತ್ತುತ್ತ ಮನ್ನಿಸ |
ಲಾತನೆಂದನು ಪಿತನೊಡನೆ ಪುರು |
ಹೂತಧೇನುವ ತಂದೆನೆನಲಿತೆಂದ ಜಮದಗ್ನಿ || ೧ ||
ರಾಗ ಮಧುಮಾಧವಿ ತ್ರಿವುಡೆತಾಳ
ಮಗನೆ ತಂದೆಯ ಸುರಭಿಯನು ನಿನ | ಗಗಜೆಪತಿಯಾಯುಷ್ಯವಾಗಲಿ ||
ಸುಗುಣ ನೃಪ ತಾನಾಗಿ ಕೊಟ್ಟನೆ | ಮಗುಳೆ ನಿನಗೀಧೇನುವ || ಎಲುಸಿರ್ದ || ೧ ||
ಭರದೊಳಲ್ಲಿಗೆ ತೆರಳಿ ಚರರಿಂ | ಸುರಭಿ ಕೊಡಿಸೆನೆ ಕೇಳಿ ಗರ್ವದಿ ||
ತೆರಳಿ ಬರೆ ಮಡುಹಿದೆನು ಬಲುಸಂ | ಗರದೊಳಾ ನೃಪವರ್ಯನ | ಜನಕ ಕೇಳು || ೨ ||
ತಪಸು ಮಾಡುವ ಯತಿಕುಲಜರಾವ್ | ಜಪನಿಯಮವಧ್ಯಯನ ಹೋಮಗ ||
ಳಪರಿಮಿತ ಶಮೆದಮೆಯ ವೃತ್ತಿಯ | ನಿಪುಣ ಧರ್ಮವು ನಮ್ಮದು | ಕೇಳು ಕುವರ || ೩ ||
ಇಳೆಯ ದಿವಿಜರು ನಾವು ರಣದಲಿ | ಕೊಲಬಹುದೆ ಮೂರ್ಧಾಭಿಷಿಕ್ತರ ||
ತಿಳಿಯಲೆಮಗಪ ಕೀರ್ತಿ ನಿಂದೆಯು | ತಳುವದಿಂದೀ ಲೋಕದಿ | ಬಹುದು ಮಗನೆ || ೪ ||
ಚಕ್ರವರ್ತಿಗಳೊಳಗೆ ಬಹು ಗುಣ | ವಿಕ್ರಮನ ಸದ್ಧಾರ್ಮಿಕನ ಕೊಂ ||
ದಕ್ರಮವನಾಚರಿಸಿದೆಯ ಭೂ | ಚಕ್ರದೊಳು ಋಷಿವಂಶಕೆ | ಎನಲು ನುಡಿದ || ೫ ||
Leave A Comment