ಭಾಮಿನಿ

ಕರುಣಾವಾರಿಧಿ ಬೆಳೆದು ಷೋಡಶ |
ವರುಷದಲಿ ಪಿತನಪ್ಪಣೆಯ ಕೊಂ |
ಡಿರದೆ ಶಿವನಲಿ ಚಾಪವಿದ್ಯೆಯ ಕಲಿಯುತಾ ಬಳಿಕ |
ಪರಶುವಿದ್ಯೆಗೆ ಬಯಸಿ ಲಂಬೋ |
ದರನೆಡೆಯೊಳದ ಪಠಿಸಲಿತ್ತಲು |
ತರುಣಿ ರೇಣುಕೆಗಾದ ಪರಿಭವವೇನ ಪೇಳುವೆನು       || ೧ ||

ರಾಗ ಬೇಗಡೆ ಏಕತಾಳ

ಇಂದುವಂಶೋದ್ಭವನೆ ಕೇಳಿದನು | ಜಮದಗ್ನಿ ಭಕ್ತಿಗ | ಳಿಂದ ಪೂಜಿಸುತಿರತಲಗ್ನಿಯನು ||
ಅಂದು ರೇಣುಕೆಯನ್ನು ತಾ ಕರೆ | ದಿಂದು ಜಲವನು ತಾರೆನಲು ನಲ ||
ವಿಂದ ಕಲಶವ ಕೊಂಡು ನದಿಗ | ಯ್ತಂದು ಜಲವನು ತುಂಬಿಸುತ್ತಿರೆ       || ೧ ||

ಅತ್ತಲನ್ನೆಗ ನದಿಗೆ ಬಂದಿರ್ವ | ಅಬಲೆಯರ ಕೂಡುತ | ಚಿತ್ರರಥನೆಂದೆಂಬ ಗಂಧರ್ವ ||
ಮೊತ್ತ ಸತಿಯರ ಕೂಡಿ ತಾನಾ | ಡುತ್ತಿರಲು ರೇಣುಕೆಯು ಕೌತುಕ ||
ವೆತ್ತು ವಿಸ್ಮಿತಳಾಗಿ ಕಾಣುತ | ನಿತ್ತು ನೋಡಿದಳೊಂದು ಘಟಿಯನು      || ೨ ||

ಭಾಮಿನಿ

ಕೋಪಿಸುವ ಮುನಿಯೆಂದು ಬೆದರು |
ತ್ತಾ ಪತಿವ್ರತೆ ತಿಳಿದು ಬೇಗದಿ |
ತಾ ಪಿಡಿದು ಕಲಶೋದಕವ ಬರಲಾಗ ವಹಿಲದಲಿ |
ಭೂಪ ಕೇಳ್ ಕಾಮಾದಿಗಳ ತೊರೆ |
ದಾ ಪರಮ ಶಾಂತನಿಗೆ ಬಂದುದು |
ಕೋಪವಿಧಿಕೃತದಿಂದಲೆಂದನು ಭೋರ್ಗುಡಿಸಿ ಸತಿಗೆ  || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಾರಿ ಕೇಳಂಬುವನು ತರುವರೆ | ಸಾರಿ ನದಿಬಳಿಗೀತ ನೀನ ||
ಲ್ಲಾರ ಮೋಹಿಸಿ ಕಂಡು ತಡೆದೆ ಬ | ಜಾರಿ ಪೇಳು      || ೧ ||

ಕೆಟ್ಟ ನಡತೆಯೊಳಿರುವೆ ನಿನ್ನಯ | ಗುಟ್ಟ ತಿಳಿದೆನು ವಿಟರ ಬಯಸುವ ||
ದಿಟ್ಟೆ ಏತಕೆ ಖಚರನೊಳು ಮನ | ವಿಟ್ಟು ಬಂದೆ        || ೨ ||

ತೊಲಗು ಮಮ ಗೃಹದಿಂದಲಿರ್ದಡೆ | ತಲೆಯ ಹೊಯ್ಸವೆನೆನಲು ಕೇಳುತ ||
ಲಲನೆ ಪತಿಯಡಿಗೆರಗಿ ಪೇಳ್ದಳು | ಬಲು ಭಯದಲಿ    || ೩ ||

ರಾಗ ಕಾಂಭೋಜ ಏಕತಾಳ

ರಮಣ ನಿನಗೀ ಕೋಪವೇಕೆ | ಕ್ಷಮಿಸಪರಾಧವನು ||
ನಮಿಸಿ ಪೇಳ್ವೆ ನಿಜವ ಕೇಳು | ವಿಮಲಚರಿತ ನೀನು   || ೧ ||

ಸ್ಮರನ ಬಾಧೆಗಳುಕಿ ನಾ ಖೇ | ಚರನ ಕಂಡುದಲ್ಲ ||
ಮರವೆಯಾಯ್ತು ವಿಧಿವಶದೊ | ಳರಿವಿರಿ ನೀವೆಲ್ಲ      || ೨ ||

ಕರುಣಾಬ್ಧಿ ನಾನು ನಿನ್ನ | ಚರಣಕೆ ಬಲವಂದು ||
ಕರವ ಮುಗಿದು ಬೇಡಿಕೊಂಬೆ | ಕರುಣದಿ ಸಲಹಿಂದು  || ೩ ||

ರಾಗ ಮಾರವಿ ಏಕತಾಳ

ಬಲ್ಲೆನು ನಿನ್ನಯ ಖುಲ್ಲತನವ ನೀ | ಸೊಲ್ಲಿಸದಿರು ತನಗೆ ||
ಕೊಲ್ಲುವೆನೀ ಕ್ಷಣದಲ್ಲೆನೆ ಪೇಳ್ದಳು | ತಲ್ಲಣಿಸುತ ಪತಿಗೆ || ೧ ||

ಕೊಂದರೆ ಕೊಲಿ ನೀವಿಂದೆನ್ನಯ ತ | ಪ್ಪೊಂದನು ಕ್ಷಮಿಸುತ್ತ ||
ಮಂದಮತಿಯ ಸಲಹೆಂದೆನಲುಸಿರಿದ | ಕಂದರ ಕರೆವುತ್ತ       || ೨ ||

ಎಲವೊ ಸುತಾಪನೆ ಸುಮನನೆ ವಸುವೇ | ಎಲೆ ಬೃಹದ್ಬಾಣರಿರ ||
ತಳುವದೆ ದುಷ್ಟೆಯನೀ ಖಡುಗವ ಕೊಳು | ತಲಿ ಚೆಂಡಾಡಿ ಶಿರ || ೩ ||

ಪೇಳದಿರೈ ಕರುಣಾಳುವೆ ನಮಗೆ ಕ | ರಾಳದ ಕೆಲಸವನು ||
ಬಾಲರು ಮಾತೆಯ ಕೊಂದರೆ ನರಕವ | ನಾಳರೆ ಗ್ರಹಿಸದನು   || ೪ ||

ಭಾಮಿನಿ

ಎನ್ನನುಜ್ಞೆಯ ಮೀರಿದಿರಿ ನೀ |
ವಿನ್ನು ಪುತ್ರರೆ ತನಗೆ ಛೀ ಛೀ |
ಕುನ್ನಿಗಳೆ ಫಡ ಎನುತ ಗರ್ಜಿಸುತೆಡಬಲವ ನೋಡಿ |
ಇನ್ನೆಂಗಂ ನೋಡಿದೆ ನಿವರ ಗುಣ |
ವನ್ನು ರಾಮಗೆ ಬೆಸಸಿ ನೋಡುವೆ |
ನೆನ್ನುತಲಿ ಭಾರ್ಗವನ ಕರೆದನು ದೀರ್ಘಸ್ವರದೊಳಗೆ  || ೧ ||

ವಾರ್ಧಿಕ

ಹರಪುತ್ರನಾಜ್ಞೆಯೊಳು ಪರಶುವಂ ಕೊಂಡದಂ |
ತಿರುಹುತಿಹ ವೇಳೆಯೊಳ್ ಪಿತ ಕರೆದ ಶಬ್ದಮಂ |
ಹರಿ ಕೇಳುತಾ ವಿಘ್ನರಾಜನಂ ಬೀಳ್ಗೊಂಡು ಜನಕನಿದ್ದೆಡೆಗೆ ಬಂದು |
ಉರುತರದ ಭಯವ ತಾಳ್ದಗ್ರಜರ ದುಃಖದಿಂ |
ದಿರುವ ಮಾತೆಯನು ಕಂಡೇನಿದೇನೆಂದೆನುತ |
ಚರಣದಡಿಯಲಿ ಬಿದ್ದ ತರಳನಂ ಪಿಡಿದೆತ್ತಿ ಜಮದಗ್ನಿ ಬಳಿಕೆಂದನು        || ೧ ||

ರಾಗ ಕೇದಾರಗೌಳ ಝಂಪೆತಾಳ

ಬಾ ಮಗನೆ ಪರಶುರಾಮ | ಭೃಗುವಂಶ | ದಾ ಮಹಾರ್ಣವದ ಸೋಮ ||
ನೀ ಮನದಿ ತತ್ತಳಿಸದೆ | ಕೊಲುವುದೀ | ಕಾಮಿನಿಯನೆರಡೆಣಿಸದೆ        || ೧ ||

ನುಡಿಗೆರಡನಾಡಬೇಡ | ಖಡ್ಗದಲಿ | ಕಡಿ ಪಾಪಿಯನ್ನು ಗಾಢ ||
ತಡೆಯದಿರು ಮಗನೆ ನಿನಗೆ | ವಿವರವನು | ನುಡಿವೆ ನಾನೆಲ್ಲ ಕಡೆಗೆ      || ೨ ||

ನಿಮ್ಮನುಜ್ಞೆಯ ನಡೆಸಲು | ಜನಿಸಿದೆನು | ನಿಮ್ಮಿಂದಲೀ ಜಗದೊಳು ||
ಜನ್ಮ ಸಫಲವಿದಾಯಿತು | ನೀವೆಂದು | ದಮ್ಮಾಳ್ಪೆ ನಿಜದ ಮಾತು       || ೩ ||

ಎನುತಸಿಯ ಕರದೊಳಾಂತು | ತಾತನೊಡ | ನನುನಯದಿ ಪೇಳ್ದನಿಂತು ||
ಜನಕ ಕೊಲ್ಲುವುದಾರನು | ಎಂದು ನೀ | ನೆನಗೀವುದಪ್ಪಣೆಯನು         || ೪ ||

ಬಾಲಕನೆ ತನ್ನ ಮಾತ | ಮೀರಿರ್ದ | ಖೂಳರಗ್ರಜರ ಸಹಿತ ||
ನೀ ಲಕ್ಷ್ಯವಿಡದೆ ಕೆಡಹು | ಬಳಿಕ ದು | ಶ್ಶೀಲೆ ರೇಣುಕೆಯ ಮಡುಹು       || ೫ ||

ಎನಲಿರಿತವನ್ನು ಪಿಡಿದು | ಅಣ್ಣಂದಿ | ರನು ನಾಲ್ವರುಗಳ ಕಡಿದು ||
ಮನದಿ ಶಂಕಿಸದೆ ಬಂದ | ತಾಯ್‌ಬಳಿಗೆ | ಮುನಿ ಪೇಳ್ದ ತೆರದಿ ಕೊಂದ  || ೬ ||

ಕಂದ

ಈ ತೆರದಿಂದಗ್ರಜರನು | ಮಾತೆಯ ಸಹ ಕೊಂದು ಬಳಿಕ ದುಮ್ಮಾನದೊಳುಂ ||
ತಾತನ ಪದಕೆರಗಲು ಸಂ | ಪ್ರೀತಿಯೊಳೆತ್ತಲಿಕೆ ರಾಮಪಿತಗಿಂತೆಂದಂ   || ೧ ||

ರಾಗ ಗೌಳತೋಡಿ ಅಷ್ಟತಾಳ

ಕೇಳಯ್ಯ ತಾತ ಬಿನ್ನಹವ | ಕರು | ಣಾಳು ಚಿತ್ತವಿಸು ದುಮ್ಮಾನವ ||
ಪೇಳಿದಂದದೊಳು ದು | ಶ್ಶೀಲರ ಕೊಂದೆನು |
ಮೇಲೇನಪ್ಪಣೆಯೆಂದು ಕಾಲಿಗೆರಗಲಂದು     || ೧ ||

ಮೆಚ್ಚಿದೆ ನಾ ಬಾಲಕನೆ ನಿನ್ನ | ಬರ್ಲು ಹೆಚ್ಚಿನ ದೃಢಮನಸ್ಸಿಗೆ ಮುನ್ನ ||
ಬೆಚ್ಚದಗ್ರಜರನ್ನು | ಹೆಚ್ಚಿನ ತಾಯನು |
ಕೊಚ್ಚಿದೆ ಬೇಡು ನಿ | ನ್ನಿಚ್ಛೆಯ ಸಲಿಸುವೆ      || ೨ ||

ನುಡಿವುದಿನ್ನೇನು ಮಹಾತ್ಮನೆ | ಈ | ಪೊಡವಿಯು ನಗುವುದು ತಾತನೆ ||
ನುಡಿಗೆ ತಾಯನು ಕೆಡೆದೆ | ಕಡು ಪಾಪವನು ಪಡೆದೆ |
ಬಿಡದೆ ಬದುಕಿಪುದೆಂದು | ಅಡಿಗೆರಗಿದನಂದು || ೩ ||

ಚಂಡವಿಕ್ರಮ ನೀನು ಕಂದನೆ | ಮಹೋ | ದ್ದಂಡಮತಿಯು ಕೇಳಿನ್ನೊಂದನೆ ||
ಮುಂಡ ತಾನವರವರ | ರುಂಡ ಜೋಡಿಸುತ ಕ |
ಮಂಡಲೋದಕ ತಾಳಿ | ಕೊಂಡರಿಂದೇಳ್ವರು || ೪ ||

ಭಾಮಿನಿ

ಮುನಿಪನೆಂದುದ ಕೇಳ್ದು ರಾಮನು |
ಮನದಿ ಸಂತಸಗೊಳುತ ಬಂದಾ |
ಜನನಿಯಗ್ರಜರುಗಳು ರುಂಡವ ದೇಹದಲಿ ಬೆಸೆದು |
ಮನದಿ ತಂದೆಯ ಚರಣಯುಗಳವ |
ನೆನೆದು ತಳಿಯೆ ಕಮಂಡಲೋದಕ |
ತನತನಗೆ ಚೇತರಿಸುತೆದ್ದರು ಸರ್ವರಾಕ್ಷಣದಿ || ೧ ||

ರಾಗ ಸಾಂಗತ್ಯ ರೂಪಕತಾಳ

ಏಳುತೊಬ್ಬೊಬ್ಬರನಪ್ಪಿ ತೋಷಾಬ್ಧಿಯೊ | ಳಾಳುತ್ತ ರಾಮನ ನೋಡಿ ||
ಪೇಳಿದಳವಗೆ ಸುಶೀಲೆ ರೇಣುಕೆಯು ಶ್ರೀ | ಲೋಲನು ನೀ ದಿಟವಹುದು  || ೧ ||

ಪುತ್ರನೀನುದಿಸಿ ಪವಿತ್ರವಾಯ್ತಿಂದೆಮ್ಮ | ಗೋತ್ರವುಭಯವಂಶ ಸಹಿತ ||
ಧಾತ್ರಿಯೊಳಖಿಳ ವಿಪತ್ತನು ಕಳೆದಿಂದು | ಸತ್ತು ಬದುಕಿದೆ ನಿನ್ನಿಂದ       || ೨ ||

ರಾಮನೆ ಭೃಗುವಂಶಸೋಮನೆ ಮನ್ಮನ | ಕಾಮಿತಫಲನೆ ಬಾರೆನುತ ||
ಪ್ರೇಮದಿ ತೆಗೆದಪ್ಪಿ ಸೌಮನಸ್ಕದಿ ಪೋದ | ರಾ ಮಹಾ ಜಮದಗ್ನಿಯೆಡೆಗೆ          || ೩ ||

ಪರಶುರಾಮನು ಮುನಿಚರಣಕ್ಕೆ ನಮಿಸಲು | ತರಳ ಬಾ ಬಾರೋ ಎಂದೆನುತ ||
ಹರುಷದಿ ಪಿಡಿದಪ್ಪುತೆಂದನು ನಿನ್ನಿಂದ | ಭರಿತವಾಯಿತು ನಮ್ಮ ಕೀರ್ತಿ  || ೪ ||

ಎನ್ನನುಜ್ಞೆಯನು ನೀ ಮನ್ನಿಸಿ ನಡೆಸಿದೆ | ನಿನ್ನಣ್ಣರವ್ವೆಯ ಕಡಿದು ||
ಉನ್ನತ ಶಕ್ತಿಯೊಳೆಬ್ಬಿಸಿದೈ ಕೇಳು | ನಿನ್ನ ಪೋಲುವರುಂಟೆ ಜಗದಿ       || ೫ ||

ವಾರ್ಧಿಕ

ಧರಣಿಯಮರಶ್ರೇಷ್ಠ ಬಳಿಕ ಯೋಚಿಸುತೆಂದ |
ತರುಣಿಯಂ ಕೊಲಿಸಿದವ ಕ್ರೋಧನದರಿಂದವನ |
ಹೊರವಡಿಪೆನೀಗೆನ್ನ ದೇಹದಿಂದೆನುತಾಗ ಖತಿಗೆ ಜರೆದೆಂದನೊಡನೆ |
ಇರದಿರೆನ್ನೊಳು ನೀಚ ಬೇಗ ಪೊರಡೆಂದೆನಲು |
ತ್ವರಿತದಿಂ ಪೊರಟು ಘೋರಾಕಾರದಿಂದ ಋಷಿ |
ವರನಿದಿರಿನೊಳು ನಿಂತು ಕೈಮುಗಿದು ಭಯದಿಂದ ಯತಿವರನೊಳಿಂತೆಂದನು     || ೧ ||

ರಾಗ ತೋಡಿ ಅಷ್ಟತಾಳ

ಬಿಡಬೇಡ | ಎನ್ನ | ಬಿಡಬೇಡ ||ಪ||
ಬಿಡಬೇಡವೆನ್ನನು ಕೆಡುವ ಕಾರ್ಯವನು |
ತಡೆದು ನಿಲಿಸುವಂಥ ಕಡುಪರಾಕ್ರಮನು || ಬಿಡಬೇಡ || ಅ ||
ಎನ್ನಿಂದ ಮನದಿಷ್ಟ ಕೈಗೊಡುತಿಹುದು |
ಎನ್ನಿಂದ ಸರ್ವ ಸಂಪದವೊದಗುವುದು ||
ಎನ್ನಿಂದ ಪಗೆಗಳ ನಿಗ್ರಹಿಸುವುದು |
ಎನ್ನಿಂದಲೊರ್ವರೊರ್ವರಿಗಂಜುತಿಹುದು || ಬಿಡಬೇಡ  || ೧ ||

ದುರುಳ ಕೇಳ್ ನಿನ್ನಿಂದಲಿಷ್ಟಸಿದ್ಧಿಗಳು |
ದೊರೆವುದೆಂಬುದ ನಾನು ಕಂಡೆನಿಂದಿನೊಳು ||
ತರುಣಿಯ ಕೊಲಿಸಿದ ದುಷ್ಟಾತ್ಮ ನೀನು |
ತೆರಳೆನ್ನ ಮುಂದಿರಬೇಡೆಂದನವನು || ಬಿಡಬೇಡ      || ೨ ||

ಕ್ರತು ಜಪ ತಪ ಮುಖ್ಯ ಕಾರ್ಯಗಳೆಲ್ಲ |
ಯತಿಯೆ ಕೇಳೆನ್ನ ಬಿಟ್ಟರೆ ಸಾಗದಲ್ಲ ||
ಶಿತಿಕಂಠ ವಿಷ್ಣು ಮುಖ್ಯರಿಗೆನ್ನನುಳಿದು |
ಕ್ಷಿತಿಯೊಳಾವೊಂದು ಕಾರ್ಯವ ಮಾಡಲರಿದು || ಬಿಡಬೇಡ     || ೩ ||

ಯಾಗಾದಿ ಷಟ್ಕರ್ಮವೆಲ್ಲವು ಕೆಟ್ಟು |
ಹೋಗುವುದಾಕ್ಷಣ ಬಂದರೆ ಸಿಟ್ಟು ||
ಬೇಗ ನಿನ್ನನು ಕಾಮಿಸುವರೆಡೆಗೀಗ |
ಸಾಗು ನೀನೆಂದು ಜರೆದ ಮುನಿಯಾಗ || ಬಿಡಬೇಡ    || ೪ ||

ಸುರಪಾಲಕನ ಮೇಲೆ ಬಲಿಯು ಕೋಪದೊಳು |
ವಿರಚಿಸಲಿಲ್ಲವೆ ಕಾರ್ಯವ ಹೇಳು ||
ಹರನನು ಮೆಚ್ಚಿಸಿ ಸುರರ ವೈರದೊಳು |
ಸಿರಿಯನು ಪಡೆಯರೆ ರಾವಣಾದಿಗಳು || ಬಿಡಬೇಡ    || ೫ ||

ಮರುಳೆ ಕೇಳೆನ್ನೊಳು ಸಲುಗೆಯಿಂ ನೀನು |
ಸರಿಯಾಗಿ ವಾದಿಸಬೇಡ ನಿನ್ನುವನು ||
ಉರುಹುವೆ ಗಳಹದಿರ್ ಮನಕೆ ಬಂದಂತೆ |
ತೆರಳು ಬೇಕಾದಲ್ಲಿಗೀ ಕ್ಷಣಭ್ರಾಂತೆ || ಬಿಡಬೇಡ        || ೬ ||

ಮುನಿನಾಥ ಕೇಳೀಗ ಪೇಳುವ ನುಡಿಯ |
ದಿನನಿತ್ಯದೊಳಗೆನ್ನ ಬಿಟ್ಟರು ಜೀಯ ||
ಮನಕೆ ಬೇಕಾದಾಗಲಾದರು ತನ್ನ |
ನೆನಸಿಕೊ ಮುನಿನಾಥ ಸುಗುಣ ಸಂಪನ್ನ || ಬಿಡಬೇಡ || ೭ ||

ಮನಕೆ ಬೇಕಾದಾಗಲಾದರು ನಿನ್ನ |
ನೆನೆಸುವುದಾನುಂಟೆ ನೀ ತೆರಳೆನ್ನ ||
ತನುವಿನಿಂದೆನುತ ಮುಖವ ತಿರುಗಿಸಲು |
ಮುನಿನಾಥಗಿಂತೆಂದ ಖತಿಯು ಶೀಘ್ರದೊಳು || ಬಿಡಬೇಡ      || ೮ ||

ತೆರಳುವೆ ನಾನಾದರಾಜ್ಞೆಯ ನೀಡು |
ಬರುವುದು ಸದ್ಯದಿ ನಿನಗಿನ್ನು ಕೇಡು ||
ಸೆರಗಿಲಿ ಗಂಟಿಕ್ಕಿಕೊಂಡಿರು ಎಂದು |
ಸರಿದನು ಕೋಪನಂತರ್ಧಾನಕಂದು || ಬಿಡಬೇಡ      || ೯ ||

ಭಾಮಿನಿ

ಖತಿಯ ಬಿಡೆ ಜಮದಗ್ನಿ ಕಾಣುತ |
ಯತಿಗಳೆಲ್ಲರು ತೋಷಗೊಂಡರು |
ಶತದಳಾಂಬಕನಯ್ದಿದನು ವಿಘ್ನೇಶ್ವರನ ಹೊರಗೆ |
ಯತಿಪ ಕೇಳಿ ಚೆಯಲಿ ಮಾಹಿ |
ಷ್ಮತಿಪುರಾಧಿಪನೆಡೆಗೆ ಶಬರ |
ಪ್ರತತಿ ಬಂದೊಡೆಯಂಗೆ ಬಿನ್ನಹ ಮಾಡಿದರು ನಮಿಸಿ  || ೧ ||

ರಾಗ ದಿವಾಳಿ ಏಕತಾಳ

ಸಲಾಮು ಮಾಡ್ತೆವೆ ಸಾಮ್ಯರ್ಪಾದಕೆ | ವಿಲಾಸದಿಂದವಧಾನಿಸಿ ||
ಫಲಾಗಿಲಾ ಬಿಟ್ಟು ಬಂದೆಯ್ದೇವೆ | ಕಳುಹಿಸಿರಿ ನಮ್ಕೊಟ್ವಾಸಿ     || ೧ ||

ಧೊರೆಯೆ ನಮ್ಮುದ್ಯಾವನದೊಳಗಾ | ಸುರಗೀ ಮಲ್ಲಿಗೆ ಬಕುಳ ||
ಅರಳೈದಾವೆ ಸಂಪಗೆ ಜಾಜಿ | ಇರುವಂತಿಗೆಗಳು ಬಹಳ        || ೨ ||

ಮತ್ತೆ ಪರಾಕು ಕದಳಿ ಖರ್ಜೂರ | ಕಿತ್ತಳೆ ಮಾವ್ ದಾಳಿಂಬೆ ||
ಅತ್ಯಾಶ್ಚರ್ಯದ ನಾನಾ ಫಲಗಳಿ | ರುತ್ತವೆ ವನದೊಳು ತುಂಬ || ೩ ||

ಕರುಣದಿ ಲಾಲಿಸು ನರಿ ಮೊಲ ಸಿಂಗ | ಕರಡಿ ಹಂದಿ ಕಾಡಾನೆ ||
ತರತರ ಮೃಗಗಳು ಸೊಕ್ಕಿಲಿ ವನವನು | ಮುರಿಮುರಿದಿಟ್ಟವು ಶ್ಯಾನೆ     || ೪ ||

ಭಾಮಿನಿ

ತರಿದು ಮೃಗಗಳ ನಿರ್ಭಯದೊಳೆಮ |
ಗಿರುವುವೋಲೆಸಗದಿರೆ ಬಿಡುವೆವು |
ಧೊರೆಯ ನಮ್ಮೀ ಚಾಕರಿಯನೆನೆ ನಗುತಲಾ ನೃಪನು |
ತೆರಳಿ ನಿಮ್ಮೆಡೆಗೀಗ ತಾನ |
ಯ್ತರುವೆನೆನುತಲೆ ಕಳುಹುತರ್ಜುನ |
ಕರೆದು ಮಂತ್ರಿಯೊಳೆಂದ ಸನ್ನಹ ವಿರಚಿಸೆಂದನುತ    || ೧ ||

ವಾರ್ಧಿಕ

ಕಾಲಜ್ಞ ಮಂತ್ರಿ ಕೇಳ್ ಬೇಟೆಗಯ್ದುವರೆ ಬಲ |
ಜಾಲಮಂ ಕೂಡಿ ಸುತ ಕೈರಾತರಂ ಕರೆಸಿ ||
ಲೀಲೆಯಿಂ ಸಕಲ ಸನ್ನಾಹ ಮಾಡೆಂದೆನಲು ಕೇಳ್ದವ ಹಸಾದವೆಂದು ||
ಮೇಳವಿಪ ಸಕಲ ದಳಮಂ ಕರೆಸಿ ಕೈರಾತ |
ರಾಳಿಯಂ ಕೂಡಿಸುತ ಬಂದು ಬಿನ್ನಯಿಸಲ್ಕೆ ||
ಭೂಲಲನೆಯಧಿಪ ಸಂತಸದಿ ಪೊರಮಟ್ಟ ನಿಸ್ಸಾಳ ವಾದ್ಯದ ಘೋಷದಿ   || ೧ ||

ರಾಗ ಮುಖಾರಿ ಏಕತಾಳ

ಬೇಟೆಯಾಡುತ ಬಂದ ಭೂಪ | ಕೀರ್ತಿಕಲಾಪ | ಬೇಟೆಯಾಡುತ ಬಂದ ಭೂಪ || ಪ||
ಕಟ್ಟಿದರೊಂದು ಕಡೆಯೊಳ್‌ಬಲೆಯ ಮತ್ತೊಂದು ದೆಸೆಯೊಳ್ |
ತಟ್ಟಿದರ್ ಬೊಬ್ಬಿಡುತಲೆ ಕೈಯ | ಗುರಿಯ ನೋಡಿ ||
ಬಿಟ್ಟರೆ ಮೃಗಕೆ ಬಾಣಾವಳಿಯ || ತಟ್ಟನಯ್ದಿ ಶರ |
ದಟ್ಟುಳಿಯಲಿ ಕಂ | ಗೆಟ್ಟು ಮೃಗಂಗಳು | ಬಿಟ್ಟವು ಪ್ರಾಣ || ಬೇಟೆ         || ೧ ||

ಮೊಲ ಹುಲಿ ಕರಡಿ ಹಂದಿ ತೋಳ | ಕಾಡ್ಗೋಣ ಸಿಂಗ ||
ಕಳಭ ಶರಭ ಶಿವ ಶಾರ್ದೂಲ | ಭುವಿಯೊಳು ಬೀಳು | ತಳಿಯೆ ಕಾಣುತ ಬೇಡರ್ಜಾಲ ||
ಬಲು ಬೇಗದಿ ಬಲೆ | ಗಳ ಹಾಕುತ ಖಗ ||
ಬಳಗವ ಪಿಡಿದನು | ಬಲು ಬೊಬ್ಬೆಯಲಿ || ಬೇಟೆ       || ೨ ||

ಭಾಮಿನಿ

ಸೊಕ್ಕಿರುವ ವಿಧವಿಧದ ಮೃಗಗಳ |
ಹಕ್ಕಿಗಳ ಸಹಿತೆಸೆಯುತಾಡಿದ |
ನಕ್ಕಜದ ಬೇಟೆಯನು ರವಿ ಮಧ್ಯಾಹ್ನಗತನಾಗೆ |
ಸಿಕ್ಕಿ ಬಲು ಡಗೆಯೊಳಗೆ ನೃಪ ನೀ |
ರಿಕ್ಕೆಯನ್ನರಸುತ್ತಲಯ್ದಿದ |
ಲೆಕ್ಕವಿಲ್ಲದ ಸೇನೆಸಹ ಜಮದಗ್ನಿಯಾಶ್ರಮಕೆ || ೧ ||

ರಾಗ ಸಾಂಗತ್ಯ ರೂಪಕತಾಳ

ಅರಸನಯ್ತಂದುದ ಕಾಣುತ ಋಷಿವರ್ಯ | ಹರುಷದಿಂದಿದಿರಾಗಿ ಬಂದು ||
ಕರೆದೊಯ್ದು ದರ್ಭಾಸನವನಿತ್ತು ಮನ್ನಿಸಿ | ಬರವಿದೇನೆನಲೆಂದನಂದು    || ೧ ||

ಮುನಿನಾಥ ಕೇಳಯ್ಯ ಬೇಟೆಗೆಂದೆನುತಿಂದು | ವನಕೆ ಬಂದವ ನಿಮ್ಮ ಪಾದ ||
ವನಜ ದರ್ಶನದರ್ತಿಯಲಿ ಬಂದೆನೆನಲೆಂದ | ಜನಪಗೆ ಮುನಿವರ್ಯನಾಗ         || ೨ ||

ಧರಣೀಶ ಮಧ್ಯಾಹ್ನವಾಯ್ತೆನ್ನ ಗೃಹದೊಳು | ವಿರಚಿಸುತಲಿ ಭೋಜನವನು ||
ತೆರಳು ನಿನ್ನರಮನೆಗೆನಲೆಂದ ಮುನಿಪಗೆ | ವರಕಾರ್ತವೀರ್ಯಭೂಮಿಪನು        || ೩ ||

ಇಹುದೆನ್ನ ಸಂಗಡ ಮುನಿವೃಂದಾಧಿಪ ಕೇಳು | ಬಹು ಪರಿವಾರಗಳೀಗ ||
ಗೃಹಕೆ ಪೋಗುವೆನೆಂದು ಪದಕೆರಗಲು ಪೇಳ್ದ | ಮಹಿಪಗೆ ಜಮದಗ್ನಿಯಾಗ         || ೪ ||

ಎನಿತು ನಿನ್ನಯ ಕೂಡೆ ಪರಿವಾರವಿರ್ದೊಡೆ | ಜನಪ ಕೇಳೇನಾಯ್ತೀ ಕ್ಷಣದಿ ||
ಘನಬೇಗ ಸ್ನಾನವನೆಸಗುತ್ತ ಬರುವುದೆಂ | ದೆನುತಪ್ಪಣೆಯಿತ್ತ ಮುದದಿ   || ೫ ||

ವಾರ್ಧಿಕ

ಎನುತರ್ಜುನಗೆ ಪೇಳ್ದು ಮುನಿನಾಥ ನೃಪನ ಪರಿ |
ಜನವನುಪಚರಿಸಲ್ಕೆ ಬರಿಸಿದ ಹವಿರ್ಧಾನಿ ||
ಯನು ಬಳಿಕ ಷಡ್ರಸಾನ್ನವ ಭಕ್ಷ್ಯಭೋಜ್ಯಗಳ ಘೃತ ದುಗ್ಧ ದಧಿ ತಕ್ರವ ||
ಜನಪಗವನೊಡನೆ ಬಂದಿರ್ದೆಲ್ಲ ಸೇನೆಗಂ |

ವಿನಯದಿಂ ಬೇಕಾದುದೆಲ್ಲ ಮಿತ್ತುದು ಸುರಭಿ ||
ಮುನಿಪಗುತ್ಸಾಹಿಸುತಲಿಕ್ಕಿ ಮನ್ನಿಸಲಾಗ ಸಂತುಷ್ಟಿಯಮ ತಳೆದರು     || ೧ ||

ಭಾಮಿನಿ

ಭೂತಳಾಧಿಪ ಹರುಷದೊಳು ಮುನಿ |
ನಾಥಗೆರಗುತ ಬೀಳು ಗೊಂಡತಿ |
ಕೌತುಕವ ಕೊಳುತಾಗ ಮನದೊಳು ಚಿಂತೆಯನು ತಳೆದು |
ಭೂತಳದೊಳೆನಗಿರ್ಪ ವೈಭವ |
ಖ್ಯಾತದಷ್ಟೈಶ್ವರ್ಯ ಸುರಭಿಯ |
ಜಾತ ವಿಭವಾಂಶಕ್ಕೆ ಸರಿಯಿಲ್ಲೆಂದನಾ ಮಹಿಪ        || ೧ ||

ರಾಗ ತೋಡಿ ಅಷ್ಟತಾಳ

ಏನಯ್ಯ | ಮಂತ್ರಿ | ಏನಯ್ಯ || ಪ ||

ಏನಯ್ಯ ಜಮದಗ್ನಿಯೆಸಗಿದ ಕಾರ್ಯ | ಮೌನಿಗಳಿಂತೆಸಗಿದುದತ್ಯಾಶ್ಚರ್ಯ ||
ಮಾನವ ಶ್ರೇಷ್ಠರಿಗುಂಟೆ ಈ ವಿಭವ | ನೀನಾಲೋಚಿಸಿ ತನಗರುಹಯ್ಯ ಸಚಿವ || ಏನಯ್ಯ  || ೧ ||

ಕಾಮಧೇನುವನೊಂದು ಬರಿಸುತೆಲ್ಲರಿಗೆ | ತಾ ಮುದಗೊಳಿಸಿದನತಿ ತೃಪ್ತಿಯೊಳಗೆ ||
ಭೂಮಿಪಾಲಕರಾದರೀ ವಿಧಾನದೊಳು | ಪ್ರೇಮದೊಳುಪಚರಿಸುವರೆ ಯೋಗ್ಯದೊಳು || ಏನಯ್ಯ    || ೨ ||

ನೃಪರೊಳಧಿಕ ಭಾಗ್ಯವಂತ ತಾನೆಂದು | ಚಪಳತನದಿ ಕೀರ್ತಿ ಪಡೆದುದಕಿಂದು ||
ವಿಪರೀತವಾಗಿಹ ಕಾಮಧೇನುವನು || ಅಪಹರಿಸುವ ಮನವಾಯ್ತದಕೇನು || ಏನಯ್ಯ       || ೩ ||

ಎನ್ನ ಸರ್ವಸ್ವವು ಪೋದರು ಬಿಡೆನು | ಉನ್ನತವಾಗಿಹ ಕಾಮಧೇನುವನು ||
ಇನ್ನೆಗ ರಾಜ್ಯವನಾಳಿದೆನಯ್ಯ | ತನ್ನೀ ದೇಹವು ಸ್ಥಿರಂಜೀವಿಯೇನಯ್ಯ || ಏನಯ್ಯ || ೪ ||

ರಾಗ ಮಧುಮಾಧವಿ ಏಕತಾಳ

ಆಗದಾಗದು ಭೂಮಿಪಾಲಚಂದಿರನೆ |
ಯೋಗಿಗೀಗೆರಡೆಣಿಸದಿರು ಭೂವರನೆ || ಆಗ || ಪ ||

ಚಕ್ರವರ್ತಿಯು ಸೇನೆಸಹ ಬಂದನೆನುತಲಿ |
ವಿಕ್ರಮದಲಿ ತರಸಿದ ಸುರಭಿಯನು ||
ಶುಕ್ರನಿಗಧಿಕನೆಂದುಪಚರಿಸಿದನಾತ |
ಗಕ್ರಮ ಯೋಚನೆ ಗೆಯ್ಯದಿರ್ ನೀನು || ಆಗ  || ೧ ||

ವಾರ್ಧಿಕ

ಏನಾದರಾಗಲೆಲೆ ಮಂತ್ರಿ ಕೇಳೀ ಕಾಮ |
ಧೇನುಮಂ ತರಿಸದುಳಿಯೆ ನೆನುತ್ತ ಚಾರರಿಗೆ |
ತಾನೆಂದ ಪಿಂದಯ್ದಿ ಸುರಭಿಯಂ ತಹುದೆಂದು ಬೆಸಸೆ ಪೋಗಲು ದೂತರು ||
ಮೌನಿಯಾಶ್ರಮಕಯ್ದಿ ಭರದಿಂದಲಾ ಹವಿ |
ರ್ಧಾನಿಯಂ ಪಿಡಿದೆಳೆಯೆ ಬೇಡ ಬೇಡೆಂದೊರೆಯ |
ಲಾನಿರೋಧವನಲಕ್ಷಿಸಿ ಗರ್ಜಿಸುತ್ತೊಯ್ದರೇನೆಂಬೆನದ್ಭುತವನು  || ೧ ||