ಭಾಮಿನಿ
ಈ ತೆರದಿ ಜನಿಸಿರ್ದ ಶಿಶುವಿಗೆ |
ತಾ ತತೂಕ್ಷಣ ಗಾಧಿರಾಯನು |
ಜಾತಕರ್ಮವ ರಚಿಸಿ ಹರುಷದಿ ವೀಳ್ಯದಕ್ಷಿಣೆಯ |
ಭೂಲಲಾಮರರಿಂಗೆ ಕೊಟ್ಟತಿ |
ಪ್ರೀತಿಯಲಿ ಸುತಜನನಲಗ್ನವ |
ಜಾತಕದ ಫಲ ಕೇಳಲೊರೆದರು ಜೋಯಿಸರು ಮುದದಿ || ೧ ||
ರಾಗ ತೋಡಿ ಅಷ್ಟತಾಳ
ಕೇಳಯ್ಯ | ಭೂಪ | ಕೇಳಯ್ಯ || ಪ ||
ಕೇಳಯ್ಯ ಗಾಧಿನೃಪತಿಯೆನ್ನ ಮಾತ | ಬಾಲನ ಜನನದ ಸ್ಥಿತಿಯ ಪ್ರಖ್ಯಾತ ||
ಆಲೋಚಿಸುತ ಲಗ್ನ ಗುಣಿಸಿದೆವಯ್ಯ | ಭೂಲೋಕದಲಿ ಬಲು ಚೋದ್ಯ ಕೇಳಯ್ಯ || ೧ ||
ಭೂಪರೊಳಿನ್ನೆಗ ಜನಿಸಿದವರಿಗೆ | ಈ ಪರಿ ಗುಣಗಳು ಕಾಣಲಿಲ್ಲೆಮಗೆ ||
ತಾಪಸಕುಲಕೀತ ಪ್ರಖ್ಯಾತ ಧರೆಗೆ | ಶ್ರೀಪತಿಭಜಕನೆಂದೆನಿಸುವ ಕಡೆಗೆ || ೨ ||
ವಿಶ್ವಸಮೂಹಕೆ ಪ್ರೀತಿಯೊಳಿರುವ | ವಿಶ್ವವ ತನ್ನ ಸಾಮರ್ಥ್ಯದೊಳಿಡುವ ||
ವಿಶ್ವಕರ್ತನ ತಪಸಿನೊಳು ಮೆಚ್ಚಿಸುವ | ವಿಶ್ವಾಮಿತ್ರನು ಎಂಬ ನಾಮವ ಪಡೆವ || ೩ ||
ರಾಗ ಝಂಪೆತಾಳ
ಭೂತಳಾಧಿಪನೆಂದ | ಜ್ಯೋತಿಷಜ್ಞರೆ ನಿಮ್ಮ ||
ಮಾತಿನರ್ಥವು ಬಹಳ | ಕೌತುಕವಿದೈಸೆ || ೧ ||
ಸತ್ಯವೋ ಪೇಳ್ದ ನುಡಿ | ನಿತ್ಯ ಧನದಾಸೆಯಲಿ ||
ಮಿಥ್ಯ ನುಡಿವಿರೆ ನಿಮ್ಮ | ಕೃತ್ಯವೇನೆನಲು || ೨ ||
ಸುಳ್ಳಲ್ಲ ಕೇಳು ಭೂ | ವಲ್ಲಭನೆ ಶಾಸ್ತ್ರದೊಳ ||
ಗಿಲ್ಲದುದು ಪೇಳಲೆಮ | ಗಿಲ್ಲವೇ ದೋಷ || || ೩ ||
ಎನೆ ಕೇಳ್ದು ನಸುನಗುತ | ಗಣಿತಜ್ಞಗುಡುಗರೆಯ ||
ವಿನಯದಿಂದಿತ್ತು ದಿನ | ಹನ್ನೊಂದನೆಯೊಳು || ೪ ||
ನಾಮಕರಣವ ಗೆಯ್ದು | ಭೂಮಿಸುರರೊಡನುಣುತ ||
ತಾ ಮುದದಿ ಕಳುಹಿ ಸು | ಪ್ರೇಮದಿಂದಿರ್ದ || ೫ ||
ಕಂದ
ತಪಸಿನ ಬಲದಿಂದಾ ಸುತ | ನೃಪತನುವನು ನೀಗಿ ಯೋಗಿವೃಂದದಿ ಸೇರ್ದಂ ||
ಜಪತಪದಿಂ ಜಮದಗ್ನಿಯು | ವಿಪಿನದಿ ಪೆತ್ತವನ ಸೇವೆಯೊಳಗಿರುತಿರ್ದಂ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರುಹುವೆನು ಮುಂಗಥೆಯ ರೇಣುಕ | ನುರುತರೈಶ್ವರ್ಯದೊಳಯೋಧ್ಯಾ ||
ಪುರವನಾಳುತ್ತಿರ್ದ ಶಕ್ರಗೆ | ಸರಿಸನೆನಿಸಿ || ೧ ||
ಮಿತ್ರ ವಂಶಜನೊಂದು ದಿನ ವರ | ಪುತ್ರಕಾಮೇಷ್ಟಿಯನು ರಚಿಸಲು ||
ಪುತ್ರಿ ರೇಣುಕ ಜನಿಸಿದಳು ಧಾ | ರಿತ್ರಿಪತಿಗೆ || ೨ ||
ಸುತೆ ಸಹಿತ ಭೂನಾಥನತಿ ಮುದ | ಯುತನೆನಿಸಿ ರಾಜಿಸುತಲಿರಲಾ ||
ಕ್ಷಿತಿಯೊಳಿಹ ತೀರ್ಥಗಳ ಮೀವುತ | ಪಿತನು ಸಹಿತ || ೩ ||
ಸತ್ಯವಿತಿಯಾತ್ಮಜನು ನೃಪಕುಲ | ಸತ್ತಮನ ಪುರವರವ ನೋಳ್ಪೆನೆ |
ನುತ್ತ ನಡೆತರಲರಸನದ ಕಾ | ಣುತ್ತ ಮುದದಿ || ೪ ||
ರಾಗ ಕೇದಾರಗೌಳ ಝಂಪೆತಾಳ
ಧಾರಿಣಿಪತಿ ದ್ವಿಜವರ್ಯರ | ಕರೆತಂದು | ಭೂರಿ ತೋಷದೊಳವದಿರಾ ||
ಚಾರು ವಿಷ್ಟರವೇರಿಸಿ | ಬೆಸಗೊಂಡ | ಬೋರನವರಿಂಗೆ ನಮಿಸಿ || ೧ ||
ಬ್ರಹ್ಮಚಾರಿಶ್ರೇಷ್ಠನು | ನೀನಿಗ | ನಮ್ಮ ಪುರಕಯ್ದುದೇನು ||
ನಿಮ್ಮ ಪೆಸರೇನೀತನು | ನಿಮಗೇನು | ಸಂಬಂಧವೆನಲೆಂದನು || ೨ ||
ಜನಪ ಕೇಳೆನ್ನ ಪೆಸರು | ಜಮದಗ್ನಿ | ಯೆನುವರಿಳೆಯೊಳು ಸರ್ವರು ||
ಘನ ತಪೋಧನನೀತನು | ಮಜ್ಜನಕ | ನೆನೆ ಭೂಪ ಮಗುಳೆಂದನು || ೩ ||
ಎಲ್ಲಿಂದ ಬಂದಿರಿನ್ನು | ನೀವ್ ಮುಂದೆ | ಕೆಲ್ಲಿಗಯ್ಯದುವಿರದನು ||
ಸೊಲ್ಲಿಪುದು ನಿಮ್ಮ ಪಾದ | ದರುಶನವಿ | ದೆಲ್ಲವರ ಮನಕೆ ಮೋದ || ೪ ||
ಧರೆಯೊಳಿಹ ತೀರ್ಥಗಳನು | ಸೇವಿಸುತ | ಮರಳಿ ಮನೆಗಯ್ದುವವನು ||
ಅರಸ ತವ ದರುಶನವನು | ವಿರಚಿಸಲು | ಭರದಿಂದ ಬಂದೆ ನಾನು || ೫ ||
ಸುತೆಯೊರ್ವಳಿಹಳವಳನು | ನಾನಾವ | ಕ್ಷಿತಿಪರಿಗೆ ಕೊಡಲದರನು ||
ಯತಿಯೆ ನೀ ಪೇಳ್ವುದೆನಲು | ಸತ್ಯವತಿ | ಪತಿ ಪೇಳ್ದನಾ ನೃಪರೊಳು || ೬ ||
ಕರೆಸೆಲ್ಲ ಭೂಮಿಪರನು | ನೀ ಬೇಗ | ವಿರಚಿಸು ಸ್ವಯಂವರವನು ||
ತರುಣಿ ಬೇಕಾದವನನು | ವರಿಸಿಕೊಳ | ಲರಸ ಕೇಳೆನಲೆಂದನು || ೭ ||
ಭಾಮಿನಿ
ಕರುಣನಿಧಿ ಕೇಳ್ ಸುತೆಯ ಮದುವೆಗೆ |
ಹರುಷದಲಿ ತವ ಜನಕ ಸಹ ನೀ |
ಭರದಿ ನಮ್ಮಾಲಯದಿ ನೆಲಸಿರಬೇಕೆನುತ್ತವರ |
ಪುರದೊಳಗೆ ನಿಲಿಸುತ್ತ ಬಳಿಕಾ |
ಧರಣಿಪಾಲನು ಮುದದಿ ತನ್ನಯ |
ತರಳನೆನಿಸುವ ಶೂರಸೇನನ ಕರೆವುತಿಂತೆಂದ || ೧ ||
ರಾಗ ಕಾಂಭೋಜ ಝಂಪೆತಾಳ
ತರಳ ನಿನ್ನನುಜೆಗಿನ್ನೆರಡು ದಿನದಲಿ ಸ್ವಯಂ | ವರವ ವಿರಚಿಸುವೆ ಪಟ್ಟಣವ ||
ಭರದಿ ಶೃಂಗರಗೆಯ್ಸುವಂತೆ ಮಂತ್ರಿಗೆ ಪೇಳಿ | ಬರೆಸು ಭೂಪರಿಗೆ ಲೇಖನವ || ೧ ||
ಮುನಿಗಳಾಶ್ರಮಕೆ ದೂತರ ಕಳುಹು ಬೇಗೆನಲು | ಜನಕನುಕ್ತಿಯ ಕೇಳಿ ನಗುತ ||
ಘನ ತವಕದಿಂದ ಮಂತ್ರಿಯನು ಕರೆಸು ತಿಂತೆಂದ | ಜನಪ ತನ್ನೊಡನೆಂದ ಮಾತ || ೨ ||
ವರ ಸಚಿವ ಕೇಳ್ ಪುರವ ಶೃಂಗರಿಸಿ ಪತ್ರಿಕೆಯ | ಬರೆಸು ಭೂಮೀಶ್ವರರ ಪುರಕೆ ||
ಚರರ ಕಳುಹಿಸಿ ಬೇಗ ಕರೆಸು ಭೂಸುರಕುಲವ | ತರಿಸು ಸಾಹಿತ್ಯಗಳ ಕ್ಷಣಕೆ || ೩ ||
ಎನೆ ಮಂತ್ರಿ ಕೇಳುದರಂತೆ ವಿರಚಿಸಲೊಡನೆ | ಜನಪರೆಲ್ಲರು ಸಂತಸದೊಳು ||
ವಿನಯದಿಂ ಸಾಕೇತಪುರಕೆ ಬಂದರದೇನ | ನೆನುವೆ ಬರುತಿಹ ಸಂಭ್ರಮಗಳು || ೪ ||
ಚ್ಯವನಸುಕುಮಾರನುತ್ಸವದಿಂದ ಋಷಿನಿವಹ | ಕುವರಸಹ ಬರಲದನು ಕಂಡು ||
ಅವನೀಶರೆಲ್ಲರನು ಕರೆತಂದು ಮನ್ನಿಸಿದ | ವಿವಿಧೋಪಚರದಿ ಮುದಗೊಂಡು || ೫ ||
ಭಾಮಿನಿ
ಮರುದಿನದೊಳಾ ಸಭೆಯೊಳೆಲ್ಲರು |
ಮೆರೆವ ವಿಷ್ಟರದಲ್ಲಿ ಕುಳ್ಳಿರೆ |
ಸ್ಮರಹರಾದ್ಯನಿಮಿಷರು ಬರಲವದಿರನು ಮನ್ನಿಸುತ |
ಧರಣಿಪತಿ ಯುವತಿಯರ ಕರೆದಾ |
ತರಳೆಯನು ಶೃಂಗರಿಸಿ ತಹುದೆನ |
ಲಿರದೆ ಸತಿಯರು ರೇಣುಕೆಯ ಕರೆತಂದರಾ ಸಭೆಗೆ || ೧ ||
ವಾರ್ಧಿಕ
ವನಿತೆಯರು ನೃಪರೆಡೆಗೆ ರೇಣುಕೆಯ ಕರೆತರಲ್ |
ಜನಕನಡಿಗಾಬಾಲೆ ಮಣಿಯಲೆತ್ತುಲೆಂದ |
ತನುಜೆ ಕೇಳೀ ಭೂಪವ್ರಾತದೊಳು ನಿನಗಾರು ಪತಿಗಳಹರವರನಿಂದು ||
ವಿನಯದಿಂ ವರಿಸೆಂದೆನುತ ಪುಷ್ಪಮಾಲೆಯಂ |
ವನಧಿವಸನಾಧೀಶನಿತ್ತಣುಗಗೆಂದನೀ ||
ಮನುಜೇಶರಂ ಸುತೆಗೆ ವಿವರದಿಂ ತೋರೆನಲ್ಕವ ಮುದದಲನುಜೆಸಹಿತ || ೧ ||
ಕಂದ
ಭರದಿಂ ನಡೆತಂದಾ ನೃಪ | ವರಗಡಣದ ಮಧ್ಯ ದಂಡಿಗೆಯೊಳು ಭಗಿನಿಯಂ ||
ಕರೆತಂದಾಕೆಗೆ ವಿನಯದಿ | ಧರಣಿಪಸುತನೆಂದ ನಿಂತು ಮೃದು ನುಡಿಯಿಂದಂ || ೧ ||
ರಾಗ ಕೇದಾರಗೌಳ ಝಂಪೆತಾಳ
ತರಳಾಕ್ಷಿ ಕೇಳೆ ನಿನಗೆ | ತೋರಿಸುವೆ | ಧರಣೀಶರವದಿರೊಳಗೆ ||
ಅರಸರಪ್ಪಂತವರನು | ನೀನೀಗ | ಹರುಷದಿಂ ವರಿಸೆಂದನು || ೧ ||
ಭೂಮೀಶ್ವರರ ಪುರವನು | ಮೇಣವರ | ನಾಮವೇನೆಂಬುದರನು ||
ನೇಮದಿಂ ಪೇಳು ನೀನು | ವರಿಸಿದಪೆ | ನಾ ಮನಕೆ ಬಂದವರನು || ೨ ||
ಪರಮೇಶ ನಿವ ಜಗತಿಗೆ | ಧಾತಾರ | ತರಳೆ ನೋಡೀತ ನಿನಗೆ ||
ವರನಹನೆ ಪೇಳ್ವುದೆನಲು | ಸಹಭವನಿ | ಗೊರೆದಳತಿ ಸಂಭ್ರಮದೊಳು || ೩ ||
ತನುವಿನರ್ಧಾಂಶವನ್ನು | ಸೆಳೆದಿಹಳು | ವನಿತೆ ಕೇಳ್ ಮೂರ್ಧವನ್ನು ||
ದನುಜಹರಪುತ್ರಿಗಿತ್ತ | ಇವಗೇಕೆ | ವನಿತೆಯರು ಪೋಪುದತ್ತ || ೪ ||
ಇತ್ತ ನೋಡಬಲೆ ನೀನು | ನಿರ್ಜರರ | ಮೊತ್ತಕಿವನಧಿರಾಜನು ||
ಉತ್ತಮನು ನಿನಗೀತನು | ಪತಿಯಹನೆ | ಚಿತ್ತದಲಿ ಗ್ರಹಿಸೆಂದನು || ೫ ||
ಜಾರತನದಿಂದೀತನು | ತಾಳಿದನು | ಭೂರಿನಯನವನು ಮೇಣು ||
ಭೂರಿ ದೈತ್ಯರ ನೋಡಲು | ಗಿರಿಗುಹೆಯ | ಸೇರುವವನೀತ ಕೇಳು || ೬ ||
ಬಳಿಕುಳಿದ ಸುಮನಸರನು | ತೋರಿಸಲು | ನಳಿನಲೋಚನೆಯವರನು ||
ಎಳಸದಿರೆಲದ ಕಾಣುತ | ತೋರಿಸಿದ | ನಿಳೆಯಧಿಪರನ್ನು ನಗುತ || ೭ ||
ಕೃತವೀರ್ಯಪುತ್ರನಿವನು | ಮೂರ್ಲೋಕ | ಪತಿಯಖಿಳ ಸಿರಿವಂತನು ||
ಅತಿಬಲಾನ್ವಿತನಿಳೆಯೊಳು | ನಿನಗೀತ | ಪತಿಯಹನೆ ಗ್ರಹಿಸಿ ಪೇಳು || ೮ ||
ಕರಗಳೀತಗೆ ಸಾವಿರ | ಪರಿಕಿಸಲು | ಶಿರವೊಂದು ಧರೆಯಧಿಪರ ||
ನೆರವಿಬಾಹಿರನೀತನು | ಎನಗೀತ | ನರಸನೆಂತೆನಲೆಂದನು || ೯ ||
ಧರಣಿವಲಯದ ಭೂಪರು | ನೆರೆದಿಹರು | ಪರಿಕಿಸೆಲ್ಲವನಿವದಿರು ||
ಅರಸರ್ ಯಾರೊಪ್ಪುವವರ | ತೋರೆನಲು | ಒರೆದಳಣ್ಣನಿಗುತ್ತರ ||೧೦||
ಅರಸರೆಲ್ಲರನು ನಾನು | ನೋಡಿದೆನು | ಹರಿಸು ದಂಡಿಗೆಯ ನೀನು ||
ಭರದಿಂದ ಮುಂದಕೆನಲು | ನಗುತನುಜೆ | ಗೊರೆದನತಿ ಸಂಭ್ರಮದೊಳು ||೧೧||
ಪರಿಕಿಸಾದರೆ ಋಷಿಗಳ | ಸಭೆಯ ಮುಂ | ದಿರುವನಿವನತ್ರಿತರಳ ||
ವರವ್ಯಾಸಋಷಿಯೀತನು | ಭೃಗುಪುತ್ರ | ತರುಣ ಜಮದಗ್ನಿಯಿವನು ||೧೨||
ಭಾಮಿನಿ
ಪರಿಕಿಸುತ ಜಮದಗ್ನಿಮುನಿಪನ |
ತರುಣಿ ತನ್ನಯ ಮನದೊಳೆಂದಳು |
ಸ್ಮರನಿಭವನು ಎನಗೀತ ರಮಣನೆ ಹೊರತು ಬೇರುಳಿದ |
ಸುರನರೋರಗರೆಲ್ಲರೆನ್ನಯ |
ಹಿರಿಯ ಕಿರಿಯರ ತೆರದಿ ತೋರ್ಪರು |
ಪರಮ ವಿಸ್ಮಯವೆನುತಲಿಳಿದಳು ಭರದಿ ದಂಡಿಗೆಯ || ೧ ||
ವಾರ್ಧಿಕ
ಸುಮದ ಮಾಲೆಯನಾಗ ರೇಣುಕೆಯು ತೋಷದಿಂ |
ಜಮದಗ್ನಿಗಿಕ್ಕಲದ ಕಾಣುತ್ತ ತವಕದಿಂ |
ದಮರತತಿ ಪುಷ್ಪವೃಷ್ಟಿಯ ಸುರಿದರೇನೆಂಬೆ ನಂಗರಕ್ಷಣೆಗೆ ಚರರು |
ಕ್ಷಮೆಯರಸನಾಜ್ಞೆಯಿಂದ ಬಳಸಿದರ್ ಮುನಿಪನಂ |
ಉಮೆಯರಸ ಮುಖ್ಯ ಸುರರೆಲ್ಲ ತೆರಳಲು ಧರಾ |
ರಮಣಂ ಕರೆವುತ್ತ ಕೋಪದಿಂ ಕಿಡಿಮಸಗಿ ಕೃತವೀರ್ಯಸುತನೆಂದನು || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ನೋಡಿದರೆ ಭೂಮಿಪರು ರೇಣುಕ | ಮಾಡಿದವಮಾನವನು ಮಹಿಪರ ||
ದೂಡಿ ಕೊಟ್ಟನು ತನ್ನ ಸುತೆಯನು | ಕಾಡ ಬುಧಗೆ || ೧ ||
ಮಾನ ನಿಮಗಿರೆ ನೃಪನ ನಿರ್ಜರ | ಮಾನಿನಿಯರೊಳು ಕೂಡಿಸುವುದಭಿ ||
ಮಾನ ನಿಮಗಿಲ್ಲದಿರೆ ರೇಣುಕ | ಸೂನುವಿಂಗೆ || ೨ ||
ತರುಣಿಯರ ಬಳುವಳಿಯ ಕೊಡಿರೆನ | ಲರಸರಾಲಿಸುತಾಗ ಕೋಪದೊ ||
ಳೊರೆದರಾ ಮಾಹಿಷ್ಮತೀಪುರ | ದೆರೆಯನೊಡನೆ || ೩ ||
ಖಾತಿಯೇಕೆಲೆ ಜೀಯ ತ್ರಿದಶ | ವ್ರಾತದೊಳು ರೇಣುಕನ ಕೂಡಿಸಿ ||
ಈ ತರುಣಿಯನು ತವ ವಿಲಾಸಿನಿ | ಜಾತದೊಳಗೆ || ೪ ||
ಸೇರಿಸುವೆವೆಂದೆನುತ ಭೂಮಿಪ | ವಾರವಾ ಸಾಕೇತಪುರವನು ||
ಸೂರೆಗಾರಂಭಿಸಲು ಕಾಣುತ | ಚಾರನೋರ್ವ || ೫ ||
ಭರದಿ ನಡೆತಂದಾ ಮಹೀಶನ | ಚರಣದೊಳು ಮಣಿಯುತ್ತಲೆಂದನು ||
ಧುರಕೆ ನಿಂದಿಹ ವಾರ್ತೆಯನು ಭೂ | ವರನ ಕೂಡೆ || ೬ ||
ರಾಗ ಸಾವೇರಿ ಅಷ್ಟತಾಳ
ಕೇಳು ರೇಣುಕೆಯ ತಾತ | ನಾನೆಂಬ ಮಾತ | ಪೇಳಲಂಜುವೆನು ಖ್ಯಾತ ||
ತಾಳಿ ಖಾತಿಯ ಸರ್ವ ಭೂಮಿಪರೆಲ್ಲರು | ಕಾಳಗಕೆಂದೆನುತ | ನಿಂದಿಹರು ಧಾತ || ೧ ||
ಕ್ಷಿತಿಪಾಲರೆಲ್ಲರನು | ಕೂಡಿಸಿ ಮುದ್ದು | ಸುತೆಯ ನಿಂದಿನಲಿ ನೀನು ||
ಯತಿವಂಶಜನಿಗಿತ್ತೆಯೆಂದೆಂಬ ಕೋಪದಿ | ಕೃತವೀರ್ಯಜಾದಿಗಳು | ತ್ವತ್ಪುರದೊಳು || ೨ ||
ವಿರಚಿಸುವರು ಸೂರೆಯ | ಸುಮ್ಮನೆ ಕುಳಿ | ತಿರುವೆ ನೀನೇಕೆ ಜೀಯ ||
ಕರೆಸಿ ಮಾರ್ಬಲವನ್ನು ಧುರಕೆ ಸನ್ನಹನಾಗು | ತರಿಗಳನೆಲ್ಲ ಸೀಳು | ಬೇಗದೊಳು || ೩ ||
ಭಾಮಿನಿ
ಚರರ ನುಡಿಯನು ಕೇಳಿ ಭೂಪತಿ |
ಕರೆಸಿ ನಿಜಸೈನ್ಯವನು ಯುದ್ಧಕೆ |
ಪೊರಟು ಪುರವನು ಸೂರೆಗೆಯ್ವವದಿರನು ಹೊರವಡಿಸಿ |
ಬೆರಸಿದುದು ಬಲವೆರಡು ತುರಗಕೆ |
ತುರಗ ಪತ್ತಿಗೆ ಪತ್ತಿ ದಂತಿಗೆ |
ಕರಿ ಭಟಾಳಿಗೆ ಭಟರು ಹೊಯ್ದಾಡಿದರು ಸಮತಳಿಸಿ || ೧ ||
ರಾಗ ಶಂಕರಾಭರಣ ಮಟ್ಟೆತಾಳ
ಇಂತು ತಮ್ಮೊಳುಭಯ ಭಟರು ಮುಳಿದು ಹಳಚಲು |
ದಂತಿಹಯ ವರೂಥಸಹಿತ ಧರಣಿಗುರುಳಲು ||
ಪಿಂತಿರುಗುವ ಭಟರ ಕಂಡು ರೇಣುಕೆಯ ಪಿತ |
ಕಂತುಪಿತನ ನೆನೆದು ರಥವ ಮುಂದೆ ಹರಿಸುತ || ೧ ||
ಅರಸನವರ ವಾಹನಾದಿಗಳನು ಖಂಡಿಸಿ |
ವಿರಥರನ್ನು ಮಾಡೆ ಕಾರ್ತವೀರ್ಯಪರಿಕಿಸಿ ||
ಹರಿಸಿ ತನ್ನ ರಥವ ಕೋಪದಿಂದಲವನನು |
ಕರೆದು ಪೇಳ್ದನೆಲವೊನೃಪರ ಕರೆಸಿ ಸುತೆಯನು || ೨ ||
ಧರಣಿಸುರಗೆ ಕೊಟ್ಟ ನೀಚ ಕೇಳು ನಿನ್ನನು |
ಧರಣಿಯಲ್ಲಿ ಬಾಳಗೊಡೆನು ಸತ್ತ್ವದಿರವನು ||
ಪರಿಕಿಸೆನುತ ರೋಷವೆತ್ತು ಸರಳವೃಷ್ಟಿಯ |
ಸುರಿದನಾಗ ಕಂಡು ನೃಪತಿ ಧರಿಸಿ ಖಾತಿಯ || || ೩ ||
ಸರಳ ಸರಳಿನಿಂದ ತರಿದು ನುಡಿದ ಸಮರವ |
ಅರಿತ ಪ್ರೌಢ ನೀನು ನಿನಗೆ ಕ್ಷಾತ್ರಧರ್ಮವ ||
ಒರೆವುದೇನು ತರಳೆ ತನ್ನ ಮನೆ ಬಂದನ |
ವರಿಸಿಕೊಂಡಳೆನುತಲೆಚ್ಚನವನಿಪಾಲನ || ೪ ||
ಭಾಮಿನಿ
ಕ್ಷಿತಿಪರಾ ಸಮಯದಲಿ ರಾಕಾ | ವತಿಯ |
ಪುತ್ರನ ತೇರ ತೊಲಗಿಸು |
ತತಿಮುನಿದು ಬಾಣಗಳ ಸುರಿದರು ರೇಣುಕನ ಮೇಲೆ |
ಯತಿಪ ಕೇಳೀಚೆಯಲಿ ರೇಣುಕ |
ಪಿತನಿಗಪಜಯ ಬಪ್ಪುದೆನುತಲಿ |
ಪತಿಯ ವದನವ ಕಂಡಳಾಕ್ಷಣ ಮನದ ದುಗುಡದಲಿ || ೧ ||
ರಾಗ ಕೇದಾರಗೌಳ ಅಷ್ಟತಾಳ
ತರುಣಿಯ ತಾತನ ಮುಸುಕಿದ ಭೂಪರ | ನೆರವಿಯನೀಕ್ಷಿಸುತ ||
ತಿರುಹಿ ದರ್ಭಾಗ್ರದೊಳಿಟ್ಟನು ಕೋಪದಿ | ವರಸತ್ಯವತಿಯ ಜಾತ || ೧ ||
ಹರನ ಶೂಲದ ಹತಿಗೊರಗಿದ ಗಜದೈತ್ಯ | ನುರು ಪರಿವಾರದಂತೆ ||
ಧರಣೀಶರೀತನ ಕುಶಹತಿಯಿಂ ಧರೆ | ಗುರುಳಿದರಾಗ ಮುಂತೆ || ೨ ||
ಪರಿಕಿಸಿ ಕೃತವೀರ್ಯಸುತನು ಬ್ರಹ್ಮದ್ವೇಷ | ಬರುವುದು ತಾನಿಂದಿಲಿ ||
ಧುರವ ನೆಸಗಬಾರದೆಂದು ತಿರುಗಿದನು | ಪುರಕೆ ದುಮ್ಮಾನದಲಿ || ೩ ||
ಬಳಿಕಲಾ ರೇಣುಕನೃಪತಿ ಕಾಣುತ್ತ ತ | ನ್ನಳಿಯನ ಸಹಸವನು ||
ಇಳೆಯೊಳಗ್ಗದ ವೀರ ಬುಧನಾದರೇನೆಂದು | ತಳೆದನು ಹರುಷವನು || ೪ ||
ಭಾಮಿನಿ
ಒರೆವೆ ನಾ ಮುಂಗಥೆಯ ಶೌನಕ |
ಧರಣಿಸುರ ಕೇಳ್ ಮುದದಿ ರೇಣುಕ |
ವಿರಚಿಸಿದನುದ್ವಾಹವನು ನಂದನೆಗೆ ತೋಷದಲಿ |
ಕರ ತುರಗಗಳ ಬಳುವಳಿಯ ಕೊ |
ಟ್ಟುರುತರ ಪ್ರೇಮದಲಿ ಯಾನವ |
ಭರದೊಳೇರಿಸುತಳಿಯನನು ಕಳುಹಿದನು ಸುತೆಸಹಿತ || ೧ ||
ವಾರ್ಧಿಕ
ತರುಣಿಸಹ ಬಂದು ಜಮದಗ್ನಿ ಪುಣ್ಯಾಶ್ರಮದಿ |
ನಿರತ ಸೌಖ್ಯದೊಳಿರಲು ಕೆಲವು ಕಾಲಾಂತರಕೆ ||
ಸರಸಿಜಾಕ್ಷಿ ಸುತಾಪ ಸುಮ ವಸು ಬೃಹದ್ಬಾಣರೆಂಬ ನಾಲ್ವರು ಸುತರನು |
ಹರುಷದಿಂ ಪಡೆದಳಾ ಬಳಿಕ ಶ್ರೀಕಾಂತನವ |
ತರಿಪ ತವಕದಿ ಬಂದು ರೇಣುಕೆಯ ಜಠರದೊಳ್ |
ಸ್ಥಿರವಾಗಿ ನೆಲೆಗೊಂಡ ಸ್ವಪ್ನ ಕಾಣಿಸಲಂದು ನಿಜಕಾಂತನೊಡನೆಂದಳು || ೧ ||
ರಾಗ ಕೇದಾರಗೌಳ ಅಷ್ಟತಾಳ
ನಿತಿಯೊಳು ಕಂಡ ಕನಸಿನೊಂದು ಚೋದ್ಯವ | ನುಸುರಲೇನದರ ನಾನು ||
ಪುಸಿನುಡಿಯಲ್ಲ ಸಂತಸದಿ ಪೇಳುವೆನೆನ | ಲುಸಿರೆಂದ ಮುನಿವರ್ಯನು || ೧ ||
ಕರಚತುಷ್ಟಯ ಶಂಖಾಬುರುಹ ಗದೆಯು ಚಕ್ರ | ಧರಿಸಿ ನೀಲಾಭ್ರದಂತೆ ||
ಮಿರುಪ ಪೀತಾಂಬರಧಾರಿಯು ಬಂದೆನ | ಗರುಹಿದ ತಾನೋರಂತೆ || ೨ ||
ಸತಿಯೆ ನಿನ್ನಯ ಭಕ್ತಿಗತಿ ಮೆಚ್ಚಿದೆನು ತವ | ಸುತನಾಗಿ ಜನಿಸುವೆನು ||
ಕೃತಕವಲ್ಲಿದು ನೀನರಿತುಕೊ ಎಂದದೃಶ್ಯ | ಸ್ಥಿತಿಗಯ್ದುದನು ಕಂಡೆನು || ೩ ||
ಎನಲು ತೋಷದೊಳೆಂದ ವನಿತೆ ಪೇಳಿನ್ನೊಮ್ಮೆ | ಘನಭಾಗ್ಯವಹ ಕನಸು ||
ಚಿನುಮಯಮೂರ್ತಿ ಸಂಜನಿಸುವ ನಿನಗಿದ | ಕನುಮಾನ ಬೇಡಿನಿಸು || ೪ ||
ಬಾಲೆ ಕೇಳ್ ಭೃಗುವಂಶದೇಳಿಗೆಯಾಗುವ | ಕಾಲ ಬಂದಿಹುದು ಕಾಣೆ ||
ಶ್ರೀಲೋಲ ನಿನ್ನಿಷ್ಟ ಪಾಲಿಪ ಭಜಿಸು ನೀ | ನಾಲಸ್ಕಗೊಳದೆ ಜಾಣೆ || ೫ ||
ಭಾಮಿನಿ
ವರನ ಮಾತನು ಕೇಳಿ ಸಂತಸ |
ಧರಿಸಿ ರೇಣುಕಯನವರತ ಶ್ರೀ |
ಹರಿಯಡಿಯ ಧ್ಯಾನಿಸುತಲಿರಲಯ್ದನೆಯ ಗರ್ಭದಲಿ |
ಚರಣದಲಿ ಧ್ವಜವಜ್ರರೇಖೆಯು |
ಮಿರುಪ ಕೆಂಜೆಡೆ ಕೊಡಲಿ ಭಸಿತವ |
ಕರದಿ ಪಿಡಿವುತಲುದಿಸಲಮರರು ಪೂಮಳೆಯ ಸುರಿಯೆ || ೧ ||
ರಾಗ ಶಂಕರಾಭರಣ ಏಕತಾಳ
ಈ ತೆರದಿ ಶಿಶುವ ಮುನಿ | ನಾಥ ಕಾಣುತಧಿಕತರ ಸಂ ||
ಪ್ರೀತಿಯಿಂದ ಕರೆಸಿ ಋಷಿ | ವ್ರಾತಗಳನ್ನು || ೧ ||
ಜಾತಕರ್ಮ ಗೆಯ್ದು ಬಳಿಕ | ಸೂತಿಕಾಂತ ದಿನದಿ ಭೃಗು ||
ಜಾತ ರಾಮನೆಂದು ಪೆಸರ | ನಾತಗಿಟ್ಟನು || || ೨ ||
ಇಂತು ನಾಮಕರಣ ಗೆಯ್ದ | ನಂತರದೊಳಾಗ ವ್ರತಿ ||
ಕಾಂತೆಯರ ಕೂಡಿಕೊಂಡ | ತ್ಯಂತ ಹರುಷದಿ || ೩ ||
ಕಾಂತೆ ರೇಣುಕೆಯು ಕನಕ | ವಾಂತ ತೊಟ್ಟಿಲೊಳಗಿಟ್ಟು ||
ಕಂತುಪಿತನ ತೂಗಿದಳು | ಸಂತೋಷದಿಂದ || ೪ ||
ರಾಗ ಮಧುಮಾಧವಿ ಅಷ್ಟತಾಳ
ಜೋ ಜೋ ಭೃಗುವಂಶಾವಾರಿಧಿಚಂದ್ರ |
ಜೋ ಜೋ ಕಾರುಣ್ಯನಿಧಿ ಗುಣಸಾಂದ್ರ ||
ಜೋ ಜೋ ಕೋಟಿಭಾಸ್ಕರರುಚಿರುಂದ್ರ |
ಜೋ ಜೋ ಸಜ್ಜನಪಾಲ ಉಪೇಂದ್ರ || ಜೋ ಜೋ || ೧ ||
ಅನುಪಮ ಪರಶುಧಾರಣತ್ರುವಿ |
ತ್ರುವಿ ತ್ರುವಿ ಮಿನಿಗುವ ಕೆಂಜೆಡೆಧರ ತ್ರುವ್ವಿ |
ವನಧಿ ಶಯನ ನಾರಾಯಣ ತ್ರುವ್ವಿ ತ್ರುವ್ವಿ |
ಘನಮಹಿಮನೆ ಶುಭಕರ ತ್ರುವ್ವಿ ತ್ರುವ್ವಿ || ಜೋ ಜೋ || ೨ ||
ದುಷ್ಟಮರ್ದನ ಶಿಷ್ಟಪಾಲನೆ ಲಾಲಿ | ಇಷ್ಟವನತರಿಗೆ ಕೊಟ್ಟವ ಲಾಲಿ ||
ಕಷ್ಟಸಂಸಾರವಿನಷ್ಟನೆ ಲಾಲಿ | ವಿಷ್ಟಪಾಧೀಶರ ಶ್ರೇಷ್ಠನೆ ಲಾಲಿ || ಜೋ ಜೋ || ೩ ||
ವಾರ್ಧಿಕ
ರಾಗದಿಂ ತೂಗಿದಬಲೆಯರ ಮನ್ನಿಸುತಲನು |
ರಾಗದಿಂ ಪುಷ್ಪ ತಾಂಬೂಲಮಂ ಕೊಡೆ ಪೋದ ||
ರಾಗ ಸಿತಪಕ್ಷಚಂದ್ರಮನಂತೆ ಬೆಳೆದನಾ ಬಾಲಕಂ ದಿನದಿನದೊಳು ||
ಆಗಲೆಂಟನೆ ವರುಷ ಚೌಲೋಪನಯನ ಗೆಯ್ಯು |
ತಾಗ ವೇದಾಧ್ಯಯನ ಶಾಸ್ತ್ರಪಾಠದಿ ನಿಪುಣ |
ನಾಗಿ ತರುಣತ್ವದಿದಿಂದಾಶ್ರಮದೊಳಿರುತಿರ್ದ ಧರೆಗೆ ಮಂದಾರದಂತೆ || ೧ ||
Leave A Comment