ರಾಗ ಕಾಂಭೋಜ ಅಷ್ಟತಾಳ

ಸಿಕ್ಕಿದೆಯ ದೈತ್ಯರಾಯ | ನೀ | ಘಕ್ಕನೆ ಬಂದೆನ್ನ ಕೈಯ ||
ರಕ್ಕಸರೊಳು ಶ್ರೇಷ್ಠನೆನಗಾರು ಸರಿಯೆಂಬ |
ಸೊಕ್ಕಿಂದ ನೀ ಬಂದು ಧುರವ ನೆಗಳಿಯಿಂದು || ಸಿಕ್ಕಿದೆಯ     || ೧ ||

ಸುರಪಾಲಜಿತು ಘಟಶ್ರವರು | ನಿನ್ನ | ಕಿರಿಯನುಜಾದಿ ದಾನವರು ||
ಧುರದೊಳು ನಿನ್ನನೊರ್ವನ ಬಿಟ್ಟುಬಿಟ್ಟೀಗ |
ತೆರಳಿದರೆಲ್ಲಿಗೆ ಕರೆಸವದಿರ ಬೇಗ || ಸಿಕ್ಕಿದೆಯ         || ೨ ||

ವ್ಯಾಜಯುದ್ಧದಿ ಗೆಲ್ಲಲಾನು | ದೇವ | ರಾಜನಂತಲ್ಲ ಕೇಳ್ ನೀನು ||
ಆಜಿಯೊಳಗೆ ಮಾನವನ್ನೀಗುತಲಿ ತವ |
ರಾಜಮುಖಿಗೆ ತೋರ್ಪುದಿನ್ನೆಂತು ವಕ್ತ್ರವ || ಸಿಕ್ಕಿದೆಯ || ೩ ||

ಹರನಿರುವದ್ರಿಯನೆತ್ತಿ | ದೇವ | ವರನನು ಬಿಡದೆ ಬೆಂಬತ್ತಿ ||
ಪರಿಭವಿಸುತ ಬಿಡದಟ್ಟಿ ಸುರರ್ಕಳ |
ಸಿರಿಯ ಸೆಳೆದ ಗರ್ವವಿಂದೆಲ್ಲಿ ಪೋದುದು || ಸಿಕ್ಕಿದೆಯ         || ೪ ||

ಭೂತಳಾಮರವಂಶದೊಳಗೆ | ಪುಟ್ಟಿ | ದಾತನೆಂದೆನುತ ನಾ ನಿನಗೆ ||
ಘಾತಿಸುವುದಕಂಜಿದೆನು ನೃಪನಾಗಿರ್ದ |
ಡೀ ತತೂಕ್ಷಣದೊಳು ಕೊಲುತಿದ್ದೆ ನಿನ್ನನು || ಸಿಕ್ಕಿದೆಯ         || ೫ ||

ವಾರ್ಧಿಕ

ದುರುಳ ಖಳನನ್ನಿಂತು ಜರೆದಾ ನೃಪಾಲಕಂ |
ಕರಗಳಂ ಬಂಧಿಸುತ ಕೊಂಡೊಯ್ದು ಸೆರೆಮನೆಯೊ ||
ಳಿರಿಸಲದ ಕಂಡು ಚಿಂತಿಸಿ ಪ್ರಹಸ್ತಾದಿ ಸಚಿವರು ಸೇನೆಸಹ ತೆರಳುತ ||

ಭರದಿ ಲಂಕೆಗೆ ಬಂದು ಕೈಕಸೆಗೆ ಕೈಮುಗಿದು ||
ಒರೆದರೆಲೆ ತಾಯೆ ನಿಮ್ಮಣುಗನಂ ಕೋಳ್ವಿಡಿದು |
ಸೆರೆಯೊಳಿಟ್ಟಿಹ ಕಾರ್ತವೀರ್ಯನೆನೆ ಕೇಳ್ದಾಗ ಮನಮರುಗುತಿಂತೆಂದಳು          || ೧ ||

ರಾಗ ಸಾಂಗತ್ಯ ರೂಪಕತಾಳ

ಏನ ಮಾಡುವೆನಯ್ಯೊ ತನ್ನಣುಗನು ಬಹು | ಮಾನವಂತನು ಕೀರ್ತಿಯುತನು ||
ತಾನೆನಿಸುತಲಿಂಥ ಹಾನಿ ಸಂಭವಿಸಿತಿ | ನ್ನೇನುಪಾಯವ ಗೆಯ್ವೆನಿದಕೆ   || ೧ ||

ಎನುತ ದುಃಖದೊಳಯ್ದಿ ಮುನಿ ಪೌಲಸ್ತ್ಯನ ಪಾದ | ವನಜ ಕೆರಗಿ ಬಿನ್ನಯ್ಸಿದಳು ||
ತನುಜನ ಕಾರ್ತವೀರ್ಯನು ಬಂಧಿಸಿದನಂತೆ | ಘನಮಹಿಮನೆ ರಕ್ಷಿಸಯ್ಯೊ        || ೨ ||

ಎನಲೆಂದ ಹರುಷದಿ ವನಿತೆ ಚಿಂತಿಸದಿರು | ಜನಪನಲ್ಲಿಗೆ ಪೋಗಿ ನಿನ್ನ ||
ತನಯನ ಬಿಡಿಸುವೆನೆನುತ ಮಾಹಿಷ್ಮತಿ | ಜನಪದಕಯ್ತರಲಾಗ          || ೩ ||

ಚರರಿಂದ ವಾರ್ತೆಯನರಿತಿದಿರ್ಗೊಳ್ಳುತ್ತ | ಕರೆದೊಯ್ದಾಸನದಿ ಕುಳ್ಳಿರಿಸಿ ||
ಭರದೊಳರ್ಚಿಸಿ ಪಾದಕೆರಗಿ ಮತ್ತೆಂದನು | ಧರಣಿಪ ಕಾರ್ತವೀರ್ಯಾಖ್ಯ || ೪ ||

ಪರಮಪಾವನ ನಿಮ್ಮ ದರುಶನದಿಂದೆನ್ನ | ದುರಿತನಾಶನ ಜನ್ಮಸಫಲ ||
ಒರೆವುದಿನ್ನೇನಿತ್ತ ಬಂದ ಕಾರಣವೇನು | ಕರುಣದೊಳರುಹೆನಲೆಂದ       || ೫ ||

ರಾಗ ನವರೋಜು ಏಕತಾಳ

ಮೆಚ್ಚಿದೆ ಕೇಳ್ ಭೂರಮಣ | ನಿನ್ನ | ಹೆಚ್ಚಿನ ಭಕ್ತಿಗೆ ಸುಗುಣ ||
ಅಚ್ಯುತ ಕಮಲಜ | ಕಿಚ್ಚುಗಣ್ಣವರಿಗೆ |
ನಚ್ಚಿನ  ಭಕ್ತನು | ನಿಶ್ಚಯ ನೀನಹೆ || ಮೆಚ್ಚಿದೆ || ೧ ||

ಧಾರಿಣಿಪಾಲಕರೊಳಗೆ | ಬಲು | ಧೀರನು ನೀ ಜಗದೊಳಗೆ ||
ವೈರದಿ ನಿನ್ನೊಳು | ಹೋರುತ ಬದುಕುವ |
ವೀರರಾರಿಹರು | ಮೂರು ಲೋಕದೊಳು || ಮೆಚ್ಚಿದೆ   || ೨ ||

ಅರಸ ಕೇಳ್ ನೀನಿಂದು | ತನ | ಗುರುವ ಶಿಷ್ಯನು ಎಂದು ||
ಹರುಷದಿ ಬಂದಿಹೆ | ಗುರುದಕ್ಷಿಣೆಯನು |
ತ್ವರಿತದಿ ಕೊಡು ಎನ | ಲೊರೆದನು ಭೂಮಿಪ || ಮೆಚ್ಚಿದೆ        || ೩ ||

ಭಾಮಿನಿ

ಇನಿತು ಪೊಗಳುವಿರೇಕೆ ತನ್ನನು |
ಧನ ಕನಕ ಧರೆಸಹಿತ ನಿಮ್ಮದು |
ಮನಕೆ ಬಂದುದ ಕೇಳಲೀವೆನೆನುತ್ತ ಕೈಮುಗಿದು |
ಮುನಿಪನೆಂದನು ಸಕಲ ವೈಭವ |
ನಿನಗಿರಲಿ ತಾನೊಲ್ಲೆ ಭೂಪನೆ |
ತನಯನಣುಗನ ಕೊಡು ತನಗೆ ಗುರುದಕ್ಷಿಣೆಯೆನೆಂದ || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿ ಭೂಪತಿ ಹರುಷದಲಿ ದೂ | ತಾಳಿಯನು ಕರೆದೆಂದ ತನ್ನಿರಿ ||
ಕಾಲ ಸಂಕಲೆ ಕಡಿದು ವರ ದಶ | ಮೌಳಿಯನ್ನು        || ೧ ||

ಎನಲು ಕರೆತರಲಾ ಕ್ಷಣದೊಳಾ | ದನುಜಪತಿ ಬಂದೆರಗೆ ನಿರುಕಿಸಿ ||
ಮುನಿಪನೆಂದನು ಕಾರ್ತವೀರ್ಯಗೆ | ವಿನತನಾಗಿ      || ೨ ||

ನಾಚುತಲೆ ನೃಪಗೆರಗಿ ಕೈಗಳ | ಚಾಚಿ ತೆಗೆದಪ್ಪುತ್ತಲಾತಗೆ ||
ವಾಚಿಸಿದ ನಿನ್ನೊಡನೆ ಸಖ್ಯವ | ನಾಚರಿಸುವೆ          || ೩ ||

ಮುನಿವರನು ನುಡಿ ಕೇಳ್ದು ಹರುಷದಿ | ಜನಪದಶಕಂಠರಿಗೆ ಸಖ್ಯವ ||
ನನಲಸಾಕ್ಷಿಯೊಳೆಸಗಿ ತೆರಳಿದ | ವಿನಯದಿಂದ       || ೪ ||

ಭಾಮಿನಿ

ದುರುಳ ದಶಕಂಧರನ ಲಂಕಾ |
ಪುರಕೆ ಕಳುಹಿಸಿ ಕಾರ್ತವೀರ್ಯನು |
ನಿರತ ಸೌಖ್ಯದಿ ಧರ್ಮವನು ರಾಜ್ಯದಲಿ ನೆಲೆಗೊಳಿಸಿ |
ಸುರಪತಿಗೆ ಮಿಗಿಲಾಗಿ ಸಂತತ |
ಪುರಜನರ ಪರಿಜನರ ಕೂಡುತ |
ಧರೆಯನಾಳುತ್ತಿರ್ದನನುಪಮ ರಾಜತೇಜದಲಿ         || ೧ ||

ವಾರ್ಧಿಕ

ಒರೆವೆ ಕೇಳ್ ಮುಂಗಥೆಯ ಚಂದ್ರಂಗೆ ಬುಧ ಬುಧಗೆ |
ತರುಣ ನಾದಂ ಪುರೂರವನವಗೆ ವಿಜಯನೆಂ |
ಬುರುಪರಾಕ್ರಮಿ ಜನಿಸಲಾತನಿಗೆ ಕಾಂಚನನು ಕಾಂಚನನ ಸುತ ಹೋತ್ರಗೆ |
ವರಸುಯಜ್ಞಾಖ್ಯ ಮಗನಾದನವನುದರದೊಳು |
ಧರಣಿಪಾಲಕನಶ್ವಯೋಜಕಂ ಕುಶನವನ |
ತರಳಕುಶನೆಂಬವನ ಸುತಗಾಧಿ ಗಾಧಿಗಾ ಸತ್ಯವತಿಯೆಂಬ ಮಗಳು     || ೧ ||

ಭಾಮಿನಿ

ನಿರತ ಹರುಷದಿ ಗಾಧಿರಾಜನು |
ಭರತ ವಿಭವದಿ ವಿಜಯವಿರಚಿತ |
ಪುರದಿ ಕುಲವತಿಯೆನಿಪ ಸತಿಸಹಿತಖಿಳ ಸಂಪದದಿ |
ಧರೆಯ ಸದ್ಧರ್ಮದಲಿ ಪಾಲಿಸು |
ತಿರುತಲೊಂದಿನದೋಲಗದಿ ತ |
ನ್ನರಸಿಯಳ ಮೊಗ ನೋಡಿ ಚಿಂತಿಸುತೆಂದನವನೀಶ  || ೧ ||

ರಾಗ ಕಾಂಭೋಜ ಏಕತಾಳ

ಇತ್ತ ಕೇಳೆ ಕಮಲದಳ | ನೇತ್ರೆ ತನ್ನ ನುಡಿಯ ||
ಚಿತ್ತದೊಳಗೆ ಬಹಳ ಚಿಂತೆ | ಹತ್ತಿದೆ ಕೇಳಿದೆಯ        || ೧ ||

ಏನು ಚಿಂತೆ ಬಂತಿದೆನ್ನ | ಪ್ರಾಣಕಾಂತ ನಿನಗೆ ||
ನಾನು ಕೇಳಬಾರದೆಯನು | ಮಾನಿಸದೆ ಪೇಳೆನಗೆ    || ೨ ||

ವಲ್ಲಭೆ ಕೇಳ್ ಕುಲದ ಬಾಳ್ವೆ | ಗಿಲ್ಲ ಮಕ್ಕಳೆಂದು ||
ಸಲ್ಲಿಲಿತ ಭೋಗದೊಳು ಮನ | ವಿಲ್ಲದಾಯಿತಿಂದು     || ೩ ||

ನಲ್ಲ ಕೇಳು ಗಂಡು ಮಕ್ಕ | ಳಿಲ್ಲದಾದರೇನು ||
ಚೆಲ್ವ ಸುತೆಗೆ ಪತಿಯ ಗೆಯ್ದು | ಸಲ್ಲಿಸೀ ರಾಜ್ಯವನು    || ೪ ||

ಹೆಣ್ಣು ಕೊಟ್ಟರಳಿಯನಾದ | ರೆನ್ನ ಕುಲದೇಳಿಗೆಗೆ ||
ಇನ್ನೆಂತು ಪತಿಯ ಮಾಳ್ಪೆ | ಕನ್ಯೆ ತಿಳುಹು ತನಗೆ     || ೫ ||

ಕಂದ

ಪೆತ್ತರ್ಭಕನಿಲ್ಲದವಗೆ | ದತ್ತ ಸ್ವೀಕರದಿಂದೆ ಪುತ್ರನಹನಲ್ಲದೊಡಂ ||
ಪುತ್ರಿಯ ಮಗನಿಂದಲಿ ಕುಲ | ವಿಸ್ತರವಾಗದೆನೆ ಕೇಳಿ ಭಯದೊಳಗೆಂದಳ್ ||

ಭಾಮಿನಿ

ಅರಿಯದುಸಿರಿದ ತಪ್ಪ ಕ್ಷಮಿಸೆಂ |
ದೆರಗಲೆತ್ತುತ್ತಾಗ ಭೂಪನು |
ಹರುಷಗೊಂಡಿರೆ ಬಂದನಾ ಕ್ಷಣ ಭಾರ್ಗವವ್ರತಿಪ |
ನೆರೆದ ಸಭೆ ಸಹಿತಿದಿರುಗೊಂಡಾ |
ದರಿಸಿ ಕರೆತಂದಾಸನಾದ್ಯುಪ |
ಚರವ ಗೆಯ್ವುತ್ತೆರಗಿ ನುಡಿದನು ನೃಪತಿ ವಿನಯದಲಿ   || ೧ ||

ರಾಗ ಕೇದಾರಗೌಳ ಅಷ್ಟತಾಳ

ಮುನಿಪತಿ ಬಿನ್ನಹ ಜನಪತಿ ತಾನಾಗಿ | ಘನ ತಾಪತ್ರಯದೊಳಗೆ |
ಮನಬಿದ್ದಜ್ಞಾನನ ಮನೆಗೆ ಬಂದಿರಿ ನೀವು | ತನಗನುಗ್ರಹ ಮಾಳ್ಪರೆ ||    || ೧ ||

ಎಲ್ಲಿಂದ ಬಂದುದಾವಲ್ಲಿಗೆ ಗಮನ ನೀ | ವಿಲ್ಲಿಗೆ ಬಂದ ಕಾರ್ಯ |
ಒಳ್ಳಿತೆನ್ನಯ ಜನ್ಮವೆಲ್ಲ ಸಫಲವಾಯ್ತು | ಸೊಲ್ಲಿಸಿ ಮೌನಿವರ್ಯ ||       || ೨ ||

ಎನಲೆಂದ ಭೃಗುಜನು ವನಜಾಕ್ಷಧ್ಯಾನವ | ವನದೊಳು ಗೆಯ್ವುತಿರೆ |
ತನಗೊಬ್ಬ ಪುತ್ರನು ಜನಿಸುವಾಪೇಕ್ಷೆಯು | ಮನದೊಳಗಾಯ್ತರರೆ ||      || ೩ ||

ಅದರಿಂದ ನಾನಿಲ್ಲಿ ಒದಗಿ ಕನ್ಯಾರ್ಥಿಯಂ | ದದೊಳು ಬಂದಿರುವೆ ಕೇಳು |
ಬುಧರಿಗೆ ಭೂಪರು ಮುದದಿ ಮಗಳ ಕೊಡು | ವುದು ನೀತಿ ಗ್ರಹಿಸೆನಲು ||          || ೪ ||

ಭಾಮಿನಿ

ಎಂದ ನುಡಿಯರ್ಥವನು ತಿಳಿಯುತ |
ಲಂದು ತನ್ನೊಳುಗಾಧಿರಾಯನು |
ಸಂದ ಮುನಿಯಿವನಾದರೆಯು ಮತ್ಸುತೆಗೆ ಜತೆಯಿಲ್ಲ |
ಇಂದುಮುಖಿ ಜವ್ವನಳು ಮುದಿ ಮುನಿ |
ಗಿಂದು ಕೊಡುವೆನದೆಂತೆನುತ ನೃಪ |
ನೊಂದುಪಾಯವ ತಿಳಿದು ಪೇಳಿದ ಭೃಗುಜಗುತ್ತರವ  || ೧ ||

ವಾರ್ಧಿಕ

ಎಲೆ ಮುನಿಪ ನಿಮಗೆನ್ನ ಮಗಳ ಕೊಡುವುದಕೆನಗೆ |
ಬಿಳಿದು ಮೈ ಕಪ್ಪೊಂದು ಕಿವಿ ಮಾತ್ರವಾಗಿರುವ |
ಲಲಿತ ಸಾವಿರ ಕುದುರೆ ತಂದು ಕೊಟ್ಟರೆ ಸುತೆಯ ಧಾರೆಯೆರೆದೀವೆ ನಿಮಗೆ |
ತಿಳಿರೆನಲು ನೃಪನ ಬೀಳ್ಗೊಂಡು ಬೇಗದಿ ಯೋಗಿ |
ಜಲಧೀಶನಲ್ಲಿಗಯ್ತರೆ ಕಂಡು ವರುಣನತಿ |
ಪುಳಕದಿಂದರ್ಚಿಸುತ ನಮಿಸಿ ಬೆಸನೇನೆನಲು ನಲವಿನಿಂ ಪೇಳ್ದ ವ್ರತಿಪ   || ೧ ||

ರಾಗ ಶಂಕರಾಭರಣ ಏಕತಾಳ

ವರುಣದೇವ ಲಾಲಿಸಯ್ಯ | ತರಳರಿಚ್ಛೆಯಿಂದ ನಾನು ||
ಅರಸ ಗಾಧಿರಾಯನೆಡೆಗೆ | ತೆರಳಿದೆನಿಂದು  || ೧ ||

ಭರದೊಳೆನಗಾತಿಥ್ಯವನ್ನು | ವಿರಚಿಸೇಕೆ ಬಂದಿರೆನಲು ||
ಧೊರೆಯು ಕನ್ಯಾರ್ಥಿಯೆನೆ ಕೇಳಿ | ಧರಣೀಶ ಪೇಳ್ದ    || ೨ ||

ತರಳೆ ಬೇಕೆಂಬಾಸೆ ನಿಮಗೆ | ಇರಲೊಂದು ಕರ್ಣವು ಕಪ್ಪಾ ||
ಗಿರುವ ಬಿಳಿದು ಕುದುರೆಯ ಸಾ | ಸಿರವನು ಕೊಡಲು  || ೩ ||

ಅರಸು ಮಗಳ ಕೊಡುವೆನೆನಲು | ಭರದೊಳವನ ಬೀಳುಗೊಂಡು ||
ತ್ವರಿತ ದಿಂದಿಲ್ಲಿಗೆ ನಾ ಬಂ | ದಿರುವೆನು ಕೇಳೈ        || ೪ ||

ಅದರಿಂದವನು ಪೇಳ್ದ ತೆರದ | ಕುದುರೆಯೊಂದು ಸಾವಿರವನು ||
ಒದಗಿಸಿ ನೀ ಕೊಟ್ಟರೆನಗೆ | ಮದುವೆಯಹುದಯ್ಯ      || ೫ ||

ರಾಗ ಕೇದಾರಗೌಳ ಝಂಪೆತಾಳ

ಎನೆ ಕೇಳ್ದು ಗಹಗಹಿಸುತಾ | ವರಣನಾ | ಮುನಿಗೆಂದನಾಗ ನಗುತ ||
ಇನಿತು ದೀನತ್ವವೇಕೆ | ಸರ್ವಸ್ವ | ವನು ಕೊಡುವೆ ನಿಮಗೆ ಬೇಕೆ          || ೧ ||

ಸಾಕು ಮೆಚ್ಚಿದೆನು ವರುಣ | ಬಹು ವಸ್ತು | ವೇಕಯ್ಯ ತನಗೆ ಸುಗುಣ ||
ಆ ಕನ್ಯೆ ಪ್ರತಿಗ್ರಾಹಕೆ | ಕುದುರೆ ಕೊಡು | ಸಾಕು ಬೇರೆನಗೆ ಬೇಕೆ || ೨ ||

ನಿಮ್ಮದೈ ಸಕಲ ಒಡವೆ | ನೀವ್ ಕೊಟ್ಟ | ರೆಮ್ಮ ದಾಯ್ತೆಂದು ತಿಳಿವೆ ||
ಘಮ್ಮನೊಯ್ವುದು ಕುದುರೆಯ | ಸಾವಿರವ | ಸುಮ್ಮಾನದೊಳಗೆ ಜೇಯ || ೩ ||

ಕೊಟ್ಟೆ ಬಿಳಿದಾದಶ್ವವ | ಒಂದು ಕಿವಿ | ಯಷ್ಟಕ್ಕೆ ಕಪ್ಪಗಿರುವ |
ಕೊಟ್ಟದನು ಗಾಧಿನೃಪಗೆ | ತತ್ಸುತೆಯ | ಇಷ್ಟವಹಯ್ಯ ಮದುವೆ ನಿಮಗೆ  || ೪ ||

ಎನೆ ಕೇಳ್ದು ಭೃಗುಜ ನಗುತ | ವರುಣನೊಳು | ನಿನಗೆ ದೀರ್ಘಾಯುವೆನುತ ||
ವಿನಯದಿಂ ತುರಗಸಹಿತ | ಬೀಳ್ಗೊಂಡು | ಘನವೇಗದಿಂದ ಬರುತ       || ೫ ||

ಕಂದ

ತ್ವರಿತದಿ ಬಂದಾ ಮುನಿಪಂ |
ಧರಣಿಪನಿಗೆ ಶ್ವೇತಕುದುರೆಗಳ ಕೊಡಲಾಗಂ ||
ಪರಮೋತ್ಸಹದಲಿ ತನ್ನಯ |
ನೆರೆದಿಹ ಸಭೆಯಲ್ಲಿ ನುಡಿದ ತೋಷದಿ ಮುನಿಗಂ       || ೧ ||

ರಾಜ ಜಂಜೋಟಿ ಏಕತಾಳ

ಭಳಿರೆ ನಾ ಮೆಚ್ಚಿದೆ ಮುನಿಯೆ | ನಿಮ್ಮ ಸಾಹಸಕೆ | ಇಳೆಯ ಮೇಲಿನ್ನಾರು ಸರಿಯೆ ||
ಛಲದೊಳು ನಿಮ್ಮೊಳವನು ತಿಳಿಯದೆ ನಾ |

ಒಲಿದದನೆಂದರೆ ಘಳಿನಯ್ತಂದಿರಿ || ಭಳಿರೆ    || ೧ ||
ಧರಣೀಶರಾದರೀಪರಿಯ | ಒಂದೇ ರೀತಿಯ | ತುರಗವ ತರುವುದಾಶ್ಚರಿಯ ||

ವರಮುನಿಗಳೊಳೀ ತೆರದೊಳು ಸಾಹಸ |
ವಿರುವರ ಕಾಣೆನು ಮರೆಯ ಮಾತೇನೈ || ಭಳಿರೆ      || ೨ ||

ತನುಜೆಯ ಕೊಡುವೆನೈ ನಿಮಗೆ | ಸಂಶಯವಿಲ್ಲ |
ಮುನಿಯೆ ನಾ ನಿಮಗೆಂದ ನುಡಿಗೆ ||

ದನುಜಾರಿಯ ಕೃಪೆ ತನಗಿಹ ಕಾರಣ |
ಘನಮಹಿಮರನಿತ್ತನು ಸುತೆಗಿಂದಿಲಿ || ಭಳಿರೆ || ೩ ||

ವಾರ್ಧಿಕ

ಇಂತೆನುತ ಭೂವರಂ ಬಳಿಕ ತನ್ನಗರವಾ |
ದ್ಯೆತಮಂ ಶೃಂಗರಿಸಿ ಬಂಧುಬಾಂಧವರುಗಳ |
ತಿಂತಿಣಿಯ ಬರಿಸುತ್ತ ಸಕಲ ಸಾಹಿತ್ಯಗಳನಣಿಗೊಳಿಸಿ ಶುಭಲಗ್ನದಿ ||
ಸಂತಸದಿ ಮಗಳ ಮುನಿಪಗೆ ಧಾರೆಯನ್ನೆರೆದ |
ನಂತರದಿ ಚಾತುರ್ಥಿಯಂ ಕಳೆದು ಬಳುವಳಿಯ |
ನುಂ ತನುಜೆಗಿತ್ತು ವಧು ವರರುಗಳ ಮನ್ನಿಸುತ ಗಾಧಿನೃಪ ಬೀಳ್ಗೊಟ್ಟನು || ೧ ||

ಕಂದ

ಈ ತೆರದಿಂದಾ ಭಾರ್ಗವ |
ಪ್ರೀತೆಯನೊಡಗೊಂಡು ತನ್ನುಟಜ ಕಯ್ತಂದು ||
ಸಾತಿಶಯದೊಳಿರಲೊಂದಿನ |
ಕಾತರದಲಿ ಸತ್ಯವತಿಯು ಪತಿಗಿಂತೆಂದಳ್  || ೧ ||

ರಾಗ ಕೇದಾರಗೌಳ ಅಷ್ಟತಾಳ

ಹರಣದೊಲ್ಲಭ ಕೇಳೆನ್ನರಿಕೆಯ ಕೃಪೆಯೊಳು | ನರಜನ್ಮದೊಳಗೆ ಬಂದು ||
ತರಳರು ಜನಿಸದೆ ಬರಿಯ ಭ್ರಾಂತಿಯೊಳಾನು | ಮರುಗುವುದಾಯಿತಿಂದು ||      || ೧ ||

ಫುಲ್ಲಾಕ್ಷಿ ಕೇಳ್ ಸುತರಿಲ್ಲೆಂದು ಚಿಂತಿಸು | ವಲ್ಲಿ ಕಾರಣವಿಹುದು ||
ಒಳ್ಳಿತು ಬುದ್ಧಿ ನಿನ್ನಲ್ಲಿ ಹುಟ್ಟುವನು ಮಾ | ವಲ್ಲಭಾಶ್ರಿತನೊಲಿದು || ೨ ||

ಪ್ರೀತ ಕೇಳೆನ್ನಯ ಮಾತೆಗರ್ಭದಿ ತನು | ಜಾತರು ಜನಿಸಲಿಲ್ಲ ||
ನೂತನ ಸುತನೊಬ್ಬನಾತಳಿಗುದಿಸುವ | ರೀತಿಯ ನಡೆಸುನಲ್ಲ || ೩ ||

ವನಿತೆ ಕೇಳ್ ನಿನ್ನಯ ಜನನಿಯ ಗರ್ಭದಿ | ಜನಿಸದೆಯಲ್ಲ ನೀನು ||
ತನಯರಿಲ್ಲೆನ್ನುವ ಘನಕಾರ್ಯ ಪೇಳ್ದೆ ನಾ | ನೆನಿತು ಗೆಯ್ಯುವೆನಿದನು    || ೪ ||

ಪರಮ ಶಾಶ್ವತ ಮುನಿವರ ನಿಮ್ಮ ಮಹಿಮೆಯ | ನರಿವರಾರ್ ತ್ರೈಲೋಕ್ಯದಿ ||
ತರಳೆ ತಾನಾಗಿಹೆ ಕರುಣಿಸು ಮಾತೆಗೆ | ತರಳನ ಸಂತೋಷದಿ          || ೫ ||

ವಾರ್ಧಿಕ

ಕಾಂತೆ ಮರುಗದಿರಿನ್ನು ನಿನ್ನ ಜನನಿಗೆ ಗಂಡು |
ಸಂತತಿಯು ನಿನಗೆ ಸಹ ಜನಿಪಂತೆ ಚರುವಿಂದ |
ಮಂತ್ರಿಸುವೆ ಪಿಂಡವೆರಡೆಂದೆನುತ ಮಂತ್ರದಿಂದೆರಡು ಪಿಂಡವನು ಜಪಿಸಿ ||
ತಾಂ ತಳುವದಯ್ದೆ ನದಿಸ್ನಾನಕೆಂದಾ ಮುನಿಪ |
ನುಂ ತೆರಳೆ ಸಂತಸದಿ ಸತ್ಯವತಿ ಕುಲವತಿಯೊ |
ಳಿಂತಿದನು ಪೇಳಲಾನಂದಶರಧಿಯೊಳಾಗ ತಾಯಿ ಮಗಳೊಡನೆಂದಳು || ೧ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಮಗಳೆ ಮೋಹದ ರನ್ನೆ ಪ್ರೀತಿಲಿ | ನೆಗಳಿದೀ ಸತ್ಕಾರ್ಯವು ||
ಬಗೆಗೆ ಬಲು ಸಂತೋಷವಾಯಿತು | ಪೊಗಳ್ವೆನೆಂತು ನಿನ್ನನು || ಸಾರಸಾಕ್ಷಿ        || ೧ ||

ತರಳರಿಲ್ಲದೆ ದುಃಖದಲಿ ತಾ | ನಿರಲು ಸುತರಹ ಪಿಂಡವ ||
ವರನೊಡನೆ ನೀ ಕೇಳಿ ಪಡೆದು | ದ್ಧರಿಸಿದೆಯ ಮತ್ಕುಲವನು || ಪ್ರೀತಿಯಿಂದ      || ೨ ||

ಎನಲು ನುಡಿದಳು ಸತ್ಯವತಿ ಕೇಳ್ | ಜನನಿ ಮಂತ್ರಿತ ಪಿಂಡವ ||
ನಿನಗಿದುವೆ ನೀ ಕೊಳ್ಳೆನುತ್ತಿರೆ | ಮನದಿ ಶಂಕಿಸುತೆಂದಳು || ಕುವರಿಯೊಡನೆ      || ೩ ||

ನಿನ್ನ ಮಂತ್ರಿತಚರುವು ಒಳ್ಳಿತ | ದನ್ನು ನೀನು ಕೊಟ್ಟರೆ ||
ತನ್ನ ಜಠರದಿ ಜನಿಪ ಗುಣಸಂ | ಪನ್ನನೆನಿಸುವ ಪುತ್ರನು || ಎನಲೊರೆದು || ೪ ||

ಈ ಪರಿಯ ನುಡಿಯದಿರು ಮುನಿಪತಿ | ಕೋಪಿಸುವ ಕೇಳ್ ಮಾತೆಯೆ ||
ಭೂಪನರಸಿಯು ನೀನು ನಿನ್ನದ | ನಾಪಡೆದು ಕೊಳ್ಳೆಂದಳು || ಖಿನ್ನಳಾಗಿ || ೫ ||

ಭಾಮಿನಿ

ನಿನ್ನದನು ಕೊಡು ಎನುತ ಕಾಡಲು |
ಕನ್ನಿಕಾಮಣಿ ತಾಯ ಮೋಹದಿ |
ತನ್ನದನು ಕೊಟ್ಟದನು ಕಳುಹುತಳ್ಗೆ ಮಂತ್ರಿಸಿದ |
ಸನ್ನುತದ ಪಿಂಡವನು ತಾ ತಿನ |
ಲನ್ನೆಗಲ್ಲಿಗೆ ಬಂದು ಭಾರ್ಗವ |
ನುನ್ನತದ ಕೋಪದಲಿ ನುಡಿದನು ಸತ್ಯವತಿಯೊಡನೆ   || ೧ ||

ರಾಗ ಕೇದಾರತಾಳ ಝಂಪೆತಾಳ

ಮಡದಿ ನೀ ಗೆಯ್ದುದೇನು | ನಿನ್ನಂಥ | ಜಡಮತಿಗಳುಂಟೆ ಇನ್ನು ||
ಪಡೆದೆರಡು ಪಿಂಡಗಳನು | ಏನ್ ಗೆಯ್ದೆ | ನುಡಿ ಮಾಜದೆನಗೆ ನೀನು     || ೧ ||

ರಾಗ ಕಾಪಿ ರೂಪಕತಾಳ

ಮಾತ ಕೇಳು ಪ್ರಾಣಕಾಂತ | ಈ ತೆರದೊಳು ಕೋಪವೇಕೆ ||
ಮಾತೆಗೊಂದು ಪಿಂಡವಿತ್ತು | ನಾ ತಿಂದೆನೊಂದೆ ಪರಾಕೆ || ಮಾತ       || ೧ ||

ರಾಗ ಕೇದಾರಗೌಳ ಝಂಪೆತಾಳ

ಇತ್ತ ಕೇಳೆನಗೆ ನಾರಿ | ಚರು ಬದಲಿ | ಸುತ್ತವ್ವೆಗಿತ್ತೆ ಪೋರಿ ||
ಮೃತ್ಯುವಂತಿಹ ಪುತ್ರನು | ಜನಿಸುವನು | ಧೂರ್ತೆ ತವ ಬಸಿರೊಳಿನ್ನು ||

ರಾಗ ಕಾಪಿ ರೂಪಕತಾಳ

ಭೂರಿ ತಪ್ಪ ಕ್ಷಮಿಸು ತನಗೆ | ಕ್ರೂರಸುತನು ಜನಿಸುವಂಥ ||
ಕಾರಣವೇನದರ ಪರಿ | ಹಾರಗೆಯ್ದು ಸಲಹೊ ಕಾಂತ || ಮಾತ || ೧ ||

ರಾಗ ಕೇದಾರಗೌಳ ಝಂಪೆತಾಳ

ರಾಜರಿಗೆ ರಜದ ಗುಣದಿ | ಚರು ನಿನಗೆ | ರಾಜಿಸುವ ಸತ್ತ್ವಗುಣದಿ ||
ನಾ ಜಪಿಸಿದೆನು ಬದಲಿಸಿ | ಕೆಡಿಸಿದೆ ವಿ | ರಾಜಿಸುವ ಕುಲವನರಸಿ       || ೧ ||

ರಾಗ ಕಾಪಿ ರೂಪಕತಾಳ

ದಾರಿ ತಪ್ಪಿದೆನು ನಾನೀಗ | ಸಾರಿದೆ ನಿಮ್ಮಡಿಯ ತನಗೆ ||
ಕ್ರೂರಸುತನು ಜನಿಸೆ ಕುಲವು | ದ್ಧಾರವಪ್ಪುದಿನ್ನು ಹೇಗೆ || ಮಾತ         || ೧ ||

ಭಾಮಿನಿ

ಮರುಗದಿರು ಕೇಳರಸಿ ಸದ್ಗುಣ |
ಭರಿತ ಜನಿಸುವ ನಿನಗೆ ನಿನ್ನಯ |
ತರಳಗುದಿಸುವ ಕುವರ ಕ್ರೂರನುದಾರ ವಿಕ್ರಮನು ||
ನಿರುತವಿದು ಕೇಳೆನಲು ಮುನಿಪನ |
ಚರಣಕೆರಗುತ ಮುದದೊಳಿರಲಾ |
ತರಳೆ ಗರ್ಭವ ಧರಿಸೆ ಮುನಿ ಸಂತೋಷಮನನಾದ   || ೧ ||

ಕಂದ

ಏಳನೆ ತಿಂಗಳೊಳಾ ಮುನಿ | ಪಾಲನು ಋಷಿವ್ರಾತವನ್ನು ಕರೆಸುತ ಮುದದಿಂ ||
ತಾ ಲಲನೆಗೆ ಸೀಮಂತವ | ಲೀಲೆಯೊಳೆಸಗುತ್ತೆ ಸುಖದೊಳಿರ್ದಂ ನಿರತಂ        || ೧ ||

ವಾರ್ಧಿಕ

ಘನವಿಭವದಿಂದ ಋಷಿಗಳ ಕಳುಹಿ ಭಾರ್ಗವಂ |
ವನಿತೆಬಯಕೆಯ ಸಲಿಸಿ ಸಂತಸದೊಳಿರಲೊಂದು |
ದಿನ ಶುಭಮುಹೂರ್ತದೊಳ್ ಪಡೆದಳು ಸುಲಕ್ಷಣದ ಕುವರನಂ ಸತ್ಯವತಿಯು ||
ಮುನಿ ಜಾತಕರ್ಮಮಂ ರಚಿಸಿ ವೇದೋಕ್ತದಿಂ |
ಜನಿಸಿದರ್ಭಕಗೆ ಜಮದಗ್ನಿಯೆನ್ನುವ ಪೆಸರ |
ವಿನಯದಿಂದಿಡಲಿತ್ತ ಶುಭಲಗ್ನದೊಳು ಪೆತ್ತಳಾ ಕುಲವತೀ ಸುತನನು     || ೧ ||