ರಾಗ ಕೇದಾರಗೌಳ ಝಂಪೆತಾಳ
ಅಸುರೇಂದ್ರ ಕೇಳು ನುಡಿಯ | ಸಂಗರ | ಕ್ಕಸುರಹರನೇಕೆ ಜೀಯ ||
ಅಸಮ ಸಾಹಸಿಕರಿಹರು | ನಾ ತೋರ್ಪೆ | ವಸುಧೀಶರೊಳು ಕೆಲಬರು || ೧ ||
ಸಹಜ ಕೇಳಾಹವದೊಳು | ಮೀಟಾದ | ಮಹಿಪರೆಲ್ಲರ ಜವದೊಳು ||
ವಿಹಿತದಿಂ ದಿವಿಜತತಿಯ | ಗೆಲಿದೆನ್ನ | ಸಹಸಗಳ ಕೇಳಿದರಿಯ || ೨ ||
ತವ ಪರಾಕ್ರಮವ ನಾನು | ತಿಳಿದಿರ್ಪೆ | ವಿವರಿಸುವದೇನದರನು ||
ಭುವನದೊಳು ವೀರರಿಂದೆ | ಮೇಲಿನಿಸಿ | ದವರಿಹರು ಕೇಳು ಹಿಂದೆ || ೩ ||
ತಮ್ಮ ಕೇಳೀಗ ಧರೆಯ | ಮಧ್ಯದೊಳು | ನಮ್ಮ ಸರಿಯಾದ ಧೊರೆಯ ||
ಒಮ್ಮೆ ನೀ ತೋರವನನು | ಮಡುಹದಿರೆ | ಬೊಮ್ಮಕುಲದವನೆ ತಾನು || ೪ ||
ಎನಲೆಂದನಣ್ಣ ಕೇಳು | ಕೃತವೀರ್ಯ | ತನುಜ ಭೂಪಾಲಕರೊಳು ||
ಘನ ಬಲಾನ್ವಿತನಾತಗೆ | ಸರಿಯಿಲ್ಲ | ಮನುಜಸುರಭುಜಗರೊಳಗೆ || ೫ ||
ಭಾಮಿನಿ
ಅನುಜನಾಡಿದ ಮಾತ ಕೇಳ್ದಾ |
ದನುಜಪತಿ ಸತ್ತ್ವರದಿ ಹೈಹಯ |
ಜನಪತಿಯ ಸದೆಬಡಿವೆನೆನುತುಬ್ಬಣನುರೆ ಝಡಿದು |
ಅನಕ ಸೇನಾಧೀಶರಿಗೆ ಬರ |
ಲನುವರಕ್ಕಪ್ಪಣೆಯನಿತ್ತಾ |
ಮನುಮಥಾರಿಯ ನೆನೆದು ಗಮನೋದ್ಯೋಗಪರನಾದ || ೧ ||
ಕಂದ
ಸಾಸಿರ ಭುಜಗಳ ಪಡೆದವ | ನೀಶಂ ವೈಭವದೊಳೊಂದು ದಿವಸದೊಳಿತ್ತಂ ||
ತೋಷದಿ ಸಭೆಗಯ್ದುತೆ ಸಿಂ | ಹಾಸನದಲಿ ಕುಳ್ತು ಮಂತ್ರಿ ಕಾಲಜ್ಞಗೆಂದಂ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅವಧರಿಸು ಮಂತ್ರೀಶ ಪೂರ್ವದೊ | ಳೆವಗೆ ದತ್ತಾತ್ರೇಯಮುನಿನೃಪ ||
ನಿವಹವನು ಗೆಲಲಿತ್ತಿರುವ ಸಹ | ಸವನು ದಯದಿ || ೧ ||
ಭುಜ ಸಹಸ್ರವ ಕೊಟ್ಟುದಲ್ಲದೆ | ನಿಜದಿ ತನ್ನಾಳ್ವಿಕೆಯೊಳಿರುತಿಹ ||
ಪ್ರಜೆಗಳಿಗೆ ಬಂದೊದಗಲಾರದು | ರುಜೆಗಳಂತೆ || ೨ ||
ಆದಕಾರಣ ಸೈನ್ಯ ಸಹಿತಲಿ | ಮೇದಿನಿಪರನು ತಡೆದು ಯುದ್ಧದಿ ||
ಕಾದಿ ಕಪ್ಪವ ತರಲು ನೆರಹಿಸು | ನೀ ದಳವನು || ೩ ||
ಹೊಡೆಸು ರಣಭೇರಿಯನು ನೆರೆಯಲಿ | ತಡೆಯದೆಮ್ಮಯ ಬಲವೆನುತ ಭೋ ||
ರ್ಗುಡಿಸಿ ನೇಮವನಿತತ ಸಚಿವಗೆ | ಪೊಡವಿಪಾಲ || ೪ ||
ವಾರ್ಧಿಕ
ಧರಣಿಪತಿ ತಾನಿಂತು ನುಡಿದುದಕ ನಲವಾಂತು |
ಭರದಿ ಮದ್ದಾನೆಯಂ ಕಾಲಾಳ ಸೇನೆಯಂ |
ವರರಥಾರೋಹಕರ ಕುದುರೆಗಳ ವಾಹಕರ ನೆರಹಿದಂ ಮಂತ್ರಿ ಜವದಿ |
ಧುರದೊಳಗೆ ವೈರಿಗಳ ಜೈಸಿ ಬಹ ಭೇರಿಗಳ |
ಭರಿತ ಶಬ್ದವ ಕೇಳಿ ನೃಪತಿ ಹರುಷವ ತಾಳಿ |
ತ್ವರಿತದಲಿ ಶೃಂಗರಿಸಿ ಬಹುಶಸ್ತ್ರಗಳ ಧರಿಸಿ ಪೊರಟನದನೇನೆಂಬೆನು || ೧ ||
ರಾಗ ಕಾಂಭೋಜ ಮಟ್ಟೆತಾಳ
ಪೊರಟನಂದು ವಿಜಯಯಾತ್ರೆಗೆ | ಕೃತವೀರ್ಯನಣುಗ | ಬರುತ ವಿಕ್ರಮದಲಿ ಧಾತ್ರಿಗೆ ||
ಧೊರೆಗಳಾದ ಜೈನ ಗ್ರೈಟಿ | ತುರುಕ ತುಳುವ ಶೂರಸೇನ ||
ಕುರು ತ್ರಿಗರ್ತ ಹೂಣ ಯವನ | ಧರಣಿಪರನು ಗೆಲಿದ ಧುರದಿ || ಪೊರಟು || ೧ ||
ಅಂಗ ಕೋಸಲೇಂದ್ರ ಸಿಂಹಳ | ಮಹರಾಷ್ಟ್ರ ವರಕ | ಳಿಂಗ ಲಾಟ ವತ್ಸ ಕೇರಳ ||
ಕೊಂಗ ಮ್ಲೇಂಛ ಸೈಂಧವಾ ತೆ | ಲುಂಗ ಶಂಕರೋಢ್ರ ಬರ್ಮ ||
ವಂಗರಾಜ್ಯದರಸುಗಳನು | ಭಂಗಿಸಿದನು ಕಲಹಮುಖದಿ || ಪೊರಟು || ೨ ||
ಚೋಳ ಪಾಂಡ್ಯ ಮತ್ಸ್ಯ ಬರ್ಬರ | ಪಾಂಚಾಲ ಮಲೆ | ಯಾಳ ನಿಷದ ಮಗಧ ಘೂರ್ಜರ ||
ಗೌಳ ಮಧ್ಯ ಚೈನ ವರಬಂ | ಗಾಳ ಮುಖ್ಯ ನೃಪರ ಪುರಕೆ ||
ಧಾಳಿಯಿಟ್ಟು ಶೌರ್ಯದಿಂದ | ಕಾಳಗದಲಿ ಸೋಲಿಸಿದನು || ಪೊರಟ || ೩ ||
ಭಾಮಿನಿ
ಅರಸರನು ಗೋಳ್ಗುಟ್ಟಿಸುತ ಸಂ |
ಗರಪರಾಕ್ರಮಿ ಬರಲು ಮಿಕ್ಕಿನ |
ಧರೆಯಧಿಪರು ಸಹಸ್ರಭುಜದವನೀಶನನು ಕಂಡು |
ಶರಣು ಹೊಗುತಲಿ ಕಪ್ಪ ಕಾಣಿಕೆ |
ಸುರಿಯುತಿರೆ ಮನ್ನಿಸುತ ಮುಂದೈ ||
ತರುತ ನರ್ಮದೆತೀರದಲಿ ಪೊಯ್ಸಿದ ಗುಡಾರವನು || ೧ ||
ಕಂದ
ದೃಢಮನರಾಲಿಸಿರಾ ದಿನ |
ಜಡಕೇಳಿಯನಾಡಲೆಳಸಿ ಭೂಪತಿ ಪುರಕಂ ||
ತಡೆಯದೆ ಚಾರರ ಕಳುಹಿಸಿ |
ಮಡದಿಯರನು ಬೇಗ ಕರೆಸಿದನು ನದಿತಟಕಂ || ೧ ||
ವಾರ್ಧಿಕ
ಬರುತಿರಲು ಕಾಂತೆಯರ್ ಭ್ರಮರಾಲಕಾಂತೆಯರ್ |
ಕರಿಕಳಭ ಗಮನೆಯರ್ ಕುಂದೇಭರದನೆಯರ್ |
ಮಿರುಗುತಿಹ ಪಾಣಿಯರ್ ವಮ್ಮಾರು ವೇಣಿಯರ್ ತರತರದ ಪಲ್ಲಕಿಯೊಳು |
ತೆರಳುತಿಹ ರಭಸದಿಂ ನಿಂದಿರಲು ಹರುಷದಿಂ |
ಧರಣಿಪತಿ ಕಂಡಾಗ ನುಡಿದ ನಗುತಲಿ ಬೇಗ |
ತರುಣಿಯರು ಜನಕೇಳಿಗಿಳಿರೆಂಬ ನುಡಿ ಕೇಳಿ ಭರದೊಳನುವಾದರಾಗ || ೧ ||
ರಾಗ ರೇಗುಪ್ತಿ ಏಕತಾಳ
ಜಲಕೇಳಿಯಾಡಿದನಾಗ | ಬಲುಭುಜನರ್ಜುನ ಬೇಗ || ಜಲ ||ಪ||
ನದಿಯ ಪ್ರವಾಹದಿ | ಚದುರಲು ಕಾಣುತ್ತ ||
ಒದಗಿ ಪಿಡಿದು ನಿಜ | ಸುದತಿಯರೊಡನೆ || ಜಲ || ೧ ||
ಸಾಸಿರ ಭುಜದಿ ಸು | ವಾಸಿನಿಯರನು ತ ||
ಕ್ಕೈಸುತಲಾ ಧರ | ಣೀಶನು ಮುದದಿ || ಜಲ || ೨ ||
ತರುಣಿಯರಿಟ್ಟಿಹ | ಚರಣನೂಪುರದಾ ||
ಭರಣಗಳ್ ಝಣರೆನೆ | ಧರಣಿಪನೊಡನೆ || ಜಲ || ೩ ||
ವಾರ್ಧಿಕ
ಕಂಕಣದ ರವದಿಂದ ಕಂಕಣವ ಚದರುತಿಹ |
ಪಂಕಜಾಕ್ಷಿಯರೊಡನೆ ಭೂಪಾಲನಾಡಲ್ಕತ್ತ |
ಲಂಕಾಧಿನಾಥ ನಿಜಬಲವ ನೆರಹುತ ಚಂದ್ರ ಹಾಸಮಂ ಝಳಪಿಸುತಲಿ |
ಶಂಕೆಯಿಲ್ಲದ ರಕ್ಕಸರ ಸಮೂಹದೊಳು ಬಲು |
ಬಿಂಕದಿಂ ಪೊಂದೇರನಡರಿ ಮಾಹಿಷ್ಮತಿಗೆ |
ಶಂಕರರೋಪಾಸಕಂ ನಡೆತಂದು ಬಾಗಿಲವರೊಡನೆಂದನೀ ತೆರದೊಳು || ೧ ||
ರಾಗ ಕಾಂಭೋಜ ಝಂಪೆತಾಳ
ಸಂದೇಶಚರನೆ ಕೇಳರುಹು ನಿಮ್ಮೊಡೆಯಗಾಂ | ಬಂದಿಹುದ ಧುರಕೆ ಶೀಘ್ರದಲಿ ||
ಮಂದಿಮಾರ್ಬಲವನೊಡಗೊಂಡು ಬರಹೇಳೆನ | ಲ್ಕೆಂದನಾ ದೂತನೊಲವಿನಲಿ || ೧ ||
ಯಾತುಧಾನೇಂದ್ರ ಕೇಳಿಲ್ಲೆಮ್ಮೆ ನಗರದಲಿ | ಭೂತಳೇಶ್ವರನು ನಾರಿಯರ ||
ವ್ರಾತಸಹ ವನಕಯ್ದಿಹನು ಬರುವನರೆಘಳಿಗೆ | ನೀ ತಡೆವುದೆನಲೆಂದನಸುರ || ೨ ||
ಅನುಚರನೆ ಕೇಳು ನಿಮ್ಮರಸನಾವೆಡೆಗಯ್ದ | ನೆನುವುದನು ಪೇಳು ತನಗಿಂದು ||
ಘನ ಬೇಗದಿಂದ ನಾನಲ್ಲಿ ಗಯ್ದುವೆನೆನಲು | ದನುಜಗಿಂತೆಂದ ಚರನಂದು || ೩ ||
ಇಂದುವಿಂದೊಗೆದ ನರ್ಮದೆಯೆಂಬ ನದಿಗೆ ಸಖಿ | ವೃಂದ ಸಹ ಪೋಗಿಹನು ನೃಪನು ||
ಬಂದವನು ಮನೆಗೆ ನೀ ಪೋಪುದೇಕೆನೆ ಪೊರಟ | ನಂದು ತವಕದೊಳು ದಶಶಿರನು || ೪ ||
ರಾಗ ಮಾರವಿ ಏಕತಾಳ
ದನುಜನು ಬೇಗದಿ | ಧನದವಿಮಾನದಿ | ಘನರಭಸದಿ ಬರೆ ||
ದಿನಪ ಮಧ್ಯಾಹ್ನ | ಕ್ಕನುಸರಿಸಲು ಬಂ | ದನು ನರ್ಮದನದಿ ||
ವನದೊಳಗಿಳಿದೆಂ | ದನು ದೂತರಿಗೆ || ಗಾಢದಿಂದ || ೧ ||
ಚರ ಕೇಳೀವನ | ತರುಗಳೊಳಿರುತಿಹ | ಪರಿಪರಿ ಪುಷ್ಪವ ||
ಪುರಹರಪೂಜೆಗೆ | ತರುವುದು ಬೇಗೆಂ | ದರುಹುತಲಾ ನದಿ ||
ಶರದೊಳು ಸ್ನಾನವ | ವಿರಚಿಸುತಾಗ | ಭಕ್ತಿಯಿಂದ || ೨ ||
ಅಂದು ವಿಭೂತಿಯ | ನುಂ ಧರಿಸುತ ದಶ | ಕಂಧರನರ್ಚಿಸಿ ||
ಕಂದುಗೊರಳನನು | ಇಂದುಶೇಖರ ಶಿವ | ನೆಂದತಿ ಶ್ರದ್ಧೆಯೊ ||
ಳೊಂದಿಸಿ ಪೂಜಿಸು | ತಂದಿರುತಿರ್ದ | ಏನನೆಂಬೆ || ೩ ||
ಕಂದ
ಈ ಪರಿ ದನುಜನು ಭಕ್ತಿಯೊ | ಳಾ ಪಾರ್ವತಿನಾಥನರ್ಚಿಸುತ್ತಿರಲಾಗಂ ||
ಆಪಜವದನೆಯರಿದ ಕಂ | ಡೋಪನೊಳಿಂತೆಂದರೊಡನೆ ನಾಚುತ ಬೇಗಂ || ೧ ||
ರಾಗ ಸಾರಂಗ ಏಕತಾಳ
ನೀರ ಲಾಲಿಸಿ ಕೇಳು | ನೀರಿಲ್ಲವಲ್ಲ ||
ನೀರಿಲ್ಲದಾದರೆ | ನೀರಾಟಸಲ್ಲ || ನೀರ || ೧ ||
ತೋಚುತಲಿದೆ ಕುಚ | ನಾಚಿಕೆ ನೋಡು ||
ಹೇ ಚದುರನೆ ನೀನಾ | ಲೋಚನೆ ಮಾಡು ನೀರ || || ೨ ||
ಸೇನೆ ಬಂದಂತಿಹು | ದೀ ನದೀತಟದಿ ||
ನೀನಿದನಿದರ ನಿ | ಧಾನಿಸು ದಯದಿ || ನೀರ || ೩ ||
ವಾರ್ಧಿಕ
ನಾರಿಯರ ಹುಯ್ಯಲನು ಕೇಳುತ್ತಲವನಿಪಂ |
ಸಾರಸಾಕ್ಷಿಯರಿಂಗೆ ನಾಚದಿರೆನುತ್ತ ಸತಿ |
ವಾರದೊಡನಾಡುತಲಿ ಕರಸಹಸ್ರದಿ ನದಿಯ ಸಲಿಲವಂ ತಡೆಯಲಾಗ |
ಭೋರೆಂದು ನದಿಯುಕ್ಕಿ ಜಲವು ಮೇಲ್ಪರಿವುತ್ತ |
ತೀರದುಪವನದೊಳಿಹ ದಶಗಳನ ತೇಲಿಸಲು |
ಭೂರಿ ಕೋಪದೋಲಾರ್ಭಟಿಸುತಾಗ ಕರೆದೆಂದ ಚಾರಕರಿಗತಿ ರಭಸದಿ || ೧ ||
ಕಂದ
ದೂತರೆ ಜವದೊಳು ಪೋಗಿದ |
ನೀ ತಿಳಿರೆನಲಯ್ದಿ ಕಾರ್ತವೀರ್ಯನ ಬಲುಹಂ ||
ತಾ ತವಕದಿ ತಿಳಿವುತ ಬಂ |
ದಾತುರದಲಿ ದೈತ್ಯಗೊರೆದರೊಂದಿಸುತಲುಹಂ || ೧ ||
ರಾಗ ಸಾರಂಗ ಅಷ್ಟತಾಳ
ದನುಜೇಶ ಲಾಲಿಸಯ್ಯ | ನಾವೆಂಬುದ | ಮನದೊಳು ಗ್ರಹಿಸು ಜೀಯ ||
ಘನವಿಭವದೊಳರ್ಜು | ನನು ತನ್ನ ಸುದತಿಯ |
ರನು ಕೂಡಿ ನದಿಯಾಡ | ಲನಿತಾಯ್ತು ತಿಳಿದುಕೊ || ೧ ||
ಸಾಸಿರ ಭುಜಗಳನು | ನದಿಗೆ ತಾನ | ಡ್ಡೈಸುತ ಪಿಡಿದಿಹನು ||
ಏಸು ಬಲಾಢ್ಯನೊ | ನಿಂತಿರೆ ನದಿಯೊಳು |
ಸೂಸಿತು ನೀರೇರಿ | ದಡದ ಮೇಲಿ ಪರಿ || ೨ ||
ಆತನ ಜೈಸಲಿಕೆ | ತೀರದು ಭೂತ | ನಾಥಗೆ ಕೇಳ್ ಪರಾಕೆ |
ಸೋತಪಹಾಸ್ಯದಿ | ಮರಳಿ ಪೋಪುದರಿಂದ |
ನೀತಿಯೊಳಿಲ್ಲಿಂದ | ತಿರುಗುವುದತಿ ಚಂದ || ೩ ||
ಭಾಮಿನಿ
ಹೇಡಿಯಿವನನು ತನ್ನಿದಿರಿನಿಂ |
ದೂಡಿರೋಯೆನುತಾರ್ಭಟಿಸಿ ಖಳ |
ನೋಡೆ ಸಚಿವನ ಮೊಗವ ತತ್ಕ್ಷಣದೊಳಗೆ ಸೈನ್ಯವನು |
ಕೂಡಿಸುತ ಪೊರಮಡೆ ಪ್ರಹಸ್ತನು |
ರೂಢಿಯದುರವ ತೆರದಿ ಶರಗಳ |
ಜೋಡಿಸುತ ದಶಗಳನು ಕರೆದಿಂತೆಂದರ್ಜುನನ || ೧ ||
ರಾಗ ಪಂಚಾಗತಿ ಮಟ್ಟೆತಾಳ
ಫಡಫಢೆಲವೊ ಕಾರ್ತವೀರ್ಯಾ | ನೊಡನೆ ತಿಳಿದೆ ನಿನ್ನ ಶೌರ್ಯ
ಮಡದಿಯನ್ನು ಕೂಡಿಕೊಂಡು | ಜಡದೊಳಾಡ್ವುದು ||
ಪೊಡವಿಪಾಲಗುಚಿತವೇನೊ | ತಡೆಯದೀಗ ವಾರಿಯಿಂದ |
ತಡಿಗಡರ್ದು ಸಮರಕಾತು | ದೃಢದಿ ನಿಲ್ಲೆಲ || ೧ ||
ಎನುವ ಗರ್ಜನೆಯನು ಕೇಳಿ | ವನಿತೆನಿವಹ ನಾಚನಾಗ |
ಜನಪ ಕಾರ್ತವೀರ್ಯ ನೋಡಿ | ಕನಲುತಾಕ್ಷಣ ||
ಅನಕ ವಾರಿಕೇಳಿ ಬಿಟ್ಟು | ದನುಜನಿದಿರು ನಿಲ್ಲತೆಂದ |
ಘನ ಮದಾಂಧ ನಿನ್ನ ನಾಮ | ವೆನಗೆ ಪೇಳೆಲ || ೨ ||
ಕ್ರೂರನಾಗಿ ತೋರ್ಪೆ ನಿನ್ನ | ಊರದೆಲ್ಲಿ ತಂದೆ ತಾಯಿ |
ಯಾರು ಏತಕಿಲ್ಲಿ ಬಂದ | ಕಾರ್ಯವೇನೆಲ ||
ಧಾರಿಣಿಯಲಿ ತನಗೆ ಮಲೆವ | ವೀರರಿಲ್ಲ ನಿನ್ನ ಭರವು |
ಭೂರಿ ಚೋದ್ಯವೆನಲು ನುಡಿದ | ನಾರುಭಟಿಸುತ || ೩ ||
ಮನುಜರರಸ ಕೇಳು ನನ್ನ | ಜನಕ ವಿಶ್ರವಸುಮುನೀಂದ್ರ |
ಜನನಿ ಕೈಕಸಾಂಬೆ ನಗರ | ವಿನುತ ಲಂಕೆಯು ||
ಕನಕಗರ್ಭನನ್ನು ಭಜಿಸಿ | ಮನದಭೀಷ್ಟವನ್ನು ಪಡೆದು |
ಜನಪರನ್ನು ಧುರದಿ ಗೆಲುವ | ಮನದಿ ಬಂದಿಹೆ || ೪ ||
ಬಳಿಕ ಧಾರಿಣೀಶನೆಂದ | ನೆಲವೊ ಮುನಿಯ ತರಳ ನೆನಿಸು |
ತಿಳಿಯೆ ಜನಕುಪದ್ರ ಗೆಯ್ವ | ಕೆಲಸವೇನೆಲ ||
ತಳುವದೀಗ ಧುರದಿ ನಿನ್ನ | ತಲೆಯ ಹತ್ತ ಕುಟ್ಟಿ ಭೂತ |
ಬಳಗಕೀವೆನೆನುತ ಬಾಣ | ಮಳೆಯ ಕರೆದನು || ೫ ||
ಭಾಮಿನಿ
ಭೂಪನೆಚ್ಚಂಬುಗಳ ಕಡಿವುತ |
ಕೋಪದಿಂದ ದಶಾನನನು ದಶ |
ಚಾಪವನು ಝೇಗೆಯ್ದು ತನ್ನಯ ಬಲವನೀಕ್ಷಿಸಲು |
ತಾಪಸೇಶ್ವರ ಕೇಳು ಸಪ್ತ |
ದ್ವೀಪಪಾಲನ ಮೇಲೆ ಕವಿದುದು |
ಟೋಪದಲಿ ರಾವಣನ ಮಾರ್ಬಲವೆಂಟು ದಿಕ್ಕಿನಲಿ || ೧ ||
ವಾರ್ಧಿಕ
ಧರಣಿಪಂ ಪರಿಕಿಸುತಲಾ ದೈತ್ಯಸುಭಟರಂ |
ತ್ವರಿತದಿಂದೈನೂರು ಚಾಪಮಂ ಝೇಗೆಯ್ದು |
ಕರಗಳೈನೂರರಲಿ ಬಾಣಪ್ರಯೋಗಮಂ ವಿರಚಿಸಲ್ ಕಲ್ಪಾಂತ್ಯದಿ ||
ಸುರಿವ ಮಳೆಯೋ ಮೇಣದೇನೆನಲು ದನುಜ ಬಲ |
ಧರೆಗುರುಳಲಾ ಪ್ರಹಸ್ತಾದಿ ಮಂತ್ರಿಗಳೆಲ್ಲ |
ಥರಥರಸಿ ಬಸವಳಿದರೇನೆಂಬೆನರ್ಜುನನ ಸಂಗರದ ಕೌತುಕವನು || ೧ ||
ಕಂದ
ಸೇನೆಯು ಮಡಿದುದ ಕಂಡಾ |
ದಾನವರಧಿನಾಥನೊಡನೆ ಭೋರ್ಗುಡಿಸುತ್ತಂ ||
ಮೀನಾಂಕಾರಿಯ ತೆರದೊಳು |
ಮಾನವಪತಿಗಾಗ ನುಡಿದ ಭೀಕರಿಸುತ್ತಂ || ೧ ||
ರಾಗ ಭೈರವಿ ಅಷ್ಟತಾಳ
ಎಲವೊ ಭೂಪಾಲ ಕೇಳು | ನಮ್ಮಯ ದೈತ್ಯ | ಬಲವ ನೀ ಸಮರದೊಳು ||
ಗೆಲಿದೆನೆನುತ ಹಿಗ್ಗಬೇಡ ಪರಿಕಿಸೆನ್ನ | ಬಲುಹ ಸಂಗ್ರಾಮದೊಳು || ೧ ||
ವರವಿರೋಚನಪುತ್ರನು | ಸೆರೆಯೊಳಿಡೆ | ತರಳಾಕ್ಷಿಯರು ನಿನ್ನನು ||
ಭರದಿಂದಲೊಂದೊಂದು ತುತ್ತಿಗೆ ಕುಣಿಸಿದ | ಪರಿಯ ನಾನರಿತಿಹೆನು || ೨ ||
ಅವನಿಪರೊಳಗೆ ನೀನು | ಕೆಟ್ಟವರೊಳು | ದ್ಭವಿಸಿದವನು ನಿನ್ನನ್ನು ||
ಭುವನೇಶರರಿಯದೆ ಮನ್ನಿಸುವರು ರಾಜ | ನಿವಹ ಬಾಹಿರಗೆಂದನು || ೩ ||
ಭೂಲೋಕಾಮರಕುಲದಿ | ಪುಟ್ಟಿದೆ ನೀನು | ಶೀಲನಹುದು ಜಗದಿ ||
ನಾಲಿಗೆಯುಂಟೆಂದು ಗಳಹುವುದೇತಕೊ | ಬಾಲರಂತಬ್ಬರದಿ || ೪ ||
ಗಾಡಿಗಾತಿಯರ ಕೂಡಿ | ಮಧ್ಯಾಹ್ನದೊ | ಳಾಡುವೆ ನೀರ ಖೋಡಿ ||
ರೂಢಿಪಾಲರೊಳು ನೀ ಪ್ರತಿಭಟನಲ್ಲಿತ್ತ | ನೋಡದೆ ತೊಲಗು ಹೇಡಿ || ೫ ||
ವರವೇದಾವತಿಯ ನೀನು | ಕೈದುಡುಕುತ್ತ | ಧರಿಸಿದೆ ಶಾಪವನು ||
ಧರೆಯಲ್ಲಿ ಬಹುಮಾನಯುತನೆಂಬುದನು ಸರ್ವ | ರರಿತಿರುವರು ನಿನ್ನನ್ನು || ೬ ||
ಭೂಮಿಶರೆಲ್ಲರನು | ಗಲಿದು ಸಾರ್ವ | ಭೌಮನೆಂದೆನಿಸಿ ತಾನು ||
ಈ ಮಹಿಯೊಳು ಶ್ರೇಷ್ಠನೆಂದೆಂಬ ಗರ್ವವ | ಯಾಮಾರ್ಧಕಿಳಿಸುವೆನು || ೭ ||
ಈಶನಿರುವ ಗಿರಿಯ | ನೆಗಹಿ ತ್ರಿದಿ | ವೇಶರತ್ಯುಬ್ಬಟೆಯ ||
ನಾಶಗೊಳಿಸಿದಂತ ಕೊಬ್ಬ ಮುರಿವೆ ನೋಡೆ | ನ್ನೀ ಶೌರ್ಯಗಳ ಪರಿಯ || ೮ ||
ಬರಿಯ ಮಾತಾಡಿ ನೀನು | ಕಾಲವ ಕಳೆ | ದರೆ ವೀರರೆಂಬರೇನು ||
ಕರದೊಳಗಾಯುಧವಿರೆ ತೋರಿಸಸ್ತ್ರದ | ಬಿರುಸ ನೆನ್ನೊಡನೆಂದನು || ೯ ||
ದುರುಳ ದಾನವನೆ ಕೇಳು | ತೋರ್ಪೆನು ಶಸ್ತ್ರ | ದಿರವನು ನಿಮಿಷ ತಾಳು ||
ಕರೆಸಿಕೋ ಬೇಕಾದ ಭಟರನೆಂದೆಚ್ಚನು | ಶರಗಳ ತವಕದೊಳು || ೧೦ ||
ಭಾಮಿನಿ
ಎಚ್ಚ ಶರಗಳು ಬಂದು ಮೈಯಲಿ |
ಚುಚ್ಚಲಾ ಖಳ ನೋಡುತೌಡನು |
ಕಚ್ಚಿ ಕೋಪದೊಳೆಸೆದ ಶರವದು ಭೂಪತಿಗೆ ತಗಲೆ |
ಬೆಚ್ಚಲುಭಯ ಭಟರ್ಗೆ ಟೋಪವು |
ಹೆಚ್ಚುತಿರೆ ದಶಕಂಠ ಹೂಡಿದ |
ಕಿಚ್ಚಿನಂತವು ಮುಸುಕಲುರಿ ದಶದೆಸೆಯನಾವರಿಸೆ || ೧ ||
ರಾಗ ಭೈರವಿ ಏಕತಾಳ
ಭೋರಿಡುತುರಿ ಬರೆ ಬೇಗ | ನೃಪ | ಶೌರ್ಯದಿ ಪೇಳಿದನಾಗ |
ವಾರುಣಬಾಣದಿ ನಿನ್ನ | ಶರ | ತೂರಿಸಿದೆನು ಕೇಳ್ ಮುನ್ನ || ೧ ||
ಉರಗಾಸ್ತ್ರವ ನೋಡಿದಕೊ | ಈ | ಸರಳನು ನೀ ಸೈರಿಸಿಕೊ |
ತ್ವರಿತದಿ ಕೊಳ್ಳೆನುತೆಸೆದ | ದಶ | ಶಿರನದ ಕಾಣುತಲೊರೆದ || ೨ ||
ಗರುಡಕಳಂಬದಿ ನಿನ್ನ | ಶರ | ತರಿದಿಹೆ ಕೇಳಲೊ ತನ್ನ ||
ಪರುವತಶರ ಕೊಳ್ಳೆಂದು | ಗಿರಿ | ಗರಿಯನು ಬಿಡಲವನಂದು || ೩ ||
ಬಿದುರಾಸ್ತ್ರದೊಳದ ತರಿದು | ನೃಪ | ನೊದಗಿನೊಳುರೆ ಬೊಬ್ಬಿರುದು ||
ಚದುರನೆ ಮುದಿರಾಸ್ತ್ರವನು | ನೀ | ನಿದ ತಾಲೆನುತೆಸಲದನು || ೪ ||
ವಾತಕಳಂಬದೊಳಾನು | ಘನ | ವ್ರಾತದ ನಿನ್ನಸ್ತ್ರವನು ||
ಘಾತಿಸಿ ಬ್ರಹ್ಮಾಸ್ತ್ರವನು | ಫಡ | ನಾ ತೆಗೆದೆಸೆದಿಹೆನಿದನು || ೫ ||
ತಡಕೊಳ್ಳೆನಲದ ನೋಡಿ | ನೃಪ | ನೊಡನೆ ಬ್ರಹ್ಮಾಸ್ತ್ರವ ಪೂಡಿ ||
ಪೊಡವಿಪನೆಂದ ನಿರರ್ಥ | ತ | ನ್ನೊಡನೆ ಕಲಹವಿದು ಧೂರ್ತ || ೬ ||
ವಾರ್ಧಿಕ
ಹರ ಕೊಟ್ಟ ಶಕ್ತಿಯಂ ದಾನವಂ ತಿರುಹಿಡಲ್ |
ಧರಣಿಪಂ ಬಹು ಶರದೊಳೆಸಲದಂ ಕೈಗೊಳ್ಳ ||
ದುರವ ಕೀಲಸಲರ್ಧನಿಮಿಷ ಮೈ ಮರೆದಿರ್ದು ಘಳಿಲನೆಚ್ಚತ್ತು ಬಳಿಕ |
ಉರಿಯೊಗುವ ಕಂಗಳಿಂದಾಗ ದತ್ತಾತ್ರೇಯ ||
ಕರುಣಿಸಿದ ದಿವ್ಯಾಸ್ತ್ರಮಂ ದೈತ್ಯನುರಕಿಡಲ್ |
ಧರೆಗುರುಳಿದಂ ದನುಜನುರೆ ಕಷ್ಟದೊಳ್ ಮಗುಳೆ ಚೇತರಿಸಿಕೊಂಡೆಂದನು || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಹಿಪ ಕೇಳ್ ಸಂಗರದಿ ನೀನತಿ | ಸಹಸಿಯಹುದೀರೇಳು ಲೋಕದೊ ||
ಳಹಿವಿಭೂಷಣನಾಣೆ ಮೆಚ್ಚಿದೆ | ನಹಹ ನಿನಗೆ || ೧ ||
ಪರಿಕಿಸಾದರೆನುತ್ತ ರಾವಣ | ಧರಣಿಪಾಲನ ಕರದ ಚಾಪವ ||
ತರಿದು ಕೆಡಹಿದನಿಳೆಗೆ ತಾನತಿ | ತ್ವರಿತದಿಂದ || ೨ ||
ಫಡ ಎನುತ ಪೊಸ ಧನುವನವನಿಪ | ತುಡುಕಿ ದೈತ್ಯನ ಹತ್ತು ಕರದೊಳು ||
ಪಿಡಿದ ಧನುವನು ಕಡಿಯಲಾಕ್ಷಣ | ಘುಡುಘುಡಿಸುತ || ೩ ||
ಒಲಿದು ಕುಂಭಿನಿ ಕೊಟ್ಟ ಶೂಲವ | ನುಲಿವುತೆತ್ತಿ ನರೇಂದ್ರಗೆಂದನು ||
ಗೆಲಿದೆನೆಂದನುತುಬ್ಬಬೇಡರೆ | ಘಳಿಗೆಯೊಳಗೆ || ೪ ||
ಕಾಲ ಪುರವನು ತೋರ್ಪೆನೆತ್ತಿದ | ಶೂಲವನು ನೋಡಿದರೊಳಗೆ ನೀ ||
ಕಾಲ ಗಾಣದೆ ಬದುಕಿದರೆ ಭೂ | ಪಾಲರೊಳಗೆ || ೫ ||
ಘನಪರಾಕ್ರಮಿ ನೀನೆನುತಲಿಡೆ | ಜನಪನತ್ರಿಜನಿತ್ತ ಶಸ್ತ್ರದಿ ||
ಕನಲಿ ತವಕದಿ ಕಡಿಯೆ ಸುರತತಿ | ಮನದೊಳುಲಿಯೆ || ೬ ||
ಬಾಹುಸಾವಿರಧರ ಧನುವಿನಲಿ | ಮೋಹನಾಸ್ತ್ರವ ಪೂಡಿ ಪೇಳಿದ ||
ನಾಹವಪ್ರಿಯ ಕೇಳು ಶರವಿದ | ಸಾಹಸದೊಳು || ೭ ||
ಗೆಲಿದರಗ್ಗಳ ನೀನೆನುತಲಿಡೆ | ಮಲಗಿದನು ರಥದೊಳಗೆ ದಾನವ ||
ಕುಲ ಶಿರೋಮಣಿ ನಿದ್ರೆಯೊಳು ಖಳ | ಬಲ ಬೆದರಲು || ೮ ||
ವಾರ್ಧಿಕ
ಧೊರೆ ರಥದಿ ಮಲಗೆ ಕಂಡಸುರಬಲ ಖಾತಿಯಿಂ |
ಭರದಿ ಭೂಪನ ಮುಸುಕಲವದಿರಂ ತರಿದು ಖಳ |
ನಿರುವ ಠಾವಿಗೆ ಬಂದು ಪಾಶದಿಂ ದಶಶಿರನ ಕರಗಳಿಪ್ಪತ್ತ ಬಿಗಿದು |
ಮರಳಿ ಕವಿವಸುರರಂ ಬರಿಗೆಯ್ದು ದಾನವನ |
ಕರಿರಥಹಯಾಳಿಗಳ ಸೆರೆವಿಡಿದು ತನ್ನೆಡದ |
ಚರಣದಿಂ ರಕ್ಕಸನನೊದೆದು ಜಡಿದಾರ್ಭಟಿಸಿ ಮೂದಲಿಸುತಿಂತೆಂದನು || ೧ ||
Leave A Comment