ಕಾರ್ತವೀರ್ಯಾರ್ಜುನ ಕಾಳಗ

ಶಾರ್ದೂಲವಿಕ್ರೀಡಿತ ವೃತ್ತಂ

ಶ್ರೀಪಾಲಂ ಸುರವೃಂದವಂದಿತಪದಂ ಲೋಕಾಸ್ಪದಂ ಕೇಶವಂ
ಭೂಪಾಲೌಘವಿನಾಶಪುಣ್ಯಚರಿತಂ ಸರ್ವಾತ್ಮಕಂ ಭಾರ್ಗವಮ್ |
ಪಾಪಾಂಭೋನಿಧಿಕುಂಭಜಂ ಶುಭಕರಂ ವಿಪ್ರಪ್ರಿಯಂ ಶಾಶ್ವತಂ
ಗೋಪಾಲಂ ಜಮದಗ್ನಿ ಮೌನಿತನುಜಂ ಶ್ರೀರೇಣುಕೇಯಂ ಭಜೇ ||

ರಾಗ ನಾಟಿ ಝಂಪೆತಾಳ

ಜಯ ಭವಾನೀಪುತ್ರ ದಿವಿಜಗಣನುತಿಪಾತ್ರ |
ಜಯ ಮೂಷಿಕವರೂಥ ಸ್ವಾಮಿ ಗಣನಾಥ ||
ಜಯ ಜಯತು ಜಯತು   || ಪ ||

ಗಿರಿಜೆ ಮೈಮಲದಿಂದ ಮಾಡುತದ ಪ್ರಾಣಿಸಲು |
ಹರನು ಕೋಪದಿ ಕಡಿಯೆ ಮರುಗುತಿರಲುಮೆಯು ||
ಕರಿಶಿರವನಿಟ್ಟೆಬ್ಬಿಸುತ ವರವ ಕೊಡಲು ಶಿವ |
ತರಳನೆನಿಸಿದ ಗಣಪ ಕರುಣಿಸೈಮತಿಯ || ಜಯ ಜಯತು ಜಯತು    || ೧ ||

ಭಾಮಿನಿ

ಪುರಮಥನ ಸರ್ವೇಶ ಶಂಕರ |
ಹರ ತ್ರಿಯಂಬಕ ಭಕ್ತವತ್ಸಲ ||
ಗರುಡವಾಹಮಿತ್ರ ಗೌರೀನಾಥ ದೇವೇಶ |
ಪರಮಕರುಣಾಸಿಂಧು ನಿನ್ನಯ ||
ಚರಣವನು ನಂಬಿದೆನು ಪ್ರೇಮದಿ |
ಪೊರೆವುದೆನ್ನನು ಕಾಮ ಮರ್ದನ ದೇವ ಪರಮೇಶ     || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸ್ಕಂದಪರ್ವತದೊಳಗೆ ಪರಮಾ | ನಂದದಿಂ ಹರತನುಜ ಮುನಿಜನ ||
ವೃಂದದೊಡನೆಸೆದಿರಲು ಋಷಿಗಳು | ಸ್ಕಂದಗೆರಗಿ    || ೧ ||

ಒಂದು ದಿನ ಕೈಮುಗಿದು ಕೇಳಿದ | ರಿಂದಿರಾಧವ ಭೃಗುಜನುದರದೊ ||
ಳಂದು ಜನಿಸುತಪೆತ್ತ ತಾಯಿಯ | ಕೊಂದನೇಕೆ       || ೨ ||

ಹೆತ್ತವಳನೆಂತೆಬ್ಬಿಸಿದನಿವ | ಪೃಥ್ವಿಪರೊಳತಿ ಶ್ರೇಷ್ಠನಾಗಿಹ ||
ಕಾರ್ತವೀರ್ಯನ ಗೆಲಿದನೇತಕೆ | ಮತ್ತೆ ಧುರದಿ        || ೩ ||

ತಂದೆ ಜಮದಗ್ನಿಯನು ಹೇಹಯ | ರಂದು ತರಿದರೆನುತ್ತಲಿಪ್ಪ ||
ತ್ತೊಂದು ಬಾರಿಯು ಕ್ಷತ್ರಿಕುಲಜರ | ಕೊಂದನೆಂತು    || ೪ ||

ಕಾರ್ತವೀರ್ಯಾರ್ಜುನನು ಗೆಯ್ದಿಹ | ಧೂರ್ತಕೃತ್ಯವದೇನು ಕೊಲುವಡೆ ||
ಸ್ವಾರ್ಥದಿಂದುಸಿರೆನಲೊರೆದ ಗುಹ | ನರ್ತಿಯಿಂದ     || ೫ ||

ವಾರ್ಧಿಕ

ಹರಸುತನು ಶೌನಕರಿಗೊರೆಯಲಾರಂಭಮಂ |
ವಿರಚಸಿದ ಮುನಿಗಳಿರ ಕೇಳಿ ವಿಧಿಮಾನಸದಿ |
ತರಳನುದುಸಿದನತ್ರಿಯೆಂಬವಂ ಬಳಿಕವನ ನೇತ್ರದಿಂದೊಗೆದನಿಂದು |
ಗುರುಪತ್ನಿಯಂ ಬೆರೆಯೆ ಜನಿಸಿದಂ ಬುಧನವಗೆ |
ತರಳನಾದಂ ಪುರೂವರನು ಸುರತರುಣಿಯಂ |
ನೆರೆಯಲುದಿಸಿದನವಂಗಾಯುಃ ಕುವರನವಗೆ ಪುಟ್ಟಿದಂ ನಹುಷನೃಪನು  || ೧ ||

ಜನಿಸಿದನವಂಗಾ ಯಯಾತಿಯೆಂಬಾತ್ಮಜಂ |
ದನುಜಗುರುಪುತ್ರಿಯಿಂದುದಿಸಿದಂ ಯದುವೆಂಬ |
ತನುಜನಾ ಯದುನೃಪಗುದಿಸಿದಂ ಹೇಹಯಂ ವೀರನೆಂಬಾತನವನ |
ತನಯನಾದಂ ಕುಕ್ಷಿಯವನ ಮಗನೆನಿಸಿದಂ |
ಮುನಿಪ ಕೇಳ್ ಭದ್ರಸೇನಕನಾತನಾತ್ಮಜಂ |
ಸನಕನೆಂಬವನಾಗಲವನ ಜಠರಾಲಯದಿ ಜನಿಸಿದಂ ಕೃತವೀರ್ಯನು    || ೨ ||

ಭಾಮಿನಿ

ಕ್ಷಿತಿಪ ಕೃತವೀರ್ಯಾಖ್ಯ ಮಾಹಿ |
ಷ್ಮತಿಪುರಾಧಿಪನೆನಿಸಿ ರಾಜ್ಯವ ||
ನತಿಶಯದಿ ಪಾಲಿಸುತಲಿರಲೊಂದಿನದೊಳಾ ನೃಪನ ||
ಸತಿಯು ಸಂಧ್ಯಾಕಾಲದೊಳು ಭೂ |
ಪತಿಯ ಪೊರೆಗಯ್ತಂದು ತನ್ನೊಳು |
ಸುತನ ಕಾಮಿಸಿ ನುಡಿದಳರಸಗೆ ನಿಜಮನೋಗತವ   || ೧ ||

ರಾಗ ಕೇದಾರಗೌಳ ಅಷ್ಟತಾಳ

ಕಾಂತ ನೀ ಲಾಲಿಸಿ ಕೇಳೆನ್ನ ಮನದೊಳು | ಚಿಂತೆಯೊಂದಿಹುದದನು ||
ಸಂತೋಷದಿಂದುಸಿರೆನಲರುಹುವೆನೆಂಬೆ | ಕಾಂತೆಯೊಳಿಂತೆಂದನು      || ೧ ||

ತರುಣಿ ನಿನ್ನಯ ಚಿಂತೆಯೇನದನೆನ್ನೊಡ | ನೊರೆ ಶೀಘ್ರದಿಂದನು ||
ಪರಿಹರಿಸುವ ಸತ್ತ್ವವೆನಗಿರಲಾ ಪರಿ | ವಿರಚಿಪೆನೆನಲೆಂದಳು    || ೨ ||

ಬಾಲಕರಿಲ್ಲೆಂದು ನಿಂದಿಸುತಿಹರೆನ್ನ | ಬಾಲೆಯರೀ ಜಗದಿ ||
ಭೂಲೋಲ ಕೇಳ್ ಸುತರಿಲ್ಲದಾತಗೆ ತ್ರಿದ | ಶಾಲಯ ದೊರೆವುದೇನೈ    || ೩ ||

ಕಾಮಿನಿರನ್ನೆ ನೀ ಸತತ ಮನಸಿನೊಳು | ಕಾಮಜನಕನ ನೀನು ||
ನೇಮದಿ ಭಜಿಸುತ್ತಲಿರು ಸುತನಹನು ಸು | ತ್ರಾಮಸನ್ನಿಭನೆಂದನು       || ೪ ||

ರಮಣ ಕೇಳಾತ್ಮಜನಹನು ಮುಂದೆಂದೆಂಬ | ಭ್ರಮೆಗೊಳಿಸುದೇತಕೆ ||
ಸುಮಶರ ಮನವ ಸೂರೆಯ ಕೊಂಡ ನೆರೆಯೆನ್ನ | ಮಮತೆಯಿಂದೀ ಕ್ಷಣಕ         || ೫ ||

ರಾಗ ಮಧುಮಾಧವಿ ಏಕತಾಳ

ತರುಣಿ ಕೇಳ್ ನಿನ್ನಯ ಮನದಿಂಗಿತವನು | ಅರಿತೆನು ಸೈರಿಸಿನ್ನರೆ ತಾಸು ನೀನು ||
ಶರಜಬಾಂಧವನಸ್ತಮಯವಾಗುವಾಗ | ದುರುಳ ದೈತ್ಯರು ಚರಿಸುವ ಕಾಲವೀಗ  || ೧ ||

ಎನಲೆಂದಳೆಲೆ ಕಾಂತ ಹಸಿದ ವೇಳೆಯಲಿ | ಮನುಜನಿಗನ್ನ ದೊರಕದೆ ಕಡೆಯಲಿ ||
ಘನವಾದ ಮೃಷ್ಟಾನ್ನ ದೊರೆದರೇನ್ ಫಲವು | ತನುವ ಭೇದಿಪುದೀಗ ಮನ್ಮಥಶರವು        || ೨ ||

ಅರಸಿ ಕೇಳ್ ನಾವೀಗನೊಡಗೂಡೆ ಮಗನು | ಧರಣಿಯೊಳಧಿಕ ದುರುಳ ಜನಿಸುವನು ||
ಅರೆಕ್ಷಣ ತಡೆ ನಿನ್ನ ಮನಸಿನಭೀಷ್ಟ | ದೊರೆವುದು ನಿನಗೆ ಜನಿಸುವನು ಶ್ರೇಷ್ಠ      || ೩ ||

ಕಂದ

ಪತಿಯಿಂತೆನಲಾ ನುಡಿಯಂ | ಸತಿ ಲಾಲಿಸಿ ಕಾಮಶರದೊಳತಿ ಬಳುಕುತ್ತಂ ||
ಕೃತವೀರ್ಯನನಾಲಂಗಿಸು | ತತಿಬೇಗದಿ ಬಂದು ಪಿಡಿದಳಪ್ಪುತಮತ್ತಂ   || ೧ ||

ವಾರ್ಧಿಕ

ಸುರಕಲ್ಪಭೂಜವನ್ನಾಶ್ರಯ್ಸಿ ಹಬ್ಬಿರ್ದ |
ವರಕನಕಲತೆಯೊ ಮೇಣ್ ಘನಚಂದನದ್ರಮದ |

ಪರಿಮಳಕೆ ಮರುಳಾಗಿ ಸುತ್ತಿಕೊಂಡಿರ್ದಹಿಯೊ ಧರೆಯ ಯೋಗೀಶ್ವರರನು |
ನೆರೆ ಬಂಧಿಸುವ ಸ್ಮರನ ಪಾಶವೋ ನೃಪವರ್ಯ |

ನುರವ ಬಿಗಿದಪ್ಪಿರ್ದ ರಾಕಾವತಿಯ ಭುಜವೊ |
ಒರೆಯಲರಿದೆನಲೆಸೆದವಂಗನೆಯ ನಳಿದೋಳ್ಗಳೇನೆಂಬೆನಾಶ್ಚರ್ಯವ    || ೧ ||

ಭಾಮಿನಿ

ಇಂತು ತನ್ನನು ತಳ್ಕಿಸಿದ ನಿಜ |
ಕಾಂತೆಯನು ಸಂತವಿಸಲಾರದೆ |
ಕಂತುಪಿತನೇ ಗತಿಯೆನುತ ಕೂಡಿದನು ವಲ್ಲಭೆಯ |
ನಿಂತುದಬಲೆಗೆ ಗರ್ಭನವಮಾ |
ಸಾಂತರದಿ ಜನಿಸಿದನು ಪೃಥ್ವೀ |
ಕಾಂತನಿಗೆ ಭುಜಹೀನ ಮಗನೇನೆಂಬೆ ವಿಸ್ಮಯವ      || ೧ ||

ರಾಗ ಸಾಂಗತ್ಯ ರೂಪಕತಾಳ

ಕರವಿಲ್ಲದಿಹ ಪುತ್ರನನು ಕಂಡು ಸರ್ವರು | ಮರುಗುತ್ತ ತಮ್ಮಯ ಮನದಿ ||
ಧರಣಿಪಗರುಹಲಯ್ತಂದು ಭೂಪತಿ ತನ್ನ | ತರುಣಿಗಿಂತೆಂದ ಪೂರ್ವದಲಿ || ೧ ||

ಪೇಳಿದರೆನ್ನಯ ಮಾತನಂದಿನಲಿ ನೀ | ಕೇಳದೆ ಕೆಡಿಸಿದೆ ಮಗನ ||
ತೋಳಿಲ್ಲದವ ಪುಟ್ಟಿ ಫಲವಿಲ್ಲದಾಯ್ತೆನೆ | ಹೇಳಿದಳರಸನಿಗಬಲೆ || ೨ ||

ಹರಣದೊಲ್ಲಭ ಕೇಳಾದರೆ ನಮ್ಮ ವಂಶಕ್ಕೆ | ಗುರುವಾಗಿರುವನತ್ರಿಸುತನು ||
ಕರುಣಾಳುವಿನ ಬಳಿಗಯ್ದಿದರೀತನು | ಕರವ ನಂದನನಿಗೆ ಮುನಿಯು     || ೩ ||

ಕರುಣಿಸು ನೇಮವ ಪೋಪೆನೆಂದರೆ ಭೂಪ | ತೆರಳೆಂದಾಜ್ಞೆಯ ಕೊಡಲು ||
ತರಳನನನಡಗೊಂಡು ಬಂದಳಾಕ್ಷಣ ಮುನಿ | ವರನ ಸನ್ನಿಧಿಗೆ ಹರ್ಷದಲಿ         || ೪ ||

ಭಾಮಿನಿ

ತರುಣಿ ತಾನೀ ತೆರದಿ ಸುತಸಹ |
ಭರದಿ ದತ್ತಾತ್ರೇಯ ಮುನಿಪನ |
ಸರಿಸಕಯ್ದುತ್ತಲಿ ಸಚೇಲಸ್ನಾನವನು ಗೆಯ್ದು |
ಹರುಷದಿಂ ಫಲ ಪತ್ರ ಸುಮಗಳ |
ಚರಣಕರ್ಪಿಸುತೊಡನೆ ಷೋಡಶ |
ತರದ ಪೂಜೆಯನೆಸಗುತಾರತಿ ಬೆಳಗಿದಳು ಮುನಿಗೆ  || ೧ ||

ರಾಗ ಸುರುಟಿ ಆದಿತಾಳ

ಆರತಿ ಬೆಳಗಿದಳು | ಮುನಿಪಗೆ | ನಾರಿಯು ಭಕ್ತಿಯೊಳು || ಆರತಿ         || ಪ||

ಚಿನ್ನದ ಬಟ್ಟಲಲಿ | ತುಂಬುತ | ರನ್ನಫಲಂಗಳಲಿ ||
ಎಣ್ಣೆ ಕರ್ಪೂರದಲಿ | ಗುಣಸಂ | ಪನ್ನಗೆ ಹರುಷದಲಿ || ಆರತಿ    || ೧ ||

ಮೂರು ಶಿರಗಳಿಹಗೆ | ತಿಳಿಯಲು | ಮೂರು ಜಗಕೆ ಹಿತಗೆ ||
ಮೂರು ಗುಣದ ಪತಿಗೆ | ಜನಿಸಿದ | ಮೂರಾಧಿಕಾರನಿಗೆ || ಆರತಿ         || ೨ ||

ಅತ್ರಿಯ ಕುವರನಿಗೆ | ವರಲೋ | ಕತ್ರಯವಂದಿತಗೆ ||
ಧಾತ್ರಿಯೊಳಧಿಕನಿಗೆ | ಶ್ರೀದ | ತ್ತಾತ್ರೆಯ ಋಷಿವರಗೆ || ಆರತಿ  || ೩ ||

ಭಾಮಿನಿ

ದಿನದಿನದಿ ಸೇವೆಯನು ವಿರಚಿಪ |
ವನಿತೆಗೊಂದಿವಸದೊಳು ಯತಿಕುಲ |
ವನಜಭಾಸ್ಕರನೆಂದ ನಿನ್ನಯ ಮನದ ಬಯಕೆಯನು |
ವಿನಯದಿಂದೊರೆ ಕೊಡುವೆನೆನಲಾ |
ತನುಜನಿಗೆ ಬಾಹುಗಳನೀವುತ |
ಘನತರೈಶ್ವರ್ಯವನು ಕೃಪೆಮಾಡೆಂದಳಂಬುಜಾಕ್ಷಿ    || ೧ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ವನಿತೆಯಾಡಿದ ಮಾತ ಮುನಿ ಕೇಳಿ | ನೃಪ | ತನುಜಗೆಂದನು ತೋಷನು ತಾಳಿ ||
ನಿನಗೆ ಸಾವಿರ ಭುಜವಾಗಲಿ | ಸರ್ವ | ಜನಪರು ನಿನಗಂಜಿ ನಡೆಯಲಿ   || ೧ ||

ಸಿರವಂತನಾಗಿ ನೀ ಧರೆಯನು | ಬಹು | ವರುಷ ಪಾಲಿಸುತಿರು ನಿನ್ನನು ||
ಸ್ಮರಿಸಿದ ಜನರಿಗೆ ಭಯಗಳು | ತೋರ | ದಿರಲೀಸು ಮತ್ತೆನ್ನ ಕೃಪೆಯೊಳು         || ೨ ||

ಎನಲೆಂದನೆಲೆ ಮುನಿಪತಿ ಕೇಳು | ಎನ್ನ | ಮನದೊಳಗಿರುವುದ ಕರಣಾಳು ||
ಅನಿಮಿಷ ನರ ನಾಗಲೋಕದಿ | ಧೊರೆ | ತನವನು ಕರುಣಿಸು ಬೇಗದಿ    || ೩ ||

ಚಕ್ರವರ್ತಿತ್ವದಲಿಳೆಯನು | ಘನ | ವಿಕ್ರಮದಿಂದಾಳು ಮೇಣ್ ನೀನು ||
ಶಕ್ರನಾಗೇಂದ್ರಾದ್ಯರಧಟನು | ಮುರಿ | ದಾಕ್ರಮಿಸುತ ಸರ್ವ ಧರೆಯನು  || ೪ ||

ಹರಗೆ ಮುಂತಾಗಿ ಸಂಗರದೊಳು | ನಿನ್ನ | ತರಿಯಲರಿದು ಪರಬಲದೊಳು ||
ಧರಣಿಯಮರರ ವೈರವ ನೀನು | ಮಾತ್ರ | ವಿರಚಿಸೆ ಕೆಡುವೆ ಕೇಳೆಂದನು         || ೫ ||

ಕಂದ

ಕರುಣದೊಳೀ ಪರಿ ವರಮಂ | ಧರಣಿಪತರಳಂಗೆ ಕೊಟ್ಟು ಮುನಿಪತಿ ಮುದದಿಂ ||
ತೆರಳಿನ್ನಾಲಯಕೆಂದೀ | ಪರಿಯಿಂದಪ್ಪಣೆಯನ್ನಿತ್ತು ಕಳುಹಿದನವರಂ      || ೧ ||

ವಾರ್ಧಿಕ

ತಾಪಸೇಶ್ವರನೊಳಪ್ಪಣೆಗೊಂಡು ವೇಗದಿಂ |
ದಾ ಪತಿವ್ರತೆ ಪುತ್ರ ಸಹಿತಂದು ಕೃತವೀರ್ಯ ||
ಭೂಪನಿರ್ದೆಡೆಗೆ ನಡೆತಂದು ವೃತ್ತಾಂತಮಂ ಪೇಳಲ್ಕೆ ಕೇಳಿ ನೃಪನು
ತಾ ಪರಮ ಸಂತೋಷದಿಂ ಕೆಲವು ದಿನದ ಮೇ |
ಲಾ ಪುರಪತಿತ್ವಮಂ ಮಗಗಿತ್ತು ತಪದಿಂದ  ||
ಗೋಪಾಲನಂ ವರಿಸಿ ಸುರನಿಕರ ಭಾಪೆನಲು ಕೈವಲ್ಯಮಂ ಪಡೆದನು    || ೧ ||

ಭಾಮಿನಿ

ಮುನಿಪ ಕೇಳೈ ಕಾರ್ತವೀರ್ಯಾ |
ರ್ಜುನನು ರಾಜ್ಯದಿ ಧರ್ಮವನು ಸ್ಥಾ |
ಪನೆಗೊಳಿಸಿ ಬುಧವಾರವನು ಪೂಜಿಸುತ ಭಕ್ತಿಯಲಿ ||
ಘನತರೈಶ್ವರ್ಯದೊಳು ಕುಂದುಗ ||
ಳಿನಿತು ಕಾಣದೆ ಸುರಪತಿಗೆ ಮಿಗಿ |
ಲೆನಿಸಿ ಧರಣಿಯನಾಳುತಿರ್ದನು ಭರಿತ ವೈಭವದಿ     || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲವನಿಪನೀ ಪರಿಯೊಳಿರ | ಲತ್ತ ಲಂಕಾಪುರದಿ ದಾನವ ||
ಮೊತ್ತದೊಡ್ಡೋಲಗದೊಳೊಂದಿನ | ಹತ್ತು ಮೊಗದ    || ೧ ||

ಖಳಕುಲೇಶ್ವರ ನಗುತ ತನ್ನಯ | ಬಳಿಯೊಳಿರ್ಪ ಪ್ರಹಸ್ತಗುಸಿರಿದ ||
ನಳವಿಗೊಟ್ಟೆನ್ನೊಡನೆ ಗೆಲುವವ | ರಿಳೆಯೊಳಿಲ್ಲ        || ೨ ||

ಸುರಪ ಮುಖ್ಯರ ಗೆಲದಿಹೆನು ಸರ | ಸಿರುಹ ಭವ ಪ್ರಪಿತಾಮಹನು ಸ್ಮರ ||
ಹರನು ಮೆಚ್ಚಿದನೆನ್ನ ಸತ್ತ್ವಕೆ | ಒರೆಯಲೇನು || ೩ ||

ಸುರನರೋರಗಲೋಕದೊಡೆತನ | ದೊರಕಿತೆನಗೆದೆಂಬ ಸಮಯದೊ |
ಳೊರೆದಳಣ್ಣಗೆ | ಶೂರ್ಪಣಖೆ ಮನ | ದಿರವನಿಂತು     || ೪ ||

ರಾಗ ಸಾರಂಗ ಅಷ್ಟತಾಳ

ಅಣ್ಣ ನೀ ಮದುವೆ ಮಾಡು | ಪ್ರಾಯದೊಳೆನ್ನ | ಬಣ್ಣ ಹೇಗಿಹುದು ನೋಡು ||
ಸಣ್ಣವಳಿಗೆ ತಕ್ಕ ಜತೆಯಾದ ಪುರುಷರ | ಕಣ್ಣಾರೆ ಕಂಡರೆ ಕುಣಿದಾಡುತಿದೆ ಮೋಹ || ಅಣ್ಣ   || ೧ ||

ಚಿತ್ತಜನಾಟದಲ್ಲಿ | ಈ ಕುಚವೆದೆ | ಗೊತ್ತಿ ವಿಲಾಸದಲಿ ||
ಮತ್ತೀ ದಂತಗಳೂರಿ ಮುತ್ತಿಡುತ್ತಾ ಕ್ಷಣ |
ಹೊತ್ತ ಗಲದೆ ಗಂಡನರ್ತಿಯೊಳ್ ಕುಣಿಸುವೆ || ಅಣ್ಣ   || ೨ ||

ಅಹಹ ನಾನೆಂಥ ಠೀಕು | ಮತ್ಕಾಂತಗೆ | ಬಹುಜನ್ಮ ಸುಕೃತ ಬೇಕು ||
ಮಹಿಯಲ್ಲಿ ಹೆಣ್ಣು ತುಂಬಿಹುದಾದರೆನ್ನಯ |
ಸಹಸಕಿನ್ನಣೆಯುಂಟೆ ಗ್ರಹಿಸು ನೀ ಶೀಘ್ರದಿ || ಅಣ್ಣ ||   || ೩ ||

ಎನ್ನಯ ಚೆಲುವಿಕೆಗೆ | ತಕ್ಕವನಾಗಿ | ಮನ್ನಿಸಬೇಕು ಹೇಗೆ ||
ಚೆನ್ನಗಿ ರತಿಸುಖವನ್ನೀಯದಿರ್ದಡೆ |
ನಿನ್ನಾಣೆ ನಿಮಿಷದಿ ತಿನ್ನವೆನವನನು || ಅಣ್ಣ   || ೪ ||

ವೃತ್ತ

ತಂಗೀಭಾವವ ಕೇಳ್ದು ತತ್ಖಳವರಂ ಬಿಡು ಚಿಂತೆಯಂ ಮನದೊಳೂ ||
ಶೃಂಗಾರಂಗಳ ತೋರ್ಪ ತಕ್ಕ ಪತಿಯಂ ಜತೆಗೊಳಿಪೆ ಸನ್ಮುದದೊಳೊ ||
ಅಂಗೀಕಾರದಿ ಬೇಗ ಪೋಗಿ ಮಿಗೆ ನೀ ಮಂದಿರದೊಳಿಹುದೆನ್ನತಾ ||
ಮಾಂಗಲ್ಯಾತುರದಿಂದಲೆಂದನಸುರಂ ಮಾರೀಚನನಂ ಕರೆವುತಾ        || ೧ ||

ಭಾಮಿನಿ

ಮಾವ ಕೇಳ್ ಮದ್ಭಗಿನಿಗೀ ಕ್ಷಣ |
ನೀ ವರನ ತರಬೇಕು ನಿನಗಾ ||
ಭಾವವನು ನಾನೊರೆವೆ ವಿದ್ಯುಜ್ಜಿಹ್ವನೆಂಬವನು ||
ಪಾವನದ ಕೌಳಿಕದ ಮನೆಯವ |
ಗೀ ವಿಗಡ ದುರ್ಗುಣಗಳುಸಿರದೆ ||
ಕೋವಿದಂಗನೆಯೆನುತ ವಂಚಿಸಿ ಘಟಿಸು ಕಾರ್ಯವನು          || ೧ ||

ಕಂದ

ಮೊದಲವನೇ ಮಾರೀಚಂ | ತದನಂತರ ಕಾರ್ಯದೆತ್ನವೆಣಿಸುತ ಭರದೊಳ್ ||
ಮುದದಿಂ ವಿದ್ಯುಜ್ಜಿಹ್ವನ | ಸದನಕೆ ಬಂದವನ ಕೂಡೆ ಮೆಲ್ಲನೆ ಪೇಳ್ದಂ     || ೧ ||

ರಾಗ ಕೇದಾರಗೌಳ ಝಂಪೆತಾಳ

ಬಾ ಮಗನೆ ಏಳು ಬೇಗ | ನಿನಗೊಂದು | ಕಾಮಿನಿಯ ತೋರ್ಪೆನೀಗ ||
ತಾಮಸವಿದೇಕೆ ನೋಡು | ನೀನವಳ | ಕಾಮನಾಟದಲಿ ಕೂಡು || ೧ ||

ನಿನಗೆ ತಕ್ಕವಳು ನಾರಿ | ರೂಪಿನಲಿ | ಮನುಮಥನ ಕೈಕಠಾರಿ ||
ಅನುದಿನವು ನಿನ್ನ ಗುಣವ | ಕೇಳುತ್ತ | ಮನದಿ ಚಿಂತಿಪಳು ಚೆಲುವ       || ೨ ||

ಹೆಣ್ಣುಗಳು ಸೋಲಬೇಕು | ಅವಳ ಮೈ | ಬಣ್ಣ ವೀ ಜಗಕೆ ಸಾಕು ||
ತಿಣ್ಣ ಬಲ್ಮೊಲೆಯ ಬಗೆಯ | ಒರೆಯೆ ಮು | ಕ್ಕಣ್ಣಗಸದಳ ನಿರ್ಣಯ       || ೩ ||

ಈರೇಳು ಭುವನಂಗಳ | ನಡುಗಿಸುವ | ಧೀರನಾಗಿಹ ದಶಗಳ ||
ಘೋರತರ ಕುಂಭಕರ್ಣ | ಭಾವಗಳು | ದಾರಿದಿರು ಸುಗುಣಪೂರ್ಣ       || ೪ ||

ಕೈಕಸಾದೇವಿಯತ್ತೆ | ಕಿರಿಯಯ್ಯ | ನಾ ಕಾಣೊ ನಿನಗೆ ಮತ್ತೆ ||
ಆ ಕಮಲಭವಪೌತ್ರನು | ವಿಶ್ರವಸು | ಲೋಕವರಿಯಲು ಮಾವನು        || ೫ ||

ಆ ಹರೆಯತರದ ಹೆಣ್ಣ | ಭೋಗಿಸದ | ದೇಹವಿನ್ನೇತಕಣ್ಣ ||
ನಾ ಪೇಳ್ವೆ ಬಗೆಯನಿಂದು | ಎನಲು ಉ | ತ್ಸಾಹದಿಂ ಪೇಳ್ದನಂದು        || ೬ ||

ಭಾಮಿನಿ

ಹೆಣ್ಣು ಹೊನ್ಮಣ್ಣುಗಳನಿತ್ತರೆ |
ಎಣಿಸದೆ ಸಂಗ್ರಹಿಪುದುತ್ತಮ |
ಪುಣ್ಯಹೀನರಿಗೀಪರಿಯ ಸಂಯೋಗ ಘಟಿಸುವದೆ |
ಮಿಣ್ಣನಯ್ದುವೆ ನಿನ್ನ ಸಂಗಡ |
ಕಣ್ಣಿನಲಿ ನಾನವಳ ಮುಖ ಮೈ |
ಬಣ್ಣದೊಲವ ನಿರೀಕ್ಷಿಸಿದ ಮೇಲ್ ಮದುವೆಯಾಗುವೆನು         || ೧ ||

ರಾಗ ಕೇದಾರಗೌಳ ಅಷ್ಟತಾಳ

ಇಂತೆಂದ ಮಾತ ಲಾಲಿಸುತಾಗ ಮಾರೀಚ | ಕಾಂತೆಯ ತೋರ್ಪೆನೆಂದು ||
ನಿಂತು ದೂರದಿ ನೋಡಬೇಕು ಪೇಳಿರುವೆ ಕೇ | ಳಂತರಂಗದೊಳಿಹಳು  || ೧ ||

ಎನುತ ಸಂತಯ್ಸಿ ಮತ್ತವನೊಡಗೊಂಡು ಪ | ಟ್ಟಣಕೆ ಮುಂದಯ್ತರುತ ||
ಅನಿತರೊಳ್ ಸನ್ನೆ ಗೆಯ್ಯಲು ಶೂರ್ಪಣಖೆ ಸನ್ಮೋ | ಹಿನಿಯಂತೆ ಬಂದಳಲ್ಲಿ       || ೨ ||

ಇಂದೀವರಾಕ್ಷಿ ಶಿಖಾಮಣಿಯೋ ಚೆಲ್ವ | ಕಂದರ್ಪನರಗಿಣಿಯೊ ||
ಚಂದದ ಕಣಿಯೊ ತಾನೆನಲಾಕೆ ಕಾರ್ಮಿಂಚಿ | ನಂದದಿ ತೋರ್ದಳಾಗ   || ೩ ||

ದೂರದೊಳಾ ವಿದ್ಯುಜ್ಜಿಹ್ವನವಳ ನೋಡಿ | ಮಾರನ ಕಣೆಗಳುಕಿ ||
ಮಾರೀಚನೊಡನೆ ನೀ ಮದುವೆಯ ಮಾಡಿ ಶ | ರೀರವನುಳುಹೆಂದನು   || ೪ ||

ನಿನ್ನಿಂದಾದುಪಕಾರವೆಂದಿಗು ಮರೆಯೆನು | ಬನ್ನಣೆಮಾತಲ್ಲಿದು ||
ಚೆನ್ನಾರಚೆಲುವೆಯ ತೋರ್ದೆ ಹೆಣ್ಣಿದು ಸರಿ | ಯಿನ್ನೆಂದು ಲಗ್ನವಯ್ಯ      || ೫ ||

ವಾರ್ಧಿಕ

ಇಂತೆಂದು ಪೇಳ್ದ ವಿದ್ಯುಜ್ಜಿಹ್ವಗೊಡಬಡಿಸಿ |
ಸಂತಸದಿ ಪಟ್ಟಣವ ಶೃಂಗರಿಸಿ ವಿಧಿಯಿಂದ ||
ಮಂತ್ರ ವಾದ್ಯಗಳ ಸುಘೋಷದಿಂ ತೆರೆವಿಡಿದು ವರನಿರೀಕ್ಷಣೆಸಮಯದಿ ||
ತಾಂ ತವಕದಿಂದಲಂತರಪಟವ ತೆಗೆಯೆ ಮ |
ತ್ತಂತಕನ ಮೃತ್ಯುರೂಪಿನೊಳೆಸೆವ ತರುಣಿಯಂ ||
ನಿಂತು ನೋಡುತ್ತ ಮೂರ್ಛಿತನಾಗಿ ಖೋಯೆಂದು ನಡನಡುಗುತಿಂತೆಂದನು       || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಾರಿಯೇ ಹೊರತಿವಳು ಲೋಕದ | ನಾರಿಯಂದವಿದಲ್ಲ ಮೊದಲೆ ವಿ ||
ಚಾರಿಸದೆ ನಾ ಕಟ್ಟೆ ಮುಂದೇನ್ | ದಾರಿಯೆನಗೆ       || ೧ ||

ದೈವಯೋಗದೊಳೀ ಮಹಾ ದು | ರ್ದೈವದೊಡಲೊಳು ಪೊಗದೆ ಸೌಖ್ಯದಿ ||
ಜೀವಿಸಿದ ಮೇಲಿವಳ ಕೂಡಿದ | ಭಾವವಹುದು         || ೨ ||

ಒಡನೆ ಬಾಯ್ಬಿಟ್ಟೋಡುತಿರೆ ಬೆಂ | ಬಿಡದೆ ಬಳಿಕಾ ಶೂರ್ಪಣಖೆ ಕೈ ||
ಪಿಡಿದು ನಾ ನಿನ್ನರಸಿ ನೀ ಕಂ | ಗೆಡುವುದೇಕೆ || ೩ ||

ಅನುದಿನವು ನಾನಾ ವಿನೋದದಿ | ತನುವ ಸುಖಿಸುವೆ ನೋಡೆನುತ ಬ ||
ಲ್ಪಿನಲಿ ಕುಚಗಳನೊತ್ತಿ ತಂದಳು | ಕುಣಿವುತಾಗ       || ೪ ||

ಭಾಮಿನಿ

ಅತಿ ಭಯದಿ ಗೋಳ್ಗುಟ್ಟುತಿಹ ನಿಜ |
ಪತಿಯ ಮಂಟಪದಲ್ಲಿಳುಹಿ ಸ |
ನ್ಮತದೊಳಿರೆ ಬಳಿಕವನ ಸಂತಸಗೊಳಿಸಿ ದಾನವರು |
ವಿತತ ವೈಭವ ದಿಂದಲಾ ದಂ |
ಪತಿಗಳಿಗೆ ಶುಭವೆನಿಸಿ ಭೀಕರ |
ಸತಿರಾಯರತಿಯೆತ್ತಿ ಪೂರೈಸಿದರು ಲಗ್ನವನು          || ೧ ||

ಕಂದ

ಈ ವಿಧದಿಂ ವೈವಾಹವ | ರಾವಣನೆಸಗುತ್ತೆ ಸುಖದೊಳಿರಲೊಂದು ||
ಠೀವಿಯೊಳೊಡ್ಡೋಲಗವ | ನ್ನೀವುತೆ ಬಳಿಕಾ ಪ್ರಹಸ್ತಗುಸಿರಿದ ಹದನಂ   || ೧ ||

ರಾಗ ಭೈರವಿ ಝಂಪೆತಾಳ
ಸಚಿವ ಲಾಲಿಪುದೀಗ | ವಚಿಸುವೆನು ನಿನ್ನೊಡನೆ ||
ಪ್ರಚುರರಾಗಿಹ ದಿವಿಜ | ನಿಚಯವನು ಗೆಲಿದೆ || ೧ ||

ಹರಿಯೊಡನೆ ಕಾದಾಡಿ | ಧುರದಿ ಜೈಸಿದರೆ ಮುಂ ||
ದಿರಗಳಿಲ್ಲೆ ಮಗ ನಾ | ನರುಹಲಿನ್ನೇನು       || ೨ ||

ಅದರಿಂದ ಸೈನಿಕವ | ನೊದಗಿನಲಿ ನೆರಹೆನಲು ||
ಹದನ ಕೇಳೆಂದು ತಿಳು | ಹಿದ ವಿಭೀಷಣನು  || ೩ ||