ಕಾರ್ತಿಕೇಯಶಿವ-ಪಾರ್ವತಿಯ ಮಗ. ಇವನನ್ನೆ ಕುಮಾರಸ್ವಾಮಿ, ಷಣ್ಮುಖ, ಸುಬ್ರಹ್ಮಣ್ಯ ಮೊದಲಾದ ಹೆಸರುಗಳಿಂದ ಪೂಜಿಸುತ್ತಾರೆ. ಲೋಕ ಕಂಟಕರಾಗಿದ್ದ ತಾರಕಾಸುರನನ್ನೂ ಶೂರಪದ್ಮನನ್ನೂ ವಧಿಸಿದ ಲೋಕ ರಕ್ಷಕ.

ಕಾರ್ತಿಕೇಯ

ಭಾರತದಲ್ಲಿ ಗಣೇಶ ಬಹು ಜನಪ್ರಿಯ ದೇವರು. ವೃದ್ಧರು, ಎಳೆಯರು ಎಲ್ಲ ಅವನಿಗೆ ಪೂಜೆ ಸಲ್ಲಸುತ್ತಾರೆ. ಗಣೇಶನಂತೆಯೇ ಪಾರ್ವತೀದೇವಿಯ ನೆಚ್ಚಿನ ಕಂದ-ಕಾರ್ತಿಕೇಯ. ಇವನು ಮಗುವಾಗಿ ಇದ್ದಾಗಲೇ ದೇವತೆಗಳ ಸೇನಾಪತಿಯಾಗಿ ತಾರಕ ಮುಂತಾದ ಕೆಟ್ಟ ರಾಕ್ಷಸರನ್ನು ಕೊಂದ ಶೂರ.

ಹಲವು ಗುಣನಾಮಗಳು

ಕಾರ್ತಿಕೇಯನಿಗೆ ಗುಣನಾಮಗಳು ಹಲವು. ಆರು ಮಂದಿ ಕೃತ್ತಿಕೆಯರು ಅವನನ್ನು ಪಡೆದು ಎದೆಹಾಲು ಕೊಟ್ಟು ಸಾಕಿದುದರಿಂದ ‘ಕಾರ್ತೀಕೇಯ’ನು. ಆರು ಮುಖ ಉಳ್ಳವನೆನಿಸಿ ‘ಷಣ್ಮಖ’ನು. ಜ್ಞಾನ ಸಂಪತ್ತು ಉಳ್ಳವನಾಗಿ ‘ಸುಬ್ರಹ್ಮಣ್ಯ’ನು. ರಾಕ್ಷಸರನ್ನು ಕೊಲ್ಲಲು ದೊಡ್ಡ ಸೈನ್ಯವನ್ನು ಕೂಡಿಸಿದುದರಿಂದ ‘ಮಹಾಸೇನ’ನು. ದೇವಸೈನ್ಯವನ್ನು ರಾಕ್ಷಸರ ಯುದ್ಧಕ್ಕೆ ನಡೆಸಿ ‘ಸೇನಾನಿ’ ಎಂಬ ಹೆಸರು ಪಡೆದನು. ಶಿವನಿಂದ ಜಾರಿದ (ಸ್ಖಲನವಾದ) ಶಕ್ತಿಯಿಂದ ಹುಟ್ಟಿ ‘ಸ್ಕಂದ’ ನೆನಿಸಿದನು. ನವಿಲು ವಾಹನವಾದುದರಿಂದ ‘ಶಿಖಿವಾಹನ’ ನು. ಯಾವಾಗಲೂ ಬಾಲಕನಾಗಿಯೇ ಇರುವುದರಿಂದ ‘ಕುಮಾರ’ನು. ಕುತ್ಸಿತರನ್ನು (ಕೆಟ್ಟವರನ್ನು) ಕೊಲ್ಲುವವನೆಂದೂ ಈ ಶಬ್ದಕ್ಕೆ ಅರ್ಥಗಳಿವೆ. ಶತ್ರುಗಳಿಂದ ತನ್ನನ್ನು ಮತ್ತು ತನ್ನ ಆಶ್ರಿತರನ್ನು ರಕ್ಷಿಸುವವನಾದ್ದರಿಂದ ‘ಗುಹ’ ನು. ಹೀಗೆ ಹಲವಾರು-ನೂರಾರು ಗುಣನಾಮಗಳು ಅವನಿಗೆ ಇವೆ.

ಲೋಕದ ಹಿತಕ್ಕಾಗಿ ಮಹಾಕಾರ್ಯಗಳನ್ನು ಮಾಡಿ ದೇವರೆನಿಸಿದವನಿಗೆ ಗುಣನಾಮ ನೂರಾರು ಮಾತ್ರವಲ್ಲ, ಸಾವಿರವಿರುವುದು ಆಶ್ಚರ್ಯವಲ್ಲ.

ಬ್ರಹ್ಮ, ನಿನಗೆ ತಿಳಿಯದು

ಕೈಲಾಸದಲ್ಲಿ ಒಮ್ಮೆ ಶಿವನು ಮಹಾಸಭೆಯಲ್ಲಿದ್ದನು. ಭಕ್ತಗಣ ನೆರೆದಿತ್ತು. ವಾದ್ಯಘೋಷ ಕೇಳಿಸುತ್ತಿತ್ತು. ಸಂಗೀತ ನಡೆಯುತ್ತಿತ್ತು. ಭೃಂಗಿ ನಾಟ್ಯ ಮಾಡುತ್ತಿದ್ದನು. ಬ್ರಹ್ಮ, ಇಂದ್ರ ಮುಂತಾದವರೂ ಇದ್ದರು. ಕಾರ್ತಿಕೇಯನು ಶಿವನ ಎದುರಿನಲ್ಲಿದ್ದನು. ಶಿವನು ತನ್ನ ಹುಬ್ಬಿನ ಸನ್ನೆಯಿಂದ ನಾಟ್ಯವನ್ನು ನಿಲ್ಲಿಸಿ, ಕುಮಾರನ ಕಡೆಗೆ ಒಮ್ಮೆ ನೋಡಿ, ಬ್ರಹ್ಮನ ಕಡೆಗೆ ದೃಷ್ಟಿ ಬೀರಿದನು. ಬ್ರಹ್ಮನು ಎದ್ದುನಿಂತನು. ಎಲ್ಲರೂ ಅವನತ್ತಲೇ ನೋಡಿದರು. ಬ್ರಹ್ಮನು ಹೀಗೆಂದನು:

‘‘ದೇವ, ನಿನ್ನ ಮಗನಿಗೆ ಅಕ್ಷರಾಭ್ಯಾಸ ಮಾಡಿಸಲು ನನಗೆ ಹೇಳಿದೆ. ನಾನು ಅದರಂತೆ ಹೊತ್ತು ಮೂಡುವ ಮೊದಲೇ ಅವನಿಗೆ ‘ಓಂ’ ನಾಮವನ್ನು ಕಲಿಸಲು ತೊಡಗಿದೆನು. ಒಡನೆ ಅವನು ನನ್ನ ಕೈಹಿಡಿದು, ‘ಓಂಕಾರದ ಅರ್ಥವೇನು?’ ಎಂದು ಕೇಳಿದನು.

‘ಬರಹ ಕಲಿಯುವ ಮೊದಲೇ ಅರ್ಥ ಕೇಳಬಾರದು!’ ಎಂದೆನು.

‘‘ಆಗ ಅವನು ನನ್ನನ್ನು ಗದರಿಸಿ, ಹೊಡೆಯಲು ಬಂದನಯ್ಯ! ಹುಟ್ಟಿದ ಏಳೇ ದಿನದಲ್ಲಿ ತಾರಕಾಸುರನನ್ನು ಕೊಂದವನು ನನ್ನನ್ನು ಲಕ್ಷ್ಯ ಮಾಡುವನೆ! ನಾನು ಹೆದರಿದೆನು. ‘ಅರ್ಥ ಹೇಳುತ್ತೇನೆ’ ಎಂದೆನು. ಹನ್ನೆರಡು ಸಾವಿರ ಶ್ಲೋಕಗಳಲ್ಲಿ ಓಂಕಾರದ ಅರ್ಥವನ್ನು ಹೇಳಿದೆನು. ಆಗ ಅವನಿಗೆ ಏನೂ ತೃಪ್ತಿಯಾಗಲಿಲ್ಲ. ‘ಬ್ರಹ್ಮ ದೇವನೇ, ನಿನಗೆ ತಿಳಿಯದು’ ಎಂದು ಹೇಳಿದನು. ಈಗ ಇಲ್ಲಿ ನಿನ್ನ ಎದುರಿಗಿದ್ದಾನೆ. ಅವನಿಗೆ ಓಂಕಾರದ (ಪ್ರಣವದ) ಅರ್ಥವನ್ನು ನೀನೇ ವಿವರಿಸು. ನನಗೆ ಇನ್ನೇನೂ ಹೆಚ್ಚು ತಿಳಿಯದು.’’

ಶಿವನಿಗೆ?

ಬ್ರಹ್ಮನ ಮಾತನ್ನು ಕೇಳಿ ಶಿವನು ತನ್ನ ಮಗನ ಜಾಣ್ಮೆಗೆ ತಲೆದೂಗಿದನು. ಹನ್ನೆರಡು ಲಕ್ಷ ಶ್ಲೋಕಗಳಲ್ಲಿ ಅರ್ಥವನ್ನು ವಿವರಿಸಿದನು. ಆಗ ಕಾರ್ತಿಕೇಯನು ‘‘ಅಪ್ಪಾ, ನಾನು ಬ್ರಹ್ಮನನ್ನು ತಿಳಿಯದವನೆಂದುದು ತಪ್ಪಾಯಿತು’’ ಎಂದನು.

ಶಿವನಿಗೆ ಕುಮಾರನ ವ್ಯಂಗ್ಯ ಅರ್ಥವಾಯಿತು. ತನ್ನನ್ನೇ ಈತನು ‘ತಿಳಿಯದವನು’ ಎನ್ನುತ್ತಿದ್ದಾನೆಂದು ಕೋಪವೂ ಬಂತು. ಆದರೆ ಮಗನು ಬುದ್ಧಿವಂತನೆಂದು ಪ್ರೀತಿಯಾಯಿತು, ಅಭಿಮಾನವೂ ಉಂಟಾಯಿತು.

‘‘ಹಾಗಾದರೆ ಪ್ರಣವಕ್ಕೆ ಎಷ್ಟು ಅರ್ಥವಿದೆ?’’ ಎಂದು ಕೇಳಿದನು.

‘‘ಹನ್ನೆರಡು ಮಹಾಕೋಟಿ’’ ಎಂದು ಕುಮಾರನ ಉತ್ತರ ಬಂತು.

ಅವನ ಜ್ಞಾನಶಕ್ತಿಗೆ ಶಿವನು ಬೆರಗಾದನು. ಈ ಜ್ಞಾನಶಕ್ತಿಯಿಂದ ಲೋಕಕ್ಕೆ ಉಪಕಾರವಾಗಲಿ ಎಂಬ ಭಾವನೆಯಿಂದ ಹೀಗೆಂದನು:

‘‘ಎಲೈ ಕುಮಾರನೇ, ನೀನು ಭೂಲೋಕದಲ್ಲಿ ಜನಿಸಿ ಓಂಕಾರದ ಅರ್ಥವನ್ನೂ ಮಹಿಮೆಯನ್ನೂ ತಿಳಿಸಿ, ಜನರ ನಡೆನುಡಿಗಳನ್ನು ತಿದ್ದು.’’

ಅದರಂತೆ ಕಾರ್ತಿಕೇಯನು ತಮಿಳು ನಾಡಿನ ಶ್ರೀಕಾಶಿ ಎಂಬಲ್ಲಿ ತಿರುಜ್ಞಾನ ಸಂಬಂಧಿ ಎಂಬವನಾಗಿ ಜನಿಸಿದನು, ಜ್ಞಾನ-ಭಕ್ತಿ-ಸದಾಚಾರಗಳನ್ನು ಪ್ರಚಾರಗೊಳಿಸಿದನು ಎಂದು ಜನರಲ್ಲಿ ನಂಬಿಕೆ ಇದೆ.

ಬಹಳ  ಹಿಂದಿನ ಕಾಲ. ಶಿವನು ದಾಕ್ಷಾಯಣಿಯನ್ನು ಮದುವೆಯಾಗಿದ್ದನು. ಅವಳ ತಂದೆ ದಕ್ಷನಿಗೂ ಶಿವನಿಗೂ ವೈಮನಸ್ಯವಾಗಿತ್ತು. ಇದರಿಂದ ದಕ್ಷ ತಾನು ಯಜ್ಞವನ್ನು ಮಾಡಿದಾಗ ಎಲ್ಲರನ್ನೂ ಕರೆದರೂ ಮಗಳನ್ನೂ ಅಳಿಯನನ್ನೂ ಆಹ್ವಾನಿಸಲಿಲ್ಲ. ಯಜ್ಞಕ್ಕೆ ತಾನಾಗಿ ಹೋದ ದಾಕ್ಷಾಯಣಿಯನ್ನೂ ಪ್ರೀತಿಯಿಂದ, ಗೌರವದಿಂದ ಕಾಣಲಿಲ್ಲ. ಅಪಮಾನದಿಂದ ನೊಂದ ದಾಕ್ಷಾಯಣಿ ಅಗ್ನಿಯಲ್ಲಿ ಬಿದ್ದು ಪ್ರಾಣಬಿಟ್ಟಳು. ಅನಂತರ ಪರ್ವತರಾಜನ ಮಗಳಾಗಿ ಹುಟ್ಟಿದಳು. ಅವಳಿಗೆ ಪಾರ್ವತಿ ಎಂದು ಹೆಸರಾಯಿತು.

ಪಾರ್ವತಿಯದು ಶಿವನನ್ನೆ ಮದುವೆಯಾಗಬೇಕು ಎಂದು ದೃಢ ಸಂಕಲ್ಪ. ಆದರೆ ಆಗ ಶಿವನು ಉಗ್ರ ತಪಸ್ಸಿನಲ್ಲಿದ್ದನು.

ಈ ವೇಳೆಗೆ ತಾರಕನೆಂಬ ಕೆಟ್ಟ ರಾಕ್ಷಸನು ಲೋಕಕ್ಕೆ ಬಹಳ ತೊಂದರೆ ಕೊಡತೊಡಗಿದನು.

ತಾರಕ ಯಾರು?

ಬ್ರಹ್ಮನ ಮಗನಾದ ಮರೀಚಿಯ ಮಗ ಕಶ್ಯಪನು. ಅವನ  ಹೆಂಡತಿಯರಲ್ಲಿ ಅದಿತಿ ಎಂಬವಳಿಂದ ಇಂದ್ರ ಮುಂತಾದ ದೇವತೆಗಳು ಹುಟ್ಟಿದರು. ಸ್ವರ್ಗ ಅವರಿಗೆ ವಾಸಸ್ಥಳ. ಕಶ್ಯಪನ ಇನ್ನೊಬ್ಬ ಹೆಂಡತಿ ದಿತಿ. ಅವಳಲ್ಲಿ ಹುಟ್ಟಿದವರು ದೈತ್ಯರು, ಅಂದರೆ ರಾಕ್ಷಸರು. ಅವರು ಕೆಟ್ಟವರು, ದೇವತೆಗಳ ಶತ್ರುಗಳು.

ದಿತಿಯ ಮಕ್ಕಳಲ್ಲಿ ಒಬ್ಬ ವಜ್ರಾಂಗ. ಅವನ ಹೆಂಡತಿ ವರಾಂಗಿ, ಇವರ ಮಗ ತಾರಕಾಸುರ. ದಿತಿಯಲ್ಲಿ ಜನಿಸಿದ ಇನ್ನೊಬ್ಬ ರಾಕ್ಷಸನ ಪತ್ನಿ ಸುರಸೆ ಅಥವಾ ಮಾಯೆ ಎಂಬವಳು. ಇವಳಲ್ಲಿ ಶೂರಪದ್ಮ, ಸಿಂಹಮುಖ, ಅಜಮುಖಿ-ಎಂಬವರು ಜನಿಸಿದರು.

ತಾರಕನು ಹುಟ್ಟಿದಾಗ ಇವನಿಂದ ಲೋಕಕ್ಕೆ ಬಹಳ ಕಂಟಕವಾಗುತ್ತದೆ ಎನ್ನುವುದನ್ನು ಸೂಚಿಸುವಂತೆ ಅನೇಕ ಭಯಂಕರ ಶಕುನಗಳಾದುವಂತೆ. ಭೂಮಿ ನಡುಗಿತು. ಬಿರುಗಾಳಿ ಬೀಸಿತು. ಕಡಲು ಕಲಕಿತು. ಬೆಟ್ಟಗಳು ಅಲ್ಲಾಡಿದವು. ಕ್ರೂರ ಮೃಗಗಳು ಕೂಗಿದವು. ಈ ಅನಿಷ್ಟದಿಂದ ಸಜ್ಜನರಿಗೆ ದುಃಖವಾಯಿತು.

ತಾರಕನೂ ಶೂರಪದ್ಮನೂ ಬೆಳೆದು ದೊಡ್ಡವರಾದರು. ತುಂಬಾ ಧೈರ್ಯಶಾಲಿಗಳೂ ಬಲಶಾಲಿಗಳೂ ಅವರು. ತಾರಕನು ಶೋಣಿತಪುರದಲ್ಲಿಯೂ ಶೂರಪದ್ಮನು ವೀರಮಹೇಂದ್ರದಲ್ಲಿಯೂ ರಾಕ್ಷಸ ಚಕ್ರವರ್ತಿಗಳಾದರು.

ನನಗೆ ಮರಣ ಬರುವುದಾದರೆ-

ತಾರಕನು ದೇವತೆಗಳನ್ನು ಜಯಿಸಬೇಕೆಂದು ಸಂಕಲ್ಪ ಮಾಡಿದ. ಇದೇನು ಸುಲಭವೇ? ತಾರಕನಂತಹ ಅಸಾಧಾರಣ ಬಲಶಾಲಿಗೂ ಕಷ್ಟವೇ. ಬ್ರಹ್ಮನನ್ನು ಒಲಿಸಿಕೊಂಡು ವರವನ್ನು ಬೇಡಿ ಸಾವೇ ಇಲ್ಲದವನಾಗ ಬೇಕು, ಅನಂತರ ದೇವತೆಗಳನ್ನು ಕೆಣಕಬೇಕು ಎಂದು ತೀರ್ಮಾನಿಸಿದ. ಮಧುವನ ಎಂಬ ಕಾಡಿನಲ್ಲಿ ತಪಸ್ಸು ಮಾಡಿದ.

ಕೆಲವು ಕಾಲ ನೀರನ್ನು ಮಾತ್ರ ಸೇವಿಸಿಯೂ ಮತ್ತೆ ಗಾಳಿ ಮಾತ್ರ ತೆಗೆದುಕೊಂಡೂ ತಪಸ್ಸು ಮಾಡಿದನು. ನೀರಲ್ಲಿ ನಿಂತು, ಪಾದದ ಹೆಬ್ಬೆರಳ ಮೇಲೆ ಮಾತ್ರ ನಿಂತು, ಕೈಗಳನ್ನು ಮಾತ್ರ ನೆಲದಲ್ಲಿ ಊರಿಕೊಂಡು, ಹೀಗೆ ಬಗೆಬಗೆಯ ಕಠಿಣವಾದ ತಪಸ್ಸನ್ನು ಮಾಡಿದನು. ಬ್ರಹ್ಮನು ಪ್ರತ್ಯಕ್ಷವಾಗುವುದು ತಡವಾದಷ್ಟು ಅವನ ತಪಸ್ಸು ಹೆಚ್ಚುಹೆಚ್ಚು ಕಠಿಣವಾಯಿತು.

ಅವನ ತಪಸ್ಸಿನ ಜ್ವಾಲೆ ಲೋಕಗಳನ್ನು ಸುಡತೊಡಗಿತು. ಆಗ ಬ್ರಹ್ಮನು ಅವನಿಗೆ ಪ್ರತ್ಯಕ್ಷನಾದ.

‘‘ತಾರಕಾಸುರ, ಏಳು, ನಾನು ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಏನು ವರ ಬೇಕು ಕೇಳಿಕೊ’’  ಎಂದ ಬ್ರಹ್ಮ.

ತಾರಕಾಸುರನು ಕಣ್ಣು ಬಿಟ್ಟ. ಎದುರಿಗೆ ಬ್ರಹ್ಮ ಪ್ರತ್ಯಕ್ಷನಾಗಿದ್ದಾನೆ. ತಲೆಬಾಗಿ ಅವನಿಗೆ ನಮಸ್ಕರಿಸಿದ. ‘‘ಪ್ರಭು, ನನಗೆ ಸಾವೇ ಬಾರದಂತೆ ವರ ಕೊಡು’’ ಎಂದು ಕೇಳಿದ.

ಬ್ರಹ್ಮ ಹೇಳಿದ: ‘‘ತಾರಕಾಸುರ, ಅಸಾಧ್ಯವಾದುದನ್ನು ಬೇಡುತ್ತಿದ್ದೀಯೆ. ಹುಟ್ಟಿದವರು ಸಾಯಲೇಬೇಕು. ಈ ನಿಯಮವನ್ನು ಮುರಿಯುವ ವರವನ್ನು ಕೊಡುವುದು ಸಾಧ್ಯವಿಲ್ಲ. ಬೇರೆ ಯಾವುದಾದರೂ ವರ ಬೇಡು.’’

ತಾರಕಾಸುರ ಯೋಚಿಸಿದ. ತನಗೆ ಸಾವೇ ಕೂಡದು ಎಂದರೆ ಬ್ರಹ್ಮ ವರವನ್ನು ಕೊಡುವುದಿಲ್ಲ. ‘ನನಗೆ ಈ ರೀತಿ ಮಾತ್ರ ಸಾವಾಗಲಿ’  ಎಂದು ಕೇಳಿದರೆ ಕೊಡುತ್ತಾನೆ. ಆದುದರಿಂದ ಅಸಂಭವಾದ ರೀತಿಯಲ್ಲಿ ಸಾವಾಗಲಿ ಎಂದು ಕೇಳಬೇಕು; ಆಗ ಬ್ರಹ್ಮ ವರ ಕೊಡುತ್ತಾನೆ, ತಾನು ಅಮರನಾದ ಹಾಗೆಯೇ. ಶಿವ ಉಗ್ರವಾದ ತಪಸ್ಸಿನಲ್ಲಿ ನಿರತನಾಗಿದ್ದ. ಅವನ ಮನಸ್ಸನ್ನು ಯಾರಿಗೂ ಕದಲಿಸುವುದು ಅಸಾಧ್ಯ. ಅವನು ಮದುವೆಯಾಗುವುದೇ ಇಲ್ಲ. ಆದುದರಿಂದ, ‘ನನಗೆ ಶಿವನ ಮಗನಿಂದ ಮಾತ್ರ ಮರಣ ಬರಲಿ’ ಎಂದು ಕೇಳುವುದೇ ಬುದ್ಧಿವಂತಿಕೆ-ಹೀಗೆಂದುಕೊಂಡ ತಾರಕಾಸುರನಿಗೆ ಮತ್ತೆ ಎನ್ನಿಸಿತು: ‘ಶಿವ ಮದುವೆಯಾಗಿ ಮಗ ಹುಟ್ಟಿದರೂ ನಾನು ಸುರಕ್ಷಿತವಾಗಿರಬೇಕು. ತೀರ ಎಳೆಯ ಮಗು-ಶಿವನ ಮಗನಾದರೆ ತಾನೆ ಏನು? ನನ್ನನ್ನು ಏನೂ ಮಾಡಲಾರದು. ಆದುದರಿಂದ ಏಳು ದಿನದ ಮಗುವಿನಿಂದ ಮಾತ್ರ ನನಗೆ ಸಾವು ಬರಲಿ ಎಂದು ಕೇಳುವುದು ಜಾಣತನ’.

ಬ್ರಹ್ಮ ನಸುನಕ್ಕು, ‘ಹಾಗೆಯೇ ಆಗಲಿ’ ಎಂದು ಆಶೀರ್ವದಿಸಿ ಮಾಯವಾದ.

ಮರಣವೇ ಇಲ್ಲದಂತೆ ವರ ಸಿಕ್ಕಿತೆಂದು ತಾರಕನು ಭಾವಿಸಿ ಸಂತೋಷಪಟ್ಟ.

ನಿಮಗೆ ಕಾಟ ತಪ್ಪಬೇಕಾದರೆ-

ತಾರಕನು ತನ್ನ ಸೊಕ್ಕಿನಿಂದ ದರ್ಪದಿಂದ ಮೂರು ಲೋಕಗಳನ್ನೂ ನಡುಗಿಸಿದನು. ಇಂದ್ರನು ಅವನಿಗೆ ಹೆದರಿ ತನ್ನ ಐರಾವತನ್ನು ಕೊಟ್ಟನು. ಕುಬೇರನು ಎಲ್ಲ ನಿಧಿಗಳನ್ನೂ ಅರ್ಪಿಸಿದನು. ಎಲ್ಲೆಲ್ಲಿ ಉತ್ತಮ ವಸ್ತುಗಳಿವೆಯೋ ಅವೆಲ್ಲವೂ ಅವನ ವಶವಾದವು. ದೇವತೆಗಳನ್ನು ಸ್ವರ್ಗದಿಂದ ಓಡಿಸಿ, ಅವನ ಸ್ಥಾನದಲ್ಲಿ ದೈತ್ಯರನ್ನು ನೇಮಿಸಿದನು. ಎಲ್ಲ ಕಡೆ ಕಳವು, ಕೊಲೆ, ಸುಲಿಗೆಗಳು ನಡೆದವು. ಇನ್ನೇನು ದಿಕ್ಪಾಲಕರು ಅವನ  ಅಡಿಯಾಳುಗಳು, ದೇವತಾಸ್ತ್ರೀಯರು ಅವನ ಮನೆಗೆಲಸದವರು!

ದೇವತೆಗಳು ತಾರಕನ ಹಾವಳಿಯನ್ನು ಸಹಿಸಲಾರದೆ, ಬ್ರಹ್ಮನಿಗೆ ಮೊರೆಯಿಟ್ಟರು. ಬ್ರಹ್ಮನಿಗೆ ತಿಳಿದಿತ್ತು. ಶಿವನಿಗೆ ಮಗನು ಹುಟ್ಟಿ ತಾರಕಾಸುರನ ದುಷ್ಟತನವನ್ನು ತಡೆಯಬೇಕು, ಅಲ್ಲಿಯವರೆಗೆ ಯಾರೂ ಅವನನ್ನು ಶಿಕ್ಷಿಸಲಾರರು ಎಂದು. ಆದರೂ ತಾರಕಾಸುರನಿಗೆ ಕಾಣಿಸಿಕೊಂಡ.

ತಾರಕಾಸುರ ಬ್ರಹ್ಮನಿಗೆ ನಮಸ್ಕರಿಸಿ, ‘‘ದೇವಾ ಇಷ್ಟು ಅನುಗ್ರಹ ಮಾಡಿದಿರಿ, ನನ್ನಿಂದ ಏನಾಗಬೇಕು?’’ ಎಂದು ಕೇಳಿದ.

ಬ್ರಹ್ಮನು, ‘‘ತಾರಕಾಸುರ, ನೀನು ಅಪ್ರತಿಮ ಬಲಶಾಲಿ, ಸಾಹಸಿ. ಆದರೆ ದೇವತೆಗಳು ನಿನ್ನಿಂದ ನೋಯುತ್ತಿದ್ದಾರೆ. ದೇವಲೋಕದಲ್ಲಿಯೂ ಅವರು ಇರುವುದು ಸಾಧ್ಯವಿಲ್ಲವಾಗಿದೆ. ಹೀಗೆ ಮಾಡಬೇಡ. ಅವರು ದೇವಲೋಕದಲ್ಲಿರಲು ಬಿಡು’ ಎಂದು ಉಪದೇಶಿಸಿದ.

‘‘ನಿಮ್ಮ ಅಪ್ಪಣೆ’’ ಎಂದು ತಲೆಬಾಗಿದ ತಾರಕಾಸುರ. ದೇವಲೋಕವನ್ನು ದೇವತೆಗಳಿಗೆ ಬಿಟ್ಟುಕೊಟ್ಟು ತಾನು ಶೋಣಿತಪುರಕ್ಕೆ ಹೋದ.

ಆದರೆ ಅವನ ದುಷ್ಟತನ ಕಡಮೆಯಾಗಲಿಲ್ಲ. ತನ್ನನ್ನು ತಡೆಯುವವರೇ ಇಲ್ಲ ಎಂದು ವಿಜೃಂಭಿಸುತ್ತಿದ್ದ. ದೇವತೆಗಳಿಗೆ ಅವನಿಂದ ತೊಂದರೆ, ಭಯ ತಪ್ಪಲೇ ಇಲ್ಲ.

ಬ್ರಹ್ಮ ಅವರಿಗೆ ಹೇಳಿದ: ನಿಮಗೆ ತಾರಕಾಸುರನ ಕಾಟ ತಪ್ಪಬೇಕಾದರೆ ಒಂದೇ ಮಾರ್ಗ. ಪರಮೇಶ್ವರನ ಮಗ ಮಾತ್ರ ಅವನನ್ನು ಕೊಲ್ಲಬಲ್ಲ. ಆದುದರಿಂದ ಪರಮೇಶ್ವರನು ಪಾರ್ವತಿಯನ್ನು ಮದುವೆಯಾಗಬೇಕು. ಪರಮೇಶ್ವರನು ಪಾರ್ವತಿಯನ್ನು ಕಾಣುವಂತೆ, ಅವಳನ್ನು ಮದುವೆಯಾಗುವಂತೆ ನೀವು ಮಾಡಬೇಕು.’’

ಕಾರ್ತಿಕೇಯನ ಜನನ

ದೇವತೆಗಳು ಬಹು ಕಷ್ಟವಾದ ಆ ಕೆಲಸವನ್ನೂ ಮಾಡಿದರು. ಶಿವನು ಪಾರ್ವತಿಯನ್ನು ನೋಡುವಂತೆ ಮಾಡಿದರು. ಪಾರ್ವತಿಯ ನಿಷ್ಠೆ ಮತ್ತು ತಪಸ್ಸುಗಳನ್ನು ಶಿವನು ಮೆಚ್ಚಿದ. ಅವಳನ್ನು ಮದುವೆಯಾದ.

ಸ್ವಲ್ಪ ಕಾಲದ ನಂತರ ಪಾರ್ವತಿಯು ಮಾರ್ಗಶಿರ ಮಾಸದ ಶುದ್ಧ ಷಷ್ಠಿಯಂದು ತೇಜಸ್ವಿಯಾದ ಗಂಡುಮಗುವನ್ನು ಹೆತ್ತಳು. ಅದು ‘ಸ್ಕಂದಷಷ್ಠಿ’ ಎಂಬ ಪುಣ್ಯದಿನವಾಯಿತು.

ಕಾರ್ತಿಕೇಯನು ಹುಟ್ಟುವಾಗಲೇ ಶಕ್ತ್ಯಾಯುಧ, ಶೂಲ, ಮಹಾಸ್ತ್ರಗಳನ್ನು ಧರಿಸಿದ್ದನು. ಅವನು ಹುಟ್ಟಿದ ಸುದ್ದಿ ಕೇಳಿ ಕೃತ್ತಿಕೆಯರು ಬಂದು ಮುದ್ದಿಸಿ, ತಮ್ಮ ಎದೆಹಾಲಿನಿಂದ ಅವನನ್ನು ಪೋಷಿಸಿದರು.

ಸೇನಾಪತಿತ್ವ

ಶಿವನ ಕುಮಾರನಲ್ಲವೆ? ಕಾರ್ತಿಕೇಯನು ಬಲಿಷ್ಠನಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಲವೇ ದಿನಗಳಲ್ಲಿ ಅವನ ಶರೀರ ಗಟ್ಟಿಮುಟ್ಟಾಯಿತು. ಕಾಂತಿ ಚಿಮ್ಮಿತು. ಬುದ್ಧಿ ಅರಳಿತು. ಶೌರ್ಯದೊಡನೆ ಒಳ್ಳೆಯ ಶೀಲವೂ ಕಂಗೊಳಿಸಿತು. ಎಲ್ಲ ತಿಳಿವಳಿಕೆಗಳೂ ಮಾತಿನ ಶಕ್ತಿಯೂ ಬಂದುವು. ನೋಡಿದವರೆಲ್ಲ ಸಂತೋಷಪಟ್ಟರು.

ಕೈಲಾಸ ಮಂದಿರದಲ್ಲಿ ನಿತ್ಯವೂ ಉತ್ಸವ ನಡೆಯಿತು. ಬ್ರಹ್ಮನು ಕುಮಾರನಿಗೆ ಜಾತಕರ್ಮ ಮುಂತಾದ ಸಂಸ್ಕಾರಗಳನ್ನು ಮಾಡಿದನು. ಶಿವ-ಪಾರ್ವತಿಯರು ಮಗುವಿಗೆ ‘ದುಷ್ಟರನ್ನು ಕೊಂದು, ಧರ್ಮರಕ್ಷಕನಾಗು’ ಎಂದು ಹರಸಿದರು. ಲೋಕ ಹಿತಕ್ಕಾಗಿ ಶಿವನು ಕುಮಾರನನ್ನು ರತ್ನದ ಸಿಂಹಾಸನದಲ್ಲಿ ಕುಳ್ಳಿರಿಸಿ ಪುಣ್ಯತೀರ್ಥಗಳಿಂದ ಮಂತ್ರಪೂರ್ವಕ ಅಭಿಷೇಕ ಮಾಡಿ ದೇವತೆಗಳ ಸೈನ್ಯಕ್ಕೆ ಒಡೆಯನಾಗಿ ನೇಮಿಸಿದನು.

ಆ ಸಂದರ್ಭದಲ್ಲಿ ದೇವತೆಗಳೆಲ್ಲರೂ ಕಾರ್ತಿಕೇಯನಿಗೆ ವಿವಿದ ಆಯುಧಗಳನ್ನೂ ಮಂತ್ರಶಕ್ತಿಗಳನ್ನೂ ತೊಡಿಗೆಗಳನ್ನೂ ಉಡುಗೊರೆ ಕೊಟ್ಟರು. ಸೂರ್ಯನಿಂದ ಮನೋವೇಗವುಳ್ಳ ರಥವೂ ಯಮನಿಂದ ದಂಡವೂ ಅಗ್ನಿಯಿಂದ ಮಹಾ ಶಕ್ತಿಯೂ ಅರುಣನಿಂದ ಕಾಲಸೂಚಕ ಶಕ್ತಿಯುಳ್ಳ ಕುಕ್ಕುಟವೂ (ಕೋಳಿಯೂ) ದೊರಕಿದವು. ಕೋಳಿ ಅವನ ಬಾವುಟದ ಚಿಹ್ನೆಯಾಯಿತು. ನವಿಲು ವಾಹನವಾಯಿತು.

ಅನಂತರ ಶಿವನು ತಾರಕನ ವಧೆಗಾಗಿ ಕಾರ್ತಿಕೇಯನನ್ನು ದೇವತೆಗಳೊಂದಿಗೆ ಕಳುಹಿಸಿಕೊಟ್ಟನು. ಅವರೆಲ್ಲರೂ ಕೈಲಾಸದಿಂದ ಹೊರಟರು. ತ್ವಷ್ಟನೆಂಬ ದೇವಶಿಲ್ಪಿ ರಜತಾದ್ರಿಯ ಸಮೀಪದಲ್ಲಿ ಕಾರ್ತಿಕೇಯನಿಗಾಗಿ ಒಂದು ನಗರವನ್ನೂ ಅಲ್ಲಿ ಅರಮನೆಯನ್ನೂ ಆ ಅರಮನೆಯಲ್ಲಿ ಒಂದು ಸಿಂಹಾಸನವುಳ್ಳ ಸಭಾಭವನವನ್ನೂ ನಿರ್ಮಿಸಿದ್ದನು. ಕಾರ್ತಿಕೇಯನನ್ನು ಮಹಾವಿಷ್ಣು ಆ ಸಿಂಹಾಸನದಲ್ಲಿ ಕುಳ್ಳಿರಿಸಿ, ಉತ್ಸವವನ್ನು ಮಾಡಿ ಬ್ರಹ್ಮಾಂಡದ ಒಡೆತನವನ್ನು ಅವನಿಗೆ ಕೊಟ್ಟನು. ಕುಮಾರನು ಈಗ ಬ್ರಹ್ಮಾಂಡ ಪಾಲಕನಾದನು.

ತಾರಕಾಸುರನಿಗೆ ಎಚ್ಚರಿಕೆ

ತಾರಕನ ಸಂಹಾರಕ್ಕಾಗಿ ಸೇನಾನಿಯಾದ ಕಾರ್ತಿಕೇಯನ ಸುತ್ತಲೂ ದೇವತೆಗಳ ಮಹಾಸೈನ್ಯ ಸಿದ್ಧವಾಯಿತು. ಯುದ್ದವೀರರ ಜಯಘೋಷಗಳೂ ರಣವಾದ್ಯಗಳ ಸ್ವರವೂ ಮಾರ್ದನಿ ಬೀರಿದವು.

ಶತ್ರುವಿನೊಡನೆ ಯುದ್ಧವನ್ನು ಘೋಷಿಸುವ ಮೊದಲು ನೀತಿ ಹೇಳಿ ನೋಡುವುದು ಶಿಷ್ಟ ಸಂಪ್ರದಾಯ. ಅದರಂತೆ ಒಬ್ಬ ರಾಜದೂತನನ್ನು ತಾರಕನ ಬಳಿಗೆ ಕಳುಹಿಸಿದನು. ಆ ದೂತನು ತಾರಕನೊಡನೆ ಹೀಗೆಂದನು:

‘‘ಎಲೈ, ನೀನು ಲೋಕಕ್ಕೆ ಬಹಳ ಅನ್ಯಾಯ ಮಾಡಿದ್ದಿ. ಮೂರು ಲೋಕದೊಡೆಯನಾದ ಇಂದ್ರನು ಈಗ ನಿನ್ನನ್ನು ಕೊಲ್ಲಲು ಬರಲಿದ್ದಾನೆ. ನಿನಗೆ ಬದುಕುವ ಆಸೆಯಿದ್ದರೆ, ಶರಣು ಹೋಗು. ಇಲ್ಲವಾದರೆ ಯುದ್ಧಕ್ಕೆ ಅಣಿಯಾಗು.’’

ತಾರಕನಿಗೆ ಬಹಳ ಸಿಟ್ಟು ಬಂದಿತು. ‘‘ಮೂರ್ಖ, ತೊಲಗಾಚೆ’’ ಎಂದು ಬೈದು ಆ ದೂತನನ್ನು ಓಡಿಸಿದನು.

ಶಿವನ ಮಗ ಬಂದನೇ!

ಆದರೆ ದೂತನು ಬಂದು ತನ್ನನ್ನು ಕೆಣಕಿದುದು ಅವನಿಗೆ ಆಶ್ಚರ್ಯವಾಯಿತು. ತನ್ನಲ್ಲೆ ಹೀಗೆ ಯೋಚಿಸಿದ:

‘ಈ ಇಂದ್ರನ ಪೌರುಷವನ್ನು ಹಲವು ಬಾರಿ ಕಂಡಿದ್ದೇನೆ. ನನ್ನ ಪೆಟ್ಟು ತಿಂದು ಬಿದ್ದು, ಮಣ್ಣುಕಚ್ಚಿ, ಅವನು ಓಡಿದ ನೆಲದಲ್ಲಿ ಹುಲ್ಲು ಹುಟ್ಟದು. ಮುತ್ತಜ್ಜನಾದ ಬ್ರಹ್ಮನ ಮಾತಿಗಾಗಿ ಕನಿಕರದಿಂದ ದೇವಲೋಕವನ್ನು ಅವನಿಗೆ ಬಿಟ್ಟಿದ್ದೆ. ಈಗ ಅವನಿಗೆ ಗರ್ವ ಬಂತೆ?

‘ಇಂದ್ರನಿಗೆ ಈಗ ಧೈರ್ಯ ಹೇಗೆ ಬಂತು? ಈಚೆಗೆ ನಾನು ಹಲವು ಅಪಶಕುನಗಳನ್ನು ಕಂಡಿದ್ದೇನೆ- ಎಡಗಣ್ಣು ಹಾರುತ್ತಿತ್ತು. ಆಕಾಶದಲ್ಲಿ ಧೂಳು, ದುಷ್ಟ ಪ್ರಾಣಿಗಳ ವಿಕಾರವಾದ ಕೂಗು, ರಕ್ತದ ಮಳೆ- ಇಂತಹ ದುಶ್ಶಕುನಗಳನ್ನು ಕಂಡಿದ್ದೇನೆ. ಶಿವನಿಗೆ ಮಗನು ಹುಟ್ಟಿರಬೇಕು. ಆದುದರಿಂದಲೇ ಇಂದ್ರನಿಗೂ ಇಷ್ಟು ಧೈರ್ಯ ಬಂದಿದೆ.’

ಹೀಗೆ ಯೋಚಿಸುತ್ತ ತಾರಕಾಸುರನು ತನ್ನ ಅರಮನೆಯ  ಉಪ್ಪರಿಗೆಯೇರಿ ನಗರದ ದಿಗಂತದವರೆಗೆ ಸುತ್ತಲೂ ನೋಡಿದನು. ಆಗ ಮುಗಿಲು ಮೊಳಗಿದಂತೆ ದೇವಸೈನ್ಯದ ಜಯಕಾರ ಕೇಳಿಸಿತು. ಅನಕ, ಪಣವ, ಭೇರಿ, ಕಹಳೆ, ಕೊಂಬು ಮುಂತಾದ ರಣವಾದ್ಯ ಘೋಷದೊಡನೆ ದೊಡ್ಡ ಚತುರಂಗಸೈನ್ಯ ತನ್ನ ಮೇಲೆ ಯುದ್ಧಕ್ಕೆ ಬರುವುದು ಕಾಣಿಸಿತು. ಅದರ ನಡುವೆ ಕುಕ್ಕುಟ (ಕೋಳಿ) ಚಿಹ್ನೆಯ ಕೇಸರಿ ಬಣ್ಣದ ಧ್ವಜದಿಂದ, ಛತ್ರ ಚಾಮರಗಳಿಂದ ಚೆಲುವಾದ ರಥದಲ್ಲಿ ಆಯುಧಗಳನ್ನು ಹಿಡಿದುಕೊಂಡು ವೀರ ಕಾರ್ತಿಕೇಯನೂ ಕಾಣಿಸಿದನು.

ಅವನು ಶಿವನ ಮಗ ಎಂದು ತಾರಕನಿಗೆ ಸ್ಪಷ್ಟವಾಯಿತು. ತಾನು ಬ್ರಹ್ಮನಿಗೆ ಕೇಳಿ ಪಡೆದಿದ್ದ ವರದ ನೆನಪಾಯಿತು. ತನಗೆ ಮರಣವಾಗುವುದೆಂಬುದನ್ನು ಯೋಚಿಸಿ ತಾರಕನು ಸ್ವಲ್ಪ ಅಧೀರನಾದನು. ಆದರೂ ತನ್ನ ಬೆಂಬಲಿಗರ ಮುಂದೆ ಆತಂಕವನ್ನು ತೋರಿಸದೆ ಧೈರ್ಯವನ್ನು ನಟಿಸಿದನು. ತನ್ನ ಸೈನ್ಯದ ಅಧಿಕಾರಿಗಳನ್ನು ಬರಮಾಡಿ ಯುದ್ಧಕ್ಕೆ ಸಿದ್ಧತೆಯನ್ನು ಮಾಡಲು ಅಪ್ಪಣೆ ಮಾಡಿದನು. ರಾಕ್ಷಸರ ಸೈನ್ಯ ಭೋರ್ಗರೆಯುವ ಸಮುದ್ರದ ಅಲೆಗಳಂತೆ ಉತ್ಸಾಹದಿಂದ ಮುಂದಕ್ಕೆ ಸಾಗಿತು.

ತಾರಕನನ್ನು ತಡೆಯುವವರು ಯಾರು?

ದೇವತೆಗಳೂ ರಾಕ್ಷಸರೂ ತಮ್ಮ ಸೈನ್ಯಗಳನ್ನು ವ್ಯೂಹಗಳಾಗಿ ನಿಲ್ಲಿಸಿ, ಯುದ್ಧಕ್ಕೆ ಸಿದ್ಧರಾದರು. ಯುದ್ಧ ಪ್ರಾರಂಭವಾಯಿತು. ಕುಂತ, ಶೂಲ, ಖಡ್ಗ, ಸುರಿಗೆ, ಪಾಶ, ಪರಶು, ಬಾಣ, ಗದೆ-ಮುಂತಾದ ಆಯುಧಗಳಿಂದ ಯುದ್ಧ ನಡೆಯಿತು. ದ್ವಂದ್ವಯುದ್ಧ, ಮಲ್ಲಯುದ್ಧ, ತುಮುಲ ಯುದ್ಧ, ವ್ಯೂಹಯುದ್ಧಗಳಾದವು. ರಣರಂಗದಲ್ಲಿ ಸಾವಿರಾರು ಮಂದಿ ಗಾಯಗೊಂಡು ಬಿದ್ದರು. ಸಾವಿರಾರು ಮಂದಿ ಸತ್ತರು. ರಕ್ತದ ಕಾಲುವೆ ಹರಿಯಿತು.

ಇಂದ್ರನಿಗೂ ತಾರಕನಿಗೂ ಯುದ್ಧವಾಗಿ ಇಂದ್ರನು ಸೋತನು. ವೀರಭದ್ರನಿಗೂ ತಾರಕನಿಗೂ ಬಹಳ ಹೊತ್ತು ಕಾದಾಟ ನಡೆಯಿತು. ಈ ಬಾರಿ ಗೆದ್ದು ಬಿಡಬೇಕೆಂದು ಮಹಾವಿಷ್ಣು ತಾರಕನೊಡನೆ ಕಾದಿದನು. ರಕ್ಕಸನ ಶಕ್ತ್ಯಾಯುಧದಿಂದ ವಿಷ್ಣು ಮೂರ್ಛೆಗೊಂಡನು. ಕ್ಷಣದಲ್ಲಿಯೇ ಎದ್ದು ಸಿಂಹನಾದ ಮಾಡಿ ಚಕ್ರಾಯುಧದಿಂದ ಹೊಡೆದು ತಾರಕನನ್ನು ಬೀಳಿಸಿದನು. ಆದರೆ ತಾರಕನು ಎದ್ದು ಅವನೊಡನೆ ಸಮಸಮವಾಗಿ ಯುದ್ಧ ಮಾಡಿದನು.

ತಾರಕನ ವಧೆ

ಬ್ರಹ್ಮನು ಈ ಘೋರ ಕಾಳಗವನ್ನು ನೋಡುತ್ತಿದ್ದನು. ದೇವತೆಗಳ ಸೋಲನ್ನೂ ನೋವನ್ನೂ ಕಂಡು ಕಾರ್ತಿಕೇಯನಿಗೆ ಹೇಳಿದನು:

‘‘ಎಲೈ ಶಿವಕುಮಾರನೇ, ನಿನ್ನಿಂದಲ್ಲದೆ ತಾರಕ ಸಾಯನು. ಈಗಲೇ ನೀನು ಅವನನ್ನು ಹೊಡೆದು ಕೊಲ್ಲು.’’  ದೇವತೆಗಳೂ ಅವನನ್ನು ಪ್ರಾರ್ಥಿಸಿದರು.

ಕಾರ್ತಿಕೇಯನು ತಾನೇ ಈಗ ಯುದ್ಧಕ್ಕೆ ಇಳಿದನು. ಚಿಕ್ಕವನಾದರೂ ನಿರ್ಭಯನಾಗಿ, ಶತ್ರುಗಳಿಗೆ ಭಯಂಕರನಾಗಿ ಕಾಣಿಸಿದನು. ತಾರಕನಿಗೆ ಎದುರಾದನು. ತಾರಕನು ತನ್ನ ಖಡ್ಗವನ್ನು ಝಳಪಿಸುತ್ತಾ ದೇವತೆಗಳಿಗೆ ಹೀಗೆಂದನು:

‘‘ಎಲೈ ಹೇಡಿಗಳೇ, ಈ ಮಗುವನ್ನು ನನ್ನ ಎದುರಿಗೆ ನಿಲ್ಲಿಸಿದಿರಲ್ಲವೆ? ನಿಮಗೆ ನಾಚಿಕೆಯಿಲ್ಲವೆ? ನಿಮ್ಮ ಪರಾಕ್ರಮ ಎಲ್ಲಿ ಹೋಯಿತು? ಇಂದ್ರ-ವಿಷ್ಣು-ಶಿವ ಅಂಥವರಿಗೂ ತಿಳಿವಳಿಕೆ ಇಲ್ಲವಾಯಿತೆ? ಅವರು ತಮ್ಮಿಂದ ಏನೂ ಆಗದೆ, ಹುಲಿಯ ಬಾಯಿಗೆ ಕರುವನ್ನು ತಳ್ಳುವಂತೆ ಈ ಮಗುವನ್ನು ನನ್ನೊಡನೆ ಕಾಳಗಕ್ಕೆ ಕಳುಹಿಸಿದ್ದಾರೆ! ಈ ಬಾಲಕನನ್ನು ನಾನು ಕೊಲ್ಲುವೆನು, ಕೊಂದ ದೋಷ ಅವರಿಗಿರಲಿ!’’

ಅನಂತರ ತಾರಕನು ಕಾರ್ತಿಕೇಯನಿಗೆ-

‘‘ಎಲೈ ಬಾಲಕನೇ, ನೀನಿನ್ನೂ ಎಳೆಯ ಮಗು. ನಿನಗೆ ಕಾಳಗದ ಚಪಲತೆ ಇದ್ದರೆ, ನಿನ್ನ ಒಡನಾಡಿ ಮಕ್ಕಳೊಡನೆ ಚೆಂಡಾಟದಲ್ಲಿಯೋ ಗುದ್ದಾಟದಲ್ಲಿಯೋ ತೋರಿಸು; ಹಿಂದಿರುಗು. ಬೇಕಿದ್ದರೆ ನಿನ್ನ ಅಪ್ಪನನ್ನು ಯುದ್ಧಕ್ಕೆ ಬರಹೇಳು’’ ಎಂದನು.

ಕಾರ್ತಿಕೇಯನು ಅವನಿಗೆ ಉತ್ತರ ಕೊಟ್ಟನು: ‘‘ಎಲೈ ತಾರಕನೇ, ನಾನು ಮಗು ನಿಜ. ಆದರೆ ನನ್ನ ಶೌರ್ಯಕ್ಕೆ ಮಗುತನವಿಲ್ಲ. ಬಾಲಸೂರ್ಯನ ಮುಂದೆ ಕತ್ತಲೆ ಇರಬಲ್ಲುದೆ? ಕಿಡಿ ಚಿಕ್ಕದಾದರೂ ಕಾಡನ್ನು ಸುಡದೆ? ಪ್ರಣವ ಮಂತ್ರಕ್ಕೆ ಒಂದೇ ಅಕ್ಷರವಾದರೂ ಅದರ ಮಹಿಮೆ ಸಾಮಾನ್ಯವೆ? ಶಸ್ತ್ರಾಸ್ತ್ರಗಳಿಂದ ರಣರಂಗದಲ್ಲಿ ಕಾದುವುದು ಶೂರರ ಲಕ್ಷಣ. ಅದನ್ನು ಬಿಟ್ಟು ಹುಚ್ಚನಂತೆ ಏನೇನೋ ಮಾತಾಡುವಿಯಲ್ಲಾ! ಸಾಕು ಮಾಡು ಮಾತನ್ನ.’’

ಅವರಿಬ್ಬರೊಳಗೆ ಘೋರ ಯುದ್ಧ ನಡೆಯಿತು. ಇಬ್ಬರೂ ಶಕ್ತ್ಯಾಯುಧ ಹಿಡಿದಿದ್ದರು. ತಾರಕನ ಹೊಡೆತಕ್ಕೆ ಒಮ್ಮೆ ಷಣ್ಮುಖನು ಬಿದ್ದನು. ಒಡನೆ ನೊಂದ ಸಿಂಹದಂತೆ ಎದ್ದು ತಾರಕನನ್ನು ಹೊಡೆದು ಉರುಳಿಸಿದನು. ಆದರೆ ಮತ್ತೆ ತಾರಕಾಸುರನು ಎದ್ದುದನ್ನು ನೋಡಿ ದೇವತೆಗಳು ಭಯಪಟ್ಟರು.

ಅವರ ಯುದ್ಧದ ವೇಳೆಗೆ ಗಾಳಿ ಕಡಮೆಯಾಯಿತು. ನೆಲ ನಡುಗಿತು. ಸೂರ್ಯನು ಕಂದಿದನು. ಹಿಮವಂತ ಮೊದಲಾದ ಗಿರಿರಾಜರುಗಳು ಕಾರ್ತಿಕೇಯನನ್ನು ನೋಡಲು ಬಂದರು-ಅವರೆಲ್ಲ ಹೆದರಿದರು. ಕುಮಾರನು ಅವರಿಗೆ ಧೈರ್ಯವಿತ್ತನು. ತಂದೆತಾಯಿಗಳಾದ ಶಿವ-ಪಾರ್ವತಿಯರನ್ನು ಮನಸ್ಸಿನಲ್ಲಿ ವಂದಿಸಿದನು. ಎಲ್ಲರೂ ನೋಡುತ್ತಿದ್ದಂತೆಯೇ ತನ್ನ ಪುಟ್ಟ ಕೈಗಳಿಗೆ ಎಲ್ಲ ಶಕ್ತಿಯನ್ನು ಕೂಡಿಸಿ, ತ್ರಿಶೂಲವನ್ನೆತ್ತಿ ತಾರಕನ ಎದೆಗೆ ತಿವಿದನು. ಬುಗ್ಗೆಯಂತೆ ರಕ್ತ ಚಿಮ್ಮಿತು. ಎದೆ ಸೀಳಿತು. ತಾರಕಾಸುರನು ಕುಸಿದು ಸತ್ತು ಬಿದ್ದನು.

ತಾರಕನ ಕಡೆಯವರೂ ನಾಶವಾದರು

ಈಗ ದೇವತೆಗಳಿಗೆ ಶೌರ್ಯ ಉಕ್ಕಿತು. ಅಲ್ಲಿ ಉಳಿದ ರಾಕ್ಷಸರನ್ನು ಅವರು ನಾಶಮಾಡಿದರು. ಕೆಲವರು ರಾಕ್ಷಸರು ಹೆದರಿ ಪಲಾಯನ ಮಾಡಿದರು. ಕೆಲವರು ‘ಕಾಪಾಡಿ, ಕಾಪಾಡಿ’ ಎಂದು ಬೇಡಿಕೊಂಡರು.

ದೇವತೆಗಳು ಸಂತೋಷದಿಂದ ಹೂವಿನ ಮಳೆ ಸುರಿಸಿದರು. ಕುಮಾರನು ತಾರಕನನ್ನು ಕೊಂದನೆಂಬುದನ್ನು ಕೇಳಿ ಶಿವನು ಪಾರ್ವತಿಯೊಡನೆ ಅಲ್ಲಿಗೆ ಬಂದನು. ಇಬ್ಬರೂ ಕುಮಾರನನ್ನು ಮುದ್ದಿಸಿ, ಹರಸಿದರು. ದೇವತಾಸ್ತ್ರೀಯರು ಬಂದು ವಿಜಯಾರತಿಯನ್ನು ಬೆಳಗಿದರು. ಗೀತವಾದ್ಯಗಳಾದವು. ಮುನಿಗಳು ವೇದಘೋಷದಿಂದ ಕೊಂಡಾಡಿದರು.

ತಾರಕನ ಕಡೆಯವರಾದ ಕ್ರೌಂಚಾಸುರ-ಬಾಣಾಸುರರು ಕಾರ್ತಿಕೇಯನಿಗೆ ಹೆದರಿ ಓಡಿದವರು ಪರ್ವತದ ಪ್ರಾಂತಗಳಲ್ಲಿ ತೊಂದರೆ ಕೊಡುವ ಸಂಗತಿ ಕಾರ್ತಿಕೇಯನಿಗೆ ತಿಳಿಯಿತು. ಅವನು ತಾನಿದ್ದಲ್ಲಿಂದಲೇ ಬಾಣ ಬಿಟ್ಟು ಅವರನ್ನು ಕೊಂದನು. ಪ್ರಲಂಬನೆಂಬ ಇನ್ನೊಬ್ಬನು ಆದಿಶೇಷನ ಮಗನಾದ ಕುಮುದನನ್ನು ಪೀಡಿಸುತ್ತಿದ್ದನು. ಕುಮುದನು ಅಲ್ಲಿಂದಲೇ ಕಾರ್ತಿಕೇಯನಿಗೆ ಮೊರೆಯಿಟ್ಟನು. ಕಾರ್ತಿಕೇಯನು ಶಿವನನ್ನು ಧ್ಯಾನಿಸಿ ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಅದು ಪ್ರಲಂಬನನ್ನೂ ಅವನ ಇಡೀ ಸೈನ್ಯವನ್ನೂ ನಾಶಮಾಡಿ ಬಂದು ಕಾರ್ತಿಕೇಯನನ್ನು ಸೇರಿತು.

ಹೀಗೆ ಕಾರ್ತಿಕೇಯನು ಲೋಕಕಂಟಕರನ್ನು ನಾಶ ಮಾಡಿ ಸತ್ಪುರುಷರ ಮೆಚ್ಚಿಕೆಗೆ ಪಾತ್ರನಾದರನು. ದೇವತೆಗಳನ್ನು ಅವರವರ ಸ್ಥಾನದಲ್ಲಿ ನೆಮ್ಮದಿಯಿಂದ ಇರುವಂತೆ ಮಾಡಿದನು. ಕೈಲಾಸದ ಬಳಿಯ ತನ್ನ ನಗರವನ್ನು ಸೇರಿದನು.

ಮತ್ತೊಂದು ಪೀಡೆ

ತಾರಕಾಸುರನ ವಧೆಯಿಂದ ದೇವತೆಗಳಿಗೆ ತೊಂದರೆ ತಪ್ಪಿದರೂ ಹೆಚ್ಚುಕಾಲ ಸುಖಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗಲಿಲ್ಲ.

ತಾರಕನಂತೆಯೇ ಬಲಾಢ್ಯನಾದ ಶೂರಪದ್ಮನೆಂಬ ರಾಕ್ಷಸ ಇದ್ದನಲ್ಲವೆ? ವೀರಮಹೇಂದ್ರ ಎಂಬ ಸ್ಥಳದಲ್ಲಿ ಅವನ ವಾಸ. ವಿಶ್ವಕರ್ಮನ ಮಗಳಾದ ಪದ್ಮಕೋಮಲೆ ಅವನ ಹೆಂಡತಿ. ಅವಳಲ್ಲಿ ಭಾನುಕೋಪ, ಅಗ್ನಿಮುಖ, ಹಿರಣ್ಯಕ, ವಜ್ರಬಾಹು ಮುಂತಾದ ಶೂರರೂ ದುಷ್ಟರೂ ಆದ ಮಕ್ಕಳಿದ್ದರು. ಆ ಮಕ್ಕಳಿಗೆ ದೇವ-ದಾನವ- ಗಂಧರ್ವ-ಸಿದ್ಧ-ವಿದ್ಯಾಧರ-ಮಾನವ-ನಾಗಕನ್ಯೆಯರನ್ನು ತಂದು ಮದುವೆ ಮಾಡಿಸಿ ರಾಕ್ಷಸ ಸಂತತಿಯನ್ನು ಬಹಳವಾಗಿ ಬೆಳೆಸಿದನು. ಅವರೆಲ್ಲ ಸಜ್ಜನರಿಗೆ ಹಿಂಸೆ ಕೊಡುತ್ತ ಅನ್ಯಾಯ, ಅತ್ಯಾಚಾರ ಮಾಡುತ್ತ ಅಧರ್ಮವನ್ನು ಬೆಳೆಸುತ್ತಿದ್ದರು.

ತಾರಕಾಸುರನು ಹೋದ, ಜನರಿಗೆ ಹಿಂಸೆ ತಪ್ಪಿತು ಎಂದು ಸಂತೋಷ ಪಡುವಾಗಲೇ ಶೂರಪದ್ಮ ಮತ್ತು ಅವನ ಸಂತತಿಯವರ ಹಿಂಸೆ ಪ್ರಾರಂಭವಾಯಿತು. ಇವರನ್ನು ತಡೆಗಟ್ಟುವವರು ಯಾರು? ತಾರಕಾಸುರನನ್ನು ತಡೆದ ಕಾರ್ತಿಕೇಯನೇ ಇವರ ಪೀಡೆಯನ್ನು ತಡೆಯಬೇಕು ಎಂದು ನಾರದ ಮಹರ್ಷಿ ಯೋಚಿಸಿದ.

ಒಮ್ಮೆ ನಾರದನು ವೀಣಾನಾದದೊಡನೆ ಪರಮಾತ್ಮನ ಗುಣಗಾನ ಮಾಡುತ್ತ ವೀರಮಹೇಂದ್ರ ನಗರಕ್ಕೆ ಬಂದನು.

‘‘ಇಂದ್ರನ ಮಡದಿಯಾದ ಶಚಿದೇವಿಯೆಂದರೆ ಸ್ತ್ರೀ ರತ್ನ. ಅವಳನ್ನು ನೀನು ತಂದು ಇಟ್ಟುಕೊಂಡರೆ, ಇಂದ್ರನು ನಿನ್ನ ಸೋದರನಾದ ತಾರಕನನ್ನು ಕಾರ್ತಿಕೇಯನಿಂದ ಕೊಲ್ಲಿಸಿದ ಸೇಡನ್ನು ತೀರಿಸಿದಂತೆ ಆಗುವುದು’’ ಎಂದು ನಾರದನು ಶೂರಪದ್ಮನಿಗೆ ಹೇಳಿಕೊಟ್ಟ.

ಹೀಗೇಕೆ ಮಾಡಿದ ನಾರದ ಮಹರ್ಷಿ?

ಕೆಟ್ಟ ರಾಕ್ಷಸರಿಗೆ ಒಳ್ಳೆಯ ನೀತಿ ಉಪದೇಶಿಸಿದರೆ ಫಲವಿಲ್ಲ. ಅಂತಹ ಕೆಟ್ಟವರನ್ನು ಮತ್ತೂ ಕೆರಳಿಸಿ ಅವರು ತಮ್ಮ ಅನ್ಯಾಯಗಳ ಫಲದಿಂದಲೇ ಅಳಿದು ಹೋಗುವಂತೆ  ಮಾಡುವುದು ನಾರದನು ಕೈಗೊಂಡ ನೀತಿ.

ರಾಕ್ಷಸ ಗುಣದ ಶೂರಪದ್ಮನಿಗೆ ಮುನಿಯ ಉಪದೇಶ ಅನುಗ್ರಹವೆಂದೇ ತೋರಿತು. ಅವನು ಶಚಿದೇವಿಯನ್ನು ತರಲು ಉದ್ಯುಕ್ತನಾದನು.

ಇಂದ್ರಲೋಕಕ್ಕೆ ದಾಳಿ

ಶೂರಪದ್ಮನು ರಾಕ್ಷಸ ಸೈನ್ಯ ತೆಗೆದುಕೊಂಡು ಇಂದ್ರ ಲೋಕಕ್ಕೆ ದಾಳಿಯಿಡಲು ನಿರ್ಣಯಿಸಿದನು. ಆಗ ಅವನ ಮಗ ಭಾನುಕೋಪನು ಬಂದನು. ‘‘ತಂದೆಯೇ, ನನಗೆ ಅಪ್ಪಣೆಕೊಡು. ನಾನು ಸೈನ್ಯದೊಂದಿಗೆ ದೇವಲೋಕಕ್ಕೆ ಹೋಗುವೆನು. ಎದುರಿಸಿದ ದೇವತೆಗಳನ್ನು ಬಗ್ಗುಬಡಿದು ಶಚಿದೇವಿಯನ್ನು ತರುವೆನು’’  ಎಂದು ಶೌರ್ಯದಿಂದ ನುಡಿದನು. ಶೂರಪದ್ಮನು ಅನುಮತಿ ಕೊಟ್ಟನು. ರಾಕ್ಷಸರ ಸೈನ್ಯ ದೇವಲೋಕಕ್ಕೆ ನುಗ್ಗಿತು.

ನಾರದಮುನಿ ಮುಂಚಿತವಾಗಿಯೇ ಇಂದ್ರನ ಬಳಿಗೆ ಬಂದನು. ಶೂರಪದ್ಮನು ಶಚಿಯನ್ನು ಬಯಸಿ ದೇವಲೋಕಕ್ಕೆ ದಾಳಿಯಿಡುವ ಸಂಗತಿಯನ್ನು ತಿಳಿಸಿದನು.

ದೇವೇಂದ್ರನಿಗೆ ಭಯವಾಯಿತು. ಹಿಂದೆ ಅವನು ತಾರಕಾಸುರನ ಶೌರ್ಯವನ್ನು ಕಂಡಿದ್ದನು. ಶೂರಪದ್ಮನು ಅವನಿಗಿಂತಲೂ ಬಲಾಢ್ಯನೆಂದು ಕೇಳಿದ್ದನು. ‘ಏನು ಮಾಡಲಿ?’ ಎಂದು ಗುರುವಾದ ಬೃಹಸ್ಪತಿಯೊಡನೆ ಯೋಚಿಸಿದನು. ಇಂದ್ರನು ಶಚಿದೇವಿಯನ್ನು ಕರೆದುಕೊಂಡು ಯಾರೂ ತಿಳಿಯದ ಹಾಗೆ ಭೂಲೋಕಕ್ಕೆ ಬಂದನು. ಚಿದಂಬರದ ಸಮೀಪ ಶ್ರೀಕಾಂತ ಎಂಬ ಕಾಡಿನಲ್ಲಿ ಶಿವನನ್ನು ಭಜಿಸುತ್ತ ಇದ್ದನು.

ಇತ್ತ ದೇವತೆಗಳು ತಮ್ಮ ದೊರೆಯಾದ ಇಂದ್ರನು ಇಲ್ಲದೆ, ಎಲ್ಲಿ ಹೋಗಿರುವನೆಂಬುದನ್ನೂ ತಿಳಿಯದೆ ಕಂಗೆಟ್ಟರು. ಬೃಹಸ್ಪತಿ ಅವರನ್ನು ಸಮಾಧಾನಪಡಿಸಿ, ಇಂದ್ರನ ಮಗನಾದ ಜಯಂತನಿಗೆ ದೇವತೆಗಳ ಒಡೆತನವನ್ನು ಕೊಟ್ಟನು. ಶೂರಪದ್ಮನನ್ನು ಎದುರಿಸಲು ದೇವತೆಗಳು ಸಿದ್ಧವಾಗುವಂತೆ ಸೂಚಿಸಿದನು.

ದೇವತೆಗಳಿಗೆ ಸೋಲು

ರಾಕ್ಷಸ ಸೈನ್ಯ ದೇವಲೋಕಕ್ಕೆ ಮುತ್ತಿಗೆ ಹಾಕಿತು. ರಕ್ಕಸರು ಮನೆಮನೆಗಳಿಗೆ ನುಗ್ಗಿದರು. ಹೆಂಗಸರನ್ನು ಹಿಡಿದು ಎಳೆದರು. ಅವರ ಆಭರಣಗಳನ್ನು ಕಿತ್ತರು. ಮಕ್ಕಳನ್ನು ನಿಷ್ಕರುಣೆಯಿಂದ ಕತ್ತರಿಸಿದರು. ‘ನಿಮ್ಮ ಇಂದ್ರನನ್ನು ತೋರಿಸು’  ಎನ್ನುತ್ತ ಸಿಕ್ಕಿದವರಿಗೆಲ್ಲ ಹೊಡೆದರು. ‘ಶಚಿ ಎಲ್ಲಿರುವಳು’  ಎನ್ನುತ್ತ ಬಲಾತ್ಕರಿಸಿದರು. ದೇವಲೋಕದ ಸುಂದರ ಉದ್ಯಾನಗಳನ್ನು ಹಾಳುಗೆಡವಿದರು. ಮನೆಗಳಿಗೆ ಬೆಂಕಿ ಹಚ್ಚಿದರು.

ದೇವತೆಗಳ ಸೈನ್ಯ ರಾಕ್ಷಸರನ್ನು ಎದುರಿಸಿತು. ಭಾನುಕ, ರೇಣುಕ ಮುಂತಾದ ಸೇನಾಪತಿಗಳು ಅವರೊಡನೆ ಕಾದಿ ಸೋತರು. ಜಯಂತನು ಬಂದು ಶೌರ್ಯದಿಂದ ಯುದ್ಧ ಮಾಡಿದನು. ಆದರೆ ಭಾನುಕೋಪನು ಅವನನ್ನು ಸೋಲಿಸಿ ಸೆರೆಹಿಡಿದನು. ದೇವೇಂದ್ರ-ಶಚಿ ಇಬ್ಬರನ್ನು ಸ್ವರ್ಗಲೋಕದಲ್ಲೆಲ್ಲಾ ಹುಡುಕಿದರೂ ಅವರು ಸಿಕ್ಕಲಿಲ್ಲ. ಭಾನುಕೋಪನು ದೇವಲೋಕದಿಂದ ಬಹಳ ಹೆಚ್ಚಿನ ಸಂಪತ್ತನ್ನು ಕೊಳ್ಳೆಹೊಡೆದು, ಅದನ್ನು ಸೆರೆಯಾಳುಗಳಾದ ದೇವತೆಗಳಿಂದ ಹೊರಿಸಿಕೊಂಡು ವೀರಮಹೇಂದ್ರ ನಗರಕ್ಕೆ ಹಿಂದೆರಳಿದನು.

ದೇವತೆಗಳಿಗೆ ಅಭಯ

ರಾಕ್ಷಸರು ದೇವಲೋಕದಲ್ಲಿ ಮಾಡಿದ ಹಾವಳಿಯನ್ನು ಬೃಹಸ್ಪತಿ ಮತ್ತು ದೇವತೆಗಳು ಶ್ರೀಕಾಶದ ವನಕ್ಕೆ ಬಂದು ಇಂದ್ರನಿಗೆ ತಿಳಿಸಿದರು. ಇಂದ್ರ, ಶಚಿ ಇಬ್ಬರೂ ಬಹಳ ದುಃಖಪಟ್ಟರು. ಇಂದ್ರನು ಶಚಿಯನ್ನು ಆ ವನದ ರಕ್ಷಕನಾದ ಶಾಸ್ತಾರನೆಂಬ ದೇವತೆಯ ರಕ್ಷಣೆಯಲ್ಲಿ ಬಿಟ್ಟು ಬೃಹಸ್ಪತಿಯೊಂದಿಗೆ ದೇವತೆಗಳನ್ನು ಕೂಡಿಕೊಂಡು ಬ್ರಹ್ಮನ ಬಳಿಗೆ ಹೋದನು. ಎಲ್ಲರೂ ಶಿವನ ಮೊರೆಹೊಕ್ಕರು.

‘‘ನೀವೆಲ್ಲ ಈಗ ರಜತಾದ್ರಿಯ ಬಳಿಯಿರುವ ಕಾಕಾಚಲದಲ್ಲಿ ಸುರಕ್ಷಿತವಾಗಿ ಇದ್ದುಕೊಳ್ಳಿ. ಶೂರಪದ್ಮ ಮುಂತಾದ ದುಷ್ಟರನ್ನು ಕಾರ್ತಿಕೇಯನ ಮೂಲಕ ಕೊಲ್ಲಿಸಿ, ನಿಮ್ಮ ಕಷ್ಟವನ್ನು ಪರಿಹರಿಸುವೆನು’  ಎಂದು ಶಿವನು ಅಭಯ ಕೊಟ್ಟನು. ದೇವತೆಗಳೆಲ್ಲ ಅಲ್ಲಿ ನಿಂತರು.

ಅಜಮುಖಿಯ ಕುಹಕ

ಶೂರಪದ್ಮನ ತಂಗಿ ಅಜಮುಖಿ. ಶಚಿದೇವಿಯು ಎಲ್ಲಿದ್ದಾಳೆ ಎಂದು ತಾನು ಕಂಡುಹಿಡಿಯುತ್ತೇನೆ ಎಂದು ಅಣ್ಣನಿಗೆ ಹೇಳಿ ಅವನ ಅಪ್ಪಣೆ ಪಡೆದು ಹೊರಟಳು. ಬುದ್ಧಿವಂತಿಕೆಯಿಂದ ಕಂಡೂ ಹಿಡಿದಳು. ದೇವತೆಯಂತೆ ವೇಷ ಮರೆಸಿಕೊಂಡು ಶಚಿದೇವಿಯನ್ನು ಮಾತನಾಡಿಸಿದಳು. ‘ನನ್ನ ಜೊತೆಗೆ ಬಾ, ಶೂರಪದ್ಮನ ಅರಮನೆಗೆ ಹೋಗೋಣ, ಅಲ್ಲಿ ಸುಖವಾಗಿರು’ ಎಂದು ಹೇಳಿದಳು. ಶಚಿದೇವಿ ಒಪ್ಪಲಿಲ್ಲ. ಅಜಮುಖಿ ಅವಳನ್ನು ಹೆದರಿಸಿದಳು. ಶಚಿದೇವಿಯನ್ನು ಕಾಯುತ್ತಿದ್ದವರು ಅಜಮುಖಿಯನ್ನು ಹಿಡಿದು ಅವಳ ಕೈಗಳನ್ನು ಕತ್ತರಿಸಿದರು. ಅವಳು ಅರಚಿಕೊಂಡು ಅಬ್ಬರಿಸುತ್ತ ಅಣ್ಣನ ಬಳಿಗೆ ಓಡಿ ಹೋದಳು.

ಇಂದ್ರನು ಶಚಿದೇವಿಯನ್ನು ಕಾಕಾಚಲಕ್ಕೆ ಕರೆದುಕೊಂಡು ಹೋಗಿ ಬಿಟ್ಟನು.

ತಂಗಿಯ ದುರವಸ್ಥೆಯನ್ನು ನೋಡಿ ಶೂರಪದ್ಮನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ‘ಈ ದೇವತೆಗಳಿಗೆ ಬುದ್ಧಿ ಕಲಿಸುತ್ತೇನೆ, ನಿನಗಾದ ಅಪಮಾನಕ್ಕೆ ಅವರಿಗೆ ಶಾಸ್ತಿ ಮಾಡುತ್ತೇನೆ’  ಎಂದು ಗುಡುಗಿದನು. ದೇವತೆಗಳನ್ನು ಹಿಡಿದು ಹೊಡೆದನು, ಸೆರೆಮನೆಗೆ ನೂಕಿದನು. ಶ್ರೀಕಾಶವನಕ್ಕೆ ಬಂದು ಇಂದ್ರನನ್ನೂ ಶಚಿದೇವಿಯನ್ನೂ ಹುಡುಕಿದನು. ಅವರು ಕಾಣಲಿಲ್ಲ. ಕೋಪದಿಂದ ಶ್ರೀಕಾಶವನವನ್ನೆಲ್ಲ ಹಾಳುಮಾಡಿದನು.

ಶಿವನ ಆಜ್ಞೆ-ಮುತ್ತಿಗೆ

ದೇವತೆಗಳಿಗೆ ಶಿವನು ಅಭಯ ಕೊಟ್ಟನಂತರ ಕಾರ್ತಿಕೇಯನನ್ನು ಕರೆಸಿದನು. ಲೋಕದಲ್ಲಿ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿ, ರಾಕ್ಷಸರನ್ನೆಲ್ಲ ನಾಶಮಾಡುವಂತೆ ಆಜ್ಞೆಮಾಡಿದನು. ಕಾರ್ತಿಕೇಯನು ತಂದೆಯ ಆಜ್ಞೆಯನ್ನು ಶಿರಸಾವಹಿಸಿದನು. ತಾಯಿಯ ಆಶೀರ್ವಾದವನ್ನೂ ಪಡೆದು ದೇವತೆಗಳ ಸೈನ್ಯವನ್ನು ಕೂಡಿಸಿದನು. ಶೂರಪದ್ಮನ ವೀರಮಹೇಂದ್ರ ನಗರವನ್ನು ಮುತ್ತಲು ಸಿದ್ಧತೆಯಾಯಿತು.

ಕಾರ್ತಿಕೇಯನ ಸೇನೆಯ ವೀರರಲ್ಲಿ ಒಬ್ಬನಾದ ವೀರಬಾಹು ಶೂರಪದ್ಮನಿಗೆ ನೀತಿಯನ್ನು ಸಾರುವುದಕ್ಕಾಗಿ ಹೋದನು. ತಡೆದ ರಕ್ಕಸರನ್ನು ಉರುಳಿಸಿ ಶೂರಪದ್ಮನ ಆಸ್ಥಾನಕ್ಕೆ ಬಂದನು.

‘‘ಎಲೈ ರಾಕ್ಷಸರಾಜನೇ, ತಾರಕನನ್ನು ಕೊಂದಿರುವ ಕಾರ್ತಿಕೇಯನ ಮುಂದೆ ನಿನ್ನ ಶೌರ್ಯ ನಡೆಯದು. ಎದುರಾದರೆ ನಿನ್ನನ್ನೇ ಅವನು ಕೊಲ್ಲುವನು. ಒಳ್ಳೆಯ ಮಾತಿನಿಂದ ದೇವತೆಗಳನ್ನು ಬಿಟ್ಟುಕೊಡು. ಲೋಕಕ್ಕೆ ಅನ್ಯಾಯ ಮಾಡದಿರು. ಅಧರ್ಮದಿಂದ ನಡೆಯುವುದಿಲ್ಲವೆಂದು ಭರವಸೆಕೊಟ್ಟು ಶರಣಾಗತನಾಗು’’ ಎಂದನು.

ದುಷ್ಟರು ನೀತಿಯಿಂದ ಮೃದುವಾಗುವರೆ? ಶೂರಪದ್ಮನು ಕೆರಳಿ ಕೆಂಡವಾದನು. ವೀರಬಾಹುವನ್ನು ಬಡಿದು ಕೊಲ್ಲಲು ತನ್ನ ಒಂದು ಸಾವಿರ ಸಂಖ್ಯೆಯ ಮೀಸಲು ಪಡೆಗೆ ಆಜ್ಞೆ ಮಾಡಿದನು. ವೀರಬಾಹು ಅವರನ್ನೆಲ್ಲ ಕೊಂದು, ಶೌರ್ಯವನ್ನು ಮೆರೆಸಿ, ಹಿಂದೆರಳಿದನು. ‘ನಾಳೆ ಶೂರಪದ್ಮನನ್ನು ನಾನೇ ಕೊಲ್ಲುವೆನು’ ಎಂದು ಕಾರ್ತಿಕೇಯನು ನುಡಿದನು.

ರಾತ್ರಿ ಕಳೆಯಿತು. ಪ್ರಾತಃಕಾಲದಲ್ಲಿ ಕಾರ್ತಿಕೇಯನು ದೇವತೆಗಳ ಮಹಾಸೈನ್ಯದೊಂದಿಗೆ ದಂಡಯಾತ್ರೆ ಕೈಗೊಂಡನು. ದೇವ ಸೈನ್ಯವು ವೀರಮಹೇಂದ್ರ ನಗರವನ್ನು ಮುತ್ತಿತು.

ಯುದ್ಧ

ಶೂರಪದ್ಮನು ಒಡ್ಡೋಲಗದಲ್ಲಿದ್ದನು. ಆಗ ದೂತನೊಬ್ಬನು ಬಂದು ಕಾರ್ತಿಕೇಯನ ಸೇನೆ ನಗರಕ್ಕೆ ಮುತ್ತಿಗೆ ಹಾಕಿದೆಯೆಂದು ತಿಳಿಸಿದನು.

‘‘ಹಸಿದು ಗರ್ಜಿಸುವ ಸಿಂಹದ ಬಾಯಿಗೆ ಬೀಳಲು ಕುರಿಹಿಂಡು ಬಂತೇ? ಒಳಿತಾಯಿತು. ಹೊರಡಿರಿ ಯುದ್ಧಕ್ಕೆ’’ ಎಂದು ಶೂರಪದ್ಮನು ಹೇಳಿದ್ದೇ ತಡ, ಅವನ ತಮ್ಮಂದಿರು, ಮಕ್ಕಳು ಮತ್ತು ಇತರ ರಾಕ್ಷಸವೀರರು ಎದ್ದುನಿಂತರು.

‘‘ನಾಯಿಗಳನ್ನು ಗೆಲ್ಲಲು ಆನೆಯೇಕೆ? ಆ ದೇವತೆಗಳ್ನು ಕೆಡಹಲು ನಾನು ಸಾಕು, ನಾನೇ ಸಾಕು’’- ಎಂದು ಒಬ್ಬೊಬ್ಬರಾಗಿ ಶೌರ್ಯದ ಮಾತುಗಳನ್ನಾಡಿದರು. ಶೂರಪದ್ಮನು ಅವರಿಗೆ ಅಪ್ಪಣೆಕೊಟ್ಟು ಯುದ್ಧಕ್ಕೆ ಕಳುಹಿಸಿದನು.

ಭಾನುಕೋಪನು ಮುಂದಾಳಾಗಿ ಯುದ್ಧಕ್ಕೆ ಬಂದನು. ಅವನಿಗೆ ಎದುರಾಗಲು ಷಣ್ಮುಖನು ವೀರಬಾಹುವನ್ನು ನೇಮಿಸಿದನು. ಯುದ್ಧ ತೀವ್ರವಾಗಿ ನಡೆಯಿತು. ಮಂತ್ರಾಸ್ತ್ರಗಳು ಪ್ರಯೋಗಗೊಂಡವು. ಕೊನೆಗೆ ವೀರಬಾಹು ಶೂಲದಿಂದ ಭಾನುಕೋಪನನ್ನು ತಿವಿದು ಕೊಂದನು. ಸಹಸ್ರಾರು ರಾಕ್ಷಸವೀರರು ಮಡಿದರು. ಶೂರಪದ್ಮನ ಇತರ ಮಕ್ಕಳೂ ತಮ್ಮಂದಿರೂ ಸತ್ತರು.

ಶೂರಪದ್ಮನ ವಧೆ

ಈಗ ಶೂರಪದ್ಮನು ಕಾರ್ತಿಕೇಯನನ್ನು ಕೊಂದು ಬಿಡುವೆನೆಂಬ ಹುಚ್ಚು ಧೈರ್ಯದಿಂದ ತಾನೇ ಯುದ್ಧಕ್ಕೆ ಹೊರಟನು. ಅವರಿಬ್ಬರೊಳಗೆ ಯುದ್ಧವಾಯಿತು. ಕಾರ್ತಿಕೇಯನು ಅವನ ಬಾಣಗಳನ್ನು ಕತ್ತರಿಸಿದನು. ರಥವನ್ನು ಉರುಳಿಸಿದನು. ಕತ್ತಿಯನ್ನು ಸೆಳೆದುಕೊಂಡನು. ಶೂರಪದ್ಮನು ಗದೆಯನ್ನು ಹಿಡಿಯಲು,

‘‘ಎಲೋ ದುಷ್ಟ, ಅನ್ಯರ ಹೆಂಡತಿಯನ್ನು ಬಯಸುವ, ನೀತಿಗೆಟ್ಟ, ನಿನ್ನಲ್ಲಿ ಯಾವ ಆಯುಧವಿದ್ದರೇನು? ನೀತಿ ತಪ್ಪಿದವನನ್ನು ಜಯಲಕ್ಷಿ  ಒಲಿಯುವಳೆ?’’ ಎನ್ನುತ್ತ ಅವನ ಗದೆಯನ್ನು ಪುಡಿಮಾಡಿದನು.

ಈಗ ಶೂರಪದ್ಮನು ಮಾಯಾ ಯುದ್ಧವನ್ನು ಪ್ರಾರಂಭಿಸಿದನು. ಬಹು ವಿಧದ ಕ್ರೂರ ಜಂತುಗಳನ್ನೂ ವಿಕಾರ ರೂಪದ ಅಸಂಖ್ಯಾತವಾದ ರಾಕ್ಷಸ-ಭೂತ-ಭೇತಾಳರನ್ನೂ ಮಾಯಕದಿಂದ ನಿರ್ಮಿಸಿದನು.

ಕಾರ್ತಿಕೇಯನು ಬೆದರಲಿಲ್ಲ. ಶೂರಪದ್ಮನ ಮನಸ್ಸು ಯಾವ ಮಟ್ಟದಲ್ಲಿದೆಯೆಂದು ನೋಡುವುದಕ್ಕಾಗಿ ಕಾರ್ತಿಕೇಯನು ತನ್ನ ದಿವ್ಯಶಕ್ತಿಯಿಂದ ಅವನಿಗೆ ವಿಶ್ವರೂಪವನ್ನು ತೋರಿಸಿದನು. ಆಗ ಶೂರಪದ್ಮನು ಬೆರಗಾದನು. ಆದರೂ ಅವನಲ್ಲಿ ಸಾತ್ವಿಕ ಭಾವನೆ ಬರಲಿಲ್ಲ. ಭಕ್ತಿ ಮೂಡಲಿಲ್ಲ.

‘ಈ ಹುಡುಗ ನನ್ನಂತೆಯೇ ಮೋಡಿಯನ್ನೂ ಬಲ್ಲನು’ ಎಂದುಕೊಂಡನು.

ಆಗ ಕಾರ್ತಿಕೇಯನು ‘ಈ ರಕ್ಕಸನಿಗೆ ಧರ್ಮದ ವಿಚಾರದಲ್ಲಿ ಪ್ರೀತಿಯಿಲ್ಲ, ಜ್ಞಾನದಲ್ಲಿ ಮನಸ್ಸಿಲ್ಲ. ನೀತಿ ಇವನಿಗೆ ಕಹಿ. ಇವನಲ್ಲಿ ಭಕ್ತಿ ಮೂಡದು. ಸಾಮವನ್ನು ಇವನಲ್ಲಿ ವರ್ತಿಸಿ ಪ್ರಯೋಜನವಿಲ್ಲ. ಆದುದರಿಂದ ಇವನನ್ನು ಕೊಂದು ಲೋಕವನ್ನು ಉದ್ಧರಿಸುವೆನು’ ಎಂದು ತೀರ್ಮಾನಿಸಿದನು.

ಕಾರ್ತಿಕೇಯನು ತನ್ನ ಅದ್ಭುತವಾದ ಶಕ್ತ್ಯಾಯುಧವನ್ನು ಶೂರಪದ್ಮನ ಮೇಲೆ ಪ್ರಯೋಗಿಸಿದನು. ಅದು ಬೆಂಕಿಯನ್ನು ಕಾರುತ್ತ, ಶೂರಪದ್ಮನ ತಲೆಯನ್ನು ಕತ್ತರಿಸಿ, ಹಿಂದಕ್ಕೆ ಬಂದು ಕಾರ್ತಿಕೇಯನ ಕೈ ಸೇರಿತು. ಉಳಿದ ರಾಕ್ಷಸರು ಓಡಿದರು. ದೇವತೆಗಳು ಹೂವಿನ ಮಳೆ ಸುರಿಸಿದರು.

ಕಾರ್ತಿಕೇಯನು ರಾಕ್ಷಸರ ವಧೆಗೆ ನೆರವಾದ ದೇವತೆಗಳನ್ನು ಮನ್ನಿಸಿದನು. ಶೂರಪದ್ಮನ ಸೆರೆಮನೆಯಲ್ಲಿದ್ದ ದೇವತೆಗಳನ್ನು ಬಿಡಿಸಿದರು. ರಾಕ್ಷಸರು ದೇವಲೋಕದಿಂದಲೂ ಇತರ ಕಡೆಗಳಿಂದಲೂ ಅನ್ಯಾಯವಾಗಿ ತಂದ ಸಂಪತ್ತನ್ನು ಅಲ್ಲಲ್ಲಿಗೆ ಹಿಂದಿರುಗಿಸಲು ಏರ್ಪಡಿಸಿದನು. ರಾಕ್ಷಸರು ಸುಟ್ಟುಹಾಕಿದ ಮತ್ತು ಮುರಿದು ಕೆಡವಿದ ಮನೆಗಳನ್ನೂ ನಗರ-ಉದ್ಯಾನಗಳ್ನೂ ವಿಶ್ವಕರ್ಮನ ಮೂಲಕ ಪುನಃ ನಿರ್ಮಾಣಮಾಡಿಸಿದನು. ಇಂದ್ರನನ್ನು ದೇವಪಟ್ಟದಲ್ಲಿ ಸುಭದ್ರವಾಗಿ ನೆಲೆಗೊಳಿಸಿದನು. ಎಲ್ಲರೂ ಸುಖ ಶಾಂತಿಗಳಿಂದ ಸಮೃದ್ಧಿಯಿಂದ ಸದ್ಗುಣ-ಸದಾಚಾರ ಗಳಿಂದ ಬಾಳುವಂತೆ ಮಾಡಿದನು. ತನ್ನ ನೆಲೆಯನ್ನು ಸೇರಿ, ಲೋಕಕಲ್ಯಾಣವನ್ನೇ ಯೋಚಿಸುತ್ತ ಮೆರೆದನು.

ಶಿವನು ಕುಮಾರನನ್ನು ಮೆಚ್ಚಿ ಕೊಂಡಾಡಿದನು.

ನನ್ನ ಆಡು ಕಾಣೆಯಾಗಿದೆ

ಒಮ್ಮೆ ನಾರದನೆಂಬವನು ಕಾರ್ತಿಕೇಯನ ಬಳಿಗೆ ಬಂದು, ತನ್ನ ಸಂಕಷ್ಟವನ್ನು ಹೀಗೆ ಹೇಳಿಕೊಂಡನು:

‘‘ಸ್ವಾಮೀ, ನಾನು ಅಜಮೇಧ ಎಂಬ ಯಜ್ಞವನ್ನು ಮಾಡುತ್ತಿದ್ದೆನು. ಯಜ್ಞದ ಅಜ (ಕಾಡು) ಕಾಣೆಯಾಗಿದೆ, ಹುಡುಕಿದೆ, ಸಿಕ್ಕಲಿಲ್ಲ. ಯಾರೋ ದೇವತೆಗಳು ಅಥವಾ ರಾಕ್ಷಸರು ಅದನ್ನು ಒಯ್ದಿರಬೇಕು. ಇದರಿಂದ ಯಜ್ಞವೇ ನಿಂತು ಹೋಗಿದೆ. ನೀನು ಯಜ್ಞಪಾಲಕನು, ಬ್ರಹ್ಮಾಂಡದ ಒಡೆಯನು. ಯಜ್ಞಕ್ಕೆ ಪರಮ ದೇವತೆಯಾದ ಶಿವನ ಕುಮಾರನು. ಆಶ್ರಿತರನ್ನು ರಕ್ಷಿಸುವವನು. ಸತ್ಪುರುಷರ ಇಷ್ಟವನ್ನು ಸಲ್ಲಿಸುವವನು. ಆ ಆಡನ್ನು ತರಿಸಿಕೊಟ್ಟು ನನ್ನ ಯಜ್ಞವನ್ನು ಪೂರ್ಣಗೊಳಿಸು.’’

ಕಾರ್ತಿಕೇಯನು ತನ್ನ ಗಣಗಳಲ್ಲಿ ಒಬ್ಬನಾದ ವೀರಬಾಹುವನ್ನು ನಾರದನ ಯಾಗಪಶುವನ್ನು ಹುಡುಕಿ ತರುವುದಕ್ಕಾಗಿ ಕಳುಹಿಸಿದನು.

ಬ್ರಹ್ಮಾಂಡದಲ್ಲಿ ಎಲ್ಲಿಯೂ ಆ ಆಡಿನ ಸುಳಿವೇ ಕಾಣಲಿಲ್ಲ. ವೀರಬಾಹು ವೈಕುಂಠಕ್ಕೆ ಹೋದನು. ಅಲ್ಲಿ ಅದು ಸಿಕ್ಕಿತು. ಅದರ ಪ್ರಾಣವನ್ನು ಉಳಿಸುವುದಕ್ಕಾಗಿ ವಿಷ್ಣುವಿನ ಆಜ್ಞೆಯಂತೆ ಅವನ ದೂತರು ಅದನ್ನು ತಂದುದಾಗಿ ತಿಳಿಯಿತು. ವೀರಬಾಹು ಅದನ್ನು ಕಾರ್ತಿಕೇಯನ ಬಳಿಗೆ ತಂದನು. ಕಾರ್ತಿಕೇಯನು ಅದನ್ನು ನಾರದನಿಗೆ ಕೊಡದೆ ಸುಮ್ಮನಿದ್ದನು.

ಅಜ ಎಂದರೆ-

‘‘ಸ್ವಾಮಿ, ನನ್ನ ಆಡನ್ನು ನನಗೆ ಕೊಡಿಸು. ಅದನ್ನು ಅಹುತಿಮಾಡಿ ನನ್ನ ಯಜ್ಞವನ್ನು ಪೂರ್ತಿಗೊಳಿಸುವೆನು’’ ಎಂದು ನಾರದನು ನುಡಿದನು.

ಆಗ ಕಾರ್ತಿಕೇಯನು ಹೀಗೆಂದನು: ‘‘ಅಯ್ಯಾ, ಯಜ್ಞಕ್ಕಾಗಿ ಪ್ರಾಣಿವಧೆ ಸಲ್ಲದು. ವೇದದಲ್ಲಿ ಹಾಗೆ ಹೇಳಿಲ್ಲ. ಯಜ್ಞ ಅಹಿಂಸಾತ್ಮಕವಾಗಿ ಆಗಬೇಕಾದುದು. ಅಜ(ಹುಟ್ಟದೆ ಇರುವಂಥದು) ಎಂದರೆ ಅಕ್ಕಿ. ಅಕ್ಕಿಯ ಅನ್ನವನ್ನು ಯಜ್ಞೇಶ್ವರನಿಗೆ ಅರ್ಪಿಸಿ ಮಾಡುವ ಯಜ್ಞ-ಅಜಮೇಧ. ಆದುದರಿಂದ, ಅಹಿಂಸೆಯಿಂದ ಯಜ್ಞವನ್ನು ಪೂರ್ಣಗೊಳಿಸು. ಆಗ ನಿನಗೆ ಯಜ್ಞದ ಪೂರ್ಣ ಫಲ ದೊರೆಯುವುದು’’ ಎಂದು ಬೋಧಿಸಿದನು.

ನಾರದನು ಕಾರ್ತಿಕೇಯನ ಜ್ಞಾನಪೂರ್ಣವಾದ ಮಾತಿಗೆ ಒಪ್ಪಿದನು. ಅವನ ಅಪ್ಪಣೆ ಪಡೆದು, ಆ ಆಡನ್ನು ತೆಗೆದುಕೊಂಡು, ಸಾಕಿದನು. ಅಹಿಂಸಾತ್ಮಕವಾಗಿ ಯಜ್ಞವನ್ನು ನೆರವೇರಿಸಿ, ಮುಂದಿನವರಿಗೆ ಮಾದರಿಯಾದನು.

ಲೋಕಕಲ್ಯಾಣಕ್ಕಾಗಿ

ಲೋಕಕಲ್ಯಾಣಕ್ಕಾಗಿ ಹೆಚ್ಚಿನ ಶೌರ್ಯವನ್ನೂ ಧೈರ್ಯವನ್ನೂ ಮೆರೆದ ಬಾಲಕರಲ್ಲಿ ಮೊತ್ತಮೊದಲಿಗನೆಂದರೆ ಕಾರ್ತಿಕೇಯನು. ಎಳೆಯ ಹಸುಳೆಯಾಗಿದ್ದ  ವೇಳೆಗೇ ಲೋಕೈಕವೀರನು. ದುಷ್ಟರ ಸಂಹಾರ, ಶಿಷ್ಟರಪಾಲನೆ, ಧರ್ಮರಕ್ಷಣೆಗಳನ್ನು ಮಾಡಿದ್ದಾನೆ. ಅಸಾಮಾನ್ಯ ಜ್ಞಾನಿಯಾಗಿದ್ದನು. ಅಹಿಂಸಾತ್ಮಕ ಯಜ್ಞವನ್ನು ರೂಢಿಗೆ ತಂದವನು. ಸುಬ್ರಮಣ್ಯಸ್ವಾಮಿಯ ದೇವಾಲಯಗಳು ನಮ್ಮ ದೇಶದಲ್ಲಿ ಅಲ್ಲಲ್ಲಿವೆ. ಸುಬ್ರಹ್ಮಣ್ಯಷಷ್ಠಿ ಹಿಂದೂಗಳಿಗೆ ಪವಿತ್ರವಾದ ದಿನ. ಷಷ್ಠಿಯ ವ್ರತಮಾಡುವ ಭಕ್ತರು ಅಸಂಖ್ಯವಾಗಿ ಇದ್ದಾರೆ. ಭಗವಾನ್ ಶಂಕರಾಚಾರ್ಯರು ‘ಸುಬ್ರಹ್ಮಣ್ಯಭುಜಂಗ ಸ್ತೋತ್ರ’ವನ್ನು ಸಂಸ್ಕೃತದಲ್ಲಿ ರಚಿಸಿ, ಅವನನ್ನು ಸ್ತುತಿಸಿದ್ದಾರೆ. ದುಷ್ಟರಿಗೆ ಎಷ್ಟೇ ಶಕ್ತಿ ಇರಲಿ, ಬುದ್ಧಿವಂತಿಕೆ ಇರಲಿ ಕಡೆಗೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಕಾರ್ತಿಕೇಯನು ತಾರಕಾಸುರ, ಶೂರಪದ್ಮರಿಗೆ ಶಿಕ್ಷೆ ಮಾಡಿ ತೋರಿಸಿದ್ದಾನೆ. ತಾರಕಾಸುರನಂತೂ ತಾನು ಬಹಳ ಬುದ್ಧಿವಂತಿಕೆಯಿಂದ ವರವನ್ನು ಕೇಳಿದೆ, ತನಗೆ ಸಾವೇ ಇಲ್ಲ ಎಂದು ಮೆರೆಯುತ್ತಿದ್ದ. ದುಷ್ಟತನ ಸ್ವಲ್ಪ ಕಾಲ ಗೆಲ್ಲಬಹುದು. ವಿಜೃಂಭಿಸಬಹುದು, ಆದರೆ ಕಡೆಗೆ ಅದಕ್ಕೆ ಸೋಲು-ನಾಶ ಸಿದ್ಧ; ಈ ತತ್ವವನ್ನು ನಮ್ಮ ಪೌರಾಣಿಕ ಕಥೆಗಳು ಬೇರೆ ಬೇರೆ ರೀತಿಗಳಲ್ಲಿ, ಬೇರೆ ಬೇರೆ ವ್ಯಕ್ತಿಗಳ ಏಳು-ಬೀಳುಗಳಲ್ಲಿ ಬೆಳಗಿವೆ.