ಬಾ ಕಾರ್ತೀಕವೇ ಬಾ, ನಕ್ಷತ್ರದ ನವಿಲಿನ
ಗರಿಗೆದರುತ ಕತ್ತಲ ಕಾಡಿನಲಿ
ಸಾವಿರ ಬೆಳಕಿನ ಹೂವುಗಳರಳಲಿ
ಕೊಂಬೆ ಕೊಂಬೆಗಳ ಮೌನದಲಿ.

ಬಾ ಕಾರ್ತೀಕವೆ ಬಾ, ಶಾರದ ನೀರದ
ಶಿಲ್ಪಾಕೃತಿಗಳ ಕೆತ್ತುತ ನೀಲಿಯಲಿ
ಪ್ರೀತಿಯ ಮುತ್ತಿನ ಹನಿಗಳು ಇಳಿಯಲಿ
ತೂಗುವ ತೆನೆಗಳ ತುಟಿಗಳಲಿ.

ಬಾ ಕಾರ್ತೀಕವೆ ಬಾ, ಬೆಳಕಿನ ಕಾರಂಜಿಯ-
ನೆಬ್ಬಿಸಿ ಹೃದಯದ ಕತ್ತಲಲಿ,
ಮಡುಗಟ್ಟಿದ ದುಃಸ್ವಪ್ನಗಳಳಿಯಲಿ
ಹೊಸ ಎಚ್ಚರಗಳ ಹೊನಲಿನಲಿ.

ಬಾ, ಕಾರ್ತೀಕವೆ ಬಾ, ಹೆಜ್ಜೆಯಿಟ್ಟ ಕಡೆ ಚೆಲುವನು
ಚಿಗುರಿಸಿ ಬತ್ತಿದ ಬದುಕಿನಲಿ,
ಮಂದಹಾಸಗಳ ಕಾಂತಿಯು ಮಿನುಗಲಿ
ಸೊರಗಿದ ಹಣತೆಯ ಕಣ್ಗಳಲಿ.