ಕಡು ಮೌನದ ಇರುಳು,
ಆಲಿಸು ಭೋರ್ಗರೆಯುತಲಿದೆ ಕಾರ್ತೀಕದ
ಕಗ್ಗತ್ತಲ ಕಡಲು !
ಉರುಳಿದೆ, ಹೊರಳಿದೆ, ಆಪೋಶನಗೈದರಗಿಸಿ ತನ್ನೊಳು
ಈ ಲೋಕದ ಪ್ರಿಯಪರಿಚಿತ ನೋಟಗಳೆಲ್ಲವನು
ಸವಿದಾನಂದಿಸು ಈ ಪ್ರಳಯದ ಘನಮೌನವನು !

ಯಾವುದು ಆ ಬೆಳಕು ?
ಕಗ್ಗತ್ತಲ ತೆರೆಮೇಲ್ಗಡೆ ಚಿಕ್ಕೆಯ ತೆರ ಚಂಚಲಿಸುತ
ನೊರೆ ಮಿರುಗಿದೆ, ಯಾವುದು ಆ ಬೆಳಕು !
ಈ ಕಡಲಿನ ಕರೆಯಂಚಿಗೆ ಕುಳಿತೀ ವಿಸ್ಮಯವನು
ನಿರುಕಿಸುತಿಹರಾರು?
ಈ ತಳದೊಳು ನಿಂತಿರುವೀ ನನ್ನೊಳಗೀ ಚಿಂತನೆಯನು
ಚೋದಿಪನವನಾರು ?

ಮುಗಿಲೆತ್ತರ ಅಲೆಮಲೆಗಳ ಹೆಡೆಯೆತ್ತಿದ ಈ ಕತ್ತಲ
ಕಡಲಾಳದಲಿ,
ನಿಂತಿರುವೆನು,  ಆ ಚಿಕ್ಕೆಯ ನೊರೆಯಾಚೆಗೆ ಏಳುವ,
ಹೊರಲೋಕವ ಕಾಣುವ ಉನ್ಮಾದದಲಿ !