ಓ, ಇವಳು ಶಾರದೆ !
ಬಂದ ಬೆಳ್ಳಕ್ಕಿಗಳ ಕಣ್ಣೊಳಗೆ
ಇವಳ ಕತೆ ಹೀಗೆಂದು ಬರೆದಿದೆ :
ಮಾಗಿ ಮಂಜಿನ ಹಾಲುತೊಟ್ಟಿಲಲಿ ಕಣ್ ತೆರೆದು
ಬೆಳೆದ ಚೆಲುವೆ ;
ಚೈತ್ರಮಾಸದ ಹೂವುಗಳ ತೇರಿನಲಿ ಇವಳ ಮೆರವಣಿಗೆ !
ರಂಗು ರಂಗಿನ ಜರಿಯ ಪಟ್ಟೆಸೀರೆಯನುಟ್ಟು
ದಿಕ್ಕೆಲ್ಲವನು ದಂಗುಬಡಿಸಿದ ಪ್ರಮದೆ !
ಲಕ್ಷ ಪಕ್ಷಿಗಳ ಕೊರಳಿನುಯ್ಯಾಲೆಯಲಿ
ಜೋಕಾಲಿಯಾಡಿದ ಮುಗುದೆ.

ಆಗಾಗ ಮುಗಿಲ ಹಂಡೆಯ ಮೊಗೆದು ಸಾಗಿತ್ತು
ಇವಳ ಅಭ್ಯಂಜನ.
ಗಡುಗು ಮಿಂಚಿನ ತೊಡವು ; ಕಡಲ ಕನ್ನಡಿಯಲ್ಲಿ
ತಿಲಕ ತಿದ್ದುವ ಬಯಕೆ.
ಮಾತೆತ್ತಿದರೆ ಬಿರುಗಾಳಿಯುಸಿರು ;
ಕಣ್ಣೆತ್ತಿ ನಿಂತು ಮಾತನಾಡಿಸಬಹುದೆ
ಇವಳನ್ನು ಯಾರಾದರೂ !

ಮಾವು-ಬೇವುಗಳ ತೇರೇರಿ ಗಂಡನ ಮನೆಗೆ ಬಂದಾಮೇಲೆ
ಮುಖಕ್ಕೆ ಸದಾ ಮಳೆಯ ನೂಲಿನ  ಮುಸುಕು.
ಹೊಗೆಮೋಡದಡುಗೆಮನೆಯೊಳಗೂ ತಂಪಾಗಿ ಹರಡಿತ್ತು
ಇವಳ ಕಣ್ ಬೆಳಕು !

ಈ ನಡುವೆ ಕೆಲವು ದಿನ ಮೊಗದಲ್ಲಿ ನಗೆಯಿಲ್ಲ ;
ನೀರವ ನಿರುತ್ಸಾಹ ; ತಲೆ ತುಂಬ ಮೋಡದ ತುಮುಲ.
ಅರ್ಥವಿಲ್ಲದ ಕವಿತೆ ; ಕಾಲಿಟ್ಟಲ್ಲಿ ಕೆಸರು.
ಏನೆಂದು ಕೇಳಿದರೆ ತಣ್ಣನೆಯ ನಿಟ್ಟುಸಿರು.
‘ಶ್ರಾವಣಾ ಬಂತು ಶ್ರಾವಣಾ’
ಇವಳು ಉಸಿರಾಡಿದರೆ ಹಸಿರು ; ಮಾತಾಡಿದರೆ ಜುಳು ಜುಳು;
ಹೆಜ್ಜೆ ಇಟ್ಟರೆ ಹೂವು ; ತುರುಬಿನ ತುಂಬ ಮಲ್ಲಿಗೆ ಮೋಡ !

ಅಂದೊಮ್ಮೆ ಕಾಳಿ ; ಆ ಅನಂತರ ಗೌರಿ ; ಈಗಿವಳು ಶಾರದೆ.
ಪಟ್ಟೆಸೀರೆಗಳೆಲ್ಲ ಪೆಟ್ಟಿಗೆಯ ಸೇರಿದುವು ; ಈಗ
ಇವಳಿಗೆ ಬಿಳಿಯ ಬಟ್ಟೆಗಳಿಷ್ಟ. ಮನವೆಲ್ಲ
ಥಳಥಳ ನೀಲಿ ; ಅದರ ತುಂಬಾ ಕೈಲಾಸಗಳ ಕನಸು.
ಹೊಲಗದ್ದೆಯಲಿ ನಿಂತ ತೆನೆಯ ತುಟಿಗಳಿಗಿವಳು
ಮುತ್ತಿಟ್ಟು ಹಾಲೂಡಿಸುವಳು ; ಎತ್ತಿ ಆಡಿಸುವಳು.

ಈಗಿವಳು ಶಾರದೆ – ಸದಾ ಶಾಂತೆ, ಶುಚಿಸ್ಮಿತೆ ;
ಗಂಭೀರೆ, ತೇಜೋನ್ವಿತೆ, ಕ್ರೌಂಚ ಕ್ವಣಿತೆ ;
ನಮೋಸ್ತುತೇ –