ಒಂದು ಆದರ್ಶಕ್ಕೋಸ್ಕರ ಯಾರಾದರೂ ಬಹು ಶ್ರದ್ಧೆಯಿಂದ ಕೆಲಸ ಮಾಡಿದರೆ ಅವರು ಆ ಆದರ್ಶಕ್ಕಾಗಿ ತನು ಮನ ಧನಗಳನ್ನು ಅರ್ಪಿಸಿದರು ಎಂದು ಹೇಳುವುದುಂಟು. ಹೀಗೆಂದರೆ, ಅವರು ಆ ಆದರ್ಶಕ್ಕಾಗಿ ತಮ್ಮ ದೇಹವನ್ನೂ ಮನಸ್ಸನ್ನೂ ಹಣವನ್ನೂ ಸಂಪೂರ್ಣವಾಗಿ ಅರ್ಪಿಸಿದರು ಎಂದರ್ಥ. ಕಾರ್ನಾಡು ಸದಾಶಿವರಾಯರು ದೇಶದ ಸ್ವಾತಂತ್ರ್ಯಕ್ಕೋಸ್ಕರ ತಮ್ಮ ಮನ ಧನಗಳನ್ನು ಅರ್ಪಿಸಿದರು ಎನ್ನುವುದು ಅಕ್ಷರಶಃ ನಿಜ. ಬಿಡುವಿಲ್ಲದೆ ದುಡಿದು, ಸೆರೆಮನೆಯಲ್ಲಿ ಕಷ್ಟಪಟ್ಟು ಆರೋಗ್ಯವನ್ನೆ ಕಳೆದುಕೊಂಡರು. ಸದಾ ದೇಶದ ಸ್ವಾತಂತ್ರ್ಯದ ಚಿಂತೆ, ದೇಶದಲ್ಲಿನ ಬಡಬಗ್ಗರ ಚಿಂತೆ-ಇದರಲ್ಲಿ ತಮ್ಮ ವಕೀಲ ವೃತ್ತಿ ಮತ್ತು ಮನೆಯ ವ್ಯವಹಾರ ನೋಡಿಕೊಳ್ಳಲಾಗಲಿಲ್ಲ, ಬಹು ಶ್ರೀಮಂತರಾಗಿದ್ದವರು ಕಡೆಗೆ ಮನೆಯನ್ನು ಮಾರಿ ನಿಲ್ಲಲು ಸ್ಥಳವಿಲ್ಲದೆ ಕಷ್ಟಪಡಬೇಕಾಯಿತು. ಬೇರೆ ಊರಿಗೆ ಹೋದರೆ ಒಂದು ದಿನ ಹೋಟೆಲಿನಲ್ಲಿ ಉಳಿದುಕೊಳ್ಳಲು ಕಾಸಿಲ್ಲದೆ ಕಷ್ಟ ಪಡಬೇಕಾಯಿತು. ತೀರ ಕಾಯಿಲೆಯಾಗಿ ಸಾವು ಹತ್ತಿರವಾಗುತ್ತಿದ್ದಾಗಲೂ ಅವರ ಯೋಚನೆಗಳು, ಅವರು ಆಡುತ್ತಿದ್ದ ಮಾತುಗಳು – ದೇಶದ ಸ್ವಾತಂತ್ರ್ಯದ ಹೋರಾಟದ ವಿಷಯವಾಗಿ, ಬಡಬಗ್ಗರ ಕಷ್ಟಗಳ ವಿಷಯವಾಗಿ.

ಮೃದು ಮನಸ್ಸಿನ ಹುಡುಗ

೧೯೯೧ನೆಯ ಏಪ್ರಿಲ್ ತಿಂಗಳ ಮೊದಲನೆಯ ದಿನ, ಚೈತ್ರ ಮಾಸದ ಯುಗಾದಿಯ ದಿನ, ಪುಣ್ಯಪುರುಷ ಸದಾಶಿವರಾಯರ ಜನನ. ಅವರ ತಂದೆ ರಾಮಚಂದ್ರ ರಾಯರು. ಮಂಗಳೂರಿನಲ್ಲಿ ಪ್ರಸಿದ್ಧ ವಕೀಲರು. ತಾಯಿ ಶ್ರೀಮತಿ ರಾಧಾಬಾಯಿ.

ರಾಧಾಬಾಯಿಯವರು ಆದರ್ಶ ಮಹಿಳೆ, ಶ್ರದ್ಧೆ, ದೃಢ ಮನಸ್ಸು, ವಿನಯ ಮೊದಲಾದ ಸದ್ಗುಣಗಳು ಅವರಲ್ಲಿ ಮನೆ ಮಾಡಿದ್ದವು. ಮನೆಬಾಗಿಲಿಗೆ ಬಂದ ಯಾರನ್ನೂ ಬರಿಗೈಯಿಂದ ಹಿಂದೆ ಕಳುಹಿಸಿದವರಲ್ಲ.

ಸದಾಶಿವರಾಯರು ಹುಡುಗನಾಗಿದ್ದಾಗ ಒಮ್ಮೆ ಶಾಲೆಯಿಂದ ಮನೆಗೆ ಮರಳಿದಾಗ ಕೈಯಲ್ಲಿ ಪುಸ್ತಕ ಇರಲಿಲ್ಲ. ಹುಡುಗ ತಂದೆಯ ಬಳಿಗೆ ಧೈರ್ಯದಿಂದ ಹೋಗಿ, “ಪುಸ್ತಕ ಕೊಳ್ಳಲು ಸಾಧ್ಯವಿಲ್ಲದ ಒಬ್ಬ ಬಡ ಹುಡುಗನಿಗೆ ನನ್ನ ಪುಸ್ತಕಗಳನ್ನು ಕೊಟ್ಟು ಬಿಟ್ಟೆ” ಎಂದ. ತಂದೆ ನಸುನಕ್ಕರು. ಬೇರೇನನ್ನೂ ಹೇಳಲಿಲ್ಲ.

‘ನನ್ನ ಕೋಟನ್ನು ತೆಗೆದುಕೊಟ್ಟೆ’

ಮತ್ತೊಂದು ದಿನ ಸಾಯಂಕಾಲ, ಹುಡುಗ ಹಾಕಿಕೊಂಡು ಹೋದ ಕೋಟು ಇಲ್ಲದೆ ಮನೆಗೆ ಬಂದ. “ನಿನ್ನ ಕೋಟು ಏನಾಯಿತು, ಮಗೂ?” ಎಂದು ತಾಯಿ ಕೇಳಿದರು. “ನಾನು ಬರುವಾಗ ದಾರಿಯಲ್ಲಿ ಹರಿಜನ ಹುಡುಗನೊಬ್ಬ ಸಿಕ್ಕಿದ. ಅವನು ಚಳಿಯಿಂದ ಗಡಗಡ ನಡುಗುತ್ತಿದ್ದ ನನಗೆ ಅವನನ್ನು ಕಂಡು ’ಪಾಪ’ ಎಂದು ತೋರಿತು. ನನ್ನ ಕೋಟನ್ನು ತೆಗೆದುಕೊಟ್ಟೆ. ಅದನ್ನು ಹಾಕಿಕೊಂಡಾಗ ಅವನಿಗಾದ ಸಂತೋಷವನ್ನು ನೋಡಬೇಕಾಗಿತ್ತು!” ಎಂದ ಹುಡುಗ ಸದಾಶಿವ. ಹರಿಜನ ಹುಡುಗನ ಸಂತೋಷವನ್ನು ಹೇಳುವಾಗ ಸದಾಶಿವನ ಕಣ್ಣುಗಳಲ್ಲಿ ಸಂತೋಷ ಹೊಳೆಯುತ್ತಿತ್ತು.

ಬಾಲ್ಯದಲ್ಲಿ ಬೆಳೆದುಬಂದ ಈ ಮನೋಭಾವ ಅವರ ಜೀವನದಲ್ಲೆಲ್ಲಾ ವ್ಯಕ್ತವಾಗುತ್ತಿತ್ತು. ಅವರ ಪರಿಸ್ಥಿತಿ ಏನೇ ಇರಲಿ, ಸಹಾಯಕ್ಕಾಗಿ ಬಂದವರು ಅವರಿಂದ ನಿರಾಶರಾಗಿ ಮರಳಿದ್ದಿಲ್ಲ.

ನೆಮ್ಮದಿಯ ಜೀವನ

ಸದಾಶಿವರಾಯರು ಮಂಗಳೂರಿನ ಗಣಪತಿ ಹೈಸ್ಕೂಲು ಮತ್ತು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆಂದು ಮದರಾಸಿಗೆ ಹೋದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವೀಧರರಾದರು. ಕಾನೂನು ಶಿಕ್ಷಣ ಮುಂಬಯಿಯಲ್ಲಿ ಪಡೆದರು.

೧೯೦೬ ರಲ್ಲಿ ಮಂಗಳೂರಿಗೆ ಬಂದು ವಕೀಲ ವೃತ್ತಿ ಆರಂಭಿಸಿದರು. ಮಂಗಳೂರಿನ ಸಾಮಾಜಿಕ ಜೀವನದಲ್ಲಿ ಅವರೊಂದು ಹೆಸರಾದರು. ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು. ಹಲವಾರು ಪ್ರಶಸ್ತಿಗಳನ್ನು ಪಡೆದರು.

ಏನೋ ಕೊರತೆ

ಈ ದಿನಗಳಲ್ಲಿ ಸದಾಶಿವರಾಯರಿಗೆ ಒಬ್ಬ ಸಾಮಾನ್ಯ ಮನುಷ್ಯ ಬಯಸಬಹುದಾದ್ದೆಲ್ಲ ಲಭಿಸಿತ್ತು. ತಂದೆಯಿಂದ ಆಸ್ತಿ ಬಂದಿದ್ದಿತು. ಒಳ್ಳೆಯ ವಿದ್ಯಾಭ್ಯಾಸ. ತಾವೇ ಸಂಪಾದಿಸುತ್ತಿದ್ದ ಹಣ. ಸಂತೋಷದ ಸಂಸಾರ. ಹಲವು ಆಟಗಳಲ್ಲಿ ಪ್ರವೀಣರೆಂದು ಹೆಸರು. ಸುತ್ತ ಗೆಳೆಯರು, ಸಮಾಜದಲ್ಲಿ ಪ್ರತಿಷ್ಠೆ.

ಆದರೆ ಈ ಸುಖಜೀವನ ಅವರ ಮನಸ್ಸಿಗೆ ಹಿಡಿಸಲಿಲ್ಲ. ಅವರ ಮನಸ್ಸಿನಲ್ಲಿ ಏಕೋ ಅಸಮಾಧಾನವಿತ್ತು.

ಈ ನೆಮ್ಮದಿಯ ಜೀವನದಲ್ಲಿ ಸಹ ಏನೋ ಕೊರತೆ ಕಂಡಿತು. ಸುತ್ತಲಿನ ಸಾಮಾಜಿಕ ಪರಿಸ್ಥಿತಿ ಅವರ ಹೃದಯವನ್ನು ಕದಡಿತು. ಅಲ್ಲೋಲ ಕಲ್ಲೋಲಗೊಳಿಸಿತು. ಸುತ್ತ ಜನರು ಹಲವು ರೀತಿಗಳಲ್ಲಿ ಬಡತನದಲ್ಲಿ, ಅಜ್ಞಾನದಲ್ಲಿ, ಅನ್ಯಾಯಕ್ಕೆ ಸಿಕ್ಕು, ವಿದೇಶೀ ಸರ್ಕಾರದ ಕಾಲಡಿಯಲ್ಲಿ ಕಷ್ಟಪಡುವಾಗ ತಾವು ಸುಖವಾಗಿರುವುದು ಅವರಿಗೆ ಅಸಾಧ್ಯವಾಯಿತು.

ಕಷ್ಟದಲ್ಲಿದ್ದ ಹೆಂಗಸರಿಗೆ ನೆರವು

ಅವರ ಜೀವನದಲ್ಲೊಂದು ಹೊಸ ಅಧ್ಯಾಯ ಆರಂಭವಾಯಿತು. ಹಿಂದುಳಿದ ಮಹಿಳೆಯರ ಉದ್ಧಾರಕ್ಕಾಗಿ ಅವರು ಮುಂದೆ ಬಂದರು. ಮಂಗಳೂರಿನಲ್ಲಿ ’ಮಹಿಳಾ ಸಭಾ’ ಎಂಬ ಸಂಸ್ಥೆಯನ್ನು ಅವರು ಸ್ಥಾಪಿಸಿದರು. ಅವರ ಪತ್ನಿ ಶಾಂತಾಬಾಯಿಯ ನೆರವಿನಿಂದ ಹೊಲಿಗೆ, ಬುಟ್ಟಿ ಹೆಣೆಯುವಿಕೆ ಮೊದಲಾದ ಗೃಹ ಕೈಗಾರಿಕೆಗಳ ತರಬೇತಿ ಆರಂಭಿಸಿದರು. ಆ ಕಾಲದಲ್ಲಿ ಹಿಂದು ಸಮಾಜದಲ್ಲಿ ವಿಧವೆಯರ ಬಾಳು ಬಹು ಕಷ್ಟದಿಂದ ತುಂಬಿತ್ತು. ಮಂಗಳದ್ರವ್ಯಗಳನ್ನು ಮುಟ್ಟುವಂತಿಲ್ಲ, ತಲೆಯ ಕೂದಲು ತೆಗೆಸಿ, ಕೆಂಪು ಬಟ್ಟೆ ಧರಿಸಿ ದುಃಖದಲ್ಲಿ ದಿನ ನೂಕಬೇಕು. ಅವರು ಎದುರಿಗೆ ಬಂದರೆ ಅಪಶಕುನ ಎಂದು ಜನರ ಕಲ್ಪನೆ. ಇವರಿಗೆ ’ಮಹಿಳಾ ಸಭಾ’ ಜೀವನದಲ್ಲಿ ಹೊಸ ಬೆಳಕನ್ನು ತಂದು ಕೊಟ್ಟಿತು. ಹಲವರಿಗೆ ವಿದ್ಯಾಭ್ಯಾಸ ಮುಂದುವರಿಸಲು ಕಾರ್ನಾಡರು ಸಹಾಯ ಮಾಡಿದರು.

ಕೆಲವರು ದಾದಿಯರಾಗಿ, ಶಿಕ್ಷಕರಾಗಿ ಸ್ವತಂತ್ರ ಜೀವನ ನಡೆಸಿದರು. ಬಹಳ ಕಷ್ಟದಲ್ಲಿದ್ದ ಬಾಲವಿಧವೆಯೊಬ್ಬಳು ಮತ್ತೆ ಮದುವೆಯಾಗಲು ಬಯಸಿದಳು. ಸದಾಶಿವರಾಯರು ಅನುಕೂಲ ವರನನ್ನು ನಿಶ್ಚಯಿಸಿ ಅವಳಿಗೆ ವಿವಾಹದ ಏರ್ಪಾಡು ಮಾಡಿದರು. ಸಂಪ್ರದಾಯ ಶರಣರಿಗೆ ಸಿಡಿಲು ಬಡಿದಂತಾಯಿತು. ವಿಧವೆಯಾಗಿದ್ದ ಈ ವಧುವಿನ ಹಣೆಗೆ ಕುಂಕುಮ ಹಚ್ಚಲು ಯಾವ ಮುತ್ತೈದೆ ತಾನೇ ಮುಂದೆ ಬರಬಹುದು? ಅಂಧ ಶ್ರದ್ಧೆಯನ್ನು ಬದಿಗಿರಿಸಿ ಈ ಕಾರ್ಯವನ್ನು ನಿರ್ವಹಿಸಲು ಶಾಂತಾಬಾಯಿಯವರು ಸಂತೋಷದಿಂದ ಮುಂದೆ ಬಂದರು. ಇದು ಇಂತಹ ಹಲವಾರು ವಿವಾಹಗಳಿಗೆ ನಾಂದಿಯಾಯಿತು.

ಸದಾಶಿವರಾಯರ ಕ್ರಾಂತಿಕಾರಿ ಸಾಮಾಜಿಕ ಧೋರಣೆಗಳನ್ನು ಕಂಡು ಅದೆಷ್ಟೋ ಮಂದಿ ದೂರದಿಂದಲೇ ಹುಬ್ಬು ಹಾರಿಸಿ, ಅಪಹಾಸ್ಯ ಮಾಡಿದರು.

ಹರಿಜನರಿಗಾಗಿ

ಬಡಬಗ್ಗರನ್ನೂ ಅಸ್ಪೃಸ್ಯರನ್ನೂ ಕಂಡರೆ ಸದಾಶಿವರಾಯರ ಹೃದಯ ಕರಗುತ್ತಿತ್ತು, ಮರುಗುತ್ತಿತ್ತು. ಕುದ್ಮುಲ್ ರಂಗರಾವ್ (ಸ್ವಾಮಿ ಈಶ್ವರಾನಂದ) ಎಂಬವರು ನೊಂದವರ ವರ್ಗದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಕೆಲಸ ಸದಾಶಿವರಾಯರನ್ನು ಆಕರ್ಷಿಸಿತು. ದಲಿತ ಸಮಾಜೋದ್ಧಾರಕ ಸಂಘದ ಸಕ್ರಿಯ ಸದಸ್ಯರಾದರು. ಬಳಿಕ ಹಲವಾರು ವರ್ಷ ಈ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಉತ್ಸವದ ಸಮಾರಂಭಗಳಲ್ಲಿ ಮಂಗಳೂರಿನ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಭೋಜನದ ಏರ್ಪಾಡು. ಹರಿಜನರಿಗೆ ದೇವಸ್ಥಾನದೊಳಗೆ ಪ್ರವೇಶ ನಿಷೇಧ. ಊಟ ಮುಗಿಯುವವರೆಗೆ ದೇವಾಲಯದ ಹಿಂಭಾಗದಲ್ಲಿ ಈ ಜನರು ಕಾಯುವರು. ಬಳಿಕ ಹೊರಗೆ ಎಸೆದ ಎಂಜಲೆಲೆಗಾಗಿ ಬೀದಿ ನಾಯಿಗಳೊಡನೆ ಅವರ ಸ್ಪರ್ಧೆ. ಈ ದೃಶ್ಯ ಕಾರ್ನಾಡರಿಗೆ ಬಹಳ ನೋವನ್ನುಂಟು ಮಾಡಿತು. ಇಂತಹ ವಿಶೇಷ ಸಂದರ್ಭಗಳಲ್ಲಿ ಸದಾಶಿವರಾಯರು ಹರಿಜನರಿಗೆ ಊಟದ ವ್ಯವಸ್ಥೆ ಏರ್ಪಡಿಸಿದರು. ಊಟಕ್ಕೆ ತಮ್ಮ ಹಲವು ಮಿತ್ರರನ್ನು ಆಮಂತ್ರಿಸಿದರು. ತಮ್ಮ ಮನೆಗೆ ಹರಿಜನರನ್ನು ಕರೆಸಿ, ಅವರೊಂದಿಗೆ ಊಟ ಮಾಡುವುದನ್ನು ಸಂಪ್ರದಾಯ ಶರಣರು ವಕ್ರದೃಷ್ಟಿಯಿಂದ ಕಂಡರು. ಆದರೆ ಅವರನ್ನು ಹಾಗೂ ಅವರ ಕುಟುಂಬದವರನ್ನು ಯಾರೂ ಜಾರಿಯಿಂದ ಬಹಿಷ್ಕರಿಸಲಿಲ್ಲ. ಸಮಾಜದಲ್ಲಿ ಅವರ ಗೌರವ ಹೆಚ್ಚಿತು.

ನಗರದಿಂದ ದೂರದಲ್ಲಿದ್ದ ಹರಿಜನರ ವಸತಿ ಕೇಂದ್ರಗಳಿಗೆ ಸದಾಶಿವರಾಯರು ಆಗಾಗ ಹೋಗುತ್ತಿದ್ದರು. ಆ ದಲಿತ ಸಮಾಜದ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಸರ್ಕಾರದಿಂದ ಅವರಿಗೆ ಸ್ಥಳ ಒದಗಿಸಿ, ಒಂದು ವಸತಿ ಕೇಂದ್ರ ಮತ್ತು ಒಂದು ಶಾಲೆ ನಿರ್ಮಿಸಲು ಶ್ರಮಿಸಿ ಯಶಸ್ವಿಯಾದರು. ಹರಿಜನರ ಅಭಿವೃದ್ಧಿ ಕಾರ್ಯ ಅವರಿಗೆ ಜೀವನದಲ್ಲಿ ಬಹಳ ಪ್ರಿಯವಾಗಿತ್ತು.

ಪ್ರಾಣಿ ಬಲಿಯ ವಿರುದ್ಧ

ನವರಾತ್ರಿಯ ಉತ್ಸವ, ಮಂಗಳೂರಿನ ಬೋಳೂರು ಮಾರಿಗುಡಿಯಲ್ಲಿ ಕುರಿ, ಕೋಣ, ಕೋಳಿ ಬಲಿ ಕೊಡುತ್ತಿದ್ದರು. ದೇವರ ಹೆಸರಿನಲ್ಲಿ ಪ್ರಾಣಿಬಲಿ ಕೊಡುವುದನ್ನು ತಡೆಯಲು ಅವರು ಪ್ರಯತ್ನಿಸಿದರು. ಆಗ ಅವರು ಪ್ರಬಲ ವಿರೋಧವನ್ನು ಎದುರಿಸಬೇಕಾಗಿತ್ತು. ಪ್ರಾಣಿಬಲಿಯನ್ನು ನಿಲ್ಲಿಸಿದರೆ ದೇವತೆಗೆ ಕೋಪ ಬರುತ್ತದೆ ಎಂದು ನಂಬಿದ್ದವರು ಎಷ್ಟೋ ಮಂದಿ. ಅಂತಹವರಿಗೆ ಸದಾಶಿವರಾಯರ ಮೇಲೆ ಬಹು ಕೋಪ. ಅವರ ಮೇಲೆ ಆಕ್ರಮಣವಾಗಬಹುದು, ಏಟುಗಳು ಬೀಳಬಹುದು ಎಂದೂ ಅವರ ಮಿತ್ರರು ಅವರಿಗೆ ಎಚ್ಚರಿಕೆ ನೀಡಿದರು. ಆದರೆ ಸದಾಶಿವರಾಯವರು ತಮ್ಮನ್ನು ಪ್ರಬಲವಾಗಿ ವಿರೋಧಿಸುತ್ತಿದ್ದವರನ್ನೇ ಭೇಟಿ ಮಾಡಿದರು, ತಮ್ಮ ವಾದವನ್ನು ಅವರ ಮುಂದಿಟ್ಟರು. ನಿಷ್ಕಳಂಕವಾದ ಹೃದಯದಿಂದ ಹೊರಬರುತ್ತಿದ್ದ ಸರಳವಾದ ಮಾತುಗಳಿಂದ ವಿರೋಧಿಗಳನ್ನು ಒಲಿಸಿಕೊಳ್ಳುವುದು ಅವರಿಗೆ ಅಸಾಧ್ಯವೆನಿಸಲಿಲ್ಲ.

ಸಮಾಜಸೇವಾ ಕಾರ್ಯಗಳಿಗಾಗಿಯೇ ತಮ್ಮನ್ನು ಮೀಸಲಾಗಿಟ್ಟ ಅವರಿಗೆ ತಮ್ಮ ವಕೀಲ ವೃತ್ತಿಯ ಕಡೆಗೆ ಹೆಚ್ಚು ಗಮನ ಕೊಡಲು ಆಗಲಿಲ್ಲ.

ಬಡವರಿಗಾಗಿ

ಮೊದಲನೆಯ ಪ್ರಪಂಚದ ಯುದ್ಧದ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಕಿಯ ಬೆಲೆ ಏರಿತು. ಹಸಿವಿನಿಂದ ಕಂಗೆಟ್ಟ ಜನರು ಉದ್ರೇಕಗೊಂಡರು. ಸದಾಶಿವರಾಯರು ಸಂತ್ರಸ್ತರಿಗೆ ಸಹಾಯ ಮಾಡಲು ಧನ ಸಂಗ್ರಹಿಸಿದರು. ತಮ್ಮ ಸ್ವಂತ ಹಣ ಅದಕ್ಕೆ ಸೇರಿಸಿದರು. ಮಾರುಕಟ್ಟೆಯ ಬೆಲೆಗೆ ಅಕ್ಕಿಯನ್ನು ಕೊಂಡರು. ಶ್ರೀಸಾಮಾನ್ಯನಿಗೆ ಎಟಕುವ ಬೆಲೆಯಲ್ಲಿ ಅಕ್ಕಿ ಮಾರುವ ವ್ಯವಸ್ಥೆ ಮಾಡಿದರು. ತೀರಾ ಬಡವರಿಗೆ ಧರ್ಮಾರ್ಥವಾಗಿ ಅಕ್ಕಿ ಹಂಚಿದರು.

ಪ್ರೀತಿಯ ಮಗ

ಯುದ್ಧವು ಕೊನೆಯ ಹಂತದಲ್ಲಿದ್ದಾಗ ಅವರ ತಂದೆ ಸ್ವರ್ಗಸ್ಥರಾದರು. ಸದಾಶಿವರಾಯರಿಗೆ ತಾಯಿಯಲ್ಲಿದ್ದ ಪ್ರೀತಿಯ ಜೊತೆಗೆ ಈಗ ಅನುಕಂಪವೂ ಸೇರಿತು. ಮನೆಯನ್ನು ಬಿಟ್ಟು ಹೊರಗೆ ಹೋಗುವಾಗ ತಾಯಿಯೊಡನೆ ಹೇಳಿ ಮುಗುಳ್ನಗುತ್ತಾ ಹೊರಡುತ್ತಿದ್ದರು. ಮನೆಗೆ ಹಿಂದಿರುಗಿದಾಗ ಮನೆಯ ಹೊಸ್ತಿಲು ದಾಟುವ ಮೊದಲು, “ಅಮ್ಮಾ, ನಾನು ಬಂದೆ” ಎಂದು ಹೇಳುತ್ತಿದ್ದರು. ಆಶೀರ್ವದಿಸಿ ಕಳುಹಿಸುವ ತಾಯಿಯು ಮನೆಗೆ ಮರಳಿದ ಮಗನನ್ನು ಮುಗುಳ್ನಗೆಯಿಂದ ಸ್ವಾಗತಿಸುತ್ತಿದ್ದರು. ಬಿಡುವಿಲ್ಲದ ಕಾರ್ಯಭಾರವಿದ್ದರೂ ಸಮಯ ಸಿಕ್ಕಿದಾಗ ತಾಯಿಯ ಬಳಿ ಕುಳಿತು ಪ್ರೀತಿಯಿಂದ ಮಾತಾಡುತ್ತಿದ್ದರು.

ಗಾಂಧೀಜಿ ನಡೆದ ಹಾದಿಯಲ್ಲಿ

ಬಾಲ್ಯದಿಂದ ಅವರಲ್ಲಿ ಬೆಳೆದುಬಂದ ಮಾನವ ಭಕ್ತಿಯೇ ಅವರ ದೇಶಭಕ್ತಿಗೆ ಬುನಾದಿ. ಅವರ ದೇಶಭಕ್ತಿ ಗಾಂಧೀಭಕ್ತಿಯ ರೂಪದಲ್ಲಿ ಪ್ರಕಟವಾಯಿತು. ೧೯೧೭ ರಲ್ಲಿಯೇ ಅವರು ಗಾಂಧೀಜಿಗೆ ಪತ್ರ ಬರೆದು ಅವರ ಜೊತೆಗೂಡಿದರು. ಬಾಪೂಜಿಯು ಸತ್ಯಾಗ್ರಹ ಆರಂಭಿಸಿ ದಾಗ ದೇಶದಲ್ಲಿ ಈ ಚಳುವಳಿಯ ಕರೆಗೆ ಓಗೊಟ್ಟ ಮೊದಲಿಗರಲ್ಲಿ ಕಾರ್ನಾಡರು ಒಬ್ಬರು. ಸತ್ಯಾಗ್ರಹದ ಪ್ರತಿಜ್ಞೆಗೆ ಸಹಿ ಮಾಡಿದವರಲ್ಲಿ ಕರ್ನಾಟಕದಿಂದ ಇವರೇ ಮೊದಲಿಗರು.

ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಜನ್ಮತಾಳಿರಲಿಲ್ಲ. ಹೆಸರು ಮಾತ್ರ ಕೇಳಿಬರುತ್ತಿತ್ತು. ಕಾರ್ನಾಡರು ಊರಿಂದ ಊರಿಗೆ ತಿರುಗಾಡಿ ಕಾಂಗ್ರೆಸ್ ಸಂದೇಶವನ್ನು ಮನೆ ಮನೆಗೆ ಮುಟ್ಟಿಸಿದರು. ಅಲ್ಲಲ್ಲಿ ಸಭೆ ಸೇರಿಸಿದರು. ಕಾಂಗ್ರೆಸ್ ಧ್ಯೇಯಧೋರಣೆ ಪ್ರಚಾರ ಗೊಳಿಸಿದರು. ಕಾಂಗ್ರೆಸ್ ಸಮಿತಿ ರಚಿಸಿದರು. ಅವರ ಪರಿಶ್ರಮದ ಫಲವಾಗಿ ಕನ್ನಡನಾಡಿನಲ್ಲಿ ಕಾಂಗ್ರೆಸ್ ಬಲವಾಗಿ ಬೇರೂರಿತು. ಅವರು ತಮ್ಮ ಕೊನೆಯ ದಿನದವರೆಗೂ ನಿಷ್ಠಾವಂತ ಕಾಂಗ್ರೆಸಿಗರಾಗಿದ್ದರು.

ಗಾಂಧೀಜಿಯು ಹೊಸ ಹೋರಾಟದ ಕಹಳೆಯನ್ನೂದಿದರು. ಸರ್ಕಾರದೊಡನೆ ಅಸಹಕಾರ ಮಾಡಿ ಎಂದು ಕರೆ ಕೊಟ್ಟರು. ೧೯೨೦ ರ ಆಗಸ್ಟ್ ಇಪ್ಪತ್ತನೆಯ ದಿನಾಂಕ ಮಂಗಳೂರಿಗೆ ಬಾಪೂಜಿಯ ಆಗಮನ; ತಮ್ಮ ಹೊಸ ಧೋರಣೆಯ ಘೋಷಣೆ.  ಕಾರ್ನಾಡರು ಅಂದು ಬಾಪೂಜಿಯಿಂದ ದೀಕ್ಷೆ ಪಡೆದರು. ಅವರ ಜೀವನದಲ್ಲಿ ತೀವ್ರ ಬದಲಾವಣೆಗೆ ಅದೇ ನಾಂದಿಯಾಯಿತು. ಆ ಬಳಿಕ ಅವರ ಜೀವನದಲ್ಲಿ ವಿಶೇಷ ಪರಿವರ್ತನೆಯಾಯಿತು. ಶ್ರೀಮಂತಿಕೆಯ ಆಡಂಬರದ ಉಡುಪು ತೊಡುತ್ತಿದ್ದವರು ಸರಳ ಖಾದಿಧಾರಿಗಳಾದರು. ಪಾದರಕ್ಷೆ ಧರಿಸಿ ವಾಯು ವಿಹಾರಕ್ಕೆ ಹೋಗುತ್ತಿದ್ದವರು ಬರಿಗಾಲಲ್ಲಿ ಊರುಕೇರಿ, ಹೊಲಗೇರಿಗಳಲ್ಲಿ ಅಲೆದಾಡಿದರು. ರುಚಿಕರವಾದ ಆಹಾರ ಸೇವಿಸುತ್ತಿದ್ದವರು ಸರಳ ಸಾತ್ವಿಕ ಆಹಾರ ಸೇವಿಸತೊಡಗಿದರು. ಆಟಗಳಲ್ಲಿ ಕೀರ್ತಿ ಪಡೆದಿದ್ದ ’ಎಡಗೈ ಕಾರ್ನಾಡರು’ ಕ್ರಿಕೆಟ್ – ಟೆನ್ನಿಸ್ ದಾಂಡುಗಳನ್ನು ಬಿಟ್ಟು ರಾಟೆ, ತಕಲಿ ಹಿಡಿಯತೊಡಗಿದರು. ಕ್ಲಬ್ಬಿನ ಪ್ರಿಯಮಿತ್ರರಾಗಿದ್ದವರು ಭಜನಾ ಮಂಡಳಿ ಮತ್ತು ಸೇವಾಕೇಂದ್ರಗಳಲ್ಲಿ ಭಾಗವಹಿಸಲು ಆರಂಭಿಸಿದರು. ತಮ್ಮ ಐಶ್ವರ್ಯವನ್ನು ದೇಶಕ್ಕಾಗಿ ಧಾರೆಯೆರೆದು ತಾವು ದಾರಿದ್ರ್ಯದತ್ತ ಹೆಜ್ಜೆ ಇಟ್ಟರು. ತಮ್ಮ ಆಂತರಿಕ ಪ್ರೇರಣೆ ಹಾಗೂ ಗಾಂಧೀಜಿಯ ಕರೆಗೆ ಓಗೊಟ್ಟರು; ಕಾಯಿದೆ ಭಂಗ ಮತ್ತು ಶಾಂತಿಯುತ ಪ್ರತಿಭಟನೆಗೆ ಸಿದ್ಧರಾದರು.

ಸಾಹಸದ ಕೆಲಸ

ಸದಾಶಿವರಾಯರೂ ಅವರಂತಹ ಇತರ ದೇಶಾಭಿಮಾನಿಗಳೂ ಮಾಡಿದ ಕೆಲಸ ಎಷ್ಟು ಕಷ್ಟವಾದದ್ದು ಎಂದು ಈಗ ಅರ್ಥಮಾಡಿಕೊಳ್ಳುವುದೂ ಕಷ್ಟ.

ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು ಎಂದು ಹೇಳುವುದೇ ಆಗ ಮಹಾಪರಾಧ. ಹಾಗೆಂದವರು ಸೆರೆ ಮನೆಗೆ ಹೋಗಲು ಸಿದ್ಧರಾಗಿರಬೇಕು. ಏನೋ ಒಂದು ನೆಪ ಮಾಡಿ ಸರ್ಕಾರ ಅವರ ಮನೆ ಮಠಗಳನ್ನು ಕಿತ್ತುಕೊಳ್ಳುತ್ತಿತ್ತು. ಅವರನ್ನು ಭಿಕಾರಿಗಳನ್ನಾಗಿ ಮಾಡಿ ಬಿಡುತ್ತಿತ್ತು. ಭಾರತೀಯರಲ್ಲೆ ಎಷ್ಟೋ ಜನಕ್ಕೆ ಬ್ರಿಟಿಷರೆಂದರೆ ಭಕ್ತಿ, ಬಹುಮಂದಿಗೆ ಭಯ. ರಾಜ ಮಹಾರಾಜರುಗಳನ್ನು, ನವಾಬ ನಿಜಾಮರುಗಳನ್ನು ಮೂಲೆಗೆ ಕೂಡಿಸಿದವರನ್ನು, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಸಾಮ್ರಾಜ್ಯ ಕಟ್ಟಿಕೊಂಡವರನ್ನು ಓಡಿಸಲು ಸಾಧ್ಯವೆ ಎಂಬ ಅಪನಂಬಿಕೆ. ನೂರರಲ್ಲಿ ನಾಲ್ಕೈದು ಮಂದಿಗೂ ಓದುಬರಹ ಬಾರದು. ಇನ್ನು ವೃತ್ತ ಪತ್ರಿಕೆಗಳನ್ನು ಓದುವವರು ಎಷ್ಟು ಜನ? ಪೊಲೀಸರೆಂದರೆ ಜನಕ್ಕೆ ಹೆದರಿಕೆ, ಸಿಪಾಯಿಗಲೆಂದರೆ ನಡುಕ. ಇಂತಹ ಸ್ಥಿತಿಯಲ್ಲಿ ಜನರಿಗೆ ದೇಶದ ಸ್ಥಿತಿ ತಿಳಿಸಬೇಕು, ಅವರ ದೇಶಪ್ರೇಮವನ್ನು ಎಚ್ಚರಿಸಬೇಕು, ಅವರಲ್ಲಿ ಧೈರ್ಯವನ್ನು ತುಂಬಬೇಕು.

ಶ್ರೀಸಾಮಾನ್ಯರೂ ಈ ಆದರ್ಶಜೀವಿಯನ್ನು ತಮ್ಮ ಮಾರ್ಗದರ್ಶಕರೆಂದು ಸಂತೋಷದಿಂದ ಒಪ್ಪಿದರು.

’ದೇವರಿದ್ದಲ್ಲಿ ನಾವೂ ಇರುವೆವು’ ಎಂದು ಮುಂದೆ ಬಂದರು. ರಾಷ್ಟ್ರೀಯ ಚೈತನ್ಯ ಚಿಗುರೊಡೆಯಿತು. ’ದೇಶಕ್ಕಾಗಿ ಕೊಡಬೇಕು, ಕೊಟ್ಟು ಗೆಲ್ಲಬೇಕು’ ಎಂಬ ಭಾವನೆ ಬೆಳೆಯಿತು.

೧೯೨೦ರ ನಾಗಪುರ ಕಾಂಗ್ರೆಸ್ನಿಂದ ಮರಳಿ ಬಂದ ಬಳಿಕ ಅವರು ವಕೀಲಿ ವೃತ್ತಿಗೆ ತಿಲಾಂಜಲಿಯನ್ನಿತ್ತರು. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸ್ಥಾಪಿಸಿದರು. ಜನ ಬಡಿದೆಬ್ಬಿಸಿದ ಸ್ಫೂರ್ತಿಯಿಂದ ಎಚ್ಚೆತ್ತಿತು. ಚರಕ, ರಾಟೆಗಳು ತಿರುಗವ ಸಪ್ಪಳ ಎಲ್ಲೆಲ್ಲೂ ಕೇಳಿಸಿತು. ಕಾರ್ನಾಡರೇ ಸ್ವತಃ ಖಾದಿಯನ್ನು ಹೊತ್ತು ಮನೆ ಮನೆಗೆ ಕೊಂಡುಹೋದರು. ಜನರಲ್ಲಿ ಹೊರಹೊಮ್ಮಿದ ಸ್ಫೂರ್ತಿ ಅದ್ಭುತ. ಕಾರ್ಯವೇಗಕ್ಕೆ ಕಾರ್ನಾಡರೇ ’ಯಂತ್ರಶಕ್ತಿ’.

ವಿದ್ಯಾರ್ಥಿಗಳಿಗಾಗಿ

ನಾಡಿನ ಸ್ವಾತಂತ್ರ್ಯದ ಹೋರಾಟದಲ್ಲಿ ವಿದ್ಯಾರ್ಥಿಗಳು ಭಾಗವಿಸಲೇಬೇಕು. ಅಲ್ಲದೆ ಸಮಾಜದಲ್ಲಿನ ಮೂಢ ನಂಬಿಕೆಗಳು, ಮೇಲು -ಕೀಳು ಭಾವನೆಗಳು ಹೋಗ ಬೇಕಾದರೆ ಎಳೆಯರಿಗೆ ಸರಿಯಾದ ಮಾರ್ಗದರ್ಶನ ಆಗಬೇಕು. ವಿದೇಶೀ ಸರ್ಕಾರಕ್ಕೆ ಇದು ಬೇಕಿಲ್ಲ. ಈ ಕೆಲಸವನ್ನು ನಮ್ಮ ದೇಶದವರೇ ಮಾಡಬೇಕು. ಈ ಅಗತ್ಯವನ್ನು ಗುರುತಿಸಿ ಸದಾಶಿವರಾಯರು ವಿದ್ಯಾರ್ಥಿಗಳನ್ನು ರಾಷ್ಟ್ರದ ಸೇವೆಗೆ ಸೆಳೆಯಲು ಪ್ರಯತ್ನ ಗಳನ್ನು ಪ್ರಾರಂಭಿಸಿದರು.

ಅವರು ’ವಿದ್ಯಾರ್ಥಿ ಭ್ರಾತೃ ವೃಂದ’ವನ್ನು ಸ್ಥಾಪಿಸಿದರು. ಆ ವಿದ್ಯಾರ್ಥಿಗಳಿಗೆ ಅವರು ಧನಸಹಾಯ ಮಾಡಿದರು. ಸದಾಶಿವರಾಯರ ಮುಖಂಡತ್ವದಲ್ಲಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಬಹಿಷ್ಕಾರ ಹಾಕಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು.

೧೯೨೧ ರಲ್ಲಿ ಕಾರ್ನಾಡರ ಮಂಗಳೂರು ಮನೆಯ ಹೊರಭಾಗದಲ್ಲಿ ತಿಲಕ್ ವಿದ್ಯಾಲಯ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ೨೦ ರಾಷ್ಟ್ರೀಯ ಶಾಲೆಗಳನ್ನು ಅವರು ಸ್ಥಾಪಿಸಿದರು. ಆ ಶಾಲೆಗಳಲ್ಲಿ ಎಲ್ಲ ಜಾತಿಯವರಿಗೂ ಪ್ರವೇಶವಿತ್ತು. ಓದುಬರಹ (ಹಿಂದಿ ಸಹ), ನೂಲುವುದು, ನೇಯುವುದು ಇತ್ಯಾದಿ ಕಲಿಸಲಾಯಿತು. ಮಂಗಳೂರಿನಲ್ಲಿ ಈ ಶಾಲೆಗೆ ಬರುತ್ತಿದ್ದ ಸುಮಾರು ೪೦ ಹಿರಿಜನ ವಿದ್ಯಾರ್ಥಿಗಳಿಗೆ ಕಾರ್ನಾಡರು ಧಮಾರ್ಥ ಮಧ್ಯಾಹ್ನದ ಊಟ ಒದಗಿಸಿದರು.

೧೯೨೨ ರಲ್ಲಿ ಶ್ರೀಮತಿ ಸರೋಜಿನಿ ನಾಯ್ಡುರವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮವಾಗಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತನ್ನು ಕಾರ್ನಾಡರು ರಚಿಸಿದರು. ಶ್ರೀ ಸ್ವಾಮೀ ಧರ್ಮಾನಂದರು ಈ ಸಮಾರಂಭದಲ್ಲಿ ಭಾಗವಹಿಸಿದರು. ಅವರ ಬೆಂಬಲದಿಂದ ಕಾರ್ನಾಡರ ಹರಿಜನ ಸೇವಾಕಾರ್ಯಕ್ಕೆ ಅಪೂರ್ವ ಚೈತನ್ಯ ದೊರಕಿತು.

ಅವರ ಕೈಕಾಲುಗಳಿಗೆ ಸರಪಳಿ ಹಾಕಿ ಪೋಲಿಸರು ಕರೆತಂದರು

ಸಿದ್ಧಾಪುರ ಸತ್ಯಾಗ್ರಹ

೧೯೨೨ರಲ್ಲಿ ಭಾರತದಲ್ಲಿ ಬ್ರಿಟಿಷರ ದಬ್ಬಾಳಿಕೆ ಮೇರೆ ಮೀರಿತ್ತು. ಭಾರತೀಯರ ಸ್ವಾತಂತ್ರ್ಯದ ಹೋರಾಟ ಪ್ರಬಲವಾಗುತ್ತಿತ್ತು. ಉತ್ತರ ಭಾರತದಲ್ಲಿ ಬಾರ್ಡೋಲಿ ಎಂಬ ಪ್ರದೇಶದಲ್ಲಿ ಸತ್ಯಾಗ್ರಹ, ತೆರಿಗೆ ನಿರಾಕರಣೆಯ ಆಂದೋಲನ ಮತ್ತು ಪ್ರತಿ ಸರ್ಕಾರದ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿತ್ತು. ದಕ್ಷಿಣದಲ್ಲಿ ಸಿದ್ಧಾಪುರದಲ್ಲಿ ಪ್ರತಿ ಬಾರ್ಡೋಲಿಯನ್ನು ಕಾರ್ನಾಡರು ಸಿದ್ಧಗೊಳಿಸಿದರು. ಸರ್ಕಾರ, ಪೊಲೀಸರು ಎಂದರೆ ರೈತರಿಗೆ ನಡುಕ. ಪಾಪ, ವಿದ್ಯೆ ಇಲ್ಲದ ಜನ. ಅಂತಹವರಿಗೆ, ’ನೀವು ಸರ್ಕಾರಕ್ಕೆ ಕಂದಾಯ ಕೊಡಬೇಡಿ. ಸರ್ಕಾರ ಎನು ಮಾಡಿದರೂ ಧೈರ್ಯ ಕೆಡಬೇಡಿ. ಪೊಲೀಸರು ಬರಲಿ, ಮನೆ ಹೊಲ ಕಿತ್ತುಕೊಳ್ಳಲಿ, ನಿಮ್ಮನ್ನೂ ನಿಮ್ಮ ಮನೆಯವರನ್ನೂ ಹೊಡೆದು ಬಡಿದು ಮಾಡಲಿ, ಸಹಿಸಿಕೊಳ್ಳಿ, ಆದರೆ ಕಂದಾಯ ಕೊಡಬೇಡಿ’ ಎಂದರೆ ಅವರು ಕೇಳುವುದು ಎಷ್ಟು ಕಷ್ಟ! ಹಾಗೆ ನಡೆದುಕೊಳ್ಳುವುದು ಇನ್ನೆಷ್ಟು ಕಷ್ಟ! ಆದರೆ ಸದಾಶಿವರಾಯರು ಹೆದರಿದ್ದ ರೈತರನ್ನೂ ಉಕ್ಕಿನ ಯೋಧರನ್ನಾಗಿ ಮಾಡಿದರು.

೧೯೨೩ ರಲ್ಲಿ ಅವರ ಹೆಂಡತಿ ತೀರಿಹೋದರು. ಇದು ಅವರ ಹೃದಯವನ್ನು ಕರಗಿಸಿತು. ಅವರು ಮನಸ್ಸಿನ ಶಾಂತಿಗಾಗಿ ಮಹಾತ್ಮ ಗಾಂಧಿಯವರ ಸನ್ನಿಧಿಗೆ, ಸಾಬರ್ಮತಿ ಆಶ್ರಮಕ್ಕೆ ಹೋದರು. ಆದರೆ ಅಲ್ಲಿ ಹೆಚ್ಚು ಸಮಯ ನಿಲ್ಲಲು ಅವರಿಗೆ ಅವಕಾಶ ದೊರೆಯಲಿಲ್ಲ.

ಆಗ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ; ಕಾಂಗ್ರೆಸ್ಸಿನ ಒಗ್ಗಟ್ಟಿನಲ್ಲಿ ಬಿರುಕು. ಗಾಂಧೀಜಿಯ ಕಾಯಿದೆ ಭಂಗ ಚಳವಳಿ ಕಡೆಗಣಿಸವಂತಿತ್ತು. ಆಗ ಬಾಪುವಿನ ಸಿದ್ಧಾಂತವನ್ನು ಎತ್ತಿಹಿಡಿದು ಹೋರಾಡಿದವರಲ್ಲಿ ಸದಾಶಿವರಾಯರು ಒಬ್ಬರು. ಅವರ ಸಹೃದಯತೆ ಮಹಾತ್ಮರ ಹೃದಯವನ್ನು ಗೆದ್ದಿತು.

ಪ್ರವಾಹದಲ್ಲಿ ನೊಂದವರಿಗಾಗಿ

೧೯೨೩ ರಲ್ಲಿ ಪ್ರವಾಹದ ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ತುಂಬ ಕಷ್ಟವಾಯಿತು. ಸದಾಶಿವರಾಯರು ನೆರೆ ಪರಿಹಾರ ಕಾರ್ಯಕ್ಕಾಗಿ ಅವಿಶ್ರಾಂತವಾಗಿ ದುಡಿದರು. ಮಳೆ, ಬಿಸಿಲು, ಕೆಸರು, ಕೊಚ್ಚಿ, ಕಾಡುದಾರಿ ಎನ್ನದೆ ಅಲೆದಾಡಿದರು. ನಿರಾಶ್ರಿತರಿಗೆ ಶಿಬಿರ ನಿರ್ಮಿಸಿದರು; ಅನ್ನ, ಬಟ್ಟೆ ಮತ್ತು ಔಷಧಿ ಒದಗಿಸಿದರು. ಕೆಸರು ಕೊಚ್ಚೆಗಳಲ್ಲಿ ಓಡಾಡುವಾಗ ಕಾಲಿಗೆ ಮುಳ್ಳುಗಳು ಚುಚ್ಚುತ್ತಿದ್ದವು. ಅವನ್ನು ತೆಗೆದುಹಾಕುವಷ್ಟೂ ತಮ್ಮ ದೇಹದ ಕಡೆ ಗಮನವಿರಲಿಲ್ಲ ಅವರಿಗೆ. ಅವರು ನಿದ್ರೆಯಲ್ಲಿದ್ದಾಗ ಯಾರೋ ಪುಣ್ಯಾತ್ಮರು ಕಾಲಿನ ಮುಳ್ಳು ಮತ್ತು ಕೀವು ತೆಗೆದು ಪಟ್ಟಿ ಹಾಕಿದರಂತೆ. ಮನೆ ಮಠ ಕಳೆದುಕೊಂಡವರು ಬಂದರೆ ಸದಾಶಿವರಾಯರ ಮನೆಯ ವಠಾರವೇ ಅವರಿಗೆ ವಸತಿ.

ಕೊಡುಗೈಯ ಕಾರ್ನಾಡರ ಎಡಗೈ ಕೊಟ್ಟದ್ದನ್ನು ಬಲಗೈ ಅರಿಯದು. ಯಾರೋ ಒಬ್ಬರು ಅವರನ್ನು ಕೇಳಿದರು: “ಕಾರ್ನಾಡರೇ, ನಿಮ್ಮ ದಾನಬುದ್ಧಿ ದೊಡ್ಡದು. ಆದರೆ ಕೆಲವರು ನಿಮಗೆ ಮೋಸ ಮಾಡಿ ನಿಮ್ಮಿಂದ ತಮಗೆ ಬೇಕಾದ್ದನ್ನು ಪಡೆದುಕೊಳ್ಳಬಹುದಲ್ಲ? ಇದನ್ನು ಯೋಚಿಸಿದ್ದೀರಾ?” ಅದಕ್ಕೆ ಅವರ ಉತ್ತರ – “ಕೊರತೆಯಲ್ಲಿದ್ದವರಿಗೆ ಕೊಡುವುದು ನನ್ನ ಧರ್ಮ. ಅದರ ದುರುಪಯೋಗದ ಕೊರಗು ನನ್ನ ಧರ್ಮವಲ್ಲ.”

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿವೇಶನ

೧೯೨೪ರ ಕಾಂಗ್ರೆಸ್ ಅಧಿವೇಶನ ಕರ್ನಾಟಕದಲ್ಲಿ ಜರುಗುವುದೆಂದು ನಿರ್ಣಯವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಆದರೆ ಕನ್ನಡನಾಡಿನಲ್ಲಿ ಎಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ವಾದವೆದ್ದಿತು. ಈ ಅಧಿವೇಶನ ತಮ್ಮ ಊರಿನಲ್ಲಿ ಆಗಬೇಕು ಎಂದು ಮಂಗಳೂರಿನವರಿಗೆ ಉತ್ಸಾಹ, ತಮ್ಮ ಊರಿನಲ್ಲಿ ಆಗಬೇಕೆಂದು ಬೆಳಗಾವಿಯವರಿಗೆ ಉತ್ಸಾಹ. ಬಿರುಸಾದ ವಾದವೇ ಬೆಳೆಯಿತು. ಮಂಗಳೂರಿಗೆ ಬಹುಮತ ದೊರೆಯಿತು. ಬೆಳಗಾವಿಯವರಿಗೆ ತುಂಬ ಅಸಮಾಧಾನವಾಯಿತು. ಕಾರ್ನಾಡರು ಅಧಿವೇಶನ ಬೆಳಗಾವಿಯಲ್ಲಿ ನಡೆಯಲು ಆತ್ಮಸಂತೋಷದಿಂದಲೇ ಬಿಟ್ಟುಕೊಟ್ಟರು. ಅವರ ತ್ಯಾಗಬುದ್ಧಿಗೆ ಇದೊಂದು ನಿದರ್ಶನ.

ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು ಗಾಂಧೀಜಿ. ಅಧಿವೇಶನದ ಯಶಸ್ಸಿಗೆ ಕಾರ್ನಾಡರು ಮನಃಪೂರ್ವಕ ಶ್ರಮಿಸಿದರು. ಅವರ ತೇಜಸ್ಸು ಬೆಳಗಿತು. ಬಾಪೂಜಿಗೆ ಕಾರ್ನಾಡರು ಮತ್ತಷ್ಟು ಆತ್ಮೀಯರಾದರು.

ಈ ಕಾಂಗ್ರೆಸ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಗೋಕರ್ಣದಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಜರಗಿತು. ದ್ವಾರಕಾಪೀಠದ ಭಾರತೀಕೃಷ್ಣ ತೀರ್ಥರು ಈ ಪರಿಷತ್ತಿಗೆ ಅಧ್ಯಕ್ಷರು. ಕಾರ್ನಾಡರು ಅಸ್ಪೃಶ್ಯತಾ ನಿವಾರಣೆಯ ಮಹತ್ವಪೂರ್ಣ ಠರಾವನ್ನು ಮಂಡಿಸಿದರು. ಸಮಾಜದಲ್ಲಿ ಯಾರನ್ನೆ ಆಗಲಿ ಹುಟ್ಟಿನಿಂದ ಕೀಳು ಎಂದು ಕಾಣಬಾರದು. ಯಾರನ್ನೆ ಆಗಲಿ ಮುಟ್ಟಬಾರದವರು ಎಂದು ದೂರ ಇಡಬಾರದು – ಇದು ನಿರ್ಣಯದ ತಿರುಳು. ಅದು ಸರ್ವಾನುಮತದಿಂದ ಸ್ವೀಕೃತವಾಯಿತು.

ಬ್ರಿಟಿಷರ ವಿರುದ್ಧ ಹೋರಾಡಲು ಜಾತಿ-ಮತ ಭೇದ ಮರೆತು ಭಾರತೀಯರು ಒಗ್ಗಟ್ಟಾಗಬೇಕಾಗಿತ್ತು. ಅಲ್ಲಲ್ಲಿ ಹಿಂದು-ಮುಸ್ಲಿಂ ಗಲಭೆಗಳು ನಡೆದುವು. ಜಾತೀಯ ಸೌಹಾರ್ದತೆಯನ್ನು ಬೆಳೆಸಲು ಸದಾಶಿವರಾಯರು ದೇಶದ ಎಲ್ಲ ಭಾಗಗಳಲ್ಲಿ ಪ್ರವಾಸ ಮಾಡಿರು.

ಸರ್ಕಾರದ ಸೇಡು

ಉತ್ತರ ಭಾರತದಲ್ಲಿ ವಲ್ಲಭಭಾಯಿ ಪಟೇಲರ ನಾಯಕತ್ವದಲ್ಲಿ ಬಾರ್ಡೋಲಿಯ ಜನ, ದಕ್ಷಿಣ ಭಾರತದಲ್ಲಿ ಕಾರ್ನಾಡು ಸದಾಶಿವರಾಯರ ನಾಯಕತ್ವದಲ್ಲಿ ಸಿದ್ಧಾಪುರದ ಜನ ಸ್ವಾತಂತ್ರ್ಯದ ಹೋರಾಟದಲ್ಲಿ ಅಪ್ರತಿಮ ತ್ಯಾಗ ಮತ್ತು ಸಾಹಸಗಳನ್ನು ತೋರಿದ್ದರು. ಸರ್ಕಾರಕ್ಕೆ ತೆರಿಗೆ ಸಲ್ಲಿಸದೆ ಹೋರಾಟ ನಡೆಸಿದ್ದರು. ಸರ್ಕಾರ ಇವರ ಮೇಲೆ ಸೇಡು ತೀರಿಸಲು ಸಮಯ ಕಾಯುತ್ತಿತ್ತು. ೧೯೨೬ ರಲ್ಲಿ ಈ ಪ್ರದೇಶಗಳ ರೈತರು ಕೊಡಬೇಕಾಗಿದ್ದ ತೀರ್ವೆಯನ್ನು ಏರಿಸಿತು. ತೋಟದ ರೈತರು ಕೊಡಬೇಕಾದ ತೀರ್ವೆಯನ್ನು ಹೆಚ್ಚು ಏರಿಸಿ, ಗದ್ದೆಯ ರೈತರು ಮತ್ತು ತೋಟದ ರೈತರನ್ನು ವಿಭಜಿಸಿ ಆಳುವ ತಂತ್ರವನ್ನೂ ಹೂಡಿತ್ತು. ಕಾರ್ನಾಡರ ಸಲಹೆಯಂತೆ ಸಿದ್ಧಾಪುರದ ರೈತರು ಸರ್ಕಾರದ ಅನ್ಯಾಯವನ್ನು ಎದುರಿಸಲು ಸಿದ್ಧರಾದರು. ಸರ್ಕಾರಿ ಕಚೇರಿಯಲ್ಲಿ ಏಕಕಾಲದಲ್ಲಿ ಸಾವಿರಗಟ್ಟಲೆ ಮನವಿಗಳು. ಅದನ್ನು ಕಂಡ ಕಮಿಷನರು ಕಂಗಾಲಾಗಿ ತೀರ್ವೆ ಏರಿಸುವ ವಿಚಾರ ಕೈಬಿಟ್ಟರು. ಇದೊಂದು ಶಾಂತಿಯುತ ಹೋರಾಟದ ಅಸಾಧಾರಣ ವಿಜಯ. ಆಗ ರೈತರಿಗೆ ತಮ್ಮ ಸಾಮೂಹಿಕ ಸಾಮರ್ಥ್ಯದ ಸಾಕ್ಷಾತ್ಕಾರವಾಯಿತು.

೧೯೨೭ – ಸೈಮನ್ ಎಂಬ ಸಮಿತಿ ಇಂಗ್ಲೆಂಡಿನಿಂದ ಭಾರತಕ್ಕೆ ಬರಲಿತ್ತು. ಇದು ಭಾರತೀಯರಿಗೆ ಎಷ್ಟು ಅಧಿಕಾರ ಭಾರತಕ್ಕೆ ಬರಲಿತ್ತು. ಇದು ಭಾರತೀಯರಿಗೆ ಎಷ್ಟು ಅಧಿಕಾರ ಕೊಡಬಹುದು ಎಂದು ಪರಿಶೀಲಿಸಲು ನೇಮಕವಾದ ಸಮಿತಿ. ಆದರೆ ಇದರಲ್ಲಿ ಭಾರತೀಯರು ಒಬ್ಬರೂ ಇರಲಿಲ್ಲ. ಇದರಿಂದ ಭಾರತೀಯರಿಗೆ ಕೋಪ ಬಂದಿತು. ಸಮಿತಿಯನ್ನು ವಿರೋಧಿಸುವ ತೀರ್ಮಾನ ಕೈಗೊಂಡರು. ಕಾರ್ನಾಡರು ಬಹಿಷ್ಕಾರದ ತಂತಿಗಳನ್ನು ಸೈಮನರಿಗೆ ಕಳುಹಿಸಿದರು. ಜನತೆಯಲ್ಲಿ ಜಾಗೃತಿಯನ್ನುಂಟುಮಾಡಲು ಅವರು ಪ್ರಚಾರ ಶಿಬಿರವನ್ನು ಏರ್ಪಡಿಸಿದರು.

ಉಪ್ಪಿನ ಸತ್ಯಾಗ್ರಹ

೧೯೨೯ ರ ಲಾಹೋರ್ ಅಧಿವೇಶನದಲ್ಲಿ ’ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಗುರಿ’ ಎಂದು ಕಾಂಗ್ರೆಸ್ ಘೋಷಿಸಿತು. ಆಗ ಭಾರತೀಯರು ಸರ್ಕಾರದ ಅಪ್ಪಣೆ ಇಲ್ಲದೆ ಉಪ್ಪನ್ನು ತಯಾರಿಸುವಂತಿರಲಿಲ್ಲ. ಬ್ರಿಟಿಷ್ ಸರ್ಕಾರವನ್ನು ವಿರೋಧಿಸಲು ಗಾಂಧೀಜಿ ಸಮುದ್ರದ ನೀರಿನಿಂದ ಉಪ್ಪನ್ನು ಮಾಡಲು ತೀರ್ಮಾನಿಸಿದರು. ಇದಕ್ಕಾಗಿ ದಾಂಡಿ ಎಂಬ ಸ್ಥಳಕ್ಕೆ ಪಾದಯಾತ್ರೆ ಮಾಡಲು ನಿಶ್ಚಯಿಸಿದರು. ಕಾರ್ನಾಡರು ಬಾಪೂಜಿಯನ್ನು ಕಂಡು ಮಾತಾಡಿಬಂದರು. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಗುವಂತೆ ಪ್ರಯತ್ನಿಸಿದರು. ರಾಜಾಜಿಯೊಡನೆ ಸಂಚರಿಸಿ ರಭಸದ ಪ್ರಚಾರ ನಡೆಸಿದರು. ಅತ್ತ ದಾಂಡಿಯಾತ್ರೆ; ಇತ್ತ ಅಂಕೋಲ ಯಾತ್ರೆ, ಅಲ್ಲಿ ಗಾಂಧೀಜಿ; ಇಲ್ಲಿ ಕಾರ್ನಾಡರು.

ಅಂಕೋಲ ಸತ್ಯಾಗ್ರಹವು ಯಶಸ್ವಿಯಾದುದನ್ನು ಕಂಡು ೧೯೩೦ರ ಏಪ್ರಿಲ್ ೨೦ ರಂದು ಸರ್ಕಾರ ಕಾರ್ನಾಡರನ್ನು ಬಂಧಿಸಿತು. ಅವರಿಗೆ ಹದಿನೈದು ತಿಂಗಳ ಕಠಿಣ ಸಜೆ ವಿಧಿಸಲ್ಪಟ್ಟಿತು. ಅವರು ಸತ್ಯಾಗ್ರಹಕ್ಕೆ ಹೊರಟಾಗ ತನ್ನ ಹಿರಿಯ ಮನೆಗೆ ತಾನು ಮತ್ತೊಮ್ಮೆ ಬರಲಾರೆನೆಂದು ನೆನೆಸಿರಲಿಲ್ಲ

ದೇಶಕ್ಕಾಗಿ ಬಡವರಾದರು

ಸದಾಶಿವರಾಯರ ತಂದೆ ರಾಮಚಂದ್ರರಾಯರು ಶ್ರೀಮಂತರಾಗಿದ್ದರು. ವಕೀಲರಾಗಿ ಎರಡು ಕೈತುಂಬ ಹಣ ಸಂಪಾದಿಸುತ್ತಿದ್ದರು. ಸದಾಶಿವರಾಯರೂ ವಕೀಲರಾಗಿ ಬೇಕಾದಷ್ಟು ಹಣ ಗಳಿಸಿದರು. ರಾಜಕುಮಾರರಂತೆ ಬಾಳಬಹುದಾಗಿತ್ತು ಅವರು. ಆದರೆ ಗಾಂಧಿಜಿಯ ಹಿಂಬಾಲಕರಾದ ಮೇಲೆ ಅವರು ತಮ್ಮ ವೃತ್ತಿಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಅವರ ಕಾಲ, ಶಕ್ತಿ ಎಲ್ಲ ಕಾಂಗ್ರೆಸಿನ ಮೂಲಕ ದೇಶಕ್ಕೆ ಸೇವೆ ಮಾಡುವುದಕ್ಕೆ ಮುಡಿಪಾಗಿದ್ದವು.

ಅಲ್ಲದೆ, ಇದ್ದ ಹಣವನ್ನೆಲ್ಲ ಕಾಂಗ್ರೆಸಿನ ಕೆಲಸಕ್ಕೆ, ದೇಶದ ಕೆಲಸಕ್ಕೆ ಖರ್ಚು ಮಾಡಿಬಿಟ್ಟರು. ದೇಶದ ಕೆಲಸಕ್ಕಾಗಿ-ಸ್ವಂತ ಸುಖಕ್ಕಲ್ಲ, ಸಂಸಾರದ ಖುಷಿಗಲ್ಲ – ಸಾಲ ಮಾಡಿದರು.

ಸದಾಶಿವರಾಯರು ಸೆರೆಮನೆಯಲ್ಲಿದ್ದಾಗ ಅವರಿಗೆ ಸಾಲ ಕೊಟ್ಟವರು ಹಣಕ್ಕಾಗಿ ಅವರ ಮನೆಯವರನ್ನು ಗೋಳುಹೊಯ್ದರು. ಮನೆಯನ್ನು ಹರಾಜು ಹಾಕಿಸಲು ಪ್ರಯತ್ನಿಸಿದರು. ಅವರ ತಾಯಿ, ಮಕ್ಕಳು ಬೀದಿಯಲ್ಲಿ ನಿಲ್ಲುವ ಸ್ಥಿತಿಯಾಯಿತು.

ಸದಾಶಿವರಾಯರು ಸೆರೆಮನೆಯಿಂದ ಬಂದ ಮೇಲೂ ಈ ಹಣದ ಸಮಸ್ಯೆಗಳು ಅವರನ್ನು ಕಾಡಿದವು. ಅವರ ಸಾಲಗಾರರಲ್ಲಿ ಹಲವರು ಅವರಿಂದ ಉಪಕಾರ ಪಡೆದಿದ್ದವರು. ಆದರೆ ಹಣಕ್ಕಾಗಿ ಅವರನ್ನು ಪೇಚಾಡಿಸಿದರು. ಸದಾಶಿವರಾಯರು ತಮ್ಮ ಮನೆಯನ್ನೇ ಮಾರಿ ಸಾಲ ತೀರಿಸಲು ತೀರ್ಮಾನಿಸಿದರು. ಕಾನೂನಿನ ಪ್ರಕಾರ ಅವರ ಮುದುಕಿ ತಾಯಿಗಾಗಿ ಮನೆಯ ಮತ್ತು ಆಸ್ತಿಯ ಒಂದು ಭಾಗವನ್ನು ಉಳಿಸಿಕೊಳ್ಳಬಹುದಾಗಿತ್ತು. ಆ ಭಾಗವೇ ತಕ್ಕಷ್ಟು ಆಗುತ್ತಿತ್ತು. “ಉಳಿಸಿಕೊಳ್ಳಿ, ಇದರಲ್ಲಿ ತಪ್ಪಿಲ್ಲ; ಸಾಲಗಾರರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಿರುವಾಗ ನಿವು ಕಾನೂನಿನ ಪ್ರಕಾರ ಹೀಗೆ ನಡೆಯುವುದೇ ಸರಿ” ಎಂದು ವಕೀಲರಾಗಿದ್ದ ಅವರ ಸ್ನೇಹಿತರು ಹೇಳಿದರು. ಸದಾಶಿವರಾಯರು ಒಪ್ಪಲಿಲ್ಲ. “ಸಾಲ ಹರಿಯಲಿ, ನನಗೇನೂ ಬೇಡ” ಎಂದರು. ಅವರ ತಾಯಿಯೂ. “ನನ್ನ ಮಗ ಸಂಪೂರ್ಣವಾಗಿ ಸಾಲ ತೀರಿಸಿಬಿಡಲಿ” ಎಂದರು.

‘ನನಗೇನೂ ಬೇಡ, ಸಾಲ ಹರಿಯಲಿ’

ಮತ್ತೆ ಇತರರ ಸೇವೆ

ಹನ್ನೊಂದು ತಿಂಗಳ ಅನಂತರ ಸದಾಶಿವರಾಯರ ಬಿಡುಗಡೆಯಾಯಿತು. ಆಗ ಅವರು ಬಡವರು. ಆರ್ಥಿಕ ಸಂಪತ್ತು ಬರಿದಾಗಿತ್ತು. ದೇಹದ ಆರೋಗ್ಯ ಕೆಟ್ಟಿತ್ತು. ಬಗೆಹರಿಸಲಾಗದ ವೈಯಕ್ತಿಕ ಸಮಸ್ಯೆಗಳು, ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳಲು ಅವರಿಗೆ ಸಮಯವೆಲ್ಲಿ?

ಸಿರಸಿ, ಸಿದ್ಧಾಪುರಗಳಲ್ಲಿ ಕರ ನಿರಾಕರಣೆ ಚಳವಳಿಯ ಬಿರುಗಾಳಿ ಬೀಸಿತು. ಆ ಹೋರಾಟದಲ್ಲಿ ಪಾಲ್ಗೊಂಡ ವೀರ ಯೋಧರ ಮನೆಮಾರುಗಳು ಜಪ್ತಿಯಾದುವು. ಸುಮಾರು ೬೦೦ ನಿರಾಶ್ರಿತ ಕುಟುಂಬಗಳಿಗೆ ಸಹಾಯ ಮಾಡಲು ಕಾರ್ನಾಡರು ಮುಂಬಯಿಗೆ ಹೋಗಿ ಧನ ಸಂಗ್ರಹ ಮಾಡಿದರು. ಚಳವಳಿ ಮುಂದುವರಿಯಿತು. ಜನರ ಕಷ್ಟಗಳನ್ನು ಕಾರ್ನಾಡರಿಂದ ಕೇಳಿ ಬಾಪೂಜಿ ಮರುಗಿದರು.

ಮತ್ತೆ ಸೆರೆಮನೆಗೆ

ಆ ದಿನಗಳಲ್ಲಿ ಕಾಂಗ್ರೆಸಿಗರಲ್ಲಿ ಒಂದು ರೀತಿಯ ಜಡತೆ, ನಿರುತ್ಸಾಹ ಕಂಡುಬರುತ್ತಿತ್ತು; ನಿರಾಶಾದಾಯಕ ವಾತಾವರಣ ಪಸರಿಸಿತ್ತು. ರಾಜಕೀಯ ಚಳುವಳಿಯನ್ನು ನಿಲ್ಲಿಸುವುದು ಗಾಂಧೀಜಿಗೆ ಇಷ್ಟವಿರಲಿಲ್ಲ. ಕಾಂಗ್ರೆಸ್ ಶಕ್ತಿಯನ್ನು ತುಳಿದುಹಾಕಲು ಸರ್ಕಾರ ಸರ್ವಶಕ್ತಿಯನ್ನೂ ಉಪಯೋಗಿಸಲು ಸಿದ್ಧವಿತ್ತು. ಗಾಂಧೀಜಿಯೇ ವೈಯಕ್ತಿಕ ಸತ್ಯಾಗ್ರಹ ಆರಂಭಿಸಿದರು. ಆಗ ಸದಾಶಿವರಾಯರಿಗೆ ಅನಾರೋಗಯ್. ಆದರೂ ದಸ್ತಗಿರಿ ಮಾಡಲಾಯಿತು. ಜನರೆದುರಿಗೆ ಅವರಿಗೆ ಅಪಮಾನ ಮಾಡಬೇಕು ಎಂದು ಪೊಲೀಸರ ಛಲ. ಸದಾಶಿವರಾಯರ ಕೈಕಾಲುಗಳಿಗೆ ಸರಪಳಿ ಹಾಕಿ ಪೊಲೀಸರು ಅವರನ್ನು ರೈಲು ನಿಲ್ದಾಣಕ್ಕೆ ತಂದರು.

ಆದರೆ ಅವರ ತೇಜೋವಧೆ ಅಸಾಧ್ಯವೆನಿಸಿತು. ಅಧಿಕಾರಿಗಳ ನಿರೀಕ್ಷೆಗೆ ವಿರೋಧವಾಗಿ, ಕೋವಿಧಾರಿಗಳಾದ ಪೊಲೀಸರ ಎದುರಿಗೆ ಜನರು ಸೇರಿ, “ಕಾರ್ನಾಡ್ಸದಾಶಿವರಾವ್ ಕೀ ಜೈ” ಎಂದು ಜಯಘೋಷ ಮಾಡಿದರು.

ಪೊಲೀಸ್ ಅಧಿಕಾರಿಗಳಿಗೆ ತುಂಬ ಕೋಪ ಬಂತು. ಕೋಪವನ್ನು ಸದಾಶಿವರಾಯ ಮೇಲೆ ತೀರಿಸಿಕೊಂಡರು. ಮಂಗಳೂರನ್ನು ಬಿಟ್ಟ ಮೇಲೆ ಮರುದಿನ ಬಹಳ ಹೊತ್ತಿನವರೆಗೂ ಅವರಿಗೆ ಒಂದು ತೊಟ್ಟು ಕುಡಿಯುವ ನೀರನ್ನೂ ಕೊಡಲಿಲ್ಲ.

ಸದಾಶಿವರಾಯರು ಮತ್ತೆ ಸೆರೆಮನೆ ಸೇರಿದರು. ಐದು ವರ್ಷದ ಅವಧಿಯಲ್ಲಿ ಅವರಿಗೆ ತುರಂಗವಾಸದ ಅನುಭವ ಇದು ಮೂರನೆಯ ಸಲವಾಗಿತ್ತು.

ಈ ಬಾರಿ ಸೆರೆಮನೆಯಲ್ಲಿಯೂ ಅವರಿಗೆ ಪೊಲೀಸರು ತುಂಬ ಕಷ್ಟ ಕೊಟ್ಟರು.

ಏನೇ ಕಷ್ಟ ಬಂದರೂ ಸೆರೆಮನೆಯಲ್ಲಿಯೂ ಸಮಾಧಾನ ಕಂಡುಕೊಳ್ಳುವ ಸ್ವಭಾವ ಅವರದು. ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪದ್ಮಾಸನ ಹಾಕಿ ಕುಳಿತು ದೇವ ಧ್ಯಾನದಲ್ಲಿ ಜಗತ್ತನ್ನೇ ಮರೆಯುವರು.

ಒಮ್ಮೆ ಸೆರೆಮನೆಯಲ್ಲಿ ಒಂದು ಪ್ರಸಂಗ ನಡೆಯಿತು.

ಸೆರೆಮನೆಯ ಬಂಧಿಗಳನ್ನು ಅಧಿಕಾರಿಗಳು ’ಎ’, ’ಬಿ’ ಮತ್ತು ’ಸಿ’ ವರ್ಗದವರು ಎಂದು ವರ್ಗ ಮಾಡುತ್ತಿದ್ದರು. ಎ ವರ್ಗದವರಿಗೆ ಸ್ವಲ್ಪ ಒಳ್ಳೆಯ ಊಟ, ಕೆಲವು ಸೌಲಭ್ಯಗಳು. ಬಿ ವರ್ಗದವರಿಗೆ ಸಿ ವರ್ಗದವರಿಗಿಂತ ಒಳ್ಳೆಯ ಊಟ, ಅವರಿಗಿಲ್ಲದ ಕೆಲವು ಅನುಕೂಲಗಳು. ಸಿ ವರ್ಗದವರಿಗೆ ಬಹು ಕಷ್ಟ.

ಸದಾಶಿವರಾಯರನ್ನು ಎ ವರ್ಗಕ್ಕೆ ಸೇರಿಸಿದ್ದರು.

ಸಿ ವರ್ಗದವರಿಗೆ ಕೊಡುತ್ತಿದ್ದ ಆಹಾರ ತೀರ ಕೆಟ್ಟದಾಗಿತ್ತು. ಅವರು ದೂರಿತ್ತರು, ಪ್ರತಿಭಟಿಸಿದರು, ತಾವು ಆಹಾರ ಮುಟ್ಟುವುದಿಲ್ಲ ಎಂದರು. ಸದಾಶಿವರಾಯರಿಗೆ ವಿಷಯ ತಿಳಿಯಿತು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆದರೂ ಅವರು ತಮಗೆ ಕೊಡುತ್ತಿದ್ದ ಆಹಾರವನ್ನು ನಿರಾಕರಿಸಿ, ತಮಗೂ ಸಿ ವರ್ಗದವರಿಗೆ ಕೊಡುತ್ತಿದ್ದ ಆಹಾರವನ್ನೇ ಕೊಡಬೇಕು ಎಂದು ಕೇಳಿದರು. ಸೆರೆಮನೆಯಲ್ಲಿ ವಿಪರೀತ ಸೊಳ್ಳೆ ಸದಾಶಿವರಾಯರು ಎ ವರ್ಗದವರು ಎಂದು ಅವರಿಗೆ ಸೊಳ್ಳೆಯ ಪರದೆಯನ್ನು ಕೊಟ್ಟಿದ್ದರು. ಅವರು ಸೊಳ್ಳೆಯ ಪರದೆಯನ್ನು ಉಪಯೋಗಿಸುವುದನ್ನು ಬಿಟ್ಟು, ನಿದ್ರೆ ಇಲ್ಲದೆ ರಾತ್ರಿಗಳನ್ನು ಕಳೆದರು.

ಕೆಲವು ದಿನಗಳಲ್ಲಿ ಅವರ ಶಾರೀರಿಕ ಆರೋಗ್ಯ ಬಹಳ ಕೆಟ್ಟಿತು. ಜೈಲು ಅಧಿಕಾರಿಗಳಿಗೆ ಅವರನ್ನು ಬಿಡುಗಡೆ ಮಾಡುವುದು ವಿಹಿತವೆನಿಸಿತು. ಅವರ ಬಿಡುಗಡೆ ಆಯಿತು.

ಆರೋಗ್ಯ ಸುಧಾರಿಸಿಕೊಳ್ಳಲು ಅವರು ಬೆಂಗಳೂರಿಗೆ ಹೋದರು. ಇದ್ದ ಆಸ್ತಿ ಎಲ್ಲ ಕೈಬಿಟ್ಟಿತ್ತು, ಅವರ ಬಳಿ ಹಣವಿರಲಿಲ್ಲ, ಮನಸ್ಸಿಗೆ ಸಮಾಧಾನವಿರಲಿಲ್ಲ. ಇದರಿಂದ ಅವರಿಗೆ ವಿಶ್ರಾಂತಿ ಪಡೆಯುವುದೂ ಕಷ್ಟವಾಯಿತು. ಅವರು ಎಷ್ಟು ಬಡವರಾಗಿದ್ದರೂ ಎಂದರೆ ವರ್ತಮಾನ ಪತ್ರಿಕೆ ಕೊಂಡುಕೊಳ್ಳಲೂ ಕಾಸಿರಲಿಲ್ಲ. ಅಂತಹ ಪರಿಸ್ತಿತಿಯಲ್ಲಿಯೂ ಅವರು ಶಾಂತವಾದ ಮೃದು ಮಾತುಗಳಿಂದ, ಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಸದಾ ಸಿದ್ಧರಾಗುತ್ತಿದ್ದರು.

ನಿಷ್ಠಾವಂತ ದೇಶಸೇವಕನಿಗೆ ಸಂದ ಪ್ರತಿಫಲ

೧೯೩೫ ರಲ್ಲಿ ಹೊಸ ಭಾರತ ಸರ್ಕಾರ ಶಾಸನ ಜಾರಿಗೆ ಬಂದಿತು. ಇದರ ನಂತರ ಕಾಂಗ್ರೆಸ್ ಪಕ್ಷ ಒಂದು ನಿರ್ಧಾರವನ್ನು ಕೈಗೊಂಡಿತು – ಚುನಾವಣೆಗಳಲ್ಲಿ ಭಾಗವಹಿಸಿ, ಪ್ರಾಂತಗಳ ಶಾಸನ ಸಭೆಗಳನ್ನು ಪ್ರವೇಶಿಸಬೇಕು ಎಂದು. ಸರಿ, ಚುನಾವಣೆಗೆ ಜನರನ್ನು ಆರಿಸಬೇಕಲ್ಲ? ಬುದ್ಧಿಶಕ್ತಿ, ಸಾಮರ್ಥ್ಯ, ತ್ಯಾಗ, ನಾಯಕತ್ವದ ಗುಣಗಳು – ಯಾವ ರೀತಿಯಲ್ಲಿ ತೂಗಿ ನೋಡಿದರೂ ಕಾರ್ನಾಡು ಸದಾಶಿವರಾಯರನ್ನು ಕಾಂಗ್ರೆಸ್ ಪಕ್ಷ ಆರಿಸಬೇಕಿತ್ತು. ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಯ್ಕೆ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಹಣ ಖರ್ಚು ಮಾಡಬೇಕು, ಅವರಲ್ಲಿ ಹಣ ಇಲ್ಲ ಎಂಬ ನೆಪಹೂಡಿ ಅವರ ಹೆಸರನ್ನು ಕೈಬಿಡಲಾಯಿತು. ಅವರ ಸ್ನೇಹಿತರು ಹಲವರು ಹಣ ಕೂಡಿಸುವುದಾಗಿ ಭರವಸೆ ಕೊಟ್ಟರೂ ಪ್ರಯೋಜನವಾಗಲಿಲ್ಲ. ರಾಜಕೀಯ ಚಾಣಕ್ಯತನ ಹಾಗೂ ಕುಹಕತನ ಅವರಲ್ಲಿರಲಿಲ್ಲ. ಸದಾಶಿವರಾಯರನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಮೊದಲು ಹೇಳಿದ ಸ್ನೇಹಿತರೇ ಅನಂತರ ಯಾರದೋ ಬಲವಂತಕ್ಕೆ ತಲೆಬಾಗಿದರು, ಸದಾಶಿವರಾಯರ ಹೆಸರನ್ನು ಬಿಟ್ಟರು. ಚುನಾವಣೆಯ ವೆಚ್ಚಕ್ಕೆ ಧನ ಸಂಗ್ರಹ ಮಾಡಲು ಇತರರಿಂದ ಆಗಲಿಲ್ಲ, ಸದಾಶಿವರಾಯರ ಸಹಾಯ ಬೇಕಾಯಿತು. ತನಗೆ ಸ್ಥಾನ ಸಿಕ್ಕಲಿಲ್ಲವೆಂದು ಯಾವ ರೀತಿಯ ನಿರಾಶೆ, ಪ್ರತೀಕಾರದ ಮನೋಭಾವ ಅವರಲ್ಲಿದ್ದಿಲ್ಲ. ಮುಗ್ಧ ಹೃದಯಿ ಕಾರ್ನಾಡರು ಪಕ್ಷಕ್ಕಾಗಿ ಚುನಾವಣೆಗೆ ಧನ ಸಂಗ್ರಹ ಮಾಡಲು ಆತ್ಮಸಂತೋಷ ದಿಂದ ಮುಂದೆ ಬಂದರು. ಕಾಂಗ್ರೆಸಿನ ಗೌರವಕ್ಕೆ ಧಕ್ಕೆ ಉಂಟುಮಾಡುವುದು ಅವರಿಗೆ ಸಲ್ಲದ ಕಾರ್ಯ. ಅದು ಅವರ ತ್ಯಾಗಪೂರ್ಣ ಸೇವೆಯಿಂದ ಬೆಳೆದುಬಂದ ಸಂಸ್ಥೆ. ಅವರು ತಮ್ಮ ಸಂಪೂರ್ಣ ಸಹಕಾರ ನೀಡಿ ಕಾಂಗ್ರೆಸಿಗೆ ವಿಜಯ ಖಚಿತಗೊಳಿಸಿದರು.

ದೀಪ ಅರಿತು

ಬಳಿಕ ಬೆಂಗಳೂರಿಗೆ ತೆರಳಿ ಸ್ವಲ್ಪ ಸಮಯ ಅಲ್ಲಿ ಉಳಿದರು. ಫೂಜ್ಪುರ ಎಂಬಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲಿತ್ತು. ಅವರು ಅಲ್ಲಿಗೆ ಹೋದರು.

ಫೈಜ್ಪುರದಲ್ಲಿ ಮಳೆ ಧಾರಾಕಾರವಾಗಿ ಸುರಿಯಿತು. ಅವರು ಉಳಕೊಂಡಿದ್ದ ಗುಡಿಸಲು ಮಳೆಯನ್ನು ತಡೆಯುವಂತಿದ್ದಿಲ್ಲ. ಅವರು ಸಂಪೂರ್ಣ ಒದ್ದೆಯಾದರು. ಹಿಂತಿರುಗಿ ಬರುವಾಗ ಅವರಿಗೆ ಜ್ವರ ಬರುತ್ತಿತ್ತು. ಮುಂಬಯಿಗೆ ಬಂದು ಮುಟ್ಟಿದಾಗ ಅವರಿಗೆ ನಡೆಯಲೂ ಅಸಾಧ್ಯವಾಗಿತ್ತು. ಆದರೂ ತಮ್ಮ ಕಷ್ಟ ನೋವುಗಳನ್ನು ಹೇಳಿಕೊಳ್ಳುವ ಸ್ವಭಾವದವರೇ ಅವರಲ್ಲ. ತಮ್ಮ ಅಸ್ವಸ್ಥತೆಯ ವಿಷಯವನ್ನು ಮೊದಮೊದಲು ಅವರು ಯಾರಿಗೂ ತಿಳಿಸಲಿಲ್ಲ. ಪರಿಸ್ಥಿತಿ ತೀವ್ರವಾಗಿ ಉಲ್ಬಣಾವಸ್ಥೆಯನ್ನು ಮುಟ್ಟಿತು. ದೇಶಸೇವೆಗಾಗಿ ಅವರ ಶಕ್ತಿ ಎಲ್ಲ ವ್ಯಯವಾಗಿತ್ತು. ಜ್ವರವನ್ನು ತಡೆಯುವ ಶಕ್ತಿ ಅವರಲ್ಲಿ ಉಳಿದಿರಲಿಲ್ಲ.

೧೯೨೭ರ ಜನವರಿ ಒಂಬತ್ತನೆಯ ದಿನಾಂಕ ಮುಂಬಯಿಯ ಹರಿಕಿಶನ್ ದಾಸ್ ಆಸ್ಪತ್ರೆಯಲ್ಲಿ ಅವರು ಇಹಲೋಕಯಾತ್ರೆ ಪೂರೈಸಿದರು.

ಜನವರಿ ಹತ್ತನೆಯ ತಾರೀಕು, ಆದಿತ್ಯವಾರ, ಮುಂಬಯಿ ನಗರದಲ್ಲೆಲ್ಲ ಸುದ್ಧಿ ಹಬ್ಬಿತು. ಜಾತಿ, ಮತ, ಭಾಷೆ ಎಲ್ಲವನ್ನೂ ಮರೆತು ಲಕ್ಷಾಂತರ ಶೋಕಗ್ರಸ್ತ ಜನರು ಸೇರಿದರು. ಕಾಂಗ್ರೆಸ್ ವಿರೋಧಿಗಳೂ ಬಂದು ಸೇರಿದರು.

ಮುಂಬಯಿಯಲ್ಲಿ ಸದಾಶಿವರಾಯರ ಅಂತ್ಯ ಯಾತ್ರೆಯ ಮೆರವಣಿಗೆಯಲ್ಲಿ ಸಹಸ್ರಾರು ಜನ ಭಾಗವಹಿಸಿದರು. ನಗರದ ಮೇಯರ್, ಮುಂಬಯಿ ಪ್ರಾಂತದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಮತ್ತಿತರರು ಮೆರವಣಿಗೆಯಲ್ಲಿ ನಡೆದರು. ಕನ್ನಡನಾಡಿನಿಂದ ದೂರವಾದ ಮುಂಬಯಿಯಲ್ಲಿಯೂ ಅವರ ತ್ಯಾಗ, ಧೀರ ಬದುಕಿನ ಕೀರ್ತಿ ಹಬ್ಬಿತ್ತು.

ಅವರ ಸಾವಿನ ದುಃಖ ತಡೆಯಲಾರದೆ ಒಂದೇ ವರ್ಷದಲ್ಲಿ ಅವರ ತಾಯಿಯೂ ತೀರಿಕಂಡರು.

ಹೃದಯಗಳಲ್ಲ ದೀಪ ಬೆಳಗುತ್ತಿದೆ

ಸದಾಶಿವರಾಯರ ಜೀವಜ್ಯೋತಿ ಆರಿತು. ಆದರೆ ಅವರ ತ್ಯಾಗಮಯ ಜೀವನದ ನೆನಪಿನ ಜ್ಯೋತಿ ಕನ್ನಡಿಗರ ಹೃದಯಗಳಲ್ಲಿ ಬೆಳಗುತ್ತಿದೆ. ಅವರ ಮನೆಯಿದ್ದ ರಸ್ತೆಗೆ ’ದೇಶಭಕ್ತ ಕಾರ್ನಾಡು ಸದಾಶಿವರಾಯರ ರಸ್ತೆ’ ಎಂದು ಹೆಸರಿಟ್ಟು ಮಂಗಳೂರು ಅವರ ನೆನಪನ್ನು ಹಸಿರಾಗಿಸಿದೆ. ಬೆಂಗಳೂರಿನ ಒಂದು ಬಡಾವಣೆಗೆ ’ಸದಾಶಿವ ನಗರ’ ಎಂದೇ ಹೆಸರು. ಇದು ಸದಾಶಿವರಾಯರ ನೆನಪಿಗಾಗಿ.

ನ ತ್ವಹಂ ಕಾಮಯೇ ರಾಜ್ಯಂ

ನಮ್ಮ ದೇಶದಲ್ಲಿ ಒಂದು ಪ್ರಾರ್ಥನೆಯುಂಟು;

ನತ್ವಹಂ ಕಾಮಯೇ ರಾಜ್ಯಂ, ನ ಸ್ವರ್ಗಂ ನಪುನರ್ಭನಮ್

ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತಿನಾಶನಮ್.

ನನಗೆ ರಾಜ್ಯ ಬೇಕು ಎಂದು ನಾನು ಬಯಸುವುದಿಲ್ಲ. ನನಗೆ ಸ್ವರ್ಗವೂ ಬೇಡ, ದುಃಖದಿಂದ ಬೇಯುತ್ತಿರುವವರ ಕಷ್ಟ ಪರಿಹಾರ ಮಾಡಲು ಸಾಧ್ಯವಾದರೆ ಸಾಕು – ಇದು ಪ್ರಾರ್ಥನೆ.

ಬಹು ದೊಡ್ಡ ಜೀವನ ಮಾತ್ರ ಮಾಡಬಹುದಾದ ಪ್ರಾರ್ಥನೆ.

ಸದಾಶಿವರಾಯರು ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಎದ್ದಾಗ ಈ ಪ್ರಾರ್ಥನೆ ಮಾಡುತ್ತಿದ್ದರಂತೆ; ಅವರ ಕಡೆಯ ದಿನಗಳಲ್ಲಿ ತೀರ ಅನಾರೋಗ್ಯದಿಂದ ಹಾಸಿಗೆಯನ್ನು ಹಿಡಿದಾಗಲೂ ಈ ಮಾತುಗಳನ್ನೆ ಹೇಳಿಕೊಳ್ಳುತ್ತಿದ್ದರಂತೆ. ಪ್ರಾಣ ಹೋಗುವಾಗಲೂ ಅವರ ತುಟಿಗಳ ಈ ಪ್ರಾರ್ಥನೆಯನ್ನು ಉಚ್ಚರಿಸುತ್ತಿದ್ವಂತೆ.

ಈ ಪ್ರಾರ್ಥನೆಯಂತೆಯೇ ಬಾಳನ್ನು ನಡೆಸಿದರು ಅವರು.

ಹುಡುಗನಾಗಿದ್ದಾಗ ಕೈಯಲ್ಲಿದ್ದ ಪುಸ್ತಕಗಳನ್ನು ಬಡ ಹುಡುಗನಿಗೆ ಕೊಟ್ಟವರು, ಧರಿಸಿದ ಕೋಟನ್ನು ಬಡ ಹುಡುಗನಿಗೆ ಕೊಟ್ಟರು, ಕಡೆಯವರೆಗೂ ಹೀಗೆಯೇ ನಡೆದುಕೊಂಡರು. ಅವರಿಂದ ಹಣಸಹಾಯ ಪಡೆದವರು ಎಷ್ಟು ಮಂದಿಯೋ! ಅವರ ಜೀವನದ ಕಡೆಯ ಕೆಲವು ವರ್ಷಗಳಲ್ಲಿ ತೀರ ಬಡತನದ ಜೀವನ ನಡೆಸಬೇಕಾಗಿತ್ತು. ಬೇರೆ ಊರಿಗೆ ಹೋದಾಗ ಒಂದು ಹೋಟೇಲಿಗೆ ಹೋಗುವುದು, ಒಂದು ವೃತ್ತಪತ್ರಿಕೆ ಕೊಳ್ಳುವುದು ಕಷ್ಟವಾಗಿತ್ತು.

ಅಂತಹ ಕಾಲದಲ್ಲಿ ಅವರು ಫೈಜ್ಪುರಕ್ಕೆ ಹೋದಾಗ ಯಾರೋ ತಮ್ಮ ಸಂಸಾರದ ಕಷ್ಟಗಳನ್ನು ಹೇಳಿಕೊಂಡರಂತೆ. ಸದಾಶಿರವಾಯರು ಜೇಬಿನಲ್ಲಿದ್ದ ಅಷ್ಟು ಹಣ್ಣವನ್ನೂ ತೆಗೆದು ಕೊಟ್ಟರಂತೆ. ’ಇಷ್ಟೇ ಇದೆಯಲ್ಲ, ಕೊಡಲು ಇನ್ನಷ್ಟು ಹಣವಿಲ್ಲವಲ್ಲ’ ಎಂದು ಮರುಗಿದರಂತೆ.

ಎಲ್ಲಿ ಕಷ್ಟವನ್ನು ಕಂಡರೂ ಮರುಗುವ ಸ್ವಭಾವವಷ್ಟೆ ಅಲ್ಲ ಸದಾಶಿವರಾಯರದು, ಕಷ್ಟದ ಪರಿಹಾರಕ್ಕೆ ಕ್ರಿಯಾತ್ಮಕವಾಗಿ ದುಡಿಯುವ ಸ್ವಭಾವ. ವಿಧವೆಯರು, ಬಡ ವಿದ್ಯಾರ್ಥಿಗಳು, ಹರಿಜನರು, ಕಷ್ಟ-ಅನ್ಯಾಯಗಳಿಗೆ ಒಳಗಾದವರೆಲ್ಲರಿಗೆ ಅವರ ಕ್ರಿಯಾತ್ಮಕ ನೆರವು ಕೇಳದೆಯೇ ದೊರೆಯುತ್ತಿತ್ತು.

ಕಷ್ಟದಲ್ಲಿಯೂ ಸಹನೆ, ಮುಗುಳ್ನಗೆ

ಬಾಳಿನಲ್ಲಿ ತುಂಬ ಶ್ರೀಮಂತಿಕೆಯನ್ನೂ ಸುಖವನ್ನೂ ಅನುಭವಿಸಿ ಅನಂತರ ಬಡತನವನ್ನು ಕಷ್ಟವನ್ನೂ ಕಂಡವರು ಸದಾಶಿವರಾಯರು. ನಾಲ್ಕೇ ವರ್ಷಗಳ ಅವಧಿಯಲ್ಲಿ ಅವರು ಇಬ್ಬರು ಮಕ್ಕಳನ್ನೂ ಹೆಂಡತಿಯನ್ನೂ ಕಳೆದುಕೊಂಡರು. ತಂದೆ ಸಂಪಾದಿಸಿದ್ದ ಮತ್ತು ತಾವು ಸಂಪಾದಿಸಿದ್ದ ಆಸ್ತಿ ಎಲ್ಲ ಹೋಯಿತು. ಮುಪ್ಪಿನ ತಾಯಿ, ಎಳೆಯ ಮಕ್ಕಳು ವಾಸಿಸಲು ಸ್ಥಳ ಇಲ್ಲದಂತಾಯಿತು. ಅವರಿಗೆ ದೊರೆಯ ಬೇಕಾಗಿದ್ದ ಸ್ಥಾನ ಅವರಿಗೆ ಸಿಕ್ಕಲಿಲ್ಲ.

ಆದರೆ ಅವರು ಎಂದು ಬೇಸರ ಪಟ್ಟುಕೊಳ್ಳಲಿಲ್ಲ. ಛಲ ಸಾಧಿಸಲಿಲ್ಲ. ಚುನಾವಣೆಗೆ ಅವರನ್ನು ನಿಲ್ಲಿಸದಿದ್ದರೂ ಪಕ್ಷಕ್ಕೆ ಹಣ ಬೇಕಾದಾಗ ತಾವೇ ಓಡಾಡಿದರು, ಹಣ ಸಂಗ್ರಹಿಸಿ ಕೊಟ್ಟರು.

ಎಷ್ಟೇ ಕಷ್ಟಗಳು ಸುತ್ತುಗಟ್ಟಲಿ, ಯಾರು ಹೇಗೆಯೇ ನಡೆದುಕೊಳ್ಳಲಿ ಸದಾಶಿವರಾಯರು ಮುಗುಳ್ನಗೆ ನಗುತ್ತ ಇರುತ್ತಿದ್ರು. ತಮ್ಮ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ, ಇತರರ ಕಷ್ಟಗಳ ಕಥೆಯನ್ನು ನಿಜವಾದ ಸಹಾನುಭೂತಿಯಿಂದ ಕೇಳುತ್ತಿದ್ದರು. ಕೈಯಲ್ಲಾದ ಸಹಾಯ ಮಾಡುತ್ತಿದ್ದರು. ಕಾಂಗ್ರೆಸಿಗಾಗಿ, ದೇಶಕ್ಕಾಗಿ ತಮ್ಮ ಸ್ವಂತ ಹಣವನ್ನು ಒಂದು ಕ್ಷಣ ಯೋಚಿಸದೆ ವೆಚ್ಚ ಮಾಡುತ್ತಿದ್ದರು.

ಕಾರ್ನಾಡು ಸದಾಶಿವರಾಯರು ತೀರಿಕೊಂಡ ಅನಂತರ ಮಹಾತ್ಮ ಗಾಂಧೀಜಿಯವರು ಅವರ ತಾಯಿಯನ್ನು ಕಂಡಾಗ, “ಅಂತಹ ಮಗನನ್ನು ಹೆತ್ತ ನೀವು ಧನ್ಯರು” ಎಂದು ಹೇಳಿದರು.

ಅಂತಹ ಮಗನನ್ನು ಹೆತ್ತ ನಾಡೂ ಧನ್ಯ.