ಪರಿಸರ ಸಂರಕ್ಷಣೆಗೆ ಈಗ ಮತ್ತೊಂದು ಹೊಸ ಶಬ್ದದ ಸೇರ್ಪಡೆಯಾಗಿದೆ — ಕಾರ್ಬನ್ ಹೆಜ್ಜೆಗುರುತು (ಕಾರ್ಬನ್ ಫುಟ್ ಪ್ರಿಂಟ್) — ಏನಿದು, ಕಾರ್ಬನ್ ಹೆಜ್ಜೆಗುರುತು? ‘ಯಾವುದೇ ಸಂಘಟನೆ, ಘಟನೆ, ಅಥವಾ ಉತ್ಪನ್ನದಿಂದ ವಿಸರ್ಜಿತಗೊಂಡು ಹಸಿರುಮನೆ ಪರಿಣಾಮವುಂಟು ಮಾಡುವ ಅನಿಲಗಳ ಒಟ್ಟು ಪರಿಮಾಣ’ ಎನ್ನಬಹುದು. ಅಥವಾ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣವೆಂದೂ ಇಲ್ಲವೇ ಅದಕ್ಕೆ ಸಮನಾದ ಹಸಿರುಮನೆ ಅನಿಲಗಳೆಂದೂ ಇದನ್ನು ಹೇಳುವುದುಂಟು. ಜೀವಚಕ್ರ ಮೌಲ್ಯಮಾಪನದಡಿಯಲ್ಲಿ ಪರಿಸರ ವಿಜ್ಞಾನ ಹೆಜ್ಜೆಗುರುತಿನ ಭಾಗವಾಗಿ ‘ಕಾರ್ಬನ್ ಹೆಜ್ಜೆಗುರುತು’ ಕಲ್ಪನೆಯು ಬಂದಿದೆ. ಕಾರ್ಬನ್ ಹೆಜ್ಜೆಗುರುತನ್ನು ವೈಯಕ್ತಿಕವಾಗಿ, ರಾಷ್ಟ್ರ ಹಾಗು ಸಂಘಟನಾ ಮಟ್ಟಗಳಲ್ಲಿ ಅಳೆಯುವಷ್ಟರ ಮಟ್ಟಿಗೆ ಹಸಿರುಮನೆ ಅನಿಲಗಳ ಮೌಲ್ಯಮಾಪನ ಮಾಡಬಹುದು. ಈಗಾಗಲೇ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಹಾರ, ಉಡುಪು, ಮಾರ್ಜಕ ತಯಾರಿಕೆಗಳಲ್ಲಿ ಎಷ್ಟು ಕಾರ್ಬನ್ ಡೈ ಆಕ್ಸೈಡ್ (CO2) ಹೊರಬೀಳುತ್ತಿದೆ ಎನ್ನುವ ಬಗೆಗೆ ಅಧ್ಯಯನಗಳೂ ನಿಗದಿಗಳೂ ರೂಪುಗೊಂಡಿವೆ. ಇದನ್ನು ಸರಕಾರ ಹಾಗೂ ಖಾಸಗೀ ವಲಯಗಳೆರಡರ ಸಹಕಾರದಿಂದ ಅನುಷ್ಠಾನಗೊಳಿಸುವ ಯೋಜನೆಗಳಿವೆ.

ಹಸಿರು ಮನೆ ಅನಿಲಗಳು ಹಸಿರು ಮನೆ ಪರಿಣಾಮವುಂಟು ಮಾಡುತ್ತವೆಯೆಂಬುದು ಈಗ ತಿಳಿದಿದೆ. ಇಂದು ಮಾನವನ ಅನೇಕ ಚಟುವಟಿಕೆಗಳಲ್ಲಿ, ಕಾರ್ಬನ್ ಡೈ ಆಕ್ಸೈಡ್ ಅನಿಲ ಅನಪೇಕ್ಷಣೀಯ ಮಟ್ಟದಲ್ಲಿ, ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಅಧಿಕ ಕೈಗಾರಿಕೀಕರಣವಿರಬಹುದು. ಅಥವಾ ಅತ್ಯಧಿಕ ಸಾರಿಗೆ ವ್ಯವಸ್ಥೆಯಿರಬಹುದು. ಇವುಗಳಿಗೆ ಬೇಕಾದ ಇಂಧನಗಳನ್ನು ಉರಿಸಿದಾಗ ಕಾರ್ಬನ್ ಡೈಆಕ್ಸೈಡ್ ಮತ್ತಿತರ ಹಸಿರು ಮನೆ ಅನಿಲಗಳು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಗೊಳ್ಳುತ್ತವೆ.

ಭೂವಾತಾವರಣದ ಮೂಲಕ ಸೂರ್ಯನಿಂದ ಬಂದ ಕಿರಣಗಳು ಭೂಮಿಯನ್ನು ತಲುಪಿ ಅದನ್ನು ಬಿಸಿ ಮಾಡುತ್ತವೆ. ಅಥವಾ ಕಾಯಿಸುತ್ತವೆ. ಈ ಉಷ್ಣಚೈತನ್ಯದ ಬಹುಭಾಗವನ್ನು ಭೂಮಿ ಮತ್ತೆ ವಾತಾವರಣಕ್ಕೆ ಬಿಟ್ಟುಕೊಡುತ್ತದೆ. ಆದರೆ ಕಾರ್ಬನ್ ಡೈೊಆಕ್ಸೈಡ್  ಅಧಿಕವಾದಾಗ ಭೂಮಿಯಿಂದ ಪ್ರತಿಫಲಿತವಾದ ಈ ಉಷ್ಣವು ಮೇಲಕ್ಕೇರಲು ಸಾಧ್ಯವಾಗದೆ ಅಲ್ಲಿಯೇ ಉಳಿಯುತ್ತದೆ. ಏಕೆಂದರೆ CO2 ಅದನ್ನು ಹೀರಿಕೊಳ್ಳುತ್ತದೆ. ಇದೇ ‘ಭೂಜ್ವರಕ್ಕೆ’  ಕಾರಣ ಎಂಬುದು ಗೊತ್ತಿದೆಯಲ್ಲವೇ? ಈ ಭೂಜ್ವರದಿಂದಾಗಿ ಅನೇಕ ವಿನಾಶಕಾರೀ ಪರಿಣಾಮಗಳನ್ನು ಈಗ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಪರಿಣಾಮಗಳೂ ತಿಳಿದಿವೆ. ಜಾಗತಿಕ ಸರಾಸರಿ ಉಷ್ಣತಾ ಮಟ್ಟ ಹೆಚ್ಚುತ್ತಿರುವುದು; ಧ್ರುವ ಟೊಪ್ಪಿಗೆಗಳ ಹಿಮವು ಅಧಿಕ ದರದಲ್ಲಿ ಕರಗುತ್ತಿರುವುದು, ಇದರಿಂದ ಜನ ಜೀವನಕ್ಕಾಗುವ ಧಕ್ಕೆ; ಕಾಡುಗಳನ್ನು ಸವರುವುದು ನಡೆದೇ ಇದೆ, ಫಾಸಿಲ್ ಇಂಧನಗಳ ಬಳಕೆ ಹೆಚ್ಚುತ್ತಲೇ ಇದೆ. ಈ ಎಲ್ಲದರಿಂದ ಹೆಚ್ಚಿನ CO2 ಬಿಡುಗಡೆಯಾಗುತ್ತಲೇ ಇದೆ; ಇತ್ತೀಚೆಗೆ ಕಾಳ್ಗಿಚ್ಚುಗಳು, ಮರುಭೂಮೀಕರಣ, ಚಂಡಮಾರುತಗಳು ಹೆಚ್ಚುತ್ತಿವೆ.

CO2 ನೈಸರ್ಗಿಕವಾಗಿಯೇ ಪ್ರಕೃತಿಯಲ್ಲಿ ಇರುತ್ತದೆಯಾದರೂ ಮಾನವನ ಚಟುವಟಿಕೆಗಳಿಂದ ಅದರ ಉತ್ಸರ್ಜನೆ ಗಮನಾರ್ಹವಾಗಿ, ಅಪಾಯ ಎನ್ನುವ ಮಟ್ಟವನ್ನು ತಲುಪಿದೆಯೆಂಬುದು ಇಂದಿನ ಕಾಳಜಿ. ಫಾಸಿಲ್ ಇಂಧನ ಬಳಕೆ ಮತ್ತು ಮರಗಳನ್ನು ಕಡಿಯುವುದರಿಂದ CO2 ಮಟ್ಟವು ಗಣನೀಯವಾಗಿ ಹೆಚ್ಚಿದೆ. ಇದನ್ನು ಕೆಲವು ಮುಂದುವರಿದ ದೇಶಗಳಲ್ಲಿ ವೈಯಕ್ತಿಕ ಮಟ್ಟದ ಘಟಕ (ಯೂನಿಟ್) ಪರಿಮಾಣವಾಗಿ ಕೂಡ ಲೆಕ್ಕಹಾಕಲಾಗಿದೆ. ಉದಾಹರಣೆಗೆ, ಅಮೆರಿಕದಲ್ಲಿ ವಾರ್ಷಿಕವಾಗಿ ಒಬ್ಬ ಸಾಮಾನ್ಯ ನಾಗರಿಕನು 20 ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದಾನೆ ಎಂಬ ಅಂದಾಜಿದೆ. ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ವಾತಾವರಣಕ್ಕೆ CO2 ಸೇರಿಸುತ್ತಿರುವ ಅಂಶವನ್ನು ಲೆಕ್ಕಹಾಕಬಹುದೆಂಬ ಸೂಚನೆಯಿದೆ. ನಮ್ಮ ವಿದ್ಯುತ್ ಬಿಲ್‌ಗಳು, ಗ್ಯಾಸ್ ಬಳಸುವವರಾದರೆ ಗ್ಯಾಸ್ ಬಿಲ್‌ಗಳು, ಪೆಟ್ರೋಲ್ ಅಥವಾ ಡೀಸೆಲ್ ಬಳಸುವವರಾದರೆ ತಿಂಗಳಿಗೆ ಎಷ್ಟು ಕಿಲೊಮೀಟರ್ ಓಡಿಸುತ್ತೇವೆ ಎಂಬುದನ್ನು ‘ಕಾರ್ಬನ್ ಕ್ಯಾಲುಕ್ಯುಲೇಟರ್’ನಲ್ಲಿ ಹಾಕಿ ಕಂಡು ಹಿಡಿಯಬಹುದಂತೆ.

ಉರುವಲು ಸೌದೆ ಬಳಕೆಯ ದಕ್ಷ ಸ್ಟವ್‌ಗಳಾದರೆ ಅಮೆರಿಕದ ಲೆಕ್ಕದಲ್ಲಿ 1.5 ಟನ್ ಕಾರ್ಬನ್ ಉತ್ಸರ್ಜನೆಯನ್ನು ನಿವಾರಿಸಬಹುದು. 5 ಮರಗಳನ್ನು ಬೆಳೆಸಿದರೆ ಒಂದು ಟನ್ ಕಾರ್ಬನ್ ಉತ್ಸರ್ಜನೆಯ ಆಧಿಕ್ಯವನ್ನು ತಪ್ಪಿಸಬಹುದು. ಇದಕ್ಕಾಗಿ ಮರಗಳು, ನೀರು ಮತ್ತು ಜನ (ಮನೀಜ ಅಥವಾ ಟಿಡಬ್ಲ್ಯುಪಿ – ಟ್ರೀಸ್, ವಾಟರ್ ಅಂಡ್ ಪೀಪಲ್) ಎಂಬ ಯಾವುದೇ ಲಾಭರಹಿತ ಸಂಘಟನೆಯೊಂದನ್ನು ಹುಟ್ಟುಹಾಕಲಾಗಿದೆ. ಜನರ ಜೀವನ ಶೈಲಿಯನ್ನು ಸುಧಾರಿಸುವುದು ಇದರ ಧ್ಯೇಯ. ನಾವು ಯಾವತ್ತಿಗೂ ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ, ಉಳಿಸಿ, ನಿರ್ವಹಿಸುವ ಬಗೆಯನ್ನು ತಿಳಿಸಿಕೊಡಲು ಅಗತ್ಯವಾದ  ಸಹಕಾರ ಈ ಸಂಘಟನೆಯ ಉದ್ದೇಶ. ಮನೀಜ ಸಂಘಟನೆಯು (1) ವಿದ್ಯಾರ್ಥಿಗಳು, (2) ಕಡಿಮೆ ಕಾರ್ಬನ್ ಉತ್ಸರ್ಜನೆ ಚಟುವಟಿಕೆಯ ವ್ಯಕ್ತಿ, (3) ಮಧ್ಯಮ ಪ್ರಮಾಣ ಉತ್ಸರ್ಜನೆ ಚಟುವಟಿಕೆಯ ವ್ಯಕ್ತಿ ಮತ್ತು (4) ಅಧಿಕ ಉತ್ಸರ್ಜನೆ ಚಟುವಟಿಕೆಯ ವ್ಯಕ್ತಿಗಳೆಂಬ ವರ್ಗೀಕರಣ ಮಾಡಿ ಅವರ ಜೀವನ ಶೈಲಿಗಳನ್ನು ನಿರೂಪಿಸುತ್ತದೆ. ವಿದ್ಯಾರ್ಥಿಯು ಬಸ್ (ಸಾರ್ವಜನಿಕ ಸಾರಿಗೆ ವ್ಯವಸ್ಥೆ) ಅಥವಾ ಸೈಕಲ್‌ಗಳನ್ನು ಬಳಸುತ್ತಾನೆ. 2ನೇ ವರ್ಗದವನೂ ಸಹ ಸೈಕಲ್ ಅಥವಾ ಸಾರ್ವಜನಿಕ ಸಾರಿಗೆ, ಕಾರು ಬಳಕೆಯಲ್ಲಿ ಪಾಲುದಾರಿಕೆ, ಮನೆಯಲ್ಲಿ ಮಿತ ಇಂಧನ ಬಳಕೆ ಮಾಡುತ್ತಾನೆ. 3ನೇ ವರ್ಗದ ವ್ಯಕ್ತಿ ಕೇವಲ ಒಂದು ಆಸನವಿರುವ ಕಾರಿನ ಬಳಕೆ, ಸರಾಸರಿ ಸೌಲಭ್ಯದ ಮನೆ ಹೊಂದಿರುತ್ತಾನೆ. 4ನೇ ವರ್ಗದ ವ್ಯಕ್ತಿ ಒಬ್ಬನಿಗೇ ದೊಡ್ಡ ಕಾರಿದೆ.  ಆಗಾಗ ಪಯಣಿಸುತ್ತಲೇ ಇರುತ್ತಾನೆ. ದೊಡ್ಡ ಮನೆಯಲ್ಲಿ ವಾಸ, ಅದಕ್ಷ ಇಂಧನ ಬಳಕೆ ಇವನ ಶೈಲಿ.

ಪ್ರತಿ ವರ್ಗದವರ ಕಾರ್ಬನ್ ಉತ್ಸರ್ಜನೆಯನ್ನು ಲೆಕ್ಕ ಹಾಕಿ, ಇದನ್ನು ಮಿತಗೊಳಿಸುವವರು, ತಗ್ಗಿಸುವವರಿಗೆ ‘ತೆರಿಗೆ ವಿನಾಯಿತಿ’ ಯನ್ನು ಕೂಡ ಸೂಚಿಸಲಾಗಿದೆ.

ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲ, ಭೂಶಾಖ ಶಕ್ತಿ, ಯುರೇನಿಯಂ ಬಳಸಿದ ಬೈಜಿಕ ಶಕ್ತಿ, ಜಲವಿದ್ಯುತ್ತು, ಸಾಂದ್ರ ಸೌರಶಕ್ತಿಗಳಿಂದ ‘ಕಾರ್ಬನ್ ಹೆಜ್ಜೆ ಗುರುತಿ’ನ ಲೆಕ್ಕ ಹಾಕುವ ಕಸರತ್ತು ಕೂಡ ನಡೆದಿದೆ. ಜಲವಿದ್ಯುಚ್ಛಕ್ತಿ, ಸೌರಶಕ್ತಿ, ಗಾಳಿ ಶಕ್ತಿ ಮತ್ತು ಜೈವಿಕ ಶಕ್ತಿಗಳಲ್ಲಿ CO2 ಉತ್ಸರ್ಜನೆ ಅತಿ ಕಡಿಮೆ ಮಟ್ಟದಲ್ಲಿದೆ. ಈ ಎಲ್ಲ ಬಗೆಯ ಇಂಧನಗಳನ್ನು ಬಳಸಿ ತಯಾರಾಗುವ ಕಾಗದ, ಪ್ಲಾಸ್ಟಿಕ್, ಗಾಜು, ಡಬ್ಬಿಗಳು, ಕಂಪ್ಯೂಟರ್‌ಗಳು, ನೆಲಹಾಸು, ಟೈರ್‌ಗಳು ಇತ್ಯಾದಿಗಳ ತಯಾರಿಕೆ ಅಮೆರಿಕದಲ್ಲಿ, ಮರ ಬಳಸಿ ಮಾಡುವ ತಯಾರಿಕೆಯ ಕಾರ್ಬನ್ ಉತ್ಸರ್ಜನೆಯ ಬಗೆಗೆ ಆಸ್ಟ್ರೇಲಿಯದಲ್ಲಿ, ರಸ್ತೆ ಮಾಡುವುದು, ಕಾರುಗಳು, ಬಸ್‌ಗಳು, ರೈಲುಗಾಡಿಗಳು, ವಿಮಾನಗಳು, ಹಡಗುಗಳು, ನೂರಾರು ಕಿಲೊಮೀಟರ್ ಗಟ್ಟಲೆ ಹಾಕುವ ಪೈಪ್‌ಲೈನ್‌ಗಳಿಗೆ ಬೇಕಾದ ಪೈಪುಗಳು – ಒಂದೇ, ಎರಡೇ – ಎಲ್ಲವುಗಳ ಗಣನೆ ಈಗ ಆರಂಭವಾಗಿದೆ.

ಕ್ಯೊಟೊದಲ್ಲಿ ನಡೆದ ಸಮಾವೇಶದಲ್ಲಿ ಕಾರ್ಬನ್ ಉತ್ಸರ್ಜನೆ ಮಿತಗೊಳಿಸುವ ಬಗೆಗೆ ಒಪ್ಪಂದವಾಯಿತು. ಇದರಲ್ಲಿ ಕಾಯಿದೆಗಳನ್ನೂ ರೂಪುಗೊಳಿಸಲಾಯಿತು. ಇದರ ಹೊರಕ್ಕೆ ನಿಂತಿರುವ ಅಮೆರಿಕದಂತಹ ದೇಶಗಳು ಸ್ವ-ಇಚ್ಛೆಯಿಂದ ಕಂಪೆನಿಗಳು ಮಾರುಕಟ್ಟೆಗಳಲ್ಲಿ ಕಡಿಮೆ ಕಾರ್ಬನ್ ಉತ್ಸರ್ಜನೆಯ ಪದಾರ್ಥಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ದಿಗೊಳಿಸಿವೆ. ಇದರಲ್ಲಿ ‘ಕಾರ್ಬನ್ ನಿಧಿ’ ಎಂಬ ಕಲ್ಪನೆಯನ್ನೂ ತೊಡಗಿಸಿಕೊಳ್ಳಲಾಗಿದೆ.

ಇಂಟರ್‌ನೆಟ್‌ನಲ್ಲಿ ಕಾರ್ಬನ್ ಹೆಜ್ಜೆಗುರುತಿನ ಬಗೆಗೆ ಮಾಹಿತಿ ವಿವಿಧ ವಿಭಾಗಗಳಲ್ಲಿ ದೊರೆಯುತ್ತದೆ. ಯಾವ ದೇಶದಲ್ಲಿ ತಲಾ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನಾ ಪ್ರಮಾಣ ಎಷ್ಟಿದೆ/ ಹಸಿರುಮನೆ ಅನಿಲಗಳ ಉತ್ಸರ್ಜನಾ ತಲಾ ಪ್ರಮಾಣ ಎಷ್ಟಿದೆ? ಕಾರ್ಬನ್ ‘ಡಯಟ್’ ಎಂದರೆ ಕಾರ್ಬನ್ ಪಥ್ಯಾಹಾರ? ಎಂದರೆ ಕಾರ್ಬನ್ ಮಿತ ಬಳಕೆ ಮಾಡುವುದು ಹೇಗೆ? ಇವಲ್ಲದೆ ಇನ್ನೂ ಅನೇಕ ವಿಭಾಗಗಳಲ್ಲಿ ಮುಂದೆ ಭೂಮಿಗೆ ಕಾರ್ಬನ್ ಉತ್ಸರ್ಜನಾ ಆಧಿಕ್ಯದಿಂದ ಉಂಟಾಗಲಿರುವ ಅವಗಡವನ್ನು ತಪ್ಪಿಸುವ ಬಗೆಗೆ ಅನೇಕ ಬಗೆಯ ವಿಶ್ಲೇಷಣೆಗಳು ನಡೆದಿವೆ, ಮಾಹಿತಿಗಳಿವೆ.

ಭೂಮಿಯ ಪರಿಸರ ಜಗತ್ತಿನ ಎಲ್ಲರಿಗೂ ಸೇರಿದೆ. ಆದರೆ ಅದನ್ನು ವೈಯಕ್ತಿಕವಾಗಿ, ದೇಶಮಟ್ಟದಲ್ಲಿ ನಾವುಗಳು ನಿರ್ವಹಿಸುತ್ತಿರುವ ರೀತಿ ಕೇವಲ ನನಗೆ, ನಮಗೆ, ನಮ್ಮ ಮನೆಗೆ, ದೇಶಕ್ಕೆ ಎನ್ನುವಷ್ಟು ಸಂಕುಚಿತ ದೃಷ್ಟಿಯಿಂದ ನಡೆಸಿಕೊಳ್ಳುತ್ತಿದ್ದೇವೆ. ಜೀವಾಧಾರಗಳಾದ ನೀರು, ಗಾಳಿಗಳು ಎಲ್ಲರಿಗೂ ಸಲ್ಲುವಂಥವು. ಯಾವತ್ತಿಗೂ ಇದು ಎಲ್ಲರಿಗೂ ಎಂದರೆ ಮನುಷ್ಯರಷ್ಟೇ ಅಲ್ಲ ಎಲ್ಲ ಜೀವಿಗಳಿಗೂ ಸಲ್ಲುವಂಥವು. ಅಜೀವ ಪ್ರಪಂಚದಲ್ಲಿಯೂ ಇವುಗಳ ಪಾತ್ರವಿದೆ. ಆ ಪಾತ್ರದಿಂದ ಜೀವ ಪ್ರಪಂಚಕ್ಕೆ ಲಾಭವಿದೆ.

ಪರಿಸರದಲ್ಲಿ ನೈಸರ್ಗಿಕ ಬದಲಾವಣೆಗಳು ಆಗುತ್ತವೆ. ಆದರೆ ಅದನ್ನು ಮೀರಿದ, ಪರಿಣಾಮವನ್ನು ಎಣಿಸದೆ, ಸ್ವಾರ್ಥತೆಯಿಂದ ಕೂಡಿದ ಚಟುವಟಿಕೆಗಳಿಂದ ಬದಲಾವಣೆಗಳನ್ನು ನಾವು ತರುತ್ತಿದ್ದೇವೆ. ಯಾವುದೇ ಬದಲಾವಣೆ ಮಾಡಲೆಳಸಿದರೂ ಅದರಿಂದ ಜೀವ ಪ್ರಪಂಚಕ್ಕೆ ಏನಾಗಬಹುದು ಎಂಬ ಪ್ರಜ್ಞೆಯನ್ನು ಅತಿ ಅಗತ್ಯವಾಗಿ ಬೆಳೆಸಿಕೊಳ್ಳಬೇಕು.

ಈ ದೃಷ್ಟಿಯಲ್ಲಿ ಪ್ರತಿ ಜೂನ್ 5ರಂದು ಪರಿಸರ ದಿನಾಚರಣೆ ಎಂಬುದು ಕೇವಲ ಸಾಂಕೇತಿಕವಾಗಿ ಬಿಟ್ಟಿದೆ. ಅದು ಪ್ರತಿದಿನದ ಆಚರಣೆಯಾಗಬೇಕು – ಆಗಲೇ ಜೀವ ಪ್ರಪಂಚ ಸುಭದ್ರವಾಗಬಲ್ಲದು.