ವಿಶ್ವಾಂಗಣದಾ ರಂಗಸ್ಥಳದಲಿ
ಕುಣಿವನು ಕುಣಿವನು ಕಾಲನಟ.
ಬೆಳಗು ಬೈಗುಗಳ ಬಣ್ಣವ ಬಳಿದು
ಮೇಘದ ಮಾಲೆಯ ಕಂಠದಿ ತಳೆದು
ಕಾಲಿಗೆ ನಾದದ ಗೆಜ್ಜೆಯ ಬಿಗಿದು
ಜೀವ ಜೀವಗಳ ನಾಡಿಯ ಮಿಡಿದು
ಅಸ್ತಿಯ ಗೂಡಿನ ವೀಣೆಯ ಹಿಡಿದು
ಕಡಲಿನ ಮೊರೆತದ ಹಿಮ್ಮೇಳದಲಿ
ಕುಣಿವನು ಧೀಂ ಧೀಂ ಕಾಲನಟ…

ಅವನೆತ್ತಿಡುವಾ ಪಾದದ ಹತಿಗೆ
ಪುಡಿಪುಡಿಯಾದುವು ಸಾಮ್ರಾಜ್ಯ:
ಹರಿದುದು ಭೋರೆನೆ ರಕ್ತದ ಹೊನಲು
ಗದ್ದುಗೆ ಮಕುಟವು ತೇಲುತ ಬರಲು
ಜೀವನ, ಸಂಸ್ಕೃತಿ, ಮನೆ ತಲೆಮಾರು
ಕೊಚ್ಚಿದವೆನಿತೋ ಮತಗಳು ನೂರು.
ಹಿಡಿಮಣ್ಣಾಗಲು ಜೀವಿಗಳು
ಕುಣಿವನು ಕುಣಿವನು ಕಾಲನಟ
ರುದ್ರಭಯಂಕರ ಕಾಲನಟ.

ಜೀವಿಗಳೆಲ್ಲರ ಹೃದಯದ ಬಡಿತ
ಶ್ರುತಿಗೊಡುತಿರೆ ಆ ನಾಡಿಯ ಮಿಡಿತ
ನಡೆದಿದೆ ಕಾಲನ ಭೀಕರ ಕುಣಿತ
ಯುಗಯುಗಗಳ ಪಾತಾಳಕೆ ತುಳಿದು
ಮಸಣದ ಬೂದಿಯ ಮೈಯಲಿ ಬಳಿದು
ಜೀವಜೀವಗಳ ಜುಟ್ಟನು ಹಿಡಿದು
ಕುಣಿವನು ಕುಣಿವನು ಕಾಲನಟ
ರುದ್ರಭಯಂಕರ ಕಾಲನಟ.

ಆವೇಶದ ಆವೇಗದ ನಾಟ್ಯಕೆ
ಕಂಪಿಸುತಿಹುದೀ ತ್ರಿಭುವನಮಂಡಲ !
ಒಡನಾಡುವ ಗ್ರಹಮಂಡಲ ತಾರೆ
ಕಾಲನು ತಮ್ಮಾಯುಷ್ಯವ ಹೀರೆ
ನಡನಡ ನಡುಗುತ ಅಂತ್ಯದ ಕಡೆಗೆ
ನಡೆದಿವೆ ವಿಲಯದ ಮಸಣದ ಕಡೆಗೆ.
ಅಗಣಿತ ಶತಮಾನದ ಕಡೆಯಲಿ
ಕಾಲನ ಈಪರಿ ಮಣಿತದ ಕುಣಿತ
ಪ್ರಳಯದ ತಾಂಡವವಾಗುವುದು
ಬ್ರಹ್ಮಾಂಡವನೇ ಒಡೆಯುವುದು !