ಅಭಿನವದಿಂದ ನನ್ನ ಇನ್ನೊಂದು ಪುಸ್ತಕ ಪ್ರಕಟವಾಗುತ್ತಿದೆ. ಈ ವರ್ಷದಲ್ಲಿ ಕೆಲವು ಮರು ಮುದ್ರಣಗಳ ಜೊತೆ ನನ್ನ ಹಲವು ಪುಸ್ತಕಗಳನ್ನು (ಒಟ್ಟಾಗಿ ಆರು) ನ.ರವಿಕುಮಾರ್ ಪ್ರಕಟಿಸಿದ್ದಾರೆ. ಸದ್ಯದ ಅಗತ್ಯದಿಂದ ಬರೆದ ಲೇಖನಗಳು ಕೆಲವು ಕಾಲವಾದರೂ ಉಳಿಯುವಂತೆ ರವಿಕುಮಾರ್ ಒಟ್ಟು ಮಾಡಿದ್ದಾರೆ. ನನಗೆ ಮರೆತುಹೋದ ಲೇಖನಗಳನ್ನು ಅವರು ಶ್ರಮಪಟ್ಟು ಹುಡುಕಿ ತೆಗೆದು ಹೊರತಂದಿದ್ದಾರೆ.

ಈ ಕಾಲದಲ್ಲಿ ನಾನು ಹಏಗೆ ಬದುಕಿದ್ದೇನೆ ಎಂಬುದರ ವ್ಯಾಖ್ಯೆ ಈ ಲೇಖನಗಳಲ್ಲಿದೆ. ನನ್ನ ಮನಸ್ಸನ್ನು ಸದಾ ಕಾಡುವ ಪ್ರಶ್ನೆಗಳು ಮುಖ್ಯವಾಗಿ-ಎಡ ಮತ್ತು ಬಲ ಪಂಥಗಳ ಹಿಂದಿರುವ ಹಿಂಸೆಯ ಪ್ರಶ್ನೆಗಳು ಈ ಪುಸ್ತಕದ ಉದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಕಾಡಿದುದನ್ನು ನೋಡಬಹುದು. ನನ್ನ ಆಸೆಯೆಂದರೆ ನನ್ನ ಬರವಣಿಗೆಗೆ ನನ್ನನ್ನು ನಾನೇ ನೋಡಿಕೊಂಡ ಗುಣವಿರಬೇಕು. ಇತರರ ಬಗ್ಗೆ ನಿರ್ಣಾಯಕವಾಗಿ ಅವರನ್ನು ಜಡ್ಜ್ ಮಾಡುವಂತೆ ಬರೆಯಕೂಡದೆಂಬುದು ಕ್ರಮೇಣ ನನಗೆ ಹೊಳೆಯುತ್ತ ಹೋದ ಎಚ್ಚರಿಕೆ ಎನ್ನಬಹುದು. ಇವನ್ನು ಗುರುತಿಸುವವರು ‘ಅನಂತಮೂರ್ತಿಗೆ ಅವರ ಹಿಂದಿನ ಸಿಟ್ಟು ಉಳಿದಿಲ್ಲ’ ಎಂದು ಹೇಳಬಹುದು. ಸತ್ಯಕ್ಕೆ ತೋರುವ ಬಹುಮುಖಗಳಿವೆ. ಆದರೆ ಅದು ಕಾಲಾನುಕ್ರಮದಲ್ಲಿ ಬದಲಾಗಬಹುದು ಎಂಬುದನ್ನೂ ತಿಳಿಯುವುದು ಶೀಘ್ರ ಬದಲಾವಣೆಗಳ ಈ ಕಾಲದಲ್ಲಿ ಲೇಖಕನಿಗೆ ಇರಬೇಕಾದ ವಿನಯ.

ಈಚೆಗೆ ನಾನು ಅಳಸಿಂಗಾಚಾರ್ಯರು ಅನುವಾದಿಸಿದ ಮಹಾಭಾರತವನ್ನು ಮತ್ತೆ ಓದುತ್ತಿದ್ದೇನೆ. ನನ್ನ ಬಾಲ್ಯಕಾಲದಲ್ಲಿ ಲಾಟೀನಿನ ಎದುರು ಕೂತು ಓದಿದ ಈ ಮಹಾಭಾರತವನ್ನು ಮತ್ತೆ ಓದುತ್ತಿದ್ದಂತೆ ನಾನು ಓದಿ ಪಡೆದ ಅರ್ಥವೇ ಬದಲಾಗಿದೆ. ಉದಾ: ಪರೀಕ್ಷಿತ ರಾಜ ತನ್ನ ಬೇಟೆಯ ವ್ಯಾಮೋಹದಲ್ಲಿ ‘ನನ್ನ ಜಿಂಕೆ ಎಲ್ಲಿ ಓಡಿ ಹೋಯಿತು’ ಎಂಬ ಪ್ರಶ್ನೆಗೆ ತಪಸ್ಸಿನಲ್ಲಿದ್ದ ಋಷಿಯೊಬ್ಬ ಉತ್ತರವನ್ನೇ ಕೊಡಲಿಲ್ಲವೆಂದು ಸಿಟ್ಟಿಗೆದ್ದ. ಅಲ್ಲೇ ಬಿದ್ದಿದ್ದ ಸತ್ತ ಹಾವೊಂದನ್ನು ಅವನ ಕತ್ತಿನ ಸುತ್ತ ನೇತು ಹಾಕಿದ. ಋಷಿ ಮೌನವ್ರತದಲ್ಲಿ ಇದ್ದಾನೆಂಬ ವ್ಯವಧಾನ ಅವನಿಗಿರಲಿಲ್ಲ. ಇದನ್ನು ಬಂದು ನೋಡಿ ಋಷಿಯ ಮಗ ಘೋರವಾದ ಕೋಪದಲ್ಲಿ ಹಾವೊಂದು ಕಚ್ಚಿ ಈ ರಾಜ ನಾಶವಾಗಬೇಕೆಂದು ಶಾಪಕೊಟ್ಟ. ಈ ಕಥೆ ಯಾವತ್ತಿನಿಂದಲೂ ನನಗೂ ನಿಮಗೂ ಗೊತ್ತಿರಬಹುದು. ಆದರೆ ಮತ್ತೆ ಓದುವ ಸಂದರ್ಭದಲ್ಲಿ ಕಣ್ಣು ತಪ್ಪಿ ಹೋಗಬಲ್ಲ ಸಣ್ಣದೊಂದು ಮಾತಿದೆ. ಋಷಿ, ಮಗನ ಉಗ್ರ ಕೋಪದಿಂದ ಎಚ್ಚರವಾಗುತ್ತಾನೆ. ರಾಜನ ಬೇಟೆಯ ಮೋಹವೂ, ತಾನು ಉತ್ತರ ಕೊಡಲಿಲ್ಲವೆಂಬ ಅಸಮಾಧಾನ ಎರಡೂ ಗೊತ್ತಿರುವ ಋಷಿ ಮಗನಿಗೆ ಬುದ್ಧಿವಾದ ಹೇಳುತ್ತಾನೆ. ರಾಜ ಪೂರ ದುಷ್ಟನಲ್ಲ. ಅವನು ದರ್ಪಿಷ್ಟನಂತೆ ವರ್ತಿಸಿದ್ದು ನಿಜ. ರಾಜ ಹಾಗಿರಬಾರದು. ಆದರೆ ರಾಜನೇ ಇಲ್ಲದಿದ್ದರೆ ನಾವು ಕೂಡ ನಮ್ಮ ತಪಸ್ಸನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವುದು ಸಾಧ್ಯವಿಲ್ಲ. ರಾಜನೆಂಬ ಒಬ್ಬನೂ ಇರಬೇಕಲ್ಲವೇ?

ಇದರಿಂದ ನನಗೆ ಆಶ್ಚರ್ಯವಾಯಿತು. ಇಂದಿರಾಜಿ ಕೊಲೆಯಾದ ಸಂದರ್ಭದಲ್ಲಿ ನಾನು ಬರೆದೊಂದು ಲೇಖನ ನೆನಪಾಯಿತು. ಆ ಲೇಖನದ ಶೀರ್ಷಿಕೆ ‘ರಾಜಭೀತಿ, ರಾಜನಿಲ್ಲದ ಭೀತಿ’. ಗೃಹಸ್ಥರಾದ ನಾವೆಲ್ಲರೂ ಈ ಎರಡು ಸ್ಥಿತಿಯಲ್ಲೂ ಕಂಗಾಲಾಗುತ್ತೇವೆ. ರಾಜನೇ ಇಲ್ಲದಿರುವುದಕ್ಕಿಂತ ಭ್ರಷ್ಟನಾದರೂ ಯಾರಾದರೊಬ್ಬ ರಾಜ ಇರಬೇಕೆಂದು ಸಾಮಾನ್ಯರೆಲ್ಲರೂ ಬಯಸುತ್ತಾರೆ. ಒಬ್ಬ ಋಷಿಯೂ ಬಯಸುತ್ತಾನೆ. ಆದರೆ ಇರುವ ರಾಜ ಇರುವುದಕ್ಕಿಂತ ಒಳ್ಳೆಯನಾಗಬೇಕೆಂಬ ಆಶಯವೂ ಗೃಹಸ್ಥರಿಗೆ ಸಾಮಾನ್ಯವಾಗಿ ಇರುತ್ತದೆ. ಆದ್ದರಿಂದಲೇ ನಾವೆಲ್ಲರೂ ರಾಜಕೀಯದ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತೇವೆ. ನಾವು ಅಧಿಕಾರ ಹಿಡಿದಿರುವವರನ್ನು ಪರೀಕ್ಷಿಸುತ್ತಲೇ ಇರಬೇಕು. ಕೊಂಚವಾದರೂ ಆಗ ಅವರು ಬದಲಾದರು.

ಇದು ನನ್ನ ಬರವಣಿಗೆಯ ಕ್ರಮ; ಓದುಗರ ಜೊತೆ ಬರವಣಿಗೆ ‘ಮಾತನಾಡಿದಂತೆ’ ಇರಬೇಕು. ಸಾಮಾನ್ಯವಾದದ್ದರ ನಡುವೆಯೂ ಅಸಾಮಾನ್ಯವಾದ ಹೊಳಹುಗಳನ್ನು ತನ್ನ ಒಳಗಿಂದಲೂ, ತನಗಿಂತ ದೊಡ್ಡವರಾದವರಿಂದಲೂ ಕಲಿಯುವ ಬಯಕೆ ಸದಾ ಉಳಿದಿರಬೇಕು.

ಈ ನನ್ನ ಆಸೆ ಇಲ್ಲಿನ ಹಲವು ಮಾತುಗಳಲ್ಲಿ ಸಾರ್ಥಕವಾದೀತೆಂದು ತಿಳಿದಿದ್ದೇನೆ. ಇಂತಹ ಮಾತಿಗೆ ಅವಕಾಶ ಮಾಡಿಕೊಟ್ಟ ಅಭಿನವ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ.

ಈ ಪುಸ್ತಕವನ್ನು ನನ್ನ ಹಿಂದಿನ ಸ್ನೇಹಿತರಾಗಿದ್ದ ಶ್ರೀ ವಿಶ್ವನಾಥ ಮಿರ್ಲೆ ಮತ್ತು ಶ್ರೀ ಪಿ.ಶ್ರೀನಿವಾಸರಾವ್ ಅವರಿಗೆ ಅರ್ಪಿಸುತ್ತಿದ್ದೇನೆ. ಈಗಿನ ನನ್ನನ್ನು ಆಗಿನಿಂದಲೇ ಸಿದ್ಧಪಡಿಸಿರುವಂತೆ ಚಿಂತನಶೀಲತೆಯಲ್ಲಿ ನನ್ನ ಜೊತೆ ಕಾಲೇಜಿನ ದಿನಗಳಲ್ಲಿ ತೊಡಗಿದವರು ಈ ಇಬ್ಬರು. ವಿಶ್ವನಾಥನಲ್ಲಿ ಇದ್ದ ಕಾವ್ಯದ ರುಚಿ ಅಗಾಧವಾದದ್ದು. ನಾನು ಇವತ್ತಿಗೂ ಮೆಚ್ಚುವ ಹಲವು ಕವಿತೆಗಳನ್ನು ಓದುತ್ತಿದ್ದಂತೆ ವಿಶ್ವನಾಥ ನನ್ನ ಜೊತೆ ಇರುತ್ತಾನೆ. ಹಾಗೆಯೇ ನನ್ನ ವೈಚಾರಿಕತೆಯ ಹಿಂದೆ ಪಿ.ಶ್ರೀನಿವಾಸರಾವ್ ಇದ್ದಾನೆ. ವಿಶ್ವನಾಥ ರೀಜಿನಲ್ ಕಾಲೇಜ್ ಆಫ್ ಎಜುಕೇಷನ್‌ನಲ್ಲಿ ಪಾಠ ಮಾಡುತ್ತಿದ್ದು, ಮೈಸೂರಿನ ನಾಟಕರಂಗವನ್ನು ಜೀವಂತವಾಗಿಟ್ಟಿದ್ದ ಪ್ರತಿಭಾಶಾಲಿ. ಪಿ.ಶ್ರೀನಿವಾಸ್‌ರಾವ್ ಅಮೆರಿಕದಲ್ಲಿ ಪ್ರಾಧ್ಯಾಪಕನಾಗಿದ್ದು ಅಲ್ಲಿನ ಹಲವು ಕನ್ನಡಿಗರನ್ನು ತನ್ನ ಚಿಂತನ ಪರಿಧಿಯಲ್ಲಿ ಸಾಯುವ ತನಕ ಜೀವಂತ ಇರಿಸಿದ್ದ ಪ್ರತಿಭಾವಂತ.

ಈ ಇಬ್ಬರನ್ನು ಮತ್ತೆ ನೆನೆಯುವುದು ಈ ಕಾಲಯಾನದಲ್ಲಿ ನನಗೆ ಸಾಧ್ಯವಾಯಿತೆಂಬುದು ಹರ್ಷದ ಸಂಗತಿ.

ಈ ಪುಸ್ತಕ ಸಾಧ್ಯವಾಗಿರುವುದು ಇಂಗ್ಲಿಷಿನಲ್ಲಿರುವ ಕೆಲವು ಬರಹಗಳನ್ನು ನನ್ನ ಮೇಲಿನ ವಿಶ್ವಾಸದಿಂದ ಕನ್ನಡಕ್ಕೆ ಅನುವಾದಿಸಿದ, ಮಾತಿನ ರೂಪದಿಂದ ಬರಹಕ್ಕೆ ತಂದ ಗೆಳೆಯ/ಗೆಳತಿಯರಿಂದಾಗಿ ಶ್ರೀ ಜಸವಂತ ಜಾಧವ್, ಶ್ರೀಮತಿ ಸುಕನ್ಯಾ ಕನಾರಳ್ಳಿ, ಶ್ರೀ ಜಯಶಂಕರ ಹಲಗೂರು, ಶ್ರೀ ಇಸ್ಮಾಯಿಲ್, ಶ್ರೀ ಜಯಪ್ರಕಾಶ್‌ನಾರಾಯಣ, ಶ್ರೀಮತಿ ಪಿ.ಚಂದ್ರಿಕಾ, ಶ್ರೀಮತಿ ಕೆ.ಅಕ್ಷತಾ, ಶ್ರೀಮತಿ ದೀಪಾ ಗಣೇಶ್ ಮುಂತಾದವರಿಗೆ, ಕರಡು ತಿದ್ದಿದ ಶ್ರೀಮತಿ ಎಮ್.ಎಸ್. ಆಶಾದೇವಿ ಮತ್ತು ಶ್ರೀ ಶ್ರೀಧರ ಹೆಗಡೆ ಭದ್ರನ್ ಅವರಿಗೆ ನಾನು ಋಣಿ.

ಯು.ಆರ್.ಅನಂತಮೂರ್ತಿ