ನಮ್ಮ ಕಾಲದ ಬಹುದೊಡ್ಡ ಚಿಂತಕರಾದ ಯು.ಆರ್. ಅನಂತಮೂರ್ತಿ ಅವರ ‘ಕಾಲಮಾನ’ ಕೃತಿಯನ್ನು ಅಭಿನವ ಪ್ರೀತಿ, ಗೌರವದಿಂದ ಅವರ ೭೭ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಕಟಿಸುತ್ತಿದೆ. ಅಭಿನವದಲ್ಲಿ ಪ್ರಕಟವಾದ ಒಬ್ಬರೇ ಲೇಖಕರ ಹೆಚ್ಚು ಕೃತಿಗಳು ಅನಂತಮೂರ್ತಿಯವರದ್ದು. ಕೆಲವು ಪುನರ್ ಮುದ್ರಣಗಳು ಸೇರಿ ಈ ವರ್ಷ ಅವರದೇ ಆರು ಕೃತಿಗಳು ಅಭಿನವದಿಂದ ಪ್ರಕಟಗೊಂಡಿವೆ. ಇದು ಅನಂತಮೂರ್ತಿಯವರು ಅಭಿನವದ ಮೇಲಿಟ್ಟಿರುವ ಅಭಿಮಾನ.

*

ನಮ್ಮಲ್ಲಿ ಕಾಲದ ಕುರಿತು ಅನೇಕ ಪರಿಕಲ್ಪನೆಗಳಿವೆ. ನಾಗಾರ್ಜುನನ ‘ಮೂಲಮಾಧ್ಯಮಕ ಕಾರಿಕಾ’ ಕೂಡ ಕಾಲದ ಪರಿಕಲ್ಪನೆಯನ್ನು ಮೀರಿ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಏಕಕಾಲದಲ್ಲಿ ಪರಿಭಾವಿಸುವ ಕ್ರಮವನ್ನು ನಮ್ಮ ಮುಂದಿಡುತ್ತದೆ. ಪಾಶ್ಚಾತ್ಯರಂತೆ ಚರಿತ್ರೆಯೆಂಬುದು ನಮ್ಮಲ್ಲಿ ‘ಆಗಿಹೋದ’ ಘಟನೆಯಲ್ಲ; ಕಾರಣ ಅದು ದಿನನಿತ್ಯ ಬೆಳೆಯುತ್ತ, ಬದಲಾಗುತ್ತ ಇರುವಂತಹದ್ದು. ರಾಮಾಯಣ ಮತ್ತು ಮಹಾಭಾರತಗಳು ಹೀಗೆ ಬೇರೆ ಬೇರೆ ನೆಲೆಗಳಲ್ಲಿ ಪ್ರತಿದಿನ ಪ್ರಕಟಗೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ. ವರ್ತಮಾನವೆಂಬುದು ಭೂತದ ನೆನಪುಗಳನ್ನು ಭವಿಷ್ಯದ ಕನಸುಗಳನ್ನು ಒಳಗೊಂಡಿರುವಂಥದು.

ಹೀಗಾಗಿ ‘ಕಾಲ’ ಎಂಬುದಕ್ಕೆ ಹಲವಾರು ಅರ್ಥ ಪರಂಪರೆಗಳಿವೆ. ಇದು ಕಾಲವನ್ನು ಮಾತ್ರ ಅಳೆಯುವ ಭೂತ, ವರ್ತಮಾಣ ಭವಿಷ್ಯತ್‌ಗಳಿಗೆ ಮಾತ್ರ ಸೀಮಿತವಾದದ್ದಲ್ಲ. ನಮ್ಮಲ್ಲಿ ಯಾರಾದರೂ ತೀರಿಕೊಂಡಾಗ ಅವರು ‘ಕಾಲವಾದರು’ ಎನ್ನುತ್ತಾರೆ. ಕಾಲದಲ್ಲಿ ಲೀನವಾದರು ಎಂಬರ್ಥವೂ, ಕಾಲವನ್ನು ಮೀರಿದರೆಂತಲೂ ಆಗುತ್ತದೆ.

‘ಕಾಲಕ್ಕೆ ಕನ್ನಡಿ’ಯಾಗಬೇಕು ಎಂಬುದು ನಮ್ಮಲ್ಲಿ ಹಲವು ಕಾಲದಿಂದ ಬಂದ ಸಂಪ್ರದಾಯ. ಕನ್ನಡಿಯಾಗುವುದೆಂದರೆ ಪ್ರತಿಫಲಿಸುವುದಷ್ಟೇ ಅಲ್ಲ; ಮುಖಾಮುಖಿ ಆಗುವುದೆಂತಲೂ ಅರ್ಥ. ಅದು ಒಳಗೂ ಹೊರಗೂ ನಿರಂತರವಾಗಿ ಆಗುವ ಮುಖಾಮುಖಿ. ಕಾಲದ ಜೊತೆಗಿನ ಮುಖಾಮುಖಿಯೆಂದರೆ ಸದ್ಯದ ಜೊತೆಗಿನ ಮುಖಾಮುಖಿ, ಸಮಾಜದ ಜೊತೆಗಿನ ಮುಖಾಮುಖಿ, ಅಂತರಂಗದ ಜೊತೆಗಿನ ಮುಖಾಮುಖಿ. ಅನಂತರದ ಜೊತೆಗಿನ ಮುಖಾಮುಖಿ. ಸತ್ಯದ ಜೊತೆಗಿನ ಮುಖಾಮುಖಿ. ಮಾನದ ಜೊತೆಗಿನ ಮುಖಾಮುಖಿ.

ನಮ್ಮ ಕಾಲದಲ್ಲಿ ಅನಂತಮೂರ್ತಿಯವರಷ್ಟು ಸದ್ಯ(ಸತ್ಯಕ್ಕೆ ಕೂಡಾ)ಕ್ಕೆ ಮುಖಾಮುಖಿ ಆದವರು ತುಂಬ ಕಡಿಮೆ. ಹಿಂದೆ ಶಿವರಾಮ ಕಾರಂತರು, ಲಂಕೇಶ್, ತೇಜಸ್ವಿಯಂಥವರು ಹೀಗೆ ನಿರಂತರ ಮುಖಾಮುಖಿಯಾಗುತ್ತಿದ್ದರು. ಸಾಹಿತ್ಯದಲ್ಲಿ ಮುಖಾಮುಖಿ ಆಗುವುದು ಬೇರೆ. ಆದರೆ ದಿನನಿತ್ಯದ ನಮ್ಮ ಬದುಕಿಗೆ, ವ್ಯವಸ್ಥೆಗೆ, ನಂಬಿಕೆಗಳಿಗೆ, ಆದರ್ಶಗಳಿಗೆ ಮುಖಾಮುಖಿ ಆಗುವುದು ಸುಲಭದ ಮಾತಲ್ಲ. ಜೆ.ಕೆ. ಹೇಳುವಂತೆ ಇದು ‘ಕ್ಷಣ ಕ್ಷಣಕ್ಕೂ ಹೊಸ ಬದುಕಿಗೆ’ ಪಕ್ಕಾಗುವ ಕ್ರಮ…

ನಮ್ಮಲ್ಲಿ ಒಬ್ಬ ರಾಜಕಾರಣಿ ಒಂದು ಪಕ್ಷದಿಂದ ಗೆದ್ದು ‘ಅಭಿವೃದ್ಧಿ ಕಾರ‍್ಯಗಳನ್ನು ಮಾಡಬಹುದು’ ಎನ್ನುತ್ತಾ ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋದರೆ ಜನ ಅದನ್ನು ಸ್ವೀಕರಿಸಿಬಿಡುತ್ತಾರೆ. ಅವನು ಯಾವ ಕೆಲಸ ಮಾಡದಿದ್ದರೂ ಮುಂದಿನ ಅವಧಿಯಲ್ಲಿಯೂ ಜನ ಅವನನ್ನು ಆರಿಸುತ್ತಾರೆ. ಆದರೆ ಒಬ್ಬ ಲೇಖಕ ಒಂದೇ ವಿಚಾರ, ಸಿದ್ದಾಂತಕ್ಕೆ ಅವನು ಬದ್ಧನಾಗಿರಬೇಕೆಂದು ಬಯಸುತ್ತಾರೆ. ಒಂದೋ ಪ್ರಗತಿಯ ಪರವಾಗಿರಬೇಕು ಅಥವಾ ಅದರ ವಿರೋಧಿಯಾಗಿರಬೇಕು, ಎಡಪಂಥೀಯನಾಗಿರಬೇಕು ಅಥವಾ ಬಲಪಂಥೀಯನಾಗಿರಬೇಕು.. ಹೀಗೆ ಆದರೆ ಒಬ್ಬ ಲೇಖಕನಾದವನು ಯಾವುದೇ ಪಂಥಕ್ಕೂ ಅಂಟಿಕೊಳ್ಳದೆ ಸಮಾಜದ ಹಿತಕ್ಕಾಗಿ, ಮಾನವತೆಯ ನೆಲೆಯಲ್ಲಿ ತನ್ನ ವಿಚಾರಗಳನ್ನು ಹಂಚಿಕೊಳ್ಳುವುದು ಪ್ರಜಾಪ್ರಭುತ್ವದ ಈ ದೇಶದಲ್ಲಿ ಸರಿಯಾದ ಕ್ರಮವೆಂದು ಭಾವಿಸುವುದೇ ಇಲ್ಲ. ಉದಾಹರಣೆಗೆ: ಎಡಪಂಥೀಯ ವಿಚಾರಗಳಿಗೆ ಹೆಚ್ಚು ತೆರೆದುಕೊಂಡವರಂತೆ ಕಾಣುತ್ತಿದ್ದ ಅನಂತಮೂರ್ತಿ ಅವರು ಬಿಜೆಪಿ ಸರ್ಕಾರದ ಒಬ್ಬ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಮೆಚ್ಚಿದರೆ, ಮುಖ್ಯಮಂತ್ರಿಯ ಕ್ರಮವನ್ನು ಸ್ವಾಗತಿಸಿದರೆ ಅದು ಅವಕಾಶವಾದಿತನವಾಗಿ ಕಾಣುತ್ತದೆ. ಹಿಂದೆ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಬಗೆಗೆ ಹೆಚ್ಚು ಮಾತನಾಡುತ್ತಿದ್ದ ಅನಂತಮೂರ್ತಿ ಅವರು, ಬಿಜೆಪಿ ವಿಧಾನಸಭೆಗೆ ಹೆಚ್ಚು ಸ್ಥಾನಗಳನ್ನು ಪಡೆದು ಆರಿಸಿಬಂದಾಗ ಕಾಂಗ್ರೆಸ್ ಮತ್ತು ಜೆಡಿ(ಎಸ್) ಸೇರಿ ಸರ್ಕಾರ ಮಾಡುವುದನ್ನು ವಿರೋಧಿಸಿ ಹೇಳಿಕೆಕೊಟ್ಟರು. ಅಂದರೆ ಜನಾದೇಶವಾಗಿ ಅತಿ ದೊಡ್ಡಪಕ್ಷವಾಗಿ ಹೊರ ಹೊಮ್ಮಿರುವ ಪಕ್ಷಕ್ಕೆ ಸರ್ಕಾರ ರಚಿಸಲು ಮೊದಲು ಆಹ್ವಾನ ನೀಡಬೇಕು, ಒಂದು ವೇಳೆ ಆ ಪಕ್ಷದವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಬೇರೆ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಅವರು ನಿಲುವು. ಮುಂದೆ ಅವರೇ ಜೆಡಿ(ಎಸ್) ಮತ್ತು ಕಾಂಗ್ರೆಸ್ಸಿನ ಬೆಂಬಲದಿಂದ ರಾಜ್ಯಸಭೆಗೆ ನಿಂತರು. ಇದು ಏನನ್ನು ತೋರಿಸುತ್ತದೆ? ಈ ಸಮಾಜಕ್ಕೆ ಒಳ್ಳೆಯದಾಗುತ್ತದೆಯೆಂದಾದರೆ, ಜನರಿಗೆ ಉಪಯೋಗವಾಗುತ್ತದೆಯೆಂದಾದರೆ ಯಾವ ಪಕ್ಷವಾಗಲೀ, ವ್ಯಕ್ತಿಯನ್ನಾಗಲೀ ಬೆಂಬಲಿಸುವ, ವಿರೋಧಿಸುವ ನಿಲುವು ಅನಂತಮೂರ್ತಿ ಅವರದು. ಕೆ. ವಿ. ಸುಬ್ಬಣ್ಣನವರು ಒಂದೆಡೆ ಹೇಳುವಂತೆ, ಅಧಿಕಾರಕ್ಕೆ ಬಂದವರನ್ನೆಲ್ಲ ನಾವು ವಿರೋಧಿಸುತ್ತಲೇ ಇರಬೇಕು, ಪ್ರಶ್ನಿಸುತ್ತಲೇ ಇರಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವವನ್ನು ಜೀವಂತವಿರಿಸಲು ಸಾಧ್ಯ. ಕೇವಲ ವಿರೋಧಿಸುವುದಷ್ಟೇ ಅಲ್ಲ ಒಳ್ಳೆಯದನ್ನು ಬೆಂಬಲಿಸಲೂ ಬೇಕು. ಒಬ್ಬ ಲೇಖಕ ಎಡ ಮತ್ತು ಬಲ ಪಂಥೀಯ ವಿಚಾರಧಾರೆಗಳೆರಡರಿಂದಲೂ ಪ್ರಭಾವಿತನಾಗಿರಬಹುದೆಂಬ ಅಥವಾ ಎರಡೂ ವಿಚಾರಗಳಿಗೆ ಪೂರಕವಾಗಿ ಪ್ರತಿಕ್ರಿಯಿಸಬಹುದೆಂಬುದನ್ನು ನಾವೇಕೆ ಮರೆಯುತ್ತೇವೆ? ನಮ್ಮ ನಡುವಿನ ಅನೇಕ ಲೇಖಕರು, ಓದುಗರು, ಜನಸಾಮಾನ್ಯರು ಈ ಎರಡು ವಿಚಾರಧಾರೆಗಳಿಗೆ ಅಥವಾ ಇಂತಹ ಅನೇಖ ವಿಚಾರಧಾರೆಗಳಿಗೆ ತೆರೆದ ಮನಸ್ಸಿನವರಾಗಿದ್ದಾರೆ. ಸಂಕುಚಿತ ಮನಃಸ್ಥಿತಿಯಿಂದಲೋ, ವೈಯಕ್ತಿಕ ಕಾರಣಗಳಿಂದಲೂ ಅಥವಾ ಜಾಣತನದಿಂದಲೋ ಬ್ರಾಂಡ್ ಮಾಡಿಬಿಡುವ ಕಾರಣದಿಂದಾಗಿ ಅವನು ಸ್ವಾತಂತ್ರ್ಯ ಮತ್ತು ನಂಬಿಕೆಗಳು ಮೊಟಕಾಗಿಬಿಡುತ್ತದೆ. ಬದ್ಧತೆಯೇ ಬದ್ಧತೆಯಾಗಿಬಿಡಬಾರದಲ್ಲವೇ? ಎಡ ಬಲ ಪಂಥಗಳ ಜನ, ಯಾರೇ ಮಾಡಿದರೂ ಹಿಂಸೆ ಹಿಂಸೆಯಲ್ಲವೇ? ಕೇವಲ ವಿಚಾರದ ಭಿನ್ನಭಿಪ್ರಾಯದ ಕಾರಣಕ್ಕೆ ಮಾತ್ರವೇ ವ್ಯಕ್ತಿಯನ್ನು, ಕೆಲಸವನ್ನು ವಿರೋಧಿಸಬೇಕೇ? ಅಥವಾ ಬೆಂಬಲಿಸಬೇಕೇ? ಇವೆಲ್ಲಕ್ಕೂ ಕಾಲಧರ್ಮವೆಂಬುದೊಂದಿದೆ. ಕಾಲಕ್ಕೆ ಮುಖಾಮುಖಿಯಾದವರಿಗೆ ಇಂತಹ ಅನೇಕ ಸಮಸ್ಯೆಗಳು ಎದುರಾಗುವುದು ಸಹಜವೇ. ಓಶೋ ಹೇಳುವಂತೆ ಕಾಲವೆಂಬುದು ಹರಿಯುತ್ತಿರುವ ನದಿಯಲ್ಲಿ ಒಮ್ಮೆ ಕಾಲನ್ನು ಊರಿ ತೆಗೆಯುವಷ್ಟರಲ್ಲಿ ಅದು ಬದಲಾಗಿಬಿಟ್ಟಿರುತ್ತದೆ. ಆ ಕ್ಷಣದಲ್ಲಿನ ನೀರು, ಆ ವಾತಾವರಣದ ಹಿನ್ನೆಲೆ, ಆ ಸಮಯದ ನಮ್ಮ ಮನಃಸ್ಥಿತಿ ಎಲ್ಲ ಎಲ್ಲವೂ ಬದಲಾಗಿಬಿಟ್ಟಿರುತ್ತದೆ. ಹೀಗಿರುವಾಗ ಒಂದು ವಿಚಾರಕ್ಕೆ, ಒಂದು ಪಂಥಕ್ಕೆ, ಒಂದು ನಿಲುವಿಗೆ, ಸಿದ್ಧಾಂತಕ್ಕೆ ಅಂಟಿಕೊಂಡಿರಬೇಕೆಂದು ಬಯಸುವುದು ಎಷ್ಟು ಸರಿ? ಬದ್ಧತೆ ಎಂಬುದು ಕೂಡ ಬದಲಾಗುವಂಥದೆಂದು ಕೊಂಡರೆ?

ಇಂತಹ ಹಲವು ನೆಲೆಗಳಿಂದ ಸದ್ಯಕ್ಕೆ ಮುಖಾಮುಖಿಯಾಗುತ್ತಾ ಬಂದವರು ಅನಂತಮೂರ್ತಿ ಅವರು. ಇಲ್ಲಿರುವ ಲೇಖನಗಳು ಕೂಡ ಆ ವಿಚಾರಗಳ ಮುಂದುವರೆದ ಭಾಗಗಳಷ್ಟೇ.

*

ಈ ಕೃತಿಯನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿಯವರಿಗೆ ಮತ್ತು ಎಸ್ತರ್ ಅನಂತಮೂರ್ತಿವರಿಗೆ, ಕೆಲವು ಲೇಖನಗಳನ್ನು ಒದಗಿಸಿದ ಜಸವಂತ್ ಜಾದವ್, ಚಂದ್ರಶೇಖರ ಐನೂರು, ಜಯಶಂಕರ ಹಲಗೂರು, ಶ್ರೀಮತಿ ದೀಪಾ ಗಣೇಶ್, ಜಯಪ್ರಕಾಶ್ ನಾರಾಯಣ, ಇಸ್ಮಾಯಿಲ್ ಹಾಗೂ ಆಯಾ ಪುಸ್ತಕ, ಪತ್ರಿಕೆಯ ಸಂಪಾದಕರು, ಲೇಖಕರಿಗೆ.

ಕೆಲವು ಲೇಖನಗಳನ್ನು ಬರಹ ರೂಪಕ್ಕೆ ತಂದ ಶ್ರೀಮತಿ ಅಕ್ಷತಾ, ಪಿ.ಚಂದ್ರಿಕಾ ಅವರಿಗೆ, ಕಡಿಮೆ ಸಮಯದಲ್ಲಿ ಅಚ್ಚುಕಚ್ಚಾಗಿ ಲೇಖನಗಳನ್ನು ಅನುವಾದಿಸಿಕೊಟ್ಟ ಶ್ರೀಮತಿ ಸುಕನ್ಯಾ ಕನಾರಳ್ಳಿ ಅವರಿಗೆ, ಕರಡು ತಿದ್ದಿಕೊಟ್ಟ ಶ್ರೀಮತಿ ಎಂ.ಎಸ್. ಆಶಾದೇವಿ ಮತ್ತು ಶ್ರೀಧರ ಹೆಗಡೆ ಭದ್ರನ್ ಅವರಿಗೆ ಧನ್ಯವಾದಗಳು. ಎಂದಿನಂತೆ ನಮ್ಮ ಕೆಲಸವನ್ನು ಬೆಂಬಲಿಸುತ್ತಿರುವ ಎಲ್ಲ ಹಿರಿಯರಿಗೆ ಗೆಳೆಯರಿಗೆ ಅಭಿನವ ಋಣಿ.

ಅರ್ಥಪೂರ್ಣ ಹೊದಿಕೆ ವಿನ್ಯಾಸ ಮಾಡಿಕೊಟ್ಟ ಬಿ.ದೇವರಾಜ್ ಅವರಿಗೆ, ಅಕ್ಷರ ವಿನ್ಯಾಸಕ್ಕೆ ಸಹಾಯ ಮಾಡಿದ ವಿ. ಗೀತಾ ಅವರಿಗೆ, ಕಡಿಮೆ ಅವಧಿಯ್ಲಿ ಪ್ರೀತಿಯಿಂದ ಮುದ್ರಿಸಿಕೊಟ್ಟ ಶ್ರೀ ಹೂವಪ್ಪ ಮತ್ತು ಅವರ ಸಿಬ್ಬಂದಿ ವರ್ಗದವಿರಗೆ ಧನ್ಯವಾದಗಳು.

. ರವಿಕುಮಾರ
ಅಭಿನವದ ಪರವಾಗಿ