ನನ್ನ ಬಹಳ ಹಿಂದಿನ ಗೆಳೆಯರೂ ಜನನಾಯಕರೂ ಆದ ಶ್ರೀ ದೇಶಪಾಂಡೆಯವರು ಕಾಂಗ್ರೆಸ್ ಪಕ್ಷದ ಕರ್ನಾಟಕದ ಅಧ್ಯಕ್ಷರಾಗಿ ಪಕ್ಷದ ವೆಬ್‌ಸೈಟನ್ನು ಅವರ ಪಕ್ಷದ ಸದಸ್ಯನಲ್ಲದ ನನ್ನಿಂದ ಅನಾವರಣಗೊಳಿಸುತ್ತಿದ್ದಾರೆ. ಈ ಪ್ರೀತಿಗೆ ಹಾಗೂ ವಿಶ್ವಾಸಕ್ಕೆ ನಾನು ಕೃತಜ್ಞ.

ರಾಜೀವಗಾಂಧಿಯವರ ಯುವ ಉತ್ಸಾಹದಿಂದಾಗಿ ನಾವು ಎಲೆಕ್ಟ್ರಾನಿಕ್ ಯುಗಕ್ಕೆ ಕಾಲಿಟ್ಟದ್ದು, ಅವರನ್ನು ಇವತ್ತು ನೆನೆಯೋಣ. ನಿಮ್ಮ ವೆಬ್‌ಸೈಟಿನಲ್ಲಿ ಕರ್ನಾಟಕದ್ದೇ ಭಾಷೆಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿ, ಉರ್ದು ಭಾಷೆಗಳಲ್ಲೂ ಕೆಲವು ಮುಖ್ಯಮಾಹಿತಿಗಳಾದರೂ ಸಿಗುವ ಅವಕಾಶ ಕಲ್ಪಿಸಿ ಎಂದು ಕೋರುವೆ. ಕರ್ನಾಟಕ ಭಾಷೆಯ ವಿಷಯದಲ್ಲಿ ಮಿನಿ ಇಂಡಿಯಾ ಎಂಬುದನ್ನು ಮರೆಯದಿರೋಣ.

ನಾನು ಕಾಂಗ್ರೆಸ್ ಪಕ್ಷವನ್ನು ಹಲವು ವರ್ಷಗಳಿಂದ ಟೀಕಿಸುತ್ತಲೇ ಬಂದವನು. ಆದರೆ ನಮ್ಮ ದೇಶದ ಪ್ರಾಚೀನವೂ ಜೀವಂತವೂ ಆದ ನಾಗರಿಕತೆಗೂ, ನಮ್ಮ ರಾಜ್ಯಾಂಗಕ್ಕೂ, ಗಾಂಧೀಜಿ ಮತ್ತು ನೆಹರೂರವರು ಹುಟ್ಟು ಹಾಕಿದ ವಿಚಾರಗಳಿಗೂ ಹಲವು ಅಪಾಯಗಳು ಎದುರಾಗಿವೆ.

ಬಾಬರಿ ಮಸೀದಿಯ ಧ್ವಂಸ, ಮಂಗಳೂರಿನ ಕೋಮು ಗಲಭೆಗಳು, ಗುಜರಾತಿನಲ್ಲಿ ನಡೆದ ನರಮೇಧ-ಇಂತಹ ದುರಾಚಾರಗಳಿಂದ ದೇಶವನ್ನು ರಕ್ಷಿಸಬಲ್ಲ ಅಖಿಲ ಭಾರತ ಪಕ್ಷವೆಂದರೆ ಕಾಂಗ್ರೆಸ್ ಒಂದೇ. ಈ ಪಕ್ಷ ಕರ್ನಾಟಕದಲ್ಲಿ ಜೆ.ಡಿ.ಎಸ್. ಜೊತೆ ಹೊಂದಾಣಿಕೆ ಮಾಡಿಕೊಂಡು ಕೋಮುವಾದಿಗಳನ್ನು ಸೋಲಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಕಮ್ಯುನಿಸ್ಟರ ಜೊತೆಯೂ ಕಾಂಗ್ರೆಸ್ ತನ್ನ ಸಂಬಂಧವನ್ನು ಉಳಿಸಿಕೊಳ್ಳಬೇಕೆಂಬುದು ನನ್ನ ಆಸೆಯಾಗಿತ್ತು. ಚುನಾವಣೆಯ ನಂತರ ಈ ಎಲ್ಲ ಸೆಕ್ಯುಲರ್ ಪಕ್ಷಗಳು ತಮ್ಮ ನಡುವಿನ ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ನಮ್ಮ ದೇಶದ ಸಹಸ್ರಾರು ವರ್ಷದ ಸರ್ವಧರ್ಮ ಸಮನ್ವಯದ ನಾಗರೀಕತೆಯನ್ನು ಉಳಿಸಿಕೊಳ್ಳಲು, ಅಲ್ಪಸಂಖ್ಯಾತರು ನಿರ್ಭಯದಿಂದ ಬದುಕಲು ಅವಕಾಶ ಮಾಡಿ ಕೊಡುವಂತಹ ಸರ್ಕಾರವನ್ನು ಕೇಂದ್ರದಲ್ಲಿ ಕಾಂಗ್ರೆಸ್ ಜೊತೆ (ಅದು ಅಗತ್ಯವಾದಲ್ಲಿ) ರಚಿಸಬೇಕೆಂಬುದು ನನ್ನ ಆಸೆ.

ಇನ್ನೆರಡು ಆಸೆಗಳನ್ನು ಹೇಳುವೆ. ಮೊದಲನೆಯದು: ಪಕ್ಷಾಂತರದ ಮಸೂದೆಯ ಹಿಂದಿನ ರಾಜೀವ್‌ಗಾಂಧಿಯವರ ಉದ್ದೇಶ ಈಗ ವಿಫಲವಾಗಿದೆ. ಒಂದು ಪಕ್ಷದಿಂದ ಆರಿಸಿ ಬಂದವನು ತನ್ನ ವಿಧಾನಸಭೆಯ ಅಥವಾ ಲೋಕಸಭೆಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ತಾತ್ವಿಕ ಕಾರಣಕ್ಕಾಗಿ ಇನ್ನೊಂದು ಪಕ್ಷವನ್ನು ಸೇರುವುದರಲ್ಲಿ ನನ್ನ ಅಭ್ಯಂತರವಿಲ್ಲ. ಆದರೆ ಈ ಸದಸ್ಯ ಮತ್ತೆ ಅದೇ ಕ್ಷೇತ್ರದಿಂದ ಇನ್ನೊಂದು ಪಕ್ಷದ ಅಭ್ಯರ್ಥಿಯಾಗಿ ಮತ ಕೇಳಿ ಗೆದ್ದು ಬರುವುದು ಪ್ರಜಾತಂತ್ರದ ಅಣಕ. ನಮ್ಮ ಜನ ಹಿಂದೆ ರಾಜಕಾರಣಿಗಳನ್ನು ಈಗ ಗೌರವದಿಂದ ಕಾಣುತ್ತ ಇಲ್ಲ. ಈ ಅಧಿಕಾರ ದಾಹದ ಹಿಂದೆ ಹಣದ ಕೈವಾಡವಿರುವುದನ್ನು ಕಂಡಿದ್ದಾರೆ. ಆದ್ದರಿಂದ ಪಕ್ಷಾಂತರ ಮಸೂದೆಗೆ ನೀವು ಒಂದು ತಿದ್ದುಪಡಿಯನ್ನು ಸೇರಿಸಬೇಕು. ಹೀಗೆ ರಾಜಿನಾಮೆ ಕೊಟ್ಟ ಸದಸ್ಯ ಮತ್ತೆ ಅದೇ ಅವಧಿಗೆ ಇನ್ನೊಂದು ಪಕ್ಷದಿಂದ ಅದೇ ಕ್ಷೇತ್ರದಿಂದ ಅಭ್ಯರ್ಥಿಯಾಗುವಂತಿಲ್ಲ.

ಎರಡನೆಯದು: ನಮ್ಮ ಸಾಮಾಜಿಕ ನ್ಯಾಯದ ಕಲ್ಪನೆ. ನಮ್ಮ ಸಮಾನತೆಯ ಆಶಯ ಕೈಗೂಡಬೇಕೆಂದಿದ್ದರೆ ಎಲ್ಲ ಮಕ್ಕಳನ್ನೂ ಸಮಾನವೆಂದು ಕಾಣುವ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಸಿಗುವಂತೆ ಆಗಬೇಕು. ಈ ಕಾಮನ್ ಸ್ಕೂಲುಗಳ ಮುಖಾಂತರ ಮಾತ್ರ ಮುಂದಿನ ಜನಾಂಗ ತಾನೊಂದು ಜೀವಂತವಾದ ಸಂಬಂಧಗಳ ಸಮುದಾಯವೆಂದು ತಿಳಿಯಬಹುದು. ಶ್ರೀಮಂತರ ಇಂಡಿಯಾ, ಬಡವರ ಭಾರತ ಬೇರೆ ಬೇರೆ ಲೋಕಗಳೇ ಆಗದಂತೆ ನಾವು ತಡೆಯಬಹುದು. ಅಷ್ಟೇ ಅಲ್ಲ; ಸತತವಾಗಿ ಮೀಸಲಾತಿಯ ಮುಖಾಂತರವೇ ಸಮಾನತೆ ಸ್ಥಾಪಿಸಬೇಕಾದ ಅಗತ್ಯ ಅಥವಾ ಅನಿವಾರ್ಯತೆಯನ್ನು ಹೀಗೆ ಬೆಳೆಯುವ ಮಕ್ಕಳು ಮೀರಬಹುದು, ಇದೊಂದು ಕನಸು. ಈ ಕನಸಿನ ಹಿಂದೆ ಆದಷ್ಟು ಬೇಗ ಮೀಸಲಾತಿಯ ಅಗತ್ಯವನ್ನು ಮೀರಬೇಕೆಂಬ ಅಂಬೇಡ್ಕರರ ಆಶಯವೂ, ಗಾಂಧೀಜಿಯ ಸರ್ವೋದಯದ ಆಶಯವೂ ಇದೆಯೆಂದು ತಿಳಿದಿದ್ದೇನೆ.

ನೀವು ಅಧಿಕಾರಕ್ಕೆ ಬಂದರೆ ಅದಿರು ಮಾರುವ ನೀತಿಯಲ್ಲಿ ಬದಲಾವಣೆಗಳಾಗಬೇಕು. ಈ ಕರ್ನಾಟಕದ ರಾಜಕಾರಣ ಭ್ರಷ್ಟವಾಗಲು ಬಳ್ಳಾರಿಯ ಗಣಿದೊರೆಗಳೇ ಕಾರಣವೆಂದು ನಾನು ತಿಳಿದಿದ್ದೇನೆ. ನಮ್ಮ ಮೊಮ್ಮಕ್ಕಳ ಕಾಲಕ್ಕೂ ಈ ಕಬ್ಬಿಣದ ಅದಿರು ಉಳಿದಿರಬೇಕು. ಆದ್ದರಿಂದ ಉಕ್ಕಿನ ಕಾರ್ಖಾನೆ ಮಾಡುವಂತಿದ್ದರೆ ಅದಿರು ತೆಗೆಯಿರಿ. ಅಥವಾ ನಮಗೆ ಅಗತ್ಯವಾದ ಇನ್ನು ಯಾವುದೋ ಲೋಹದ ಅದಿರನ್ನು ಆಮದು ಮಾಡಿಕೊಳ್ಳಬೇಕಾಗಿ ಬಂದರೆ ನಮ್ಮಲ್ಲಿ ಧಾರಾಳವಾಗಿ ಸಿಗುವ ಕಬ್ಬಿಣದ ಅದಿರನ್ನು ಬಾರ್ಟರ್ ಮಾಡಿ. ಆದರೆ ಅದಿರನ್ನು ಹಾಗೆಯೇ ಸುಲಭ ಬೆಲೆಗೆ ಮಾರಿ ದೇಶವನ್ನು ವಂಚಿಸಿ ಅದರ ಹಣದಲ್ಲಿ ರಾಜಕಾರಣ ಮಾಡುವುದು ನಿಲ್ಲಲಿ. ಹಿಂದೆ ಲಿಕ್ಕರ್ ಲಾಬಿ, ಎಜುಕೇಷನ್ ಲಾಬಿಗಳಿದ್ದವು. ಆದರೆ ಅವು ಇಷ್ಟು ಹೊಲಸಿಗೆ ಕಾರಣವಾಗಿರಲಿಲ್ಲ. ನಮ್ಮ ಪರಿಸರದ ಆರೋಗ್ಯಕ್ಕೂ ಇದು ಹಾನಿಕಾರಿ. ಲಾರಿಗಳಲ್ಲಿ ಧೂಳೆಬ್ಬಿಸಿ ಹೋಗುವ ದಾರಿಯಲ್ಲಿ ಒಂದು ಶಾಲೆಯೂ ಆರೋಗ್ಯವಾಗಿರದಂತಹ ಮಾಲಿನ್ಯವನ್ನು ಮೈಲುಗಳಗಟ್ಟಲೆ ಹಬ್ಬುತ್ತ, ಬೇಸಾಯದ ಭೂಮಿಯೂ ಧೂಳಾಗಿ ಮಾರಾಟವಾಗುತ್ತ ಇರುವ ಈ ಪೈಶಾಚಿಕ ಚಟುವಟಿಕೆ ನಿಲ್ಲುವಂತೆ ಮಾಡಿ. ಇದು ನನ್ನ ಕೋರಿಕೆ.

ಕಾಂಗ್ರೆಸ್ ಗಾಂಧೀಜಿ, ನೆಹರೂ, ಪಟೇಲರು, ಸುಭಾಷ್‌ಚಂದ್ರಬೋಸರು ಇಂತಹವರ ನೆನಪಿನಲ್ಲಿ ಪುನರ್ಜನ್ಮ ಪಡೆಯಲಿ.

ಜೈ ಹಿಂದ್, ಜೈ ಕರ್ನಾಟಕ

*

(ಏಪ್ರಿಲ್ ೨೦೦೯ ರಂದು ಬೆಂಗಳೂರು ಕೆಪಿಸಿಸಿ ವೆಬ್ಸೈಟ್ ಉದ್ಘಾಟಿಸಿದ ನಂತರ ಮಾಡಿದ ಭಾಷಣ.)