ನನ್ನ ಕನಸಿನ ಕರ್ನಾಟಕ ಭವಿಷ್ಯದ್ದಲ್ಲ, ಈಗಿಂದೀಗಲೇ ಆಗಬಹುದಾದ್ದು; ಆಗಬೇಕಾದ್ದು, ಅದು ಹೀಗಿದೆ ನೋಡಿ:

೧. ಎಲ್ಲ ಮಕ್ಕಳೂ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಇಂಗ್ಲಿಷನ್ನು ಒಂದು ಗ್ರಹಿಕೆಯ ಭಾಷೆಯಾಗಿ ಮಾತ್ರ ಕಲಿಯಬೇಕು.

೨. ಹೀಗೆ ಕಲಿಯುವಾಗ ಬಡವರ ಮಕ್ಕಳೂ ಶ್ರೀಮಂತರ ಮಕ್ಕಳೂ ಒಂದೇ ಬಗೆಯ ಶಾಳೆಯಲ್ಲಿ ಒಟ್ಟಾಗಿ ಕಲಿಯಬೇಕು.

೩. ಭಾರತ ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಕರ್ನಾಟಕವೂ ಈ ದೇಶದ ಒಂದು ಕೇಂದ್ರ. ಸಾವಿರ ವರ್ಷದ ಹಿಂದಿನ ಕೃತಿಗಳು ಇವತ್ತಿಗೂ ಅರ್ಥವಾಗುವಂತೆ, ಅರ್ಥ ಇರುವಂತೆ ಉಳಿದಿರುವುದು ಕನ್ನಡದಲ್ಲಿ ಬಸವ, ಅಲ್ಲಮ ನಮಗೆ ಇವತ್ತಿಗೂ ಪ್ರಸ್ತುತ. ೮೦ ವರ್ಷ ಹಿಂದಿನದು ಇವತ್ತಿಗೂ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಆದರ್ಶ. ಆದರೆ ಇಂಗ್ಲಿಷ್‌ನಲ್ಲಿ ೬೦೦ ವರ್ಷಗಳ ಹಿಂದಿನ ಚಾಸರ್, ಆಧುನಿಕ ಇಂಗ್ಲಿಷ್‌ನಲ್ಲಿ ಭಾಷಾಂತರಗೊಂಡಾಗ ಮಾತ್ರ ಅರ್ಥವಾಗುವಾತ. ನಮ್ಮ ಭಾರತೀಯತೆಯ ಆಧಾರ ನಮ್ಮ ಭಾಷೆಗಳು. ಈ ಭಾಷೆಗಳಲ್ಲಿ ಜೀವಂತವಾಗಿ ಉಳಿದ ನಮ್ಮ ಲೌಕಿಕ ಹಾಗೂ ಅಲೌಕಿಕ ಆಶಯಗಳು.

೪. ಒಬ್ಬ ಜ್ಞಾನಿ ಯಾವ ಭಾಷೆಯವನೇ ಆಗಲಿ ನನಗೆ ಬೇಕು. ಆದರೆ ನಮ್ಮ ಕನ್ನಡದಲ್ಲಿ ಎಲ್ಲ ಜ್ಞಾನಿಗಳ ವಿದ್ಯಾ ಸಂಪತ್ತು ಸತತವಾಗಿ ನಮಗೆ ದೊರೆಯುವಂಥ ವಿದ್ಯಾ ವ್ಯವಸ್ಥೆ ನಮ್ಮದಾಗಬೇಕು. ಆದ್ದರಿಂದ ಕನ್ನಡದಲ್ಲಿ ಕಲಿಯುವ ಎಲ್ಲರಿಗೂ ಇಂಗ್ಲಿಷ್‌ನಲ್ಲಿರುವ ಗ್ರಂಥಗಳನ್ನು ಗ್ರಹಿಸಬಲ್ಲ ಶಕ್ತಿ ಇರಲೇಬೇಕು.

೫. ಕರ್ನಾಟಕದ ಕಾಡು, ಖನಿಜ ಸಂಪತ್ತು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಬೇಕು. ನಮ್ಮ ಭೂಗರ್ಭದ ಅದಿರಿನ ರಫ್ತನ್ನು ನಿಷೇಧಿಸಬೇಕು. ಸದ್ಯ ಇದರ ಬಳಕೆ ಅಗತ್ಯವಾದರೆ ಆದಷ್ಟೂ ಮಿತವಾಗಿ ಬಳಸಿ, ಮುಂದಿನ ತಲೆಮಾರುಗಳಿಗೆ ಇದನ್ನೆಲ್ಲ ಉಳಿಸಬೇಕು.

೬. ದ್ವೈತ, ವೀರಶೈವ ಧರ್ಮಗಳು ಹುಟ್ಟಿದ ನಾಡಿದು. ಜೈನರು ತಮ್ಮ ಧರ್ಮ ಗ್ರಂಥಗಳಿಗೆ ವೀರಶೈವರಂತೆಯೇ ಕನ್ನಡ ಬಳಸಿದ್ದಾರೆ. ಹೀಗೆ ಎರಡು ಧರ್ಮಗಳ ಭಾಷೆಯಾದ ಕನ್ನಡದಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳೂ ತಮ್ಮದೇ ವಿಶಿಷ್ಠ ರೂಪ ಪಡೆದಿವೆ. ಈ ಧರ್ಮಗಳಿಗೆ ನಿಷ್ಠರಾದವರ ನಡುವೆ ಸತತ ಸಂವಾದ ನಡೆದು, ಒಂದರಿಂದ ಇನ್ನೊಂದು ಪುಷ್ಟಿ ಪಡೆಯಬೇಕು.

೭. ಕನ್ನಡ ಬಲ್ಲವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗಾವಕಾಶ ಇರಬೇಕು. ಕನ್ನಡ ಬಲ್ಲದವರು ಅಗತ್ಯವಾದರೆ,  ೫ ವರ್ಷಗಳಲ್ಲಿ ಅವರು ಕನ್ನಡ ಬಲ್ಲವರಾಗಿರಬೇಕು.

೮. ಕನ್ನಡ ಬಲ್ಲವರೆಲ್ಲರೂ ಕನ್ನಡಿಗರೆಂದು ತಿಳಿಯುವ ನಮ್ಮ ಔದಾರ್ಯ ಕಡಿಮೆ ಆಗಬಾರದು.

೯. ಈ ಕೂಡಲೇ ಕನ್ನಡದಲ್ಲಿ ಕಲಿಸುವ ಒಂದು ಮೆಡಿಕಲ್ ಕಾಲೇಜು, ಒಂದು ಎಂಜಿನಿಯರಿಂಗ್ ಕಾಲೇಜು ಸೃಷ್ಟಿಯಾಗಬೇಕು. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯನ್ನು ಗ್ರಹಿಸುವ ಶಕ್ತಿ ಇರಬೇಕು. ಕನ್ನಡ ಕಲಿತು ಬರುವ ಭಾರತದ ಯಾವ ಪ್ರದೇಶದ ವಿದ್ಯಾರ್ಥಿಗಾದರೂ ಅರ್ಹತೆಯ ಆಧಾರದ ಮೇಲೆ ಇಲ್ಲಿ ವಿದ್ಯಾರ್ಜನೆಗೆ ಅವಕಾಶ ಇರಬೇಕು.

*

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕರ್ನಾಟಕ ಕನಸು ನನಸು ಮಾಲಿಕೆಗಾಗಿ ನೀಡಿದ ಪ್ರತಿಕ್ರಿಯೆ ೨೧೧೨೨೦೦೭ ರಂದು ಪ್ರಕಟಿತ.)