ಲಂಡನ್ನಿನ ಪುಟ್ಟ ಫ್ಲ್ಯಾಟ್ ಒಂದರಲ್ಲಿ ಇಸ್ತ್ರೀ ಮಾಡುತ್ತ ನಿಂತು ಮಾತನಾಡುತ್ತ ಇದ್ದ ಸಿ.ಎಲ್.ಆರ್. ಜೇಮ್ಸ್ ನೆನಪಾಗುತ್ತಾನೆ. ಅವನ ಸುತ್ತ ನನ್ನ ಜೊತೆ ಕೆಲವು ವೆಸ್ಟ್ ಇಂಡಿಯನ್ ಹುಡುಗರು ಇರುತ್ತ ಇದ್ದರು. ಆ ದಿನಗಳಲ್ಲಿ ನಾಯ್‌ಪಾಲ್ ಕ್ರಿಕೆಟ್ ಬಗ್ಗೆ ಸಿ.ಎಸ್.ಆರ್. ಜೇಮ್ಸ್ ಬರೆದ ಒಂದು ಪುಸ್ತಕವನ್ನು ಮೆಚ್ಚಿ ರಿವ್ಯು ಮಾಡಿದ್ದ. ಇದು ಕ್ರಿಕೆಟ್ ಮೇಲಿನ ಪುಸ್ತಕವೂ ಹೌದು. ವಸಾಹತುಶಾಹಿಯ ಮೇಲಿನ ಪುಸ್ತಕವೂ ಹೌದು. ಮೆಲ್ವಿಲ್ ಬಗ್ಗೆಯೂ ಇನ್ನು ಯಾರೂ ಬರೆಯಲಾರದಂತಹ ಪುಸ್ತಕವೊಂದನ್ನು ಜೇಮ್ಸ್ ಬರೆದಿದ್ದ.  ಟ್ರಾಟ್ಸ್ಕಿಯ ಶಿಷ್ಯನಾದ ಇವನು ಕರಿಯ ಜನರಿಗೆ ದಾರ್ಶನಿಕ ಚಿಂತಕ. ಈ ದಿನಗಳಲ್ಲಿ ಎಡ್ವರ್ಡ್ ಸೈದ್‌ನ ಮೆಚ್ಚುಗೆಯಿಂದಾಗಿ ಪ್ರಸಿದ್ಧನಾಗಿದ್ದಾನೆ.

ಅವನು ಹೇಳುತ್ತಿದ್ದ ಹಲವು ಮಾತುಗಳಲ್ಲಿ ಭಾರತೀಯನಾದ ನನ್ನನ್ನೇ ಉದ್ದೇಶಿಸಿದಂತೆ ಇದ್ದ ಒಂದು ಸಾಮಾನ್ಯ ಮಾತು ಕ್ರಮೇಣ ವೈಯಕ್ತಿಕವಾಗಿ ನನಗೆ ಮಹತ್ವದ್ದಾಗಿದೆ. ಎಲ್ಲ ದೇಶಗಳಲ್ಲೂ ಪ್ರಭೂತ್ವದಲ್ಲಿ ಇರುವವರು ಹಲವು ಪ್ರಿವಿಲೇಜ್‌ಗಳನ್ನು ಪಡೆದವರಾಗಿ ಇರುವುದು ಸಹಜ. ಆದರೆ ಪ್ರಿವಿಲೇಜ್‌ಗಳು ಸಾಮಾನ್ಯರಿಂದ ಅವರನ್ನು ಬಹಳ ದೂರದಲ್ಲಿ ಇಟ್ಟಿರುವುದಿಲ್ಲ. ಆದರೆ ನಮ್ಮ ತೃತೀಯ ಜಗತ್ತಿನಲ್ಲಿ ಅಧಿಕಾರದಲ್ಲಿ ಇರುವವರು ಅಸಾಮಾನ್ಯವಾದ ಪ್ರಿವಿಲೇಜ್‌ಗಳನ್ನು ಪಡೆದಿರುತ್ತಾರೆ. ನಮ್ಮ ಲೋಕದ ಭ್ರಷ್ಟಾಚಾರದ ಮೂಲವೇ ಈ ಪ್ರಿವಿಲೇಜ್‌ನ ಅಂತರದಲ್ಲಿ ಇದೆ. ಹಿಂದೆ ಇದು ಯುರೋಪ್‌ನಲ್ಲೂ ಇತ್ತು. ಆದರೆ ಕ್ರಮೇಣ ಕಡಿಮೆಯಾಯಿತು.

ಅಧಿಕಾರಸ್ಥರು ಸರ್ವಶಕ್ತರಾಗಿರುವುದರಿಂದ ಹಲವು ಅಪಾಯಗಳಿವೆ. ಅವರಲ್ಲಿ ಕೆಲವರು ತಮ್ಮ ವೈಯಕ್ತಿಕವಾದ ನೀತಿ ನಡೆತೆಗೆ ಹೆಸರಾದವರಾದರೆ ಯಾವ ಪ್ರೀತಿಯೂ ಇಲ್ಲದ ನಿಷ್ಕರುಣಿಗಳಾಗಬಹುದು. ಅಂಥವರು ಬಹಳ ವಿರಳ. ಬಹಳ ಜನ ಅಧಿಕಾರಸ್ಥರು ಜನರ ವಿಶ್ವಾಸದ ಮೇಲೆ ಕೆಲಸ ಮಾಡುವವರಾದರೆ ಅವರು ತಮ್ಮ ಆಪ್ತ ಬಣಕ್ಕಾಗಿ ಭ್ರಷ್ಟರಾಗಲು ಹಿಂಜರಿಯುವುದಿಲ್ಲ. ಹೀಗಾಗಿ ಭ್ರಷ್ಟಾಚಾರಕ್ಕೆ ಜಾತಿ ಮೂಲವಾದ ಕೌಟುಂಬಿಕತೆಯ ಸಂಬಂಧವೊಂದು ಇರುತ್ತದೆ.

ಮಾಜಿಮುಖ್ಯಮಂತ್ರಿ ದೇವರಾಜ ಅರಸು ನಮ್ಮ ಮುಖ್ಯಮಂತ್ರಿಯಾಗಿದ್ದಾಗ ಅವರು ಬಿಹಾರ್‌ನ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಹೇಳಿದೊಂದು ಮಾತನ್ನು ಜೆ.ಎಚ್.ಪಟೇಲರು ನನಗೆ ಹೇಳಿದ್ದರು; ‘ನೋಡಿ ಠಾಕೂರ್, ನೀವು ಏನನ್ನು ರಾಜಕಾರಣದಲ್ಲಿ ಮಾಡಬೇಕೆಂದಿದ್ದಿರೋ ಅದನ್ನು ನಾನು ಸಾಧಿಸಿದ್ದೇನೆ. ಆದರೆ ನೀವು ಸೋತಿದ್ದೀರಿ. ಯಾದವರು, ಕೂರ್ಮಿಗಳು ನಿಮ್ಮ ಜತೆಗಿದ್ದರೆ ದಲಿತರು ನಿಮ್ಮ ಜತೆಗಿರಲಿಲ್ಲ. ಆದರೆ ನಾನು ದಲಿತರನ್ನೂ ಹಿಂದುಳಿದವರನ್ನೂ ಒಟ್ಟಾಗಿ ಇಟ್ಟುಕೊಂಡು ಕರ್ನಾಟಕದ ರಾಜಕಾರಣದ ಸ್ವರೂಪವನ್ನು ಬದಲು ಮಾಡುವುದರಲ್ಲಿ ನಿಮಿಗಿಂತ ಯಶಸ್ವಿಯಾಗಿದ್ದೇನೆ. ಯಾಕೆ ಗೊತ್ತೆ? ನಾನು ಹಣವನ್ನು ಬಳಸುತ್ತೇನೆ. ನೀವು ತುಂಬ ಪ್ರಾಮಾಣಿಕರಾಗಿ ಹಣವನ್ನು ಬಳಸುವುದಿಲ್ಲ. ನಾನು ನನ್ನ ಎಲ್ಲ ಹಿಂದುಳಿದ ವರ್ಗದ ರಾಜಕಾರಣಿಗಳಿಗೆ ಅವರಿಗೆ ಬೇಕಾದಷ್ಟು ಹಣವನ್ನು ಕೊಟ್ಟು ನನ್ನ ಜೊತೆಗಿರುವಂತೆ ಮಾಡಿದ್ದೇನೆ. ನೀವೂ ಮಾಡಬೇಕು-ಗೆಲ್ಲಬೇಕೆಂದಿದ್ದರೆ.’

ಇದು ಬಹಳ ಸಿನಿಕತನದ ಮಾತಿನಂತೆ ಕಾಣಬಹುದು. ಆದರೆ ಇದರಲ್ಲಿ ಕೆಲವು ಸತ್ಯಗಳಿವೆ. ನಾನು ಮೈಸೂರಿನಲ್ಲಿದ್ದಾಗ ನಾನು ತುಂಬಾ ಪ್ರೀತಿಸುವ ಗೌರವಿಸುವ ದಲಿತ ಅಧ್ಯಾಪಕರೊಬ್ಬರಿದ್ದರು. (ಈಗ ಅವರು ಇಲ್ಲ) ಅವರು ಒಮ್ಮೆ ನನಗೆ ಹೇಳಿದರು: ‘ದಲಿತರ ಕೇರಿಯಲ್ಲಿ ಹುಟ್ಟಿ ಬೆಳೆದ ನಾನು, ನಮ್ಮ ಜನರಿಗೆ ಒಂದು ಕಲ್ಲುಸಕ್ಕರೆ ಚೂರು ಇದ್ದಂತೆ. ಎಲ್ಲರೂ ಏನನ್ನಾದರೂ ಅಪೇಕ್ಷಿಸಿ ಇರುವೆಗಳಂತೆ ನನ್ನನ್ನು ಮುತ್ತುತ್ತಾರೆ. ಏಕೆಂದರೆ ಅವರೆಲ್ಲರೂ ಕಡುಬಡವರು. ನನಗಿರುವ ಅಲ್ಪಸ್ವಲ್ಪ ಅಧಿಕಾರದಿಂದಾಗಿ ನಾನು ಅವರಿಗೆ ಏನನ್ನಾದರೂ ಮಾಡಬಲ್ಲ ಶಕ್ತಿಯುಳ್ಳವನಾಗಿ ಕಾಣುತ್ತೇನೆ. ಅವರನ್ನು ನಾನು ಹೊರಗೆ ಅಟ್ಟುವಂತಿಲ್ಲ. ಆದರೆ ಅವರಿಗೆ ಸಹಾಯ ಮಾಡಬೇಕೆಂದಿದ್ದರೆ ನಾನು ನನ್ನ ಸಂಬಳಕ್ಕಿಂತ ಮೀರಿದ ಹಣವನ್ನು ಹೇಗಾದರೂ ಸಂಪಾದಿಸಬೇಕಾಗುತ್ತದೆ’.

ಇದಕ್ಕೆ ವಿರುದ್ಧವಾದ ಮತ್ತೊಂದು ಕಥೆಯನ್ನು ನಾನು ಕೇಳಿದ್ದೇನೆ. ಇದು ಎಷ್ಟು ನಿಜವೋ ಸುಳ್ಳೋ ತಿಳಿಯದು. ಸರ್.ಎಂ.ವಿಶ್ವೇಶ್ವರಯ್ಯನವರನ್ನು ಮೈಸೂರಿನ ಮಹಾರಾಜರು ದಿವಾನರಾಗಬೇಕೆಂದು ಕೇಳಿದಾಗ ಅವರು ತಮ್ಮ ಸಂಬಂಧಿಕರನ್ನೆಲ್ಲಾ ಕರೆದು ಒಂದು ಔತಣವನ್ನು ಏರ್ಪಡಿಸಿದರಂತೆ. ಊಟವಾದ ನಂತರ ಎಲ್ಲರನ್ನೂ ಕೂರಿಸಿ ಕೈಮುಗಿದು ಹೀಗೆ ಹೇಳಿದರಂತೆ ‘ನೋಡಿ ಶ್ರೀಮನ್ಮಹಾರಾಜರು ನನ್ನನ್ನು ದಿವಾನರಾಗಬೇಕೆಂದು ಕೇಳಿದ್ದಾರೆ. ಆದರೆ ನಾನು ದಿವಾನನಾಗಿದ್ದಾಗ ನೀವು ಯಾರೂ ನಿಮ್ಮ ಸ್ವಂತದ ಕೆಲಸಕ್ಕಾಗಿ ನನ್ನ ಹತ್ತಿರ ಸಹಾಯ ಬೇಡಲು ಬರುವುದಿಲ್ಲವೆಂದು ಆಶ್ವಾಸನೆ ಕೊಟ್ಟರೆ ಮಾತ್ರ ನಾನು ದಿವಾನಗಿರಿಯನ್ನು ಒಪ್ಪಿಕೊಳ್ಳುತ್ತೇನೆ.’ ಸೇರಿದ ಸಂಬಂಧಿಕರು ಇದನ್ನು ಒಪ್ಪಿಕೊಂಡರಂತೆ. ಇದರಲ್ಲಿ ನನಗೆ ಆಶ್ಚರ್ಯವಿಲ್ಲ. ಯಾಕೆಂದರೆ ಯಾವ ಕಷ್ಟದಲ್ಲಾದರೂ ಬದುಕಬಲ್ಲ ಶಕ್ತಿಯುಳ್ಳ ಮೇಲ್ಜಾತಿಯವರಿಗೆ ಈ ಬಗೆಯ ನೈತಿಕತೆ ದುಸ್ಸಾಧ್ಯವಲ್ಲ. ಆದರೆ ಕಡುಬಡವರಿಗೆ ಇದು ಅರ್ಥವೇ ಆಗುವುದಿಲ್ಲ. ನಮ್ಮವನೊಬ್ಬ ಮೇಲಕ್ಕೆ ಬಂದರೆ ಅವನು ನಮಗೆ ಸಹಾಯಮಾಡಲಾರದೇ ಹೋದರೆ ಅದು ದುಷ್ಟತನದ ಸ್ವಾರ್ಥವೇ ಎಂದು ಅವರು ತಿಳಿಯುತ್ತಾರೆ. ಕಲ್ಲುಸಕ್ಕರೆಗೆ ಸಹಜವಾಗಿ ಇರುವೆಗಳು ಮುತ್ತಿಕೊಳ್ಳುತ್ತವೆ.

ನಮ್ಮ ಸಮಾಜದಲ್ಲಿ ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣವಿರಬಹುದು. ಅದರಲ್ಲೂ ಕೆಳಜಾತಿಯವರು ಅಧಿಕಾರ ಪಡೆದು ಮೇಲೆ ಬಂದಾಗ, ಅವರು ಏಕಕಾಲಕ್ಕೆ ಕರುಣಿಗಳೂ ಆತ್ಮಗೌರವ ಉಳ್ಳವರೂ ಆದರೆ, ಇದೊಂದು ದೊಡ್ಡ ನೈತಿಕ ಪ್ರಶ್ನೆಯಾಗಿ ಅವರನ್ನು ಕಾಡಿಯೇ ಕಾಡುತ್ತದೆ.

ನಾನು ಜೆ.ಎಚ್.ಪಟೇಲರನ್ನು ಒಮ್ಮೆ ದೂರದರ್ಶನಕ್ಕೆ ಸಂದರ್ಶಿಸಿದ್ದೆ. ಏಕವಚನದಲ್ಲಿ ಮಾತನಾಡುತ್ತಿದ್ದ ನಾವು, ಆ ದಿನ ಬಹುವಚನದಲ್ಲೇ ಸ್ವಲ್ಪ ಕೃತಕವಾಗಿ ಮಾತನಾಡಿದೆವು. ಈ ಕೃತಕತೆ ಕ್ರಮೇಣ ಕಳೆದುಹೋಯಿತು. ನಾನು ಕೇಳಿದ ಪ್ರಶ್ನೆಗಳಿಗೆಲ್ಲಾ ಅವರು ಉತ್ತರ ಹೇಳಿದರು. ಸುಮಾರು ಒಂದು ಗಂಟೆಯ ನಂತರ ಕ್ಯಾಮೆರಾದವರು ತಮ್ಮ ಸಲಕಲಣೆಗಳನ್ನು ಮುಚ್ಚುತ್ತಿದ್ದಂತೆ ಎಲ್ಲರೂ ಕೇಳುವ ಹಾಗೆ ಪಟೇಲರು ಅವರ ಸಹಜವಾದ ವಿನೋದ ಮತ್ತು ಉಮೇದಿನಲ್ಲಿ ನನ್ನನ್ನು ಕೇಳಿದರು ‘ಅಲ್ಲ ಅನಂತು. ನಾನು ಚುನಾವಣೆಗೆ ಅಗತ್ಯವಾದ ಲಕ್ಷಾಂತರ ರೂಪಾಯಿಗಳನ್ನು ಹೇಗೆ ಒಟ್ಟು ಮಾಡುತ್ತೇನೆ ಎಂದು ನೀನು ಕೇಳಲೇ ಇಲ್ಲವಲ್ಲ?’ ನಾನು ದಿಗ್ಬ್ರಮೆಗೊಂಡೆ. ಏಕೆಂದರೆ ಕೇಳಬಹುದಾಗಿದ್ದ ಪ್ರಶ್ನೆ ಅದು. ಆದರೆ ನಾನು ಕೇಳಲಿಲ್ಲ. ಎಲ್ಲವನ್ನೂ ಕೇಳಿದವನು ಕೇಳಲೇಬೇಕಾದ ಒಂದ್ನು ಕೇಳಲಿಲ್ಲ.

ಪರಮ ಅಧಿಕಾರವಿರುವ ಮುಖ್ಯಮಂತ್ರಿಯೊಬ್ಬನಿಗೆ ಆಪ್ತವಾಗಿ ಇರುವುದರಲ್ಲೇ ನನ್ನಲ್ಲೊಂದು ನೈತಿಕ ಹಿಂಜರಿಕೆ ಕೆಲಸ ಮಾಡಿರಬಹುದು. ಏಕೆಂದರೆ ನಾನು ಕೇಳೀದ ಪ್ರಶ್ನೆಗೆ ಪಟೇಲರು ಉತ್ತರ ಹೇಳಿದ್ದರೆ ಅವರು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟವಾಗುತ್ತಿತ್ತೋ ಏನೋ. ಅಂಥ ಕಷ್ಟಕ್ಕೆ ಗೆಳೆಯನೊಬ್ಬನನ್ನು ದೂಡುವುದು ನನಗೆ ಹಿಂಜರಿಕೆಯ ವಿಷಯವಾಯಿತು. ಇಂಥ ಸಂದರ್ಭಗಳಲ್ಲೆಲ್ಲಾ ನಾವೇ ಸ್ವತಃ ಭ್ರಷ್ಟಾಚಾರಿಗಳಲ್ಲದೇ ಇದ್ದರೂ ಅದರಲ್ಲಿ ಒಂದು ಬಗೆಯ ಮೂಕಸಮ್ಮತಿಯಿಂದ ಪಾಲಾಗಿರುತ್ತೇವೆ.

ಕೆಲವು ಘಟನೆಗಳು ನನಗೆ ನೆನಪಾಗುತ್ತವೆ. ಯಾವುದೋ ಕಾರಣಕ್ಕಾಗಿ ನಾನು ಬೆಂಗಳೂರಿಗೆ ಬಂದು ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ರಾಜಭವನದ ಹತ್ತಿರದ ಒಂದು ಹೊಟೇಲಿನಲ್ಲಿ ಇಳಿದುಕೊಂಡಿದ್ದೆ. ಒಂದು ಬೆಳಿಗ್ಗೆ ಇಬ್ಬರು ಅಪರಿಚಿತರು ಬಂದು ಬಹು ವಿನಯದಿಂದ ಪರಿಚಯಿಸಿಕೊಂಡರು. ಒಬ್ಬರು ನಿವೃತ್ತರಾದ ಪಿಡಬ್ಲ್ಯುಡಿ ಎಂಜಿನಿಯರ್. ಇನ್ನೊಬ್ಬರು ನಿವೃತ್ತ ಪೊಲೀಸ್ ಅಧಿಕಾರಿ. ಅವರು ನನ್ನಿಂದ ಒಂದು ಸಹಾಯವನ್ನು ಅಪೇಕ್ಷಿಸಿದರು. ಆಗ ನನಗಿದ್ದ ಪ್ರಿವಿಲೇಜ್ ಎಂದರೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣಹೆಗಡೆಯವರ ಆಪ್ತರಲ್ಲಿ ಒಬ್ಬನಾಗಿದ್ದುದು. ಎಮರ್ಜೆನ್ಸಿಯ ಹೋರಾಟದಲ್ಲಿ ಅಷ್ಟಿಷ್ಟು ಭಾಗಿಯಾಗಿದ್ದ ನಮಗೆ ಆಗ  ತಾನೇ ಅಧಿಕಾರಕ್ಕೆ ಬಂದ ಹೆಗಡೆ ಮಂತ್ರಿಮಂಡಲ ಆಪ್ತವಾಗಿತ್ತು. ನಾವು ಹೇಳಿದ ಮಾತನ್ನು ಅವರು ಕೇಳುತ್ತಿದ್ದರು. ದಲಿತರ ಮೇಲೆ ನಡೆದ ನೂರಾರು ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಪರಿಹಾರಕ್ಕೆಂದು ನಾನು ಹೆಗಡೆಯವರ ಹತ್ತಿರ ಹೋಗುವುದಿತ್ತು. ಈ ದಲಿತರಲ್ಲಿ ಒಬ್ಬಿಬ್ಬರು ಪೆಟ್ರೋಲ್ ಬಂಕ್‌ಗಾಗಿ ಪ್ರಯತ್ನಿಸಿದವರೂ ಇದ್ದರು. ಅವರ ಬಗ್ಗೆ ನನಗಷ್ಟು ಸಹಾನುಭೂತಿ ಇರಲಿಲ್ಲ. ಆದರೆ ಕೆಲವು ನಿಜವಾದ ಕಷ್ಟಗಳನ್ನು ತಾತ್ಕಾಲಿಕವಾಗಿಯಾದರೂ ಬಗೆಹರಿಸುವುದು ಸಾಧ್ಯವಿತ್ತು.

ಈ ಇಬ್ಬರು ಬಂದದ್ದು ಇಂತಹ ಒಂದು ಕೇಸ್‌ಗಾಗಿ ಅಲ್ಲ. ಹತ್ತು ಜನ ಎಂಬಿಬಿಎಸ್ ಮುಗಿಸಿದ ವಿದ್ಯಾರ್ಥಿಗಳಿದ್ದರು. ಈ ಹತ್ತು ಜನರೂ ಮೊದಲನೆಯ ದರ್ಜೆಯಲ್ಲಿ ಪಾಸ್ ಆದವರು. ಎಂ.ಡಿ.ಗೆ ಸೇರಲು ಎಲ್ಲ ಅರ್ಹತೆಯನ್ನು ಪಡೆದವರು. ಆದರೆ ಅವರಿಗೆ ಹೌಸ್ ಸರ್ಜೆನ್ಸಿಯ ಅವಕಾಶವನ್ನು ಕಲ್ಪಿಸುವುದರಲ್ಲಿ ಹದಿನೈದು ದಿನ ತಡವಾಗಿತ್ತು. ಆದ್ದರಿಂದ ನಿಗದಿತ ದಿನಾಂಕದಲ್ಲಿ ಅವರು ಎಂ.ಡಿ.ಗೆ ಅರ್ಜಿಯನ್ನು ಹಾಕುವಂತಿರಲಿಲ್ಲ. ಹಾಕಬಲ್ಲವರೆಲ್ಲಾ ಇವರಿಗಿಂತ ಕಡಿಮೆ ದರ್ಜೆಯಲ್ಲಿ ಪಾಸ್ ಆದವರು. ಆದ್ದರಿಂದ ಈ ಇಬ್ಬರ ಅಹವಾಲು ನ್ಯಾಯವೇ ಆಗಿತ್ತು. ‘ಈಗ ಅಧಿಕಾರದಲ್ಲಿರುವ ಒಬ್ಬರ ಸಂಬಂಧಿಗಳು ಮಾತ್ರ ಅರ್ಜಿ ಹಾಕಬಲ್ಲಂತೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಅದನ್ನು ಹದಿನೈದು ದಿನವಾದರೂ ಮುಂದೂಡಿದರೆ ನಾವು ಅರ್ಜಿ ಹಾಕಬಹುದು.’ ಇದು ನನಗೆ ನ್ಯಾಯವೇ ಅನ್ನಿಸಿತು. ಸಂಬಂಧಪಟ್ಟ ಮಂತ್ರಿಗಳನ್ನು ಹೋಗಿ ನೋಡಿದೆ. ಅವರು ಉಡಾಫೆಯ ಉತ್ತರವನ್ನು ಕೊಟ್ಟರು. ‘ಇವರೆಲ್ಲರೂ ಹೀಗೇ ಸ್ವಾಮಿ. ಯಾವ ತಾರೀಖನ್ನು ನಾವು ನಿಗದಿಪಡಿಸಿದರೂ ಅದನ್ನು ಮುಂದಕ್ಕೆ ಹಾಕಬೇಕು ಎನ್ನುತ್ತಾರೆ. ಅವರ ಮಾತನ್ನು ಕೇಳಿ ನಾವು ಮಾಡಬೇಕಾದ್ದನ್ನು ಮಾಡದೇ ಹೋಗುವುದು ತಪ್ಪಾಗುತ್ತದೆ’. ಈ ಉತ್ತರದಿಂದ ನನ್ನ ಅನುಮಾನ ಬಲವಾಯಿತು. ಪ್ರಾಯಃಶ ಈ ಮಂತ್ರಿಗಳಿಗೆ ಬೇಕಾದವರು ಯಾರೋ ಇದ್ದಾರೆ. ಆದ್ದರಿಂದ ಯೋಗ್ಯರು ಸ್ಪರ್ಧಿಸದಂತೆ ಇವರು ದಿನಾಂಕವನ್ನು ಯೋಜಿಸಿದ್ದಾರೆ ಎಂದುಕೊಂಡ ನಾನು ಸೀದಾ ಮುಖ್ಯಮಂತ್ರಿಯಾಗಿದ್ದ ಹೆಗಡೆಯವರಲ್ಲಿಗೆ ಹೋದೆ. ನನ್ನ ಅನುಮಾನಗಳನ್ನು ಹೇಳಿದೆ. ಆಗಷ್ಟೇ ವ್ಯಾಲ್ಯೂ ಬೇಸ್ಡ್ ಪಾಲಿಟಿಕ್ಸ್ ಮಾಡಬೇಕೆಂದು ನಿರ್ಧಾರ ಮಾಡಿದ್ದ ಹೆಗಡೆಯವರು ಕೂಡಲೇ ನನಗೆ ಸ್ಪಂದಿಸಿದರು. ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡುವುದಾಗಿ ಹೇಳಿದರು. ನಾನು ಇಳಿದುಕೊಂಡಿದ್ದ ಹೊಟೇಲಿಗೆ ಹಿಂದಕ್ಕೆ ಬಂದೆ.

ನನಗಾಗಿ ಕಾದಿದ್ದ ಇಬ್ಬರು ನಿವೃತ್ತ ಅಧಿಕಾರಿಗಳಿಗೆ ನಿಮ್ಮ ಕೆಲಸ ಆಗುತ್ತದೆ ಎಂದೆ. ಆಗ ಅವರು ನಾನಿದ್ದ ರೂಮಿನ ಬಾಗಿಲನ್ನು ಹಾಕಿ. ಚೀಲದಿಂದ ನಲವತ್ತು ಸಾವಿರ ರೂಪಾಯಿಗಳನ್ನು ತೆಗೆದು ನನಗೆ ಕೊಡಲು ಬಂದರು. ನಾನು ದಿಗ್ಭ್ರಾಂತನಾದೆ. ನನ್ನ ಮುಖ ಬೆವರಿತು. ಅಷ್ಟು ಹಣವನ್ನು ನಾನು ಆತನಕ ಕಂಡವನೇ ಅಲ್ಲ. ‘ಏನಿದು?’ ಅಂದೆ. ಅದಕ್ಕವರು ಬಹಳ ವಿನಯದಿಂದ ‘ಈ ಕೆಲಸ ಇಷ್ಟು ಸುಲಭವದಲ್ಲಿ ಆಗುತ್ತದೆ ಎಂದು ನಾವು ತಿಳಿದಿರಲಿಲ್ಲ ಸಾರ್. ಮೈಸೂರಿಗೆ ಹೋದ ನಂತರ ಇನ್ನಷ್ಟು ಕೊಡುತ್ತೇವೆ’ ಎಂದು.

ನಾನು ಸಿಟ್ಟಿನಲ್ಲಿ ಕಂಪಿಸುತ್ತಾ ‘ನನ್ನನ್ನು ಏನೆಂದು ತಿಳಿದಿದ್ದೀರಿ?’ ಎಂದು ನನ್ನ ಮಾತು ಅವರಿಗೆ ಮುಟ್ಟುವಂತೆ ಹೇಳುವುದು ಹೇಗೆಂದು ತಿಳಿಯದೆ ಗುಡುಗಿದೆ. ಅದಕ್ಕವರು ‘ನೀವು ಪ್ರಾಮಾಣಿಕರೆಂದು ನಮಗೆ ಗೊತ್ತು ಸಾರ್. ಆದರೆ ಮೇಲಿನವರಿಗೆ ನೀವೇ ಕೊಡಬೇಕಾಗಿರುತ್ತದಲ್ಲಾ’ ಎಂದರು. ನಾನು ತಾಳ್ಮೆಯಿಂದ ‘ಸರ್ಕಾರ ಬದಲಾಗಿದೆ. ಹೆಗಡೆಯವರು ಈ ಬಗೆಯ ವ್ಯವಹಾರವನ್ನು ನನ್ನ ಜತೆ ಮಾಡುವವರಲ್ಲ. ನನಗೆ ಹಣಬೇಡ. ನೀವು ಹೋಗಿ’ ಎಂದೆ. ಅವರಿಬ್ಬರೂ ಹೋದರು. ಆದರೆ ಸ್ವಲ್ಪ ಹೊತ್ತಿನ ಬಳಿಕ ಅವರಲ್ಲಿ ಒಬ್ಬರು- ನಿವೃತ್ತ ಪೊಲೀಸ್ ಅಧಿಕಾರಿ-ಮತ್ತೆ ಬಂದರು. ಗುಟ್ಟಿನಲ್ಲಿ ಎಂಬಂತೆ ನನಗೆ ಹೇಳಿದರು. ‘ನೀವೇನೋ ಬೇಡ ಅಂದಿರಿ. ಆದರೆ ನನ್ನ ಜತೆ ಬಂದ ಇನ್ನೊಬ್ಬರು ಈ ಹಣವನ್ನು ತಮ್ಮ ಜೇಬಿನಲ್ಲೇ ಇಟ್ಟುಕೊಂಡು ಬಿಡುತ್ತಾರೆ. ನಿಮಗೆ ಕೊಟ್ಟೆ ಎನ್ನುತ್ತಾರೆ. ಆದ್ದರಿಂದ ನೀವು ತೆಗೆದುಕೊಳ್ಳದಿದ್ದರೂ ನಿಮಗೆ ಬರುವ ಹೆಸರು ಬರುತ್ತದೆ. ನಿಮಗೂ ಕಷ್ಟವಿದೆಯಲ್ಲವೇ. ಇದನ್ನು ಬಳಸಿಕೊಳ್ಳಿ’ ಎಂದರು.

ಒಂದು ಪೇಚಿನಲ್ಲಿ ಸಿಕ್ಕಿಕೊಂಡಂತೆ ನನಗೆ ಭಾಸವಾಯಿತು. ‘ಈ ಹತ್ತು ವಿದ್ಯಾರ್ಥಿಗಳಲ್ಲಿ ಯಾರಾದರೂ ನಿಮ್ಮ ಜತೆ ಬಂದಿದ್ದಾರೆಯೇ?’ ಎಂದು ಕೇಳಿದೆ. ನನಗೆ ಬೇಕಾದವರೇ ಇಬ್ಬರಿದ್ದಾರೆ ಎಂದವರು ಹೇಳಿದರು., ಅವರನ್ನು ಕರೆದು ತರಲು ಹೇಳಿದೆ. ತುಂಬ ಜಾಣರಾಗಿ ಕಾಣುತ್ತಿದ್ದ ಈ ಇಬ್ಬರು ಯುವಕರನ್ನು ನಾನು ಸಂಕಟದಲ್ಲಿ ಕೇಳಿದೆ ‘ನಾನೊಬ್ಬ ಬರೆಹಗಾರನೆಂದೂ ಒಬ್ಬ ಅಧ್ಯಾಪಕನೆಂದೂ ನಿಮಗೆ ಗೊತ್ತೇ? ನನಗೆ ಲಂಚವನ್ನು ಕೊಟ್ಟು ಆಗಲೇಬೇಕಾದ ಕೆಲಸವನ್ನು ಮಾಡಿಸಿಕೊಳ್ಳಲು ನೀವು ಮುಂದಾಗಿದ್ದೀರಲ್ಲಾ. ನ್ಯಾಯಕ್ಕಾಗಿ ಹೋರಾಡಬೇಕಾದವರು ನೀವು.’ ಎಂದೆ. ಈ ಇಬ್ಬರು ಜಾಣ ಹುಡುಗರು ತುಂಬ ವಿನಯದಲ್ಲಿ ಹೇಳಿದರು ‘ದುಡ್ಡು ಕೊಡದೇ ಯಾವ ಕೆಲಸವೂ ಆಗದ ಈ ದಿನಗಳಲ್ಲಿ ನೀವು ಹೀಗೆ ಹೇಳಬಹುದೆಂದು ನಾವು ಊಹಿಸಿಯೂ ಇರಲಿಲ್ಲ ಸಾರ್’ ಎಂದರು.

‘ಹಾಗಾದರೆ ಹೋಗಿ ನೀವು ಕೊಟ್ಟ ಹಣವನ್ನು ಆ ಇನ್ನೊಬ್ಬರಿಂದ ಹಿಂದಕ್ಕೆ ಪಡೆಯಬೇಕು. ನಿಮಗೆ ಒಳ್ಳೆಯದಾಗಲಿ’ ಎಂದೆ. ಅವರು ತಮ್ಮ ಎಂ.ಡಿ. ಮುಗಿಸಿದ ನಂತರ ನಮ್ಮ ಮನೆಗೆ ಬಂದು ನನ್ನಷ್ಟು ಎತ್ತರದ ಒಂದು ಹಾರವನ್ನು ಹಾಕಿದರು. ಆದರೆ ಈ ಬಗೆಯ ನೈತಿಕತೆಯಿಂದ ಬರುವ ಆತ್ಮಗೌರವೂ ದುರಂಹಕಾರಕ್ಕೂ ಕಾರಣವಾಗಬಹುದೆಂಬ ಅನುಮಾನ ನನ್ನನ್ನು ಕಾಡಿದೆ.

ಇನ್ನೊಂದು ಘಟನೆ. ಪಟೇಲರು ಅಬಕಾರಿ ಸಚಿವರಾಗಿದ್ದರು. ಅವರು ನನ್ನ ಪ್ರಿಯಮಿತ್ರನೆಂದು ಗೊತ್ತಿದ್ದ ಮೈಸೂರಿನ ಅಬಕಾರಿ ಅಧಿಕಾರಿಯೊಬ್ಬರು ಬಂದು ನನ್ನ ಮನೆ ಬಾಗಿಲನ್ನು ತಟ್ಟಿದರು. ನಾನು ಮಹಡಿಯ ಮೇಲಿದ್ದೆ. ಆಗಿನ್ನೂ ವಿದ್ಯಾರ್ಥಿನಿಯಾಗಿದ್ದ ನನ್ನ ಮಗಳು ಅನುರಾಧಾ ಬಾಗಿಲು ತೆಗೆದು ಅವರನ್ನು ‘ಒಳಬನ್ನಿ’ ಎಂದಳು. ಅವರು ಒಂದು ದೊಡ್ಡ ಕ್ರೇಟಿನ ಸಮೇತ ಒಳ ಒಂದು ಕ್ರೇಟನ್ನು ಕೆಳಗಿಟ್ಟು ‘ಇದು ಸಾಹೇಬರಿಗೆ’ ಎಂದರು.

ನನ್ನ ಮಗಳು ತನ್ನ ಸಹಜ ಮುಗ್ಧತೆಯಲ್ಲಿ ಇದರಲ್ಲೇನಿದೆ ಎಂದು ಬಿಚ್ಚಿ ನೋಡಿ ಅದರ ತುಂಬ ಇದ್ದ ವ್ಹಿಸ್ಕಿ ಬಾಟಲ್‌ಗಳನ್ನು ಕಂಡು ಎಷ್ಟು ಕುಪಿತಳಾದಳೆಂದರೆ ಅವಳು ಗಟ್ಟಿ ಧ್ವನಿಯಲ್ಲಿ ಈ ಅಧಿಕಾರಿಯನ್ನು ಅವಮಾನಿಸುವಂತೆ ಹೇಳಿದ ಮಾತುಗಳನ್ನು ಕೇಳಿ-ಹೀಗೆ ಮಾತೇ ಆಡದ ನನ್ನ ಮಗಳ ದುಗುಡದಿಂದ ಚಕಿತನಾಗಿ-ನಾನು ಕೆಳಗಿಳಿದು ಬಂದೆ. ಅಧಿಕಾರಿ ನಾಚದೆ, ನಸುನಗುತ್ತಲೇ ‘ಇದು ಗೌರವದ ಕಾಣಿಕೆ, ನಾನೂ ಕವಿತೆ ಬರೆಯುತ್ತೇನೆ. ನಿಮ್ಮ ತಂದೆಯವರ ಸಂಪರ್ಕವಾದರೆ ನನ್ನ ಪುಣ್ಯ ಎಂದು ಒಂದು ಗಿಫ್ಟ್ ಆಗಿ ತಂದಿದ್ದೇನೆ’ ಎಂದರು. ಕುಪಿತಳಾದ ನನ್ನ ಮಗಳು. ‘ಅಪ್ಪ, ಇವರನ್ನು ಹೊರಗೆ ಕಳುಹಿಸು’ ಎಂದು ಜೋರಿನಲ್ಲಿ ಮಾತನಾಡಿದಳು. ನಾನೇ ಸ್ವಲ್ಪ ಸಂಕೋಚದಿಂದ ಅಧಿಕಾರಿಗೆ ಹೇಳಿದೆ; ‘ನಾನಿನದನ್ನು ಗಿಫ್ಟ್ ಆಗಿ ಸ್ವೀಕರಿಸುವುದಿಲ್ಲ. ನಿಮಗೆ ಥ್ಯಾಂಕ್ಸ್ ಬೇಸರ ಮಾಡಿಕೊಳ್ಳಬೇಡಿ’ ಎಂದು. ನನಗಾದ ಮುಜುಗರ ನನ್ನ ಮಗಳಿಗಾಗಿರಲಿಲ್ಲ. ಏಕೆಂದರೆ ಪ್ರಿವಿಲೇಜ್ ಇರುವ ಜನರ ಜತೆ ಒಡನಾಡಿ ಅಷ್ಟು ಮುಗ್ಧತೆಯನ್ನು ನಾನು ಕಳೆದುಕೊಂಡಿದ್ದೆ. ಅವರು ಕ್ರೇಟ್ ಸಮೇತ ಹೊರಗೆ ಹೋಗುವಾಗ ಎರಡು ಗಾಜಿನ ಬಟ್ಟಲುಗಳನ್ನು ಬಿಟ್ಟು ಹೋದರು. ಸಾಂಕೇತಿಕವಾಗಿ ನಾನು ಅದನ್ನು ತೆಗೆದುಕೊಂಡನೆಂಬುದನ್ನು ನೆನದರೆ ಈಗಲೂ ನಾಚಿಕೆಯಾಗುತ್ತದೆ.

ಪ್ರಿವಿಲೇಜ್ ಇರುವ ಅಧಿಕಾರದಲ್ಲಿರುವವರಿಗೆ ಹತ್ತಿರವಾಗಿದ್ದ ಆ ದಿನಗಳು ನನ್ನ ಪಾಲಿಗೆ ನನ್ನನ್ನು ನಾನೇ ನಿಷ್ಠುರವಾಗಿ ವಿಶ್ಲೇಷಿಸಿಕೊಳ್ಳಬೇಕಾದ ದಿನಗಳು. ನನ್ನ ಪರಮ ಸ್ನೇಹಿತರಂತೆ ನಮ್ಮ ಮನೆಗೆ ಬರುತ್ತಿದ್ದ ಅನೇಕರಿಗೆ ನನ್ನ ಬರವಣಿಗೆ ಏನೂ ಗೊತ್ತಿರಲಿಲ್ಲ. ಗೊತ್ತಿದೆ ಎಂದು ತೋರಿಸಿಕೊಳ್ಳುವಷ್ಟು ನನ್ನ ಪುಸ್ತಕದ ಶೀರ್ಷಿಕೆಗಳನ್ನು ಅವರು ತಿಳಿದಿರುತ್ತಿದ್ದರು. ನನ್ನಿಂದ ಏನಾದರೂ ಕೆಲಸವನ್ನು ಮಾಡಿಸಿಕೊಳ್ಳಲು ಅವರು ಹೊಂಚುತ್ತಾ ಇದ್ದರು. ಅವರು ಒಬ್ಬರನ್ನು ನಾನು ಮರೆಯಲಾರೆ.

ಅವರ ಒಬ್ಬ ಫಾರೆಸ್ಟ್ ಆಫೀಸರ್. ದೊಡ್ಡ ಅಧಿಕಾರಿ. ಅವರು ಬೇರೊಂದು ಊರಿನಲ್ಲಿದ್ದಾಗ ಅವರ ಮಗನನ್ನು ಮೈಸೂರಿನಲ್ಲಿ ಓದಲು ಬಿಟ್ಟಿದ್ದರು. ಈ ಹುಡುಗ ತನ್ನ ಯಾವುದೋ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ದರಿಂದ ಈ ಅಧಿಕಾರಿ ಮೈಸೂರಿಗೇ ವರ್ಗ ಮಾಡಿಸಿಕೊಂಡು ತನ್ನ ಇನ್ನೊಬ್ಬ ಮಗನನ್ನು ಓದಲು ಮೈಸೂರಿನ ಕಾಲೇಜೊಂದರಲ್ಲಿ ಸೇರಿಸಿದ್ದರು. ಈ ಅಧಿಕಾರಿಗೆ ಬಡ್ತಿಯ ಮೇಲೆ ಆಂಧ್ರಕ್ಕೆ ವರ್ಗವಾಗಿತ್ತು. ಮನೆಯವರನ್ನು ಮೈಸೂರಿನಲ್ಲಿ ಬಿಟ್ಟು ತಾನೊಬ್ಬನೇ ಹೋಗುವುದು ಅವರಿಗೆ ಭಯದ ವಿಷಯವಾಗಿತ್ತು. ಅವರು ಒಂದು ದಿನ ನನ್ನ ಹತ್ತಿರ ಬಂದು ನನ್ನ ಮನಸ್ಸು ಕರಗುವಂತೆ ಅಳಲನ್ನು ತೋಡಿಕೊಂಡು ತನ್ನ ವರ್ಗಾವಣೆಯನ್ನು ರದ್ದು ಮಾಡಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳಬೇಕೆಂದು ಕೇಳಿದರು. ನಾನು ಹೇಳಿದೆ. ಹೆಗಡೆಯವರು ‘ಹೀಗೆ ಮಾಡಲೇಬೇಕಾದ ವರ್ಗಾವಣೆಯನ್ನು ಮಾಡಿದಾಗಲೆಲ್ಲಾ ಏನೋ ನೆವ ಹೂಡಿಕೊಂಡು ಅವರು ಬರುತ್ತಾರೆ ಎಂದು ಸಿಟ್ಟಾದರು. ಅವರ ಒಬ್ಬ ಮಗನ ಆತ್ಮಹತ್ಯೆ ಪ್ರಕರಣವನ್ನು ಅವರ ಮನಸ್ಸೂ ಕರಗುವಂತೆ ಹೇಳಿದೆ. ಹೆಗಡೆಯವರು ‘ಆಗಲಿ’ ಎಂದು ತಮ್ಮ ಸಜ್ಜನಿಕೆಯಲ್ಲಿ ಹೇಳಿದರು. ನಾನಿದನ್ನು ಸಂಬಂಧಪಟ್ಟ ಅಧಿಕಾರಿಗೆ ನನ್ನ ಕೆಲಸ ಮುಗಿಯಿತು ಎಂದೆ.

ಒಂದು ದಿನ ರಾತ್ರಿ ಸುಮಾರು ಎಂಟು ಗಂಟೆಯಹೊತ್ತಿಗೆ ಈ ಅಧಿಕಾರಿ ನಮ್ಮ ಮನೆಗೆ ಬಂದರು. ‘ಮುಖ್ಯಮಂತ್ರಿಗಳು ತಮಗೆ ಹೇಳಿರಬಹುದು ಸಾರ್. ಆದರೆ ಒಂದು ತೊಡಕಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಯಾದ ರಾಮಪ್ಪನವರಿಗೂ ಒಂದು ಮಾತು ತಿಳಿಸಬೇಕು. ನಾನೊಂದು ಕಾರು ತಂದಿದ್ದೇನೆ. ಅದರಲ್ಲಿ ನನ್ನ ಜತೆ ದಯವಿಟ್ಟು ಬನ್ನಿ. ಅವರಿಗೊಂದು ಮಾತು ಹೇಳಿ ರಾತ್ರಿ ಬೆಂಗಳೂರಿನಲ್ಲೇ ಉಳಿದುಕೊಳ್ಳಿ ಬೆಳಗಿನ ಜಾವ ಹಿಂದಕ್ಕೆ ಕರೆದುಕೊಂಡು ಬರುತ್ತೇನೆ. ಇದೊಂದು ಉಪಕಾರವನ್ನು ನೀವು ಮಾಡಲೇಬೇಕು’ ಎಂದರು.

ನಾನು ತೀರಾ ಕೆಟ್ಟಿರಲಿಲ್ಲ. ನನ್ನ ದಾಕ್ಷಿಣ್ಯದ ಸ್ವಭಾವದಿಂದ ಹೊರಬಲ್ಲವನಾಗಿ ಉಳಿದಿದ್ದೆ. ಈಗಲೂ ನನಗದು ಸಾಧ್ಯ. ಕಡುಕೋಪದಲ್ಲಿ ನಡುಗುತ್ತ ಹೇಳಿದೆ. ‘ಹೆಗಡೆಯವರು ನನ್ನ ಸ್ನೇಹಿತರು. ಅವರಿಗೆ ಹೇಳಿದ್ದಲ್ಲದೆ ಅವರ ಕಾರ್ಯದರ್ಶಿಗೂ ಹೇಳಬೇಕೆಂದು ನೀವು ಕೇಳುತ್ತಿದ್ದೀರಿ. ನಿಮಗೆ ಇಂಥ ಧೈರ್ಯ ಬರಲು ಏನು ಕಾರಣವಿರಬಹುದೆಂದು ನಾನು ಊಹಿಸಬಲ್ಲೆ. ನಾನು ಮಾಡಿಸಿಕೊಟ್ಟ ಕೆಲಸಕ್ಕಾಗಿ ನೀವು ಹೇಗೂ ನನಗೊಂದಿಷ್ಟು ಹಣವನ್ನು ಕೊಡಬೇಕೆಂದು ತಿಳಿದಂತಿದೆ. ಆದ್ದರಿಂದ ಮಾಡಬೇಕಾದ್ದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳೋಣ ಎಂದು ನೀವು ನಾಚಿಕೆಯಿಲ್ಲದೆ ನನ್ನನ್ನು ಮಧ್ಯವರ್ತಿಯಾಗಿ ಬಳಸುತ್ತಿದ್ದೀರಿ. ಕೂಡಲೇ ನನ್ನ ಮನೆಯಿಂದ ಹೊರಗೆ ಹೋಗಿ’. ಎಂದು ಎದ್ದೆ. ಈ ದೊಡ್ಡ ಅಧಿಕಾರಿ ಏನು ಹೇಳಲೂ ತೋಚದೆ ಹೊರ ಹೋದರು. ಸ್ವಲ್ಪ ದಿನಗಳ ಬಳಿಕ ನನ್ನ ಮನೆಯ ಗೇಟಿನ ಎದುರು ನಿಂತು ಕಾದರು. ‘ಥ್ಯಾಂಕ್ಸ್ ಹೇಳಲು ಬಂದೆ ಸಾರ್, ನನ್ನ ವರ್ಗಾವಣೆ ಕ್ಯಾನ್ಸಲ್ ಆಯಿತು’ ಎಂದರು. ನಾನು ಅವರನ್ನು ಒಳಕ್ಕೇ ಕರೆಯಲಿಲ್ಲ. ‘ಸರಿ ಒಳ್ಳೆಯದಾಗಲಿ’ ಎಂದಷ್ಟೇ ಹೇಳಿ ಅವರನ್ನು ಕಳುಹಿಸಿಕೊಟ್ಟೆ.

ಈ ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲುದಾರನಾಗಬೇಕೆಂದು ನಂಬಿದವನು ನಾನು. ಆದರೆ ಹೀಗೆ ಸಕ್ರಿಯವಾದಾಗ ನಮ್ಮ ಒಳಜೀವನದ ಪರಿಶುದ್ಧತೆಯನ್ನೇ ನಾವು ಕಳೆದುಕೊಳ್ಳಬಹುದು. ಆದರೆ ನನ್ನ ಪುಣ್ಯಕ್ಕೆ ಹೆಗಡೆಯವರು ನನಗೆ ಆಪ್ತರಾಗಿದ್ದರು. ಅವರಿಗೆ ವಿರೋಧವಾಗಿ ಏನನ್ನಾದರೂ ಅವರ ಹತ್ತಿರ ಹೇಳುವುದು ನನಗೆ ಶಕ್ಯವಿತ್ತು. ಪಟೇಲರೂ ಬಹಳ ಕಾಲದ ಆಪ್ತರು. ಏಕವಚನದ ಸ್ನೇಹಿತರು. ಅವರ ಹತ್ತಿರವಂತೂ ನಾನು ಏನನ್ನೂ ಬಚ್ಚಿಡುವುದು ಅವಶ್ಯವಿರಲಿಲ್ಲ.

ಆದರೂ ಕೆಲವು ಸಾರಿ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ, ಪಟೇಲರಷ್ಟು ಅವರು ನನ್ನನ್ನು ಬಲ್ಲವರಲ್ಲವಾದ್ದರಿಂದ ನನ್ನಲ್ಲೊಂದು ಗುಮಾನಿ ಆಗೀಗ ಕಾಡುವುದಿತ್ತು. ಯಾರದಾದರೂ ಕೆಲಸವನ್ನು ಅವರ ಹತ್ತಿರ ಹೇಳಿ ನಾನು ಮಾಡಿಸುವಾಗ ಏನಾದರೂ ನನಗಿದರಿಂದ ಲಾಭವಿದೆ ಎಂಬ ಅನುಮಾನ ಅವರಿಗೂ ಬರುವುದು ಸಾಧ್ಯವೇ ಎಂದು. ನನ್ನ ಪುಣ್ಯ ಹೀಗಾಗಲಿಲ್ಲ.

ನಾನು ಬಲ್ಲ ರಾಜಕಾರಣಿಗಳಲ್ಲಿ ಶಾಂತವೇರಿ ಗೋಪಾಲಗೌಡರು ಮಾತ್ರ ಚುನಾವಣೆಗಾಗಿಯೂ ಹಣ ಸಂಗ್ರಹ ಮಾಡಿದವರಲ್ಲ. ನಾನು ಇಂಗ್ಲೆಂಡಿನಿಂದ ಬಂದ ನಂತರ ನನಗೊಂದು ಸ್ಕೂಟರ್ ಬೇಕಿತ್ತು. ಆ ದಿನಗಳಲ್ಲಿ ಸ್ಕೂಟರ್ ಸಿಗಲು ಬಹಳ ದಿನ ಕಾಯಬೇಕಿತ್ತು. ಅಥವಾ ಎಂಎಲ್‌ಎ ಒಬ್ಬರಿಂದ ಬುಕ್ ಮಾಡಿಸಿಕೊಳ್ಳಬೇಕಿತ್ತು. ನಾನು ಗೋಪಾಲಗೌಡರನ್ನು ಕೇಳಿದೆ; ‘ನನಗೊಂದು ಸ್ಕೂಟರ್ ಬೇಕಲ್ಲ, ಕೊಡಿಸುತ್ತೀರ?’ ಎಂದು. ಇದರಿಂದ ವಿಚಲಿತರಾದ ಗೋಪಾಲಗೌಡರು ‘ನನ್ನ ಹತ್ತಿರ ಸುಮಾರು ನಾಲ್ಕು ಸಾವಿರ ರೂಪಾಯಿ ಮಾತ್ರ ಇದೆ. ನಾನು ಮದುವೆಯಾಗಿಬಿಟ್ಟಿದ್ದೇನೆ. ಮನೆಯ ಖರ್ಚಿಗೆ ಬೇಕಾಗುತ್ತದೆ. ಹೇಗೆ ನಿನಗೆ ಸ್ಕೂಟರ್ ಕೊಡಿಸಲಿ?’ ಎಂದರು. ನನಗೆ ನಗು ಬಂತು. ‘ನೀವು ಕೊಂಡು ಕೊಡಿ ಎಂದು ನಾನು ಕೇಳಿದ್ದಲ್ಲ. ನಿಮ್ಮ ಅಧಿಕಾರ ಉಪಯೋಗಿಸಿ ನನಗೊಂದು ಸ್ಕೂಟರ್ ಸ್ಯಾಂಕ್ಷನ್ ಮಾಡಿಸಿಕೊಡಿ ಎಂದು ಕೇಳಿದ್ದು’ ಎಂದೆ. ಅದಕ್ಕವರು ‘ಮಾರಾಯಾ, ಈ ಕೋಣಂದೂರು ಲಿಂಗಪ್ಪನಿಗೆ ಒಂದು ಸ್ಕೂಟರ್ ಸ್ಯಾಂಕ್ಷನ್ ಮಾಡಿಸಲು ಈಗಾಗಲೇ ಅರ್ಜಿ ಹಾಕಿ ಆಗಿದೆ. ಅವನ ಹತ್ತಿರ ಒಂದು ಸ್ಕೂಟರ್ ಇದ್ದರೆ ನನ್ನನ್ನೂ ಪೀಲಿಯನ್ ಮೇಲೆ ಕೂರಿಸಿಕೊಂಡು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತಾನೆ. ನೀನಿರುವುದು ಮೈಸೂರಿನಲ್ಲಿ. ಆದ್ದರಿಂದ ನನಗೆ ಸಿಗುವ ಒಂದು ಸ್ಕೂಟರನ್ನು ಕೋಣಂದೂರು ಲಿಂಗಪ್ಪನಿಗೇ ಕೊಡಿಸಬೇಕಾಗಿದೆ’ ಎಂದರು.

ನಾನು ಬಹಳ ಸಂತೋಷದಿಂದ ಇದನ್ನು ಒಪ್ಪಿಕೊಂಡೆ. ಒಂದು ಸೆಕೆಂಡ್‌ಹ್ಯಾಂಡ್ ಲ್ಯಾಂಬ್ರೆಟ್ಟಾ ಕೊಂಡು ಅದರ ಯಂತ್ರದ ಗುಟ್ಟುಗಳನ್ನೆಲ್ಲಾ ಗ್ಯಾರೇಜಿನಲ್ಲಿ ಕುಳಿತು ಕಲಿಯುವುದರಲ್ಲೇ ನನ್ನ ಹೆಚ್ಚು ಸಮಯವನ್ನು-ಸುಮಾರು ಎರಡು ವರ್ಷಗಳ ಕಾಲ-ಅರವತ್ತರ ದಶಕದಲ್ಲಿ ಕಳೆದೆ. ಆಗ ನಮಗೆಲ್ಲರಿಗೂ ಸಾಧ್ಯವಾಗಿದ್ದ ತಾತ್ವಿಕ ರಾಜಕೀಯದ ನೆನಪು ನನ್ನನ್ನು ಮಾತ್ರವಲ್ಲ ಪಟೇಲರನ್ನೂ ಈ ದುಷ್ಟದಿನಗಳಲ್ಲಿ ಕಾಪಾಡಿತ್ತು. ಚುನಾವಣೆಗಾಗಿ ಹಣ ಸಂಗ್ರಹ ಮಾಡಬೇಕಾದ ಕಾಯಕ ಅವರಿಗೆ ಹೇಸಿಗೆ ಅನ್ನಿಸಿತ್ತು. ಆದರೂ ಅದನ್ನು ಅವರು ಮಾಡಿದರು.

ಅದೂ ಕೂಡಾ ಈಗಿನಷ್ಟು ದುಷ್ಟಕಾಲವಲ್ಲ. ರಾಜಕಾರಣಕ್ಕಾಗಿ ಅವರು ಆ ದಿನಗಳಲ್ಲಿ ಹಣ ಸಂಗ್ರಹಿಸುತ್ತಿದ್ದರು. ಈಗ ಹಣ ಸಂಗ್ರಹಕ್ಕಾಗಿ ರಾಜಕಾರಣ ಮಾಡುತ್ತಾರೆ.

*

(‘ಕೆಂಡಸಂಪಿಗೆ ( ಪತ್ರಿಕೆ ೨೦೦೫)ಯಲ್ಲಿ ಪ್ರಕಟವಾದ ಲೇಖನ. ಸಹಕಾರ : ಇಸ್ಮಾಯಿಲ್)