‘ಹಿಂಸೆಯ ‘ಎಡ-ಬಲ’ ಎಂಬ ವಿಷಯವನ್ನು ತನ್ನ ಮುಖ್ಯ ವಸ್ತುವನ್ನಾಗಿ ಹೊಂದಿರುವ ಈ ಶಿಬಿರದಲ್ಲಿ ಇದುವರೆಗೆ ಹಿಂಸೆಯ ವಿವಿಧ ರೂಪಗಳು, ಲಕ್ಷಣಗಳು ಹಾಗೂ ಗುಣಗಳ ಬಗ್ಗೆ ಹಲವಾರು ಧೀಮಂತ ಚಿಂತಕರು ತಮ್ಮ ತಮ್ಮ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನನಗೆ ನೆನಪಾದ ಕಥೆಯೊಂದನ್ನು ನಿಮ್ಮಲ್ಲಿ ಹೇಳಿಕೊಳ್ಳುವುದರ ಮೂಲಕ ನಾನು ನನ್ನ ಮಾತುಗಳನ್ನು ಪ್ರಾರಂಭಿಸುತ್ತೇನೆ.

ಈ ಕಥೆ ಹಿಂದಿನ ಸೋವಿಯತ್ ಗಣರಾಜ್ಯ ಒಡೆದುಹೋದ ಮೇಲೆ ಅಸ್ತಿತ್ವಕ್ಕೆ ಬಂದ ಪುಟ್ಟ ಪುಟ್ಟ ರಾಜ್ಯಗಳಲ್ಲಿನ ಒಂದು ರಾಜ್ಯದ ಲೇಖಕನೊಬ್ಬ ಬರೆದ ಕಥೆ. ಅದರಲ್ಲಿ ಯಾರೋ ಇಬ್ಬರು ಯಾವುದೋ ಕಾರಣಕ್ಕೆ ಜಗಳವಾಡತೊಡಗುತ್ತಾರೆ. ಜಗಳ ಉಲ್ಬಣವಾಗುತ್ತ ನಡೆದು, ಅದರ ಭರದಲ್ಲಿ ಒಬ್ಬ ಇನ್ನೊಬ್ಬನ ಹೆಸರು ಕೇಳುತ್ತಾನೆ; ಆ ಇನ್ನೊಬ್ಬ ತನ್ನ ಹೆಸರು ಹೇಳಿಕೊಳ್ಳುತ್ತಾನೆ. ಅವನ ಹೆಸರು ತಿಳಿದದ್ದೆ ಆ ಮೊದಲನೆಯವನು ಈ ಎರಡನೆಯವನಿಗೆ ಚೂರಿ ಹಾಕಿ ಕೊಲ್ಲುತ್ತಾನೆ. ಅದನ್ನು ನೋಡಿದ ಮೂರನೆಯ ವ್ಯಕ್ತಿಯೊಬ್ಬ ‘ಇದೇನು, ಅವನ ಹೆಸರು ಕೇಳಿದ್ದೆ ಚೂರಿಯಿಂದಿರಿದು ಆತನನ್ನು ಕೊಂದೆಯಲ್ಲ, ನಿನಗೆ ಅವನ ಮೇಲೆ ಅದೇನು ಸಿಟ್ಟಿತು?’ ಎಂದು ಚೂರಿ ಹಾಕಿದವನನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಆ ಇರಿದವನು ‘ಅವನು ನಮ್ಮ ಯೇಸುಕ್ರಿಸ್ತನನ್ನು ಕೊಂದವನು, ಅಂದರೆ ಯೇಸುವನ್ನು ಕೊಂದ ಯಹೂದ್ಯರ ಮತದವನು; ಹಾಗಾಗಿಯೇ ನಾನು ಅವನನ್ನು ಪ್ರತೀಕಾರಕ್ಕೆಂದು ಕೊಂದೆ’ ಎಂದು ಉತ್ತರಿಸುತ್ತಾನೆ. ಅದಕ್ಕೆ ಆ ಮೂರನೆಯವನು ‘ಅಲ್ಲ, ಯೇಸುವಿನ ಹತ್ಯೆಯಾದದ್ದು ಎರಡು ಸಾವಿರ ವರ್ಷಗಳ ಹಿಂದೆಯಲ್ಲವಾ? ಆ ಕೃತ್ಯಕ್ಕಾಗಿ ಈಗ ಇವನನ್ನು ಕೊಂದೆಯಲ್ಲ ಇದ್ಯಾವ ಬಗೆಯ ತರ್ಕ? ಯಾವ ಬಗೆಯ ನ್ಯಾಯ?’ ಎಂದು ಕೇಳಿದಾಗ ಮೊದಲನೆಯವನು ಹೇಳುತ್ತಾನೆ; ‘ಯೇಸುವಿನ ದುರ್ಮರಣಕ್ಕೆ ಯಹೂದಿಗಳು ಕಾರಣರಾದದ್ದು ಅತಿಪುರಾತನ ಘಟನೆಯ ಇರಬಹುದು, ಆದರೆ ಆ ದುರ್ಘಟನೆಗೆ ಇವರು ಕಾರಣರೆಂಬ ವಿಷಯ ನನಗೆ ಗೊತ್ತಾದದ್ದು ನಿನ್ನೆಯಷ್ಟೇ’.

ಬಲಪಂಥೀಯರು ನಡೆಸುವ ಕೋಮುವಾದಿ ಹಿಂಸೆ ಬಹಳಷ್ಟು ಬಾರಿ ಹೀಗೆಯೇ ಇರುತ್ತದೆ; ಇತಿಹಾಸದಲ್ಲಿ ನಮ್ಮವರ ವಿರುದ್ಧ ಅನ್ಯರು ನಡೆಸಿದ ಅನಾಚಾರದ ವಿಷಯ ನಮಗೆ ಗೊತ್ತಾದದ್ದು ನಿನ್ನೆಮೊನ್ನೆಯಷ್ಟೆ. ಹಾಗಿರುವಾಗ ಇತಿಹಾಸದ ಕಳಂಕಗಳನ್ನು ತೊಳೆಯಲು ನಾವು ವರ್ತಮಾನದಲ್ಲಿ ಕ್ರಮ ಕೈಗೊಂಡಲ್ಲಿ ತಪ್ಪೇನಿದೆ? ಎಂದು ಅದು ಬಲವಾಗಿ ವಾದಿಸುತ್ತಿರುತ್ತದೆ; ಈ ಬಗೆಯ ವಿಲಕ್ಷಣ ತರ್ಕವನ್ನು ಪದೇಪದೆ ಬಳಸುತ್ತಿರುತ್ತದೆ.

ಹಿಂಸೆಯ ಬಲಪಂಥ ಹೀಗೆ ಇತಿಹಾಸದ ಭೂತವನ್ನು ಕೆರಳಿಸಿ ಭೂ ಬಿಡುವಂಥದಾದರೆ ಅದರ ಎಡಪಂಥ ಭವಿಷ್ಯದ ಭೂತವನ್ನು ಆವಾಹಿಸಿ ಅದಕ್ಕೆ ಅತ್ಯುಗ್ರನಿಷ್ಠೆಯಿಂದ ನಡೆದುಕೊಳ್ಳುವಂತಹುದು; ಅದರ ಮುನ್ನಡೆಗೆ ಅಡ್ಡಿಯಾಗುವವರನ್ನೆಲ್ಲ ನಿರ್ದಯವಾಗಿ ಬಲಿ ಕೊಡಲೆಳಸುವಂತಹುದು. ರಶಿಯಾ ದೇಶವನ್ನು ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಸ್ಟಾಲಿನ್, ಚೀನಾವನ್ನು ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಮಾವೋತ್ಸೆ ತುಂಗ್ ನಡೆಸಿದ ಹೇಯ ನರಮೇಗಳು ಈ ಪ್ರಕ್ರಿಯೆಯ ದಾರುಣವಾದ ನಿದರ್ಶನಳು. ಇದರ ಪುಟ್ಟದೊಂದು ಉದಾಹರಣೆಯನ್ನು ನಾನು ೧೯೯೩ರಲ್ಲಿ ಕಮ್ಯುನಿಸ್ಟ್ ಚೀನಾ ದೇಶದ ರಾಜಧಾನಿ ಬೀಜಿಂಗ್‌ನ ಟೀನಾನ್‌ಮೆನ್ ಚೌಕದಲ್ಲಿ ನಡೆದ ಘಟನೆಯೊಂದರಲ್ಲಿ. ಕಣ್ಣಾರೆ ಕಂಡೆ. ಆಗ ನಾನು ಭಾರತೀಯ ಬರಹಗಾರರ ತಂಡವೊಂದರ ಸದಸ್ಯನಾಗಿ ಚೀನಾಕ್ಕೆ ಭೇಟಿ ನೀಡಿದ್ದೆ. ಬೀಜಿಂಗ್ ನಗರದ ಆ ಹೃದಯಭಾಗದ ಬದಿಯಲ್ಲೆ ಇದ್ದ ಅತಿಥಿ ಗೃಹವೊಂದರಲ್ಲಿ ತಂಗಿದ್ದೆ. ಅಲ್ಲಿನ ವಿದ್ಯಾರ್ಥಿಗಳು ಕೆಲವರು ಹಲವು ದಿನಗಳಿಂದ ನಡೆಸುತ್ತಿದ್ದ ಶಾಂತಿಯುತ ಚಳವಳಿಯ ವಿರುದ್ಧ ಕಮ್ಯುನಿಸ್ಟ್ ಪ್ರಭುತ್ವ ಕ್ರಮೇಣ ಕಠಿಣಗೊಳ್ಳತೊಡಗಿತ್ತು. ಅದನ್ನು ಹತ್ತಿಕ್ಕಲೆಂದು ಸೈನಿಕರನ್ನೂ ಟ್ಯಾಂಕುಗಳನ್ನೂ ತಂದು ನಿಲ್ಲಿಸಿಕೊಂಡಿತ್ತು. ಇದ್ಯಾವುದರಿಂದಲೂ ಅಧೀರರಾಗದ ವಿದ್ಯಾರ್ಥಿಗಳು ದೈತ್ಯ ಕೋವಿಗಳೆದುರು ಪುಟ್ಟ ಹೂವುಗಳನ್ನು ಹಿಡಿದು ಸೇನಾವ್ಯವಸ್ಥೆಯ ಮನಪರಿವರ್ತನೆಯ ಪ್ರಯತ್ನದಲ್ಲಿ ತೊಡಗಿದ್ದರು. ಕೆಲವರು ಹೆಂಗಸರು ಈ ಹುಡುಗರನ್ನು ಘಾತಿಸಬೇಡಿರೆಂದು ಸೈನಿಕರಲ್ಲಿ ಬೇಡಿಕೊಳ್ಳುತ್ತಿದ್ದರು. ಇದಿಷ್ಟು ನಾವು ಮಧ್ಯಾಹ್ನ ಕಂಡ ದೃಶ್ಯವಾಗಿತ್ತು. ಆದರೆ, ರಾತ್ರಿ ಕವಿಯುತ್ತಿದ್ದಂತೆಯೇ, ಸೈನಿಕರು ಆ ವಿದ್ಯಾರ್ಥಿಗಳನ್ನು ಕೊಂದರು ಎಂಬ ಸುದ್ದಿ ಗಾಳಿಯಲ್ಲಿ ಸುಳಿಯಲಾರಂಭಿಸಿತು. ಆಘಾತಗೊಂಡ ನಾವು ಕೆಲವರು ಸುದ್ದಿಯ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಆ ಚೌಕದತ್ತ ಹೋಗಲು ಯತ್ನಿಸುತ್ತಿದ್ದಂತೆಯೇ ನಮ್ಮನ್ನು ಮಾರ್ಗದರ್ಶಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ತಡೆದರು, ಅಂಥದ್ದೇನೂ ಘಟಿಸಿಯೆ ಇಲ್ಲವೆಂಬಂತೆ ನಟಿಸತೊಡಗಿದರು. ಕಾತರವನ್ನು ತಾಳಲಾಗದೆ ನಾವು ಕೊನೆಗೆ ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿಯಾದರೂ ನಿಜವಾಗಿ ನಡೆದದ್ದು ಏನೆಂಬುದನ್ನು ತಿಳಿದುಕೊಳ್ಳೋಣವೆಂದು ನಮ್ಮ ಹೊಟೇಲು ರೂಮುಗಳಲ್ಲಿದ್ದ ಟೆಲಿವಿಷನ್ನನ್ನು ಆನ್ ಮಾಡಿದರೆ, ಅಲ್ಲಿ ಲಭ್ಯವಿದ್ದ ಏಕೈಕ ಚಾನೆಲ್ಲು-ಅದು ಸರ್ಕಾರಿ ಸ್ವಾಮ್ಯದ ಚಾನೆಲ್ಲು-ಯಾವುದೋ ದೂರದ ಹಳ್ಳಿಗಾಡೊಂದರ ಚೆಂದವಾದ ಜಾನಪದ ನೃತ್ಯದ ಮುದ್ರಿಕೆಯನ್ನು ತೋರಿಸುತ್ತಿತ್ತು; ಅದು ಗಂಟೆಗಟ್ಟಲೆ ಅದನ್ನೆ ತೋರಿಸಿತು-ತನ್ನ ದೇಶದ ಜನರಿಗೆ ಸಂಕಟಗಳೇ ಇಲ್ಲವೆಂಬಂತೆ, ಮೈಮರೆಸುವ ಹಾಡು ಕುಣಿತಗಳ ನಡುವೆ ಅಲ್ಲಿ ಕಂಗೆಡಿಸುವ ಘಟನೆಗಳು ಜರುಗುವುದೇ ಸುಳ್ಳೆಂಬಂತೆ.

ಇಂದು ನಮ್ಮ ದೇಶದಲ್ಲಿ, ವಿಶೇಷವಾಗಿ ನಮ್ಮ ರಾಜ್ಯ, ಪ್ರಾಂತ್ಯ ಮತ್ತು ಜಿಲ್ಲೆಗಳಲ್ಲಿ, ಹಿಂಸೆಯ ಈ ಎರಡೂ ಪಂಥಗಳು ಹೆಚ್ಚು ಹೆಚ್ಚು ಅನುಯಾಯಿಗಳನ್ನು ಆಕರ್ಷಿಸತೊಡಗಿವೆ; ಅನುಯಾಯಿಗಳಾಗುವಷ್ಟು ಬಿಡುವಿಲ್ಲದವರನ್ನು ಸಮರ್ಥಕರಾದರೂ ಆಗಿರೆಂದು ಸೆಳೆಯತೊಡಗಿವೆ. ಹಿಂಸೆಯ ಈ ಕರೆಗೆ ಓಗೊಡುತ್ತಿರುವವರಲ್ಲಿ ನಮ್ಮ ಯುವಜನರೆ ಅತ್ಯಧಿಕ ಸಂಖ್ಯೆಯವರು ಎಂಬುದು ಇನ್ನಷ್ಟು ಆಘಾತಕಾರಿಯಾದುದು. ಈ ಯುವಕರು ಬಹುಪಾಲು ಮುಗ್ಧರೂ ಆದರ್ಶಪ್ರೇಮಿಗಳೂ ಆಗಿರುತ್ತಾರೆ; ಕೆಳಜಾತಿಯವರಾಗಿದ್ದು ಸ್ವತಃ ತಾವೇ ಬೇರೆ ಬಗೆಯ ಹಿಂಸೆಗೆ ಗುರಿಯಾಗಿರುತ್ತಾರೆ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ನರಳುವವರಾಗಿರುತ್ತಾರೆ. ಮೂಲತಃ ಕೆಟ್ಟವರೇನೂ ಅಲ್ಲದ ಇಂತಹ ಅಮಾಯಕರನ್ನು ನಮ್ಮ ಕೆಲವು ರಾಜಕೀಯ ಸಂಘಟನೆಗಳು ಮತಾಂಧ ವಾದಗಳಿಂದ ತಲೆತೊಳೆದು ತಮ್ಮ ಬಾಡಿಗೆ ಬಂಟರನ್ನಾಗಿಸಿಕೊಳ್ಳುತ್ತಿವೆ. ಅವರನ್ನು ತಮ್ಮ ಸ್ವಾರ್ಥಕೇಂದ್ರಿತ, ಹಿಂಸಾತ್ಮಕ ಕಾರ್ಯಕ್ರಮಗಳ ಅಸ್ತ್ರಗಳಾಗಿ ಬಳಸುತ್ತಿವೆ. ನಮ್ಮ ಯುವಜನಾಂಗದ ಕಥೆ ಹಿಂದೆ ಈ ರೀತಿಯಿರಲಿಲ್ಲ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಮಾತ್ರವಲ್ಲ ಸ್ವಾತಂತ್ರ್ಯ ಬಂದ ಅನಂತರದ ಕೆಲವು ದಶಕಗಳವರೆಗೂ ನಮ್ಮ ಪ್ರಮುಖ ರಾಜಕೀಯ ಪಕ್ಷಗಳು ಯುವಜನರಿಗೆ  ಒಂದಿಲ್ಲದಿನ್ನೊಂದು ರೀತಿಯ ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಅವಕಾಶಗಳನ್ನು ನೀಡುವಂತಹ ವೇದಿಕೆಗಳನ್ನು ತಮ್ಮ ಒಟ್ಟೂ ಸಂರಚನೆಯ ಅವಿಭಾಜ್ಯ ಅಂಗವಾಗಿಟ್ಟುಕೊಂಡಿದ್ದವು. ಕಾಂಗ್ರೆಸ್ ನಡೆಸುತ್ತಿದ್ದ ಸೇವಾದಳ ಇದಕ್ಕೊಂದು ಉಜ್ವಲ ಉದಾಹರಣೆಯಾಗಿತ್ತು; ಅದೇ ಮಾದರಿಯ ಯುವಪಡೆಗಳನ್ನು ಎಡ-ಬಲ ಪಂಥಗಳ ಪಕ್ಷಗಳೂ ಕಟ್ಟಿಕೊಂಡಿದ್ದವು. ಇಂದು ಈ ಬಗೆಯ ಯುವ ಸಂಘಟನೆಗಳು ಇಲ್ಲವೆಂದೇನಲ್ಲ. ಆದರೆ, ಅವುಗಳೆಲ್ಲ ತಮ್ಮ ಪೂರ್ವ ಮಾದರಿಗಳ ಪೇಲವ ಪ್ರತಿಕೃತಿಗಳಾಗಿಯೋ ಇಲ್ಲ ಅಣಕುರೂಪಗಳಾಗಿಯೋ ಕಾಣಲಾರಂಭಿಸಿ ಈಗ ವರ್ಷಗಳೇ ಕಳೆದಿವೆ. ಹಿಂದಿನ ಯುವ ಕಾರ್ಯಕರ್ತರಲ್ಲಿ ಅಪರೂಪದ್ದೊಂದು ಸೇವಾ ಮನೋಭಾವವಿರುತ್ತಿತ್ತು, ಅಧಿಕಾರದ ಅತಿದಾಹ ಇರುತ್ತಿರಲಿಲ್ಲ. ಅವರು ಮೊದಲು ತಮ್ಮ ಎಳೆಯ ವಯಸ್ಸಿನಲ್ಲಿ ತಮ್ಮ ತಮ್ಮ ಪಕ್ಷಗಳ ವಿಭಿನ್ನಸ್ತರಗಳಲ್ಲಿ ಶ್ರದ್ಧೆಯಿಂದ ದುಡಿಯುತ್ತಿದ್ದರು, ಎಲ್ಲ ಬಗೆಯ ಕೆಲಸಗಳನ್ನೂ ಸಮಾನ ಗೌರವದಿಂದ ಕಾಣುವುದನ್ನು ಕಲಿಯುತ್ತಿದ್ದರು; ಈ ಎಲ್ಲ ಘಟ್ಟಗಳು ಸಾಗಿಬಂದ ಮೇಲಷ್ಟೆ. ತಮ್ಮ ಬೆಳೆದ ವಯಸ್ಸಿನಲ್ಲಿ ಅಧಿಕಾರದ ಸ್ಥಾನಗಳನ್ನು ಗಳಿಸಿಕೊಳ್ಳುತ್ತಿದ್ದರು. ಇಂದಿನ ಯುವನಾಯಕರು, ಮೇಲಿನ ಮಾದರಿಗೆ ತದ್ವಿರುದ್ಧವಾಗಿ ನಾನು ಕೆಲವು ನಾಯಕರಿಂದಲೇ ಕೇಳಿ ತಿಳಿದಂತೆ-ಪಕ್ಷಕ್ಕೆ ಸೇರಿದ ಕೆಲವು ತಿಂಗಳುಗಳಲ್ಲಿಯೇ ಅಧಿಕಾರಿಕ್ಕಾಗಿ ಹಪಹಪಿಸ ತೊಡಗುತ್ತಾರೆ, ಅದನ್ನು ಪಡೆಯಲು ವಕ್ರ ವರಸೆಗಳನ್ನು ಪ್ರಯೋಗಿಸಲಾರಂಭಿಸುತ್ತಾರೆ.

ಇಂಥವರ ವಿವೇಚನಾಹೀನವಾದ ತಂತ್ರಗಳಲ್ಲಿ ತಮ್ಮನ್ನು ವಿಮರ್ಶೆಗೆ ಒಳಪಡಿಸುವವರನ್ನು ಬೀದಿಗದ್ದಲದ ಮೂಲಕ ಹತ್ತಿಕ್ಕಲೆತ್ನಿಸುವುದೂ ಪ್ರಮುಖವಾದ್ದೊಂದು ತಂತ್ರ. ಎಡ ಹಿಂಸೆ ಬಲಹಿಂಸೆಗಳೆರಡನ್ನೂ ಸರಿಸಮಾನವಾಗಿ ವಿರೋಧಿಸುತ್ತಾ ಬಂದಿರುವ ನಾನು ಹಲವಾರು ಬಾರಿ ಈ ಬಗೆಯ ಪ್ರತಿಭಟನೆಗಳಿಗೆ ಸ್ವತಃ ಗುರಿಯಾಗಿದ್ದೇನೆ. ಚೀನಾ ರಾಜಧಾನಿ ಬೀಜಿಂಗ್ ನಗರದ ಟೀನಾನ್‌ಮೆನ್ ಚೌಕದಲ್ಲಿ ನಡೆದ ದಮನಕ ಘಟನೆಯೊಂದರ ಕುರಿತು ಈ ಮೊದಲು ಹೇಳಿದೆನಲ್ಲ, ಆ ಹೊತ್ತು ನಾನು ಕಮ್ಯುನಿಸ್ಟ್ ಪ್ರಭುತ್ವವಿದ್ದ ಕೇರಳ ರಾಜ್ಯದ ಕೊಟ್ಟಾಯಮ್ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದೆ. ಎಡಪಂಥೀಯ ಚೀನಾದಲ್ಲಿ ನನ್ನ ಕಣ್ಣೆದುರಿಗೇ ಜರುಗಿದ ಕ್ರೂರಕೃತ್ಯವೊಂದರ ಕುರಿತು ನಾನು ಭಾರತೀಯ ಪತ್ರಿಕೆಗಳಲ್ಲಿ ಬರೆದ ಟೀಕೆಯ ಮಾತುಗಳು ಕೇರಳದ ಕಮ್ಯುನಿಸ್ಟ್ ಪಾರ್ಟಿಯೊಂದರ ಯುವಾಂಗವಾದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾದವರಿಗೆ ರುಚಿಸಲಿಲ್ಲ. ನಾನು ಕೊಟ್ಟಾಯಂಗೆ ಮರಳುತ್ತಿದ್ದಂತೆಯೇ ಅವರು ನನ್ನ ವಿರುದ್ಧ ಪ್ರತಿಭಟನೆಯನ್ನು ನಡೆಸಿ, ನನ್ನ ರಾಜೀನಾಮೆಗೆ ಒತ್ತಾಯಿಸಿದರು. ನೀವು ಚೀನಾ ದೇಶದ ಎಡಪಂಥೀಯ ವ್ಯವಸ್ಥೆಯ ವಿರುದ್ಧ ಬರೆದದ್ದು ಭಾರತದಲ್ಲಿ ನಮ್ಮ ಸಂಘಟನೆಯ ವರ್ಚಸ್ಸಿಗೆ ಕುಂದು ತಂದಿದೆ, ಇದು ನಾವಿಲ್ಲಿ ಚುನಾವಣೆಗಳನ್ನು ಗೆಲ್ಲುವ ಸಾಧ್ಯತೆಗೆ ಧಕ್ಕೆಯುಂಟು ಮಾಡಿದೆ, ಹಾಗಾಗಿ ನೀವೀಗ ನಿಮ್ಮ ಪದವಿಯನ್ನು ತ್ಯಜಿಸಲೇಬೇಕೆಂದು ಅವರು ಹಠ ಹಿಡಿದರು. ಅದಕ್ಕೆ ನಾನು, ‘ನಾನು ರಾಜೀನಾಮೆ ಕೊಡಬೇಕೆಂದರೆ ಕೊಡುತ್ತೇನೆ, ಆದರೆ ನೆನಪಿಟ್ಟುಕೊಳ್ಳಿ. ಚೀನಾದಲ್ಲಿ ಹತರಾದವರು ವಿದ್ಯಾರ್ಥಿಗಳು, ಇಲ್ಲಿ ನೀವೂ ವಿದ್ಯಾರ್ಥಿಗಳೇ, ನಿಜ ಹೇಳಬೇಕೆಂದರೆ, ಈ ಪ್ರಸಂಗದಲ್ಲಿ ನೀವು ಅಲ್ಲಿಯ ವಿದ್ಯಾರ್ಥಿಗಳಂತೆ ನಡೆದುಕೊಳ್ಳಬೇಕಿತ್ತು. ನಿಮಗಿಂತ ಒಂದು ತಲೆಮಾರಿನಷ್ಟು ಹಿರಿಯನಾದ ನಾನು ಅಲ್ಲಿಯ ಸರ್ಕಾರ ನಡೆದುಕೊಂಡಂತೆ ನಡೆದುಕೊಳ್ಳಬಹುದಿತ್ತು. ಹಾಗಾಗುತ್ತಿಲ್ಲವೆನ್ನುವುದು ತೀವ್ರ ವಿಷಾದ ಹುಟ್ಟಿಸುವಂತಹ ವಿಪರ್ಯಾಸವಲ್ಲದೆ ಮತ್ತಿನ್ನೇನು’ ಎಂದು ಪ್ರತಿಕ್ರಿಯಿಸಿದೆ. ಅದು ಅವರಿಗೆ ನಾಟಿತೆಂದು ತೋರಿತು; ಜತೆಗೆ ಅಲ್ಲಿ ಆಗ ಅಧಿಕಾರಾರೂಢವಾಗಿದ್ದ ಸಿಪಿಎಂ ಪಕ್ಷವೂ ತುಸು ಪ್ರಜಾಪ್ರಭುತ್ವ ಮತ್ತು ಮುಕ್ತ ರಾಜಕಾರಣಗಳ ಒಲವನ್ನು ಹೊಂದಿತ್ತು. ಹಾಗಾಗಿ ಪರಿಸ್ಥಿತಿ ವಿಕೋಪಕ್ಕೇನೂ ಹೋಗಲಿಲ್ಲ. ಆ ಸರ್ಕಾರದ ಗೃಹಮಂತ್ರಿಗಳು ನನ್ನ ಬಳಿ ‘ಅನಂತಮೂರ್ತಿ, ನಮಗೆ ನೀವು ಇಷ್ಟ ಆದರೆ ನೀವು ಬರೆದದ್ದು ಇಷ್ಟವಿಲ್ಲ’ ಎಂದರು. ಅವರಿಗೆ ನಾನು ‘ನಿಮ್ಮ ಪಕ್ಷ ತನ್ನ ನಿಲುವುಗಳನ್ನು ಎಷ್ಟೋ ಬಾರಿ ಬದಲಾಯಿಸಿಕೊಂಡಿರುವುದು ನಿಮಗೂ ಗೊತ್ತು, ನನಗೂ ಗೊತ್ತು, ಹಾಗಾಗಿ ಯಾರಿಗೆ ಗೊತ್ತು, ಮುಂದೊಂದು ದಿನ ನಿಮಗೆ ನಾನು ಇಂದು ಬರೆದದ್ದು ಇಷ್ಟವಾಗಲೂಬಹುದು’ ಎಂದೆ. ಅವರು ನಸುನಕ್ಕು ಸುಮ್ಮನಾದರು. ಸುದೈವವೆಂದರೆ, ಆ ಪಕ್ಷ ಅತ್ಯುಗ್ರ ಎಡಪಂಥೀಯ ಮನೋಧರ್ಮದ್ದಾಗಿರಲಿಲ್ಲ. ಆದ್ದರಿಂದ ನಾನಲ್ಲಿ ಅವರ ಧೋರಣೆಗಳ ಬಗ್ಗೆ ತೀವ್ರ ವಿರೊಧವನ್ನು ವ್ಯಕ್ತಪಡಿಸಿದ್ದಾಗ್ಯೂ ಅವರು ನನ್ನನ್ನು ವೈರಿಯೆಂದು ತಿಳಿಯತೊಡಗಲಿಲ್ಲ. ಪ್ರಜಾತಂತ್ರದ ಚೌಕಟ್ಟಿನೊಳಗೆಯೆ ಕಾರ್ಯನಿರ್ವಹಿಸುವ ಯಾವುದೇ ಎಡಪಕ್ಷ ಹಾಗೂ ಬಲಪಕ್ಷಗಳಿಗೆ ಈ ಗುಣವುಂಟು; ಅಲ್ಲಿ ತಮ್ಮ ಎದುರಾಗಿ ವಾದಿಸುವವರನ್ನು ತಾಳಿಕೊಳ್ಳುವ ಸಂಯಮವುಂಟು. ಈ ರೀತಿಯ ಸಹನಶೀಲತೆ ಅತಿರೇಕವಾದಿ ಎಡ ಮತ್ತು ಬಲ ಪಂಥಗಳಲ್ಲಿ ಕಂಡುಬರುವುದಿಲ್ಲ.

ಇಂಥ ಅಸಹನೆಯ ಬಲರೂಪದ ಉದಾಹರಣೆಯೊಂದನ್ನು ಕೊಟ್ಟು ಮುಂದುವರೆಯುತ್ತೇನೆ. ಇತ್ತೀಚೆಗೆ ಉಡುಪಿಯ ದೇವಾಲಯದಗಳ ಒಡೆತನದ ಕುರಿತು ನಮ್ಮಲ್ಲಿ ಕೆಲವು ಸಾರ್ವಜನಿಕ ಚರ್ಚೆಯೊಂದನ್ನು ನಡೆಸಿದೆವು. ಅದರ ಸ್ಥೂಲಾಂಶಗಳನ್ನಷ್ಟೇ ಇಲ್ಲಿ ಹೇಳುವುದಾದರೆ, ಆ ದೇವಾಲಯಗಳಿಗೆ ಸಾರ್ವಜನಿಕರಿಂದ ದೊಡ್ಡ ಪ್ರಮಾಣದ ದೇಣಿಗೆ ಹರಿದುಬರುವುದರಿಂದ ಸರ್ವಜನ ಪ್ರತಿನಿಧಿಯಾದ ಸರ್ಕಾರ ಅವುಗಳನ್ನು ತನ್ನ ಅಂಕೆಯೊಳಗೆ ತಂದುಕೊಂಡರೆ ಅದರಲ್ಲಿ ತಪ್ಪೇನಿಲ್ಲ ಎಂದು ನಾನು ನುಡಿದೆ; ಮತ್ತೆ, ಹೀಗೆ ನುಡಿದ ನಾನು ಮಾಧ್ವಪಂಥದವನು, ಆ ದೇವಾಲಯಗಳಿಗೆ ನಡೆದುಕೊಳ್ಳುವವನು, ಪೇಜಾವರ ಸ್ವಾಮಿಗಳೊಡನೆ ತೀವ್ರವಾದ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿಯೂ ಅವರನ್ನು ಪೂಜ್ಯರೆಂದೇ ಪರಿಗಣಿಸುವವನು. ಇದಕ್ಕೆ ಪ್ರತಿಯಾಗಿ ಗೆಳೆಯ ಜಿ.ರಾಜಶೇಖರರು-ಅವರು ಮೊದಲಿನಿಂದಲೂ ಎಡಪಂಥೀಯ ಒಲವಿನವರು, ಮಠಮಂದಿರಗಳ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿಕೊಂಡೆ ಬಂದವರು-ಬಹಳ ಮೌಲಿಕವಾದ ಕೆಲವು ಕಾರಣಗಳನ್ನು ಕೊಟ್ಟು ‘ಇಲ್ಲ, ಸರ್ಕಾರ ಈ ದೇವಸ್ಥಾನಗಳನ್ನು ತನ್ನ ನಿಯಂತ್ರಣದೊಳಕ್ಕೆ ತಂದುಕೊಳ್ಳಲೆತ್ನಿಸುವುದು ಸರಿಯಲ್ಲ’ ಎಂದು ವಾದಿಸಿದರು. ಅಂದರೆ, ನಾವಿಬ್ಬರೂ ಅಷ್ಟೆಲ್ಲ ಆತ್ಮೀಯರಾಗಿದ್ದೂ ಈ ಒಂದು ವಿಷಯದಲ್ಲಿ ಒಮ್ಮತವಿಲ್ಲದವರಾಗಿದ್ದೆವೆಂಬುದೂ, ಹಾಗೂ ಮಠ ಮಂದಿರಗಳನ್ನು ಮೊದಲಿನಿಂದಲೂ ಗೌರವದಿಂದ ಕಾಣುತ್ತಾ ಬಂದಿದ್ದ ನನ್ನಂಥವನು ಈಗ ಅವುಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಲುವನ್ನು ತಳೆದ ಹೊತ್ತಿನಲ್ಲೆ ದೀರ್ಘಕಾಲದಿಂದಲೂ ಅವುಗಳನ್ನು ಸಂದೇಹಿಸುತ್ತಲೇ ಬಂದಿದ್ದ ರಾಜಶೇಖರರಂಥವರು ಅವುಗಳ ಸ್ವಾತಂತ್ರ್ಯವನ್ನು ಉಳಿಸಿಕೊಂಡುವಂತಹ ಮಾತುಗಳನ್ನಾಡಿರೆಂಬುದೂ ಈ ಚರ್ಚೆಯ ಸಂಕೀರ್ಣತೆಯನ್ನೂ ಪರಿಹಾರದ ದುರ್ಲಭತೆಯನ್ನೂ ಸ್ಪಷ್ಟವಾಗಿ ಸೂಚಿಸುತ್ತಿತ್ತು. ನಾವು ತೆಗೆದುಕೊಂಡ ನಿಲುವುಗಳ ಯೋಗ್ಯತೆಯೇನೆ ಇರಲಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಂಥ ನಿಲುವುಗಳನ್ನು ತಳೆಯುವ ಹಾಗೂ ಅವುಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಹಕ್ಕು ಎಲ್ಲರಿಗೂ ಸಂವಿಧಾನದಿಂದಲೇ ದತ್ತವಾಗಿರುವಂಥದು. ಆದರೆ, ಉಡುಪಿಯ ಕೆಲವು ಯುವ ಬಲಪಂಥೀಯ ಗೆಳೆಯರು ಇದ್ಯಾವ ಸೂಕ್ಷ್ಮಗಳನ್ನೂ ಅರಿಯದ ಅಜ್ಜರಂತಾಡಿದರು. ಮೇಲೆ ಪ್ರಸ್ತಾಪಿಸಿದ ಮಾತುಗಳನ್ನು ಹೇಳಿದ ಕೆಲವೇ ದಿನಗಳಲ್ಲಿ ಪಕ್ಕದ ಊರಾದ ಬ್ರಹ್ಮಾವರದಲ್ಲಿ ನಾನು ವಿಚಾರಸಂಕಿರಣವೊಂದರಲ್ಲಿ ಭಾಗವಹಿಸಿದ್ದ ಸಂಗತಿಯನ್ನು ತಿಳಿದು ಅಲ್ಲಿಗೆ ಬಂದ ಬಜರಂಗ ದಳದ ಆ ಕಾರ್ಯಕರ್ತರು ಸಮಾರಂಭದ ಸ್ಥಳದ ಎದುರಿನ ಹೆದ್ದಾರಿಯಲ್ಲಿ ಗುಂಪುಕಟ್ಟಿ ನಿಂತು, ನನ್ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೀಗೆ ಪ್ರತಿಭಟನೆಗಳನ್ನು ನಡೆಸುವುದು, ಧಿಕ್ಕಾರ ಹಾಕುವುದು ಕೂಡ ಕಾನೂನುಸಮ್ಮತವಾದ ಕ್ರಮವೇ; ಅವರ ಆ ಹಕ್ಕನ್ನು ನಾನು ಗೌರವಿಸುವವನೇ. ಆದರೆ ಇಡೀ ಪ್ರತಿಭಟನೆಯಲ್ಲಿ ನನಗೆ ವಿಚಿತ್ರವಾಗಿ ಕಂಡಿದ್ದು ಅಲ್ಲಿ ನಾಯಕತ್ವ ವಹಿಸಿದ್ದ ಓರ್ವ ಯುವ ವಕೀಲ ನನ್ನನ್ನು ಟೀಕಿಸಲು ಬಳಸಿದ ಕಾರಣಗಳು; ನನ್ನ ಪತ್ನಿ ಕ್ರೈಸ್ತಮತದವಳೆಂದೂ(ಇದು ಸತ್ಯವೂ ಹೌದು), ಹಾಗಾಗಿ ನನಗೆ ಇನ್ನೋರ್ವ ಕ್ರೈಸ್ತಮತದವಳಾದ ಸೋನಿಯಾ ಗಾಂಧಿಯವರ ಪರಿಚಯವೂ ಆಕೆಯ ಬಗ್ಗೆ ಆರಾಧನಾಭಾವವೂ ಇವೆಯೆಂದೂ, ಆ ಕಾರಣದಿಂದಲೇ ನಾನು ಹಿಂದೂ ಧಾರ್ಮಿಕ ಸಂಸ್ಥೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದೆಂದೂ ಆರೋಪಿಸುತ್ತ ಆತ, ನನ್ನಂತಹ ಹಿಂದುತ್ವದ್ರೋಹಿಗಳಿಗೆಲ್ಲ ಮರೆಯಲಾಗದ ಪಾಠ ಕಲಿಸಿರೆಂದು ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಿದ್ದ. ಆಧುನಿಕ ಕಾಲದ ವಕೀಲನೊಬ್ಬನಿಗೆ ಇರಬೇಕಾದ ಕನಿಷ್ಠ ತರ್ಕಶಕ್ತಿಯೂ ಲೋಕಜ್ಞಾನವೂ ಆತನಿಗಿದ್ದಂತೆ ತೋರಲಿಲ್ಲ.

ವಿರೋಧಿಸಲೆಂದೇ ವಿರೋಧಿಸುವ ಇಂಥ ಕ್ರಮ ಅವೈಚಾರಿಕವಷ್ಟೇ ಅಲ್ಲ ಅಮಾನವೀಯವೂ ಆಗಬಲ್ಲುದು, ಅಪಾರವಾದ ಹಿಂಸಾಚಾರಕ್ಕೆ ಕಾರಣವಾಗಬಲ್ಲುದು. ಈ ಶಿಬಿರದಲ್ಲಿ ಶಿವ ವಿಶ್ವನಾಥನ್ ಮೊನ್ನೆಯಷ್ಟೇ ಹೇಳಿದರಲ್ಲ, ಅದನ್ನು ನೆನಪಿಸಿಕೊಳ್ಳಿ. ಅವರು ಹೇಳಿದರು; ಗುಜರಾತ್‌ನಲ್ಲಿ ಕೆಲವು ವರ್ಷಗಳ ಹಿಂದೆ ಭಯಾನಕ ಭೂಕಂಪನವಾದಾಗ ಅಲ್ಲಿ ನೆವು ನೀಡಲೆಂದು ಧಾವಿಸಿದವರಲ್ಲಿ ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳ ಯುವ ಸದಸ್ಯರೇ ಮೊದಲಿಗರಾಗಿದ್ದರು. ಇವರ ನಿಸ್ವಾರ್ಥಬುದ್ಧಿಯನ್ನು ಸ್ತುತಿಸೋಣ ಎನ್ನುವಷ್ಟರಲ್ಲಿ ಅವರ ಗುಪ್ತ ಯೋಜನೆಯ ಸ್ವರೂಪವೂ ಬಯಲಾಗಿಹೋಯಿತು. ಆ ಪ್ರಾಕೃತಿಕ ವಿಪತ್ತು ಬಂದೆರಗುವ ಎಷ್ಟೋ ಮೊದಲೇ ಗುಜರಾತಿನ ಯಾವ ಮೂಲೆಯ ಜಾಗವನ್ನೂ ಬಿಡದೆ ಅಂಗುಲಂಗುಲ ಸರ್ವೇಕ್ಷಣೆ ನಡೆಸಿ ಧರ್ಮ-ಮತ-ಪಂಥಗಳ ಆಧಾರದ ಜನಸಂಖ್ಯಾಪಟವನ್ನು ತಯಾರಿಸಿಕೊಂಡಿದ್ದ ಅವರು ಭೂಕಂಪನದ ಸಂದರ್ಭದಲ್ಲಿ ಆ ಅಂಕಿಅಂಶಗಳನ್ನು ಇಟ್ಟುಕೊಂಡು ಸಂತ್ರಸ್ತರಿಗೆ ಸಹಾಯ ನೀಡುವಲ್ಲಿ ಧರ್ಮಭೇದಗೈದರು. ಅಷ್ಟೆ ಅಲ್ಲ. ಅದಾದ ಕೆಲವೇ ದಿನಗಳಲ್ಲಿ, ಗೋಧ್ರಾನಂತರದಲ್ಲಿ ಜರುಗಿದ ಧರ್ಮಘಾತಕ ಕೃತ್ಯ ಸರಣಿಯಲ್ಲಿ ಅವರು ಅತ್ಯುನ್ಮತ್ತರಾಗಿ ತೊಡಗಿಕೊಂಡರು. ಅಂದರೆ, ಗುಜರಾತಿನ ಕೋಮುವಾದಿ ಹಿಂಸಾಕಾಂಡದ ನೀಲಿನಕಾಶೆ ಗೋಧ್ರಾ ಘಟನೆಗಿಂತಲೂ ಎಷ್ಟೋ ಮೊದಲೆ ತಯಾರಾಗಿತ್ತು. ಅಲ್ಲಿನ ಭೂಪದರ ಅದುರುವ ಎಷ್ಟೋ ಮುನ್ನವೇ, ಅಲ್ಲಿ ರೈಲೊಂದು ಬೆಂಕಿ ಹತ್ತಿ ಉರಿಯುವ ಎಷ್ಟೋ ಮುನ್ನವೇ, ತಮಗಿಂತ ವಿಭಿನ್ನರಾಗಿದ್ದವರಿಗೆ ವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ಅವರನನು ಮೂಲೋತ್ಪಾಟನಗೈಯುವ ವಿಕಟ ಯೋಜನೆಯೊಂದು ಸಿದ್ಧಗೊಂಡಿತ್ತು.

ಒಂದು ಬಗೆಯ ಹಿಂಸೆಗೆ-ಅದು ವಾಸ್ತವರೂಪದ್ದೋ ಇಲ್ಲ ಬರಿದೆ ಭಾವಿತರೂಪದ್ದೋ ಎಂಬುದನ್ನು ಕಂಡುಕೊಳ್ಳಲು ನಾವು ಇನ್ನೊಂದೆ ಸುದೀರ್ಘ ಚರ್ಚೆಯನ್ನು ನಡೆಸಬೇಕಾಗುತ್ತದೆ; ಅದಕ್ಕೆ ಇಲ್ಲಿ ಈಗ ಅವಕಾಶವಿಲ್ಲ-ಇನ್ನೊಂದು ಬಗೆಯ ಹಿಂಸೆಯಿಂದಲೇ ಪ್ರತ್ಯುತ್ತರಿಸುವುದೂ ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಅಲ್ಲವೆ ಎಂಬೊಂದು ವಾದವೂ ನಮ್ಮ ನಡುವಿರುವುದುಂಟು. ಈ ವಾದ ಸಂಪೂರ್ಣವಾಗಿ ಅಸಮರ್ಥನೀಯವಾದದು ಎಂದು ಅದನ್ನು ತಳ್ಳಿ-ಹಾಕಲಾಗುವುದಿಲ್ಲವೇನೋ ಹೌದು. ಆದರೆ ಹಿಂಸೆ-ಪ್ರತಿಹಿಂಸೆಗಳ ಈ ಚಕ್ರ ಯಾವ ಯಾವ ಬಗೆಯ ವಿಷವರ್ತುಲಗಳಲ್ಲಿ ನಮ್ಮನ್ನು ಸೆರೆಸಿಲುಕಿಬಹುದೆಂಬುದರ ಬಗ್ಗೆ ನಾವು ಎಷ್ಟು ಎಚ್ಚರವಹಿಸಿದರೂ ಸಾಲದು. ಸಹಜವಾಗಿ ತತ್‌ಕ್ಷಣಸ್ಫೂರ್ತವಾಗಿ ಹುಟ್ಟುವ ಪ್ರತಿಹಿಂಸೆಯದ್ದು ಒಂದು ಕಥೆಯಾದರೆ, ವಿಚಾರಗಳನ್ನು ಬಳಸಿಕೊಂಡು ಬಲಿಯುವ ಸೈದ್ಧಾಂತಿಕ ಹಿಂಸೆ-ಪ್ರತಿಹಿಂಸೆಗಳದ್ದು ಬೇರೊಂದೆ ಬಗೆಯ ಕಥೆ. ಅದು ಯಾವೆಲ್ಲ ಗುಪ್ತಮುಖಗಳನ್ನು ಹೊಂದಿರುತ್ತದೆ, ಯಾವೆಲ್ಲ ವಾಮಮಾರ್ಗಗಳನ್ನು ಅನುಸರಿಸುತ್ತದೆ, ತತ್ವ ಆದರ್ಶಗಳ ಕುರಿತಾಗಿ ಏನೆಲ್ಲ ಉದಾತ್ತ ಮಾತುಗಳನ್ನು ಉದುರಿಸುತ್ತಲೇ ಎಷ್ಟೆಲ್ಲ ಅಪ್ರಾಮಾಣಿಕವೂ ಜೀವವಿರೋಧಿಯೂ ಆಗಿರುತ್ತದೆ ಎಂಬುದು ನಮ್ಮ ಕಲ್ಪನೆಗೂ ಮೀರಿದ್ದಾಗಿರುತ್ತದೆ. ನಮ್ಮ ದೇಶದಲ್ಲಿ ಯಾವ್ಯಾವ ರಾಜಕೀಯ ಪಕ್ಷಗಳಿಗೆ ಯಾವ್ಯಾವ ವಿದೇಶಿ ಮೂಲಗಳಿಂದ ಧನಬೆಂಬಲ ಒದಗಿಬರುತ್ತಿತ್ತೆಂಬ ವಿಷಯದ ಬಗ್ಗೆ ಇತ್ತೀಚೆಗಷ್ಟೆ ಭುಗಿಲೆದ್ದ ವಿವಾದವನ್ನು ನೆನಪಿಸಿಕೊಳ್ಳಿ. ಒಂದೆಡೆ ನಮ್ಮ ಎಡಪಂಥದವರಿಗೆ ಕಮ್ಯುನಿಸ್ಟ್ ರಶಿಯಾದ ಬೇಹುಗಾರಿಕಾ ಸಂಸ್ಥೆಯಿಂದ ದುಡ್ಡು ಬರುತ್ತಿದ್ದರೆ ಇನ್ನೊಂದೆಡೆ ನಮ್ಮ ಬಲಪಂಥದವರಿಗೆ ಅಮೆರಿಕಾದ ಸಿ.ಐ.ಎ. ಯಿಂದ ದುಡ್ಡು ಬರುತ್ತಿತ್ತಂತೆ. ಹೀಗೆ ನಿಗೂಢವಾಗಿ ಕಾರ್ಯಾಚರಣೆ ನಡೆಸುವ ಇಂಥ ಸಂಸ್ಥೆಗಳು ಹಾಗೂ ಸರ್ಕಾರಗಳೋ, ಅವು ಪ್ರತಿಹಿಂಸೆಗೆ ಪ್ರೋತ್ಸಾಹ ನೀಡುವುದಷ್ಟೇ ಅಲ್ಲ, ಗುಪ್ತವಾಗಿ ಮೂಲ ಹಿಂಸೆಯನ್ನೇ ಹುಟ್ಟಿಹಾಕುವಂಥವು; ಎಷ್ಟೋ ಬಾರಿ ಎರಡೂ ಬಗೆಯ ಹಿಂಸೆಗಳನ್ನೂ ತಾವೇ ಗುಟ್ಟಾಗಿ ಸೃಷ್ಟಿಸಿ ಅವರೆರಡರಿಂದಲೂ ತಮ್ಮ ಲಾಭವನ್ನು ಕಮಾಯಿಸಿಕೊಳ್ಳುತ್ತಿರುವಂಥವು. ಮಾರ್ಟಿನ್ ಲೂಥರ್ ಕಿಂಗ್ ಅವರ ವಿಷಯದಲ್ಲಿ ಆದದ್ದು ಇದಕ್ಕೊಂದು ಒಳ್ಳೆಯ ಉದಾಹರಣೆ. ಅಮೆರಿಕಾದಲ್ಲಿ ೧೯೫೦-೬೦ರ ದಶಕಗಳಲ್ಲಿ ಆ ಧೀರ ಮುಖಂಡ ಕರಿಯ ಜನರ ಆತ್ಮಾಭಿಮಾನ ಹಾಗೂ ಸಮಾನತೆಯ ಹೆಸರಿನಲ್ಲಿ ಕಟ್ಟಾ ಗಾಂಧೀ ಮಾದರಿಯ ಅಹಿಂಸಾತ್ಮಕ ಹೋರಾಟವೊಂದನ್ನು ಅತಿದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದಾಗ, ಆತನೊಡನೆ ಬಿಳಿಯರೂ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ಮೊದಮೊದಲು ಆತನನ್ನು ಅತೀವ ಪ್ರೀತಿ ವಿಶ್ವಾಸಗಳಿಂದ ಅನುಸರಿಸುತ್ತಿದ್ದ ಆತನದೇ ಕರಿಯ ಜನಾಂಗದವರಲ್ಲಿ ಕೆಲದಿನಗಳ ಅನಂತರ ಕೆಲವರು ಭಿನ್ನಮಾತುಗಳನ್ನು ಅಡತೊಡಗಿದರು. ‘ನೀನು ಬರೀ ಶಾಂತಿ ಅಹಿಂಸೆಗಳೆಂದು ಜಪಿಸುತ್ತಿರುತ್ತೀಯೆ, ಇದರಿಂದ ಬಿಳಿಯರ ದಬ್ಬಾಳಿಕೆ ಹೆಚ್ಚಾಗಿದೆಯೇ ಹೊರತು ಕಡಿಮೆಯಂತೂ ಆಗಿಲ್ಲ. ಇದಕ್ಕೆ ಪ್ರತಿಯಾಗಿ ನಾವು ಒಂದಿಷ್ಟು ಹಿಂಸೆಯನ್ನು ಬಳಸೋಣವೆಂಬ ನಮ್ಮ ಮಾತಿಗೆ ಒಪ್ಪದ ನೀನು ನಿಜಕ್ಕೂ ಬಿಳಿಯರ ದಾಸನೇ ಇರಬೇಕು, ನಮ್ಮನ್ನೆಲ್ಲ ಅವರ ಕಾಲಬುಡಕ್ಕೆ ತಳ್ಳುವ ಸಂಚುಕೋರನೇ ಇರಬೇಕು’ ಎಂದು ಅವರು ಉಗ್ರವಾಗಿ ಅಡತೊಡಗಿದರು. ಪಾಪ, ಅವರಲ್ಲಿ ಕೆಲವರು ನಿಜವಾದ ನೋವು ಹಾಗೂ ಸಿಟ್ಟಿನಿಂದ ಹಾಗೆ ವಾದಿಸಿದವರಿದ್ದರು. ಆದರೆ ಇನ್ನು ಕೆಲವರು ?ಕೊನೆಗೆ ತಿಳಿದುಬಂದಂತೆ ಕುತಂತ್ರಿ ಬಿಳಿಯರು ಕೊಟ್ಟ ದುಡ್ಡಿನ ಆಮಿಷಕ್ಕೆ ಬಲಿಯಾಗಿ, ತಮ್ಮದೆ ಸಂಘಟನೆಯನ್ನು ಒಡೆಯುವ ದುರುದ್ದೇಶದಿಂದ ಹಾಗೆ ಕೂಗು ಹಾಕಿದವರಿದ್ದರು. ಆ ಪ್ರಾಮಾಣಿಕರು ಮೊದಲು ಕಿಂಗ್‌ನ ಬಗ್ಗೆ ಅಸಮಾಧಾನಗೊಂಡಿದ್ದರೂ ಕೊನೆಗಾದರೂ ಆತನ ಮಾರ್ಗದ ಹಿರಿಮೆಯನ್ನು ಅರಿಯುವ ಒಂದು ಸಾಧ್ಯತೆಯೂ ಇತ್ತು; ಆದರೆ ಮತ್ತೆ ಮತ್ತೆ ಅಪ್ರಾಮಾಣಿಕರ ಕೂಗನ್ನು ಕೇಳುತ್ತಿದ್ದಂತೆಯೇ ಅವರಿಗೆ, ಕಿಂಗ್‌ನ ಪಂಗಡವನ್ನು ತೊರೆದು ಉಗ್ರರ ಪಂಗಡವನ್ನು ಸೇರುವುದೇ ತಮಗೆ ಒಳ್ಳೆಯದೆಂದು ಪ್ರಾಮಾಣಿಕವಾಗಿಯೆ ಅನಿಸತೊಡಗಿತು. ಯಾಕೆಂದರೆ ಯಾರೋ ಬಿಳಿಯರಲ್ಲದೆ ಕರಿಯರೆ ಹೀಗೆ ಕರಿಯನಾದ ಕಿಂಗ್‌ನನ್ನು ಟೀಕೆ ಮಾಡುವಾಗ ಆಗುವ ಪರಿಣಾಮವೆ ಬೇರೆ, ಅದರ ತೀವ್ರತೆಯೆ ಬೇರೆ. ಹೀಗೆ ಆ ಬಿಳಿಯರು ಬಹು ಕುಟಿಲತೆಯಿಂದ ಇವೆರಡೂ ಪಡೆಗಳನ್ನು ತಮ್ಮ ಆಟದ ದಾಳಗಳಾಗಿ ಬಳಸಿಕೊಂಡರು.

ಷಡ್ಯಂತ್ರವೊಂದರ ಭಾಗವಾಗಿ ಸೃಷ್ಟಿಯಾದ ಈ ಹಿಂಸೆ ಕೊನೆಗೆ ಕಿಂಗ್‌ನನ್ನು ಆಳವಾಗಿ ಬಾಧಿಸಿತು. ಮೊದಲೆಂದೂ ಇರದಿದ್ದ ಈ ಬಗೆಯ ಭಯಾತಂಕಗಳನ್ನು ಆತನಿಗೆ ತಂದಿತ್ತು. ಅಂತಿಮವಾಗಿ ಆತ ಬಹುಕಾಲದಿಂದ ತನ್ನ ಸ್ನೇಹಿತನೂ ಸಹ ಹೋರಾಟಗಾರನೂ ಆಗಿದ್ದ ಬಿಳಿಯನೋರ್ವನಿಗೆ ‘ಇಲ್ಲ, ಇನ್ನು ಮುಂದೆ ನೀನು ನನ್ನೊಡನಿರಬೇಡ. ನನ್ನ ಬಣ್ಣದವರೆ ಈಗ ನಿನ್ನ ಬಗ್ಗೆ ಕೇಡುನುಡಿಯನಾಡತೊಡಗಿದ ಮೇಲೆ ನೀನು ನನ್ನೊಂದಿಗಿದ್ದಷ್ಟೂ ನಿನಗೆಯೇ ಅಪಾಯ, ಅದೆಷ್ಟೇ ದುಃಖದ ಸಂಗತಿಯಾಗಿರಲಿ, ನೀನು ನನ್ನಿಂದ ದೂರವಿದ್ದುಬಿಡು’ ಎಂದು ಬೇಡಿಕೊಳ್ಳಬೇಕಾಯಿತು. ಹಿಂಸೆ-ಪ್ರತಿಹಿಂಸೆಗಳ ದ್ವಂದ್ವದ ಸ್ವರೂಪದ ಇಷ್ಟು ದಿಗಿಲು ಹುಟ್ಟಿಸುವಂಥದ್ದು; ನಿಜದ ಗೆಳೆಯರನ್ನು ನಂಬಿಕೆಗೆ ಅಯೋಗ್ಯರೆಂದೂ ನಿಜವಾದ ವೈರಿಗಳನ್ನು ಪರಮಸಖರೆಂದೂ ತಿಳಿಯುವ ದುರಂತಕ್ಕೆ ನಮ್ಮನ್ನು ತಳ್ಳುವಂಥದ್ದು, ಇಂದು ನಮ್ಮ ನಡುವಿರುವ ಎಲ್ಲ ಹಿಂಸಾಪ್ರೇರಿತ ಕ್ರಿಯಾಮಾರ್ಗಗಳದ್ದೂ ಇದೇ ದುರಂತಕಥೆ. ಸುತ್ತಮುತ್ತಲ ಕೆಲವು ನಿದರ್ಶನಗಳನ್ನು ಗಮನಿಸಿ; ಒಂದು ಮಾದರಿಯ ಹಿಂಸೆಯನ್ನು ಇನ್ನೊಂದು ಮಾದರಿಯ ಹಿಂಸೆಯಿಂದ ಪ್ರತಿರೋಧಿಸಿ ಏನನ್ನೋ ಸಾಧಿಸುತ್ತೇವೆಂದು ಹೊರಟಾಕ್ಷಣ ನಾವು, ಬೇರೆ ಉಪಾಯಗಳೇ ಇಲ್ಲವೆಂಬಂತೆ, ಭೂಗತರಾಗಬೇಕು, ನಮ್ಮ ಗನ್ನು-ಬಾಂಬುಗಳಿಗೆಂದು ವಿದೇಶೀಮೂಲದ ಶಸ್ತ್ರಾಸ್ತ್ರ ತಯಾರಕರನ್ನು ಇಲ್ಲ ಸ್ವದೇಶೀ ಕಳ್ಳಸಾಗಾಣಿಕೆದಾರರನ್ನು ಅವಲಂಬಿಸಬೇಕು, ಮಾದಕದ್ರವ್ಯ ಮಾರಾಟಗಾರರನ್ನೋ ಖೋಟಾನೋಟು ಮುದ್ರಕರನ್ನೋ ನೆಚ್ಚಿಕೊಳ್ಳಬೇಕು. ಅರ್ಥಾತ್, ಜನೋಪಕಾರದ ಕಾರ್ಯದಲ್ಲಿ ತೊಡಗಿದವರು ನಾವೆಂದು ನಂಬಿಕೊಳ್ಳುವ ನಾವು ಜನಾಪಕಾರದ ಚಟುವಟಿಕೆಗಳಲ್ಲಿ ಮುಳುಗಿದವರ ಅಡಿಯಾಳುಗಳಾಗಬೇಕು.

ಹಿಂಸೆಯ ವಿಷಯದಲ್ಲಿ ಗುರಿ-ದಾರಿಗಳ ಸಂಬಂಧ ಅದೆಷ್ಟು ಸಮಸ್ಯಾತ್ಮಕವಾಗಿರುತ್ತದೆ ಎಂಬುದಕ್ಕೆ ನಿನ್ನೆ ಇಲ್ಲಿ ಅತುಲ್ ತಿವಾರಿ ಭಗತ್‌ಸಿಂಗ್ ಜೀವನದ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿದರು. ಆ ಕ್ರಾಂತಿಕಾರಿ ಅಂತಿಮವಾಗಿ ಬ್ರಿಟಿಷ್ ಅಧಿಕಾರಿಯೋರ್ವನನ್ನು ಬಲಿ ತೆಗೆದುಕೊಂಡದ್ದು ನಮಗೆಲ್ಲ ಸುಪರಿಚಿತವಾದ ವಿಷಯ; ಆದರೆ ಆತನದ್ದೇ ಇನ್ನೊಂದು ಕೃತ್ಯ ಇಂದಿಗೂ ತುಸು ಅಜ್ಞಾತವಾಗಿಯೇ ಉಳಿದುಕೊಂಡಿದೆಯೆಂದು ಅತುಲ್ ಹೇಳಿದರು. ಬ್ರಿಟಿಷ್ ಸರ್ಕಾರಕ್ಕೆ ಆಘಾತವುಂಟು ಮಾಡುವ ಚಟುವಟಿಕೆಗಳನ್ನು ಯೋಜಿಸುತ್ತಾ ಆತ ಹಾಗೂ ಆತನ ಮಿತ್ರರು ಒಮ್ಮೆ, ಸರ್ಕಾರಿ ಭವನವೊಂದರಲ್ಲಿ ಬಾಂಬು ಸಿಡಿಸುವ ತಂತ್ರ ರಚಿಸುತ್ತಿದ್ದರಂತೆ; ಆದರೆ, ಆ ಸ್ಫೋಟ ತಮ್ಮ ಎದುರಾಳಿಗಳನ್ನು ಮಾತ್ರವಲ್ಲದೆ ತಮ್ಮದೇ ದೇಶದವರನ್ನು ಅದರಲ್ಲೂ ನಿರ್ದೋಷಿಗಳನ್ನು ಬಲಿ ತೆಗೆದುಕೊಳ್ಳುವುದು ಖಚಿತವೆಂದು ಕಂಡು ಬರುತ್ತಿದ್ದಂತೆಯೇ, ಅವರು ಆ ಯೋಚನೆಯನ್ನು ಕೈಬಿಟ್ಟರಂತೆ. ಇಂಥದೆ ವೈಯಕ್ತಿಕ ಅನುಭವವೊಂದು, ಎಮರ್ಜೆನ್ಸಿ ಕಾಲದಲ್ಲಿ ನಡೆದ ಪ್ರಸಂಗವೊಂದು, ನನಗೆ ನೆನಪಾಗುತ್ತದೆ. ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದ ಆ ಎಮರ್ಜೆನ್ಸಿಗೆ ನಾನು ಪೂರಾ ವಿರೋಧಿಯಾಗಿದ್ದೆ; ಆದರೆ ಆ ತಾತ್ತ್ವಿಕ ವಿರೋಧವನ್ನು ಪ್ರಯೋಗರೂಪದಲ್ಲಿ ಹೇಗೆ ತೋರಬಹುದೆಂಬುದರ ಬಗ್ಗೆ ನನಗಾಗ ಏನೂ ತೋಚುತ್ತಿರಲಿಲ್ಲ. ಆ ನಡುವೆ, ಕಟ್ಟಾ ಸಮತಾವಾದಿಯೂ ಇಂದಿರಾಗಾಂಧಿಯವರ ಕಡುವಿರೋಧಿಯೂ ಆಗಿದ್ದ ಜಾರ್ಜ್ ಫರ್ನಾಂಡಿಸರಿಂದ ನನಗೆ ಪತ್ರವೊಂದು ಬಂತು. ಅದರಲ್ಲಿ, ರಹಸ್ಯವಾದೊಂದು ಸಂಕೇತ ಭಾಷೆಯಲ್ಲಿ. ‘ತಾನು ಬೆಂಗಳೂರಿನಲ್ಲಿ ಅಡಗಿಕುಳಿತಿದ್ದೆನೆಂದೂ, ನಾನು ಬಂದು ಆ ಗುಪ್ತತಾಣದಲ್ಲಿ ಅವರನ್ನು ಭೇಟಿಯಾಗಬೇಕೆಂದೂ’ ತಿಳಿಸಿದ್ದರು.  ಅಲ್ಲಿಗೆ ಹೋದರೆ, ಫರ್ನಾಂಡಿಸ್, ಕತ್ತಲೆಯ ಕೋಣೆಯೊಂದರಲ್ಲಿ, ಮೇಲಿಂದ ಮಳೆಹನಿಗಳಂತೆ ಬೀಳುತ್ತಿದ್ದ ಕಂಬಳಿಹುಳುಗಳನ್ನು ಮೈಯಿಂದ ಕೊಡವಿಹಾಕುತ್ತ ಅಡಗಿಕುಳಿತ್ತಿದ್ದರು. ಅದೇ ವೇಳೆಯಲ್ಲಿ ಅವರ ಪತ್ನಿ ಹಾಗೂ ಮಗ ಇಬ್ಬರೂ ಬೆಂಗಳೂರಿಗೆ ಬಂದಿದ್ದರಾದರೂ ಜಾರ್ಜ್ ಅವರನ್ನು ಭೇಟಿಯಾಗುವುದು ಅಸಾಧ್ಯವಾದ ಮಾತಾಗಿತ್ತು; ಎಲ್ಲೆಡೆ ಹದ್ದಿನ ಕಣ್ಣಿನ ನಿಗಾ ಇಟ್ಟಿದ್ದ ಸರ್ಕಾರಿ ವ್ಯವಸ್ಥೆ ತುಸು ಸುಳಿವು ಸಿಕ್ಕರೂ ಜಾರ್ಜ್ ಅವರನ್ನು ಹಿಡಿದುಬಿಡುತ್ತಿತ್ತು. ಈ ನಡುವೆ ಅವರ ತಮ್ಮ ಅದು ಹೇಗೋ ಗುಟ್ಟಾಗಿ ಊಟ ತಂದು ಕೊಡುತ್ತಿದ್ದರು. ಹೀಗೆ ಭೂಗತರಾಗಿದ್ದ ಜಾರ್ಜ್‌ಗೆ ಅಲ್ಲೊಂದು ಯೋಚನೆ ಹೊಲೆಯಿತು. ಹೀಗೆ ಬರಿದೆ ಅಡಗಿಕೂತರೆ ಪ್ರಯೋಜವಿಲ್ಲ; ಸರ್ಕಾರಕ್ಕೆ ಚುರುಕು ಮುಟ್ಟಿಸುವಂತಹ ಕೃತ್ಯವನ್ನೇನಾದರೂ ಮಾಡಬೇಕು, ಉದಾಹರಣೆಗೆ, ವಿಧಾನಸೌಧದಂತಹ ಯಾವುದಾದರೂ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ಬಾಂಬ್ ಸ್ಫೋಟ ನಡೆಸಬೇಕು; ಇದರಿಂದ ಜನಸಾಮಾನ್ಯರಿಗೂ, ಎಲ್ಲರೂ ಸರ್ವಾಧಿಕಾರಿಗಳಿಗೆ ಬೆದರಿ ಕೈಕಟ್ಟಿ ಕುಳಿತಿಲ್ಲ, ಕೆಲವರಾದರೂ ಅವರ ವಿರುದ್ಧ ಭೂಗತ ಚಟುವಟಿಕೆಗಳನ್ನಾದರೂ ನಡೆಸುತ್ತಿದ್ದಾರೆ, ಎಂಬ ನಂಬಿಕೆ ಮೂಡುತ್ತದೆ; ಪ್ರಭುತ್ವಕ್ಕೂ ಒಂದಿಷ್ಟು ಭಯ ಹುಟ್ಟುತ್ತದೆ, ಇರುವುದು ಒಂದು ಸಣ್ಣ ಚಳವಳಿಯಾದರೂ ಅದು ಸುಪ್ತರೂಪದಲ್ಲಿ ಬೃಹತ್ತೇ ಆಗಿರಬೇಕೆಂಬ ಆತಂಕ ಮೂಡುತ್ತದೆ ಎಂದೆಲ್ಲ ಅವರು ನುಡಿದರು. ಇಷ್ಟೆಲ್ಲ ಹೇಳುವಾಗ, ಈ ವಿಧ್ವಂಸಕ ಕೃತ್ಯದಿಂದ ಯಾರ ಪ್ರಾಣ ಹಾನಿಯೂ ಆಗಬಾರದು ಎಂದೂ ಅವರು ಒತ್ತಿ ಒತ್ತಿ ಹೇಳುತ್ತಿದ್ದರು. ಈ ಯೋಜನೆಯ ಮೂಲ ಉದ್ದೇಶವೇನೋ ಘನವಾದುದಾಗಿತ್ತು. ಆದರೆ, ಅಲ್ಲಿ ನೆರೆದಿದ್ದ ಗೆಳೆಯರಲ್ಲಿ, ಎಲ್ಲಿ ಯಾವ ಕಟ್ಟಡದಲ್ಲಿ  ಯಾವ ಹೊತ್ತಿನಲ್ಲಿ ಇಂಥ ಬಾಂಬು ಸಿಡಿಸುವುದು ಎಂಬ ವಿವರಗಳ ಮಾತು ಪ್ರಾರಂಭವಾಗುತ್ತಿದ್ದಂತೆ, ಅದು ಎಲ್ಲೇ ಹೇಗೇ ಆಗಲಿ, ಯೋಜಿಸಿದಂತೆ ಜನರು ಯಾರೂ ಇಲ್ಲದ ನಡುರಾತ್ರಿಯ ವೇಳೆಯಲ್ಲಿಯೇ ಆಗಲಿ, ಅದು ನಾವು ಕನಸಿದಂತಹ ‘ಅಹಿಂಸಾತ್ಮಕ ಬಾಂಬ್ ಸ್ಪೋಟ’ವಾಗುವುದು ಸಾಧ್ಯವೇ ಇಲ್ಲ, ಅದಕ್ಕೆ ಒಬ್ಬಿಬ್ಬರು ಅಮಾಯಕ ರಾತ್ರಿ ಕಾವಲುಗಾರರಾದರೂ ಬಲಿಯಾಗದಿರುವುದು ಸಾಧ್ಯವೇ ಇಲ್ಲ ಎಂಬ ವಾಸ್ತವ ಎದುರು ನಿಂತು, ಆ ಯೋಜನೆ ಕೊನೆಗೆ ಅದಾಗಿಯೇ ಕುಸಿದು ಬಿತ್ತು.

(ಇದಾದ ಮೇಲೆ ನಾವು ಬೇರೆಯೇ ಬಗೆಯೊಂದರ ವಿಧ್ವಂಸಕ ಕೃತ್ಯವನ್ನು ನಡೆಸಲೆಳಸಿದೆವು. ಬಾಂಬಿನ ಯೋಜನೆ ಬಿದ್ದುಹೋದಾಗ ಜಾರ್ಜ್ ಹೇಳಿದರು; ‘ಹಿಟ್ಲರನ ಜರ್ಮನಿಯಲ್ಲಿ ಅವನ ವಿರೋಧಿಗಳು, ವಿಶೇಷವಾಗಿ ಸಮಾಜವಾದಿಗಳು, ಪುಟ್ಟ ಕ್ರಮವೊಂದರ ಮೂಲಕ ಅವನ ಸರ್ಕಾರವನ್ನು ಅಲ್ಲಾಡಿಸಲು ಯತ್ನಿಸಿದ್ದರಂತೆ; ಅವರು ಉರಿಯುವ ಸಿಗರೇಟುಗಳನ್ನು ಟಪಾಲು ಡಬ್ಬಿಗಳೊಳಕ್ಕೆ ತೂರುತ್ತಿದ್ದರಂತೆ, ಅದರಿಂದ ಒಳಗಿದ್ದ ಪತ್ರಗಳೆಲ್ಲ ಸುಟ್ಟುಹೋಗಿ ದೊಡ್ಡ ಪ್ರಮಾಣದ ಸಾರ್ವಜನಿಕ ಅವ್ಯವಸ್ಥೆಯಾಗುತ್ತಿತ್ತಂತೆ, ಇದನ್ನು ತಪ್ಪಿಸಲು ಕೊನೆಗೆ ಹಿಟ್ಲರ್ ದೇಶದಲ್ಲಿದ್ದ ಎಲ್ಲ ಟಪಾಲು ಪೆಟ್ಟಿಗೆಗಳ ಪಕ್ಕವೂ ಒಬ್ಬೊಬ್ಬ ಪೊಲೀಸನನ್ನು ಕಾವಲಿಗೆಂದು ನಿಲ್ಲಿಸಬೇಕಾಗಿ ಬಂದು, ಅದು, ಆ ಹೋರಾಟಗಾರರು ಆಶಿಸಿದಂತೆಯೇ, ಇನ್ನಷ್ಟು ಅಧ್ವಾನಕ್ಕೆ ಎಡೆಮಾಡಿಕೊಟ್ಟಿತಂತೆ. ಈ ಕಥೆಯಿಂದ ನಾವು ಸ್ಪೂರ್ತರಾಗಿ, ಕಡೆಯ ಪಕ್ಷ ಅಷ್ಟಾದರೂ ಸರಕಾರಕ್ಕೆ ಕಿರಕಿರಿ ಮಾಡೋಣವೆಂದು ಹೊರಟಿದ್ದು ಹೌದು. ಆದರೆ, ನಾವು ನಿರೀಕ್ಷಿಸದಿದ್ದ ಸಮಸ್ಯೆಯೊಂದು ಎದುರಾಗಿ ಈ ಯೋಜನೆಯೂ ವಿಫಲವಾಯಿತು; ಅದೇನೆಂದರೆ, ನಮ್ಮ ಸಿಗರೇಟುಗಳು ಡಬ್ಬಿಯೊಳಗೆ ಬೀಳುವ ಮುನ್ನವೆ ತಮ್ಮ ಬೆಂಕಿಯನ್ನು ಪೂರ್ತಾ ಕಳೆದುಕೊಂಡಿರುತ್ತಿದ್ದವು!

ಗುರಿ-ದಾರಿಗಳ ಸಂಬಂಧದ ವಿಷಯದಲ್ಲಿ ಹಿಂಸೆ ಹುಟ್ಟುಹಾಕುವ ವಿಪರ್ಯಾಸಗಳನ್ನು ಗಮನಿಸಿ. ಅಂದು ಒಬ್ಬ ನಿರಪರಾಧಿಯ ಸಾವಿಗೆ ಕಾರಣವಾದರೂ ಅದು ಅಕ್ಷಮ್ಯವಾದ ಹಿಂಸಾಕೃತ್ಯವೆಂದು ನಂಬಿದ್ದ ಜಾರ್ಜ್ ಫರ್ನಾಂಡಿಸ್ ಇಂದು ಕೋಮುವಾದಿ ಹಿಂಸೆಯನ್ನು ಸಮರ್ಥಿಸುವ ಬಲಪಂಥದವರ ಬಂಟನಾಗಿ ಹೋಗಿದ್ದಾರೆ; ಧರ್ಮದ ಹೆಸರಿನಲ್ಲಿ ಸಾವಿರಾರು ಮುಗ್ದರ ಅಸಹಾಯಕರ ದುರ್ಮರಣಕ್ಕೆ ಕಾರಣರಾದವರ ಸರ್ಕಾರದಲ್ಲಿ ಮಂತ್ರಿಯಾಗಿ ಹೋಗಿದ್ದಾರೆ. ಅಂದು ಅಷ್ಟು ತೀವ್ರತೆಯೊಂದಿಗೆ ಸ್ವದೇಶಿ ಮಂತ್ರ ಜಪಿಸುತ್ತಿದ್ದ ಜಾರ್ಜ್ ಆಮೇಲೆ ಕೇಂದ್ರದಲ್ಲಿ ರಕ್ಷಣಾ ಮಂತ್ರಿಯಾದೊಡನೆ, ನಮ್ಮ ಸೇನೆಗೆ ಅತ್ಯಾಧುನಿಕವೂ ಅತಿಹಿಂಸಾತ್ಮಕವೂ ಆದ ಶಸ್ತ್ರಾಸ್ತ್ರಗಳನ್ನು ಯಾವುದೇ ದೇಶದಿಂದ ಕೊಂಡುತಂದರೂ ತಪ್ಪಿಲ್ಲ ಎಂದು ವಾದಿಸಿದರು. ಆತ ನನ್ನ  ಬಹಳ ಹಳೆಯ ಗೆಳೆಯ, ಬಹಳ ಪ್ರಿಯನಾದ ಗೆಳೆಯ. ನಾನು ಇಂದಿಗೂ ಆತನನ್ನು ತುಂಬಾ ಗೌರವಿಸುತ್ತೇನೆ, ಇಷ್ಟಪಡುತ್ತೇನೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಆತನಲ್ಲಾದ ಬದಲಾವಣೆಗಳು, ವಿಶೇಷವಾಗಿ ಹಿಂಸೆಯ ಕುರಿತಾದ ಆತನ ಚಿಂತನೆ ಹಾಗೂ ಕ್ರಿಯಾರೂಪಗಳಲ್ಲಾದ ಬದಲಾವಣೆಗಳು ದಿಗ್ಬ್ರಾಂತಿಯುಂಟು ಮಾಡುವಂಥವು. ಈ ಬದಲಾವಣೆಗಳು ಆತನ ದಿಕ್ಕೆಟ್ಟ ಸ್ಥಿತಿಯನ್ನು ಸೂಚಿಸುವವು. ಆ ಕ್ರೈಸ್ತ ಪಾದ್ರಿ ಗ್ರಹಾಮ್ ಸ್ಟೇನ್ಸ್ ದುಷ್ಕರ್ಮಿಗಳಿಗೆ ಬಲಿಯಾದಾಗ, ಈ ಜಾರ್ಜ್, ತಾನೂ ಕ್ರೈಸ್ತನಾದ್ದರಿಂದ ಒಂದು ಪ್ರಮಾಣಪತ್ರವನ್ನು ಕೊಡಬೇಕು ಎಂದು ತಿಳಿದ ಹಾಗೆ, ‘ಆ ಖೂಳ ಕೃತ್ಯವನ್ನೆಸಗಿದ್ದು ಯಾರೋ ಪರದೇಶಿಯರು, ನಮ್ಮ ದೇಶದವರಲ್ಲ’ ಎಂದು ಘೋಷಿಸಿಬಿಟ್ಟರು. ಅದೆಷ್ಟು ಸಂವೇದನಾ ಹೀನವಾದ ಮಾತಾಗಿತ್ತು.

ಜಾರ್ಜ್‌ನಂಥವರಲ್ಲಾದ ಈ ವಿಲಕ್ಷಣ ಬದಲಾವಣೆ ವಯಸ್ಸು ಆಗುತ್ತಾಗುತ್ತ ನನ್ನಲ್ಲೂ ಆಗಿಬಿಡಬಹುದೆ ಎಂಬ ಭಯ ಎಷ್ಟೋ ಬಾರಿ ಕಾಡುತ್ತದೆ. ಹಿಂಸೆಯ ಕುರಿತಾಗಿ ಸೂಕ್ಷ್ಮವೂ ದ್ವಂದ್ವ ಸಮೃದ್ಧವೂ ಆದ, ಹಾಗೆಯೇ ಅಂತ್ಯವೆ ಇಲ್ಲದಂತೆ ತೋರುವ ಇಂಥ ಚರ್ಚೆಗಳಲ್ಲಿ ತೊಡಗಿ, ಕೊನೆಗೆ ಬಳಲಿ ನಾವೂ ಒಂದಲ್ಲ ಇನ್ನೊಂದು ಬಗೆಯ ಹಿಂಸೆಗೆ ಭೌತಿಕವಾಗಲ್ಲದಿದ್ದರೂ ಭಾವನಾತ್ಮಕವಾಗಿಯಾದರೂ ತಾತ್ವಿಕವಾಗಿಯಾದರೂ ಸಮ್ಮತಿ ಸೂಚಿಸುವಂತಹ ಸಿನಿಕ ಸ್ಥಿತಿಗೆ ಇಳಿದುಬಿಡುತ್ತೇವೋ ಎಂಬ ಆತಂಕ ನನ್ನನ್ನು ಬಾಧಿಸುತ್ತದೆ. ಹಿಂಸೆಯನ್ನು ವಿರೋಧಿಸುವಾಗ ಮೊದಲು ನಾವು ನಮ್ಮ ಅಂತರಂಗದ ಮೂಲೆಮೂಲೆಯನ್ನೂ ಶೋಧಿಸಿಕೊಳ್ಳಬೇಕು, ಅಷ್ಟು ಮೂಲಾತಿ ಮೂಲಸ್ತರದಲ್ಲೂ ನಾವು ಹಿಂಸಾಪ್ರವೃತ್ತಿಯಿಂದ ಮುಕ್ತರಾದವರೋ ಎಂದು ಪರೀಕ್ಷಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಯಾವುದೋ ಒಂದು ಪಂಥದ ಸಮರ್ಥಕರಾಗಿದ್ದುಕೊಂಡು, ನಮ್ಮವರ ಹಿಂಸೆ ಅನಿವಾರ್ಯ, ಪರರ ಹಿಂಸೆ ಅಮಾನವೀಯ, ನಮ್ಮ ಹಿಂಸೆ ಇತಿಹಾಸದ ಚಾಲಕ ಶಕ್ತಿ, ಅನ್ಯರ ಹಿಂಸೆ ನಾಗರಿಕತೆಗೆ ಮಾರಕವಾದ ರೋಗ ಎಂದೆಲ್ಲ ಬಡಬಡಿಸತೊಡಗುತ್ತೇವೆ. ಇದೆಲ್ಲದರ ನಡುವೆ ಹಿಂಸೆಯ ಮೂಲಭೂತ ಸ್ವರೂಪದ ಪ್ರಶ್ನೆಯೇ ನಮ್ಮ ಪ್ರಜ್ಞೆಯಿಂದ ಜಾರಿಹೋಗಿರುತ್ತದೆ. ಈ ಸನ್ನಿವೇಶ ಅದ್ಯಾವ ರೀತಿಯ ತರ್ಕ-ವಿತರ್ಕಗಳಿಗೆ ಎಡೆಮಾಡಿ ಕೊಡುತ್ತದೆಯೆಂದರೆ ನಾವು ಬಲಪಂಥೀಯ ಹಿಂಸೆಯನ್ನು ಖಂಡಿಸುತ್ತಿದ್ದಂತೆಯೆ, ನೀವು ಮೊದಲು ಎಡಪಂಥೀಯ ಹಿಂಸೆಯನ್ನು ಖಂಡಿಸಿ, ಆಮೇಲೆ ನಮ್ಮ ಬಗ್ಗೆ ಮಾತನಾಡಿ ಎಂದು ಬಲಪಕ್ಷದವರೂ, ಇನ್ನೊಂದೆಡೆ ನಾವು ಎಡಪಂಥೀಯ ಹಿಂಸೆಯನ್ನು ಖಂಡಿಸುತ್ತಿದ್ದಂತೆಯೇ ನೀವು ಮೊದಲು ಬಲಪಂಥೀಯ ಹಿಂಸೆಯನ್ನು ಖಂಡಿಸಿ, ಆಮೇಲೆ ನಮ್ಮ ಬಗ್ಗೆ ಮಾತನಾಡಿ ಎಂದು ಎಡಪಕ್ಷದವರೂ ಗುರುಗುಡಲಾರಂಭಿಸುತ್ತಾರೆ; ಅದೇ ರೀತಿಯಲ್ಲಿ, ಮೊದಲು ಮುಸ್ಲಿಮರನ್ನು ಟೀಕಿಸಿ, ಆಮೇಲೆ ನಮ್ಮ ಬಗ್ಗೆ ಮಾತನಾಡಿ ಎಂದು ಹಿಂದುಗಳೂ, ಮೊದಲು ಹಿಂದುಗಳನ್ನು ಖಂಡಿಸಿ, ಆದಾದ ಮೇಲೆ ನಮ್ಮ ವಿಷಯಕ್ಕೆ ಬನ್ನಿ ಎಂದು ಮುಸ್ಲಿಮರೂ ಕೂಗಲಾರಂಭಿಸುತ್ತಾರೆ. ಗುಜರಾತಿನ ಹತ್ಯಾಕಾಂಡದ ಸಂದರ್ಭದಲ್ಲಂತೂ ಇಂಥ ಮಾತುಗಳು ಎಲ್ಲೆಡೆಗಳಿಂದ ಕೇಳಿ ಬಂದವು. ಈ ವಾದದ ಪ್ರಕಾರ ನಡೆದುಕೊಂಡರೆ ಕೊನೆಗೆ ಸಹಜವಾಗಿ ಜೀವನ ನಡೆಸುವುದು, ಅಲೋಚಿಸುವುದು, ಭಾವಿಸುವುದು ಹಾಗೂ ಮಾತನಾಡುವುದು ಕೂಡ ಎಷ್ಟು ದುಸ್ಸಾಧ್ಯವಾಗುತ್ತದೆಯೆಂಬುದನ್ನು ಗಮನಿಸಿ. ಇಂದು ನಡೆದ ಬಿಡಿ ಘಟನೆಯೊಂದರ ಬಗ್ಗೆ ಮಾತನಾಡುವಾಗ ನಾವು ಶತಶತಮಾನಗಳ ಅವಧಿಯ ಕಡತಗಳನ್ನೆಲ್ಲ ಕೊಡವಿತೆಗೆದು, ಅಲ್ಲಿ ದಾಖಲಾದ ದುರಾಚಾರದ ಲೆಕ್ಕಗಳಲ್ಲಿ ಅವರ ಪಾಲೆಷ್ಟು ಇವರ ಪಾಲೆಷ್ಟು ಎಂದೆಲ್ಲ ಕೂಡಿಕಳೆದು, ಕೊನೆಗೆ ಇವರ ಒಟ್ಟೂ ಪಾಲು ಇಷ್ಟು ಕಡಿಮೆಯಾದ್ದರಿಂದ ಇವರ ಇಂದಿನ ದುರಾಚಾರವನ್ನು ಖಂಡಿಸದಿದ್ದರೂ ನಡೆಯುತ್ತದೆ ಎಂದೋ, ಇಲ್ಲ. ಅವರು ಒಟ್ಟೂ ಪಾಲು ಈಗಾಗಲೇ ಜಾಸ್ತಿ ಇರುವುದರಿಂದ ಅವರ ಇಂದಿನ ದುರಾಚಾರವನ್ನು ಖಂಡಿಸದಿರಲು ಸಾಧ್ಯವೆ ಇಲ್ಲವೆಂದೋ, ಎಲ್ಲ ಅಳೆದುತೂಗಿ ಬಾಯಿಬಿಡುವ ಹೊತ್ತಿಗೆ ನಮ್ಮ ಆ ಮಾತುಗಳಲ್ಲಿ ಪ್ರಾಮಾಣಿಕತೆಯ ಅಂಶ, ಸಂಕಟದ ಭಾವಗಳೇನಾದರೂ ಉಳಿದುಕೊಂಡಿರುತ್ತವೆಯೇ? ನಾವು ನಮಗಾದ ಸಂಕಟದ ಸಂಗತಿಯನ್ನು ಹೇಳಿಕೊಳ್ಳುವಾಗಲೂ ಇನ್ನೊಬ್ಬರಿಂದ ಪ್ರಮಾಣಪತ್ರ ಪಡೆದುಕೊಂಡೇ ಹೇಳಿಕೊಳ್ಳಬೇಕು ಎಂದಾದಲ್ಲಿ ಅದರಲ್ಲಿ ಸಂಕಟದ ಗುಣವೇನಾದರೂ ಉಳಿದಿರುತ್ತದೆಯೆ?

ಹೀಗೆ ಹಿಂಸೆಯ ವಿಷಯವನ್ನೂ ಪ್ರಧಾನವಾಗಿ ಅಂಕಿ ಸಂಖ್ಯೆಗಳ ಮೂಲಕವೇ ಚರ್ಚಿಸಹೊರಟಡೆ, ಅಂತಹ ಸಮಾಜದಲ್ಲಿ ಕೃತಕವಾದ ನೀತಿ-ನಿಲುವುಗಳೆ ವಿಜೃಂಭಿಸತೊಡಗುತ್ತವೆ. ಅಲ್ಲಿ ಒಂದೆಡೆ ರಾಜಕಾರಣದಲ್ಲಿ ಯಾರು ಯಾವುದೇ ವಿಷಯದ ಬಗ್ಗೆ ಯಾವುದೇ ರೀತಿಯ ಹೇಳಿಕೆಯನ್ನು ನೀಡುವಾಗಲೂ ವಿವೇಕಕ್ಕಿಂತ ಹೆಚ್ಚಾಗಿ ವ್ಯವಹಾರದ ಪರಿಭಾಷೆಯನ್ನೇ ಬಳಸಬೇಕಾಗುತ್ತದೆ. (ಇಂಥಲ್ಲಿ ಸೋನಿಯಾ ಗಾಂಧಿಯಂಥವರಂತೂ ಬೇರೆಯವರಿಗಿಂತ ಹತ್ತಿಪ್ಪತ್ತು ಪಟ್ಟು ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ, ಯಾಕೆಂದರೆ ತಾನು ಆಡಿದ ಯಾವುದೇ ಒಂದು ಸಹಜ ಸಣ್ಣ ಮಾತು ತಾನು ಕ್ರೈಸ್ತಳಾಗಿರುವುದರಿಂದಲೇ ಅಪಾರ್ಥಕ್ಕೋ ಅಪಚಾರಕ್ಕೋ ಎಡೆಮಾಡಿಕೊಡಬಹುದೆಂಬ ಅಸಹಜ ಎಚಚರದ ಭಾರದಲ್ಲೇ ಆಕೆಯಂಥವರು ತಮ್ಮ ಪ್ರತಿಯೊಂದು ಮಾತನ್ನೂ ತೂಗಿತೂಗಿ ಆಡಬೇಕಾಗುತ್ತದೆ; ಪಕ್ಷವೊಂದರ ಪ್ರಮುಖ ನಾಯಕಿಯಾಗಿಯೆ ಆಕೆಗೆ ಈ ಸ್ಥಿತಿಯಾದರೆ ಇನ್ನು ದೇಶದ ಪ್ರಧಾನಿಯೇ ಆಗಿಬಿಟ್ಟಿದ್ದರೆ ಆಗ ಆಕೆಯ ಗತಿಯೇನಾಗುತ್ತಿತ್ತು ಎಂದು ಊಹಿಸಿ.) ಇನ್ನೊಂದೆಡೆ ಜೀವನ ದಾಖಲಾತಿಯ ಹಾಗೂ ಕಲಾ ಸೃಷ್ಟಿಯ ಸಹಜ ಕ್ರಮಗಳೂ ಮುರುಟಿಹೋಗುತ್ತವೆ. ಅಂಥಲ್ಲಿ, ನಮಗಿಲ್ಲಿ ಈ ಶಿಬಿರದಲ್ಲಿ ಅಸಾಧಾರಣವಾದ ಕೆಲವು ಸಾಕ್ಷ್ಯಚಿತ್ರಗಳನ್ನು ತಂದು ತೋರಿಸಿದ ಆನಂದ್ ಪಟವರ್ಧನ್‌ರಂತಹ ನಿರ್ದೇಶಕರು ಮುಕ್ತವಾಗಿ ತಮ್ಮ ಚಲನಚಿತ್ರಗಳನ್ನು ತಯಾರಿಸಲಾಗುವುದಿಲ್ಲ, ಹುಸೇನ್‌ರಂಥವರು ಕಲಾ ಸ್ವಾತಂತ್ರ್ಯದಲ್ಲಿ ತಮ್ಮ ಕೃತಿಗಳನ್ನು ರಚಿಸಲಾಗುವುದಿಲ್ಲ. ಇಲ್ಲಿ ಪ್ರತಿಯೊಂದು ಉಸಿರೂ ರಾಜಕೀಯ ರಂಗದ ಬಿರುಗಾಳಿಯಾಗಿ ಬಲಿಯುವಂತೆ ತೋರಿ, ನಾವು ಕ್ಷಣಕ್ಷಣಕ್ಕೂ ಪೊಲಿಟಿಕಲ್ ಕರೆಕ್ಟ್‌ನೆಸ್‌ನ ಅಳತೆಯಲ್ಲೆ ಜೀವನ ಸವೆಸಬೇಕಾಗುತ್ತದೆ.

ನಮ್ಮ ನಡೆನುಡಿಗಳಿಂದ ಯಾರನ್ನೂ ಯಾವ ಕಾರಣಕ್ಕು ನೋಯಿಸದಂತೆ ಸಿಟ್ಟಿಗೇಳಿಸದಂತೆ, ಯಾರೂ ತಿರುಗಿ ನಮಗೆ ಪ್ರಶ್ನೆ ಕೇಳದಂತೆ ಸುಗಮ ರಾಜಕೀಯ ಮಾಡಿಕೊಂಡಿರುವುದೆ-ಪೊಲಿಟಿಕಲ್ ಕರೆಕ್ಟ್‌ನೆಸ್‌ನ ಪ್ರಕಾರ ನಡೆದುಕೊಂಡಿರುವುದೆ- ರಾಜಕಾರಣದ ಅತ್ಯುತ್ತಮವಾದ ಮಾದರಿ ಎಂಬ ನಿಲುವು ಗಟ್ಟಿಯಾಗಿ ಬೆಳೆಯುತ್ತಿರುವ ಈ ನಮ್ಮ ಕಾಲದಲ್ಲಿ ಸತ್ಯವನ್ನು, ಅದರಲ್ಲೂ ಅಪ್ರಿಯವಾದ ಸತ್ಯವನ್ನು ಹೇಳುವುದು ಅತಿಕಠಿಣವಾಗಿ ಹೋಗಿದೆ. ಹಿಂಸೆಯನ್ನು ಅಮೂಲಾಗ್ರವಾಗಿ ವಿರೋಧಿಸಬೇಕೆಂದು ನಂಬಿದವನೂ, ಹಾಗೆ ಮತ್ತೆ ಮತ್ತೆ ಹೇಳುವವನೂ ಆದ ನನಗೆಯೇ ಕೆಲವೊಮ್ಮೆ ಹಿಂಸೆಯ ಎಡ-ಬಲಪಂಥಗಳ ನಡುವೆ ಸೂಕ್ಷ್ಮವಾದೊಂದು ವ್ಯತ್ಯಾಸವಿದೆಯೆಂದು ಅನಿಸಿ, ಆ ಕುರಿತು ಸಾರ್ವಜನಿಕವಾಗಿ, ಆದರೆ ಹಾಗೆ ಮಾಡುತ್ತ ನನಗೆಯೆ ನಾನು ಕೇಳಿಕೊಂಡಂತೆಯೆ ಹೇಳಿಕೊಂಡಾಗ ನಾನು ಇಂಥದೆ ಪೊಲಿಟಿಕಲ್ ಕರೆಕ್ಟ್‌ನೆಸ್‌ನ ನಿಲುವಿನಿಂದ ಹುಟ್ಟಿಕೊಂಡ ಟೀಕೆಗೆ ಗುರಿಯಾಗಿದ್ದೇನೆ. ಈ ವಿಷಯವನ್ನು ಇಲ್ಲಿ ಮತ್ತೊಮ್ಮೆ ಮತ್ತೊಂದಿಷ್ಟು ಸ್ಪಷ್ಟಗೊಳಿಸಿ ಹೇಳಲೆತ್ನಿಸುತ್ತಿದ್ದೇನೆ; ಹಿಂಸೆಯ ಎಡಪಂಥ ಹಾಗೂ ಬಲಪಂಥಗಳೆರಡೂ ಅಂತಿಮವಾಗಿ ಒಂದೇ ಎಂದು ಅದೆಷ್ಟು ಅನಿಸಿದರೂ ಅವುಗಳ-ಮೂಲಗಳ ನಡುವೆ ಮುಖ್ಯವಾದೊಂದು ವ್ಯತ್ಯಾಸವಿದೆಯೆಂದೆ ನನಗೆ ಮತ್ತೆ ಮತ್ತೆ ಅನಿಸಿದೆ; ಆ ವ್ಯತ್ಯಾಸವನ್ನು ನಾವು ರೂಪಕವೊಂದರ ಮೂಲಕ ಗುರುತಿಸಬಹುದೆಂದು ತೋರಿದೆ. ನನ್ನ ಪ್ರಕಾರ ಎಡಪಂಥೀಯ ಹಿಂಸೆ ಕ್ಯಾನ್ಸರ್ ಇದ್ದಂತೆ, ಬಲಪಂಥೀಯ ಹಿಂಸೆ ರೇಬಿಸ್ ಇದ್ದಂತೆ. ಕ್ಯಾನ್ಸರ್ ನಮ್ಮ ದೇಹದ ಒಳಗಿನಿಂದಲೆ ಹುಟ್ಟಿಬರುವಂತಹ ಹುಣ್ಣು, ನಮ್ಮ ದೇಹದ ಅಂತಃಸ್ವಾಸ್ಥ್ಯವೆ ಸರಿಯಿಲ್ಲವೆಂಬ ಸೂಚನೆ ನೀಡುವ ರೋಗ. ಕ್ಯಾನ್ಸರಿನಂತೆ ಎಡಪಂಥೀಯ ಹಿಂಸೆ, ನಮ್ಮ ಸಮಾಜದ ವ್ಯವಸ್ಥೆಯಲ್ಲಿಯೇ ಆಳವಾದೊಂದು ಊನವಿದ್ದಾಗ ಅಸಮತೋಲ ಇದ್ದಾಗ ಅದರ ಗೋಚರರೂಪವಾಗಿ ಹೊರಬರುತ್ತದೆ. ಬಲಪಂಥೀಯ ಹಿಂಸೆಯಾದರೋ ಹುಚ್ಚುನಾಯಿ ಕಚ್ಚಿದಾಗ ಬರುವ ರೇಬಿಸ್‌ನಂತೆ ಹೊರಗಿನಿಂದ ಬಂದು ನಮ್ಮನ್ನು ಕಾಡುವ ರೋಗ, ನಮ್ಮ ದೋಷ-ದೌರ್ಬಲ್ಯಗಳು ಏನೂ ಇಲ್ಲದಿದ್ದಾಗ್ಯೂ ಬಾಹ್ಯಮೂಲದಿಂದ ಬಂದು ನಮಗಂಟಿಕೊಳ್ಳುವ ಬಾಧೆ. ಈ ನಿಟ್ಟಿನಲ್ಲಿ ಬಹು ಸರಳವಾದೊಂದು ವಾಸ್ತವವಿವರವನ್ನು ಗಮನಿಸಿ; ಇಂದು ಕರ್ನಾಟಕದಲ್ಲಿ ನಕ್ಸಲೀಯರ ಹಾವಳಿ ಎಷ್ಟು ಕಡೆಗಳಲ್ಲಿದೆ ಎಂದು ಕೇಳಿದರೆ ನಿಮಿಷವೊಂದರಲ್ಲಿ ಅಲ್ಲಿ ಇಲ್ಲಿ ಮತ್ತಲ್ಲಿ ಎಂದು ಬೆರಳೆಣಿಸಿ ಹೇಳಬಹುದು. ಅದೇ ಬಲಪಂಥೀಯ ಹಾವಳಿಯ ವ್ಯಾಪ್ತಿಯ ಬಗ್ಗೆ ಕೇಳಿದರೆ, ಅದು ಸುಮಾರಾಗಿ ಎಲ್ಲ ಊರುಗಳಲ್ಲಿಯೂ ಇದೆ ಎಂದೇ ಹೇಳಬೇಕಾಗಿದೆ. ದೇಹದ ವಿಷಯದಲ್ಲಿಯಂತೆಯೆ, ನಮ್ಮ ಸಾಮಾಜಿಕ-ಆರ್ಥಿಕ ಸಂರಚನೆಯನ್ನು ಸಂತುಲ ಹಾಗೂ ಸಬಲಗೊಳಿಸುವ ಮೂಲಕ ಎಡಪಂಥೀಯ ಹಿಂಸೆಯ ಕ್ಯಾನ್ಸರಿನಿಂದ ಬಿಡುಗಡೆ ಪಡೆಯವುದು ಸ್ವಲ್ಪವಾದರೂ ಸಾಧ್ಯವುಂಟು. ಆದರೆ ಹೊರಗಿನಿಂದ ಎರಗುವ ಬಲಪಂಥೀಯ ಹಿಂಸೆಯ ರೇಬಿಸ್‌ನಿಂದ ಮುಕ್ತಿ ಪಡೆಯುವುದು ಸುಲಭದಲ್ಲಿ ಸಾಧ್ಯವಿಲ್ಲವೆಂದೆ ತೋರುತ್ತದೆ.

ಇದೇ ವಿಷಯಕ್ಕೆ ನನಗೂ ಈಗ ನಮ್ಮೊಂದಿಗಿಲ್ಲದ ಸುಬ್ಬಣ್ಣನಿಗೂ ಚಕಮಕಿಯ ಚರ್ಚೆಯೊಂದಾಗಿತ್ತು. ನಾನು ಈ ಕ್ಯಾನ್ಸರ್-ರೇಬಿಸ್‌ನ ರೂಪಕವನ್ನಿಟ್ಟುಕೊಂಡು ಲೇಖನವೊಂದನ್ನು ಬರೆದಾಗ ಸುಬ್ಬಣ್ಣ ಒಪ್ಪಲಿಲ್ಲ. ‘ಇಲ್ಲ, ನೀನು ಬೇರೆ ಯಾರನ್ನೋ ಸುಪ್ರೀತಗೊಳಿಸಲೆಂದು ಹೀಗೆ ಬರೆದಂತೆ ತೋರುತ್ತದೆ. ನಿನ್ನ ಸುತ್ತಮುತ್ತ ಒಂದಿಷ್ಟು ಎಡಪಂಥೀಯರಿದ್ದಾರಲ್ಲ, ಅವರು ನಿನ್ನ ಬಗ್ಗೆ ತಪು ತಿಳಿಯಬಾರದೆಂಬ ಆತಂಕದಲ್ಲಿ ಹೀಗೆ ನುಡಿದಂತೆ ತೋರುತ್ತದೆ’ ಎಂದು ಆತ ಆಕ್ಷೇಪಿಸಿದ. ಆತ ಹಾಗೆಂದಾಗ ನನಗೆ ನನ್ನ ಬಗ್ಗೆಯೆ ಸಂದೇಹಗಳು ಶುರುವಾದವು. ‘ಇರಬಹುದಲ್ಲ, ನಾನೂ ಕೂಡ ಪೊಲಿಟಿಕಲ್ ಕರೆಕ್ಟ್‌ನೆಸ್‌ನ ಗೀಳಿಗೆ ಬಿದ್ದು ಖಂಡಸತ್ಯವನ್ನೆ ಸಮಗ್ರಸತ್ಯವೆಂದು ಪ್ರತಿಪಾದಿಸುತ್ತಿರಬಹುದಲ್ಲ’ ಎಂದೆನಿಸಿತು. ನಿಜ, ಇದೊಂದು ಬಹುದೊಡ್ಡ ಅಪಾಯ. ನಾನು ಮೊದಲಿನಿಂದಲೂ ಮಧ್ಯಮವರ್ಗದಲ್ಲಿ ನಂಬಿಕೆಯಿಟ್ಟುಕೊಂಡು ಬಂದವನು, ಕೆಲವೆಡೆ ಅದು ಸಾಧ್ಯವೇ ಇಲ್ಲವಾದಾಗ ಎಡ ಪಂಥದತ್ತ ವಾಲಿದವನು. ಇಂದಿಗೂ ನನಗೆ, ಲೆನಿನ, ಮಾವೋರಂತಹ ನಾಯಕರು ಮೂಲತಃ ಕೆಟ್ಟವರಾಗಿದ್ದರೆಂದು ಹೇಳಲು ಸಾಧ್ಯವಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ಅತಿಖಚಿತ ಹಾಗೂ ಅತ್ಯಪೇಕ್ಷಣೀಯ ಎಂದುಕೊಂಡಿದ್ದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನರ ಮೇಲೆ ಹೇರಹೊರಟು, ಅಲ್ಲಿ ಅಸಹನೆಗೊಂಡು ಮನಸಿನ ಮುಕ್ತತೆಯನ್ನು ಕಳೆದುಕೊಂಡು, ಕೆಟ್ಟ ಕೃತ್ಯಗಳಿಗೆ ಕೈಹಾಕಿದರು, ಅಲ್ಲಿ ಮಾತ್ರ ಭಾರಿ ದುಷ್ಟ ಕೆಲಸಗಳನ್ನೆ ಮಾಡಿದರು ಎಂದೇ ಅನಿಸುತ್ತದೆ. ಆಧುನಿಕ ವಿಜ್ಞಾನ ಹಾಗೂ ಆಧುನಿಕ ಅಭಿವೃದ್ಧಿಗಳ ನಡುವೆ ಅನ್ಯೋನ್ಯ ಸಂಬಂಧವನ್ನು ಕಟ್ಟುವ ಪ್ರಕ್ರಿಯೆ ಪ್ರಾರಂಭವಾದದ್ದೆ ಲೆನಿನ್ನನ ಸೋವಿಯಟ್ ರಷಿಯಾದಲ್ಲಿ ಎಂಬುದನ್ನೂ, ಹಾಗೆಯೆ ನಮ್ಮ ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಇದೇ ಪ್ರಕ್ರಿಯೆಯನ್ನು ಇಲ್ಲಿ ಪುನರಾವರ್ತಿಸಲು ಪ್ರಯತ್ನಿಸಿದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥ ಯೋಜನಾಧಾರಿತ ಪ್ರಗತಿ ಮಾದರಿಯಿಂದ ಅವರವರ ದೇಶಗಳಿಗೆ ಪ್ರಯೋಜನವೇನೂ ಆಗಿಲ್ಲ ಎಂದು ಯಾರೂ ಹೇಳಲಾರರು. ಅದೇ ರೀತಿ, ಅದರಿಂದ ಯಾವ ನಷ್ಟವೂ ಆಗಿಲ್ಲ ಎಂದೂ ಯಾರೂ ಹೇಳಲಾರರು. ಅಭಿವೃದ್ಧಿಯ ಈ ಹೊಸ ಕ್ರಮ ಮುಂದೆ ಅಪಾರ ವಿನಾಶಕ್ಕೂ ಗೋಚರ ಹಾಗೂ ಅಗೋಚರ ರೂಪಗಳ ಹಿಂಸೆಗೂ ಹೇಗೆ ಕಾರಣವಾಯಿತೆಂಬುದನ್ನು ನಾವಿಲ್ಲಿ ನಿನ್ನೆಮೊನ್ನೆಯಷ್ಟೆ ನೋಡಿದ ಆನಂದ್ ಪಟವರ್ಧನರ ಡಾಕ್ಯುಮೆಂಟರಿ ಸಿನೆಮಾಗಳ ಕಣ್ಣಿಂದ ಕಂಡಿದ್ದೇವೆ. ಲೆನಿನ್, ನೆಹರೂರವರ ಅಭಿವೃದ್ಧಿ ಮಾದರಿಗೆ ಈ ಒಂದು ನೇತ್ಯಾತ್ಮಕ ಮುಖವೂ ಇದೆಯೆಂದಾಕ್ಷಣ ಅವರು ಮೂಲಭೂತವಾಗಿ ಕೆಟ್ಟ ವ್ಯಕ್ತಿಗಳೆಂದು ಹೇಳಲಾದೀತೆ? ಖಂಡಿತ ಇಲ್ಲ. ಬದಲಾಗಿ, ಅವರು ವೈಯಕ್ತಿಕವಾಗಿ ಒಳ್ಳೆಯವರೆ- ಇನ್ನೂ ಹೇಳುವುದಾದರೆ ಅವರ ವೈಯಕ್ತಿಕ ಒಳ್ಳೆಯತನ-ಕೆಟ್ಟತನಗಳ ಪ್ರಶ್ನೆಯೆ ಇಲ್ಲಿ ಅಪ್ರಸ್ತುತ-ಆದರೆ ಅವರ ತಿಳುವಳಿಕೆಯಲ್ಲಿ ತಪ್ಪಿತ್ತು, ಎನ್ನಬಹುದು. ಅದೇ ಬಲಪಂಥೀಯರ ಮಾದರಿಯಾದ ಸಾವರ್ಕರರಂಥವರು ತಪ್ಪು ತಿಳುವಳಿಕೆಯ ವ್ಯಕ್ತಿ ಮಾತ್ರವಲ್ಲ ಕೆಟ್ಟತನದ ವ್ಯಕ್ತಿ ಕೂಡಾ ಹೌದು ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಮೊನ್ನೆ ಇಲ್ಲಿ ಆಶಾದೇವಿಯವರು ಸಾಕ್ಷ್ಯಾಧಾರಸಹಿತ ತೋರಿಸಿದಂತೆ, ಸಾವರ್ಕರ್ ಒಂದೆಡೆ ಹೀಂದುತ್ವದ ಗರ್ವವನ್ನು ಸ್ಥಾಪಿಸಲು ಹಿಂದು ಗಂಡಸರು ಮುಸ್ಲಿಮ್ ಹೆಂಗಸರ ಮೇಲೆ ಅತ್ಯಾಚಾರ ನಡೆಸಿದರೆ ತಪ್ಪೇನಿಲ್ಲ ಎಂದೇ ಬರೆದಿದ್ದಾರಂತೆ! ಆಶಾದೇವಿ ಮುಂದುವರೆದು ಇನ್ನೂ ಹೇಳಿದರು; ಇತ್ತೀಚೆಗೆ ನಡೆದ ಗುಜರಾತ್ ಹಿಂಸಾಚಾರದಲ್ಲಿ ಸಾವರ್ಕರರು ಹೇಳಿದ್ದನ್ನು ಅವರ ಅನುಯಾಯಿಗಳು ಅಕ್ಷರಶಃ ಪರಿಪಾಲಿಸಿದ್ದು ಮಾತ್ರವಲ್ಲ, ಮತ್ತೂ ಪೌರುಷ ಮೆರೆಯಲೆಂದೋ ಮುಂದಿನ ಪೀಳಿಗೆಯವರಿಗೆ ದಾಖಲೆ ಉಳಿಸಲೆಂದೋ ಆ ಪರಿಪಾಲನೆಯ ಕೃತ್ಯದ ವಿಡಿಯೋಗ್ರಹಣ ಕೂಡ ಮಾಡಿದರಂತೆ. ಇಂಥವೆಲ್ಲ ಎಷ್ಟು ಭೀಕರವಾದುವೆಂದರೆ ಅವುಗಳ ವಿವರಗಳನ್ನು ಇಟ್ಟುಕೊಂಡು ಸಮಾಜಶಾಸ್ತ್ರ, ಮನಶ್ಯಾಸ್ತ್ರ, ಮಾನವಶಾಸ್ತ್ರ ಇತ್ಯಾದಿಗಳ ರೀತಿಯ ಸೈದ್ಧಾಂತಿಕ ಜಿಜ್ಞಾಸೆ ನಡೆಸಹೊರಟಲ್ಲಿ ನಾವು ದಯನೀಯ ಸೋಲು ಕಾಣುತ್ತೇವೆ. ಇಂಥ ದುಷ್ಟ ಘಟನೆಗಳನ್ನು ಬಳಸಿ ಅಮೂರ್ತ ಅಭಾವುಕ ಚರ್ಚೆಗಳನ್ನು ನಡೆಸುವುದೇ ಎಂದು ನಮ್ಮ ಬಗ್ಗೆಯೆ ನಮಗೆ ಅಸಹ್ಯ ಮೂಡಿಬಿಡುತ್ತದೆ. ಈ ಬಗೆಯ ವಿಪರೀತ ವಿಕಾರವನ್ನು-ಇಂಥದು ಎಲ್ಲೆಡೆಯೂ ಇರುತ್ತದೆ-ಎದೆಗೊಟ್ಟು ಎದುರಿಸುವ ಪ್ರಾಯಶಃ ಶ್ರೇಷ್ಠ ತತ್ವಜ್ಞಾನಿಗಳಿಗೆ ಹಾಗೂ ಬರಹಗಾರರಿಗೆ ಮಾತ್ರ ಸಾಧ್ಯವೇನೋ; ಕಾಫ್ಕಾ ಹಾಗೂ ದೊಸ್ತೀವ್‌ಸ್ಕಿ ಬರಹಗಾರರಲ್ಲಿ ನನಗೆ ಈ ಕ್ಷಣಕ್ಕೆ ನೆನಪಾಗುವ ಇಂಥ ಎರಡು ಹೆಸರುಗಳು.

ಹಿಂಸೆಯ ಭೀಕರತೆ ಕೆಲವೊಮ್ಮೆ ಅತಿಮುಗ್ಧರೂಪದಲ್ಲೂ ಪ್ರಕಟಗೊಂಡು ನಮ್ಮನ್ನು ಬೆಚ್ಚಿಬೀಳಿಸಬಹುದು. ಈ ಬಗ್ಗೆ ದೇವನೂರ ಮಹಾದೇವ ತಮ್ಮ ಒಂದು ಅನುಭವವನ್ನು ಹೇಳಿಕೊಳ್ಳುತ್ತಿದ್ದರು. ತಮ್ಮ ಬಾಲ್ಯದಲ್ಲಿ ಮಹಾದೇವ ಆರ್.ಎಸ್.ಎಸ್. ಸೇರಿಕೊಂಡಿದ್ದರಂತೆ. ಆರ್.ಎಸ್.ಎಸ್. ನವರು ಜಾತಿಭೇದ ಮಾಡುವುದಿಲ್ಲ; ಅವರು, ಒಂದು ಅರ್ಥದಲ್ಲಿ, ಹಿಂದುಗಳನ್ನೆಲ್ಲ ಒಗ್ಗೂಡಿಸುವ ಆಕಾಂಕ್ಷೆಯವರಾದ್ದರಿಂದ ಹಾಗೆ ಜಾತ್ಯಾಧಾರಿತ ತಾರತಮ್ಯ ಮಾಡುವುದಿಲ್ಲ. ದಲಿತ ಮಹಾದೇವರಿಗೆ ಇದು ವಿಶೇಷವಾಗಿ ಕಂಡು ಅವರು ಆ ಸಂಘಟನೆಯ ಸದಸ್ಯರಾಗಿದ್ದರಂತೆ. (ಸ್ವಾರಸ್ಯದ ಸಂಗತಿಯೆಂದರೆ, ಸಾವರ್ಕರ್ ಜಾತಿಪದ್ಧತಿಯ ವಿರೋಧಿಯಾಗಿದ್ದರು; ಹಾಗೆಯೆ ಅವರು ನಾಸ್ತಿಕರೂ ಆಗಿದ್ದರು. ಇನ್ನೊಂದು ವಿಚಿತ್ರವನ್ನು ನೋಡಿ, ಸಾವರ್ಕರ್ ಅವರ ಧರ್ಮಕಾರಣದ ಎದುರಾಳಿ ಜಿಲ್ಲಾ ಕೂಡ ನಾಸ್ತಿಕರಾಗಿದ್ದರು. ಧರ್ಮದ ವಿಷಯದಲ್ಲಿ ಪರಸ್ಪರ ಕಟ್ಟಾ ವಿರೋಧಿಗಳಾಗಿದ್ದ ಇವರಿಬ್ಬರು ದೇವರ ವಿಷಯದಲ್ಲಿ ಮಾತ್ರ ಸಹಮತೀಯರಾಗಿದ್ದರು. ಅದೇ, ಇವರಿಬ್ಬರೂ ಎರಡು ಬೇರೆ ಬೇರೆ ಬದಿಗಳಿಂದ ಯಾರ ಮೇಲೆ ಕೆಂಡ ಕಾರುತ್ತಿದ್ದರೋ ಆ ಗಾಂಧಿ ಪರಮ ಆಸ್ತಿಕರಾಗಿದ್ದರು, ದೈವಾರಾಧಕ ಧಾರ್ಮಿಕರಾಗಿದ್ದರು. ಅಂದರೆ, ಒಂದೆಡೆ ಮೂವರು ಪಶ್ಚಿಮ ವಿರೋಧಿಗಳಾಗಿದ್ದರಾದರೂ ಅವರಲ್ಲಿ ಗಾಂಧಿಯವರು ತಮ್ಮ ಪಶ್ಚಿಮ ವಿರೋಧದ ನಿಲುವನ್ನು ಭಾರತೀಯ ನೆಲೆಗಳ ಮೇಲೆ ಕಟ್ಟಿಕೊಂಡಿದ್ದರೆ ಆ ಇನ್ನಿಬ್ಬರು ಬಹಿರಂಗದಲ್ಲಿ ಪಶ್ಚಿಮದ ಅತ್ಯುಗ್ರ ವಿರೋಧಿಗಳಾಗಿದ್ದೂ ಅಂತರಂಗದಲ್ಲಿ ಪಶ್ಚಿಮದ ದಾಸರೆ ಆಗಿದ್ದರು ಅಲ್ಲಿ ಮಹಾದೇವರ ಜೊತೆಯಲ್ಲಿ ಬ್ರಾಹ್ಮಣ ಹುಡುಗನೊಬ್ಬ ಕೂಡ ಸ್ವಯಂ ಸೇವಕನಾಗಿದ್ದನಂತೆ. ಸಂಘದ ನಿಯಮ-ನಂಬಿಕೆಗಳಿಗೆಲ್ಲ ಬದ್ದನಾಗಿದ್ದ ಹಾಗೂ ಸ್ವಭಾವತಃ ತುಂಬಾ ಒಳ್ಳೆಯವನೆ ಆಗಿದ್ದ ಆ ಹುಡುಗ ಮಡಿಮೈಲಿಗೆಯೆಂದು ತಲೆಕೆಡಿಸಿಕೊಳ್ಳದೆ ಮಹಾದೇವರಂತಹ ದಲಿತರ ಒಟ್ಟಿಗೆಯೆ ಕುಳಿತು ಊಟ ಕೂಡ ಮಾಡುತ್ತಿದ್ದನಂತೆ. ಹೀಗೆ ನಡೆದಿದ್ದಾಗ ಒಂದು ದಿನ ಆತ ಮಹಾದೇವರ ಬಳಿ ‘ನನ್ನ ದೊಡ್ಡದೊಂದು ಗುರಿಯೇನು ಗೊತ್ತಾ? ನಾನು ನನ್ನ ಜೀವನದಲ್ಲಿ ಒಬ್ಬ ಮುಸ್ಲಿಮನನ್ನಾದರೂ ಕೊಲ್ಲಬೇಕು. ಅಲ್ಲಿಗೆ ಜೀವನಕ್ಕೆ ಒಂದು ಸಾರ್ಥಕತೆಯಾದರೂ ಬಂದಂತಾಗುತ್ತದೆ’ ಎಂದನಂತೆ. ಆತನ ಮುಗ್ಧತೆ-ಕ್ರೂರತೆಗಳ ವಿಲಕ್ಷಣ ಸಂಮಿಶ್ರಣದಿಂದ ತೀವ್ರವಾಗಿ ಆಘಾತಗೊಂಡ ಮಹಾದೇವ ತಕ್ಷಣ ಆ ಸಂಘಟನೆಯನ್ನು ತೊರೆದರಂತೆ.

ಇದೇ ಬಗೆಯ ಆಘಾತಗಳು ನಮ್ಮಂತಹ ಲೇಖಕರು ಹಾಗೂ ಕಲಾವಿದರನ್ನು ಇತ್ತೀಚೆಗೆ ಉದ್ದಕ್ಕೂ ಕಾಡುತ್ತಾ ಬಂದಿದೆ. ಮತ್ತು ಈ ಆಘಾತಗಳು ಹೆಚ್ಚು ಪಾಲು ಬಲಪಂಥೀಯ ಹಿಂಸೆಯಿಂದಲೆ ಉಂಟಾದವು ಎಂಬುದು ಕೇವಲ ಆಕಸ್ಮಿಕವಿರಲಿಕ್ಕಿಲ್ಲ. ಎಡಹಿಂಸೆ ಮತ್ತು ಬಲಹಿಂಸೆಗಳಿಂದ ಸಮಾನವಾದ ವಿಮಶಾತ್ಮಕ ದೂರವೊಂದನ್ನು ಕಾಪಾಡಿಕೊಳ್ಳುತ್ತಲೇ ನಮ್ಮಂಥವರು ಅವೆರಡರ ಮಧ್ಯದ ಮೂಲಭೂತ ವ್ಯತ್ಯಾಸಗಳನ್ನೂ ಗುರುತಿಸುತ್ತೇವಲ್ಲ, ಇದೇ ನಮ್ಮ ರಾಜಕಾರಣ. ನನಗಂತೂ, ವೈಯಕ್ತಿಕವಾಗಿ, ನಮ್ಮ ದೇಶದ ಮಟ್ಟಿಗಂತೂ, ಬಲಪಂಥದವರಿಗಿಂತ ಎಡಪಂಥದವರೊಂದಿಗೆ ಒಡನಾಡುವುದರಲ್ಲೆ ಹೆಚ್ಚು ಪ್ರಯೋಜನವಿದೆ ಎಂದು ತೋರುತ್ತದೆ. ಅವರೂ ಹಿಂಸಾಪರರು ಹೌದು, ಆದರೆ ಅವರೊಡನೆ ಜಗಳವಾಡಿ ಅವರ ಹಿಂಸಾಪರತೆಯನ್ನು ಕಡಿಮೆ ಮಾಡಿ ಅವರನ್ನು ಪಳಗಿಸುವುದರಲ್ಲಿಯೆ ಹೆಚ್ಚು ಅರ್ಥವಿದೆ. ಬಲಪಂಥೀಯರ ವಿಷಯದಲ್ಲಿ ಇದು ಸುಲಭದಲ್ಲಿ ಸಾಧ್ಯವಿಲ್ಲದ ಮಾತು; ಅವರನ್ನು ಟೀಕಿಸುತ್ತಿದ್ದಂತೆಯೆ ಅವರು ಅಸಹನೆ ವ್ಯಕ್ತಪಡಿಸುತ್ತಾರೆ, ನಮ್ಮ ಮೇಲೆ ಹಿಂಸಾಪ್ರಯೋಗ ಪ್ರಾರಂಭಿಸುತ್ತಾರೆ. ಅದೇ, ಎಡಪಕ್ಷದವರ ಜೊತೆ ಜಗಳವಾದರೂ ಆಡಬಹುದು, ಕೊನೆಗಾದರೂ ಬೇರೆ ಬಗೆಯ ಸತ್ಯಗಳನ್ನು ಅವರಿಗೆ ಮನದಟ್ಟು ಮಾಡಿಸಬಹುದು. ಹಾಗೆಂದೆ ಇರಬೇಕು. ನಮ್ಮದೇಶದಲ್ಲಿ ಎಡ ಪಕ್ಷಗಳಲ್ಲಾದಷ್ಟು ಒಡಕುಗಳು ಬೇರಾವ ಪಕ್ಷಗಳಲ್ಲೂ ಆಗಿಲ್ಲ. ಅವರಲ್ಲಿ ಯಾವುದಾದರೂ ಒಂದು ಪಂಗಡದವರು ನಾವೇ ಅತಿ ಎಡದವರು ಎಂದರೆ ತಕ್ಷಣ ಎದ್ದುನಿಂತು, ಇಲ್ಲ, ನಿಮಗಿಂತ ನಾವೇ ಹೆಚ್ಚು ಎಡದವರು ಎನ್ನುವ ಇನ್ನೊಂದು ಪಂಗಡದವರೂ, ಅವರು ಹಾಗೆ ಹೇಳುತ್ತಿದ್ದಂತೆಯೇ ಇಲ್ಲ, ನಿಮ್ಮಿಬ್ಬರಿಗಿಂತ ನಾವೇ ಹೆಚ್ಚು ನಿಜವಾದ ಎಡದವರು ಎಂದು ಸಾರುತ್ತ ಬರುವ ಮತ್ತೊಂದಿಷ್ಟು ಪಂಗಡಗಳವರೂ ಇದ್ದಾರೆ. ಎಡಪಂಥದವರಲ್ಲಿ ಇಷ್ಟೆಲ್ಲ ಬಗೆಗಳ ಚಿಂತನೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಕಾಣಬಹುದು. ಅದೇ, ಬಲಪಂಥೀಯರಲ್ಲಿ ಇಂಥ ತತ್ತ್ವ ವೈವಿಧ್ಯ ಮತ್ತು ಚಿಂತನಾ ವೈವಿಧ್ಯಗಳನ್ನು ಕಾಣುವುದು ಸಾಧ್ಯವಿಲ್ಲ.

ಇಷ್ಟಾಗಿಯೂ ಎಡಪಂಥದವರು ಇಂದು ನಕ್ಸಲ್ ವಾದದ ಮೂಲಕ ತೆಗೆದುಕೊಂಡಿರುವ ಹೊಸ ತಿರುವನ್ನು ನಾನು ಬಲಪಂಥೀಯ ಹಿಂಸೆಯನ್ನು ಖಂಡಿಸುವಷ್ಟೆ ತೀವ್ರವಾಗಿ ಖಂಡಿಸುವಂಥವನು. ನಾವು ಯಾರದ್ದೋ ಯಾವುದೇ ಬಗೆಯ ಹಿಂಸೆಯನ್ನು ವಿರೋಧಿಸುತ್ತಿರಲಿ, ಅದಕ್ಕೆ ನಾವು ಅದೇ ಬಗೆಯ ಹಿಂಸೆಯ ಪ್ರತ್ಯುತ್ತರವನ್ನು ನೀಡಲೆಂದು ಹೊರಟು ಆ ಮೂಲಕ ನಾವೂ ನಮ್ಮ ವೈರಿಗಳ ಪ್ರತಿರೂಪಗಳೇ ಆಗಿಬಿಡುವ ಅಪಾಯದ ಬಗ್ಗೆ ಸದಾ ಜಾಗೃತರಾಗಿರಬೇಕೆಂದು ನಂಬಿದ್ದ ಗಾಂಧಿಯನ್ನು ಒಪ್ಪುವಂಥವನು. ನಮ್ಮ ಭಾರತದಂತಹ ಪ್ರಜಾತಂತ್ರ ವ್ಯವಸ್ಥೆಯಲ್ಲಂತೂ ಹಿಂಸೆಗಿಂತ-ಅದರಲ್ಲೂ ಸೈದ್ಧಾಂತಿಕ ಹಿಂಸೆಗಿಂತ-ಶಕ್ತಿಶಾಲಿಯೂ ಫಲಕಾರಿಯೂ ಆದ ಅನೇಕಾನೇಕ ಅನ್ಯ ಮಾರ್ಗಗಳಿರುವಾಗ ಗುಪ್ತ ಕಾರ್ಯಸೂಚಿ-ಹಿಡನ್ ಅಜೆಂಡಾಗಳನ್ನು ಒಳಗೊಂಡ ಈ ಮಾದರಿಯ ರಾಜಕಾರಣ ನಿಶ್ಚಿತವಾಗಿಯೂ ನ್ಯಾಯಸಮ್ಮತವಲ್ಲ. ಈ ಮಾರ್ಗದ ಅನುಯಾಯಿಗಳ ಒಟ್ಟಿಗೆ ನಾನೂ ಕೆಲ ಕಾಲ ಒಡನಾಡಿದ್ದೇನೆ. ಅವರೊಂದಿಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದಾಗ್ಯೂ ನಮ್ಮಿಬ್ಬರಿಗೂ ಸಮಾನವಾದ ಉದ್ದೇಶಗಳ ಹೊಂದಿದ್ದ ಸಾಮವಾದಿ ಚಟುವಟಿಕೆಗಳಲ್ಲಿ ಅವರೊಂದಿಗೆ ಭಾಗಿಯಾಗಿದ್ದೇನೆ. ಅಲ್ಲೆಲ್ಲ ನನಗೆ ನಿಧಾನಕ್ಕೆ ಅನುಭವಕ್ಕೆ ಬರತೊಡಗಿತು; ಅವರು ಎಷ್ಟೇ ನಮ್ಮೊಂದಿಗಿದ್ದರೂ ತಮ್ಮದೇ ಆದ ಗೂಢ ಗುರಿಗಳನ್ನು ಹೊಂದಿರುತ್ತಾರೆ. ಅವುಗಳನ್ನು ಬಹಳ ಗುಟ್ಟಾಗಿ ಕಾಪಾಡಿಕೊಂಡಿರುತ್ತಾರೆ. ಇದರ ಅರಿವಾಗುತ್ತಿದ್ದಂತೆ ನನಗೆ ಅವಮಾನವಾಗತೊಡಗಿ, ನಾನು ಅವರಿಂದ ದೂರವಾದೆ. ಇಂಥವರೊಬ್ಬರು, ನಾನು ಎಡಪಂಥೀಯರ ಬಗ್ಗೆ ತುಸು ಸಹಾನುಭೂತಿ ಉಳ್ಳವನು ಎಂದು ತಿಳಿದಿದ್ದ ಪರಿಚಿತರೊಬ್ಬರು, ವರುಷಗಳ ಹಿಂದೆ, ನಾನು ಮೈಸೂರಿನಲ್ಲಿದ್ದಾಗ, ಅಪರಾತ್ರಿಯಲ್ಲಿ ಬಂದು ಮನೆಯ ಬಾಗಿಲು ತಟ್ಟಿದರು, ಎಲ್ಲೋ ಒಂದೆಡೆ ತುರ್ತಿನ ಸನ್ನಿವೇಶ ಸೃಷ್ಟಿಯಾಗಿ ಅಲ್ಲಿ ನಿಮ್ಮ ಸಹಾಯದ ಅವಶ್ಯಕತೆಯಿದೆ, ನನ್ನೊಡನೆ ಬರುವಿರೋ ಎಂದು ಕೇಳಿದರು. ನಾನು, ಸಹಜ ಕಾಳಜಿಯಿಂದ ತಕ್ಷಣಕ್ಕೆ ಹೊರಟು ನಿಂತೆ. ಆಗ ಅವರು, ಇಲ್ಲ, ನೀವು ಎಲ್ಲಿಗೂ ಬರಬೇಕಾಗಿಲ್ಲ, ನಾನು ಸುಮ್ಮನೆ ನಿಮ್ಮ ನಿಷ್ಠೆಯ ಆಳವನ್ನು ಅಳೆಯಲು ಹೀಗೆ ನೆಪ ಹೇಳಿ ಕರೆದೆ ಅಷ್ಟೆ ಅಂದರು. ನನಗೆ ಅವರ ಬಗ್ಗೆ ಕೋಪಕ್ಕಿಂತ ತಿರಸ್ಕಾರ ಮೂಡಿ, ಇನ್ನು ನೀವೆಂದೂ ನಮ್ಮ ಮನೆಗೆ ಬರಬೇಡಿ ಎಂದು ಅವರಿಗೆ ಹೇಳಿದೆ. ಬೆಳಕಲ್ಲಿ ಒಂದು ಮುಖ ತೋರಿ ಕತ್ತಲಲ್ಲಿ ಮತ್ತೊಂದೆ ಮುಖ ತೋರುವ ಈ ಬಗೆಯ ಸಂಘಟನೆಗಳು, ಈ ಬಗೆಯ ಕಾರ್ಯಯೋಜನೆಗಳು ಅತ್ಯಂತ ಅಪಾಯಕಾರಿಯಾದುವು. ಪ್ರಜಾಪ್ರಭುತ್ವದಲ್ಲಿದ್ದೂ ಮುಕ್ತ ಚರ್ಚೆ ಮುಕ್ತ ಚಟುವಟಿಕೆಗಳ ದಾರಿಯನ್ನು ಬಿಟ್ಟು ಕೋವಿಯ ರಾಜಕೀಯ ಮಾಡುವ ಇಂಥವರಿಗೆ ಕೊನೆಗೆ ಅವರ ತಂತ್ರಗಳೇ ತಿರುಗಿ ಏಟು ಕೊಡುತ್ತವೆ. ಅವರ ಕೈಯಲ್ಲಿನ ಕೋವಿ ಕೊನೆಗೂ ಅವರ ಬಾಯಿ ಟೀಕಿಸುವ ಯಾವುದೋ ಒಂದು ವಿದೇಶಿ ಮೂಲದಿಂದಲೇ ಬಂದಿರುತ್ತದೆ ಎಂಬ ಐತಿಹಾಸಿಕ ವ್ಯಂಗ್ಯವನ್ನು ಅರಿಯದ ಅವರು ಕೊನೆಗೆ ಅಂಥ ವ್ಯಂಗ್ಯದಿಂದ ಹುಟ್ಟುವ ದುರಂತಕ್ಕೆ ಈಡಾಗುತ್ತಾರೆ. ತಾವು ಮಾತ್ರ ತಮ್ಮ ದೇಶವನ್ನು ಉಳಿಸುವಂಥವರು ಎಂಬ ಗರ್ವಜನ್ಯ ಭ್ರಮೆಯಲ್ಲಿ ಅವರು ಅಂತಿಮವಾಗಿ ಹಿಂಸೋದ್ಯಮದಿಂದಲೆ ಬಲಿಷ್ಠಗೊಂಡ ಯಾವುದೋ ಅನ್ಯದೇಶದ ಸಂಸ್ಥೆ-ಸರ್ಕಾರಗಳ ದೈತ್ಯ ಫಿರಂಗಿಗಳಿಗೆ ತಾವೇ ತುತ್ತಾಗುತ್ತಾರೆ.

ಈ ಶಿಬಿರದಲ್ಲಿ ಮೊನ್ನೆ ಲೇಖಕಿ ವೈದೇಹಿ ತಮ್ಮ ಕಥೆಯೊಂದನ್ನು ನಮ್ಮೆದುರು ಓದಿದರು. ಇಲ್ಲಿ ನಾವು ಒಂದೆಡೆ, ಸಾಮಾಜಿಕ, ರಾಜಕೀಯ, ಮತೀಯ ವಲಯಗಳಲ್ಲಿನ ಹಿಂಸೆಯ ಸ್ಥೂಲರೂಪಗಳ ಕುರಿತು ಹಾಗೂ ಕಣ್ಣು ಕುರುಡಾಗಿಸುವಂತಹ ಬೃಹದ್ ಹಿಂಸಾರೂಪಗಳ ಕುರಿತು ಶಾಸ್ತ್ರೀಯ ಪರಿಭಾಷೆಯ ಚರ್ಚೆಗಳನ್ನು ನಡೆಸುತ್ತಿದ್ದರೆ ಇನ್ನೊಂದೆಡೆಯಿಂದ ವೈದೇಹಿ ಆ ಕಥೆಯ ಮೂಲಕ, ನಮ್ಮ ಕೌಟುಂಬಿಕ ಹಾಗೂ ವೈವಾಹಿಕ ವ್ಯವಸ್ಥೆಗಳಲ್ಲಿ ಗುಪ್ತವಾಗಿ ಅಡಗಿರುವ ಹಿಂಸಾರೂಪದ ಬಗ್ಗೆ, ಕಣ್ಣಿಗೆ ಕಾಣದಂತಹ ಆ ಸೂಕ್ಷ್ಮ ರೂಪದ ಹಿಂಸೆಯ ಬಗ್ಗೆ ನಮ್ಮನ್ನು ಎಚ್ಚರಿಸಿದರು. ಈ ಹಿಂಸೆಯೂ ವಾಸ್ತವದ ಒಂದು ಕಟುಮುಖ ತಾನೇ? ಅದೂ ನಮ್ಮೆಲ್ಲರ ನಡೆನುಡಿಗಳ ಒಂದು ಕಹಿ ಫಲ ತಾನೆ? ಕಲೆ ಮತ್ತು ಸಾಹಿತ್ಯಗಳು ಸಾಧಿಸುವುದು ಇದನ್ನೆ, ನಾವು ನಿತ್ಯ ನೋಡಿಯೂ ಕಾಣದೆ ಹೋದ ಸತ್ಯಗಳನ್ನು ಮತ್ತೆ ಒತ್ತಾಯಿಸಿ ತೋರುವುದನ್ನೆ, ಹಿಂಸೆಯನ್ನು ಸಾಮಾನ್ಯವಾಗಿ ನಿತ್ಯಸಾಧಾರಣ ಹಿಂಸೆ ಹಾಗೂ ಉಲ್ಬಣಸ್ಥಿತಿಯ ಹಿಂಸೆಯೆಂದು ಎರಡು ರೂಪಗಳಾಗಿ ವಿಭಜಿಸಬಹುದು. ಮೇಲ್ನೋಟಕ್ಕೆ ಅವೆರಡು ಬೇರೆ ಬೇರೆಯೆಂದು ಕಂಡರೂ ನಿತ್ಯಸಾಧಾರಣವಾದ ಹಿಂಸೆಯೆ ಕೊನೆಗೆ ಉಲ್ಬಣರೂಪದ ಹಿಂಸೆಯಾಗಿ ಪರಿವರ್ತಿತವಾಗುವಂಥದು. ಕಲೆ-ಸಾಹಿತ್ಯಗಳು ನಮ್ಮೆಲ್ಲರಲ್ಲೂ ಅಂತಸ್ಥವಾಗಿದ್ದು ಮುಂದೆಂದೋ ಉಲ್ಬಣಗೊಳ್ಳಬಹುದಾದ ನಿತ್ಯಸಾಧಾರಣ ರೂಪದ ಹಿಂಸೆಯಿದೆಯಲ್ಲ ಅದರೊಂದಿಗೆ, ಮುಖಾಮುಖಿಯಾಗುವ ಕಾರ್ಯವನ್ನು ಅತ್ಯುತ್ಕೃಷ್ಟವಾಗಿ ನಿರ್ವಹಿಸುತ್ತವೆ; ಆ ಸಮಸ್ಯೆಯನ್ನು ನಾವು ಧ್ಯಾನಸ್ಥಸ್ಥಿತಿಯಲ್ಲಿ ಅರ್ಥೈಸಿಕೊಂಡೆ ಅದನ್ನು ಮೀರುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಅದೇ, ಉಲ್ಬಣಸ್ಥಿತಿಯ ಹಿಂಸೆಯೊಡನೆ ಮುಖಾಮುಖಿಯಾಗುವಲ್ಲಿ, ಪ್ರಾಯಶಃ ಕಲೆ-ಸಾಹಿತ್ಯಗಳಿಗಿಂತ ಸಮಾಜೋ-ರಾಜಕೀಯ ಕ್ರಿಯಾಶೀಲತೆ (ಸೋಷಿಯೋ-ಪೊಲಿಟಿಕಲ್ ಆಕ್ಟಿವಿಸಮ್)ಯೆ ಹೆಚ್ಚು ಸೂಕ್ತವಾದ ಹಾಗೂ ಸಮರ್ಥವಾದ ದಾರಿಯೇನೋ. ಆದರೆ ಈ ಎರಡನೆಯ ಮಾರ್ಗದಲ್ಲೂ ಕೂಡ ಕಲೆ-ಸಾಹಿತ್ಯಗಳನ್ನು ಮಹತ್ವನ್ನು ಅಲಕ್ಷಿಸುವಂತಿಲ್ಲ. ಏಕೆಂದರೆ, ಅವು ಬಹಿರಂಗ-ಅಂತರಂಗಗಳೆರಡನ್ನೂ ಗೋಚರ-ಅಗೋಚರಗಳೆರಡನ್ನೂ ಹಿರಿದು-ಕಿರಿದುಗಳೆರಡನ್ನೂ ಒಟ್ಟೊಟ್ಟಿಗೆಯೆ ಶೋಧಿಸುತ್ತವೆ; ಆ ಮೂಲಕ ವಾಸ್ತವವನ್ನು ಹೆಚ್ಚು ಹೆಚ್ಚು ಸಮಗ್ರತೆಯಲ್ಲಿ ನಮ್ಮ ಮುಂದೆ ತಂದಿಡುತ್ತವೆ.

ಈ ನಿಟ್ಟಿನಲ್ಲಿ, ಹಿಂಸೆಯನ್ನೆ ತನ್ನ ಪ್ರಧಾನ ವಸ್ತುಗಳಲ್ಲೊಂದನ್ನಾಗಿ ಹೊಂದಿರುವ ಷೇಕ್‌ಸ್ಪಿಯರ್ ‘ಹ್ಯಾಮ್ಲೆಟ್’ ನಾಟಕವನ್ನು ನೆನಪಿಸಿಕೊಳ್ಳಿ. ಅಲ್ಲಿ ನಾಯಕ ಹ್ಯಾಮ್ಲೆಟ್‌ನ ಮನದಲ್ಲಿ, ತನ್ನ ಅಪ್ಪನ ಅಕಾಲಿಕ ಮರಣಕ್ಕೆ ತನ್ನ ಚಿಕ್ಕಪ್ಪನೇ ಕಾರಣನಾಗಿರಬೇಕೆಂಬ ಸಂಶಯದ ಸಣ್ಣಸುಳಿಯೊಂದು ಮೊದಲೆ ಎದ್ದಿರುತ್ತದೆ. ಆ ನಡುವೆ ಆತನ ಅಪ್ಪನ ಪ್ರೇತವೇ ಬಂದು, ನನ್ನನ್ನು ಕೊಲೆಗೈದವನು ನನ್ನ ತಮ್ಮನೇ, ನಿನ್ನ ಚಿಕ್ಕಪ್ಪನೇ, ಈಗ ನೀನು ಅವನನ್ನು ಕೊಂದು ಪ್ರತೀಕಾರಗೈದರಷ್ಟೆ ನನಗೆ ಸಮಾಧಾನವಾಗುವುದು ಎಂದು ಹೇಳುತ್ತದೆ. ಅದನ್ನು ನಂಬಿ ಚಿಕ್ಕಪ್ಪನನ್ನು ಕೊಲ್ಲಲು ಹೊರಡುತ್ತಿದ್ದಂತೆಯೇ ಹ್ಯಾಮ್ಲೆಟ್‌ಗೆ, ಪ್ರತೀಕಾರಗೈಯುವುದೇನೋ ಸರಿ, ಆದರೆ ಪ್ರೇತವೊಂದರ ಮಾತನ್ನು ಅದು ಸ್ವಂತ ತಂದೆಯ ಪ್ರೇತಾಗಿದ್ದರೂ ಕೂಡ-ಸತ್ಯವೆಂದು ನಂಬುದು ಹೇಗೆ ಎಂಬ ಸಂಶಯ ಕಾಡತೊಡಗುತ್ತದೆ. ಅದಕ್ಕೆ ಇನ್ನುಷ್ಟ ಸಂಶಯಾತೀತವಾದ ಸಾಕ್ಷ್ಯವನ್ನು ಬಯಸಿ ಆತ ಚಿಕ್ಕಪ್ಪನೆದುರು, ಆತ ಮಾಡಿದನೆಂದು ತಂದೆ ಹೇಳಿದ ರೀತಿಯ ದುಷ್ಕೃತ್ಯವನ್ನೆ ಹೋಲುವಂತಹ ವಿವರವನ್ನು ಕೇಂದ್ರವಾಗಿಟ್ಟುಕೊಂಡ ಒಂದು ಪುಟ್ಟ ನಾಟಕವನ್ನು-ನಾಟಕದೊಳಗೊಂದು ನಾಟಕವನ್ನು-ಆಡಿಸುತ್ತಾನೆ. ಅಲ್ಲಿ ಚಿಕ್ಕಪ್ಪ ತೋರಿದ ಪ್ರತಿಕ್ರಿಯೆ ಅಪ್ಪನ ಪ್ರೇತದ ಆರೋಪಕ್ಕೆ ಪುಷ್ಟಿಯನ್ನೇ ಒದಗಿಸುತ್ತದೆ. ಸರಿ, ಇನ್ನು ಯಾವುದೇ ಭಯವಿಲ್ಲದೆ ಚಿಕ್ಕಪ್ಪನನ್ನು ಕೊಲ್ಲಬಹುದೆಂದು ಹೊರಡುವ ಹೊತ್ತಿಗೆ ಹ್ಯಾಮ್ಲೆಟ್‌ನಲ್ಲಿ ಒಟ್ಟೂ ಸೇಡಿನ ಭಾವದ ಬಗ್ಗೆಯೆ ಹೊಸ ಸಂದೇಹಗಳು ಮೂಡುತ್ತವೆ, ಒಟ್ಟೂ ಹಿಂಸೆಯ ಬಗ್ಗೆಯೆ ಹೊಸ ಸಂಶಯಗಳು ಕಾಡಲಾರಂಭಿಸುತ್ತವೆ. ತನ್ನ ಹೊರಗಿನ ಹಿಂಸೆಯಿಂದೆಷ್ಟೋ ಅಷ್ಟೇ ತನ್ನೊಳಗಿನ ಹಿಂಸೆಯಿಂದಲೂ ಆತ ವಿಹ್ವಲಗೊಳ್ಳುತ್ತಾನೆ. ಉದ್ದಕ್ಕೂ ಆತ ಹಿಂಸೆಯ ಕುರಿತಾಗಿ ಅನಂತ ದ್ವಂದ್ವದಲ್ಲಿ ತೊಳಲಾಡುತ್ತಿರುವ ಹೊತ್ತಿಗೆ ನಾಟಕ ಹಿಂಸೆಯ ಸಮಸ್ಯಾತ್ಮಕತೆಯ ಕುರಿತಾಗಿ ಷೇಕ್‌ಸ್ಪಿಯರನ ಭಾಷ್ಯವೆಂಬಂತೆ ಬೆಳೆಯುತ್ತದೆ. ಶ್ರೇಷ್ಠ ಕಲಾಕೃತಿಗಳ ಅತಿ ಮುಖ್ಯ ಗುಣವೇ ಇದು; ಅವು ಯಾವುದೋ ಒಂದು ರೀತಿಯಲ್ಲಾದರೂ ಹಿಂಸೆಯ ರೂಪ-ಲಕ್ಷಣಗಳನ್ನು ನಿರುದ್ವಿಗ್ನವಾಗಿ ಪರಿಶೀಲಿಸುತ್ತವೆ; ಆ ವಿಷಯದಲ್ಲಿ ನಾವು ಆತ್ಮ ಪರೀಕ್ಷೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತವೆ, ಯಾವುದೋ ಅತ್ಯಾತುರದ ಹಾಗೂ ಗೊಡ್ಡು ನೈತಿಕತೆಯ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ನಮ್ಮನ್ನು ತಡೆಯುತ್ತವೆ.

ಹಿಂಸೆಯ ಸವಾಲನ್ನು ಕಲೆ ಈ ಬಗೆಯಲ್ಲಿ ಉತ್ತರಿಸುವುದಾದರೆ, ನಮ್ಮ ಆಧುನಿಕ ಸಮೂಹ ಮಾಧ್ಯಮಗಳು ಅದನ್ನು ಎದುರಿಸುವುದು ತದ್ವಿರುದ್ದವೆಂದೆ ತೋರುವ ಬಗೆಯಲ್ಲಿ, ನಮ್ಮಲ್ಲಿ ಅಪಸಂವೇದನೆಯನ್ನು ಬೆಳೆಸುವ ರೀತಿಯಲ್ಲಿ. ಇದು ನಮ್ಮ ವರ್ತಮಾನದ ದುಃಖಕರ ಬೆಳವಣಿಗೆಗಳಲ್ಲಿ ಒಂದೆಂದೇ ಹೇಳಬೇಕು. ಎಲ್ಲವೂ ಅಲ್ಲದಿದ್ದರೂ ಈ ಸಮೂಹ ಮಾಧ್ಯಮದ ಶಾಖೆಗಳಲ್ಲಿ ಬಹುಸಂಖ್ಯೆಯವು ಬಹು ಪ್ರಸಂಗಗಳಲ್ಲಿ, ನಿತ್ಯಸಾಧಾರಣಸ್ತರದಲ್ಲಿದ್ದ-ಆ ಕಾರಣದಿಂದಲೆ ಅಲ್ಪಪ್ರಭಾವಿಯೂ ಶೀಘ್ರದಲ್ಲಿಯೆ ನಿಯಂತ್ರಣಕ್ಕೆ ಬರುವಂಥದೂ ಆಗಿದ್ದ-ಹಿಂಸಾರೂಪಗಳನ್ನು ಉಲ್ಬಣಗೊಳ್ಳುವಂತೆ ಮಾಡುತ್ತವೆ. ತಮಗೆ ಸಿಕ್ಕ ದೃಶ್ಯ-ಧ್ವನಿ ಖಂಡಗಳನ್ನು ಅಖಂಡವಾಗಿ ಪ್ರಸಾರ ಮಾಡುವ ತಮ್ಮ ‘ಸಹಜ’ ಕ್ರಮದಿಂದಲೇ ಅಮಾನುಷವಾದ ಹಿಂಸೆಯನ್ನು ನಿತ್ಯಸಾಮಾನ್ಯದ ಮಟ್ಟಕ್ಕೆ ಇಳಿಸುತ್ತವೆ. ಇದಕ್ಕೆ ಮೇಧಾಪಾಟ್ಕರ್ ಹಾಗೂ ಪ್ರವೀಣ್ ತೊಗಾಡಿಯಾರಂಥವರ ವಿಷಯದಲ್ಲಿ ಮಾಧ್ಯಮಗಳು ನಡೆದುಕೊಂಡದ್ದಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಮೇಧಾ ಪಾಟ್ಕರ್ ತನ್ನೆಲ್ಲ ಸ್ವಂತ ಸುಖಸೌಕರ್ಯಗಳನ್ನು ತ್ಯಾಗ ಮಾಡಿ, ಆಧುನಿಕ ರಾಷ್ಟ್ರ ನಿರ್ಮಾಣದ ಶಕ್ತಿಗಳು ಛೂಬಿಟ್ಟ ಪ್ರತ್ಯಕ್ಷ ಹಾಗೂ ಪರೋಕ್ಷ ಹಿಂಸೆಯೆದುರು ಗಾಂಧಿ ಮಾರ್ಗದಲ್ಲಿ ಅತ್ಯಂತ ಅಹಿಂಸಾತ್ಮಕವಗಿ ದಶಕಗಟ್ಟಲೆ ಹೋರಾಟ ನಡೆಸಿದ್ದು ನಮ್ಮ ಮಾಧ್ಯಮಗಳಿಗೆ ಗಮನಕ್ಕೆ ಅರ್ಹವಾದ ಸಂಗತಿಯೆಂದೇ ಅನಿಸಲಿಲ್ಲ. ಆಕೆಯ ವ್ಯಕ್ತಿತ್ವದ ಹಾಗೂ ಆಂದೋಲನದ ಮಾದರಿಯ ಘನತೆಯನ್ನು ಜನರಿಗೆ ಪರಿಚಯಿಸುವುದರ ಮೂಲಕ ತಮ್ಮ ಸಾಮಾಜಿಕ ಕರ್ತವ್ಯವನ್ನು ಕಿಂಚಿತ್ತಾದರೂ ನಿರ್ವಹಿಸಬಹುದೆಂದು ಅವರಿಗೆ ಅನಿಸಲೇ ಇಲ್ಲ. ಅದೇ ತೋಗಾಡಿಯಾನಂಥವರ ಅಮಾನವೀಯ ಕೃತ್ಯಗಳು ಹಾಗೂ ಮಾತುಗಳಿಗೆ ಅವರು ಪುಟಗಟ್ಟಲೆ ಜಾಗ ನೀಡಿದರು. ಟೆಲಿವಿಷನ್ ಚಾನೆಲ್‌ಗಳಲ್ಲಿ ಗಂಟೆಗಟ್ಟಲೆ ಸಮಯಾವಕಾಶ ಕೊಟ್ಟರು, ಆ ಮೂಲಕವೇ ಕೆಲವೇ ತಿಂಗಳುಗಳಲ್ಲಿ ಆತನ ಹೆಸರು ರಾಷ್ಟ್ರವ್ಯಾಪಿಯಾಗಿ ಪ್ರತಿಧ್ವನಿಸುವಂತೆ ಮಾಡಿದರು. ಅವರು ತೊಗಾಡಿಯಾನನ್ನು ಸಮರ್ಥಿಸಿ ಹಾಗೆ ಮಾಡಿದ್ದಲ್ಲವೆಂಬುದು ನನಗೂ ಗೊತ್ತು; ಆದರೆ ಆತನನ್ನು ಟೀಕೆಗೀಡುಮಾಡಲೆಂದಾದರೂ ಅವರು ಆತನಿಗೆ ಅಷ್ಟೊಂದು ಪ್ರಾಮುಖ್ಯ ಕೊಟ್ಟರಲ್ಲ, ಅದರ ಅಲ್ಪಾಂಶವನ್ನಾದರೂ ಮೇಧಾಪಾಟ್ಕರ್‌ಗೆ ಕೊಡಲಿಲ್ಲವಲ್ಲ. ಇದರ ಒಟ್ಟೂ ಪರಿಣಾಮವನ್ನು ಗಮನಿಸಿ: ಇಂದು ನಮ್ಮ ಸಾಮುದಾಯಕ ಪ್ರಜ್ಞೆಯನ್ನು ತೊಗಾಡಿಯಾರಂಥವರೇ ಆಕ್ರಮಿಸಿಕೊಂಡಿದ್ದಾರೆ- ಹೀಗಾಗಿರುವುದು ನೇತ್ಯಾತ್ಮಕವಾದ ಅರ್ಥದಲ್ಲೆ ಇರಬಹುದು. ಆದರೆ ಅಲ್ಲಿ ಮೇಧಾಪಾಟ್ಕರರಂತಹ ಜೀವತಾರಕ ವ್ಯಕ್ತಿತ್ವಗಳಿಗೆ ಜಾಗವೆ ಇಲ್ಲದಂತಾಗಿದೆಯಲ್ಲ ಎಂಬುದು ನಮಗೆಲ್ಲ ಲಜ್ಜೆ ಹುಟ್ಟಿಸಬೇಕು. ಯಾರದ್ದಾದರೂ ಪುಣ್ಯಕೃತ್ಯಗಳ ಬಗ್ಗೆ ಪುಟ್ಟ ಮಾತನಾಡುವುದಕ್ಕೂ ಸಮಯ ಉಳಿಸಿಕೊಳ್ಳದಂತೆ ನಾವು ಪರರ ಪಾಪಕೃತ್ಯಗಳ ಖಂಡನೆಯಲ್ಲೇ ಮಗ್ನರಾಗಿದ್ದರೆ, ಕೊನೆಗೆ ನಮಗೂ ಅದೇ ಪಾಪದ ಚಟ ಅಂಟಿಬಿಡುತ್ತದೆಯೆನ್ನುವ ಪಾರಂಪರಿಕ ವಿವೇಕದ ಮಾತನ್ನು ಇದು ನಮಗಿಂದು ನೆನಪಿಸಿಕೊಡಬೇಕು.

ಅಂತರಂಗ-ಬಹಿರಂಗಗಳ ನಡುವಿನ ಅವಿನಾಭಾವ ಅಂತಃಸ್ಸಂಬಂಧದ ಕುರಿತು ನಾವು ಇದುವರೆಗೆ ಕಟ್ಟಿಕೊಳ್ಳುತ್ತ ಬಂದ ಕಾಲಪಕ್ವ ಪರಿಕಲ್ಪನೆಯನ್ನು ಆಧೂನಿಕ ಮಾಧ್ಯಮಗಳು ಹೀಗೆ ಛಿದ್ರಗೊಳಿಸಿರುವುದೇನೋ ಹೌದು, ಆದರೆ ಕೆಲವರು ಆಧುನಿಕ ನಾಯಕರು ಆ ಪರಿಕಲ್ಪನೆಯನ್ನು ಈಗ ಪುನರುಜ್ಜೀವನಗೊಳಿಸುತ್ತಿದ್ದಾರೆ ಎನ್ನುವುದೂ ಹೌದು-ಅವರು ಅದನ್ನು ಮಾಡುತ್ತಿರುವುದು ಅತ್ಯಂತ ವಕ್ರವಾದ ರೂಪದಲ್ಲಿ ಎನ್ನುವುದೂ ಹೌದು. ಅಮೇರಿಕಾದ ಈಗಿನ ಅಧ್ಯಕ್ಷ ಜಾರ್ಜ್ ಬುಶ್ ಇದಕ್ಕೊಂದು ಉದಾಹರಣೆ. ತನ್ನನ್ನು ‘ಬಾರ್ನ್ ಅಗೇನ್ ಕ್ರಿಶ್ಚಿಯನ್’ ಎಂದು ಗುರುತಿಸಿಕೊಳ್ಳುವ ಆತ ಹೇಳಿಕೊಳ್ಳುವ ಪ್ರಕಾರ, ಇರಾಕ್‌ನ ಮೇಲೆ ಯುದ್ಧ ನಡೆಸಲು ಆತನಿಗೆ ಯೇಸು ಕ್ರಿಸ್ತನೆ ಎದುರಿಗೆ ಬಂದು ಪ್ರೇರೇಪಣೆ ನೀಡಿದ್ದನಂತೆ. ಬಾಹ್ಯ ಜೀವನದ ಖೂಳತನಕ್ಕೆ ಅಂತಸ್ಸಾಕ್ಷಿಯ ಸಮರ್ಥನೆ ಒದಗಿಸುವ ಇಂಥ ನಡವಳಿಕೆಯಿದೆಯಲ್ಲ, ಇದಕ್ಕಿಂತ ಹೇಯವಾದುದು ಬೇರೊಂದುಂಟೆ? ಈ ಬುಶ್ ಹಿಂದೆ ಟೆಕ್ಸಾಸ್‌ನ ಗವರ್ನರನಾಗಿದ್ದಾಗ ಕಾನೂನಿನ ಹೆಸರಿನಲ್ಲಿ ಆ ರಾಜ್ಯದ ನೂರಾರು ಜನರನ್ನು ವಧೆಗೈದ; ಈಗ ಅಮೇರಿಕಾದ ಅಧ್ಯಕ್ಷನಾಗಿ, ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಸ್ಥಾಪಿಸುವ ಸೋಗಿನಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಜನರ ನರಮೇಧ ನಡೆಸುತ್ತಿದ್ದಾನೆ. ದುರಂತವೆಂದರೆ, ನಮ್ಮ ಕಾಲದ ಅನೇಕ ಆಧುನಿಕ ರಾಷ್ಟ್ರಗಳು ಈಗ ಬುಶ್‌ನದ್ದೇ ಮಾದರಿಯನ್ನು ಅನುಸರಿಸುತ್ತಿವೆ; ಆತ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಸಗುತ್ತಿರುವ ಅಮಾನವೀಯ ಕೃತ್ಯಗಳನ್ನೇ ಇವು ಆಂತರಿಕ ಮಟ್ಟದಲ್ಲಿ ಎಸಗುತ್ತಿವೆ. ಬುಶ್‌ನದು ಒಂದು ರೀತಿಯಲ್ಲಿ ಉಲ್ಬಣಾವ್ಯವಸ್ಥೆಯ ಹಿಂಸೆಯಾದರೆ ಈ ರಾಷ್ಟ್ರಪ್ರಭುತ್ವಗಳದ್ದು ನಿತ್ಯಸಾಧಾರಣವಾದ ಹಿಂಸೆ. ಈ ಪ್ರಭುತ್ವಗಳು ಈಗ, ಅಭಿವೃದ್ಧಿ-ಸುರಕ್ಷತೆ-ಪ್ರಜಾಪ್ರಭುತ್ವ-ಕಾನೂನುಗಳ ಹೆಸರಿನಲ್ಲೇ, ತಮ್ಮದೇ ಪ್ರಜೆಗಳ ಮೇಲೆ ಅಪಾರವಾದ ಪ್ರತ್ಯಕ್ಷ ಹಾಗೂ ಪರೋಕ್ಷ ಹಿಂಸಾಚಾರವನ್ನು ನಡೆಸುತ್ತಿವೆ; ಈ ಹಿಂಸೆಗೆ ಈಗ ಒಂದು ಹೆಸರೂ ಇದೆ-‘ಪ್ರಭುತ್ವ ನಡೆಸುವ ಹಿಂಸೆ/ಭಯೋತ್ಪಾದನೆ’ ಅಥವಾ ‘ಸ್ಟೇಟ್ ವಯಲೆನ್ಸ್/ಟೆರರಿಸಮ್’. ದೈತ್ಯ ರಾಷ್ಟ್ರಾಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ, ನೂರಾರು ವರುಷಗಳಿಂದ ಒಂದೆಡೆ ನೆಲೆಯಾಗಿದ್ದ ಲಕ್ಷಗಟ್ಟಲೆ ಜನರನ್ನು ನಿರ್ಗತಿಕರನ್ನಾಗಿಸುವುದು ಇಂತಹ ಸರ್ಕಾರಿ ಹಿಂಸೆಯ ಒಂದು ಮುಖವಾದರೆ, ವ್ಯವಸ್ಥೆಯ ವಿಷಮತೆಯ ವಿರುದ್ಧ ದನಿಯೆತ್ತಿದವರನ್ನು, ರಾಷ್ಟ್ರ ಸುರಕ್ಷತೆಯ ನೆಪದಲ್ಲಿ, ಎನ್‌ಕೌಂಟರ್‌ಗಳ ಮೂಲಕ ನಿರ್ಮೂಲನಗೈಯುವುದು ಇದರ ಇನ್ನೊಂದು ಮುಖ. ಇವೆರಡು ತುದಿಗಳ ನಡುವೆ ಈ ಹಿಂಸೆ ಅನೇಕಾನೇಕ ಛಾಯೆಗಳಲ್ಲೂ ಕಾಣಿಸಿಕೊಳ್ಳುತ್ತದೆ.

ವಿಜ್ಞಾನಿ-ತತ್ವಜ್ಞಾನಿಯೆರಡೂ ಆಗಿರುವ ಸುಂದರ್ ಸಾರುಕ್ಕೈ ಇಲ್ಲಿ ತೋರಿಸಿಕೊಟ್ಟಂತೆ, ಆಧುನಿಕ ವಿಜ್ಞಾನ-ತಂತ್ರಜ್ಞಾನಗಳದ್ದು ಇಂಥದೊಂದು ಮಧ್ಯಛಾಯೆಯ ಹಿಂಸೆ. ಈ ಹಿಂಸೆ ನಮ್ಮ ಎದುರಿನ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಒಂದೆಡೆ ಆಧೂನಿಕ ವಿಜ್ಞಾನದ ಜ್ಞಾನಾರ್ಜನೆಯ ಮಾರ್ಗವೇ ನಮ್ಮ ಜ್ಞಾನಲಾಭಕ್ಕೆಂದು ಪರರನ್ನು ಹಿಂಸೆಗೊಳಪಡಿಸುವಂಥದು; ಇನ್ನೊಂದೆಡೆ, ಅದರ ಅವಳಿಯಾದ ಆಧುನಿಕ ತಂತ್ರಜ್ಞಾನ ನಮ್ಮೆಲ್ಲರ ಜೀವಾಧಾರವಾದ ಪರಿಸರವನ್ನು ಎಣೆಯಿಲ್ಲದಂತೆ ನಾಶ ಮಾಡುವಂಥದು. ಈ ಹಿಂಸೆ ಮೇಲ್ನೋಟಕ್ಕೆ ಮಧ್ಯಮಛಾಯೆಯ ಹಿಂಸೆಯೆಂದು ಅತಿರೇಕಿಯಲ್ಲದ ಹಿಂಸೆಯೆಂದು ಕಂಡರೂ ಆಳದಲ್ಲಿ ಅದು ಎಡ-ಬಲಗಳ ಅತಿರೇಕದ ಹಿಂಸಾರೂಪಗಳ ಸೃಷ್ಟಿಮೂಲವೇ ಆಗಿದೆ. ಏಕೆಂದರೆ ಆಧುನಿಕ ವಿಜ್ಞಾನ-ತಂತ್ರಜ್ಞಾನಗಳು ಪ್ರತಿಪಾದಿಸುವ ಪ್ರಗತಿಯ ರೂಪವನ್ನು ಎಡ-ಬಲ ರಾಜಕೀಯ ಪಂಥಗಳೆರಡೂ-ತಮ್ಮ ಬೇರೆಲ್ಲ ಕಡುವಿರೋಧಗಳ ನಡುವೆಯೂ-ಅವಿರೋಧವಾಗಿ ಸಮಾನವಾಗಿ ಆದರ್ಶ ಪ್ರಗತಿಯ ರೂಪವೆಂದೇ ಸ್ವೀಕರಿಸಿವೆ. ಹಾಗಾಗಿ, ಇಂದು ಆಧುನಿಕ ವಿಜ್ಞಾನ-ತಂತ್ರಜ್ಞಾನಗಳಿಲ್ಲದೆಯೆ ಆಧುನಿಕ ರಾಷ್ಟ್ರ ನಿರ್ಮಾಣವಿಲ್ಲ. ಇವೆರಡೂ ಶಕ್ತಿಕೇಂದ್ರಗಳ ಸಹಕಾರ್ಯಾಚರಣೆಯಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತಲೂ ಭೌತಿಕ ಸಂಪನ್ಮೂಲಗಳು ಕೆಲವೇ ಕೆಲವರ ಸ್ವತ್ತಾಗುತ್ತಲೂ ಬಂದಂತೆ ಎಡ ಬದಿಯ ಹಿಂಸೆ ಉಲ್ಬಣಿಸುತ್ತದೆ; ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಪತ್ತು ಕಣ್ಮರೆಯಾಗುತ್ತಿದ್ದಂತೆ ಬಲ ಬದಿಯ ಹಿಂಸೆ ಉಲ್ಬಣಿಸುತ್ತದೆ. ವಿಲಕ್ಷಣದ್ವಂದ್ವದ ಈ ಪ್ರಕ್ರಿಯೆಯನ್ನು ತಡೆಗಟ್ಟುವುದಿರಲಿ, ಅದರ ತೀವ್ರತೆಯನ್ನು ವೇಗವನ್ನು ತಗ್ಗಿಸುವುದು ಹೇಗೆಂಬುದೂ ನಮಗೆ ತೋಚುತ್ತಿಲ್ಲ. ನಾವೆಲ್ಲ ಆಧುನಿಕ ನಾಗರಿಕತೆಯ ಫಲಗಳ ಅನುಭವಿಗಳಾಗಿ ಇರುವಂತೆಯೇ ಅದರ ಪಾಪಗಳ ಪಾಲುದಾರರೂ ಹೌದೆಂಬ ಅರಿವು ಮೂಡಿದ ಮೇಲೂ ಆ ವಿನಾಶಕ ಜೀವನ ಕ್ರಮಕ್ಕೆ ನಿರ್ಬಂಧಗಳನ್ನು ಹಾಕಿಕೊಳ್ಳುವುದು ಹೇಗೆಂಬುದು ನಮಗೆ ಹೊಳೆಯುತ್ತಿಲ್ಲ. ಸಾರುಕ್ಕೈ ಉದಾಹರಣೆ ನೀಡಿದಂತೆ, ವಿಜ್ಞಾನದ ಜೀವಘಾತಕ ಗುಣವನ್ನು ಉಗ್ರವಾಗಿ ಖಂಡಿಸುತ್ತಲೆ ನಾವು ಅದರದ್ದೇ ಸೃಷ್ಟಿಯಾದ ಮೊಬೈಲ್ ಫೋನನ್ನು ಬಳಸುತ್ತಿದ್ದರೆ ನಮ್ಮ ಮಾತು ಬೇರೆಯವರಿಗಷ್ಟೆ ಅಲ್ಲ, ಸ್ವತಃ ನಮಗೂ ಪೊಳ್ಳಾಗಿ ಕೇಳತೊಡಗುತ್ತದೆ.

ಹಾಗಾದರೆ ಹಿಂಸೆ ನೀಡುವ ಈ ಎಲ್ಲ ಸವಾಲುಗಳಿಗೆ ನಮ್ಮ ಉತ್ತರವೇನು? ಅದು ಒಡ್ಡುವ ಸಮಸ್ಯೆಗಳಿಗೆ ಪರಿಹಾರವೇನು? ನಿಜ ನುಡಿಯುವುದಾದರೆ, ಇದು ಕಡುಕಷ್ಟದ ಪ್ರಶ್ನೆಯೂ ಹೌದು. ಇದಕ್ಕೆ ಸುಲಭ ಸರಳ ಉತ್ತರಗಳಿಲ್ಲ. ಆದರೆ, ಒಂದನ್ನಂತೂ ಹೇಳಬೇಕು; ಹಿಂಸೆಯ ಬಗ್ಗೆ ಹೀಗೆ ಮಾತನಾಡುವಾಗಲೆಲ್ಲ ಕೊನೆಗೂ ನೆನಪಾಗುವುದು ಗಾಂಧಿ; ಅಹಿಂಸೆಗೆ ಹೊಸದೊಂದು ಅರ್ಥವನ್ನೂ ಶಕ್ತಿಯನ್ನೂ ತಂದುಕೊಟ್ಟ ಮೋಹನದಾಸ ಕರಮಚಂದ ಗಾಂಧಿ ಅವರು ಹಿಂಸೆಯ ಒಳ-ಹೊರಗುಗಳನ್ನೂ ಎಡ-ಬಲಗಳನ್ನೂ ಸಾಧಾರಣ-ಉಲ್ಬಣಸ್ಥಿತಿಗಳನ್ನೂ ಆತ್ಮಮಧ್ಯಕ್ಕೆಯೆ ತಂದುಕೊಂಡು, ಅದರ ಬಹಳಷ್ಟು ಸವಾಲುಗಳನ್ನು ಅಸೀಮ ಧೀರತೆಯಿಂದ ಉದಾತ್ತತೆಯಿಂದ ಎದುರಿಸಿದ ಅತಿವಿರಳರಲ್ಲಿ ಪ್ರಮುಖರು. ಅವರಂಥವರ ಮಾರ್ಗ ಮಾತ್ರ ನಮ್ಮನ್ನು ಪ್ರಶ್ನೆಗಳಿಂದ ಪರಿಹಾರಗಳತ್ತ ತುಸುವಾದರೂ ಒಯ್ಯಬಲ್ಲದು ಎಂಬುದೆ ನಮ್ಮ ನಮ್ರ ತಿಳುವಳಿಕೆ

ವಂದನೆಗಳು.

*

(ಅಕ್ಟೋಬರ್೨೦೦೫ ರಲ್ಲಿ ಹೆಗ್ಗೋಡಿನ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ನೀಡಿದ ಸಮಾರೋಪ ಉಪನ್ಯಾಸದ ಲೇಖನರೂಪ. ಶಿಬಿರದ ಮುಖ್ಯ ವಸ್ತು ಹಿಂಸೆಯ ಎಡಬಲ ಎಂಬುದಾಗಿತ್ತು. ಇದನ್ನು ಬರಹ ರೂಪಕ್ಕೆ ತಂದವರು ಪ್ರೊಫೆಸರ್ ಜಸವಂತ ಜಾದವ್. ಕೃಪೆ : ನೀನಾಸಂ ಮಾತುಕತೆ, ಹೆಗ್ಗೋಡು.