ಇಲ್ಲಿ ಸೇರಿರುವ ಎಲ್ಲ ಹೊಸ ತಲೆಮಾರಿನ ಲೇಖಕ ಮಿತ್ರತೆ, ನಾನು ಒಬ್ಬ ಹಳೆಯ ತಲೆಮಾರಿನವನು ಅಂತ ಅನ್ನಿಸ್ತಾನೇ ಇಲ್ಲ. ಒಂದು ಇಡೀ ದಿನ ಇಷ್ಟೊಂದು ಜನರನ್ನ ಕೂರಿಸ್ಕೊಂಡು ಮಾತನ್ನ ಕೇಳಿಸ್ಕೊಳ್ಳುವ ಹಾಗೆ ಮಾಡೋದಕ್ಕೆ ಸಾಧ್ಯವಾಯ್ತಲ್ಲ ಕನ್ನಡ ಟೈಮ್ಸ್‌ಗೆ, ಅದನ್ನ ಕಂಡು ನನಗೆ ಬಹಳ ಸಂತೋಷವಾಯ್ತು. ಯಾಕೇಂದ್ರೆ ಯಾವ ರೀತಿಯ ಚಳುವಳಿಯಾಗಲಿ ಅದು ನಡೆಯುವುದು ಬಹುಸಂಖ್ಯಾತರಿಂದ ಅಲ್ಲ; ಅಲ್ಪ ಸಂಖ್ಯಾತರಿಂದಲೇ. ಎಲ್ಲಾ ಕಾಲದಲ್ಲೂ ಎಲ್ಲ ದೇಶದಲ್ಲೂ ಇದು ನಿಜ. ಅಲ್ಪ ಸಂಖ್ಯಾತವಾದದ್ದು, ಬಹುಸಂಖ್ಯಾತವಾಗುತ್ತೆ ಆಮೇಲೆ, ಅಷ್ಟೆ. ನಾನು ಏನಾದರೂ ಬರೆದರೆ ನನ್ನ ಗಮನದಲ್ಲಿ ಇರ‍್ತಾ ಇದ್ದದ್ದು ನಾಲ್ಕೋ ಐದೋ ಜನ. ಅವರು ಏನಂತಾರೆ ನಾನು ಬರೆದದ್ದರ ಬಗೆಗೆ ಅನ್ನೋದು ಮಾತ್ರ ನನಗೆ ಮುಖ್ಯವಾಗಿತ್ತು. ಅದು ಪತ್ರಿಕೆಯಲ್ಲಿ ಬರುತ್ತೋ ಜನ ಮೆಚ್ಚುತ್ತಾರೋ ಇವು ಮುಖ್ಯವಾಗಿತ್ತು ಒಂದು ಕಾಲದಲ್ಲಿ. ಈ ಕಂಬಾರರಿಗೂ ಹಾಗೆ ಇತ್ತ ಯಾರೋ ನಾಲ್ಕೈದು ಜನ ಓದಬೇಕು,ಓದಿ ಅದನ್ನು ಅವರು ಹೇಳಬೇಕು. ನಾವು ಆ ಥರಾನೇ ಬೆಳೆದವರು. ಅದನ್ನು ಪೊರೆಯುವಂಥ ಒಂದು ವಾತಾವರಣ ಇತ್ತು. ಕನ್ನಡ ಟೈಮ್ಸ್ ಆ ರೀತಿಯ ಒಂದು ಬಳಗವನ್ನು ಕಟ್ಕೊಳ್ಳಲಿ ಅಂತ ನಾನು ಆಶಿಸ್ತೀನಿ; ಯಾಕೆಂದರೆ ಇವತ್ತು ಇಲ್ಲಿ ಹೊಸ ದನಿಗಳು ಕೇಳ್ತಾ ಇದಾವೆ.

ಇವತ್ತು ನಾನು ಏನು ಹೇಳಬೇಕು ಅಂತ ಹೊರಟಿದ್ದೀನಿ ಅಂದ್ರೆ, ಈ ಗಳಿಗೆಯಲ್ಲೂ ನನಗೆ ಐವತ್ತು ವರ್ಷಗಳ ಹಿಂದೆ ಬರೆಯುವುದು ಎಷ್ಟು ಕಷ್ಟವಾಗಿತ್ತೋ ಅಷ್ಟೇ ಕಷ್ಟವಾಗಿಯೇ ಉಳಿದಿದೆ ಎಂಬುದನ್ನ. ನನಗೆ ಯಾವ ಹೊಸ ಮಾತನ್ನ ಆಡಬೇಕು ಅನ್ನೋದು ಹೊಳಿತಾನೆ ಇಲ್ಲ ಅಥವಾ ಹೊಳೆದರೆ ಅದನ್ನ ಹೇಗೆ ಹೇಳಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಮ್ಮಲ್ಲಿರುವ ಯುವ ಕವಿಗಳಿಗೆ, ಯುವ ಲೇಖಕರಿಗೆ ನನ್ನ ಒಂದು ಸಲಹೆ ಏನಪ್ಪ ಅಂದ್ರೆ, ಈ ಕಷ್ಟವನ್ನು ಪಡುವ ವ್ಯವಧಾನವನ್ನು ನೀವು ಇಟ್ಕೋಬೇಕು. ನೀವು ಗಳಿಸುವ ಯಾವ ಮನ್ನಣೆಯಿಂದಲೂ ಏನೂ ಪ್ರಯೋಜನವಿಲ್ಲ. ಒಳಗಡೆ ಇರುವ ಸತ್ಯಕ್ಕೆ ಎದುರಾಗೋದು, ಅದೂ ಭಾಷೆಯಲ್ಲಿ ಎದುರಾಗಿಸೋ ಒಂದು ಸವಾಲು. ಅದೂ ನಮ್ಮ ಈ ಕಾಲದಲ್ಲಿ, ದೃಶ್ಯಮಾಧ್ಯಮಗಳು ತಮ್ಮ ಅಬ್ಬರದಿಂದ ನಮಗೆ ಕೆಲವನ್ನು ತೋರಿ ಕೂಡಲೇ ಮರೆಮಾಚುವ ಈ ಮಾಯಾಜಾಲದ ಕಾಲದಲ್ಲಿ ಮನಸ್ಸಿನಲ್ಲಿ, ನೆನಪಿನಲ್ಲಿ ಉಳಿಯುವಂಥೆ ಮಾತುಗಳನ್ನು ಆಡಬಲ್ಲ ಶಕ್ತಿಯನ್ನ ಇನ್ನು ನಮ್ಮ ನಾಗರಿಕತೆಯಲ್ಲಿ ಉಳಿಸಿಕೊಳ್ಳುವುದು ಒಂದು ಸವಾಲು.

ನನಗೆ ನಮ್ಮ ಕಾಲದಲ್ಲಿ ಅರ್ಥ ಆಗದೇ ಇರುವ ಒಂದು ವಿಷಯವೇನೆಂದರೆ, ಈ ಆತ್ಮಾಹುತಿಗಳು. ಇದು ಶುರುವಾಗಿದ್ದು ತಮಿಳ್ ಟೈಗರ್‌ಗಳಿಂದ, ಬಾಂಬನ್ನ ಕಟ್ಕೊಂಡು ಹೋಗಿ ತಾವೂ ಸತ್ತು ಉಳಿದವರನ್ನು ಸಾಯಿಸ್ತಾರಲ್ಲ. ಅದು ಪದೇ ಪದೇ ಆಗುತ್ತಲ್ಲ ಆ ಮನಃಸ್ಥಿತಿ ಹೇಗಿರುತ್ತೆ ಅನ್ನೋದನ್ನು ನಮ್ಮ ಕಲಾಲೋಕದಲ್ಲಿ ಇವತ್ತಿಗೂ ನಮಗೆ ಗ್ರಹಿಸೋಕೆ ಆಗಿಲ್ಲ. ಬಹು ಹಿಂದೆ ಕಾನ್ರಾಡ್ ಎಂಬ ಲೇಖಕ ತನ್ನ ಸೀಕ್ರೇಟ್ ಏಜೆಂಟ್ ಎಂಬ ಕಾದಂಬರಿಯಲ್ಲಿ ಇಂತಹ ಅರಾಜಕ ಮನಸ್ಸಿಗೆ ಎದುರಾಗಿದ್ದ.

ಆ ಮನಃಸ್ಥಿತಿ ಯಾವುದು? ಅದು ಸರಿ ತಪ್ಪು ಎನ್ನುವ ಪ್ರಶ್ನೆ ಅಲ್ಲ. ಮೇರೆಗಳನ್ನು ಮೀರುವ ದುರಾಸೆಯಲ್ಲಿ ತನ್ನ ರಾಜನನ್ನ ಕೊಂದವನೊಬ್ಬನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ‘ಮ್ಯಾಕ್‌ಬೆತ್’ನಲ್ಲಿ ಷೇಕ್ಸ್‌ಪಿಯರ್, ನಮ್ಮ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾನೆ. ಆತ್ಮರತನಾದ ಒಬ್ಬ ಮೂರ್ಖ ಹಣ್ಣು ಹಣ್ಣು ಮುದುಕ ತನ್ನ ರಾಜ್ಯವನ್ನು ಕಿರಮಗಳ ಪ್ರಾಮಾಣಿಕತೆಯನ್ನು ಧಿಕ್ಕರಿಸಿ, ಆತ್ಮರತಿಯನ್ನೇ ತ್ಯಾಗವೆಂದು ಭ್ರಮಿಸಿ ತನ್ನಲ್ಲೇ ಉಬ್ಬಿ ಕೊನೆಯಲ್ಲಿ ಯಾವ ಥರ ನರಳಬೇಕಾಗಿ ಬರುತ್ತೆ ಎನ್ನುವುದು ‘ಲಿಯರ್’ನಾಟಕ ಬರೆದ ಷೇಕ್ಸ್‌ಪಿಯರ್‌ಗೆ ಗೊತ್ತಿದೆ.

ಹೀಗೆ ನಮ್ಮ ಕಾಲದಲ್ಲಿ ಈ ಆತ್ಮಾಹುತಿಗಳ ಹಿಂದಿರುವ ಮನೋಧರ್ಮ ಗೊತ್ತಾಗುತ್ತಲೇ ಇಲ್ಲ. ಮೊನ್ನೆ ಒಂದು ವಿಚಿತ್ರವಾದ ಸಿನಿಮಾ ನೋಡಿದೆ. ಅದರ ಹೆಸರು : Day Night, Day Night, ಆ ಸಿನಿಮಾದಲ್ಲಿ ಆತ್ಮಾಹುತಿಗೆ ತಯಾರಾದ ಒಂದು ಹುಡುಗಿ ಬರ‍್ತಾಳೆ. (ಅಮೆರಿಕನ್ನರ ಹೆಂಗಸರು-ಹೆಸರು ಮರೆತಿದ್ದೇನೆ- ಮಾಡಿದ ಸಿನಿಮಾ ಅದು) ನಿರ್ಭಾವದ ಮುಖ ಯುವತಿಯೊಬ್ಬಳು ಕಾರಲ್ಲಿ ಹತ್ಕೊಂಡು ಬರ‍್ತಾಳೆ. ಅವಳನ್ನು ಯಾರೋ ಒಂದು ಹೊಟೇಲ್‌ಗೆ ತಂದುಬಿಡ್ತಾರೆ. ಅವಳು ಸಂಪೂರ್ಣ ತನ್ನನ್ನು ಕರೆದುಕೊಂಡು ಬಂದವರಿಗೆ ಅತ್ಮಾರ್ಪಣೆ ಮಾಡ್ಕೊಳ್ತಾ ಹೋಗ್ತಾಳೆ. ಎಲ್ಲವೂ ನಿರ್ಭಾವದಲ್ಲಿ. ನಿರಹಂಕಾರದ ಸಮ್ಮತಿಯಲ್ಲಿ. ಅವಳಲ್ಲಿ ಒಂದು ಈಗೋ- ಪರ್ಸನಲ್ ಆದದ್ದು ಇದೆ ಅನ್ನೋದು ಗೊತ್ತೇ ಆಗದಿದ್ದ ಹಾಗೆ ಸುಮಾರು ಹೊತ್ತು ಅವಳು ನಡ್ಕೋತಾ ಹೋಗ್ತಾಳೆ. ಒಂದೇ ಒಂದು ಕಡೆ ಅವಳಿಗೊಂದು ವ್ಯಕ್ತಿತ್ವ ಇದೆ. ಅಂಥ ನಮಗೆ ಗೊತ್ತಾಗೋದು. ಅವಳು ‘ನಾನು ಫೀಡ್ಜಾ ತಿನ್ನಬೇಕು ಅನ್ಸುತ್ತೆ’ ಎಂದಾಗ. ಆಮೇಲೆ ತನ್ನ ಒಳ ಅಂಗಿಗಳನ್ನು ಒಗೆದು ಹಿಂಡಿ ಚೆನ್ನಾಗಿ ಶುಭ್ರವಾಗಿ ಒಣಗಿಸ್ತಾಳೆ. ಯಾಕಂದ್ರೆ ‘ಆ ಕೆಲಸ’ ಮಾಡುವಾಗ ತಾನು ಶುಭ್ರವಾಗಿರಬೇಕು ಎಂದು. ಅವಳನ್ನು ಕರೆದುಕೊಂಡು ಬಂದವರ ಮುಖಗಳನ್ನು ನಾವು ನೋಡೋಕ್ಕಾಗಲ್ಲ. ಅವರ ಮುಖ ಮರೆಯಾಗಿರುತ್ತೆ. ಅವರ ಕೈಗಳನ್ನು ಮಾತ್ರ ನಾವು ನೋಡ್ತೇವೆ. ಮಾತುಗಳೂ ಕಡಿಮೆ; ದೃಶ್ಯಗಳೂ ಕಡಿಮೆ.

ವಿಪರೀತ ಮಾತುಗಳನ್ನಾಡಿದಾಗ ಹೇಗೆ ನಮಗೆ ಯಾವ ಮಾತುಗಳೂ ನೆನಪಿನಲ್ಲಿ ಉಳಿಯಲ್ಲವೋ ಹಾಗೆ ವಿಪರೀತಿ ದೃಶ್ಯಗಳಿದ್ದಾಗ ನೆನಪಿನಲ್ಲಿ ಉಳಿಯುವಂಥವು ಕಡಿಮೆ. ಈ ಚಿತ್ರದಲ್ಲಿ ನಾವು ಏನನ್ನೂ ಮರೆಯದಂತಹ ಸಂಜ್ಞೆಗಳಾಗಿ ಕಂಡು, ಕೇಳುವ ಅಷ್ಟಿಷ್ಟು ಎದುರಾಗುತ್ತವೆ. ಕೊನೆಗೆ ಆಕೆ ಬಾಂಬನ್ನ ಕಟ್ಕೊಳ್ತಾಳೆ. ಟೈಮರ್‌ನ್ನು ಕೈಯಲ್ಲಿ ಮೊಬೈಲ್ ಥರ ಇಟ್ಗೋಳ್ತಾಳೆ. ನ್ಯೂಯಾರ್ಕಿನ ಪ್ರಸಿದ್ಧ ಟೈಮ್ ಸ್ಕ್ವೇರ್‌ಗೆ ಬರುತ್ತಾಳೆ.

ಕೊನೆಯಲ್ಲಿ ಅವಳಿಗೆ ಕೊಲ್ಲೊಕ್ಕಾಗೋದಿಲ್ಲ. ಇಲ್ಲಿ ನನಗೆ ಏನನ್ನಿಸ್ತು ಅಂದ್ರೆ; ಈ ಸಿನಿಮಾ ಮಾಡುವಾಗ ಈ ಹುಡುಗಿ ಮುಸ್ಲಿಂ ಅಂತ ನನಗೆ ಅನ್ನಿಸಿದ್ದರೆ, ಅಥವಾ ಈ ಹುಡುಗಿ ತಮಿಳು ಟೈಗರ್ ಅಂತ ಅನ್ನಿಸಿದ್ದರೆ ಕೂಡಲೇ ನನಗೆ ಅದೆಲ್ಲವೂ ಹಿಸ್ಟಾರಿಸೈಸ್ ಆಗಿ ಈ ಕಾಲದ ಒಂದು ಘಟನೆಯಲ್ಲಿ ನನಗೆ ಗೊತ್ತಿರುವ ರಾಜಕೀಯ ಚಿಂತನೆಯ ಒಳಗೆ ಅವಳನ್ನು ನಾನು ಸ್ವೀಕರಿಸಿಬಿಡ್ತಿದ್ದೆ. ಈ ಸಿನಿಮಾವನ್ನು ನಿರ್ದೇಶಕರಿ ಹೇಗೆ ಮಾಡಿದಾಳಪ್ಪ ಅಂದ್ರೆ ಆಕೆ ಯಾವ ಪಂಥದವಳು, ಯಾವ ಪಂಗಡದವಳು, ಯಾವ ಜಾತಿಯವಳು, ಏನೂ ವಿವರ ಇಲ್ಲ. ಬರೀ ಒಂದು ಹೆಣ್ಣು. ಇದನ್ನ ಹಿಂದೆ ತಮಿಳು ಕಾವ್ಯದಲ್ಲಿ ಮಾಡ್ತಾ ಇದ್ರಂತೆ. ‘ಅಹಂ’ ಮತ್ತು ‘ಪುರಂ’ ಎನ್ನುವ ವಿಭಾಗದಲ್ಲಿ. ‘ಅಹಂ’ (ಅಗಂ?) ಅಂದರೆ ಒಳಗಿನದು. ಹೆಸರುಗಳು ಕೂಡ ಬರಲ್ಲ.(ಹೆಸರು ಬಂದ ಕೂಡಲೇ ಅದು ವಿಶಿಷ್ಟವಾಗಿ ಬಿಡುತ್ತದೆ)

ಬಹಳ ಭಾವಗೀತೆಯಲ್ಲಿ ಆ ರೀತಿ ಅಹಂ ಇರುತ್ತೆ. ತನ್ನೊಳಗಿನದು ಅದು. ಪುರಂ ಅಂದಕೂಡಲೇ ಅದು ಪುರ. ಹೊರಗಡೆಯದು.ವ್ಯಕ್ತಿಗಳು ಬಂದ ಕೂಡಲೇ ಅದು ಚರಿತ್ರೆಯ ಒಳಗೆ ನಡೆಯುವ ಸಂದರ್ಭ ಆಗುತ್ತೆ. ಈ ಸಿನಿಮಾ ಒಂದು ‘ಅಹಂ’ ರೀತಿಯ ಸಿನಿಮಾ. ಬೇರೆ ವಿವರಗಳು ಇಲ್ಲಿ ಇಲ್ಲದೇ ಇರುವುದರಿಂದ ನಮಗೆ ಆ ಒಂದು ಮನಃಸ್ಥಿತಿಯೇ, ಸಾಯಲು ತಯಾರಾದ, ಸಾಯಲು ಭಯಪಡದ, ಸಾಯಿಸಲೂ ಕೂಡ ತಯಾರಾದ ಕೇವಲ ಒಂದು ಸ್ಥಿತಿ. ಅದನ್ನು ಮನಃಶಾಸ್ತ್ರೀಯ ಗೊಳಿಸಿದ್ದರೆ, ‘ಅವಳು ಅಪ್ಪ ಅಮ್ಮನ ಜೊತೆಯಲ್ಲಿ ಚೆನ್ನಾಗಿರಲಿಲ್ಲ, ಅವಳಿಗೆ ಮನೆಯಲ್ಲಿ ಕಷ್ಟ ಇತ್ತು. ಈ ಥರ ಕಾರಣಗಳನ್ನು ಏನ್ ಹೇಳಿದ್ರೂ’ ನನಗೆ ಅದು ಅರ್ಥಆಗೋದು. ಅದು ಸರಿಯೋ ತಪ್ಪೋ? ಹೀಗೆ ಅದರ ಪರವಾದ ವಾದ, ವಿರೋಧವಾದ ವಾದ ಎಲ್ಲ ನನ್ನ ಮನಸ್ಸಿಗೆ ಬಂದಿರೋದು.

ನನಗೆ ಆಶ್ಚರ್ಯವಾಗುವ ಸಂಗತಿಯೆಂದರೆ-ಅವಳು ಕೊಲ್ಲದೆ ಇರೋದಕ್ಕೆ ಅವಳ ಮನಸಿನ ಮೇಲೆ ಪರಿಣಾಮ ಮಾಡುವಂಥ ದೃಶ್ಯ ಏನಾದರೂ ತೋರಿಸ್ತಾರೇನೋ ಅಂತ ನಾನು ಕಾದಿದ್ದೇ. ಇಲ್ಲವೇ ಇಲ್ಲ. ತೋರಿಸೋದಾದ್ರೆ ಒಬ್ಬ ಬಸುರಿ ಹೆಂಗಸನ್ನ ನೋಡಿದ ಕೂಡ್ಲೆ. ಓ ಅವಳೂ ಬಸುರಾಗಿದ್ದಾಳೆ. ಒಂದು ಮಗು ಹುಟ್ತಾ ಇದೆ. ನಾನು ಕೊಲ್ಲೋದು ಸಲ್ಲದು ಅಂತ ಅವಳಿಗೇನಾದ್ರೂ ಒಂದು ಸ್ವಲ್ಪ ಆತಂಕ ಆಗಿದ್ದೇ ಆದ್ರೆ ನನಗೆ ಅರ್ಥ ಆಗಿಬಿಡುವುದು. ಅಲ್ಲಿ ಬಸುರಿ ಹೆಂಗಸಿಲ್ಲ. ಟೈಮ್ಸ್ ಸ್ಕ್ವೇರ್‌ನಲ್ಲಿ ಯಾವತ್ತೂ ನಿತ್ಯ ನಡೆಯುವಂಥ ಘಟನೆಗಳು ಮಾತ್ರ ನಮಗೆ ಎದುರಾಗುತ್ತವೆ.

ಯಾವುದಕ್ಕೂ ವಿಶೇಷಾದ ಅರ್ಥವನ್ನು ನಾವು ನಿಗದಿಪಡಿಸುವ ಹಾಗೇ ಇಲ್ಲದೇ ಇರುವಂಥ ದೃಶ್ಯಗಳನ್ನು ನಿರ್ದೇಶಕರಿ ತೋರಿಸುತ್ತಾಳೆ. ಅದು ಸಕ್ಸಸ್‌ಫುಲ್ ಆಯಿತು ಅಂತ ಹೇಳಲಾರೆ; ಆದರೆ ಒಂದು ಹೊಸ ಕಲೆಗಾರಿಕೆ ಹೊರಕ್ಕೆ ತೆರೆದುಕೊಂಡಂತೆ ಅನ್ನಿಸ್ತು-ನ್ಯೂ ಆರ್ಟ್ ಫಾರ್ಮ್ ರೀತಿ.

ನಮ್ಮ ಇಂದಿನ ಅನುಭವ ನೋಡೋಣ; ಈ ಕಾಲದಲ್ಲಿ ಬದುಕೋದು ಅಂದರೆ ವಿಪರೀತವಾಗಿ ಸದ್ದುಮಾಡ್ಕೊಂಡು ಹೋಗುವ ಬಂಡಿಯ ಮೇಲೆ ಕೂತಿರುವ ಹಾಗೆ. ಎಷ್ಟು ಅಲ್ಲಾಡ್ತಾ ಇದೆ ಆ ಬಂಡಿ ಅಂದ್ರೆ ಪ್ರತಿಕ್ಷಣಕ್ಕೂ ಯಾವ ದಿಕ್ಕಿಗೆ ಹೋಗುತ್ತೆ ಅಂತ ಗೊತ್ತಿಲ್ದೆ ಹೋಗ್ತಿದೆ. ಅಂದ್ರೆ ಅದರಲ್ಲಿ ಪ್ರಯಾಣ ಮಾಡುತ್ತಿರುವ ನನ್ನ ಒಳಗಷ್ಟಾದರೂ ಉಳಿದಿರಬೇಕೆಂದರೆ ನನ್ನ ಆತ್ಮವನ್ನು, ನನ್ನ ಜೀವವನ್ನು, ನನ್ನ ಸ್ವಂತ ಅನುಭವವನ್ನು ಗಟ್ಟಿಯಾಗಿ ಹಿಡ್ಕೊಂಡಿರಬೇಕು. ಇಲ್ಲದಿದ್ರೆ ನನಗೆ ನಾನು ಎನ್ನುವ ಒಂದು ಅಸ್ತಿತ್ವವೇ ಹೊರಟುಹೋಗುವಷ್ಟು ಸದ್ದು, ಗದ್ದಲ ಎಲ್ಲೆಲ್ಲೂ ಇರುತ್ತೆ.

ಒಂದು ಸಂತೆಯಲ್ಲಿ ನಾವು ಬದುಕ್ತಾ ಇದ್ದೀವಿ. ಈ ಆತ್ಮಾಹುತಿ ಮಾಡಿಕೊಳ್ಳುವವರು, ಮತೀಯ ಹಿಂಸೆ ‘ಪರಭಾಷಾ ಹಿಂಸೆ’ ಸ್ತ್ರೀಯರ ಮೇಲೆ ಅತ್ಯಾಚಾರ, ಸ್ತ್ರೀಭೂಣ ಹತ್ಯೆ ಇವೆಲ್ಲದರ ನಡುವೆ ನಾವು ಬದುಕ್ತಾ ಇದೀವಿ. ಹೀಗೆ ಬದುಕ್ತಾ ಇದ್ದಾಗ ಅವಕ್ಕೆಲ್ಲ ಸ್ಪಂದಿಸಬೇಕು. ಆದರೆ ಸ್ಪಂದಿಸುವಾಗ ಆಳದಲ್ಲಿ ಸ್ಪಂದಿಸುವುದು ಹೇಗೆ ಅನ್ನೋದು ಒಂದು ಸಮಸ್ಯೆ. ನಾವು ಹೇಗೆ ಸ್ಪಂದನ ಮಾಡಿದರೂ ಅದು ಇವತ್ತಿನ ರಾಜಕೀಯಕ್ಕೆ ಸ್ವೀಕಾರಾರ್ಹವಾದ ಒಂದ ಸ್ಪಂದನ ಆಗಿರುತ್ತೆ. ಅಥವಾ ಯಾವುದಾದರೂ ಒಂದು ಜಾತಿಗೆ ಸ್ವೀಕಾರಾರ್ಹವಾದ ಒಂದು ಸ್ಪಂದನ ಆಗಿರುತ್ತೆ. ಅಥವಾ ನಮಗೇನೆ, ‘ಹೀಗೆ ಸ್ಪಂದಿಸಿದರೆ ಬಹಳ ಚೆನ್ನಾಗಿ ಕಾಣಬಹುದು’ ಎನ್ನುವ ನಮ್ಮ ಚೆಂದದ ಕಲ್ಪನೆಯೇ ಅದಕ್ಕೊಂದು ಚೌಕಟ್ಟಿನ್ನ ಹಾಕಬಹುದು. ಸತ್ಯದ ಹುಡುಕಾಟ ಅಂದ್ರೆ ಅದು ಯಾವ ಚೌಕಟ್ಟಿಗೂ ಒಳಪಡದೇನೆ ಇದನ್ನ ನಾನು ಹೇಗೆ ನಿರ್ವಹಿಸಬೇಕು ಅನ್ನೋದು. ಯಾವ ರೀತಿಯ ರೂಪಕಗಳ ಮುಖಾಂತರ, ಯಾವ ರೀತಿಯ ಭಾಷಾ ಪ್ರಯೋಗದ ಮುಖಾಂತರ, ಯಾವ ರೀತಿಯ ಕಟ್ಟುವಿಕೆಯ ಮುಖಾಂತರ ಇದನ್ನ ನಿರ್ವಹಿಸಬೇಕು ಅನ್ನೋದು. ಇದನ್ನ ತನ್ನ ಕಾಲದಲ್ಲಿ ಕುವೆಂಪು, ಬೇಂದ್ರೆ, ಅಡಿಗ, ಕಾರಂತರು ಮಾಡಿದ್ದಾರೆ. ಇವರೆಲ್ಲ ತಮ್ಮ ತಮ್ಮ ಕಾಲದ ಸ್ಪಂದನಗಳಿಗೆ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ನಮ್ಮ ಕಾಲದ ಅತ್ಯಂತ ದೊಡ್ಡದಾದ ಈ ಹಿಂಸೆ ಇದೆಯಲ್ಲ, ಅದು ಎಷ್ಟು ಅರ್ಥಹೀನವಾದ ಹಿಂಸೆ ಅಂದರೆ, ಎರಡನೆಯ ಮಹಾಯುದ್ಧದ ಮುಂಚಿನ ಮಹಾಯುದ್ಧದ ಹಿಂಸೆ ಅತ್ಯಂತ ಅರ್ಥಹೀನವಾಗಿತ್ತು. ಅದನ್ನು ಒಬ್ಬ ಕವಿ ಬಹಳ ಚೆನ್ನಾಗಿ ವರ್ಣಿಸ್ತಾನೆ. ಹಿಂದಿನ ದಿನದ ಕದನದಲ್ಲಿ ಒಬ್ಬ ಸತ್ತು ಹೋಗಿದ್ದಾನೆ. ಸತ್ತವನ ಆತ್ಮ ಕತ್ತಲಲ್ಲಿ ತಡಕಾಡುತ್ತಾ ಚಲಿಸುವಾಗ ಎದುರುಗಡೆ ಇನ್ನೊಬ್ಬನ ಆತ್ಮ ಹೀಗೇ ಚಲಿಸುತ್ತ ಎದುರಾಗುತ್ತೆ. ಒಬ್ಬ ಇನ್ನೊಬ್ಬನನ್ನು ಕೇಳುತ್ತಾನೆ; ‘ಯಾರು ನೀನು?’ ಆಗ ‘ನಿನ್ನೆ ನೀನು ಕೊಂದ ವೈರಿಯೇ ನಾನು ಗೆಳೆಯ’ ಎಂದು ಇನ್ನೊಬ್ಬ ಹೇಳಿ ಮುಂದೆ ಸರಿಯುತ್ತಾನೆ.

ಮೊದಲನೆಯ ಮಹಾಯುದ್ಧದ ನಂತರ ಇಂಥದ್ದೊಂದು ಪದ್ಯ ಬಂದಾಗ ಆ ಇಡೀ ಯುದ್ಧದ ಅರ್ಥಹೀನತೆಯನ್ನು ಈ ಪದ್ಯ ಹಿಡಿದಿಟ್ಟಿತ್ತು. ನಮ್ಮ ಲೇಖಕರಿಗೆ ಈ ಕಾಲದ ಸಮಸ್ಯೆ ಏನೆಂದರೆ ನಾವು ತೀರ ರಾಜಕೀಯವಾದಾಗ, ರಾಜಕೀಯವಾಗಿ ಸಲ್ಲುವ ಹಾಗೆ ಬರೆಯೋಕೆ ಶುರು ಮಾಡಿಬಿಡ್ತೀವಿ. ಬರೆದಾಗ ಅದಕ್ಕೆ ಸ್ವಲ್ಪ ಹಿಂಬಾಲಕರೂ ಇರ‍್ತಾರೆ. ಆದ್ರೆ ಅವರು ಕೂಡ ಅದರ ಉಪಯೋಗವಾದ ನಂತರ ಮರೆತುಬಿಡ್ತಾರೆ. ಹಿಟ್ಲರ್ ಅವನ ದೇಶವನ್ನು ನಾಶಮಾಡೋಕೆ ಶುರು ಮಾಡುವುದಕ್ಕಿಂತ ಮುಂಚೆ ಒಂದು ರೀತಿಯ ಭಯ ಅಲ್ಲಿರುವ ಯಹೂದ್ಯರಿಗಿತ್ತು. ಯಾರಾದರೂ ನಡುರಾತ್ರಿ ಬಂದು ಬಾಗಿಲು ತಟ್ಟಿ ‘ಯು ಆರ್ ಅರೆಸ್ಟೆಡ್’ ಅಂತ ಯಾವುದೋ ಜೈಲಿಗೆ ಹಾಕಿಬಿಡಬಹುದಿತ್ತು. ಇವತ್ತು ಎನ್‌ಕೌಂಟರ್‌ನಲ್ಲಿ ಅದೇ ಭೀತಿ ಬಹಳ ಜನರಿಗೆ ಆಗ್ತಾ ಇದೆ. ಅದನ್ನು ಸುಮ್ಮನೇ ಎನ್‌ಕೌಂಟರ್ ಡೆತ್ ಅಂತೇವೆ. ಯಾರನ್ನ ಬೇಕಾದರೂ ತಗೊಂಡು ಹೋಗಿ ಕೊಂದು ಹಾಕಿಬಿಡಬಹುದು. ಒಂದೊಂದು ಸಾರಿ-ಇವತ್ತು ಮುಸ್ಲಿಂ ಹೆಸರನ್ನು ಇಟ್ಕೊಂಡಿರೋದೇ ಎಷ್ಟು ಅಪಾಯಕಾರಿ ಆಗ್ಬಿಟ್ಟಿದೆ ಅಂತ ಅನ್ಸುತ್ತೆ. ಜರ್ಮನಿಯಲ್ಲಿ ಎರಡನೆಯ ಮಹಾಯುದ್ಧಕ್ಕಿಂತ ಮುಂಚೆ ಇದೇ ಪರಿಸ್ಥೀತಿ ಇತ್ತು. ಆಗ ಕಾಫ್ಕ ತನ್ನ ಕಥೆಗಳನ್ನು ಬರೆದ. ಅವನ ಕಾದಂಬರಿಯಲ್ಲಿ ಒಬ್ಬ ‘ಕೆ’ ಎನ್ನುವವನನ್ನು ಅರೆಸ್ಟ್ ಮಾಡಿಕೊಂಡು ಹೋದ ನಂತರ ಅವನಿಗೆ ಬಿಡುಗಡೆ ಸಾಧ್ಯವೇ ಇಲ್ಲ. ಯಾಕೆಂದರೆ ಅರೆಸ್ಟ್ ಮಾಡ್ಕೊಂಡು ಹೋದವರಲ್ಲಿ ಯಾರಾದರೂ ಒಬ್ಬ ಕರಪ್ಟ್ ಆದ್ರೂ ಆಗಿದ್ದಿದ್ರೆ ಅವನಿಗೊಂದು ಬಿಡುಗಡೆಯ ಸಾಧ್ಯತೆಯಾದರೂ ಇರುತ್ತಿತ್ತು. ಅವರು ಕರಪ್ಟ್ ಕೂಡ ಅಲ್ಲ.

ಮೋದಿ ಬಗ್ಗೆ ಎಲ್ಲರೂ ಏನು ಹೇಳುತ್ತಾರೆ. ಕೇಳಿ: ‘ಹಿ ಇಸ್ ನಾಟ್ ಕರಪ್ಟ್’, ಆತನಿಗೆ ಬಹಳ ವಿಶೇಷವಾದ ಮರ್ಯಾದೆ ಇವತ್ತು ಸಿಕ್ತಾ ಇದೆ. ಹಿ ಇಸ್ ವೆರಿ ಎಫಿಷಿಯಂಟ್, ಡೆವಲಪ್‌ಮೆಂಟನ್ನ ಬಹಳ ಚೆನ್ನಾಗಿ ಮಾಡ್ತಾ ಇದ್ದಾನೆ ಅಂತಾರೆ. ನನಗೆ ಕಾಫ್ಕ ಕತೆ ನೆನಪಾಗುತ್ತೆ.

ನಾನು ಮೊದಲೇ ಒಂದು ಸಿನಿಮಾದ ಬಗ್ಗೆ ಹೇಳಿದ್ನಲ್ಲ. ಅಲ್ಲಿ ನಿರ್ದೇಶಕಿ ಚರಿತ್ರೆಯ ಯಾವ ಅಂಶವನ್ನೂ ತರದೇ ಇರೋದ್ರಿಂದಲೇ ಅದು ನಮಗೆ ಆತ್ಮಾಹುತಿಗೆ ತಯಾರಾದ ಒಂದು ಮನಃಸ್ಥಿತಿಯನ್ನ, ಮನಃಶಾಸ್ತ್ರ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ ಈ ಯಾವುದನ್ನೂ ಬಳಸದೆ ಸುಮ್ಮನೆ ಎದುರಾಗಿಸುತ್ತದೆ. ಅಲ್ಲಿ ಅವಳು ಯಾವ ಉಪಾಯಗಳನ್ನು ಬಳಸಿದಳೋ ಅಂಥ ಉಪಾಯಗಳನ್ನು ಕಾಫ್ಕ ಬಳಸಿದ್ದ.

ಲ್ಯುಕಾಕ್ಸ್ ಕಾಫ್ಕ ಬಗ್ಗೆ ಬರೀತಾ ‘ಇದು ಚರಿತ್ರೆಯ ಒಳಗೆ ಬರ‍್ತಾ ಇಲ್ಲ, ಚರಿತ್ರೆಯ ಮುಖಾಂತರ ನೀವು ಹೇಳ್ತಾ ಇಲ್ಲ’ ಅಂತ ‘ಬಂಡಾಯ’ದ ವಾದವನ್ನು ಹೂಡಿದ್ದ ಅವನು ಕೂಡ ಬದಲಾದ ಕಥೆಯೊಂದಿದೆ.

ನಾನು ಒಂದು ಸಾರಿ ಹಂಗೇರಿಯಲ್ಲಿರುವ ಹೋಗಿದ್ದೆ. ಲ್ಯುಕಾಕ್ಸ್‌ನ ಮನೆಗೆ ಹೋಗಿದ್ದೆ. ಅಆಗ ಅವನ ಸಂಬಂಧಿ ಒಬ್ಬಳು ನನಗೊಂದು ಕಥೆ ಹೇಳಿದಳು. ಹಂಗೇರಿಯಲ್ಲಿ ಜನ ಸೋವಿಯತ್ ರಷ್ಯ ವಿರುದ್ಧ ದಂಗೆ ಎದ್ದರು. ಆಗ ಲ್ಯುಕಾಕ್ಸ್ ಒಬ್ಬ ಕಲ್ಚರ್ ಮಿನಿಸ್ಟರ್ ಆಗಿದ್ದ. ಎರಡೇ ದಿನಗಳಲ್ಲಿ ರಷ್ಯನ್ ಟ್ಯಾಂಕ್‌ಗಳು ಇಡೀ ಹಂಗೆರಿಯನ್ನು ಆಕ್ರಮಣ ಮಾಡಿಬಿಟ್ಟವು. ಆಗ ಕಮ್ಯೂನಿಸ್ಟ್ ಆಗಿದ್ ಲ್ಯುಕಾಕ್ಸ್ ಬೇರೆ ಯಾವುದೋ ಊರಿಗೆ ಹೋಗಬೇಕಾಗಿ ಬಂತು. ತಪ್ಪಿಸಿಕೊಂಡು ಹೋಗುವಾಗ, ತಾನು ಇನ್ನೊಂದು ಕ್ಯಾಪಿಟಲಿಸ್ಟ್ ದೇಶಕ್ಕೆ ಹೋಗಲ್ಲ, ಬದಲಾಗಿ ತಾನೊಂದು ಕಮ್ಯೂನಿಸ್ಟ್ ದೇಶಕ್ಕೆ ಹೋಗಬೇಕು ಅಂತ ಹೋಗ್ತಾ ಇರ‍್ತಾನೆ. ದಾರಿಯಲ್ಲಿ ಹಳೆಯ ಕಾಲದ ಒಂದು ದೊಡ್ಡ ಕೋಟೆ. ಅಲ್ಲಿ ಲ್ಯುಕಾಕ್ಸ್ ಅಡಗಿ ಕೂರಬೇಕಾಗಿ ಬರುತ್ತೆ. ಹಾಗೆ ಕೂತಾಗ ಅವನಿಗೆ ಎಷ್ಟು ಭಯವಾಗುತ್ತಂತೆ ಅಂದ್ರೆ ದುಃಸ್ವಪ್ನದ ಹಾಗಿನ ಭಯ. ಅವನು ತನ್ನ ಸ್ನೇಹಿತನಿಗೆ ಹೇಳ್ತಾನಂತೆ; ‘ನೌ ಐ ನೊ ದಟ್ ಕಾಫ್ಕ ವಾಸ್ ಎ ರಿಯಲಿಸ್ಟ್’ ಅಂತ. ಅಂದರೆ ಕಾಫ್ಕ ವಾಸ್ತವವಾದಿ ಅಂತ ನನಗೀಗ ಗೊತ್ತಾಗ್ತ ಇದೆ ಎಂದು ಲ್ಯುಕಾಕ್ಸ್ ಹೇಳುತ್ತಾನೆ.

ಸಾಹಿತ್ಯಕ್ಕೆ ಅನುಭವವನ್ನು ಈ ರೀತಿಯಲ್ಲಿ ದಾಟಿಸುವ ಶಕ್ತಿ ಇರಬೇಕು. ನಾವೇನು ಮಾಡ್ತೇವೆ ಅಂದ್ರೆ, ಬರೆಯುವಾಗ ಚೆಂದವಾಗಿ ಬರೆದುಬಿಡ್ತೀವಿ. ಅಥವಾ ಪೊಲಿಟಿಕಲಿ ಕರೆಕ್ಟಾಗಿ ಬರೆದುಬಿಡ್ತೀವಿ. ಇದನ್ನೆಲ್ಲಾ ಮಾಡುವುದರಿಂದ ಬಹಳ ಸುಲಭವಾದ ದಾರಿಗಳನ್ನು ಹುಡುಕ್ತಾ ಇರ‍್ತೀವಿ. ಸಲ್ಲುವ ಹಾಗೆ. ಈಗ ಹೊಸ ತಲೆಮಾರಿನಲ್ಲಿ ಅದನ್ನು ಮಾಡುವ ಸಾಧ್ಯತೆ ಹೆಚ್ಚಾಗಿ ಕಾಣ್ತಾ ಇದೆ. ಯಾಕೆಂದ್ರೆ ಈ ಪತ್ರಿಕೆಗಳು ಕೊಡುವ ಪ್ರೈಜ್‌ಗಳು. ಒಮ್ಮೆ ಕಿ.ರಂ. ಹೇಳ್ತಾ ಇದ್ರು. ಈಗ ಯಾರು ಹಾಡೋದಾದ್ರೂ ಚೆನ್ನಾಗಿ ಪ್ರೈಜ್ ಬರೋದಾದ್ರೆ ಅಶ್ವಥ್ ಹಂಗೇ ಹಾಡ್ಬಿಡ್ತಾರೆ ಅಂತ. ಯಾಕಂದ್ರೆ ಪ್ರೈಜ್ ಬರುವುದಕ್ಕೆ ಹಾಡುವ ಕ್ರಮ ಅದೇ ಆಗಿರುತ್ತೆ. ಹಾಗೆ ಪ್ರೈಜ್ ಬರುವುದಕ್ಕೆ ಬರೆವ ಕ್ರಮ ಒಂದಿರುತ್ತೆ. ಅಥವಾ ಕೂಡಲೇ ಮನ್ನಣೆ ಸಿಗುವಂಥ ಯಾವ ದಾರಿಯಾದರೂ ಸರಿಯೇ. ಇವತ್ತು ಇಂಗ್ಲಿಷ್ ರೈಟಿಂಗ ಹಾಗೇ ಕೂಡಾ ಹಾಗಾಗ್ಬಿಟ್ಟಿದೆ.

ಕಂಬಾರರು ಮಾತನಾಡುವಾಗ ಒಂದು ವಿಷಯವನ್ನು ಗಮನಿಸಿದೀನಿ. ಅದನ್ನು ಹೇಳ್ತೀನಿ. ಇಂಗ್ಲೀಷ್‌ನಲ್ಲಿ ಎರಡು ಶಬ್ದ ಇದೆ. ಬಾರ್ಡ್ ಮತ್ತು ಪೊಯೆಟ್ ಅಂತ. ಬಾರ್ಡ್ ಅಂದ್ರೆ, ಇಡೀ ಸಮಾಜಕ್ಕೆ ಒಬ್ಬ ಪುರೋಹಿತ ಇರ‍್ತಾನಲ್ಲ ಹಾಗೇ ಆ ಇಡೀ ಸಮುದಾಯದ ಕವಿ. ಅವನು ತನ್ನ ಸ್ವಂತದ್ದೇನನ್ನೂ ಹೇಳಬೇಕಾಗಿಲ್ಲ. ಇಡೀ ಸಮದಾಯದ್ದನ್ನ ಅವನು ವ್ಯಕ್ತಮಾಡುತ್ತಿರುತ್ತಾನೆ. ನನಗೆ ಅನೇಕ ಸಾರಿ ಕಂಬಾರರು ಮಾತನಾಡುವಾಗ ಅದನ್ನೇ ಅವರು ಹೇಳ್ತಾ ಇದ್ದಾರೇನೋ ಅನ್ಸುತ್ತೆ. ಹೀಗೆ ಇಡೀ ಸಮುದಾಯದ ವಾಣಿ ಇವರು. ಜೊತೆಗೆ ಕೆಲವು ರೀತಿಯ ವಿಶೇಷವಾದ ಶಕ್ತಿಗಳಿವೆ. ಅವನು ಆ ಸಮುದಾಯದಿಂದ ಆವಾಹಿತನಾಗಬಲ್ಲ. ಆವಾಹಿತನಾಗಿ ಮಾತನಾಡಬಲ್ಲ. ಹಾಗೇ ಮಾತನಾಡುವಾಗ ಜನರೆಲ್ಲ ಕೇಳಿಸಿಕೊಳ್ಳಲೇಬೇಕು. ಯಾಕಂದ್ರೆ ಅವನು ಬಾರ್ಡ್.

ಇವತ್ತು ಬಾರ್ಡ್ ಇಲ್ಲ. ಇರೋದು ಪೊಯೆಟ್. ಅವನೊಬ್ಬ ವ್ಯಕ್ತಿ. ಕಷ್ಟ ಏನಪ್ಪ ಅಂದ್ರೆ ಒಬ್ಬ ಬಾರ್ಡ್ ಮಾಡಬೇಕಾದ ಕೆಲಸವನ್ನ ಒಬ್ಬ ಪೊಯೆಟ್ ಮಾಡೋದಕ್ಕೆ ಸಾಧ್ಯವೋ? ಬೇಂದ್ರೆಯವರು ಸಖೀಗೀತದಲ್ಲಿ ಸ್ವಲ್ಪಮಟ್ಟಿಗೆ ಅದನ್ನು ಮಾಡೋದಕ್ಕೆ ಪ್ರಯತ್ನ ಮಾಡ್ತಾರೆ. ಬಾರ್ಡ್ ಮಾಡಬಹುದಾದದ್ದನ್ನು ಒಬ್ಬ ಪೊಯೆಟ್ ಆಗಿ ಮಾಡ್ತಾರೆ. ಯಾಕಂದ್ರೆ ಅಲ್ಲಿ ವೈಯಕ್ತಿಕ ಜೀವನದ ಅನುಭವಗಳು ಕೂಡ ಬರ‍್ತವೆ. ನಾನು ಆಗಲೇ ಅಹಂ ಮತ್ತು ಪುರಂ ಅಂದೆನಲ್ಲ, ಪುರಂನ ಎಲಿಮೆಂಟ್ಸ್ ಎಲ್ಲ ಅಹಂನಲ್ಲಿ ಬರ್ತವೆ. ಇಂಟೀರಿಯರ್ ಮಾನೊಲಾಗ್‌ನಲ್ಲಿ ಎಕ್ಸ್‌ಟೀರಿಯರ್ ಕೂಡ ಬರುತ್ತೆ. ಅಂಥ ಮಾರ್ಗಗಳನ್ನು ನಾವು ಇವತ್ತು ಹುಡುಕಿಕೊಳ್ಳಬೇಕಾಗಿ ಬಂದಿದೆ. ನಾನು ಏನು ಹೇಳೋಕೆ ಪ್ರಯತ್ನ ಪಡ್ತಾ ಇದ್ದೀನಿ ಅಂದ್ರೆ ಇವತ್ತು ಇಡೀ ಸಮುದಾಯದ ವಾಣಿಯಾದ ಬಾರ್ಡ್ ಆಗೋಕ್ಕೆ ಆಗಲ್ಲ. ಆದರೆ ನನ್ನದನ್ನು ಮಾತ್ರ ನಾನು ಹೇಳ್ಕೊಂಡು ಹೋದರೆ ಪೊಯೆಟ್ ಆಗೋದು ಕೂಡ ಸಾಧ್ಯವಿಲ್ಲ. ಯಾಕಂದ್ರೆ ಒಂದು ಸಂತೆ ಗದ್ದಲದಲ್ಲಿರುವ ನನಗೆ ಇವೆಲ್ಲವನ್ನು ನನ್ನೊಳಗೆ ಅವಾಹಿಸಿಕೊಂಡು ಅದು ನನ್ನ ದನಿ ಅನ್ನುವ ಹಾಗೆ, ವೈಯಕ್ತಿಕ ಅನ್ನುವ ಹಾಗೆ ಹೇಳುವುದು ಹೇಗೆ? ಇದು ಬರವಣಿಗೆಯ ಯಾವತ್ತಿನ ಸಮಸ್ಯೆ. ಬರಹಗಾರರಿಗೆ ಅತ್ಯಂತ ದೊಡ್ಡದಾದ್ದು ಫಲಿಸೋದು ಅವರವರ ಏಕಾಕಿತನದಲ್ಲಿ. ಆದರೆ ಅತ್ಯಂತ ದೊಡ್ಡದಾದ್ದು ಅವರಿಗೆ ಒದಗೋದು ಅವರವರ ಸಮುದಾಯದಲ್ಲಿ. ಸಮುದಾಯವಿಲ್ಲದೆ ಅನುಭವ ಒದಗೋದಿಲ್ಲ. ಏಕಾಕಿತನವಿಲ್ಲದೇನೆ ನೀವು ಅದನ್ನು ನಿರ್ವಹಿಸುವುದಕ್ಕೆ ಸಾಧ್ಯವಿಲ್ಲ. ಅತ್ಯಂತ ಏಕಾಂಗಿಯಾಗಿ ಅದನ್ನು ಅನುಭವಿಸಿ ಅದನ್ನ ಮತ್ತೆ ತನ್ನ ಸಮುದಾಯಕ್ಕೆ ಕೊಡುವ ಶಕ್ತಿಯನ್ನು ಪಡೆದಿರಬೇಕು. ಅದಕ್ಕೆ ಬೇಕಾದಂಥ ರೂಪಕಗಳನ್ನು ನಾವು ಇವತ್ತು ಹುಡುಕಬೇಕಾಗಿ ಬಂದಿದೆ. ಅದು ಡಿಕ್ಷನರಿಯಲ್ಲಿ ಹುಡುಕಿದರೆ ಸಿಗುವಂಥದ್ದಲ್ಲ. ಆ ಮೆಟಫರ್‌ನ್ನು ನಮ್ಮೊಳಗೇ ಹುಡುಕಬೇಕಾಗಿ ಬಂದಿದೆ. ಅದು ತಾಳುವಂಥ, ಬಾಳುವಂಥ ಮೆಟಫರ್.

ನಾನು ಇನ್ನೊಂದು ಸಿನಿಮಾ ನೋಡಿದೆ. ಅದು ಪ್ಯಾಲಿಸ್ಟೇನಿಯನ್ನಿನ ಸಿನಿಮಾ. ಅದರಲ್ಲಿ ಇಬ್ಬರು ಪ್ಯಾಲಿಸ್ಟೇನಿಯನ್ ಯುವಕರು ತಮ್ಮ ದೇಶದ ಮರ್ಯಾದೆಯನ್ನು ಉಳಿಸುವುದಕ್ಕೋಸ್ಕರವಾಗಿ ಆತ್ಮಾಹುತಿಗೆ ಅಂತ ತಯಾರಾಗ್ತಾರೆ. ಅದರಲ್ಲಿ ಒಬ್ಬ ಸೋತುಬಿಡ್ತಾನೆ. ಅವನು ಆತ್ಮಾಹುತಿ ಮಾಡ್ಕೊಳ್ಳಲ್ಲ. ಇನ್ನೊಬ್ಬ ಆತ್ಮಾಹುತಿ ಮಾಡ್ಕೊಳ್ತಾನೆ. ಮಾಡ್ಕೊಳ್ಳುವಾಗ ಅವನ ತಾಯಿಯ ಮನೆಯಲ್ಲಿ ಆ ಆತ್ಮಾಹುತಿಗೆ ಪ್ರೇರಣೆ ಮಾಡಿದ ಸಂಘದವರು ಅವನ ತಾಯಿಗೆ ಸಾಂತ್ವನ ಇತ್ಯಾದಿಗಳನ್ನೆಲ್ಲ ಹೇಳ್ತಾ ಇರ‍್ತಾರೆ. ಯಾವುದು ಕ್ರೌರ್ಯವೋ ಅದನ್ನು ಒಂದು ಆಚರಣೆ ಅನ್ನುವ ರೀತಿಯಲ್ಲಿ ಅದನ್ನು ಮಾಡಿರುತ್ತಾರೆ. ಪತ್ರಿಕೆಯಲ್ಲಿ ಓದಿದಾಗ ಅದು ನಮಗೆ ಕ್ರೌರ್ಯ. ಆದರೆ ಈ ಸಿನಿಮಾದಲ್ಲಿ ರಿಲಿಜಿಯಸ್ ಆದ ಆಚರಣೆ ಇರುತ್ತಲ್ಲ. ಅದರಂತೆ ಆಚರಣೆಯ ಹಾಗೆ ತೋರಿಸಿದ್ದಾನೆ. ಅದನ್ನು ನೋಡಿದಾಗ ನನಗೆ ಸಮಸ್ಯೆಗಳು ಉದ್ಭವವಾಗಿಬಿಟ್ಟವು. ಯಾಕೆಂದ್ರೆ ಅದು ಚಾರಿತ್ರಿಕವಾಗಿತ್ತು. ಅದರಲ್ಲಿ ಸಮಾಜಶಾಸ್ತ್ರೀಯವಾದ ಮತ್ತು ಮನಃಶಾಸ್ತ್ರೀಯವಾದ ಅಂಶಗಳಿದ್ದವು. ನಾನು ಆಗಲೇ ಹೇಳಿದ ಇನ್ನೊಂದು ಸಿನಿಮಾದಲ್ಲಿ ಈ ರೀತಿಯ ಮನಃಶಾಸ್ತ್ರಿಯ ಅಂಶಗಳು ಇರಲಿಲ್ಲ. ಆದರೆ ನನ್ನ ಮನಸ್ಸು, ಬಹುಶಃ ನಿಮ್ಮ ಮನಸ್ಸು ಕೂಡ ಹೇಗಿದೆ ಅಂದರೆ, ನಮ್ಮದು ಚರಿತ್ರೆಯಲ್ಲಿರುವ ಮನಸ್ಸು, ರಾಜಕಾರಣದಲ್ಲಿರುವ ಮನಸ್ಸು, ಇದನ್ನೆಲ್ಲ ಹಚ್ಚಿಕೊಳ್ಳುವ ಮನಸ್ಸು, ಇದರಿಂದ ರಗಳೆ ಆಗುವ ಮನಸ್ಸು. ಆದರೆ ಇದನ್ನು ಹೇಗೆ ಹೇಳಬೇಕು ಅಂತ ಹುಡುಕಿದಾಗ ನಾವು ಇಷ್ಟರವರೆಗೆ ಹೇಳಿದೆಲ್ಲವೂ ವಿಫಲವಾಗಿಬಿಟ್ಟಿವೆ ಎನಿಸತೊಡಗುತ್ತದೆ.

ನಾನು ಏನು ಹೇಳಿದರೂ ನನಗೆ ಬರುವ ಕಾಗದ ಇತ್ಯಾದಿಗಳೆಲ್ಲ ಹೇಗಿರುತ್ತವೆ ಅಂದ್ರೆ ನಾನು ಅವರು ಬಯಸಿದ್ದನ್ನು ಹೇಳಿದ ಹಾಗೆ ತಿಳಿದುಕೊಂಡು ನನ್ನನ್ನು ಬಯ್ಯುತ್ತಿರುತ್ತಾರೆ. ಕನ್ನಡದಲ್ಲಿರೋದು, ಇನ್ನೊಂದು ಕನ್ನಡಕ್ಕೆ ಟ್ರಾನ್ಸ್‌ಲೇಟ್ ಆಗಿಬಿಡುತ್ತೆ. ಅದು ಯಾವ ಕನ್ನಡಕ್ಕೆ ಅಂದರೆ ಈ ಪತ್ರಿಕೆಗಳ ಕನ್ನಡಕ್ಕೆ ಟ್ರಾನ್ಸ್‌ಲೇಟ್ ಆಗಿರುತ್ತೆ. ಆದರೆ ನಾವು ಹೇಗೆ ಹೇಳಬೇಕು ಎಂದರೆ ಮುಟ್ಟುವ ಹಾಗೆ ಹೇಳಬೇಕು. ನೆನಪಿಗೆ ಬರುವ ಹಾಗೆ ಹೇಳಬೇಕು. ಒಂದು ಸಂಕಟವನ್ನು ಕೇಳಿದವನಿಗೆ ಸಂಕಟವಾಗುವ ಹಾಗೆ ಹೇಳಬೇಕು.

ಒಂದು ಅದ್ಭುತವಾದ ಲೇಖನವನ್ನು ರಾಮಾನುಜನ್ ಬರೆದ್ರು. ಅವರು ಕರ್ನಾಟಕದಲ್ಲಿ ಹಲವು ಬಗೆಯ ರಾಮಾಯಣಗಳಿವೆ ಅಂದಿದ್ದರು. ಒಂದು ರಾಮಾಯಣದ ಕತೆಯನ್ನು ಅವರು ಯಾವಾಗಲೂ ಹೇಳ್ತಾ ಇದ್ರು. ಅದು ಇಂಟರ್‌ಟೆಕ್ಸ್ಚುಯಾಲಿಟಿಗೆ ಒಂದು ಉದಾಹರಣೆಯಾಗಿತ್ತು. ಇಂಟರ್‌ಟೆಕ್ಸ್ಚುಯಾಲಿಟಿ ಅಂದರೆ ಒಂದು ಟೆಕ್ಸ್ಟ್ ಇನ್ನೊಂದು ಟೆಕ್ಸ್ಟಿನೊಳಗೆ ಇರೋದು. ನಾನು ಯಾವುದು ನನ್ನ ಟೆಕ್ಸ್ಟ್ ಅಂತಿರ‍್ತಿನೋ ಅದು ಇನ್ನೊಬ್ಬರ ಟೆಕ್ಸ್ಟ್‌ನಲ್ಲಿ ಹೋಗಿ ಸೇರ‍್ಕೊಂಡು ಬಿಟ್ಟಿರುತ್ತೆ. ಅದಕ್ಕೆ ಉದಾಹರಣೆ ಏನಪ್ಪ ಅಂದ್ರೆ, ಒಬ್ಬ ರಾಮ ಮತ್ತು ಸೀತೆ ಅಕ್ಷರ ಬಾರದವರು, ಹಳ್ಳೀಯವರಾಗಿರ‍್ತಾರೆ. ಇಬ್ಬರೂ ಬಹಳ ವಾದ ಮಾಡ್ತಾರೆ. ಸೀತೆಗೆ ‘ನೀನು ಕಾಡಿಗೆ ಬರುವಂಗಿಲ್ಲ ನಾನು ಹೋಗ್ತೀನಿ’ ಅಂತ ರಾಮ. ‘ಇಲ್ಲ ನಾನು ನಿಮ್ಮ ಅರ್ಧಾಂಗಿ ನಾನು ಬರ‍್ತೀನಿ’ ಅಂತ ಸೀತೆ. ಎಷ್ಟು ವಾದ ಆಗುತ್ತೆ ಅಂದರೆ, ಇವನು ಇನ್ನೊಂದು ವಾದ ಹೂಡ್ತಾನೆ, ಆಗ ಅವಳು ಹೇಳ್ತಾಳೆ; ‘ಎಲ್ಲಾ ರಾಮಾಯಣಗಳಲ್ಲೂ ಸೀತೆ ಕಾಡಿಗೆ ಹೋಗ್ತಾಳೆ ನನ್ನನ್ನ ಏಕೆ ಬೇಡ ಅಂತೀಯಾ?’ ಇದು ಇಂಟರ್‌ಟೆಕ್ಸ್ಚುಯಾಲಿಟಿ. ಇವನ್ನೆಲ್ಲ ನೋಡಿ ರಾಮಾನುಜನ್ ಎಷ್ಟೋ ಬಗೆಯ ರಾಮಾಯಣಗಳಿವೆ ಅಂತ ಬರೆದಿದ್ದಾರೆ.

ಇವತ್ತು ಜಿ.ರಾಜಶೇಖರ್ ಫೋನ್ ಮಾಡಿದ್ದಾಗ ಹೇಳಿದರು ‘ಮುರುಳಿ ಮನೋಹರ ಜೋಷಿಯವರು ಹಲವು ರಾಮಾಯಣಗಳಿವೆ ಅಂತ ಬರೆಯೋದು ಈ ದೇಶದ ಏಕತೆಗೆ ಭಂಗವನ್ನು ತಂದ ಹಾಗಾಗುತ್ತೆ. ಆದ್ದರಿಂದ ಇದನ್ನು ಪಠ್ಯ ಮಾಡಬಾರದು’ ಅಂದರಂತೆ. ಹಾಗೆಂದ ಕೂಡಲೇ ಎಬಿವಿಪಿ ಹುಡುಗರು ದೆಹಲಿ ಯೂನಿವರ್ಸಿಟಿಯ ಹಿಸ್ಟರಿ ಡಿಪಾರ್ಟ್‌ಮೆಂಟಿಗೆ ನುಗ್ಗಿ ಆ ಮೇಷ್ಟ್ರಿಗೆ ಬಡಿದು, ಗಾಜುಗಳನ್ನೆಲ್ಲ ಒಡೆದು, ಪುಸ್ತಕವನ್ನು ಹರಿದು ಹಾಕಿದ್ದಾರೆ.

ನನಗೆ ಹಿಂದೂ ಧರ್ಮದ ಆತ್ಮ ಯಾವುದು? ಯಾಕೆ ನಾನು ಹಿಂದುವಾಗಿರೋದು? ಈಗ ನಾನದನ್ನು ಹೇಗೆ ಹೇಳಲಿ? ಉಳಿದ ಸೆಮೆಟಿಕ್ ಧರ್ಮಗಳಾಗಿದ್ದರೆ ನನಗೆ ಅನೇಕ ಸಮಸ್ಯೆಗಳಾಗಿರೋದು. ನಾನು ದೇವರನ್ನು ನಂಬಲೇಬೇಕಾಗಿ ಬಂದಿರೋದು. ದೇವರು ಕ್ರಿಸ್ತನ ಮುಖೇನ ಮಾತ್ರ ದಕ್ಕಬಲ್ಲ ಅಂತ ನಾನು ತಿಳಿಯಬೇಕಾಗಿ ಬಂದಿರೋದು. ಆ ಥರದ ಯಾವ ಸಮಸ್ಯೆಯೂ ಹಿಂದೂ ಆದ ನನಗಿಲ್ಲ. ಐ ಫೀಲ್ ವಂಡರ್‌ಫುಲ್ ಬೀಯಿಂಗ್ ಎ ಹಿಂದೂ. ಅದನ್ನೇ ನಾಶ ಮಾಡ್ತಾ ಇದೀರಿ ನೀವು ಅಂತ ಈ ನನ್ನ ಉಳಿದ ಹಿಂದೂ ಬಾಂಧವರಿಗೆ ಹೇಳೋದು ಹೇಗೆ? ಬಿರ್ಲಾ ಮಂದಿರ ನೋಡಿದರೆ ಅದು ದೇವಸ್ಥಾನ ಅಂತ ನನಗೆ ಅನ್ನಿಸೋದೇ ಇಲ್ಲ. ಮ್ಯೂಸಿಯಂ ಅನ್ಸುತ್ತೆ. ನನಗೆ ಹಳ್ಳಿಗಳಲ್ಲಿ ಹೊಳೆ ಬದಿಯಲ್ಲಿರುವ ದೇವಸ್ಥಾನಗಳು ದೇವಾಲಯಗಳು ಅನ್ನಿಸ್ತವೆ. ಇದನ್ನು ಹೇಗೆ ಹೇಳಲಿ? ನನಗಿರುವ ಸೆನ್ಸ್ ಆಫ್ ಸೇಕ್ರೆಡನ್ನ ಹೇಗೆ ಹೇಳೋಕೆ ಸಾಧ್ಯ ಇವತ್ತು? ಸಾಧ್ಯವೇ ಆಗ್ತಾ ಇಲ್ಲ.

ಈಗ ಇನ್ರ್ನೆಂದು ಸಿನಿಮಾ ಬಂದಿದೆ. ಮಾಯಾವತಿ ಸರ್ಕಾರ ಅದನ್ನು ಬ್ಯಾನ್ ಮಾಡುತ್ತೆ. ಯಾಕೆಂದ್ರೆ ಅಲ್ಲಿ ಅವರಿಗೆ ಓಟು ಕೊಟ್ಟವರ ವಿರೋಧವಾಗುತ್ತೆ ಅಂತ. ಇದನ್ನೆಲ್ಲ ಹೇಳುವಾಗ, ನಾನು ಪ್ರಜಾತಂತ್ರವನ್ನು ನಂಬುವವನು; ಆದರೆ ಪ್ರಜಾತಂತ್ರದ ಬಹುಮತವನ್ನು ನಾನು ನಂಬುವವನಲ್ಲ. ಸತ್ಯ ಒಬ್ಬನಲ್ಲಿ ಮಾತ್ರ ಇರಬಹುದು, ಸಾವಿರ ಜನ ಸುಳ್ಳು ಅಂತ ಅಂದರೆ ಒಬ್ಬ ತಿಳಿದ ಸತ್ಯವೇ ಸತ್ಯ ಇರಬಹುದು. ಪ್ರಜಾತಂತ್ರಕ್ಕೆ ಇಂಥ ವಿರೋಧವಾದ ಮನೋಭೂಮಿಕೆ ಇಲ್ಲದಿದ್ರೆ ನೀವು ಲೇಖಕರೇ ಆಗಲ್ಲ. ‘ಎಲ್ಲರೂ ಒಪ್ಕೊಂಡ್ರು ಅದಕ್ಕೆ ಇದು ನಿಜ’ ಅನ್ನುವವನು ಲೇಖಕ ಅಲ್ಲ. ಎಲ್ಲರೂ ಒಪ್ಪಿಕೊಂಡರೂ ಕೂಡ ಅದು ನಿಜವಲ್ಲದೇ ಇರಬಹುದು.

ನೀವೆಲ್ಲ ಕೇಳಿರಬಹುದು ‘ಎನಿಮಿ ಆಫ್ ದಿ ಪೀಪಲ್’ ಅಂತ ಇಬ್ಸನ್ನನ ಒಂದು ನಾಟಕ ಇದೆ. ಅಲ್ಲೊಂದು ಊರಿಗೆ ಟೂರಿಸಂನಿಂದ ತುಂಬಾ ದುಡ್ಡು ಬರ‍್ತಾ ಇರುತ್ತೆ. ಆ ಊರು ಉದ್ಧಾರ ಆಗ್ತ ಇರುತ್ತೆ. ಆದರೆ ಅಲ್ಲೊಂದು ಯಾವುದೋ ಒಂದು ರೋಗಾಣು ನೀರಿನಲ್ಲಿದೆ ಅನ್ನೋದು ಒಬ್ಬ ವಿಜ್ಞಾನಿಗೆ ಗೊತ್ತಾಗಿಬಿಡುತ್ತೆ. ಅದನ್ನು ಅವನು ಹೇಳಬೇಕು ಅಂತಂದ್ರೆ, ಎಷ್ಟು ಜನ ಅನುಕೂಲಗಳಿಗೆ ನೀನು ವಿರೋಧಿಯಾಗ್ತೀಯ ಅಂತ ಅವನ ಬಾಯಿ ಮುಚ್ಚಿಸೋದಿಕ್ಕೆ ಪ್ರಯತ್ನಿಸ್ತಾರೆ. ನಮ್ಮ ಸುಖ ಸಂಪತ್ತಿಗೆ ನೀನು ವಿರೋಧಿಯಾಗ್ತೀಯ ಅಂತಾರೆ. ಆದರೆ ಅವನು ವಿರೋಧಿಯಾಗಿ ನಿಲ್ತಾನೆ. ಎನಿಮಿ ಆಫ್ ದಿ ಪೀಪಲ್ ಆಗ್ತಾನೆ. ಅದನ್ನು ಇಬ್ಸನ್‌ಆ ಕಾಲದಲ್ಲಿ ಬರೆದ. ನಾವು-ಲೇಖಕರು ಎನಿಮಿ ಆಫ್‌ದಿ ಪೀಪಲ್ ಆಗೋಕೆ ತಯಾರಿರಬೇಕು. ಜನ ಯಾವುದು ಸತ್ಯ ಅಂತ ತಿಳಿದಿದ್ದಾರೆ ಅದನ್ನು ಅಲ್ಲ ಎನ್ನುವ ಧೈರ್ಯಕ್ಕೆ ನಾವು ಸಿದ್ದರಿರಬೇಕು.

ಇವಾಗೇನಾಗಿದೆ ಗೊತ್ತಾ? ಚಿತ್ರ ಇಲ್ಲದಿದ್ದರೆ ಅದು ನ್ಯೂಸೇ ಅಲ್ಲ, ಯಾವುದೇ ಟೆಲಿವಿಷನ್ ಚಾನೆಲ್‌ನಲ್ಲಿ ನ್ಯೂಸ್ ಆಗಬೇಕಾದರೆ ಅದಕ್ಕೊಂದು ವಿಶ್ಯುಯಲ್ ಇರಲೇಬೇಕು. ಪತ್ರಿಕೆಗಳಲ್ಲೂ ಸುಂದರವಾಗಿ, ಚೆಂದವಾಗಿ ಮಾಡುವ ಚಾಳಿ. ಕಮ್ಯೂನಿಸ್ಟ್ ಪಕ್ಷದವರು ಒಂದು ಪತ್ರಿಕೆಯನ್ನ ತಂದ್ರು. ನಮ್ಮ ಮುಖ್ಯಮಂತ್ರಿಯನ್ನ ಖಂಡಿಸಿ. ಕವರ್‌ಪೇಜ್‌ನಲ್ಲಿ ಮುಖ್ಯಮಂತ್ರಿಯದೊಂದು ಒಳ್ಳೆಯ ಚಿತ್ರ ಇತ್ತು. ನಾವು ಆ ಚಿತ್ರ ಹಾಕಿದ ಕೂಡಲೇ ಚಿತ್ರದ ಪರವಾಗಿಯೂ ನಮ್ಮ ಮನಸು ಒಂಚೂರು ಇರುತ್ತೆ. ಹೇ… ನೋಡೋಕೆ ಏನೋ ಚೆನ್ನಾಗಿ ಕಾಣ್ತಾ ಇದೆ ಅಂತ, ಒಳ್ಳೇ ಪೋಸ್‌ನಲ್ಲಿ ತೆಗೆದಿದ್ದಾರೆ ಈ ಚಿತ್ರಾನ ಅಂತ ಅನ್ಸುತ್ತೆ.

ನಾನು ಆರಂಭದಲ್ಲೇ ಒಂದು ಸಿನಿಮಾ ಬಗ್ಗೆ ಹೇಳಿದ್ನಲ್ಲ? ಅದನ್ನು ನೋಡುವಾಗ, ಬೇರೆ ಯಾವುದನ್ನೂ ಆಲೋಚನೆ ಮಾಡೋಕೆ ಆಗದೇ ಇರುವ ಆತ್ಮಾಹುತಿಯ ಮನಃಸ್ಥಿತಿಯನ್ನು, ಒಂದು ಜೀವ ಅದಕ್ಕೆ ತಯಾರಾಗುವ ಸ್ಥಿತಿಯನ್ನು, ನಾನು ಗ್ರಹಿಸಿ ಇದು ನನ್ನ ಒಳಗೂ ಇರೋಕೆ ಸಾಧ್ಯವೋ ಅಂತ ಅನ್ನಿಸಿತು. ‘ಮ್ಯಾಕ್‌ಬೆತ್’ ಓದಿದಾಗ ನಾವು ಕೂಡ ಮ್ಯಾಕ್‌ಬೆತ್ ಆಗೋಕೆ ಸಾಧ್ಯವಲ್ಲವೆ ಅಂತ ಗಾಬರಿಯಾಗುತ್ತದೆ.

ಆ ಸ್ಥಿತಿಯಲ್ಲಿ ಕಾವ್ಯ ಮಾತನಾಡದಿದ್ದರೆ ಏನೂ ಮಾತಾಡಿದಂತೆ ಅಲ್ಲ, ಬಾರ್ಡ್‌ಗೆ ಆ ಸಮಸ್ಯೆ ಇರಲಿಲ್ಲ. ಇಡೀ ಸಮುದಾಯವೇ ಯೋಚನೆ ಮಾಡಿದ್ದನ್ನು ಅವನು ಹೇಳ್ತಾ ಇದ್ದ. ಸಮುದಾಯ ಬಹಳ ದೊಡ್ಡದಾಗಿದ್ದರೆ ಅವನು ಬಹಳ ದೊಡ್ಡ ಕವಿಯೂ ಆಗಿರುತ್ತಿದ್ದ. ಹೋಮರನ ಹಾಗೆ. ಈ ಪೊಯೆಟ್ ಇರುವುದರಿಂದ ಅವನು ತನ್ನ ಅತ್ಯಂತ ವೈಯಕ್ತಿಕವಾದ ನೆಲೆಯಲ್ಲಿ, ಒಂದು ವೈಯಕ್ತಿಕ ಭಾಷೆಯಲ್ಲಿ, ನಮ್ಮ ಇಡೀ ಸಮಾಜವನ್ನು ಮತ್ತು ನಾಗರೀಕತೆಯನ್ನೇ ನಾಶ ಮಾಡಿಬಿಡಬಹುದಾದಂಥ ಅಸಹನೆ ಇದೆಯಲ್ಲ, ಇಂಥ ಈ ಕಾಲದಲ್ಲಿ ಬರೆಯಬೇಕಾಗಿದೆ.

ನಮಗೆ ಟಾಲರೆನ್ಸ್ ಇಲ್ಲವೇ ಇಲ್ಲ. ನಮ್ಮದಲ್ಲದೆ ಇರುವುದನ್ನು ನಾವು ಒಪ್ಪಿಕೊಳ್ಳುವುದೇ ಇಲ್ಲ. ಕೂಡಲೇ ಅದು ಯಾರೋ ಒಬ್ಬ ಡೆವಿಲ್ ಮಾಡಿರೋದು ಅಂತೀವಿ. ಅಂಥ ಒಂದು ಸಮಾಜದಲ್ಲಿ ಕಂಬಾರರು ಹೇಳಿದ ಹಾಗೆ ಮಾತಿಗೆ ಮತ್ತೆ ಶಕ್ತಿಯನ್ನು ತರೋದು ಹೇಗೆ? ಅದೂ ಕನ್ನಡ ಮಾತಿಗೆ ಮತ್ತೆ ಶಕ್ತಿಯನ್ನು ತರೋದು ಹೇಗೆ? ಹಾಗೆ ಮಾತಿಗೆ ಮತ್ತೆ ಶಕ್ತಿ ಬರಬೇಕಾದರೆ ಕೆಲವು ಅಂಶಗಳಿವೆ; ಸಾಮಾನ್ಯ ಶಾಲೆಗಳಿರಬೇಕು, ಹತ್ತನೆಯ ತರಗತಿಯ ತನಕ ಕನ್ನಡ ಮೀಡಿಯಂ ಇರಬೇಕು, ಎಲ್ಲ ಕನ್ನಡದಲ್ಲಿ ಕಲೀಬೇಕು. ಬೇಕಾದರೆ ಇಂಗ್ಲಿಷ್‌ನಲ್ಲಿ ಮಾತನಾಡೋದಿಕ್ಕೆ ಕಲಿಯಬೇಕು. ಎರಡೆರಡು ಭಾಷೆಗಳಲ್ಲಿ ವ್ಯವಹರಿಸಬೇಕು, ಯಾಕೆಂದ್ರೆ ಅವನು ಬದುಕಬೇಕಲ್ಲ? ಕನ್ನಡವನ್ನು ಆತ್ಮೀಯವಾಗಿ ಕಲಿತಿರಬೇಕು. ಆಗ ಎಲ್ಲ ವಿಷಯಗಳನ್ನು ಆತ್ಮೀಯವಾಗಿ ಹೇಳುವುದು ಹೇಗೆ ಎನ್ನುವುದು ಗೊತ್ತಾಗುತ್ತೆ. ಕನ್ನಡ ಕೇವಲ ಸಾರ್ವಜನಿಕವಾದ ಭಾಷೆಯಾದ ಕೂಡಲೇ, ನಮ್ಮ ಎಲ್ಲ ಕತೆಗಳು ಪದ್ಯಗಳು ಬಹಳ ಸಾರ್ವಜನಿಕ ಭಾಷೆಯಲೇ ಬರುವುದಕ್ಕೆ ಶುರುವಾದರೆ ಅದು ಬಂಡಾಯ ಕಾವ್ಯದ ಕಾಲದಲ್ಲಿ ಆದ ಹಾಗೆ ಆಗಿ ಬಿಡುತ್ತದೆ. ಲ್ಯುಕಾಕ್ಸ್‌ನಂಥವನಿಗೆ ಕಾಫ್ಕ ಹೇಳಿದ್ದು ಸತ್ಯ ಅಂಥ ಅನ್ನಿಸ್ತಲ್ಲ,  ಹಾಗೆ ಇವತ್ತಲ್ಲ ನಾಳೆ ನಾವು ಬರೆದಿದ್ದು ಸತ್ಯ ಅಂಥ ಎನ್ನಿಸುವ ಹಾಗಾದ್ರೂ ಬರೆಯುವುದು ಹೇಗೆ ಎನ್ನುವ ಸಮಾಧಾನದಲ್ಲಿ, ಆ ಕಷ್ಟದಲ್ಲಿ, ಆ ರೀತಿಯ ಒಂದು ವ್ರತದಲ್ಲಿ ಇರುವ ಶಕ್ತಿ ನಮ್ಮ ಯುವಕರಲ್ಲಿ ಇರಬೇಕು. ಆ ಶಕ್ತಿ ಇರುವವನು ತನ್ನೊಳಗನ್ನು ಮುಟ್ಟಿ ನೋಡಿಕೊಂಡಿರುವವ ನಾಗಬಾರದು. ಅವನಿಗೆ ಹೊರಗು ಮತ್ತು ಒಳಗಿಗೆ ವ್ಯತ್ಯಾಸವೇ ಇಲ್ಲದಿರುವಂತಾಗಿರಬೇಕು. ಅದನ್ನು ಆತ್ಮಗತ ಮಾಡಿಕೊಂಡವನಾಗಿರಬೇಕು. ಅದು ಕೆಲವೇ ಕೆಲವು ಕ್ಷಣಗಳಲ್ಲಿ ಅತ್ಯಂತ ದೊಡ್ಡ ಸಾಹಿತಿಗಳಲ್ಲಿ ಆಗುತ್ತೆ. ಆತ್ಮದ ಬಗ್ಗೆ ಬರೆದುಕೊಂಡಿದ್ದೇ ಎಲ್ಲ ಪರರ ಬಗ್ಗೆ ಬರೆದಂಥ ಸಂಗತಿಯಾಗಿರುತ್ತೆ.

ಕಾಫ್ಕಾನ ‘ಕೆ’ ಎನ್ನುವವನು ಇಡೀ ಯಹೂದ್ಯ ಜನಾಂಗವನ್ನೇ ಪ್ರತಿನಿಧಿಸುವ ರೀತಿ ಅದು. ಆ ರೀತಿಯ ಬರವಣಿಗೆಯನ್ನು ಕನ್ನಡದಲ್ಲಿ ಮಾಡೋದು ಸಾಧ್ಯವಾಗುವುದಕ್ಕೆ ಬೇಕಾದಂಥ ಒಂದು ವಾತಾವರಣವನ್ನು ನಾವು ಇವತ್ತು ಶಾಲಾ ಕಾಲೇಜುಗಳಲ್ಲಿ ಇಲ್ಲದೆ ಇದ್ರೆ, ಕೊನೆ ಪಕ್ಷ ಕನ್ನಡ ಟೈಮ್ಸ್‌ನಂಥ ಪತ್ರಿಕೆಗಳಲ್ಲಾದರೂ ಸಿದ್ದಪಡಿಸಬೇಕು.

*

(ನಟರಾಜ ಹುಳಿಯಾರ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕನ್ನಡ ಟೈಮ್ಸ್ ಪತ್ರಿಕೆ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾಡಿದ ಭಾಷಣ. ಬರಹರೂಪ: ಜಯಶಂಕರ ಹಲಗೂರು. ಕೃಪೆ : ಕನ್ನಡ ಟೈಮ್ಸ್, ಬೆಂಗಳೂರು.)