ಕೆಲವು ತಿಂಗಳ ಹಿಂದೆ ನನ್ನ ಆಪ್ತ ಸ್ನೇಹಿತರೊಬ್ಬರು ಒಂದು ಅದ್ಭುತ ಕತೆಯನ್ನು ಹೇಳಿದರು. ಆ ಸ್ನೇಹಿತ ಒಬ್ಬ ಒಳ್ಳೆಯ ಕತೆಗಾರ, ಕನ್ನಡದ ಒಬ್ಬ ಪ್ರಮುಖ ಬರಹಗಾರರೂ ಹೌದು. ಅವರ ಊರು ಬೆಳಗಾಂ ಹತ್ತಿರದ ಒಂದು ಹಳ್ಳಿ. ಆ ಗೆಳೆಯರ ಹೆಸರು ಕಂಬಾರ ಅಂತ. ಆದರೆ ಅವರು ಹೇಳಿದ್ದ ಕತೆಯೇ ಮರೆತುಹೋಯಿತಲ್ಲ! ನಾನು ಚಿಕ್ಕವನಾಗಿದ್ದಾಗ ಹೀಗಾಗಿರಲಿಲ್ಲ. ಕತೆಯನ್ನ ನಾನು ಮರೆತದ್ದಾದರೂ ಹೇಗೆ! ಯಾಕಂದ್ರೆ ಅದನ್ನ ನಾನು ಮತ್ತೆ ಯಾರಿಗೂ ಹೇಳಿರಲಿಲ್ಲ. ಯಾಕೆ ಹೇಳಲಿಲ್ಲ? ಈಗಿನ ಕಾಲ ಹೇಗಿದೆ ಅಂದ್ರೆ-ಸ್ನೇಹಿತರ ಜೊತೆ ಮಾತಾಡೋವಾಗೆಲ್ಲಾ ಬರೀ ವಿಚಾರಗಳ ಬಗ್ಗೆ ಮಾತಾಡ್ತಾ ಇರ್ತೀವಿ. ಯಾವುದೋ ಪರಿಸ್ಥಿತಿಯನ್ನ ವಿಶ್ಲೇಷಿಸುತ್ತಾ ಆಮೂರ್ತಕ್ಕೆ ಜಾರಿಕೊಳ್ತೀವಿ. ಆದ್ರೆ ವರುಷಗಳ ಹಿಂದೆ ಆಗಿದ್ರೆ ನಾನು ಕತೆ ಹೇಳಿರುತ್ತಿದ್ದೆ. ಅದಕ್ಕೇ ನನ್ನ ಆ ಗೆಳೆಯರಿಗೆ ಫೋನ್ ಮಾಡಿ, ‘ಸಾರಿ, ನೀವು ಹೇಳಿದ ಕತೆಯನ್ನ ನಾನು ಇನ್ನೊಬ್ಬರಿಗೆ ಹೇಳಲಿಲ್ಲ. ಹಾಗಾಗಿ ಕತೆ ಮರೆತೇ ಹೋಗಿದೆ’ ಎಂದು ಕ್ಷಮೆ ಕೇಳಿದೆ. ಕತೆಗಳು ಬೆಳೆಯೋದೇ ಅವನ್ನ ಮತ್ತೆ ಮತ್ತೆ ಹೇಳೋದರಲ್ಲಿ. ಕತೆ ಸದಾ ಒಂದು ನೆಲೆಯನ್ನ, ಸಂದರ್ಭವನ್ನ ಹುಡುಕ್ತಾ ಇರುತ್ತೆ. ನನಗೆ ಒಂದು ಕತೆ ಗೊತ್ತಿದ್ದು, ಅದನ್ನ ಇನ್ನೊಂದು ಸಂದರ್ಭದಲ್ಲಿ ಹೇಳಿದಾಗ ಕತೆಗೆ ಇನ್ನೊಂದು ವಿಶೇಷವಾದ ಅರ್ಥ ದಕ್ಕುತ್ತೆ. ಹೀಗೆ ಅದರ ಅರ್ಥ ಬದಲಾಯಿಸುತ್ತಾ ಹೋಗುತ್ತೆ. ಕಂಬಾರರು ಮತ್ತೆ ಹೇಳಿದ್ದರಿಂದ ಈಗ ಹೇಳುತ್ತೇನೆ. ಹೀಗೆ ಹೇಳಿದ ಮೇಲೆ ಮರೆಯೋದಿಲ್ಲ ಅಂತ ಭಾವಿಸುತ್ತೇನೆ, ಇರಲಿ.

‘ಒಬ್ಬಳು ಹೆಂಗಸಿದ್ದಳಂತೆ. ತುಂಬ ಸುಂಧರವಾದ ಹೆಂಗಸು. ಅವಳಿಗೆ ಒಂದು ಕತೆ, ಒಂದು ಹಾಡು ಗೊತ್ತಿತ್ತು. ಅವುಗಳ ಬಗ್ಗೆ ಎಷ್ಟು ವ್ಯಾಮೋಹ ಎಂದರೆ ಅವನ್ನ ಯಾರ ಹತ್ತಿರವೂ ಹಂಚಿಕೊಂಡಿರಲಿಲ್ಲ. ಒಂದು ಸಲ ಅವಳು ನಿದ್ದೆಯಲ್ಲಿದ್ದಾಗ, ಆ ಕತೆಗೂ ಹಾಡಿಗೂ ಹೇಗಾದರೂ ಮಾಡಿ ಅವಳಿಂದ ತಪ್ಪಿಸಿಕೊಂಡು ಹೊರಬರಬೇಕು ಅಂತನ್ನಿಸಿತು. ಹೊರಬಂದು ಸುತ್ತಾಡಬೇಕು ಅಂತ ಆಸೆ. ಸರಿ, ದೇಹವೊಂದನ್ನು ಹೊಕ್ಕರೆ ಚಲಿಸಬಹುದಲ್ಲ ಅಂತ ಅಂದುಕೊಂಡ ಹಾಡು ಒಂದು ನಿಲುವಂಗಿಯ ರೂಪ ತಾಳಿ ಗೂಟಕ್ಕೆ ನೇತು ಹಾಕಿಕೊಂಡಿತು. ಕತೆ ಹೋಗಿ ಒಂದು ಜೊತೆ ಚಪ್ಪಲಿಯಾಯಿತು. ನಿಲುವಂಗಿಯ ಕೆಳಗೆ ಒದು ಜೊತೆ ಚಪ್ಪಲಿ! ಗಂಡ ಹಿಂತಿರುಗಿ ಮನೆಗೆ ಬಂದಾಗ ಕಂಡಿದ್ದೇನು? ಒಂದು ನಿಲುವಂಗಿಯ ಕೆಳಗೆ ಒಂದು ಜೊತೆ ಚಪ್ಪಲಿ! ಸರಿ, ‘ನಾನು ಬರೋಕೆ ಮುಂಚೆ ಯಾರಿಲ್ಲಿಗೆ ಬಂದಿದ್ದವರು?’ ಅಂತ ಹೆಂಡತಿಯನ್ನು ಗದರಿಸಿದ. ಅವಳು ‘ಯಾರೂ ಇಲ್ಲವಲ್ಲ!’ ಎಂದಳು. ಮತ್ತೊಂದು ಸಲ ನಿಲುವಂಗಿ, ಚಪ್ಪಲಿಯ ಕಡೆಗೆ ನೋಡಿದ. ಸಿಕ್ಕಾಪಟ್ಟೆ ಕೋಪ ಬಂದು ಹೆಂಡತಿಯ ಜೊತೆ ಜಗಳವಾಡಿ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಬೆದರಿಸಿದ. ಯಾರನ್ನೋ ಮನೆ ಸೇರಿಸಿಕೊಂಡವಳ ಜೊತೆ ಸಂಸಾರವೆ? ಛೇ ಎಂದುಕೊಂಡು ಮನೆ ಬಿಟ್ಟವನು ಹೋದದ್ದೆಲ್ಲಿಗೆ? ಮಾರುತಿ ಗುಡಿಗೆ. ಆಂಜನೇಯನ ದೇವಸ್ಥಾನಕ್ಕೆ. ಎಷ್ಟಾದರೂ ಆಂಜನೇಯ ಬ್ರಹ್ಮಚಾರಿ ಅಲ್ಲವೇ? ಮದುವೆಯಾಗದೇ ಉಳಿದವನು. ಅದಕ್ಕೆ ಆಂಜನೇಯನ ದೇವಸ್ಥಾನ್ಕಕೆ ಹೋಗಿ ಮಲಗಿಕೊಂಡ. ಆ ಹಳ್ಳಿಯಲ್ಲಿ ರಾತ್ರಿ ಊಟ ಆದ ಮೇಲೆ ಹೆಂಗಸರೆಲ್ಲ ದೀಪ ಹಚ್ಚೋದು ವಾಡಿಕೆ. ಆ ದೀಪಕನ್ಯೆಯರೆಲ್ಲಾ ದೇವತೆಗಳು. ಪ್ರತಿ ದೀಪವೂ ಆಂಜನೇಯನ ಗುಡಿಗೆ ಬಂದು ತಾವಿದ್ದ ಮನೆಯಲ್ಲಿ ಆ ದಿನ ಏನೆಲ್ಲಾ ನಡೆಯಿತು ಎಂಬುದನ್ನ ಮಾತಾಡಿಕೊಳ್ಳುತ್ತಿದ್ದವು. ಇವತ್ತೂ ಹಾಗೇ ಮಾತಾಡಿಕೊಳ್ಳುತ್ತಿದ್ದಾಗ, ಒಬ್ಬ ದೀಪಕನ್ಯೆ ತಾನಿದ್ದ ಮನೆಯಲ್ಲಿ ಹಾಡೊಂದು ಹೇಗೆ ಹೊರಗೆ ಬಂದು ನಿಲುವಂತಿಯಾಯಿತು, ಕತೆ ಹೇಗೆ ಚಪ್ಪಲಿಯಾಯಿತು, ಮನೆಗೆ ಹಿಂತಿರುಗಿದ ಗಂಡ ಹೇಗೆ ಸಂಶಯ ಬಂದು ಜಗಳವಾಡಿಕೊಂಡು ಮನೆ ಬಿಟ್ಟು ಹೋದ ಎಂದು ಎಲ್ಲ ಕತೆಯನ್ನೂ ಹೇಳಿತು. ಅಲ್ಲೇ ಮಲಗಿದ್ದ ಗಂಡನಿಗೆ ಎಲ್ಲವೂ ಕೇಳಿಸಿತು. ಸರಿ, ಸಮಸ್ಯೆಯೆಲ್ಲ ಬಗೆಹರಿದು, ಮನೆಗೆ ಹೋಗಿ ಹೆಂಡಗಿ ಜೊತೆ ರಾಜಿ ಮಾಡಿಕೊಂಡು ಸುಖವಾಗಿ ಇದ್ದ.

ಆ ಕತೆ ಯಾವುದೋ, ಹಾಡು ಯಾವುದೋ, ನನಗಿನ್ನೂ ಗೊತ್ತಿಲ್ಲ. ಅವೇನು ಎನ್ನುವುದು ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇದೇ ತರದ ಕತೆಗಳು ಹಲವಾರಿವೆ. ಈ ಎಲ್ಲ ಕತೆಗಳೂ ಕತೆಗಾರನಿಂದ ಹೊರ ಬಂದು ಒಬ್ಬ ಒಳ್ಳೆಯ ಕೇಳುಗನನ್ನ ತಲುಪಲು ಹಾತೊರೆಯುತ್ತಿರುತ್ತವೆ.

ಇನ್ನೊಂದು ಕತೆ ಇದೆ. ರಾಮಾನುಜನ್ ಅವರ Untold Stories ಸಂಗ್ರಹದಿಂದ ಆಯ್ದ ಬುಡಕಟ್ಟು ಜನಾಂಗದವರ ಒಂದು ಕತೆ. ನಾಲ್ಕು ಕತೆಗಳನ್ನು ಬಲ್ಲ ಒಬ್ಬನಿದ್ದನಂತೆ. ಆದರೆ ಯಾರಿಗೂ ಅವನ್ನು ಹೇಳಲೊಲ್ಲ. ತನ್ನಲ್ಲೇ ಬಚ್ಚಿಟಟುಕೊಂಡಿದ್ದ. ಒಂದು ಸಲ ತನ್ನ ಆಳಿನ ಜೊತೆ ದೂರ ಪ್ರಯಾಣ ಮಾಡಬೇಕಾಗಿ ಬಂತು. ದಾರಿ ಸವೆಸಿದ ಆಯಾಸ ಇಬ್ಬರಿಗೂ. ಆಳು ಮಲಗುವ ಮುಂಚೆ ‘ಆ ಕತೆಗಳನ್ನು ಒಸಿ ಹೇಳಿ ಧಣಿ’ ಎಂದು ಬೇಡಿಕೊಂಡ. ಆ ಧಣಿ ಹೇಳಲ ಒಪ್ಪಲಿಲ್ಲ. ನಿದ್ದೆ ಹೋದ. ತಮ್ಮನ್ನು ಹೊರ ಹೋಗಲು ಬಿಡದೇ ಬಚ್ಚಿಟ್ಟುಕೊಳ್ಳುತ್ತಿದ್ದಾನಲ್ಲ ಅಂತ ಆ ನಾಲ್ಕು ಕತೆಗಳಿಗೆ ಖಂಡಾಪಟ್ಟೆ ಕೋಪ ಬಂತು. ಹೊರಗೆ ಬಂದ ಅವುಗಳಲ್ಲಿ ಒಂದು ಕತೆ, ‘ಅವನು ತಿನ್ನುವ ಅನ್ನ ವಿಷವಾಗಿ ನಾನು ಅವನನ್ನು ಕೊಲ್ಲುತ್ತೇನೆ’ ಎಂದು ಶಪಥ ಮಾಡಿತು. ಇನ್ನೊಂದು ಕತೆ, ‘ಹಾಗೂ ಅವನು ಸಾಯದಿದ್ದರೆ ಮರದ ಕೊಂಬೆಯಾಗಿ ಅವನ ಮೇಲೆ ಬಿದ್ದು ಸಾಯಿಸುತ್ತೇನೆ’ ಎಂದಿತು. ಮೂರನೆಯದು ‘ಅದಕ್ಕೂ ಅವನು ಸಾಯದಿದ್ದರೆ, ಅವನು ಹೊಳೆ ದಾಟುವಾಗ ಪ್ರವಾಹವಾಗಿ ಬಂದು ಅಪ್ಪಳಿಸಿ ಸಾಯಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿತು. ನಾಲ್ಕನೆಯದು ‘ಹಾವಾಗಿ ಕಚ್ಚಿ ಸಾಯಿಸುತ್ತೇನೆ’ ಎಂದಿತು. ಇದನ್ನೆಲ್ಲ ಕೇಳಿಸಿಕೊಂಡ ಆಳಿಗೆ ತನ್ನ ಧಣಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆನ್ನಿಸಿತು. ತಿನ್ನಲು ಹೋದ ಧಣಿಯ ಕೈಯಿಂದ ಅನ್ನವನ್ನು ಕಿತ್ತುಕೊಂಡ. ಮರದ ಕೊಂಬೆ ಬೀಳುವಾಗ ಧಣಿಯನ್ನು ಎಳೆದುಕೊಂಡ. ಪ್ರವಾಹ ನುಗ್ಗಿ ಬಂದಾಗ ಅವನನ್ನು ಎಳೆದು ಈಚೆ ಹಾಕಿದ. ಕಚ್ಚಲು ಬಂದ ಹಾವನ್ನು ಸಾಯಿಸಿದ. ಧಣಿ ‘ಬಂದೆರಗಲಿದ್ದ ಸಾವಿನಿಂದ ನನ್ನನ್ನು ಪಾರು ಮಾಡಿದೀಯ. ನಿನ್ನ ಋಣ ಹೇಗೆ ತೀರಿಸಲಿ?’ ಎಂದ. ‘ಕತೆ ಹೇಳಿ ತೀರಿಸಿ, ಧಣಿ’ ಎಂದ ಆಳು. ‘ಹೇಳೋಕಾಗೋದಿಲ್ಲ’ ಅಂತ ಅವನು. ‘ಹೇಳಲೇಬೇಕು’ ಅಂತ ಇವನು. ಕೊನೆಗೆ ಧಣಿ ‘ಈ ಕತೆಗಳು ನನ್ನ ಹತ್ತಿರ ಹೇಗೆ ಬಂದವು ಅಂತ ನಿನಗೆ ಗೊತ್ತಾದ ತಕ್ಷಣವೇ ನಾನು ಕಲ್ಲಾಗಿ ಹೋಗುತ್ತೇನೆ. ಹಾಗಂತ ಶಾಪ ಇದೆ. ನೀನು ನಿನ್ನ ಸೊಸೆಯನ್ನ ಕರೆ ತಂದು ಕಲ್ಲಿನ ಕಾಲಿಗೆ ಬೀಳಿಸಿದರೆ, ಶಾಪ ಪರಿಹಾರವಾಗುತ್ತದೆ’ ಎಂದ. ಕೊನೆಗೆ ಕತೆ ಹೇಳಿ ಕಲ್ಲಾಗಿ ಹೋದ. ಆಳಿನ ಸೊಸೆ ಬಂದು, ತನ್ನ ಮಗುವನ್ನೂ ಅಡ್ಡ ಬೀಳಿಸಿದ ಮೇಲೆ ಅವನಿಗೆ ಮತ್ತೆ ಜೀವ ಬಂತು.

ಕತೆಗಳು ಹುಟ್ಟೋದೇ ಇನ್ನೊಬ್ಬರಿಗೆ ಹೇಳೋದಕ್ಕೆ. ಹಂಚಿಕೊಳ್ಳೋದಕ್ಕೆ. ತಾನು ಅನುಭವಿಸಿದ್ದನ್ನ ಹಂಚಿಕೊಳ್ಳುವ ಆಸೆಯಿಂದಲೇ ಕತೆಯೊಂದು ಜನ್ಮ ತಾಳುತ್ತೆ. ಆದ್ರೆ ಆಗಿನ ಕಾಲದಲ್ಲಿ ಸಹ ಅನುಭವವನ್ನ ಹಂಚಿಕೊಳ್ಳೋದಿಕ್ಕೆ ಒಪ್ಪದ ಜನರಿದ್ದರು. ಈಗಿನ ದಿನಗಳಲ್ಲಿ ಹೆಚ್ಚಿನ ಕತೆಗಳೆಲ್ಲ ವಾರ್ತಾಪತ್ರಿಕೆಗಳಲ್ಲೇ ಇರುತ್ತವೆ, ಆದರೂ ಅವು ಅನುಭವವನ್ನ ಕೊಡೋದಿಲ್ಲ. ವಿವರಣೆಯನ್ನ ಕೊಡುತ್ತವೆ. ನಿಜವಾದ ಕತೆಗಳು ವಿವರಣೆ ಕೊಡೋದಿಲ್ಲ, ಅನುಭವವನ್ನ ಹಂಚಿಕೊಳ್ಳುತ್ತವೆ. ಆ ವಿಷಯಕ್ಕೆ ಮತ್ತೆ ಬರೋಣ.

ಕತೆಗಳು ಕೇಳುಗರಿಗೆ ಹೇಗೆ ಬಿದ್ದು ಹೇಳುತ್ತವೆ ಎನ್ನುವುದಕ್ಕೆ ಈ ಕತೆ. ಹಾಗೆ ಬುದ್ಧಿ ಹೇಳೋದು, ಸಲಹೆ ಕೊಡೋದು ಕತೆಗಳ ಒಂದು ಮುಖ್ಯ ಕೆಲಸ. ಈಗ ನಾನು ಹೇಳೋ ಕತೆಯನ್ನ ಹೆಂಗಸರು ತಮ್ಮ ಮಗಳಂದಿರಿಗೋ ಸೊಸೆಯಂದಿರಿಗೋ ಹೇಳಲು ಬಳಸುತ್ತಲೂ ಇರಬಹುದು. ಇದೊಂದು ಎರಡನೆಯ ಶತಮಾನದ ಕತೆ. ಒಬ್ಬ ಅಕ್ಕಸಾಲಿಗ ಇದ್ದನಂತೆ. ತನ್ನ ಮಗನಿಗೆ ಒಳ್ಳೆಯ ಕಡೆ ನೋಡಿ ಮದುವೆ ಮಾಡಿ ತಕ್ಕ ಸೊಸೆಯನ್ನ ತರುವ ಆಸೆ ಅವನಿಗೆ. ಆ ಮಗನ ತಾಯಿ ಅರ್ಧ ಕಿಲೋದಷ್ಟು ಘಮ್ಮೆನ್ನುವ ಗಂಧಶಾಲ ಭತ್ತವನ್ನ ಒಂದು ಗಂಟಲ್ಲಿ ಕಟ್ಟಿ ಮಗನ ಕೈಗೆ ಕೊಟ್ಟು ‘ಇದರಲ್ಲಿ ನಿನಗೆ ಒಳ್ಳೆಯ ಅಡುಗೆ ಮಾಡಿ ಊಟ ಹಾಕುವ ಹೆಂಡತಿಯನ್ನ ಹುಡುಕಿಕೊಂಡು ಬಾ’ ಅಂತ ಹೇಳಿ ಕಳುಹಿಸುತ್ತಾಳೆ. ಸರಿ, ಅವನು ಒಳ್ಳೆಯ ಅಡುಗೆ ಮಾಡಿ ಹಾಕೋ ಹೆಂಡತಿಯನ್ನ ಹುಡುಕಿಕೊಂಡು ಹೊರಡ್ತಾನೆ. ದಾರಿಯಲ್ಲಿ ಒಬ್ಬ ಸುಂದರವಾದ ಕನ್ಯೆ ಸಿಗ್ತಾಳೆ. ಅವನ ಗಂಟಲ್ಲಿದ್ದ ಭತ್ತವನ್ನ ತೆಗೆದು, ಬಡಿದು, ಅದರ ಹೊಟ್ಟನ್ನ ಅಕ್ಕಸಾಲಿಗನೊಬ್ಬನಿಗೆ ಮಾರಿ, ಆ ದುಡ್ಡಲ್ಲಿ ಬೇಕಾದ ಪದಾರ್ಥವನ್ನ ಕೊಂಡು, ರುಚಿಕಟಟಾದ ಅಡುಗೆ ಮಾಡಿ ಅವನಿಗೆ ಬಡಿಸುತ್ತಾಳೆ. ಅವಳನ್ನು ಮನಸಾರ ಮೆಚ್ಚಿ ಮದುವೆಯಾಗಿ ಇಬ್ಬರೂ ಸುಖವಾಗಿರುತ್ತಾರೆ. ಒಬ್ಬ ಕನ್ನಡ ಕತೆಗಾರರು ಈ ಸಂಸ್ಕೃತ ಕತೆಯನ್ನ ಸ್ವಲ್ಪ ಬದಲಾಯಿಸಿದ್ದಾರೆ. ಕತೆಯ ಇನ್ನೊಂದು ಗುಣ ಇದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಹೊಸ ಹೊಸ ಆಯಾಮಗಳನ್ನ ಪಡೆದುಕೊಳ್ಳುತ್ತೆ. ಅನುಭವವನ್ನ ಲಿಖಿತವಾಗಿ ಅಲ್ಲ, ಮೌಖಿಕವಾಗಿ ಹಂಚಿಕೊಂಡಾಗ ಮಾಡಿ ಹಾಕಿದ ಮೇಲೆ, ಅವನು ಅವಳನ್ನ ಮದುವೆಯಾಗ್ತೀನಿ ಅಂತಾನೆ. ಅವಳು ಒಲ್ಲೆ ಅಂತಾಳೆ. ಅವನು ಯಾಕೆ ಅಂತ ಕೇಳ್ತಾನೆ. ಅದಕ್ಕೆ ಅವಳು, ‘ನಾನು ನಿನಗೆ ಅಡುಗೆ ಮಾಡಿ ಹಾಕಿದೆ. ನೀನು ಕೂತು ತಿಂದೆ. ಆದರೆ ಒಂದು ಸಲವಾದರೂ ನಿನ್ನ ಅವ್ವ ಊಟ ಮಾಡಿದಳಾ, ಆಳು ಊಟ ಮಾಡಿದನಾ, ಹೋಗಲಿ, ನೀನು ಸವಾರಿ ಮಾಡಿಕೊಂಡು ಬಂದೆಯಲ್ಲಾ, ಆ ಕುದುರೆ ಏನಾದರೂ ತಿಂತಾ, ಕುಡಿಯಿತಾ ಅಂತ ಕೇಳಿದೆಯಾ? ಯಾರ ಬಗ್ಗೆಯೂ ಕಳಕಳಿಯಿಲ್ಲದ ನಿನ್ನನ್ನ ಮದುವೆಯಾಗಲು ನಾ ಒಲ್ಲೆ’ ಎಂದಳಂತೆ. ಇದೆಲ್ಲ ಗೊತ್ತಾದಾಗ ಹುಡುಗನ ತಾಯಿ ‘ಅವನಿಗೆ ನೀನೇ ತಕ್ಕವಳು, ನಿನ್ನನ್ನ ಕೈ ಹಿಡಿದರೆ ಅವನು ಸುಧಾರಿಸುತ್ತಾನೆ; ಎಂದು ಒತ್ತಾಯಿಸಿದಳಂತೆ.  ಅಂದರೆ ಸಂಸ್ಕೃತ ಕತೆಗೆ ಇನ್ನೇನೋ ಬಂದು ಸೇರಿಕೊಂಡಿದೆ. ಆ ಸೇರಿಕೊಂಡಿರುವ ಅಂಶವೇ ಜನಪದ. ಸಂಸ್ಕೃತ ಕತೆ ಹೆಚ್ಚಿನಂಶ ಶಾಸ್ತ್ರೀಯತೆಯ ಕಡೆಗೆ ವಾಲುತ್ತೆ. ಅದಕ್ಕೆ ಜಾನಪದ ಕತೆ ಸೇರಿಕೊಂಡು ಜನರ ಅನುಭವವನ್ನ ಹಂಚಿಕೊಳ್ಳುತ್ತೆ. ಮನೆ ಅಂದ್ರೆ ಏನು?” ಬರೀ ರುಚಿಕಟ್ಟಾದ ಅಡುಗೆ ಸಿಗೋ ಜಾಗ ಮಾತ್ರವೇ? ಅಲ್ಲಿ ಪರಸ್ಪರ ಕಾಳಜಿಯಿದ್ದರೇನೆ ಅದು ಮನೆ. ಅದನ್ನ ಹೇಳೋದು ಕತೆಯ ಈ ಜನಪದೀಯ ಭಾಗ.

ಕೆಲವು ಗಂಭೀರವಾದ ತಾತ್ವಿಕ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಸಹ ನಾವು ಭಾರತದಲ್ಲಿ ಕತೆಗಳನ್ನ ಬಳಸಿಕೊಳ್ಳುತ್ತೇವೆ. ಒಬ್ಬ ಆಧುನಿಕ ವಿದ್ಯಾರ್ಥಿಯನ್ನ ನಾನು ‘ನೀನು ಕಾಳಿದಾಸನವನ್ನು ಓದುವ ಅನುಭವ ಹೇಗಿರುತ್ತದೆ?’ ಎಂದು ಕೇಳಿದರೆ ಅವನು ಕಾಳಿದಾಸನ ಶ್ರೇಷ್ಠತೆಯ ಬಗ್ಗೆ, ಅವನ ಕಾವ್ಯದ ಮೋಹಕತೆಯ ಬಗ್ಗೆ ಉದ್ದ ಪ್ರಬಂಧವನ್ನೇ ಬರೆದುಬಿಡಲಿಲ್ಲ. ಕಾಳಿದಾಸ ವರ್ಜಿಲ್‌ನಂತೆ. He is a great master of craft.  ಆದರೆ ಅಷ್ಟೇ ಸರಳತೆಯೂ ಇರುತ್ತೆ. ಆ ಮಟ್ಟಿಗೆ ಋಜುತ್ವ ಮತ್ತು ವಿದ್ವತ್ತನ್ನು ತಕ್ಕಮಟ್ಟಿಗೆ ಬೆರೆಸೋದಿದೆಯಲ್ಲ? ಅದು ತುಂಬ ಕಷ್ಟದ ಕೆಲಸ. ವರ್ಜಿಲ್‌ಗೆ ಆ ಶಕ್ತಿಯಿತ್ತು ಅಂತ ಹೇಳುತ್ತಾರೆ. ಭಾರತದ ಸಂದರ್ಭದಲ್ಲಿ ಕಾಳಿದಾಸ ಅದನ್ನ ಮಾಡುತ್ತಾನೆ. ಕಾಳಿದಾಸ ಒಬ್ಬ ಕುರುಬ ಅಂತ ಹೇಳುತ್ತೇವೆ. ಒಬ್ಬ ಮಂದಬುದ್ದಿಯ ಕುರುಬ. ಎಂಥಾ ದಡ್ಡ ಅಂದರೆ ತಾನು ನಿಂತಿದ್ದ ರೆಂಬೆಯ್ನನೇ ಸ್ವತಃ ಕಡಿಯುವಷ್ಟು ಆಮೇಲೆ ಏನೇನೋ ಆಗಿಹೋಯ್ತು. ಸರಸ್ವತಿ ದೇವತೆ ಅವನ ಮೇಲೆ ಕರುಣೆ ತೋರಿಸಿ ‘ನಾಲಗೆ ತೆಗೆ’ ಎಂದು ಅಪ್ಪಣೆ ನೀಡುತ್ತಾಳೆ. ಅವನು ತೆರೆದಾಗ ಅದರ ಮೇಲೆ ಬರೆಯುತ್ತಾಳೆ. ಆ ಕ್ಷಣದಿಂದ ಅವನೊಬ್ಬ ಮಹಾ ಕವಿಯಾಗಿ ಬಿಡುತ್ತಾನೆ, ಇತ್ಯಾದಿ. ಈ ಕತೆ ಕೇಳಿದ ಯಾರಿಗಾದರೂ ಹೊಳೆಯುವುದೇನು? ಕಾಳಿದಾಸನ ವಿದ್ವತ್ತಿಗೆ ಈ ಕತೆ ಕನ್ನಡಿ ಹಿಡಿಯುವುದಷ್ಟೇ ಅಲ್ಲ, ಅವನ ಋಜುತ್ವವನ್ನೂ ಅದು ಬಿಂಬಿಸುತ್ತದೆ. ಅವನ ಕಾವ್ಯ ಹೇಗಿರುತ್ತೆ ಅಂದರೆ ಒಬ್ಬ ಕುರುಬನೂ ಅದನ್ನು ಬರೆದುಬಿಡಬಲ್ಲನೇನೋ ಅಂತ ಅನ್ನಿಸುಷ್ಟು ಋಜು. ಆದರೆ ಈ ಕುರುಬ ಸರಸ್ವತಿಯ ಆಶೀರ್ವಾದ ಉಳ್ಳವನು. ಹಾಗಾಗಿ ಇದೊಂದು ರೀಡರ್ ರೆಸ್ಪಾನ್ಸ್ ವ್ಯಾಖ್ಯಾನವೇ. ಕೇಳುವುದಕ್ಕೆ ಅದೊಂದು ಕತೆ. ಆದರೆ ಇನ್ನೇನೋ ಮಹತ್ತಾದ ಅನುಭವವನ್ನ ಅದು ಹೇಳುತ್ತಿರುತ್ತೆ. ಆಧುನಿಕ ಸಿದ್ಧಾಂತಿಯೊಬ್ಬ ಅದರ ಬಗ್ಗೆ ಸಮಗ್ರ ಪ್ರಬಂಧವನ್ನೇ ಬರೆದುಬಿಡಬಲ್ಲ.

ನೀವೆಲ್ಲ ತುಳಸೀದಾಸರ ಕತೆ ಕೇಳಿರಬೇಕು. ತುಳಸಿದಾಸ್ ಅಂತಹ ಶ್ರೇಷ್ಠ ಕವಿ ಹೇಗಾದ? ತನ್ನ ಹೆಂಡತಿಯ ಬಗ್ಗೆ ಆತನಿಗೆ ವಿಪರೀತ ವ್ಯಾಮೋಹ. ಒಂದು ರಾತ್ರಿಯಮಟ್ಟಿಗೂ ಬಿಟ್ಟಿರಲಾರದಷ್ಟು. ಒಂದು ಸಲ ಆಕೆ ತನ್ನ ತವರುಮನೆಗೆ ಹೋಗಬೇಕಾಗಿ ಬಂತು. ಗಂಡನಿಗೆ ವಿರಹವನ್ನು ತಡೆದುಕೊಳ್ಳಲಾಗಲಿಲ್ಲ. ತಾನೂ ಹೋದ. ಆಕೆ ಉಪ್ಪರಿಗೆಯ ಮೇಲೆ  ಮಲಗಿರುತ್ತಾಳೆ ಎಂದು ಗೊತ್ತು. ಮೆಲ್ಲಗೆ ಯಾರಿಗೂ ಗೊತ್ತಾಗದ ಹಾಗೆ ಗೋಡೆಯೇರಿ ಅವಳಿರುವಲ್ಲಿಗೆ ಹೋಗುವ ತವಕ. ಹಾಗೆ ಏರುವಾಗ ತಾನೊಂದು ಸರ್ಪಕ್ಕೆ ಜೋತು ಬಿದ್ದಿದ್ದೇನೆ ಎಂದೂ ಗೊತ್ತಾಗುವುದಿಲ್ಲ. ಅದು ಅರಿವಾದಾಗ ಹೆಂಡತಿ, ‘ನೋಡಿ, ನನ್ನನ್ನು ಕಾಣುವ ತವಕದಷ್ಟು ದೇವರನ್ನು ಕಾಣುವ ತವರವಿದ್ದಿದ್ದರೆ, ನನ್ನನ್ನು ಪ್ರೀತಿಸಿದಷ್ಟು ಅವನನ್ನು ಪ್ರೀತಿಸಿದ್ದರೆ, ಅವನಿಷ್ಟು ಹೊತ್ತಿಗೆ ನಿಮ್ಮೆದುರು ಪ್ರತ್ಯಕ್ಷವಾಗಿರಬೇಕಿತ್ತು!’ ಎಂದು ಉದ್ಗರಿಸುತ್ತಾಳೆ. ನಂತರ ನಡೆಯುವುದು ಇನ್ನೊಂದು ಕತೆ.

ಅಂದರೆ ತುಳಸಿ ರಾಮಾಯಣದಲ್ಲಿ ಸಿಕ್ಕುವ ಅನುಭವವೇ ಈ ಕತೆಯಲ್ಲೂ ದಕ್ಕಬಲ್ಲುದು. ಹೆಣ್ಣನ್ನ ತೀವ್ರವಾಗಿ ಪ್ರೀತಿಸುವವನಿಗೆ ದೇವರನ್ನ ತೀವ್ರವಾಗಿ ಪ್ರೀತಿಸುವ ಅನುಭವವೂ ದಕ್ಕಬಲ್ಲುದು. ಅತಿಯಲ್ಲಿ ವೈರುಧ್ಯಗಳು ಒಂದಾಗುತ್ತವೆ ಎಂದ ಬ್ಲೇಕ್. ಪ್ರೀತಿ, ಮೋಹದಲ್ಲಿ ಅತಿಗೆ ಸಾಗದಿದ್ದಲ್ಲಿ ದೇವರ ಭಕ್ತನಾಗಲು ಬೇಕಾಗುವ ಹೃದಯ ಪರಿವರ್ತನೆಯೂ ಸಿಗುವುದಿಲ್ಲ. ಈ ಸಂಸ್ಕೃತಿಯ, ಬಹುಶಃ ಬೇರೆಯದರಲ್ಲೂ ಸಹ, ಹಲವಾರು ಜನರ ಮನಸ್ಸಿನಲ್ಲಿ ಶೃಂಗಾರದ ಉತ್ಕಟತೆಗೂ ಆಧ್ಯಾತ್ಮಿಕ ಉತ್ಕಟತೆಗೂ ಅವಿನಾಭಾವ ಸಂಬಂಧವಿರುವುದು ಕಂಡುಬರುತ್ತದೆ. ಬ್ಲೇಕ್‌ನಂತಹ ಕ್ರಿಶ್ಚಿಯನ್ ಕವಿಯ ವಿಷಯದಲ್ಲಿ ಅದು ನಿಜವಾಗಿತ್ತು. ಜೀಸಸ್ ತನ್ನ ಅನುಯಾಯಿಗಳಿಗೆ ಕತೆಯ ಮೂಲಕವೇ ಬೋಧಿಸಿದ. ಜೀಸಸ್ ಕತೆ ಹೇಳದಿದ್ದಲ್ಲಿ, ನನಗನ್ನಿಸುತ್ತದೆ, ಅಂದಿನ ಚರ್ಚು ಜೀಸಸ್‌ನನ್ನು ಪೂರ್ತಿಯಾಗಿ ನಾಶ ಮಾಡುತ್ತಿತ್ತು. ಅವನು ಪಾರಾಗಿದ್ದೇ ಕತೆ ಹೇಳುವುದರ ಮೂಲಕ. ಯಾಕೆ ಅಂದರೆ ಕತೆಯಲ್ಲಿ ಅನುಭವದ ಸತ್ಯವಿರುತ್ತಲ್ಲ? ಅದು ತಾರ್ತಿಕ ವಿಶ್ಲೇಷಣೆಗೆ ಮೀರಿದ್ದು. ಅಂತಹ ವಿಶ್ಲೇಷಣೆಗೆ ಕತೆಗಳಿಗೆ ಸಾಧ್ಯವಿರುವ ಹಲವಾರು ಆಯಾಮಗಳಿರುವುದಿಲ್ಲ. ಆದರೆ ಆಧುನಿಕ ಕತೆಗಳ ವಿಷಯದಲ್ಲಿ ಇದು ನಿಜವಲ್ಲದಿರಬಹುದು. ಕತೆಯ ಜೊತೆ ವ್ಯಾಖ್ಯಾನವನ್ನೂ ಸೇರಿಸಿದಾಗ ಅದು ಒಂದೇ ಆಯಾಮದ್ದು ಆಗಿಬಿಡುತ್ತದೆ.

ಇನ್ನೊಂದು ಕತೆ ಹೇಳಲು ಇಷ್ಟಪಡುತ್ತೇನೆ. ರಾಮಕೃಷ್ಣ ಪರಮಹಂಸರಿಗೆ ತುಂಬ ಪ್ರಿಯವಾಗಿದ್ದ ಕತೆ ಇದು. ಅಧ್ಯಾತ್ಮಕ್ಕೇ ಸಂಬಂಧಪಟ್ಟದ್ದು. ಈ ಕತೆಯಲ್ಲಿ ಇಬ್ಬರಿದ್ದಾರೆ. ಒಬ್ಬ, ಸೂಳೆಮನೆಗೆ ಹೋಗುವ ಇಚ್ಛೆ ಇದ್ದವನು, ಹೆಂಗಸೊಬ್ಬಳ ಜೊತೆ ಮಲಗುವ ಉದ್ದೇಶ ಇದ್ದವನು. ಇನ್ನೊಬ್ಬ, ಬೇಡ, ಅದು ಸಲ್ಲ. ನಾನಂತೂ ಭಜನೆಯಲ್ಲಿ ಕಾಲ ಕಳೆಯುತ್ತೇನೆ ಎಂಬ ಧೋರಣೆ ತಳೆದವನು. ಹಾಗಾಗಿ ಒಬ್ಬ ಸೂಳೆ ಮನೆಗೆ ಹೋದರೆ, ಇನ್ನೊಬ್ಬ ಭಜನೆಗೆ ಹೋದ. ಸೂಳೆಮನೆಗೆ ಹೋದವನಿಗೆ ಒಮ್ಮೆಲೇ ತಪ್ಪಿತಸ್ಥ ಭಾವನೆ ಉಮ್ಮಳಿಸಿ, ‘ಛೆ, ತಪ್ಪು ಮಾಡಿಬಿಟ್ಟೆ, ನಾನೂ ಭಜನೆಗೆ ಹೋಗಿರಬೇಕಿತ್ತು’ ಎಂದನ್ನಿಸಿ ದೇವರನ್ನು ನೆನೆಯಲಾರಂಭಿಸುತ್ತಾನೆ. ಭಜನೆ ಮಾಡುತ್ತಿದ್ದವನಿಗೆ ಒಂದು ಹಂತದಲ್ಲಿ ಬೋರು ಹೊಡೆಯಲಾರಂಭಿಸಿ, ತಾನು ಸೂಳೆಮನೆಗೆ ಹೋಗಿದ್ದರೇ ವಾಸಿಯಿತ್ತು ಅಂತನ್ನಿಸಲಾರಂಭಿಸುತ್ತದೆ. ಈ ಕತೆಯನ್ನ ನಾನು ಹಲವಾರು ಬಾರಿ ಕೇಳಿದ್ದೇನೆ. ನೀತಿವಾದಿಗಳ ಬಗ್ಗೆ, ಕ್ರಾಂತಿವಾದಿಗಳ ಬಗ್ಗೆ ನಗಲು ಸಾಧ್ಯವಾಗಿರುವುದು ಈ ಕತೆಯಿಂದ. ನನಗನ್ನಿಸುತ್ತೆ, ರಾಮಕೃಷ್ಣರು ಹೇಳ್ತಾ ಇರೋದು ಇದು; ಸೂಳೆಯ ಜೊತೆ ಮಲಗಿದರೂ ಸಹ ನಿನ್ನ ಮನಸ್ಸು ದೇವರನ್ನ ನೆನೆಯುತ್ತಿರಬಹುದಲ್ಲ? ಅದರಲ್ಲಿ ತಪ್ಪೇನು? ಹಾಗಂತ ನಮ್ಮ ಯೌವ್ವನದಲ್ಲಿ ನಮಗೆ ಬೇಕಾದ ಹಾಗೆ ಅರ್ಥೈಸಿಕೊಂಡೆವು. ಆದರೆ ಪರಮಹಂಸರು ಹೇಳ್ತಾ ಇರೋದು. ಅಷ್ಟೇ ಅಲ್ಲವಲ್ಲ? ಮನುಷ್ಯ ಸ್ಥಿತಿ ಹೇಗಿದೆ ಅಂದರೆ, ಅಲ್ಲಿದ್ದರೆ ಇದನ್ನು ನೆನೆಯುತ್ತೇವೆ, ಇಲ್ಲಿದ್ದರೆ ಅದನ್ನು ನೆನೆಯುತ್ತೇವೆ. ಆಧ್ಯಾತ್ಮಿಕ ಹಂಬಲಿಕೆಯಿಂದ ಮುಕ್ತಿಯೂ ಇಲ್ಲ. ಲೌಕಿಕ ಬೇರುಗಳಿಂದ ಬಿಡುಗಡೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗುವುದು ರಾಮಕೃಷ್ಣರು ಕತೆಯನ್ನು ಹೇಳುತಾರೆ ಅಷ್ಟೇ. ವ್ಯಾಖ್ಯಾನಿಸಲು ಹೋಗುವುದಿಲ್ಲ ಎನ್ನುವುದು.

ಅರೇಬಿಯನ್ ನೈಟ್ಸ್‌ನ್ನೇ ತೆಗೆದುಕೊಳ್ಳಿ. ಕತೆ ಹೇಳುವುದರ ಇನ್ನೊಂದು ಆಯಾಮವನ್ನು ಅದು ಒದಗಿಸುತ್ತದೆ. ಕತೆ ಹೇಳುವುದಕ್ಕೂ ಸಾವಿಗೂ ಸಂಬಂಧವಿದೆ. ಸಾಯುವುದಿಲ್ಲದಿದ್ದರೆ, ನಾವು ಎರಡು ಕೆಲಸಗಳನ್ನಂತೂ ಮಾಡುತ್ತಿರಲಿಲ್ಲ; ನಗುತ್ತಿರಲಿಲ್ಲ. ನಗಲು ಸಾಧ್ಯವಾಗಿರುವುದೇ ನಾವು ಮರ್ತ್ಯರಾಗಿರುವುದರಿಂದ, ಇನ್ನೊಂದು, ಕತೆ ಹೇಳುತ್ತಿರಲಿಲ್ಲ. ನಾವು ಕತೆ ಹೇಳುವುದೇ ಸಾವಿನ ದೆಸೆಯಿಂದ. ಅರೇಬಿಯನ್ ನೈಟ್ಸ್‌ನಲ್ಲಿ ಒಂದು ಮೂಲಬಂಧದಂತಹ ಕತೆಯಿದೆ. ಇನ್ನೂ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು. ಈ ಕತೆಗಳು ಒಂದೇ ಭಾಷೆಯಲ್ಲಿದ್ದರೂ ಸಹ, ಬೇರೆ ಭಾಷೆಗೆ ಪ್ರಯಾಣ ಮಾಡಬಲ್ಲವು. ಅವು ಪ್ರಪಂಚದ ಉದ್ದಗಲಕ್ಕೆ ಪ್ರಯಾಣಿಸುತ್ತಲೇ ಇರುತ್ತಿದ್ದವು. ಯಾಕೆಂದರೆ ಆ ಕಾಲದಲ್ಲಿ ಪರಸ್ಪರ ಭೇಟಿಯಾದಾಗ ಜನ ಕತೆ ಹೇಳಿಕೊಳ್ಳುತ್ತಿದ್ದರು. ಇರಲಿ. ಅರೇಬಿಯನ್ ನೈಟ್ಸ್‌ನ ಹಿನ್ನೆಲೆಯಾಗಿ ರಾಜನೊಬ್ಬನಿದ್ದಾನೆ. ಅವನು ಯಾವುದೋ ಹೆಣ್ಣಿಂದ ಮೋಸ ಹೋಗಿದ್ದಾನೆ. ಆ ರೊಚ್ಚಿಗೆ ದಿನವೂ ಒಬ್ಬೊಬ್ಬ ಹೆಣ್ಣನ್ನು ಮದುವೆಯಾಗಿ ಅವಳನ್ನು ಕೊಲ್ಲುವ ವ್ರತ ಮಾಡಿಕೊಂಡಿದ್ದಾನೆ. ಶಹಜಾದೆ ತನ್ನ ಕತೆ ಹೇಳಲಾರಂಭಿಸುತ್ತಾಳೆ. ಆದರೆ ಮುಗಿಸುವುದಿಲ್ಲ. ಅಪೂರ್ಣವಾದ ಕತೆಯ ದೆಸೆಯಿಂದ ಅವಳ ಬದುಕಿನ ಅವಧಿ ಇಷ್ಟಿಷ್ಟೇ ವಿಸ್ತರಿಸುತ್ತಾ ಹೋಗುತ್ತದೆ. ಸಾವನ್ನು ಮುಂದೆ ಹಾಕಲೆಂದೇ ನಾವು ಕತೆ ಹೇಳುವುದು. ಭಗವದ್ಗೀತೆಯ ಪ್ರಕಾರ ಎರಡು ‘ಅವ್ಯಕ್ತ’ಗಳಿವೆ. ಹುಟ್ಟಿನ ಮುಂಚಿನದು ಮತ್ತು ಸಾವಿನ ನಂತರದ್ದು. ನಮ್ಮ ಬದುಕು ‘ವ್ಯಕ್ತಮಧ್ಯ’. ಅದರಲ್ಲಿ ಹುಟ್ಟಿನ ಮುಂಚಿನ ಮತ್ತು ಸಾವಿನ ನಂತರದ ಎರಡೂ ಅವ್ಯಕ್ತಗಳು ಅಡಕವಾಗಿರುತ್ತವೆ. ಈ ‘ವ್ಯಕ್ತಮಧ್ಯ’ದ ಬಗ್ಗೆ ಸಂಭ್ರಮಿಸುವುದೇ ಕತೆ ಹೇಳುವುದರ ಮೂಲಕ.

ಮಹಾತ್ಮಗಾಂಧೀಯ ಬಗ್ಗೆ ಒಂದು ಕತೆ ಕೇಳಿದ್ದೇನೆ. ಭಾರತದ ಹಲವಾರು ಹಳ್ಳಿಗಳಲ್ಲಿ ಬ್ರಿಟಿಷರನ್ನು ಓಡಿಸಲು ವಿಷ್ಣು ಗಾಂಧಿಯ ಅವತಾರವನ್ನೆತ್ತಿದ ಎಂಬ ನಂಬಿಕೆಯಿದೆ. ಈ ಅವತಾರವನ್ನು ವೈಶ್ಯ ಕುಟುಂಬದಲ್ಲೇ ಎತ್ತಬೇಕಿತ್ತೇ? ಹೌದು, ಯಾಕೆಂದರೆ ಬ್ರಿಟಿಷರು ವೈಶ್ಯರೇ ತಾನೆ? ಹಾಗಾಗಿ ಯಾರನ್ನು ನಾಶ ಮಾಡಬೇಕೋ ವಿಷ್ಣು ಅವರ ರೂಪವನ್ನೇ ಎತ್ತಬೇಕು. ಜನಪದೀಯ ಕಲ್ಪನೆಯ ಪ್ರಕಾರ ಬ್ರಿಟಿಷರ ವೈಶ್ಯ ಸಾಮ್ರಾಜ್ಯಕ್ಕೆ ಸಡ್ಡು ಹೊಡೆಯಲು ಇನ್ನೊಂದು ವೈಶ್ಯ ತಲೆಯೇ ಬರಬೇಕು. ಹಾಗಾಗಿ ಗಾಂಧಿ ವೈಶ್ಯ ಕುಟುಂಬದಲ್ಲೇ ಹುಟ್ಟಬೇಕು. ಗಾಂಧಿಯನ್ನು ತುಂಬ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ನಮಗರ್ಥವಾಗುವುದಿಷ್ಟು; ಅವನದು ಸಾಮಾನ್ಯ ಅರ್ಥದಂತ ವೈಶ್ಯ ತಲೆಯಲ್ಲ. ಚಾಣಾಕ್ಷತೆ, ಬುದ್ಧಿವಂತಿಕೆ ಎರಡೂ ಸೇರಿದಂತೆ ಅಸಾಮಾನ್ಯ ತಲೆ, ಗಾಢ ಅರ್ಥದಲ್ಲಿ ಆತ ವೈಶ್ಯನೇ. ಗಾಂಧಿಯ ಬಗೆಗಿನ ಈ ರಾಜಕೀಯ ವಿಶ್ಲೇಷಣೆ ಸಹ ಯಾವ ಸಮಾಜಶಾಸ್ತ್ರಜ್ಞನ ಅಥವಾ ರಾಜಶಾಸ್ತ್ರ ತಜ್ಞನ ವಿಶ್ಲೇಷಣೆಗೆ ಕಡಿಮೆಯಿಲ್ಲ. ಗಾಂಧಿಯ ಕತೆಯಾಗಲಿ, ತುಳಸಿದಾಸನ ಬಗೆಗಿನ ಕತೆಯಾಗಲಿ ಹುಟ್ಟುವುದು  ಇಂತಹ ಮೂಲದಿಂದಲೇ. ತಾನಾಗಿ ವಿಶ್ಲೇಷಿಸುವುದಿಲ್ಲ. ಆದರೆ ಅಂತಹ ವಿಶ್ಲೇಷಣೆಗೆ ತೆರೆದುಕೊಳ್ಳುತ್ತದೆ.

ಕತೆಗಳು ಪ್ರಯಾಣಿಸುತ್ತವೆ ಎಂದು ಹೇಳಿದೆ. ರಾಮಾಯಣ, ಮಹಾಭಾರತವನ್ನೇ ತೆಗೆದುಕೊಳ್ಳಿ. ನನ್ನ ಸ್ನೇಹಿತ ರಾಮಾನುಜನ್ ಭಾರತದಲ್ಲಿ ಹಲವಾರು ಭಾಷೆಗಳಿವೆ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದ ಉದ್ದಗಲಕ್ಕೂ ಹರಡಿಕೊಂಡಿರುವ, ಎಲ್ಲರೂ ಬಲ್ಲ ಎರಡು ಕಾಮನ್ ಭಾಷೆಗಳೆಂದರೆ ರಾಮಾಯಣ ಮತ್ತು ಮಹಾಭಾರತ ಎನ್ನುತ್ತಾರೆ. ಅದೊಂದು ಅದ್ಭುತ ಒಳನೋಟ. ನಾವೆಲ್ಲಾ ರಾಮಾಯಣವನ್ನಾಗಲಿ, ಮಹಾಭಾರತವನ್ನಾಗಲಿ, ಮೊದಲ ಬಾರಿಗೆ ಓದುವ ಮುಂಚೆಯೇ ಎಷ್ಟೋ ಬಾರಿ ಕೇಳಿರುತ್ತೇವೆ. Story telling is just one grandmother away. ಸಾಯುವ ತನಕ ರಾಮಾನುಜನ್ ಹಾಗಂತಲೇ ನಂಬಿದ್ದರು. ಬೆಂಗಳೂರಿನಲ್ಲಿ ತುಂಬ ನಗರೀಕರಣಗೊಂಡ ಕುಟುಂಬ ಸಹ ಕತೆ ಹೇಳುವ ಅಜ್ಜ ಅಜ್ಜಿಯಿಂದ ಕೆಲವೇ ಮೈಲಿಗಳ ದೂರದಲ್ಲಿರುತ್ತದೆ. ಅಷ್ಟೇ. ಹಾಗಾಗಿ ಕತೆಗಳ ಲಭ್ಯತೆಗೆ ಕುಂದು ಬರುವುದಿಲ್ಲ. ರಾಮಾಯಣ ಮಹಾಭಾರತಗಳು ಭಾರತದ ಎಲ್ಲ ಕಡೆಗೆ ಹರಡಿಕೊಂಡಿರುತ್ತವೆ. ಕನ್ನಡವೊಂದರಲ್ಲೇ ಸುಮಾರು ಸಾವಿರ ರಾಮಾಯಣಗಳಿವೆ ಎಂದು ರಾಮಾನುಜನ್ ಸಂಶೋಧಿಸಿದ್ದರು. ಅವೆಲ್ಲ ಮೌಖಿಕ ಪರಂಪರೆಗೆ ಸೇರಿದಂತವು. ಹೆಚ್ಚಿನಂಶ ಅವುಗಳಲ್ಲಿ ರಾಮ, ಸೀತೆ, ಹನುಮಂಥರೆಲ್ಲ ಅನಕ್ಷರಸ್ಥರು, ಕತೆ ಹೇಳುವ ಸಂಪ್ರದಾಯಕ್ಕೆ ಸೇರಿದವರು. ಪಠ್ಯಕ್ಕೆ ಗಂಟು ಬಿದ್ವರಲ್ಲ. ಸಂದರ್ಭದಿಂದ ರೂಪು ತಾಳಿದಂತವರು. ನಾನು ತುಂಬ ಇಷ್ಟಪಡುವ, ಹೇಳುವ ಕತೆಯೊಂದಿದೆ. ಅದರಲ್ಲಿ ಸೀತೆಗೂ ರಾಮನಿಗೂ ನಡುವೆ ನಡೆಯುವ ಸಂಭಾಷಣೆಯೊಂದಿದೆ. ತಾನೂ ಕಾಡಿಗೆ ಬರುತ್ತೇನೆ ಎನ್ನುತ್ತಿರುವ ಸೀತೆ, ಬೇಡ, ನೀನು ರಾಜಕುಮಾರಿ, ಸುಕೋಮಲೆ, ಹಾದಿಯಲ್ಲಿ ಹಾವು, ಹುಲಿ, ಮುಳ್ಳು ಇತ್ಯಾದಿ ತರಾವರಿ ಕಷ್ಟಗಳಿರುತ್ತವೆ. ನೀನದೆಲ್ಲಾ ಸಹಿಸಲಾರೆ; ಎನ್ನುತ್ತಿರುವ ರಾಮ. ಅವಳು ಹಿಡಿದ ಪಟ್ಟು ಬಿಡಲೊಲ್ಲಳು. ‘ನಾನು ನಿನ್ನ ಅರ್ಧಾಂಗಿಯಲ್ಲವೇ? ಕೈ ಹಿಡಿದವಳಲ್ಲವೇ? ನಾನು ಬಂದೇ ಬರುತ್ತೇನೆ.’ ಒಂದು ಹಂತದಲ್ಲಿ ಈ ಜಾನಪದ ಸೀತೆ, ‘ಎಲ್ಲ ರಾಮಾಯಣದಲ್ಲೂ ಸೀತೆ ಕಾಡಿಗೆ ಹೋಗುತ್ತಾಳೆ. ನನ್ನನ್ನು ಮಾತ್ರ ಯಾಕೆ ತಡೆಯುತ್ತಿದ್ದೀ?’ ಎಂದೂ ಕೇಳುತ್ತಾಳೆ! ಎಂಥ ಅದ್ಭುತ ಅಂತರಪಠ್ಯೀತೆ! ಅಹಲ್ಯೆಯ ಕತೆ ನೋಡಿ. ನಮಗೆ ಗೊತ್ತಿರುವ ಹಾಗೆ ಅಹಲ್ಯೆ ಕಲ್ಲಾಗುವ ಶಾಪಕ್ಕೆ ತುತ್ತಾಗುತ್ತಾಳೆ. ರಾಮನ ಪಾದ ಸೋಕಿದ ತಕ್ಷಣ ಶಾಪ ಪರಿಹಾರವಾಗಿ ಅಹಲ್ಯೆ ಮನುಷ್ಯಳಾಗುತ್ತಾಳೆ. ಆದರೆ ವಾಲ್ಮೀಕಿ ರಾಮಾಯಣದಲ್ಲಿ ಅಹಲ್ಯೆ ಕಲ್ಲಾಗುವುದಿಲ್ಲ. ಗಾಳಿಯಾಗಿ ಅಲೆಯುತ್ತಿರುತ್ತಾಳೆ. ಕಂಬರಾಮಾಯಣದಲ್ಲಿ ಆಕೆ ಕಲ್ಲಾಗುತ್ತಾಳೆ, ಅದೂ ಜಾಣಪದ ಕತೆಯ ದೆಸೆಯಿಂದ. ನಮ್ಮ ಕುವೆಂಪು ಆ ಜಾನಪದ ಕತೆಯನ್ನು ಆಧರಿಸಿ ತಮ್ಮ ಮಂತ್ರವನ್ನು ರಚಿಸುತ್ತಾರೆ. ಹಾಗಾಗಿ ರಾಮಾಯಣ ಮಹಾಭಾರತಗಳೆಂಬ ಭಾಷೆಗಳ ಒಳಗೆ ಈ ಬೇರೆ ಬೇರೆ ಭಾಷೆಗಳು ಹೆಣೆದುಕೊಂಡು ಒಂದು ಮಹಾನ್ ಜಾಲವನ್ನ ನಿರ್ಮಿಸಿವೆ. ಅಂತರ್ಪಠ್ಯೀಯತೆಗೆ ಒಂದು ಅದ್ಭುತ ನಿದರ್ಶನ ಅದು.

ನಾನು ಹುಡುಗನಾಗಿದ್ದಾಗ ಒಬ್ಬ ಬಲ್ಲಾಳ ಎಂಬ ಹೆಸರಿನ ಅಸಾಧಾರಣ ಕತೆಗಾರನಿದ್ದ. ಅಲ್ಲಿ ಇಲ್ಲಿ ಸುತ್ತಾಡಿ ಬಂದಂತವನು. ಸಾಮಾನ್ಯವಾಗಿ ಕತೆಗಳಲ್ಲಿ ದೇಶ ಸುತ್ತಿದವರಿಗೆ ವಿವೇಕ ಜಾಸ್ತಿ ಇರುತ್ತಲ್ಲ? ಪ್ರಯಾಣದ ಸಾರವೇ ಅದು, ಜ್ಞಾನವನ್ನ ಹೆಚ್ಚಿಸಿಕೊಳ್ಳೋದು. ಪ್ರಯಾಣದ ಉದ್ದೇಶವಿಲ್ಲದಿರುವ ಕತೆಗಳೇ ಕಮ್ಮಿ. ಈ ಬಲ್ಲಾಳ ಸುತ್ತಾಡಿ ಬಂದವನಾದ್ದರಿಂದ ಅವನ ಬಾಯಿಂದ ಬರುವ ಕತೆಗಳನ್ನ ಕೇಳೋದಕ್ಕೆ ನಮಗೆ ಕುತೂಹಲವೂ ಜಾಸ್ತಿ. ಅವನು ಒಂದು ಸಲ ಮೈಸೂರು ದಸರಾ ನೋಡಲು ಹೋಗಿದ್ದನಂತೆ. ನಾನು ಆಗ ಇದ್ದದ್ದು ಮಲೆನಾಡಿನ ಒಂದು ಹಳ್ಳಿಯಲ್ಲಿ. ಆಗ ವಿದ್ಯುತ್ ದೀಪ, ಬಸ್ಸು ಏನೂ ಇರಲಿಲ್ಲ. ಮೈಸೂರಿಗೆ ಹೋಗೋದು ಅಂದರೆ ತುಂಬ ದೊಡ್ಡ ವಿಷಯ. ಸರಿ, ಇವನು ದಸರಾಗೆ ಹೋದ, ನೋಡಿಕೊಂಡು ಬಂದ. ನಾವೆಲ್ಲ ಸುತ್ತಲೂ ಕೂತರೆ ದಸರಾ ಕತೆ ಹೇಳೋನು. ಮಾರನೆಯ ದಿನ ಅವನನ್ನ ನೋಡಿದಾಗ ಅವನಾಗಲೇ ಕತೆ ಹೇಳಿ ಮುಗಿಸಿದಂತೆ ನಮಗೆ ತೋರುತ್ತಿರಲಿಲ್ಲ. ಅವನು ಮತ್ತೆ ಹೇಳಬೇಕು, ನಾವು ಮತ್ತೆ ಕೇಳಬೇಕು. ಕತೆಯ ಮಾಂತ್ರಿಕ ಶಕ್ತಿ ಇರೋದೇ ಅಲ್ಲಿ. ಮತ್ತೆ ಮತ್ತೆ ಹೇಳುವುದರಲ್ಲಿ, ಮತ್ತೆ ಕೇಳಿದ್ದು ಮುಂಚಿನದರ ತರ ಇರುತ್ತಿರಲಿಲ್ಲ. ಬಲ್ಲಾಳ ದಸರಾನ ಹೇಗೆ ಕಣ್ಣಿಗೆ ಕಟ್ಟೋ ಹಾಗೆ ಹೇಳುತ್ತಿದ್ದ ಅಂದರೆ, ಅದರಲ್ಲಿ ಅವನು ಕಂಡಿದ್ದು, ಕಾಣಬೇಕು ಅಂತ ಅಂದುಕೊಂಡಿದ್ದು, ಆದರೆ ಕಾಣದೇ ಹೋಗಿದ್ದು ಎಲ್ಲವೂ ಇರುತ್ತಿತ್ತು. ನಾನು ನಿಜವಾಗಿಯೂ ದಸರಾ ನೋಡಿದಾಗ ಬಲ್ಲಾಳ ವರ್ಣಿಸಿದಷ್ಟು ಚೆನ್ನಾಗಿ ನನ್ನ ಕಣ್ಣಿಗೆ ಕಾಣಲಿಲ್ಲ. ಕತೆ ಹೇಳುವಾಗ ಕಲ್ಪನೆ ತನ್ನ ಪಾಲನ್ನೂ ನೀಡಿ ವಾಸ್ತವವನ್ನೇ ರಮ್ಯವಾಗಿ ಕಣ್ಣಿಗೆ ಕಟ್ಟುವಂತೆ ಮಾಡುತ್ತಿರುತ್ತದೆ. ಜಾನಪದ ಕತೆಗಳು ಸಂಸ್ಕೃತ ಪರಂಪರೆಯಲ್ಲಿ ಬರುವ ಬದುಕು, ಸಾವು, ದೇವರು ಇತ್ಯಾದಿಗಳ ಪರ್ಯಾ ಪರಿಕಲ್ಪನೆಗಳನ್ನು ಕೆಲವೊಮ್ಮೆ ಒದಗಿಸುತ್ತವೆ. ಅದು ಜಾನಪದ ಕತೆಗಳ ವಿಷಯಲ್ಲಿ ರಾಮಾನುಜನ್ ಕೊಡುವ ಇನ್ನೊಂದು ಒಳನೋಟ.

ಹೆಚ್ಚಿನಂಶದ ಜಾನಪದ ಕತೆಗಳಲ್ಲಿ ಕರ್ಮ ಎಂಬ ಪರಿಕಲ್ಪನೆಯೇ ಇಲ್ಲ ಎನ್ನುವುದು ರಾಮಾನುಜನ್ ಅವರ ನಿಲುವು. ಜೈನ ಪರಂಪರೆಯ ಜಾನಪದ ಕತೆಗಳಲ್ಲಿ ಕರ್ಮ ಮಹತ್ವದ ಸ್ಥಾನ ಹೊಂದಿದೆ. ಅಲ್ಲಿ ಗಿಲ್ಟ್‌ಗೆ ಪ್ರಾಮುಖ್ಯತೆ ಇಲ್ಲ. ಒಂದೇ ಕತೆ ಜಾನಪದಲ್ಲಿ ಹೇಗೆ ಬೇರೆಯಾಗುತ್ತದೆ ಎನ್ನುವುದಕ್ಕೆ ಈ ನಿದರ್ಶನ ನೋಡಿ. ನಮಗೆಲ್ಲ ಅಹಲ್ಯೆಯ ಕತೆ ಗೊತ್ತು. ಅಹಲ್ಯೆ ಒಬ್ಬ ಋಷಿಯ ಪತ್ನಿ. ಆ ಋಷಿ ತಪಸ್ಸು ಮಾಡಲು ಬೆಳಿಗ್ಗೆ ಹೋದರೆ ಬರುತ್ತಿದ್ದದ್ದು ಮತ್ತೆ ರಾತ್ರಿಯೇ. ಇವತ್ತಿನ ಸೈನ್ಸ್ ಪ್ರೊಫೆಸರ್ ತರಹ. ಹೆಂಡತಿ ದಿನವಿಡೀ ಒಚಿಟಿ. ಮಾಡಲು ಕೆಲಸವೂ ಇಲ್ಲ ಇಂದ್ರ ತನ್ನ ಪ್ರಣಯಿಯಾಗಿದ್ದರೆ? ಎಂದು ರಹಸ್ಯವಾಗಿ ಬಯಸಲು ಆರಂಭಿಸುತ್ತಾಳೆ. ಅಹಲ್ಯ ಎಂಬ ಪದದ ಅರ್ಥವೇ ಉಳಲ್ಪಡದ ನೆಲ ಎಂದು. ಹಾಗಾಗಿ ಹೆಣ್ತನದ ಅನುಭವವಿನ್ನೂ ಆಕೆಗೆ ಪೂರ್ತಿಯಾಗಿ ಆಗಿಲ್ಲ. ಗೌತಮ ಒಂದು ದಿನ ಬೆಳಿಗ್ಗೆ ತನ್ನ ಜಪಕ್ಕೆ ನದೀತೀರಕ್ಕೆ ಹೋಗಿದ್ದಾಗ ಇಂಧ್ರ ಗೌತಮನ ವೇಷದಲ್ಲೇ ಹಾಜರಾಗುತ್ತಾನೆ. ತನಗೆ ಬೇಕಾದವನು ಗಂಡನ ವೇಷದಲ್ಲೇ ಬಂದರೆ ಸ್ವ-ವಂಚನೆ ಸ್ವಲ್ಪ ಸುಲಭವಾಗುತ್ತೆ. ಬಾಗಿಲು ತೆರೆದ ಅಹಲ್ಯೆ ಬಂದವನು ತನ್ನ ಗಂಡ ಅಂತಲೇ ಅಂದುಕೊಳ್ಳುತ್ತಾಳೆ. ‘ಅದೇನು ಇಂದು ಇಷ್ಟು ಬೇಗ ಬಂದಿರಿ?’ ಎಂದು ಕೇಳಿರಲೂ ಬಹುದು. ಆಮೇಲೆ ಗೌತಮ ಬಂದಾಗ ಅವರಿಬ್ಬರನ್ನೂ ಒಟ್ಟಿಗೆ ನೋಡಿ ಕಲ್ಲಾಗಿ ಹೋಗೆಂದು ಶಾಪ ಕೊಡುತ್ತಾನೆ. ರಾಮ ಬಂದು ಮತ್ತೆ ಜೀವ ಕೊಡುತ್ತಾನೆ. ಇದು ಸಂಸ್ಕೃತದಲ್ಲಿ ಬರುವ ಕಥೆ. ರಾಮಾನುಜನ್ ಸಂಗ್ರಹಿಸಿದ ಜಾನಪದ ಕತೆಯಿಂದ ಗಿರೀಶ್ ಕಾರ್ನಾಡ್ ಒಂದು ನಾಟಕವನ್ನೂ ಬರೆದರು. ಅದರಲ್ಲಿ ಆಗತಾನೇ ಮದುವೆ ಮಾಡಿಕೊಂಡು ಬಂದಿರುವ ಎಳೆಯುವತಿಯೊಬ್ಬಳು. ಅವಳ ಗಂಡನಿಗೆ ಆಗಲೇ ಒಬ್ಬ ಪ್ರೇಯಸಿ ಇದ್ದಾಳೆ. ಆ ಗಂಡ ಸಂಜೆ ಹೋದರೆ ಮತ್ತೆ ಬರುವುದು ಮರುದಿನ ಬೆಳಿಗ್ಗೆಗೇ. ಅದೂ ಹೊಟ್ಟೆ ತುಂಬಿಸಿಕೊಳ್ಳಲು. ಹೆಂಡತಿಗೆ ಸದಾ ಕಣ್ಣೀರೇ ಗತಿ. ಹಿತ್ತಲಲ್ಲಿ ಒಂದು ಸರ್ಪ ಇದೆ. ಅದಕ್ಕೆ ಇವಳ ಮೇಲೆ ಪ್ರೀತಿ, ವ್ಯಾಮೋಹ. ಆ ಸರ್ಪ ಒಂದು ದಿನ ಸಾಯಂಕಾಲ ಗಂಡನ ವೇಷದಲ್ಲಿ ಮನೆ ಒಳಗೆ ಬರುತ್ತೆ. ಇಂದ್ರ ಗೌತಮನ ವೇಷದಲ್ಲಿ ಬಂದಂತೆ. ಪಾಪ, ಆ ಹೆಣ್ಣಿಗೆ ಆಶ್ಚರ್ಯ, ಸಂತೋಷ. ಗಂಡ ಕೊನೆಗೂ ಒಲಿದನೆಂದು ಸಂಭ್ರಮಿಸುತ್ತಾಳೆ. ಆದರೆ ಬೆಳಿಗ್ಗೆ ಬಂದ ನಿಜವಾದ ಗಂಡ ಎಂದಿನಂತೆ ಸಿಡಿಮಿಡಿಯಾಗಿರುತ್ತಾನೆ. ಅವಳಿಗೆ ಇದೊಂತರ ಒಗಟೆನ್ನಿಸುತ್ತದೆ. ಯಾಕೆ ಗಂಡಂದಿರು ರಾತ್ರಿ ಸುಮ್ಮನಾಗಿದ್ದು ಹಗಲಲ್ಲಿ ಕಿರಿಕಿರಿ ಮಾಡುತ್ತಾರೆ? ಹೀಗೆ ಕೆಲವು ದಿವಸ ಕಳೆದ ಮೇಲೆ ಅವಳು ಬಸಿರಾಗುತ್ತಾಳೆ. ಯಾರದು? ಎಂದು ಗಂಡ ಅಬ್ಬರಿಸುತ್ತಾನೆ. ನಿಮ್ಮದೇ ಎನ್ನುತ್ತಾಳೆ ಹೆಂಡಗಿ. ನಿನ್ನೊಂದಿಗೆ ರಾತ್ರಿಯನ್ನೇ ಕಳೆಯದ ನಾನು ಹೇಗೆ ಅದರ ತಂದೆ? ಎಂದು ಗುಟುರು ಹಾಕುತ್ತಾನೆ ಗಂಡ. ಅವಳೀಗ ಸರ್ಪದಿವ್ಯದ ಪರೀಕ್ಷೆಯನ್ನು ಗೆದ್ದು ಬರಬೇಕು. ಹಳ್ಳಿಯವರೆಲ್ಲ ನ್ಯಾಯ ಪಂಚಾಯಿತಿಗೆ ಸೇರುತ್ತಾರೆ. ಎಲ್ಲರೆದುರು ಸರ್ಪವನ್ನು ಕೈಯಲ್ಲಿ ಹಿಡಿದು ತಾನು ಗಂಡನಿಗೆ ಮೋಸ ಮಾಡಿಲ್ಲ ಎಂದು ಆಣೆ ಮಾಡಿ ಹೇಳಬೇಕು. ‘ನಿಮ್ಮನ್ನು, ಸರ್ಪವನ್ನು ಬಿಟ್ಟು ಯಾರನ್ನೂ ಮುಟ್ಟಿಲ್ಲ; ಎಂದು ಆಣೆ ಮಾಡುತ್ತಾಳೆ. ಕಕ್ಕಾಬಿಕ್ಕಿಯಾದ ಗಂಡ ಅವಳನ್ನು ಸ್ವೀಕರಿಸುತ್ತಾನೆ. ಮಗು ಹುಟ್ಟುತ್ತದೆ. ಗಂಡನ ಪ್ರೇಯಸಿ ಮಗು ತನ್ನ ಬಳಿ ಒಂದು ದಿನದ ಮಟ್ಟಿಗಾದರೂ ಇರಬೇಕು, ಅದು ನ್ಯಾಯ ಎನ್ನುತ್ತಾಳೆ. ತನ್ನ ಮಗುವಿನ ಮೈಮೇಲೆ ಚಿನ್ನ ಹಾಕಿ ಕಳಿಸಿದ ತಾಯಿ ಮಗು ಮನೆಗೆ ಬಂದ ಮೇಲೆ ಅಳೆಯುತ್ತಾಳೆ. ಅದರಲ್ಲಿ ಗುಲಗಂಜಿ ವ್ಯತ್ಯಾಸವಿದ್ದರೂ ಆ ಹೆಂಗಸು, ಈ ಹೆಂಗಸಿನ ಮನೆಯಲ್ಲಿ ತೊತ್ತಾಗಿ ಕಾಲ ಕಳೆಯಬೇಕು. ವ್ಯಭಿಚಾರ ಮಾಡಿಯೂ ಹೆಣ್ಣು ಗೆದ್ದಳಷ್ಟೇ ಅಲ್ಲ, ಅವಳಿಗೀಗ ಮಗುವಿದೆ, ಗಂಡನಿದ್ದಾನೆ, ಗಂಡನ ಪ್ರೇಯಸಿ ತನ್ನ ಮನೆಯಲ್ಲಿ ಈಗ ತೊತ್ತಾಗಿದ್ದಾಳೆ. ಹೀಗೆ ಕತೆ ಸಾಗುತ್ತದೆ. ಒಂದು ದಿನ ಮರಳಿ ಬಂದ ಸರ್ಪ ಗಂಡ ಹೆಂಡತಿಯರು ನೆಮ್ಮದಿಯಾಗಿ ಪಲ್ಲಂಗದ ಮೇಲೆ ಮಲಗಿರುವುದನ್ನು, ಮಗು ತೊಟ್ಟಿಲಲ್ಲಿ ಶಾಂತವಾಗಿ ನಿದ್ರಿಸುತ್ತಿರುವುದನ್ನು ನೋಡಿ ದುಃಖಭಾರದಿಂದ ಪ್ರಾಣ ಬಿಡುತ್ತದೆ. ಅಹಲ್ಯೆ ಕತೆಯನ್ನು ಇದಕ್ಕೆ ಹೋಲಿಸಿ. ಅಹಲ್ಯೆಯ ಕತೆಯಲ್ಲಿ ಗಿಲ್ಟ್ ಇದೆ. ಅವಳು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದೇ ಈ ಜಾನಪದ ಕತೆ ಫಿಲಸಾಫಿಕಲ್ ದೃಷ್ಟಿಯಿಂದ ಸಹ ಬೇರೇನನ್ನೋ ಸೇರಿಸುತ್ತಿರುವಂತಿದೆ. ಈ ವಿಚಾರಧಾರೆ ಪಶ್ಚಿಮದಿಂದ ಬರುವ ತನಕ ನಾವು ಕಾಯಬೇಕಿರಲಿಲ್ಲ. ಅದು ಈ ನಾಗರಿಕತೆಯಲ್ಲೇ ಇತ್ತು. ಈ ವಿಶ್ಲೇಷಣೆಯೇ ಕತೆಯ ಉದ್ದೇಶ ಅಂತ ಅಲ್ಲ. ಆದರೆ ಅಂತಹ ವಿಶ್ಲೇಷಣೆ ಕತೆಗೆ ಬೇರೆ ಬೇರೆ ಅರ್ಥಗಳನ್ನು ಒದಗಿಸಬಲ್ಲದು.

ಹರಟೆ ಸಹ ಕತೆಗಳ ಒಂದು ಅದ್ಭುತ ಮೂಲವಾಗಿ ಒದಗಿ ಬರಬಲ್ಲದು. ಅದರ ಬಗ್ಗೆ ನನ್ನದೊಂದು ಥಿಯರಿ ಇದೆ. ಹರಟೆಯಲ್ಲಿ ಆಸಕ್ತಿ ಇಲ್ಲದವರು ಒಳ್ಳೆಯ ಕತೆಗಾರರಾಗುವುದಿಲ್ಲ. ನೀವೇನಾದರೂ ಪ್ರತಿದಿನ ಬರೀ ‘ದಿ ಹಿಂದೂ’ ವಾರ್ತಾಪತ್ರಿಕೆ ಓದುವಂತವರಾಗಿದ್ದರೆ ಕತೆ ಮುಗಿಯಿತು ಬಿಡಿ! ನಾನು ಹೇಗೆ ಬರಹಗಾರನಾದೆ ಎನ್ನುವುದನ್ನ ಹೇಳಬೇಕು. ‘ಜಗಲಿ’ ಮತ್ತು ‘ಹಿತ್ತಲು’ ಪರಿಕಲ್ಪನೆಗಳ ನನ್ನ ಪುಟ್ಟದೊಂದು ಸಿದ್ಧಾಂತವಿದೆ. ಹಳ್ಳಿಯ ಒಂದು ಸಾಮಾನ್ಯ ಮನೆಯನ್ನ ತೆಗೆದುಕೊಳ್ಳಿ. ತಂದೆ ಜಗಲಿಯಲ್ಲಿ ಕೂತಿರುತ್ತಾನೆ. ಅವನ ಸ್ನೇಹಿತರು ಬಂದು ಅಲ್ಲಿ ಕೂತು ರಾಜಕೀಯವನ್ನೋ, ಭತ್ತದ ದರವನ್ನೋ, ಅಡಿಕೆ ಧಾರಣೆಯನ್ನೋ ಚರ್ಚಿಸುತ್ತಿರುತ್ತಾರೆ. ಒಳಗೆ ಹೋದಂತೆಲ್ಲಾ ಕತ್ತಲೆ. ಆಮೇಲೆ ಅಡುಗೆ ಮನೆ. ಕೈಕಾಲು ತೊಳೆಯದಿದ್ದರೆ ಗಂಡಸಿಗೆ ಅಲ್ಲಿ ಪ್ರವೇಶವೇ ಇಲ್ಲ. ಅದರಾಚೆ ಹಿತ್ತಲು. ಹೆಂಗಸರೆಲ್ಲ ಕೆಲವೊಮ್ಮೆ ನೀರು ಸೇದಲು ಅಲ್ಲಿ ಸೇರುತ್ತಾರೆ. ಅಲ್ಲಿ ಬ್ರಾಹ್ಮಣರಲ್ಲದ ಬೇರೆ ಬೇರೆ ಜಾತಿಯ ಹೆಂಗಸರೂ ಇರುತ್ತಾರೆ. ಆಚಾರವಂತ ತಾಯಿ ಅಲ್ಲಿ ಯಜಮಾನಿಯಂತೆ ಉಳಿದವರೊಂದಿಗೆ ಮಾತಾಡುತ್ತಿರುತ್ತಾಳೆ. ಜಗಲಿಯಲ್ಲಿ ರಾಮಾಯಣ, ಭಗವದ್ಗೀತೆ, ಗಾಂಧಿ ಕತೆಗಳನ್ನೆಲ್ಲ ಕಲಿತರೆ, ಹಿತ್ತಲಲ್ಲಿ ಯಾರೂ ಬಾಯಿ ಬಿಟ್ಟಾಡದಿದ್ದ ಸುದ್ದಿಗಳೆಲ್ಲ ನನಗೆ ಕೇಳು ಸಿಕ್ಕುತ್ತಿದ್ದವು. ಬದುಕಿನುದ್ದಕ್ಕೂ ನಾನು ರೂಪಕಗಳಾಗಿ ಉಪಯೋಗಿಸಬಹುದಾದದ್ದೆಲ್ಲವೂ ಆ ಹಳ್ಳಿಯಲ್ಲೇ ಇತ್ತು. ಹಿತ್ತಲಲ್ಲಿ ಅವರೆಲ್ಲ ನೀರೆಳೆಯುವಾಗ, ಹರಟೆ ಹೊಡೆಯುವಾಗ, ನನ್ನ ತಾಯಿ ಮನೆಯಲ್ಲಿ ಉಳಿದಿದ್ದ ಅಡುಗೆಯನ್ನು ತಂದು ಹಂಚುತ್ತಿದ್ದರು. ಇವನ್ನೆಲ್ಲ ಹಂಚಿಕೊಂಡ ನನ್ನ ಥಿಯರಿ ಇದು. ಇಂಡಿಯಾಗೆ ಸಂಸ್ಕೃತ ಎಂಬ ಜಗಲಿ ಇದೆ. ಈ ದಿನಗಳಲ್ಲಿ ಇಂಗ್ಲಿಷ್ ಇನ್ನೊಂದು ಜಗಲಿ. ಆದರೆ ನಮಗೆ ತುಂಬ ಸಮೃದ್ಧವಾದ ಹಿತ್ತಲೂ ಇದೆ. ಆ ಹಿತ್ತಲು ತುಳು, ಕೊಂಕಣಿ ಮತ್ತು ಹಲವಾರು ಬುಡಕಟ್ಟು ಭಾಷೆಗಳನ್ನೊಳಗೊಂಡು ಶ್ರೀಮಂತವಾಗಿದೆ. ಎಂಥ ಸಮೃದ್ಧಿ! ಆ ಸಮೃದ್ಧತೆಯನ್ನ ಜಗಲಿಯ ಪ್ರಪಂಚ ಯಾವತ್ತೂ ಕೊಡಲಾರದು. ಅಂಥ ಸಮೃದ್ಧ ಹಿತ್ತಲು ಇಂಡಿಯಾದಲ್ಲಿ ಇವತ್ತಿಗೂ ಜೀವಂತವಾಗಿದೆ. ಇಂಗ್ಲೆಂಡಿನಲ್ಲಿ ಹಿತ್ತಲು ಎನ್ನುವುದು ಹಾರ್ಡಿ, ಲಾರೆನ್ಸ್ ಬರೆಯುತ್ತಿರವತನಕವೂ ಇತ್ತು. ಡಿ.ಎಚ್. ಲಾರೆನ್ಸ್ ಅಂತಹ ಗ್ರಾಮೀಣ ಹಿತ್ತಲಿನ ಯೋಗವಿದ್ದ ಕೊನೆಯ ಕಾದಂಬರಿಕಾರನಿರಬಹುದು. ಯೇಟ್ಸ್‌ಗೆ ಐರ್ಲೆಂಡಿನಲ್ಲಿ ಅಂತಹ ಹಿತ್ತಲು ಲಭ್ಯವಿತ್ತು. ಅವನ ಸಮೃದ್ಧ ಕಲ್ಪನಾಶಕ್ತಿಯ ಮೂಲಸೆಲೆ ಅದು. ಜಾರ್ಜ್ ಬರ್ನಾಡ್‌ಶಾಗೆ ಸಿಕ್ಕಿದ್ದು ಬರೀ ಜಲಿಯ ಲೋಕ. ಅದಕ್ಕೇ ಅವನು ಯಾವಾಗಲೂ ವೈಚಾರಿಕವಾಗೇ ಬರೆಯುತ್ತಿರುತ್ತಾನೆ. ವಿಚಾರಗಳೊಂದಿಗೆ ಸದಾ ಗುದ್ದಾಡುತ್ತಿರುವಂತೆ ತೋರುತ್ತಾನೆ. ಹರಟೆ ಮತ್ತು ಹಿತ್ತಲಿನ ಲೋಕವೇ ಬೇರೆ. ನಮ್ಮ ಬಗೆಗಿನ ವೈಚಾರಿಕ, ಮಡಿವಂತ, ನಾಗರಿಕ ಪರಿಕಲ್ಪನೆ ನಮ್ಮನ್ನು ಬರಹಗಾರರನ್ನಾಗಿ ಬೆಳೆಸಲಾರದು. ಉತ್ತಮ ಬರಹಗಾರನಲ್ಲಿ ಜಗಲಿ ಮತ್ತು ಹಿತ್ತಲು ಆರೋಗ್ಯಪೂರ್ಣವಾಗಿ ಮೇಳೈಸಬೇಕು. ಜಗಲಿಯ ಲೋಕದಿಂದ ಮಾತ್ರ ಬರೆಯುತ್ತಿದ್ದರೆ ಅರಬಿಂದೋ ತರ ಬರೆಯುತ್ತೀರಿ. ಉದಾತ್ತವಾದ ವಿಚಾರಗಳು. ಆದರೆ ನನಗೆ ಅರೊಬಿಂದೊರನ್ನು ಹೆಚ್ಚು ಓದಲಾಗುವುದಿಲ್ಲ. ಆತ ಮಹಾನ್ ಚೇತನರೇನೋ ಸರಿ. ಆದರೆ ಒಬ್ಬ ಸೃಜನಶೀಲ ಬರಹಗಾರರಾಗಿ ನನಗಷ್ಟು ತಾಕುವುದಿಲ್ಲ. ಯಾಕೆಂದರೆ ಅವರ ಸಾಹಿತ್ಯದಲ್ಲಿ ಎಲ್ಲರೂ ಋಷಿಯಂತೆಯೇ ಮಾತಾಡುತ್ತಿರುತ್ತಾರೆ. ಶಬ್ದಾಡಂಬರ ಜಾಸ್ತಿ. ಅರೊಬಿಂದೋರಿಗೂ ಸಹ ಅದರ ಅರಿವಿತ್ತು. ಆದರೆ ‘ಮಹಾನ್ ಆತ್ಮ’ಗಳೆಲ್ಲವೂ ಮಾತಾಡುವುದು ಹಾಗೆಯೇ ಎಂದೂ ಸಮರ್ಥಿಸಿಕೊಳ್ಳುತ್ತಿದ್ದರು. ಟ್ಯಾಗೋರ್ ಒಬ್ಬ ಜಗಲಿ ಮತ್ತು ಹಿತ್ತಲಿನ ಲೋಕಗಳನ್ನು ಮೇಳೈಸಿಕೊಂಡ ಸಾಹಿತಿ. ಕತೆ ಕೇಳುವ ಅದ್ಭುತ ಕಲೆ ಈಗಲೂ ಹಿತ್ತಲಿನ ಲೋಕಕ್ಕೇ ಸೇರಿದ್ದು. ಯಾಕೆ, ನಮ್ಮ ವಾರ್ತಾಪತ್ರಿಕೆಗಳೂ ಸಹ ಅಂತಹ ಕಥನ ಕಲೆಯ ಪ್ರಾಮುಖ್ಯತೆಯನ್ನು ಗುರುತಿಸಲಾರಂಭಿಸಿವೆ. ಸಾಕಷ್ಟು ಪ್ರಸಾರವಿರುವ ಕನ್ನಡ ದೈನಿಕವೊಂದನ್ನು ತೆಗೆದು ನೋಡಿ. ಮೊದಲ ಪುಟವನ್ನು ಬಿಡಿಸಿ ನೋಡಿದರೇ ಸಾಕು.. ಸುಂದರ ಹೆಣ್ಣೊಬ್ಬಳ ಸಮೃದ್ಧ ತಲೆಗೂದಲು. ನೀಳವಾಗಿ ಹೆಣೆದ ಜಡೆ, ನೋಡಿದ ತಕ್ಷಣ ದ್ರೌಪದಿಯ ಮುಡಿಯನ್ನು ನೆನಪಿಸುವಂತದ್ದು ಮಹಾಭಾರತದ ಕತೆ ನಿಂತಿದ್ದೇ ಆ ಮುಡಿಯ ಮೇಲೆ ಸರಿ, ಕುತೂಹಲದಿಂದ ಪುಟ ನಾಲ್ಕಕ್ಕೆ ಹೋದರೆ ಅಲ್ಲೇನಿರುತ್ತದೆ? ಯಾವುದೋ ಶಾಂಪೂವಿನ ಜಾಹೀರಾತು! ನನಗನ್ನಿಸುತ್ತೆ. ಆಧುನಿಕ ಮಾಧ್ಯಮಗಳು ನಮ್ಮ ಕತೆ ಕೇಳುವ ಸಹಜ ಆಸಕ್ತಿಯನ್ನ ತಮ್ಮ ಲಾಭಕ್ಕೆ ಚೆನ್ನಾಗಿ ದುಡಿಸಿಕೊಳ್ಳುತ್ತವೆ. ಮ್ಯಾಥ್ಯೂ ಅರ್ನಾಲ್ಡ್ ಅದನ್ನ ‘ಚೈತನ್ಯಹೀನವಾಗಿಸುವ ಪ್ರಕ್ರಿಯೆ’ (enervation) ಅಂತ ಕರೀತಾನೆ. ಹಿಂಸೆಯನ್ನ ವೈಭವೀಕರಿಸುವ ಜರ್ಮನ್ ಕಾದಂಬರಿ ನಮ್ಮನ್ನ ನಿರ್ಬಲರಾಗಿಸುತ್ತದೆ ಎನ್ನುವ ಸತ್ಯ ಹತ್ತೊಂಬತ್ತನೆಯ ಶತಮಾನದಲ್ಲೇ ಅರ್ನಾಲ್ಡನಿಗೆ ಗೊತ್ತಿತ್ತು. ಅಂತಹ ಪ್ರಕ್ರಿಯೆ ನಮ್ಮ ಅನುಭವದ ಶಕ್ತಿಯನ್ನ ಕುಂದಿಸುತ್ತೆ. ಸ್ಪಂದನಶೀಲತೆಯನ್ನ ಮೊಂಡುಗೊಳಿಸುತ್ತೆ ಎನ್ನುವುದರ ಅರಿವು ಅವನಿಗೆ ಇತ್ತು. ಇದೊಂದು ತರಹದ ‘ತೋಳ ಬಂತು ತೋಳ’! ಕತೆಯೇ. ಬೇಸ್ತು ಬೀಳಿಸಲು ಬೊಬ್ಬೆ ಹೊಡೆದ ಭೂಪನ ಕೂಗು ಕೇಳಿ ಜನ ಓಡೋಡಿ ಬಂದರು. ಎಷ್ಟು ಸಲ ಬೇಸ್ತು ಬೀಳುತ್ತಾರೆ? ನಾಲ್ಕು ಸಲ? ಐದನೇ ಸಲ ನಿಜವಾಗಿಯೂ ತೋಳ ಬಂದಿತ್ತು. ಆದರೆ ಜನ ಬರಲಿಲ್ಲ. ಕತೆ ಕೇಳುವ ಉತ್ಸಾಹವನ್ನ ಮತ್ತೆ ಮತ್ತೆ ಶೋಷಿಸುತ್ತಲೇ ಇದ್ದರೆ ಆಗುವ ಪರಿಣಾಮ ಇದು.

ವಾಲ್ಟರ್ ಬೆಂಜಮಿನ್‌ನ ಬರಹವೊಂದು ಇದೆ ಆತನ IIumination ಕೃತಿಯಲ್ಲಿ ಬರುವ The Storyteller ಎಂಬ ಪ್ರಬಂಧ. ನನ್ನ ಹಲವಾರು ವಿಚಾರಗಳು ಹರಳುಗಟ್ಟಿದ್ದು ಈ ಬರಹವನ್ನು ಓದಿದಾಗ. ಅವನು ಹೇಳುತ್ತಾನೆ; ಮೊದಲನೆ ಮಹಾ ಯುದ್ಧದ ನಂತರ ಜನ ಕತೆ ಹೇಳೋದನ್ನೇ ಬಿಟ್ಟಿದ್ದಾರೆ ಅಂತ. ಅದೊಂದು ದುಃಖದ ಸಂಗತಿಯೇ. ತೀರ್ಥಯಾತ್ರೆಗೆ ಹೋದವರು ಹಿಂತಿರುಗಿ ಬರುತ್ತಾರೆ, ಕತೆ ಹೇಳುತ್ತಾರೆ. ಬಲ್ಲಾಳ ದಸರಾಗೆ ಹೋಗಿ ಬಂದು ಕತೆ ಹೇಳಿದ ಹಾಗೆ. ಆದರೆ ಮೊದಲನೆ ಮಹಾಯುದ್ಧದ ನಂತರ ಕತೆ ಹೇಳಿದವರು ತುಂಬ ಕಮ್ಮಿ. ಬೆಂಜಮಿನ್ ಅದು ಹೇಗಾಯಿತು ಎಂದು ವಿವರಿಸುತ್ತಾನೆ. ಆಧುನಿಕ ಯುದ್ಧತಂತ್ರ ನಮ್ಮ ಯುದ್ಧದ ಅನುಭವನ್ನ, ಹಣದುಬ್ಬರ ನಮ್ಮ ಆರ್ಥಿಕ ಅನುಭವವನ್ನ, ಯಂತ್ರ ಕೇಂದ್ರಿತ ಬದುಕು ನಮ್ಮ ದೈಹಿಕ ಅನುಭವವನ್ನ, ಪ್ರಭಾವದ ವಲಯಗಳನ್ನು ಆಕ್ರಮಿಸಿ ಕೂತವರು ನಮ್ಮ ನೈತಿಕ ಅನುಭವವನ್ನ ಹೇಗೆ ಸತತವಾಗಿ ಅಲ್ಲಗಳೆಯುತ್ತಲೇ ಹೋಗುತ್ತಾರೆ ಅಥವಾ ಸ್ತಬದ್ಧಗೊಳಿಸುತ್ತಾರೆ ಅಂದರೆ ಕತೆಯಾಗಿ ಹೇಳಬಲ್ಲ ಅನುಭವವೇ ಉಳಿದಿರುವುದಿಲ್ಲ. ಊರಿಂದ ಹೊರಹೋದವನಿಗೆ ಹಿಂತಿರುಗಿ ಬಂದಾಗ ಹೇಳಲು ಕತೆ ಇದ್ದೇ ಇರುತ್ತದೆ ಎಂದು ಅರ್ಥ ಕೊಡುವ ಜರ್ಮನ್ ಮಾತೊಂದಿದೆ. ಆದರೆ ಹೊರಗೆ ಹೋಗಿ ಫೈವ್‌ಸ್ಟಾರ್ ಹೊಟೇಲಲ್ಲಿ ಉಳಿದುಕೊಳ್ಳುವವನಿಗೆ ಪ್ಯಾರಿಸ್, ಬರ್ಲಿನ್, ಭಾರತ ಎಲ್ಲವೂ ಒಂದೇ. ಯಾಕೆಂದರೆ ಕತೆ ಹೇಳುವ ಎರಡು ಮುಖ್ಯವಾದ ಮೂಲಗಳು ಒಂದು ನೆಲ ಉಳುವವನು, ಇನ್ನೊಂದು ಸರಕು ಮಾರುವವನು. ನಮ್ಮ ಮಲೆನಾಡಿನಲ್ಲಿ ಅಡಿಕೆಕೊಳ್ಳುವ, ಮಾರುವ ಮುಸ್ಲಿಮ್ ಸಮುದಾಯವಿದೆ. ಕೊಳ್ಳಲು ಬಂದಾಗ ನಮ್ಮ ಮನೆಗಳಲ್ಲಿ ಉಳಿದು, ಅಡಿಕೆ ಕೊಂಡು, ಕತೆ ಹೇಳಿ, ಕತೆ ಕೇಳಿ ಹೋಗುತ್ತಿದ್ದ ಮಂದಿ. ಈಗ ಆ ವ್ಯವಹಾರ ಜಾಗತಿಕ ಮಾರುಕಟ್ಟೆಯ ಭಾಗವಾಗಿ ಹೋದ ಮೇಲೆ ಕತೆ ಹೇಳುವ, ಕೇಳುವ ಪ್ರಮೇಯವೆಲ್ಲಿ? ಕತೆ ಹೇಳಲೂ, ಕೇಳಲೂ ಸೂಕ್ತವಾಗಿರುವ ಮನಸ್ಸಿನ ಸ್ಥಿತಿಯೊಂದು ಇದೆಯಲ್ಲ? ತುಂಬ  active ಆಗಿರುವ ಮನಸ್ಸಿಗೆ ಕತೆ ಕೇಳುವ ಸಾವಧಾನವಿರುವುದಿಲ್ಲ. ಈಗಿನ ದಿನಗಳಲ್ಲಿ ‘ಒಂದು ಕತೆ ಹೇಳಿ’ ಎಂದು ಯಾರನ್ನೂ ನಾವು ಕೇಳುವುದೇ ಇಲ್ಲ. ಹಾಗೆ ಕೇಳಲೂ ನಾಚಿಗೆ ಹಿಂದೆ ಹಾಗಿರಲಿಲ್ಲ. ಜನ ಕತೆ ಕೇಳಲು ತುದಿಗಾಲಲ್ಲಿ ನಿಂತಿರುತ್ತಿದ್ದರು. ಈಗ ಬೆಳಗಾದರೆ ಭೂಮಿಯ ಉದ್ದಗಲಕ್ಕೆ ನಡೆದಿರುವ ವಿದ್ಯಮಾನಗಳೆಲ್ಲ ವಾರ್ತೆಯ ರೂಪದಲ್ಲಿ ನಾವಿದ್ದ ಕಡೆಗೇ ಬರುತ್ತವೆ. ಆದರೆ ಕೇಳಬೇಕೆನ್ನಿಸುವ ಕತೆಗಳೇ ಅಲ್ಲಿ ಕಮ್ಮಿ. ಯಾಕೆಂದರೆ ಪ್ರತಿಯೊಂದು ಘಟನೆಗೂ ರಾಶಿ ರಾಶಿ ವಿವರಣೆಯಿರುತ್ತಲ್ಲ? ಅದು ಕತೆ ಹೇಗಾಗುತ್ತೆ?

ಹೆರೊಡೊಟಸ್ ಹೇಳಿದ ಒಂದು ಕತೆಯ ಮೂಲಕ ಇದನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡುತ್ತೇನೆ. ಈಜಿಪ್ತಿನ ರಾಜ ಸಮಿನಿತಸ್‌ನನ್ನು ಪರ್ಷಿಯಾದ ರಾಜ ಸೋಲಿಸಿ ಸೆರೆ ಹಿಡಿದಿದ್ದಾನೆ. ಅವನಿಗೆ ಅವಮಾನ ಮಾಡುವ ಉದ್ದೇಶದಿಂದ ವಿಜಯಯಾತ್ರೆಯೊಂದನ್ನು ಏರ್ಪಡಿಸಲಾಗುತ್ತದೆ. ಆ ಯಾತ್ರೆಯಲ್ಲಿ ಮೊದಲು ತನ್ನ ಮಗಳು ಬಿಂದಿಗೆ ಹಿಡಿದು ಸಾಮಾನ್ಯ ಹೆಣ್ಣಿನಂತೆ ಬಾವಿಯ ಕಡೆಗೆ ಹೆಜ್ಜೆ ಹಾಕುತ್ತಿರುವುದು ಸೋತ ರಾಜನ ಕಣ್ಣಿಗೆ ಬೀಳುತ್ತದೆ. ಹಿಂದೆ ನೇಣಿಗೆ ಕೊಂಡೊಯ್ಯುತ್ತಿರುವ ರಾಜಕುಮಾರ ಹೆಜ್ಜೆಯಿಡುತ್ತಾ ಹೋಗುತ್ತಿದ್ದಾನೆ. ಸೋತ ದೊರೆ ನೋಡುತ್ತಲೇ ಇರುತ್ತಾನೆ. ಅದರ ಹಿಂದೆ ತನ್ನ ಸೇವೆ ಮಾಡುತ್ತಿದ್ದ ಮುದಿಯಾದ, ಕೃಶದೇಹಿ ಪರಿಚಾರಕನೊಬ್ಬ ಸರಪಳಿಯಿಂದ ಬಂಧಿತವಾಗಿ ನಿಧಾನವಾಗಿ ಹೆಜ್ಜೆ ಹಾಕುತ್ತಿರುವುದು ಕಣ್ಣೀಗೆ ಬೀಳುತ್ತದೆ. ಅಲ್ಲಿಯತನಕ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಳ್ಳದಿದ್ದ ರಾಜ, ತನ್ನ ಪರಿಚಾರಕನನ್ನು ಆ ಹೀನಾಯ ಸ್ಥಿತಿಯಲ್ಲಿ ನೋಡಿದ್ದೇ ಕಟ್ಟಿಯೊಡೆದು ಕುಸಿಯುತ್ತಾನೆ. ಕತೆಗೆ ಇದೇ ವಿಶ್ಲೇಷಣೆ ಎಂದು ನಿರ್ಣಾಯಕವಾಗಿ ಎಲ್ಲೂ ಸಿಗುವುದಿಲ್ಲ. ಅದಕ್ಕೆ ಹಲವಾರು ವಿಶ್ಲೇಷಣೆಗಳ ಸಾಧ್ಯತೆಗಳಿವೆ ಎಂದು ಸೂಚಿಸುತ್ತಾನೆ. ಪ್ರಭಾವಿಯಾದ ಅಥವಾ ಉದಾತ್ತನಾದ ಮನುಷ್ಯನೊಬ್ಬ ಸಂಕಟದಲ್ಲಿರುವಾಗ ತನ್ನ ಸಂಕಟವನ್ನು ಅವನು ಒಂಟಿಯಾಗಿ ನಿಭಾಯಿಸಬಲ್ಲ. ಆದರೆ ತಾನು ಯಾರನ್ನು ಸಂರಕ್ಷಿಸುತ್ತಿದ್ದನೋ ಆ ವ್ಯಕ್ತಿ ಇಂತಹ ಹೀನಾಯ ಸ್ಥಿತಿಯಲ್ಲಿರುವುದನ್ನು ನೋಡಿ ರಾಜನಿಗೆ ತಡೆಯಲಾಗಲಿಲ್ಲ ಎನ್ನುವುದು ಒಂದು ಅರ್ಥ. ಅಥವಾ ಅದಕ್ಕೆ ಮನಃಶಾಸ್ತ್ರೀಯ ವಿಶ್ಲೇಷಣೆಯೂ ಸಾಧ್ಯವಿದೆ; ಅವನೊಳಗೆ ದುಃಖ ಒಟ್ಟಾಗುತ್ತಿದ್ದಿರಬಹುದು, ತನ್ನ ಪರಿಚಾರಕನನ್ನು ನೋಡಿದ್ದು ಕಟ್ಟೆಯೊಡೆಯಲು ನೆಪವಾಗಿ ಒದಗಿ ಬಂದಿರಬಹುದು. ಇನ್ನೂ ಹಲವಾರು ತರದಲ್ಲಿ ಅದನ್ನು ಅರ್ಥೈಸಿಕೊಳ್ಳಬಹುದು. ಆದರೆ ಮುಖ್ಯವಾಗುವುದು ಇದು; ಕತೆ ವಿಶ್ಲೇಷಣೆಯನ್ನು ಹೊತ್ತು ತಿರುಗುವ ಹಂಗಿಲ್ಲದಾಗ ಕಥೆಗೆ ಹಲವಾರು ಅರ್ಥಗಳಿರಲು ಸಾಧ್ಯ.

ಒಂದು ಕಾದಂಬರಿಯನ್ನು ಓದುತ್ತಿದ್ದೀರಿ ಎಂದುಕೊಳ್ಳಿ ಅದರಲ್ಲಿ ಮೂವತ್ತೈದನೆಯ ವಯಸ್ಸಿನಲ್ಲಿ ತೀರಿಕೊಂಡ ಒಬ್ಬನಿದ್ದಾನೆ. ಅದನ್ನು ಮತ್ತೆ ಓದಿದಾಗ ಪ್ರತಿಯೊಂದು ಹಂತದಲ್ಲೂ ಅವನು ಮೂವತ್ತೈದರಲ್ಲಿ ತೀರಿಕೊಂಡವನು ಎನ್ನುವುದು ನೆನಪಿನಲ್ಲಿ ಉಳಿದಿರುತ್ತದೆ. ಹಾಗೆ ನೆನಪಿನಲ್ಲಿ ಇರುವಾಗ ಕತೆಯ ಅರ್ಥ ಬದಲಾಯಿಸುತ್ತದೆ. ಅಂದರೆ ಕತೆ ನೆನಪಿಗೆ ಒಂದು ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುತ್ತದೆ. ಕತೆ ಹೇಳುವ ಕಲೆಯಲ್ಲಿ ಇದನ್ನೊಂದು ಮುಖ್ಯ ಅಂಶವಾಗಿ ಬಳಸಿಕೊಳ್ಳಲಾಗುತ್ತದೆ. ಅಂದರೆ ವಿಶ್ಲೇಷಿಸುವ, ವಿವರಿಸುವ ತಹತಹವಿಲ್ಲದೇ ಅರ್ಥಗಳನ್ನು ಹೊಳೆಯಿಸುವ ಕಲೆ! ಆಧುನಿಕ ಕಾದಂಬರಿಗಳು ಪಾತ್ರಗಳನ್ನು, ಸಂದರ್ಭಗಳನ್ನು ವಿವರಿಸುವ, ಮನಃಶಾಸ್ತ್ರೀಯವಾಗಿ ವಿಶ್ಲೇಷಿಸುವ ಉಮೇದಿನಿಂದ ಸಾಗುವುದರಿಂದಲೋ ಏನೋ ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ಸ್ವಲ್ಪ ಕಾಲದಮಟ್ಟಿಗೆ ತಲೆಯಲ್ಲಿ ಉಳಿಯಬಹುದು ಅಷ್ಟೇ. ಆದರೆ ಮರೆತುಬಿಡುತ್ತೀರಿ. ಅದೇ ಹಳೆಯ ಕತೆಗಳು, ಅದು ಜೀಸಸ್‌ದಾಗಿರಲಿ, ರಾಮಕೃಷ್ಣರದಾಗಿರಲಿ, ಬೆಂಜಮಿನ್ ಹೇಳುವಂತೆ ಪಿರಮಿಡ್ಡಿನ ಬಿಗಿಬಂಧವನ್ನು ಉಳ್ಳಂತವು. ಅಲ್ಲಿ ಹುಗಿದಿರುವುದು ಇನ್ಯಾವಾಗಲೋ ಚಿಗುರುವ ಶಕ್ತಿಯನ್ನು ಹೊಂದಿರುತ್ತವೆ. ಕತೆ ಯಾವುದೋ ಶ್ರೋತೃವಿನ ಮನಸ್ಸಿನಲ್ಲಿ ಏನನ್ನೋ ಚಿಗುರಿಸುವಂತಹ ಬೀಜವನ್ನು ತನ್ನೊಳಗೆ ಹುದುಗಿಕೊಂಡಿರುತ್ತದೆ.

ಹೌದು, ಶ್ರೋತೃಗಳಿರಬೇಕು. ಸಾವಧಾನವಾಗಿ, ಚಿತ್ತವಿಟ್ಟು ಆಲಿಸುವ ಶ್ರೋತೃಗಳುಬೇಕು. ನಮ್ಮ ಮನೆಯಲ್ಲಿ ಕತೆಗೆ ‘ಹೂಂ’ ‘ಹೂಂ’ ಎಂದು ಹೂಂಗುಟ್ಟುದಿದ್ದರೆ ಕತೆ ಮುಂದಕ್ಕೆ ಸಾಗುತ್ತಲೇ ಇರಲಿಲ್ಲ. ಆಧುನಿಕ ಕಾಲದ ಸಂವಹನದ ಹೆಚ್ಚಿನಂಶ ನೀವು ಹೂಂಗುಟ್ಟಬೇಕು ಎಂದು ನಿರೀಕ್ಷಿಸುವುದಿಲ್ಲ. ಸಮಸ್ಯೆಯಿರುವುದು ಅಲ್ಲೇ. ನಾನು ‘ಹೂಂ’ ಎನ್ನದಿದ್ದರೆ ನಿದ್ದೆಗೆ ಜಾರಿದೆ ಎಂದು ನನ್ನ ಅಜ್ಜಿಗೆ ಅರ್ಥವಾಗುತ್ತಿತ್ತು. ಕತೆಗಳನ್ನು ಹೇಳುತ್ತಿದ್ದದ್ದೇ ಮಕ್ಕಳನ್ನು ಮಲಗಿಸಲು, ದೊಡ್ಡವರನ್ನು ಎಚ್ಚರದಲ್ಲಿಡಲು. ಮಗುವಿಗೆ ಊಟ ಮಾಡಸಲು ಕತೆ ಬೇಕು, ಮಲಗಿಸಲೂ ಕತೆ ಬೇಕು. ಕತೆ ಹೇಳಿದರೆ ಹೂಂಗುಟ್ಟಬೇಕು. ಹಾಗೆ ಹೂಂಗುಡುವಾಗಲೇ ಬೇಸ್ತು ಬೀಳಿಸುವ ಕತೆಗಳೂ ಇವೆ:

ಒಂದೂರಿನಲ್ಲಿ ಒಂದು ಕಾಗೆ ಇತ್ತಂತೆ

ಹೂಂ…

ಅದಕ್ಕೆ ಒಂದು ಸಲ ತುಂಬಾ ಬಾಯಾರಿಕೆ ಆಯಿತಂತೆ

ಹೂಂ…

ಬಾವಿಯಲ್ಲಿ ನೀರು ಆಳದಲ್ಲಿತ್ತಂತೆ

ಹೂಂ…

ಒಂದು ಕಲ್ಲನ್ನ ಬಾವಿ ಒಳಕ್ಕೆ ಬುಳಕ್ ಅಂತ ಬೀಳಿಸಿತಂತೆ

ಹೂಂ…

ಹೂಂ ಅಂದರೆ ನೀರು ಮೇಲೆ ಬರುತ್ತಾ?

ಹೂಂ…

ಹೂಂ… ಅಂದರೆ ಬರುತ್ತಾ ಅಂದೆ

ನಮಸ್ಕಾರ.

*

(ಡಾ. ಈಯಾಪೆನ್ ದತ್ತಿ ಉಪನ್ಯಾಸ, ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, ಬೆಂಗಳೂರು, ಫೆಬ್ರವರಿ , ೨೦೦೪, ಕನ್ನಡಕ್ಕೆ : ಸುಕನ್ಯಾ ಕನಾರಳ್ಳಿ.)