ಕಮಲಾದಾಸರು ಕೇರಳದ ಲೇಖಕಿ ಮಾತ್ರವಲ್ಲ; ಭಾರತದ ಸಾಹಿತ್ಯ ಲೋಕದ ಮುಖ್ಯರಲ್ಲ ಒಬ್ಬರು.

ಸುಮಾರು ೩೫ ವರ್ಷಗಳ ಹಿಂದೆ ಇವರನ್ನು ನಾನು ಕಲ್ಲಿಕೋಟೆಯಲ್ಲಿ ನೋಡಿದ್ದು. ನಾನು ಮಾತನಾಡಿದ ಸಭೆಯಲ್ಲಿ ನನ್ನ ಪಾಲಿಗೆ ಬಹು ಆಕರ್ಷಕರಾದ ಲೇಖಕರಲ್ಲಿ ಒಬ್ಬರು ಇದ್ದರೆಂಬುದು ಗೊತ್ತಾದದ್ದು ಸಭೆ ಮುಗಿದ ನಂತರ. ನನ್ನನ್ನು ಚಿರಪರಿತನೆಂಬ ಸಲಿಗೆಯಲ್ಲಿ ಅವರು ನೇರ ಬಂದು ‘ನಾನು ಕಮಲಾದಾಸ್, ಇವರು ನನ್ನ ತಾಯಿ ಬಾಲಾಮಣಿಯಮ್ಮ, ನಿಮ್ಮ ಅಭಿಮಾನಿ ನಾನು’ ಎಂದರು. ಏನು ಹೇಳುವುದೆಂದು ನಾನು ತಡಬಡಾಯಿಸುತ್ತ ಇದ್ದಂತೆ. ಕಮಲಾದಾಸ್ ತನ್ನ ತಾಯಿಯ ಕಡೆ ತಿರುಗಿ ‘ಅನಂತಮೂರ್ತಿಯನ್ನು ನಮ್ಮ ಮನೆಗೆ ಊಟಕ್ಕೆ ಕಡಿಯೋಣವೇನಮ್ಮ? ಎಂದು ಒಬ್ಬ ಪುಟ್ಟ ಹುಡುಗಿಯಂತೆ ತಾಯಿಯನ್ನು ಪೇಚಿಗೆ ಸಿಲುಕಿಸಿದರು. ಆ ದಿನವೇ ಬೇರೇನೋ ಕಾರ್ಯಕ್ರಮ ವಿತ್ತೆಂಬುದು ತಕ್ಷಣವೇ ಹೊಳೆದು, ತಾಯಿಗೆ ಮುಜುಗರವಾಗದಂತೆ, ‘ಇನ್ನೊಮ್ಮೆ ನೀವಿಲ್ಲಿಗೆ ಬಂದಾಗ ನನಗೆ ಮುಂಚೆಯೇ ತಿಳಿಸಬೇಕು’ ಎಂದು ನನ್ನನ್ನೂ, ತಾಯಿಯನ್ನೂ ಒಟ್ಟಿಗೆ ಸಮಾಧಾನಪಡಿಸಿದರು. ನನಗೂ ಬೇರೇನೋ ಕಾರ್ಯಕ್ರಮವಿತ್ತು. ಬರಲು ಆಗುವುದಿಲ್ಲ ಎಂದು ಹೇಳಲಾರದ ದಾಕ್ಷಿಣ್ಯದಿಂದ ನನ್ನನ್ನೂ ಪಾರು ಮಾಡಿದ್ದರು.

ಅನ್ನಿಸಿದ ಸತ್ಯವನ್ನು ಅನ್ನಿಸಿದಂತೆಯೇ ಮುಜುಗರ ಮೀರಿ ಮಾತನಾಡುತ್ತ ಇದ್ದ ಲೇಖಕಿ, ಕಮಲಾದಾಸ್, ಭಾರತದ ಬಹು ಮರ್ಯಾದಸ್ಥ ಮಧ್ಯಮವರ್ಗದ ಕುಟುಂಬಗಳ ವೈವಾಹಿಕ ಜೀವನದ ಕ್ರೂರ ಸತ್ಯಗಳನ್ನು ನಿಷ್ಠುರವಾಗಿ ಬಿಚ್ಚಿಡಬಲ್ಲವರು ಕಮಲಾದಾಸ್, ತನಗೆ ಪ್ರೀತಿಪಾತ್ರರಾದ ತನ್ನ ಕುಟುಂಬವನ್ನೂ ಇವರು ಮುಜುಗರಪಡಿಸಲು ಹಿಂಜರಿಯಲಿಲ್ಲ. ಕನ್‌ಫೆಷನ್ ಎಂದು ಕರೆಯಬಹುದಾದ ಬರವಣಿಗೆ ಇವರದು. ಇಂತಹ ಬರವಣಿಗೆಗೆ ಒಂದು ‘ಔಷಧ’ ಗುಣವಿರುತ್ತದೆ; ಅಥವಾ ಕೇವಲ ಶಾಕ್ ಮಾಡಿ ಓದುಗನ ಗಮನ ಪಡೆಯುವ ಇಂದಿನ ಮೀಡಿಯಾಗಳ ಚಟವಿರುತ್ತದೆ. ಕಮಲಾದಾಸರದು ಔಷಧ ಗುಣ ಪಡೆದ, ಮುಖ್ಯವಾಗಿ ಭಾರತೀಯ ಹಿಪ್ರೋಕ್ರಸಿಯನ್ನು ಸೀಳಿನೋಡುವ, ಆತ್ಮ ಶುದ್ಧೀಕರಣದ ಬರವಣಿಗೆ.

ಜಗತ್ತಿಗೆ ಕಮಲದಾಸರು ಗೊತ್ತಾದದ್ದು ಅವರ ಇಂಗ್ಲಿಷ್ ಬರವಣಿಗೆಯಿಂದ. ನಮ್ಮ ವಿ.ಕೆ. ರಾಮಾನುಜನ್ನರಂತೆಯೇ ಕಮಲಾದಾಸ್ ಎರಡು ಭಾಷೆಗಳಲ್ಲಿ ಬರೆಯಬಲ್ಲ ನಿಪುಣರು. ಕಮಲದಾಸರ ಮಲೆಯಾಳಂನಲ್ಲಿರುವ ಸಣ್ಣ ಕಥೆಗಳು ಈ ಕಾಲದ ಅತಿ ಉತ್ತಮ ಕೃತಿಗಳೆಂದು ತಿಳಿದವರು ಕೇರಳದಲ್ಲಿ ಇದ್ದಾರೆ, ಅವರ ಇಂಗ್ಲಿಷ್ ಬರವಣಗೆಯನ್ನು ಮೆಚ್ಚಿಯೂ ಅವರ ಮಲಯಾಳಂ ಬರವಣಿಗೆ ಅಸಾಮಾನ್ಯ ಒಳನೋಟದ್ದು ಎನ್ನುವವರು ಇವರು.

ಕಮಲಾದಾಸರ ತಾಯಿ ಬಾಲಾಮಣಿಯಮ್ಮನವರು ಮಲೆಯಾಳಂನಲ್ಲಿ ಕ್ಲಾಸಿಕ್ ಎನ್ನಬಹುದಾದ ಶಾಶ್ವತ ಸತ್ಯಗಳನ್ನು ವೈಯಕ್ತಿಕ ನೆಲೆಯಲ್ಲೂ ಅವಧರಿಸುವ ಲೇಖಕಿ ಎಂದು ತಿಳಿದಿದ್ದ ನಾನು ಕೇರಳದಲ್ಲಿ ಉಪಕುಲಪತಿಯಾಗಿದ್ದಾಗ ಈ ಹಿರಿಯಳಿಗೆ ಗೌರ ಡಾಕ್ಟರೇಟ್ ಕೊಡಬೇಕೆಂದು ಮನಸ್ಸು ಮಾಡಿದ್ದೆ. ಆದರೆ ಎಲ್ಲವನ್ನು ಪಕ್ಷ ರಾಜಕಾರಣದ ಕಣ್ಣಿನಲ್ಲಿ ನೋಡುವ ಕೆಲವು ಕೇರಳೀಯರ ಪಾಲಿಗೆ ಇವರು ಕಾಂಗ್ರೇಸ್ಸಿಗರಾಗಿ ಕಂಡರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬ ಕಮಲಾದಾಸರ ತಾಯಿ ತಂದೆಯರದು. ಮಾತೃಭೂಮಿಯಂತಹ ವಿಶಿಷ್ಟ ಸಾತ್ವಿಕ ಶಕ್ತಿಯ ಪೇಪರನ್ನು ಕಟ್ಟಿಬೆಳಸಿದವರು ಇವರು. ಕಾಂಗ್ರೆಸ್ ಒಲವಿನ ಪತ್ರಿಕೆ ಇದು ಎಂದು ಕೆಲವು ಅಲ್ಪರು ಅವರಿಗೆ ಡಾಕ್ಟರೇಟ್ ಕೊಡುವುದಾದರೆ ತಮಗೆ ಬೇಕಾದವರ ಇನ್ನೊಂದು ಹೆಸರನ್ನೂ ಸೂಚಿಸಿ ಹಠ ಮಾಡಿದರು. ಬಾಲಾಮಣಿಯಮ್ಮರಂತಹ ಹಿರಿಯರನ್ನು ಈ ಸಮತೋಲನದ ರಾಜಕಾರಣದಲ್ಲಿ ಗ್ರಹಿಸಲು ಇಷ್ಟಪಡದ ನಾನು ಯಾರಿಗೂ ಡಾಕ್ಟರೇಟ್ ಕೊಡಬೇಕಾಗಿಲ್ಲವೆಂದು ನಿರ್ಧರಿಸಿದೆ. ಇದು ಹೇಗೋ, ತನಗಿಂತ ಪ್ರತಿಭೆಯಲ್ಲೂ ಆಸಕ್ತಿಯಲ್ಲೂ ಅನ್ಯರಾದ ತನ್ನ ತಾಯಿಯನ್ನೂ ಆರಾಧ್ಯ ದೈವದಂತೆ ಕಾಣುತ್ತಿದ್ದ. ಎಲ್ಲ ಸಂಪ್ರದಾಯಗಳ ವಿರೋಧಿಯಾದ ಕಮಲಾದಾಸರಿಗೆ ಗೊತ್ತಾಗಿ ನನ್ನ ಅವರ ನಡುವಿನ ಗೌರವದ ಸಂಬಂಧ ಬೆಳೆಯಿತು.

ಇನ್ನೂ ಹಲವು ನೆನಪುಗಳು ಇವೆ. ಅವರ ಕಥೆಗಳನ್ನು ಪದ್ಯಗಳನ್ನು ಓದಿ ಬರೆಯಬೇಕಾದ್ದು ಇದೆ. ಒಂದು ಘಟನೆ ಮಾತ್ರ  ನೆನಪು ಮಾಡಿಕೊಳ್ಳುವೆ; ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಬಾಲಾಮಣಿಯವರನ್ನು ಅಕಾಡೆಮಿಯ ಗೌರವ ಸದಸ್ಯರನ್ನಾಗಿ ಮಾಡುವ ನಿರ್ಧಾರ ತೆಗೆದುಕೊಂಡು ಅವರ ಮನೆಗೆ ಹೋದಾಗ ಕಮಲಾದಾಸರು ತಾಯಿಯ ಶುಶ್ರೂಷೆ ಮಾಡುತ್ತ ಇದ್ದರು; ‘ನನ್ನ ತಾಯಿ ಮಾತನಾಡಲಾರರು, ಅವರು ಎಲ್ಲವನ್ನೂ ಈಗ ಮರೆತಿದ್ದಾರೆ’ ಎಂದು ಮೊದಲೇ ಹೇಳಿ ಸಭೆಗೆ ತಾಯಿಯನ್ನು ಮಗುವಿನಂತೆ ಸಿದ್ದ ಮಾಡಿ ಎತ್ತಿ ತಂದು ಒಂದು ಖುರ್ಚಿನಲ್ಲಿ ಕೂರಿಸಿದರು. ಇವರ ಅಭಿಮಾನಿಗಳೆಲ್ಲರೂ ಅವರ ಈ ದೊಡ್ಡ ಮನೆಯಲ್ಲಿ ಸೇರಿದ್ದರು.

ನಾವು ನಮ್ಮ ರಿಚುಯಲ್ ಮಾಡಿದೆವು; ಹೂವಿನ ಹಾರ, ಶಾಲು, ಫಲಕ, ಪ್ರದಾನ ಇತ್ಯಾದಿ. ಇದರ ನಂತರ ಫೆಲೋ ಆದವರು ಒಂದೆರಡು ಮಾತಾಡುವುದು ಸಾಮಾನ್ಯ. ಬಾಲಾಮಣಿಯಮ್ಮನಿಂದ ಇದನ್ನು ನಾವು ಯಾರೂ, ಕಮಲಾದಾಸ್ ಮತ್ತು ಅವರ ಮಕ್ಕಳೂ ಕೂಡ ನಿರೀಕ್ಷಿಸಿರಲಿಲ್ಲ. ಆದರೆ ಅದೊಂದು ಪವಾಡವೆಂಬಂತೆ ಮಾತೇ ಆಡದೆ ಇದ್ದು ಬಿಟ್ಟಿದ್ದ ತಾಯಿ ಅದ್ಭುತವಾಗಿ ಮೂರು ನಾಲ್ಕು ನಿಮಿಷ ಮಾತಾಡಿದ್ದನ್ನು ಕೇಳಿ ಕಮಲಾದಾಸರ ಕಣ್ಣು ತುಂಬಿ ಬಂದದ್ದನ್ನು ನಾನು ನೋಡಿದೆ.

ಯಾವ ಉಪಾಯಗಳನ್ನೂ ಮಾಡದ ನೇರ ದಿಟ್ಟ ಚೇತನ ಕಮಲಾದಾಸರದು. ಅವರು ಒಬ್ಬ ಮುಗ್ಧ ಹುಡುಗಿಯೆಂದೇ ನನಗವರು ಭಾಸವಾಗುತ್ತ ಇದ್ದರು. ಆದರೆ ಗಾಢವಾದ ಪ್ರತಿಭೆಯ ಚಿರ ತಾರುಣ್ಯದ ಚೇತನ ಅವರದು. ಇಲ್ಲವಾದರೆ ತನ್ನ ಇಳಿವಯಸ್ಸಿನಲ್ಲಿ ಅವರು ಮತ್ತೆ ತನಗೆ ಪ್ರೀತಿಸುವುದು ಸಾಧ್ಯವೆಂಬಂತೆ, ಹೊಸ ಹೊಸ ರೂಪಗಳಲ್ಲಿ ತಾನು ಅವತರಿಸಬಲ್ಲೆನೆಂಬಂತೆ ವರ್ತಿಸುತ್ತ ಇರಲಿಲ್ಲ.

ಮರ್ಯಾದಸ್ಥರಾಗಿ, ವಿಐಪಿಯಾಗಿ ಮೆರೆಯಲು ಅವರು ತಮ್ಮ ಇಳಿವಯಸ್ಸಿನಲ್ಲೂ ಹೊಂಚಲಿಲ್ಲ. ತನಗೆ ಸರಿಕಂಡದ್ದನ್ನು ಮಾಡಿ ಇಸ್ಲಾಂ ಧರ್ಮ ಸ್ವೀಕರಿಸಿ ಕೃಷ್ಣ ಭಕ್ತರಾಗಿಯೂ ಅವರು ಉಳಿದಿದ್ದರಬಹುದೆಂದು ನನ್ನ ಅನುಮಾನ. ಎಲ್ಲ ಧರ್ಮದವರಿಗೂ ಈ ದಿಟ್ಟ ಹೆಂಗಸು ಸಮಸ್ಯೆಯೇ.

ಜಗತ್ತನ್ನೇ ತನ್ನ ಕುಟುಂಬವೆನ್ನುವಂತೆ ಭಾವಿಸುತ್ತ, ತಪ್ಪೋ ಸರಿಯೋ, ತನ್ನ ಅಂತರಂಗಕ್ಕೆ ಸರಿಕಂಡಂತೆ ಪ್ರಾಮಾಣಿಕವಾಗಿ ಕೊನೆತನಕ ನಮ್ಮನ್ನು ಬೆಚ್ಚಿಸುತ್ತ ಬಾಳಿ ಅವರು ಕಾಲವಾದರು.

*

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)