ಶ್ರೀ ಯೋಗಾನರಸಿಂಹಂರು ನನಗೆ ತೀರ್ಥರೂಪು ಸಮಾನರು. ತೀರ್ಥಹಳ್ಳಿ ಹೈಸ್ಕೂಲಿನಲ್ಲಿ ಓದುತ್ತಿದ್ದ ನನ್ನಂಥ ಅನೇಕ ಎಳೆಯರ ಮೇಲೆ ಅವರು ಶಾಲೆಯ ಮುಖ್ಯೋಪಾಧ್ಯಾಯರಾಗಿ ಗಾಢವಾದ ಪರಿಣಾಮ ಮಾಡಿದ್ದರು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅವರ ಶುಭ್ರ ಬಿಳಿಯ ಉಡುಪು, ನೀಟಾದ ಪೇಟ, ಸೌಮ್ಯಭಾವದ ತೆಜಸ್ಸಿನ ಮುಖ, ಮೃದುವಾದ ಆದರೆ ಖಚಿತವಾದ ಮಾತು, ಎಲ್ಲಕ್ಕಿಂತ ಹೆಚ್ಚಾಗಿ ಅವರ ಕಟ್ಟುನಿಟ್ಟಿನ ಶಿಸ್ತು ಮತ್ತು ಸಾತ್ವಿಕ ಕೋಪ. ನನ್ನಲ್ಲಿ ಮೊದಲು ಆಳವಾದ ರಾಷ್ಟ್ರೀಯ ಭಾವನೆಯನ್ನು ಹುಟ್ಟಿಸಿದವರು ಅವರು. ಆಗತಾನೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಯೋಗಾನರಸಿಂಹಂರು ನಮ್ಮ ಇಂಗ್ಲಿಷ್ ಪಾಠಕ್ಕೆ ನೆಹರೂ ಅವರ ಭಾಷಣಗಳನ್ನೂ ಗಾಂಧೀಜಿಯವರ ಬರಹಗಳನ್ನೂ ಬಳಸುತ್ತಿದ್ದರು. ಅವರ ವಿದ್ಯಾರ್ಥಿಗಳ ಗ್ರಹಿಕೆ ಇನ್ನೂ ಎಳಸಾದ್ದು ಎಂಬುದನ್ನು ಲೆಕ್ಕಸದೆ ಅವರು ತನಗೆ ಗಂಭೀರವಾದ ಆಸಕ್ತಿಗಳಾಗಿದ್ದ ವಿಷಯಗಳೆಲ್ಲವನ್ನೂ ಸರೀಕರ ಜೊತೆ ಹಂಚಿಕೊಳ್ಳುವ ರೀತಿಯಲ್ಲಿ ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು.  ಅವರಿಂದ ನಾನು ಎಷ್ಟು ಪ್ರಭಾವಿತನಾದೆನೆಂದರೆ ನಾನಿದ್ದ ಅಗ್ರಹಾರದಲ್ಲಿ ವಯಸ್ಸರಿಗೆ ಅಕ್ಷರ ಹೇಳಿಕೊಡುವ ಶಾಲೆಯೊಂದನ್ನು ರಾತ್ರಿಯ ಹೊತ್ತು ನಡೆಸಿದ್ದೆ. ಇಂದಿಗೂ ನನ್ನ ಬರವಣಿಗೆ ಮತ್ತು ಸಾಮಾಜಿಕ ಆಸಕ್ತಿಗಳ ಹಿಂದಿರುವ ವಿಚಾರಗಳು ಮೊಳೆದದ್ದು ಶ್ರೀ ಯೋಗಾನರಸಿಂಹಂರವರ ಆಗಿನ ಪ್ರೀತಿಯ ಶುಶ್ರೂಷೆಯಲ್ಲಿ. ಮಲೆನಾಡಿನ ಕಾಡುಬೆಟ್ಟಗಳ ನಡುವೆ ಅಗ್ರಹಾರದ ಬ್ರಾಹ್ಮಣ ಪರಿಸರದಲ್ಲಿ ಬೆಳೆಯುತ್ತಿದ್ದ ನನ್ನಲ್ಲಿ ಅವರು ಷೇಕ್ಸ್‌ಪಿಯರ್‌ನ ಬಗ್ಗೆ ಆಸಕ್ತಿ ಹುಟ್ಟಿಸಿದರು ಎಂಬುದು ಈ ಕಾಲದ ಹೈಸ್ಕೂಲಿನಲ್ಲಿ ನಡೆಯುವ ಶಿಕ್ಷಣ ತಿಳಿದವರಿಗೆ ಆಶ್ಚರ್ಯವನ್ನು ಉಂಟುಮಾಡಬಹುದು.

ಇಂಗ್ಲೀಷ್ ಮಾತ್ರವಲ್ಲದೆ ಸಂಸ್ಕೃತ ಮತ್ತು ಸಂಗೀತದಲ್ಲೂ ನಮ್ಮಲ್ಲಿ ಅಸಕ್ತಿ ಮೂಡಿಸಿದ್ದು ಅವರು. ಗೊಡ್ಡಾದ ರೀತಿಯಲ್ಲಿ ಸಂಸ್ಕೃತದ ಮಂತ್ರಗಳನ್ನು ಕೇಳಿ ರೋಸಿದ್ದ ನನ್ನ ಕಿವಿಗೆ ಭಗವದ್ಗೀತೆಯು ಮಂತ್ರಶಕ್ತಿಯನ್ನು ತನ್ನ ನಾದಶರೀರವಾಗಿ ಪಡೆದ ಕಾವ್ಯವೆಂಬುದನ್ನು ಮನದಟ್ಟು ಮಾಡಿದವರು ಅವರು. ಬೆಳಗಿನ ಪ್ರಾರ್ಥನೆಗೆ ಗಾಂಧೀಜಿಗೆ ಪ್ರಿಯವಾಗಿದ್ದ ಸ್ಥಿತಪ್ರಜ್ಞನ ವರ್ಣನೆ, ಈಷಾವಾಸ್ಯೋಪನಿಷತ್ತುಗಳನ್ನು ನಮಗವರು ಬಾಯಿಪಾಠ ಮಾಡಿಸಿದ್ದಲ್ಲದೆ, ಅವುಗಳ ಅರ್ಥದ ಒಳಸುಳಿಗಳನ್ನು ವಿವರಿಸಿದ್ದರು.

ಯೋಗಾನರಸಿಂಹಂ ತುಂಬ ಭಾವುಕರಾಗಿದ್ದ ವ್ಯಕ್ತಿ. ಗಾಂಧೀಜಿಯ ಸಾವಿನ ಸುದ್ದಿ ಕೇಳಿದ್ದೇ ನಮ್ಮನ್ನು ಉದ್ದೇಶಿಸಿ ಮಾತನಾಡಲು ನಿಂತ ಅವರ ಗಂಟಲು ಬಿಗಿದು ಕಣ್ಣುಗಳಿಂದ ನೀರು ಹರಿದ ದೃಶ್ಯ ಈಗಲೂ ನನ್ನ ಮನಸ್ಸಿನಲ್ಲಿ ಊರಿನಿಂತಿದೆ. ನನ್ನ ನೈತಿಕ ಮತ್ತು ಭಾವುಕ ಜೀವನದ ಮೇಲೆ ಅಷ್ಟು ಗಾಢ ಪರಿಣಾಮ ಮಾಡಿದ ಪ್ರೀತಿಯ ಈ ಮೇಷ್ಟ್ರನ್ನು ನೆನೆಸುವಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಕಾವ್ಯ, ಸಂಗೀತ ಸದಭಿರುಚಿ, ಸಾತ್ವಿಕತೆ, ಸರಳತೆ ಇತ್ಯಾದಿಗಳೆಲ್ಲ ಅಪೂರ್ವ ಪಾಕದಲ್ಲಿ ಮಡುಗಟ್ಟುತ್ತವೆ.

*

(‘ಗೀತ ಕುಸುಮಾಂಜಲಿಗಾಗಿ ಬರೆದ ಲೇಖನ (ಸಂಗೀತದ ಸಿರಿ ಎಚ್. ಯೋಗಾನರಸಿಂಹಂ (೧೯೯೮) ಪುಸ್ತಕದಿಂದ. ಸಂ. ಎಚ್.ವೈ. ಶಾರದಾಪ್ರಸಾದ್. ಪ್ರ.ವಿ.ಸಿ. ಸಂಪದ. ಬೆಂಗಳೂರು)