ನನ್ನನ್ನು ಅಡಿಗರಿಗೆ ಹತ್ತಿರ ತಂದವನು ಗೆಳೆಯ ಬಿಳಿಗಿರಿ. ಐವತ್ತರ ದಶಕದ ಪ್ರಾರಂಭದಲ್ಲಿ ?ಅರ್ಧ ಶತಮಾನಕ್ಕೂ ಹಿಂದೆ. ಇಂಗ್ಲಿಷಿನಲ್ಲಿ ವಿಟ್ (wit) ಎನ್ನುತ್ತಾರಲ್ಲ- ಪೋಪ್ ಎನ್ನುವ ಕವಿಗೆ ಸಂಬಂಧಿಸಿದಂತೆ- ಆ ಬಗೆಯ ಕೆಣಕುವ ಕುಹಕದ ಹಾಸ್ಯವನ್ನೂ ಜಾಣತನದ ಶ್ಲೇಷೆಯನ್ನೂ ರಮಿಸುವಂತೆ ಯಥೇಚ್ಛವಾಗಿ ಭಾಷೆಯ ಆಟವಾಗಿ ಪಡೆದಿದ್ದ ಕವಿ ಮತ್ತು ಭಾಷಾತಜ್ಞ ಈ ಬಿಳಿಗಿರಿ (ಬಿ ಐ ಎಲ್‌ಐ ಜಿ ಐ ಆರ್ ಐ/ಶೀನಿಗೊ ಮೂರ್ ಐ ನೆನಗೋ ನಾಲ್ಕ ಐ; ಹೀಗೆ ಅವನು ತನ್ನನ್ನು ಕನ್ನಡವಾಗುವ ಇಂಗ್ಲಿಷಿನಲ್ಲಿ ಪರಿಚಯಿಸಿಕೊಂಡ ರೀತಿ. ಲಂಕೇಶರಿಗೆ ಇವನು ಪ್ರಿಯ ಲೇಖಕನಾದರೆ, ನನಗೆ ಔಷಧದ ಕಹಿಯಂತೆ ಅಗತ್ಯನಾದ ಗೆಳೆಯ. ಆ ದಿನಗಳಲ್ಲಿ ನವ್ಯಕ್ಕೆ ವಾಲುತ್ತಿದ್ದ ಅಡಿಗರಿಗೂ ಕೊಂಚ ಮುಜುಗರದ ಪರಮಾಪ್ತ)

ಬಿಳಿಗಿರಿ ಎಂಜಿನಿಯರಿಂಗ್ ಓದುತ್ತಿದ್ದವನು. ಎರಡು ವರ್ಷಗಳ ನಂತರ ಅದು ತನಗೆ ಇಷ್ಟವಿಲ್ಲದ ವಿಷಯ ಎಂದು ದೃಡವಾದಂತಹ ಕನ್ನಡ ಅನರ್ಸ್‌ಗೆ ಸೇರಿದವನು. ನಾನಚಿತೂ ಇಂಟರ್ ಮೀಡಿಯಟ್‌ನಲ್ಲಿ ಸಮಾಜವಾದಿ ಆಂದೋಲನದ ಫಲವಾಗಿ, ಇಷ್ಟವಿಲ್ಲದ ಕ್ಲಾಸಿಗೆ ಚಕ್ಕರ್ ಹೊಡೆಯುವ ಕಾರಣದಿಂದಾಗಿಯೂ ಅದೃಷ್ಟವಶಾತ್ ಫೇಲಾಗಿ ನನ್ನ ತಂದೆಗೆ ಸೈನ್ಸ್ ಓದಲು ಇವನು ಅನರ್ಹ ಎನ್ನುವುದನ್ನು ಮನದಟ್ಟು ಮಾಡಿ ಇಂಗ್ಲಿಷ್ ಆನರ್ಸ್‌ಗೆ ಮೈಸೂರಿನಲ್ಲಿ ಸೇರಿದವನು. ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಸಂಜೆಯಾದೊಡನೆ ಒಂದಿಷ್ಟು ಕಡ್ಲೆಕಾಯಿಯನ್ನು ಕೊಂಡು ಮರದ ಕೆಳಗೆ ರಾಶಿ ಹಾಕಿಕೊಂಡು ಕೂತು ರಜಾಕಾಲದಲ್ಲಿ ಶಿವಮೊಗ್ಗೆಗೆ ಬಂದ ಬಿಳಿಗಿರಿಯಿಂದ ಕನ್ನಡದ ಆಧುನಿಕ ಪದ್ಯಗಳನ್ನೆಲ್ಲಾ ಓದಿ ಕೇಳಿಸಿಕೊಂಡು ನಾನು ಫೇಲಾದ ವರ್ಷ ನನ್ನ ಮನಸ್ಸು ಅರಳುವಂತೆ ಮಾಡಿಕೊಂಡಿದ್ದೆ. ಈ ಕಾಲದಲ್ಲೇ ನಾನು ಪು.ತಿ.ನ. ಅವರ ಕವನಗಳನ್ನೂ, ಅಡಿಗರ ಕಾವ್ಯವನ್ನು ಓದಿ ಬೆಳೆದಿದ್ದು, ಆ ದಿನಗಳಲ್ಲಿ ನಾನು ಎಂ.ಎನ್.ರಾಯ್ ಪಂಥದ ಬಿಳಿಗಿರಿಗಿಂತ ಭಿನ್ನ ನಿಲುವಿನ ಯುವಕ. ಕೊಂಚ ವ್ಯಂಗ್ಯದಲ್ಲೇ ರಾಜಕೀಯ ಲೋಕವನ್ನು ನೋಡುವ ಬಿಳಿಗಿರಿ ನನ್ನ ಕ್ರಾಂತಿಕಾರಕ ನಿಲುವುಗಳನ್ನು ಹಾಸ್ಯ ಮಾಡುತ್ತ ಇದ್ದ. ಕಾಗೋಡು ರೈತ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡ ನನ್ನನ್ನು ಅವನು ಕೇಳವುದು; ‘ಹೇಗೆ ನಡೆದಿದೆ ನಿಮ್ಮ ಕಗ್ಗಾಡು ರೈತ ಪೈತ್ಯಾಗ್ರಹ?’ ಹೀಗೆ ಮಾತಾಡಿದರೂ ಬಿಳಿಗಿರಿ ಭಾವಿಕನೇ. ಪದ್ಮ ಓದುವಾಗ ಅವನ ಕಣ್ಣುಗಳು ಒದ್ದೆಯಾದ್ದನ್ನು ನಾನು ಕಂಡಿದ್ದೇನೆ. ಅವನ ರಾಯ್ ಪ್ರಣೀತ ವರಸೆಗೆ ನನ್ನದೂ ಒಂದು ವರಸೆಯಿತ್ತು. ಕ್ವಿಟ್ ಇಂಡಿಯಾ ಚಳವಳಿ ಕಾಲದಲ್ಲಿ ಕಮ್ಯುನಿಸ್ಟರಂತೆಯೇ ರಾಯ್‌ವಾದಿಗಳೂ ಬ್ರಿಟಿಷರ ಪರವಾಗಿದ್ದರು. ‘ನಿನಗೆ ಬ್ರಿಟಿಷ್ ಪಿತ್ತ ಇಳಿಯಿತೆ?’ ಎಂದು ನಾನು ಹಂಗಿಸುತ್ತ ಇದ್ದೆ. ಆದರೆ ಸೋವಿಯತ್ ರಷ್ಯಾದ ಸ್ಟಾಲಿನ್ ಕ್ರೌರ್ಯದಿಂದ ಬೇಸತ್ತವರು ಮಾರ್ಕ್ಸ್‌ವಾದ ಬಿಟ್ಟುಕೊಡದಂತೆ ರಾಯ್ ನಿಲುವಿನಲ್ಲಿ ಒಂದು ಪರ್ಯಾಯ ಕಂಡಿದ್ದರು. ಅಮೆರಿಕಾದ ಸೋವಿಯತ್ ವಿರೋಧವನ್ನು ಬೆಂಬಲಿಸುತ್ತಾ ಇದ್ದರು. ಅಡಿಗರೂ ಇವರ ಜೊತೆ ಗುರುತಿಸಿಕೊಳ್ಳುತ್ತಾ ಇದ್ದರು; ಆನಂತರ ರಾಜಾಜಿ ಜೊತೆಯೂ, ಲೊಹಿಯಾ ಜೊತೆಯೂ ಮಹಾ ಮಾತುಗಾರ ಕನಸಿಗನಾದ ನೆಹರೂ ವಿರುದ್ಧವಾಗಿಯೂ ಗುರುತಿಸಿಕೊಂಡರು.

ಅನಂತರ ಮೈಸ್ರರಿಗೆ ಬಂದ ನನ್ನನ್ನು ಬಿಳಿಗಿರ ಅಡಿಗರ ಹತ್ತಿರ ಕರೆದುಕೊಂಡು ಹೋದ. ಆಗ ಅಡಿಗರು ಶಾರದಾ ವಿಲಾಸ ಕಾಲೇಜಿನಲ್ಲಿ ಅಧ್ಯಾಪಕರು. ಅವರ ಮನೆ ಇದ್ದದ್ದು ಮೈಸೂರಿನ ಪ್ರಸಿದ್ಧವಾದ ಬಲ್ಲಾಳ್ ಹೊಟೇಲಿನ ಹತ್ತಿರ. ನಾವಿಬ್ಬರೂ ಹೋದದ್ದೇ ನನ್ನನ್ನು ಬಹಳ ಹಿಂದಿನ ಪರಿಚಯವೆಂಬಂತೆ (ಬಿಳಿಗಿರಿ ನನ್ನ ಕಾವ್ಯ ಪ್ರೇಮದ ಬಗ್ಗೆಯೂ, ಸಮಾಜವಾದಿ ಆದರ್ಶದ ಬಗ್ಗೆಯೂ ಹೇಳಿರಬೇಕು) ಅಡಿಗರು ಅವರದೇ ಆದ ಸೌಜನ್ಯದ ಮುಗುಳ್ನಗೆಯಲ್ಲಿ ಬರಮಾಡಿಕೊಂಡರು. ಅವರೇನೂ ಶ್ರೀರಾಮನಂತೆ ಪೂರ್ವಭಾಷಿಯಲ್ಲ. ನಾನು ಮಾತನಾಡಬೇಕು. ಆಮೇಲೆ ಅವರಿಗೆ ಅದಕ್ಕೊಂದು ಉತ್ತರವಿದೆ ಎನಿಸಿದರೆ ಅವರು ಉತ್ತರ ಕೊಡಬೇಕು. ಇಲ್ಲವೇ ಸ್ನೇಹದ ನಗುವಿನಲ್ಲಿ ಅವರು ಸುಮ್ಮನೇ ಔಪಚಾರಿಕ ದಾಕ್ಷಿಣ್ಯದಲ್ಲಿ ಅವರ ಬೋಳು ತಲೆಯಲ್ಲಿ ಅಡಿಸಿ ಸಿಗರೇಟ್ ಹಚ್ಚಬೇಕು. ನಾನು ಮೊದಲು ಗಮನಿಸಿದ್ದು ಅವರ ಸ್ಪಷ್ಟ ಉಚ್ಛಾರದಲ್ಲಿ ‘ರ’ ಕಾರ ಅವರಿಗೆ ಕೊಂಚ ತೊಡಕು ಎಂದು

ಮೊದಲ ಭೇಟಿಯ ಉತ್ಸಾಹದಲ್ಲಿ ನಾನು ಅವರನ್ನು ಮೊದಲು ಕೇಳಿದ್ದು ‘ಮೋಹನ ಮುರಲಿ’ ಪದ್ಯವನ್ನು ಹಾಡುತ್ತೀರಾ ಎಂದು ಕೃಷ್ಣಮೂರ್ತಿ ಭಟ್ಟ ಎಂಬ ನನ್ನ ಹೈಸ್ಕೂಲಿನ ಗೆಳೆಯ ಅದ್ಭುತವಾಗಿ ಈ ಪದ್ಯವನ್ನು ಹಾಡಿದ್ದನ್ನು ಕೇಳಿದ್ದೆ. ಅಡಿಗರಿಗೆ ಹಾಡುವ ಕಂಠ ಇರಲಿಲ್ಲ. ಆದರೂ ಹಿತವಾಗುವಂತೆ ಹಾಡಬಲ್ಲವರಾಗಿದ್ದು. ನಾನು ಕೇಳಿದ್ದೇ ಅದನ್ನು ಹಾಡಿದರಲ್ಲದೆ ನನಗೆ ಇಷ್ಟವಾದ ಇನ್ನೊಂದು ಪದ್ಯವನ್ನು ಓದುವಂತೆ ಕೇಳಿದೆ. ‘ನಿನಗೆ ನೀನೇ ಗೆಳೆಯ, ನಿನಗೆ ನೀನೇ’ ಇದನ್ನು ಹಾಡದೆ ಓದಿದರು. ‘ಕಲ್ಲಾಗು’, ‘ಕಟ್ಟುವೆವು ನಾವು’ ‘ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ..’ ಇಂಥ ಪದ್ಯಗಳಿಂದಾಗಿ ನನಗೆ ಆಡಿಗರು ಪರ್ಸನಲ್ ಆಗಿ ನನ್ನೊಡನೆ ಮಾತಾಡಬಲ್ಲ ಕವಿ ಎನಿಸಿದ್ದರು.

ಇದಾದ ನಂತರ ನಮ್ಮನ್ನು ಅಡಿಗರು ಬಲ್ಲಾಳ್ ಹೊಟೇಲಿಗೆ ಕರೆದುಕೊಂಡು ಹೋದರು. ಕಾಫಿ ಕುಡಿಸಿದರು. ನನಗೆ ಯಾವತ್ತೂ ನೆನಪಿರುವುದು ಹೀಗೆ ಹೊರಗೆ ಬರುವಾಗ ಅಡಿಗರು ಅಡ್ಡ ಪಂಚೆಯೊಂದನ್ನು ನೀಟಾಗಿ ಉಟ್ಟು, ಮೇಲೆ ಉಣ್ಣೆಯ ಕೋಟೊಂದನ್ನು ಧರಿಸುತ್ತಿದ್ದರು. (ಕಚ್ಚೆ ಪಂಚೆಯನ್ನು ಅಡಿಗರು ಉಟ್ಟದ್ದನ್ನೇ ನಾನು ಕಾಣೆ) ಆ ಕೋಟಿನ ಒಳ ಜೇಬಿನಲ್ಲಿ ಬೆಂಕಿ ಪೊಟ್ಟಣ ಇಡುತ್ತಿದ್ದರು. ಹೊರ ಜೇಬಿನಲ್ಲಿ ಪ್ಲೇಯರ್ಸ್ ಸಿಗರೇಟಿನ ಪೊಟ್ಟಣ ಇರುತ್ತಿತ್ತು. ಕಾಫಿಯಾದ ಮೇಲೆ ಅವರು ಸಿಗರೇಟನ್ನು ಹಚ್ಚಿ ಬಿಳಿಗಿರಿಯೂ ಒಂದನ್ನು ಕೊಟ್ಟರು. ಬಿಳಿಗಿರಿಯೋ ‘ಅನಂತುವೋ ಸೇದುವವನೇ’ ಅಂದನು. ನನಗೂ ಒಂದು ಸಿಗರೇಟು ಕೊಟ್ಟರು. ಸಾಂಪ್ರದಾಯಿಕ ಕುಟುಂಬದಿಂದ ಬಂದ ನಮ್ಮಂಥವರ ಬಂಡಾಯದ ಚಿಹ್ನೆ ಈ ಸಿಗರೇಟು ಎಂದು ನಕ್ಕರು. ಹಿರಿಯರಿಂದ ಸಿಗರೇಟು ಪಡೆದು ಸೇದುವ ನನ್ನ ಮೊದಲನೆಯ ಅವಿನಯದ ವರ್ತನೆ ಇದಾಗಿತ್ತು

ಈ ಹೊತ್ತಿಗೆ ಅವರು ತಮ್ಮ ಹಳೆಯ ಕಾವ್ಯದಿಂದ ಬೇಸತ್ತಿದ್ದರು ಎಂದು ನನ್ನ ಭಾವನೆ. ಬಿಳಿಗಿರಿಯೂ ಅದನ್ನು ಅವರ ಜೊತೆ ಚರ್ಚಿಸುತ್ತಿದ್ದ ಬಿಳಿಗಿರಿಯ ಗದ್ಯಗಂಧಿಯಾದ ಸಾಲುಗಳು ಮತ್ತು ಅವನ ಹ್ಯೂಮರ್ ಅವರಿಗಿಷ್ಟವಾಗಿತ್ತು. ಉದಾಹರಣೆಗೆ ‘ಓಡುವ ಇಳೆಗೆ ಸೋಮಾರಿಯೇ ಬ್ರೇಕು’ ಇದೊಂದು ಬಿಳಿಗಿರಿಯ ಸಾಲು. ಈ ಸಾಲಿನ ಬಗ್ಗೆ ಪು.ತಿ.ನ.ರಂಥವರೇ ಮೆಚ್ಚು ಬರೆದಿದ್ದರು. ತಾನಾಗಿದ್ದರೆ ‘ಬೇಕು’ ಎನ್ನುತ್ತಿದ್ದೆ. ಆದರೆ ಬಿಳಿಗಿರಿ ‘ಬ್ರೇಕು’ ಎಂದಿದ್ದಾನೆ ಎನ್ನುವುದು ಅವರಿಗೆ ಹೊಸ ಕಾವ್ಯದ ಉಗಮದ ಸಂಜ್ಞೆಯಾಗಿತ್ತು. ಅಡಿಗರಿಗೂ ಹಾಗೇ ಅನ್ನಿಸಿತ್ತು. ಅಡಿಗರೂ ಕೂಡಾ ಪುತಿನರಿಗೆ ಸ್ಪಂದಿಸುತ್ತಿದ್ದರು. ಅಷ್ಟೇ ಅಲ್ಲ ಅವರಿಗೆ ಆ ಕಾಲದ ಯುವ ಕವಿಗಳಲ್ಲಿ ಗಂಗಾಧರ ಚಿತ್ತಾಲ, ಎಕ್ಕುಂಡಿ ಬಹಳ ಪ್ರಿಯ ಕವಿಗಳಾಗಿದ್ದರು. ಶಿವರುದ್ರಪ್ಪನವರ ಆ ಕಾಲದ ಬರವಣಿಗೆಯಲ್ಲಿ ಒಂದೆರಡು ಪದ್ಯಗಳನ್ನು ಇಷ್ಟಪಡುತ್ತಿದ್ದು. ಉಳಿದವು ತೀರಾ ರೊಮ್ಯಾಂಟಿಕ್ ಎಂದು ಅವರ ಅಭಿಮತ.

ಆಮೇಲಿನಿಂದ ಅಡಿಗರು ನನಗೆ ತುಂಬಾ ಬೇಕಾದವರಾದ್ದು ಹೇಗೆ ಎಂಬುದನ್ನು ಹೇಳಬೇಕು.

ಮೈಸೂರಿನ ಸಾರ್ವಜನಿಕ ಹಾಸ್ಟೆಲ್‌ನಲ್ಲಿ ಉಚಿತವಾದ ಊಟವನ್ನು ಮಾಡಿಕೊಂಡು ಓದುತ್ತಿದ್ದಾಗ ನನಗೆ ಬಹಳ ಪ್ರಿಯರಾದವರೆಂದರೆ ರೊಮ್ಯಾಂಟಿಕ್ ಕವಿಗಳು. ಶೆಲ್ಲಿಯನ್ನಂತೂ ನಾನು ಸಂಪೂರ್ಣ ಓದಿಕೊಂಡಿದ್ದೆ. ಗಾರ್ಕಿಯೂ ನನಗೆ ಬಹಳ ಪ್ರಿಯ. ನಾನು ಸಮಾಜವಾದಿಯಾಗಿ ಬೆಳೆದವನಲ್ಲದೇ..? ಅಡಿಗರಲ್ಲೂ ಈ ಸಮಾಜವಾದಿ ಕಾವ್ಯವೇ ನನಗೆ ಹೆಚ್ಚು ಪ್ರಿಯ. ಆ ದಿನಗಳಲ್ಲಿ ಒಬ್ಬರು ಫ್ರಾನ್ಸ್‌ನಿಂದ ಬಂದು ಡೆಕ್ಕನ್ ಹೆರಾಲ್ಡ್‌ನಲ್ಲೆಂದು ನೆನಪು ‘ಎಲಿಂಯಟ್ ಪ್ರತಿಗಾಮಿ ಕವಿ’ ಎಂದು ಟೀಕಿಸಿ ಬರೆಯುತ್ತಿದ್ದರು. ಅದಕ್ಕೆ ಕುಮ್ಮಕ್ಕು ಕೊಡುತ್ತಿದ್ದವರು ನಿರಂಜರು. ಅಡಿಗರು ನನಗೆ ಹತ್ತಿರುವಾಗುತ್ತಿದ್ದ ದಿನಗಳಲ್ಲೇ ನಿರಂಜನರೂ ನನ್ನ ಒಂದು ಪುಟ್ಟ ರೂಮಿನಲ್ಲೇ ಬಂದು ಇಳಿದುಕೊಳ್ಳುವಷ್ಟು ಹತ್ತಿರದವರಾಗಿದ್ದರು. ನನ್ನ ಕೆಲವು ಕೆಟ್ಟ ಕಥೆಗಳನ್ನೂ ಅವರು ಪ್ರಕಟಿಸಿದ್ದರೂ ಕೂಡಾ. ನನಗೂ ಎಲಿಯಟ್ಟನ ಬಗ್ಗೆ ಇದ್ದ ತಿರಸ್ಕಾರವನ್ನು ಪ್ರಬಂಧಗಳಾಗಿ ಬರೆಯಲು ಅವರು ಸೂಚಿಸಿದ್ದರು. ನಾನು ಕೂತು ಹೀಗೆ ಬರೆಯುವಾಗ ಒಂದು ವಿಚಿತ್ರ ಘಟನೆ ನಡೆಯಿತು. ಈ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಎಲಿಯಟ್ಟಿನ ಒಂದು ಪದ್ಯವನ್ನು ಓದಿದೆ. ‘The winter evening settles down’ ಎಂದು ಶುರುವಾಗುತ್ತದೆ ಆ ಪದ್ಯ. ತುಂಬಾ ಚೆನ್ನಾಗಿದೆ ಆ ಪದ್ಯ ಎನಿಸಿತು. ನನ್ನ ದೃಷ್ಟಿಕೋನವೇ ತಪ್ಪು ಎನಿಸಿತು. ಇದನ್ನು ನಾನು ನಿರಂಜನರಿಗೂ ತಿಳಿಸಿದೆ. ಆ ಹೊತ್ತಿಗೆ ನಾನು ಕೆಲವು  ಕಥೆಗಳನ್ನು ಬರೆದಿದ್ದೆ. ನಾನು ಇದ್ದ ಚಾಮುಂಡಿಪುರಂನಲ್ಲೇ ಆನಂದರ ಮನೆ ಇತ್ತು. ಆನಂದರು ತಾವೇ ಸ್ವತಃ ಸಿದ್ದಪಡಿಸಿದ ಹಲವಾರು ಜೇಬುಗಳಿದ್ದ ವೇಸ್ಟ್ ಕೋಟನ್ನು ಹಾಕಿಕೊಂಡು ಓಡಾಡುತ್ತಿದ್ದ ವಿಲಕ್ಷಣ ವ್ಯಕ್ತಿ. ಅವರ ‘ನಾನು ಕೊಂದ ಹುಡುಗಿ’ ನನ್ನ ಪಾಲಿಗೆ ತುಂಬ ಒಳ್ಳೆಯ ಕಥೆ ಎನಿಸಿತ್ತು. ನಾನು ಬರೆದ ಕಥೆಗಳನ್ನೆಲ್ಲಾ ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟೆ. ಅವರು ಎಲ್ಲವನ್ನೂ ಓದಿ, ಒಂದು ಕಡೆ ಕೆಂಪು, ಇನ್ನೊಂದು ಕಡೆ ಕಪ್ಪು ಇರುವ ಪೆನ್ಸಿಲ್‌ನಲ್ಲಿ ನನ್ನ ಬಹಳ ಸಾಲುಗಳನ್ನು ಕೆಂಪಕ್ಷರದಲ್ಲಿ ಅವರ ಸಿಟ್ಟು ತೋರುವಂತೆ ಹೊಡೆದು ನಾನು ಬರೆದ ಕೆಲವೇ ಮಾತುಗಳನ್ನು ಒಪ್ಪುವ  ಹಾಗೆ ಅವರ ಪೆನ್ಸಿಲ್ಲಿನ ಇನ್ನೊಂದು ತುದಿ ಕಪ್ಪಿನಿಂದ ಸೂಚಿಸಿ ಒಂದು ಮಾತು ಬರೆದಿದ್ದರು. ‘ನಿನ್ನ ಬರವಣಿಗೆ ಹೇಗಿದೆ ಎಂದರೆ ಏನನ್ನೋ ಬಚ್ಚಿಟ್ಟು ಅದನ್ನು ಹೊರತೆಗೆಯಲು ಬೇಕಾದ ಬೀಗದ ಕೈಯನ್ನು ನಿನ್ನ ಕೋಟಿನ ಜೇಬಿನಲ್ಲಿ ಬಚ್ಚಿಟ್ಟುಕೊಂಡಂತೆ ಇದೆ. ನಾನಿದನ್ನು ಯಾಕೆ ಬಿಚ್ಚಲಿ? ಇದು ನವ್ಯ ಕಾವ್ಯದಂತೆ ಇದೆ.’

ನನಗಿದು ಪರಮಾಶ್ಚರ್ಯದ ವಿಷಯ. ನಾನು ನವ್ಯ ಕಾವ್ಯವನ್ನು ಇಂಗ್ಲಿಷ್‌ನಲ್ಲಿ ಮಾತ್ರವಲ್ಲದೆ ಆಗತಾನೆ ಅಡಿಗರು ಬರೆದಿದ್ದ ‘ಹಿಮಗಿರಿಯ ಕಂದರ’ ಎನ್ನುವ ಪದ್ಯವನ್ನೂ ಸೇರಿದಂತೆ ಇದು ಕಾವ್ಯವೇ ಅಲ್ಲ ಎಂದು ತಿಳಿದವನು. ಆದರೆ ಇಂತಹ ನಾನೂ ನವ್ಯವನ್ನೇ ಬರೆಯುತ್ತಿದ್ದೇನೆ ಎಂಬ ಆನಂದರ ಮಾತು ನನಗೆ ಸಮಸ್ಯೆಯಾಯಿತು. ನನ್ನ ಹಸ್ತಪ್ರತಿಯ ಇಡೀ ಕಟ್ಟನ್ನು ತೆಗೆದುಕೊಂಡು ಹೋಗಿ ಅಡಿಗರಿಗೆ ಕೊಟ್ಟೆ ಅಡಿಗರದನ್ನು ಓದಿ ‘ನೀನು ಹೊಸದನ್ನು ಬರೆಯುತ್ತಿದ್ದೀಯಾ ನಾನು ಕಾವ್ಯದಲ್ಲಿ ಮಾಡಿದ್ದನ್ನು ನೀನು ಗದ್ಯದಲ್ಲಿ ಮಾಡುವುದನ್ನು ಕಂಡು ನನಗೆ ಸಂತೋಷವಾಗಿದೆ.’ ಎಂದಿದ್ದರು ಈ ಸಮಯದಲ್ಲೇ ಕೆ.ಸದಾಶಿವನ ಕೆಲವು ಕಥೆಗಳು, ರಾಜಲಕ್ಷ್ಮಿ ಎನ್. ರಾವ್ ಅವರ ಕೆಲವು ಕಥೆಗಳು, ರಾಮಚಂದ್ರ ಶರ್ಮರ ಕೆಲವು ಪದ್ಯಗಳು ಹೊಸದಿಕ್ಕಿನಲ್ಲಿವೆ ಎಂದು ಅಡಿಗರು ಗುರುತಿಸಿದ್ದರು.

ಇಷ್ಟೆ ಅಲ್ಲ- ಹೊಸದಾಗಿ ಬರೆಯುವ ಯುವಕರನ್ನೆಲ್ಲ-ಗಂಗಾಧರ ಚಿತ್ತಾಲ. ಯಶವಂತ ಚಿತ್ತಾಲ, ಗಿರೀಶ ಕಾರ್ನಾಡ್-ಓದಿ ಸ್ಪಂದಿಸುತ್ತ ಇದ್ದರು. ನನಗೆ ಥಟ್ಟನೇ ನೆನಪಾಗುವುದು- ನಮ್ಮೆಲ್ಲರಿಗಿಂತ ಅನ್ಯವಾದ ದಿಕ್ಕಿನಲ್ಲಿ ಆಮೇಲಿಂದ ಬರೆಯತೊಡಗಿದ ಬರಗೂರು ರಾಮಚಂದ್ರಪ್ಪನವರನ್ನು ಗಮನಿಸಬೇಕು ಎಂದು ನನಗೆ ಹೇಳಿದ್ದರು. ದೇವನೂರ ಮಹದೇವ ಒಂದು ವಿಮರ್ಶಾ ಲೇಖನ ಬರೆದಾಗ, ಗೋಪಾಲ ಗೌಡರು ಬರೆಯುವುದಾದರೆ ಹೀಗೆ ಬರೆಯಬಹುದಿತ್ತು ಎಂದು ಸಂತೋಷಪಟ್ಟಿದ್ದರು. ತೇಜಸ್ವಿಯ ಕಥೆ ‘ಲಿಂಗ ಬಂದ’ ಪ್ರಕಟವಾದದ್ದೆ ಇಲ್ಲಿ ಒಬ್ಬ ಹೊಸ ಲೇಖಕ ಇದ್ದಾನೆಂದು ಗುರುತಿಸಿ ಹಾಗೆಂದು ತೇಜಸ್ವಿಗೆ ಅವರು ಬರೆದಿದ್ದರು. ಆಲನಹಳ್ಳಿ ಕೃಷ್ಣ ಅವರು ಮೆಚ್ಚಿದ ಲೇಖಕ. ಜಿ.ಬಿ.ಜೋಷಿ, ಕುರ್ತುಕೋಟಿ, ಎಮ್. ಜಿ. ಕೃಷ್ಣಮೂರ್ತಿ, ಅವರಿಗೆ ಮುಖ್ಯರು. ಜಿ.ಹೆಚ್.ನಾಯಕರ ನಿಷ್ಠುರ ಪ್ರಾಮಾಣಿಕತೆ ಮತ್ತು ಸ್ವೋಪಜ್ಞತೆಗಳನ್ನು ಅಡಿಗರು ತುಂಬ ಮೆಚ್ಚಿದವರು. ಅಭಿಪ್ರಾಯ ಭೇದವನ್ನು ವೈರವೆಂದು ಎಂದೂ ಅವರು ತಿಳಿದವರಲ್ಲ. ಬಿ.ಎಂ. ಶ್ರೀ ಬಗ್ಗೆ ಅವರು ಬರೆದ ಅದ್ಭುತ ಪದ್ಯ ಕಟುವಾದ ಟೀಕೆಯೂ ಹೌದು; ಗಾಢವಾದ ಮೆಚ್ಚುಗೆಯೂ ಹೌದು.

(ಇಲ್ಲಿ ನಾನು ಹೇಳಲೇಬೇಕಾದ ಒಂದು ಮಾತು ಇದೆ-ನಮ್ಮ ದರಿದ್ರ ಜಾತಿ ರಾಜಕೀಯದ ಗುಸುಗುಸು ತರಲೆಯ ವಿರುದ್ಧ. ಈ ಮಾತು ಹಲವರು ತಿಳಿದಂತೆ ಅಡಿಗರು ‘ಕುವೆಂಪು ಕವಿಯಾದರೆ ನಾನು ಕವಿ ಅಲ್ಲ; ಎಂದು ಅವರು ಎಲ್ಲೂ ಹೇಳಿಯೇ ಅಲ್ಲ. ಪ್ರಜಾವಾಣಿ ಸಂದರ್ಶನವೊಂದರಲ್ಲಿ ಅವರು ಹೇಳಿದ ಮಾತು ನವ್ಯಕ್ಕೆ ಸಂಬಂಧಪಟ್ಟಂತೆ ಗೋಕಾಕರ ಬಗ್ಗೆ, ಗೋಕಾಕರು ನವ್ಯ ಕವಿಯಾದರೆ ನಾನಲ್ಲ, ನಾನು ನವ್ಯ ಕವಿ ಎನ್ನುವುದಾದರೆ ಗೋಕಾಕರು ಅಲ್ಲ.’ ಅಡಿಗರು ಕುವೆಂಪು ಪ್ರಣೀತ ಆಧ್ಯಾತ್ಮ ಪರಿಭಾಷೆಯನ್ನು ಒಪ್ಪದವರು ಎನ್ನುವುದು ನಿಜ. ಒಮ್ಮೆ ಅಕಾಡೆಮಿ ಅಧ್ಯಕ್ಷರು- ಅಸ್ಸಾಮಿ ಲೇಖಕ ಭಟ್ಟಾಚಾರ್ಯರು- ಕುವೆಂಪು ಕೃತಿಗಳ ಬಗ್ಗೆ ಅಡಿಗರನ್ನು ಪ್ರಶ್ನಿಸಿದಾಗ ಅಡಿಗರು ಹೇಳಿದ್ದು ಹೀಗೆ. ‘ಕುವೆಂಪು ಮೂರು ಮಹಾಕೃತಿಗಳನ್ನು ಸೃಷ್ಟಿಸಿದ್ದಾರೆ; ಅವರ ಎರಡು ಕಾದಂಬರಿಗಳು ಮತ್ತು ಅವರ ಮಗ ತೇಜಸ್ವಿ.’ ಕೊಂಚ ಉತ್ಪ್ರೇಕ್ಷೆಯ ಮಾತು ಇದು. ಕುವೆಂಪು ಕಾವ್ಯಕ್ಕೆ ಚಾರಿತ್ರಿಕ ಮಹತ್ವ ಇರುವುದನ್ನು ಇದು ಮರೆಯುತ್ತದೆ. ಆದರೆ ಅಡಿಗರಿಗೆ ಕುವೆಂಪು ಕಾವ್ಯವನ್ನು ನಿರಾಕರಿಸುವುದು ಮಾತ್ರವಲ್ಲ ತನ್ನ ಹಿಂದಿನ ಕಾವ್ಯವನ್ನೂ ನಿರಾಕರಿಸುವುದು ಅಗತ್ಯವಾಗಿತ್ತು ಎನ್ನುವುದನ್ನು ಮರೆಯಬಾರದು.)

ಇನ್ನೊಂದು ನಾನು ಮರೆಯಲಾರದ ಘಟನೆ; ದಾವಣಗೆರೆಯಲ್ಲಿ ನಮ್ಮ ಹೊಸ ಸಾಹಿತ್ಯದ ಚರ್ಚೆಗೆ ಸೇರಿದ್ದೆವು; ಆಗ ಮಧ್ಯ ಪ್ರವೇಶಿಸಿ ಅಡಿಗರು ಹೇಳಿದ ಮಾತಿನ ತಾತ್ಪರ್ಯ ಹೀಗಿತ್ತು; ‘ನನಗೆ ಬಹು ಪ್ರಿಯರಾದ ಅನಂತಮೂರ್ತಿಯದೂ ನನ್ನದೂ ಒಂದೇ ಪಾಡು; ನಮ್ಮ ಮೇಲೆ ಭೂತಕಾಲದಿಂದ ಪಾರಾಗುವ ಪಾಡಿದೆ. ಆದರೆ ವರ್ತಮಾನದ ಸದ್ಯಕ್ಕೆ ಆಳವಾಗಿ ಸ್ಪಂದಿಸಬಲ್ಲವರು ಲಂಕೇಶರು; ಹೀಗಾಗಿ ಅವರೇ ಈ ಕಾಲಕ್ಕೆ ಮುಖ್ಯರು’. ‘ಲಂಕೇಶರು ಭಾವವಶರಾಗಿ ಇದನ್ನು ಅಲ್ಲಗೆಳೆದು ಮಾತಾಡಿದಾಗ ಅವರ ಕಣ್ಣಿನಲ್ಲಿ ನೀರಿತ್ತು. ನನ್ನ ಕಥೆಗಳ ಸಾಂದ್ರತೆ ಬಗ್ಗೆ ಆ ವರೆಗೆ ಯಾರೂ ಹೇಳಿದ್ದನ್ನು ಲಂಕೇಶರು ತಮ್ಮ ಮಾತಿನಲ್ಲಿ ವಿವರಿಸಿದ್ದರು. ಈ ಸಾಮರಸ್ಯ ಕೊನೆತನಕ ಉಳಿಯಲಿಲ್ಲ; ಆದರೆ ನಮ್ಮಲ್ಲಿ ಮರೆಯಲೂ ಇಲ್ಲ.

ನಾನೂ ಅಡಿಗರೂ ಮತ್ತು ಇನ್ನು ಕೆಲವು ಗೆಳೆಯರು ಪ್ರತಿನಿತ್ಯ ಮೈಸೂರಿನ ದಾಸ್ ಪ್ರಕಾಶ್ ಹೊಟೇಲಿನ ಹತ್ತಿರ ಇದ್ದ ಕಾಫಿಹೌಸ್‌ನಲ್ಲಿ ಸೇರುತ್ತಿದ್ದೆವು. ಈ ಕಾಫಿ ಹೌಸ್‌ನಲ್ಲಿ ಬೆತ್ತದ ಕುರ್ಚಿಗಳು ಒಂದೊಂದು ದುಂಡು ಮೇಜಿನ ಸುತ್ತ ಇರುತ್ತಿದ್ದವು. ಒಂದು ಮೂಲೆಯಲ್ಲಿ ಇಂಥದ್ದೊಂದು ಜಾಗದಲ್ಲಿ ನಾವೆಲ್ಲರೂ ಕೂರುವುದು. ಅಡಿಗರು ಬರೆದು ತಂದ ಹೊಸ ಪದ್ಯಗಳನ್ನು ಇಲ್ಲವೇ ನಾವು ಬರೆದದ್ದನ್ನು ಓದಿ ವಿಮರ್ಶಿಸುವುದು, ಗಂಟೆಗಟ್ಟಲೆ. ಒನ್ ಬೈ ಟು ಕಾಫಿಯನ್ನು ಪದೇ ಪದೇ ಆರ್ಡರ್ ಮಾಡಿ ನಿಧಾನ ಕುಡಿಯುವುದು. ಇದನ್ನು ತುಂಬ ಅಭಿಮಾನದಿಂದ ಸಾಧ್ಯ ಮಾಡಿದವರು ಹೊಟೇಲ್ ಮಾಲೀಕರಾದ ಮುತ್ತಣ್ಣ.

ಕಾಲ ಬದಲಾಯಿತು. ನಾವು ಆಧುನಿಕರು ಎಂದುಕೊಂಡಿದ್ದೆವು. ಆದರೆ ಆ ಕಾಲದ ಆಧುನಿಕತೆಯ ಸಂಕೇತವಾದ ಜೂಕ್ ಬಾಕ್ಸ್ ಕಾಫಿ ಹೌಸಿಗೆ ಬಂತು. ಇದನ್ನು ಕೇಳಿಸಿಕೊಳ್ಳಲು ಗದ್ದಲಪ್ರಿಯ ಯುವಕರು ಬರಲುತೊಡಗಿದ್ದೆ ಆಧುನಿಕರು ಎಂದುಕೊಂಡ ನಾವೇ ಜಾಗ ಖಾಲಿ ಮಾಡಿ ಪಾರ್ಕಿನ  ಮರದ ಬುಡದ ನೆರಳನ್ನು ಆಶ್ರಯಿಸಿದೆವು.

ಅಡಿಗರೂ ತುಂಬಾ ಸಿಗರೇಟು ಸೇದುತ್ತಿದ್ದರು; ನಾವು ಕೂಡಾ. ನಾನು ಸಾಮಾನ್ಯವಾಗಿ ಬೆಂಕಿಪೊಟ್ಟಣ ಮರೆತು ಬರುತ್ತಿದ್ದೆ. ಅಡಿಗರಿಂದ ಅದನ್ನು ಪಡೆಯುತ್ತಿದ್ದೆ. ನಾನು ಸಿಗರೇಟನ್ನು ಹಚ್ಚುವುದನ್ನು ಅಡಿಗರು ನನ್ನತ್ತ ಮುಂದಿನದನ್ನು ನಿರೀಕ್ಷಿಸುವಂತೆ ನೋಡುತ್ತಲೇ ಇರುತ್ತಿದ್ದರು. ಯಾಕೆಂದರೆ ನಾನು ಅರಿವಿಲ್ಲದೆ ಆ ಬೆಂಕಿಪೊಟ್ಟಣವನ್ನು ನನ್ನ ಜೇಬಿಗೆ ಹಾಕಿಕೊಂಡು ಬಿಡುತ್ತಿದ್ದೆ. ಆಗ ಅವರು ನಕ್ಕು ಕೈಯೊಡ್ಡಿ ಬೆಂಕಿಪೊಟ್ಟಣವನ್ನು ನನ್ನಿಂದ ಪಡೆದು ಜೋಕೆಯಾಗಿ ಮತ್ತೆ ತನ್ನ ಒಳ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಇಟ್ಟುಕೊಳ್ಳುವ ಜೋಪಾನದಲ್ಲಿ ಎಲ್ಲರನ್ನೂ ನಗಿಸುತ್ತ ಇದ್ದರು.

ಯಾವತ್ತೂ ಅಡಿಗರು ತನ್ನ ಪದ್ಯಗಳನ್ನು ಕುರಿತು ಸಮರ್ಥನೆಯ ಮಾತನ್ನು ಆಡಿದವರಲ್ಲ. ಅಥವಾ ಅರ್ಥವಾಗಲೆಂದು ಅವನ್ನು ವಿಶ್ಲೇಷಿಸಿದವರೂ ಅಲ್ಲ. ಅವರ ಕಾವ್ಯಕ್ಕೆ ನಾವಾಗಿಯೇ ಒದಗಿ ಬಂದಾಗ ಅವರಿಗೆ ಖುಷಿಯಾಗುತ್ತಿತ್ತು. ಭೂಮಿಗೀತ ಪದ್ಯವನ್ನು ಅವರು ಆಕಾಶವಾಣಿಗೆಂದು ಬರೆದದ್ದು. ‘ಭುವಿ ನೀಡಿದ ಸ್ಫೂರ್ತಿ’ ಎಂಬ ಶೀರ್ಷಿಕೆಯಡಿ ಅಡಿಗ ಮತ್ತು ಶರ್ಮ ಇಬ್ಬರೂ ಬರೆದಿದ್ದರು. ಈಗ ಉಳಿದಿರುವುದು ಕನ್ನಡ ಸಾಹಿತ್ಯದ ಒಂದು ಶಿಖರವಾಗಿ ಅಡಿಗರ ಭೂಮಿಗೀತ. ಆದರೆ ಇಂಥ ಒಂದು ಪದ್ಯವನ್ನು ಓದಿದ ನಾನು ಒಂದು ಟೀಕೆಯನ್ನು ಮಾಡಿದ್ದೆ. ‘ಸರ್, ಈ ಪದ್ಯ ಒಂದು ರೇಡಿಯೋ ಭಾಷಣದಂತಿದೆ. ತುಂಬ ಚೆನ್ನಾಗಿದೆ, ಆದರೆ ಕೆಲವು ಸಾರಿ ನೀವು ಭೀಭತ್ಸವನ್ನು ಸೂಚಿಸುವಾಗ ‘ಇವಳ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ, ಕಳ್ಳ ಬಸುರಿನ ಯಾವ ಜಾಣ ರಂಭೆ; ಎನ್ನುವಂತಹ ಸಾಲು ಬರೆದುಬಿಡುತ್ತೀರಿ. ಇದು ಯಾವ ಕವಿಯಾದರೂ ಬರೆಯಬಹುದಾದ ಅತಿ ವಾಚ್ಯವಾದ ಬೈಗುಳದಂತಿದೆ. ಅಡಿಗರು ನನ್ನ ಮಾತನ್ನು ಸುಮ್ಮನೇ ಕೇಳಿಸಿಕೊಂಡರು.

ಇನ್ನೆರಡು ಅವರ ಕಾವ್ಯಕ್ಕೇ ಸಂಬಂಧಪಟ್ಟ ಘಟನೆಗಳನ್ನು ಹೇಳಲು ಬಯಸುತ್ತೇನೆ.

ಅಡಿಗರು ಕಾಫಿ ಹೌಸಿಗೆ ಬಂದಾಗ ಕೈಯಲ್ಲೊಂದು ಚೀಲ-ಹಿಂದೆಲ್ಲಾ ನಾವು ತೆಗೆದುಕೊಂಡು ಹೋಗುತ್ತಿದ್ದ ಗಾಂಧಿ ಚಿತ್ರವಿದ್ದ ಸೆಣಬಿನ ಚೀಲ. ಕಾಫಿಯಾದ ನಂತರ, ಚರ್ಚೆಯಾದ ನಂತರ ಇಂದ್ರಭವನದ ಸಿಹಿ ಅಂಗಡಿಗೆ ಹೋಗಿ ಮಕ್ಕಳಿಗೊಂದಿಷ್ಟು ಸಿಹಿ ತಿಂಡಿಯನ್ನೂ, ಮಾರ್ಕೆಟ್‌ನಿಂದ ತರಕಾರಿಯನ್ನೂ ಕೊಂಡು ಅವರಿದ್ದ ನರಸಿಂಹರಾಜ ಮೊಹಲ್ಲಾಕ್ಕೆ ಹೋಗುವ ಬಸ್ಸನ್ನು ಹಿಡಿಯಲು ಪುರಭವನದ ಎದುರಿಗೆ ಗೀತಾ ಬುಕ್ ಹೌಸಿನ ಹತ್ತಿರದಲ್ಲಿದ್ದ ಒಂದು ಬಸ್ ಸ್ಯಾಂಡಿನಲ್ಲಿ ನಿಲ್ಲುತ್ತಿದ್ದರು. ಹೀಗೆ ಅವರು ಕಾಯುತ್ತಾ ನಿಂತ ಒಂದು ದಿನ ನನಗೆ ಯಾವ ತೀವ್ರತೆಯೂ ಇಲ್ಲದೆ ಇದೊಂದು ಸಾಮಾನ್ಯ ಸತ್ಯದ ಮಾತು ಎನ್ನುವಂತೆ ಹೇಳಿದರು. ‘ನನ್ನ ಕ್ರಿಯೇಟಿವಿಟಿ ಬತ್ತಿ ಹೋಗಿದೆ ಅನಂತಮೂರ್ತಿ. ಇನ್ನು ನಾನು ಕವಿತೆಯನ್ನು ಬರೆಯಲಾರೆ ಎನಿಸುತ್ತದೆ’ ಇಷ್ಟು ಆಳವಾದ ಮಾತಿಗೆ ಹೇಗೆ ಸ್ಪಂದಿಸವುದೂ ಸರಿಯಲ್ಲವೆಂದು ಸುಮ್ಮನೆ ನಾನು ಗ್ರಹಿಸಿದೆ. ಆಗ ನನ್ನ ಪಾಲಿಗೆ ಅಡಿಗರು ಪಾಠವಾಗಿ ನಾನು ಅನರ್ಸ್‌ನಲ್ಲಿ ಓದುತ್ತ ಇದ್ದ ಎಲಿಯಟ್‌ನನ್ನೂ ಮೀರಿಸಿದ ಕವಿ ಎಂಬ ಭಾವ ಇತ್ತು (ಇವನ್ನೆಲ್ಲ ನಾನು ಹಂಚಿಕೊಳ್ಳುತ್ತ ಇದ್ದುದು ಜಿ.ಹೆಚ್.ನಾಯಕರ ಜೊತೆ)

ಹದಿನೈದು ದಿವಸಗಳ ನಂತರ ಮತ್ತೆ ಕಾಫಿ ಹೌಸ್‌ನಲ್ಲಿ ನಾವು ಭೇಟಿಯಾದಾಗ ಅವರು ಜೋಪಾನವಾಗಿ ಮಡಿಸಿ ತಂದ ಕಾಗದದ ಎರಡು ಮಗ್ಗುಲಲ್ಲೂ ಬರೆದ ‘ಕೂಪ ಮಂಡೂಕ’ ಪದ್ಯವನ್ನು ನನ್ನ ಕೈಯಲ್ಲಿಟ್ಟರು. ನಾನು ಅದನ್ನು ಓದಿ ಭಾವವಶನಾದೆ. ನನ್ನ ಸೃಜನಶಕ್ತಿ ನಾಶವಾಗಿದೆ ಎಂದು ಅವರು ಹೇಳಿದ್ದನ್ನೇ ಒಂದು ಅದ್ಭುತವಾದ ಅತ್ಯಂತ ಸೃಜನಶೀಲವಾದ ಕವನವನ್ನಾಗಿ ಮಾರ್ಪಡಿಸಿದ್ದರು.

ಮುಖ್ಯವಾಗಿ ಹೇಳಬೇಕಾದ ಒಂದು ಮಾತಿದೆ. ಈ ದಿನಗಳಲ್ಲಿ ಅಡಿಗರು ಏನನ್ನು ಬರೆದರೂ ‘ಇದು ನನ್ನ ಕೊನೆಯ ಕೃತಿ’ ಎಂಬ ತೀವ್ರತೆಯಲ್ಲಿ ತಮ್ಮನ್ನು ಆ ಕೃತಿಗೆ ಅರ್ಪಿಸಿಕೊಳ್ಳುತ್ತಿದ್ದರು.

ಇನ್ನೊಂದು ಘಟನೆ ರಾಮಾನಜನ್ ನಮ್ಮ ಜೊತೆ ರಜೆಯ ಮೇಲೆ ಇದ್ದಾಗ ನಡೆದಿದ್ದು, ಅವರು ಹೊಸ ರೀತಿಯಲ್ಲಿ ಬರೆಯುತ್ತಿದ್ದವರು. ಅಡಿಗರ ಯಕ್ಷಗಾನದ ಅಬ್ಬರದ ತೀವ್ರತೆಯನ್ನು ಎಲ್ಲೂ ಬಳಸದೆ ನಿತ್ಯದ ಮಾತಿನಲ್ಲಿ ಹೇಳುವುದನ್ನೆಲ್ಲಾ ಹೇಳಬೇಕೆಂಬ ವ್ರತದವರು. ಅಡಿಗರಿಗೆ ಅವರ ಬರವಣಿಗೆಯ ಮೇಲೆ ಬಹಳ ಇಷ್ಟ. ಯಾರಿಂದಾದರೂ ತನಗೆ ಬೇಕಾದ್ದನ್ನು ಪಡೆಯಬಲ್ಲ ಸ್ವೀಕಾರದ ಮನಸ್ಥಿತಿಯಲ್ಲಿ ಜೊತೆಗೆ ವಿಮರ್ಶಾತ್ಮಕ ಎಚ್ಚರದಲ್ಲಿ ಅಡಿಗರಿರುತ್ತಿದ್ದರು. ವಿ.ಕೆ. ರಾಮಾನುಜನ್ ಸುಪ್ತ ಪ್ರಜ್ಞೆಗೆ ಫ್ರಾಯ್ಡ್ ಕೊಡುವ ಮಂಜಿನ ಗಡ್ಡಯ ಇಮೇಜ್‌ನ್ನು ಏಳೆಂಟು ಸಾಲುಗಳಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಇದನ್ನು ಓದಿ ಅಡಿಗರು ಖುಷಿಪಟ್ಟರು. ಯಾಕೆಂದರೆ ಕಾವ್ಯ ಕ್ರಿಯೆಯಲ್ಲಿ  ನಮ್ಮ ತಿಳಿವೂ ಅಲ್ಲದೆ ನಾವು ತಿಳಿಯದ್ದು ಅಪ್ರಜ್ಞಾಪೂರ್ವಕವಾಗಿ ನಮ್ಮಲ್ಲಿ ಇದ್ದದ್ದೂ ಒದಗಿಬರುತ್ತದೆಂದು ತಿಳಿದಿದ್ದ ಅಡಿಗರಿಗೆ ಖುಷಿಯದಾದದು ಸಹಜವೇ. ಇದನ್ನು ಓದಿ ಪದ್ಯವನ್ನು ಹಿಂದಕ್ಕೆ ಕೊಟ್ಟು ಮನೆಗೆ ಹೋದ ಅಡಿಗರು ಮಾರನೇ ದಿನ ಅವರ ‘ಭೂತ’ ಪದ್ಯವನ್ನು ಬರೆದು ತಂದರು. ರಾಮಾನುಜನ್‌ರ ಆರೆಂಟು ಸಾಲುಗಳು ಅಡಿಗರ ಪದ್ಯದಲ್ಲಿ ಒಂದೇ ಒಂದು ಸಾಲಾಗಿ ಬಂದಿದೆ. ‘ನೀರ ಮೇಲಕ್ಕೊಂದು ಮಡಿ/ಕೆಳಕ್ಕೇಳು ಮಂಜಿನ ಶಿಖರಿ ‘ಮೇಲಕ್ಕೊಂದು’ ಎನ್ನುವಾಗ ಒತ್ತಕ್ಷರದಿಂದಾಗಿ ಅದು ಮೇಲಕ್ಕೆ ಏರುತ್ತದೆ. ‘ಕೆಳಕ್ಕೇಳು’ ಎನ್ನುವ ದೀರ್ಘದಲ್ಲಿ ಅದು ಕೆಳಕ್ಕೆ ಇಳಿಯುತ್ತದೆ. ರಾಮಾನುಜನ್‌ಗೆ ಇದು ಅದ್ಭುತವೆನಿಸತ್ತು. ನಾನಿದನ್ನು ‘ಭಾವಾಭಿನಯ’ ಎಂದು ಗುರುತಿಸಿದ್ದೇನೆ.

ನಾನು ಬರೆದಿದ್ದೆಲ್ಲವನ್ನೂ ಅಡಿಗರಿಗೆ ತೋರಿಸುತ್ತಿದ್ದೆ. ನನ್ನ ಮೊದಲನೇ ಪುಸ್ತಕ ‘ಎಂದೆಂದೂ ಮುಗಿಯದ ಕಥೆ’ಗೆ ಅವರು ಬರೆದಿರುವ ಮುನ್ನುಡಿಯಲ್ಲಿರುವ ಭರವಸೆಯನ್ನು ಇವತ್ತಿಗೂ ನಾನು ತೀರಿಸಿದ್ದೇನೆ ಎನ್ನಿಸವುದಿಲ್ಲ. ಆದರೆ ಆ ಹಾದಿಯಲ್ಲಿದ್ದೇನೆ ಎನ್ನುವ ಆತ್ಮವಿಶ್ವಾಸವನ್ನು ಅವರು ನನಗೆ ಕೊಟ್ಟಿದ್ದರು. ಅಡಿಗರು ಬರೆಯುವಾಗ ಬಹಳ ಒತ್ತಾಗಿ, ತುಂಬ ಒಪ್ಪವಾಗಿ, ಸಮಾಸಪದಗಳಿಗೆ ಅಂಜದೆ ಟೆನ್ಶನ್‌ನಲ್ಲಿ ಇರುವ ಸಾಲುಗಳನ್ನು ಬರೆಯುತ್ತಾರೆ. ಇದನ್ನು ಬದಲಿಸದ ಹೊರತು ಅಡಿಗೋತ್ತರ ಕಾವ್ಯ ಸಾಧ್ಯವಿಲ್ಲ ಎಂದು ತಿಳಿದು (ಅವರನ್ನು ತುಂಬ ಮೆಚ್ಚುತ್ತಲೇ ಅವರಿಗೆ ವಿರೋಧವಾಗಿಯೂ ಭಾವಿಸುತ್ತಿದ್ದ) ನಾನು ಅಂಥ ಒಂದು ಆಳ್ಳಕವಾದ ಹಗುರದ ಪದ್ಯವನ್ನು ಬರೆದೆ. ಈ ಪದ್ಯದ ಹೆಸರು ‘ರಾಜನ ಹೊಸ ವರ್ಷದ ಪ್ರಾರ್ಥನೆ’. ಆ ಕಾಲಕ್ಕಿದು ಪೋಸ್ಟ್ ಮಾಡರ್ನ್, ಇದನ್ನು ಅಡಿಗರಿಗೆ ಓದಲು ಕೊಟ್ಟೆ. ಕಾಫಿ ಕುಡಿಯುತ್ತಾ ಈ ಪದ್ಯವನ್ನು ಓದಿ “ನೀವು ಬರೆದಿರುವ ಏಕ ಮಾತ್ರ ಒಳ್ಳೆಯ ಪದ್ಯ ಇದು’ ಎಂದು ಹಸ್ತಪ್ರತಿಯನ್ನು ಹಿಂದಕ್ಕೆ ಕೊಟ್ಟರು. ಎರಡು ಮೂರು ನಿಮಿಷ ಅದನ್ನು ನೋಡಿರಬೇಕು ಅಷ್ಟೇ. ವಾರದ ನಂತರ ಅವರ ಪ್ರಾರ್ಥನೆ ಪದ್ಯವನ್ನು ನನಗೆ ಓದಲು ಕೊಟ್ಟರು. ನನ್ನ ಇಡೀ ಪದ್ಯ ರೂಪಾಂತರಗೊಂಡು ಇನ್ನೊಂದು ಶ್ರೇಷ್ಠವಾದ, ಬಿಗಿಯಾದ ಕೃತಿಯನ್ನು ಬರೆದಿದ್ದರು. ಒಳಗೇ ಒಂದಕ್ಕೊಂದು ಕೊಂಡಿಯಾಗುವ ಅಂಗಾಂಗ ಸಂಬಂಧಗಳಿರುವ ಪದ್ಯ ‘ಪ್ರಾರ್ಥನೆ’.

ಉದಾಹರಣೆಗೆ ನೋಡಿ. ನಾನು ನನ್ನ ಪದ್ಯವನ್ನು ಶುರು ಮಾಡುವುದು ‘ಸ್ವಾಮಿ/ಕೆನೆಯುವುದಿಲ್ಲವೇಕಯ್ಯ ಅಗಸನ ಕತ್ತೆ ಕುದುರೆಯಂತೆಂದು/ ನಿನ್ನ ಸೃಷ್ಟಿಯ ಗುಟ್ಟ ಕೆದಕಬಂದವನಲ್ಲ./ಕೆಡಕು ಬಯಸಿದ್ದಿಲ್ಲ/ ಧೈರ್ಯವೂ ಇಲ್ಲ’. (ಇಲ್ಲಿನ ಅರ್ಜಿಯ ಧಾಟಿಯಲ್ಲಿ ಆಡೆನ್ ಕವಿ ಇಣುಕಿದ್ದಾನೆ) ಅಡಿಗರ ಪದ್ಯ ಶುರುವಾಗುವುದು ನೋಡಿ. ‘ಪ್ರಭೂ, ಪರಾಕು ಪಂಪನ್ನೊತ್ತಿಯೊತ್ತಿ ನಡಬಗ್ಗಿರುವ ಬೊಗಳು ಸನ್ನಿಯ ಹೊಗಳು ಭಟ್ಟ ಖಂಡಿತ ಅಲ್ಲ….’ ನನ್ನ ಲಯವನ್ನೇ ಅವರು ಇಲ್ಲಿ ಬಿಗಿಗೊಳಿಸಿಬಿಟ್ಟಿದ್ದಾರೆ.

ಇನ್ನೊಂದು ಅದ್ಭುತವಾದ ಸಾಮ್ಯ ಇದೆ. ನನ್ನ ಪದ್ಯದಲ್ಲಿ ಬೆಳಗಾಗುತ್ತದೆ. ಹೊರಬಂದು ‘ಚಿಪ್ಪೊಡೆದು ಹೊರಬಂದ ಕೋಳಿ ಮರಿಯಷ್ಟು ಮೃದುವಾಗಿ ನಾನಿಂತೆ’ ಅಡಿಗರಲ್ಲಿ ಚಿಪ್ಪೊಡೆದು ಹೊರಬರುವುದು ಗರುಡ . ‘ಚಿಪ್ಪೊಡೆದು ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ/ ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು/ ನಿನ್ನ ತೊಡೆ ಹೊರೆ ಕೆಳಗೆ ಮತ್ತೆ ಸಡಿಲು’; ಇಲ್ಲಿ ಕೋಳಿ ಗರಡುನಾಗುವುದಷ್ಟೇ ಅಲ್ಲ ಕೆಳಗಿನಿಂದ ಗರಡನನ್ನು ಮೇಲೆ ನೋಡಿದಾಗ ಅದರ ಹೊಟ್ಟೆ ಬೆಳ್ಳಗಿರುತ್ತದೆ ಇದು ಮಂಥನದ ಕಡೆಗೋಲಿನಂತೆ ಕಾಣುತ್ತದೆ(ಈ ಬಗ್ಗೆ ನಾನೊಂದು ಪ್ರಬಂಧವನ್ನೇ ಬರೆದಿದ್ದೇನೆ).

ಹೀಗೆಯೇ ‘ನಿರಿಯ ಚಿಮ್ಮಿಸಿ ನಡೆದು ಬರಲಷ್ಟು ಹುಡುಗಿಯರು’ ಎನ್ನುವ ನನ್ನ ನಿಜದ ಹುಡುಗಿಯರು ಅಡಿಗರಲ್ಲಿ ‘ಕಳುಹಿಸಯ್ಯ ಬಳಿಗೆ ವಾಸ್ತವದ ಹೆಣ್ಣುಗಳು’ ಆಗುತ್ತಾರೆ.

ಮೈಸೂರಿನಲ್ಲಿ ನಾನು ಅನರ್ಸ್ ಮುಗಿಸಿದವನು. ಒಂದು ದಿನದಷ್ಟಕ್ಕೆ ಅಡಿಗರ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೆ. ಅದಕ್ಕಾಗಿ ಕಾಟನ್ ಸೂಟೊಂದನ್ನು ಹೊಲೆಸಿಕೊಂಡು ಟೈಯನ್ನು ಕಟ್ಟಿ ಹೋಗಿದ್ದೆ. ಅದರ ಮಾರನೇ ದಿನವೇ ಹಾಸನದಲ್ಲಿ ಸರ್ಕಾರಿ ಕಾಲೇಜಿನಲ್ಲೇ ಕೆಲಸ ಸಿಕ್ಕಿ, ನಾನು ರಿಸೈನ್ ಮಾಡಿ ಹೋದೆ. ಇದರಿಂದ ಕೆಲಸ ಕೊಡಿಸಿದ ಅಡಿಗರಿಗೆ ಮುಜುಗರವಾಗಿರಬಹುದು. ಆದರೆ ನ್ನನ ಮೇಲಿನ ವಾತ್ಸಲ್ಯದಿಂದಾಗಿ ಇದನ್ನು ಅವರು ಮರೆತರು. ನನಗೊಂದು ಕಾಗದ ಬರೆದು. ‘ನನ್ನ ಭೂಮಿತೀಗ ಎಂಬ ಸಂಕಲನವನ್ನು ತರಬೇಕೆಂದಿದ್ದೇನೆ. ಅದಕ್ಕೆ ನೀನು ಮುನ್ನುಡಿಯನ್ನು ಬರೆ’ ನಾನು ಆಗ ೨೩ ವರ್ಷದ ಹಸಿ ಹಸಿಯಾದ, ಹಲವು ಉದ್ವೇಗಗಳ ಭಾವುಕತೆಯ ಯುವಕ. ಹಾಸನದಲ್ಲಿ ಒಂದು ವರ್ಷವಿದ್ದು ಶಿವಮೊಗ್ಗಕ್ಕೆ ಬಂದೆ. ಸತತವಾಗಿ ಆರು ತಿಂಗಳಾದರೂ ಅಡಿಗರ ಪದ್ಯಗಳನ್ನೆಲ್ಲಾ ಮತ್ತೆ ಮತ್ತೆ ಓದುತ್ತಾ ಅವರ ‘ಭೂತ’ ಪದ್ಯ ನನಗೆ ಅರ್ಥವಾಗದೆ ಒದ್ದಾಡಿದ್ದೆ.

ಅಡಿಗರನ್ನು ಆ ಪದ್ಯದ ಅರ್ಥವೇನೆಂದು ಕೇಳುವಂತಿಲ್ಲ. ಕೇಳಿದರೂ ಅವರು ಹೇಳುವವರಲ್ಲ. ಶಿವಮೊಗ್ಗದಲ್ಲಿ ನಾನು ಮೀನಾಕ್ಷಿ ಭವನ ಎನ್ನುವ ಹೊಟೇಲ್‌ನಲ್ಲಿ ರೂಮ್ ಮಾಡಿಕೊಂಡು ಇದ್ದೆ. ಒಂದು ದಿನ ಸ್ನಾನ ಮಾಡುತ್ತಾ ತಲೆಗೆ ನೀರು ಹೊಯ್ದುಕೊಳ್ಳುವಾಗ ತಟ್ಟನೆ ಇಡೀ ಪದ್ಯದ ಒಳರಚನೆಯಲ್ಲಿರುವ ಸಂಬಂಧಗಳು ಹೊಳೆದುಬಿಟ್ಟವು. ತುಂಬ ಖುಷಿಯಾಗಿ ಅಡಿಗರಿಗೊಂದು ಕಾಗದ ಬರೆದೆ. ಹೀಗಿರಬಹುದೇ ನಿಮ್ಮ ಪದ್ಯದ ಅರ್ಥ ಎಂದು. ಅಡಿಗರು ನನ್ನ ಅರ್ಥದಲ್ಲಿ ಸಫಲವಾದವರಂತೆ ಕಂಡರು. ಪ್ರಾಯಶಃ ಕನ್ನಡದಲ್ಲಿ ಒಂದು ಕೃತಿಯನ್ನು ಹೀಗೆ ವಿಶ್ಲೇಷಿಸಿರುವುದು ಮೊದಲ ಸಲ ಇರಬಹುದು ಎಂದು ನಾನು ಹೇಳಿದರೆ ಇದು ಕೊಬ್ಬಿನ ಮಾತೆಂದು ತಿಳಿಯಬಾರದು. ಅಡಿಗರು ನನಗೆ ಅರ್ಥವಾದ್ದು ಅಡಿಗರ ಕಾವ್ಯಕ್ಕಿರುವ ಕಾಡುವ ಶಕ್ತಿಯಿಂದ, ಅವರನ್ನು ನೆನಪಿನಲ್ಲಿ ಹತ್ತು ಮನಸ್ಸಿನಲ್ಲೇ ಅವರನ್ನು ಓದುತ್ತಾ ಇರುವುದು ಸಾಧ್ಯವಾಗುವುದು ಅವರ ಲಯದ ಶಕ್ತಿಯಿಂದ. ಆದುದರಿಂದ ಬಚ್ಚಲು ಮನೆಯಲ್ಲೇ ನೀರು ಸುರಿದುಕೊಳ್ಳುವಾಗಲೂ ಅನುರಣಿಸುವ ಅವರ ಪದ್ಯ ನನ್ನ ಒಳಗೆ ಇತ್ತು. ಅಲ್ಲದೆ ನನಗೆ ಅರ್ಥವಾಗದ್ದು ಅರ್ಥಹೀನ ಎಂದು ತಿಳಿಯುವ ಅವಿವೇಕಿ ನಾನು ಆಗಿರಲಿಲ್ಲ. ಈಗಲೂ ಅಲ್ಲ.

ಅಡಿಗರ ಸ್ವಭಾವಕ್ಕೂ ಅವರ ಕಾವ್ಯಕ್ಕೂ ಒಂದು ಗಾಢವಾದ ಸಂಬಂಧ ಇದೆ. ‘ನಂಬಿದೆ ಆಮೇಲೆ ಮೋಸ ಹೋದೆ; ಎನ್ನುವ ಭಾವನೆ ಮತ್ತೆ ಮತ್ತೆ ಅವರ ಕಾವ್ಯದಲ್ಲಿ ಬರುತ್ತದೆ. ಅವರ ಸಂಬಂಧಗಳಲ್ಲೂ ನಾನಿದನ್ನು ಬಹಳ ಸಾರಿ ಕಂಡಿದ್ದೇನೆ. ಅವರ ಮುಗ್ಧತೆ ಎಷ್ಟು ಗಾಢವಾದದ್ದೆಂದರೆ ನಂಬಿದರೆ ಸಂಪೂರ್ಣ ನಂಬಿಬಿಡುತ್ತಿದ್ದರು. ತಾನು ಮೋಸ ಹೋದೆ ಎನ್ನಿಸಿದಾಗ ಅಷ್ಟೇ ಕ್ರುದ್ಧರಾಗುತ್ತಿದ್ದರು. ‘ಕೂಪ ಮಂಡೂಕ’ದಲ್ಲೂ ಇವರ ಸೃಷ್ಟಿಶೀಲತೆಗೆ ಕರಣವಾದ ‘ಅವನು’ ಕೈಕೊಟ್ಟು ಮಾಯವಾಗಿಬಿಟ್ಟಿದ್ದಾಣೆ. ‘ದಾರಿಯುದ್ದಕ್ಕೂ ರಹದಾರಿ ಗಿಟ್ಟಿಸಿ ದಿಲ್ಲಿ ದ್ವೀಪಾಂತರಕ್ಕೆ ಕೈಕೊಟ್ಟ ಸಖನು’ ಆದರೆ ‘ಇವನೇ’ ‘ಟಾಂಗು ಕೊಟ್ಟು ಕಮಂಗಿ ಕಣ್ಣು ಬಿಡುವಷ್ಟಕ್ಕೆ ಕಂಬಿ ಕಿತ್ತೆ ವಿಶಾಲ ನಿಲದೆಡೆಗೆ’ ಆದರೆ ಇಲ್ಲಿ ‘ಕೈಕೊಟ್ಟವನು’ ಈಗಲೂ ಅವರು ಬಯಸುವ ‘ಸಖ’ನೇ. ಆದರೆ ‘ಗೊಂದಲಪುರ’ ದಲ್ಲಿ ಕವಿಯನ್ನು ನಂಬಿಸಿದವನು ಸ್ಟಾಲಿನ್ ಕುಲದವನು. ಅಡಿಗರಿಗೆ ಕಮ್ಯುನಿಸ್ಟ್ ಆಡಳಿತದಲ್ಲಿ ನಂಬಿಕೆ ಹೊರಟುಹೋದಾಗ ಇಂಥ  ಪದ್ಯಗಳು ಬಂದವು. ‘ಭೂಮಿಗೀತ’ ದಲ್ಲೂ ಭೂವಿತಾಯಿ ‘ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು/ಅಡಿಕೆ ಗೊನೆ ಗಿಲುಕಿ ಹಿಡಿದಾಡಿಸಿದಳು’ ಆದರೆ ಇವಳ ಸಹಜ ಸಂತಾನ’ ಮೃಗ ಪಕ್ಷಿಗಳೇ ಹೊರತು ಅವಳನ್ನು ನಂಬಿ ಬೆಳೆದ ಮನುಷ್ಯನಲ್ಲ. ಯಾರದರೂ ವಿಮಶಖ ಅವರ ‘ಒಳತೋಟ’ ಪದ್ಯವಿಂದ ಕೊನೆಯತನಕ ಈ ಬಗೆಯ ಭಾವನೆ ಗಾಢವಾಗುತ್ತಾ ಹೋಗುವುದನ್ನು ನೋಡಬಹುದು. ನನಗಿನ್ನೂ ನೆನಪಿಸದೆ, ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇವರ ಉಳಿದೆಲ್ಲಾ ಅಧ್ಯಾಫಕರ ಜೊತೆ ಸೇರಿ ಸ್ಟ್ರೈಕ್ ಮಾಡಿದರು. ಆ ಸಂದರ್ಭದಲ್ಲಿ ಸ್ಟ್ರೈಕ್‌ನ್ನು ಮುರಿದವರ ಬಗ್ಗೆ ಇದೇ ಭಾವನೆ ಅವರಿಗಿತ್ತು. ಹಾಗೆಯೇ ಸಾಗರದಲ್ಲಿ ಹೋಗಿ ಇವರು ಪ್ರಿನ್ಸಿಪಾಲರಾದಾಗ ಇವರ ಆಡಳಿತವನ್ನು ಸಹಿಸಲಾರದೆ ರಾಜೀನಾಮೆ ಕೊಡುವಂತೆ ಮಾಡಿದ ಆಡಳಿತ ಮಂಡಳಿಯ ಬಗ್ಗೆಯೂ ಇದೇ ಭಾವನೆ ಅಡಿಗರಿಗಿತ್ತು. ಅವರ ‘ರಾಕ್ಷಸ’ ಎನ್ನುವ ಪ್ರಬಂಧ ಒಂದು ಕವನದಂತೆಯೇ ಇದೆ. ಯಕ್ಷಗಾನದ ವೇಷ ಹಾಕಿಕೊಂಡವರಂತೆ ಅವರು ಇಂಥ ವಿಷಯಗಳ ಬಗ್ಗೆ ಮಾತನಾಡುವರು. ಉಡುಪಿಯಲ್ಲಿ ಕಾಲೇಜು ಪ್ರಿನ್ಸಿಪಾಲರಾಗಿ ಅವರು ಬಿಟ್ಟಾಗಲೂ ಇದೇ ಭಾವನೆ ಅವರಲ್ಲಿತ್ತು- ನಾನು ನಂಬಿದೆ. ಆಮೇಲೆ ಮೋಸ ಹೋದೆ. ಆದರೆ ಅವರು ಸಾಯುವತನಕ ಈ ನಂಬುವ ಶಕ್ತಿಯನ್ನು, ಔದಾರ್ಯವನ್ನು ಕಳೆದುಕೊಳ್ಳಲಿಲ್ಲ.

ಸಾಹಿತಿಯಾಗಿ ಅಡಿಗ ಒಂದು ಇಡೀ ತಲೆಮಾರನ್ನು ಬೆಳೆಸಿದರು. ಅವರಲ್ಲಿ ಹಲವರು ಇವರ ವ್ಶೆರಿಗಳಾದರು. ಇನ್ನೂ ನೆನಪಿದೆ ನನಗೆ. ಇವರ ಜೊತೆ ವೈರತ್ವ ಸಾಧಿಸುತ್ತಿದ್ದ ಒಬ್ಬರ ಪುಸ್ತಕ ದೆಹಲಿ ಅಕಾಡೆಮಿಯ ಬಹುಮಾನಕ್ಕೆ ಯೋಗ್ಯವೇ ಎನ್ನುವ ಪ್ರಶ್ನೆಯನ್ನು ಇವರಿಗೆ ಕೇಳಿದಾಗ ನನ್ನ ಹತ್ತಿರ ಅವರು ಹಲ್ಲು ಕಚ್ಚಿ ಹೇಳಿದ್ದು; ‘ಈ ಮನುಷ್ಯ ತುಂಬ ಕೆಟ್ಟವನು. ಆದರೆ ಈ ಪುಸ್ತಕ ಇಷ್ಟು ಚೆನ್ನಾಗಿರುವಾಗ ಇದಕ್ಕೆ ಬಹುಮಾನ ಕೊಡಬಾರದು ಎಂದು ಹೇಗೆ ನಾನು ಹೇಳಲಿ’. ಪ್ರಾಯಶಃ ಯಾವ ಭಾಷೆಯಲ್ಲಾದರೂ ಈ ಬಗೆಯ ಲೇಖಕರು ಅಪರೂಪ. ಒಂದು ಪುಸ್ತಕದ ಬೆಲೆ ಕಟ್ಟುವಾಗ ತಮ್ಮ ಸಿಟ್ಟು ಸೆಡವುಗಳು ಪ್ರಭಾವ ಬೀರಬಾರದು ಎಂಬುದು ಅವರ ನಿಲುವಾಗಿತ್ತು.

ಅಡಿಗರಿಗೆ ಅವರ ಕಷ್ಟಕಾಲದಲ್ಲಿ ನೆರವಾದವರು ಪಿ.ಲಂಕೇಶ್ ಮತ್ತು ಗೋಪಾಲಗೌಡರು. ಇಬ್ಬರೂ ಜೊತೆ ಹೋಗಿ ಗವರ್ನರ್‌ರನ್ನು ಭೇಟಿಯಾಗಿ ಅಡಿಗರಿಗೆ ದೆಹಲಿಯ ಎನ್.ಬಿ.ಟಿಯಲ್ಲಿ ಕೆಲಸ ಕೊಡಿಸಿದರು. ಅಲ್ಲಿಯೂ ಅವರು ಹೆಚ್ಚು ಕಾಲ ಇರಲಿಲ್ಲ. (ದೆಹಲಿ ಎಂದರೆ ಹೊಸ್ತಿಲು, ಅಡಿಗರು ತನ್ನ ದೆಹಲಿ ಅನುಭವದ ಬಗ್ಗೆ ಬರೆದ ಪದ್ಯದ ಮೊದಲ ಸಾಲು; ದೆಹಲಿಯಲ್ಲಿ ಹೊಸ್ತಿಲೇ ಇಲ್ಲ. ಇದು ನೈಜವಾದ ಮಾತು; ಅಲ್ಲಿ ಮನೆಗಳಿಗೆ ಹೊಸ್ತಿಲು ಇರಲ್ಲ. ರಾಜಧಾನಿಯ ರಾಜಕಾರಣಿಗಳಿಗೂ ತಮ್ಮ ಮಿತಿಯನ್ನು ಅರಿವಿಗೆ ತರುವ ಹೊಸ್ತಿಲುಗಳೂ ಇರಲ್ಲ). ಅಲ್ಲದೆ ಅವರ ರಾಜಕೀಯ ಚಿಂತನೆಯ ಮೇಲೆ ಪ್ರಭಾವ ಬೀರುವಂತೆ ಅವರಿಗೆ ಪ್ರಿಯವಾಗಿದ್ದ ಪ್ರಜಾತಾಂತ್ರಿಕ ವ್ಯವಸ್ಥೆಯ ಅಮೆರಿಕ್ಕೆ ಅಡಿಗರ ಅಭಿಮಾನಿಗಳಾಗಿದ್ದ ಧೀಮಂತ ಚಿಂತಕ ಪಿ.ಶ್ರೀನಿವಾಸರಾವ್ ಮತ್ತು ಕವಿ ಸುವ್ಮತೀಂದ್ರ ನಾಡಿಗರು ಅವರನ್ನು ಕರೆಯಿಸಿಕೊಂಡರು. ವಿಪರ್ಯಾಸವೆಂದರೆ, ಅಮೇರಿಕದಲ್ಲಿ ಆ ದೇಶದ ಸಾಮ್ರಾಜ್ಯಶಾಹಿ ದುರಭಿಮಾನಕ್ಕೂ ಹಿಪೊಕ್ರಸಿಗೂ ಪರಮವಿರೋಧಿಯಾಗಿದ್ದ ಕವಿ-ಅಲೆನ್ಸ ಬರ್ಗನನ್ನು ಅಡಿಗರು ಭೇಟಿಯಾದರು. (ಗೆಳೆಯ ಪಿ.ಶ್ರೀನಿವಾಸರಾವ್ ಈಗಿಲ್ಲ. ನನಗೂ ಅತ್ಯಂತ ಪ್ರಿಯನಾಗಿದ್ದ ಈ ಗೆಳೆಯ ಅಡಿಗರ ಸಮಗ್ರ ಕಾವ್ಯಕ್ಕೆ ಮುನ್ನುಡಿಯೊಂದನ್ನು ಬರೆದಿದ್ದಾನೆ)

ಅಡಿಗರು ಅರ್ಷ ದೃಷ್ಟಿಯ ಕವಿ ಎಂದು ನಾನು ಭೂಮಿಗೀತಕ್ಕೆ ಬರೆದ ಮುನ್ನುಡಿಯಲ್ಲೇ ಗುರುತಿಸಿದ್ದೆ. ಆದರೆ ಇಲ್ಲೊಂದು ವಿರೋಧಾಭಾಸವಿದೆ. ಪಾರಮಾರ್ಥಿಕವಾಗಿ ಅವರ ದೃಷ್ಟಿ ಆರ್ಷ; ಆದರೆ ಲೌಕಿಕವಾಗಿ ಅವರ ಇಷ್ಟ ಅಮೆರಿಕ. ನನ್ನ ಪದ್ಯದಲ್ಲಿ ಚಿಪ್ಪೊಡೆದು ಬರುವ ಕೋಳಿ ಮರಿ ಅವರಲ್ಲಿ ಗರುಡನಾಗದೆ ವಿಧಿಯಿಲ್ಲ. ನಮ್ಮ ಕವಿಗಳಲ್ಲೆಲ್ಲಾ ಆಳವಾಗಿ ವೇದೋಪನಿಷತ್ತುಗಳ ವಿಚಾರಗಳನ್ನು ಕಾವ್ಯವಾಗಿ ಪರಿವರ್ತಿಸಿದವರು ಅಡಿಗರೇ.

ಭಾವಿಸಿದ ಆಕಾರವನ್ನು ಪಡೆಯುವ, ಯಥೇಚ್ಛ ಅವಕಾಶದ, ಅನಾರ್ಕಿಕ್ ಸಮೃದ್ಧಿಯ ಭಾರತದ ಅಕೃತಿನಿಷ್ಠ ಕವಿ ಅಡಿಗರಾದರೆ, ಏಕಾಕಾರದ, ಲೌಕಿಕವಾಗಿ ಶ್ರೀಮಂತವೂ ಬಲಿಷ್ಠವೂ ಆದ, ವೈವಿಧ್ಯರಹಿತ ಏಕತಾನತೆಯ ಅಮೆರಿಕಾದಿಂದ ಬೇಸತ್ತು ನಿರರ್ಗಳ ಮಾತಿನ ಉಲ್ಲಾಸದಲ್ಲಿ ಗಣೇಶನಾಗಿ ಬಿಡುಗಡೆ ಪಡೆದ ಅಲೆಮಾರಿ ಕವಿ ಅಲೆನ್ ಗಿನ್ಸ್ ಬಗ್, ಇವರಿಬ್ಬರ ಭೇಟಿ ಹೇಗಿತ್ತೆಂದು ಅದನ್ನು ಏರ್ಪಡಿಸಿದ ನಮ್ಮ ಸುಮತೀಂದ್ರ ನಾಡಿಗರೇ ಹೇಳಬೇಕು.

ನಾನು ಹುಡುಗರಾಗಿದ್ದಾಗ ಮೈಸೂರಿನಲ್ಲಿ ಅವರ ಮನೆಗೆ ಊಟಕ್ಕೆ ಕರೆಯುವುದಿತ್ತು. ಅವರ ತಂದೆ ಅಥವಾ ತಾಯಿಯ ಶ್ರಾದ್ಧದ ದಿನ ಇಲ್ಲವೇ ಮಕ್ಕಳ ಹುಟ್ಟುಹಬ್ಬಕ್ಕೆ. ನಮಗೆ ಹೊಟ್ಟೆ ತುಂಬ ಊಟ ಕೊಟ್ಟು ಕೈಯಲ್ಲಿ ದಕ್ಷಿಣೆಯನ್ನೂ ಕೊಟ್ಟು (ನಾವು ತಂದ ಸೈಕಲ್ಲಿನ ಬಾಡಿಗೆಗೆ ಉಪಯೋಗವಾಗುತ್ತಿತ್ತು) ಮಧ್ಯಾಹ್ನ ಸ್ವಲ್ಪ ಮಲಗಿದ್ದು ಹೋಗಬೇಕೆಂದು ಅವರು ಒತ್ತಾಯಿಸುತ್ತಿದ್ದರು. ಒಂದು ದಿನ ರಾತ್ರಿ ಅವರ ಮನೆಯಲ್ಲಿ ನಾನು ಉಳಿಯಬೇಕಾಗಿ ಬಂತು. ಆಗ ಅವರು ನನ್ನ ಹಾಸಿಗೆಗೆ ಸೊಳ್ಳೆ ಪರದೆಯನ್ನು ಕಟ್ಟಿದ ಕಲೆಗಾರಿಕೆಯನ್ನು ಮರೆಯಲಾರೆ. ಅದು ಕಲೆಗಾರಿಕೆಯೇ. ಯಾಕೆಂದರೆ ಇಡೀ ಪರದೆ ಎಲ್ಲಿಯೂ ಅಂಕುಡೊಂಡಾಗದೆ ಇರುವಂತೆ ಅವರು ಈ ಬದಿ ಹೆಚ್ಚಾದರೆ ಆ ಬದಿಯನ್ನು ಸರಿ ಮಾಡುವುದು, ಆ ಬದಿ ಹೆಚ್ಚಾದರೆ ಈ ಬದಿಯನ್ನು ಸರಿ ಮಾಡುವುದು ಹೀಗೆ ಸುಮಾರು ಅರ್ಧ ಗಂಟೆ ಕಾಲ ನನ್ನನ್ನು ಮಲಗಿಸಿ ಹಾಸಿಗೆಯ ಸುತ್ತ ಸುತ್ತಿದ್ದು ನೆನಪಿದೆ. ತಮ್ಮ ಪದ್ಯಗಳನ್ನು ಹೀಗೆಯೇ ಅವರು ತಿದ್ದುತ್ತಿದ್ದರು.

ಒಮ್ಮೆ ನನಗವರು ಹೇಳಿದ್ದರು; ಚಿಕ್ಕವರಿದ್ದಾಗ ಅವರಿಗೆ ಚೆಸ್‌ನಲ್ಲಿ ಬಹಳ ಆಸಕ್ತಿಯಂತೆ. ಆದರೆ ತನಗಿಂತ ಚೆನ್ನಾಗಿ ಚೆಸ್ ಆಡುವವರನ್ನು ನೋಡಿದಾಗ, ತಾನು ಮಾತ್ರ ಮಾಡಬಹುದಾದ್ದನ್ನು ಮಾಡಬೇಕೆಂದು ಅವರು ಕವಿತೆ ಬರೆಯಲು ಶುರು ಮಾಡಿದ್ದಂತೆ. (ಮೊಗೇರಿಯಲ್ಲಿ ಬೆಳೆಯುವಾಗ ಅವರ ಸೋದರ ಅತ್ತೆ ಎಂದು ಕಾಣುತ್ತದೆ. ಅವರಲ್ಲಿ ಕಾವ್ಯದ ಹುಚ್ಚು ಹಿಡಿಸಿದವರು. ಇವರೇ ತನ್ನ ತಾಯಿಯೆಂದು ತಿಳಿದು ತನ್ನ ನಿಜದ ತಾಯಿಯನ್ನು ನಿರ್ಲಕ್ಷಿಸಿದ್ದು ಇವರನ್ನು ಬಾಧಿಸಿತ್ತು. ಭೂಮಿಗೀತದ ತಾನು ಮೋಸಹೋದೆ ಎನ್ನುವ ಭಾವನೆಯ ಮೂಲವನ್ನು ಇಲ್ಲಿ ಕಾಣುವುದು ನನ್ನ ಅಧಿಕ ಪ್ರಸಂಗದ ಊಹೆ ಮಾತ್ರ ಅಲ್ಲವೆಂದು ತಿಳಿದಿರುವೆ)

ಕಾವ್ಯದಲ್ಲಿ ತನಗೆ ಸಾಧ್ಯವಾದ ಸಫಲತೆಯನ್ನು ಅವರು ಸಾಧಿಸುವಾಗ ಅವರಿಗಾಗುತ್ತಿದ್ದ ತೃಪ್ತಿ-ಅತೃಪ್ತಿ ಎರಡೂ ಗಾಢವಾದ್ದೇ. ಅವರ ವಿಮರ್ಶಕವಾಗಿ ನಾನು ಅವರ ಕಾವ್ಯದಲ್ಲೇ ಎಲ್ಲೆಲ್ಲಿ ರೆಟರಿಕ್ ಹೆಚ್ಚಾಗಿದೆಯೋ ಅವೆಲ್ಲವೂ ಕೊಂಚ ದೋಷದವು ಎಂದು ತಿಲಿಯುತ್ತಿದ್ದೆ. ಉದಾಹರಣೆಗೆ ಅವರ ಅಂಬೇಡ್ಕರ್ ಪದ್ಯ ನನಗಿನ್ನೂ ಇಷ್ಟವಾಗಿಲ್ಲ. ಆದರೆ ಗೋಪಾಲಗೌಡರ ಮೇಲೆ ಅವರು ಬರೆದ ಪದ್ಯ ಸದ್ಯಕ್ಕೂ ಸಲ್ಲುವಂಥದ್ದು, ಶಾಶ್ವತಕ್ಕೂ ಸಲ್ಲುವಂಥದ್ದು. ನನಗೆ ಕೊನೆಯತನಕ ಅವರ ಜೊತೆಗಿದ್ದ ಭಿನ್ನಮತವೆಂದರೆ ಅವರು ಸಂಘ ಪರಿವಾರಕ್ಕೆ ಹತ್ತಿರವಾದದ್ದು. ಆದರೆ ಅವರಿಗೆ ನಿಜವಾದ ಪ್ರೀತಿ ಇದ್ದದ್ದು ಲೋಹಿಯಾ ಬರವಣಿಗೆ ಬಗ್ಗೆ. ಆದರೆ ಆ ಕಾಲ ಹೇಗಿತ್ತೆಂದರೆ ಲೋಹಿಯಾವಾದಿಗಳೇ ಜನಸಂಘದ ಜೊತೆಯಾಗಿ ಅದು ಭಾರತೀಯ ಜನತಾ ಪಕ್ಷವಾಗಿ ಬೆಳೆಯುವುದಕ್ಕೆ ಕಾರಣರಾದರು. ನಾನು ಶಿವಮೊಗ್ಗದ ಒಂದು ಚುನಾವಣೆಯಲ್ಲಿ ಮತ್ತು ಎಮರ್ಜನ್ಸಿಯಲ್ಲಿ ಸಂಘ ಪರಿವಾರದ ಜೊತೆ ಕೆಲಸ ಮಾಡಿದ್ದೆ. ಇದಕ್ಕೆ ಕಾರಣ ನನ್ನ ಆದರ್ಶದ ಜಯಪ್ರಕಾಶ ನಾರಾಯಣರು.

ಒಮ್ಮೆ ದೇವರಸ್ ಬಂದಾಗ ರೈಲ್ವೇ ಸ್ಟೇಷನ್‌ಗೆ ಬಂದು ಅವರನ್ನು ಸ್ವಾಗತಿಸಬೇಕೆಂದು ಅಡಿಗರು ತುಂಬ ಮೆಚ್ಚುತ್ತಿದ್ದ ಶಿಸ್ತಿನ ಸಂಘ ಪರಿವಾರದ ಹುಡುಗರು ಹೇಳಿದಾಗ ಅಡಿಗರು ಕೋಪಗೊಂಡು ಹೀಗೆ ಹೇಳಿದೆ ಎಂದು ನನ್ನೊಡನೆ ಹೇಳಿದ್ದರು. ‘ದೇವರಸ್ ದೊಡ್ಡವರು. ಅವರು ನಮ್ಮ ಮನೆಗೆ ಬಂದರೆ ನಾನವರನ್ನು ಸ್ವಾಗತಿಸುತ್ತೇನೆ. ಜಯಪ್ರಕಾಶ್ ನಾರಾಯಣ್ ಆಗಿದ್ದರೆ ನಾವೇ ಹೋಗಿ ನೋಡುತ್ತಿದ್ದೆ’.

ಅಡಿಗರದೊಂದು ಸ್ವಭಾವ ಅದು. ತನಗೆ ಒಪ್ಪದದ್ದನ್ನು ಅವರ ದಾಕ್ಷಿಣ್ಯ ಪ್ರವೃತ್ತಿಯಿಂದಾಗಿ ಎದುರಾಡದೆ ಸಹಿಸಿಕೊಳ್ಳುತ್ತಾ ಇದ್ದರು. ಆಧರೆ ಇದು ಅತಿಗೆ ಹೋದಾಗ ಸಹಿಸಿಕೊಳ್ಳಲು ಆಗದೆ ಸಿಡಿದು ಏಳುತ್ತಾ ಇದ್ದರು.

*

(ಕೃಪೆ : ಹೀಗಿದ್ದರು ಅಡಿಗರು ಶೀರ್ಷಿಕೆಯಡಿ ಮೋಹನ ಮುರಳಿ ಪುಸ್ತಕ (೨೦೦೯) ರಲ್ಲಿ ಪ್ರಕಟವಾದ ಲೇಕನ. ಸಂ: ಎನ್. ವಿದ್ಯಾಶಂಕರ್, ಜಯರಾಮ ಅಡಿಗ. ಪ್ರ: ನುಡಿ ಪುಸ್ತಕ.